ಓಹ್, ನಿನ್ನ ಛಲವೇ

                                                      

ದಕ್ಷಿಣ ಕೊರಿಯಾದ ಮಹಿಳೆ ವಿಶ್ವದ ೧೪ ಶಿಖರಗಳನ್ನು ಮಣಿಸಿದ ಪರ್ವತ ನಾರಿ. 

ಧರೆಯ ಮೇಲಿನ ಹುಲು ಮಾನವರನ್ನು ಅಣಕಿಸುತ್ತಾ ಆಗಸಕ್ಕೂ ಸವಾಲಾದ ಗಿರಿ ಶಿಖರಗಳು ಈ ಮಹಿಳೆಯ ಅಸಾಧಾರಣ ವಿಶ್ವಾಸ, ಧೈರ್ಯಕ್ಕೆ ಮರುತ್ತರ ನೀಡದೆ ಶರಣಾದವು.  ೧೩ ಶಿಖರಗಳನ್ನು ಗೆದ್ದ ಈ ಮಹಿಳೆ ಕೊನೆಯದಾದ ೨೬,೨೪೭ ಅಡಿ ಎತ್ತರದ ಅನ್ನಪೂರ್ಣ ಶಿಖರವನ್ನು ಮೊಣಕಾಲೂರಿ ಜಯಿಸಿದಳು. ಮೊಣ ಕಾಲೂರಿದ್ದು ಈ ಕೆಚ್ಚ್ಚೆದೆಯ ನಾರಿಯಾದರೂ ವಾಸ್ತವವಾಗಿ ಮೊಣಕಾಲೂರಿ ಶರಣಾಗಿದ್ದು ಅನ್ನಪೂರ್ಣೆಯೇ.

ಓಹ್. ನಮ್ಮ ತೆಂಡೂಲ್ಕರ್ ಒಂದೊಂದೇ ದಾಖಲೆಗಳನ್ನ ಬೆನ್ನತ್ತುವಂತೆ 14 ಶಿಖರಗಳ ಮಣಿಸಿದ ಈಕೆಯ ಹೆಸರು “ಓಹ್ ಯೂನ್ ಸುನ್”. ಬಹುಶಃ ಅತ್ಯುತ್ಸಾಹದ, ಚಿಮ್ಮುವ ಹದಿಹರೆಯದ ಹೆಣ್ಣೋ, ಇಪ್ಪತ್ತರ ತಾರುಣ್ಯವೋ, ಮೂವತ್ತರ ಯೌವ್ವನವೋ ಅಲ್ಲ ಈಕೆಗೆ. ೪೪ ವರ್ಷ ವಯಸ್ಸಿನ ಕೊರಿಯಾದ ಈ ಮಹಿಳೆ ಇದೆ ಆಸುಪಾಸಿನ ವಯಸ್ಸಿನ ಜನರು ನಾಚುವಂಥ ಸಾಧನೆ ಮಾಡಿದಳು. ನಮ್ಮಲ್ಲಿ ೪೦ ಅಂದರೆ ಮುಗಿಯಿತು, ಅದರಲ್ಲೂ ನಮ್ಮ ಹೆಣ್ಣು ಮಕ್ಕಳಿಗಂತೂ ಮದುವೆಯಾಗಿ ಒಂದೆರಡು ಮಕ್ಕಳಾದ ಕೂಡಲೇ ವೈರಾಗ್ಯ ಆವರಿಸಿ ಬಿಡುತ್ತದೆ. ಇನ್ನು ಏನಾದರೂ ಧೈರ್ಯ ಮಾಡಿ ಮನಸ್ಸಿನ ಆಸೆಗಳನ್ನು ಪೂರೈಸುವತ್ತ ಯಾವುದಾದರೂ ಹೊಸ ಚಟುವಟಿಕೆ  ಆರಂಭಿಸಿದರಂತೂ ನೋಡುವವರಿಗೆ ಹೆಚ್ಚು ಕನಿಕರ. ಈ ವಯಸ್ಸಿನಲ್ಲಿ ಇದೆಲ್ಲಾ ಯಾಕೆ ಎಂದು ಉತ್ಸಾಹಕ್ಕೆ ತಣ್ಣೀರೆರೆಚಿ ಮೂಲೆ ತೋರಿಸುತ್ತಾರೆ ಕೂರಲು. ಆದರೆ ಈ ಡಬ್ಬಲ್ ನಾಲ್ಕು (೪೪) ಸಂಖ್ಯೆ ಈಕೆಯ ಉತ್ಸಾಹವನ್ನು ಕುಗ್ಗಿಸುವ ಬದಲು ಎತ್ತರ ಏರಲು ಪ್ರೇರೇಪಿಸಿತು. ಎತ್ತರ ಎಂದರೆ ಸಾವಿರಾರು ಅಡಿಗಳ ಎತ್ತರ. ಹಿಮಾಲಯ ಪರ್ವತ ಶ್ರೇಣಿ ಎಂಥವರ ಎದೆಯನ್ನೂ ನಡುಗಿಸುವಂಥದ್ದು. ಸಾವಿರಾರು ಜನ ಶಿಖರ ಏರಲು ಹೋಗಿ ಪ್ರಾಣ ಕಳೆದುಕೊಂಡವರು. ಅದರ ಮೇಲೆ ಏತಿ ಇದೆ, ಗೀತಿ ಇದೆ ಎಂದು ಭಯ ಹುಟ್ಟಿಸುವವರು ಬೇರೆ. ಆದರೆ ಸಾಧಿದಬೇಕು ಎಂದು ಛಲವಿರುವವರಿಗೆ ಛಲವೇ ಅವರ ಸಂಗಾತಿ, ನೆರಳಿನಂತೆ ಹಿಂಬಾಲಿಸುತ್ತದೆ.

ಆರೋಹಣ ಮಾಡಿದ ಕೂಡಲೇ ತನ್ನ ದೇಶದ ಬಾವುಟವನ್ನು ಬೀಸಿ ಹಿಡಿದ ಈಕೆಗೆ ದಕ್ಷಿಣ ಕೊರಿಯಾದ ಅಧ್ಯಕ್ಷರು ಅಭಿನಂದಿಸುತ್ತಾ ಹೇಳಿದ್ದು,

“She is really great and I’m proud of her,”  

ಈ ಮಹಿಳೆ ೨೦೦೪ ರಲ್ಲಿ ಎವೆರೆಸ್ಟ್ ಪರ್ವತವನ್ನು ಆರೋಹಣ ಮಾಡಿದ್ದಳು.  

ಚಿತ್ರ ಕೃಪೆ: ಯಾಹೂ

ಸೌದಿ ಅರೇಬಿಯಾದಲ್ಲಿ ಬಂದ್ ಗೆ ಕರೆ

ನಿರಂಕುಶ ರಾಜಪ್ರಭುತ್ವ ಇರುವ, democracy ಎಂದರೆ ಡೈನೋಸಾರಾ ಎಂದು ಗಾಭರಿಯಲ್ಲಿ ಕೇಳುವ ಅರೇಬಿಯಾದಲ್ಲಿ ಎಂಥ ಬಂದ್ ಎಂದಿರಾ? ನಮ್ಮಲ್ಲಿ ರಾಜಕೀಯ ಪಕ್ಷಗಳು, ಸಂಘಟನೆಗಳು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಅಥವಾ ವಿರೋಧಪಕ್ಷಗಳವರ ಜೀವ ಸುಟ್ಟು ತಿನ್ನಲು ನೀಡುವ ಕರೆಗೆ ಸ್ವಲ್ಪ ಭಿನ್ನ ಅರೇಬಿಯಾದ ಬಂದ್. ಎಷ್ಟೇ ಗಡಿಬಿಡಿ ಇದ್ದರೂ ನಮ್ಮನ್ನು ಸೃಷ್ಟಿಸಿ ಈ ಭೂಲೋಕಕ್ಕೆ ತಂದ ಆ ದೇವನನ್ನು ಆರಾಧಿಸಲು ಅಂಗಡಿ ಮುಂಗಟ್ಟುಗಳು ಬಂದ್ ಆಚರಿಸುತ್ತವೆ. ಬಹುತೇಕವಾಗಿ ಭಗವಂತನಿಗಾಗಿರುವ ಈ ಬಂದ್ ಸ್ವ-ಪ್ರೇರಣೆಯಿಂದ ನಡೆಯುತ್ತದೆ. ಕೆಲವೊಮ್ಮೆ “promotion of virtue and prevention of vice” department ಗೆ ಸೇರಿದ ಪೊಲೀಸರು (ಇವರನ್ನು “ಹಯ್ಯ” ಎಂತಲೂ ಕರೆಯುತ್ತಾರೆ) ಈ ಕಾನೂನನ್ನು ಜಾರಿ ಗೊಳಿಸುತ್ತಾರೆ. ಇವರ ಕೆಲಸವೇ ಜನರು ಪ್ರಾರ್ಥನೆಗೆ ಹೋಗುವಂತೆ ಮಾಡುವುದು.

ಪ್ರಥಮವಾಗಿ ಸೌದಿ ಅರೇಬಿಯಾಕ್ಕೆ ಬರುವವರಿಗೆ ಇದೊಂದು ವಿಚಿತ್ರ ವಿದ್ಯಮಾನವಾಗಿ ಕಾಣುತ್ತದೆ. ಪ್ರಪಂಚದಲ್ಲಿ ಬೇರಾವುದೇ ಮುಸ್ಲಿಂ ರಾಷ್ಟ್ರಗಳಲ್ಲೂ ಈ ರೀತಿಯ ವ್ಯವಸ್ಥೆಯಿಲ್ಲ. ಒಂದು ರೀತಿಯಲ್ಲಿ ಒಳ್ಳೆಯದೇ ಎಂದು ತೋರಿದರೂ ಬಹಳಷ್ಟು ಜನರಿಗೆ ಒಂಥರಾ ಕಿರಿಕಿರಿ. ಯಾವುದಾದರೂ ಕೆಲಕ್ಕೆಂದು ಹೊರಟರೆ ಆ ಸಮಯ ಪ್ರಾರ್ಥನೆಯ ಸಮಯವಾಗಿರುತ್ತದೆ. ಅದರಲ್ಲೋ ಚಳಿ ಗಾಳದಲ್ಲಿ ಸಂಜೆಯ ಮತ್ತು ರಾತ್ರಿಯ ಪ್ರಾರ್ಥನೆಗಳ ಮಧ್ಯೆ ಕೇವಲ ಒಂದು ಘಂಟೆಯ ಅಂತರ. ಅಂಥ ಸಮಯದಲ್ಲಿ ರಾತ್ರಿಯ ಪ್ರಾರ್ಥನೆ ಮುಗಿದ ನಂತರವೇ ಶಾಪಿಂಗ್ ಹೋಗುವುದು ಲೇಸು. ಜೆಡ್ಡಾ ರಾತ್ರಿ ಬದುಕಿಗೆ ಖ್ಯಾತ. ಬಹುತೇಕ ಅಂಗಡಿಗಳು ಮಧ್ಯ ರಾತ್ರಿ ವರೆಗೆ ತೆರೆದಿರುತ್ತವೆ, ಕೆಲವೊಂದು ಸೂಪರ್ ಮಾರ್ಕೆಟ್ ಗಳು ೨೪ ಘಂಟೆಯೂ ತೆರೆದಿರುತ್ತವೆ. ಹೀಗೆ ಪ್ರಾರ್ಥನೆಗೆಂದು ಅಂಗಡಿ ಮುಂಗಟ್ಟುಗಳು ಮುಚ್ಚುವ ಪರಿಪಾಠ ಕೆಲವರಿಗೆ ಬೇಸರ, ಕೋಪ ತರಿಸುತ್ತದೆ. any time is prayer time here ಎಂದು ಒಬ್ಬ ಬಿಳಿಯ ಅಸಹನೆಯಿಂದ ನನ್ನಲ್ಲಿ ಹೇಳಿದ. ಅವನೇಕೆ ನನ್ನ ಆರು ವರ್ಷದ ಮಗನೂ ಮೊನ್ನೆ ಇದೇ ರೀತಿಯ ಮಾತನ್ನಾಡಿದ. ಜರೀರ್ ಪುಸ್ತಕದಂಗಡಿ ನೋಡಿದಾಗೆಲ್ಲಾ ಅಪ್ಪ, ಜರೀರ್ ಗೆ ಹೋಗೋಣ ಬಾ (ಜರೀರ್ ಇಲ್ಲಿನ ಸುಪ್ರಸಿದ್ಧ ಪುಸ್ತಕ ಮಳಿಗೆ) ಎಂದು ಗೋಗರೆದಾಗ ಆ ಸಮಯ ಪ್ರಾರ್ಥನೆಯ ಸಮಯವಾಗಿರುತ್ತದೆ. i dont like salah, every day is salah time ಎಂದು ತನ್ನ ತನ್ನ ಹರುಕು ಮುರುಕು ಆಂಗ್ಲ ಭಾಷೆಯಲ್ಲಿ ಸಿಡಿದೇಳುತ್ತಾನೆ. ನನಗೆ “ಸಲಾ” ಇಷ್ಟವಿಲ್ಲ, ಯಾವಾಗ ನೋಡಿದರೂ ಸಲಾ ಸಮಯ ಎಂದು ಅವನು ಹೇಳುವ ರೀತಿ ಇದು.

“ಸಲಾ” ಎಂದರೆ ಅರಬಿ ಭಾಷೆಯಲ್ಲಿ “ಆರಾಧನೆ”. ನಾವು ನಮಾಜ್ ಎಂದು ಹೇಳುತ್ತೆವಲ್ಲ, ಅದು. ಸಲಾ ಎನ್ನುವ ಪದ “ಸಿಲ್” ಎನ್ನುವ ಪದದಿಂದ ಬಂದಿದ್ದು ಮತ್ತು “ಸಿಲ್” ಎಂದರೆ ಸಂಪರ್ಕ ಅಂತ. ವಾಹ್, ನಮ್ಮನ್ನು ಮಣ್ಣಿನಿಂದ ಸೃಷ್ಟಿಸಿ, ದೇವದೂತರಿಂದ ನಮಗೆ ಸಾಷ್ಟಾಂಗ ಮಾಡಿಸಿ ಅವನ ಉತ್ತಾರಾಧಿಕಾರಿಯಾಗಿ ಭೂಲೋಕ ಆಳಲು ಕಳಿಸಿದ ಪರಮಾತ್ಮನೊಂದಿಗೆ ಸಂಪರ್ಕ. ನೇರ ಸಂಪರ್ಕ. ಯಾರ ಮಧ್ಯಸ್ಥಿಕೆಯೂ ಇಲ್ಲದ ನೇರ ಒಡನಾಟ.ಇಂಥ ಪರಮಾತ್ಮನಿಗೆ ಸಾಷ್ಟಾಂಗ ಎರಗಲು ಸಮಯ ನಿಗದಿ ಪಡಿಸಿದರೆ ನಮ್ಮ ಶಾಪ್ಪಿಂಗ್ ತೆವಲಿಗೆ ಇದು ಅಡ್ಡ ಎಂದು ಅದರ ವಿರುದ್ಧ ನಮ್ಮ ತಗಾದೆ.

ನೀವು ಶಾಪಿಂಗ್ ಮಾಡುತ್ತಿರುವಾಗ ನಮಾಜಿನ ಕರೆ ಮೊಳಗಿದರೂ ನಿಮ್ಮನ್ನು ಹೊರಗಟ್ಟುತ್ತಾರೆ. ನೀವು ಗೋಣಿ ಚೀಲ ಭರ್ತಿ ರೊಕ್ಕ ಇಟ್ಟುಕೊಂಡು ಹೋಗಿದ್ದರೂ ಆ ಹಣ ಅಂಗಡಿಯವನಿಗೆ ಬೇಡ. ಮೊದಲು ಪ್ರಾರ್ಥನೆ ನಂತರ ನಿನ್ನ ವ್ಯಾಪಾರ ಎನ್ನುತ್ತಾರೆ. ಅಷ್ಟೊಂದು ಭಯ ಕಾನೂನಿನದು. ಪೊಲೀಸರು ಬಂದರೆ ಸರಿಯಾದ ದಂಡ ವಿಧಿಸುತ್ತಾರೆ ಎಂದು ಭಯ. ಕೆಲವೊಮ್ಮೆ ನನಗೂ ಅನ್ನಿಸುವುದುಂಟು. ಭಗವಂತನ ಆರಾಧನೆಗೆ ಮೂರನೆಯವರ ಬಲವಂತ ಏಕೆ ಎಂದು.

