ಮತ್ಸ್ಯಗಂಧ ಎಕ್ಸ್ಪ್ರೆಸ್

ನನ್ನ ತಂದೆಯವರಿಗೆ ಮೀನೆಂದರೆ ಪ್ರಾಣ. ದಿನವೂ ಬೇಕೇ ಬೇಕು ಮೀನು. ಮನೆಗೆ ಮೀನು ಬಂದ ಕೂಡಲೇ ಅದರೊಂದಿಗೆ ಬರುತ್ತವೆ ಒಂದೆರಡು ಬೆಕ್ಕುಗಳು. ಮೀನಿನ ರೆಕ್ಕೆ, ಬಾಲ ಇನ್ನೇನಾದರೂ ಉಳಿದ ತುಂಡುಗಳನ್ನು ತಿನ್ನಲು. ಇಂದು ಬಹಳ ಆಸೆಯಿಂದ ೬೦೦ ಗ್ರಾಂ ತೂಕದ ಒಂದು ಮೀನನ್ನು ಮನೆಗೆ ತಂದು ತಾಯಿಗೆ ನೀಡಿದರು. ಸ್ವಲ್ಪ ಸಮಯದ ನಂತರ ಕತ್ತಿರಿಸೋಣ ಅಂತ ಮೀನನ್ನು ತಟ್ಟೆಯ ಮೇಲಿಟ್ಟು ಫ್ರಿಜ್ನ ಮೇಲಿಟ್ಟು ಸೀರಿಯಲ್ ನೋಡಲು ಕೂತರು. ಒಂದರ್ಧ ಘಂಟೆಯ ನಂತರ ಮೀನನ್ನು ಕ್ಲೀನ್ ಮಾಡಲು ಫ್ರಿಜ್ನ ಮೇಲಿನ ತಟ್ಟೆಯನ್ನು ತೆಗೆದರೆ ತಟ್ಟೆ ಮಾತ್ರ ಇತ್ತು, ಮೀನು ಇರಲಿಲ್ಲ. ಅರ್ರ್ರೆ, ಇದೇನು ಈಗತಾನೇ ಇತ್ತ ಮೀನು ಎಲ್ಲಿ ಹೋಯಿತು ಎಂದು Stealing_Fish_by_LoneDollಹುಡ್ಕಿದರೆ ಸಿಗುವುದಾದರೂ ಎಲ್ಲಿ. ಬೆಕ್ಕಿನ ಉದರ ಸೇರಿತ್ತು ಮೀನು. ಕಳ್ಳ ಬೆಕ್ಕು ಅಮ್ಮ ಸೀರಿಯಲ್ಲಿನಲ್ಲಿ ಮಗ್ನರಾಗಿದ್ದನ್ನು ನೋಡಿ ಸದ್ದಿಲ್ಲದೆ ಅಷ್ಟೆತ್ತರದ ಫ್ರಿಜ್ಜಿನ ಮೇಲೆ ನೆಗೆದು ತನ್ನ ಮಿಕವನ್ನು ಎಗರಿಸಿ ಓಟ ಕಿತ್ತಿತ್ತು. ಮತ್ಸ್ಯಾ ಅಪಹರಣದ ಸುದ್ದಿಯನ್ನು ಅಮ್ಮ ಅಪ್ಪನಿಗೆ ಮುಟ್ಟಿಸಿದಾಗ ತಂದೆಗೆ ಎಲ್ಲಿಲ್ಲದ ಕೋಪ. ಬೆಳಿಗ್ಗೆ ಹನ್ನೊಂದಕ್ಕೆ ಮೀನನ್ನು ಎಗರಿಸಿಕೊಂಡು  ಹೋದ ಬೆಕ್ಕು ಚೆನ್ನಾಗಿ ತಿಂದು ಒಂದು ಗಡದ್ದಾಗಿ ನಿದ್ದೆ ಹೊಡೆದು ಬಂತು ಸುಮಾರು ನಾಲ್ಕರ ಸಮಯಕ್ಕೆ ಕಳ್ಳ ನಗೆ  ಬೀರುತ್ತಾ.

