ಮುತ್ತು ಕೊಡುವವಳು ಬಂದಾಗ…

ಮುತ್ತು ಕೊಡುವವಳು ಬಂದಾಗ ತುತ್ತು ಕೊಟ್ಟವಳನ್ನು ಮರೆಯಬೇಡ, ಹೀಗಂತ ಲಾರಿ ಮೇಲೋ ಆಟೋ ರಿಕ್ಷಾ ಮೇಲೋ ಬರೆದಿದ್ದನ್ನು ಓದಿದ ನೆನಪು. ತಾಯಿ, ಅಮ್ಮ, ಮಾತೆ, ಮಾತೋಶ್ರೀ, ಅಬ್ಬೆ, ಹೆಸರುಗಳೆಷ್ಟೇ ಇರಲಿ ಅವರ ಪಾತ್ರ ಮಾತ್ರ ಯಾರಿಂದಲೂ ಅನುಕರಿಸಲು ಆಗದ ಮಾತು. ಎಲ್ಲಾ ಸಂಸ್ಕೃತಿಗಳೂ ಮಾತೆಯ ಹಿರಿಮೆಯನ್ನು ಕೊಂಡಾಡಿವೆ. ತಾಯಿಯನ್ನು ಪೂಜಿಸಿಯೂ ಇವೆ. ಆದರೂ ಆಗಾಗ ನಾವು ನೋಡುವುದು, ಕೇಳುವುದು ವ್ಯತಿರಿಕ್ತವಾದುದನ್ನೇ. ತಾಯಿಯನ್ನು ತೆಗಳುವುದು, ಹಲ್ಲೆ ಮಾಡುವುದು, ಮುಪ್ಪಿನಲ್ಲಿ ಆಕೆಯನ್ನು ನೋಡಿ ಕೊಳ್ಳದೆ ವೃದ್ಧಾಶ್ರಮಕ್ಕೆ ಅಟ್ಟಿ ಮಗುಮ್ಮಾಗಿ ಇದ್ದು ಬಿಡುವುದು, ಹೀಗೆ ಆಕೆಯ ಅವಗಣನೆ ಸಾಮಾನ್ಯ ದೃಶ್ಯವಾಗುತ್ತಿದೆ. ಇಸ್ಲಾಮಿನಲ್ಲಿ ತಾಯಿಗೆ ಅತ್ಯುನ್ನತ ಸ್ಥಾನ ನೀಡಿ ಆಕೆಯನ್ನು ಚೆನ್ನಾಗಿ ನೋಡಿ ಕೊಳ್ಳುವುದು ಧರ್ಮದ ಒಂದು ಅಂಗವಾಗಿ ಪರಿಗಣಿಸಲಾಗಿದೆ. ಮಕ್ಕಳ ಸ್ವರ್ಗ ತಾಯಿಯ ಕಾಲಡಿ ಎಂದು ಪ್ರವಾದಿಗಳು ಹೇಳಿ ತಾಯಿಯ ಮಹತ್ವಕ್ಕೆ ಒಂದು ಮೆರುಗನ್ನೇ ನೀಡಿದರು.

ನಾಲ್ಕು ಮಕ್ಕಳನ್ನು ಹೆತ್ತ ತಾಯಿ ತನ್ನ ನಾಲ್ಕೂ ಮಕ್ಕಳನ್ನು ಕಷ್ಟಪಟ್ಟು ಬೆಳೆಸುತ್ತಾಳೆ, ಆರೈಕೆ ಮಾಡುತ್ತಾಳೆ, ಅವರು ತಮ್ಮ ಕಾಲ ಮೇಲೆ ನಿಲ್ಲುವ ತನಕ ತಾನು ವಿಶ್ರಾಂತಿ ತೆಗೆದುಕೊಳ್ಳದೆ ದುಡಿಯುತ್ತಾಳೆ ಅವರ ಏಳಿಗೆಗಾಗಿ. ಆದರೆ ದೊಡ್ಡವರಾದ ಮೇಲೆ ಈ ನಾಲ್ಕೂ ಮಕ್ಕಳು ಸೇರಿ ಒಬ್ಬ ತಾಯಿಯನ್ನು ನೋಡಿ ಕೊಳ್ಳಲಾಗದೆ ಆಕೆಯನ್ನು ತ್ಯಜಿಸುತ್ತಾರೆ.

ನಮ್ಮನ್ನು ಹೆತ್ತು ಬೆಳೆಸಿ, ಪ್ರೀತಿಸಿ, ಪೋಷಿಸಿ, ನಮ್ಮನ್ನು ಯಾರ ಹಂಗಿಗೂ ಬಿಡದೆ ಸ್ವಾಭಿಮಾನಿಗಳಾಗಿ ಬದುಕಲು ಬೇಕಾದ ಬದುಕಿನ ಹೆದ್ದಾರಿ ಸೃಷ್ಟಿಸುವ ತಾಯಿಗೆ ಈ ಮಾತೆಯರ ದಿನದಂದು ಒಂದು ಆದರಪೂರ್ವಕ ನಮನ.

Advertisements

‘ವಾ’ ಎಂದರೆ ವಾರ್, ‘ಕಾ’ ಎಂದರೆ ಕಾರ್

ನಮ್ಮ ಕಂಪೆನಿಗೆ ಹೊಸತಾಗಿ ಅಮೆರಿಕೆಯವನೊಬ್ಬ ಸೇರಿಕೊಂಡ. ಈಗ ಇಬ್ಬರು ಅಮೆರಿಕನ್ನರು ನಮ್ಮೊಂದಿಗೆ. ಈತ ಕೊಲರಾಡೋ ರಾಜ್ಯದವ. ಪ್ರಥಮ ಬಾರಿಗೆ ಸೌದಿಗೆ ಬಂದಿದ್ದರಿಂದ  ಸ್ವಲ್ಪ ಈತನಿಗೆ ಆತಂಕ, ಗಾಭರಿ. ತನ್ನ ದೇಶದಲ್ಲಿ ಸೌದಿ ಮತ್ತು ಅರಬರ ಕುರಿತ ಮಾಧ್ಯಮಗಳ ಕಪೋಲಕಲ್ಪಿತ ವಾರ್ತೆಗಳನ್ನು ಕೇಳಿ ಅಭಿಪ್ರಾಯ ರೂಪಿಸಿಕೊಂಡ ಈತ ಸೌದಿಗೆ ಬರಲು ಧೈರ್ಯ ಮಾಡಿದ್ದೇ ದೊಡ್ದದೆನ್ನಬೇಕು. ಟಾಡ್ ಇಲಿಯಟ್ ಹೆಸರಿನ ಈತ ಟಿಪಿಕಲ್ ಅಮೆರಿಕನ್ನರ ಥರ ಸ್ಥೂಲಕಾಯಿ.

