ಈ ಸುದಿನ, ಮಗನ ಜನುಮ ದಿನ

ಈ ವರ್ಷದ ಫೆಬ್ರವರಿ ೨೯ ಕ್ಯಾಲೆಂಡರಿನಲ್ಲಿ ಕಾಣುವ ಅಪರೂಪದ ಎಂಟ್ರಿ. ೨೯ ದಿನಗಳ ಫೆಬ್ರವರಿಯಲ್ಲಿ ಹುಟ್ಟಿದವರಿಗೆ ವಿಶೇಷ ದಿನ. ಇವರುಗಳಿಗೆ ತಮ್ಮ ನಿಜವಾದ ಜನ್ಮ ದಿನಾಂಕ ದರ್ಶನ ಆಗೋದು ನಾಲ್ಕು ವರ್ಷಗಳಿಗೊಮ್ಮೆ. ಹಾಗಾಗಿ ಇದು ವಿಶೇಷ ಮಾಸ. ಈ ಸುದಿನ ನನ್ನ ಮಗನ ಜನುಮ ದಿನ. ನನ್ನ ಮಗ ಹುಟ್ಟಿದ್ದು ಫೆಬ್ರವರಿ ೨೯ ಕ್ಕೆ. ಈ ತಿಂಗಳಿನಲ್ಲಿ ಹುಟ್ಟಿದವರಿಗೆ leaper, leapling ಎಂದೂ ಕರೆಯುತ್ತಾರೆ. ಜನ್ಮ ದಿನ ಆಚರಿಸುವ ಬಗ್ಗೆ ನನಗೆ ಅಂಥಾ excitement ಇಲ್ಲ. ಆದರೆ ಮಗ ಮತ್ತು ಮನೆಯಾಕೆ ಬಯಸಿದ್ದರಿಂದ ಅವನ ಶಾಲೆಗೆ ಒಂದು ಕೇಕ್ ಮತ್ತು ಕೆಲ ಮಿತ್ರರನ್ನು ಊಟಕ್ಕೆಂದು ಮನೆಗೆ ಆಹ್ವಾನಿಸಿದ್ದೆ. ಪ್ರತೀ ವರ್ಷ ಬರುವ ಹುಟ್ಟಿದ ಹಬ್ಬ ಅಷ್ಟೊಂದು ಮಜಾ ಕೊಡೋಲ್ಲ. ಅಪರೂಕ್ಕೆ ಬರುವ ಯಾವುದೇ ಸಂಗತಿಯಾದರೂ ಹರ್ಷ ತರುತ್ತದೆ, ಆಸಕ್ತಿ ಉಳಿಸಿ ಕೊಳ್ಳುತ್ತದೆ. ನಾಲ್ಕು ವರ್ಷಕ್ಕೆ ಒಮ್ಮೆ ನಡೆಯುವ ಅಮೆರಿಕೆಯ ಅಧ್ಯಕ್ಷೀಯ ಚುನಾವಣೆ, ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ವಿಶ್ವ ಕಪ್ ಕ್ರಿಕೆಟ್ ಪಂದ್ಯಾವಳಿ… ಇವು ನಮ್ಮ ಆಸಕ್ತಿಯನ್ನು ಕೆರಳಿಸುತ್ತವೆ. ಮಗ ಎಂಟು ವರ್ಷದವನಾದರೂ ಅವನು ಆಚರಿಸಿದ್ದು ಎರಡನೇ ಜನ್ಮದಿನವನ್ನು. ಅಂದರೆ ಟೆಕ್ನಿಕಲ್ ಆಗಿ ಅವನು ಎರಡು ವರ್ಷದವ. ನನ್ನ ಮಗೆ ನೂರು ವರ್ಷದವನಾದರೆ ಅವನು ಆಚರಿಸುವುದು ೨೫ ನೆ ಜನ್ಮದಿನವನ್ನು. ಅಂದರೆ ಈ ಫೆಬ್ರವರಿ ೨೯ ಕ್ಕೆ ಹುಟ್ಟಿದವರು ಚಿರ ಜವ್ವನರು. ಅದಕ್ಕೆಂದೇ ಈ ವರ್ಷಕ್ಕೆ ಬ್ಯಾಚುಲರ್ ಇಯರ್ ಎಂದೂ ಕರೆಯುತ್ತಾರೆ. ೨೦೦೦ ನೆ ಇಸವಿ ಯಲ್ಲಿನ ಫೆಬ್ರವರಿ ತಿಂಗಳಿಗೆ ೨೯ ದಿನಗಳಿದ್ದವು. ಈ ವರ್ಷದಲ್ಲಿಯೇ ನನ್ನ ಮದುವೆ ಆಗಿದ್ದು. ಮಗ ಹುಟ್ಟಿದ್ದು ೨೦೦೪ ರಲ್ಲಿ, ಮತ್ತೊಮ್ಮೆ ಲೀಪ್ ಇಯರ್. ಮದುವೆ ಮತ್ತು ಮಗ ಹುಟ್ಟಿದ್ದು ಲೀಪ್ ಇಯರ್ ನಲ್ಲೆ. ಇದೂ ಒಂದು ಅಪರೂಪದ ವಿಶೇಷ ನನ್ನ ಪಾಲಿಗೆ. ಫೆಬ್ರವರಿ ೨೯ ಕ್ಕೆ ಮಕ್ಕಳು ಹುಟ್ಟುವ ಸಂಭವನೀಯತೆ ೧೪೬೧ ರಲ್ಲಿ ಒಂದು.

ಮುರಾರ್ಜಿ ದೇಸಾಯಿ ಯವರೂ ಹುಟ್ಟಿದ್ದು ಫೆಬ್ರವರಿ ೨೯ ಕ್ಕೆ.

