ಇಂದೇ ಡ್ರಾ, ಗೆಲ್ಲಿರಿ ೫೦ ಕೋಟಿ

ಅಮೇರಿಕಾ. ಮಾಸ್ಟರ್ ಹಿರಿಯಣ್ಣಯ್ಯ ಡ್ರಾಮಾ ಕಂಪೆನಿ. ಬರೀ ತಂತ್ರಜ್ಞಾದಲ್ಲಿ ಮುಂದಲ್ಲ. ತಂತ್ರಗಾರಿಕೆಯಲ್ಲೂ ಮುಂದು. ಇಲ್ಲದಿದ್ದರೆ ವಿಶ್ವದ ‘ಹಿರಿಯಣ್ಣಯ್ಯ’ ನಾಗಿ ಮೆರೆಯಲು ಸಾಧ್ಯವೇ? ಮೊದಲು ವಿಶ್ವ ‘ಬೈ ಪೋಲಾರ್’ ಆಗಿತ್ತು. ಅಂದರೆ ಎರಡು ದೇಶಗಳ ಪಾರುಪತ್ಯ. ಅಮೇರಿಕಾ, ರಷ್ಯಾ ಒಬ್ಬರನ್ನೊಬ್ಬರು ಸಂಶಯದಿಂದ ನೋಡುತ್ತಾ, ಸಮಯ ಸಿಕ್ಕಾಗಲೆಲ್ಲಾ ಪರಸ್ಪರರಿಗೆ ಮದ್ದನ್ನು ಅರೆಯುತ್ತಾ ವಿಶ್ವದ balance ತಪ್ಪಿ ಹೋಗದಂತೆ ನೋಡಿ ಕೊಂಡಿದ್ದರು. ೮೦ ರ ದಶಕದಲ್ಲಿ ಅಂದಿನ ರಷ್ಯಾದ ಅಧ್ಯಕ್ಷ ಮಿಖಾಯಿಲ್ ಗೋರ್ಬಚೋಫ್ ರವರ perestroika, glasnost ನೀತಿಗಳ ಕಾರಣ ರಷ್ಯಾದ ಕಮ್ಯುನಿಸ್ಟ್ ಸರಕಾರ ಪತನಗೊಂಡು ಪ್ರಜಾಪ್ರಭುತ್ವ ಸ್ಥಾಪನೆಯಾಯಿತು. ಇದರೊಂದಿಗೆ ರಷ್ಯಾದ ಹಿಡಿತ ವಿಶ್ವ ವಿದ್ಯಮಾನಗಳ ಮೇಲೆ ತಪ್ಪಿ ಅಮೇರಿಕಾ ಹಿರಿಯಣ್ಣ ನ ಪಟ್ಟ ಅಲಂಕರಿಸಿಕೊಂಡಿತು. ಅಲ್ಲಿಂದ ಶುರುವಾದ ದರ್ಬಾರು ಇದುವರೆಗೆ ಸಾಂಗವಾಗಿ ನಡೆದು ಬರುತ್ತಿದೆ. ತಂತ್ರ ಗಾರಿಕೆಯೊಂದಿಗೆ ಒಂದಿಷ್ಟು ಡ್ರಾಮಾ ಸಹ ಇದ್ದರೆ ತನ್ನ ಆಟಕ್ಕೆ ಯಾವ ಧಕ್ಕೆಯೂ ಬರದು ಎನ್ನುವ ತಿಳಿವಳಿಕೆಯೂ ಅಮೆರಿಕೆಗಿದೆ. ಅದಕ್ಕೆಂದೇ ಮಾಸ್ಟರ್ ಹಿರಿಯಣ್ಣಯ್ಯ ಡ್ರಾಮಾ ಕಂಪೆನಿ ಎಂದು ಹೇಳಿದ್ದು.   

