ಸಂದರ್ಶನದಲ್ಲಿ ಕೇಳಿದ ಪ್ರಶ್ನೆ, ನಿನ್ನ ಸ್ತನಗಳು ಎಷ್ಟು ದಪ್ಪ?

ಮನೆಗೆಲಸಕ್ಕೆಂದು ಕೆಲಸಕ್ಕಿಟ್ಟರೆ ಆ ಮನೆಯ ರಹಸ್ಯವನ್ನು ಟಾಮ್ ಟಾಮ್ ಹೊಡೆದು ಹೇಳಬಾರದು. ಆದರೆ ಮನಸ್ಸು ಕೆಟ್ಟಾಗ, ಯಜಮಾನರು ತನ್ನನ್ನು ಮನುಷ್ಯರಂತೆ ಕಾಣಲು ವಿಫಲರಾದಾಗ ಅಂಥ ಜನರ ಮೇಲೆ ಹೇಸಿಗೆ ಹುಟ್ಟಿ ತಮ್ಮ ಅನುಭವವನ್ನು ಹೇಳಿ ಎದೆ ಹಗುರ ಮಾಡಿಕೊಳ್ಳುತ್ತಾರೆ ಕೆಲವರು. ಜರ್ಮನಿಯಲ್ಲಿ ಪೋಲಂಡ್ ದೇಶದ ಆಯಾಗಳು ಹೆಚ್ಚು. ಬರ್ಲಿನ್ ಗೋಡೆ ಬಿದ್ದ ನಂತರ ಪೋಲಂಡಿ ನಿಂದ ೫ ಲಕ್ಷಕ್ಕೂ ಹೆಚ್ಚು ಆಯಾಗಳು ಕೆಲಸಕ್ಕಾಗಿ ಜರ್ಮನಿಗೆ ಬಂದರು. ಜರ್ಮನಿ ಯೂರೋಪಿನ ಮಾತ್ರವಲ್ಲ ಜಗತ್ತಿನ ಶ್ರೀಮಂತ ದೇಶಗಳಲ್ಲೊಂದು. ಜರ್ಮನಿ ಸುಶಿಕ್ಷಿತ ದೇಶವಾದ್ದರಿಂದ ಎಲ್ಲರೂ ತಿಳಿದದ್ದು ಬಹಳ ಸಂಭಾವಿತರು, ಅತ್ಯಂತ ಶುಚಿತ್ವವಿರುವುವರು, ಶಿಸ್ತಿನ ಜನ ಎಂದು. ಆದರೆ ಈ ಆಯಾ ಅದೆಲ್ಲಾ ಸುಳ್ಳಿನ ಸರಮಾಲೆ, ಸತ್ಯ ನೋಡಿ ಇಲ್ಲಿದೆ ಎಂದು ಸುರುಳಿ ಬಿಚ್ಚಿಟ್ಟಳು ತಾನು ಬರೆದ ಪುಸ್ತಕ Under German Beds ರಲ್ಲಿ.

ಕೆಲಸಕ್ಕೆ ಸೇರುವ ಮುಂಚಿನ ಫೋನ್ ಸಂದರ್ಶನದಲ್ಲಿ ಮನೆ ಯಜಮಾನ ಕೇಳುವ ಪ್ರಶ್ನೆ “ ನಿನ್ನ ಮೊಲೆಗಳು ದಪ್ಪ ಇವೆಯೇ?” ಕೆಮ್ಪ್ಪು ಬಣ್ಣದ ಚಡ್ಡಿ ಧರಿಸುತ್ತೀಯಾ…. ಹೇಗಿದೆ ಪ್ರಶ್ನಾವಳಿ. ನೀನು ಬೆಳಿಗ್ಗೆ ಎಷ್ಟು ಘಂಟೆಗೆ ಏಳುತ್ತೀಯಾ, ಎದ್ದ ಕೂಡಲೇ ಏನು ಮಾಡುತ್ತೀಯ ಎಂದು ಕೇಳೋ ಬದಲು ಸ್ತನಗಳ ಗಾತ್ರದ ಬಗ್ಗೆ ಚಿಂತೆ.