Advertisements

ಪ್ರತಿಕ್ರಿಯೆ ಬೇಡ

  • ಕನಿಷ್ಠ  ದಿನಕ್ಕೊಮ್ಮೆ ಪೋಸ್ಟು ಪೋಸ್ಟು ಎಂದು ಹೇಗ್ರೀ ಕೂಗೋದು? ಈಗ ಎಲ್ಲಿದೆ ಪೋಸ್ಟು ಗೀಸ್ಟು, ಈಗ ಎಲ್ಲಾ ಮೇಲು ಗೀಲು ಎಂದಿರಾ? ಪೋಸ್ಟ್ ಅಂದಿದ್ದು ವರ್ಡ್ ಪ್ರೆಸ್ ಬ್ಲಾಗ್ ತಾಣಕ್ಕೆ ನಾವು ಬರೆದು ಪ್ರಕಟಿಸುವ ಬರಹದ ಬಗ್ಗೆ. ವರ್ಡ್ ಪ್ರೆಸ್ ತಾಣವನ್ನು ಹೊಕ್ಕ ಕೂಡಲೇ freshly pressed ವಿಭಾಗದಲ್ಲಿ ಇರುವ ಲೇಖನದ ಮೇಲೆ ಕಣ್ಣಾಡಿಸಿ ಪ್ರಕಟವಾದ ಲೇಖನಗಳಿಗೆ ಬರುವ ಸ್ವಾರಸ್ಯಕರ ಪ್ರತಿಕ್ರಿಯೆ ಓದುವುದು ನನ್ನ ಅಭ್ಯಾಸ. ಕೇಕ್ ಹೇಗೇ ಮಾಡೋದು ಎನ್ನುವುದರಿಂದ ಹಿಡಿದು ವಾಕ್ ಹೇಗೇ ಮಾಡೋದು, ಪೇರೆಂಟಲ್ (ಪಾಲಕತ್ವ?) ಬಗ್ಗೆ, ಪ್ರವಾಸದ ಬಗ್ಗೆ, ಬರೆಯಲು ಏನೂ ಹೊಳೆಯದಾದಾಗ ವಿಷಯ ಕಂಡು ಕೊಳ್ಳುವುದು ಹೇಗೆ………ಹೀಗೆ ಬ್ಲಾಗ್ ಪೋಸ್ಟ್ ಗಳ ಸುಗ್ಗಿ ಕಾಣಲು ಸಿಗುತ್ತದೆ. ಒಂದೊಂದು ಪೋಸ್ಟ್ ಗೂ ನೂರಾರು ಪ್ರತಿಕ್ರಿಯೆಗಳು. ವಿಷಯ ಎಷ್ಟೇ trivial ಆಗಿರಲಿ ಆಸ್ಥೆಯಿಂದ ತಮ್ಮ ಅಭಿಪ್ರಾಯ ಪ್ರಕಟಿಸುತ್ತಾರೆ ಓದುಗರು. ಅದೇ ವೇಳೆ ನಮ್ಮ ಕನ್ನಡ ತಾಣಗಳಲ್ಲಿ ಬರುವ ಪ್ರತಿಕ್ರಿಯೆಗಳ ಕಡೆ ಸ್ವಲ್ಪ ನೋಡಿ. ಪ್ರತಿಕ್ರಿಯೆ ಗಳಿಲ್ಲದೆ ಆಹಾರ, ಪೋಷಕಾಂಶ ಇಲ್ಲದೆ, ಕೃಶರಾಗಿ  ನರಳುವ ಸೊಮಾಲಿಯಾ ದೇಶದ ಮಕ್ಕಳ ಥರ ಕಾಣುತ್ತದೆ ಬ್ಲಾಗ್ ಪೋಸ್ಟು. ಈ ಅಸಡ್ಡೆಗೆ, indifference ಗೆ ಕಾರಣವಾದರೂ ಏನಿರಬಹುದು? ಥಟ್ಟನೆ ಸೋಮಾರಿತನ ಕಾರಣ ಎಂದು ತೋರಿದರೂ ಕೆಲವೊಮ್ಮೆ ಮತ್ತೊಂದು ಕಾರಣ ತಲೆಗೆ ತೂರಿ ಕೊಳ್ಳುತ್ತದೆ. ಅದೇನೆಂದರೆ ಓದಿದ ಬರಹಕ್ಕೆ   ಪ್ರತಿಕ್ರಯಿಸಬೇಕೆಂದರೆ ಕೀಲಿ ಮಣೆ ಕುಟ್ಟಲೇ ಬೇಕಲ್ಲವೇ? ಹೀಗೆ ಪ್ರತೀ ಬರಹಕ್ಕೂ ಕೀಲಿಗಳನ್ನು ಕುಟ್ಟುತ್ತಾ ಕೂತರೆ ಕೀಲಿಗಳು ಕೀಲು ಬಿಟ್ಟುಕೊಂಡು ಉದುರಿದರೆ? ಕಂಪ್ಯೂಟರ್ ಹತ್ತಾರು ಸಾವಿರ ಬೆಲೆಬಾಳುವ ಉಪಕರಣ ತಾನೇ? ಸುಮ್ಮ ಸುಮ್ಮನೆ ಅದನ್ನು ಹಾಳುಗೆಡವಲು ಸಾಧ್ಯವೇ? ನಿಮಗೆ ಗೊತ್ತೇ ಇರಬಹುದು, ಟೀವೀ ಬಂದಾಗ ಅದರೊಂದಿಗೆ ಬರುವ ರಿಮೋಟ್ ಕಂಟ್ರೋಲ್ ಉಪಕರಣವನ್ನು ನಾವು ಜೋಪಾನ ಮಾಡೋ ರೀತಿ. ಕೆಲವರು ಪ್ಲಾಸ್ಟಿಕ್ ಕವರ್ ಹೊದಿಸಿದರೆ ಮತ್ತೆ ಕೆಲವರು ಪ್ಲಾಸ್ಟಿಕ್ ಕವಚ ಹಾಕುತ್ತಾರೆ, ಒತ್ತಿ ಒತ್ತಿ ಎಲ್ಲಿ ಬಟನ್ನುಗಳು ಕಿತ್ತು ಬರುತ್ತೋ ಎಂದು. ಈ ತೆರನಾದ ಕಾರಣವೇನಾದರೂ ಇರಬಹುದೇ ಪ್ರತಿಕ್ರಿಯೆಗಳ ಬರಗಾಲಕ್ಕೆ? ಕೆಲಸವಿಲ್ಲದವನು ಏನೋ ಬರೆದು ಹಾಕಿದ್ದಕ್ಕೆ ನಾವೇಕೆ ಪ್ರತಿಕ್ರಯಿಸಿ ನಮ್ಮ ಕೀ ಬೋರ್ಡ್ ಹಾಳುಗೆಡವ ಬೇಕು ಎನ್ನುವ ಧೋರಣೆಯೋ? ಹೊಸತಾಗಿ ಬರಹ ಕೈಗೆತ್ತಿ ಕೊಂಡು ಈ ರೀತಿಯ ಓದುಗ ಸಮೂಹದ ಅಸಡ್ಡೆಗೆ expose ಆದನೋ, ಅವನ ಗತಿ ದೇವರಿಗೇ ಪ್ರೀತಿ. ಬರಹ ನೂ ಬೇಡ ಏನೂ ಬೇಡ, ಇದು ನನ್ನ ಕೈಗೆ ಹೇಳಿಸಿದ ಕೆಲಸ ಅಲ್ಲ ಎಂದು ಮುದುಡಿ ಕೊಳ್ಳುತ್ತಾನೆ. ಆದರೆ ನನ್ನಂಥ ದಪ್ಪ ಚರ್ಮದ ಜನರಿಗೆ ಓದುಗರ “ಅಸಡ್ಡೆ” ಯೇ ಒಂದು ರೀತಿಯ ಮೂಕಿ (ಮೂಕಿ ಟಾಕಿ ಗೊತ್ತಲ್ಲ?) ಪ್ರತಿಕ್ರಿಯೆ.
  • ನನ್ನ “ಹಳೇ ಸೇತುವೆ” ಬ್ಲಾಗ್ ಗೆ ಇದುವರೆಗೆ ಭೇಟಿ ಕೊಟ್ಟವರ ಸಂಖ್ಯೆ ೨೦,೦೦೦ ದಾಟಿದ “ಅವಿಸ್ಮರಣೀಯ ಅನುಭವ” ಕ್ಕೆ ಅರ್ಪಣೆ ಈ ಲಘು ಬರಹ. ಎಲ್ಲರಿಗೂ ವಂದನೆಗಳು.
  • ಸೂಚನೆ: ಬೇಡ, ಬೇಡ, ಪ್ರತಿಕ್ರಿಯೆ ಬೇಡ, ನೀವು ಓದುವಾಗ ನಿಮ್ಮ ಕಣ್ಣುಗಳಲ್ಲೇ ನನಗೆ ಕಾಣುತ್ತಿದೆ ಶುಭಾಶಯಗಳು ಎನ್ನುವ ಹಾರೈಕೆ.                 

