* ಕಯಾಕಿಂಗ್ ಅಂದರೆ ತೊಗಲ ದೋಣಿ ಯಾತ್ರೆ

ಇದು ಬ್ರಿಟಿಶ್ ತಂಡ ಕಯಾಕಿಂಗ್ ಮಾಡುತ್ತಿರುವ ಚಿತ್ರ. kayak ಅಂದರೆ ತೊಗಲ ದೋಣಿ ಅಥವಾ ಚಕ್ಕಳದ ದೋಣಿ ಅಂತೆ, prof. GV ಅವರ ನಿಘಂಟಿನ ಪ್ರಕಾರ. ಈ ಚಿತ್ರ ಚಿಲಿ ದೇಶದ ಪಟಗೊನಿಯ ಪ್ರದೇಶದ್ದು. ಬೆಟ್ಟ ಗುಡ್ಡಗಳು ತಮ್ಮ ಮೇಲೆ ಮಂಜನ್ನು ಬಳಿದುಕೊಂಡು ಪಡುತ್ತಿರುವ ಸಂತಸ, ಮತ್ತು ಆ ಬೆಟ್ಟಗಳ ತಪ್ಪಲಿನಲ್ಲಿ ಕಯಾಕಿಂಗ್ ನ ಮಜಾ. ಎಂಜಾಯ್ ಮಾಡಿದ್ರಾ?
Advertisements

* ಭಾವೀ ವರರೇ, ಎಚ್ಚರ!

ಮದುವೆ ಆಗಲು ಬಯಸುವ ಭಾವೀ ವರರೇ ಎಚ್ಚರ. ಭಾರತೀಯ ನಾರಿ ಎಚ್ಚೆತ್ತು ಕೊಂಡಿದ್ದಾಳೆ. ಕಳೆದ ಗುರುವಾರ ಬಿಹಾರದ ಸರಾಯಿರಂಜನ್ ಗ್ರಾಮದಲ್ಲಿ ಒಂದು ಮದುವೆ. ಪಾನ ಮತ್ತನಾಗಿ ತನ್ನ ಭಾವೀ ಪತಿ ಮದುವೆ ದಿಬ್ಬಣದೊಂದಿಗೆ ಬಂದವರೊಂದಿಗೆ ಅಶ್ಲೀಲವಾಗಿ ಕುಣಿದ ಎಂದು ವಧು ಅವನನ್ನು ವರಿಸಲು ನಿರಾಕರಿಸಿದಳು. ಬೆಚ್ಚಿ ಬಿದ್ದ ವರ ರವಿ ಕುಮಾರ್ ಚೌಧುರಿ ದಾರಿ ಕಾಣದೆ ಪೋಲೀಸರ ಮೊರೆ ಹೊಕ್ಕ. 

ಜಪ್ಪಯ್ಯ ಅನ್ನಲಿಲ್ಲ ಮದುವೆ ಮಂಟಪಕ್ಕೆ ಆಗಮಿಸಿದ್ದ ಸಾಲಂಕೃತ ವಧು. ವಧುವಿನ ತಂದೆ ತನ್ನ ಮಗಳ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ಸೂಚಿಸಿ ವರ ಗಂಟು ಮೂಟೆ ಕಟ್ಟುವಂತೆ ಮಾಡಿದ. ಪಾಪ ಬಾಸಿಂಗ ಕಟ್ಟಿಕೊಂಡು ಏನೇನೋ ಆಸೆಗಳನ್ನು ಇಟ್ಟುಕೊಂಡು ಹಸೆ ಮಣೆ ಏರಲು ಬಂದಿದ್ದ ರವಿ ಕುಮಾರನಿಗೆ ಕಾಲಿಗೆ ಬುದ್ಧಿ ಹೇಳುವುದೊಂದೇ ಬಾಕಿ ಉಳಿದಿದ್ದು.   