ಜೆಡ್ಡಾದಲ್ಲಿ ಸಾರಿಗೆ ತಡೆ ಸಿಕ್ಕಾಪಟ್ಟೆ. ಎಲ್ಲರ ಹತ್ತಿರವೂ ಕಾರು. ಇಲ್ಲದೆ ಏನು, ಪೆಟ್ರೋಲ್ ಒಂದು ಲೀಟರ್ ಗೆ ಇಲ್ಲಿನ ೪೫ ಪೈಸ (ಭಾರತದ ಐದು ರೂಪಾಯಿಗಿಂತ ಕಡಿಮೆ). ಕಾರನೂ ಸಾಕುವುದು ಸುಲಭ ತಾನೇ. ಹೀಗೆ ಈ ಟ್ರಾಫಿಕ್ ಅನ್ನು ದಾಟಿಕೊಂಡು ಅಂಗಡಿ ಸೇರಿದೆವು ಅನ್ನುವಷ್ಟರಲ್ಲಿ ಸಲಾ ಟೈಂ. ಕೆಲವೊಮ್ಮೆ ಶಾಪಿಂಗ್ ಮಧ್ಯೆ ನಮಾಜಿನ ಸಮಯವಾದರೂ ನಿರ್ದಾಕ್ಷಿಣ್ಯದಿಂದ ಹೊರಗಟ್ಟುತ್ತಾರೆ. ಆದರೆ ಎಲ್ಲಾ ಮಾಲುಗಳಲ್ಲೂ, ಇನ್ನಿತರ ಸ್ಥಳಗಳಲ್ಲೂ ಆರಾಧನೆಗೆ ವಿಶೇಷ ಸೌಲಭ್ಯವಿದೆ. ಏನಿಲ್ಲವೆಂದರೂ ಪ್ರತಿಯೊಬ್ಬರ ಕಾರಿನಲ್ಲಿ ಚಿಕ್ಕ ಕಂಬಳಿ (prayer rug) ಇರುತ್ತದೆ. ಎಲ್ಲಿ ನಿಂತಿರುತ್ತಾರೋ ಅಲ್ಲೇ ಹಾಸಿ ಭಗವಂತನ ಸ್ತುತಿ ಮಾಡುತ್ತಾರೆ.      

ಒಮ್ಮೆ ನಾನು ನನ್ನ ಸೋದರಿಯ ಟಿವಿ ರೆಪೇರಿ ಮಾಡಿಸಲೆಂದು “ಬಲದ್” ಎಂದು ಕರೆಯಲ್ಪಡುವ ಜೆಡ್ಡಾ ನಗರದ ಪ್ರಮುಖ ಆಕರ್ಷಣೆಯ ವಲಯಕ್ಕೆ ಹೋದೆ. ಆಗ ತಾನೇ ಸೂರ್ಯ ಅಸ್ತಮಿಸುತ್ತಿದ್ದ. ಸೂರ್ಯಾಸ್ತಮಾನದ ಪ್ರಾಥನೆಯ ಸಮಯ ಇನ್ನೂ ಸ್ವಲ್ಪ ಹೊತ್ತಿನಲ್ಲಿ ಶುರು ಆಗುವುದರಲ್ಲಿತ್ತು. ಅಷ್ಟರಲ್ಲೇ ಅಂಗಡಿ ತಲುಪಿದ ನಾನು ಅಂಗಡಿಯವನಿಗೆ ಟಿವಿ ಒಪ್ಪಿಸಿ ಬೇಕಾದ ಕಾಗದ ಅವನಿಂದ ಪಡೆದು ಅಂಗಡಿ ಹೊರಗೆ ಕಾಲಿಡುವಷ್ಟರಲ್ಲಿ ಬಂದರು ಪೊಲೀಸರು. ಅಂಗಡಿಯ ಮುಂದೆ ಜೀಪ್ ನಿಲ್ಲಿಸಿದ್ದೆ, ಧಡ ಧಡ ಇಳಿದು ನನ್ನನ್ನೂ, ಅಂಗಡಿಯ ಬಾಗಿಲು ಹಾಕುತ್ತಿದ್ದವನನ್ನೂ, ಇನ್ನಿಬ್ಬರನ್ನೂ ಜೀಪ್ ಹತ್ತಿಸಿದರು. ನಾವು ಪ್ರಾಥನೆಗೆ ಹೋಗಲೇ ಹೊರಟಿದ್ದು ಎಂದು ಹೇಳಿದರೂ ಕೇಳದೆ ನಮ್ಮಿಂದ ನಮ್ಮ ಗುರುತು ಚೀಟಿ ಪಡೆದುಕೊಂಡು ಓಡಿಸಿದರು ಜೀಪನ್ನು ಹತ್ತಿರದಲ್ಲೇ ಇದ್ದ ಮಸೀದಿಗೆ. ನನ್ನೊಂದಿಗೆ ಇದ್ದ ನಮ್ಮ ಆಫೀಸಿನ ಹುಡುಗನೊಬ್ಬ ಹೆದರಿ ಈಗೇನಾಗಬಹುದು ಎಂದು ಕಣ್ ಸನ್ನೆಯಿಂದ ಕೇಳುತ್ತಿದ್ದ. ಪಾಪ ಅವನು ಭಾರತದಿಂದ ಬಂದ ಹೊಸತು. ಎಂಥ ಸ್ವಾಗತ ಸಿಕ್ಕಿದೆ ಇವನಿಗೆ ಎಂದು ನನಗೆ ಒಂದು ಕಡೆ ನಗು, ಮತ್ತೊಂದು ಕಡೆ ಕನಿಕರ. ನನಗಂತೂ ಇಂಥವನ್ನು ಕೇಳಿ, ಓದಿ ಸಾಕಷ್ಟು ಪರಿಚಯವಿತ್ತು. ನಾವೇನೂ ಕಳ್ಳ ಕಾಕರಲ್ಲವಲ್ಲ. ಭಯ ಏಕೆ ಎಂದು ಅವರು ತಂದು ಬಿಟ್ಟ ಮಸೀದಿಯ ಬಳಿ ಇಳಿದೆ. ಪೊಲೀಸ್ ಜೀಪಿನಿಂದ ಇಳಿದ ನಮ್ಮನ್ನು ನೋಡಲು ಜನರಿಗೆ ಒಂಥರಾ ಮೋಜು. ಆಹಾ, ನಮಾಜ್ ಮಾಡದೆ ಅಡ್ಡಾಡುತ್ತೀರಾ  ಎಂದು ತುಂಟತನದಿಂದ ನಮ್ಮೆಡೆ ನೋಟ ಬೀರಿ ನಗುತ್ತಿದ್ದರು. ಒಂದು ರೀತಿಯ ಅವಮಾನ ತಾನೇ? ನಮಾಜಿನ ಸಮಯದಲ್ಲಿ ನಮಾಜ್ ಮಾಡುವುದು ಬಿಟ್ಟು ಟಿವಿ ರೆಪೇರಿ, ಮತ್ತೇನೋ ಕೆಲಸ. ಸರಿ ನಾವು ಓಡಿ ಹೋಗದಂತೆ ನಮ್ಮ ಗುರುತಿನ ಚೀಟಿ ಜಪ್ತಿ ಆಗಿದೆಯಲ್ಲ. ನಾವು ನಮಾಜ್ ಮಾಡಿ ಜೀಪಿನ ಹತ್ತಿರ ಬಂದು ಪೊಲೀಸರೊಂದಿಗೆ ನಮ್ಮ ಯಾತ್ರೆ ಠಾಣೆಯ ಕಡೆ. ನಮಾಜ್ ಮಾಡಿಸಿ ಸುಮ್ಮನೆ ತಾಂಬೂಲ ಕೊಟ್ಟು ಕಳಿಸುವುದಿಲ್ಲ. ಠಾಣೆಗೆ ಹೋಗಬೇಕು. ಸರಿ ಠಾಣೆ ತಲುಪಿದೆವು. ಅಲ್ಲಿದ್ದ ಅಧಿಕಾರಿ ಸೌಮ್ಯವಾದ ಸ್ವರದಲ್ಲಿ ಕೇಳಿದ ನಮಾಜ್ ಮಾಡಲು ಎಂದು ಧಾಡಿ ಎಂದು. ನಾವು ನಮ್ಮ ಕಾರಣವನ್ನು ಹೇಳುತ್ತಿದ್ದಂತೆ ಅದೇನನ್ನೋ ಅರಬ್ಬೀ ಭಾಷೆಯಲ್ಲಿ ಬರೆದು ಸಹಿ, ಹೆಬ್ಬಟ್ಟು ಒತ್ತಿಸಿಕೊಂಡು ಬಿಟ್ಟರು. ಯಾರೋ ಹೇಳಿದರು ಈ ರೀತಿ ಮೂರು ಬಾರಿ ನಮ್ಮ ಹೆಸರು ದಾಖಲಾದರೆ ಗಡೀಪಾರಂತೆ. ನಮ್ಮ ಕಾರಿನಿಂದ ಬಹು ದೂರ ಬಂದಿದ್ದೆವು. ಅವರೇನು ನಮ್ಮನ್ನು ಕರೆತಂದ ಸ್ಥಳಕ್ಕೆ ಬಿಡಲು ಅವರ ಬೀಗರೇ ನಾವು? ಟ್ಯಾಕ್ಸಿ ಹಿಡಿದು ನನ್ನ ಕಾರಿರುವ ಸ್ಥಳಕ್ಕೆ ಬಂದೆ. ಇಷ್ಟು ಸುಲಭವಾಗಿ ಸಮಸ್ಯೆ ಪರಿಹಾರವಾಗಿದ್ದು ನಮ್ಮ ಪುಣ್ಯವೆಂದೇ ಹೇಳಬೇಕು. ಮತ್ತೇನು ನೇಣು ಹಾಕುತ್ತಿದ್ದರಾ ಎಂದು ಕೇಳಬೇಡಿ. ನಮಾಜ್ ಮಾಡಿಸಿ, ಠಾಣೆಗೆ ತಂದ ನಂತರ ಕೆಲವು ತಲೆ ಕೆಟ್ಟ ಪೊಲೀಸರು ಅವರದೇ ಆದ ರೀತಿಯಲ್ಲಿ ರಾಟೆ ಏರಿಸುತ್ತಾರೆ. ಅಂದರೆ ನಿಮಗೆ ನಮಾಜ್ ಗೊತ್ತಲ್ಲ. ನಿಲ್ಲುವುದು, ಬಾಗುವುದು, ಸಾಷ್ಟಾಂಗ ಎರಗುವುದು, ನಂತರ ಮಗುದೊಮ್ಮೆ ನೇರವಾಗಿ ನಿಲ್ಲುವುದು. ಒಂದು ರೀತಿಯ ಶಾಸ್ತ್ರೀಯ ನೃತ್ಯ, ಕ್ಷಮಿಸಿ ಶಾಸ್ತ್ರೀಯ ಭಸ್ಕಿ. ಹೀಗೆ ಮೂರು ಸಲ ಆವರ್ತಿಸಿದಾಗ ಸೂರ್ಯಾಸ್ತಮಾನದ ನಮಾಜ್ ಮುಗಿದಂತೆ.  ಈ ರೀತಿಯ ಬಾಗುವುದು, ಏಳುವುದು ಈ ಸರ್ಕಸ್ಸನ್ನು ಸುಮಾರು ಐವತ್ತೋ, ನೂರೋ ಸಲ ಮಾಡಿಸಿ ಬಿಡುತ್ತಾರೆ. ಅದಾದ ಮೇಲೆ ಆಗುವ ಗತಿ ಗೊತ್ತೇ ಇದೆಯಲ್ಲ, ಅನುಭವ ಚಿತ್ರದಲ್ಲಿ ಕಾಶೀನಾಥ್ ಹುಡುಗಿಯರನ್ನು ಪಟಾಯಿಸಲು ಬಾಡಿ ಬಿಲ್ಡ್ ಎಂದು ಭಸ್ಕಿ ಜೋರಾಗಿ ಹೊಡೆದು ನಡೆದ ಶೈಲಿ. ಆ ಗತಿ ನಮಾಜ್ ಮಾಡದವನಿಗೆ. ದೇವರಾದರೂ ಕನಿಕರ ತೋರಿಸಿಯಾನು, ಪೊಲೀಸರು ತೋರಿಸುವುದಿಲ್ಲ.

ಜನರಿಂದ ನಮಾಜ್ ಮಾಡಿಸಿದ ಈ ಪೊಲೀಸರು ಬಿಡುವಿದ್ದರೆ ಮಾಲ್ ಗಳಿಗೆ ಹೋಗುತ್ತಾರೆ ಚೇಷ್ಟೆಗೆಂದು ಬರುವ ಪಡ್ಡೆ ಹುಡುಗ ಹುಡುಗಿಯರಿಗಾಗಿ. ಸ್ವಲ್ಪ ಅನುಮಾನ ಕಂಡರೂ ಸಾಕು ಅವರನ್ನು ಕರೆದು ತಾಕೀತು ಮಾಡುತ್ತಾರೆ, ಇಲ್ಲಾ ಭಸ್ಕಿ ಹೊಡೆಸಿ ಗೋಳು ಹೊಯ್ದುಕೊಳ್ಳುವ ಪೋಲೀಸರಾದರೆ ಅಪ್ಪಂದಿರನ್ನು ಕರೆಸುತ್ತಾರೆ ಠಾಣೆಗೆ. ಜನ್ಮ ಕೊಟ್ಟರೆ ಸಾಲದು, ಸರಿಯಾಗಿ ಸಾಕಬೇಕು ಎಂದು ಬುದ್ಧಿ ಹೇಳಲು. ಇವರ ವಿರುದ್ಧ ಯಾರೂ ಸೊಲ್ಲೆತ್ತುವುದಿಲ್ಲ, ಏಕೆಂದರೆ ಇವರ ವಿರುದ್ಧ ನೀವು ನ್ಯಾಯಾಲಯದ ಮೆಟ್ಟಿಲು ಹತ್ತಿದರೂ ಪ್ರಯೋಜನವಿಲ್ಲ, ನ್ಯಾಯ ಹೇಳುವವನೂ ಇವರ ವರ್ಗಕ್ಕೇ ಸೇರಿದವನು. 

ಒಮ್ಮೆ ನಗರದ ಮಧ್ಯ ಭಾಗದಲ್ಲಿರುವ ಹಿರಾ ಮಾಲ್ನಲ್ಲಿ ಅಡ್ಡಾಡುತ್ತಾ ಇರುವಾಗ ಕಂಡಿದ್ದು. ನಾಲ್ಕು ಜನ ಹುಡುಗರು ಬೆರ್ಮುಡ, ಉದ್ದದ ಕೂದಲು, ಕೊರಳಿಗೆ ಸರ, ಕೈಗೆ ಕಡಗ ಹೀಗೆ ಒಂದು ಥರಾ ಜಿಪ್ಸಿ ಗಳ ಥರಾ ನಡೆಯುತ್ತಿದ್ದರು. ಆಗಮನವಾಯಿತು ಈ ಪೊಲೀಸರದು.  ಸಮಾಜದಲ್ಲಿ ನೈತಿಕತೆ ಕಾಪಾಡಲು ನಿಯಮಿಸಲ್ಪಟ್ಟ “ಮುತಾವಾ”ಗಳು. ಆ ಹುಡುಗರನ್ನು ನಿಲ್ಲಿಸಿ ಶುರು ಮಾಡಿದರು ಪ್ರಶ್ನೆಗಳನ್ನು. ಕೂದಲು ಹೀಗೇಕೆ ಬಿಟ್ಟಿದ್ದೀಯ, ಇದೇನು ನಿನ್ನ ಅವತಾರ, ನೀವೆಲ್ಲಿ ವಾಸವಾಗಿದ್ದೀರಾ….. ಹುಡುಗರು ಭಯದಿಂದ ಕೇಳಿದ ಪ್ರಶ್ನೆಗಳಿಗೆ ತಡಬಡಿಸಿ ಉತ್ತರಿಸಿ ಇನ್ನು ಈ ವೇಷದಲ್ಲಿ ನಾವು ಅಡ್ಡಾಡುವುದಿಲ್ಲ ಎಂದು ಹೇಳಿ ಅವರ ಕೈಗಳಿಂದ ತಪ್ಪಿಸಿಕೊಂಡರು. ಕೆಲವೊಮ್ಮೆ ಇಷ್ಟರಲ್ಲೇ ನಿಲ್ಲುತ್ತದೆ ಈ ವಿಚಾರಣೆ, ಒಂದಿಷ್ಟು ಕೌನ್ಸೆಲಿಂಗ್ನೊಂದಿಗೆ. ಒಂದು ದಿನ ನಾನು ನನ್ನ ಶ್ರೀಮತಿ ಮಕ್ಕಾದ ಮಸೀಯಿಂದ ಹೊರ ನಡೆಯುತ್ತಿದ್ದಾಗ ಬಂದ ಇಂಥದ್ದೇ ಒಬ್ಬ ಪೋಲೀಸಪ್ಪ. ನನ್ನನ್ನು ತಡೆದು ನಿನ್ನ ಪತ್ನಿಯೇಕೆ perfume ಧರಿಸಿದ್ದಾಳೆ ಎಂದು. ನೀನೆಕಪ್ಪ ನನ್ನ ಹೆಂಡತಿಗೆ ಮೂಗು ತಾಗಿಸಿದ್ದು ಎಂದು ಕೇಳಲು ಮನಸ್ಸಾದರೂ ನಿನ್ನ ಮೂಗಿಗೆ ಬಡಿದಿದ್ದು ನನ್ನ Mont Blanc ಪರ್ಫ್ಯೂಂ ಎಂದು ಹೇಳಿ ಮುಂದೆ ನಡೆದೆ. ಸ್ತ್ರೀಯರು ಸುಗಂಧ ದ್ರವ್ಯ ಹಚ್ಚಿಕೊಳ್ಳಬಾರದು, ಅದು ಪರ ಪುರುಷರಿಗೆ open invitation.

