ಎಷ್ಟು ತೋರಿಸಿದರೆ ಪ್ರಚೋದನಕಾರೀ?

skirt length

ಅತ್ಯಾಚಾರ ಮತ್ತು ಈ ನೀಚ ಕೃತ್ಯದ ಹಿಂದೆ ಇರುವ ಮನಸ್ಥಿತಿ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ನವ ದೆಹಲಿಯಲ್ಲಿ ನಡೆದ ಅತಿ ಕ್ರೂರ ಅತ್ಯಾಚಾರ ದೇಶದ ಮಾತ್ರವಲ್ಲ ಹೊರದೇಶದ ಜನರನ್ನೂ ಕ್ರುದ್ಧ ರನ್ನಾಗಿಸಿದೆ. ರಾತ್ರಿ ಹೊತ್ತು ಹೆಣ್ಣೊಬ್ಬಳು ಹೊರಹೋಗುವ ಔಚಿತ್ಯದಿಂದ ಹಿಡಿದು ಆಕೆ ತೊಡುವ ಉಡುಗೆ ವರೆಗೆ ಎಲ್ಲವೂ ‘ಸ್ಕ್ಯಾನ್’ ಆಗುತ್ತಿವೆ. ದೇವರು ಎರಡೂ ಲಿಂಗಗಳಿಗೆ ಸದ್ಬುದ್ಧಿ ದಯಪಾಲಿಸಲಿ.

ಈಗ ಒಂದು ಪ್ರಶ್ನೆ. ಯಾವ ತೆರನಾದ ಬಟ್ಟೆ ತೊಟ್ಟಾಗ ಗಂಡಿಗೆ ರೇಪ್ ಎಸಗುವ ಪೈಶಾಚಿಕ ಭಾವನೆ ಕೆರಳಿಸುತ್ತದೆ? ಒಬ್ಬೊಬ್ಬರದು ಒಂದೊಂದು ಟೇಸ್ಟು (taste). ಕೆಲವರಿಗೆ ಹೆಣ್ಣಿನ ಮೂಗುತಿಯೂ ಒಂದು ತೆರನಾದ ‘ಕಿಕ್’ ಕೊಡುತ್ತಂತೆ. ಕಾಲುಂಗುರ ಸಹ ಅದೇ ರೀತಿಯ ಕಿಕ್ ಕೊಡುತ್ತೋ ಇಲ್ಲವೋ ಗೊತ್ತಿಲ್ಲ. ಕೆನಡಾದ ಒಬ್ಬ ಹುಡುಗಿ ಮೇಲೆ ತೋರಿಸಿದ ಒಂದು ಚಿತ್ರ ಕೊಟ್ಟು ಅದರ ಮೇಲೆ ಗುರುತು ಹಾಕಿ ಯಾವ್ಯಾವ ಪಾಯಿಂಟ್ ಗಳಲ್ಲಿ ಮಹಿಳೆಯ ‘ಗರತಿ’ತ್ವ ಅಳೆಯಬಹುದು ಎಂದು ತೋರಿಸಿದ್ದಳು. ಗೋಡೆಗೆ ಆತು ನಿಂತ ಹದಿಹರೆಯದ ಹೆಣ್ಣು ತನ್ನ ಸ್ಕರ್ಟ್ ಎತ್ತಿ ತೋರಿಸುತ್ತಾ ಸ್ಕರ್ಟ್ ನ ವಿವಿಧ ಅಳತೆಗಳು ಮೂಡಿಸುವ ಭಾವನೆ ಕುರಿತು ಬರೆದು ಪ್ರಸಿದ್ಧಳಾದಳು ಅಂತರ್ಜಾಲದಲ್ಲಿ.

whore: ಎಂದರೆ ‘ಸಿಂಪ್ಲಿ’ ವೇಶ್ಯೆ.

slut: ಹೆಚ್ಚೂ ಕಡಿಮೆ ಇದೂ ಸಹ ವೇಶ್ಯೆಯೇ ಅನ್ನಿ.

asking for it:ಎಂದರೆ, ಏನ್ ಉಡ್ಗಿ, ಬೇಕಾ?

provocative: ಪ್ರಚೋದನಕಾರೀ.

cheeky: ಅಂದ್ರೆ ‘ತುಂಟಿ’

ನಾನು ಕೇಳೋದು ಇಷ್ಟೇ. ಅವಳೇನನ್ನೇ ತೊಡಲಿ, ತೊಡದೆಯೂ ಇರಲಿ, ಅಲೆಮಾರೀ ಕಣ್ಣುಗಳಿಗೆ ಕಡಿವಾಣ ಹಾಕಿ ಅವು ನೆಲ ನೋಡುವಂತೆ ಮಾಡಬಾರದೇ?

pic courtesy: huffingtonpost, usa

ರಾಜಧಾನಿಯಲ್ಲಿ ನಡೆದ ಅತ್ಯಾಚಾರಕ್ಕೆ ಕಾರಣ ಯಾರು?

rape womenundersiegeprojectdotorg

ನವದೆಹಲಿಯಲ್ಲಿ ನಡೆದ ಅಮಾನುಷ ಅತ್ಯಾಚಾರದ ವಿರುದ್ಧ ದೇಶದಲ್ಲಿ ದೊಡ್ಡ ರೀತಿಯಲ್ಲಿ ಪ್ರತಿಭಟನೆಗಳು ನಡೆದವು, ಮಹಿಳೆಯರು ಮಾನವಾಗಿ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ವಾದುದಕ್ಕೆ ನ್ಯಾಯಾಲಯಗಳನ್ನೂ, ರಾಜಕಾರಣಿ, ಪೊಲೀಸರನ್ನು ನೇರವಾಗಿ ದೂರಿದ ಜನ ಅತ್ಯಾಚಾರಿಗಳಿಗೆ ಗಲ್ಲಿನ ಶಿಕ್ಷೆ ಕೊಡಲು ಆಗ್ರಹಿಸಿದರು. ಕಾಮಪಿಪಾಸು ಪಶುಗಳ ಕೈಗೆ ಸಿಕ್ಕು ಜರ್ಜರಿತಳಾದ ಯುವತಿ ಸಾವಿನೊಂದಿಗೆ ವ್ಯರ್ಥವಾಗಿ ಸೆಣಸಿ ಕೊನೆಯುಸಿರೆಳೆದಳು.