Advertisements

ಪ್ರಜಾ ಪ್ರಭುತ್ವದ ಯುದ್ಧ

ಮಹಾ ಸಮರ ಸೆಣಸಿ ಆಯಿತು. ಭಾಜಪ ಮುಕ್ಕಿತು ಮಣ್ಣು, ಕಾಂಗ್ರೆಸ್ ಗೆ ದಕ್ಕಿತು ಹಣ್ಣು. ಮಾಯೆಯ ಆಸೆ ದಿಲ್ಲಿ ಸೇರಲಿಲ್ಲ, ಮಮತೆಗೆ ಒಲಿಯಿತು ಅದೃಷ್ಟ. ಎಡಿಯೂರಪ್ಪನವರ ವೈಯಕ್ತಿಕ ಆಸೆ ( ಮಗ ಗೆಲ್ಲುವ ) ಈಡೇರಿದರೂ ತನ್ನ ಪಕ್ಷಕ್ಕೆ ಅಧಿಕ ಸೀಟ್ಗಳನ್ನು ಕೊಡಿಸದಾದರು. ಪಕ್ಕದ ರಾಜಶೇಖರ ರೆಡ್ಡಿಗೆ ಖುಲಾಯಿಸಿತು ಲಾಟರಿ. ಕೇರಳ, ಬಂಗಾಳದಲ್ಲಿ ಕುಡುಗೋಲಿಗೆ  ಹಿಡಿಯಿತು ತುಕ್ಕು. ಯುವರಾಜ ರಾಹುಲನ ಪಟ್ಟಾಭಿಷೇಕಕ್ಕೆ ಅನುವು ಮಾಡಿ ಕೊಟ್ಟಿತು ಈ ಚುನಾವಣೆ. ಮನಮೋಹನ ಸಿಂಗಾರ ಮೋಹಕ ನಗೆಗೆ, ಸೋನಿಯಾರ ಮಾಂತ್ರಿಕ ಕೈಗೆ ಒಲಿಯಿತು ದೇಸ.  

ಯಾರೇ ಕೂಗಾಡಲಿ, ಯಾರೇ ಹೋರಾಡಲಿ, ನನ್ನ ನೆಮ್ಮದಿಗೆ ಭಂಗವಿಲ್ಲ, ಎಮ್ಮೇ ನಿನಗೆ ಸಾಟಿಯಿಲ್ಲ, ಬಿಸಿಲು ಮಳೆಗೆ ಬಿರುಗಾಳಿ ಚಳಿಗೆ ನೀ ಅಳುಕದೆ ಮುಂದೇ ಸಾಗುವೆ.. ಅರೆ ವೈ.. ಅರೆ ವೈ.. ಅರೆ ವೈ..ಅರೆ ವೈ.. ಡುರ್ರ್ ಬಿಯಾ, ಅಂತ ನಮ್ಮ ಮತ್ತು ಎಮ್ಮೆಯ ಬದುಕು ನೆಮ್ಮದಿಯಾಗಿ ಸಾಗಿದರೆ ಸಾಕು.

