ವರದಕ್ಷಿಣೆ

ವರದಕ್ಷಿಣೆ ಒಂದು ಸಾಮಾಜಿಕ ಅನಿಷ್ಟ. ಇದು ಅದನ್ನು ಪಡೆಯುವವನಿಗೂ ಗೊತ್ತು. ಆದ್ರೇನು ಮಾಡೋದು ಪುಕ್ಕಟೆ ಸಿಗುವ ಹಣ ಅಲ್ಲವೇ, ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ. ಈ ವಿಷಯದಲ್ಲಿ ಎಲ್ಲಾ ಧರ್ಮೀಯರೂ ಸಮಾನರು. ಇಲ್ಲಿ ಮಾತ್ರ  ಸಮಾನತೆ ವಿಜ್ರಂಭಿಸುತ್ತದೆ. ಗಂಡಿಗೆ ಲಾಭ ಆಗುವ ಸಮಾನತೆ. ಜಮಾತೆ ಇಸ್ಲಾಮಿನವರು ( ಮುಸ್ಲಿಂ ಸಾಮಾಜಿಕ ಸಂಘಟನೆ ) ಒಂದು ಅಭಿಯಾನ ಆರಂಭಿಸಿದರು. ವರದಕ್ಷಿಣೆ ಪುರುಷ ವೇಶ್ಯಾವಾಟಿಕೆಗೆ ಸಮಾನ ಎಂದು. ಎಲ್ಲ ಧರ್ಮಗಳ ಸುಧಾರಕರು ಈ ಅನಿಷ್ಟದ ವಿರುದ್ಧ ಕೂಗೆತ್ತಿದರು. ಫಲ ಅಷ್ಟಕ್ಕಷ್ಟೇ.

 ಸರಿ ಅಷ್ಟೆಲ್ಲಾ ಕೊಟ್ಟು ಮದುವೆಯಾಗುವ ಹೆಣ್ಣಿಗೆ ಸಿಗುವುದು ಏನು? ವಿವಾಹಿತೆ ಅನ್ನೋ ಕಿರೀಟ. ಮದುವೆಯಾದ ಕೂಡಲೇ ತನ್ನ ತಂದೆಯ ಹೆಸರಿನಿಂದ ಗುರುತಿಸಲ್ಪಡುವುದಿಲ್ಲ. ಬದಲಿಗೆ ಇಂಥಹ ಮಹಾತ್ಮನ ಪತ್ನಿ ಎಂದು ಗುರುತಿಸುತ್ತಾರೆ ಜನ. ಅವಳ ವೇಷ ಭೂಷಣಗಳಲ್ಲೂ ಬದಲಾವಣೆ. ಒಂದಿಷ್ಟು ಹೆಚ್ಚುವರಿ ಉಡುಗೆ. ತಾಳಿಯಿಂದ ಹಿಡಿದು ಕಾಳುನ್ಗುರದವರೆಗೆ  ಗಂಡನ ಅಸ್ತಿತ್ವ, ಪಾರುಪತ್ಯ ಸಾರಿ ತೋರಿಸುವ ಕುರುಹುಗಳು. ಈ ತ್ಯಾಗ ಹೆಣ್ಣಿನ ತಂದೆ ಸಾಲ ಸೋಲ ಮಾಡಿಯೋ, ಜೀವನ ಪೂರ್ತಿ ಉಳಿಸಿದ ಹಣ ತೆತ್ತೋ ಕೊಟ್ಟ ಕಪ್ಪ ಕಾಣಿಕೆ. ಅಷ್ಟೇ ಅಲ್ಲ, ವರದಕ್ಷಿಣೆ ಕೊಟ್ಟರಷ್ಟೇ ಸಾಲದು. ನೆರೆದ ನೂರಾರು ಜನರ ಮುಂದೆ ಇವನ ಪಾದಾರವಿನ್ದಗಳನ್ನು ಅತ್ತೆ ಮಾವ ತೊಳೆಯಬೇಕು. ಬೆಳ್ಳಿ ಬಟ್ಟಲಿನಲ್ಲೇ ತೀರ್ಥ ಕುಡಿಸಬೇಕು ಕಪ್ಪ ಕಾಣಿಕೆ ಪಡೆದ ದಣಿದ ದೇಹಕ್ಕೆ. ಬೆಳ್ಳಿ ಲೋಟ ಇಲ್ಲವೊ ಮಾವ ಕೊಟ್ಟ ವರದಕ್ಷಿಣೆಯ ಸ್ಕೂಟರಿನಲ್ಲೇ ಜಾಗ ಖಾಲಿ ಮಾಡುತ್ತಾನೆ.