 

ಈ ರೀತಿಯ ಅಪೂರ್ವ ಧೈರ್ಯ ಪ್ರದರ್ಶಿಸಿದ ಮದುಮಗಳು ಇತರರಿಗೂ ಮಾದರಿ ಆಗಬೇಕು. ತನ್ನನ್ನು ವರಿಸುವವನಲ್ಲಿ ಸದ್ಗುಣಗಳನ್ನು ಬಯಸುವುದು ಪ್ರತೀ ವಧುವಿನ ಹಕ್ಕು. ಆ ಹಕ್ಕನ್ನು ಈ ಹೆಣ್ಣುಮಗಳು ಮನೋಹರವಾಗಿ ಚಲಾಯಿಸಿದಳು. ಆಕೆಯ ತೀರ್ಮಾನಕ್ಕೆ ಬೆಂಬಲ ಸೂಚಿಸಿದ ಆಕೆಯ ತಂದೆಯೂ ಅಭಿನಂದನಾರ್ಹ. ಇದೇ ರೀತಿ ವಧುಗಳು ಲಜ್ಜೆ ಬಿಟ್ಟು ಹೆಣ್ಣಿನ ಮನೆಯವರಿಂದ ವರ ದಕ್ಷಿಣೆ ಬಯಸುವ ಗಂಡುಗಳನ್ನೂ ಎಡಗಾಲಿಂದ ಒದ್ದು ಸಮಾಜವನ್ನು ಈ ವರದಕ್ಷಿಣೆ ಎಂಬ ಅನಿಷ್ಟ ಪೀಡೆಯಿಂದ ಬಿಡುಗಡೆಗೊಳಿಸಬೇಕು.  

* “ಒಹ್, ಇದ್ ನಂಬಳ ಪೊಣ್ಣ್”

ನನ್ನ ತಂಗಿಯೊಂದಿಗೆ ಆಕೆಯ ಮಕ್ಕಳನ್ನು ಶಾಲೆಯಿಂದ ಕರೆತರಲು ಹರಟುತ್ತಾ ಹೋದಾಗ ಆಕೆ ಹೇಳಿದ್ದು ಈ ವಿಷಯ. ಮೊನ್ನೆ ಟೀವಿಯಲ್ಲಿ ಸಿನಿ ಅವಾರ್ಡ್ ಸಮಾರಂಭದಲ್ಲಿ ನಟಿ ರೇಖಾ ಉಪಸ್ಥಿತರಿದ್ದರಂತೆ. ತಮಿಳು ನಾಡಿನ ವಿದ್ಯಾ ಬಾಲನ್ ಯಾವುದೋ ಚಿತ್ರಕ್ಕೆ ಪ್ರಶಸ್ತಿ ಪಡೆದಳು. ಪ್ರಶಸ್ತಿ ಪ್ರದಾನ ಮಾಡಲು ಆಕೆಯನ್ನು ಕರೆದಾಗ ವಿದ್ಯಾಳನ್ನು ನೋಡಿದ ರೇಖಾ ಎಲ್ಲರೂ ಕೇಳುವಂತೆ ಉದ್ಗರಿಸಿದ್ದು “ಒಹ್, ಇದ್ ನಂಬಳ ಪೊಣ್ಣ್” ಅಂತ. ಅಂದರೆ ಒಹ್ ಈಕೆ ನಮ್ಮ ಹುಡುಗಿ ಎಂದು. ಈ ಭಾವನೆ ಕನ್ನಡಿಗರನ್ನು ಬಿಟ್ಟು ಎಲ್ಲಾ ರಾಜ್ಯದವರಿಗೂ ಇದೆಯಲ್ಲಾ ಯಾಕೆ ಎಂದು ನನ್ನ ಸೋದರಿ ಮುಗ್ಧಳಾಗಿ ಕೇಳಿದಳು. ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಸುಲಭವಲ್ಲ ಎಂದು ನಾನು ಆಕೆಗೆ ಉತ್ತರಿಸದೆ ಪಿಕ್ ಅಪ್ ಟ್ರಕ್ ಹಿಂದೆ ಮುಗ್ಧವಾಗಿ ಕೂತು ಸವಾರಿ ಮಾಡುತ್ತಿದ್ದ ಒಂಟೆಯನ್ನು ನೋಡುತ್ತಾ  ಡ್ರೈವ್ ಮಾಡುತ್ತಿದ್ದೆ.            