 

ನಮ್ಮ ಕಂಪೆನಿಯಲ್ಲಿ ಕೆಲಸ ಮಾಡುವವರ ಹೆಸರುಗಳು ಈತನಿಗೆ ಸ್ವಲ್ಪ ವಿಚಿತ್ರ. ರಾಬ್, ಬಾಬ್, ಜೇನ್, ಪೀಟರ್ ಮುಂತಾದ ಹೆಸರುಗಳ ಪರಿಚಯ ಮಾತ್ರ ಇರುವ ಇವನಿಗೆ ಇಲ್ಲಿನ ಹೆಸರುಗಳನ್ನ ನೆನಪಿನಲ್ಲಿ ಇಟ್ಟುಕೊಳ್ಳುವ ಮಾತಿರಲಿ, ಉಚ್ಚರಿಸುವುದೂ ಕಷ್ಟ. ಒಂದು ಹೆಸರನ್ನು ಮಾತ್ರ ಅವನಿಗೆ ನಾನು ಚೆನ್ನಾಗಿ ಕಲಿಸಿದೆ. ನಮ್ಮ ರಿಯಾದ್ ಶಾಖೆಯಲ್ಲಿ ಕೆಲಸ ಮಾಡುವ ಒಬ್ಬನ ಹೆಸರು ಮುಹಮ್ಮದ್ ಅಲಿ. ಟಾಡ್ ನಿಗೆ ಹೇಳಿದಾಗ ಹೆಸರನ್ನು ಬರೆದು ಕೊಡು ಜ್ಞಾಪಕ ಇಟ್ಟುಕೊಳ್ಳಲು ಪ್ರಯತ್ನಿಸುತ್ತೇನೆ ಎಂದ. ನಾನಂದೆ, ನಿನ್ನ ದೇಶದಲ್ಲಿ ಸುಪ್ರಸಿದ್ದ ಬಾಕ್ಸರ್ ಒಬ್ಬನಿದ್ದಾನಲ್ಲ, ಕಪ್ಪು ಜನಾಂಗದ ಪೈಕಿಯವ ಎಂದಾಗ ಒಹ್,  i know, he is muhammad ali. ಎಂದ. ನಾನಂದೆ ರಿಯಾದ್ ನವನ ಹೆಸರೂ ಇದೇ ಎಂದಾಗ, great, this is very easy for me, thank you, ಎಂದು ಮುಗುಳ್ನಕ್ಕ. ಹೆಸರನ್ನು ಈ ರೀತಿ ನೆನಪಿನಲ್ಲಿ ಇಟ್ಟು ಕೊಳ್ಳುವುದಕ್ಕೆ remembering names by association ಎನ್ನುತ್ತಾರೆ.

 

ನಿಮಗೆ ಗೊತ್ತಿರುವಂತೆ ಮಲಯಾಳೀಗಳು ಆಂಗ್ಲ ಭಾಷೆಯನ್ನೂ, ಹಿಂದಿ ಭಾಷೆಯನ್ನೂ, ಸ್ವಲ್ಪ different ಆಗಿ ಉಚ್ಚರಿಸುತ್ತಾರೆ. ಸ್ಕೂಲ್ ಗೆ, “ಸ್ಕೂಳ್”, ಲಾರಿ ಗೆ “ಳೋರಿ”, ಭಾರತ್ ಮಾತಾ ಗೆ, “ಭಾರದ್ ಮಾದಾ”, ಗೀತಾ ಗೆ “ಗೀದಾ” ಹೀಗೆ. ನಮ್ಮಲ್ಲಿರುವ ಮಲಯಾಳೀ ರಾಜ್ಯದವ “ಟಾಡ್” ನನ್ನು “ಟೋಡ್” ಎಂದು ಕರೆಯುತ್ತಿದ್ದ.  ಟೋಡ್ (toad) ಎಂದರೆ ಕಪ್ಪೆ ಅಲ್ಲವಾ? ಹೀಗೆಲ್ಲಾ pronounce ಮಾಡಿ ನಮ್ಮದು ಸರಿಯಾದ ಉಚ್ಛಾರ ಎನ್ನುತ್ತಾರೆ ಮಲಯಾಳೀಗಳು. ಶ್ರೀಲಂಕೆ ಯವರದೂ ಇದೇ ಕಥೆ. ಅವರು ಮಾತನ್ನಾಡುವ ಆಂಗ್ಲ ಭಾಷೆಗೆ ‘r’ ಉಚ್ಛಾರವಿಲ್ಲ. “ವಾರ್” ಗೆ ‘ವಾ’ ಎನ್ನುತ್ತಾರೆ, “ಕಾರ್” ಗೆ ‘ಕಾ’ ಎನ್ನುತ್ತಾರೆ. ‘r’ ಉಚ್ಚರಿಸದಿದ್ದರೆ ತಾವು ಅಮೆರಿಕನ್ನರೋ, ಬ್ರಿಟಿಷರೋ ಆಗಿಬಿಡುತ್ತೇವೆ ಎನ್ನುವ ಭ್ರಮೆಯೋ ಏನೋ.   

 

ಹೇಗೆ ನಡೀತಿದೆ ಹೊಸ ವರ್ಷ, (ಕಾಲು ಭಾಗ ಮುಗೀತು)

ಹೇಗೆ ನಡೀತಿದೆ ಹೊಸ ವರ್ಷ?