ನಡತೆ ಮತ್ತು ಚಡ್ಡಿ

“Attitude is like your underwear; you must wear it, but never show it. POONAM PANDEY

ಈ ಮೇಲಿನ ಸುಭಾಷಿತ ಪೂನಂ ಪಾಂಡೆ ಪ್ರೊಮೋಟ್ ಮಾಡಿದ ವಸ್ತ್ರದ ಮೇಲೆ ಇದೆಯಂತೆ. ಒಂದ್ ನಿಮ್ಷ, ಮಾಡೆಲ್ ಪೂನಂ ಪಾಂಡೆ ಗೂ ವಸ್ತ್ರಕ್ಕೂ ಏನು ಸಂಬಂಧ, ಅವೆರಡೂ ಹಾವು ಮುಂಗುಸಿ ಥರ ಅಲ್ಲವೋ ಎಂದಿರಾ? ಹೋಗಲಿ ಬಿಡಿ, ಆಕೆ ಮಾಡೆಲ್ ಹೆಚ್ಚು ಬಿಚ್ಚಿದಷ್ಟು ಜೇಬು ತುಂಬೋದು ಸುಲಭ. ಮೇಲಿನ attitude ಬಗೆಗಿನ ಒಂದು ರೀತಿಯ ಕೀಳು ಅಭಿರುಚಿಯ ಸುಭಾಷಿತ ಓದಿ ಆಧುನಿಕ ಮನುಷ್ಯ ಇದಕ್ಕಿಂತ ಒಳ್ಳೆಯ ಮಾತನ್ನು ಹೆಣೆಯಲಾರ ಎನ್ನಿಸಿತು. attitude ಅದ್ಹೇಗೆ ಒಳ ಉಡುಪಿನ ಥರ ಆಗುತ್ತೋ ಗೊತ್ತಿಲ್ಲ. ಒಳ ಉಡುಪು (ಕಾಚಾ) ತೊಡದೆ ಓಡಾಡುವವರೂ ಇದ್ದಾರೆ. ಅಂದರೆ ಅವರಿಗೆ attitude ಇರೋಲ್ವಾ? ಇದೇ ತೆರನಾದ ಮತ್ತೊಂದು ಚೀಪ್ ಆದ ಹೇಳಿಕೆ ಆಂಗ್ಲ ಭಾಷೆಯಲ್ಲಿದೆ. opinions are like assholes, every one has one. ವಾವ್, ಎಂಥಾ ಸೃಜನಶೀಲತೆ !

ಪಾಪ ಪೂನಂ ಪಾಂಡೆ ತನ್ನ ಪಾಡಿಗೆ ತಾನು ಎಷ್ಟು ಬಿಚ್ಚಿದರೆ ಚೆನ್ನ ಎಂದು ಲೆಕ್ಕ ಹಾಕುತ್ತಿದ್ದರೆ ಪಕ್ಕದ ಬಾಂಗ್ಲಾ ದೇಶದ ಸಾಹಿತಿ ತಸ್ಲೀಮಾ ನಸ್ರೀನ್ ಪಾಂಡೆ ಬಗ್ಗೆ ತನ್ನ ಟ್ರೇಡ್ ಮಾರ್ಕ್ ಕೀಳು ಮಟ್ಟದ ಟ್ವೀಟ್ ಹರಿ ಬಿಟ್ಟಿದ್ದಾಳೆ; “Poonam Pandey got naked but not satisfied. She wanna do dirtiest things none did before. Wants to get f****d in public!” . ಒಬ್ಬ ಸಾಹಿತಿ ಹೇಳೋ ಮಾತುಗಳು ಇವು.    

ಒಳ ಉಡುಪಿಗೆ ‘ಚಡ್ಡಿ’ ಬದಲು ‘ಕಾಚಾ’ ಎಂದು ಬರೆದಿದ್ದೇನೆ, politically incorrect ಆಗೋದು ಬೇಡ ಎಂದು.  

ಆಟಿಟ್ಯೂಡ್ ಪದಕ್ಕೆ ಪರ್ಯಾಯವಾಗಿ 1) ಮನೋಭಾವ, ಭಾವನೆ, ದೃಷ್ಟಿಕೋನ, ಧೋರಣೆ, ನಿಲವು 2) ದೇಹದ ಭಂಗಿ ಪದಗಳು ನನಗೆ ಇಷ್ಟವಾಗಲಿಲ್ಲ. ನನ್ನ ಪ್ರಕಾರ ನಡತೆ ಸರಿಯಾದ ಪದ.

