ಬನ್ನಿ, intercourse ಗೆ…

ಬನ್ನಿ, intercourse ಗೆ… ಹೇಯ್ ಏನಯ್ಯಾ ತಲೆ ಗಿಲೆ ಸರಿ ಇದ್ಯೋ ಇಲ್ವೋ? ಬ್ಲಾ, ಬ್ಲಾ, ಬ್ಲಾ… ತಡಿಯಪ್ಪ, ಹಾಡು ಕೇಳಿಲ್ವಾ, ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು. intercourse1

intercourse  ಅಮೆರಿಕೆಯ ಪೆನ್ಸಿಲ್ವೇನಿಯಾ ರಾಜ್ಯದ ಲಂಕಾಸ್ಟೆರ್ ವ್ಯಾಪ್ತಿಯ ಹಳ್ಳಿಯ ಹೆಸರು. ಅರಚಾಡದೆ, ಕೋಪಗೊಳ್ಳದೆ ಕೇಳೋದಾದರೆ ಇನ್ನಷ್ಟು ಹೆಸರುಗಳಿವೆ ಮಡಿವಂತರನ್ನು ಮೈಲು ದೂರ ಓಡಿಸಲು.

fucking ಅಂತ ಒಂದು ಹಳ್ಳಿ, ಆಸ್ಟ್ರಿಯ ದಲ್ಲಿ. ಈ ಹೆಸರಿನ ನಾಮಫಲಕದ ಮುಂದೆ ಭಾವಚಿತ್ರ ತೆಗೆಸಿಕೊಳ್ಳಲು ಪ್ರವಾಸಿಗಳು ಆಸಕ್ತರು. ನೂರಾರು ವರ್ಷಗಳ ಹಿಂದೆ fockers ಎನ್ನುವ ಕುಟುಂಬಸ್ತರು ಇಲ್ಲಿ ವಾಸವಾಗಿದ್ದರಂತೆ, ಅದಕ್ಕೆ ಹಾಗಂತ ಹೆಸರು.

convict hill, slaughter lane (ಚಾರ್ಲ್ಸ್ ಶೋಭರಾಜ್ ಗೆ ಇಷ್ಟವಾಗಬಹುದು), ಇವು ಟೆಕ್ಸಾಸ್ ನ ಸ್ಥಳಗಳು.

middle fart ಡೆನ್ಮಾರ್ಕ್ ನಲ್ಲಿ.

ಅಣ್ಣೆಪ್ಪ, ನಿಂಗೆ ಒಳ್ಳೆ ಹೆಸರಾವುದೂ ಕಾಣೋಲ್ವೋ ಹೇಗೆ?

ಖಂಡಿತ ಕಾಣುತ್ತೆ. hot coffee, no name ಅಮೆರಿಕೆಯಲ್ಲಿ ಇರುವಂಥವು. normal, OK ಸಹ ಅಮೆರಿಕೆಯವು.

ಇನ್ನು ಸ್ವದೇಶಕ್ಕೆ ವಾಪಸಾಗೋಣ. ಜೋಡಿ ಗುಬ್ಬಿ, ಚಿಕ್ಕಮಗಳೂರು, ಸೋಮವಾರಪೇಟೆ, ಬೆಂದಕಾಳೂರು (ಈಗ ಬೆಂಗ್ಳೂರು). ನನ್ನ ಹುಟ್ಟೂರು ಭದ್ರಾವತಿ ಒಂದೊಮ್ಮೆ ಬೆಂಕಿಪುರ ಆಗಿತ್ತಂತೆ. ನಿಮಗೂ ಸ್ವಾರಸ್ಯಕರವಾದ ಹೆಸರುಗಳು ಗೊತ್ತಿದ್ದರೆ ಬರೆಯಿರಿ.     