 ಒಮ್ಮೆ ಇಂಥ ಒಂದು ಸಂತೆಗೆ ಹೋಗುವ ಭಾಗ್ಯ ನನ್ನದು. ಮದುವೆಗೆ ಮುಂಚೆ ನಡೆಯುವ ಚೊಕಾಸಿ ವ್ಯಾಪಾರ ಕಂಡು ಹೇಸಿಗೆ ಆಯಿತು. ಜನ ಯಾವ ಮಟ್ಟಕ್ಕೆ ಇಳಿಯುವರು ಹಣದ ಆಸೆಯಲ್ಲಿ ಎಂದು ಅಚ್ಚರಿ ಪಟ್ಟೆ. ಕೋಲೆ ಬಸವನಂತೆ ಭಾವಿ ಮಾವನೆದುರು ತನ್ನ ತಂದೆ  ಶಾಪಿಂಗ್ ಲಿಸ್ಟ್ ಓದುವುದನ್ನು ಜೊಳ್ಳು  ಸುರಿಸುತ್ತಾ ನೋಡುವ ಗಂಡಿಗೆ ಎಕ್ಕಡ ಸೇವೆ ಮಾಡುವ ಮನಸ್ಸಾದರೂ ಭಯದಿಂದ ಸುಮ್ಮನಾಗುತ್ತೇನೆ. ಈ ಕುದುರೆ ವ್ಯಾಪಾರ ನಮ್ಮ ಮೌಲ್ವಿಗಳ ಎದುರಿನಲ್ಲಿ ನಡೆಯುವುದು  ಮತ್ತೊಂದು ರೀತಿಯ ಅವಮಾನ.

 ಇಸ್ಲಾಮಿನಲ್ಲಿ ವರದಕ್ಷಿಣೆ ಇಲ್ಲ. ಬೂಟಾಟಿಕೆ ಬಹಳಷ್ಟಿದೆ.  ಗಂಡು ವಧು ದಕ್ಷಿಣೆ ಕೊಡಬೇಕು. ಓಕೆ, ವೈ ನಾಟ್? ನೆರೆದವರ  ಮುಂದೆ ಕವಡೆ ಬಿಸಾಕಿ ಹಿಂದಿನ ಬಾಗಿಲಿನಿಂದ ಲಾರಿಗಟ್ಟಲೆ ಸಾಮಾನು, ನಾಗ ನಾಣ್ಯ ಲೂಟಿ. ದುಡ್ಡಿನ ಮುಂದೆ ಆದರ್ಶಗಳು ಆಲಸ್ಯದಿಂದ ಆಕಳಿಸುತ್ತವೆ.   

 ತೀರ ಗತಿಕೆಟ್ಟ ಕುಟುಂಬದವರಿಂದಲೂ   ಹಣ ಬಯಸುವ ಗಂಡು ಅದ್ಹೇಗೆ ತಾನು ಗಂಡು ಎಂದು ಹೆಮ್ಮೆಯಿಂದ ಎದೆಯುಬ್ಬಿಸಿ ನಡೆಯುತ್ತಾನೋ? ದರೋಡೆಕೋರನಿಗೆ ಕರುಣೆ ಎಲ್ಲಿಂದ ಅಲ್ಲವೇ? ಶ್ರೀಮಂತನ ಮನೆಯಾದರೂ ಸರಿ ದರಿದ್ರದವನ ಮನೆಯಾದರೂ ಸರಿ ತನಗೆ ಬೇಕಿದ್ದು ಸಿಗುವಾಗ ತಾರತಮ್ಯವೇಕೆ?   

 ಗಂಡಾಗಿ ಹುಟ್ಟುವುದೇ ಒಂದು ಕ್ವಾಲಿಫಿಕೇಶನ್ ಕೆಲವರಿಗೆ. ಈ ಕ್ವಾಲಿಫಿಕೇಶನ್ ಇಟ್ಟುಕೊಂಡು ಅವನು ಕೊಡುವ ಸರ್ವಿಸ್ ಗೊತ್ತೇ ಇದೆಯಲ್ಲ?

Advertisements

ಚಂಡಿ

israa blog1 (2) 
ಇವಳೇ, ಪಕ್ಕದ ಚಿತ್ರದಲ್ಲಿರುವ ಪೋರಿಯೇ ಚಂಡಿ. ನನ್ನ ಮುದ್ದಿನ ಒಂದು ವರುಷ ೫ ತಿಂಗಳ ಚಂಡೀ. ಗಡಿಯಾರದ “ಸೆಕೆಂಡ್” ಮುಳ್ಳಿನಂತೆ ನಿಲ್ಲದ ಚಟುವಟಿಕೆ, ತುಂಟಾಟಿಕೆ. ಕೆಲವೊಮ್ಮೆ ಅಪಾಯಕಾರಿ ಆಟದಿಂದ ನಮ್ಮನ್ನು ತುದಿಗಾಲಿನಲ್ಲಿ ನಿಲ್ಲಿಸಿ ನಗುತ್ತಾಳೆ.

