‘intended purpose’ ನ ಪರಿಧಿಯ ಆಚೆ

 

Image

ಪ್ರತಿಯೊಂದು ವಸ್ತುವೂ ‘intended purpose’ ನ ಪರಿಧಿಯ ಆಚೆ ಉಪಯೋಗಕ್ಕೆ ಬರುತ್ತದೆ. ಉದಾಹರಣೆಗಳು ಹೇರಳ, ಆದರೆ ನಾನಿಲ್ಲಿ ತೋರಿಸ ಹೊರಟಿರುವುದು ಚಾಪೆಯ ಮತ್ತೊಂದು ಉಪಯೋಗದ ಬಗ್ಗೆ.

ಪವಿತ್ರ ಹಜ್ ಯಾತ್ರೆಗೆ ಹೊರಟ ಸಂಬಂಧಿಗಳನ್ನು ಬೀಳ್ಕೊಡಲು ರೈಲು ನಿಲ್ದಾಣಕ್ಕೋ, ಬಸ್ ನಿಲ್ದಾಣಕ್ಕೋ ಬಂದ ಜನರಿಗೆ ಮಳೆಯ ಸ್ವಾಗತ ಸಿಕ್ಕಿದಾಗ ಕೊಡೆಯ ಬದಲಿಗೆ ಸಿಕ್ಕಿದ್ದು ನಮ್ಮ ಅದೇ age old ಚಾಪೆ. ಈ ಚಿತ್ರ ಅರಬ್ ನ್ಯೂಸ್ ಪತ್ರಿಕೆಯಲ್ಲಿ ಸಿಕ್ಕಿತು, ಅದರ ಜಾಡನ್ನು ಹಿಡಿದಾಗ ‘ರೈಟರ್ಸ್’ ಸುದ್ದಿ ಸಂಸ್ಥೆಯ ಛಾಯಾ ಗ್ರಾಹಕ ಕ್ಲಿಕ್ಕಿಸಿದ್ದು ಎಂದು ಅಂತರ್ಜಾಲದಲ್ಲಿ ಕಾಣ ಸಿಕ್ಕಿತು.

ಈ ಸಲ ಭಾರತಕ್ಕೆ ಬಂದಿದ್ದಾಗ ಕಂಡ ದೃಶ್ಯ. ಕಾಸರಗೋಡಿನ ಸಮೀಪದ ಕುಂಬ್ಳೆ ಕಡೆ ಪ್ರಯಾಣ ಹೋದಾಗ ಅಪರಾಹ್ನದ ನಮಾಜ್ ಸಮಯ. ಅಲ್ಲೇ ಇದ್ದ ಮಸ್ಜಿದ್ ನ ಆವರಣ ದೊಳಗೆ ಹೋದಾಗ disabled ವ್ಯಕ್ತಿಯೊಬ್ಬ ಧನ ಸಹಾಯಕ್ಕಾಗಿ ನಿಂತಿದ್ದ. ತನ್ನಲ್ಲಿದ್ದ ಛತ್ರಿ ಯನ್ನು ಬಿಚ್ಚಿ ಉಲ್ಟಾ ಮಾಡಿ ತನಗೆ ಸಿಕ್ಕ ಹಣ ಶೇಖರವಾಗುವಂತೆ ಹಿಡಿದಿದ್ದ. ಮಳೆ ಹನಿಯನ್ನು ತಡೆಯಲು ಉಪಯೋಗಿಸುವ ಕೊಡೆ ಹಣ ಸಂಗ್ರಹಿಸಲು ಉಪಯೋಗಕ್ಕೆ ಬಂತು. ಸ್ವಲ್ಪ ದೂರ ನಿಂತು ಈ ಚಿತ್ರ ತೆಗೆಯೋಣ ಎನ್ನುವಾಗ ದರಿದ್ರದ ನನ್ನ i phone ಚಾರ್ಜ್ ಇಲ್ಲದೆ ಸತ್ತಿತ್ತು.

Advertisements

ಕನ್ನಡೀಕರಣಕ್ಕೆ ಜೈ

ಕಂಪ್ಯೂಟರ್ ಗೆ ‘ಗಣಕ ಯಂತ್ರ’ ಅಂತಾರೆ ಕನ್ನದಲ್ಲಿ, ಆಲ್ವಾ? ಈ ಗಣಕ ಯಂತ್ರ ಅಂದ ಕೂಡಲೇ ಕಂಪ್ಯೂಟರ್ ಕಣ್ಣಿಗೆ ಬರೋ ಬದಲು ಮಂತ್ರವಾದಿಯ ಯಂತ್ರ, ತಂತ್ರದ ದೃಶ್ಯ ಕಣ್ಣಿಗೆ ಬರುತ್ತೆ. ಎಲ್ಲವನ್ನೂ ಕನ್ನಡೀಕರಿಸಲೇಬೇಕೆ? ಇಂಜಿನಿಯರ್ ಅಂದ್ರೆ ಅಭಿಯಂತರ. ಈ ಪದ ಯಾರೂ ಉಪಯೋಗಿಸಿದ್ದು ಕಿವಿಗೆ ಬಿದ್ದಿಲ್ಲ. ಡಾಕ್ಟರ್ ಅಂದ್ರೆ ವೈದ್ಯ ಅಲ್ವಾ? ಆದ್ರೆ ವೈದ್ಯ ಅಂದ್ರೆ ಆಯುರ್ವೇದದ ಡಾಕ್ಟ್ರು. MBBS ಮಾಡಿದವನನ್ನು ವೈದ್ಯ ಅನ್ನೋಲ್ಲ. ಅವನು ಡಾಕ್ಟರ್.