“ಲಷ್ಕರ್ ಎ ತೈಬಾ” ಸಂಘಟನೆಯ ನಾಯಕ ಹಫೀಜ್ ಮುಹಮ್ಮದ್ ಸಯೀದ್ ನ ತಲೆಗೆ ೫೦ ಕೋಟಿ ರೂಪಾಯಿಗಳ ಬಹುಮಾನ ಘೋಷಿಸಿದ ಅಮೇರಿಕಾ ಭಾರತೀಯರಿಗೆ ಸಂತೋಷ ತಂದಿತು. ೧೦ ಮಿಲ್ಲಿಯನ್ ಡಾಲರ್. ಒಂದು ಕೋಟಿ ಡಾಲರ್. ಮುಂಬೈ ಮೇಲೆ ನಡೆದ ನರಸಂಹಾರಕ್ಕೆ ಹಫೀಜ್ ಸಯೀದ್ ನೇರ ಕಾರಣ ಎಂದು ಅಮೇರಿಕಾ ಈ ಕ್ರಮವನ್ನು ಘೋಷಿಸಿತು. ಮುಂಬೈ ಮೇಲೆ ಆಕ್ರಮಣ ನಡೆದಿದ್ದು, ದಕ್ಷ, ದಿಟ್ಟ  ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆ ಸೇರಿದಂತೆ ೧೬೬ ಅಮಾಯಕ ಪ್ರಾಣಗಳು ಹೋಗಿದ್ದು ನವೆಂಬರ್ ೨೬, ೨೦೦೮ ರಲ್ಲಿ. ಮೂರೂವರೆ ವರ್ಷಗಳು ಬೇಕಾದವು ಅಮೆರಿಕೆಗೆ ಸಯೀದ್ ನ ವಿರುದ್ಧ ಕ್ರಮ ಜರುಗಿಸಲು. ಮುಂಬೈ ನರಸಂಹಾರ ನಡೆದ ಕೂಡಲೇ ಭಾರತ ಎಲ್ಲ ಪುರಾವೆಗಳನ್ನು ನೀಡಿಯೂ, ಅಮೇರಿಕಾ ಮಾತ್ರ ಸಾಂತ್ವನದ ಮಾತನ್ನು ಆಡಿತೆ ಹೊರತು ಪಾಕ್ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಆಫ್ಘಾನಿಸ್ತಾನದಲ್ಲಿ ತನ್ನ ಸೈನ್ಯಕ್ಕೆ ಪಾಕ್ ಸೈನ್ಯ ನೀಡುವ ಸಹಕಾರ ನಿಲ್ಲಬಹುದು ಎನ್ನುವ ಅಂಜಿಕೆಯಿಂದ ಮುಂಬೈ ಅಮಾಯಕರು ಅಮೆರಿಕೆಯ ಗಣನೆಗೆ ಬರಲಿಲ್ಲ. ಹಾಗಾದ್ರೆ ಈಗ ಏಕೆ ಅಮೆರಿಕೆಯ ಆಫರ್ ಸಯೀದ್ ಸಯೀದ್ ತಲೆಗೆ? ಒಬ್ಬ ನಿರ್ದೇಶಕನ ಡ್ರಾಮಾ ಗಳನ್ನು ಪಡೆ ಪಡೆ ನೋಡುವವನಿಗೆ ನಿರ್ದೇಶಕನ ಕಸುಬಿನ ಧಾಟಿ ತಿಳಿದು ಬಿಡುತ್ತದೆ. ಪ್ರಪಂಚ ಅಮೆರಿಕೆಯ ಎಷ್ಟು ಡ್ರಾಮಾಗಳನ್ನು ನೋಡಿರಲಿಕ್ಕಿಲ್ಲ? ಅಮೆರಿಕೆಯ ಸೈನ್ಯ ಕೆಲ ತಿಂಗಳುಗಳ ಹಿಂದೆ ಹತ್ತಾರು ಪಾಕ್ ಸೈನಿಕರನ್ನು ಪ್ರಮಾದವಶಾತ್ ಕೊಂದು