ಬೆಡಗಿ ಬಾಲಿವುಡ್ ಗೆ ೧೦೦

isha-chawla 2

ಮೊನ್ನೆ ಶುಕ್ರವಾರ ಬಾಲಿವುಡ್ ಗೆ ೧೦೦ ವರ್ಷಗಳು ತುಂಬಿದವಂತೆ. ೧೮೯೫ ರಲ್ಲಿ ಪ್ಯಾರಿಸ್ ನಗರದಲ್ಲಿ ಆರಂಭವಾದ ಸಿನೆಮಾ ಆರೇ ತಿಂಗಳಿನಲ್ಲಿ ಮುಂಬೈ ತೀರವನ್ನು ತಲುಪಿ ಜನರನ್ನು ಮಂತ್ರ ಮುಗ್ಧ ರನ್ನಾಗಿಸಿತು. ಕೂಡಲೇ ಈ ತಂತ್ರ ಜ್ಞಾನವನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡ ಭಾರತೀಯ ಒಂದು, ಎರಡು ರೀಲ್ ಗಳ ಪುಟ್ಟ ಸಿನೆಮಾದೊಂದಿಗೆ ಚಲನ ಚಿತ್ರದೊಂದಿಗಿನ ತನ್ನ ಸಂಬಂಧಕ್ಕೆ ನಾಂದಿ ಹಾಡಿದ. ಬಡ ದೇಶವಾದರೂ, ಒಪ್ಪತ್ತಿಗೂ ಗತಿಯಿಲ್ಲದೆ, ಆಗಸವನ್ನು ಸೂರಾಗಿಸಿಕೊಂಡರೂ ಬಾಲಿವುಡ್ ಮಾತ್ರ ರೀಲ್ ಮೇಲೆ ರೀಲುಗಳಂತೆ ಚಿತ್ರಗಳನ್ನ ತಯಾರಿಸಿ ಜನ ಹಸಿವನ್ನು ಮರೆಯಲು ಸಹಾಯ ಮಾಡಿತು. ಭಾರತೀಯರಿಗೆ ಕಥೆ ಕೇಳೋದು, ಕೇಳಿದ ಕಥೆಯನ್ನೇ ಮತ್ತೊಮ್ಮೆ ಕೇಳೋದು ಮೋಜಿನ ಸಂಗತಿಯಂತೆ. ಸಿನಿಮಾ ಬಂದಾಗಲೂ ಆಗಿದ್ದಷ್ಟೇ. ಒಂದೇ ಸಿನಿಮಾವನ್ನು ಹಲವು ಸಲ ನೋಡುವ ಜನರಿದ್ದಾಗ ಬಾಲಿವುಡ್ ವ್ಯಾಪಾರ ಸರಾಗ ವಾಯಿತು. ಅದರ ಮೇಲೆ ನಿಜ ಜೀವನಕ್ಕೆ ಯಾವುದೇ ರೀತಿಯಿಂದಲೂ ಹೊಂದದ ಬದುಕಿನ ರೀತಿಯನ್ನು ತೆರೆಯ ಮೇಲೆ ತೋರಿಸಿದಾಗ ಬಂದ ಶಿಳ್ಳೆ ನೋಡಿ ಬಾಲಿವುಡ್ ಗೆ ಯಶಸ್ಸಿನ ಮಂತ್ರ ಏನು ಎಂದು ಹೇಳಲು ಪಂಡಿತರ ಅವಶ್ಯಕತೆ ಬರಲಿಲ್ಲ.