ಮನೆಗೆ ಜ್ಯೋತಿಯಾಗಿ ಬಂದ ಮಗ. ನಂತರ ಬೆಳದಿಂಗಳಾಗಿ ಬಂದಳು ನನ್ನ ಮಗಳು. ಗಂಡು ಮಕ್ಕಳು ತುಂಟರು, ಹೆಣ್ಣು ಮಕ್ಕಳು ಸ್ವೀಟ್ ಎನ್ನುತ್ತಾರೆ ಹಲವರು. ಆದರೆ ನನ್ನ ಮನೆಯಲ್ಲಿ ಇದು ವಿರುಧ್ಧ.  ಸಹನೆಯ, ತಾಳ್ಮೆಯ ಸಾಕಾರ ನನ್ನ ಮಗ, ಎಲ್ಲಾ ಅವಾಂತರಗಳ ಕರ್ತೃ ನನ್ನ ಪುತ್ರಿ.

 ಇವಳು ಬೆಳಿಗ್ಗೆ ಏಳುವುದೇ ಸೈರನ್ ಮೂಲಕ. ಎದ್ದು ಸೀದಾ ಅಡುಗೆ ಮನೆಗೆ ನಡೆದು ಒಂದಿಷ್ಟು ಪಾತ್ರೆಗಳನ್ನು ನೆಲಕ್ಕೆ ಕೆಡವಿ ತನ್ನ ದಿನ ಈ ರೀತಿ ಎಂದು ಪ್ರಚುರಪಡಿಸುತ್ತಾಳೆ. ತನ್ನ ೬ ವರ್ಷದ ಅಣ್ಣನನ್ನು ಸಾಕಷ್ಟು ಸತಾಯಿಸಿ ಶಾಲೆಗೆ ಕಳಿಸಿಕೊಟ್ಟು ತನ್ನ ಅಮ್ಮನನ್ನು ವಿಚಾರಿಸಿಕೊಳ್ಳುತ್ತಾಳೆ. ಶಾಲೆಯಿಂದ ಮನೆಗೆ ಮರಳಿದ ಹಿಶಾಮನ ಹಿಂದೆಯೇ ಸುತ್ತುತ್ತಾ ಅವನ ರೇಶಿಮೆಯಂಥ ಕೂದಲನ್ನು ಮನಸೋ ಇಚ್ಚೆ ಎಳೆದು ಆನಂದ ಪಡುತ್ತಾಳೆ. ಅವನ ಹೋಂ ವರ್ಕ್ ನ ಹಾಳೆಗಳನ್ನು ಕಸಿದು ಕೊಂಡು ಓಡುವ ಇವಳು ಪರಿಪರಿಯಾಗಿ  ಬೇಡಿದ ನಂತರವೇ ಅವನಿಗೆ ಹಿಂದಿರುಗಿಸುವುದು.

ಒಂದು ದಿನ ಶಾಲೆಯಿಂದ ಮರಳಿದ ನನ್ನ ಮಗ ಬಟ್ಟೆ ಬದಲಿಸಿ ಕಪಾಟಿನ ಮುಂದೆ ನಗ್ನನಾಗಿ ನಿಂತು ಬಟ್ಟೆ ಆರಿಸುತ್ತಿದ್ದ. ಯಾವುದೋ ಕಿತಾಪತಿ ಮುಗಿಸಿ ಹಾದು ಹೋಗುತ್ತಿದ್ದ ಚಂಡಿಯ ಕಣ್ಣಿಗೆ ಬಿತ್ತು ತನ್ನ ಅಣ್ಣನ ಪ್ರುಷ್ಟಗಳು. ಹಸಿದ ಹುಲಿಯಂತೆ ಎರಗಿದ ಅವಳು ಚೆನ್ನಾಗಿ ಕಚ್ಚಿದಳು ಅವನ ಪಿರ್ರೆಗಳನ್ನು. ಅರಚಾಟ ಕೇಳಿ ಬಂದು ನೋಡಿದರೆ ಮೂರು ಹಲ್ಲುಗಳು, ಅವನ ಕುಂಡಿಗಳ ಮೇಲೆ.

ಊಟಕ್ಕೆ ಕೂತಾಗ ನನ್ನ ಮಡಿಲೇರುವ ಇವಳು ಡೈನಿಂಗ್ ಟೇಬಲ್ ಉಲ್ಟಾ ಮಾಡಿಯೇ ಏಳುವುದು. ಊಟ ಮುಗಿಸಿ ಸೋಫಾ ದ ಮೇಲೆ ಆಸೀನನಾದ ಕೂಡಲೇ ನನ್ನ ಓದುವ ಚಟ ಅರಿತ ಅವಳು ಒಂದು ಪುಸ್ತಕವನ್ನು ತಂದು ನನ್ನ ಕೈಗಿಟ್ಟು ಪುಸ್ತಕ ತೆರೆಯುವ ಮೊದಲೇ ನನ್ನ ಕೈಯಿಂದ ಕಸಿದು ಬಿಸುಡುತ್ತಾಳೆ. ಇದು ತನ್ನ ಕಡೆ ಗಮನ ನೀಡುವಂತೆ ಹೇಳುವ ಭಾಷೆ ಅವಳದು. 