ಟೈಮ್ಸ್ ಆಫ್ ಇಂಡಿಯಾದಲ್ಲಿ ಒಂದು ಲೇಖನ (why Indian men rape – Anand Soondas) ಓದಲು ಸಿಕ್ಕಿತು. ‘ಭಾರತೀಯ ಗಂಡು ಅತ್ಯಾಚಾರವನ್ನೇಕೆ ಎಸಗುತ್ತಾನೆ?’ ರೈಲಿನಲ್ಲಿ ಕಳೆದ ಜುಲೈ ತಿಂಗಳಿನಲ್ಲಿ ಅಸ್ಸಾಮಿನಲ್ಲಿ ನಡೆದ ಹೆಣ್ಣು ಮಗಳೊಬ್ಬಳ ಮೇಲೆ ನಡೆದ ದೌರ್ಜನ್ಯದ ಕುರಿತ ನಡೆದ ವಿದ್ಯಾವಂತರ ಚರ್ಚೆಯಲ್ಲಿ ಒಬ್ಬ ಹೆಣ್ಣಿನ ಕುರಿತು ಹಗುರವಾಗಿ ಮಾತನಾಡಿದ ಬಗ್ಗೆ ಬರೆದಿದ್ದರು ಲೇಖಕರು. ಹಲ್ಲೆಯ ಬಗ್ಗೆ ಮಾತನಾಡುತ್ತಾ ವಾಯು ಸೇನೆಯ ಅಧಿಕಾರಿ ಕೇಳಿದ್ದು ಆಕೆಗೆ ರಾತ್ರಿಯಲ್ಲಿ ಹೊರಗೇನು ಕೆಲಸ ಎಂದು. ಆ ಯುವತಿ ಮದ್ಯ ಸೇವಿಸುತ್ತಿದಳು ಮತ್ತು ಕೆಲವು ಪುರುಷರೊಂದಿಗೆ ಆಕೆ ಚೆಲ್ಲಾಟ ವಾಡುತ್ತಿದ್ದಳು, ಅದಕೆ ತಕ್ಕ ಶಾಸ್ತಿ ಯಾಯಿತು ಎಂದು ಆತ ಹೇಳಿದಾಗ ಕ್ರುದ್ಧನಾದ ಸಹ ಪ್ರಯಾಣಿಕ ಅಧಿಕಾರಿಯನ್ನು ಉದ್ದೇಶಿಸಿ. ಮುಂದಿನ ಸಲ ನಿನ್ನ ಸೋದರಿಯ ಪೃಷ್ಠಗಳನ್ನು ಯಾರಾದರೂ ಹಿಂಡಿದಾಗ ನಿನ್ನ ಸೋದರಿ ಎಷ್ಟು ಮರ್ಯಾದಸ್ಥಳು ಎನ್ನುವುದರ ಬಗ್ಗೆ ಮೊದಲು ಪೊಲೀಸರು ತನಿಖೆ ನಡೆಸಲಿ ಎಂದು ಹೇಳಿದನಂತೆ. ದೌರ್ಜನ್ಯಕ್ಕೊಳಗಾದ ಹೆಣ್ಣುಮಗಳ ಬಗೆಗಿನ ಆ ಅಧಿಕಾರಿಯ ಅಭಿಪ್ರಾಯ ನೋಡಿದಿರಲ್ಲ, ಇದು ವಿದ್ಯಾವಂತರ ಕಥೆ.

ಸಮಾಜವನ್ನು, ದೇಶವನ್ನು ಕಂಗೆಡಿಸುವ ಅತ್ಯಾಚಾರದಂಥ ಘಟನೆಗಳನ್ನು ತಡೆಯಲು ಸಮಾಜ ತನ್ನ ಯುವಜನರ ನೈತಿಕ ಮೌಲ್ಯಗಳು ಪತನಗೊಳ್ಳುತ್ತಿರುವ ಕಡೆ ಗಮನ ನೀಡಬೇಕು. ಗತಿಸಿಹೋದ ವೈಭವದ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸುವುದರಿಂದಲೋ, ಉತ್ಸವಗಳನ್ನು ಆಚರಸುವುದರಿಂದಲೋ ಸಮಾಜದ ಏಳಿಗೆ ಅಥವಾ ಸುರಕ್ಷತೆ ಅಸಾಧ್ಯ. ನವ ದೆಹಲಿಯ ಸಾಮೂಹಿಕ ಅತ್ಯಾಚಾರ ಮತ್ತು ಕಗ್ಗೊಲೆ ನಮ್ಮ ದೇಶದಲ್ಲಿ ಅತ್ಯಚಾರದ ಕುರಿತು ಬಹು ದೊಡ್ಡ ಚರ್ಚೆಯನ್ನೇ ಆರಂಭಿಸಿದೆ. “ನಿರ್ಭಯ” ಎನ್ನುವ ಯುವತಿಯ ದಾರುಣ ಅಂತ್ಯದ ನಂತರ ಸಮಾಜ ಎಚ್ಚೆತ್ತು ಕೊಳ್ಳಲು ಆರಂಭಿಸುತ್ತಿದೆ. ಅದರ ನಡುವೆಯೇ ಮಹಿಳೆ ಲಕ್ಷ್ಮಣ ರೇಖೆಯನ್ನು ದಾಟಬಾರದ, ದಾಟಿದರೆ ಆಗುವ ದುಷ್ಪರಿಣಾಮಗಳ ಕುರಿತ ಬೋಧನೆಗಳು (ಮಧ್ಯ ಪ್ರದೇಶದ ಮಂತ್ರಿ ಮಹೋದಯ ಹೇಳಿದ್ದು) ಕೇಳಿ ಬರುತ್ತಿವೆ. ಮಹಿಳೆಯ ಮೇಲಿನ ಅತ್ಯಾಚಾರಕ್ಕೆ ಮಹಿಳೆಯನ್ನು ಹೊಣೆಗಾರಳನ್ನಾಗಿಸುವ ಮಾತುಗಳೂ ಕೇಳಿ ಬರುತ್ತಿವೆ.

ರಾಜಧಾನಿಯಲ್ಲಿ ಅಮಾಯಕ ಯುವತಿಯ ಮೇಲಿನ ಅತ್ಯಾಚಾರ ನಡೆದ ನಂತರ ಅತ್ಯಾಚಾರಕ್ಕೆ ಕಾರಣವಾಗುವ ಅಂಶಗಳನ್ನು ಚರ್ಚಿಸ ತೊಡಗಿದ ದೇಶಕ್ಕೆ ಮತ್ತೊಂದು ರೀತಿಯ ಆಘಾತ ರಾಜಕಾರಣಿಗಳ ಮಾತಿನಿಂದ. ಹಿಂದುತ್ವ ರಾಷ್ಟ್ರವಾದೀ ಸಂಘಟನೆ ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್ ಈ ಚರ್ಚೆಗೆ ಮತ್ತಷ್ಟು ಬಿಸಿ ಹೆಚ್ಚಿಸಿದರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ. ಪತಿ ಮತ್ತು ಪತ್ನಿ ಸಾಮಾಜಿಕ ಕರಾರಿನ ಕಟ್ಟುಪಾಡಿನ ಒಳಗೆ ತಮ್ಮ ಜವಾಬ್ದಾರಿ ನಿರ್ವಹಿಸಬೇಕು, ಪತಿ ಹೊರಗೆ ದುಡಿದರೆ ಮಹಿಳೆ ಮನೆಯೊಳಗಿದ್ದು ತನ್ನ ಜವಾಬ್ದಾರಿ ಪೂರೈಸಬೇಕು. ಈ ಜವಾಬ್ದಾರಿಗಳು ಅದಲು ಬದಲಾದಾಗ ಅಥವಾ ಮಹಿಳೆ ತನ್ನ ಜವಾದ್ಬಾರಿ ಮರೆತು ಮನೆಯ ಹೊರಗಿನ ಚಟುವಟಿಕೆಗಳಲ್ಲಿ ನಿರತಳಾದಾಗ ಆಗುವ ಪರಿಣಾಮಗಳನ್ನು ವಿಶ್ಲೇಷಿಸಿ ವಿವಾದದ ಸೃಷ್ಟಿಗೆ ಕಾರಣರಾದರು. ಅತ್ಯಾಚಾರ ನಡೆಯುತ್ತಿರುವುದು ವಿದೇಶೀ ಸಂಸ್ಕಾರ ಪ್ರೇರಿತ ‘ಇಂಡಿಯಾ’ ದಲ್ಲಿ, ಸಂಪ್ರದಾಯಸ್ಥ ‘ಭಾರತ’ದಲ್ಲಿ ಅಲ್ಲ ಎನ್ನುವ ಮಾತಿನೊಂದಿಗೆ ದೇಶದೊಳಗೇ ಮತ್ತೊಂದು ದೇಶವನ್ನು ಕಾಣುವ ವ್ಯರ್ಥ ಪ್ರಯತ್ನ ಸಹ ಮಾಡಿದರು ಭಾಗವತ್. ಮಾಧ್ಯಗಳು, ಸಾಮಾಜಿಕ ವೆಬ್ ತಾಣಗಳ ಮೂಲಕ ನಗರಗಳಲ್ಲಿ ನಡೆಯುತ್ತಿರುವ ಅತ್ಯಾಚಾರದ ವರದಿಯಾದರೂ ಓದಲಿಕ್ಕೆ ಸಿಗುತ್ತಿದೆ. ವರದಿಯಾಗದ, ಬೆಳಕಿಗೆ ಬಾರದ ಕಾರಣಕ್ಕಾಗಿ ಗ್ರಾಮಾಂತರ ಪ್ರದೇಶಗಳು ಸುರಕ್ಷಿತ ಎನ್ನುವ ಭಾವನೆ ಒಂದು ಭ್ರಮೆ ಅಷ್ಟೇ.