ಒಂದು ಎರಡು ಬೇಕು…

family-planningಒಂದು ಎರಡು ಬೇಕು ಮೂರು ಮಕ್ಕಳು ಸಾಕು. ೭೦ ರ ದಶಕದಲ್ಲಿ ನಮ್ಮ ನಿಶಾ ಚಟುವಟಿಕೆ ಜೋರಾದಾಗ ಸರಕಾರ ನಿಷೇಧಾಜ್ಞೆ ಜಾರಿ ಮಾಡಿದ್ದು ಹೀಗೆ. ತದನಂತರ ಇಲಿ ಹೆಗ್ಗಣಗಳು FCI ಗೋಡೌನ್ನಿನ ದವಸ ಧಾನ್ಯಗಳನ್ನು ನುಂಗಿ ಹಾಕಿದಾಗ ಆ ಪ್ರಮಾದವನ್ನು ಮರೆಮಾಚಲು ಮತ್ತೊಂದು ಬಾಣ ಬಿಟ್ಟಿತು ಸರಕಾರ; food grain shortage ಇದೆ, ಮ್ಯಾಟಿನೀ, ಫರ್ಸ್ಟ್ ಶೋ ಎರಡು ದೆಖಾವೆಗಳು ಸಾಕು, ಆರತಿಗೊಬ್ಬ, ಕೀರ್ತಿಗೊಬ್ಬಳು ಅಂತ. ಸ್ವಲ್ಪ ವರ್ಷಗಳ ನಂತರ ರಾಜೀವ್ ಗಾಂಧಿಯ ವಿದೇಶ ಪ್ರವಾಸ ಜಾಸ್ತಿಯಾಗಿ ಮುಂದುವರಿದ ರಾಷ್ಟ್ರಗಳನ್ನು ನೋಡಿ one is fun ಎಂದು ನಮ್ಮ ಚೇಷ್ಟೇಗಳಿಗೆ ಪೂರ್ಣ ವಿರಾಮ ಹಾಕಿತು. ಇದ್ಯಾವುದರ ರಗಳೆಯೂ ಬೇಡ let us find middle course ಎಂದು ೨ ಮಕ್ಕಳಿಗೆ ಇನಿಂಗ್ಸ್ ಡಿಕ್ಲೇರ್ ಮಾಡಿದೆವು ನಾವು.

ಪಾಲಿಗೆ ಬಂದಿದ್ದು…

ಆಫೀಸಿನಿಂದ ಸಂಜೆ ಮನೆಗೆ ಬಂದೆ. ೫ ವರುಷದ ನನ್ನ ಮಗ ಹಿಶಾಮ್ ಮಿತ್ರನ ಪಾರ್ಟಿಗೆ ಮಾಲಿಗ್ ಹೋಗಿದ್ದ. ೧ ವರ್ಷದ hyper active ಪುತ್ರಿ “ಇಸ್ರಾ”  ನಿದ್ದೆ ಹೋಗಿದ್ದಳು. ಲ್ಯಾಪ್ಟಾಪ್ ತೆರೆದು ಇನ್ನೂ ಕೂತಿಲ್ಲ, ಒಳಗೆ ಬಂದ ಕೂಡಲೇ ಶುರುವಾಯಿತಾ ನಿಮ್ಮದು ಎಂದು ಮಡದಿ ದೂರಿದಳು. ಮಕ್ಕಳಿಲ್ವಲ್ಲಾ, ಅದಕ್ಕೇ ಎಂದೆ. ಕೆರಳಿದ ಆಕೆ, ನಾನೇನೂ ಮೂಕಿಯಾ ಮಾತನಾಡದೆ ಇರೋಕೆ ಅಥವಾ ಸತ್ತಿದ್ದೀನ ಎಂದು ಮೇಲೆ ಬಿದ್ದಳು. ಅವಳ ರೂಪ ಕಂಡು ಬೆದರಿದ ನಾನು ನನ್ನ ಲ್ಯಾಪ್ ಟಾಪಿಗೆ ಏನೋ ಬಂದಿದೆ ಗ್ರಹಚಾರ ಎಂದು ಕೂಡಲೇ ಅದನ್ನು ಮಡಚಿ ಅವಳೊಂದಿಗೆ ಮಾತಿಗಿಳಿದೆ.

ಅಲ್ಲಾ, ಎಲ್ರ ಹೆಂಡ್ರೂ ಹೀಗೋ ಅಥವಾ ನನ್ನ ಪಾಲಿಗೆ ಬಂದ ಪ್ರಸಾದ ಮಾತ್ರ ಹೀಗೋ, ಕೊಂಚ ಬಿಡಿಸಿ ಹೇಳಣ್ಣ.           

