ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ…

ಭಾರತ ವಿಶ್ವದ ಅತ್ಯಂತ ಭ್ರಷ್ಟ ರಾಷ್ಟ್ರಗಳಲ್ಲೊಂದು. ಹೇಗಿದೆ, ನಮ್ಮ ಕೀರ್ತಿಯ ಪತಾಕೆ. ಬಹು ಎತ್ತರಕ್ಕೆ ಹಾರುತ್ತಿದೆ ಅಲ್ಲವೇ? ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ… ಅಂತರರಾಷ್ಟ್ರೀಯ ಪಾರದರ್ಶಕ ಸಂಸ್ಥೆ ಈ ಬಹುಮಾನವನ್ನು ಭಾರತಕ್ಕೂ ಮತ್ತು ಇತರ ರಾಷ್ಟ್ರಗಳಿಗೂ ದಯಪಾಲಿಸಿತು. ಸಮಾಧಾನ ಏನೆಂದರೆ ನಮ್ಮೊಂದಿಗೆ ಒಂದಿಷ್ಟು ಸಂಗಾತಿಗಳೂ ಇರುವುದು; ಸೋಮಾಲಿಯ, ಆಫ್ಘಾನಿಸ್ತಾನ, ಮಯನ್ಮಾರ್, ಸುಡಾನ್ ಮತ್ತು ಇರಾಕ್. ವಾಹ್! ಸ್ನೇಹಿತರ ಪ್ರೊಫೈಲ್ ಒಮ್ಮೆ ಸ್ವಲ್ಪ ನೋಡಿ. ೧೮೦ ರಾಷ್ಟ್ರಗಳ ಪೈಕಿ ನಮ್ಮ ರಾಂಕಿಂಗ್ ೮೪. ಲಂಚ ಎಂದ ಕೂಡಲೇ ಹೆಣವೂ ಬಾಯಿ ಬಿಡುತ್ತಂತೆ. ಬಿಟ್ಟಿ ದುಡ್ಡು ನೋಡಿ.. ದುಡಿಮೆ ಬೇಡ, ಬೆವರಿನ ಅಗತ್ಯವಿಲ್ಲ… ಮಾಡಲೇಬೇಕಾದ ಕೆಲಸವನ್ನು ಮಾಡಿ ಕೊಡಲಾರೆ ಎಂದು ೧೦೧ ಕಾರಣಗಳನ್ನು ನೀಡಿ ನಂತರ ಸ್ವಲ್ಪ ಕೊಳಕಾದ ಹಲ್ಲುಗಳನ್ನು ಪ್ರದರ್ಶಿಸಿದರೆ ಬಂದು ಬೀಳುತ್ತದೆ ಕಾಂಚಾಣ. ಕಾಂಚಾಣಂ ಕಾರ್ಯ ಸಿದ್ಧಿ. ಮತ್ತೆ ಧಾರ್ಮಿಕತೆಯನ್ನು ಪ್ರದರ್ಶಿಸಿ ಮುಖವಾದ ಹಾಕಿಕೊಂಡು ಓಡಾಡೋದು? ಅದಕ್ಕೇನು ದಾರಿಯಲ್ಲಿ ಸಿಗುವ ದೇವರ ಹುಂಡಿಗಳಿಗೋ ನಮ್ಮ ಇಷ್ಟದೇವರುಗಳ ಮಠಗಳಿಗೋ ಒಂದಿಷ್ಟು ಸುರಿದು ಬಂದರಾತು. ಲಂಚ ತೆಗೆದುಕೊಳ್ಳಬೇಡಿ ಎಂದು ಯಾವ ಧರ್ಮಭೀರುವಿನ ಬಾಯಿಂದಲೂ ಬರುವುದಿಲ್ಲ ನೋಡಿ, ಏಕೆಂದರೆ ಆ ಮೂಲದ ಮೂಲಕವೇ ಅಲ್ಲವೇ ಅವರ ಹೊಟ್ಟೆಪಾಡು ಸಾಗುವುದು? ಯಾರಾದರೂ ಕೊಡಲಿಯನ್ನು ತಮ್ಮ ಕಾಲ ಮೇಲೆಯೇ ಹಾಕಿಕೊಳ್ಳುತ್ತಾರ? ಇಂಥ ಸಾಮಾಜಿಕ ಅನಿಷ್ಟಗಳನ್ನು ಹೋಗಲಾಡಿಸುವತ್ತ ಗಮನ ಹರಿಸುವುದನ್ನು ಬಿಟ್ಟು ರಾಷ್ಟ್ರ ಭಾಷೆ ಯಾವುದಾಗಬೇಕು, ರಾಷ್ಟ್ರ ಗೀತೆ ಇದಾದರೇನು ಅಥವಾ ಇನ್ನಾವುದಾದರೂ ಹೊಸ ಸಮಸ್ಯೆಯನ್ನು ingenuity ಉಪಯೋಗಿಸಿ ಹುಟ್ಟುಹಾಕಿ ಜನರ ಪೀಡಿಸುವುದು, ಈ ತೆರನಾದ ವ್ಯರ್ಥ ಕಾರ್ಯಗಳಲ್ಲಿ ನಾವು ನಮ್ಮನ್ನು ತೊಡಗಿಸಿಕೊಂಡು ವಿಶ್ವದ ಎದುರಿಗೆ ನಮ್ಮ ಮಾನ ನಾವೇ ಹರಾಜಿಗೆ ಹಾಕಿಕೊಳ್ಳುತ್ತೇವೆ.