ನನ್ನ ಈ ವರ್ಷದ ರೆಸಲ್ಯೂಶನ್ ‘ಶಾರ್ಟ್ ಹ್ಯಾಂಡ್’ ಕಲೀಬೇಕೆಂತಲೋ, ಪರ್ವತಾರೋಹಣ ಮಾಡಬೇಕೆಂದೋ ಅಲ್ಲ. ನನ್ನ ಹಣಕಾಸಿನ ಹದಗೆಟ್ಟ ಪರಿಸ್ಥಿತಿಯ ಕಡೆ ಗಮನ ಇಡೋದು. ಅದು ಬಿಟ್ಟರೆ ನನ್ನ ನೈಕೀ ಶೂ ನಿಂದ ಧೂಳು ಕೆಡವಿ, ಶೂ ಒಳಗೆ ಜಿರಳೆ, ಚೇಳು ಏನಾದರೂ ಸೇರಿಕೊಂಡಿಲ್ಲ ಎಂದು ಖಾತ್ರಿ ಪಡಿಸಿಕೊಂಡು ರಸ್ತೆ ಹಿಟ್ ಮಾಡೋದು. ಒಂದು ಕಾಲದಲ್ಲಿ ಬೊಜ್ಜು ಧನಿಕರ ಲಕ್ಷಣ. ಈಗ ಅದು ಸೋಂಬೇರಿ ತನದ ದ್ಯೋತಕ. ಬದುಕಿನ ಬಗ್ಗೆ careless attititude ಎಂದು ಪರಿಗಣಿತ ಬೊಜ್ಜುಳ್ಳವ. ಆದರೆ ಈ ವ್ಯಾಯಾಮ ಎನ್ನುವುದಿದೆಯಲ್ಲ ಅದು ಮಾಮೂಲಿ ಕೆಲಸ ಅಲ್ಲ. ಜಾಗ್ ಮಾಡಲು ರಿಮೈಂಡ ಮಾಡೇ ಎಂದರೆ ಮನದನ್ನೆ ಹೇಳುತ್ತಾಳೆ, ಮಗನಿಗೆ ಹೋಂ ವರ್ಕ್ ಮಾಡು, ಮಗಳಿಗೆ ಸೋಫಾದ ಮೇಲೆ ಕೂತು ತಿನ್ನಬೇಡ ಎಂದು ರಿಮೈಂಡ ಮಾಡಿ ಆಯುಷ್ಯ ಸವೆಸುತ್ತಿರುವುದು ಸಾಲದು ಈಗ ನಿಮಗೂ ರಿಮೈಂದ್ ಮಾಡ ಬೇಕಾ ಓಡಲು  ಎಂದು ಮೂಗು ಮುರಿಯುತ್ತಾಳೆ.  ಹೋಗಲಿ ಜೊತೆಗೆ ಬಾ ಎಂದರೆ ಬರಲು ತಯಾರಿಲ್ಲ. ಅವಳ ಪ್ರಕಾರ ಖಾಲೆಸ್ಟ್ರಾಲು, ಬೀಪೀ, ಟ್ರೈ ಗ್ಲಿಸರೈಡ್, ಹಾಳೂ ಮೂಳೂ ಎಲ್ಲಾ ಗಂಡಸರಿಗೆ ಮಾತ್ರ, ಮಹಿಳೆಯರ ಹತ್ತಿರ ಸುಳಿಯೋದಿಲ್ಲ ಅಂತ. ಹೌದು, ನಾನೂ ಇಲ್ಲಿಯವರೆಗೂ ಹೆಚ್ಚಾಗಿ ಕೇಳಿರೋದು ಗಂಡಸರಿಗೇ ಈ ಅಟ್ಯಾಕು, ಸ್ಟ್ರೋಕು. ನೀವು ಕೇಳಿದ್ದೀರಾ, ಮಹಿಳೆಯರಿಗೆ ಇದು ತಗುಲಿರೋದು? ತೀರಾ ಇಲ್ಲ ಎಂದಲ್ಲ, ಆದರೆ ಅಪರೂಪ. ಹಾಗಾದರೆ ಅವರಿಗೆ ತಗಲೋ ರೋಗ ಯಾವುದು? ಛೀ, ನನ್ನ ಪ್ರಾಬ್ಲಂ ಅದಲ್ಲ. ನನ್ನ ಬೊಜ್ಜು ಮತ್ತು ನನ್ನ ಬೊಕ್ಕಸ. ಇವು ನನ್ನ ಪ್ರಾಬ್ಲಂಗಳು. ಇವೆರಡನ್ನ ಸರಿಯಾಗಿ ನೋಡಿಕೊಂಡರೆ ಬಾಳು ಸುಂದರ, trouble free, stroke free.  ಸರಿ ಜನವರಿ ಒಂದರಂದು ಶೂ ಕೊಡವಿ, ಒಳಗೇನೂ ಚೇಳು, ಹುಳು ಇಲ್ಲ ಎಂದು ಖಾತ್ರಿಪಡಿಸಿಕೊಂಡು ರಸ್ತೆ ಹಿಟ್ ಮಾಡಿದೆ. ಇಲ್ಲಿ ಸಾಮಾನ್ಯವಾಗಿ ಜಾಗ್, ವಾಕ್ ಮಾಡೋದು ರಾತ್ರಿ ಸಮಯ. ಮರುಭೂಮಿಯ ಹಗಲಿನ ಉಷ್ಣ ನಿಮಗೆ ಗೊತ್ತೇ ಇದೆಯಲ್ಲ. ಆ ಉಷ್ಣದಲ್ಲಿ ಜಾಗಿಂಗ್ ಮಾಡಿದರೆ ಜಾಗ್ ಮುಗಿಯುವ ಮೊದಲೇ ಮನುಷ್ಯ ಕರಗಿ ನೀರಾಗಿ ಚರಂಡಿ ಸೇರಿರುತ್ತಾನೆ. ಸಂಜೆಯಾದರೆ ವಾತಾವರಣ ಸ್ವಲ್ಪ ಮಾನವೀಯತೆ ತೋರಿಸಲು ಆರಂಭಿಸುತ್ತೆ. ಹಾಗಾಗಿ ಸಂಜೆ ಅಥವಾ ರಾತ್ರಿ ಪ್ರಶಸ್ತ. ಮನೆಯ ಹತ್ತಿರವೇ ಇರುವ ೮ ಲೇನುಗಳ ರಸ್ತೆಯ ಮಧ್ಯೆ ಖರ್ಜೂರದ ಸಾಲು ಮರಗಳ ನಡುವಿನ paved sidewalk ಮೇಲೆ ನನ್ನ ಹೊಸವರ್ಷದ ರೆಸಲ್ಯುಶನ್ ಸಾಕಾರಗೊಳಿಸಿದೆ. ಮನೆಯಿಂದ ಹೊರಡುವಾಗ ಎಷ್ಟು ದಿನ ಈ ಡ್ರಾಮ ಎಂದು ಕಣ್ಣಲ್ಲೇ ಕೇಳಿದ ಮಡದಿಗೆ smiley face ಕೊಟ್ಟು, ಬಾಬಾ, ಬರುವಾಗ strawberry juice ತಗೊಂಡ್ ಬಾ ಎಂದು ಅರಚಿದ ಮಗಳಿಗೆ ತರುತ್ತೇನೆ ಬಾಯ್ ಎಂದು ಹೇಳಿ ಮನೆಯಿಂದ ಹೊರಟೆ. ಆಹ್ಲಾದಕರ ಸಂಜೆ, ತುಂಬಾ ದಿನಗಳ ನಂತರ ನೋಡಿದ ನನ್ನನ್ನು ಖರ್ಜೂರದ ಮರಗಳು ದಿವ್ಯ ಅಸಡ್ಡೆ ತೋರಿಸಿದವು. ರಾತ್ರಿಯಾದ್ದರಿಂದ ಟ್ರಾಫಿಕ್ ಕಡಿಮೆ, ಹಾಗಾಗಿ ಪಡ್ಡೆ ಹುಡುಗರ ಭರ್ರೋ ಭರ್ರೋ ಎಂದು ೧೫೦ ಕಿ ಮೀ ವೇಗದ ಕಾರಿನ ರೇಸು. ಜನವರಿ ಒಂದಕ್ಕೆ ಆರಂಭವಾದ ನನ್ನ ಈ ವಾಕ್ ಈಗಲೂ ಮುಂದುವರೆದಿದೆ. ಶುಭ ಲಕ್ಷಣ.