ಸಾಹಿತ್ಯ, ಕವಿತೆಗಳಲ್ಲಿ, ಸಿನಿಮಾಗಳಲ್ಲಿ ಮುಕ್ತತೆಯನ್ನು ಬಯಸುವ ನಾವು ನಮ್ಮ ಯುವಜನರ ನಡತೆಗೆ ಏಕೆ ಕಡಿವಾಣ ತೊಡಿಸಬೇಕು? ಕಥೆ ಕಾದಂಬರಿ, ಜಾಹೀರಾತು, ಸಿನೆಮಾಗಳಲ್ಲಿ ಎಗ್ಗಿಲ್ಲದೆ ಲೈಂಗಿಕತೆ ತುರುಕಿ ಮಜಾ ಕಾಣುವ ಜನ ಅತ್ಯಾಚಾರದಂತಹ ಘಟನೆಗಳು ಸಂಭವಿಸಿದಾಗ ಹೈರಾಣಾಗುವುದಾದರೂ ಏಕೆ ಎನ್ನುವುದೇ ಅರ್ಥವಾಗುವುದಿಲ್ಲ. ಎಲ್ಲೇ ಕಣ್ಣಾಡಿಸಿದರೂ ಲೈಗಿಕತೆ, ನಗ್ನತೆಯ ದರ್ಶನ ವಾದಾಗ ಆಗುವ ಅನಾಹುತಕ್ಕೆ ಸಮಾಜ ಹೊಣೆ ಹೊರಬೇಕು. ಅಥವಾ ಮುಕ್ತತೆ, ಕ್ರಿಯಾಶೀಲತೆ ಹೆಸರಿನಲ್ಲಿ ನಗ್ನತೆ, ಅಶ್ಲೀಲತೆ ಸೆಕ್ಸ್ ಅನ್ನು ವೈಭವೀಕರಿಸುವುದಾದರೆ ಅಂಥ ಚಿತ್ರ ಗಳನ್ನು ನೋಡಿದ ನಂತರ ಉಂಟಾಗುವ ಉದ್ದೀಪನಕ್ಕೂ ಒಂದು ಔಟ್ ಲೆಟ್ ಸಮಾಜ ನಿರ್ಮಿಸಬೇಕು. ನಮ್ಮ ಚಿತ್ರಗಳಲ್ಲಿ ಕಾಣ ಸಿಗುವ ನರ್ತನ ವನ್ನಾದರೂ ನೋಡಿ, ವಾತ್ಸಾಯನನ ಎಲ್ಲಾ ಭಂಗಿಗಳೂ ಒಂದೆರಡು ಹಾಡುಗಳಲ್ಲಿ ಕಾಣಲು ಲಭ್ಯ. ಗಂಡಿನ ಒಳ ಉಡುಪಿನಿಂದ ಹಿಡಿದು ಕಾರಿನ ಟೈರ್ ಗಳ ಜಾಹೀರಾತಿಗೂ ಬೇಕು ಹೆಣ್ಣು. ಒಂದು ಕಡೆ ನಗ್ನತೆಯ ನಗ್ನ ಪ್ರದರ್ಶನ ಮತ್ತೊಂದು ಕಡೆ ಹುಡಗರು ಹುಡುಗಿಯರು ದಾರಿ ತಪ್ಪ ಬಾರದು ಎನ್ನುವ ಕಡಿವಾಣ, ಹೆಣ್ಣಿನ ಕನ್ಯತ್ವ ಕಾಪಾಡಿಕೊಳ್ಳಬೇಕಾದ ಕುರಿತು ವಿಪರೀತ ಕಾಳಜಿ. ಹೆಣ್ಣನ್ನು ಭೋಗದ ವಸ್ತುವನ್ನಾಗಿ ಮಾತ್ರ ಕಾಣಲು ಸಮಾಜ ಉತ್ಸುಕತೆ ತೋರಿಸಿದರೆ ನವ ದೆಹಲಿಯಲ್ಲಿ ನಡೆದಂಥ ಅಮಾನುಷ, ದುರದೃಷ್ಟಕರ ಘಟನೆಗಳಿಗೂ ಸಾಕ್ಷಿ ನಿಲ್ಲಬೇಕಾಗುತ್ತದೆ.