ಗೋಲ್ಡಿನ ಗೋಳು

Truth is the first casualty in war, ಹಾಗಂತ ಒಂದು ಕಹಾವತ್ ಇದೆ. ಸತ್ಯವೂ ಹೌದು. ಆದರೆ ಈ ಆಧುನಿಕ ಯುಗದಲ್ಲಿ gold is the first casualty, ಏನಂತೀರಾ? ಕೆಲ ವರ್ಷಗಳ ಹಿಂದೆ ನನ್ನ ಸಂಬಂಧಿಯೊಬ್ಬರು ಆತುರದಿಂದ ಎಲ್ಲೋ ಹೊರಟಿದ್ದ ನನ್ನನ್ನು ತಡೆದು  ಕೇಳಿದರು, ಅಲ್ಲಾ, ಅಮೆರಿಕೆಯಲ್ಲಿನ ಕಟ್ಟಡಗಳು ಉರುಳಿದಾಗ (sept 11,2001) ಚಿನ್ನದ ಬೆಲೆ ಏಕೆ ತಾರಕಕ್ಕೇರಿತು ಅಂತ. ನನಗೆ ಒಂದೆಡೆ ನಗು, ಅಲ್ಲಿ ಜನ ಸತ್ತು ಬಿದ್ದಿದ್ದಾರೆ, ಇಲ್ಲಿ ನೋಡಿದರೆ ಈ ಎಪ್ಪನಿಗೆ ಚಿನ್ನದ ಚಿಂತೆ. ಮತ್ತೊಂದೆಡೆ ಅವರ ದುಗುಡವೂ ಅರ್ಥವಾಗುವಂಥದ್ದೇ. ೩ ಹೆಣ್ಣು ಮಕ್ಕಳ ತಂದೆ ಆತ. ಚಿನ್ನದ ಬೆಲೆ ಗಿಲೆ ನೋಡದೆ ನಾಚಿಕೆ ಬಿಟ್ಟು ಅಷ್ಟು ತೊಲ ಕೊಡು, ಇಷ್ಟು ತೊಲ ಕೊಡು ಅಂತ ತೋಳಗಳ ರೀತಿ ಹರಿದು ತಿನ್ನುತ್ವೆ ಮದುವೆ ಆಗುವ ಗಂಡು ಎನ್ನಿಸಿ ಕೊಂಡವನ ಮಾತಾ, ಪಿತರು.

ಈಗ ಗೋಲ್ಡ್ ಏಣಿಯ ಸಹಾಯವೇ ಇಲ್ಲದೆ ಅಟ್ಟ ಹತ್ತಿ ಕೂತಿದೆ. ಕಾರಣ credit crunch, financial turmoil, market woes, ಆಹಾ ಎಂತೆಂಥ ಹೆಸರುಗಳು ನಮ್ಮ ಮೇಲೆ ನಾವೇ ತಂದುಕೊಂಡ ಅನಿಷ್ಟಗಳಿಗೆ. ಅತಿಯಾಸೆ, ಮಿತಿಮೀರಿದ ಖರ್ಚು, ಆದಾಯಕ್ಕಿಂತ ಹೆಚ್ಚಿನ ಶಾಪಿಂಗ್ ಟ್ರಿಪ್ಗಳು, ಬ್ಯಾಂಕುಗಳ, ಕಂಪೆನಿಗಳ ಕಳ್ಳ ವಹಿವಾಟು ಇತ್ಯಾದಿ, ಇತ್ಯಾದಿ.

ಮಾಡಿದ್ದುಣ್ಣೋ ಮಹಾರಾಯ…  

ಬೊಗಳುವ ಏರಿಯ

ಭಾಷೆಗಳ ಅಧ್ಯಯನ ಒಂದು ಸೊಗಸಾದ ಹವ್ಯಾಸ. ತುಂಬಾ ಆಳವಾಗಿ ಹೋಗದೆ ಮೇಲ್ಮೆಯಲ್ಲೇ ಒಂದೊಂದು ಭಾಷೆಗಳ ವೈವಿಧ್ಯತೆ ನೋಡಿದಾಗ ವಿಸ್ಮಯದೊಂದಿಗೆ ಒಂದಿಷ್ಟು ನಗಲು ಮೆಟೀರಿಯಲ್ ಸಹ ಸಿಗುತ್ತದೆ. ಹಾಗೊಂದು ಭಾಷೆಯ ನಂಟು ಬೆಳೆಯಿತು ನನ್ನ ಮರಳುಗಾಡಿನ ಬದುಕಿನಲ್ಲಿ. ಅದೇ ಅರಬ್ಬೀ ಭಾಷೆ. ಶತಮಾನಗಳ ಇತಹಾಸ ಇರುವ, ವಿಶ್ವದ ೨೨ ಕೋಟಿಗೂ ಹೆಚ್ಚು ಜನರು ಮಾತನಾಡುವ ಅರಬ್ಬೀ ಭಾಷೆಯ ಲಿಪಿ “ಬಲದಿಂದ ಎಡಕ್ಕೆ” ಬರೆಯಲ್ಪಡುತ್ತದೆ. ಈ ರೀತಿ ಬರೆಯಲ್ಪಡುವ ಮತ್ತೊಂದು ಭಾಷೆ ಎಂದರೆ ಯಹೂದಿಗಳ “ಹೀಬ್ರೂ”.