Advertisements

ಬಾತುಕೋಳಿಗೆ ಪ್ರತಿಧ್ವನಿ ಇದೆಯೇ?

ಬಾತುಕೋಳಿಗೆ ಪ್ರತಿಧ್ವನಿ ಇದೆಯೇ? ಇಂದಿನ ಯಾಹೂ ಮೇಲ್ ತೆರೆಯುವಾಗ, ಹಾಯ್ ಅಬ್ದುಲ್, a duck’s quack doesnt echo, strange uh? ಎನ್ನುವ ಯಾಹೂ ಸಂದೇಶ ಸಿಕ್ಕಿತು. ಬೆಳ್ಳಂಬೆಳಗ್ಗೆ ಬಾತುಕೋಳಿಯ ಕ್ವಾಕ್ ಕ್ವಾಕ್ ನ ಪ್ರತಿಧ್ವನಿಯ ಚಿಂತೆ ಯಾಹೂ ಕಡೆಯಿಂದ. ಸರಿ ಯಾವುದಕ್ಕೂ ಸರ್ಚ್ ಬಾರ್ ಗಳಿವೆಯಲ್ಲ ಇಂಥಾ trivial ವಿಷಯಗಳ ಬಗ್ಗೆ ಸರ್ಚ್ ಮಾಡಿ ಒಂದಿಷ್ಟು ಮಾಹಿತಿ ಪಡೆಯಲು. ಅಷ್ಟಕ್ಕೂ ಪ್ರತಿಧ್ವನಿ ಬರಬೇಕೆಂದರೆ ಪ್ರತಿಧ್ವನಿಗೆ ಬೇಕಾದ ಅನುಕೂಲಕರ ಪರಿಸ್ಥಿತಿಯ ಜೊತೆ ಕೂಗೂ ಸಹ ಜೋರಾಗಿಯೇ ಬರಬೇಕು ಅಲ್ಲವೇ? ಆದರೆ ಬಾತು ಕೋಳಿಯಾದರೋ ನಮಗೆಲ್ಲಾ ತಿಳಿದಂತೆ ಹೆಚ್ಚೇನೂ ಜೋರಾಗಿ ಕ್ವಾಕ್ ಅನ್ನುವುದಿಲ್ಲ. ಹಾಗೆಯೇ ಈ ವಿಷಯದ ಬಗ್ಗೆ ನಡೆಸಿದ ಪ್ರಯೋಗಗಳಲ್ಲಿ ಬಾತುಕೋಳಿಯ ಶಬ್ದಕ್ಕೆ ಪ್ರತಿಧ್ವನಿ ಇರುವುದು ಕಂಡು ಬಂದಿತು. ಹಾಗಾದರೆ ಬಾತುಕೋಳಿಯ ಕ್ವಾಕ್ ಶಬ್ದಕ್ಕೆ ಪ್ರತಿಧ್ವನಿ ಇಲ್ಲ ಅಂತ ಹೇಗೆ ಗುಲ್ಲೆದ್ದಿತು?