ರೆಡ್ ಲೈಟ್ ಏರಿಯಾದಿಂದ

ಮನೆಯಿಂದ ಆಫೀಸಿಗೆ ಕೇವಲ ೧೦ ನಿಮಿಷಗಳ drive ಮತ್ತು ಒಂದೇ ಒಂದು ಸಿಗ್ನಲ್ ನ ಭೆಟ್ಟಿ. ಆದರೆ ಕೆಲಸ ನಿಮಿತ್ತ ಪ್ರತಿದಿನ ಕನಿಷ್ಠ ೧೦೦ ಕಿಲೋಮೀಟರು ಓಡಾಟ ನಗರದ ಪರಿಮಿತಿಯೊಳಗೆ. ಜನನಿಬಿಡವಲ್ಲದಿದ್ದರೂ “ಜೆಡ್ಡಾ” ನಗರದಲ್ಲಿ ವಾಹನಗಳ ಸಂಖ್ಯೆ ಅತ್ಯಧಿಕ. ಸಿಗ್ನಲ್ನ ಸಮೀಪ ಬಂದರೂ ವಾಹನಗಳು ಮುಂದಕ್ಕೆ ಹರಿಯುವುದಿಲ್ಲ. ಕೆಲವೊಮ್ಮೆ ೩-೪ ಸಿಗ್ನಲ್ ಕಾಯಬೇಕು. ಹೀಗೆ ಸಿಗ್ನಲ್ಲುಗಳು ಗೋಸುಂಬೆಯ ಹಾಗೆ ಬಣ್ಣ ಬದಲಿಸುವುದನ್ನು ನೋಡುತ್ತಾ ಕೂತಾಗ ಹಲವು ಚಟುವಟಿಕೆಗಳು ಸಿಗ್ನಲ್ ಕಂಬದ ಸುತ್ತ ನಡೆಯುತ್ತಿರುತ್ತದೆ. ಕೆಂಪು ಬಣಕ್ಕೆ ತಲೆಬಾಗಿ ವಾಹನಗಳು ನಿಲ್ಲುತ್ತಿದ್ದಂತೆಯೇ ಒಂದು ಚಿಕ್ಕ shopping arena ತೆರೆದು ಕೊಳ್ಳುತ್ತದೆ, a floating shopping arena. ಸುಮಾರು ೬೫ ರ ವೃದ್ಧ ( ಯೆಮನ್ ದೇಶದವನ ಥರ ಕಾಣುತ್ತಾನೆ) ಮೋಯಾ, ಮೋಯಾ(ನೀರು, ಅರಬ್ಬೀ ಭಾಷೆಯಲ್ಲಿ) ಎಂದು ಕೂಗುತ್ತಾ ವಾಹನಗಳ ಸುತ್ತಾ ಸುತ್ತುತ್ತಿರುತ್ತಾನೆ.  ಮತ್ತೊಂದೆಡೆ ಒಬ್ಬ ಯುವಕ ಮಲ್ಲಿಗೆ ಹೂವನ್ನು ಮಾರುವ ಆತುರದಲ್ಲಿರುತ್ತಾನೆ. ಪ್ರಖರ ಬಿಸಿಲಿಗೆ, ವಾಹನಗಳ ಹೊಗೆಗೆ ಸಿಕ್ಕ ಹೂವುಗಳನ್ನು ಯಾವ ರೋಮಿಯೋ ತನ್ನ ಪ್ರೇಯಸಿಗೆ ಕೊಡುತ್ತಾನೋ?

