ಬ್ರಾಹ್ಮಣ ಯುವತಿಯ ಉರ್ದು ಶಾಯರಿ

ನಮ್ಮ ಭಾರತ ವೈವಿಧ್ಯಮಯ ದೇಶ. ಹಲವು ಸಂಸ್ಕೃತಿಗಳ ಬೀಡು. ಇಲ್ಲಿ ಎಲ್ಲರ ಭಾವನೆಗಳನ್ನೂ ಗೌರವಿಸಿ, ಆದರಿಸಿ ನಡೆಯುವುದು ಹೇಗೆ ಎಂದು ನಮ್ಮ ಜನರಿಗೆ ಚೆನ್ನಾಗಿ ಗೊತ್ತು. ಆ ಕಾರಣಕ್ಕಾಗೆ ನಮ್ಮ ದೇಶ ವಿಶ್ವದ ಪ್ರಶಂಸೆಗೆ ಪಾತ್ರ. ಇಲ್ಲಿ ಹಿಂದೂ, ಜೈನ, ಕ್ರೈಸ್ತ ಧರ್ಮದವರಿಗೆ ಸಿಕ್ಕ ಮನ್ನಣೆಯೇ ಮುಸ್ಲಿಂ ಸೂಫಿ ಸಂತರಿಗೂ ಸಿಕ್ಕಿತು. ಸೂಫಿ ಸಂತರ ಬದುಕಿನ ರೀತಿ ನೋಡಿ ಅವರನ್ನು ಅನುಸರಿಸಿದವರೂ ಕಡಿಮೆಯಲ್ಲ. ಹಾಗೆಯೇ ಹಿಂದೂ ಧರ್ಮಾಚರಣೆ ಗಳನ್ನೂ, ಅವರ ದೇವ ದೇವತೆಗಳನ್ನೂ ಕೊಂಡಾಡಿದ ಮುಸ್ಲಿಮರಿಗೂ ಕೊರತೆಯಿಲ್ಲ. ಬ್ರಾಹ್ಮಣ ಮಹಿಳೆ ಇಸ್ಲಾಮನ್ನು ಪ್ರಶಂಸಿಸಿ ಶಾಯರಿ ಪ್ರಸ್ತುತ ಪಡಿಸಿದ್ದು ಮೇಲೆ ಹೇಳಿದ ವಿಶಾಲ ಹೃದಯಕ್ಕೆ ಸಾಕ್ಷಿ. ಕೆಳಗಿದೆ ನೋಡಿ ಕೊಂಡಿ,  

https://hasnain.wordpress.com/2010/08/10/lata-haya-about-islam/

Advertisements

ವ್ರತಾಚರಣೆಯ ಮಾಸ

ರಮದಾನ್, (ರಂಜಾನ್ ಎಂದೂ ಕರೆಯಲ್ಪಡುತ್ತದೆ, ramzan) ಇಸ್ಲಾಮೀ ಪಂಚಾಂಗದ ಒಂಭತ್ತನೆ ತಿಂಗಳು ಮತ್ತು ಇಸ್ಲಾಮಿನ ಐದು ಸ್ಥಂಭಗಳಲ್ಲಿ ಮೂರನೆಯ ಸ್ಥಂಭವಾದ ರಮದಾನ್ ತಿಂಗಳಿನಲ್ಲಿ ಜಗತ್ತಿನ ಮುಸ್ಲಿಮರು ದಿನವಿಡೀ ಉಪವಾಸವಿದ್ದು ವಿಶೇಷ ಆರಾಧನೆಯಲ್ಲೂ, ಪವಿತ್ರ ಕುರಾನ್ ಪಾರಾಯಣದಲ್ಲೂ ತಮ್ಮ ಸಮಯ ಕಳೆಯುತ್ತಾರೆ. ಈ ಕಾರಣಕ್ಕಾಗಿ ಈ ಮಾಸವನ್ನು ದಾನದ, ಧ್ಯಾನದ ಮತ್ತು ಚಿಂತನೆಯ ಮಾಸವೆಂದು ಕರೆಯುತ್ತಾರೆ (month of charity, contemplation, and reflection). ಚಂದ್ರ ದರ್ಶನದೊಂದಿಗೆ ಆರಂಭವಾಗುವ ೩೦ ದಿನಗಳ ಈ ಉಪವಾಸ ವ್ರತ ಮುಸ್ಲಿಮ್ ಜಗತ್ತಿಗೆ ಹೊಸ ಚೈತನ್ಯವನ್ನೂ, ಧಾರ್ಮಿಕತೆಯನ್ನೂ ತುಂಬುತ್ತದೆ.

ನಮ್ಮನ್ನು ಸೃಷ್ಟಿಸಿದ ದೇವರಿಗೆ ಆರಾಧನೆ ಸಲ್ಲಿಸುವುದಕ್ಕೆ, ಪ್ರಾಮುಖ್ಯತೆ ಹೆಚ್ಚು. ಯಾವುದೇ ಪರಿಸ್ಥಿತಿಯಲ್ಲೂ ಐದು ಹೊತ್ತಿನ ನಮಾಜನ್ನು ನಿರ್ವಹಿಸಲೇಬೇಕು. ನಮಾಜ್ ಜೊತೆಗೆ ಕುರಾನ್ ಸೂಕ್ತಗಳನ್ನು ಪಠಿಸುವುದು, ಹಜ್ ಯಾತ್ರೆ, ಇವೂ ಸಹ ಆರಾಧನೆಯಲ್ಲೇ ಒಳಗೊಳ್ಳುತ್ತದೆ. ಆದರೆ ನಮಾಜ್, ಕುರಾನ್ ಪಠಣ, ಹಜ್ ಇತ್ಯಾದಿಗಳು  ತೋರಿಕೆಯ ಆರಾಧನೆಯಾಗಿಯೂ ಮಾರ್ಪಡಬಹುದು. ನಾನು ಧರ್ಮಿಷ್ಠ ಎಂದು ತೋರಿಸಲು ಎಲ್ಲರಿಗೂ ಕಾಣುವಂತೆ ಮಸ್ಜಿದ್ ಗೆ ಹೋಗುವುದು, ಹಜ್ ಯಾತ್ರೆ ಮಾಡುವುದು ಹೀಗೆ. ಆದರೆ ವ್ರತಾಚಾರಣೆ ಹಾಗಲ್ಲ. ಇದೊಂದು ರಹಸ್ಯ ಆರಾಧನೆ. ಉಪವಾಸವಿರುವವನ ಮತ್ತು ಅವನ ಪ್ರಭುವಿಗೆ ಮಾತ್ರ ತಿಳಿಯುವ ಆರಾಧನೆ. ಮೂರನೆಯ ವ್ಯಕ್ತಿಗೆ ಇದರ ಅರಿವಿರುವುದಿಲ್ಲ; ಹಾಗಾಗಿ ವ್ರತಾಚರಣೆಗೆ ಹೆಚ್ಚು ಮಹತ್ವ.    