ಪಾಳು ಬಿದ್ದ ‘ಸುದ್ದಿ’ ಮನೆ

ಬೆಳಗಿನ ಪತ್ರಿಕೆ ಓದುವ ಅಭ್ಯಾಸವಿರುವರು ತಾವೇಕಾದರೂ ಈ ಪತ್ರಿಕೆ ಓದುವ ಹಾಳು ಚಟ ಅಂಟಿಸಿಕೊಂಡೆವೋ ಎಂದು ಮರುಗಿದರೆ ಅದರಲ್ಲಿ ಅವರ ತಪ್ಪಿಲ್ಲ. ಪತ್ರಿಕೆ ತೆರೆದಾಕ್ಷಣ ಧುತ್ತೆಂದು ಎದುರಾಗುವುದು ಹಿಂಸೆ, ಕ್ರೌರ್ಯದ ತಾಂಡವ. ಕೆಲಸವಿಲ್ಲದ ಬಡಗಿ ಮಗನ ಕುಂಡೆ ಕೆತ್ತಿದ್ನಂತೆ. ಆದರೆ ಇತ್ತೀಚೆಗೆ ದಿಲ್ಲಿಯ ೩೩ ವರ್ಷ ಪ್ರಾಯದ ನಿರುದ್ಯೋಗಿ ಯುವಕ ತನ್ನ ತಂದೆಯನ್ನೇ ಕೊಂದು ಬಿಟ್ಟ. ತಡೆಯಲು ಬಂದ ತಾಯಿಯನ್ನು ತದುಕಿದ. ಇದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ವರದಿಯಾದ ಸುದ್ದಿ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಒಂದು ರೀತಿಯ “ಕ್ರೈಮ್ಸ್” ಆಫ್ ಇಂಡಿಯಾ ಪತ್ರಿಕೆಯಾಗಿ ಹೊರಹೊಮ್ಮುತ್ತಿರುವುದು ವಿಷಾದಕರ. ತನ್ನ ತಂದೆಯ ಕೊಲೆ ಮಾಡಿದ ಈ ವ್ಯಕ್ತಿ ಕೆಲ ತಿಂಗಳ ಹಿಂದೆಯೂ ತನ್ನ ಪಾಲಕರ ಮೇಲೆ ಹಲ್ಲೆ ಮಾಡಿದ್ದ, ಆದರೆ ಹೆತ್ತ ಕರುಳು ಈ ದುರುಳನನ್ನು ಕ್ಷಮಿಸಿ ಪೊಲೀಸರಿಂದ ಬಿಡಿಸಿ ಕೊಂಡು ಬಂದಿತ್ತು. ಬಂಧ ಮುಕ್ತನಾಗಿ ಹೊರಬಂದ ಈ ಯುವಕ ತನ್ನ ತಂದೆ ಪಾಲಿಗೆ ಯಮನಾಗಿ ಎರಗಿದ.

ಗುಜರಾತಿನಲ್ಲಿ ೮೫ ರ ಪ್ರಾಯದ ವೃದ್ಧ ಅರ್ಚಕರನ್ನು ಬಡಿದು ಕೊಂಡರು ಆಗಂತುಕರು. ಪ್ರಾಯಕ್ಕೆ ಬಂದ ಹುಡುಗ ಹುಡುಗಿ ಪರಸ್ಪರ ಪ್ರೀತಿಸಿ ಓಡಿದ್ದಕ್ಕೆ ಹುಡಗಿಯ ತಂದೆ ಮತ್ತು ನೆಂಟರಿಷ್ಟರು ಕ್ರುದ್ಧರಾಗಿ ಹುಡುಗನ ತಾಯಿ ಮತ್ತು ಚಿಕ್ಕಮ್ಮನ ಮೇಲೆ ಅತ್ಯಾಚಾರ ವೆಸಗಿದರು. ಎಸಗಿದ ಕ್ರೌರ್ಯ ಸಾಲದೆಂಬಂತೆ ಈ ಅತ್ಯಾಚಾರಕ್ಕೆ ಹುಡುಗಿಯ ಕಡೆಯ ಮಹಿಳೆಯರ ಬೆಂಬಲವೂ ಇತ್ತು. ಕೆಲ ತಿಂಗಳುಗಳ ಹಿಂದೆ ಪರಾಟಾ ಗಾಗಿ ಹೊಡೆದಾಡಿ ಒಬ್ಬ ಸತ್ತ.

ತಮಿಳು ನಾಡಿನ ವಿದ್ಯಾಮಂತ್ರಿಯೊಬ್ಬ ೧೦ ನೆ ತರಗತಿ ಪರೀಕ್ಷೆಗೆ ಕೂತು  ಪರೀಕ್ಷೆ ಬರೆಯಲು ಬೇರೊಬ್ಬ ವ್ಯಕ್ತಿಯನ್ನು ಹೈರ್ ಮಾಡಿದ. ಶೌಚಾಲಯದಲ್ಲಿ ಶೌಚಕ್ಕೆ ಕೂತ ಒಬ್ಬ ಹೊರಬರಲು ಹೆಚ್ಚು ಸಮಯ ತೆಗೆದು ಕೊಂಡ ಎಂದು ತನ್ನ ಸರತಿಗಾಗಿ ಕಾಯುತ್ತಿದ್ದ ಮತೊಬ್ಬ ಅವನ ಮೇಲೆ ಹಲ್ಲೆ ನಡೆಸಿ ಕೊಂದು ಬಿಟ್ಟ.

ಚೆನ್ನೈ ನಗರದಲ್ಲಿ ಶಾಲಾ ಬಾಲಕನೊಬ್ಬ ತನ್ನ ಅದ್ಯಾಪಿಕೆಯ ಮೇಲೆ ಚೂರಿಯಿಂದ ಆಕ್ರಮಿಸಿ ಕೊಲೆ ಮಾಡಿದ. ಅದ್ಯಾಪಿಕೆ ತನ್ನನ್ನು ಟೀಕಿಸಿದಳು ಎನ್ನುವ ಕಾರಣಕ್ಕೆ ನಾನಾಕೆಯನ್ನು ಕೊಂದೆ ಎಂದ ಬಾಲಕ. ಪ್ರೇಮಿಗಳ ದಿನಾಚರಣೆಯಂದು ಇಬ್ಬರು ಬಾಲಕರು ಸೇರಿ ತಮ್ಮ ಗೆಳೆಯನ ಹತ್ಯೆ ಮಾಡಿದರು. ಹುಡುಗಿಯ ವಿಷಯದಲ್ಲಿ ಈ ಕೊಲೆ. ಹದಿಹರೆಯದ ಪ್ರೇಮ ಹುಚ್ಚು ಹೊಳೆ ಎನ್ನುವುದಕ್ಕೆ ಜ್ವಲಂತ ನಿದರ್ಶನ ಈ ಘಟನೆ.