ಉತ್ತರ: ಬಾತುಕೊಳಿಯು ಪಿಸುಮಾತಿನಂತೆ ಕ್ವಾಕ್ಕಿಸುತ್ತದೆ. ಬಾತುಕೋಳಿ ಸಾಧಾರಣವಾಗಿ ಪ್ರತಿಧ್ವನಿಗೆ ಬೇಕಾದ ಶಬ್ದ ಪ್ರತಿಫಲಿಸುವ ಸ್ಥಳಗಳಲ್ಲಿ ವಾಸಿಸುವುದಿಲ್ಲ. ನೀವೂ ಬಾತುಕೊಳಿಯಿಂದ ಕಚ್ಚಿಸಿಕೊಂಡಿದ್ದರೆ ಕೆಳಗೆ ನೀಡಿದ ಕೊಂಡಿ ಕ್ಲಿಕ್ಕಿಸಿ ಕುತೂಹಲ ಪರಿಹರಿಸಿಕೊಳ್ಳಿ. http://www.acoustics.salford.ac.uk/acoustics_info/duck/

ಕಾಂಡೋಮ್ ಚಿಂತೆ

ಒಂದೆರಡು ಬ್ಲಾಗ್ ಗಳಲ್ಲಿ ಕಾಂಡೋಮ್ ಬಗ್ಗೆ ಚರ್ಚೆ. ಇದೇನಪ್ಪ ಪ್ರಪಂಚದಲ್ಲಿ ಹೊಟ್ಟೆಗಿಲ್ಲ ಎಂದು ಮಂದಿ ಕೊರಗುವಾಗ ಇವರಿಗೆ ಕಾಂಡೋಮ್ ಬಗ್ಗೆ ಚಿಂತೆ ಎಂದು ಚಿಂತಿತರಾಗಿ ಕೊರಗಬೇಡಿ. ಕಾಂಡೋಮ್  ಹೇಗ್ ಉಪಯೋಗ್ಸೋದು, ಅದರ ಖರ್ಚೆಷ್ಟು ಇದರ ಬಗ್ಗೆ ಅಲ್ಲ ತಲೆ ಬಿಸಿ. ಬದಲಿಗೆ ಕಾಂಡೋಮ್ ತರಲು ತಪ್ಪಿತಸ್ಥ ಭಾವದಿಂದ ಹೋಗುವ ಪರಿಸ್ಥಿತಿ ಕುರಿತ ಚರ್ಚೆ ಇದು. ಸತ್ಯ ಹೇಳಬೇಕೆಂದರೆ ಕಾಂಡೋಮ್ ಕೊಡಿ ಎಂದು ಕೇಳಲು ನನಗೇನೂ ಮುಜುಗರ ಇಲ್ಲ. ಭಾರತದಲ್ಲಿ ಕಾಂಡೋಮ್ ಕೊಂಡಿಲ್ಲ ನಾನು. ನಾನಿರುವ ಸೌದಿ ಅರೇಬಿಯದಲ್ಲಿ ಇದರ ಬಗ್ಗೆ ಅಂತ ಮುಜುಗರವೋ ನಾಚಿಕೆಯೋ ಇಲ್ಲ. ಇನ್ನು ಕಾಂಡೋಮ್ ಕೇಳಲು ಭಯ, ಸಂಕೊಚವಾದರೆ ಕಾಂಡೋಮ್ಗಳಲ್ಲಿನ ವೈವಿಧ್ಯತೆ ಚರ್ಚಿಸಿ ನಮಗೆ ಬೇಕಾದ, ನಮ್ಮ ಅಭಿರುಚಿಗೆ ಹೊಂದುವ ಕಾಂಡೋಮ್ ಆರಿಸಿ ಕೊಳ್ಳುವ ಮಾತಂತೂ ದೂರವೇ ಉಳಿಯಿತು. ಕಾಂಡೋಮ್ ಕೊಡಿ ಎಂದು ಕೇಳಿದ ಕೂಡಲೇ ಅಂಗಡಿಯವ ಧೂಳು ತುಂಬಿದ ಡಬ್ಬವನ್ನು ಕನಿಕರದಿಂದ ನಮ್ಮೆಡೆ ನೋಡಿ ಬಿಸಾಕುತ್ತಾನೆ. ಅಷ್ಟೇ ಅಲ್ಲ, ಅಂಗಡಿಯಲ್ಲಿ ಕೆಲಸ ಮಾಡುವ ಹುಡಗರು ಕಿಸಕ್ ಎಂದು ನಕ್ಕು ಮತ್ತಷ್ಟು ಹಿಂಸೆ ಮಾಡುತ್ತಾರೆ.  ಪಾಪ ಈ ಮಿಕ ಉಗುಳು ನುಂಗುತ್ತಾ ಅಂಗಡಿಯವ ಕೇಳಿದ ಹಣ ಪೀಕಿ ಸದ್ದಿಲ್ಲದೆ ಬೆಕ್ಕಿನಂತೆ ಹೊರನಡೆಯುವ ಪರಿಸ್ಥಿತಿ ಚಿಂತಾಜನಕ. ಕಾಂಡೋಮ್ ಖರೀದಿಯ ಸಮಯದ ಮಾನಸಿಕ ಸ್ಥಿತಿ ಹೇಗೆ ಎಂದರೆ ಅದನ್ನು ಉಪಯೋಗಿಸಿ ಒಂದಿಷ್ಟು ಸುಖ ಅನುಭವಿಸುವ ಚಪಲವೂ ಮಾಯವಾಗಿಬಿಡುತ್ತದೆ.  