ಸೂರ್ಯೋದಯದಿಂದ ಹಿಡಿದು ಸೂರ್ಯಾಸ್ತದವರೆಗೆ ಉಪವಾಸದ ಅವಧಿ. ಅರುಣೋದಯದ “ಪ್ರಾರ್ಥನೆಯ ಕರೆ” ( “ಅದಾನ್” ) ಕಿವಿಗೆ ಬಿದ್ದ ಕೂಡಲೇ ಆಹಾರ, ಪಾನೀಯಗಳು ನಿಷಿದ್ಧವಾಗುತ್ತವೆ. ಅದೇ ರೀತಿ ಸೂರ್ಯಾಸ್ತದ ಪ್ರಾರ್ಥನೆಯ ಕರೆ ಕೇಳಿದ ಕೂಡಲೇ ಸ್ವಲ್ಪ ನೀರು ಮತ್ತು ಖರ್ಜೂರದ ಸಹಾಯದಿಂದ ಉಪವಾಸವನ್ನು ಕೊನೆಗೊಳಿಸಲಾಗುತ್ತದೆ. ಇಡೀ ದಿನದ ಉಪವಾಸದಿಂದ ಶರೀರದ ಮೇಲೆ ಹೆಚ್ಚು ವ್ಯತಿರಿಕ್ತ ಪರಿಣಾಮ ಆಗಬಾರದು ಎಂದು ಮಧ್ಯ ರಾತ್ರಿಯ ನಂತರ ಅಥವಾ ಅರುಣೋದಯದ ಸ್ವಲ್ಪ ಮೊದಲು ಸ್ವಲ್ಪವಾದರೂ ಆಹಾರ (ಇದಕ್ಕೆ “ಸುಹೂರ್” ಎಂದು ಕರೆಯುತ್ತಾರೆ) ತೆಗೆದು ಕೊಳ್ಳಲೇಬೇಕು. ಅದೇ ರೀತಿ ದಿನವಿಡೀ ಒಂದು ತೊಟ್ಟೂ ನೀರಿಲ್ಲದೆ, ತಮ್ಮ ದಿನಚರಿಗೆ ಯಾವುದೇ ಧಕ್ಕೆ ಬಾರದಂತೆ ತಮ್ಮ ಕೆಲಸ, ಧಂಧೆ ಮಾಡುತ್ತಾ ಉಪವಾಸವಿದ್ದು ಸೂರ್ಯಾಸ್ತಕ್ಕೆ ಒಂದು ಗುಟುಕು ನೀರು ಮತ್ತು ಒಂದು ತುಂಡು ಖರ್ಜೂರದ ಸಹಾಯದಿಂದ ಉಪವಾಸ ಕೊನೆಗೊಳಿಸುವುದಕ್ಕೆ  “ಇಫ್ತಾರ್” ಎಂದು ಕರೆಯುತ್ತಾರೆ. ಇಫ್ತಾರ್ ಪದವನ್ನು ತಾವು ಕೇಳಿರಲೇಬೇಕು, ನಮ್ಮ ರಾಜಕಾರಣಿಗಳು ಮುಸ್ಲಿಂ ಗೆಳೆಯರಿಗೆ ಏರ್ಪಡಿಸುವ ಔತಣ. ಪ್ರಾಯಕ್ಕೆ ಬಂದ ಪ್ರತೀ ಮುಸ್ಲಿಮ್ ಉಪವಾಸ ವ್ರತ ಆಚರಿಸಲೇಬೇಕು ಎಂದು ಕಡ್ಡಾಯವಾದ ನಿಯಮ. ಖಾಯಿಲೆಯಿಂದ ಬಳಲುವವರಿಗೆ ಮತ್ತು ಯಾತ್ರಿಗಳಿಗೆ ಇದರಿಂದ ವಿನಾಯಿತಿ ಇದ್ದು ಯಾತ್ರೆ ಮುಗಿದ ನಂತರ, ಮತ್ತು ಖಾಯಿಲೆಯಿಂದ ಗುಣಮಮುಖರಾದ ನಂತರ ತಪ್ಪಿಹೋದ ಉಪವಾಸ ದಿನಗಳನ್ನು ಉಪವಾಸ ಇರುವ ಮೂಲಕ ತೀರಿಸಬೇಕು,ಅದೂ ಸಾಧ್ಯವಾಗದಿದ್ದರೆ ತಪ್ಪಿ ಹೋದ ದಿನಗಳಿಗೆ ಪ್ರಾಯಶ್ಚಿತ್ತವಾಗಿ ಬಡ ಬಗ್ಗರಿಗೆ ಅನ್ನದಾನ ಮಾಡಬೇಕು.

ರಮದಾನ್ ಮಾಸದ ಮಹತ್ವದ ಬಗ್ಗೆ ಹೇಳುತ್ತಾ ಪ್ರವಾದಿಗಳು ಹೇಳಿದ್ದು, ರಮದಾನ್ ಮಾಸ ೭೦,೦೦೦ ತಿಂಗಳು ಗಳಿಗೆ ಸಮಾನ ಎಂದು. ಅದೂ ಅಲ್ಲದೆ ಇದೇ ತಿಂಗಳಿನಲ್ಲಿ ಪವಿತ್ರ ಕುರಾನ್ ನ ಸೂಕ್ತಗಳು ಅವತೀರ್ಣವಾಗಿದ್ದು.  ಈ ಕಾರಣಕ್ಕಾಗಿ ಜಗದಾದ್ಯಂತ ಮುಸ್ಲಿಮರು ಈ ತಿಂಗಳ ತಮ್ಮ ಬಿಡುವಿನ ವೇಳೆಯಲ್ಲಿ ಮತ್ತು ಹೆಚ್ಚು ಸಮಯ ಕುರಾನ್ ಪಾರಾಯಣದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಹಾಗೆಯೆ ಈ ತಿಂಗಳಿನಲ್ಲಿ ರಾತ್ರಿಯಲ್ಲಿ “ತರಾವೀಹ್” ಎಂದು ಕರೆಯಲ್ಪಡುವ ವಿಶೇಷ ಪ್ರಾರ್ಥನೆಗಳು ಸಹ ನಡೆಯುತ್ತವೆ. ಪ್ರತೀ ಆರಾಧನೆ, ದಾನ, ಒಳ್ಳೆಯ ಮಾತು, ಕೃತಿ ಇವುಗಳಿಗೆ ಪ್ರತಿಫಲ ಸಹ ೭೦,೦೦೦ ಪ್ರತಿಫಲದ ರೀತಿಯಲ್ಲಿ ದೇವರು ಕೊಡುವನೆಂದೂ ಮುಸ್ಲಿಮ್ ವಿಧ್ವಾಂಸರು ಹೇಳುತ್ತಾರೆ.      