ಮೊನ್ನೆ ಗುರುವಾರ ಕಮೆನಿಯಲ್ಲಿ get together. ಹಲವಾರು ಬಹುಮಾನಗಳನ್ನು ಇಟ್ಟಿರುತ್ತಾರೆ. ಗ್ಯಾಲಕ್ಸಿ ಟ್ಯಾಬ್ ಗಳು, ಮೊಬೈಲ್ ಫೋನ್ ಗಳು, ರಿಸ್ಟ್ ವಾಚ್ ಗಳು. ನಗದು ಬಹುಮಾನಗಳು… ಎಲ್ಲಾ ಉದ್ಯೋಗಿಗಳಿಗೂ ಸಿಗುವಂತೆ ಕಾಮನ್ ನಗದು ಬಹುಮಾನ ಸಹ ಇರುತ್ತದೆ. ತಲಾ ಒಬ್ಬೊಬ್ಬರಿಗೆ ೧೦ ಸಾವಿರ ಸಿಗುತ್ತದೆ ಕಾಮನ್ ಬಹುಮಾನ. ಆಟ ಓಟಗಳಲ್ಲಿ ಗೆದ್ದವರಿಗೆ ಬಹುಮಾನ. ಹೀಗೆ ಬಹುಮಾನಗಳ ಸುಗ್ಗಿ. ಸುಮಾರು get together ಗಳಲ್ಲಿ ಭಾಗವಹಿಸಿದ ನನಗೆ ದೊಡ್ಡ ರೀತಿಯ ಬಹುಮಾನ ಗಿಟ್ಟಿ ಲ್ಲ. ಗೆಲ್ಲುವ ಮುಸುಡಿ ನನ್ನದಲ್ಲ ಎಂದು ನನ್ನ ಒಳಮನ ಹೇಳುತ್ತದೆ. ಆದರೂ ಆಸೆ ಅನ್ನೋದು ಒಂದಿರುತ್ತಲ್ಲ. ಈ ಸಲದ ಬಂಪರ್ ನಗದು ಬಹುಮಾನ ಸುಮಾರು ಎಪ್ಪತ್ತು ಸಾವಿರ ಎಂದಾಗ ವಾವ್ ಎನ್ನುವ ಸ್ವರದೊಂದಿಗೆ ಜೊಳ್ಳೂ ಉದುರಿತು. ಊಟದ ನಂತರ  ಮಧ್ಯಾಹ್ನ ೨ ಕ್ಕೆ ಆರಂಭವಾದ ಚಟುವಟಿಕೆಗಳು ಮಧ್ಯ ರಾತ್ರಿ ಮೀರಿ ನಡೆದವು. ರಾತ್ರಿ ಒಂದು ಘಂಟೆಗೆ ಶುರು ನಗದು ಬಹುಮಾನಗಳ raffle. ಮೊಟ್ಟ ಮೊದಲ raffle ನಲ್ಲಿ ಹೆಸರು ಬಂದರೆ ಮೂರನೇ ಬಹುಮಾನ, ೨೮,೦೦೦ ರೂಪಾಯಿ. ಅದರ ನಂತರ ಬರುವ ಹೆಸರುಗಳಿಗೆ common prize. ಪಟ್ಟಿಯ ಅರ್ಧ ಹೆಸರುಗಳು ಮುಗಿದ ನಂತರ ಬರುವ ಮತ್ತೊಂದು ಹೆಸರಿಗೆ ೩೬,೦೦೦. ಅದರ ನಂತರ ಮತ್ತಷ್ಟು ಹೆಸರುಗಳು. ಎಲ್ಲ ಕಾಮನ್ ಬಹುಮಾನಗಳಿಗಾಗಿ. ಕೊನೆಯ ಬಂಪರ್ ಬಹುಮಾನಕ್ಕೆ ಇನ್ನೂ ಐದು ಹೆಸರುಗಳು ಉಳಿದು ಕೊಂಡವು. ಅವುಗಳಲ್ಲಿ ನನ್ನದೂ ಒಂದು. ಈಗ ಗೆಳೆಯರ ಬಳಗದಲ್ಲಿ ಗುಸು ಗುಸು. ನನ್ನ ಪತ್ನಿಯಂತೂ ಯಾವುದೆ excitement ತೋರಿಸದೆ ಸುಮ್ಮನೆ ಕುಳಿತಿದ್ದಳು, ನನಗೆ ಬರುವ ಚಾನ್ಸ್ ಇಲ್ಲ ಎಂದು. ನನಗಂತೂ ಒಂದು ರೀತಿಯ ಆತ್ಮ ವಿಶ್ವಾಸ. ಆತ್ಮ ವಿಶ್ವಾಸ ಹೊಂದಲು ಚಿಕ್ಕಾಸಿನ ಖರ್ಚಿಲ್ಲವಲ್ಲ. ನನಗೇ ತಗಲೋದು ಎನ್ನುವ ಫೋಸು. ಕೊನೆಗೆ ಮೂರು ಹೆಸರುಗಳು ಉಳಿದು ಕೊಂಡವು, ನನ್ನ ಹೆಸರೂ ಸೇರಿ. ಮತ್ತೊಂದು ಹೆಸರಿನ ಕೂಗೂ ಮುಗಿಯಿತು, ನಾನು ಬಚಾವ್. ಕೊನೆಗೆ ಎರಡು ಹೆಸರುಗಳು. ಹೆಸರು ಕೂಗುವ ನಮ್ಮ operations director ಸ್ವಲ್ಪ ಲವಲವಿಕೆಯವರು. ಬೇಗನೆ ಹೆಸರನ್ನು ಕೂಗೋಲ್ಲ. ನನ್ನ ಆತ್ಮ ವಿಶ್ವಾಸ ನಿಧಾನವಾಗಿ ಆವಿಯಾಗಿ ಹೋಗತೊಡಗಿತು. ಇಷ್ಟು ದೂರ ಬಂದ ನಾನು ಬಂಪರ್ ಪಡೆಯದೇ ಹೋದರೆ?   

ಮೆಲ್ಲಗೆ ನನ್ನ ಪತ್ನಿಯ ಕಡೆ ಕಣ್ಣು ಹೊರಳಿಸಿದೆ, ಮುದ್ದೆಯಾಗಿ ಕೂತವಳು ಸ್ವಲ್ಪ ಎಚ್ಚರವಾದಳು. ಗೆಲುವಿನ ವಾಸನೆ ಬಡಿದು ಶಾಪಿಂಗ್ ಲಿಸ್ಟ್ ಸುರು ಸುರುಳಿ ಯಾಗಿ ಅವಳ ಕಣ್ಣ ಮುಂದೆ ಹಾದು ಹೋಗಿರಬೇಕು. ನಾನು ನನ್ನ ಮೈ ಕೊಡವಿಕೊಂಡೆ, ಒಹ್, ಬಹುಮಾನ ಸಿಗದಿದ್ದರೇನಂತೆ, ನಾನೇನೂ ಅದಕ್ಕಾಗಿ ಹಣ ಹೂಡಿಲ್ಲವಲ್ಲ, ಎಂದು ಆವಿಯಾಗಿ ಮಾಯವಾಗುತ್ತಿದ್ದ ಆತ್ಮವಿಶಾಸವನ್ನು ಮತ್ತೊಮ್ಮೆ ಹಿಂದಕ್ಕೆ ಕರೆಸಿದೆ. ಒಂದಿಷ್ಟು ಕಾಲೆಳೆತ ಅದೂ ಇದೂ ಎಂದು ನಮ್ಮನ್ನು ಪರದಾಡಿಸಿ ಡಬ್ಬ ದೊಳಕ್ಕೆ ಕೈ ಬಿಟ್ಟರು ನತದೃಷ್ಟ ಹೆಸರನ್ನು ಕರೆಯಲು. ಸುರುಳಿ ಮಾಡಿ ಇಟ್ಟಿದ್ದ ಹೆಸರನ್ನು ಮೆಲ್ಲಗೆ ತೆರೆಯುತ್ತಾ ನನ್ನತ್ತ ನೋಟ ಹರಿಸಿದರು ಬಾಸ್. ನನ್ನ ಕತೆ ಮುಗಿಯಿತು ಎಂದು ನಾನಂದು ಕೊಳ್ಳುತ್ತಿದ್ದಂತೆ ಹೊರಬಂತು ಹೆಸರು ಅವರ ಬಾಯಿಂದ. ನತದೃಷ್ಟ ಹೆಸರು. ಪಾಪದ common ಬಹುಮಾನದ ವಾರೀಸುದಾರನ ಹೆಸರು. ಸಖೇದಾಶ್ಚರ್ಯ, ಆ ಹೆಸರು ನನ್ನದಾಗಿರಲಿಲ್ಲ. ನಾನು ಕೆಲಸ ಮಾಡುವ finance department ನಿಂದ ದೊಡ್ಡ ಕೂಗು, ನನಗೆ ಬಹುಮಾನ ಸಿಕ್ಕ ಖುಷಿಯಲ್ಲಿ. ನನ್ನ ಮಡದಿ ಅವಳ ಗೆಳತಿಗೆ ಇವತ್ತಿನ ಚಿನ್ನದ ರೇಟೇನೆಂದು ಕೇಳುತ್ತಿದ್ದ ಹಾಗೆ ಖುಷಿಯಿಂದ ಓಡಿದೆ ಬಹುಮಾನ ಪಡೆಯಲು. ಎಪ್ಪತ್ತು ಸಾವಿರ ಭರ್ತಿ.   