ಸಮಾಜ ಗಂಡಿನ ಪ್ರಾಮುಖ್ಯತೆ ಬಗ್ಗೆ ಅತೀವ ಗಮನ ನೀಡುತ್ತಿರುವುದೂ ಸಹ ಮಹಿಳೆಯ ದಾರುಣ ಅವಸ್ಥೆಗೆ ಮತ್ತೊಂದು ಕಾರಣ. ಹುಟ್ಟುವ ಮಗು ಹೆಣ್ಣು ಎಂದು ಖಾತ್ರಿಯಾದ ಕೂಡಲೇ ಭ್ರೂಣ ಹತ್ಯೆ ಮೂಲಕ ಹೆಣ್ಣು ಮಗಳನ್ನು ಕೊಲೆಗೈಯ್ಯಲು ಹೇಸದ ಸಮಾಜದಿಂದ ಒಳ್ಳೆಯತನವನ್ನು ನಿರೀಕ್ಷಿಸುವುದು ಕಷ್ಟಕರವಾದ ಕೆಲಸವೇ. ಇನ್ನು ಭ್ರೂಣಾವಸ್ಥೆಯಿಂದ ಭಡ್ತಿ ಪಡೆದು ಧರಿತ್ರಿ ಮುಟ್ಟಿದ ಕೂಡಲೇ ತನ್ನ ಹುಟ್ಟನ್ನು ಪ್ರಪಂಚಕ್ಕೆ ತಿಳಿಸಲು ತಂದೆ ತಾಯಿಗಳಿಗೂ, ಆ ಶುಭ ವಾರ್ತೆಯನ್ನು ಕೇಳುವ ಜನರಿಗೂ ಒಂದು ತೆರನಾದ ಸಂಕಟ… ಅಯ್ಯೋ, ಹೆಣ್ಣಾ? ಹೆಣ್ಣು ಅಬಲೆ, ಹೆಣ್ಣಿನ ಬುದ್ಧಿ ಮೊಣಕಾಲ ಕೆಳಗೆ, ಮುಂತಾದ ಮಾತುಗಳನ್ನು ಕೇಳುತ್ತಾ ಬೆಳೆಯುವ ಗಂಡು ಮಕ್ಕಳಿಗೆ ಹೆಣ್ಣಿನ ಮೇಲೆ ಗೌರವ ತೋರುವುದಾದರೂ ಹೇಗೆ? ಹೆಣ್ಣಿನ ಬುದ್ಧಿ ಮೊಳ ಕಾಲ ಕೆಳಗೆ, ಮುಂತಾದ ಮಾತುಗಳ ಮೂಲಕ ಹೆಣ್ಣಿನ ಅಸ್ತಿತ್ವದ ಕುರಿತು ಕೀಳರಿಮೆ ಬರುವಂಥ ನಡತೆಗಳೂ ಸಹ ಕಾರಣ ಮಹಿಳೆಯ ವಿರುದ್ಧ ನಡೆಯುತ್ತಿರುವ ಹಿಂಸೆ, ಅತ್ಯಾಚಾರ. ಹೆಣ್ಣನ್ನು ದೇವಿ, ‘ಮಾತಾ ಶ್ರೀ’ ಎಂದು ಪೂಜಿಸುವ, ಆದರಿಸುವ ಸಮಾಜವೇ ಸಂದರ್ಭ ಬಂದಾಗ ಮಹಿಳೆ ವಿರುದ್ಧ ಹೇಸಿಗೆ ಹುಟ್ಟಿಸುವ ಕೆಲಸಕ್ಕೂ ಮುಂದಾಗುವುದು ಅರ್ಥವಾಗದ ಒಗಟು. ಮಹಿಳೆಯರ ಮೇಲಿನ ದೌರ್ಜನ್ಯ ಕಂಡು ಬೇಸತ್ತ ಒಬ್ಬ ಮಹಿಳೆ ಹೇಳುವುದು, “ಹೆಣ್ಣು ಮಕ್ಕಳನ್ನು, ಸಂಗೀತ ಕಲಿಯಲಿಕ್ಕೋ, ನೃತ್ಯ ಕಲಿಯಲಿಕ್ಕೋ ಕಳಿಸಬೇಡಿ, ಬದಲಿಗೆ ಕರಾಟೆ, ಜೂಡೋ ಕಲಿಯಲು ಪ್ರೋತ್ಸಾಹಿಸಿ” ಇಂಥ ಮಾತು ಓರ್ವ ಹೆಣ್ಣು ಮಗಳ ಬಾಯಿಂದ ಬರಬೇಕಾದರೆ ಗಂಡಿನ ಕುರಿತ ಆಕೆಯ ಅಪನಂಬಿಕೆ ನಮಗೆ ವೇದ್ಯವಾಗುತ್ತದೆ.

ಬಹುಶಃ ವಿಶ್ವದಲ್ಲೇ ಅತೀ ಹೆಚ್ಚು ಪ್ರಭಾವೀ ಮಹಿಳಾ ರಾಜಕಾರಣಿಗಳು ಇರುವ ದೇಶ ನಮ್ಮದು. ಸರಕಾರವನ್ನು ಮುನ್ನಡೆಸುತ್ತಿರುವ ಮಹಿಳೆಯಿಂದ ಹಿಡಿದು, ವಿರೋಧ ಪಕ್ಷದ ನಾಯಕಿ. ಮುಖ್ಯ ಮಂತ್ರಿ, ಉನ್ನತ ಮಂತ್ರಿ ಪದವಿಗಳನ್ನು ಅಲಂಕರಿಸಿ ಕೂತ ಮಹಿಳೆಯರಿಗೆ ಅವರದೇ ಸಮಸ್ಯೆಗಳ ಅರಿವು ಇಲ್ಲದಿರುವುದು ಆಶ್ಚರ್ಯಕರ. ಇಷ್ಟೊಂದು ಮಹಿಳಾ ರಾಜಕಾರಣಿಗಳು ವಿಜ್ರಂಭಿಸುವ ದೇಶದಲ್ಲೇ ಹೆಣ್ಣಿನ ಪರಿಸ್ಥಿತಿ ಹೀಗಾದರೆ?

ಮಹಿಳೆಯರ ವಿರುದ್ಧ ನಡೆಯುವ ಯಾವುದೇ ಹಿಂಸೆ ಅತ್ಯಚಾರ ಗಳನ್ನು ವ್ಯವಸ್ಥೆ ಅತ್ಯಂತ ಗಂಭೀರವಾಗಿ ಪರಿಗಣಿಸಿ ತಕ್ಕ ಶಿಕ್ಷೆ ಯನ್ನು ಫಾಸ್ಟ್ ಟ್ರಾಕ್ ಕೋರ್ಟ್ ಗಳ ಮೂಲಕ ಕೊಡ ಮಾಡಿಸಬೇಕು. ಅತ್ಯಾಚಾರವೆಸಗುವ ಗಂಡಿನ ವಯಸ್ಸಿನ ಮಿತಿಯನ್ನು ಹದಿನೆಂಟರಿಂದ ಹದಿನೈದಕ್ಕೆ ಇಳಿಸಬೇಕು. ನವ ದೆಹಲಿಯಲ್ಲಿ ಅತ್ಯಾಚಾರವೆಸಗಿದ ಪುರುಷರ ಪೈಕಿ ಹದಿನೇಳು ವಯಸ್ಸಿನ ಹುಡುಗನ ಪಾತ್ರ ಅತ್ಯಂತ ಕ್ರೂರವಂತೆ. ಚಿಕ್ಕ ವಯಸ್ಸಿನಲ್ಲೇ ಹಡಬೆ ಕೆಲಸಕ್ಕೆ ಕೈ ಹಚ್ಚುತ್ತಿರುವ ಸಮೂಹಕ್ಕೆ ಶಿಕ್ಷೆಗೆ ಅವಶ್ಯವಾದ ಪರಿಮಿತಿಯನ್ನು ಕೆಳಕ್ಕಿಳಿಸಿದಾಗಲೇ ಇತರರಿಗೆ ಎಚ್ಚರಿಕೆಯ ಘಂಟೆ. ಅತ್ಯಾಚಾರಿಗೆ ನೇಣಿನ ಶಿಕ್ಷೆಯನ್ನಲ್ಲದೆ ಬೇರಾವುದೇ ಶಿಕ್ಷೆಗೂ ಒಳಪಡಿಸಬಾರದು. ಏಕೆಂದರೆ, ಮಹಿಳೆಯ ವಿರುದ್ಧ ನಡೆಯುವ ಅತ್ಯಾಚಾರ ಒಂದು ರೀತಿಯ crime against humanity.