 ಕೆಲವು ಜಾಣರು ಕಾಂಡೋಮ್ ಕೊಡಿ ಎಂದು ಕೇಳುವುದಿಲ್ಲ, ಬದಲಿಗೆ “ಸಿಗರೇಟ್” ಕೊಡಪ್ಪ ಎಂದು ಕಣ್ಣು ಹೊಡೆದು ಕೇಳುತ್ತಾರೆ. ರೈನ್ ಕೋಟ್ ಎಂದು ಕರೆಯುವವರೂ ಇದ್ದಾರೆ.  

 ಗುಡಿ ಕೈಗಾರಿಕೆ ಥರ ( ಮೇಣದ ಬತ್ತಿ ಅಥವಾ ಶಾವಿಗೆ ತಯಾರಿಸುವ ರೀತಿ ) ಮನೆಯಲ್ಲೇ ಯಾರೂ ಕಾಣದಂತೆ “ಕವಚ” ತಯಾರಿಸುವ ತಂತ್ರಜ್ಞಾನ ಯಾವಾಗ ಬರುತ್ತದೋ? ಆ ತಂತ್ರಜ್ಞಾನ ಬರುವವರೆಗೂ ಕಿರಾಣಿ ಅಂಗಡಿಯ ಶೆಟ್ಟಿ ಅಥವಾ ಮೆಡಿಕಲ್ ಸ್ಟೋರ್ ನ ಮಾರವಾಡಿಯ ಕೃಪಾಕಟಾಕ್ಷಕ್ಕೆ ನಾವು ಒಳಗಾಗಲೇಬೇಕು.

ರಾಜ್ಯದ ರಾಜಕಾರಣ

ದಿನಾ ಬೆಳಗಾದರೆ ಮುಂಬೈ ಸ್ಟಾಕ್ ನ ಬಗ್ಗೆ, dow jones index ಮತ್ತು new york ಸ್ಟಾಕ್ exchange ಗಳ ಪಾಯಿಂಟ್ಸ್ ಬಗ್ಗೆ ಕೆಲವರು ಆತಂಕ ಮತ್ತು ತವಕದಿಂದ ಕೂತರೆ, ಇನ್ನು ಕೆಲವರು ಇಂದು ಮತ್ತೆ ನಮ್ಮ ಮುಖ್ಯ ಮಂತ್ರಿಗಳು ಗಳ ಗಳ ಅತ್ತರೆ ಎಂದು ಕುತೂಹಲದಿಂದ ವೀಕ್ಷಿಸುವುದು ಒಂದು ಪರಿಪಾಠವಾಗಿದೆ. ರಾಜ್ಯದ ರಾಜಕಾರಣ ದಿನೇ ದಿನೇ ವೈವಿದ್ಯತೆ ಕಾಣುತ್ತಿದ್ದು ಈ ವೈವಿಧ್ಯತೆಗೆ ಕಾರಣ ಹೊರಗಿನ ರಾಜ್ಯದವರು ಎನ್ನುವ ಅಂಶ ಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಿದೆ. ಆಂಧ್ರ ಮೂಲದ ರೆಡ್ಡಿ ಸೋದರರ ಚದುರಂಗದಾಟಕ್ಕೆ ನಮ್ಮ ರಾಜ್ಯದ ಸೀದಾ ಸಾದಾ ಮನುಷ್ಯನ ಕಬಡ್ಡಿ ಕಸರತ್ತುಗಳು ಸೋತು ಸುಣ್ಣವಾಗುತ್ತಿದ್ದು ರಾಜ್ಯದ ಜನತೆಗೆ ಪುಕ್ಕಟೆ ಮನರಂಜನೆ ಒದಗಿಸುತ್ತಿದೆ.