ರಮದಾನ್ ತಿಂಗಳಿನಲ್ಲಿ ನಾವು ಮಾಡುವ ಪ್ರತೀ ಕೆಲಸವೂ ಇಸ್ಲಾಮೀ ಆದರ್ಶಗಳಿಗೆ ಪೂರಕವಾಗಿರಬೇಕೆಂದು ವಿಧ್ವಾಂಸರುಗಳು ಎಚ್ಚರಿಸುತ್ತಾರೆ. ಈ ಮಾಸದಲ್ಲಿ ಉದ್ರೇಕ ಪಡುವುದಾಗಲೀ,ಕೆರಳುವುದಾಗಲೀ ಮಾಡಬಾರದು. ಹಾಗೇನಾದರೂ ಯಾರಾದರೂ ಉದ್ರೇಕಿಸಿದರೆ “ನಾನು ವ್ರತಾಚರಣೆ ಮಾಡುತ್ತಿದ್ದೇನೆ” ಎಂದು ಹೇಳಿ ಮೌನವಾಗಿರಬೇಕು ಎಂದು ಸಲಹೆ ನೀಡುತ್ತಾರೆ. ಜ್ಞಾನಾರ್ಜನೆ, ಮತ್ತು ಸಂಯಮ ಪಾಲನೆ ರಮದಾನ್ ತಿಂಗಳ ವೈಶಿಷ್ಟ್ಯ ಎನ್ನಬಹುದು. ವ್ರತಾಚರಣೆಯ ಮೂಲಕ ರಮದಾನ್ ತಿಂಗಳು ನಮಗೆ “ಸ್ವ ನಿಗ್ರಹ” ದ ಗುಣವನ್ನೂ, ಸಂಯಮ ಶೀಲತೆಯನ್ನೂ ಕಲಿಸುತ್ತದೆ. ಈ ತೆರನಾದ ನಡವಳಿಕೆ ಮುಸ್ಲಿಮರು ಬರೀ ರಮದಾನ್ ಮಾಸಕ್ಕೆ ಸೀಮಿತಗೊಳಿಸದೆ ತಮ್ಮ ಬದುಕಿನ ಪ್ರತೀ ಘಳಿಗೆಯಲ್ಲೂ ಪಾಲಿಸಿದರೆ ದೇವರು ಯಶಸ್ಸನ್ನು ದಯಪಾಲಿಸುತ್ತಾನೆ ಸಮಾಜಕ್ಕೆ ಆದರ್ಶಪ್ರಾಯನಾಗಿ ಬದುಕುತ್ತಾನೆ.  

ಪ್ರತೀ ಮುಸ್ಲಿಂ ಮನೆಯಲ್ಲೂ ರಮದಾನ್ ಒಂದು ವಿಶೇಷ ತಿಂಗಳಾಗಿರುತ್ತದೆ. ಅದರಲ್ಲೂ ಮಕ್ಕಳಿಗೆ ಒಂದು ರೀತಿಯ ಸಂತಸ. ಐದು ವರ್ಷದ ಮೇಲ್ಪಟ್ಟ ಮಕ್ಕಳೂ ಸಹ ಪೂರ್ತಿ ತಿಂಗಳಲ್ಲದಿದ್ದರೂ ಸಾಧ್ಯವಾದಷ್ಟು ದಿಂದ ಉಪವಾಸ ಆಚರಿಸಲು ಯತ್ನಿಸುತ್ತಾರೆ. ನನ್ನ ಆರು ವರ್ಷದ ಮಗ ಕಳೆದ ಎರಡು ವರ್ಷಗಳಿಂದ ೮ – ೧೦ ದಿನ ಉಪವಾಸವಿದ್ದನು. ಸಂಜೆಯಾಗುತ್ತಿದ್ದಂತೆ ಮಕ್ಕಳು ಕಾತುರದಿಂದ ಮಸ್ಜಿದ್ ಗಳ ಗೋಪುರಗಳು ಹೊರಡಿಸುವ ಅದಾನ್ ಗಾಗಿ ಕಾದು ನಿಂತು “ಅಲಾಹು ಅಕ್ಬರ್” (ದೇವರು ಸರ್ವಶ್ರೇಷ್ಠ ) ಎನ್ನುವುದನ್ನು ಕೇಳುತ್ತಲೇ ಓಡಿ ಬಂದು ಅಮ್ಮಾ, ಅಪ್ಪಾ, ಅದಾನ್ ಆಗುತ್ತಿದೆ, ಬೇಗ ನೀರು ಕುಡಿಯಿರಿ ಎಂದು ಉತ್ತೇಜಿಸುತ್ತಾರೆ.

೩೦ ದಿನಗಳ ಉಪವಾಸ ಮುಗಿದ ನಂತರ ಚಂದ್ರ ದರ್ಶನ ವಾಗುತ್ತಲೇ “ಈದ್” ಸಂಭ್ರಮ ಎಲ್ಲೆಡೆ. ಚಂದ್ರ ದರ್ಶನ ಆಗುತ್ತಲೇ ಮಾರನೆ ದಿನದ ಈದ್ ನಂದು ಯಾರೂ ತಿನ್ನಲು ಇಲ್ಲದೆ ಬಳಲಬಾರದು ಎಂದು ಬಡಬಗ್ಗರಿಗೆ ಅಕ್ಕಿ ದಾನ ಮಾಡುತ್ತಾರೆ. ಈ ದಾನದಿಂದಾಗಿಯೇ ಈದ್ ಹಬ್ಬಕ್ಕೆ “ಈದ್ ಅಲ್ ಫಿತ್ರ್” ಎಂದು ಹೆಸರು.         