* ಹಳೇ ಸೇತುವೆ.. ಹಳೇ ನೆನಪು, ಹೊಸ ಭರವಸೆ

 

ಹಳೇ ಸೇತುವೆಗೆ ತುಂಬಿತು ನೂರು. ನೂರು ಎಂದರೆ ಸೇತುವೆಗೆ ನೂರು ವರ್ಷ ತುಂಬಿತು ಎಂದಲ್ಲ. ನಾನು ಆರಂಭಿಸಿದ “ಹಳೇ ಸೇತುವೆ” ಹೆಸರಿನ ಬ್ಲಾಗ್ ಗೆ ೧೦೦ ಪೋಸ್ಟ್ಗಳು ತುಂಬಿ ಕೊಂಡವು.  

 ಈ ಬ್ಲಾಗ್ ಆರಂಭಿಸುವಾಗ ನನಗನ್ನಿಸಿರಲಿಲ್ಲ ಇಷ್ಟು ದೂರ ಬರುವೆ ಎಂದು ಏಕೆಂದರೆ ನಾನು ನುರಿತ ಬರಹಗಾರನೇನೂ ಅಲ್ಲ. ಪತ್ರಿಕೋದ್ಯಮದ ವಿದ್ಯಾರ್ಥಿಯೂ ಅಲ್ಲ, ಬರಹಗಾರರ ಗೆಳೆತನವೂ ಇಲ್ಲ. ಒಂದೆರಡು ಆನ್ ಲೈನ್ ಪತ್ರಿಕೆಗಳಲ್ಲಿ ಅಭಿಪ್ರಾಯ ಬರೆದು ಬರೆಯುವ ಧೈರ್ಯ ನನಗೆ ನಾನೇ ತಂದುಕೊಂಡೆ.   

ಬ್ಲಾಗ್ ಆರಂಭಿಸುವ ಬಗ್ಗೆ ಕೆಲವು ಲೇಖನಗಳನ್ನು ಓದಿದ ನಂತರ ನನಗೂ ನನ್ನದೇ ಆದ ಒಂದು ಬ್ಲಾಗ್ ಆರಂಭಿಸಿಕೊಳ್ಳುವ ಆಸಕ್ತಿ ಮೂಡಿತು. ಅದರಲ್ಲೂ ಪುಕ್ಕಟೆಯಾಗಿ ಬ್ಲಾಗ್ ರಚಿಸಿಕೊಳ್ಳಬಹುದು ಎಂದ ಮೇಲಂತೂ ಕೇಳಬೇಕೆ? ಪುಕ್ಕಟೆ ಸಿಕ್ಕರೆ ಯಾರಿಗೆ ಬೇಡ? ನಾನು ಹೈಸ್ಕೂಲಿನಲ್ಲಿದ್ದಾಗ ಕನ್ನಡ ಪಂಡಿತರೊಬ್ಬರು ಹೇಳಿದ್ದು ನೆನಪಿಗೆ ಬಂತು. ಪುಕ್ಕಟೆ ಯಾಗಿ ಹೆಣ್ಣು ಸಿಕ್ಕರೆ ನನಗೊಂದು,ನಮ್ಮಪ್ಪನಿಗೊಂದು, ನಮ್ಮಜ್ಜನಿಗೊಂದಂತೆ. ಅದೇ ಸಮಯ ಅದಕ್ಕೆ ಒಂದಿಷ್ಟು ಕಾಸು ತಗಲುತ್ತದೆ ಅಂದಾಕ್ಷಣ ನನಗಿನ್ನೂ ಎಳೇ ಪ್ರಾಯ, ನಮ್ಮಪ್ಪನಿಗೊಂದು ಹೆಣ್ಣೀಗಾಗಲೇ ಇದೆ, ನಮ್ಮಜ್ಜನಿಗೆ ವಯಸ್ಸಾಯಿತು ಎಂದು ಜಾರಿಕೊಳ್ಳುತ್ತಾರಂತೆ.     