ಇವಳಿಗೆ ನನ್ನ ಮೊಬೈಲ್ ಮತ್ತು ಲ್ಯಾಪ್ ಟಾಪ್ ತುಂಬಾ ಇಷ್ಟ. ತೆರೆದ ಲ್ಯಾಪ್ಟಾಪ್ ಅನ್ನು ಮುಚ್ಚುವುದು, ಇಲ್ಲ ತೆರೆದು ಕಯ್ಗಳಿಂದ  ಪಟಪಟ ಬಡಿದು ಏನ್ ಮಾಡ್ಕೊಳ್ತೀಯ ಎಂದು ನನ್ನತ್ತ ನೋಡುವುದು ಅವಳ ಫೇವರೆಟ್ ಪಾಸ್ ಟೈಮ್. ನಮ್ಮನ್ನು ಸಾಕಷ್ಟು ಗೋಳು ಹೊಯ್ದುಕೊಂಡ ಮೇಲೆ ಹಿಡಿದಿಟ್ಟ ನಗುವಿನ ಮಂದಹಾಸ ನಮ್ಮನ್ನು ಸಂಪೂರ್ಣ ಶರಣಾಗುವಂತೆ ಮಾಡುತ್ತದೆ.   israa blog1

ಎಲ್ಲಾದರೂ ಒಂದು ಕ್ಷಣ ಅವಳ ಸುಳಿವಿಲ್ಲದೆ ಮನೆಯಲ್ಲಿ ಶಾಂತಿ ನೆಲೆಸಿದ್ದರೆ ಅದರರ್ಥ ಏನೋ ನಡೆಯುತ್ತಿದೆ ಎಂದು. calm before  storm ಅನ್ನುತ್ತಾರಲ್ಲ ಹಾಗೆ. ಒಂದು ದಿನ ನಡೆದಿದ್ದು ಹೀಗೆ. ಎಲ್ಲಿದ್ದಾಳೆ ಎಂದು ನೋಡುವಾಗ ನನ್ನ ಲ್ಯಾಪ್ ಟಾಪ್ ಅನ್ನು ಸದ್ದಿಲ್ಲದೆ ಸೋಫಾದ ಮೇಲಿನಿಂದ ಎಳೆಯುತ್ತಿದ್ದಳು. ಹೇ ಎಂದು ಹತ್ತಿರ ಹೋಗುವುದಕ್ಕೂ ಧಪ್ ಎಂದು ಲ್ಯಾಪ್ ಟಾಪ್ ಬೀಳುವುದಕ್ಕೂ ಸರಿಹೋಯಿತು. ನನ್ನ ಕಯ್ಯಿಂದ ತಪ್ಪಿಸಿಕೊಂಡು ಓಡಿ ಬುಕ್ ಶೆಲ್ಫ್ ನಿಂದ ಪುಸ್ತಕಗಳನ್ನು ಕೆಡವಿ ಅಲ್ಲಿಂದಲೂ ಪರಾರಿ. ಒಂದು ರೀತಿಯ ಪಾದರಸ.  ಹೊಸ ಲ್ಯಾಪ್ ಟಾಪ್. ಕೊಂಡು ೨ ತಿಂಗಳಾಗಿತ್ತಷ್ಟೆ. ಎರಡೂ ಕೊನೆಯಲ್ಲಿ ಕ್ರಾಕ್ ಆಯಿತು. ಇದನ್ನು ನೋಡಿದ ನನ್ನ ಮಗ ಬಹಳ ಆಸೆಯಿಂದ ಕಾತುರತೆಯಿಂದ ಕಾದ ತಂಗೆಮ್ಮನಿಗೆ ಒಂದೆರಡು ಬೀಳಬಹುದು ಎಂದು. ನಿರಾಶೆ ಕಾದಿತ್ತು ಅವನಿಗೆ ಪಾಪ.  

ಮಕ್ಕಳಿಗೆ ಈ ರೀತಿಯ ಎನರ್ಜಿ ಎಲ್ಲಿಂದ ಬರುತ್ತದೋ ಏನೋ.

ಮನೆಯ ಬಾಗಿಲ ಹತ್ತಿರ ಶೂ ಸ್ಟ್ಯಾಂಡ್ ಬೇಡ ಎಂದು ಬದಲಿಗೆ ಒಂದೆರಡು ಖಾಲಿ ಪಿಂಗಾಣಿ ಹೂದಾನಿಗಳನ್ನು ಇಟ್ಟಿದ್ದೆ. ಸ್ವಲ್ಪ ದಿನ ಅದರ ಕಡೆ ಗಮನ ಬೀಳಲಿಲ್ಲ ಚೂಟಿಯದು. ಒಂದು ದಿನ ಎಲ್ಲಿ ನನ್ನ ಶೂ ಕಾಣ್ತಾ ಇಲ್ವಲ್ಲ ಎಂದು ಹುಡುಕುತ್ತಾ ನೋಡಿದರೆ pot ಒಳಗೆ ಹಾಕಿದ್ದಾಳೆ. ಸರಿ ಈ ಪ್ರಯೋಗದ ನಂತರ ಚಟ ಹತ್ತಿತು ಕೈಗೆ ಸಿಕ್ಕಿದ್ದನೆಲ್ಲಾ ಅದರಲ್ಲಿ ತುರುಕುವುದು. ಈಗ ಏನಾದರೂ ಕಾಣೆಯಾದರೆ ಮೊದಲು ನಾವು ನೋಡುವುದು ಈ “ಕುಂಡ” ದೊಳಕ್ಕೆ. ಅಪ್ಪ ಅಮ್ಮ ಹೂವು ಹಾಕಿದ್ದೆ ಇದ್ದರೇನಂತೆ ನಾನು ಹಾಕುವೆ ನನ್ನ ಲೂಟಿ ಮಾಡಿದ ವಸ್ತುಗಳನ್ನು ಎಂದು ಮಗಳ ತೀರ್ಮಾನ. 