ಸೌದಿ ಅರೇಬಿಯಾದಲ್ಲಿ ರಮದಾನ್ ತುಂಬಾ ಸೊಗಸು. ಇಡೀ ತಿಂಗಳು ಮತ್ತು ಅದರ ನಂತರ ಬರುವ ಸುಮಾರು ಹತ್ತು ದಿನಗಳ ಈದ್ ಸಂಭ್ರಮ. ಇಡೀ ನಗರವೇ ಅಲಂಕಾರದಲ್ಲಿ ಮುಳುಗಿರುತ್ತದೆ. ಎಲ್ಲೆಲ್ಲೂ ವಿಶೇಷ offer ಗಳು, ಬಹುಮಾನಗಳು, ರಸ್ತೆ ಬದಿಯಲ್ಲಿ ಉಪವಾಸವಿಟ್ಟುಕೊಂಡು ಪ್ರಯಾಣ ಮಾಡುವವರಿಗೆ ಪುಕ್ಕಟೆ ತಿಂಡಿ ತೀರ್ಥಗಳ ವಿತರಣೆ, ನಿರ್ಗತಿಕರಿಗೆ, ಕೆಳಸ್ತರದ ಉದ್ಯೋಗ ಮಾಡುವವರಿಗೆ ದಾನ ಮಾಡುವಲ್ಲಿ ಪೈಪೋಟಿ, ಹೀಗೆ ನಾನಾ ರೀತಿಯ ಚಟುವಟಿಕೆಗಳನ್ನು ಕಾಣಬಹುದು. ಕೆಲಸದ ಸಮಯವೂ ನಾಲ್ಕು ಅಥವಾ ಐದು ಘಂಟೆಗಳು. ಹಾಗಾಗಿ ಉಪವಾಸವಿರುವುದು ಬಹಳ ಸುಲಭ ಅರೇಬಿಯಾದಲ್ಲಿ.

ಬೇಡದ ಕಡೆ ತಲೆ ಹಾಕಿದ ಕರಡಿ

ನಮಗೆ ಅವಶ್ಯಕತೆ ಇರದ ಕಡೆ ತಲೆ ಹಾಕಬಾರದು ಎಂದು ಹಿರಿಯರ ಬುದ್ಧಿವಾದ. ಕಿತಾಪತಿ ಮಾಡುವವರನ್ನು ಕಂಡರೆ ಹೇಳುತ್ತಾರೆ ಬೇಡದೆ ಇರೋ ಜಾಗದಲ್ಲಿ ತಲೆ ಹಾಕೋದು ಅಂದ್ರೆ ಇವ್ನಿಗೆ ತುಂಬಾ ಇಷ್ಟ ಎಂದು ತೆಗಳೋದನ್ನೂ ನಾವು ಕೇಳಿದ್ದೇವೆ. ಆದರೆ ಇಲ್ಲಿ ಬೇಡ ಕಡೆ ತಲೆ ಹಾಕಿ ಮಂಗಳಾರತಿ ಮಾಡಿಸಿ ಕೊಂಡಿದ್ದು ಹುಲು ಮನುಜನಲ್ಲ. ಬದಲಿಗೆ ಮೈ ತುಂಬಾ ಕೇಶ ಇಟ್ಟುಕೊಂಡು ನಮ್ಮ ಮಕ್ಕಳಿಗೆ ಬೊಂಬೆ ರೂಪದಲ್ಲೂ, ನಿಜ ರೂದಲ್ಲೂ ಕಚಗುಳಿ ಇಡುವ ಜಾಂಬವ. ಕರಡಿ.

ಫ್ಲೋರಿಡಾ ರಾಜ್ಯದಲ್ಲಿರುವ “ಒಕಾಲಾ” ನಗರದಲ್ಲಿ ವಾಸಿಸುವ ಕರಡಿಯೊಂದು ತನ್ನ ತಲೆಯನ್ನು ಪ್ಲಾಸ್ಟಿಕ್ ಬಾಟಲಿ ಯೊಂದರಲ್ಲಿ ಸಿಕ್ಕಿಸಿಕೊಂಡು ಪರದಾಡಿತು. ಪೂರ್ತಿ ಹತ್ತು ದಿನ. ಓಹ್, ಹತ್ತು ದಿನಗಳ ಮನುಷ್ಯನ ನಿರ್ಲಕ್ಷ್ಯೆ ಕಾರಣ  ಕಾಲ ತಿನ್ನಲು, ಕುಡಿಯಲು ಆಗದೆ ಒದ್ದಾಡಿದ ಕರಡಿಗೆ ಕೊನೆಗೆ ಮುಕ್ತಿ ಸಿಕ್ಕಿದ್ದೂ ಭಾಗ್ಯಕ್ಕೆ ಮನುಷ್ಯನಿಂದಲೇ. ಪ್ರವಾಸದ ವೇಳೆ ಹೋದ ಹೋದೆಡೆ ನಮ್ಮ ಗಾರ್ಬೇಜ್ ಎಳೆ ದು ಕೊಂಡು ಹೋಗುವ ನಮಗೆ ನಿಸರ್ಗದ ಕಡೆ ನಮಗಿರುವ ಬೇಜವಾಬ್ದಾರಿತನಕ್ಕೆ ಪ್ರವಾಸ ಅಥವಾ ಪರ್ಯಟನ ಕಳೆದು ಬರುವಾಗ ನಮ್ಮ ಹಿಂದೆ ಬಿಟ್ಟು ಹೋಗುವ ತಿಪ್ಪೆಗಳೇ ಸಾಕ್ಷಿ.