ಒಬ್ಬ ಯಜಮಾನನಂತೂ ಅವಳ ಮುಂದೆ ಸಂಪೂರ್ಣ ವಿವಸ್ತ್ರನಾಗಿ ನಿಂತು ಬಿಡುತ್ತಿದ್ದನಂತೆ. ಇದ್ಯಾವ ಪರೀಕ್ಷೆಯೋ?

ಜರ್ಮನ್ನರು ಕೊಳಕು ಅಂತ ಈಕೆಯ ಅಭಿಪ್ರಾಯ. ಅವರ ಬೆಡ್ ಕೆಳಗೆ ಆಗ ತಾನೇ ಕೀಳಿಸಿಕೊಂಡ ಹಲ್ಲು, ಕೋಳಿ ಮಾಂಸದ ತುಂಡು ಹೀಗೇ ಬೇಡದ ವಸ್ತುಗಳು ಬಿದ್ದಿರುತ್ತವಂತೆ. ಕೆಲವೊಮ್ಮೆ ಹಣವನ್ನೂ ಸಹ ಬೇಕಾ ಬಿಟ್ಟಿ ಎಸೆದಿರುತ್ತಾರಂತೆ ಈಕೆಯ ಪ್ರಾಮಾಣಿಕತೆಯನ್ನು ಪರೀಕ್ಷಿಸಲೆಂದು. ಇದನ್ನು ಓದಿದ ನಂತರ ತಲೆ ಹರಟೆ ಪ್ರಶ್ನೆ ಕೇಳದೆ ಕೆಲಸಕ್ಕೆ ಬೇಕಾದ ಪ್ರಶ್ನೆ ಮಾತ್ರ ಕೇಳಿ, ಇಲ್ಲದಿದ್ದರೆ ನಿಮ್ಮನ್ನು ಉದಾಹರಣೆಯಾಗಿಸಿ ಪುಸ್ತಕವೊಂದು ಬಂದೀತು ಮಾರುಕಟ್ಟೆಗೆ.

ನೀವೆಷ್ಟು ಓದುವಿರಿ?

ಓದಿನ ಬಗ್ಗೆ ಜನರಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ ಎಂದು ನಾವೆಲ್ಲರೂ ಕೇಳುವ ದೂರು. ಅದರಲ್ಲೂ ಪುಸ್ತಕ  ಕೊಂಡು ಓದುವವರ ಸಂಖೆಯಂತೂ ವಿರಳವೇ. ವಿಶೇಷವಾಗಿ ಕನ್ನಡಿಗರಲ್ಲಿ ಆ ಕೊರತೆ ಎದ್ದು ಕಾಣುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಒಂದೇ ದಿನಪತ್ರಿಕೆ ಸಾಕು ಇಡೀ ಬಸ್ಸಿಗೆ ಅಥವಾ ರೈಲು ಬೋಗಿಗೆ. ನಮಗೆ recycling ನಲ್ಲಿ ದೊಡ್ಡ ವಿಶ್ವಾಸ. ಈ ವಿದ್ಯಮಾನ ದಿನಪತ್ರಿಕೆಗಳಂಥ ಓದಿಗಾದರೆ ಪುಸ್ತಕಗಳನ್ನು, ಗ್ರಂಥಗಳನ್ನು  ನಾವೆಷ್ಟು ಓದುತ್ತೇವೆ?