ಹಾಕಿತ್ತು. ಪಾಕ್ ಉಗ್ರವಾಗಿ ಪ್ರತಿಭಟಿಸಿತು. ಗಾಯಕ್ಕೆ ಒಂದಿಷ್ಟು ಮುಲಾಂ (ಡಾಲರ್ ಮುಲಾಂ) ಬಳಿದ ನಂತರ ಪಾಕ್ ಸರಕಾರವೇನೋ ಸುಮ್ಮನಾಯಿತು, ಆದರೆ ಪಾಕ್ ನಲ್ಲಿ ವಿಜ್ರಂಭಿಸುತ್ತಿರುವ ಮೂಲಭೂತವಾದಿಗಳು ಸುಮ್ಮನಾಗಲಿಲ್ಲ. ಆ ಮೂಲಭೂತವಾದಿಗಳ ಗುರುವೇ ಈ ಸಯೀದ್ ಎನ್ನುವ ವ್ಯಕ್ತಿ. ಲಷ್ಕರ್ ಸಂಘಟನೆ ಯನ್ನು ಅಮೇರಿಕಾ ಬಹಿಷ್ಕರಿಸಿದ ಕೂಡಲೇ ‘ಜಮಾತ್ ಉದ್ ದಾವಾ’ ಎನ್ನುವ ಸಮಾಜ ಸೇವಾ ಸಂಘಟನೆ ಆರಂಭಿಸಿ ತನ್ನ ಅಜೆಂಡಾ ಜೀವಂತವಾಗಿರಿಸಿಕೊಂಡ ಈ ಸಯೀದ್. ಈತನಿಗೆ ಭಾರತದ ಮೇಲೆ ಅತೀವ ಧ್ವೇಷ. ಈತ ಅಮೆರಿಕೆಯ ವಿರುದ್ಧ ಕಿಡಿ ಕಾರಲು ಶುರು ಮಾಡಿದ. ಪಾಕ್ ಸೈನಿಕರನ್ನು ಕೊಂದ ಅಮೇರಿಕ ಮತ್ತು ಮಿತ್ರ ದೇಶಗಳ ಸೈನಿಕರನ್ನು ಪೀಡಿಸುವುದಾಗಿ ಧಮಕಿ ಕೊಟ್ಟ. ಇವನನ್ನು ಬಲಿ ಹಾಕಿದರೆ ತನ್ನ ಸೈನಿಕರು ನಿರಾಳವಾಗಿರಬಹುದು ಎಂದು ಅಮೇರಿಕಾ ಈತನ ಮೇಲೆ ಎರಗಿತು. ಸುಮ್ಮನೆ ಎರಗಿದರೆ ಲಾಭ ಕಡಿಮೆ. ಹಾಗಾಗಿ ಭಾರತ ಮೇಲೆ ಆಕ್ರಮಣ ಮಾಡಿದ ಕಾರಣ ಈ ಕ್ರಮ ಎಂದು ಅಮೇರಿಕಾ ಸಾರಿದ ಕೂಡಲೇ ನಮ್ಮ ನಾಯಕರು, ಮಾಧ್ಯಮಗಳು ಪಟಾಕಿ ಸಿಡಿಸಿದವು. ಅಮೆರಿಕೆಯ ಈ ಕ್ರಮದಿಂದ ಭಾರತಕ್ಕೆ ಲಾಭವಾದರೂ ನಿಜವಾದ ಲಾಭ ಅಮೆರಿಕೆಗೆ. ಮುಂಬೈ ಮೇಲೆ ನಡೆದ ಭಯೋತ್ಪಾದಕ ಕೃತ್ಯಗಳಿಗೆ ಭಾರತ ಸರಿಯಾದ ಪಾಠ ಕೊಡಬೇಕಿತ್ತು ಪಾಕಿಗೆ. ಆದರೆ ನಾವು ಸೌಮ್ಯತೆಯ ದಾರಿ ಹಿಡಿದೆವು. ಸಂಯಮ, ತಾಳ್ಮೆ ನಮ್ಮ ಮಂತ್ರವಾಯಿತು. ಈ ಸಂಯಮ ತಾಳ್ಮೆಯ ಲಾಭವೂ ಅಮೆರಿಕೆಗೆ ಎನ್ನುವುದು ನಮಗೆ ತಿಳಿದರೂ ಅಮೆರಿಕೆಯ ದಾಳದಾಟದ ನೈಪುಣ್ಯಕ್ಕೆ ನಮ್ಮದು ನಿರುತ್ತರ.