ಜೆಡ್ಡಾ ದಿಂದ ಸುಮಾರು ೨೦೦ ಕಿ.ಮೀ ಇರುವ ನಮ್ಮ ಕೆಮ್ಮಣ್ಣು ಗುಂಡಿಯನ್ನು ಹೋಲುವ “ತಾಯಿಫ್” ಭೇಟಿಯ ವೇಳೆ ಬೆಟ್ಟದ ಕೆಳಗಿನ ದಾರಿಯಲ್ಲಿ ಒಂದು ಮರವನ್ನು ಕಂಡೆ. ಸಾಮಾನ್ಯವಾಗಿ ಮರ ಎಂದ ಮೇಲೆ ಎಲೆಗಳು ಇದ್ದೇ ಇರುತ್ತವೆ, ಅಲ್ಲವೇ? ಸಖೇದಾಶ್ಚರ್ಯ, ಇದೊಂದು ವಿಚಿತ್ರ ಮರವಾಗಿ ಕಂಡಿತು ನನಗೆ. ಮರದ ಟೊಂಗೆಯ ತುಂಬಾ ಬಣ್ಣ ಬಣ್ಣದ, ವಿವಿಧ ಆಕಾರದ, ಗಾತ್ರದ ಚೀಲಗಳು. ಪ್ಲಾಸ್ಟಿಕ್ ಚೀಲಗಳು. ಸಂಪೂರ್ಣ ಮರವನ್ನು ಆವರಿಸಿ ಬಿಟ್ಟಿತ್ತು. ಗಾಡಿಯಲ್ಲಿ ಹೋಗುವಾಗ ಮೇಯೋದು, ತದನಂತರ ಬಿಡೋದು ಗಾಳಿ ಪಟವ. ಅಲ್ಲಲ್ಲ, ಪ್ಲಾಸ್ಟಿಕ್ ಪಟವ. ಸ್ವಲ್ಪ ದೂರ ಹೋದ ನಂತರವೇ ನನ್ನ ಮಂದ ಮಾತಿಗೆ ತೋಚಿದ್ದು ಒಹ್, ಈ ಮರದ ಚಿತ್ರವೊಂದನ್ನು ಕ್ಲಿಕ್ಕಿಸಬೇಕಿತ್ತು ಎಂದು.       

ತನ್ನ ಸುಂದರ ಮೂತಿಯನ್ನು ಈ ಪ್ಲಾಸ್ಟಿಕ್ ಬಾಟಲಿಗೆ ಸಿಕ್ಕಿಸಿಕೊಂಡ ಕೇವಲ ಆರು ತಿಂಗಳ ಹಸುಳೆ ಕರಡಿಗೆ ವನ್ಯ ಜೀವಿ ಸಂರಕ್ಷಕರು ಬಂದು ಮೊದಲು ಪಕ್ಕದಲ್ಲೇ ಇದ್ದ ಅದರ ತಾಯಿಗೆ ಶಾಂತ ಗೊಳಿಸುವ ಚಚ್ಚು ಮದ್ದನ್ನು ನೀಡಿ ಪ್ಲಾಸ್ಟಿಕ್ ಮುಕ್ತ ಗೊಳಿಸಿದರು. ಅವರ ಪ್ರಕಾರ ಆ ಕರಡಿ ಒಂದೆರಡು ದಿನಗಳಲ್ಲಿ ಸಾಯುತ್ತಿತ್ತಂತೆ ಬಾಟಲಿ ಕಾರಣ  ತಿನ್ನಲು ಕುಡಿಯಲು ಆಗದೆ.     

ಚಿತ್ರ ಕೃಪೆ: http://www.newstimes.com/news/article/Plastic-jar-removed-from-Fla-bear-cub-s-head-615774.php#photo-3

ಒಂದು ತಮಾಷೆಯ ಸಂಜೆ

ತಂಗಿ ರಜೆಯ ಮೇಲೆ ಭಾರತಕ್ಕೆ ಹೋಗಿದ್ದರಿಂದ ಅವಳ ಮನೆಯಲ್ಲೂ, ನನ್ನ ಮನೆಯಲ್ಲೂ ವಾಸ. ಮಧ್ಯಾಹ್ನ  ನಾಲ್ಕು ಘಂಟೆಗೆ ಚಹಾ ಮುಗಿಸಿ ಹೊರಟಾಗ ನನ್ನ ಪತ್ನಿ ಹೇಳಿದಳು ನಮ್ಮನ್ನೂ ಮನೆಗೆ ಬಿಡಿ ಎಂದಳು. ಮಗ ಓಡಿ ಬಂದು ಮುಂದಿನ ಸೀಟಿನಲ್ಲೂ, ಮಗಳು ಹಿಂದಿನ ಸೀಟಿನಲ್ಲೂ ಕೂತರು. ಮಡದಿ ಕೆಲವು ಸಾಮಾನುಗಳನ್ನು ಡಿಕ್ಕಿಯಲ್ಲೂ, ಹಿಂದಿನ ಸೀಟಿನಲ್ಲೂ ಇಡುತ್ತಿದ್ದಳು. ಹಿಂದಿನ ಡೋರ್ ಹಾಕಿದ ಸದ್ದು ಕೇಳುತ್ತಿದ್ದಂತೆ ನಾನು ಕಾರನ್ನು ಚಲಾಯಿಸಿದೆ. ಗಾಡಿ ಚಲಾಯಿಸುತ್ತಾ ಆಫೀಸಿನಲ್ಲಿ ನಡೆದ ತಮಾಷೆಯ ಪ್ರಸಂಗವನ್ನು ಹೇಳುತ್ತಾ ಹೊರಟೆ. ಹಾಂ, ಹೂಂ ಏನೂ ಇಲ್ಲದ್ದನ್ನು ಗಮನಿಸದೆ ನನ್ನ ಪಾಡಿಗೆ ನಾನು ಮಾತನ್ನಾಡುತ್ತಿರುವಾಗ ಫೋನ್ ರಿಂಗ್ ಆಯಿತು, ನೋಡಿದರೆ ನನ್ನ ಹೆಂಡತಿಯ ನಂಬರ್, ಯಾಕ್ ಕಾಲ್  ಮಾಡ್ತಾ ಇದ್ದೀಯ ನನಗೆ ಎನ್ನುತ್ತಾ ಕನ್ನಡಿಯ ಮೂಲಕ ಹಿಂದಕ್ಕೆ ನೋಡಿದರೆ ಗಾಡಿಯಲ್ಲಿ ಅವಳಿಲ್ಲ. ಅರ್ರೇ, ಇದೇನಿದು, ಅವಳು ಕೂತೆ ಇಲ್ಲ, ನಾನು ಗಾಡಿ ಚಲಾಯಿಸುತ್ತಾ ಬಂದೆನಲ್ಲಾ, ಈ ಪುಟಾಣಿಗಳಾದರೂ ಹೇಳಬಾರದೆ ಅಮ್ಮ ಗಾಡಿಯಲ್ಲಿಲ್ಲ ಎಂದು ನನಗೆ ನಾನೇ ಹೊಟ್ಟೆ ತುಂಬಾ ನಗುತ್ತಾ ಹೆಂಡತಿಯನ್ನ ಪಿಕ್ ಮಾಡಲು ಹೋದರೆ ಮುಖ ಕೆಂಪಗೆ ಮಾಡಿಕೊಂಡು ನಿಂತಿದ್ದಳು ನನ್ನನ್ನು ಶಪಿಸುತ್ತಾ. ಅಲ್ಲಾ ಇದೇ ಥರಾ ನನ್ನನ್ನು ಎಲ್ಲಾದರೂ ಡೆಸರ್ಟ್ ನಲ್ಲೋ ಮತ್ತೆಲ್ಲೋ ಬಿಟ್ಟು ಹೋದರೆ ಹೇಗ್ರೀ ಎಂದು ಗದರಿಸುತ್ತಾ ಹತ್ತಿದಳು ಕಾರನ್ನು.   