ಸಿನಿಮಾ ಒಂದು ಅತ್ಯಂತ ಶಕ್ತಿಶಾಲೀ ಮತ್ತು ಪ್ರಭಾವಶಾಲೀ ಮಾಧ್ಯಮ. ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿದಾಗ ಸಮಾಜದ ಪರಿವರ್ತನೆ ಬಹು ಸುಲಭ. ಆದರೆ ಸಮಾಜ ಪರಿವರ್ತಿಸುವ ಚಿತ್ರಗಳು ಬಂದಾಗ ಅವುಗಳಿಗೆ ಸಿಗುವ ಪ್ರತಿಕ್ರಿಯೆ, ಪ್ರೋತ್ಸಾಹ ಕಂಡ ಬಾಲಿವುಡ್ ಸಿಕ್ಕಾಪಟ್ಟೆ ಹಣ ಹಾಕಿ ಕೈ ಸುಟ್ಟುಕೊಳ್ಳಬಾರದು ಎಂದು ಅಂಗ ಸೌಷ್ಟವಗಳ ಪ್ರದರ್ಶನಕ್ಕೆ ಕೈ ಹಾಕಿತು. ಪ್ರತೀ ಚಿತ್ರದಲ್ಲೂ ಒಂದು ಕ್ಯಾಬರೆ ನೃತ್ಯ ಇರಲೇಬೇಕು. ಜನರನ್ನು ಉದ್ರೇಕಿ ಸುತ್ತಿದ್ದ ಈ ನೃತ್ಯಗಳು ಕಾಲಕ್ರಮೇಣ ಪ್ರತೀ ಹಾಡಿನಲ್ಲೂ ಕಾಣಲು ಸಿಕ್ಕಿತು. ಈಗಂತೂ ವಾತ್ಸ್ಯಾಯನನ ಎಲ್ಲಾ ಭಂಗಿಗಳೂ ಲಭ್ಯ ಹಾಡುಗಳಲ್ಲಿ. ಈ ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ಹಣ ಚೆಲ್ಲಾಡಲು ಸಹಾಯಕಾರಿಯಾದವು.

ಸಮಾಜದ ಕಡೆ ಬಾಲಿವುಡ್ ತನ್ನ ದೃಷ್ಟಿ ಹರಿಸಲೇ ಇಲ್ಲ ಎಂದೂ ಹೇಳುವಂತಿಲ್ಲ. ಅಸ್ಪೃಶ್ಯತೆ ಬಗೆಗಿನ ೧೯೩೬ ರ “ಅಚ್ಚುತ್ ಕನ್ಯಾ”, ವಿಧವಾ ವಿವಾಹದ ಮೇಲಿನ ಏಕ್ ಹೀ ರಾಸ್ತಾ (೧೯೫೬), ವರದಕ್ಷಿಣೆ ಬಗೆಗಿನ ದಹೇಜ್ (೧೯೫೦) ಚಿತ್ರಗಳು ವ್ಯಾಪಾರೀ ಮನೋಭಾವ ಬಿಟ್ಟು ಸಮಾಜದ ಕಡೆ ಗಮನ ಹರಿಸಿದವು.

ಉತ್ತರ ಮತ್ತು ದಕ್ಷಿಣ ಭಾರತ ದಿಕ್ಕುಗಳಂತೆ ಯೇ ವಿರುದ್ಧ ಹಲವು ವಿಷಯಗಳಲ್ಲಿ. ಉತ್ತರ ಭಾರತೀಯ ಮತ್ತು ದಕ್ಷಿಣ ಭಾರತೀಯ ರ ನಡುವಿನ ಚಿತ್ರವನ್ನ ೧೯೫೬ ರಲ್ಲಿ ನಿರ್ದೇಶಕ ಮೋಹನ್ ಸೆಹಗಲ್ ನಿರ್ಮಿಸಿ ಸುದ್ದಿ ಮಾಡಿದರು. ಈ ಚಿತ್ರದಲ್ಲಿ ಉತ್ತರದ ಪಂಜಾಬಿ ಯುವಕ ತಮಿಳು ಮೂಲದ ಪ್ರೆಯಸಿಯಲ್ಲಿ ಹೇಳುತ್ತಾನೆ, ಅವನ ತಂದೆಯ ಪ್ರಕಾರ, ಒಂದು ನಾಗರ ಹಾವೂ, ದಕ್ಷಿಣ ಭಾರತೀಯನೂ ಎದುರಾದರೆ ಮೊದಲು ಮದ್ರಾಸಿ ಯನ್ನು ಕೊಲ್ಲಬೇಕಂತೆ. ಹೇಗಿದೆ ಸಂಬಂಧ, ಮತ್ತು ನಮ್ಮ ಬಗೆಗಿನ ಅವರ ಒಲವು. ಈ ಒಲವನ್ನು ಈಗಲೂ, ವಿಶೇಷವಾಗಿ ಬೆಂಗಳೂರಿಗರಿಗೆ ಕಾಣಲು ಸುಲಭ ಸಾಧ್ಯವಂತೆ.