ಅರಬ್ಬೀ ಭಾಷೆಯಲ್ಲಿ “ಪ”  ಅಥವಾ “P” ಅಕ್ಷರ ಇಲ್ಲ. ಆಂಗ್ಲ ಭಾಷೆಯಲ್ಲಿ ಒಂದು ಗಾದೆ ಇದೆ. ” mind your p’s and q’s” ಅಂತ. ಹಾಗೆಯೇ ಅರಬ್ಬೀ ಮಾತನಾಡುವಾಗ “mind your p’s and b’s ಎಂದು ಹೇಳಬಹುದು. ಈ “p” ಮತ್ತು “b” conundrum ನ ಸ್ವಾರಸ್ಯ ಕೇಳಿ. p ಬದಲಿಗೆ b ಬಳಸಿದಾಗ ಆಗುವ ಅನಾಹುತ;  “Ahmad put his car in the parking area” will become “ahmad put his car in the “barking area”. ಅಹಮದ್ ತನ್ನ ಕಾರನ್ನು ಬೊಗಳುವ ಸ್ಥಳದಲ್ಲಿ ನಿಲ್ಲಿಸಿದ ಅಂತ.  ಪಾರ್ಕಿಂಗ್ ಏರಿಯ, ಬಾರ್ಕಿಂಗ್ ಏರಿಯ ಆಯಿತು. go and pray ಎಂದು  ಹೇಳುವ ಬದಲು go and “bray” ಎಂದು ಹೇಳಿದಂತೆ. bray ಪದದ ಅರ್ಥ ಗೊತ್ತಲ್ಲ? ಗಾರ್ದಭ ಸ್ವರ, ಮಾರಾಯ್ರೇ.

ಜೈ ಕನ್ನಡ

ಒಂದು ರಾತ್ರಿ ಸದ್ದಾಂ ಹುಸೇನನಿಗೆ ಕನಸು. ಪಕ್ಕದ ಕುವೈತ್ ಎಂಬ ಪುಟ್ಟ ರಾಜ್ಯ ತನ್ನ ೧೯ ನೆ ಪ್ರಾಂತ್ಯ ಅಂತ. ಸರಿ ಬೆಳಿಗ್ಗೆದ್ದು ತನ್ನ ಸೈನಿಕರಿಗೆ ಆಜ್ಞೆ ಕೊಟ್ಟ, ಬುತ್ತಿ ಕಟ್ಟಿಕೊಂಡು ಕುವೈತ್ಗೆ ಹೊರಡಿ, ಒಂದೆರಡು ದಿನಗಳಲ್ಲಿ ಬರುವಿರಂತೆ ಮರಳಿ ಎಂದು.  ಅದು ಆಗಸ್ಟ್ ೨, ೧೯೯೦. ನಾನು ಆಗತಾನೆ ಗ್ರಹಚಾರಕ್ಕೆ ಹೊಸದಾಗಿ ಒಂಟೆ ಮೇಯಿಸಲೆಂದು ಸೌದಿ ಅರೇಬಿಯಕ್ಕೆ ಬಂದಿದ್ದು. ನಂತರದ ಘಟನೆಯೆಲ್ಲ ತಮಗೆ ತಿಳಿದದ್ದೇ. ಹತ್ತಾರು ರಾಷ್ಟ್ರಗಳು ಸೇರಿ ರೌಡಿಯನ್ನು ತದುಕುವಂತೆ ಇರಾಕನ್ನು ತದುಕಿ ಕುವೈತಿನಿಂದ ಹೊರ ಹಾಕಿದ್ದು.