ದುರಂತ ಕಂಡ ಅತ್ರಿ ಪ್ರಕಾಶನ

ಕನ್ನಡಿಗನೊಬ್ಬನ ಕನ್ನಡ ಪುಸ್ತಕ ಮಾರುವ ಧಂಧೆ ಕನ್ನಡಿಗರ ಅಸಡ್ಡೆ, ನಿರುತ್ಸಾಹ, ಅವಗಣನೆ ಯಿಂದ ಯಾವ ರೀತಿ ಅವಸಾನದ ಅಂಚಿನಲ್ಲಿದೆ ಎನ್ನುವ ಒಂದು ಲೆಲ್ಹನವನ್ನು ಓದಿದೆ. ಕಣ್ಣಲ್ಲಿ ನೀರು ಬಂತು ಇದನ್ನು ಓದಿ. ಪರಭಾಷಾ ವ್ಯಾಮೋಹಕ್ಕೆ ಒಳಗಾಗಿ ನಮ್ಮ ಸ್ವಂತ ಭಾಷೆಯನ್ನೂ ಕಡೆಗಣಿಸುವ, ಅಷ್ಟೇ ಅಲ್ಲ ಆ ಕಡೆ ಗಣಿ ಸುವಿಕೆಗೆ ತಮ್ಮದೇ ಆದ ಕುತರ್ಕಗಳನ್ನು ನೀಡುವ ಮಂದಿ ಎಂದು ಎಚ್ಚೆತ್ತು ಕೊಳ್ಳುತ್ತಾರೋ ನೋಡಬೇಕು. ಪೂರ್ತಿ ಓದಿಗೆ ಕೆಳಗಿನ ಕೊಂಡಿ ಕ್ಲಿಕ್ಕಿಸಿ..

http://avadhi.wordpress.com/2010/08/09/%e0%b2%85%e0%b2%a4%e0%b3%8d%e0%b2%b0%e0%b2%bf-%e0%b2%a4%e0%b2%ae%e0%b3%8d%e0%b2%ae-%e0%b2%aa%e0%b3%8d%e0%b2%b0%e0%b2%95%e0%b2%be%e0%b2%b6%e0%b2%a8%e0%b2%b5%e0%b2%a8%e0%b3%8d%e0%b2%a8%e0%b3%81/

ಮರೆತು ಹೋದ ಮಾತೃ ಭಾಷೆ

ಸೋನಿಯಾ ಅಮೇರಿಕೆಯಿಂದ ವಾಪಸಾಗಿ ಲೋಕಸಭೆಯ ಕಲಾಪಗಳಲ್ಲಿ ಮತ್ತು ತಮ್ಮ ಪಕ್ಷದ ಬೈಠಕ್ ವೊಂದರಲ್ಲಿ ಭಾಗಿಯಾದರು ಎಂದು ವರದಿ. ತಮ್ಮ ತಾಯಿಯವರ ಅನಾರೋಗ್ಯದ ಕಾರಣ ಅವರ ಶುಶ್ರೂಷೆಗೆಂದು ಅಮೆರಿಕೆಗೆ ಹೋಗಿದ್ದರು ಸೋನಿಯಾ ಗಾಂಧೀ.   

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದಾಗ ಇಟಲಿ ದೇಶದ ಟೀವೀ ಚಾನಲ್ ನ ತಂಡ ಅವರ ಸಂದರ್ಶನಕ್ಕೆಂದು ದಿಲ್ಲಿಗೆ ಬಂದಿತ್ತು. ಸಂದರ್ಶಕ ಇಟಾಲಿಯನ್ ಭಾಷೆಯಲ್ಲಿ ಪ್ರಶ್ನೆ ಕೇಳಲು ಆರಂಭಿಸಿದಾಗ ಸೋನಿಯಾ ನನಗೆ ಇಟಾಲಿಯನ್ ಭಾಷೆ ಬರುವುದಿಲ್ಲ, ದಶಕಗಳ ಹಿಂದೆಯೇ ಬಳಸುವುದನ್ನು ನಿಲ್ಲಿಸಿದ್ದರಿಂದ ಇಟಾಲಿಯನ್ ಭಾಷೆಯಲ್ಲಿ ಮಾತನಾಡಲಾಗದು ಎಂದು ಹೇಳಿದ್ದರು. ಯಾರೇ ಆದರೂ, ಅದೆಷ್ಟೇ ದಶಕಗಳನ್ನು ತಮ್ಮ ಮಾತೃ ಭಾಷೆಯ ನಂಟಿನಿಂದ ದೂರ ಇದ್ದರೂ ತಮ್ಮ ಸ್ವಂತ ಭಾಷೆಯನ್ನೂ ಮರೆಯುವ ಪ್ರಶ್ನೆಯೇ ಇರುವುದಿಲ್ಲ. ಆದರೆ ತಮ್ಮನ್ನು ವಿದೇಶೀ ಮಹಿಳೆ ಎಂದು ಜರೆಯುತ್ತಿದ್ದ ವಿರೋಧ ಪಕ್ಷಗಳಿಗೆ ಹೆದರಿ ತಮ್ಮ ಮಾತೃ ಭಾಷೆಯನ್ನು ನಿರಾಕರಿಸುವಂತೆ ಅವರನ್ನು ಪ್ರೇರೇಪಿಸಿತು. ಹಾಗಾದರೆ ತಮ್ಮ ತಾಯಿಯ ಶುಶ್ರೂಷೆ ಗೆಂದು ಅಮೆರಿಕೆಗೆ ಹೋದ ಸೋನಿಯಾ ತಮ್ಮ ತಾಯಿಯೊಂದಿಗೆ ಯಾವ ಭಾಷೆಯಲ್ಲಿ ಮಾತನಾಡಿಸಿರಬೇಕು? ಏಕೆಂದರೆ ಬಹುತೇಕ ಇಟಾಲಿಯನ್ನರಿಗೆ ಆಂಗ್ಲ ಭಾಷೆ ಬರುವುದಿಲ್ಲ. ಆಂಗ್ಲ ಭಾಷೆಯೇ ಶ್ರೇಷ್ಠ ಎಂದು ತಮ್ಮ ತಮ್ಮ ಮಾತೃ ನುಡಿಗಳನ್ನು ಕಡೆಗಣಿಸಿ ತಮ್ಮ ಮಕ್ಕಳಿಗೆ ಆಂಗ್ಲ ಭಾಷೆಯಲ್ಲಿ ಮಾತನಾಡಲು ಪ್ರೋತ್ಸಾಹಿಸುವ ಪಾಲಕರಿಗೆ ಗೊತ್ತಿದೆಯೇ ಸಂಪೂರ್ಣ ಯೂರೋಪಿನಲ್ಲಿ ಆಂಗ್ಲ ಭಾಷೆಯಲ್ಲಿ ಮಾತನ್ನಾಡುವ, ವ್ಯವಹರಿಸುವ ದೇಶ ಒಂದೇ ಒಂದು ಎಂಬುದು?      