ಅಮೇರಿಕಾ ಆಗಾಗ ಅನ್ನ ಮಿತ್ರ ಮಂಡಳಿಯೊಂದಿಗೆ ಪ್ರಪಂಚ ಎನ್ನುವ ಪ್ರೇಕ್ಷಕನಿಗೆ ಹೊಸ ಹೊಸ ಡ್ರಾಮಾ ಗಳನ್ನು ಕೊಟ್ಟು ತಾನು ಮಾಡುವುದೆಲ್ಲಾ ಈ ಪ್ರಪಂಚದ ಭದ್ರತೆಗೆ, ಸುರಕ್ಷೆಗೆ ಎಂದು ನಂಬಿಸುತ್ತದೆ. you cannot fool all of the people all of the time ಎಂದು ಅಮೆರಿಕೆಯವನೇ ಆದ ಅಬ್ರಹಾಂ ಲಿಂಕನ್  ಹೇಳಿದ ಮಾತುಗಳು ಯಾವಾಗ ಸಾಕಾರ ವಾಗುವುದೋ ಕಾದು ನೋಡೋಣ. ಅಲ್ಲಿಯವರೆಗೆ ಮುಂದಿನ ಡ್ರಾಮಾದ ನಿರೀಕ್ಷೆಯಲ್ಲಿ ದಿನ ಕಳೆಯೋಣ.