ನೈತಿಕ ಮೌಲ್ಯಗಳಿಗೆ ಅತೀವ ಪ್ರಾಮುಖ್ಯತೆ ಕೊಡುವ ನಮ್ಮ ದೇಶದಲ್ಲಿ ಈ ತೆರನಾದ ಘಟನೆಗಳು ಜರುಗುತ್ತಿರುವುದಕ್ಕೆ ಕಾರಣವಾದರೂ ಏನಿರಬಹುದು? ನೈತಿಕ ಮೌಲ್ಯಗಳ ಬಗ್ಗೆ ಅಷ್ಟೇನೂ ಹೆಚ್ಚಾಗಿ ತಲೆ ಕೆಡಿಸಿ ಕೊಳ್ಳದ, ಮಾರ್ಗದರ್ಶನಕ್ಕಾಗಿ ನಮ್ಮ ಕಡೆ ನೋಡುತ್ತಿದ್ದ ಪಾಶ್ಚಾತ್ಯ ವಿಶ್ವಕ್ಕಿಂತ ನಾವು ಕಡೆಯಾಗುತ್ತಿದ್ದೆವೆಯೇ? ಹಿಂಸೆ, ಅತ್ಯಾಚಾರ ಎಸಗುವ ತಪ್ಪಿತಸ್ಥರಿಗೆ ತಡಮಾಡದೆ ತಕ್ಕ ಶಿಕ್ಷೆ ಪ್ರದಾನ ಮಾಡುತ್ತಿದ್ದೇವೆಯೇ? ದಿನ ನಿತ್ಯ ಈ ರೀತಿಯ ಸುದ್ದಿಗಳನ್ನು ಓದುವ, ತಪ್ಪಿತಸ್ಥರು ರಾಜಾರೋಷವಾಗಿ ಜಾಮೀನಿನ ಮೇಲೆ ಓಡಾಡುವುದನ್ನು ನೋಡುವ ನಮ್ಮ ಎಳೆಯರು ಹಿಂಸೆಯ, ದಾರಿ ತುಳಿದರೆ ಭವಿಷ್ಯದಲ್ಲಿ ಭಾರತದ ಕತೆ ಏನಾದೀತು?

  ಒಟ್ಟಿನಲ್ಲಿ ಸಮಾಜ ತುಳಿಯುತ್ತಿರುವ ಹಾದಿ ನಮ್ಮ ಪೂರ್ವಜರ ದಾರಿಗಿಂತ ವಿಭಿನ್ನವಾಗಿದೆ ಎಂದು ದಿನೇ ದಿನೇ ಸ್ಪಷ್ಟವಾಗುತ್ತಿದೆ. ಮನುಷ್ಯ ಸಂಯಮ, ತಾಳ್ಮೆಯ ಕಲೆಯನ್ನು ರೂಢಿಸಿ ಕೊಳ್ಳಬೇಕಿದೆ. ತಾಳ್ಮೆ, ಸಂಯಮ, ಬದುಕಿನ ಎಂಥಾ ಪರೀಕ್ಷೆಗಳನ್ನೂ ನಿಭಾಯಿಸಬಲ್ಲುದು ಎನ್ನುವುದಕ್ಕೆ ಧರ್ಮ ಗ್ರಂಥದ ಸೂಕ್ತ ಇಲ್ಲಿದೆ…

“ಕಾಲದಾಣೆ. ನಿಸ್ಸಂಶಯವಾಗಿಯೂ ಮನುಷ್ಯ ಹಾದಿ ತಪ್ಪಿದ್ದಾನೆ. ಸತ್ಕರ್ಮಗಳನ್ನು ಮಾಡುವವರೂ, ಸತ್ಯಕ್ಕಾಗಿ ಶ್ರಮಿಸುವವರೂ, ಸಂಯಮವನ್ನು ಪಾಲಿಸುವವರನ್ನು ಹೊರತುಪಡಿಸಿ”.    

 

ವ್ಯಾಟಿಕನ್ ನಿಯಮ

ಇತ್ತೀಚೆಗೆ ಕ್ರೈಸ್ತ ಧರ್ಮದ ಜಗದ್ಗುರು ಪೋಪ್ ರವರನ್ನು ಭೇಟಿಯಾಗಲು ಬ್ರಿಟನ್ ದೇಶದ ಕೆಲವು ಮಂತ್ರಿಗಳು ಹೋಗಿದ್ದರು. ಪೋಪ್ ಒಬ್ಬ ವಿಶ್ವದ ಗೌರವಾನ್ವಿತ ಮತ್ತು ಆದರಿಸಲ್ಪಡುವ ಧರ್ಮಗುರುಗಳು, ಹಾಗೆಯೇ head of state ಸ್ಥಾನ ಮಾನವನ್ನು ಹೊಂದಿರುವವರು ಸಹ. ಇವರನ್ನು ಭೇಟಿಯಾಗಲು ಮಂತ್ರಿ ಮಹೋದಯರು, ಗಣ್ಯರು ಹೋಗುವುದು ಸಹಜವೇ. contraception (ಗರ್ಭನಿರೋಧಕ) ಬಳಕೆಯಿಂದ ಹಿಡಿದು climate change ವರೆಗೆ ಚರ್ಚಿಸಲು ಪೋಪ್ ರನ್ನು ಭೇಟಿಯಾಗುತ್ತಾರೆ ಜನ. ಪೋಪ್ ರನ್ನು ಭೇಟಿಯಾದ ಬ್ರಿಟಿಷ ತಂಡದ ಕುರಿತು ನನ್ನ ಆಸಕ್ತಿ ಏನೆಂದರೆ, ತಂಡದಲ್ಲಿ ‘ಸಯೀದ ಹುಸೇನ್ ವಾರ್ಸಿ’ ಎನ್ನುವ ಮುಸ್ಲಿಂ ಮಹಿಳೆ ಸಹ ಇದ್ದರು. ಈಕೆ ಬ್ರಿಟಿಷ್ ಮಂತ್ರಿಮಂಡಲದ ಏಕೈಕ ಮುಸ್ಲಿಂ ಮಹಿಳಾ ಸಚಿವೆ. ವಾರ್ಸಿ ಪೋಪ್ ರನ್ನು ಕಾಣಲು ಹೋಗುವಾಗ vatican protocol ಪ್ರಕಾರ ಕಪ್ಪು ವಸ್ತ್ರ ಮತ್ತು ಸ್ಕಾರ್ಫ್ ಧರಿಸಿದ್ದರು. ಇದು ವಿಶ್ವದ ಅತಿ ಚಿಕ್ಕ ದೇಶವಾದ ಸುಮಾರು ೧೧೦ ಎಕರೆ ವಿಸ್ತೀರ್ಣದ ವ್ಯಾಟಿಕನ್ ನ ನಿಯಮ.