pic courtesy: http://www.womenundersiege.org

 

ಅತ್ಯಾಚಾರದ ಗರ್ಭಧಾರಣೆಗೆ “ದೈವೇಚ್ಚೆ” ಕಾರಣ

ಶೀಲಭಂಗದಿಂದ ಅಥವಾ ಅತ್ಯಾಚಾರದಿಂದ ಉಂಟಾದ ಗರ್ಭಧಾರಣೆ ದೈವೇಚ್ಚೆ ಎಂದ ಅಮೆರಿಕೆಯ ರಿಪಬ್ಲಿಕನ್ ಪಕ್ಷದ ನಾಯಕನೊಬ್ಬ. ಈಗ ಈ ಮಾತು ಅಮೆರಿಕೆಯ ರಾಜಕೀಯ ವಲಯದಲ್ಲಿ ಕಂಪನ ತರುತ್ತಿದೆ. ಡೆಮೊಕ್ರಾಟ್ ಪಕ್ಷದವರು ಈ ಮಾತನ್ನು ಹಿಡಿದು ಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾತುರರಾಗಿದ್ದಾರೆ. ಅಮೆರಿಕೆಯಲ್ಲಿ ಅಧ್ಯಕ್ಷೀಯ ಚುನಾವಣೆಯ ಬಿಸಿ. ಬಲಪಂಥೀಯ ಎಂದು ರಿಪಬ್ಲಿಕನ್ ಪಕ್ಷ ಪರಿಗಣಿಸಲ್ಪಟ್ಟಿದೆ ಅಮೆರಿಕೆಯಲ್ಲಿ. ತಲೆಕೆಟ್ಟ ಕೆಲವು ಕ್ರೈಸ್ತ ಪಾದ್ರಿಗಳೂ ಈ ಪಕ್ಷವನ್ನ ಬೆಂಬಲಿಸುತ್ತಾರೆ. ಬಲಪಂಥವೋ, ಎಡ ಪಂಥವೋ, ನಡು ಪಂಥವೋ, ಪಂಥ ಯಾವುದೇ ಇರಲಿ ಮಾನವೀಯ ಮೌಲ್ಯಗಳ ವಿಷಯ ಬಂದಾಗ ಸರಿಯಾದ ವಿವೇಚನೆ, ತೋರದ ಪಂಥ ತಿಪ್ಪೆ ಸೇರುವುದಕ್ಕೆ ಮಾತ್ರ ಲಾಯಕ್ಕು.

Let us get back to rape-induced pregnancy. ಮತ್ತೊಮ್ಮೆ ಗರ್ಭ ಧಾರಣೆಗೆ ಬರೋಣ. ಅತ್ಯಾಚಾರದಿಂದ ಉಂಟಾದ ಗರ್ಭಧಾರಣೆ ದೈವೇಚ್ಚೆ ಎಂದ ಈತನ ಹೆಸರು ರಿಚರ್ಡ್ ಮುರ್ಡೋಕ್. ಇಂಡಿಯಾನ ರಾಜ್ಯದಿಂದ ಸೆನೆಟ್ ಗಾಗಿ ಸ್ಪರ್ದೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ. ತಾನಾಡಿದ  ಮಾತಿನಿಂದ ಎದ್ದ ವಿವಾದ ಈತನನ್ನು ವಿಚಲಿತನನ್ನಾಗಿಸಿದೆ.  ಈಗ ಈತ ಹೇಳುವುದು, “ನಾನು ಹೇಳಿದ ಅರ್ಥವೇ ಬೇರೆ. ನನ್ನ ಪಾಯಿಂಟ್ ಏನೆಂದರೆ ದೇವರು ಜೀವದ ಸೃಷ್ಟಿಗೆ ಕಾರಣ, ದೇವರಿಗ ಅತ್ಯಾಚಾರ ಇಷ್ಟವಿಲ್ಲ, ಅತ್ಯಾಚಾರ ಒಂದು horrible thing” ಈ ಸಮಜಾಯಿಷಿ ಈತನದು.

ಗರ್ಭಧಾರಣೆ ದೈವೇಚ್ಚೆ ಎಂದಾಗ ಒಂದು ಮಾತು ನೆನಪಿಗೆ ಬರುತ್ತದೆ. ಅದೆಂದರೆ “ತೇನ ವಿನಾ ತೃಣಮಪಿ ನ ಚಲತಿ”. ಈ ಮಾತಿನ ಅರ್ಥ ಒಂದು ಹುಲುಕಡ್ಡಿ ಅಲುಗಾಡಲೂ ಪರಮಾತ್ಮನ ಅಪ್ಪಣೆ ಬೇಕು. ಪವಿತ್ರ ಕುರ್’ಆನ್ ನ ಆರನೇ ಅಧ್ಯಾಯ, ೫೯ ನೇ ಸೂಕ್ತದಲ್ಲೂ ಇದೇ ಅರ್ಥ ಬರುವ ಮಾತಿದೆ. “Not a leaf fall but with His Knowledge”. ಈಗ ಈ ಮೇಲಿನ ಸೂಕ್ತಗಳನ್ನು ಉದ್ಧರಿಸಿ ಜಗತ್ತಿನಲ್ಲಿ ನಡೆಯುವ ಪ್ರತೀ ಅತ್ಯಾಚಾರ, ಅನಾಚಾರ, ಕೊಲೆ, ಸುಲಿಗೆ, ಮೋಸ ದಗಾ, ವಂಚನೆ… ಎಲ್ಲವಕ್ಕೂ ತಂದು ನಿಲ್ಲಿಸಲಿ ಪರಮಾತ್ಮನನ್ನು ಸಾಕ್ಷಿಯಾಗಿ.

 

ಈಗ ಅತ್ಯಾಚಾರ ‘ಕಾಮನ್ ಫೆನಾಮೆನಾ’ ನಮ್ಮ ದೇಶದಲ್ಲಿ

ಈಗ ಅತ್ಯಾಚಾರ ಕಾಮನ್ ಫೆನಾಮೆನಾ ನಮ್ಮ ದೇಶದಲ್ಲಿ. ಟೈಮ್ಸ್ ಆಫ್ ಇಂಡಿಯಾ ದ ಆನ್ ಲೈನ್ ಆವೃತ್ತಿಯ ಮಧ್ಯ ಭಾಗದ ಸುದ್ದಿ ಯಲ್ಲಿ ದಿನವೂ ರಾರಾಜಿಸುವ ಚಟುವಟಿಕೆ ಈ ರೇಪು ಎನ್ನುವ ಅಸಹ್ಯ ಹುಟ್ಟಿಸುವ perversion. ಇದಕ್ಕೆ ಮುಖ್ಯ ಕಾರಣ ಎಂದರೆ ರೇಪಿಗೆ ತಕ್ಕ ಶಿಕ್ಷೆಯ ಕೊರತೆ ಅದರೊಂದಿಗೇ ಈ ನೀಚ ಕೃತ್ಯಕ್ಕೆ ಮಹಿಳೆಯನ್ನು ಹೊಣೆಯಾಗಿಸುವ  ನಾಚಿಕೆಗೆಟ್ಟ ವರ್ತನೆ. ಮಹಿಳೆ ಸರಿಯಾಗಿ ಬಟ್ಟೆ ಉಡಲು ಅಸಮರ್ಥಳಾದರೆ ರೇಪ್ ಬಂದು ಎರಗುತ್ತದೆ ಎನ್ನುವುದು ಬಹಳಷ್ಟು ಜನರ ವಕ್ರ ನ್ಯಾಯ. ವಯಸ್ಕ, ಹದಿಹರೆಯದ ಹೆಣ್ಣಿನ ಉಡುಗೆ ಅತ್ಯಾಚಾರಕ್ಕೆ ಕುಮ್ಮಕ್ಕು ನೀಡುವುದಾದರೆ ಒಂದೂವರೆ, ಎರಡು, ಮೂರು ವರ್ಷದ ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರಕ್ಕೆ ಏನು ಸಮಜಾಯಿಷಿ?