ಹಿಂದೆಲ್ಲೋ ಓದಿದ ಸಾಲುಗಳ ನೆನಪು.

ತೃಣಮಪಿ ನ ಚಲತಿ
ನಿನ್ನ ವಿನಾ, ನಿನ್ನ ವಿನಾ…
ಹೌದು ನನ್ನ ಮಗಳ ಮಟ್ಟಿಗೆ ಇದು ನಿಜ.

ಬುರ್ಖಾ ಹೆಣ್ತನಕ್ಕೆ ಅಪಮಾನ

hijab protest
ಬುರ್ಖಾ ಧಾರ್ಮಿಕ ತೊಡುಗೆ ಅಲ್ಲ ಬದಲಿಗೆ ಅದೊಂದು ಗುಲಾಮಗಿರಿಯ ಸಂಕೇತ ಎಂದು ಕರೆದು ಫ್ರೆಂಚ್ ಅಧ್ಯಕ್ಷ ನಿಕೊಲಸ್ ಸರ್ಕೊಜಿ ಹೊಸ ವಿವಾದಕ್ಕೆ ನಾಂದಿ ಹಾಡಿದರು.

ಈ ಅಧ್ಯಕ್ಷ ಮದುವೆಯಾಗದೆ ತನ್ನೊಂದಿಗೆ ಒಬ್ಬ ಹಾಡುಗಾರ್ತಿಯನ್ನು (ಮಾಡೆಲ್ ಸಹ ಹೌದು) ಇಟ್ಟುಕೊಂಡು ವಿಶ್ವವೆಲ್ಲಾ ಸುತ್ತಾಡಿದ. ಅನೈತಿಕ ಸಂಬಂಧ ಹೊಂದಿದ್ದ ಈ ಪ್ರಜೆಗಳಿಂದ ಆಯ್ಕೆಯಾದ ಅಧ್ಯಕ್ಷನಿಗೆ ಮುಸ್ಲಿಮರಾರೂ ಹೀಗಳೆಯಲಿಲ್ಲ. ಇವರ ಸಂಸ್ಕೃತಿಯೇ ಸ್ವೇಚ್ಚಾಚಾರದ್ದು, ನಮಗೇಕೆ ಅದರ ಅದರ ಉಸಾಬರಿ ಎಂದು ಮುಸ್ಲಿಮರು ಸುಮ್ಮನಿದ್ದರು.

ಇಂಥದ್ದೇ ಮತ್ತೊಬ್ಬ ನಾಯಕ ಇಟಲಿಗೆ. ಸಿಲ್ವಿಯೋ ಬೆರ್ಲಸ್ಕೊನಿ ಪ್ರಧಾನಿಯಾದರೂ ತನ್ನ ಸ್ತ್ರೀ ಲೋಲುಪತೆಯನ್ನು ಬಿಡಲಿಲ್ಲ. ಆಗರ್ಭ ಶ್ರೀಮಂತ ಬೇರೆ. ಹೆಣ್ಣುಗಳಿಗೆ ಬರವೇ? ೭೨ ರ ಈತನಿಗೆ ೧೯ರ ಪೋರಿ ಸಂಗಾತಿ. ಮೊನ್ನೆ ಮತ್ತೊಂದು ಹಗರಣ. ಶ್ರೀಮಂತ ಕರೆವೆಣ್ಣನ್ನು ತನ್ನ ಬಂಗಲೆಗೆ ಕರೆಸಿ ” wait for me in the big bed ” ಎಂದು ಸಂದೇಶ ಕಳಿಸಿದ. ಇವಾವುದೂ ಅವರಿಗೆ ದೊಡ್ಡದಲ್ಲ. ಓರ್ವ ಹೆಣ್ಣು ತನ್ನ ಇಷ್ಟದ ಪ್ರಕಾರ ಉಡುಗೆ ತೊಟ್ಟರೆ, ಮಾನವಾಗಿರಲು ಇಚ್ಚಿಸಿದರೆ ಬಂತು ತಕರಾರು. ಹೆಣ್ಣಿನ ಶೋಷಣೆ ಅಂತ ಪುಕಾರು.
     