ವ್ಯಾಟಿಕನ್ ಕ್ರೈಸ್ತರ ಅತ್ಯಂತ ಪವಿತ್ರ ಕ್ಷೇತ್ರ. ತೋಚಿದ ರೀತಿಯ ಉಡುಗೆ ತೊಡುಗೆ ಸಲ್ಲದು. ಶಿಷ್ಟಾಚಾರಗಳು ಎಲ್ಲೆಲ್ಲಿ ಅವಶ್ಯಕವೋ ಅವುಗಳನ್ನ ಗೌರವಿಸಿ, ಅನುಸರಿಸಬೇಕು. ಈ ತೆರನಾದ ನಿಯಮಗಳು ಯಾವುದೇ ಸಮಾಜ ಅಥವಾ ಸಂಸ್ಕೃತಿಗಳಲ್ಲಿದ್ದರೆ ಅವುಗಳಿಗೆ ಬೇರೆಯೇ ತೆರನಾದ ಅರ್ಥ ಕೊಟ್ಟು ಟೀಕಿಸಬಾರದು. ನಮಗೊಂದು ನ್ಯಾಯ, ಪರರಿಗೊಂದು ನ್ಯಾಯ, ಈ ಬೇಧ ಭಾವ ಉದ್ಭವಿಸಿದಾಗ ಸಹಜವಾಗಿಯೇ ಸಂಘರ್ಷಕ್ಕೆ ಹಾದಿ ಮಾಡಿ ಕೊಡುತ್ತದೆ.

ಕ್ರೈಸ್ತರ ಪವಿತ್ರ ಕ್ಷೇತ್ರ ದಂತೆಯೇ ಇಸ್ಲಾಮಿನ ಎರಡು ಪವಿತ್ರ ಕ್ಷೇತ್ರ ಗಳಾದ ಮಕ್ಕಾ ಮತ್ತು ಮದೀನಾ ನಗರಗಳು ಸೌದಿ ಅರೇಬಿಯಾದಲ್ಲಿವೆ. ವಿಶೇಷವೇನೆಂದರೆ ಕೇವಲ ಮಕ್ಕಾ, ಮದೀನ ಮಾತ್ರ ಪವಿತ್ರ ನಗರಗಳಲ್ಲ, ಬದಲಿಗೆ ಇಡೀ ಸೌದಿ ಅರೇಬಿಯಾ ದೇಶವೇ ಇಸ್ಲಾಮಿನ ಪುಣ್ಯ ಭೂಮಿ. ಹಾಗೆಂದು ಮುಸ್ಲಿಂ ವಿಧ್ವಾಂಸರ ಅಭಿಪ್ರಾಯವೂ ಹೌದು. ಮಕ್ಕಾ, ಮದೀನ ನಗರಗಳಿಗೆ ಮುಸ್ಲಿಮೇತರರು ಬರುವ ಹಾಗಿಲ್ಲ, ಹಾಗೆಯೇ ಸೌದಿ ಅರೇಬಿಯಾ ದೇಶಕ್ಕೆ ಬರುವವರೂ ವಸ್ತ್ರದ ವಿಷಯದಲ್ಲಿ modesty ತೋರಿಸಬೇಕು. ಮಹಿಳೆಯರು ನೀಳ, ಕಪ್ಪು ಬಟ್ಟೆ ಧರಿಸಬೇಕು. ಇದಕ್ಕೆ ಹಿಜಾಬ್ ಎನ್ನುತ್ತಾರೆ. ಸ್ವಾರಸ್ಯವೇನೆಂದರೆ ವ್ಯಾಟಿಕನ್ ವಿಷಯದಲ್ಲಿ ತೋರಿಸುವ ಸಜ್ಜನಿಕೆ ಮುಸ್ಲಿಂ ಧರ್ಮೀಯ ಆಚರಣೆಗೆ ಇಲ್ಲದಿರುವುದು. ಸೌದಿ ಅರೇಬಿಯಾದ ಉಡುಗೆ ಮತ್ತು ಇತರೆ ನಿಯಮಗಳ ಬಗ್ಗೆ ಟೀಕೆಗಳು ಕೇಳಿ ಬರುತ್ತಲೇ ಇರುತ್ತವೆ.

ಭಾವನೆಗಳನ್ನು ಮನ್ನಿಸುವ ಔದಾರ್ಯ ಎಲ್ಲರಿಗೂ ಏಕೆ ಲಭ್ಯವಲ್ಲ ಎನ್ನುವುದು ಒಂದು ದೊಡ್ಡ ಪ್ರಶ್ನೆ.

ಋತು ಗಾನ

ಋತು ಚಕ್ರ ಒಂದು ರೀತಿಯ ರಾಕೆಟ್ ಸೈನ್ಸ್ ಕೆಲವರಿಗೆ. ಒಬ್ಬ ಗಂಡು ಋತು ಚಕ್ರದ ಬಗ್ಗೆ ಬರೆದಾಗ ಸಹಜವಾಗಿಯೇ ಹುಬ್ಬುಗಳು ಮೇಲೇರುತ್ತವೆ. ಏಕೆಂದರೆ ಇದು ಪುರುಷರ domain ಅಲ್ಲ. writer’s block ನಿಂದ ಹೊರಬರಲು ವಿಷಯವೊಂದನ್ನು ಹುಡುಕುತ್ತಿದ್ದಾಗ ಹೊಳೆಯಿತೀ ವಿಷಯ, ಹಳೇ ಲಾಪ್ ಟಾಪ್ ಬದಲಿಸಿ ಮೊನ್ನೆ ತಾನೇ ಕೊಂಡ ಹೊಸ ಅತಿ ತೆಳುವಾದ “ಅಲ್ಟ್ರಾ ಬುಕ್’ ಲಾಪ್ ಟಾಪ್ ನಿಂದ ಹೊರಹೊಮ್ಮಿದ ಲೇಖನ ಓದಿ.