ಕೆಲವೊಮ್ಮೆ ನವಿರಾಗಿ ವರ್ತಿಸುವ “ಮುತಾವಾ” ಎಂದೂ ಕರೆಯಲ್ಪಡುವ ಈ ಸಮಾಜ ಸುಧಾರಕರಿಂದ  ಸಮಾಜಕ್ಕೇನೋ ಒಳ್ಳೆಯದೇ. ಇಲ್ಲಿನ ನಿಯಮಿತ ಸ್ವಾತಂತ್ರ್ಯದ ಚೌಕಟ್ಟಿನೊಳಗೆ ಅನಿಯಮಿತವಾಗಿ ವರ್ತಿಸುವ ಯುವ ವರ್ಗಕ್ಕೆ, ಯೌವ್ವನದ ಎಗ್ಗಿಲ್ಲದ ರಭಸಕ್ಕೆ  ತಡೆ ಒಡ್ಡುವ ಇಂಥ road hump ಗಳು ಅವಶ್ಯಕ.

ಸೌದಿ ಅರೇಬಿಯಾದಲ್ಲಿ ಆಗುವ ಭಗವಂತನ ನಾಮ ಸ್ಮರಣೆ ಬೇರಾವ ದೇಶದಲ್ಲೂ ಆಗಲಿಕ್ಕಿಲ್ಲವೇನೋ. ರಸ್ತೆ ಬದಿಯಲ್ಲಿ, ಬ್ಯಾಂಕಿನಲ್ಲಿ ಸರತಿಯಲ್ಲಿ ನಿಂತಾಗ, ಜಾಹೀರಾತಿನ ಮಧ್ಯೆ ಹೀಗೆ ಎಲ್ಲೆಡೆ ದೇವರನ್ನು ಸ್ಮರಿಸಲು, ಕೊಂಡಾಡಲು ಕರೆ. ಹೀಗೆ ಸದಾ ದೇವನಾಮ ಸ್ಮರಣೆ ಮಾಡುವ ಸಮಾಜ ಅದೇ ದೇವನ ಆದೇಶವನ್ನು ಕಡೆಗಣಿಸುವುದರಲ್ಲೂ ಮುಂದು ಎಂದರೆ ನಿಮಗೆ ಅಚ್ಚರಿ ಆಗಬಹುದು. ಈ ದ್ವಂದ್ವ ನಮಗೆ ಹೇರಳವಾಗಿ ಈ ಮರಳುಗಾಡಿನಲ್ಲಿ ಕಾಣಲು ಸಿಗುತ್ತದೆ.

ಧರ್ಮ ಮತ್ತು ಹಿಂಸೆ

“ಜಗತ್ತಿನಲ್ಲಿನ ಜಿಹಾದ್ ಮೂಲಕ “ಕಾಷಿರ್”(ಸುಳ್ಳು ದೇವರ ಆರಾಧಕರು ಅಥವಾ false religion worshipers) ಜನರನ್ನು ಕೊಂದು ನಮ್ಮ ಸತ್ಯ ಮತ್ತು ಏಕೈಕ ದೇವರ ಸಾಮ್ರಾಜ್ಯವನ್ನು ಸ್ಥಾಪಿಸಬೇಕು ಎಂದು ನಂಬುತ್ತದೆ” ಎಂದು ಅಂತರ್ಜಾಲದ ಮಾಧ್ಯಮವೊಂದರಲ್ಲಿ ಒಬ್ಬರ ಅಭಿಪ್ರಾಯ. ಮೇಲಿನ ಹೇಳಿಕೆ ನನ್ನ ಪ್ರಕಾರ ಬಾಲಿಶ. ಭಯೋತ್ಪಾದನೆ ಇಸ್ಲಾಂ ಧರ್ಮ ವಿರೋಧಿ ಎಂದು ಭಾರತದ ಮಾತ್ರವಲ್ಲ ಜಗತ್ತಿನ ಎಲ್ಲಾ ಮುಸ್ಲಿಮ ಧರ್ಮಗುರುಗಳು (ಉಲೇಮ) ಹೇಳಿಕೆ ನೀಡಿದ್ದಾರೆ. “ಕಾಫಿರ್” ಅನ್ನುವ ಪದದ ಬಗ್ಗೆ ಬಹಳಷ್ಟು ವಿವಾದಗಳಿವೆ. ಮುಸ್ಲಿಮೇತರರನ್ನು ಕಾಫಿರರೆಂದು ತೆಗಳಬಾರದು ಮತ್ತು ಸಂಬೋಧಿಸಬಾರದೆಂದು ಮುಸ್ಲಿಂ ಪಂಡಿತರ ಅಭಿಪ್ರಾಯ. ಅಷ್ಟಕ್ಕೂ ಕಾಫಿರ್ ಅನ್ನುವ ಪದಕ್ಕೆ ಹಲವು ಅರ್ಥಗಳಿವೆ. ಕಾಫಿರ್ ಅಂದರೆ “ವಿರೋಧಿಸುವವ” ಮತ್ತು “ಮರೆಮಾಚುವವ” ಎಂದೂ ಅರ್ಥೈಸುತ್ತಾರೆ. ಹೊಲದಲ್ಲಿ ರೈತ ಬೀಜ ಬಿತ್ತುವುದಕ್ಕೆ “ಕುಫ್ರ್” (ಕಾಫಿರ್ ನ ಮೂಲ ಪದ “ಕುಫ್ರ್”) ಎನ್ನುತ್ತಾರೆ, ಅಂದರೆ ಆತ ಬೀಜವನ್ನು ಬಿತ್ತಿ ಮಣ್ಣಿನಿಂದ ಮುಚ್ಚುತ್ತಾನೆ ಎಂದು ಅರ್ಥ. ನಿತ್ಯ ಜೀವನದಲ್ಲಿ ಮುಸ್ಲಿಮರನ್ನು ಧ್ವೇಷದಿಂದ ನಾವು ಸಾಬ, ತುರ್ಕ, ಮುಸಲ, “ಹಲಾಲ್ ಖೋರ್” (ಸಂಪದದಲ್ಲಿ ಕೇಳಿದ್ದು) ಹೀಗೆ ವಿವಿಧ ನಾಮಾವಳಿಗಳಿಂದ ಕರೆದು ಹಿಗ್ಗುವುದು ಒಂದು ಪರಿಪಾಠವಾದಾಗ ಹಾಗೆ ಕರೆಯುವವರನ್ನು ಬಹುಶಃ ಮುಸ್ಲಿಮರು ಬೇಸರದಿಂದ ಕಾಫಿರರೆಂದು ಕರೆಯುತ್ತಾರೇನೋ. ಆದರೂ ಬಹುಪಾಲು ಮುಸ್ಲಿಮರು ಹಿಂದೂಗಳನ್ನು ಹಾಗೆ ಕರೆಯುವುದನ್ನು ನಾನು ಕೇಳಿಲ್ಲ. (personally, any amount of provocation will not entice or induce me to label people as kafirs) ಒಬ್ಬನ ಮನಸ್ಸನ್ನು ನೋಯಿಸುವುದು, ಘಾಸಿಗೊಳಿಸುವುದು ಒಂದು ಮಸೀದಿಯನ್ನು ಕೆಡವಿದಂತೆ ಎಂದು ಹಿರಿಯರು ಹೇಳುತ್ತಾರೆ. ಅಂಥ ಉನ್ನತ ಸಂಸ್ಕಾರದಲ್ಲಿ ಮಿಂದ ಒಬ್ಬ ವ್ಯಕ್ತಿ ಯಾರ ಮನಸ್ಸನ್ನೂ ನೋಯಿಸುವುದಿಲ್ಲ.

“ಸೆಮೆಟಿಕ್” ಧರ್ಮಗಳು ಎಂದರೆ ಪ್ರವಾದಿ ಅಬ್ರಹಾಮರ ಧರ್ಮವನ್ನು ನಂಬಿ ನಡೆಯುವವರು ಎಂದು ಸಾಮಾನ್ಯ ತಿಳಿವಳಿಕೆ. ಸೆಮೆಟಿಕ್ ಪದಕ್ಕೆ ಬಹು ದೊಡ್ಡ ವ್ಯಾಖ್ಯಾನವಿದೆ. ಯಹೂದ್ಯ, ಕ್ರೈಸ್ತ, ಇಸ್ಲಾಂ ಧರ್ಮಗಳು ಸೆಮೆಟಿಕ್. ಆದರೂ ಸಹ ಕ್ರೈಸ್ತರು ಮತ್ತು ಯಹೂದ್ಯರು ಇಸ್ಲಾಮ್ ಧರ್ಮವನ್ನ ಸೆಮೆಟಿಕ್ ಎಂದು ಭಾವಿಸುವುದಿಲ್ಲ. ಇಸ್ಲಾಂ ಯಹೂದ್ಯರ “ಮೋಸೆಸ್”, ಮತ್ತು ಕ್ರೈಸ್ತರ “ಏಸು” ಇವರುಗಳನ್ನು ದೇವನ ಸಂದೇಶವಾಹಕರು ಎಂದು ನಂಬಿ ಗೌರವಿಸುತ್ತಾರೆ. ಅವರುಗಳನ್ನು ಏಕ ವಚನದಲ್ಲೂ ಸಂಬೋಧಿಸುವುದಿಲ್ಲ. ಅವರ ಹೆಸರುಗಳನ್ನು ತಮ್ಮ ಮಕ್ಕಳಿಗೆ ನಾಮಕರಣವನ್ನೂ ಮಾಡುತ್ತಾರೆ.(ನನ್ನ ಮಗಳ ಹೆಸರು “ಇಸ್ರಾ ಮರ್ಯಮ್”. ಮರ್ಯಮ್, ಯೇಸು ಮಾತೆ) ಪ್ರವಾದಿಗಳು ಯಹೂದ್ಯರನ್ನು ಮತ್ತು ಕ್ರೈಸ್ತರನ್ನು “ಒಡಂಬಡಿಕೆಗಳ ಜನ” ಎಂದು ಅವರನ್ನು ಗೌರವದಿಂದ ನಡೆಸಿ ಕೊಂಡಿದ್ದು ಮಾತ್ರವಲ್ಲ ಅವರೊಂದಿಗೆ ವ್ಯವಹಾರವನ್ನೂ ನಡೆಸುತ್ತಿದ್ದರು. ಪವಿತ್ರ ಕುರಾನಿನಲ್ಲಿ ಯಹೂದ್ಯರನ್ನು, ಕ್ರೈಸ್ತರನ್ನೂ, ಸೇಬಿಯನ್ನರನ್ನೂ “ಗ್ರಂಥಗಳ ಸಮುದಾಯ” ಎಂದು ಸಂಬೋಧಿಸಿದ್ದರಿಂದ ಅವರ ಮೇಲೆ unprovoked ಆಕ್ರಮಣ ಮಾಡುವಂತಿಲ್ಲ. ಧರ್ಮ ಯುದ್ಧ ಗಳ ಸಮಯದಲ್ಲಿ ಯಾವುದೇ ಕಾರಣಕ್ಕೂ ಇಗರ್ಜಿ, ಮತ್ತು ಕ್ರೈಸ್ತ ಸಂತರು ವಾಸಿಸುವ ನಿವಾಸಗಳ ಮೇಲೆ ಆಕ್ರಮಣ ಕೂಡದು ಎಂದು ಸ್ಪಷ್ಟವಾಗಿ ಇಸ್ಲಾಮಿನ ಪ್ರಥಮ ಖಲೀಫಾ ಅಬೂ ಬಕ್ಕರ್ ನಿರ್ದೇಶಿಸಿದ್ದರು.

ಇಸ್ಲಾಮಿನ ಎರಡನೇ ಖಲೀಫಾ ಉಮರ್ ಮುಸ್ಲಿಂ ಸೇನೆ ವಶಪಡಿಸಿಕೊಂಡ ಜೆರುಸಲೆಂ ನಗರಕ್ಕೆ ಭೇಟಿ ಕೊಟ್ಟಾಗ ಅಲ್ಲಿನ ಇಗರ್ಜಿಗೆ ಹೋಗಿ ಧರ್ಮಗುರುಗಳನ್ನು ಭೇಟಿಯಾಗುತ್ತಾರೆ. ಸ್ವಲ್ಪ ಹೊತ್ತಿನಲ್ಲೇ ಪ್ರಾರ್ಥನೆಯ ಕರೆ ಕೇಳಿಬರುತ್ತದೆ. ಕೂಡಲೇ ಪಾದ್ರಿ ಉಮರ್ ರವರಿಗೆ ಪ್ರಾರ್ಥಿಸಲೆಂದು ಕಂಬಳಿಯನ್ನು ಇಗರ್ಜಿಯಲ್ಲೇ ಹಾಸುತ್ತಾರೆ. ಸೌಮ್ಯವಾಗಿ ನಿರಾಕರಿಸಿದ ಉಮರ್ ಇಗರ್ಜಿಯಿಂದ ಹೊರಕ್ಕೆ ಸ್ವಲ್ಪ ದೂರ ಹೋಗಿ ನಮಾಜ್ ನಿರ್ವಹಿಸುತ್ತಾರೆ. ಆಗ ಪಾದ್ರಿ ಕೇಳುತ್ತಾರೆ, ಖಲೀಫಾ ಉಮರ್, ಏಕೆ ಇಗರ್ಜಿಯಲ್ಲಿ ನಮಾಜ್ ಮಾಡಕೂಡದು ಎಂದೇನಾದರೂ ಇಸ್ಲಾಮಿನಲ್ಲಿ ಇದೆಯಾ ಎಂದು. ಆಗ ಉಮರ್ ಹೇಳುತ್ತಾರೆ, ಹಾಗೇನಿಲ್ಲ, ಆದರೆ ನಾನು ಇಗರ್ಜಿಯಲ್ಲಿ ನಮಾಜ್ ಮಾಡಿದ ಕಾರಣಕ್ಕೆ ಭವಿಷ್ಯದಲ್ಲಿ ಧರ್ಮದ ತಿರುಳರಿಯದ ಮುಸ್ಲಿಂ ಮತಾಂಧರು ಈ ಇಗರ್ಜಿಯನ್ನೇ ಕೆಡವಿ ಮಸೀದಿ ನಿರ್ಮಿಸಬಹುದು ಎನ್ನುವ ಆತಂಕದಿಂದ ನಾನು ಬಯಲಿನಲ್ಲಿ ನಮಾಜ್ ಮಾಡಿದೆ ಎಂದು ಹೇಳುತ್ತಾರೆ. ಈ ಮಹಾನ್ ಚೇತನ ಆಡಿದ ಇಂಥ ಮಾತಿಗೆ ಸರಿಸಾಟಿಯಾದ ಒಂದೇ ಒಂದು ಮಾತನ್ನು ಚರಿತ್ರೆಯಿಂದ ಹೆಕ್ಕಿ ತೋರಿಸಲು ನಮಗೆ ಸಾಧ್ಯವಾಗದು.

ಸೆಮೆಟಿಕ್ ಧರ್ಮಗಳು ಹಿಂಸೆ ಯನ್ನು ಪ್ರೋತ್ಸಾಹಿಸುತ್ತವೆ ಎಂದು ಹೇಳುವುದು ಅಜ್ಞಾನದ ಕುರುಹು. ಮೇಲಿನ ಪರಧರ್ಮ ಸಹಿಷ್ಣುತೆಯ ಒಂದಲ್ಲ, ಲೆಕ್ಕವಿಲ್ಲದ ಉದಾಹರಣೆಗಳು ಇಸ್ಲಾಮೀ ಚರಿತ್ರೆಯಲ್ಲಿ ನಮಗೆ ಕಾಣಲು ಸಿಗುತ್ತವೆ. ಮುಸ್ಲಿಮರಿಗೆ ಆದರ್ಶ ವ್ಯಕ್ತಿಗಳು ಪ್ರವಾದಿಗಳು, ನಂತರ ಬಂದ ನಾಲ್ಕು ಖಲೀಫಾ ನಾಯಕರುಗಳು, ಪಾಶ್ಚಿಮಾತ್ಯರು ಈಗಲೂ ಕೊಂಡಾಡುವ ಸುಲ್ತಾನ್ ಸಲಾಹುದ್ದೀನ್ ಅಯ್ಯೂಬಿಯಂಥ ಮಹಾ ವ್ಯಕ್ತಿಗಳು. ಇವರಾರೂ ಧರ್ಮ ಬೇರೆ ಎಂದು ಹೇಳಿ ಪರಧರ್ಮೀಯರನ್ನು ನಿಕೃಷ್ಟವಾಗಿ ನಡೆಸಿಕೊಂಡಿಲ್ಲ. ಚರಿತ್ರೆಯಲ್ಲಿ ತಮ್ಮ ಸ್ವಾರ್ಥ, ಅಧಿಕಾರ ಮತ್ತು ಸಾಮ್ರಾಜ್ಯ ವಿಸ್ತರಣೆಗೆ ಬಂದ ದಂಡು ಕೋರರೋ, ಲೂಟಿಕೋರರೋ ಮುಸ್ಲಿಮರಿಗೆ ಆದರ್ಶ ಅಲ್ಲ ಹಾಗೂ ಧರ್ಮ ಸಮ್ಮತವಲ್ಲದ ಕೆಲಸ ಮಾಡಿದ ರಾಜರ ಬಗ್ಗೆ ಮುಸ್ಲಿಮರಿಗೆ ಹೆಮ್ಮೆಯೂ ಇಲ್ಲ.