ಬ್ಲಾಗ್ ಗೆ ಹಳೇ ಸೇತುವೆ ಎಂದು ಹೆಸರಿಟ್ಟಾಗ ನನ್ನ ಸೋದರಿಯರು ಕೇಳಿದರು ಯಾಕೀ ಹೆಸರೆಂದು. ಈ ಸೇತುವೆ ತೋರಿಸಿ ಹೊಳೆಯಿಂದಾಚೆಯಿಂದ ಸೈತಾನ್ ಬರುತ್ತಾನೆ ಎಂದು ನನ್ನ ಚಿಕ್ಕಮ್ಮಂದಿರು ನಾನು ಚಿಕ್ಕವನಿದ್ದಾಗ ಹೆದರಿಸುತ್ತಿದ್ದರು. ಈ ಸೇತುವೆ ದಾಟಿ ಕೊಂಡೇ ನನ್ನ ಆಪ್ತ ಮಿತ್ರರನ್ನು ಭೆಟ್ಟಿಯಾಗಲು ನಾನು ಹೋಗುತ್ತಿದ್ದದ್ದು. ನನ್ನ ಪ್ರೀತಿಯ ತಮ್ಮ ಆಕಸ್ಮಿಕವಾಗಿ ನದಿಯಲ್ಲಿ ಜಾರಿ ಬಿದ್ದು ನಿಧನ ಹೊಡಿದ ನಂತರ ಅವನ ಅಂತಿಮ ಯಾತ್ರೆ ಸಹಾ ಇದೇ ಸೇತುವೆ ಮೇಲೇ ಹಾದು ಹೋಗಿದ್ದು. ಹಾಗಾಗಿ ಈ ಸೇತುವೆ ನನ್ನನ್ನು ಭಾವುಕನನ್ನಾಗಿ ಮಾಡುತ್ತದೆ. ಹಳೇ ನೆನಪುಗಳನ್ನು ನನಗೆ ತಲುಪಿಸುತ್ತದೆ. ಈ ಕಾರಣಗಳಿಗಾಗಿ ಹಳೇ ಸೇತುವೆ ಹಸರು ಆಪ್ತವಾಗಿ, ಪ್ರಸಕ್ತವಾಗಿ ಕಂಡಿತು.  

ಕನ್ನಡ ನಾಡಿನಿಂದ ಹೆಚ್ಚು ಕಡಿಮೆ ಇಪ್ಪತ್ತು ವರ್ಷ ಹೊರಗಿದ್ದುದರಿಂದ ನಾಡಿನೊಂದಿಗೆ ಮಾತ್ರವಲ್ಲ ನುಡಿಯೊಂದಿಗೂ ನಂಟು ಬಿಟ್ಟು ಹೋಗಿತ್ತು. ಆದರೆ ಮಾತೃ ಭಾಷೆ ನೀವೆಲ್ಲೇ ಇದ್ದರೂ ನಿಮ್ಮ ಬೆನ್ನು ಬಿಡದು. ಮಾತೃ ಭಾಷೆಯ ಮೋಡಿ ಇಲ್ಲಿದೆ ನೋಡಿ. ವ್ಯಕ್ತಿ ಏನೆಲ್ಲವನ್ನು ಕಳೆದುಕೊಂಡರೂ ಅವನ ಅಂತರಂಗದ ಭಾಷೆ ಅವನ ಉಸಿರಿನಂತೆ ಅವನೊಂದಿಗೆ ಇರುತ್ತದೆ. ಕೆಲವರು ಡ್ರಾಮ ಮಾಡಬಹುದು ದೇಶದ ಹೊರಗೆ ಇರುವುದರಿಂದ ಭಾಷೆ ಮರೆತು ಹೋಯಿತು ಎಂದು. ಅದು ಶುದ್ಧ, ಸೋಗಲಾಡಿತನ.  ನಾವು ಮನೆಯಲ್ಲಿ ಬೇರೆ ಭಾಷೆ ಮಾತನಾಡಿದರೂ ನನ್ನ ಮನದ, ಮೆಚ್ಚಿನ ನುಡಿ ಕನ್ನಡ. ಭೂಮಿ ತಾಯಿ ಇರುವಾ ತನಕ ನಗುತಾ ಇರಲಿ ಕನ್ನಡ ಎಂದಂತೆ ನನ್ನ ಮನದಲ್ಲಿ ಕನ್ನಡಕ್ಕೆ ವಿಶೇಷ ಸ್ಥಾನ ಎಂದಿಗೂ ಇರುತ್ತದೆ.  