ದಹರಾನ್ ಎನ್ನುವ ಸ್ಥಳದಲ್ಲಿ ನನಗೆ ಕೆಲಸ. ಕುವೈತ್ ಮತ್ತು ಇರಾಕಿಗೆ ಸಮೀಪ. ಮಿಲಿಟರಿ ಆಸ್ಪತ್ರೆಯೊಂದರ cafeteria ದಲ್ಲಿ cashier ಆಗಿದ್ದೆ. ೨೫೦ ಅಮೆರಿಕನ್ ಸೈನಿಕರು ಸೇರಿದಂತೆ ಒಟ್ಟು ೧೦೦೦ ಕ್ಕೂ ಹೆಚ್ಚು ಜನ ಬರುತ್ತಿದ್ದರು. ಕನ್ನಡಿಗರು ಇಲ್ಲ ಅನ್ನುವಷ್ಟು ವಿರಳ. ನನಗೋ ಕನ್ನಡ ಮಾತನಾಡಲು ಜನ ಸಿಗದೇ ತಳಮಳ. ಯಾರೋ ಹೇಳಿದರು ಕರ್ನಾಟಕದ ಒಬ್ಬ ಡಾಕ್ಟರ್ ಇದ್ದಾರೆ, ಬ್ರಿಟಿಷ್ ಪೌರ ಅಂತ. ಆದರೆ ಅವರು ಕನ್ನಡದಲ್ಲಿ ಮಾತನಾಡಲೊಲ್ಲರು. ಅವಮಾನವೋ, ಪ್ರತಿಷ್ಟೆಗೆ ಚ್ಯುತಿ ಬರಬಹುದು ಎಂದೋ ಏನೋ. ಒಂದು ದಿನ ನನ್ನ ಬಳಿ ತಮ್ಮ tray ತೆಗೆದುಕೊಂಡು ಬಂದರು ಚಿಕೆನ್ ಊಟದೊಂದಿಗೆ. ನಾನು cash register ನಲ್ಲಿ ಎಂಟರ್ ಮಾಡುತ್ತಿದ್ದೆ. ಆಗ ಅವರು ಕೇಳಿದರು ಚಿಕನ್ಗೆ ಎಷ್ಟು ಎಂದು ಇಂಗ್ಲೀಷಿನಲ್ಲಿ. ನಾನು 6 riyals ಎಂದೆ. ಕೂಡಲೇ ಆತ “ಆರೆಂಟ್ಲೇ ನಲವತ್ತೆಂಟು” ಎಂದು ( ಒಂದು ರಿಯಾಲಿಗೆ ಆಗ ೮ ರೂಪಾಯಿ) ಕನ್ನಡದಲ್ಲಿ ಗುಣಿಸಿ ಹಣ ಕೊಟ್ಟರು. ನಾನು ಮನಸಿನಲ್ಲೇ ಹಾಗೆ ಬಾರಣ್ಣ ದಾರಿಗೆ ಎಂದು ಹಣ ತೆಗೆದುಕೊಂಡೆ. ಅಂದರೆ ಯಾರು ಎಷ್ಟೇ ಶೋಕಿ ಹೊಡೆದರೂ ಆಂತರ್ಯದ ಭಾಷೆ ಅನ್ನೋದು ತನ್ನ ಬಣ್ಣವನ್ನು ತೋರಿಸದೇ ಬಿಡೋಲ್ಲ. ಅದರಲ್ಲೂ ಮಗ್ಗಿಯಂತೂ ಸ್ವಭಾಷೆಯಲ್ಲಿ ಕಲಿತಿದ್ದರೆ ನೀವು ಸ್ವರ್ಗಲೋಕಕ್ಕೆ ಹೋದರೂ ಬಿಡದು ತನ್ನತನವನ್ನು. ನೀವು ಅಮೆರಿಕನ್ನಾದರೂ ಸರಿ, ಬ್ರಿಟಿಷ್ ಆದರೂ ಸರಿ ಇಲ್ಲಾ, ಮೊಜಾಂಬಿಕ್ನವನಾದರೂ ಸರಿ.

…..ಕನ್ನಡವೆನಲು ಕುಣಿದಾಡುವುದೆನ್ನೆದೆ….