ಇಂದು ೧೧ ವರ್ಷದ ಮಗುವಿನ ಮೇಲೆ ಅತ್ಯಾಚಾರ ಮಾಡಿ ಕೊಲ್ಲಲಾಯಿತು. ಈ ಅಮಾನುಷ ಕೃತ್ಯಗಳು ನಾಗರೀಕ ಸಮಾಜದ ಕಣ್ಣು ತೆರೆಸಲು ವಿಫಲ ವಾಗುತ್ತಿರುವುದು ದಿಗಿಲನ್ನು ಹುಟ್ಟಿಸುತ್ತಿದೆ. ನನ್ನ ಪ್ರಕಾರ ಅತ್ಯಾಚಾರ ಭ್ರಷ್ಟಾಚಾರಕ್ಕಿಂತ ಕೀಳು, ಅಸಹ್ಯ. ಅತ್ಯಾಚಾರದ ವಿರುದ್ಧ ಅಣ್ಣಾ ಹಜಾರೆ, ಕೇಜರಿವಾಲ (ನಾನು ಈತನ ಫ್ಯಾನ್ ಅಲ್ಲ) ನಂಥವರು ಧ್ವನಿ ಎತ್ತುತ್ತಿಲ್ಲ?

ಅತ್ಯಾಚಾರಕ್ಕೆ ಮಹಿಳೆಯ ಉಡುಗೆ ಕಾರಣ ಎಂದು ಬರೀ ಜನ ಸಾಮಾನ್ಯನ ಅಭಿಪ್ರಾಯ ಮಾತ್ರವಲ್ಲ ಮಂತ್ರಿ ಮಹೋದಯರೂ, ಪೊಲೀಸ್ ಅಧಿಕಾರಿಗಳೂ ಈ ಮಾತಿಗೆ ಧ್ವನಿಗೂಡಿಸುತ್ತಾರೆ.  ಈಗ ಹರಿಯಾಣ ರಾಜ್ಯದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಾಲ ಕೊಡುವ ಸಲಹೆ ಏನೆಂದರೆ ಹೆಣ್ಣು ಗಂಡುಗಳ ವಿವಾಹಾರ್ಹ ವಯಸ್ಸನ್ನು ಇಳಿಸಬೇಕು ಎನ್ನುವುದು. ಒಂದು ಕಡೆ ಸರಿಯಾಗಿ ಬಟ್ಟೆ ತೊಡು ಇಲ್ಲಾ ಮಾನ ಕಳೆದು ಕೊಳ್ಳಲು ತಯಾರಾಗು ಎನ್ನುವ ಎಚ್ಚರಿಕೆಗೆ ಮದುವೆ ವಯಸ್ಸನು ಇಳಿತ ಮಾಡಿದರೆ ರೇಪ್ ದರದಲ್ಲಿ ಕಡಿತ ಬರಬಹುದು ಎನ್ನುವ ವಾದಕ್ಕೆ ಜೋಡಿ ಎನ್ನುವಂತೆ ಬರುತ್ತಿದೆ ಮಂತ್ರಿಯ ಸಲಹೆ. ಈ ಮಾತಿನೊಂದಿಗೆ ಈ ಮು. ಮಂತ್ರಿ ಮುಘಲರನ್ನೂ ಎಳೆದು ತರುತ್ತಾನೆ. ಕುಣಿಯಲು ಬಾರದವಳು ನೆಲ ಡೊಂಕು ಎಂದಳಂತೆ, ಆಳನು ಬಾರದವನು ಮುಘಲರನ್ನು, ಪೋರ್ಚುಗೀಸರನ್ನು ಹೊನೆಯಾಗಿಸುತ್ತಾನೆ ತನ್ನ ಹೊಣೆಗೇಡಿತನಕ್ಕೆ.

ಒಟ್ಟಿನಲ್ಲಿ ಸಮಾಜದ ನಿಲುವು ಇಷ್ಟೇ. ಏನೇ ಆಗಲಿ, ಏನೇ ಬರಲಿ, ನಾವು ಮಾತ್ರ ನಮ್ಮ ಗಂಡು ಮಕ್ಕಳಿಗೆ ನೈತಿಕತೆಯ ಪಾಠ ಹೇಳೋಲ್ಲ, ಪರ ಹೆಣ್ಣನ್ನು ಗೌರವದಿಂದ ಕಾಣಲು ಉತ್ತೇ ಜಿಸೋಲ್ಲ ಎನ್ನುವ ಹೊಟ್ಟೆ ತೊಳೆಸುವಂಥ ಮೊಂಡುತನ. ನಮ್ಮ ಸಂಸ್ಕಾರ ಅಂಥದ್ದು, ಇಂಥದ್ದು ಎಂದು vainglorious ಆಗಿ ಕಣ್ಣು ಮುಚ್ಚಿ, ಎದೆಯುಬ್ಬಿಸಿ ನಡೆದರೆ ಸಾಲದು. ಅತ್ಯಾಚಾರದಂಥ ಅವಮಾನಕಾರೀ ಸಾಮಾಜಿಕ ಪಿಡುಗಿಗೆ ಇತಿಶ್ರೀ ಹಾಡಲೇ ಬೇಕು.              

ಕನಿಷ್ಠ ಉಡುಗೆ, ಗರಿಷ್ಠ ಅಪಾಯ

ನಮ್ಮ ದೇಶದಲ್ಲಿ ಅತ್ಯಾಚಾರ ಹೆಚ್ಚುತ್ತಿರುವುದಕ್ಕೆ ಕಾರಣ ಮಹಿಳೆಯರು ಪ್ರಚೋದನಕಾರಿ ಉಡುಗೆ ತೊಡುತ್ತಿರುವುದು ಎಂದು ಆಂಧ್ರ ಪ್ರದೇಶದ ಪೊಲೀಸ್ ಮುಖ್ಯಸ್ಥ ದಿನೇಶ್ ರೆಡ್ಡಿ ಹೇಳಿಕೆ ನೀಡುವುದರ ಮೂಲಕ ಜೇನುಗೂಡಿಗೆ ಕಲ್ಲು ಬೀಸಿದ್ದಾರೆ. ಈ ಮಾತಿಗೆ ವಿರೋಧ ವ್ಯಕ್ತಪಡಿಸಿದರು ನಮ್ಮ ಸನ್ಮಾನ್ಯ ಗೃಹ ಮಂತ್ರಿಗಳು. ಈ ಹೇಳಿಕೆ ಸರಿಯಲ್ಲ, ಕಾಕ್ಟೇಲ್ ಪಾರ್ಟಿ ಗೆ ಹೋಗುವ ಮಹಿಳೆ ಬಿಕಿನಿಯಲ್ಲಿ ಹೋಗಲಾರಳು, ಸಂದರ್ಭಕ್ಕೆ ಅನುಸಾರವಾಗಿ ಆಕೆ ಬಟ್ಟೆ ತೊಡುವಳು ಎಂದು ಬಡಬಡಿಸಿದರು.