ಬರಹಾ, ನೂರು ನೂರು ತರಹಾ

ವಿರಹಾ, ನೂರು ನೂರು ತರಹಾ, ಹಾಗೆಯೇ ಬರಹಾ ನೂರು ನೂರು ತರಹಾ ಎನ್ನಬಹುದು. ಬರೆಯಲು ಪ್ರೇರಣೆ ಬೇಕಂತೆ. ಯಾವುದರ ಬಗ್ಗೆ ಬರೆಯುವುದು, ನಾನು ಬರೆದದ್ದು ಜನ ಓದುವರೋ, ನಗುವರೋ? ಈ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳಲು ಪ್ರಯತ್ನಿಸಿ ಇರುವ ಸಮಯ ಹಾಳು ಮಾಡಿಕೊಳ್ಳಬೇಡಿ. ನಗುವವರು ನಗಲಿ, ನೀವೇನೆ ಮಾಡಿದರೂ ನಗುವವರು ಇರುತ್ತಾರೆ, ಏಕೆಂದರೆ ತಾವು ಮಾಡಲಾಗದ ಅಥವಾ ಸೋಮಾರಿತನದಿಂದ ಮಾಡಲು ಇಷ್ಟವಿಲ್ಲದ ಜನ ಎಲ್ಲರೂ ತಮ್ಮಂತೆಯೇ ಇರಲಿ ಎಂದು ಆಶಿಸುತ್ತಾರೆ. ಅವರ ಈ ಬಯಕೆಗೆ ನೀವು ಬಲಿಯಾಗುವುದು ಬೇಡ. ಬರಹಕ್ಕೆ ಬೇಕಾದ ವಸ್ತು, ಪ್ರೇರಣೆ ಬಗ್ಗೆ ಬ್ಲಾಗೊಂದರಲ್ಲಿ ಬಂದದ್ದು ನೋಡಿ. ಇದನ್ನು ನಾವೂ ಅಳವಡಿಸಿಕೊಳ್ಳಬಹುದು.

ಯಾವುದಾದರೂ ಒಂದು ಚಿತ್ರವನ್ನು ಆರಿಸಿಕೊಳ್ಳುವುದು. ಅದರ ಬಗ್ಗೆ ಒಂದೆರಡು ವಾಕ್ಯಗಳ ವಿಶ್ಲೇಷಣೆ. ದಿನ ಪೂರ್ತಿ ಚಿತ್ರದ ಮುಂದೆ ಕೂತು ಆಲೋಚನೆ ಮಾಡುವುದಲ್ಲ. ೧೦ ಅಥವಾ ೧೫ ನಿಮಿಷಗಳಿಗೆ ಅಲಾರಂ ಇಟ್ಟು ಬರೆಯುವುದು, ಸಮಯ ಮುಗಿದು ಘಂಟೆ ಮೊಳಗಿದ ಕೂಡಲೇ ನಿಲ್ಲಿಸಬೇಕು ಬರವಣಿಗೆಯನ್ನು.

ಅಲಾರ್ಮ್ ನ ಉದ್ದೇಶ “writer’s block” (ಬರಹಗಾರನಿಗೆ ಎದುರಾಗುವ ತಡೆ) ಅನ್ನು ತಡೆಯುವುದು. ೧೦ ಅಥವಾ  ೧೫ ನಿಮಿಷಗಳ ಗಡುವನ್ನು ಇಟ್ಟುಕೊಂಡು ಬರೆದಾಗ ಏನನ್ನಾದರೂ ಗೀಚಲೇಬೇಕು, ಹೀಗೆ ಗೀಚಿ ದಾಗಲೇ ಮೂಡುವುದು ಬರಹ ಅಕ್ಷರಗಳ ರೂಪದಲ್ಲಿ.

ಚಹಾ ಅಥವಾ ಕಾಫಿಗೆ ಎಲ್ಲಾದರೂ ಹೋಗುತ್ತೀರಲ್ಲ. ಚಹಾ ಹೀರುತ್ತಾ ಅಲ್ಲಿ ಕುಳಿತ ಯಾರದರೊಬ್ಬರ ಬಗ್ಗೆ ಬರೆಯುವುದ. ಅವನ ರೂಪ, ಚಹಾ ಹೀರುವ ರೀತಿ (ನೂರೊಂದು ರೀತಿಯಲ್ಲಿ ಚಹಾ ಹೀರುವುದನ್ನು ಕಾಣಬಹುದು), ಅವನ ವೇಷ… ಹೀಗೆ.. ಅದೂ ಸಹ ಮೇಲೆ ಹೇಳಿದ ರೀತಿಯಲ್ಲಿ. ಅಲಾರ್ಮ್ ಘಂಟೆಯನ್ನು  ಹೊತ್ತು ಕೊಂಡು ಹೋಗುವ ಅವಶ್ಯಕತೆಯಿಲ್ಲ, ಎಲ್ಲಾ mobile ಗಳಲ್ಲೂ ಇರುವಂಥದ್ದೇ.

ರೈಲು ಅಥವಾ ಬಸ್ ನಿಲ್ದಾಣದಲ್ಲಿ ಕಾಣುವ ದೃಶ್ಯಗಳು, ಜಾಹೀರಾತುಗಳು ಇವನ್ನು ಬರೆದಿಟ್ಟು ಕೊಳ್ಳುವುದು. ಮನೆಗೆ ಬಂದು ನಿಮ್ಮದೇ ಶೈಲಿಯಲ್ಲಿ ಬರೆಯುವುದು.

ಹೀಗೆ ಸ್ವಾರಸ್ಯಕರವಾಗಿ ಮೋಜಿನ ರೀತಿಯಲ್ಲಿ ಬರೆದು ಬರಹದ ಬೆಗ್ಗೆ ಹೆಚ್ಚು ಆಸಕ್ತಿ ವಹಿಸಿಕೊಳ್ಳಬಹುದು.

ಅಮ್ಮಾ, ನಾನ್ಹೇಗೆ ಹುಟ್ಟಿದೆ?

ಮಕ್ಕಳ ಹತ್ತು ಹಲವು ಕುತೂಹಲಗಳಲ್ಲಿ ಒಂದು ಮಕ್ಕಳು ಹೇಗೆ ಹುಟ್ಟುತ್ತವೆ ಎಂದು.  ನಾನ್ಹೇಗೆ ಬಂಡೆ ಎನ್ನುವ ಈ ಮಕ್ಕಳ ಪ್ರಶ್ನೆ ನಮ್ಮನ್ನು ತಬ್ಬಿಬ್ಬು ಮಾಡುವುದು ಸಹಜವೇ. ಐದನೇ ಕ್ಲಾಸಿನಲ್ಲಿದ್ದಾಗ ನನ್ನ ಪೋಲಿ ಗೆಳೆಯನೊಬ್ಬ ವಿವರವಾಗಿ ತಿಳಿಸಿ ಹೇಳಿದರೂ ತಂದೆ ತಾಯಿ ಬಗೆಗಿನ ಅಪಾರವಾದ ಗೌರವ ಅವನ ಕಥೆಯನ್ನೂ ನಂಬದಂತೆ ತಡೆದಿತ್ತು. ನಾನು ಅಂದು ಕೊಂಡಿದ್ದು ಮಕ್ಕಳು ಬೇಕೆಂದಾಗ ತಂದೆ ತಾಯಿಗಳು ದೇವರಲ್ಲಿ ಕೇಳಿ ಕೊಳ್ಳುತ್ತಾರೆ ಮತ್ತು ಆ ಕರುಣಾಮಯನಾದ ದೇವರು ಮಕ್ಕಳನ್ನು ಕರುಣಿಸುತ್ತಾನೆ ಎಂದು, ಆದರೆ ಮೇಲೆ ಹೇಳಿದಂಥ ಪೋಲಿ ಪೋಕರಿಗಳು ವಕ್ಕರಿಸಿ ಹಾಗಲ್ಲ ಕಣೋ ಬೆಪ್ಪೆ ಹೀಗೆ ಎಂದು ಸವಿವರವಾಗಿ ಹೇಳಿದಾಗ ಅಪ್ಪ ಅಮ್ಮನ ನನ್ನು ಸಂಶಯ ದಿಂದ ನೋಡುವಂತಾಗುತ್ತಿತ್ತು.

ಈ ಚಿತ್ರ ನೋಡಿ. ಜರ್ಮನಿ ದೇಶದಲ್ಲಿ ಮಕ್ಕಳು ಹೇಗೆ ಬರುತ್ತಾರೆ ಎಂದು ಮಕ್ಕಳಿಗೆ ತಿಳಿ ಹೇಳಲು ಪುಸ್ತಿಕೆಗಳು. ಅದರಲ್ಲಿನ ಒಂದು ದೃಶ್ಯ ನೀವೀಗ ನೋಡುತ್ತಿರುವುದು.

ಗಾಂಧೀಜಿ ಕಂಡುಕೊಂಡ ಲೈಂಗಿಕತೆ

ಬಡಕಲು ಶರೀರದ, ತುಂಡು ಬಟ್ಟೆಯ, ಬ್ರಿಟಿಷರು “ಫಕೀರ ಎಂದು ಕರೆಯುತ್ತಿದ್ದ ಗಾಂಧಿ ಒಂದು ಅಪರೂಪದ ವ್ಯಕ್ತಿತ್ವ. ಬಿಳಿಯರ ದಾಸ್ಯದಿಂದ ಅಹಿಂಸಾತ್ಮಕವಾಗಿ ನಮಗೆ ಮುಕ್ತಿ ಕೊಡಿಸಿದ ಗಾಂಧೀಯ ಬಗ್ಗೆ ಕೆಲವರಿಗೆ ಪೂಜ್ಯ, ಗೌರವ ಭಾವನೆ ಇದ್ದರೆ ಇನ್ನೂ ಕೆಲವರಿಗೆ ಅವರ ಆದರ್ಶ ಮತ್ತು ಆಶಯಗಳ ಬಗ್ಗೆ ತಕರಾರು. ನಾನು ಚಿಕ್ಕವನಿದ್ದಾಗ ಶಾಲೆಯಲ್ಲಿ ಚರಿತ್ರೆಯ ಅಧ್ಯಾಪಕರು ಗಾಂಧೀಯವರನ್ನು ಏಕವಚನದಲ್ಲಿ ಸಂಬೋಧಿಸಿ ತಮ್ಮದೇ ಆದ ರಾಜಕೀಯ ಆಶಯಗಳ ಚರಿತ್ರೆ ಓದುತ್ತಿದ್ದಾಗ ಸಿಟ್ಟಿಗೆದ್ದಿದಿದೆ. ಮನೆಗಳಲ್ಲಿ ನಾವು ಕಲಿತಿದ್ದು ಹಿರಿಯರನ್ನು ಗೌರವಿಸಬೇಕು, ಬಹುವಚನದಲ್ಲಿ ಕರೆಯಬೇಕು ಎಂದು. ಅದರಲ್ಲೂ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾ ಚೇತನ ಎಂದರಂತೂ ಏಕವಚನ ದೂರವೇ ಉಳಿಯಿತು. ದೊಡ್ಡವನಾಗುತ್ತಾ ಗಾಂಧಿಯ ಬಗ್ಗೆ ಇನ್ನೂ ಚಿತ್ರ ವಿಚಿತ್ರ ಸಂಗತಿಗಳು ಕೇಳಲು ಸಿಕ್ಕವು. ಗಾಂಧೀ ರಾಜಕಾರಣದ ಬಗ್ಗೆ ಅವರ ಉದ್ದೇಶಗಳ ಬಗ್ಗ್ಗೆ ಹಲವರಿಗೆ ಹಲವು ರೀತಿಯ ಅಭಿಪ್ರಾಯ. ವಿಚಿತ್ರವೆಂದರೆ ಗಾಂಧೀ ಬಗ್ಗೆ ದೇಶದ ಒಳಗೆ ಮಾತ್ರ ವಿರೋಧವಲ್ಲ, ಅವರು ಒಂದು ನಿರ್ದಿಷ್ಟ ಸಮುದಾಯವನ್ನು ಓಲೈಸುತ್ತಿದ್ದಾರೆಂದು, ಮುಸ್ಲಿಂ ದೇಶವನ್ನು ಹುಟ್ಟುಹಾಕಲು ಕಾರಣಕರ್ತರಾದರೆಂದು ಅವರನ್ನು ವಧಿಸಿದ ನಾಥೂರಾಂ ಗೋಡ್ಸೆಯ ಅಭಿಪ್ರಾಯದಿಂದ ಹಿಡಿದು ಪಾಕಿಸ್ತಾನದ ದಿವಂಗತ ಮಾಜಿ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೋ ವರೆಗೂ ಅವರ ಬಗ್ಗೆ ಸಂಶಯ. ಭುಟ್ಟೋ ತಾವು ಬರೆದ ಪುಸ್ತಕವೊಂದರಲ್ಲಿ ಗಾಂಧೀಜೀ ಹೀಗೆ ಹೇಳಿದ್ದರೆಂದು ಉಲ್ಲೇಖಿಸಿದ್ದರು. “ಒಂದು ವೇಳೆ ಹಿಂದೂಧರ್ಮ ಭಾರತದಿಂದ ಅಥವಾ ಏಷಿಯಾ ಖಂಡದಿಂದ ಮೂಲೋತ್ಪಾಟನೆಯಾದರೆ ಹಿಂದೂ ಧರ್ಮದ ಕತೆ ಮುಗಿದಂತೆ, ಆದರೆ ಇಸ್ಲಾಂ ಭಾರತದಿಂದ, ಯಾ ಏಶಿಯದಿಂದಲೇ ಮೂಲೋತ್ಪಾಟನೆಯಾದರೂ ಅದು ಬೇರೆಲ್ಲಾದರೂ ಚಿಗುರೊಡೆಯುತ್ತದೆ, ಬೆಳೆಯುತ್ತದೆ” ಎಂದು ಹೇಳಿದ ಗಾಂಧೀಜಿ ಮುಸ್ಲಿಮರು ಭಾರತದಿಂದ ಹೊರದಬ್ಬಲ್ಪಟ್ಟರೆ ಅದು ಸಮರ್ಥನೀಯ ಎನ್ನುವ ಅಭಿಪ್ರಾಯವ ನ್ನು ಹೊಂದಿದ್ದರು ಎಂದು ಬರೆದು ಗಾಂಧೀಜಿಯ ಇಬ್ಬಂದಿತನವನ್ನು ಟೀಕಿಸಿದ್ದರು. ಗಾಂಧಿ ಇಲ್ಲೂ ಸಲ್ಲಲಿಲ್ಲ, ಅಲ್ಲೂ ಸಲ್ಲಲಿಲ್ಲ.

ಗಾಂಧೀ ದೇಶದ ಒಳಗೆ ಮಾತ್ರವಲ್ಲ ವಿಶ್ವದೆಲ್ಲೆಡೆ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು. ಆಫ್ರಿಕಾದ ಮಂಡೇಲಾ ರಿಂದ ಹಿಡಿದು ಅಮೆರಿಕೆಯ ಮಾರ್ಟಿನ್ ಲೂಥೆರ್ ಕಿಂಗ್ ವರೆಗೆ ಮಹನೀಯರಿಗೆ ಗಾಂಧೀ ಆದರ್ಶ ವ್ಯಕ್ತಿ. ಇಂಗ್ಲೆಂಡಿನಿಂದ ಪ್ರಕಟವಾಗುವ independent ಪತ್ರಿಕೆಯಲ್ಲಿ ಗಾಂಧಿಯವರ ಬಗ್ಗೆ ಲೇಖನ ನಿನ್ನೆ ಪ್ರಕಟವಾಯಿತು. ಸಾಧಾರಣ ರಾಜಕೀಯ ಆಶಯಗಳ ಬಗೆಗಿನ ಲೇಖನವಾಗಿದ್ದರೆ ಆಸಕ್ತಿ ಇರುತ್ತಿರಲಿಲ್ಲವೇನೋ. ಆದರೆ ಇದು ಗಾಂಧೀಯವರ ಲೈಂಗಿಕ ಬದುಕಿನ ಬಗ್ಗೆ ಬರೆದ ಲೇಖನವಾಗಿತ್ತು. ಒಂದು ರೀತಿಯ explosive material. ಇದನ್ನು ನೋಡಿ ನಾನು ಸ್ವಲ್ಪ ಹಿಮ್ಮೆಟ್ಟಿದರೂ ಪೀಯುಸೀ ಯಲ್ಲಿದ್ದಾಗ ” intimate sex lives of famous people” ಪುಸ್ತಕದಲ್ಲಿ ಹಿಟ್ಲರ್ ಮಹಾಶಯನ ಲೀಲೆಗಳಿಂದ ಹಿಡಿದು ಗಾಂಧಿಯ ತನಕ ಪ್ರಸ್ತಾಪವಿತ್ತು. ಈಗ ಮತ್ತೊಮ್ಮೆ ಈ ಪೆಡಂಭೂತ ತಲೆ ಎತ್ತಿದ್ದು ನೋಡಿ ಈ ಲೇಖನವನ್ನು ತಮ್ಮೊಂದಿಗೂ ಹಂಚಿ ಕೊಳ್ಳಲು ನಿರ್ಧರಿಸಿದೆ.