ಬಾಲಿವುಡ್ ನಮ್ಮ ಸಮಾಜದ ಮೇಲೆ ಯಾವುದೇ ರೀತಿಯಿಂದಲೂ ಒಳ್ಳೆಯ ಪರಿಣಾಮ ಬೀರುತ್ತಿಲ್ಲ ಎನ್ನುವ ದೂರು ಜೋರಾಗಿ ಕೇಳಿಸುತ್ತಿದೆ. ಬೆಳಗಾದರೆ ನಾವು ಓದುವ ಹಸುಳೆ ಯಿಂದ ಹಿಡಿದು ಇಳಿವಯಸ್ಸಿನ ಮಹಿಳೆಯ ಮೇಲೆ ನಡೆಯುವ ಅತ್ಯಾಚಾರಕ್ಕೆ ಕಾರಣ ನಟಿಯರಿಗೆ ಉಡುಗೆಯ ಮೇಲಿನ ವೈರಾಗ್ಯ ಕಾರಣವಂತೆ. ಹಣಕ್ಕಾಗಿ ಬಿಚ್ಚಿದ್ದೇ ಬಿಚ್ಚಿದ್ದು. ನಿರ್ದೇಶಕ ಸ್ವಲ್ಪ ಬಿಚ್ಚಿದರೆ ಸಾಕು ಎಂದರೆ ಸ್ವಲ್ಪ ಉಟ್ಟರೆ ಸಾಕು ಎಂದು ತಪ್ಪಾಗಿ ಕೇಳಿಸಿಕೊಳ್ಳುವ ನಟಿಯರಿಗೆ ಬಿಚ್ಚುವುದರಲ್ಲಿ ಅದೇನೋ ಒಂದು ಸುಖ. ತಮ್ಮ ಅಂಗ ಸೌಷ್ಠವ ಪ್ರದರ್ಶನಕ್ಕಿಟ್ಟು ಜನರನ್ನು ಉದ್ದೀಪಿಸುವ ತಾರೆಯರು ತಾವು ಮಾತ್ರ ಬಾಡಿ ಗಾರ್ಡ್ ಗಳ ರಕ್ಷಣೆಯಲ್ಲಿ ಸುರಕ್ಷಿತ. ದಾರಿಹೋಕ, ಹೊಟ್ಟೆ ಪಾಡಿಗೆಂದು ಹೊರಹೋಗುವ ಬಡಪಾಯಿ ಮಹಿಳೆಯರು ಕಾಮ ಪಿಪಾಸುಗಳಿಗೆ ಬಲಿ.

ಇದು ಬಾಲಿವುಡ್ ನ ನೂರು ವರ್ಷ ಗಳ ವೀರಗಾಥೆ.

Pic Courtesy: http://bollywoodkickass.blogspot.com/2011/11/isha-chawla-photos-in-wet-red-blue.html

ಅರ್ಧ ಘಂಟೆ, ಅರೆ ಬೆತ್ತಲೆ

ಗ್ರಂಥಾಲಯ ಎಂದ ಕೂಡಲೇ ನಮ್ಮ ಕಣ್ಣ ಮುಂದೆ ಬರುವುದು ಶತಮಾನಗಳಿಂದ ಸುಣ್ಣ ಬಣ್ಣ ಕಾಣದೆ ಶಿಥಿಲ ಗೊಂಡ, ಒಳ ಹೋದ ಕೂಡಲೇ ಗ್ರಂಥಪಾಲಕ ಎನ್ನುವ ನಿಸ್ತೇಜ, ಸುಸ್ತಾದ, ಹಗಲುಗನಸು ಕಾಣುತ್ತಾ ಕೂತ ವ್ಯಕ್ತಿಯ ದರ್ಶನ ಮತ್ತು ಪುಸ್ತಕಗಳ ಕವಟು ವಾಸನೆ. musty smell. ಯಾವುದೇ ರೀತಿಯಿಂದಲೂ inviting ಅಲ್ಲದ ಒಂದು ತಾಣ, ಗ್ರಂಥಾಲಯ. ಆದರೆ ಎಲ್ಲಾ ಗ್ರಂಥಾಲಯಗಳೂ ಹಾಗೆ ಆಗ ಬೇಕಿಂದಿಲ್ಲವಲ್ಲ?  ಮನುಷ್ಯ ಕ್ರಿಯೇಟಿವ್ ಜೀವಿ. ಕಸದಲ್ಲೂ ರಸ ತೆಗೆಯುವ ಸೃಜನಶೀಲ. ಹೀಗಿರುವಾಗ ಗ್ರಂಥಾಲಯ ಏಕೆ ತನ್ನ creativity ಪರಿಧಿಯಿಂದ ಹೊರಗುಳಿಯಬೇಕು ? ಕಸಿವಿಸಿಯಾಗುವ creativity ಆದರೇನಂತೆ, ಒಂದರ್ಧ ಘಂಟೆಯಾದರೂ ಕಸಿವಿಸಿ ಯನ್ನು ತಡೆಹಿಡಿಯೋಕೆ ಆಗೋಲ್ವೆ? ಅದೂ ವಾರದ ಒಂದೇ ದಿನ ರೀ, ಬುಧವಾರ, ಅದೂ ಅರ್ಧ ಘಂಟೆ ಮಾತ್ರ, ಅದೂ ಜನಜಂಗುಳಿ ತೂಕಡಿಸಲು ಇಷ್ಟಪಡುವ ಮಧ್ಯಾಹ್ನದ ಸಮಯ.  