ಗೃಹ ಮಂತ್ರಿಗಳಿಗಿಂತ ಚೆನ್ನಾಗಿ ಸಮಾಜ ಕಾಯುವ ಪೊಲೀಸರಿಗೆ ತಾನೇ ಗೊತ್ತಿರೋದು ಸಮಾಜದ ಆಗುಹೋಗುಗಳು? ಕನಿಷ್ಠ ಬಟ್ಟೆ ತೊಟ್ಟ ಹುಡುಗಿ ಅಥವಾ ಮಹಿಳೆ ಯಾವುದೇ ಕಾರಣದಿಂದಲೂ ಒಳ್ಳೆಯ ಭಾವನೆ ತರಲಾರರು. ನಮ್ಮಲ್ಲಿ ಬರುವ ವಿದೇಶೀ ಮಹಿಳೆಯರನ್ನು ಗಂಡಸರು ನೋಡುವ ರೀತಿ ನೀವು ಗಮನಿಸಿರಲೇಬೇಕಲ್ಲ, ಅದಕ್ಕೆ ಕಾರಣ ಏನು, ಆಕೆಯ ಅಂಗ ಸೌಷ್ಠವದ ಪ್ರದರ್ಶನ. ಮೈ ಪ್ರದರ್ಶನ ನಡೆಸೋ ಮಹಿಳೆಯರು loose character ನವರು ಎಂದು ಬಹಳ ಜನ ತಪ್ಪಾಗಿ ತಿಳಿಯುತ್ತಾರೆ. ನಮಗೇಕೆ ವಿದೇಶೀ  ಜನರ ಉಡುಗೆ ತೊಡುಗೆ ಮೇಲೆ ವ್ಯಾಮೋಹ? ಅವರು ಕನಿಷ್ಠ ಉಡುಗೆ ತೊದಲು ಕಾರಣ ಯಾವಾಗಲೂ ಗಡಿ ಬಿಡಿ ಯಾಗಿರುವ ಅವರ ಚಟುವಟಿಕೆ ಯಾಗಿರಬಹುದು. ನಮ್ಮ ಮಹಿಳೆಯರ ಥರ ಉದ್ದದ ಕೂದಲನ್ನೂ ಸಹ ಬೆಳೆಸೋಲ್ಲ ಅವರು. ಸ್ನಾನದ ನಂತರ ಒಣಗಲು ನಂತರ  ಬಾಚಲು ಸಿಗದ ಸಮಯದ ಕಾರಣ. ಮಹಿಳೆಯರು ಅಂತರಂಗದ ಸೌಂದರ್ಯಕ್ಕೆ  ಪ್ರಾಶಸ್ತ್ಯ ಕೊಟ್ಟರಾಗದೆ? ಈ ವರದಿ ಆಂಗ್ಲ ಪತ್ರಿಕೆಯಲ್ಲಿ ಬಂದಿದ್ದೆ ತಡ, ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂತು. ಬಹುತೇಕ ಓದುಗರು ದಿನೇಶ್ ರೆಡ್ಡಿಯವರ ಮಾತಿಗೆ ಸಹಮತ ವ್ಯಕಪಡಿಸಿದರು. ದಿನೇಶ ರೆಡ್ಡಿಯವರ ಪ್ರಕಾರ ಗ್ರಾಮಾಂತರ ಪ್ರದೇಶಗಳಿಗೂ ಅಂಟಿಕೊಂಡಿದೆ ಈ ಪಿಡುಗು. ಪೊಲೀಸ್ ಮುಖ್ಯಸ್ಥರ ಹೇಳಿಕೆಗೆ ಮಹಿಳಾ ಸಂಘಟನೆಗಳು ರೆಡ್ಡಿಯವರನ್ನು chauvinist ಎಂದು ಮೂದಲಿಸಿದವು.

ನಮ್ಮ ಸಂಸ್ಕೃತಿ ಪಾಶ್ಚಾತ್ಯರಿಗಿಂತ ವಿಭಿನ್ನ, ಹಾಗೆಯೇ ಅಂಥಾ ಮಾಡರ್ನ್ ಸಂಸ್ಕಾರಕ್ಕೆ ನಮ್ಮ ಸಮಾಜ ಇನ್ನೂ ತಯಾರಾಗಿಲ್ಲ, ತಯಾರಾಗುವವರೆಗೆ ನಮ್ಮ ಸಂಸ್ಕೃತಿಗೆ ತಕ್ಕುದಾದ ಉಡುಗೆ ಧರಿಸುವುದು ಒಳಿತು.

ಹೀಗೊಂದು ಕಾನೂನಿನ ಲೈಂಗಿ’ಕಥೆ’

ಜೂಲಿಯಾನ್ ಅಸಾಂಜ್ ಹೆಸರು ಸಾಮಾನ್ಯ ವಿದ್ಯಾವಂತರು ಕೇಳಿರಲೇ ಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ, ಮಾಹಿತಿ ಹಕ್ಕು ಮುಂತಾದ ಹಕ್ಕುಗಳ ಪ್ರತಿಪಾದಕ ಅಸಾಂಜ್. ಈತ ವಿಶ್ವದ ಸರಕಾರಗಳು ತೆರೆಮರೆಯಲ್ಲಿ ನಡೆಸಿ ಮಗುಮ್ಮಾಗಿ ಇದ್ದು ಬಿಡುವ ವಿಷಯಗಳ ಬಗ್ಗೆ ವಿಶ್ವಕ್ಕೆ ಡಂಗುರ ಬಾರಿಸಿ ಹೇಳುತ್ತಿದ್ದ ತನ್ನದೇ ಆದ ವೆಬ್ ತಾಣ “ವಿಕಿಲೀಕ್” ಮೂಲಕ. ಈ ವಿಕಿಲೀಕ್ ಎನ್ನುವ ನಲ್ಲಿ ತೊಟ ತೊಟ ತೊಟ ತೊಟ ಎಂದು ಉದುರಿಸ ಬೇಕಾದ್ದನ್ನೂ, ಉದುರಿಸಬಾರದ್ದನ್ನೂ ಉದುರಿಸಿ ಸರಕಾರಗಳ ಕೆಂಗಣ್ಣಿಗೆ ಕಾರಣವಾಯಿತು. ಈ ನಲ್ಲಿಯ ಬಾಯಿ ಮುಚ್ಚಿಸಲು ಸರಕಾರಗಳು ಎಲ್ಲಾ ಕಸರತ್ತುಗಳನ್ನೂ ಮಾಡಿದವು. ಅದರಲ್ಲಿನ ಒಂದು ಕಸರತ್ತು ಲೈಂಗಿಕ ದೌರ್ಜನ್ಯದ ಅಥವಾ ಅತ್ಯಾಚಾರದ ಆರೋಪ ಜೂಲಿಯಾನ್ ಅಸಾಂಜ್ ವಿರುದ್ಧ.

ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಜೂಲಿಯಾನ್ ಅಸಾಂಜ್ ನಿಗೆ ಇಬ್ಬರು ಮಹಿಳೆಯರ ಪರಿಚಯ ವಾಯಿತು; ಆನ್ನಾ ಆರ್ಡಿನ್ ಮತ್ತು ಸೋಫಿಯಾ ವಿಲೆನ್ ಇವರೇ ಆ ಮಹಿಳೆಯರು.

ಈ ಮಹಿಳೆಯರು ಯಾರು, ಅವರು ಹೇಗೆ ಜೂಲಿಯಾನ್ ಅಸಾಂಜ್ ನಿಗೆ ಹತ್ತಿರವಾದರು ಎನ್ನುವುದು ದೊಡ್ಡ ಕತೆ. ಆನ್ನಾ ಆರ್ಡಿನ್ ಜೂಲಿಯಾನ್ ಒಂದಿಗೆ ಲೈಂಗಿಕ ಚಟುವಟಿಕೆ ನಡೆಸುವಾಗ ಅರ್ಧ ದಾರಿಯಲ್ಲಿ ಕಾಂಡೋಂ ಹರಿದು ಹೋಯಿತು. ಈಗ ಆನ್ನಾ ಗೆ ಶಂಕೆ ತನಗೆ ಲೈಂಗಿಕ ರೋಗ ತಗುಲಿರಬಹುದೋ ಅಥವಾ ಗರ್ಭಧಾರಣೆಯಾಗಿರಬಹುದೋ ಎಂದು. ಆದರೆ ಆಕೆ ಪೊಲೀಸರಿಗೆ ದೂರು ನೀಡಿದ್ದು ಅಸಾಂಜ್ ಉದ್ದೇಶಪೂರ್ವಕ ಕಾಂಡೋಂ ಹರಿದ ಎಂದು.

ಈಗ ಎರಡನೇ ಪಾತ್ರದ ಆಗಮನ, ಸೋಫಿಯಾ ವಿಲೆನ್. ಈಕೆ ಸಹ ಒಂದೆರಡು ದಿನಗಳ ನಂತರ ಅಸಾಂಜ್ ನೊಂದಿಗೆ ಕೂಡಿದಳು. ಮೊದಲ ಸಲ ಕೂಡುವಾಗ ಅಸಾಂಜ್ ಕಾಂಡೋಂ ಧರಿಸಿದ್ದ, ಮರುದಿನ ಬೆಳಿಗ್ಗೆ ಮತ್ತೊಮ್ಮೆ ಕೂಡುವಾಗ ಅಸಾಂಜ್ ಕಾಂಡೋಂ ಅನ್ನು ಧರಿಸಿರಲಿಲ್ಲ ಎಂದು ಸೋಫಿಯಾ ಪೊಲೀಸ್ ಠಾಣೆ ಗೆ ಹೋದಳು ದೂರಲು. ಇಬ್ಬರೂ ಸಮ್ಮತಿಯುಕ್ತ ಸಂಭೋಗಕ್ಕೆ ಒಪ್ಪಿಗೆ ನೀಡಿದ್ದರು ಎಂದು ಅಸಾಂಜ್ ಹೇಳಿದರೆ ಈ ಮಹಿಳೆಯರ ದೂರು ಬೇರೆಯೇ. ಸಮ್ಮತಿ ನೀಡಿದ್ದು ಕಾಂಡೋಂ ರಹಿತ ಸೆಕ್ಸ್ ಗಾಗಿ ಅಲ್ಲ ಎಂದು. ಈಗ ಆಗಮನ ಸೆಕ ನಷ್ಟೇ ರೋಮಾಂಚನ ಕೊಡುವ ಸ್ವಿಸ್ ಕಾನೂನಿಗೆ.

ಸುಸ್ವಾಗತ ಸ್ವಿಟ್ಸರ್ಲೆಂಡ್. ಈ ದೇಶದಲ್ಲಿ ಕಾನೂನು ಸ್ವಿಸ್ ವಾಚಿನಷ್ಟೇ ಸಂಕೀರ್ಣ. ಸುಲಭವಾಗಿ ಅರ್ಥವಾಗೋಲ್ಲ. ಇಲ್ಲಿನ ಕಾನೂನಿನಲ್ಲಿ “ಸರ್ಪ್ರೈಸ್ ಸೆಕ್ಸ್” ಎನ್ನುವ ಕಾಯಿದೆ ಇದೆ. ಈ ನಿಯಮದಡಿ ಲೈಂಗಿಕ ಚಟುವಟಿಕೆಯಲ್ಲಿ ನಿರತರಾಗಿದ್ದಾಗ ಮಹಿಳೆ ಸಾಕು ಎಂದರೂ ಕೇಳದೆ ಮುಂದುವರಿದರೆ ಅದು ಅತ್ಯಾಚಾರ. ಸಂಭೋಗ ನಿರತರಾಗಿರುವಾಗಲೇ ಮಹಿಳೆ ಸಮ್ಮತಿಯನ್ನು ಹಿಂದಕ್ಕೆ ಪಡೆಯಬಹುದಂತೆ. ಸಮ್ಮಿಶ್ರ ಸರಕಾರ ಉರುಳಿಸಲು ಪಕ್ಷವೊಂದು ಸರಕಾರಕ್ಕೆ ಬೆಂಬಲ ಹಿಂದಕ್ಕೆ ಪಡೆಯುವ ಹಾಗೆ. ಹಾಗೇನಾದರೂ ಸಮ್ಮತಿಯನ್ನು ಹಿಂದಕ್ಕೆ ಪಡೆದೂ ಗಂಡು ಮುಂದುವರಿದರೆ ಅದು ಅತ್ಯಾಚಾರ. (ಒಂದು ಸಂಶಯ; ಸಂಭೋಗ ನಿರತ ಗಂಡು ಕಿವುಡನಾದರೆ?) ಕಿವುಡನಾದರೆ ಸಂವಿಧಾನಕ್ಕೆ ತರುವ ತಿದ್ದುಪಡಿ ಯಂತೆ ಈ ಹಾಸ್ಯಾಸ್ಪದ ಸ್ವಿಸ್ law (lessness) ಗೂ ತರಬೇಕು ತಿದ್ದು ಪಡಿಯೊಂದ. ಮಹಿಳೆ ಉಪಯೋಗಿಸುವ withdrawal method ಇದು. withdrawal method ಏನು ಎಂದು ವಿವರಿಸಲು ಇದು ಸೆಕ್ಸ್ ಲೇಖನ ಅಲ್ಲ.

ಮೇಲಿನ ಈ ಕಾನೂನಿನ ಅಡಿ ಅಸಾಂಜ್ ನನ್ನು ಕಟಕಟೆಯಲ್ಲಿ ನಿಲ್ಲಿಸುವ, ತದನಂತರ ಜೈಲಿಗೆ ಅಟ್ಟುವ ಪ್ರಯತ್ನ ಸ್ವಿಸ್ ಸರಕಾರದ್ದು.