ಮನುಷ್ಯ ಸಂಬಂಧಗಳ ಥರ ಶಿಥಿಲವಾಗುತ್ತಿರುವ, ಸುಣ್ಣದ ಕಲ್ಲಿನಿಂದ ಕಟ್ಟಿದ, ಭದ್ರೆಯ ಆಪ್ತ ಮಿತ್ರ ಹಳೇ ಸೇತುವೆ ಜಾಗದಲ್ಲಿ ಮತ್ತೊಂದು ಸೇತುವೆ ಬಂದರೂ ಅಂತರ್ಜಾಲದಲ್ಲಿ ಹಳೇ ಸೇತುವೆ ಹೆಸರು ಖಾಯಮ್ಮಾಗಿ ಉಳಿಯುವಂತೆ ನನ್ನ ಬ್ಲಾಗ್ ಸಹಾಯ ಮಾಡಬಲ್ಲುದು ಎಂದು ನನ್ನ ನಂಬಿಕೆ.

ನನ್ನ ಬರವಣಿಗೆಯ ನಿಟ್ಟಿನಲ್ಲಿ ಸಂಪದದಿಂದ ಸಿಕ್ಕ ಸಹಾಯಕ್ಕೆ ನಾನೆಂದೂ ಋಣಿ. ಅದೇ ರೀತಿ google transliteration ಬಳಸುವ ನನಗೆ ಗೂಗಲ್ ನ ಈ ಸೌಲಭ್ಯ ಬಹಳ ಸಹಾಯಕವಾಯಿತು.

ಚಿತ್ರ ಕೃಪೆ:

* ವಿಷ ಕನ್ಯೆ

ಹಳೆ ಕಾಲದಲ್ಲಿ ರಾಜರು ಭವಿಷ್ಯದಲ್ಲಿ ವಿಧವೆಯರಾಗಬಹುದಾದ ಹುಡುಗಿಯರನ್ನು ತಂದು ವಿಷ ತಿನ್ನಿಸಿ ಅವರನ್ನು ವಿಷ ಕನ್ಯೆಯರನ್ನಾಗಿ ಪರಿವರ್ತಿಸುತ್ತಿದ್ದರಂತೆ. ಅಂತಹ ಕನ್ಯೆಯರನ್ನು ತಮ್ಮ ಶತ್ರುಗಳಿಗೆ ಕಳಿಸಿ ವಿಷ ಕನ್ಯೆಯೊಂದಿಗೆ ಪ್ರೇಮಾಂಕುರವಾಗುವಂತೆ ಮಾಡಿ, ರಾಸಲೀಲೆ ನಡೆಸಿದ ಶತ್ರು ಸಾವನ್ನಪ್ಪುವಂತೆ ಮಾಡುತ್ತಿದ್ದರಂತೆ. ಚಕ್ರವರ್ತಿ ಅಲೆಗ್ಸಾಂಡರ್ ಸಹಾ ಇದೇ ರೀತಿ ಸತ್ತ ಎಂದು ಓದಿದ ನೆನಪು. ನಮ್ಮ ಕಲಿಯುಗದ ವಿಷ ಕನ್ಯೆ ಬಗ್ಗೆ ಸ್ವಲ್ಪ ಓದೋಣ. ಇಂಗ್ಲೆಂಡಿನ ಭಾರತೀಯ ಮೂಲದ ಮಹಿಳೆ ತನ್ನ ಪ್ರಿಯಕರನನ್ನು ಕೊಂದಳು, ಸಾರಿನಲ್ಲಿ (curry) ವಿಷ ಬೆರೆಸಿ. ತನ್ನ ಪ್ರಿಯಕರ ತನಗಿಂತಲೂ ಚಿಕ್ಕ ವಯಸ್ಸಿನ ಹುಡುಗಿಯನ್ನು ಮದುವೆ ಮಾಡಿಕೊಳ್ಳುವುದನ್ನು ಸಹಿಸದೆ ಆಕೆ ಈ ಕೃತ್ಯವನ್ನು ಎಸಗಿದಳು. ವಿಷ ದ ಸಾರನ್ನು ಸೇವಿಸಿದ ಪ್ರಿಯಕರ ಮತ್ತು ಆತನ ನವ ಪ್ರೇಯಸಿ ಆಸ್ಪತ್ರೆಗೆ ದಾಖಲಾದರೂ ಪ್ರಿಯಕರ ಸಾವನ್ನಪ್ಪಿದ. ಪ್ರಕರಣ ನ್ಯಾಲಯಕ್ಕೆ ಬಂದು ಆಕೆಗೆ ೨೩ ವರ್ಷಗಳ ಕಾರಾರಹ ವಾಸ ದಯಪಾಲಿಸಿದ ನ್ಯಾಯಾಧೀಶ. ತನ್ನ ತೀರ್ಪಿನಲ್ಲಿ ” “You were not just a spurned lover, you did not simply explode in anger at your rejection. You set about a cold and calculating revenge.” ನ್ಯಾಯಾಧೀಶ ನುಡಿದ.
ಆಕ್ರೋಶದಲ್ಲಿ ಮನುಷ್ಯ ಕುರುಡನಾದಾಗ ಮತ್ತು ಆಕ್ರೋಶದೊಂದಿಗೆ ಮತ್ಸರವೂ ಸೇರಿಕೊಂಡಾಗ ಫಲ ವಿಷದಷ್ಟೇ deadly combination.
   

* “ಪಿಂಕ್ ಟ್ರಕ್ಕು”

ಪಿಂಕ್ ಎಂದ ಕೂಡಲೇ ಮನದಲ್ಲಿ ಭಯ ಆವರಿಸುತ್ತೆ ಅಲ್ಲವೇ? ಪಿಂಕ್ ಬಣ್ಣ valentine   ದಿನದೊಂದಿಗೆ ಗುರುತಿಸಿಕೊಂಡು ಪ್ರೇಮಿಗಳ ಪಾಲಿಗೆ ದಿಗಿಲು ಹುಟ್ಟಿಸುವ ದಿನವಾಗಿ ಪರಿಣಮಿಸಿದೆ. ಕಳೆದ ವರ್ಷ ಪ್ರೇಮಿಗಳ ದಿನ ಆಚರಿಸುವವರನ್ನು ಹಿಡಿದು ಮಂಗಳ ಸೂತ್ರ ಕಟ್ಟಿಸಲು ಮುನ್ನುಗ್ಗುತ್ತಿದ್ದಾಗ ಬೆಂಗಳೂರಿನ ತರುಣಿಯೊಬ್ಬಳು ಪ್ರೇಮಿಗಳ ದಿನವನ್ನು ಪ್ರತಿಭಟಿಸಿದ ವ್ಯಕ್ತಿಯೊಬ್ಬನಿಗೆ ಪಿಂಕ್ ಚಡ್ಡಿಗಳನ್ನು ಕಳಿಸುವಂತೆ ಮನವಿ ಮಾಡಿಕೊಂಡಾಗ ಪ್ರವಾಹೋಪಾದಿಯಲ್ಲಿ ಹರಿದು ಬಂದವು ಹುಬ್ಬಳ್ಳಿಗೆ ಪಿಂಕ್ ಚಡ್ಡಿಗಳು. 
 