ಸರಿ ಮು. ಮಂತ್ರಿಗಳು take the bull by its horn ತತ್ವವನ್ನು ಅಳವಡಿಸಿಕೊಂಡು ಅಧಿಕಾರ ಉಳಿಸಿಕೊಳ್ಳುವುದನ್ನು ಬಿಟ್ಟು ಆಟಿಕೆ ಕಳಕೊಂಡ ಮಗುವಿನಂತೆ ಏಕೆ ಅಳುತ್ತಿದ್ದಾರೆ ಎನ್ನುವುದು ಅರ್ಥವಾಗದ ವಿಷಯ. ರಾಜಕಾರಣಿಗಳಿಗೆ ಅಧಿಕಾರ ಎನ್ನುವುದು ಮಕ್ಕಳಿಗೆ ಆಟಿಕೆ ಇದ್ದಂತೆ. ಅದು ಕೈ ತಪ್ಪಿದಾಗ ಅಥವಾ ಯಾರಾದರೂ ಕಸಿದುಕೊಳ್ಳಲು ಹವಣಿಸಿದಾಗ ವಿಹ್ವಲರಾಗುವುದೂ ಸಹಜವೇ. ಅದರಲ್ಲೇನೂ ತಪ್ಪಿಲ್ಲ ಎನ್ನಿ. ಜೀವನ ಪೂರ್ತಿ ಜನಸೇವೆ ಮಾಡಿ ಬದುಕಿನ ಮುಸ್ಸಂಜೆಯ ಕ್ಷಣಗಳಲ್ಲಿ ಒಂದಿಷ್ಟು ಅಧಿಕಾರದ ರುಚಿ ಉಣ್ಣುವ ಎಂದರೆ ಅದಕ್ಕೂ ಒಲ್ಲೆ ಎನ್ನುವ spoil sport ಆಡಿ ಖುಷಿ ಪಡುವ ವಿರೋಧಿಗಳು. ಎಡ್ಡಿಜೀ ಮು. ಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದಾಗ ನನಗನ್ನಿಸಿದ್ದು ಈ ಸಾಧಾರಣ, ಕಪಟತನ ಅರಿಯದ ವ್ಯಕ್ತಿಯನ್ನು ಘಟಾನುಘಟಿ ಗಳು ಹರಿದು ತಿನ್ನುವುದರಲ್ಲಿ ಸಂಶಯವಿಲ್ಲ ಎಂದು. ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಅಧಿಕಾರ ಏರಿದ ಭಾಜಪಕ್ಕೂ ಅಧಿಕಾರದ nuances ಏನು ಎನ್ನುವುದು ತಿಳಿಯಲಿಲ್ಲ. ಅದು ಕಲಿಯುವ ಹೊತ್ತಿಗೆ ಕುಮಾರ ಸ್ವಾಮಿ ಅಂಡ್ ಕಂಪನಿ ಸರಕಾರದ ಚರಮಗೀತೆ ಹಾಡಿ ಚಿಯರ್ಸ್ ಎಂದು ಕುಣಿಯಬಹುದು ಮತ್ತು ಎಡ್ಡಿಜಿ ಶರಣ ಶರಣೆಯರ ನಾಡಿಗೆ ಮರಳಿ ವಚನ ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳಬಹುದು.