ನನ್ನ ಈ “short errands” ನ ಸಂಗಾತಿ ಅಮೆರಿಕೆಯ NPR (national public radio). washington D.C. ಇಂದ ಬಿತ್ತರವಾಗುವ ಸುದ್ದಿ ಮತ್ತು ಚರ್ಚೆಗಳನ್ನು ಕೇಳುತ್ತಾ ಹೋದರೆ ಸಮಯ ಹೋಗುವುದು ತಿಳಿಯುವುದಿಲ್ಲ. ಅಮೆರಿಕೆಯ ಪ್ರಸಿದ್ಧ ವಾಹನ ತಯಾರಕರಾದ ford, GM ಗಳ ಅಧಿಕಾರಿಗಳು ತಮ್ಮ ಕಂಪೆನಿಗಳನ್ನು ಉಳಿಸಲು ಸರಕಾರ ನೀಡಿದ ಹಣ ಪಡೆಯಲು ಕೈ ಚಾಚಿ ಬಂದಿದ್ದಾರೆ ಎನ್ನುವ ಸುದ್ದಿ ಕೇಳುತ್ತಲೇ ಪಕ್ಕದಲ್ಲಿ ಸುಡಾನ್ ದೇಶದ ಒಬ್ಬ ಬಡ ಮಹಿಳೆ ಭಿಕ್ಷೆ ಬೇಡುತ್ತಾ ಉರಿಬಿಸಿಲಿನಲ್ಲಿ ನಡೆಯುತ್ತಿರುತ್ತಾಳೆ. ಕಡು ಕಪ್ಪು ವರ್ಣದ ಈ ಅಸಹಾಯಕ ಸ್ತ್ರೀಗೂ, ಸೂಟು ಬೂಟಿನಲ್ಲಿ ಭಿಕ್ಷೆ ಬೇಡಲು ಬಂದ ಲಕ್ಷಾಂತರ ಡಾಲರ್ ಸಂಬಳ ಪಡೆಯುವ ಅಧಿಕಾರಿಗಳಿಗೂ ಇರುವ ವ್ಯತ್ಯಾಸ ಏನು ಯೋಚಿಸುತ್ತಾ ಇದ್ದಾಗ ಪ್ರತ್ಯಕ್ಷವಾಯಿತು ಒಂದು ಸುಂದರ ಮೊಗ. ಸೂರ್ಯನ ಬಂಗಾರದ ರಶ್ಮಿಗಳನ್ನು ನಾಚಿಸುವ ಮೈಬಣ್ಣದ ಪೋರಿ ” batook ” chewing gum ಬೇಕಾ ಎಂದು ಮುಗುಳ್ನಗುತ್ತಾ ಕಣ್ಣಿನಿಂದಲೇ ಕೇಳುತ್ತಾಳೆ. ೮ ಅಥವಾ ೯ ವಯಸ್ಸಿನ ಆಫ್ಘಾನಿಸ್ತಾನದ ಹುಡುಗಿ. ಈ ಎಳೆ ಪ್ರಾಯದಲ್ಲಿ ಶಾಲೆಯಲ್ಲೋ ಮನೆಯಲ್ಲೋ ಬೆಚ್ಚಗಿರುವುದು ಬಿಟ್ಟು ಹೊಟ್ಟೆ ಪಾಡಿಗಾಗಿ ಉರಿ ಬಿಸಿಲಿನಲ್ಲಿ ದುಡಿಯುವ ಸ್ಥಿತಿ ನೋಡಿ ಮರುಕ ತೋರುತ್ತದೆ. (shopping ಮತ್ತು gaming ಗಳೇ ತಮ್ಮ ಬದುಕು ಎಂದು ಮಜಾ ಉಡಾಯಿಸುವ ನನ್ನ ಸೋದರಿಯ ಮಕ್ಕಳು ಈ ಹುಡುಗಿಯ ಮುಂದೆ ಸೋತು ನಿಲ್ಲುತ್ತಾರೆ ನನ್ನ ಕಣ್ಣಿನಲ್ಲಿ).

ಆಫ್ಘನ್ನರು ಸ್ವಾಭಿಮಾನಿಗಳು. ಕಷ್ಟ ಸಹಿಷ್ಣುಗಳು. ಬಿಸಿಲಿನ ಬೇಗೆಯ, ಕಣಿವೆ ಕಂದಕ ತುಂಬಿದ ನಿಸರ್ಗದ ನಿಷ್ಠುರ ವಾತಾವರಣದಲ್ಲಿ ಬೆಳೆದ ಇವರಿಗೆ ದಣಿವು ಇಲ್ಲ ಎನ್ನುವಷ್ಟು ಲವಲವಿಕೆ. ಯುದ್ದ ಕಾರಣ ಆಫ್ಘಾನಿಸ್ತಾನ ತೊರೆದು ಬಂದ ಇವರಿಗೆ ಸೌದಿ ಆಶ್ರಯ ನೀಡಿತು. ಕಾದಾಡುವುದೇ ಕಾಯಕ ಎಂದುಕೊಂಡಿರುವ ಇವರಿಗೆ ಯುದ್ಧಗಳಿಂದ ಮೋಕ್ಷ ಯಾವಾಗ ಸಿಗುತ್ತದೋ ಎಂದು ಯೋಚಿಸುತ್ತಾ ಕೂತಾಗ ಹಳದಿ ಬಣ್ಣ ಹಸಿರು ಬಣ್ಣಕ್ಕೆ ದಾರಿ ಮಾಡಿಕೊಟ್ಟಿತು. ಕೂಡಲೇ ಮತ್ತೊಂದು ಕೆಂಬಣ್ಣ ಕಾಣುವ ಮೊದಲು ಕಾಲು ಕಿತ್ತೋಣ ಎಂದು accelerator ಅನ್ನು  ಜೋರಾಗಿ ಒತ್ತಿ ಹಿಡಿದು high way ಸೇರಿಕೊಂಡೆ.