ಕನ್ನಡೀಕರಿಸಿ ಜನರನ್ನು ಪೇಚಿಗೆ, ಕಷ್ಟಕ್ಕೆ ಸಿಕ್ಕಿಸೋಕ್ಕಿಂತ ನಾನು ಕನ್ನಡ ಮಾತನಾಡ ಬಲ್ಲೆ ಎಂದು ಕನ್ನಡವನ್ನು ತಮಿಳೀ ಕರಿಸುವ ಜನರನ್ನು ದಾರಿಗೆ ತರುವುದು ಒಳ್ಳೆಯದು. ಕನ್ನಡ ಟೀವೀ ಚಾನಲ್ ಗಳಲ್ಲಿ ಕೇಳಿ ಬರುವ ಕನ್ನಡ ಯಾವ ಕ್ವಾಲಿಟಿ ದು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ತಾನೇ? ಸುದ್ದಿ ಓದುವವರು, ವರದಿ ಮಾಡುವವರು, ಒಂದೋ ತಮಿಳರು ಅಥವಾ ಬೆಂಗಳೂರಿನಲ್ಲಿ ವ್ಯಾಪಕ ವಾಗಿರುವ ಚೆನ್ನೈ ಪ್ರಭಾವಕ್ಕೆ ಒಳಗಾಗಿ ತಮ್ಮ ಕನ್ನಡವನ್ನು ತಮಿಳಿಗೋ ಅಥವಾ ತಮಿಳನ್ನು ಕನ್ನಡಕ್ಕೋ adapt ಮಾಡಿಕೊಂಡವರು. ಚಾನಲ್ ನವರ ಕನ್ನಡ ಕೇಳಿದಾಗ ವಾಕರಿಕೆ ಅಲ್ಲದೆ ಬೇರೇನೂ ಬರುವುದಿಲ್ಲ. ಬೇರೆ ಭಾಷೆಗಳ ಅವಸ್ಥೆ ನಮ್ಮ ಹಾಗಲ್ಲ. ಸ್ವಚ್ಛವಾಗಿ, ಹೆಮ್ಮೆಯಿಂದ ಬೀಗುತ್ತಾ ಮಾತನ್ನಾಡುತ್ತಾರೆ ತಮ್ಮ ತಮ್ಮ ಭಾಷೆಯಲ್ಲಿ. ನಮಗೋ ಪರ ಭಾಷಾ ವ್ಯಾಮೋಹ. ಈ ತೆರನಾದ ನಡವಳಿಕೆ ಇಟ್ಟುಕೊಂಡು ನಮ್ಮ ಭಾಷೆ ಕಲಿಯಿರಿ, ಗೌರವಿಸಿ ಎಂದು ಹೇಳುವ ಹಮ್ಮು ನಮಗೆ.

ಕಂಪ್ಯೂಟರ್ ನಲ್ಲಿ ಕನ್ನಡೀಕರಣ… cu, asl, gn, gm, gr8, f9 ಇವು ನಮಗೆಲ್ಲಾ ಗೊತ್ತಿರುವ ಗಣಕ ಭಾಷೆ, ಗ್ರಾಮರ್ ಬೇಡ, ಸ್ಪೆಲ್ಲಿಂಗ್ ಬೇಡವೇ ಬೇಡ. ಮತ್ತೊಂದು ಪದ ಇದೆ, lol (laughing out loud ). ಇದನ್ನು ಕನ್ನಡೀಕರಿಸಿದಾಗ ‘ಗಗನ’ ಎನ್ನಬಹುದು. ಅಂದರೆ, ಗ-ಹ ಗ-ಹಿಸಿ ನ-ಗು. ಕನ್ನಡೀಕರಣಕ್ಕೆ ಜೈ.