ರಾಜಧಾನಿಯಲ್ಲಿ ನಮ್ಮ ಸೈನ್ಯ

ಇಂಡಿಯನ್ ಎಕ್ಸ್ಪ್ರೆಸ್ಸ್ ಪತ್ರಿಕೆ ಸೈನ್ಯದ ಬಗ್ಗೆ ವರದಿಯೊಂದನ್ನು ಪ್ರಕಟಿಸಿ ಕೋಲಾಹಲವನ್ನು ಸೃಷ್ಟಿಸಿದೆ. ಈ ವರ್ಷದ ಜನವರಿ ೧೬-೧೭ ರ ರಾತ್ರಿ ಭೂಸೇನೆಯ ಎರಡು ಪ್ರಮುಖ ತುಕಡಿಗಳು ದೇಶದ ರಾಜಧಾನಿಯ ಪರಿಸರಕ್ಕೆ ರಕ್ಷಣಾ ಇಲಾಖೆಯ ಅನುಮತಿಯಿಲ್ಲದೆ ಬಂದಿದ್ದು ಏಕೆ? ಸೈನ್ಯದ ಈ ಕ್ರಮ ಸರಕಾರದ ಉನ್ನತ ಸ್ತರದಲ್ಲಿ ಕಂಪನವನ್ನೇಕೆ ತಂದಿತು, ಪ್ರವಾಸದಲ್ಲಿದ್ದ ರಕ್ಷಣಾ ಕಾರ್ಯದರ್ಶಿಯನ್ನು ಮಲೇಷ್ಯಾದಿಂದ ಏಕಾಯೇಕಿ ಹಿಂದಕ್ಕೆ ಕರೆಸಿ ಕೊಂಡಿದ್ದು ಏಕೆ, ಎನ್ನುವ ಹಲವು ಪ್ರಶ್ನೆ ಸಂಶಯಗಳಿಗೆ ಅನುವು ಮಾಡಿ ಕೊಟ್ಟಿದೆ. ಪತ್ರಿಕೆಯ ಈ ವರದಿ ನೋಡಿ ಪ್ರಧಾನಿ, ರಕ್ಷಣಾ ಸಚಿವರು ಸೈನ್ಯದ ಬಗ್ಗೆ ಭರವಸೆಯ ಮಾತುಗಳನ್ನು ಹೇಳಿದ್ದಾರೆಯೇ ಹೊರತು ಪತ್ರಿಕೆ ಎತ್ತಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿಲ್ಲ. ಭಾರತ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಚಲ ವಿಶ್ವಾಸ ಇರಿಸಿ ಕೊಂಡಿರುವ ದೇಶ. ನಮ್ಮ ವ್ಯವಸ್ಥೆಯಲ್ಲಿ ಅದ್ಯಾವ ಕುಂದು ಕೊರತೆಗಳೇ ಇರಲಿ ಇಲ್ಲಿ ಪ್ರಜೆಯೇ ಪ್ರಭು. ಜನರಿಂದ ಚುನಾಯಿತನಾದ ಮಂತ್ರಿ ಎಂಥ ಹುಂಬನೇ ಆದರೂ ಅವನ ಆದೇಶದ ಅಡಿ ಅಧಿಕಾರಿಶಾಹಿ ಕೆಲಸ ಮಾಡಬೇಕು. ನಮ್ಮ ಸೈನ್ಯದ ಮಹಾ ದಂಡನಾಯಕ ಜನರಲ್ V.K.Singh ರಿಗೂ ಸರಕಾರಕ್ಕೂ ವೈಮನಸ್ಸಿರುವುದು ಎಲ್ಲರಿಗೂ ತಿಳಿದದ್ದೇ. ನಿವೃತ್ತಿಯಾಗುವ ವಯಸ್ಸಿನ ಕುರಿತು ಶುರುವಾದ ತಗಾದೆ ಸೈನ್ಯದಲ್ಲಿ ಭ್ರಷ್ಟಾಚಾರ ಇರುವ ವಿಷಯದವರೆಗೆ ಮುಂದುವರೆಯಿತು. ಸೈನ್ಯಾಧಿಕಾರಿ ರಿಪೋರ್ಟ್ ಕೊಡಬೇಕಿರುವುದು ರಕ್ಷಣಾ ಸಚಿವರಿಗೆ. ಸಿಂಗ್ ಈ ಕೆಲಸ ಮಾಡದೇ ನೇರವಾಗಿ ಪ್ರಧಾನಿಗೆ ಪತ್ರ ಬರೆದು protocol ಉಲ್ಲಂಘಿಸಿದರು. ಅವರು ಬರೆದ ಪತ್ರ ಸೋರಿಕೆ ಆಗಿ ಮತ್ತೊಂದು ಅನಾಹುತ ಕ್ಕೆ ಎಡೆಯಾಯಿಯಿತು. ಪತ್ರವನ್ನ ಯಾರು ಸೋರಿಸಿದರು ಎನ್ನುವ ಬಗ್ಗೆ ಯಾರಿಗೂ ಗೊತ್ತಿಲ್ಲ. ಈ ಘಟನೆಗಳ ಬೆನ್ನಲ್ಲೇ ಸೈನ್ಯದ ತುಕಡಿಯ ರಾಜಧಾನಿ ಭೇಟಿ. ಸೈನ್ಯ ಸರಕಾರದ ಮಧ್ಯೆಯ ಜಟಾಪಟಿ ದೇಶಕ್ಕೆ ಒಳ್ಳೆಯದಲ್ಲ. ಕೋಲಾ ಹಲಕ್ಕೆ ಕಾರಣವಾದ ಹಲವು ಜಟಾಪಟಿಗಳನ್ನು ದೇಶ ಕಂಡಾಗಿದೆ. ಇಂದಿರಾ ಗಾಂಧೀ – ಅಲಹಾ ಬಾದ್ ನ್ಯಾಯಾಲಯದ ನಡುವಿನ ಜಗಳ,  ರಾಜೀವ್ ಗಾಂಧಿ – ಜೆಲ್ ಸಿಂಗರ ನಡುವಿನ ಕದನ, ಕೇಂದ್ರ ಸರಕಾರ – ಶೇಷನ್ ನಡುವಿನ ಗಲಾಟೆಗಳನ್ನು ಕಂಡ ದೇಶಕ್ಕೆ ಸೈನ್ಯ ಮತ್ತು ಸರಕಾರದ ನಡುವಿನ ಇರುಸು ಮುರುಸು ಹೊಸತಾಗಿ ಕಾಣುತ್ತಿದೆ. ಏಕೆಂದರೆ ನಮ್ಮ ದೃಷ್ಟಿಯಲ್ಲಿ ಸೇನೆ ಎಂದಿಗೂ ದೇಶಕ್ಕೂ, ಸರಕಾರಕ್ಕೂ ವಿಧೇಯವಾಗಿದ್ದ ಸಂಸ್ಥೆ. ಏಕಾ ಏಕಿ ಈ ತೆರನಾದ ಸಮಸ್ಯೆ ಬರಲು ಕಾರಣ ವೇನು, ನಿಜವಾಗಿಯೂ ನಡೆಯುತ್ತಿರುವುದು ಏನು ಎಂದು ತಿಳಿಯುವ ಹಕ್ಕು ದೇಶಕ್ಕಿದೆ. ಕೂಡಲೇ ಪ್ರಧಾನಿ, ರಕ್ಷಣಾ ಸಚಿವರು ಸಂಶಯ ನಿವಾರಣೆಯ ಕಡೆ ಗಮನ ಹರಿಸುವುದು ಒಳ್ಳೆಯದು.