ಗಾಂಧೀಜಿ ಕೇವಲ ಒಬ್ಬ ರಾಜಕಾರಣಿ ಯಾಗಿರದೆ ಆಧ್ಯಾತ್ಮಿಕ ವ್ಯಕ್ತಿಯೂ ಆಗಿದ್ದರು. ಮುಸ್ಲಿಂ ಪರ ಎಂದು ಅವರನ್ನು ಧ್ವೇಷಿಸುತ್ತಿದ್ದ ಹಿಂದೂ ಪರ ವ್ಯಕ್ತಿಗಳಿಗಿಂತ ಹೆಚ್ಚು ಸಂಪ್ರದಾಯಸ್ಥರಾಗಿದ್ದರು ಗಾಂಧೀ. ತಮ್ಮ ಆಶ್ರಮದ ಲ್ಲಿ ಭಜನೆ, ವ್ರತ ಗಳಂಥ ಧಾರ್ಮಿಕ ಚಟುವಟಿಕೆಗಳಲ್ಲಿ ಸದಾ ನಿರತರಾಗಿರುತ್ತಿದ್ದ ಗಾಂಧೀಜಿಗೆ ಲೈಂಗಿಕ ಬದುಕಿನ ಬಗ್ಗೆ ಒಂದು ರೀತಿಯ ಪಾಪ ಭಾವನೆ ಇತ್ತು. ತಮ್ಮ ಪ್ರೀತಿಯ ತಂದೆ ಕೊನೆಯುಸಿರೆಳೆಯುತ್ತಿದ್ದರೂ ಅದರ ಮಧ್ಯೆ ಎದ್ದು ಹೋಗಿ ತಮ್ಮ ಲೈಂಗಿಕ ಚಪಲ ತೀರಿಸಿ ಕೊಳ್ಳಲು ಹೋಗಿದ್ದರು. ಆದರೆ ತಮಗೆ ಬೇಕಿದ್ದನ್ನು ಪಡೆದುಕೊಂಡ ಗಾಂಧೀ ತನ್ನ ತಂದೆಯಯನ್ನು ಕಳೆದುಕೊಂಡಿದ್ದರು. ಇಲ್ಲಿಂದ ಶುರುವಾಗಿದ್ದು ಗಾಂಧೀಜಿಯ ವೈರಾಗ್ಯ ಭಾವ. ವಿವಾಹಿತರಾದರೂ ಲೈಂಗಿಕ ಕ್ರಿಯೆ ನಡೆಸದೆ ಸನ್ಯಾಸದ ಬದುಕು ನಡೆಸಿ ಎಂದಾಗ ಬಹಳ ಷ್ಟು ಜನ ಹುಬ್ಬೇರಿಸಿದ್ದರು. ಸಹಜ ತಾನೇ. ಮನುಷ್ಯ ಮದುವೆಯಾದ ಕೂಡಲೇ ಜಿಗಿಯುವುದು ಪ್ರಸ್ಥದ ಕೋಣೆಗೆ. ಅದು ಬಿಟ್ಟು ವೃತಾಚರಿಸುತ್ತಾ “ರಘು ಪತಿ ರಾಘವ ರಾಜಾರಾಂ ಎನ್ನುತ್ತ ಇರು ಎಂದರೆ ಜನ ಹುಬ್ಬೆರಿಸದೆ ಇರುತ್ತಾರೆಯೇ, ಅದರಲ್ಲೂ ನೆಹರೂರಂಥ ರಸಿಕ ಮಹಾನರು? ಗಾಂಧೀಜಿಯ ಈ ಹೊಸ ವಾದ ಕೇಳಿದ ನೆಹರೂ ಹೇಳಿದ್ದು ” ಅಸ್ವಾಭಾವಿಕ ಮತ್ತು ವಿಕೃತ” ಎಂದು. ಗಾಂಧೀಜಿಯನ್ನು ರಾಷ್ಟ್ರ ಪಿತ ಪಟ್ಟಕ್ಕೆ ಏರಿಸಿದ್ದರಿಂದ ಬಹಳಷ್ಟು ಅಪ್ರಿಯ ವಿಷಯಗಳನ್ನ ಮುಚ್ಚಿ ಹಾಕಲಾಯಿತು. ಹೀಗೆ ಗಾಂಧೀಜಿಯ ಕೆಲವೊಂದು ವಿಷಯಗಳನ್ನು ಒಪ್ಪದವರು ಶಿಷ್ಟಾಚಾರಕ್ಕೆ ಮಣಿದು ಮೌನವಾಗಿದ್ದರೆ ಇನ್ನೂ ಕೆಲವರು ಗಾಂಧೀಜಿಯನ್ನು ” ಅತ್ಯಂತ ಅಪಾಯಕಾರಿ ಮತ್ತು ಪಾರ್ಶ್ವವಾಗಿ ಅದುಮಿಟ್ಟ ಕಾಮೋನ್ಮತ್ತ” ಎಂದು ಕರೆದರು. ಅಂದರೆ ಗಾಂಧೀಜಿಯ ಜೀವಿತ ಕಾಲದಲ್ಲೂ ಬಹಳಷ್ಟು ಟೀಕಾಕಾರರು ಅವರನ್ನು ವಿಮರ್ಶಿಸಿದ್ದರು ಎಂದು ನಮಗೆ ಅರಿವಾಗುವುದು.

ಹೀಗೆ ತಮ್ಮ ತಂದೆಯ ಸಾವಿನ ಸಂದರ್ಭದ ಘಟನೆಯಿಂದ ನೊಂದ ಗಾಂಧೀಜಿ ವೈರಾಗ್ಯದ ಕಡೆ ವಾಲ ತೊಡಗಿ ತಾವೇ ನಡೆಸುತ್ತಿದ್ದ ಪತ್ರಿಕೆಗೆ ಹೀಗೆ ಬರೆದರು. ” ವಿವಾಹಿತರಾಗದೆ ಇರುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಹಾಗೇನಾದರೂ ಆತ ವಿವಾಹದ ವಿಷಯದಲ್ಲಿ ನಿಜಕ್ಕೂ ನಿಸ್ಸಹಾಯಕನಾದರೆ ತನ್ನ ಪತ್ನಿಯೊಂದಿಗೆ ಲೈಂಗಿಕತೆಯನ್ನು ತ್ಯಜಿಸಬೇಕು”. ಇದೊಂಥರಾ ವಿಚಿತ್ರ ನಡವಳಿಕೆಯಾಗಿ ತೋರಿತು ಜನರಿಗೆ. ಹಸಿದವನ ಮುಂದೆ ಮೃಷ್ಟಾನ್ನ ಬಡಿಸಿ ಉಪವಾಸವಿರು ಎಂದಂತೆ. ಆದರೆ ಮನುಷ್ಯನ ಈ ನೈಸರ್ಗಿಕ ಭಾವನೆಗಳನ್ನು ಅದುಮಿಡಲು ಸಾಧ್ಯವಾಗದು ಎನ್ನುವ ಸಾಮಾನ್ಯ ಜ್ಞಾನ ಗಾಂಧೀಜಿಗೆ ಹೇಗೆ ತಪ್ಪಿತೋ ಏನೋ. ಹೀಗೆ ಜನರನ್ನು ಲೈಂಗಿಕತೆಯಿಂದ ದೂರ ಎಳೆಯಲು ಪ್ರಯತ್ನಿಸಿದ ಅವರು ತಮ್ಮಲ್ಲಿ ಸುಪ್ತವಾಗಿ ಅಡಗಿದ್ದ ದಾಹವನ್ನು ಬೇರೆಯದೇ ಆದ ರೀತಿಯಲ್ಲಿ ಅದುಮಿಡಲು ದಾರಿ ಕಂಡು ಕೊಂಡರು. ತಮ್ಮ ಆಶ್ರಮದಲ್ಲಿ ಹೆಣ್ಣು ಗಂಡುಗಳು ಒಟ್ಟಿಗೆ ಸ್ನಾನ ಮತ್ತು ಮಲಗುವುದಕ್ಕೆ (ಲೈಂಗಿಕ ಚಟುವಟಿಕೆ ಖಂಡಿತಾ ಇಲ್ಲ) ಅನುಮತಿ ನೀಡಿ, ಲೈಂಗಿಕತೆ ಕೂಡಿದ ಮುಕ್ತ ಹರಟೆಗಳಿಂದ ಅವರನ್ನು ತಡೆದರು. ಅಷ್ಟೇ ಅಲ್ಲ, ಗಂಡಂದಿರು ತಮ್ಮ ಪತ್ನಿಯರೊಂದಿಗೆ ಯಾವಾಗಲೂ ಏಕಾಂತ ವಾಗಿ ಇರಕೂಡದು ಮತ್ತು ಹಾಗೇನಾದರೂ ಎಡವಟ್ಟಾಗುವ ಭಯವಿದ್ದಲ್ಲಿ ತಣ್ಣೀರಿನ ಸ್ನಾನ ಮಾಡಬೇಕೆಂದು ತಾಕೀತು ಮಾಡುವುದನ್ನು ಮರೆಯಲಿಲ್ಲ ಮಹಾತ್ಮ.

ಆದರೆ ಈ ತಾಕೀತು ತಮಗೆ ಅನ್ವಯಿಸಿಕೊಳ್ಳ ಲಿಲ್ಲ ಗಾಂಧೀಜಿ ಎಂದು ಹೇಳುತ್ತಾರೆ ಲೇಖಕ ಆಡಮ್ಸ್. ಗಾಂಧೀಜಿಯವರ ಆಪ್ತ ಸಹಾಯಕರ ಆಕರ್ಷಕ ಸೋದರಿ ಸುಶೀಲ ನಾಯರ್ (ಈಕೆ ಗಾಂಧೀಜಿಯವರ ಖಾಸಗಿ ವೈದ್ಯೆ ಸಹ) ಗಾಂಧೀಜಿ ಯೊಂದಿಗೆ ಸ್ನಾನವನ್ನೂ ಮಾಡುತ್ತಿದ್ದರು ಮತ್ತು ಒಟ್ಟಿಗೆ ಮಲಗುತ್ತಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ ಗಾಂಧೀಜಿ ಹೇಳಿದ್ದು “ಸಭ್ಯತೆ ಮೀರದಂತೆ ನಾವೀ ಕೆಲಸ ಮಾಡುತ್ತಿದ್ದದ್ದು, ಮತ್ತು ಆಕೆ ಸ್ನಾನ ಮಾಡುವಾಗ ನಾನು ಕಣ್ಣು ಮುಚ್ಚಿ ಕೊಂಡು ಇರುತ್ತಿದ್ದೆ ಮತ್ತು ಆಕೆ ವಿವಸ್ತ್ರಳಾಗಿದ್ದಳೋ ಎಂದು ನನಗೆ ತಿಳಿಯದು, ಆದರೆ ಸಾಬೂನನ್ನು ಹಚ್ಚಿಕೊಳ್ಳುತ್ತಿದ್ದ ಶಬ್ದ ಮಾತ್ರ ನನಗೆ ಕೇಳಿಸುತ್ತಿತ್ತು”. ಈ ರೀತಿಯ ಗಾಂಧೀಜಿಯ “ಪ್ರಯೋಗ” ಗಳು ಆಶ್ರಮದ ಸಹ ನಿವಾಸಿಗಳಲ್ಲಿ ಮತ್ಸರವನ್ನು ಹುಟ್ಟಿಸಿತು ಮಾತ್ರವಲ್ಲ ಇದು ಸ್ವಲ್ಪ ಅತಿಯಾಯಿತೆಂದು ಕೆಲವರಿಗೆ ತೋರಿದರೆ ಗಾಂಧೀಜಿಗೆ ಅನ್ನಿಸಿದ್ದು ” ಈ ಪ್ರಯೋಗದ ಮೂಲಕವೇ ನಿಜವಾದ ದೇಶ ಸೇವೆ ಸಾಧ್ಯ” ಎಂದು. ಈ ರೀತಿಯದಾದ ದೇಶ ಸೇವೆಯ ಮಾದರಿಯನ್ನು ಸಹಿಸದ ಕೆಲವರು ಗಾಂಧೀಜಿ ನಡೆಸುತ್ತಿದ್ದ ಪತ್ರಿಕೆಯನ್ನು ತೊರೆದರು.

ಆದರೆ ಈ ವಿಷಯಗಳೆಲ್ಲಾ ಗಾಂಧೀಜಿಯ ಸುತ್ತಮುತ್ತಲಿನವರಿಗೆ ತಿಳಿದಿದ್ದರೂ ಗಾಂಧೀಜಿ ಇದರ ಬಗ್ಗೆ ಗೌಪ್ಯತೆ ಯನ್ನು ಪಾಲಿಸಲಿಲ್ಲ. ಮತ್ತು ಇದರ ಬಗ್ಗೆ ತಮ್ಮ ಮಗನಿಗೂ ಪತ್ರದ ಮೂಲಕ ಬರೆದು ತಿಳಿಸಿದ್ದರು. ಹೀಗೆ ನಿರ್ಭಿಡೆಯಿಂದ, ಗೌಪ್ಯತೆ ಪಾಲಿಸದೆ ತನ್ನದೇ ಆದ ವಿಶ್ಲೇಷಣೆ ಗಳನ್ನು ನೀಡುತ್ತಾ ನಡೆದ ಗಾಂಧೀಜಿ ಬಹುಶಃ ಸಾಮಾನ್ಯವಾಗಿ ಸಾಧಾರಣ ಜನರಲ್ಲಿ ಕಾಣಸಿಗುವ ಲೈಂಗಿಕತೆಯಿಂದ ಮುಕ್ತರಾಗಿದ್ದರೋ ಏನೋ. ತಮ್ಮ ಮಗನಿಗೆ ತಮ್ಮ ಈ ಪ್ರಯೋಗ ಗಳ ಬಗ್ಗೆ ಬರೆಯಲು ಗಾಂಧೀಜಿ ಹೇಳಿದರೂ ಪುತ್ರ ಇದಕ್ಕೆ ಸಮ್ಮತಿಸದೆ ಸಂಬಂಧಿಸಿದವರಿಗೆ ತಾಕೀತನ್ನೂ ಮಾಡಿದರು ಬರೆಯದಂತೆ.

ಬದುಕಿಗೆ ಎದುರಾಗುವ ಸವಾಲುಗಳನ್ನು ಎದುರಿಸುವತ್ತ ಬೌಧ್ದಿಕ ದೃಢಚಿತ್ತತೆಯ ಅಗತ್ಯ ಇರುತ್ತದೆ ಮತ್ತು ಇದಕ್ಕಾಗಿ ಕಿರಿ ವಯಸ್ಸಿನ ಮಹಿಳೆಯರನ್ನು ಗಾಂಧೀಜಿ ಉಪಯೋಗಿಸಿಕೊಳ್ಳುತ್ತಿದ್ದರು ಎಂದು ಜಾಡ್ ಆಡಮ್ಸ್ ಹೇಳುತ್ತಾರೆ.

ಮಹಾನ್ ವ್ಯಕ್ತಿಗಳು ತಮ್ಮ ಕಾರ್ಯ ಸಿದ್ದಿ ಗಾಗಿ ತಮ್ಮದೇ ಆದ ಶೈಲಿಯಲ್ಲಿ ಕಾರ್ಯ ತಂತ್ರ ರೂಪಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಅವು ನಮಗೆ ಆಭಾಸವಾಗಿ ಕಂಡರೂ ಮಹಾತ್ಮರಿಗೆ ಹಾಗೆ ತೋರುವುದಿಲ್ಲ. ಗಾಂಧೀಜಿ ತಮ್ಮಲ್ಲಿ ಆಗಾಗ ತಲೆಎತ್ತುತ್ತಿದ್ದ ಕಾಮ, ಕ್ರೋಧ, ಮದ, ಮತ್ಸರಗಳನ್ನು ಗೆಲ್ಲಲು ತಮ್ಮದೇ ಆದ ಮಾರ್ಗ ಅನುಸರಿಸಿದರು. ಉದಾಹರಣೆಗೆ, ಕೇವಲ ಉಪವಾಸ ಸತ್ಯಾಗ್ರಹದಿಂದ ತನ್ನ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಟ್ಟು ವಿಶ್ವವನ್ನು ದಂಗು ಬಿಡಿಸಿದ ಗಾಂಧೀಜಿಯ ಈ ಮಾರ್ಗವನ್ನು ಎಷ್ಟು ಜನ, ಎಷ್ಟು ಮಹನೀಯರು ಅನುಕರಿಸುತ್ತಿದ್ದಾರೆ? ಏಕೆಂದರೆ ಅಹಿಂಸಾತ್ಮಕ ಹೋರಾಟದಲ್ಲಿ ಗಾಂಧೀಜಿಗೆ ಬಲವಾದ ನಂಬಿಕೆ ಇತ್ತು ಮತ್ತು ಆ ನಂಬಿಕೆ ಅವರನ್ನು ಹುಸಿಗೊಳಿಸಲಿಲ್ಲ.