 

೨೪೪ ವರ್ಷಗಳ ಪರಂಪರೆಗೆ ಬಿತ್ತು ತೆರೆ

“ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ” ಇನ್ನಿಲ್ಲ. ೨೪೪ ವರ್ಷಗಳಿಂದ ಸತತವಾಗಿ ಪುಸ್ತಕ ಪ್ರಿಯರ ಫೇವರಿಟ್ ಆಗಿದ್ದ ಈ ವಿಶ್ವಕೋಶ ಆನ್ ಲೈನ್ ಆವೃತ್ತಿಯಾಗಿ ಮಾತ್ರ ಲಭ್ಯ. ನಮಗೆ ಬೇಕಾದ ವಿಷಯಗಳ, ಕುತೂಹಲದ ಬಗ್ಗೆ ಚಿತ್ರಗಳ ಸಮೇತ ವಿವರ ನೀಡುತ್ತಿದ್ದ ಈ ಗ್ರಂಥಶ್ರೇಣಿ ಆನ್ ಲೈನ್ ಧಾಳಿಗೆ ತುತ್ತಾಗಿ ಕೊನೆಯುಸಿರೆಳೆಯಿತು. ಈ ವಿಶ್ವ ಕೋಶ ವನ್ನು  ಸಾಮಾನ್ಯವಾಗಿ ಗ್ರಂಥಾಲಯಗಳಲ್ಲಿ ಅದಕ್ಕೆಂದೇ ಮಾಡಿಸಿದ ಗಾಜಿನ ಅಥವಾ ಮರದ ಬಾಕ್ಸ್ ನಲ್ಲಿ ಇಟ್ಟಿರುತ್ತಾರೆ. ಈ ಪುಸ್ತಕಗಳು ದುಬಾರಿ, ಏಕೆಂದರೆ ೩೨ ಗ್ರಂಥಗಳ ಈ ಶ್ರೇಣಿ ಆಧುನಿಕ ಪ್ರಿಂಟ್ ತಂತ್ರಜ್ಞಾನ ಉಪಯೋಗಿಸಿ ಕಲಾತ್ಮಕವಾಗಿಯೂ, ಸುಂದರವಾಗಿಯೂ ಓದುಗರ ಕೈ ಸೇರುತ್ತದೆ. ೧೭೬೮ ರಲ್ಲಿ ಬ್ರಿಟನ್ ದೇಶದ  edinburgh (ಉಚ್ಛಾರ, ಎಡಿನ್ ಬ್ರ ) ನಿಂದ ಪ್ರಕಾಶಿತವಾಗಲು ಆರಂಭಗೊಂಡ ಈ ವಿಶ್ವಕೋಶ ೨೪೪ ವರ್ಷಗಳ ಕಾಲ ವಿಶ್ವದಾದ್ಯಂತ ಮನ್ನಣೆ ಗಳಿಸಿಕೊಂಡಿತ್ತು. ನಮಗೆ ಸಿಗುವ ಸುದ್ದಿ ನಿಖರವಾದ್ದು ಎಂದು ಖಾತ್ರಿಯಾಗಬೇಕಿದ್ದರೆ ಅದು ಬೀ ಬೀ ಸೀ ಬಾಯಿಂದ ಬರಬೇಕು. ಅಷ್ಟೊಂದು ನಂಬುಗೆ ಇಟ್ಟುಕೊಂಡಿದ್ದ ಮಾಧ್ಯಮ ಬೀ ಬೀ ಸೀ. ಅದೇ ರೀತಿ ಈ ವಿಶ್ವಕೋಶದ ಬಗ್ಗೆಯೂ ಹೇಳಬಹುದು. ಕಲೆಯ ಬಗ್ಗೆಯಾಗಲೀ, ವೈಜ್ಞಾನಿಕ ವಿಷಯವೇ ಆಗಲೀ ಎಲ್ಲದಕ್ಕೂ “ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ” ದ್ದೇ ಕೊನೆಯ ಮಾತು.  

‘ವೆಬ್’ ಅನ್ನೋ ಹೆಬ್ಬಾವು ನಾವು ಪ್ರೀತಿಯಿಂದ ಸಾಕಿ ಕೊಂಡಿದ್ದವುಗಳನ್ನು ನುಂಗುತ್ತಾ ಬರುತ್ತಿದೆ. age old ಪೋಸ್ಟ್ ಹೋಗಿ “ಇ ಮೇಲ್”, ಜನರನ್ನು ಮುಖಾಮುಖಿ ಭೆಟ್ಟಿ ಯಾಗುತ್ತಿದ್ದ ಜಮಾನ ಹೋಗಿ ಫೇಸ್ ಬುಕ್, ಟ್ವಿಟರ್ ಮೂಲಕ ನಮ್ಮ ಸ್ಟೇಟಸ್ ಗಳ ವರದಿ, ಪತ್ರಿಕೆಗಳು ನಿಧಾನವಾಗಿ ಮಾಯವಾಗಿ ಆನ್ ಲೈನ್ ಆವೃತ್ತಿಗಳು. ಪುಸ್ತಕಗಳು ಮಾಯವಾಗಿ “ಇ ಪುಸ್ತಕ” ಗಳು…ಒಂದೇ, ಎರಡೇ? ಜೇಡನ ಮಾಯಾಜಾಲಕ್ಕೆ ಜನ ಸಿಲುಕಿ ಕೊಂಡರು. ಅತೀ ವೇಗದಲ್ಲಿ, ಸುಲಭವಾಗಿ ವಿಷಯ ತಿಳಿಯಲು ವೆಬ್ ಲೋಕ ಅನುವು ಮಾಡಿ ಕೊಟ್ಟಿತು.  ಆನ್ಲೈನ್ ಪ್ರಪಂಚದಲ್ಲಿ ನಮಗೆ ಬೇಕಾದ ವಿಷಯಗಳ ಬಗ್ಗೆ ತಿಳಿಯಲು ಯಾವುದೇ ದೊಡ್ಡ ದೊಡ್ಡ ಗ್ರಂಥದಲ್ಲಿ ಮುಖ ಹುದುಗಿಸಬೇಕಿಲ್ಲ. ಕೇವಲ ನಮ್ಮ ಬೆರಳ ತುದಿಗಳನ್ನು ಕೀಲಿ ಮಣೆ ಮೇಲೆ ಸವರಿದರೆ ಸಾಕು, ಅಲ್ಲಾವುದ್ದೀನನ ಮಾಂತ್ರಿಕ ದೀಪ ನಾಚಬೇಕು ಆ ರೀತಿ ಅನಾವರಣ ಗೊಳ್ಳುತ್ತದೆ ನಾವು ಬಯಸಿದ್ದು. ಇನ್ಸ್ಟಂಟ್ ಫುಡ್ ನಂತೆ ನಿಮಗೆ ವಿಷಯಗಳು ,ಮಾಹಿತಿಗಳು ಲಭ್ಯ; ಕೃಪೆ, ವಿಕಿಪೀಡಿಯಾ, ವೆಬ್ ಸೈಟುಗಳು, ಬ್ಲಾಗುಗಳು. ಇವೆಲ್ಲವೂ ಬೆರಳ ತುದಿಯ ಮೇಲೆ ನಿಂತಿರುವಾಗ ಯಾರಿಗೆ ಬೇಕು ಕಿಸೆಯೂ, ಕೈಗಳೂ ಹೊರಲಾರದ ಪುಸ್ತಕಗಳು?