Mother’s day

busy_momಅಮೆರಿಕೆಯ NPR ರೇಡಿಯೋ ಬಾತ್ಮೀದಾರ ಸ್ಕಾಟ್ ಸಿಮೋನ್ ಮಾತೆಯರ ದಿನದಂದು ಬರೆದ ಪ್ರಬಂಧದ ಅನುವಾದ.

 ನಾನಿರುವಲ್ಲಿ ದಿನವೂ ಮಾತೆಯರ ದಿನ.

ನನ್ನ ಪತ್ನಿ ಕೆಲಸಕ್ಕೆ ಹೋಗುವುದಿಲ್ಲ. ಆಕೆ ಪೂರ್ಣ ಸಮಯ ತಾಯಿ. ಬೆಳಗ್ಗಾದ ಕೂಡಲೇ ಮಮ್ಮ ಮಮ್ಮ ಎಂದು ಚೀರುವ ೨ ವರ್ಷದ ಮಗಳನ್ನು ಒಂದು ಕೈಯಲ್ಲಿ ಎತ್ತಿಕೊಂಡು ಮತ್ತೊಂದು ಕಾಯ್ಯಿಂದ ಹಾಲು ಕಾಯಿಸಲು ಅಡುಗೆ ಮನೆಗೆ ಹೋಗುತ್ತಾಳೆ.

ನಾನಾದರೋ ನನ್ನ ಕಛೇರಿಯಲ್ಲಿ ಕುಳಿತು, ಮಾಡಬೇಕಾದ ಕೆಲಸವನ್ನು ಮುಂದಕ್ಕೆ ಹಾಕುವ ಬಗ್ಗೆ ಯೋಚಿಸುತ್ತಾ, ಬೇಸ್ ಬಾಲ್ ಸ್ಕೋರ್ ನೋಡುತ್ತಾ ನನ್ನ ಕಾಫಿಯ ನಿರೀಕ್ಷೆಯಲ್ಲಿ ಸಮಯ ಕಳೆಯುತ್ತೇನೆ. 

ಪತ್ನಿ ಸ್ನಾನ ಗೃಹಕ್ಕೆ ತೆರಳಲು ಮಗಳು ಬಿಡದಾಗ ಆಕೆಯನ್ನೂ ಎತ್ತಿ ಕೊಂಡು ಒಳ ಹೋಗುತ್ತಾಳೆ. ೨ ವರ್ಷದ ಮಗುವನ್ನು ಸ್ನಾನ ಗೃಹದಲ್ಲಿ ಸಂಭಾಳಿಸುವುದು ಸರ್ಕ್ಸಸ್ಸೇ ಸರಿ. ಈಗ ನಮ್ಮ ೬ ವರ್ಷದ ಮಗಳು ಮಮ್ಮ ಮಮ್ಮ ಎನ್ನುತ್ತಾ ಎದ್ದು  ಬಂದಾಗ ಆಕೆಯನ್ನೂ ಚಿಕ್ಕ ಮಗುವನ್ನೂ ಎರಡೂ ಕೈಗಳಲ್ಲಿ ಎತ್ತಿ ಹಿಡಿದು ತನ್ನ ಮೂರನೇ (?) ಕೈಯಿಂದ ಮತ್ತಷ್ಟು ಹಾಲನ್ನು ಬಿಸಿ ಮಾಡಲು ತೊಡಗುತ್ತಾಳೆ.

ಈಗ ಮತ್ತೊಂದು ಕಾಫಿಗಾಗಿ ನಾನು ಅಡುಗೆ ಕೊನೆಗೆ ಬರುತ್ತೇನೆ.