ಅಮೆರಿಕನ್ನರು ವರ್ಷದಲ್ಲಿ ೧೫ ಪುಸ್ತಕಗಳನ್ನಾದರೂ ಓದುತ್ತಾರಂತೆ. ಆಸ್ಟ್ರೇಲಿಯನ್ನರು ಅಮೆರಿಕನ್ನರಿಗಿಂತ ಹೆಚ್ಚು ಓದುತ್ತಾರಂತೆ. ಓದುವಿಕೆಗೆ ಪಾಶ್ಚಾತ್ಯರು ಕೊಡುವ ಪ್ರಾಧಾನ್ಯ ಪುಸ್ತಕ ಓದುವವರ ಕುರಿತ ನಡೆಸಿದ ಅಧ್ಯಯನ ಮತ್ತು ಸಮೀಕ್ಷೆ ಗಳಲ್ಲಿ ಕಾಣಬಹುದು. ಡೆಮೊಕ್ರಾಟ ಪಕ್ಷದ ಜನ ರಿಪಬ್ಲಿಕನ್ನರಿಗಿಂತ ಹೆಚ್ಚು ಓದುತ್ತಾರಂತೆ. ಆದರೆ ಧಾರ್ಮಿಕ ಪುಸ್ತಕಗಳನ್ನು ಡೆಮೊಕ್ರಾಟ್ ರಿಗಿಂತ ಹೆಚ್ಚಾಗಿ ರಿಪಬ್ಲಿಕನ್ನರು ಓದುತ್ತಾರಂತೆ. ಜಾರ್ಜ್ ಬುಶ್ ರಿಪಬ್ಲಿಕನ್ ಪಕ್ಷಕ್ಕೆ ಸೇರಿದವರು. ಹೆಚ್ಚು ಓದು, ಹೆಚ್ಚು ಅವಾಂತರ? ಅಷ್ಟು ಮಾತ್ರವಲ್ಲ ಧಾರ್ಮಿಕ ಪುಸ್ತಕಗಳನ್ನು ಕಪ್ಪು ಜನರು (blacks), ವಯಸ್ಸಾದವರು, ಗೃಹಿಣಿಯರು, ಕಡಿಮೆ ವಿದ್ಯಾಭ್ಯಾಸ ಇರುವವರು, ಕಡಿಮೆ ಸಂಪಾದನೆ ಮಾಡುವವರು, ಗ್ರಾಮ ವಾಸಿಗಳು ಹೆಚ್ಚಾಗಿ ಓದುತ್ತಾರಂತೆ.   

ಕಾಲೇಜು ವಿದ್ಯಾಥಿಗಳು ಹೆಚ್ಚು ಓದುತ್ತಾರೆ, ಯುವಜನರಿಗಿಂತ ಹೆಚ್ಚಾಗಿ ೫೦ ವಯಸ್ಸಿಗೆ ಮೇಲ್ಪಟ್ಟ ಜನ ಓದುತ್ತಾರೆ ಅಮೆರಿಕೆಯಲ್ಲಿ. 

ಈ ತೆರನಾದ ಸಮೀಕ್ಷೆ ನಮ್ಮಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಈ ಮಾತಂತೂ ಸತ್ಯ. ನಾವು ಭೇಟಿ ಕೊಡುವ ಬಂಧು ಮಿತ್ರರ ಮನೆಗಳಲ್ಲಿ ಪುಸ್ತಕಗಳ ದರ್ಶನ ಆಗುವುದು ಅಪರೂಪ. ಕೆಲಸಕ್ಕೆ ಬಾರದ ವಸ್ತುಗಳನ್ನು ಕೊಂಡು ಎಲ್ಲರಿಗೂ ಕಾಣುವಂತೆ drawing room ಗಳಲ್ಲಿ ಪ್ರದರ್ಶಿಸುವುದನ್ನು ಕಾಣಬಹುದು. ಮನೆ ಒಂದು ರೀತಿಯ ಮ್ಯೂಸಿಯಂ. ಕಣ್ಣಿಗೆ ವಿಶ್ರಾಂತಿ ಇರುವುದಿಲ್ಲ. ದೃಷ್ಟಿ ಎತ್ತ ಹಾಯಿಸಿದರೂ ಒಂದೊಂದು collection ಗಳ ದರ್ಶನ.    