ಮಹಿಳಾ ಹಿಟ್ಲರ್

ಅತ್ತೆ ಅಂದರೆ ಮದರ್-ಇನ್-ಲಾ. ಇದೊಂದು ಕ್ಲಿಷ್ಟಕರ ಸಂಬಂಧ, ವಿಶೇಷವಾಗಿ ಮಹಿಳೆಯರಿಗೆ. ಒಳ್ಳೆಯ ಗಂಡ ಸಿಗದಿದ್ದರೂ ಚಿಂತಿಲ್ಲ, ಸತಾಯಿಸುವ ಅತ್ತೆಯಂತೂ ಬೇಡವೇ ಬೇಡ, ಇದು ವಿವಾಹಕ್ಕೆ ತಾಯಾರಾಗುವ ಪ್ರತೀಹೆಣ್ಣಿನ ಬಯಕೆ. ಅವಳ ವಿವಾಹದ ಶಾಪ್ಪಿಂಗ್ ಲಿಸ್ಟ್ ನ ಮೊದಲ ಐಟಂ. ನನ್ನ ಪತ್ನಿಗೆ ಸಿಕ್ಕ ಅತ್ತೆ ನನ್ನಲ್ಲಿ ಮತ್ಸರ ಉಂಟು ಮಾಡುತ್ತದೆ. ಸೊಸೆ ಏನು ಮಾಡಿದರೂ ಸರಿ ಎನ್ನುವ ನನ್ನ ಅಮ್ಮ ನನ್ನ ಪತ್ನಿಗೆ ಅತ್ತೆಯಾಗಿ ಬಂದಿದ್ದು ನನ್ನ ಪತ್ನಿ ಹಿಂದಿನ ಜನ್ಮದಲ್ಲಿ  ಮಾಡಿರಬಹುದಾದ ಪುಣ್ಯದ ಫಲ. ನನ್ನ ಮಟ್ಟಿಗೆ ಸತಾಯಿಸುವ ಅತ್ತೆ ಒಂದು ರೀತಿಯ ರೋಡ್ ಹಂಪ್ ಥರ. ಅವು ಇದ್ದರೆ ಮಡದಿಯರ ಲಗಾಮಿಲ್ಲದ ಓಟಕ್ಕೆ ಕಡಿವಾಣ. (ತಮಾಷೆ).    

  • ಇಂದು ಬೆಳಿಗ್ಗೆ ನನ್ನ outlook ನ ಮೇಲ್ ಬಾಕ್ಸ್ ನಲ್ಲಿ ಒಂದು ಮೇಲು. ಕೆಲವು ಹೆಸರು, ಶಬ್ದಗಳನ್ನ ಆಂಗ್ಲ ಭಾಷೆಯಲ್ಲಿ ಕೊಟ್ಟು ಸ್ಪೆಲ್ಲಿಂಗ್ rearrange ಮಾಡಿದಾಗ ಕೊಟ್ಟ ಶಬ್ದಗಳೊಂದಿಗೆ ಅವುಗಳ ವಿವರಣೆ ಎಷ್ಟು ಚೊಕ್ಕವಾಗಿ ಹೊಂದುತ್ತದೆ ಎನ್ನುವ ಮೇಲು. ಕೆಲಸವಿಲ್ಲದ ಬಡಗಿ ಮಗನ ಕುಂಡೆ ಕೆತ್ತಿದನಂತೆ, ಅದೇ ರೀತಿ ಈ creativity ಯ ಕರ್ತೃವಿಗೆ ಮಾಡುವುದಕ್ಕೆ ಕಸುಬಿರಲಿಲ್ಲ ಎಂದು ಕಾಣುತ್ತದೆ.       

PRINCESS DIANA
When you rearrange the letters: 
END IS A CAR SPIN 

MONICA LEWINSKY 
When you rearrange the letters: 
NICE SILKY WOMAN 

DORMITORY

When you rearrange the letters: 
DIRTY ROOM

ASTRONOMER: 
When you rearrange the letters:
MOON STARER 

THE EYES 
:
When you rearrange the letters: 
THEY SEE 

 
SLOT MACHINES
When you rearrange the letters:
CASH LOST IN ME 


ELECTION RESULTS
:
When you rearrange the letters: 
LIES – LET’S RECOUNT 

SNOOZE ALARMS
:
When you rearrange the letters: 
ALAS! NO MORE Z ‘S 

A DECIMAL POINT: 
When you rearrange the letters: 
IM A DOT IN PLACE 

THE EARTHQUAKES
:
When you rearrange the letters: 
THAT QUEER SHAKE 

ELEVEN PLUS TWO
:
When you rearrange the letters: 
TWELVE PLUS ONE 

AND FOR THE GRAND FINALE: 

MOTHER-IN-LAW: 
When you rearrange the letters: 
WOMAN HITLER

 