ಒಬ್ಬ ಮಹಿಳೆ ಭಾರತೀಯ ಸಂಜಾತನನ್ನು ಪ್ರೀತಿಸಿ ಮದುವೆಯಾಗುತ್ತಾಳೆ, ಭಾರತೀಯ ಪೌರತ್ವ ಪಡೆದು ಇಲ್ಲಿನ ಸಂಸ್ಕೃತಿಗೆ ತಲೆಬಾಗಿ ಬದುಕನ್ನು ಸಾಗಿಸುತಾಳೆ. ಜನರ ಅಭೂತ ಪೂರ್ವ ಬೆಂಬಲದಿಂದ ಲಕ್ಷಾಂತರ ಮತಗಳಿಂದ ತನ್ನ ಪ್ರತಿಸ್ಪರ್ದಿಯನ್ನು  ಪರಾಭವ ಗೊಳಿಸಿದ್ದು ಮಾತ್ರವಲ್ಲದೆ ತನ್ನ ನಾಯಕತ್ವದಲ್ಲಿ ಪಕ್ಷವೊಂದನ್ನು ಅಧಿಕಾರದ ಗದ್ದುಗೆಗೂ ಏರಿಸುತ್ತಾಳೆ. ಈ ರೀತಿಯ ಜನಮನ್ನಣೆ ಇದ್ದರೂ ಆಕೆ ದೇಶದ ಅತ್ಯುನ್ನತ ಹುದ್ದೆಗೆ ಅನರ್ಹಳಾಗುತ್ತಾಳೆ. ತನ್ನನ್ನು ಅತ್ಯುನ್ನತ ಸ್ಥಾನಕ್ಕೆ ಕೂರಲು ಬಿಡದ ಜನರಿಗೆ ಬೆದರಿ ತನ್ನ ಮಾತೃ ಭಾಷೆಯಲ್ಲಿ ತನಗೆ ಮಾತನಾಡಲು ಬರುವುದಿಲ್ಲ ಎಂದು ಹೇಳಿಕೆಯನ್ನು ಕೊಡುತ್ತಾಳೆ. ಒಬ್ಬ ವ್ಯಕ್ತಿಗೆ ತನ್ನ ಮಾತೃ ಭಾಷೆಯಲ್ಲಿ ಮಾತನಾಡಲು ಹೆದರುವಂಥ ಪರಿಸ್ಥಿತಿ ಸೃಷ್ಟಿಸುವ ವ್ಯವಸ್ಥೆ ಮತ್ತು ಅಸಹನೆಯಿಂದ ನಾವು ವಿಶ್ವಕ್ಕೆ ನೀಡುತ್ತಿರುವ ಸಂದೇಶವಾದರೂ ಏನು?

ನಮಗೆ “ಹುಬ್ಬು” ಗಳೇಕಪ್ಪಾ ?

ಎಲ್ಲಾ ಮಕ್ಕಳೂ ಚಂದಿರನೇಕೆ ಓಡುವನಮ್ಮಾ ಎಂದು ಕೌತುಕದಿಂದ ಕೇಳಿದರೆ ನನ್ನ ಮಗನಿಗೆ ಬೇರೆಯದೇ ಆದ ಒಂದು ಚಿಂತೆ.

ನಮಗೆ “ಹುಬ್ಬು” ಗಳೇಕಪ್ಪಾ ? ಹುಬ್ಬು ಹಾರಿಸುತ್ತಾ ಕೇಳಿದ ನನ್ನ ಮಗ ನಿನ್ನೆ ರಾತ್ರಿ ಅವನ ಬೆಡ್ ಟೈಮ್ ಸ್ಟೋರಿ ಸೆಶನ್ ಸಮಯ. ನಾನು ಹೇಳುತ್ತಿದ್ದ ಕಥೆಯ ಬಗ್ಗೆ ಅವನು ಪ್ರಶ್ನೆ ಕೇಳಿದ್ದರೆ ಕಥೆಯಲ್ಲಿ ಪ್ರಶ್ನೆಯಿಲ್ಲ ಎಂದು ಅವನ ಪುಟ್ಟ ಬಾಯಿ ಮುಚ್ಚಿಸಬಹುದಿತ್ತು. ಆದರೆ ಕೇಳುತ್ತಿರುವುದು ಲಾಜಿಕ್ ಆದ ಪ್ರಶ್ನೆಯಾದ್ದರಿಂದ ಒಂದು ಕ್ಷಣ ಮೇಲೆ ಏರಿದ ನನ್ನ ಹುಬ್ಬುಅಲ್ಲೇ ನಿಂತಿತು ನನ್ನ ಸಮಜಾಯಷಿಗಾಗಿ ಕಾಯುತ್ತಾ. ಹೌದೇ, ಸುಂದರ ಮೊಗದ ಮೇಲೆ, ಬೊಗಸೆ ಕಣ್ಣುಗಳ ಮೇಲೆ ಹುಬ್ಬುಗಳೆಂಬ “ಛಾವಣಿ” ಯ ಅವಶ್ಯಕತೆ ಏನಿತ್ತೋ? ಕಣ್ಣುಗಳನ್ನು ರಕ್ಷಿಸಲು ರೆಪ್ಪೆಗಳಿದ್ದೆ ಇವೆಯಲ್ಲಾ? ಓಹ್, ಬಹುಶಃ ಡಬ್ಬಲ್ ಪ್ರೊಟೆಕ್ಷನ್ ಆಗಿ ಇರಬೇಕು ಹುಬ್ಬುಗಳು ಬಡಿಯುವ ರೆಪ್ಪೆಗಳಿಗೆ ಸಂಗಾತಿಯಾಗಿ.  