ಆಕೆ ಮಕ್ಕಳನ್ನು ಶಾಲೆಗೆ ತಯಾರಿ ಮಾಡಲು ಬಟ್ಟೆ ತೊಡಿಸುತ್ತಾಳೆ. ಮೊಲಗಳ ಥರ ಜಿಗಿದಾಡುವ ಅವರಿಗೆ ಬಟ್ಟೆ ತೊಡಿಸುವುದು ಮತ್ತೊಂದು ಸಾಹಸ. ಅವರನ್ನು ಪಕ್ಕದಲ್ಲೇ ಇರುವ ಶಿಶುವಿಹಾರಕ್ಕೆ ಬಿಟ್ಟು ಬರಲು ಅರ್ದ ಘಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಪ್ರತಿ ಅಂಗಡಿಯ ಮುಂದೆ ಮತ್ತು ಪ್ರತಿ ಕಿಟಕಿಗಳನ್ನು ಇಣಕಿ ನೋಡುತ್ತಾ ಸಾಗುತ್ತವೆ ನಮ್ಮ ಪುಟಾಣಿಗಳು.

 

ಮನೆಗೆ ಮರಳಿದ ಆಕೆಗೆ ಸ್ವಲ್ಪ ವಿರಾಮ. ಬಟ್ಟೆ ಒಗೆಯಲು ಹಾಕಿ,ಬಿಲ್ಲುಗಳನ್ನು, ಕ್ರೆಡಿಟ್ ಕಾರ್ಡ್ ಪಾವತಿ ಮಾಡಿ, ತಪ್ಪಾಗಿ ತನಗೆ ಬಂದ ಫೋನ್ ಬಿಲ್ಲುಗಳನ್ನು ಕಂಪನಿ ಯವರೊಂದಿಗೆ ರಗಳೆ ಮಾಡಿ ಬಗೆಹರಿಸುತ್ತಾಳೆ. ಇದನ್ನೆಲ್ಲಾ ಮಾಡುತ್ತಿದ್ದಾಗ ನಮ್ಮ ಚಿಕ್ಕ ಮಗಳು ಚಿಂಪಾನ್ಜೀ ಥರ ಅವಳ ತಾಯಿಯ ಕೊರಳ ಮೇಲೆ ತೂಗುತ್ತಿರುತ್ತಾಳೆ. ಚೆಲ್ಲಾಡಿದ ಆಟಿಕೆಗಳನ್ನು ಹೆಕ್ಕಿ, ಸ್ವಲ್ಪ ಶಾಪಿಂಗ್ ಮಾಡಿ, ಬೀರುವನ್ನು ಒಪ್ಪವಾಗಿಡುತ್ತಾಳೆ. fish tank ಕ್ಲೀನ್ ಮಾಡಿ ಬೆಕ್ಕಿನ ಗಲೀಜನ್ನು ಶುಚಿಕರಿಸುತ್ತಾಳೆ. ಚಿಕ್ಕ ಮಗಳ ಕಳೆದು ಹೋದ ಆಟಿಕೆ ಹುಡುಕಿ ಕೊಟ್ಟ ಮೇಲೆ ಸ್ನಾನಕ್ಕೆ ಹೋಗಲು ಸಮಯವಿರುವುದಿಲ್ಲ ಆಕೆಗೆ. ಇಷ್ಟಾದ ನಂತರ ಮಗಳನ್ನು ಶಾಲೆಯಿಂದ ಕರೆತಂದು ballet ಕ್ಲಾಸಿಗೆ ಕರೆದೊಯ್ಯುತ್ತಾಳೆ. ಮೂರು ಹೊತ್ತಿನ ಅಡುಗೆ ಮತ್ತು ತರಾವರಿ ತಿಂಡಿ ತಯಾರಿ ಮಾಡಿ, ಮಕ್ಕಳ ಅಜ್ಜಿಯಂದಿರಿಗೆ ಫೋನಾಯಿಸಿ, ಅವರಿಗೆ ಮೊಮಕ್ಕಳ ಫೋಟೋ ಕಳಿಸಿ ಕೊಡುತ್ತಾಳೆ. ನಾನು ಒಂದೆರೆಡು ಬಾರಿ ಆಕೆಗೆ ಫೋನ್ ಮಾಡಿ ನಾನು ಬಹಳ ಬ್ಯುಸಿ ಇದ್ದೇನೆ ‘ ಸ್ವಲ್ಪ ನನ್ನ ಕೆಂಬಣ್ಣದ ಕಾಲ್ಚೀಲ ಹುಡುಕಿ ಇಡ್ತೀಯ ಅಂತ ಕೇಳುತ್ತೇನೆ. 