ಚಿನ್ನ, ಚಿನ್ನ ಆಸೈ

ವರ್ಡ್ ಪ್ರೆಸ್ ಬ್ಲಾಗ್ ತಾಣದಲ್ಲಿ ಪುಕ್ಕಟೆಯಾಗಿ ಬ್ಲಾಗಿಸುವ ಸೌಲಭ್ಯ ಇರೋದು ಎಲ್ರಿಗೂ ತಿಳಿದದ್ದೇ. ಈ ಸೌಲಭ್ಯ ಕೊಡುವ ವರ್ಡ್ ಪ್ರೆಸ್ ನವರದು ಅದೆಂಥದ್ದೇ ulterior motive ಇರಲಿ, ನನ್ನಂಥ ಬರಹದಲ್ಲಿ ಆಸಕ್ತಿ ಇರುವವರಿಗಂತೂ ಇದೊಂದು ಸೊಗಸಾದ ವ್ಯವಸ್ಥೆ. ಪ್ರತೀ ದಿನ ಪೋಸ್ಟ್ ಬರೆಯಲು ವರ್ಡ್ ಪ್ರೆಸ್ ಪ್ರೋತ್ಸಾಹಿಸುತ್ತದೆ. ಏಕೆಂದರೆ practice maketh perfect man, ಆಲ್ವಾ. ಹೆಚ್ಚು ಹೆಚ್ಚು ಮಾಡಿದಷ್ಟೂ ನಾವು ಮಾಡುವ ಕೆಲಸದಲ್ಲಿ ನೈಪುಣ್ಯತೆ ಗಳಿಸಿ ಕೊಳ್ಳುತ್ತೇವೆ. ಹೆಚ್ಚು ಓದಿದಷ್ಟೂ ಇನ್ನಷ್ಟು ಹೆಚ್ಚು ಓದಲು, ಓದಿದ್ದು ಗ್ರಹಿಸಲು ಸಹಾಯಕ. ಹಾಗೆಯೇ ಬರಹವೂ ಸಹ. ಹೆಚ್ಚು ಬರೆದಷ್ಟೂ writer’s blcok ಅನ್ನೋ ಪೀಡೆ ಹತ್ತಿರ ಸುಳಿಯೋಲ್ಲ. ನಾವು ಬ್ಲಾಗ್ ಪ್ರಕಟಿಸಿದ ಕೂಡಲೇ ಇದು ನಿಮ್ಮ ಇಷ್ಟನೆ ಬ್ಲಾಗ್ ಎಂದು ಎಣಿಕೆಯನ್ನು ತೋರಿಸುತ್ತದೆ ವರ್ಡ್ ಪ್ರೆಸ್ ಡ್ಯಾಶ್ ಬೋರ್ಡ್. ಅಂದರೆ ಈ ಪೋಸ್ಟ್ ನ ಹಿಂದಿನ ಪೋಸ್ಟು ನನ್ನ ೩೪೩ ನೆ ಯದು. ಈಗ ನನ್ನ ಗುರಿ ೩೪೫ ನೆ ಪೋಸ್ಟ್ ಎಂದು ಡ್ಯಾಶ್ ಬೋರ್ಡ್ ತೋರಿಸ್ತಾ ಇದೆ. ಚಿಕ್ಕದಾದ, ಕೈಗೆಟುಕುವ ಟಾರ್ಗೆಟ್. ಮುಂದಿನ ಗುರಿ ೪೦೦ ಎಂದಾಗಲೀ, ೩೫೦ ಎಂದಾಗಲೀ ಅಲ್ಲ. ೩೪೩ ಆದಾಗ ೩೪೫ ರ ಟಾರ್ಗೆಟ್. ೩೪೬ ಆದರೆ ೩೫೦ ರ ಟಾರ್ಗೆಟ್. ಚಿನ್ನ ಚಿನ್ನ ಆಸೈ ಥರ ಚಿಕ್ಕ ಚಿಕ್ಕ ಟಾರ್ಗೆಟ್. ಒಳ್ಳೆ ಐಡಿಯಾ ಅಲ್ಲವೇ? ಈ ಐಡಿಯಾ ನಮ್ಮ ಬದುಕಿನಲ್ಲೂ, ನಮ್ಮ ಮಕ್ಕಳ ಬದುಕಿನಲ್ಲೂ ಅಳವಡಿಸಿದರೆ ಹೇಗೆ?