ಇಂಗ್ಲೆಂಡಿನ ವರ್ಸೆಸ್ಟರ್ ಕಾಲೇಜಿನ ವಿದ್ಯಾರ್ಥಿಗಳು ಒಂದು “ಬ್ರೇಕ್ ಫಾಸ್ಟ್ ಕ್ಲಬ್” ಅನ್ನೋ ಒಂದು ಗುಂಪನ್ನು ಕಟ್ಟಿ ಕೊಂಡಿದ್ದು ಇದಕ್ಕೆ ಸೇರಿದವರು ಬುಧವಾರದ ಮಧ್ಯಾಹ್ನದ ನಂತರ ಅರ್ಧ ಘಂಟೆಗಳ ಕಾಲ ಸಲ್ಮಾನ್ ಖಾನ್ ರಾಗಲು ಉತ್ಸುಕರಾಗುತ್ತಾರೆ. ಅರೆ ನಗ್ನ ಎಂದ ಕೂಡಲೇ ಈ ನಟನ ಹೆಸರೇ ಅಲ್ಲವೇ ಎಲ್ಲರಿಗೂ ಹೊಳೆಯೋದು; (ನನ್ನ ತಂಗಿಯ ಎರಡೂವರೆ ವರ್ಷದ ಪೋರ ‘ಅಹ್ಮದ್’ ತನ್ನ ಅಂಗಿ ಬಿಚ್ಚಿ ಸಲ್ಮಾನ್ ಖಾನ್ ಎಂದು ಬೀಗಿದ).

ವರ್ಸೆಸ್ಟರ್ ಕಾಲೇಜಿನ ವಿದ್ಯಾರ್ಥಿಗಳ ಈ ತಿಕ್ಕಲುತನ ಸ್ವಲ್ಪ ಅತಿಯಾಗಿ ತೋರಿತು ಆಡಳಿತ ಮಂಡಳಿಗೆ. ಬೀದಿಯಲ್ಲಿ, ಬಸ್ಸುಗಳಲ್ಲಿ, ಕೆಫೆ ಗಳಲ್ಲಿ ಎಲ್ಲೆಂದರಲ್ಲಿ ನಗ್ನತೆ ನೋಡಿ, ನೋಡಿ ಬೇಸತ್ತಿದ್ದ ಅವರುಗಳಿಗೆ ಗ್ರಂಥಾಲಯವೂ ಪೆಡಂಭೂತವಾಗಿ ಕಾಡಿತು. ವಿದ್ಯಾರ್ಥಿಗಳಿಗೆ (ನಗ್ನಾರ್ಥಿ?) ಒಂದು ಸಂದೇಶ ಕಳಿಸಿದರು. ‘ಈ ಮೇಲ್’ ಸಂದೇಶ. ಕೂಡಲೇ ಮಾನವಾಗಿ ಬಟ್ಟೆ ತೊಟ್ಟುಕೊಂಡು ಬರುವುದು ಕ್ಷೇಮ, ನಿಮ್ಮ ಈ ನಗ್ನತೆ a piece of harmless fun ಆಗಿ ಕಂಡರೂ ಗ್ರಂಥಾಲಯಕ್ಕೆ ಬರುವ ಪುಸ್ತಕ ಪ್ರಿಯರಿಗೆ ನಿಮ್ಮೀ ನಡತೆ distraction ಆಗಿ ತೋರುತ್ತಿರೋದರಿಂದ ಕೂಡಲೇ ಈ ನಡವಳಿಕೆಗೆ ಪೂರ್ಣ ವಿರಾಮ ಹಾಕಬೇಕು ಎಂದು. ಈ ಧಮಕಿಗೆ ಕೆರಳಿ ವಿದ್ಯಾರ್ಥಿಗಳು ಪುಣ್ಯಕ್ಕೆ ಅರೆ ನಗ್ನರಲ್ಲ, ಗ್ರಹಚಾರಕ್ಕೆ ಪೂರ್ಣ ನಗ್ನಾರದಾರೋ ಎನ್ನುವುದು ಕಾದು ನೋಡಬೇಕಾದ ಬೆಳವಣಿಗೆ.