ಪ್ರಪಂಚ ಬಹಳ ಫಾಸ್ಟ್ ಆಗಿ ಓಡುತ್ತಿದೆ. ನಾವ್ಯಾವುದನ್ನು ಹೊಸತು ಎಂದು ನಮ್ಮದನ್ನಾಗಿಸಿ ಕೊಳ್ಳುತ್ತೇವೆಯೋ ಅವು ಅಷ್ಟೇ ಫಾಸ್ಟ್ ಆಗಿ outdated ಆಗುತ್ತಿವೆ. ಆಂಟಿಕ್ ಆಗಿ ನಮ್ಮೊಂದಿಗೆ ಇರುವ ಕೆಲವು ವಸ್ತುಗಳಲ್ಲಿ ಬ್ರಿಟಾನಿಕ ವಿಶ್ವಕೋಶವೂ ಇದ್ದರೆ ಎಷ್ಟು ಚೆಂದ ಅಲ್ಲವೇ? ಭಾರತದಲ್ಲಿ ಸುಮಾರು ೬೫,೦೦೦ ರೂಪಾಯಿ ಗಳಿಗೆ ಈ ವಿಶ್ವಕೋಶ ಸಿಗುತ್ತದೆ. ನಾನು  ಗಂಭೀರವಾಗಿ ಯೋಚಿಸುತ್ತಿದ್ದೇನೆ ಒಂದನ್ನು ‘ಅಪ್ನಾ’ಯಿಸಲು. ಬ್ಯಾಂಕ್ ಏನಾದರೂ ಸಾಲ ಗೀಲ ಕೊಡಬಹುದೇ ? ಬಡ್ಡಿರಹಿತ ಸಾಲವನ್ನ ? ಅಂಥಾ ಸೌಲಭ್ಯವನ್ನೆನಾದರೂ ಬ್ಯಾಂಕೋ, ಸರಕಾರವೋ ಮಾಡಿದ್ದರೆ ನನಗೆ ‘ಜಾನ್ಕಾರಿ’ ಕೊಡಿ.

೧೮ ನೆ ಶತಮಾನದ ಒಂದು ಕನಸು, ೨೧ ನೆ ಶತಮಾನದಲ್ಲಿ ಅಂತ್ಯ. ಕಂಪ್ಯೂಟರ್ ಗಳು ಪ್ರವರ್ಧಮಾನಕ್ಕೆ ಬರುತ್ತಿದ್ದಂತೆಯೇ ಸಂಪ್ರದಾಯಿಕ ಕಾಗದದ ಕಥೆ ಮುಗಿಯಿತು, ಪೇಪರ್ ಲೆಸ್ ಯುಗ ಆರಂಭ ಎಂದು ಜನ ಪುಳಕಿತರಾದರು. ಕಾಗದದ ಪುಸ್ತಕ, ಎಷ್ಟೊಂದು selfless ನೋಡಿ. ಬ್ಯಾಟರಿ ಕೇಳೋಲ್ಲ, ವಿದ್ಯುಚ್ಛಕ್ತಿ ಯನ್ನು ಬೇಡೋಲ್ಲ, ಚಾರ್ಜರ್ ಬಯಸೋಲ್ಲ, ನೇಣು ಹಾಕಿ ಕೊಳ್ಳೋಲ್ಲ (hang), ಬಿದ್ದರೆ ಕಾಲು ಮುರಿದುಕೊಂಡು ಮೂಲೆ ಸೇರೋಲ್ಲ, ಆದರೂ ಇದನ್ನು ಮನುಷ್ಯ ನಿರ್ದಯವಾಗಿ ಮೂಲೆ ಗುಂಪು ಮಾಡುವತ್ತ ದಾಪುಗಾಲು ಹಾಕುತ್ತಿದ್ದಾನೆ.      

ಚಿತ್ರ ಕೃಪೆ: https://picasaweb.google.com/

 

ದಿಲ್ಲಿ ಗದ್ದುಗೆ ಸನಿಹ

ತಾಳ್ಮೆ ತಂದು ಕೊಳ್ಳಿ…ಇದು ಮುಲಾಯಂ ಸಿಂಗರ  ಸಮಾಜವಾದೀ ಪಕ್ಷ ಪ್ರಮುಖ ವಿರೋಧ ಪಕ್ಷ ಭಾ.ಜ.ಪ ಕ್ಕೆ ಹೇಳಿಕೊಟ್ಟ ಮಂತ್ರ. ಉತ್ತರ ಪ್ರದೇಶದ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸನ್ನು ಸಾಧಿಸಿದ ಸಮಾಜವಾದೀ ಪಕ್ಷ ದೊಡ್ಡ ದೊಡ್ಡ ಪಕ್ಷಗಳಿಗೆ ದೊಡ್ಡ ಆಘಾತವನ್ನೇ ನೀಡಿತು. ಉತ್ತರ ಪ್ರದೇಶ, ಉತ್ತರ್ ಖಾಂಡ್, ಪಂಜಾಬ್, ಗೋವಾ. ಸಿಕ್ಕಿಂ ರಾಜ್ಯಗಳಲ್ಲಿ ನಡೆದ ಚುನಾವಣೆಗಳು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಭರವಸೆಯನ್ನೇನೂ ನೀಡಿಲ್ಲ. ಯುವರಾಜ ಎಂದೇ ಬಿರುದಾಂಕಿತರಾದ ರಾಹುಲ್ ಗಾಂಧಿಯವರ ವರ್ಚಸ್ಸು ಅಷ್ಟಾಗಿ ಕೆಲಸ ಮಾಡಿಲ್ಲ. ಇದೇ ಹಣೆ ಬರಹವೇ ಭಾಜಪ ದ್ದೂ ಸಹ. ಹಾಗಾಗಿ ಕಾಂಗ್ರೆಸ್ ಆಗಲೀ, ಭಾಜಪ ವಾಗಲೀ ಈಗಲೇ ಕೇಂದ್ರದ ಕುರ್ಚಿಯ ವಾಸನೆ ತಮ್ಮ ಮೂಗಿಗೆ ತಾಗಿಸಿ ಕೊಳ್ಳುವ ಆತುರ ತೋರಬೇಕಿಲ್ಲ. ಹಾಗೆಯೇ  ಭಾಜಪ ತನ್ನ ಪಕ್ಷದ outlook ಅನ್ನು drastic ಆಗಿ ಬದಲಿಸಿ ಕೊಳ್ಳುವ ಅಗತ್ಯವೂ ಸಹ ಇದೆ.