ಮುಸ್ಲಿಮರು ಇತರರ ವಸ್ತ್ರ ಶೈಲಿಯನ್ನು ಟೀಕಿಸುವುದಿಲ್ಲ, ಬಿಕಿನಿ ಆದರೂ ಹಾಕಲಿ, ನಗ್ನಾರಾಗಿಯಾದರೂ ಹೋಗಲಿ, ಅದು ನಮಗೆ ಸಂಬಂಧಿಸಿದ್ದಲ್ಲ. ಆಧುನಿಕತೆಯ ಹೆಸರಿನಲ್ಲಿ, ಸೌಂದರ್ಯ ಸ್ಪರ್ದೆಯ ಹೆಸರಿನಲ್ಲಿ ನಗ್ನತೆಯನ್ನು ಕೊಂಡಾಡುವ ಸಂಸ್ಕೃತಿಗೆ ಇಸ್ಲಾಮಿನ ಮನ್ನಣೆ ಇಲ್ಲ. ಬಾಹ್ಯ ಸೌಂದರ್ಯಕ್ಕಿಂತ ಅಂತರಂಗದ ಸೌಂದರ್ಯಕ್ಕೆ ಗೌರವ ಸಲ್ಲಿಸುವ ಧರ್ಮಕ್ಕೆ ಸ್ತ್ರೀ ಲೋಲುಪ ನಾಯಕರುಗಳ ಶಿಫಾರಸು ಬೇಡ, ಅದರ ಅಗತ್ಯವೂ ಇಲ್ಲ.

ತಲೆ ಕೂದಲು ನೆರೆತರೆ…

ತಲೆ ಕೂದಲು ನೆರೆತರೆ ಫಾರ್ಮಸಿಗೆ ಓಡ ಬೇಡಿ hair dye ಕೊಳ್ಳಲು. ನೆರೆ, ಕ್ಯಾನ್ಸರ್ ವಿರುದ್ಧ ಕವಚವಂತೆ. ಜಪಾನೀ ಸಂಶೋಧಕರ ಶೋಧನೆ. ಇಲಿಗಳ ಮೇಲೆ ನಡೆಸಿದ ಪ್ರಯೋಗದಿಂದ ಈ ಸುಳಿವು ಸಿಕ್ಕಿದ್ದು.

ಮುಂದಿನ ಗುರಿ ಚರ್ಮ ಸುಕ್ಕುಗಟ್ಟಿದರೆ ಅದ್ಯಾವ ರೋಗಕ್ಕೆ ಕವಚ ಎಂಬುದು. ಹೊಸ ಹೊಸ ಪ್ರಯೋಗಗಳು, ನವನವೀನ ಶೋಧನೆಗಳು. ರೋಗಗಳಿಗಂತೂ ಬರವಿಲ್ಲ. swine flu, H1N1, mad cow disease, rift valley fever ಇತ್ಯಾದಿ ಇತ್ಯಾದಿ.

ಯಾರು ಕದ್ದರು ನನ್ನ ಮತವ?

ಯಾರು ಕದ್ದರು ನನ್ನ ಮತವ? where is my vote, dude? ಇದು ತೆಹೆರಾನಿನ ಮತ್ತು ಇರಾನಿನ ಬೀದಿಗಳಲ್ಲಿ ಕೇಳಿ ಬರುತ್ತಿರುವ ಪ್ರಶ್ನೆ. ಈ ಪ್ರಶ್ನೆಗಳಿಗೆ ಉತ್ತರ ಇರಾನಿನ ಧರ್ಮ ಗುರುಗಳ ಮುಂಡಾಸಿನಲ್ಲಿ ಬೆಚ್ಚಗೆ ಅಡಗಿ ಕೂತಿದೆ. ಈಗಿನ ಅಧ್ಯಕ್ಷ ಅಹ್ಮದಿ ನಿಜಾದ್ ಚುನಾವಣೆ ಗೆದ್ದೆ ಎಂದರೆ ಪ್ರತಿಪಕ್ಷದ ಮೂಸಾವಿ ಇಲ್ಲ, ಮೋಸ ನಡೆದಿದೆ ಮರು ಎಣಿಕೆ ಆಗಲಿ ಎಂದು ಗರ್ಜಿಸಿದರು. ಅವರ ಗರ್ಜನೆ ಇರಾನಿನ ಆಡಳಿತಗಾರನ್ನು ಹೊರತು ಪಡಿಸಿ ವಿಶ್ವವೆಲ್ಲ ಕೇಳಿತು. ಊಹೂಂ, ನೋ ಚೇಂಜ್ ಇನ್ ಸ್ಟೇಟಸ್. ಯಾವಗಲೂ ತನ್ನ ಮೂಗನ್ನು ತನ್ನ ದೇಶದ ಗಡಿ ಹೊರಗೆ ತೂರಿಸಿ ಕೂರುವ ಅಮೇರಿಕ ಸಹ ಅಂಥ ದೊಡ್ಡ ಹೇಳಿಕೆಯನ್ನೇನೂ ಕೊಡಲಿಲ್ಲ. ಜರ್ಮನಿ, ಇಂಗ್ಲೆಂಡ್, ಫ್ರಾನ್ಸ್ ಮರು ಎಣಿಕೆ ಆಗಲಿ ಎಂದವು. ಗಲಾಟೆ ಜಾಸ್ತಿ ಆಯಿತು. ಕೆಲವರು ಪ್ರಾಣವನ್ನೂ ಕಳೆದುಕೊಂಡರು. ತೆರೆಮರೆಯಲ್ಲಿ ಒಂದಿಷ್ಟು ಮಠಗಳನ್ನು ಎಣಿಸಿದಂತೆ ಮಾಡಿದ ಆಡಳಿತಗಾರರು ಎಲ್ಲ ಫೈನ್, ಇದೆಲ್ಲ ನಮ್ಮ ಶತ್ರುಗಳ ಕೆಲಸ, ಹೆಚ್ಚು ಕಿತಾಪತಿಗಿಳಿಯದೆ ತೆಪ್ಪಗೆ ಇರಿ ಎಂದು ತನ್ನ ಜನರಿಗೆ ಬೋಧಿಸಿದರು.