ಈ ಪುಟ್ಟ ಟಾರ್ಗೆಟ್ ಕ್ರಿಕೆಟಿಗರಿಗೂ ಕೊಟ್ಟರೆ ಹೇಗೆ? ಮೊನ್ನೆ ಏಷ್ಯಾ ಕಪ್ ಫೈನಲ್ ನಲ್ಲಿ ಪಾಕ್ ನ ಮೊತ್ತವನ್ನು ಉತ್ತಮ ಪಡಿಸಿ ಕಪ್ ಗೆಲ್ಲಲು ಬಾಂಗ್ಲಾ ದೇಶ ಪಟ್ಟ ಸಾಹಸ ಮತ್ತು ವೈಫಲಿ ನೋಡಿದಾಗ ಈ ವರ್ಡ್ ಪ್ರೆಸ್ ಐಡಿಯಾ ಅಳವಡಿಸಿ ಬ್ಯಾಟ್ಸ್ ಮನ್ ಗಳಿಗೆ ದೊಡ್ಡ ಮೊತ್ತದ ಗುರಿ ಕೊಡದೆ ಚಿಕ್ಕ ಗುರಿ ಕೊಟ್ಟು ಕಳಿಸಿದ್ದರೆ ಕಪ್ ಗೆಲ್ಲುತ್ತಿದ್ದರೋ ಏನೋ.

ಏಪ್ರಿಲ್ ಫೂಲ್

ಏಪ್ರಿಲ್ ಫೂಲ್ – ಮೂರ್ಖರ ದಿನ. ಮೋಜಿಗೆಂದೇ ಹೇಳಿದ ಹಸೀ ಸುಳ್ಳನ್ನು ನಂಬಿ ಮೋಸ ಹೋದರೆ ಮೋಸ ಹೋದವನು ಹೇಗೆ ಮೂರ್ಖನಾಗುತ್ತಾನೋ, ದೇವರೇ ಬಲ್ಲ. ನಾನು ಯಾರಿಗೂ ಫೂಲ್ ಮಾಡೋಲ್ಲ, ನನ್ನ ಮೇಲೆ ಅದನ್ನು ಪ್ರಯೋಗಿಸುವುದೂ ನನಗಿಷ್ಟವಲ್ಲ.

ಇಂದು ಬೆಳಿಗ್ಗೆ ನನ್ನ ತಮ್ಮನಿಗೆ ನನ್ನ ತಂಗಿ ಫೋನ್ ಮಾಡಿ ಅಣ್ಣ ಅತ್ತಿಗೆ ನಡುವೆ ದೊಡ್ಡ ಜಗಳ ನಡೀತಿದೆ, ನಾನು ಹೋಗಿ ಸಮಾಧಾನ ಮಾಡಿದರೂ ಕೇಳ್ತಾ ಇಲ್ಲ ಎಂದು ಫೋನ್ ಮಾಡಿದಳು. ತನ್ನ ಪಾಡಿಗೆ ತಾನು ಹೊಂಡಾ ಬೈಕ್ ಶೋ ರೂಮಿನಲ್ಲಿ ಸ್ಟಾಕ್ ತೆಗೆದು ಕೊಳ್ಳುತ್ತಿದ್ದ ನನ್ನ ತಮ್ಮ ಗಾಭರಿಯಾಗಿ ನನಗೆ ಕಾಲ್ ಮಾಡಿದ. ಪರಸ್ಪರ ಸೌಖ್ಯ ವಿಚಾರಿಸಿ ಕೊಂಡ ನಂತರ ಕೇಳಿದ “ಏನಣ್ಣಾ, ಪ್ರಾಬ್ಲಮ್ಮು?” ಪ್ರಾಬ್ಲಾಮ್ಮಾ, ಏನೂ ಇಲ್ವಲ್ಲಾ ಎಂದಾಗ ಅವನು ಅಲ್ಲಾ, ನೀನು ಅತ್ತಿಗೆ ಜಗಳ ಮಾಡಿ ಕೊಂಡಿದ್ದೀರಂತೆ ಎಂದು ಆತಂಕದಿಂದ ಕೇಳಿದ. ನನಗೆ ತಿಳಿಯಿತು ಓಹೋ ಇದು ಎಪ್ರಿಲ್ ಮೊದಲ ದಿನದ ಹುಚ್ಚು ಎಂದು. ಏನಿಲ್ಲ ಕಣೋ ಇವತ್ತು ಏಪ್ರಿಲ್ ಒಂದಲ್ವಾ ಎಂದು ಹೇಳುತ್ತಿದ್ದಂತೆ ಅವನಿಗೆ ಅರ್ಥವಾಗಿ ನಕ್ಕು ಫೋನ್ ಇಟ್ಟ.

ಈ ತಮಾಷೆಯಲ್ಲಿ ಸಿಕ್ಕಿದ್ದಾದರೂ ಏನು? ಒಂದು ದೊಡ್ಡ ಮೂರ್ಖ ನಗುವೋ?