 

ಮರಳು ಗೂಡಿನಿಂದ…

ಮೊನ್ನೆ ಒಂದು ತಮಾಷೆ ಸೌದಿ ಅರೇಬಿಯಾದ ಪಟ್ಟಣವೊಂದರಲ್ಲಿ. ಅದೆಂದರೆ ಬಹಳ ವರ್ಷಗಳಿಂದ ಧೂಮಪಾನಕ್ಕೆ ಗುಲಾಮನಾಗಿದ್ದ ಹುಡುಗ ಚಟ ಬಿಟ್ಟ. ವಾಹ್! ಇದೂ ಒಂದು ಸ್ವಾರಸ್ಯಾನ ಎಂದು ಮೂಗೆಳೆಯಬೇಡಿ. ತಾಳ್ಮೆ ಇರಲಿ, ತಾಳಿದವನು ಬಾಳಿಯಾನು. ಚಟ ಬಿಟ್ಟ ಹುಡುಗನಿಗೆ ೯೦ ವರ್ಷ ವಯಸ್ಸು. ಆಆಅ, ತೊಂಭತ್ತಾ? ಹೌದು ತೊಂಭತ್ತು, ಭರ್ತಿ. ಸ್ವಲ್ಪ ಆಚೇನೂ ಇಲ್ಲ, ಈಚೇನೂ ಇಲ್ಲ. ಚಟ್ಟದ ಸಮೀಪ ಬಂದು ಗೆಳೆತನ ಬಿಡೋದೇ ಸಿಗರೇಟಿನ? ಈಗ ಕುಹಕ ಬಿಟ್ಟು ಇದರಲ್ಲೊಂದು moral ಅನ್ನು ಹುಡುಕೋಣ.

ವಯಸ್ಸು ಒಂದು statistics ಅಷ್ಟೇ. ಏನಾದರೂ ಸಾಧಿಸಬೇಕಿದ್ದರೆ ವಯಸ್ಸಿನ ಮುಲಾಜೋ, ಅನುಮತಿಯೋ ಬೇಕಿಲ್ಲ, ಬೇಕಿರುವುದು ಸಾಧಿಸ ಬೇಕೆಂಬ ಛಲ. “ಮಣಿಸಬಹುದು ಎಪ್ಪತ್ತರಲ್ಲಿ “ಎವರೆಸ್ಟ್” ಅನ್ನೂ, ತೊಂಭತ್ತರಲ್ಲಿ ಧೂಮದ ಚಟವನ್ನೂ”.      

 

ಬಾಲ್ಯದ ಸುತ್ತ…

ಹೈ ಸ್ಕೂಲಿನಲ್ಲಿದ್ದಾಗ ನಡೆದ ಘಟನೆ. JTS ಶಾಲೆ principal ನನ್ನ ತಂದೆಗೆ ಪರಿಚಯವಿದ್ದುದರಿಂದ ನನ್ನನ್ನು ಅಲ್ಲಿಗೆ ಸೇರಿಸಿದ್ದರು. ಬೇರೆ ಪ್ರೌಢ ಶಾಲೆಯ ಹಾಗಲ್ಲ ಈ ಶಾಲೆ. carpentry, fitting, electrical, mechanical ವಿಷಯಗಳನ್ನೂ ಕಲಿಸುತ್ತಾರೆ. ೮ ನೆ ಕ್ಲಾಸಿನವರಿಗೆ ತಿಂಗಳಿಗೆ ೧೦ ರೂಪಾಯಿ ಸ್ಟೈಪೆಂಡ್, ೯ ಮಾತು ೧೦ ತರಗತಿಗಳವರಿಗೆ ೧೫ ರೂಪಾಯಿ. ಆಗ ಈ ಹತ್ತೂ ಮತ್ತು ಹದಿನೈದಕ್ಕೆ ಬಹಳ ಕೀಮತ್ತು. ಈಗಿನ ಮಕ್ಕಳು ೧೦ ರೂಪಾಯನ್ನು ಎಡಗೈಯಿಂದಲೂ ಮುಟ್ಟುವುದಿಲ್ಲ. ಎರಡು ಮೂರು ತಿಂಗಳ ಹಣ ಕೂಡಿಸಿ ನನ್ನಮ್ಮನಿಗೆ ಮನೆಗೆ ಬೇಕಾದ ಏನಾದರೂ ಸಾಮಾನನ್ನು ಕೊಡಿಸುತ್ತಿದ್ದೆ.