ನಮ್ಮ ದೇಶ ವಿಭಿನ್ನ ಸಂಸ್ಕೃತಿಗಳ ಬೀಡು. ಭಾರತೀಯ ಸಂಸ್ಕೃತಿ ಶ್ರೀಮಂತಗೊಂಡಿರುವುದು ಹಲವು ಸಂಸ್ಕಾರಗಳನ್ನು, ನಂಬಿಕೆಗಳನ್ನು ತನ್ನದು ಎಂದು ಒಪ್ಪಿಕೊಳ್ಳುವ ಔದಾರ್ಯದ ಕಾರಣ. ಇದನ್ನು ಗಮನದಲ್ಲಿಟ್ಟು ಕೊಂಡು ಎಲ್ಲರನ್ನೂ ಸೇರಿಸಿಕೊಂಡು ದೇಶ ಕಟ್ಟುವ ಸಂಕಲ್ಪ ಈ ಪಕ್ಷ ಮಾಡಿದರೆ ದಿಲ್ಲಿ ಗದ್ದುಗೆ ಸನಿಹ.

why do they hate us?

ಆಫ್ಘಾನಿಸ್ತಾನದಲ್ಲಿ ಅಮೆರಿಕೆಯ ಸೈನ್ಯ ದಿಂದ ಮತ್ತೊಂದು ಅತಿರೇಕ. ಕೆಲ ದಿನಗಳ ಹಿಂದೆ ಪವಿತ್ರ ಕುರ್’ಆನ್ ಗ್ರಂಥಗಳನ್ನು ಸುಟ್ಟು ಸುದ್ದಿ ಮಾಡಿದ ಅಮೆರಿಕನ್ನರು ಈಗ ಸಾಮೂಹಿಕ ಕಗ್ಗೊಲೆ ಮೂಲಕ ಮತ್ತೊಮ್ಮೆ ವಿವಾದದ ಸುಳಿಗೆ ಸಿಕ್ಕಿ ಬಿದ್ದಿದ್ದಾರೆ. ಅಮೆರಿಕೆಯ ಸೈನಿಕನೊಬ್ಬ ತನ್ನ ಬ್ಯಾರಕ್ ನಿಂದ ಮಧ್ಯರಾತ್ರಿ ಎದ್ದು ಸಮೀಪದ ಗ್ರಾಮಕ್ಕೆ ನುಗ್ಗಿ ಮನೆಗಳಲ್ಲಿ ಮಲಗಿದ್ದ ಜನರ ಮೇಲೆ ಎರ್ರಾ ಬಿರ್ರಿ ಗುಂಡಿನ ಧಾಳಿ ನಡೆಸಿ ೧೬ ಜನರನ್ನು ಕೊಂದ. ಸತ್ತವರಲ್ಲಿ ೯ ಮಕ್ಕಳು ಸೇರಿದ್ದರು. ಈ ತೆರನಾದ senseless ಕೃತ್ಯಗಳು ಒಂದಲ್ಲ, ಎರಡಲ್ಲ, ನಮ್ಮ ಅರಿವಿಗೆ ಬಂದಿರುವುದು. ೨೦೦೬ ರಲ್ಲಿ ಇರಾಕಿನಲ್ಲಿ ೧೪ ವರ್ಷ ಪ್ರಾಯದ ಹುಡಗಿಯ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನೂ  ಆಕೆಯ ಇಡೀ ಕುಟುಂಬವನ್ನೂ ಅಮೆರಿಕೆಯ ಸೈನಿಕರು ಕೊಂದು ಹಾಕಿದ್ದರು.

ಈತ ಮಾನಸಿಕವಾಗಿ ಅಸ್ವಸ್ಥ ಎಂದು ಹೇಳಿ ಕೈ ತೊಳೆದು ಕೊಳ್ಳಲು ಅಮೇರಿಕಾ ನೋಡುತ್ತಿದೆ. ದೀರ್ಘಕಾಲದ ಮಿಲಿಟರಿ ಸೇವೆಯ ಕಾರಣ ಸೈನಿಕರು ಒತ್ತಡಕ್ಕೆ ಸಿಲುಕಿ ಕೊಳ್ಳುತ್ತಾರಂತೆ. ಇದನ್ನು ಆಂಗ್ಲ ಭಾಷೆಯಲ್ಲಿ PTSD ( post traumatic stress disorder ) ಎಂದು ಕರೆಯುತ್ತಾರೆ. ಆದರೆ ಈ ಸೈನಿಕ ptsd ಯಿಂದ ಬಳಲುತ್ತಿದ್ದನೆ ಎನ್ನುವುದು ಗೊತ್ತಿಲ್ಲ.  

ಅವಕಾಶ ಸಿಕ್ಕಾಗ ಯಾವುದಾದರೂ ದೇಶದೊಳಕ್ಕೆ ನುಗ್ಗುವುದು ಹೇಗೆ ಎಂದು ವಿಶ್ವದ ಸೂಪರ್ ಪವರ್ ಅಮೆರಿಕೆಗೆ ಯಾರೂ ಹೇಳಿ ಕೊಡಬೇಕಿಲ್ಲ. ಆದರೆ ನುಗ್ಗಿದ ನಂತರ ಅಲ್ಲಿನ ಜನರ ರೀತಿ ರಿವಾಜು, ಸಂಸ್ಕೃತಿ ಮುಂತಾದುವುಗಳ ಬಗ್ಗೆ ಸರಿಯಾಗಿ ಟ್ರೇನ್ ಮಾಡಲು ಜನರ ಅವಶ್ಯಕತೆ ಇದೆ ಎಂದು ಅಮೆರಿಕೆಯ ಸೈನ್ಯ ಎಸಗಿದ ಕೃತ್ಯಗಳು ಹೇಳುತ್ತವೆ.

ನನ್ನ ಅಮೆರಿಕೆಯ ಭೇಟಿ ವೇಳೆ ಕೆಲವು ಅಮೆರಿಕನ್ನರ ಭೇಟಿಯಾಯಿತು ರೆಸ್ಟುರಾಂಟ್ ಒಂದರಲ್ಲಿ. ಹೀಗೇ ಮಾತನಾಡುತ್ತಿದ್ದಾಗ ಅವರುಗಳು ಹೇಳಿದ್ದು,  we do so much to poor and needy countries in the world and why do they still hate us? ಇದಕ್ಕೆ ಉತ್ತರ ನನ್ನ ಬಳಿ ಇದ್ದರೂ ಹೇಳಲು ಸಾಧ್ಯವಾಗಲಿಲ್ಲ.  ಕಾರಣ ನಾನು ಅವರ ಅತಿಥಿ. ಅತಿಥಿ ನಲ್ನುಡಿಗಳನ್ನೇ ಆಡಬೇಕು, ಎಷ್ಟೇ ಕಷ್ಟವಾದರೂ.

ಜ್ಞಾಪಕ ಶಕ್ತಿ ಹೆಚ್ಚಲು…..