ಒಳ್ಳೆಯ ಅಭಿರುಚಿ ಬೆಳೆಸಿಕೊಂಡು ಒಳ್ಳೆಯ ಪುಸ್ತಕ ಓದುವುದರಿಂದ ನಮ್ಮ ವ್ಯಕ್ತಿತ್ವವೂ ಬೆಳೆಯುತ್ತದಂತೆ. ಪುಸ್ತಕ ನಿರ್ಜೀವ ಅಲ್ಲ, ಉಸಿರಾಡದಿದ್ದರೂ ಅದು ಜೀವಂತ ಎಂದು ಒಬ್ಬ voracious reader ತನ್ನ ಅಭಿಪ್ರಾಯ ವ್ಯಕ್ತ ಪಡಿಸುತ್ತಾನೆ.  ಹೌದು ಪುಸ್ತಕ ಬರೆದ ವ್ಯಕ್ತಿಯ ಜೊತೆ ನಮ್ಮ ನಂಟು ಬೆಳೆಯುತ್ತದೆ, ಲೇಖನೊಂದಿಗೆ ಸಮಯ ಕಳೆದಂತೆ ಭಾಸವಾಗುತ್ತದೆ,ಓದುತ್ತಾ ಇದ್ದಂತೆ ನಾವು ನಮ್ಮದೇ ಆದ parallel ಪುಸ್ತಕದ ಬರಹವನ್ನೂ ಮನಸ್ಸಿನಲ್ಲೇ ಮಾಡಿಕೊಳ್ಳುತ್ತೇವೆ. ಹೊಸ ಲೋಕ ಸುತ್ತುತ್ತೇವೆ, ನಮಗಿಂತ ವಿಭಿನ್ನವಾದ ರೀತಿ ರಿವಾಜುಗಳ ಪರಿಚಯವಾಗುತ್ತದೆ. ಹೆಚ್ಚು ಓದುವುದರಿಂದ ಒಳ್ಳೆಯ ಬರಹಗಾರರಾಗಬಹುದು (ಅಂಥ ಇಚ್ಛೆ ಇದ್ದರೆ) ಮಾತ್ರವಲ್ಲ ನಮಗೆ ಗೊತ್ತಿಲ್ಲದ ಹೊಸ ಹೊಸ ಪದಗಳ ಪರಿಚಯವಾಗುತ್ತದೆ, ನಮ್ಮ ಶಬ್ದ ಭಂಡಾರ ಇನ್ನಷ್ಟು ಶ್ರೀಮಂತವಾಗುತ್ತದೆ, ನಮ್ಮ ಮಾತುಗಳು, ಚರ್ಚೆಗಳು ಹೆಚ್ಚು ಆಕರ್ಷಕವಾಗುತ್ತವೆ.   

ಪುಸ್ತಕ ಗಳನ್ನು ಓದುವ ಹವ್ಯಾಸ ನಿಜಕ್ಕೂ ಆಕರ್ಷಕ. ಓದುವಿಕೆಯ ಈ ಹವ್ಯಾಸವನ್ನು ಮನೆಯಲ್ಲಿರುವವರಿಗೂ ಹಂಚಬಹುದು. ನಾನು ಪುಸ್ತಕ ಕೈಯ್ಯಲ್ಲಿ ಹಿಡಿದ ಕೂಡಲೇ ನನ್ನ ಎರಡೂವರೆ ವರ್ಷದ ಮಗಳೂ ತನ್ನ ಪುಟ್ಟ ಪುಸ್ತಕ ಹಿಡಿದು ಕೊಂಡು ನನ್ನ ಪಕ್ಕ ಸೋಫಾದಲ್ಲಿ ಬಂದು ಕೂರುತ್ತಾಳೆ. ಏನೂ ಅರ್ಥವಾಗದಿದ್ದರೂ ಪುಟಗಳನ್ನುತಿರುವಿ ಹಾಕೋದು, ಚಿತ್ರಗಳನ್ನೂ ನೋಡಿ ಊ, ಆ , ಎಂದು ಉದ್ಗರಿಸೋದು ಮಾಡುತ್ತಾಳೆ. ಪುಸ್ತಕ ಅಂಗಡಿಗೆ ಹೋದರೆ ತನಗಾಗಿ ಒಂದು ಪುಸ್ತಕವನ್ನೂ ತೆಗೆದು ಕೊಳ್ಳುತ್ತಾಳೆ. ನೋಡಿ ನಮ್ಮ ಓದು ಯಾವ ರೀತಿ epidemic ಆಗಿ ಕೆಲಸ ಮಾಡುತ್ತದೆ.   