ಇರಾನ್ ನಮ್ಮ ದೇಶದಂತೆ ಪ್ರಾಚೀನ ರಾಷ್ಟ್ರ. ಜನ ಬಹಳ ಬುಧ್ಧಿವಂತರು. ಸರ್ವಾಧಿಕಾರಿ, ಐಶಾರಾಮಿ ರಾಜ ಷಾ  ಪಹಲವಿಯನ್ನು ಇಸ್ಲಾಮೀ ಕ್ರಾಂತಿ ಮೂಲಕ ಕಿತ್ತೊಗೆದು ಧರ್ಮ ಗುರುಗಳ ಸರಕಾರ ಕೂರಿಸಿದವರು. ಏನೋ ಒಳ್ಳೆ ಕೆಲಸ ಮಾಡಬಹುದು ಎಂದು. ಆದರೆ ಅಮೇರಿಕೆಗೆ ಸದ್ದು ಹೊಡೆಯುವುದೇ ತಮ್ಮ ನೀತಿ ಎಂದು ಭಾವಿಸಿ ಹಲವು ಬಾರಿ ಜಗಳಕ್ಕೆ ನಿಂತರು. ಈಗಿನ ಪ್ರದರ್ಶನ, ಪ್ರತಿಭಟನೆಗಳಲ್ಲಿ ಅಮೆರಿಕೆಯ ಕೈವಾಡ ಅಲ್ಲಗಳೆಯುವಂತಿಲ್ಲ. ಏಕೆಂದರೆ ಅಮೆರಿಕೆಯ ಆಟಗಳನ್ನು ನೋಡಿಲ್ಲವೇ ನಾವು, ಸಾಕಷ್ಟು?

shut up, shut up kiss me

shut up, shut up kiss me.. shut up shut up kiss me na
ಇದು ಈಗಿನ ಹಾಡು. ಹೊಸ ತಲೆಮಾರಿನ ಪ್ರೀತಿಸುವ ಶೈಲಿ. ಎಲ್ಲಾ ಝಟ್, ಫಟ್. ಫಾಸ್ಟ್ ಫುಡ್ ಥರ. ಓಲೈಸುವ ಅಗತ್ಯ ಇಲ್ಲ, ಉಡುಗೊರೆ ಬೇಡವೇ ಬೇಡ.

ನಲ್ಲೆ ಒಂದು ಕೇಳ್ತೀನಿ, ಇಲ್ಲ ಅನ್ನ್ದೇ ಕೊಡ್ತೀಯ, ನಿನ್ನಾ ಪ್ರೀತಿ ಮಾಡ್ತೀನಿ…..

ಈ ಸಾಲುಗಳೆಲ್ಲಾ ಬೇಡ ಈಗ. redundant. ಪ್ರೇಮಿಗಳು ಆಕರ್ಷಿಸಲು ಹಲವು ಮಾರ್ಗಗಳನ್ನು ಅನುಸರಿಸುತ್ತಿದ್ದರು. ಒಳ್ಳೆ ಮಾತುಗಳಿಂದ, ಒಳಗೆ ಎಷ್ಟೇ ಹುಳುಕಿದ್ದರೂ ಒಳ್ಳೆಯ ನಡವಳಿಕೆಯಿಂದ ಗೆಲ್ಲಲು ಶ್ರಮ ಪಡುತ್ತಿದ್ದರು. ಉಡುಗೊರೆ ಕೊಟ್ಟು ಮನದಿಂಗಿತ  ವ್ಯಕ್ತ ಪಡಿಸುತ್ತಿದ್ದರು.

ಈಗ ಅದೆಲ್ಲಾ ಮಾಯಾ. ಎಲ್ಲ spur of the moment ಭಾವನೆಗಳು.