ಇಂದು ಮಧ್ಯಾಹ್ನ ಊಟಕ್ಕೆಂದು ಮನೆಗೆ ಹೊರಟಾಗ ದಾರಿ ಬದಿಯಲ್ಲಿ ಬಹರೇನ್ ದೇಶದಿಂದ ಬಂದ ನಾಲ್ಕೈದು ಪಿಂಕ್ ಟ್ರಕ್ಕುಗಳು ನಿಂತಿದ್ದವು. ಅವುಗಳನ್ನು ನೋಡಿ ಕಳೆದ ವರ್ಷದ ಘಟನೆಗಳು ನೆನಪಿಗೆ ಬಂದವು. ಇನ್ನು ಕೆಲವೇ ದಿನಗಳಲ್ಲಿ “ಪ್ರೇಮಿಗಳ ದಿನ” ಆಗಮಿಸಲಿದ್ದು ಈ ಸಲ ಅದ್ಯಾವ ವರಸೆ ಕಾಣಲಿಕ್ಕೆ ಇದೆಯೋ  ಆ “ಕಾಮದೇವ” ನೇ ಬಲ್ಲ.   

“ಮಾತೃ ದೆವ್ವೋ ಭವ”

ಮಾತೃ ದೇವೋಭವ ಎಂದು ತಾಯಿಯನ್ನು ಪೂಜಿಸಿ ಗೌರವಿಸು ಎಂದು ಹಿಂದೂ ಸಂಸ್ಕೃತಿ ಉತ್ತೇಜಿಸಿದರೆ, ಮಾತೆಯ ಕಾಲಿನಡಿಯಲ್ಲಿ ಸ್ವರ್ಗವಿದೆ, ಆಕೆಯನ್ನು ಸರಿಯಾಗಿ ನಡೆಸಿಕೊ ಎನ್ನುವ ಇಸ್ಲಾಂ ಧರ್ಮದ ನುಡಿ. ತಾಯಿ ತನಗೆ ಬೆಂಬಿಡದೆ ಒಂದೇ ಸಮನೆ ಫೋನ್ ಮಾಡುತ್ತಿರುತ್ತಾಳೆ ಎಂದು ಪುತ್ರ ಮಹಾಶಯ ನ್ಯಾಯಾಲಯದ ಕಟ್ಟೆ ಹತ್ತಿದ. ಆಸ್ಟ್ರಿಯಾದ ೭೩ ವರ್ಷದ ಈ ವೃದ್ಧ ಮಾತೆ ದಿನಕ್ಕೆ ೪೯ ಸಲ ಫೋನ್ ಮಾಡಿ ಪೀಡಿಸುತ್ತಿದ್ದಳಂತೆ ಒಂಭತ್ತು ತಿಂಗಳು ಹೊತ್ತೂ, ಹೆತ್ತೂ ಸಾಕಿದ ಮಗನನ್ನು. ನ್ಯಾಯಾಲಯ ಆಕೆಯಿಂದ ವಿವರಣೆ ಕೇಳಿದಾಗ ಆಕೆ ಹೇಳಿದ್ದು, ನನಗೆ ಅವನೊಂದಿಗೆ ಮಾತನಾಡಬೇಕಿತ್ತು ಅಷ್ಟೇ ಎಂದು. ಮುಂದುವರೆದು, ನನ್ನ ಮಗನ ಹತ್ತಿರವೋ, ಮಗಳ ಹತ್ತಿರವೋ ಮಾತನಾಡುವಂತಿಲ್ಲ, ನನ್ನ ೧೫ ವರುಷದ ಮೊಮ್ಮಗುವನ್ನು ಇದುವರೆಗೂ ನಾನು ನೋಡಿಯೇ ಇಲ್ಲ ಎಂದು ತನ್ನ ಅಳಲನ್ನು ತೋಡಿಕೊಂಡಳು ಆ ಮಹಾತಾಯಿ.