ಚಿಲಿಪಿಲಿಗುಟ್ಟುವಾ, ಬನ್ನಿ

twitter logo2twitter logo 1

ಹಕ್ಕಿಗಳು ನಿರಾಯಾಸವಾಗಿ, ನಿರಾತಂಕವಾಗಿ ಆಗಸದಲ್ಲಿ ಹಾರುವುದನ್ನು ಕಂಡ ದ್ವಿಚಕ್ರ ವಾಹನ ರೆಪೇರಿ ಮಾಡಿ ಬದುಕುತ್ತಿದ್ದ wright ಸೋದರರಿಗೆ ತಾವೂ ಅವುಗಳಂತೆ ಹಾರಬೇಕು ಸ್ವಚ್ಛಂದವಾಗಿ ಎಂದು ತೋರಿ ವಿಮಾನ ಕಂಡುಹಿಡಿದು ಇತಿಹಾಸ ನಿರ್ಮಿಸಿದರು. ವಿದ್ಯುತ್ ತಂತಿಗಳ ಮೇಲೂ, ಬೇಲಿಗಳ ಮೇಲೂ ಸಾಲಾಗಿ ಕೂತು, ಕಣ್ಣರಳಿಸಿ, ಪುಟ್ಟ ಕೊಕ್ಕು ತುಂಬಾ ಹರಟೆ ಕೊಚ್ಚುವ ಗುಬ್ಬಚ್ಚಿಗಳಿರಬೇಕು twitter ಎನ್ನುವ ಆಧುನಿಕ ಯುಗದ ಗೀಳಿಗೆ ನಾಂದಿ ಹಾಡಿದ್ದು. ಅತ್ಯಂತ ವೇಗವಾಗಿ ವಿಶ್ವವ್ಯಾಪಿಯಾಗಿ ಬೆಳೆಯುತ್ತಿರುವ ಈ twitter ಎನ್ನುವ ವಿದ್ಯಮಾನ ಹಿರಿಯರು ಕಿರಿಯರು, ಬಡವ ಬಲ್ಲಿದ, ರಾಜಕಾರಣಿ, ನಟ ನಟಿಯರು ಎನ್ನದೆ ಎಲ್ಲರನ್ನೂ ಮರುಳು ಮಾಡಿ ಒಂದು ಹೊಸ ಕ್ರಾಂತಿಯನ್ನೇ ಸೃಷ್ಟಿಸಿದೆ. ಸೊಲ್ಪವೇ ಸಮಯದಲ್ಲಿ ಈ ರೀತಿ ಅಗಾಧವಾಗಿ twitter ಬೆಳೆಯಲು ಕಾರಣವೇನಿರಬಹುದು?

ಕಾರಣ ಇಷ್ಟೇ… ease of use ಮತ್ತು ಮನುಷ್ಯನಲ್ಲಿಯ ಹರಟೆಯ ಚಾಳಿ. ಜೋಕೆ, ಹರಟೆಗೂ ಇದೆ ಕಡಿವಾಣ, twitter ನಲ್ಲಿ. ಅದೆಂದರೆ ಹೇಳಬೇಕಾದ್ದನ್ನು ಕೇವಲ ೧೪೦ ಅಕ್ಷರಗಳಲ್ಲಿ ಹೇಳಿ ಮುಗಿಸಬೇಕು. ಈ ಕಡಿವಾಣ ಪ್ರತಿ ಪೋಸ್ಟ್ ಗೆ ಅನ್ವಯ. ಎಷ್ಟು ಪೋಸ್ಟ್ ಗಳನ್ನಾದರೂ ಕಳುಹಿಸಬಹುದು.