ಲಂಕಾ ದಹನ

twenty20 ವಿಶ್ವಕಪ್ ಸರಣಿಯಲ್ಲಿ ಲಂಕೆಗೆ ಸೋಲು. ಆಡಿದ ಎಲ್ಲ ಪಂದ್ಯಗಳನ್ನೂ ಗೆದ್ದು ಬೀಗುತಿದ್ದ ಲಂಕೆಗೆ ಅಂತಿಮ ಪಂದ್ಯದಲ್ಲಿ ಪಾಕ್ ಪೆಡಂಭೂತ ನುಂಗಿ ಹಾಕಿತು. “ವಾಟರ್ ಲೂ” ಆಗಿ ಪರಿಣಮಿಸಿತು ಲಂಕೆಗೆ Lord’s ಮೈದಾನ. ತನ್ನ ದಾರಿಗೆ ಅಡ್ಡ ನಿಂತ ಒಂದೊಂದೇ ತಂಡಗಳನ್ನು ಮಣಿಸುತ್ತಾ ಬಂದ ಲಂಕಾ ಕಪ್ ತನ್ನದೇ ಎಂದು ಭಾವಿಸಿದ್ದರೆ ತಪ್ಪಿಲ್ಲ. ಆದರೆ ಎಂದಿನಂತೆ ಅನಿಶ್ಚಿತತೆಯೇ ತನ್ನ ಪ್ರಕೃತಿ ಎಂದು ಆಡುವ ಪಾಕಿಸ್ತಾನ ಸರಿಯಾದ ಆಘಾತವನ್ನೇ ಲಂಕೆಗೆ ನೀಡಿತು. ಬೂಂ ಬೂಂ ಎಂದು ವರ್ಣಿಸಲ್ಪಡುವ ಶಾಹಿದ್ ಆಫ್ರಿದಿ ತನ್ನ ನೈಸರ್ಗಿಕ ಆಟಕ್ಕೆ  ಅತ್ಯಂತ ವಿರುದ್ಧವಾಗಿ ಜಾಗರೂಕನಾಗಿ ಆಡಿ ಪಂದ್ಯ ಪಾಕ್ ಕೈ ತಪ್ಪದಂತೆ ನೋಡಿಕೊಂಡಿದ್ದು ವಿಶೇಷ.

ಎಂಟು ವಿಕೆಟುಗಳು, ಎಂಟು ಚೆಂಡುಗಳು ಬಾಕಿ ಇರುವಂತೆ ಪಾಕ್ ವಿಜಯ ಕಹಳೆ ಮೊಳಗಿತು.

ಲಂಕಾ ಆಟಗಾರರ ಮೇಲೆ ಪಾಕ್ ನೆಲದ ಮೇಲೆ ನಡೆದ ಆಕ್ರಮಣದಿಂದ ಪಾಕ್ ಕ್ರಿಕೆಟ್ ತತ್ತರಿಸಿತ್ತು. ಯಾವುದೇ ತಂಡಗಳೂ ಪಾಕಿಗೆ ಹೋಗಲು ತಯಾರಿಲ್ಲ. ಸ್ಥಳೀಯ ಕ್ರಿಕೆಟ್ ಸಹ ಹಲವು ಕಾರಣಗಳಿಗೆ ಸೊರಗಿತ್ತು. ಆಂತರಿಕ ಕ್ಷೋಭೆಗಳಿಂದ ಬಳಲುತ್ತಿದ್ದ ಪಾಕಿಗೆ ಭಯೋತ್ಪಾದಕ ರಾಷ್ಟ್ರ ಎನ್ನುವ ಪಟ್ಟ. ಇಂಥ ಹೆನ್ನೆಲೆಯ ನಡುವೆಯೂ ಪಾಕ್ ಆಟಗಾರರು ಮೋಹಕ ಪ್ರದರ್ಶನ ನೀಡಿ ವಿಶ್ವಕಪ್ ಗೆದ್ದರು. ಈ ಗೆಲುವಿನಿಂದ ಪಾಕಿಸ್ತಾನಕ್ಕೆ ವಿಶ್ವ ಸ್ಥರದಲ್ಲಿ ಒಂದಿಷ್ಟು ಮಾನ. ಪಾಕ್ ಬರೀ ಭಯೋತ್ಪಾದಕರ ಸಂತೆಯಲ್ಲ ಎಂದು ತೋರಬಹುದು ವಿಶ್ವಕ್ಕೆ.

ಸ್ವಾತ್ ಕಣಿವೆಯಲ್ಲಿ ತಾಲಿಬಾನ್ ದ್ರೋಹಿಗಳನ್ನು ಸದೆಬಡಿಯುತ್ತಿರುವ ಪಾಕ್ ಸೈನಿಕರಿಗೆ ಇನ್ನಷ್ಟು ಹುಮ್ಮಸ್ಸು ಬಂದು ಸಂಪೂರ್ಣವಾಗಿ ತಾಲಿಬಾನ್ ಎಂಬ ವಿಷ ಕಳೆಯನ್ನು ಕಿತ್ತು ಹಾಕಲು ಈ ಗೆಲುವು ಸಹಾಯಕವಾಗಬಹುದು. ಹೀಗಾದರೆ ಅದು ಪಾಕಿಗೂ ಒಳ್ಳೆಯದು ನಮಗೂ ಒಳ್ಳೆಯದು.