ಈ ಮೇಲೆ ಹೇಳಿದ ಗ್ರಂಥಾಲಯಕ್ಕೆ ಹೊರ ದೇಶಗಳ ನಾಯಕರೂ ಭೆಟ್ಟಿ ಕೊಡುತ್ತಾರಂತೆ. ಬಹುಶಃ ಇಟಲಿ ದೇಶದ ಪ್ರಧಾನಿ ಬೆರ್ಲಸ್ಕೊನಿ ಯಂಥ ನಾಯಕರಿಗೆ ವಿದ್ಯಾರ್ಥಿಗಳ ಈ ನಡತೆ ಕಸಿವಿಸಿ ತರದೇ ಕಚಗುಳಿ ತರ ಬಹುದೇನೋ?  

ಸರಿ, ಈ creativity ಗೆ ಸಿಕ್ಕ ಸ್ಫೂರ್ತಿಯಾದರೂ ಎಲ್ಲಿಂದ ಎಂದು ತಲೆ ಕೆರೆದುಕೊಳ್ಳುತ್ತಿದ್ದೀರೋ? ಮೇಲಿನ ಚಿತ್ರದಲ್ಲಿ ಎಡ ಮೂಲೆಯಲ್ಲಿ ಪುಸ್ತಕದ ಶೆಲ್ಫ್ ಗಳನ್ನು ಕಾಯಲೆಂದು ನಿಲ್ಲಿಸಿರುವ ಪ್ರತಿಮೆ ಆಗಿರಲಿಕ್ಕಿಲ್ಲ ತಾನೇ ಸ್ಫೂರ್ತಿಯ ಉಗಮ?  

ಚಿತ್ರ ಕೃಪೆ: http://thequirkyglobe.blogspot.com/2011/06/wednesday-is-half-naked-day-at-library.html

ಸಂದರ್ಶನದಲ್ಲಿ ಕೇಳಿದ ಪ್ರಶ್ನೆ, ನಿನ್ನ ಸ್ತನಗಳು ಎಷ್ಟು ದಪ್ಪ?

ಮನೆಗೆಲಸಕ್ಕೆಂದು ಕೆಲಸಕ್ಕಿಟ್ಟರೆ ಆ ಮನೆಯ ರಹಸ್ಯವನ್ನು ಟಾಮ್ ಟಾಮ್ ಹೊಡೆದು ಹೇಳಬಾರದು. ಆದರೆ ಮನಸ್ಸು ಕೆಟ್ಟಾಗ, ಯಜಮಾನರು ತನ್ನನ್ನು ಮನುಷ್ಯರಂತೆ ಕಾಣಲು ವಿಫಲರಾದಾಗ ಅಂಥ ಜನರ ಮೇಲೆ ಹೇಸಿಗೆ ಹುಟ್ಟಿ ತಮ್ಮ ಅನುಭವವನ್ನು ಹೇಳಿ ಎದೆ ಹಗುರ ಮಾಡಿಕೊಳ್ಳುತ್ತಾರೆ ಕೆಲವರು. ಜರ್ಮನಿಯಲ್ಲಿ ಪೋಲಂಡ್ ದೇಶದ ಆಯಾಗಳು ಹೆಚ್ಚು. ಬರ್ಲಿನ್ ಗೋಡೆ ಬಿದ್ದ ನಂತರ ಪೋಲಂಡಿ ನಿಂದ ೫ ಲಕ್ಷಕ್ಕೂ ಹೆಚ್ಚು ಆಯಾಗಳು ಕೆಲಸಕ್ಕಾಗಿ ಜರ್ಮನಿಗೆ ಬಂದರು. ಜರ್ಮನಿ ಯೂರೋಪಿನ ಮಾತ್ರವಲ್ಲ ಜಗತ್ತಿನ ಶ್ರೀಮಂತ ದೇಶಗಳಲ್ಲೊಂದು. ಜರ್ಮನಿ ಸುಶಿಕ್ಷಿತ ದೇಶವಾದ್ದರಿಂದ ಎಲ್ಲರೂ ತಿಳಿದದ್ದು ಬಹಳ ಸಂಭಾವಿತರು, ಅತ್ಯಂತ ಶುಚಿತ್ವವಿರುವುವರು, ಶಿಸ್ತಿನ ಜನ ಎಂದು. ಆದರೆ ಈ ಆಯಾ ಅದೆಲ್ಲಾ ಸುಳ್ಳಿನ ಸರಮಾಲೆ, ಸತ್ಯ ನೋಡಿ ಇಲ್ಲಿದೆ ಎಂದು ಸುರುಳಿ ಬಿಚ್ಚಿಟ್ಟಳು ತಾನು ಬರೆದ ಪುಸ್ತಕ Under German Beds ರಲ್ಲಿ.