ನಾನು ಬೆಂಗಳೂರಿನಲ್ಲಿ ಮೆಡಿಕಲ್ ಟ್ರಾನ್ಸ್ ಕ್ರಿಪ್ಶನ್ ಮಾಡುತ್ತಿರುವಾಗ ಟ್ರೈನರ್ ಒಬ್ಬರು ಅಮೇರಿಕನ್ ಮಹಿಳೆ. ಆಕೆ human anatomy ವಿಷಯ ಕಲಿಸುವಾಗ ಋತು ಚಕ್ರದ ವಿಷಯ ಬಂತು. ಕೆಣಕಲೆಂದೇ ಏನೋ ಹುಡುಗರನ್ನು ಒಬ್ಬೊಬ್ಬರಾಗಿ ಎಬ್ಬಿಸಿ you know how long menstruation lasts ಎಂದು ಕೇಳಿದಾಗ ಇಡೀ ತರಗತಿಯೇ ನಗೆಗಡಲಲ್ಲಿ ಮುಳುಗುವ ಉತ್ತರ ಬರುತ್ತಿತ್ತು. ಒಬ್ಬ ಹತ್ತು ದಿನ ಎಂದರೆ, ಮತ್ತೊಬ್ಬ ಇನ್ನೂ ಮುಂದಕ್ಕೆ ಹೋಗಿ ಆರು ತಿಂಗಳು ಎಂದು ಬಿಟ್ಟ. ಆಕೆ ನಗುತ್ತಾ ಮಹಿಳೆಯರ ಈ ಮಾಸಿಕ ವಿದ್ಯಮಾನವನ್ನು ವಿವರಿಸಿ knives fly in the kitchen and this is the time guys have to leave town ಎಂದು ಹೇಳಿದಾಗ ಹೆಣ್ಣು ಮಕ್ಕಳು ಗಹಗಹಿಸಿ ನಕ್ಕಿದ್ದರು.

ನಾನು ಚಿಕ್ಕವನಿದ್ದಾಗ ಕೆಲವರು ಹೇಳಿದ್ದು ಕೇಳಿದ್ದೇನೆ, ಅವಳು ದೊಡ್ಡವಳಾದಳು ಎಂದು. ನಿನ್ನೆ ನಾನು ಹೇಗೆ ನೋಡಿದ್ದೇನೋ ಹಾಗೆಯೇ ಇದ್ದಾಳಲ್ಲಾ ಇವಳು, ಮತ್ತೆ ದೊಡ್ಡವಳಾದಳು ಎಂದರೆ ಏನರ್ಥ ಎನ್ನುವ ನನ್ನ ಹುಡುಗು ಜಿಜ್ಞಾಸೆಗೆ ಉತ್ತರ ಸಿಕ್ಕಿರಲಿಲ್ಲ. ಈಗಿನ ಥರ ಉತ್ತರ ಕೊಡುವಷ್ಟು ಬೆಳೆದಿರಲಿಲ್ಲ ಸಮಾಜ ಆಗ.

ಸೌದಿ ಅರೇಬಿಯಕ್ಕೆ ಬಂದಾಗ ಇಲ್ಲಿ ಕಾಣುವುದೆಲ್ಲಾ ಹೊಸತು ನನಗೆ. ಒಮ್ಮೆ ಒಂದು ಮನೆಯ ಮೇಲೆ ಸೌದಿ ದೇಶದ ಧ್ವಜ ಹಾರಿದ್ದನ್ನು ಕಂಡೆ. ನಮ್ಮ ದೇಶದಲ್ಲಿ ಮನೆಗಳ ಮೇಲೆ, ಅಲ್ಲಿ ಇಲ್ಲಿ ಎಂದು ಬಾವುಟ ಹಾರಿಸುವ ಹಾಗಿಲ್ಲವಲ್ಲ. ಹಾಗಾಗಿ ಕುತೂಹಲದಿಂದ ಒಬ್ಬ ಶ್ರೀಲಂಕೆಯ ವ್ಯಕ್ತಿಯ ಹತ್ತಿರ ಕೇಳಿದಾಗ ಆತ ಹೇಳಿದ ಆ ಮನೆಯ ಹುಡುಗಿ ವಯಸ್ಸಿಗೆ ಬಂದಿದ್ದಾಳೆ, ಅದನ್ನು ತಿಳಿಸುವುವ ಉದ್ದೇಶದಿಂದ ಬಾವುಟ ಹಾರಿಸುತ್ತಾರೆ ಎಂದಿದ್ದ ಕುಚೋದ್ಯಭರಿತ ಹಾಸ್ಯದ ಯಾವುದೇ ಸುಳಿವನ್ನೂ ಕೊಡದೆ. ನಮ್ಮ ದೇಶದಲ್ಲಿ ಕೆಲವರು ಮನೆಯ ಜಗುಲಿಯ ಸುತ್ತ ಒಂದು ಬೆಡ್ ಶೀಟ್ ಮರೆ ಮಾಡಿ ಅಲ್ಲಿ ಹುಡಗಿಯನ್ನು ಕೂರಿಸುವುದನ್ನು ನಾನು ನೋಡಿದ್ದೇನೆ. ಇನ್ನೂ ಒಂದು ಸಮುದಾಯದವರು ಚಪ್ಪರ ಹಾಕಿ ಹುಡುಗಿ ಸಿಂಗರಿಸಿ ಯನ್ನು ಕೂರಿಸುತ್ತಾರೆ. ಈಗ ಇದೆಲ್ಲಾ ಬದಲಾಗಿರಬೇಕು. ಇದು ಬದಲಾಗಿದೆಯೇ, ಇಲ್ಲವೇ ಎಂದು ಗಮನಿಸಲೇ ಬೇಕಾದ, ಕುತೂಹಲ ಭರಿತ ವಿಷಯವೂ ಅಲ್ಲ ಅನ್ನಿ ಇದು.