ನಮ್ಮ ಶಾಲೆಯ ಕಂಪೌಂಡ್ ಗೋಡೆ ಕೆಲಸದ ಕಾಮಗಾರಿ ನನ್ನ ತಂದೆಯವರಿಗೆ ಸಿಕ್ಕಿ ನನಗೆ ದೊಡ್ಡ ತಾಪತ್ರಯವಾಯಿತು. ಗೋಡೆ ಕೆಲಸ ಮುಗಿದ ಕೂಡಲೇ ದರಿದ್ರದ ೧೧೦ ವರ್ಷಗಳಲ್ಲಿ ಆಗಿರದಂಥ ಮಳೆ ನನ್ನ ತಂದೆ ಕಟ್ಟಿಸಿದ ಗೋಡೆಯನ್ನು ತನಗೆ ಸಲ್ಲಬೇಕಾದ ಶುಲ್ಕ ಎನ್ನುವಂತೆ ತಿಂದು, ನೆಕ್ಕಿ ಹೋಯಿತು. ಮಾರನೆ ದಿನ ಶಾಲೆಗೆ ಬಂದಾಗ ಎಲ್ಲಿದೆ ಗೋಡೆ? ಶುರುವಾಯಿತು ಹಾಸ್ಯದ ಸುರಿಮಳೆ. ತಮಾಷೆ, ಕುಹಕ ಮಾಡುವುದೇ ತನ್ನ ಕಸುಬೆನ್ದುಕೊಂಡ ನಮ್ಮ ಕನ್ನಡ ಮಾಷ್ಟ್ರು ಇಡೀ ದಿನ ನನ್ನ ಮಾನ ತೆಗೆದರು. ಕೋಪದಿಂದ ಮನೆಗೆ ಹೋದ ನಾನು ತಂದೆಯನ್ನು ಎಂಥ ಗೋಡೆ ಕಟ್ಟಿಸಿದಿರಾ ಎಂದು ತರಾಟೆಗೆ ತೆಗೆದುಕೊಂಡೆ. ಆಗ ತಂದೆ ಶಾಂತವಾಗಿ ಹೇಳಿದ್ದು ಇದು; “ಲೇ, ಹೋಗಿ ನಿನ್ನ ಮೇಷ್ಟ್ರಿಗೆ ಹೇಳು ಆ ಗೋಡೆಯೇನಾದರೂ ಬಿದ್ದಿಲ್ಲದೆ ಹೋಗಿದ್ದರೆ ಶಾಲೆಯ ಕಟ್ಟಡವೇ ಬಿದ್ದು ಎಲ್ಲಾದರೂ ಮರದ ಕೆಳಗೆ ಕೂತು ಪಾಠ ಹೇಳಬೇಕಾಗಿತ್ತು ಅಂತ”. ಗೋಡೆಗೆ drain holes ಕೊಟ್ಟಿರಲಿಲ್ಲ. ಅದು ಇಂಜಿನಿಯರ್ನ ತಪ್ಪೋ, ನಮ್ಮಪ್ಪನದೋ ನನಗೆ ಗೊತ್ತಿಲ್ಲ. ಆ ನೀರು ಹೊರಹೋಗದೆ ಅಲ್ಲೇ ನಿಂತಿದ್ದರೆ ಶಾಲೆಯೇ ಬೀಳುತ್ತಿತ್ತಂತೆ. ಈ ಕತೆಯನ್ನು ನಾನೇನೂ ಶಾಲೆಗೆ ಹೋಗಿ ಹೇಳಲಿಲ್ಲ ಅನ್ನಿ. a very embarrassing story.   

 

back to reality…

ಈಸಬೇಕು ಇದ್ದು ಜೈಸಬೇಕು…ಮದುವೆ ಆಗಬೇಕು, ಆಗಿ ಜೈಸಬೇಕು, ಸಾಧ್ಯಾನಾ? ಮದುವೆ ಅನ್ನೋ ವ್ಯವಸ್ಥೆಯಲ್ಲಿ ಹೆಣ್ಣೇ ಅಂತ ಕಾಣುತ್ತೆ major beneficiary. ಗಂಡಿಗೆ ಸಿಗುವುದು ಬ್ಯಾಂಕಿನ ಪಾಸ್ ಬುಕ್ನಲ್ಲಿ ಬಡ್ಡಿಯ ಎಂಟ್ರಿ ಇರುತ್ತಲ್ಲ, ಕೆಲವು ಚಿಲ್ಲರೆಗಳು, ಅಷ್ಟೇ. shhhh, ಕೇಳಿಸಿ ಕೊಂಡಾಳು. ಮದುವೆ ಊಟ ಹೋಗಿ ತಿಥಿಯ ತಿಂಡಿಯ ತಯಾರಿ ಶುರುವಾಗೋದು ಬೇಡ.