 

ಆಕೆಗೆಂದು ಲಭ್ಯವಿರುವುದು ಕೇವಲ ೪ ನಿಮಿಷಗಳು ಮಾತ್ರ. ನೆಲದ ಮೇಲೆ ಬಿದ್ದ ತಿನಿಸೇ ಆಕೆಯ ಊಟ. ದಿನಕ್ಕೆ ೧೫ ಘಂಟೆಗಳ ಬಿಡುವಿಲ್ಲದ ದುಡಿತ ಆಕೆಯದು.  ೩೬೫ ದಿನ ಪೂರ್ತಿ, ರಜೆಯಿಲ್ಲ. ಇಷ್ಟೆಲ್ಲಾ ಕಷ್ಟ ಬಿದ್ದರೂ ಆಕೆಯ ಪ್ರಕಾರ ಪೂರ್ತಿ ಸಮಯ ತಾಯಿಯಾಗಿರುವುದೇ ಒಂದು ವರದಾನ,  ಮಕ್ಕಳೊಂದಿಗೆ ಮನೆಯಲ್ಲಿರುವ ಭಾಗ್ಯ.

 

ಈ ಪ್ರಬಂಧ ಓದಿ ನನ್ನ ಬದುಕು ನನ್ನ ಕಣ್ಣ ಮುಂದೆ ಬಂದು ಬಿಟ್ಟಿತು. ಇದೇ juggling ನನ್ನ ಮಡದಿಯದೂ. ಆರು ವರ್ಷದ ಪೋರ, ೧೫ ತಿಂಗಳ ಪೋರಿ ಸರ್ಕಸ್ಸಿನ ರಿಂಗ್ ಮಾಸ್ಟರ್ ಪ್ರಾಣಿಗಳನ್ನು ಮಣಿಸಿ, ಕುಣಿಸುವಂತೆ ತಮ್ಮ ತಾಯಿಯನ್ನು ಕುಣಿಸುತ್ತಾರೆ. ನಾನಾದರೋ ನನ್ನ ಲ್ಯಾಪ್ಟಾಪ್ ಆಯಿತು ಇಲ್ಲಾ ಪುಸ್ತಕ ಆಯಿತು. ಮನೆಯಲ್ಲಿ ಭೂಕಂಪವಾದರೂ ತಿರುಗಿ ನೋಡುವುದಿಲ್ಲ. ನನ್ನ ಈ ಸ್ವಭಾವ ನೋಡಿಯೋ ಅಥವಾ ಗಂಡು ಜಾತಿಯೇ ಹೀಗೆ ಎಂದೋ ಆಕೆಯೂ ನನಗೆ ಯಾವ ಕೆಲಸವೂ ಹೇಳುವುದಿಲ್ಲ. ಹೆಚ್ಚು ಎಂದರೆ garbage ಹೊರಕ್ಕೆ ಎಸೆಯಲು ಮಾತ್ರ ನನ್ನ ಸಹಾಯ ಸೀಮಿತ. ಸಿಮೊನ್ ರ ಈ ಪ್ರಬಂಧ ಓದಿ ಸ್ವಲ್ಪ guilty ಫೀಲ್ ಆಗ್ತಿದೆ. ನೀವು ಇದನ್ನು ಓದುತ್ತಿರುವಂತೆಯೇ ನನ್ನ ಮಗಳು, ಹೂದಾನಿ ತುಂಬಾ ಸೌಟು, ಬೂಟು, ಚಮಚ, ಆಟಿಕೆಗಳನ್ನು ತುಂಬಿಸಿ  ಇಟ್ಟಿದ್ದಾಳೆ, ಅದನ್ನು  ಬರಿದು ಮಾಡಿ ಬರುತ್ತೇನೆ.