ಸಾವಿರಾರು ವರ್ಷಗಳಿಂದ ಮಾನವ ಸಂತತಿಯನ್ನು ಕಾಪಾಡುತ್ತಾ, ಉಳಿಸುತ್ತಾ ಬಂದಿರುವ ವೀರ್ಯದ ಶಕ್ತಿಯ ಬಗ್ಗೆ ಅಪಾರ ವಿಶ್ವಾಸವಿದ್ದ ಗಾಂಧೀಜಿ ಹೇಳಿದ್ದು, “ಗಂಡಿನಲ್ಲಿ ಹರಿಯುವ ಈ ದ್ರವವನ್ನು ಉಳಿಸಿಕೊಳ್ಳುವವರು ಅಜೇಯ ಶಕ್ತಿ ಪಡೆಯುವರು” ಎಂದು. ಗಾಂಧೀಜಿ ತಮ್ಮ ವೀರ್ಯವನ್ನು ಹಿಡಿದಿಟ್ಟು ಕಾಮವನ್ನು ಗೆಲ್ಲಲು ಯತ್ನಿಸಿ ಯಶಸ್ಸನ್ನು ಸಹ ಪಡೆದರೂ ತಮ್ಮ ಪ್ರೀತಿಯ ದೇಶ ಮಾತ್ರ ಇಬ್ಭಾಗವಾಗುವುದನ್ನು ಈ “ಪ್ರಯೋಗ” ದಿಂದ ತಡೆಗಟ್ಟಲು ಸಾಧ್ಯವಾಗದೆ ಇದ್ದದ್ದು ದೊಡ್ಡ ದುರಂತವೆಂದೇ ಹೇಳಬಹುದು.

ಚಿತ್ರ ಕೃಪೆ: ಇಂಗ್ಲೆಂಡಿನ ದಿನ ಪತ್ರಿಕೆ Independent

ಭಗ್ನ ಪ್ರೇಮಿ

ಸಂಜೆ ಬೋರ್ ಹೊಡೆಯುತ್ತಿತ್ತು. ಅದೂ ಅಲ್ಲದೆ ಏನಾದರೂ ಶಾಪಿಂಗ್ ಮಾಡೋಣ, ಏನಿಲ್ಲವೆಂದರೂ ಒಂದೆರಡು ಶರ್ಟ್ಗಳನ್ನಾದರೂ ಕೊಳ್ಳೋಣ ಎಂದು ಪಕ್ಕದಲ್ಲೇ ಆಡುತ್ತಿದ್ದ ನನ್ನ ಆರು ವರ್ಷದ ಮಗನನ್ನು ಹೊರಡಿಸಿಕೊಂಡು ಮಾಲ್ ಕಡೆ ಹೊರಟೆ ಮಡದಿ, ಪುಟ್ಟ ಸುಪುತ್ರಿಯನ್ನು ಹಿಂದಕ್ಕೆ ಬಿಟ್ಟು. ಎಲ್ಲಾದರೂ ಹೊರಕ್ಕೆ ಹೋಗಲು ಹೆಂಗಸರನ್ನು ಹೊರಡಿಸೋ ತಾಪತ್ರಯ ನಿಮಗೆ ಗೊತ್ತೇ ಇದೆಯಲ್ಲ. ದಸರಾದ ಆನೆಯನ್ನಾದರೂ ಶೃಂಗರಿಸಿ ಹೊರಡಿಸಬಹುದು ಕೆಲವೇ ನಿಮಿಷಗಳಲ್ಲಿ.

ಮಗನೊಂದಿಗೆ ಹರಟುತ್ತಾ ಮಾಲ್ ತಲುಪಿದೆ. ಮನೆಯಿಂದ ಕಾರಿನಲ್ಲಿ ೧೦ ನಿಮಿಷ ದೂರದಲ್ಲಿರುವ city plaza ಮಾಲ್ ವಿಶಾಲವಾದ, ಸುಂದರ ಮಳಿಗೆ. ಅಮೆರಿಕೆಯ ಸಂಸತ್ ಭವನದ ರೀತಿಯಲ್ಲಿ ಕತಿರುವ ಕಟ್ಟಡದ ಗೋಪುರ ತುಂಬಾ ದೂರದ ತನಕ ಗೋಚರಿಸುತ್ತದೆ. ನಿರಂತರ ಮತ್ತು ಅಗ್ಗದ ವಿದ್ಯುತ್ ಸರಬರಾಜು ಇಡೀ ಮಾಲ್ ಮಾತ್ರವಲ್ಲ ನಗರವನ್ನೇ ಹಗಲಾಗಿಸಿರುತ್ತದೆ ಇರುಳನ್ನು. ಮಾಲ್ ತಲುಪಿ ಪಾರ್ಕಿಂಗ್ ಲಾಟ್ ನೋಡಿಯೇ ಅಂದು ಕೊಂಡೆ ಇಂದು sale ಹಾಕಿದ್ದಾರೆ ಎಂದು. ಇಲ್ಲಿನ ಜನ sale ಅಂದು ಬಿಟ್ಟರೆ ಪುಕ್ಕಟೆ ಹಂಚುತ್ತಾರೇನೋ ಅನ್ನಬೇಕು ಹಾಗೆ ಮುಗಿ ಬೀಳುತ್ತಾರೆ. ಹೇಳಿ ಕೇಳಿ ಶುಕ್ರವಾರ ಬೇರೆ. ಒಂದು ರೀತಿಯ ಔಟಿಂಗ್ ಸಹ. ಮೇಲೆ ಹೇಳಿದ ಮಾಲ್ ಭಾರತೀಯರದು. ನಮ್ಮ ದೇಶದಲ್ಲೂ ಇವೆ ಇವರ ಸರಣಿ ಅಂಗಡಿಗಳು. city plaza, home plaza ಅಂತ. ಪ್ರತಿಯೊಂದು ವಸ್ತುವೂ ಇಲ್ಲಿ ಲಭ್ಯ. ಈ ಮಾಲ್ ಒಳಗೆ ಹೊಕ್ಕರೆ ದಿನಸಿ ಬಿಟ್ಟು ಬಾಕಿಯೆಲ್ಲಾ ಸಿಗುತ್ತದೆ. ಜೆಡ್ಡಾ ಒಂದರಲ್ಲೇ ಇಂಥ ಸುಮಾರು ೧೦ ಮಾಲುಗಳು ಈ city plaza ಗೆ ಸೇರಿದವು. ಒಳ ಹೋದ ಕೂಡಲೇ ಆಟಿಕೆಗಳ ವಿಭಾಗದ ಕಡೆ ಮಗ ಜಿಗಿದು “ಯೋ ಯೋ” ಹಿಡಿದು ಕೊಂಡು ಬಂದ. ನಾನೂ ನನಗೆ ಬೇಕಾದ ಒಂದೆರಡು ಶರ್ಟ್ ಗಳನ್ನು ಕೊಂಡು ರಾತ್ರಿಯ ಕೊನೆಯ ಪ್ರಾರ್ಥನೆಗೆ ಇನ್ನೂ ಸಮಯವಿದೆಯಲ್ಲ (ಇಲ್ಲಿ ಅಂಗಡಿ ಮುಂಗಟ್ಟು ಗಳು ಅರ್ಧ ಘಂಟೆ ಬಂದ್, ಪ್ರಾರ್ಥನೆಯ ಕರೆ ಕೇಳಿದ ಕೂಡಲೇ) ಎಂದು ಎಲಿವೇಟರ್ ಮೂಲಕ ಮೊದಲ ಮಹಡಿಗೆ ಹೋದೆ ಫರ್ನಿಚರ್ ನೋಡೋಣ ಎಂದು. ಅಲ್ಲಿಗೆ ಹೋದ ಕೂಡಲೇ ಥಟ್ಟನೆ ನೆನಪಾಯಿತು, ನಾನು ತುಂಬಾ ಸಲ ಕೊಳ್ಳಬೇಕೆಂದು ಬಯಸಿದ್ದ ಟೇಬಲ್ ಇದೆಯಾ ಎಂದು. ನಮೂನೆಯ ನಮೂನೆಯ ಫರ್ನಿಚರ್ ಗಳು ಸೇಲ್ ಗೆ ಇದ್ದವು. spring sale ಅಂತೆ (ವಸಂತ ಋತು). ಹೊರಗೆ ಭಣ ಭಣ ಅನುತ್ತಿದ್ದರೂ ಕಡೆ ಪಕ್ಷ ಇಲ್ಲಾದರೂ ಮಳಿಗೆ ಒಳಗೆ ವಸಂತ ಕಾಲ ಇದೆಯಲ್ಲಾ ಎಂದು ಕೊಳ್ಳುತ್ತಾ ಸುತ್ತಾ ಮುತ್ತಾ ಕಣ್ಣು ಹಾಯಿಸುತ್ತಾ. ಆದರೆ ನನ್ನ ಮೆಚ್ಚಿನ ಮೇಜು ಮಾತ್ರ ಕಾಣಲಿಲ್ಲ. ಅಲ್ಲೇ ಅಡ್ಡಾಡುತ್ತಿದ್ದ ವ್ಯಕ್ತಿಯನ್ನು ಮೇಜಿನ ವಿವರಣೆ ನೀಡಿ ಕೇಳಿದೆ. ಹಾಂ, ಅದು ಕೆಳಗಿನ ಫ್ಲೋರ್ ನಲ್ಲಿದೆ ಎಂದ. ಸರಿ ಅಲ್ಲಿಗೆ ಬಂದು ನೋಡಿದಾಗ ನನ್ನ ಮೆಚ್ಚಿನ ಮೇಜು ನಾಚುವ ಲಲನೆಯಂತೆ ಗೋಚರಿಸಿದಳು ನನಗೆ. ತನ್ನ ಸೊಂಟಕ್ಕೆ ಹಳೆ ಬೆಲೆ ಮತ್ತು ಹೊಸ ಇಳಿ ತಾಯದ ಬೆಲೆಯ ಟ್ಯಾಗ್ ಗಳನ್ನು ಸಿಕ್ಕಿಸಿಕೊಂಡು ಬಿಂಕದಿಂದ ನಿಂತ ಮೇಜನ್ನು ಆಸೆಗಣ್ಣುಗಳಿಂದ ನೋಡುತ್ತಾ ಹತ್ತಿರ ಬಂದೆ. ೮೯೫ ರಿಯಾಲ್ ಬೆಲೆ ಬಾಳುವ (೧೦,೫೦೦ ರೂಪಾಯಿ) ಈ ಮೇಜಿಗೆ ಶೇಕಡಾ ೭೦ ಇಳಿತಾಯ. ಅಬ್ಬಾ, ಇಂಥಾ ಇಳಿತಾಯಕ್ಕೆ “ಕುಸಿತಾ”ಯ ಎಂದೇ ಕರೆಯಬೇಕು. ೨೬೫ ರಿಯಾಲ್ ಅಂದ್ರೆ ೩೦೦೦ ರೂಪಾಯಿ ಹತ್ತತ್ರ. ವಾವ್, ಎಂದು ಕುಣಿದೆ, ಮನಸ್ಸಿನಲ್ಲೇ. ನಮ್ಮ ದೇಶದಲ್ಲಿ ಒಂದೆರಡು ತುಂಡು ಹಲಗೆಯೂ ಸಿಗಲಿಕ್ಕಿಲ್ಲ ಈ ಬೆಲೆಗೆ. ಒಳ್ಳೆ ಡಿಸ್ಕೌಂಟ್ ಅನ್ನೇ ಕೊಟ್ಟಿದ್ದಾರೆ ಎಂದು ಮನದಲ್ಲೇ ವಂದಿಸುತ್ತಾ ಇದ್ದಾಗ ಒಮ್ಮೆಲೇ ಮಾನವ ಸಹಜ ಕುಬುದ್ಧಿ ಇಣುಕ ತೊಡಗಿತು. ಮೇಲಿನ ಒಂದು ಡ್ರಾವರ್ ಗೆ ಒಂದು ನಾಬ್ ಇರಲಿಲ್ಲ. “dont look gift horse in the mouth” ಅಂತಾರೆ ಆಂಗ್ಲ ಭಾಷೆಯಲ್ಲಿ, ಹಾಗಂದ್ರೆ ಉಡುಗೊರೆಯಾಗಿ ಸಿಕ್ಕ ಕುದುರೆಯ ಬಾಯಗಲಿಸಿ ಹಲ್ಲುಗಳು ಸರಿ ಇವೆಯೋ ಎಂದು ನೋಡಬಾರದು. ಅಲ್ಲೇ ಪಕ್ಕದಲ್ಲಿದ್ದ ಸೇಲ್ಸ್ ಮ್ಯಾನ್ ಗೆ ಕೇಳಿದೆ ಇದರ ಒಂದು ನಾಬ್ ಹೋಗಿದೆಯಲ್ಲ ಅಂತ. ಮುಗುಳ್ನಗುತ್ತಾ ನನ್ನನ್ನು ಸಿಗಿಯುವಂತೆ ನೋಡಿ ಸರ್, ಅದಕ್ಕೇ ಆಲ್ವಾ ಇದು ೭೦ ಶೇಕಡಾ ಡಿಸ್ಕೌಂಟ್ ನಲ್ಲಿ ಇರೋದು ಅಂದ. ಆದರೆ ಅವನ ಮುಖ ಹೇಳುತ್ತಿತ್ತು, ಅಲ್ಲಾ ಬೆಪ್ಪೆ, ನಿನ್ನ ಮುಸುಡಿ ನೋಡಿ ಅಲ್ಲ ಅದಕ್ಕೆ ಶೇಕಡಾ ೭೦ ರ ರಿಯಾಯಿತಿ, ಆ ಹಿಡಿಕೆ ಇಲ್ಲದ್ದಕ್ಕೇ ಎಂದು. ಈಗ ನಾಬ್ ಮರೆತು ನನ್ನ ವಶವಾಗಲಿರುವ ಆ ಮೇಜನ್ನೇ ಮತ್ತೊಮ್ಮೆ ನೋಡುತ್ತಾ ಇದ್ದಾಗ ನನ್ನ ಹುಟ್ಟು ಗುಣದ ಒಂದು ಭಾಗ ಜಾಗೃತವಾಯಿತು. ಈಗ ಬೇಡ ನಾಳೆ ತಗೋ ಎಂದು. ಈ ನಾಳೆ ಅನ್ನೋನ ಮನೆ ಹಾಳು ಅಂತಾರೆ. ನನಗೆಷ್ಟೇ ಸಲ ಈ ಅನುಭವ ಆಗಿದ್ರೂ ತ್ರಿವಿಕ್ರಮನ ಬೆನ್ನು ಬಿಡದ ಭೇತಾಳದಂತೆ, ಸಾರಾಯಿ ಬಿಟ್ಟಿರಲಾರದ ಮದ್ಯ ವ್ಯಸನಿಯಂತೆ ನನಗೆ ಈ ನಂಟು ನಾಳೆಯದು. ಬೆಳಿಗ್ಗೆ ಶಾಲೆಯಿದೆ, ಮಗನಿಗೆ ಡಿನ್ನರ್ಗೆ ತಡವಾಗಬಹುದು ಎಂದು ನನಗೆ ನಾನೇ ನೆಪ ಹೇರಿಕೊಂಡು ನಾಳೆ ಬರುವ ತೀರ್ಮಾನದೊಂದಿಗೆ ಹೊರನಡೆದೆ.