ಏನೇ ಇರಲಿ, ಮಹಿಳೆಯರಿಗೆ ಆಗುವ ಈ ಜೈವಿಕ ಬದಲಾವಣೆ ವಿವಿಧ ಸಮಾಜಗಳಲ್ಲಿ ವಿವಿಧ ರೂಪಗಳಲ್ಲಿ ಕಾಣಿಸುತ್ತದೆ. ಕ್ರೈಸ್ತರ ಹಳೆ ಒಡಂಬಡಿಕೆ ಪ್ರಕಾರ ಋತು ಚಕ್ರ ಅರ್ಧ ಸಾವಿನಂತೆ. ಪವಿತ್ರ ವಾದುದನ್ನು ಅಪವಿತ್ರ ಗೊಳಿಸುತ್ತದೆ ಋತು ಚಕ್ರ ಎನ್ನುವ ಅಭಿಪ್ರಾಯದೊಂದಿಗೆ ಅದು ಒಂದು ಶಾಪ ಎನ್ನುವ ಅಭಿಪ್ರಾಯ ಹಳೆ ಒಡಂಬಡಿಕೆ ಕಾಲದ ಜನರದ್ದಾಗಿತ್ತು. ಇಥಿಯೋಪಿಯಾ ದೇಶದಲ್ಲಿ ಈ ಅವಸ್ಥೆಯಲ್ಲಿರುವ ಹೆಣ್ಣು ಮಕ್ಕಳು ಅದಕ್ಕೆಂದೇ ನಿರ್ಮಿಸಲಾಗಿದ್ದ ಗುಡಿಸಿಲಿಗೆ ಹೋಗಿ ವಾಸವಾಗುವ ಪದ್ಧತಿ ಇದೆಯಂತೆ. ದೇವತೆಯರನ್ನು ಆರಾಧಿಸುವ ಪ್ರಾಚೀನ ಸಮಾಜಗಳಲ್ಲಿ ಋತು ಚಕ್ರ ಒಂದು ಪವಿತ್ರ ಕ್ರಿಯೆ. ಹಾಗೂ ತಿಂಗಳಿನ ಆ ಅವಧಿಯಲ್ಲಿ ಮಹಿಳೆ ಹೆಚ್ಚು ಬಲಶಾಲೀ ಎನ್ನುವ ಅಭಿಪ್ರಾಯವೂ ಇತ್ತು. ಅಷ್ಟೇ ಅಲ್ಲ ಈ ಅವಧಿಯಲ್ಲಿ ಮಹಿಳೆ ಗದ್ದೆ ಹೊಲದಲ್ಲಿ ಓಡಾಡಿದರೆ ಬೆಳೆ ಚೆನ್ನಾಗಿ ಆಗುವ ನಂಬಿಕೆ ಇತ್ತಂತೆ.

 ಇಸ್ಲಾಮಿನಲ್ಲಿ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲ, ಇದೊಂದು ನೈಸರ್ಗಿಕ ಪ್ರಕ್ರಿಯೆ, ಈ ಸಮಯದಲ್ಲಿ ಮಹಿಳೆ ನಮಾಜ್ ನಿರ್ವಹಿಸುವಂತಿಲ್ಲ , ಪವಿತ್ರ ಕುರಾನ್ ಪಠಿಸುವಂತಿಲ್ಲ, ವೃತಾಚಾರಣೆ ಪಾಲಿಸುವಂತಿಲ್ಲ. ಒಮ್ಮೆ ಪ್ರವಾದಿಗಳು ತಮ್ಮ ಪತ್ನಿಗೆ ನೀರು ಕೊಡೆಂದು ಕೇಳಿದಾಗ, ನಾನು ಋತುಮತಿ ಯಾಗಿದ್ದೇನೆ ಎನ್ನುವ ಉತ್ತರ ಬಂತು. ಆಗ ಪ್ರವಾದಿಗಳು ಕೇಳಿದರು, ಅದರಲ್ಲೇನು ತಪ್ಪು? ಋತು ಚಕ್ರ ಆಗೋದು ಬಿಡೋದು ನಿನ್ನ ಕೈಯಲ್ಲಿಲ್ಲವಲ್ಲ ಎಂದು ಉತ್ತರಿಸಿದ್ದರು. ಅಂದರೆ ಇದರ ಬಗ್ಗೆ ತಲೆ ಕೆಡಿಸಿ ಕೊಳ್ಳದೆ ದೈನಂದಿನ ಚಟುವಟಿಕೆ ಸಾಂಗವಾಗಿ ನಡೆಸಬಹುದು ಎಂದಾಗಿತ್ತು ಪ್ರವಾದಿಗಳ ಅಭಿಪ್ರಾಯ.

ಸ್ಟೀವ್ ಜಾಬ್ಸ್ ರವರ ಆಪಲ್ ಕಂಪೆನಿ ಮೊದಲ ಬಾರಿಗೆ i pad ತಯಾರಿಸಿ ಅದಕ್ಕೆ ಹೆಸರೇನೆಂದು ಇಡಬೇಕು ಎಂದು i pad ಒಳಗೊಂಡು ಒಂದೆರಡು ಹೆಸರುಗಳನ್ನು ಕೊಟ್ಟು ಜನರ ಅಭಿಪ್ರಾಯ ನೋಡಿದಾಗ ಬಹಳ ಜನ ಹೇಳಿದ್ದು i pad ಹೆಸರು ಬೇಡ, ಇದು ಸ್ತ್ರೀಯರ ಋತುಚಕ್ರವನ್ನು ನೆನಪಿಸುತ್ತದೆ, kotex pad, ‘always ‘ pad ಗಳ ತೆರನಾದ ಹೆಸರು ಬೇಡ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ಆದರೂ ಆಪಲ್ ಸಂಸ್ಥೆ ಇವುಗಳನ್ನು ಕಿವಿಗೆ ಹಾಕಿ ಕೊಳ್ಳದೆ ವಿಶ್ವಕ್ಕೆ ನೀಡಿದರು i pad . ಎಲ್ಲರೊಳಗೊಂದಾಗು ಎನ್ನುವ ಮಾತಿನಲ್ಲಿ ಆಪಲ್ ಗೆ ನಂಬಿಕೆಯಿಲ್ಲ. ಸ್ವಲ್ಪ ಸರಿದು ನಿಂತು ಎಲ್ಲರಿಗಿಂತ ಭಿನ್ನವಾಗಿ ಯೋಚಿಸಿ ಕಾಲಿಡುತ್ತಾರೆ ಆಪಲ್ ಜನ. ಹಾಗಾಗಿ ಅಷ್ಟೊಂದು ಯಶಸ್ವಿ ಈ ಕಂಪೆನಿ.

ಈ ಲೇಖನ ಬರೆಯುತ್ತಿರುವಾಗ ನನ್ನ ಪತ್ನಿ ಬಂದು ಕೇಳಿದಳು, ಬೆಳಗ್ಗಿನಿಂದ ಲಾಪ್ ಟಾಪ್ ಅನ್ನ ಅಂಟಿಸಿ ಕೊಂಡು ಕೂತಿದ್ದೀರಾ (ಶುಕ್ರವಾರ ರಜೆ ಯಾದ್ದರಿಂದ), ಸಾಕು ಏಳಿ ಈಗ ಎಂದಾಗ ನಾನು, ತಡಿಯೇ ಋತು ಚಕ್ರದ ಬಗ್ಗೆ ಬರೆಯುತ್ತಿದ್ದೇನೆ ಎಂದಿದ್ದೇ ತಡ, ಓಹೋ, ನಿಮಗೂ ಶುರು ಆಗ್ಬಿಡ್ತಾ ಅದು… ಅಲ್ಲಾ ಮತ್ತೆ… ಎಂದು ಸಿಡುಕಿ ಮರೆಯಾದಳು.