Prolific reader ಒಬ್ಬರ ಬ್ಲಾಗ್ ನೋಡಿದೆ. ಅಮೆರಿಕೆಯವನಾದ ಈತ ವಾರಕ್ಕೊಂದು ಪುಸ್ತಕ ಓದಲು ತೀರ್ಮಾನಿಸಿ ಅದರಂತೆಯೇ ಕಳೆದ ವರ್ಷ ೫೨ ಪುಸ್ತಗಗಳನ್ನು ಓದಿದನಂತೆ. ಆದರೆ ಇದು ಪ್ರಾಯೋಗಿಕವೇ ಎಂದು ಒಬ್ಬರು ಸಂಶಯ ವ್ಯಕ್ತ ಪಡಿಸಿದ್ದರು. ಏಕೆಂದರೆ ಈ ರೀತಿ ಹಠ ಹಿಡಿದು ಓದಿದರೆ ಮಾತ್ರ ಪ್ರಯೋಜನವಿಲ್ಲ, ತಲೆಯಲ್ಲಿ ಎಷ್ಟು ವಿಷಯಗಳು ಉಳಿಯಬಹುದು ಎನ್ನುವುದನ್ನೂ ನೋಡಬೇಕಾಗುತ್ತದೆ ಎಂದರು. ವಾರಕ್ಕೊಂದು ಪುಸ್ತಕ ಓದಬೇಕೆಂದೇ ಆದರೆ ಪುಸ್ತಕ ಗಾತ್ರವನ್ನೂ ನೋಡಬೇಕಾಗುತ್ತದೆ. ಸುಮಾರು ೩೦೦ ಪುಟಗಳ ಗಾತ್ರದ ಪುಸ್ತಕ ವಾದರೆ ವಾರಕ್ಕೊಂದು ನಿಯಮಕ್ಕೆ ಒಗ್ಗುತ್ತದೆ, ಆದರೆ ಪುಸ್ತಕ ಇತ್ತೀಚೆಗೆ ಜಸ್ವಂತ್ ಸಿಂಗರು ಬರೆದ ಪುಸ್ತಕದ ಗಾತ್ರಕ್ಕಿದ್ದರೆ? ಇಲ್ಲಿ ನಾವು ನೋಡಬೇಕಾದ್ದು ಕೇವಲ ೫೨ ಔಸ್ತಕಗಳನ್ನು ಓದುವ ಗುರಿಯಲ್ಲ, ಬದಲಿಗೆ ಈ ರೀತಿಯ ತಡೆರಹಿತ ಓದಿನಿಂದ ಆಗುವ ಪ್ರಯೋಜನ. ೫೨ ಅಲ್ಲದಿದ್ದರೂ ಅದರ ಅರ್ಧವಾದರೂ ಒಂದು ದೊಡ್ಡ ಸಾಧನೆಯೇ ಅಲ್ಲವೇ?   

ಕೆಲವರು ಒಂದಕ್ಕಿಂತ ಹೆಚ್ಚು ಪುಸ್ತಕ ಓದುತ್ತಾರೆ. ಒಂದಕ್ಕಿಂತ ಹೆಚ್ಚು ಪುಸ್ತಕ ಓದಲು ಸಾಧ್ಯವೇ? ಖಂಡಿತ ಸಾಧ್ಯ. ಕನ್ನಡ ಸೀರಿಯಲ್ಲು, ಹಿಂಡಿ ಸೀರಿಯಲ್ಲು, ಅವುಗಳ ಮಧ್ಯೆ ಸಿನೆಮಾಗಳು, ಇವೆಲ್ಲವುಗಳ ಪಾತ್ರಗಳು ನಮಗೆ ಕಲಸುಮೇಲೊಗರ ಆಗೋದಿಲ್ಲ. ಒಂದಕ್ಕಿಂತ ಹೆಚ್ಚು ಟೀ ವೀ ಸೀರಿಯಲ್ಲುಗಳನ್ನು ವೀಕ್ಷಿಸಿ ಜ್ಞಾಪಕ ಇಟ್ಟುಕೊಳ್ಳಲು ಸಾಧ್ಯವಾಗುವುದಾದರೆ ಪುಸ್ತಕಗಳಿಗೂ ಇದೇ ನಿಯಮ ಅನ್ವಯಿಸಿ ಕೊಳ್ಳಬಹುದು ಅಲ್ಲವೇ? 

ಅಥವಾ ಈ ರೀತಿಯ ಓದನ್ನು ರೂಢಿ ಮಾಡಿಕೊಂಡರೆ “ಓದಿ, ಓದಿ, ಮರುಳಾದ ಕೂಚು ಭಟ್ಟ” ಎಂದು ಗೇಲಿ ಮಾಡುವರೇ?

foto courtesy: fotosearch