ಅಡ್ಡ ಹೆಸರು, ದಿಡ್ದ ಹೆಸರು

ಸಾಬು ಅಂತ ಕರೆಯುತ್ತಿದ್ದರು ನನ್ನನ್ನು. ಪ್ರೀತಿಯಿಂದ ಕರೆಯುತ್ತಿದ್ದರಿಂದ ಸಹಿಸಿಕೊಳ್ಳುತ್ತಿದ್ದೆ. ಅದರಲ್ಲೂ ಶಿಕ್ಷಕರು ಕರೆದರೆ protest ಮಾಡಲು ಸಾಧ್ಯವೇ? ನಾನಂತೂ ಆ ಪದವನ್ನು ಅತ್ಯಂತ ಲಘುವಾಗಿ ತೆಗೆದುಕೊಳ್ಳುತ್ತಿದ್ದೆ. ಒಮ್ಮೆ, ನಾನು ಚಿಕ್ಕವನಿದ್ದಾಗ ನನ್ನ ಮಿತ್ರ ಬಸರಾಜ ಕೇಳಿದ ಏನೋ ಬೆಳಿಗ್ಗೆ ಮನೆಯಲ್ಲಿ ತಿಂಡಿ ಎಂದು. ನಾನು ಇಡ್ಲಿ ಎಂದೆ. ಮಾರನೆ ದಿನವೂ ಕೇಳಿದ, ಮತ್ತೆ ಇಡ್ಲಿ ಅಂದೆ. ಇಡ್ಲಿಯಷ್ಟು prolific breakfast ಬೇರೆ ಇಲ್ಲ ಅಂತ ಅನ್ನಿಸುತ್ತೆ. ಒಂದೇ ಏಟಿಗೆ ೫೦ ಇಡ್ಲಿ ಹಿಟ್ಟನ್ನು ಪಾತ್ರೆಗೆ ಏರಿಸಿಬಿಟ್ಟರೆ ಸ್ವಲ್ಪ ಹೊತ್ತಿನಲ್ಲೇ ಬೇಕಷ್ಟು ಜನರಿಗೆ ಇಡ್ಲಿ ಸರಬರಾಜು ಮಾಡಬಹುದು. ಮೂರನೇ ದಿನವೂ ನನ್ನ ಉತ್ತರ ಇಡ್ಲಿ. ಇದನ್ನು ಕೇಳಿದ ಅವನು ” ಏನೋ ನಿನಗೆ ಇಡ್ಲಿ ಅಂದ್ರೆ ಅಷ್ಟೊಂದು ಇಷ್ಟಾನ? ಅಂದ್ರೆ ನಿನ್ ಹೆಸರು ಈಗ ” ಇಡ್ಲಿ ಬೂಸಾ” ಎಂದು ಬೀದಿಯಲ್ಲೆಲ್ಲಾ ಟಾಮ್ ಟಾಮ್ ಮಾಡಿದ. ಕೆಲವೊಮ್ಮೆ tuition ಗೆ ತಡವಾಗಿ ಬರುತ್ತಿದ್ದ ನನ್ನನ್ನು ಮೇಡಂ ಒಬ್ಬರು late latif ಎಂದು ಕರೆಯುತ್ತಿದ್ದರು. ನನ್ನ ಮಿತ್ರ ಗುರುವಿನ ಅಡ್ಡ ಹೆಸರು “ಮುಳಗಾಯಿ”. ಅವನ ಅಕ್ಕಂದಿರು ಇಟ್ಟ ಹೆಸರು. ಎಲ್ಲವನ್ನು ಬಲ್ಲ ನನ್ನ ಮಿತ್ರನೊಬ್ಬನ ಹೆಸರು ” ದುನಿಯಾ ಕಿ ಚಾವಿ ” ಎಂದು. ಅಂದ್ರೆ ಅವನಿಗೆ ಗೊತ್ತಿಲ್ಲದ ವಿಷಯ ಯಾವುದೂ ಇಲ್ಲ ಅಂತ. ಇನ್ನೊಬ್ಬ ಹೊಸ ಹೊಸ ಕತೆಗಳನ್ನು, ಸುದ್ದಿಗಳನ್ನು ಹುಟ್ಟು ಹಾಕುತ್ತಿದ್ದ. ಬಹುತೇಕ ಅವು ಸುಳ್ಳಾಗಿರುತ್ತಿದ್ದವು. ಕೊನೆಗೆ ಅವನಿಗೆ ಆಯಿತು ನಾಮಕರಣ, ” ಲುಂಗಿ ನ್ಯೂಸ್ ” ಅಂತ.