ಅಮೆರಿಕೆಯ biz stone, jack dorsey ಮತ್ತು evan ವಿಲಿಯಂಸ್ ಇವರುಗಳು ಸ್ಥಾಪಕರು. ಮಾರ್ಚ್ ೨೧, ೨೦೦೬ ರಲ್ಲಿ ಆರಂಭಗೊಂಡ twitter ನ ಚೊಚ್ಚಲ ಮೆಸೇಜ್ ” “just setting up my twttr”. ಇದನ್ನು ಕಳಿಸಿದ್ದು Jack Dorsey. ಓದಿದ ಹೊಸ ಪುಸ್ತಕ ಬಗ್ಗೆಯೋ, ನೋಡಿದ ಸಿನಿಮಾದ ಬಗ್ಗೆಯೋ, ತಿಂದ ತಿಂಡಿಯ ಬಗ್ಗೆಯೋ, ನಿಮ್ಮ ಚಿಣ್ಣರ ತುಂಟತನದ ಮಾತುಗಳ ಬಗ್ಗೆಯೋ ನೀವು ಬರೆಯಬಹುದು. ಅಷ್ಟೇ ಅಲ್ಲ ನಿಮ್ಮ ಸುತ್ತ ಮುತ್ತ ನಡೆದ ರಾಜಕೀಯ ವಿದ್ಯಮಾನಗಳು, ಅನಾಹುತಗಳು ಹೀಗೆ ವಿಶ್ವಕ್ಕೆ ಹೇಳಬೇಕಾದ್ದನ್ನು twiiter ಮೂಲಕ ಹೇಳಿ. ಕಳೆದ ವರ್ಷದ ಅಮೆರಿಕೆಯ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ದಿಗಳು twitter ಅನ್ನು ಯಥೇಚ್ಚವಾಗಿ (ಪುಕ್ಕಟೆ ಅಲ್ವೇ, ಅದಕ್ಕೆ) ಬಳಸಿದರು. ಕ್ಯಾಲಿಫೋರ್ನಿಯಾ ದಲ್ಲಿ ಕಾಡ್ಗಿಚ್ಚು ಹಬ್ಬಿದಾಗ ವಿಶ್ವಕ್ಕೆ ಗೊತ್ತಾಗಿದ್ದು twitter ಮೂಲಕ. ಅನಾಹುತ ಸ್ಥಳಕ್ಕೆ ambulance ಮತ್ತು fire fighters ಗಳಿಗಿಂತಲೂ ಮೊದಲು ಆಗಮಿಸುವುದು twitter. new york ನಗರದ ಹಡ್ಸನ್ ನದಿಯ ಮೇಲೆ ವಿಮಾನ ಎರಗಿದಾಗಲೂ, ಮುಂಬೈ ನಗರದಲ್ಲಿ ಭಯೋತ್ಪಾದಕರು ರಕ್ತಪಾತ ಹರಿಸಿದಾಗಲೂ twitter ಸೊಗಸಾಗಿ ವರದಿ ಮಾಡಿ ವಿಶ್ವದ ಗಮನ ಸೆಳೆಯಿತು.

ಇತ್ತೀಚಿಗೆ ಇರಾನಿನ ಚುನಾವಣೆಯಲ್ಲಿ ಮೋಸ ನಡೆಯಿತೆಂದು ಅಲ್ಲಿನ ಜನ ಪ್ರತಿಭಟಿಸಿ ಬೀದಿಗಿಳಿದಾಗ twitter ಈ ವಿದ್ಯಮಾನವನ್ನು ಜಗಜ್ಜಾಹೀರು ಮಾಡಿತು. twitter ಬರವಣಿಗೆಯಲ್ಲಿ ಆಸಕ್ತಿ ಇರುವವರಿಗೆ ಒಂದು ವರದಾನ ಎಂದೂ ಹೇಳಬಹುದು. ಕೆಲವರಿಗೆ ಬರವಣಿಗೆಯನ್ನು ಹೇಗೆ ಆರಂಭಿಸಬೇಕು ಎಂದು ತಿಳಿದಿರುವುದಿಲ್ಲ. ಅಂಥವರು ಆರಂಭದ ಹೆಜ್ಜೆಯಂತೆ twitter ನಲ್ಲಿ ಬರೆದು ಮುಂದೆ ತಮ್ಮದೇ ಆದ ಬ್ಲಾಗ್ ಆರಂಭಿಸಿಕೊಳ್ಳಬಹುದು.

ಇಷ್ಟೆಲ್ಲಾ ಹೇಳಿಯೂ convince ಆಗ್ಲಿಲ್ವಾ? ಒಮ್ಮೆ ಪ್ರಯತ್ನಿಸಿ ನೋಡಿ. ಮಿತ್ರರೊಂದಿಗೆ, ನೆಂಟರೊಂದಿಗೆ ಅನುಭವ ಹಂಚಿಕೊಳ್ಳಲು twitter ಎಷ್ಟು ಸಹಕಾರಿ ಮತ್ತು ಮೋಜು ಎಂದು ತಿಳಿಯುತ್ತದೆ.