ಮಹೋಗನಿ ಮರದಿಂದ ಮಾಡಿದ ಆ ಮೇಜು ಒಂದು ರೀತಿಯ antique ಪೀಸ್ ಎಂತಲೇ ಹೇಳಬಹುದು. ಮೇಜಿನ ಮೇಲಿನ ಭಾಗದಲ್ಲಿ ಮೂರು ಡ್ರಾವರ್ ಗಳು. ಚಿಕ್ಕ ಪುಟ್ಟ ವಸ್ತುಗಳನ್ನು ಇಡಲು. ಅದರ ಕೆಳಗೆ ಅರ್ಧ ವೃತ್ತಾಕಾರದ ಮುಚ್ಚಳ. ಮುಚ್ಚಳ ತೆರೆದ ಕೂಡಲೇ (ಶ್ರೀ ಕೃಷ್ಣಾ ಬಾಯೋ ತೆರೆದಾಗ ಬ್ರಹ್ಮಾಂಡವೇ ಕಾಣಿಸಿತಂತೆ) ಕಾಣದಂತೆ ಫ್ರೇಂ ಒಳಕ್ಕೆ ಸೇರಿಕೊಳ್ಳುತ್ತದೆ. ಕೆಳಗೆ ಮತ್ತೆರಡು ಡ್ರಾವರ್ಗಳು. ಮೇಜಿನ ಬರೆಯುವ ಪಟ್ಟಿ ಹೊರಕ್ಕೆಳೆದರೆ ದೊಡ್ಡದಾಗುವಂಥದ್ದು. ಅಂದರೆ ಅದನ್ನು ಎಳೆದರೆ (expandable) ಬರೆಯಲು ಮತ್ತಷ್ಟು ಜಾಗ ಸಿಗುತ್ತದೆ. ಮೇಜಿನ ಕಾಲುಗಳೂ ಸಹ ಸುಂದರವಾಗಿ ಕೆತ್ತಲ್ಪಟ್ಟವು. ಒಟ್ಟಾರೆ ಒಳ್ಳೆ ಫಿನಿಶಿಂಗ್ ಇರುವ ಸುಂದರ, ಮನೆಯ ಯಾವುದೇ ಭಾಗದಲ್ಲೂ ಇಟ್ಟರೂ ಒಂದು ರೀತಿಯ ಬರವಣಿಗೆಯ ಭಾವವನ್ನು ಹುಟ್ಟಿಸುವಂಥದ್ದು. ಬರೆಯಲು ಪ್ರೇರಣೆ ಸಿಗದಾಗ ಈ ಮೇಜು ದೊಡ್ಡ ಸಹಾಯಾಗಿ ಬರುತ್ತದೆ. inspiring table. ಭಾರತದಲ್ಲಾದರೆ ನಮ್ಮ ಬಡಗಿಗಳು ಇಂಥ ಟೇಬಲ್ಲನ್ನು ಸೃಷ್ಟಿಸಲಾರರು. ಹಾಗೇನಾದರೂ ನೀವು ಪ್ರಯತ್ನಿಸಿದ್ದೇ ಆದರೆ ಅದೇನೂ ದೊಡ್ಡ ವಿಷಯವಲ್ಲ ಮರ ಕೊಡಿಸಿ ಬಿಡಿ ಮಾಡಿ ಕೊಡುತ್ತೇನೆ ಎಂದು ಹೇಳಿ ನಮ್ಮಿಂದ ಮರ ಖರೀದಿ ಮಾಡಿಸಿ ನಮ್ಮ ಕಾಲಕ್ಕಲ್ಲದಿದ್ದರೂ ನಮ್ಮ ಮಕ್ಕಳ ಅವಶ್ಯಕತೆಗಾದರೂ ಮೇಜನ್ನು ತಯಾರು ಮಾಡಿ ಕೊಡುತ್ತಾನೆ. ಯಾಕೆಂದರೆ ನಮ್ಮಿಂದ ಅಡ್ವಾನ್ಸ್ ತೆಗೆದು ಕೊಂಡು ಮಾಯವಾಗುವ ಬಡಗಿ ಇದೇ ರೀತಿ ನಾಲ್ಕೈದು ಜನರ ಹತ್ತಿರ ಅಡ್ವಾನ್ಸ್ ತೆಗೆದುಕೊಂಡು ಬೆಳಗ್ಗಿನ ರೌಂಡ್ಸ್ ಗೆ ಬರುವ ವೈದ್ಯರಂತೆ ಅಡ್ವಾನ್ಸ್ ತೆಗೆದುಕೊಂಡ ನಾಲ್ಕೈದು ಮನೆಗಳಿಗೆ ತೆರಳಿ, ಅಲ್ಲೊಂದಿಷ್ಟು, ಇಲ್ಲೊಂದಿಷ್ಟು ಕೆಲಸ ಮಾಡಿ ಬರುತ್ತಾನೆ. ಇಷ್ಟೆಲ್ಲಾ ಆದ ಮೇಲೆ ನಮ್ಮ ಕೈಗೆ ಸಿಗುವ ಎಂಡ್ ಪ್ರಾಡಕ್ಟೋ ? ನಮಗೇ ಗೊತ್ತಿರುವುದಿಲ್ಲ ನಾವೇನನ್ನು ಮಾಡಲು ಆರ್ಡರ್ ಬಡಗಿಗೆ ಕೊಟ್ಟಿದ್ದು ಎಂದು. ನನ್ನ ತಂಗಿ ಒಂದು ಮಂಚ ಮಾಡಿಕೊಡಲು order ಕೊಟ್ಟಿದ್ದಳು. ಅವನು ಮಂಚ ರೆಡಿ ಮಾಡಿ ಕೊಡು ವಷ್ಟರಲ್ಲಿ ನಾನು ಮೂರು ಸಲ ರಜೆಗೆ ಎಂದು ಭಾರತಕ್ಕೆ ಬಂದು ಹೋದೆ. ಕೊನೆಗೆ ಕೋಣೆಗೆ ಬಂದ ಮಂಚವಾದರೂ ಎಂಥದ್ದು? ಹೆಣ ಹೊತ್ತು ಕೊಂಡು ಹೋಗುವ ಚಟ್ಟದ ರೀತಿ ಇತ್ತು ಮಂಚ. ಚಟ್ಟವಾದರೋ ಇನ್ನೂ ಚೆನ್ನಿರುತ್ತದೆ. ಕೊನೆ ಸವಾರಿ ಅಲ್ಲವಾ ಅಂತ ನಾಜೂಕಿನಿಂದ, ಸೊಗಸಾಗಿ, ಪ್ರೀತಿಯಿಂದ ತಯಾರು ಮಾಡಿ ಕೊಡುತ್ತಾರೆ. ಈ ಮಂಚ ಚಟ್ಟಕ್ಕಿಂತ ಕಡೆ. ಇದನ್ನು ನೋಡಿ ನನ್ನ ತಂಗಿಯ ಮುಖ ಬಣ್ಣ ಕಳೆದುಕೊಂಡ ಹೆಣದ ಥರ ಆಗಿದ್ದು ನೋಡಿ ಕನಿಕರ ತೋರಿತು. ಈಗ ನನ್ನ ಆ ಮಾಯಾ ಮೇಜನ್ನು ಕೊಳ್ಳಲು ಮಾರನೆ ದಿನ ಬೆಳಿಗ್ಗೆ ಅದೇ ದಾರಿಯಲ್ಲಿ ನಾನು ಕೆಲಸದ ನಿಮಿತ್ತ ಹೋದರೂ ಬಿಡುವಿಲ್ಲದ ಕಾರಣ ಹೋಗಲಾರದೆ ಸಂಜೆಗೆ ಅಂಗಡಿ ಕಡೆ ಒಬ್ಬನೇ ಹೋದೆ. ಮತ್ತದೇ ಗಿಜಿ ಗಿಜಿ, ಏನು ಸಾಯುತ್ತಾರೋ ಡಿಸ್ಕೌಂಟ್ ಅಂದ್ರೆ (ನೀನು? ಎಂದು ಕೇಳಿ ನನ್ನ ಪಾರ್ಟಿ ದಯಮಾಡಿ ಹಾಳು ಮಾಡ ಬೇಡಿ) ಎಂದು ನನ್ನಲ್ಲೇ ಗೊಣಗುತ್ತಾ ಬುರ್ಖಾಧಾರಿ ಅರಬ್ ಸುಂದರಿಯರ ಜೊತೆ elevator ಹತ್ತಿದೆ. ಇದ್ದಕ್ಕಿದ್ದಂತೆ ಮನದಲ್ಲಿ ಪುಕು ಪುಕು, ನಾನು ಬಯಸಿದ, ಪ್ರೇಮಪಾಶಕ್ಕೆ ಬಿದ್ದ ಆ ಮೇಜು ಅಲ್ಲಿಲ್ಲದಿದ್ದರೆ? ಛೆ ಶುಭ್, ಶುಭ್, ಬೋಲೋ ಎಂದು ಧೈರ್ಯ ಹೇಳಿಕೊಳ್ಳುತ್ತಾ ದಾಪುಗಾಲು ಹಾಕಿದೆ. ಒಹ್, ಅಲ್ಲೇ ಇದೇ ನನ್ನ ಬರವಿಕೆಗಾಗಿ ಕಾಯುತ್ತಾ ನನ್ನ ಮೇಜು. ಇದನ್ನ ನಾನಲ್ಲದೆ ಯಾರು ಕೊಳ್ಳಲು ಸಾಧ್ಯ ಎಂದು ಗೆಲುವಿನ ನಗೆ ನಗುತ್ತಾ ಹತ್ತಿರ ಬಂದು ನಿಂತೆ ಹಾಡೊಂದನ್ನು ಗುನುಗಿಸುತ್ತಾ, “ನಾನು ನೀನು ಒಂದಾದ ಮೇಲೆ ಹೀಗೇಕೆ ನನ್ನನ್ನೇ ನೋಡುವೆ, ಪುಸ್ತಕಗಳಿಂದ ನಿನ್ನಾ, ಸಿಂಗಾರ ಮಾಡಿ ಕಣ್ತುಂಬಾ ನಾ ನೋಡುವೇ…” ಈಗ ಮತ್ತೊಂದು ಯೋಚನೆ ತಲೆ ಹಾಕಿತು. ಅಲ್ಲಾ, ಮೇಜನ್ನು ಇನ್ನೇನು ಕೆಲವೇ ಕ್ಷಣಗಳಲ್ಲಿ ಕೊಳ್ಳುತ್ತೇನೆ ಆದರೆ ಅದಕ್ಕೆ ಹೊಂದುವ ಕುರ್ಚಿ? ಅಲ್ಲೇ ಪಕ್ಕದಲ್ಲೇ ಕೆಲವು ಕುರ್ಚಿಗಳು ನನ್ನನ್ನು ಆರಿಸಿಕೋ ಎಂದು ಸ್ವಯಂವರದ ರೀತಿಯಲ್ಲಿ ನಿಂತಿದ್ದವು. ಯಾವುವೂ ಇಷ್ಟವಾಗಲಿಲ್ಲ. ಕೆಲವೊಂದು plastic ನದ್ದಾದರೆ, ಇನ್ನೂ ಕೆಲವು artistic ಅಲ್ಲದವು. ಈ ಮೋಹಕ ಮೇಜಿಗೆ ಹೊಂದುವ ಕುರ್ಚಿ ಇಟ್ಟಿಲ್ಲವಲ್ಲ ಈ ಜನ ಎಂದು ಹಳಿಯುತ್ತಾ ಸರಿ ಈ ಮೇಜನ್ನು ತೆಗೆದುಕೊಂಡು ಗಾಡಿ ಬಿಡೋಣ ಎಂದು ಹತ್ತಿರ ಬಂದು ಅದರ ಟ್ಯಾಗ್ ಅನ್ನು ಹಾಗೇ ಹಿಂದಕ್ಕೆ ತಿರುವಿದೆ. ಇದ್ದಕ್ಕಿದ್ದಂತೆ ಒಂದು ರೀತಿಯ ತಲೆ ಸುತ್ತು, ನೆಲದಡಿಯ ನೆಲ ಜಾರುತ್ತಿರುವ ಅನುಭವ, ದಿಕ್ಕು ತಪ್ಪಿ ತೇಲುತ್ತಿರುವ ಹಾಗೆ. ಸಾವರಿಸಿಕೊಂಡು ಮತ್ತೊಮ್ಮೆ ನೋಡಿದೆ. ಟ್ಯಾಗ್ ಮೇಲೆ product code ಬರೆದು pick up ಎಂದು ಬರೆದಿದ್ದರು. ನಾನು “ಸೀಸನ್ಡ್” ಶಾಪ್ಪರ್, ನನಗೆ ವ್ಯಾಪಾರದ ಕೋಡು, ಕೋರೆ, ಬಾಲ ಎಲ್ಲಾ ಗೊತ್ತು. ಆದರೂ ಒಂದು ಆಸೆ, ಮತ್ತದೇ ಸೇಲ್ಸ್ ಮ್ಯಾನ್ನ ಹತ್ತಿರ ಹೋದೆ ನಡುಗುತ್ತಾ. ಕೆಲಸ ಬೇಕೆಂದು ಕೇಳಿ ಸುರುಳಿ ಮಾಡಿ bio data ಎಂಬ ಸೊರಗಿದ ಕಾಗದ ಹಿಡಿದ ಉದ್ಯೋಗಾರ್ಥಿಯ ಹಾಗೆ. ಸೇಲ್ಸ್ ಮ್ಯಾನ್ ಫಿಲಿಪ್ಪಿನ್ಸ್ ದೇಶದವನು. ಬೆಳ್ಳಗಿನ ಚರ್ಮ, ಹೊಳೆಯುವ ಹಲ್ಲುಗಳು, ನಿಷ್ಕಳಂಕ ವ್ಯಾಪಾರೀ ನಗೆ. ಹತ್ತಿರ ಕರೆದು ಈ ಮೇಜು ಮಾರಾಟವಾಯಿತಾ ಎಂದು ತೊದಲಿದೆ. ಅವನೂ ಸಹ ಟ್ಯಾಗ್ ಅನ್ನು ತಿರುವಿ ನನ್ನೆಡೆ ಕನಿಕರದಿಂದ ನೋಡಿ ನೇಣಿನ ತೀರ್ಪು ನೀಡುವ ನ್ಯಾಯಾಧೀಶನಂತೆ ತೀರ್ಪನ್ನು ಹೊರಬಿಟ್ಟ. ನನ್ನ ಪಾಲಿನ death sentence. ಎಸ್ ಸರ್, it is sold. ಧಸಕ್ ಎಂದಿತು ಎದೆ. ನಾನು ಇಷ್ಟಪಟ್ಟ ಹೆಣ್ಣಿಗೆ ಯಾರೋ ಬಂದು ತಾಳಿ ಕಟ್ಟಿ ಹೋದ ಹಾಗೆ. ಸಾವರಿಸಿಕೊಳ್ಳುತ್ತಾ, aah, its ok, there will always be another chance ಎನ್ನುತ್ತಾ ದ್ರಾಕ್ಷಿ ಹುಳಿ ಎಂದು ಗಂಭೀರವಾಗಿ ಹೊರ ನಡೆದೆ ನರಿಮಾಮನ ಅದೇ ಶೈಲಿಯಲ್ಲಿ.

ಬರೀ ಗೇಣಿನ ದೂರದಲ್ಲಿದ್ದ ಮೇಜನ್ನು procrastination ಎನ್ನುವ ವಿಷ ಕನ್ಯೆಯ ಆಟಕ್ಕೆ ಕಳೆದುಕೊಂಡು ಹವಾನಿಯಂತ್ರಿತ ವಸಂತ ಋತುವಿಗೆ ವಿದಾಯ ಹೇಳಿ ಅದೇ ಮರುಭೂಮಿಯ ಸುಡುವ ಒಣ ಹವೆಗೆ ಮುಖವೊಡ್ಡುತ್ತಾ ಪಾರ್ಕಿಂಗ್ ಲಾಟ್ ಕಡೆ ನಡೆದೆ ಹೊರಲಾರದ ಹೆಜ್ಜೆಗಳನ್ನು ಹಾಕುತ್ತಾ.