ತನಗೆ ಅದು ಬೇಕು ಇದು ಬೇಕು ಪೀಡಿಸದೇ ತನ್ನ ಮಗನೊಂದಿಗೆ ಮಾತನಾಡಲು ಶ್ರಮಿಸುವುದೇ ಆ ತಾಯಿ ಮಾಡಿದ ಮಹಾಪರಾಧ. ನೋಡಿ ನಮ್ಮ ಸಂಸ್ಕೃತಿಗೂ, ಸಂಪತ್ತಿನ ಹಿಂದೆ ಬಿದ್ದು ಮನೋಕ್ಲೇಷೆಗಳನ್ನು ಗಳಿಸಿಕೊಂಡ ಆಧುನಿಕ ಜಗತ್ತಿನ ಸಂಸ್ಕೃತಿಗೂ ಇರುವ ವ್ಯತ್ಯಾಸ. ಇಂಥ ಪ್ರಕರಣಗಳು ನಮ್ಮಲ್ಲಿಲ್ಲ ಎಂದೇನಲ್ಲ. ಆದರೆ ಅವು ಈ ಮಟ್ಟಕ್ಕಂತೂ ಇಳಿದಿರುವುದಿಲ್ಲ. ತಾವು ಆರ್ಹ್ತಿಕವಾಗಿ ಸುಸ್ಥಿಯಲ್ಲಿದ್ದರೂ ಮಡದಿ ಏನೆಂದುಕೊಳ್ಳುತ್ತಾಳೋ ಎಂದು ಹೆದರಿ ತಮ್ಮ ತಾಯಂದಿರನ್ನು ತಮ್ಮೊಂದಿಗೆ ಇಟ್ಟುಕೊಳ್ಳದ ಮಹಾನುಭಾವರೂ ಇದ್ದಾರೆ. ವಿಧಿಯಿಲ್ಲದೇ ಇಂಥ ತಾಯಂದಿರು ಯಾರದಾದರೂ ಮನೆಯಲ್ಲಿ ಕೆಲಸಕ್ಕಿದ್ದು ಇರುವಷ್ಟು ಆಯಸ್ಸನ್ನು ಕಳೆಯುತ್ತಿದ್ದಾರೆ. ಸರಿ ನ್ಯಾಯಾಲಯ ಇವರೀರ್ವರ ವಾದ ಆಲಿಸಿ ಕೊಟ್ಟ ಮಹಾ ತೀರ್ಪು? ೩೬೦ ಯುರೋಗಳ ದಂಡ.

ಈ ಕೇಸನ್ನು ಕೋರ್ಟಿನ ಮುಂದೆ ತಂದು ಆಮೂಲ್ಯ ಸಮಯ ಹಾಳು ಮಾಡಿದ್ದಕ್ಕೂ, ತಾಯ್ತನಕ್ಕೆ ಚಿಕ್ಕಾಸಿನ ಬೆಲೆ ಕೊಡದ ಮಗನ ಸಂಸ್ಕೃತಿಗೂ ವಿಧಿಸಿದ ದಂಡ ಅಲ್ಲ. ಒಂದೇಸಮನೆ ಫೋನ್ ಮಾಡಿ ಮಗನ ನೆಮ್ಮದಿ ಕೆಡಿಸಿದ ತಾಯಿಗೆ ವಿಧಿಸಿತು ದಂಡ ನ್ಯಾಯಾಲಯ.