ಕೆಲಸಕ್ಕೆ ಸೇರುವ ಮುಂಚಿನ ಫೋನ್ ಸಂದರ್ಶನದಲ್ಲಿ ಮನೆ ಯಜಮಾನ ಕೇಳುವ ಪ್ರಶ್ನೆ “ ನಿನ್ನ ಮೊಲೆಗಳು ದಪ್ಪ ಇವೆಯೇ?” ಕೆಮ್ಪ್ಪು ಬಣ್ಣದ ಚಡ್ಡಿ ಧರಿಸುತ್ತೀಯಾ…. ಹೇಗಿದೆ ಪ್ರಶ್ನಾವಳಿ. ನೀನು ಬೆಳಿಗ್ಗೆ ಎಷ್ಟು ಘಂಟೆಗೆ ಏಳುತ್ತೀಯಾ, ಎದ್ದ ಕೂಡಲೇ ಏನು ಮಾಡುತ್ತೀಯ ಎಂದು ಕೇಳೋ ಬದಲು ಸ್ತನಗಳ ಗಾತ್ರದ ಬಗ್ಗೆ ಚಿಂತೆ.

ಒಬ್ಬ ಯಜಮಾನನಂತೂ ಅವಳ ಮುಂದೆ ಸಂಪೂರ್ಣ ವಿವಸ್ತ್ರನಾಗಿ ನಿಂತು ಬಿಡುತ್ತಿದ್ದನಂತೆ. ಇದ್ಯಾವ ಪರೀಕ್ಷೆಯೋ?

ಜರ್ಮನ್ನರು ಕೊಳಕು ಅಂತ ಈಕೆಯ ಅಭಿಪ್ರಾಯ. ಅವರ ಬೆಡ್ ಕೆಳಗೆ ಆಗ ತಾನೇ ಕೀಳಿಸಿಕೊಂಡ ಹಲ್ಲು, ಕೋಳಿ ಮಾಂಸದ ತುಂಡು ಹೀಗೇ ಬೇಡದ ವಸ್ತುಗಳು ಬಿದ್ದಿರುತ್ತವಂತೆ. ಕೆಲವೊಮ್ಮೆ ಹಣವನ್ನೂ ಸಹ ಬೇಕಾ ಬಿಟ್ಟಿ ಎಸೆದಿರುತ್ತಾರಂತೆ ಈಕೆಯ ಪ್ರಾಮಾಣಿಕತೆಯನ್ನು ಪರೀಕ್ಷಿಸಲೆಂದು. ಇದನ್ನು ಓದಿದ ನಂತರ ತಲೆ ಹರಟೆ ಪ್ರಶ್ನೆ ಕೇಳದೆ ಕೆಲಸಕ್ಕೆ ಬೇಕಾದ ಪ್ರಶ್ನೆ ಮಾತ್ರ ಕೇಳಿ, ಇಲ್ಲದಿದ್ದರೆ ನಿಮ್ಮನ್ನು ಉದಾಹರಣೆಯಾಗಿಸಿ ಪುಸ್ತಕವೊಂದು ಬಂದೀತು ಮಾರುಕಟ್ಟೆಗೆ.