ಜ್ಞಾಪಕ ಶಕ್ತಿ ಹೆಚ್ಚಲು  ದಿನಕ್ಕೊಂದು ಲೋಟ ಹಾಲು ಕುಡಿಯಬೇಕಂತೆ. ಅಮೆರಿಕೆಯ ಮೇಯ್ನ್ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆ, ಅಥವಾ some-ಶೋಧನೆ. ಯಾವುದಾರೂ ಕಂಪೆನಿ, ಹಾಲಿನ ಕಂಪೆನಿಯೋ, ಚಾಕಲೇಟ್ ಕಂಪೆನಿಯೋ some thing ಕೊಟ್ಟರೆ ಅವರಿಗೆ ಇಷ್ಟವಾದ , ಅವರ ಉತ್ಪಾದನೆಗಳು ಮಾರಾಟವಾಗಲು ಸಹಾಯಕವಾಗುವ some-ಶೋಧನೆಗಳು ಲಭ್ಯ. ಇಲ್ಲಿ ಯಾರಾದರೂ ಈ ವಿಶ್ವವಿದ್ಯಾಲಯಕ್ಕೆ ಕೊಟ್ಟಿದ್ದಾರೋ ಏನೋ ಗೊತ್ತಿಲ್ಲ. ಹಾಲು ಕುಡಿಯಿರಿ, ಕುಡಿದರೆ ಒಳ್ಳೆಯದು ಎನ್ನವುದು ನಮ್ಮ ಭೂಮಿಯಷ್ಟೇ ಹಳತಾದ ಸತ್ಯ. ಅದಕ್ಕೆ ಅಲ್ಲವೇ ಮನುಷ್ಯನಿಂದ ಹಿಡಿದು ಮೃಗಗಳವರೆಗೂ ಭೂಮಿಗೆ ಉದುರಿದ ಕೂಡಲೇ ಭಗವಂತ ಹಾಲಿನ ಸರಬರಾಜನ್ನು  ಅಡೆತಡೆಯಿಲ್ಲದೆ ಮುಂದುವರೆಸಿರುವುದು?

ದಿನಕ್ಕೆ ಒಂದು ಲೋಟ ಹಾಲು ಕುಡಿದರೆ ಜ್ಞಾಪಕ ಶಕ್ತಿ ಹೆಚ್ಚುತ್ತಂತೆ. ಎಲ್ಲರೂ ಕಿವಿ ನಿಮಿರಿಸಿ ಕೇಳುವ, ಕಣ್ಣರಳಿಸಿ ನೋಡುವ ವಿಷ್ಯ ಇದು. ವಾವ್, ನನ್ನ ಮಟ್ಟಿಗೆ ಲೈಂಗಿಕ ಸಾಮರ್ಥ್ಯ ಹೆಚ್ಚಿಸಿ ಕೊಳ್ಳುವುದಕ್ಕಿಂತ ಇಂಪಾರ್ಟೆಂಟ್ ಈ ಜ್ಞಾಪಕ ಶಕ್ತಿ ವರ್ಧನೆ. ಏಕೆಂದರೆ ಜ್ಞಾಪಕ ಶಕ್ತಿ ಇಲ್ಲ ಎಂದರೆ ಲೈಂಗಿಕ ಚಟುವಟಿಕೆ ನಡೆಸುವುದನ್ನು ಮರೆತು ಬಿಡುತ್ತೇವೆ. ಕೆಲವೊಮ್ಮೆ ಹಸಿವಿನಂತೆ ಲೈಂಗಿಕ ಬಯಕೆಗಳು spontaneous ಆಗಿ ಬಂದರೂ ಬದುಕಿನಲ್ಲಿ ಒಂದು ಸ್ಟೇಜ್ ಬರುತ್ತೆ ಜ್ಞಾಪಕ ಬಂದಾಗ ದೈಹಿಕ ಸುಖ ಪಡೆಯಬೇಕು ಎನ್ನುವ ಆಸೆ. ದಿನಕ್ಕೆ ಒಂದು ಲೋಟ ಹಾಲು ಕುಡಿದರೆ ಜ್ಞಾಪಕ ಶಕ್ತಿ ಹೆಚ್ಚು, ೨೩ ರಿಂದ ೯೮ ವರ್ಷ ವಯಸ್ಸಿನ ಸುಮಾರು ೯೦೦ ‘ಎಳೆ’ಯರ ಮೇಲೆ ನಡೆಸಿದ ಸಂಶೋಧನೆಯಿಂದ ಕಂಡು ಕೊಂಡ ಅಂಶ ಇದು. ಆದರೆ ಈಗ ನಾವು ಸೇವಿಸುತ್ತಿರುವುದು – ಹಾಲಾಗಲೀ, ಸೊಪ್ಪಾಗಲೀ, ಮೊಟ್ಟೆಯಾಗಲೀ, ಮಾಂಸವಾಗಲೀ – ಆಹಾರಕ್ಕಿಂತ ಹೆಚ್ಚು ರಾಸಾಯನಿಕಗಳನ್ನು. ಗೊಬ್ಬರದಿಂದ ಶುರುವಾದ ಈ ರಾಸಾಯನಿಕಗಳ ಹಸ್ತಕ್ಷೇಪ ಸೇಬಿನ ಹಣ್ಣಿಗೆ ಮೆರುಗನ್ನು ನೀಡುವವರೆಗೆ ಬಂದು ತಲುಪಿದೆ. ತರಕಾರೀ, ಹಣ್ಣುಗಳು, ಮಾಂಸ ಇವುಗಳಿಗೆ ರಾಸಾಯನಿಕ ಸಿಂಪಡಿಸೀ, ಸಿಂಪಡಿಸೀ ಈಗ ಆಹಾರಕ್ಕೆ ಅಂಟಿಕೊಂಡ ರಸಾಯನಿಕಗಳನ್ನು ತೊಳೆದು ತೆಗೆಯಲು ಮತ್ತೊಂದು ರೀತಿಯ washing detergent ಬಂದಿದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು, ಅಲ್ಲವೇ?

ಈಗ ಮತ್ತೊಮ್ಮೆ ಹಾಲಿನ ವಿಷಯಕ್ಕೆ ಬರೋಣ. ಹಾಲು ಕುಡಿಯೋಣ, ಅದು ಹಾಲಿನ ಲಕ್ಷಣ ಹೊಂದಿದ್ದರೆ. ಅರ್ಥ? ನಮ್ಮ ದೇಶದಲ್ಲಿ ಸಿಗುವ ಹಾಲು ಹಾಲಲ್ವಂತೆ. ಅಂದ್ರೆ? ಅಂದ್ರೆ, ನಾವು ಕುಡಿಯೋ ಹಾಲಿಗೆ ಯೂರಿಯಾ, ಹಾಳೂ ಮೂಳೂ ಸೇರಿಸಿ ಕೊಡ್ತಾರಂತೆ. ಒಹ್, ಹಾಗಾದ್ರೆ ಹಾಲು ಕುಡಿದು ನಮ್ಮ ಜ್ಞಾಪಕ ಶಕ್ತಿ ವರ್ಧಿಸುವುದೂ ಬೇಡ, ಈಗ ಇರೋ ಶಕ್ತಿಯೇ ಸಾಕು ಎಂದು ಹಾಲಿಗೆ ಬೆನ್ನು ತಿರುಗಿಸಿದರೆ ಒಳ್ಳೆಯದು ಎಂದು ನನ್ನ ಒಪೀನಿಯನ್ನು.