‘ಟೈಟ್ಲ್’ ಬೇಡ

ಮೂರು ತಿಂಗಳುಗಳ ಮೇಲೆ ಈ ಪೋಸ್ಟು. ಗುಡ್ಡ ಕಡಿಯುವಂಥ ಪೋಸ್ಟ್ ಏನೂ ಅಲ್ಲ, ತುಂಬಾ ದಿನಗಳಾದ್ದರಿಂದ ಮೈ ಮುರಿದು ಏಳುವ ರೀತಿಯ ಒಂದು ಪ್ರಯತ್ನ. ಬರಹವೇ ಆಗಲೇ. ಪಿಯಾನೋ ನುಡಿಸುವುದೇ ಆಗಲೇ, ಪ್ರಾವೀಣ್ಯತೆಗೆ ಬೇಕಿರುವುದು ನಿರಂತರ ಅಭ್ಯಾಸ. ಇಲ್ಲದಿದ್ದರೆ ನಾವು ಅಪ್ಯಾಯಮಾನತೆಯಿಂದ ತೊಡಗಿಸಿ ಕೊಂಡ ಪ್ರತಿಯೊಂದರಲ್ಲೂ ಅಭಾಸ ಗ್ಯಾರಂಟಿ. ಸುಮಾರು ನಾಲ್ಕು ವರ್ಷಗಳಿಂದ ಬರೆಯುತ್ತಿರುವ ನಾನು ಈಗಲೂ ಪದಗಳಿಗಾಗಿ, ವಿಷಯಗಳಿಗಾಗಿ ತಡಕಾಡುತ್ತಿದ್ದರೆ ಅದಕ್ಕೆ ಕಾರಣ ನಿತ್ಯ ಅಭ್ಯಾಸದ ಕೊರತೆ. ಸೋಮಾರಿತನ ಅದಕ್ಕಿಂತ ದೊಡ್ಡ ಶತ್ರು.

ಫೇಸ್ ಬುಕ್ಕಿನಲ್ಲಿ ಭದ್ರಾವತಿಯ ನನ್ನ ಮಿತ್ರರೊಬ್ಬರ ಮಗನೊಂದಿಗೆ ಲಘು ಹರಟೆ. ಧಂಧೆನೇ ಇಲ್ಲ ಅಂಕಲ್, ಉಕ್ಕಿನ ಕಾರ್ಖಾನೆ ಮಗುಚಿಕೊಂಡಿತು, ಕಾಗದ ಕಾರ್ಖಾನೆ ಗತಿಯೂ ಅದೇ ಎಂದು ಅಲವತ್ತುಕೊಂಡ. ಈ ಎರಡೂ ಕಾರ್ಖಾನೆಗಳು ಭದ್ರಾವತಿಯ ಜೀವಾಳ. ಇವು ಮುಚ್ಚಿ ಕೊಂಡರೆ ಭದ್ರಾವತಿಯ ಸೊಗಸು ಸೊರಗಿದಂತೆ. ಭದ್ರವಾತಿಯ ಕಾರ್ಖಾನೆಯ ದುಃಸ್ಥಿತಿ ಬಗ್ಗೆ ಒಮ್ಮೆ ಆಗಿನ ಮುಖ್ಯ ಮಂತ್ರಿ ರಾಮಕೃಷ್ಣ ಹೆಗ್ಡೆ ಚುನಾವಣಾ ಭಾಷಣದಲ್ಲಿ ಪ್ರಸ್ತಾಪಿಸಿ ಈ ಕಾರ್ಖಾನೆಯ ಅವನತಿಗೆ ಕಾರಣರಾದ ತಿಮಿಂಗಿಲಗಳನ್ನ (ಅಧಿಕಾರಿಗಳನ್ನು) ಹಿಡಿದು ಹಾಕುತ್ತೇನೆ ಎಂದು ಅಬ್ಬರಿಸಿ ಅಬ್ಬರದ ಚಪ್ಪಾಳೆ ಜೊತೆಗೆ ವೋಟನ್ನೂ ಗಿಟ್ಟಿಸಿ ಕೊಂಡು ಹೋಗಿದ್ದರು. ರಾಜಕಾರಣಿಯ ಭಾಷಣ, ಅವನ ಅಬ್ಬರ ಎಲ್ಲವೂ ಕೆಲಸಕ್ಕೆ ಬಾರದವು.

ರಾಜಕಾರಣಿ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಂದಿನಿಂದ ಭಾಷಣ ಮಾಡಿ ನಮ್ಮನ್ನು ಮತ್ತೊಂದು ತೆರನಾದ ಗುಲಾಮಗಿರಿಗೆ ತುತ್ತಾಗಿಸಿದನೇ ಹೊರತು ಬೇರೇನನ್ನೂ ಮಾಡಲಿಲ್ಲ. ಹೈ ಸ್ಕೂಲಿನ ಹಿಸ್ಟರಿ ಮೇಡಂ ಹೇಳಿದ ಹಾಗೆ ನಮ್ಮದು ಈಗಲೂ ‘ಬಡಾ’ ಮತ್ತು ಬಡ ಭಾರತವೇ ತಿಮಿಂಗಿಲ – ರಾಜಕಾ ರಣಿ nexus ಕಾರಣ. ಭದ್ರಾವತಿಗೆ ಒಳ್ಳೆಯ ದಿನಗಳು ಬರಬಹುದು ಎನ್ನುವ ಆಶಾಭಾವನೆ ನನ್ನದು.