ಹುಬ್ಬು ಮತ್ತು ಮೂಗಿನ ರೂಪ, ಅಂಕು ಡೊಂಕಿನ ಬಗ್ಗೆಯೂ ಸಾಕಷ್ಟು ಕುತೂಹಲ ಇದ್ದಿದ್ದೇ.

ಮಹಿಳೆಯರಿಗೆ ಕರಡಿಗಿರುವಂಥ ಹುಬ್ಬಿದ್ದರೆ ಅದನ್ನು ರೆಪೇರಿ ಮಾಡಿಸಿಕೊಳ್ಳುತ್ತಾರೆ. ಅದಕ್ಕೆ ಆಂಗ್ಲ ಭಾಷೆಯಲ್ಲಿ blepharoptosis ಎಂದು ಕರೆಯುತ್ತಾರೆ.  ಕಾಲುಗುರು ಸ್ವಲ್ಪ ಡೊಂಕಾದಾಗ toe nail repair ಇರುವಂತೆ ಮುಖಕ್ಕೆ ಕಿರೀಟ ಪ್ರಾಯವಾಗಿ ಕಂಗೊಳಿಸುವ ಹುಬ್ಬಿಗೆ ಇಲ್ಲದೆ ಇರುತ್ತದೆಯೇ ಒಂದು ರೆಪೇರಿ? ಹಾಂ, ಈ ಹುಬ್ಬಿನ ರೆಪೆರಿಯೊಂದಿಗೆ ಅದಕ್ಕೊಂದು ಚೆಂದದ ರಿಂಗ್ ಇದ್ದರೆ ಇನ್ನೂ ಚೆಂದ ಅಲ್ಲವೇ? ಮೂಗಿಗೆ, ಕಾಲುಂಗುರಕ್ಕೆ, ಹೊಕ್ಕುಳಿಗೆ ಒಂದೊಂದು ರಿಂಗ್ ಇರುವಾಗ ಹುಬ್ಬಿಗೆ ಬೇಕೇ ಬೇಕು ಮಾರಾಯ್ರೆ ಒಂದು ರಿಂಗು.         

ಮತ್ತೊಂದು ಮಾತು, ಹೆಂಡತಿ ಪಕ್ಕದಲ್ಲಿಲ್ಲ. ಅರಬ್ ಮಹಿಳೆಯರ ಹುಬ್ಬಿಗೆ ಅದೇನು ಸೌಂದರ್ಯವೋ ಏನೋ? ಕಾಮನ ಬಿಲ್ಲುಗಳು ಮೋಡಗಳೊಳಗೆ ಅವಿತು ಕೊಳ್ಳುತ್ತವೆ ಇವರ ಹುಬ್ಬುಗಳ ಸೌಂದರ್ಯವನ್ನು ನೋಡಿ. ಬುರ್ಖಾ ಧರಿಸಿ, ಆದರ ಮೇಲೆ ಮೂಗನ್ನು ಮುಚ್ಚುವ “ನಿಕಾಬ್” ಎನ್ನುವ  ತೆಳು ಪರದೆಯನ್ನು ಧರಿಸಿದಾಗ ಹುಬ್ಬುಗಳು ಪ್ರಾಮುಖ್ಯತೆ ಪಡೆಯುತ್ತವೆ ಇವರ ಸೌಂದರ್ಯ ಪ್ರದರ್ಶನದಲ್ಲಿ. ಕೆಲವೊಮ್ಮೆ ಅನ್ನಿಸುವುದಿದೆ ಇಷ್ಟೆಲ್ಲಾ ಮೈ ಮುಚ್ಚಿ ಕೊಂಡು, ಈ ಪರಿಯಾಗಿ ಹುಬ್ಬುಗಳನ್ನು ರೆಪೇರಿ ಮಾಡಿಸಿಕೊಂಡು ಪುರುಷರ ಅಲೆಯುವ ಕಣ್ಣುಗಳಿಗೆ ಏಕೆ ಇವರು torment ಮಾಡುತ್ತಾರೋ ಎಂದು. ಇಸ್ಲಾಂ ಹುಬ್ಬನ್ನು ರೆಪೇರಿ ಮಾಡಿಸಿ ಕೊಳ್ಳುವ ಗೀಳಿಗೆ ಹುಬ್ಬುಗಂಟಿಕ್ಕಿ ಅಸಮ್ಮತಿ ಸೂಚಿಸಿದರೂ ಅರಬ್ ಲಲನಾ ಮಣಿಗಳಿಗೆ ಅದರ ಪರಿವೆ ಇಲ್ಲ. ಈ ವಿಷಯದಲ್ಲಿ ಇನ್ನೂ ಯಾವುದೇ ಫತ್ವ ಬಂದ ನೆನಪಿಲ್ಲ.     

ಈಗ ನನ್ನ ಮಗನ ಪ್ರಶ್ನೆಗೆ ಎಲ್ಲಿದೆ ಉತ್ತರ? ಇಗೋ ಇಲ್ಲಿ. ತಲೆಯ ಮೇಲಿನಿಂದ ಮಳೆ ಹನಿ, ಹೇನು, ಹೊಟ್ಟು ಇತ್ಯಾದಿಗಳು ಕಣ್ಣಿನೊಳಗೆ ಬೀಳದೆ ಇರಲು ಇರುವ ಸಿಸ್ಟಂ ಹುಬ್ಬು. ಅಷ್ಟೇ ಅಲ್ಲ ಸೂರ್ಯನ ಪ್ರಖರ ಶಾಖ ನೇರವಾಗಿ ಕಣ್ಣಿಗೆ ಬೀಳದಂತೆ ತಡೆಯುತ್ತದೆ ಕೂಡಾ ನಮ್ಮ ಹುಬ್ಬುಗಳು.