ಸೂರಿನ ಕೂಗು

ಕೆಲಸ ನಡೆಯದೇ ಇದ್ದಾಗ, ತಾನು ಬಯಸಿದ್ದು ಸಿಗದೇ ಇದ್ದಾಗ “ಅತ್ತು ಕರೆದು ಮೈಯ್ಯನ್ನೆಲ್ಲಾ ಪರಚಿಕೊಳ್ಳುವುದು” ಮಗು. ಕೆಲವರು ಕೈಗೆ ಸಿಕ್ಕಿದ್ದನ್ನು ಗೋಡೆಗೆ ಅಪ್ಪಳಿಸಿ ತಮ್ಮ ಕೋಪವನ್ನು  ವ್ಯಕ್ತಪಡಿಸು ತ್ತಾರೆ. ಇನ್ನೂ ಕೆಲವರು ಶತಪಥ ಹಾಕುತ್ತಾ ತಮ್ಮ ಕೋಪವನ್ನು ನೆಲದ ಮೇಲೆ, ಪಾಪಿ ಶರೀರ ಹೊತ್ತ ಪಾದಗಳ ಮೇಲೆ ತೋರಿಸುತ್ತಾರೆ, ಇಲ್ಲಾ ಕೈಗೆ ಸಿಗುವ ಮಕ್ಕಳ ಕಿವಿ ಹಿಂಡಿ, ಅವರ ಬಾಯಿಂದ ಸಪ್ತ ಸ್ವರ ಹೊರಡಿಸಿ ಕೋಪ ತೀರಿಸಿಕೊಳ್ಳುತ್ತೇವೆ. ಕೋಪ ಎನ್ನುವುದೇ ಹೀಗೆ. ವ್ಯಕ್ತಪಡಿಸಲೇ ಬೇಕು. ಇಲ್ಲದಿದ್ದರೆ ಹಿಡಿದಿಟ್ಟುಕೊಂಡ ಕೋಪ depression ಆಗಿಯೋ ಮತ್ತೇನಾದರೂ ಆಗಿಯೋ ಪರಿಣಮಿಸುತ್ತದೆ. pent up anger ಒಳ್ಳೆಯದಲ್ಲ.  ವೈಯಕ್ತಿಕ ಜೀವನದಲ್ಲಿ ಹೀಗಾದರೆ ಪ್ರಜಾಪ್ರಭುತ್ವದಲ್ಲಿ ಈ ಕೋಪ, ನಿರಾಶೆ, ಹತಾಶೆಯನ್ನು ವ್ಯಕ್ತಪಡಿಸಲು ಹಲವು ಮಾರ್ಗಗಳು. ನಾಯಕನ ಅಥವಾ ವಿರೋಧಿಯ ಪ್ರತಿಕೃತಿ ಸುಟ್ಟೋ, ಘೋಷಣೆ ಕೂಗಿಯೋ (ಕಾಂಗ್ರೆಸ್ ಪಕ್ಷ ಎತ್ತು ಭಿಕ್ಷ, ೧೯೭೭ ರಲ್ಲಿ ಜನತಾ ಪಕ್ಷದವರು ಹೇಳುತ್ತಿದ್ದುದು, ಈಗ ಇದು ಹಳೆ ಫ್ಯಾಶನ್), ಕಪ್ಪು ಬಾವುಟ ಮೂತಿಗೆ ಹಿಡಿದೋ, ರಸ್ತೆ ತಡೆ ನಡೆಸಿಯೋ ಪ್ರಕಟ. ಮೇಲೆ ಹೇಳಿದವು run of the mill ಅಂತಾರಲ್ಲ ಹಾಗೆ. ಕೇಳಿ, ನೋಡಿ ಸಾಕಾಗಿ ಹೋದ ನಮೂನೆಗಳು. ಎಲ್ಲಿ ಹೋದರೂ, ಯಾವ ಸಂದರ್ಭಗಳಲ್ಲೂ ಎಲ್ಲಾ ಹೆಣ್ಣು ಮಕ್ಕಳ ಮೈ ಮೇಲೂ ನಡೆದಾಡುವ “ಮಾಕ್ಸಿ” ಗಳ  ಹಾಗೆ. ಸರ್ವಾಂತರ್ಯಾಮಿ. ಇತ್ತೀಚೆಗೆ ಈ ಏಕತಾನತೆಗೆ, monotonous ಗೆ, ಬಿಡುವು ಸಿಕ್ಕಿತು. ನಮ್ಮಲ್ಲೂ ಇದೆ ಕ್ರಿಯಾಶೀಲತೆ ಎಂದು ತೋರಿಸಿದೆವು. ಪ್ರೇಮಿಗಳ ದಿನದಂದು ಈ ಆಚರಣೆ ಸಲ್ಲದು ಎಂದು ಪ್ರೇಮಿಗಳಿಗೆ ಎಚ್ಚರಿಸಿದವರ ಅಂಡುಗಳಿಗೆ ಕೆಂಪು ಕೆಂಪಾದ ಚಡ್ಡಿಗಳ ವಿತರಣೆ. ಜಯಲಲಿತಾಳ ಸೀರೆ ವಿತರಣೆ ಥರ, ಐಶ್ವರ್ಯಾ ರೈ ವಿವಾಹದ ಲಡ್ಡುಗಳ ಥರ ಅತ್ಯುತ್ಸಾಹದ ಚಡ್ಡಿ ವಿತರಣೆ. ಪ್ರತಿಭಟಿಸಲು ನಾವು ಕಂಡುಕೊಂಡ ಈ ವಿನೂತನ ವಿಧಾನ ನಮ್ಮ ದೇಶದಲ್ಲಿ ಮಾತ್ರವಲ್ಲ, ಹೊರ ದೇಶಗಳಲ್ಲೂ ಜನಪ್ರಿಯವಾಗಿ ಅಮೆರಿಕೆಯ ಪ್ರಸಿದ್ಧ NPR ರೇಡಿಯೋ ಸಹ ಬಿತ್ತರಿಸಿತು. ಈಗಾಗಲೇ ಚಡ್ಡಿಗಳು ಸವೆದೋ, ಹರಿದೋ ಹೋದರೂ ಈ ಪ್ರತಿಭಟನೆಯ “ರೂವಾರಿಣಿ” ಮಾತ್ರ ಅಜರಾಮರಳಾದಳು. ಕ್ರಿಯಾಶೀಲತೆಗೆ “ಚಡ್ಡಿ ಸಾಕ್ಷಿ” ಯಾದಳು.   

ಬಹಳ ಸಂಭಾವಿತರಾದ, ಸುಸಂಸ್ಕೃತರಾದ ನಾವು ಜನ ಚಡ್ಡಿ ಹಾಕಿಕೊಳ್ಳಲಿ ಎಂದು ಸರಬರಾಜು ಮಾಡಿದರೆ ಮತ್ತೊಂದೆಡೆ ಪ್ಯಾಂಟ್ ಬಿಚ್ಚಿ ಪ್ರತಿಭಟನೆ. ಆಂ, ಏನ್ರೀ ಇದು ಉದ್ಧಟತನ ಎಂದಿರಾ? ಯಾರಿಗ್ರೀ ಉದ್ಧಟತನ?  ಉದ್ಧತನ ನಮಗೆ. ನಗ್ನತೆಯೇ ನೈಜತೆ ಎಂದು ನಂಬುವ, ನಂಬಿದಂತೆ ನಡೆಯುವ ಪಾಶ್ಚಾತ್ಯರಿಗೆ ಏನ್ರೀ ಉದ್ಧಟತನ? ಮೇಲೆ ಹೇಳಿದ ಪ್ಯಾಂಟ್ ಅವರೋಹಣ ಮಾಡಿ ಪ್ರತಿಭಟನೆ ನಡೆದಿದ್ದು ಇಟಲಿಯ ರೋಮ್ ನಗರದಲ್ಲಿ. ಇಟಲಿ ಎಂದ ಕೂಡಲೇ ಕಿವಿ ನಿಮಿರುತ್ತವೆ ನಮ್ಮದು, ಎಷ್ಟಿದ್ದರೂ ನಮ್ಮ ಬೀಗರಲ್ಲವೇ ಅವರು?  ರೋಮ್ ನಗರದ ಮೇಯರ್ ಹೊಸ ತೆರಿಗೆ ಒಳಗೊಂಡಿದ್ದ ಆಯ-ವ್ಯಯ ಪತ್ರ ಮಂಡಿಸಲು ತಯಾರಿಲ್ಲ. ಚುನಾವಣೆ ಹತ್ರ ಬಂತು ಎಂದು ಆಯ-ವ್ಯಯ ಪತ್ರ ಅಡಿಗಿಟ್ಟು ಕೂತು ಬಿಟ್ಟ ಪರಮ ಪೂಜ್ಯ ಮೇಯರ್. ಇದನ್ನು ತೆಗೆಸಲು ಮಾಡಿದ ಎಲ್ಲಾ ಪ್ರಯತ್ನವೂ ವಿಫಲವಾದ ಮೇಲೆ ಈ ಅವರೋಹಣ ಕಾರ್ಯಕ್ರಮ. ಇದರ ಉದ್ಘಾಟನೆ ಯಾರು ಮಾಡಿದರೋ ಗೊತ್ತಿಲ್ಲ, ಅವರೋಹಣ ಸಾಂಗವಾಗಿ ಜರುಗಿತು. ಜನರ ಅವಸ್ಥೆ ಕಂಡು ಬಂಡೆ ಕರಗಿದರೂ ಮೇಯರ್ ನ ಹೃದಯ ಕರಗದೆ ಆಯ ವ್ಯಯ ಪತ್ರ ಬಚ್ಚಲು ಸೇರಿಕೊಂಡಿತು.

ಅಮೆರಿಕೆಯ ಆಪ್ತ ಮಿತ್ರ, ತಾನು ಪಶ್ಚಿಮ ಎಂದರೆ ಪೂರ್ವ ಎನ್ನುವ ಇರಾನ್ ದೇಶದಲ್ಲಿ ಅಧ್ಯಕ್ಷೀಯ ಚುನಾವಣೆ. ಹಾಲಿ ಅಧ್ಯಕ್ಷ “ಅಹ್ಮದಿ ನಿಜಾದ್” ಸೋತರೂ ಸೋಲೊಪ್ಪದೆ ಅಮೆರಿಕೆಯ ಅಧ್ಯಕ್ಷೀಯ ಚುನಾವಣೆಯಲ್ಲಿ ಬುಶ್ ಸಾಹೇಬರು ಪ್ರತಿಸ್ಪರ್ದಿ “ಅಲ್ ಗೋರ್” ಗೆ ಹಾಕಿದ ಟೋಪಿಯನ್ನೇ ತಮ್ಮ ಎದುರಾಳಿಗೆ ತೊಡಿಸಿ recycling ನ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಜಗಕ್ಕೆ, ವಿಶೇಷವಾಗಿ ಪಾಶ್ಚಾತ್ಯರಿಗೆ (recycling ಪಾಶ್ಚಾತ್ಯರ ಕೂಸು) ಪಾಠ ಹೇಳಿಕೊಟ್ಟರು. ಈ ವಿಷಯದಲ್ಲಿ ಅಹ್ಮದಿ ನಿಜಾದ್ ಬುಶ್ ಅಭಿಮಾನಿ. ಪ್ರಪಂಚದ ಯಾವುದೇ ದಿಕ್ಕುಗಳಲ್ಲಿ ಹರಡಿ ಹೋದರೂ ತಮ್ಮ ಗುಣ ವೈಶಿಷ್ಟ್ಯಗಳ ಜನರನ್ನು ಕಂಡುಕೊಳ್ಳುತ್ತಾರೆ ಖದೀಮರು. ವಿರೋಧ ಪಕ್ಷದ ಅಭ್ಯರ್ಥಿ ಬಿಡುತ್ತಾನೆಯೇ, ಅದೂ  ಉರಿಯುವ ಬೆಂಕಿಗೆ ಅಮೇರಿಕಾ ಗಾಳಿ ಹಾಕಲು ತಯಾರಾಗಿರುವಾಗ? ವಿದ್ಯಾರ್ಥಿಗಳು ಬೀದಿಗೆ ಬಂದರು. ನಮ್ಮ ನೆರೆಯ ಮಿತ್ರ ೧೯೮೯ ರಲ್ಲಿ “ತಿಯಾನನ್ಮೆನ್ ಚೌಕ” ದ ಬಳಿ ಸೇನೆಯ ಟ್ಯಾಂಕರು ಗಳನ್ನು ಕಳಿಸಿ ರಸ್ತೆಯನ್ನು ಕೆಂಬಣ್ಣಕ್ಕೆ (ಪ್ರದರ್ಶನಕಾರರ ರಕ್ತದಿಂದ) ತಿರುಗಿಸಿದ ಹಾಗೆ ಮಾಡಲಿಲ್ಲ ಪ್ರೊಫೆಸರ್ ಅಹ್ಮದಿ ನಿಜಾದ್. ಡ್ರಿಲ್ ಮಾಸ್ತರ್ ನಂತೆ ಒಂದಿಷ್ಟು ಲಾಠಿ, ಮತ್ತೊಂದಿಷ್ಟು ಬೆದರಿಕೆ ಹಾಕಿ ಒಳಕ್ಕೆ ಕಳಿಸಿದರು ಪ್ರದರ್ಶನಕಾರರನ್ನು. ಈಗ “ಪೆಂಟ್ ಅಪ್” ಕೋಪವನ್ನೇನು ಮಾಡೋದು? ನೆಲೆ ಕಾಣದ ಕೋಪ ಸೂರು ಹತ್ತಿತು. ಜನ ತಮ್ಮ ಮನೆಗಳ ಸೂರಿನ ಮೇಲೆ ನಿಂತು ಅರಚಿದರು ಘೋಷಣೆಗಳನ್ನು. ದಿನವೂ ನಿರ್ದಿಷ್ಟ ಸಮಯಕ್ಕೆ ಕಿರುಚುವುದು. ಪಾಪ ಇವರಿಗೆ ಗೊತ್ತಿಲ್ಲ ರಾಜಕಾರಣಿಗಳು ತಾವು ಅಧಿಕಾರ ವಹಿಸಿಕೊಂಡ ಕೂಡಲೇ ಮೊದಲನೆಯದಾಗಿ ಕಳೆದುಕೊಳ್ಳುವುದು ಕಿವಿಗಳನ್ನು ಎಂದು. ಎರಡನೆಯದಾಗಿ ಕಳಕೊಳ್ಳೋದು ಮಾನವನ್ನು. ಟೆಹರಾನಿನಲ್ಲೂ, ಇರಾನಿನ ಇತರೆ ನಗರಗಳಲ್ಲೂ ನಡೆದ ಗದ್ದಲ ಬೇರೆಲ್ಲ ದೇಶಗಳ ನಿದ್ದೆಗೆಡಿಸಿ ಗಡದ್ದಾಗಿ ಮಲಗಿದ್ದ ಶ್ವೇತ ಭವನವನ್ನು ಎಚ್ಚರಿಸಿತು. ಎಂದಿನಂತೆ ಕಟುವಾದ ಶಬ್ದಗಳು ಉರುಳಲಿಲ್ಲ ತಡಬಡಿಸಿ ಎದ್ದ ಶ್ವೇತ ಭವನದ ಹಸಿರು ಹುಲ್ಲು ಹಾಸಿನಿಂದ. ಏಕೆಂದರೆ ಇದು ಬುಶ್ ಶ್ವೇತ ಭವನವಲ್ಲ, ಒಬಾಮ ಭವನ. ಸ್ವಲ್ಪ ನಯವಾಗಿಯೇ ಗದರಿಸಿತು ಅಮೇರಿಕಾ. ನೋಡಪ್ಪಾ ಹೀಗೆಲ್ಲ ಮಾಡಬಾರದು, ಸರಿಯಾಗಿ ಮತಗಳನ್ನೂ ಎಣಿಸು, ಎಣಿಸಲು ಬರದಿದ್ದರೆ ಬೇಕಾದರೆ ನಮ್ಮ ಜನಗಳನ್ನು ಕಳಿಸುತ್ತೇವೆ ಎಂದು. ವಿಶ್ವವಿದ್ಯಾಲಯದಲ್ಲಿ ಪ್ರಾದ್ಯಾಪಕರೂ ಆದ ಇರಾನಿನ ಅಧ್ಯಕ್ಷರು ಅಮೆರಿಕೆಗೆ ತಮ್ಮದೇ ಭಾಷೆಯಲ್ಲಿ mind your business ಎಂದು ಹೇಳಿ ಅಮೆರಿಕೆಯ ಪ್ರತಿಭಟನೆಗೂ, ವಿದೇಶೀ ಸರಕಾರಗಳ ಮೂದಲಿಕೆಗೂ, ಮಾಧ್ಯಮಗಳ ತಿವಿತಗಳಿಗೂ ಅಸಾಧಾರಣವಾದ ಕಿವುಡುತನ ಪ್ರದರ್ಶಿಸಿದರು. ತಾವು ತಮಗರಿವಿಲ್ಲದೆಯೇ ಮಹಾತ್ಮ ಬುಶ್ ರ ಅಭಿಮಾನಿ ಎಂದು ತೋರಿಸಿಕೊಟ್ಟರು ಪ್ರಪಂಚಕ್ಕೆ.

ಥಾಯ್ಲೆಂಡಿನಲ್ಲಿ ಪದಚ್ಯುತ ಪ್ರಧಾನಿ “ಥಕ್ಸಿನ್ ಶಿನಾವತ್ರ” ರನ್ನು ಮರಳಿ ಅಧಿಕಾರಕ್ಕೆ ತರಬೇಕೆಂದು ಪಟ್ಟು ಹಿಡಿದು  ಜನ ಬೀದಿಗಿಳಿದರು ಕೆಂಪು ಅಂಗಿ ಧರಿಸಿ. ನಗರವೆಲ್ಲಾ ಕೆಂಪೋ ಕೆಂಪು. ಪ್ರತಿಭಟನೆಯ ವ್ಯಾಲೆಂಟೈನ್. ಜಪ್ಪಯ್ಯ ಎನ್ನಲಿಲ್ಲ ಸೇನಾ ಬೆಂಬಲಿತ “ಅಭಿಸಿತ್ ವೆಜ್ಜಜೀವ”. ೪೫ ರ, ಆಕ್ಸ್ಫೋರ್ಡ್ ನಲ್ಲಿ ಕಲಿತ ಸ್ಫುರದ್ರೂಪಿ ರಾಜಕಾರಣಿ ಥಾಯಿಲೆಂಡ್ ಅನ್ನು ವಿದೇಶೀ ಬಂಡವಾಳ ಹೂಡಿಕೆದಾರರಿಗೆ ಆಕರ್ಷಕವನ್ನಾಗಿ ಮಾಡಿದ್ದರು. ಆದರೆ ಶಿನಾವತ್ರ ಬೆಂಬಲಿಗರಿಗೆ ಈ ಬದಲಾವಣೆಯಾಗಲಿ, ಪ್ರಗತಿಯಾಗಲಿ ಬೇಕಿಲ್ಲ. ತರಬೇಕು ಮರಳಿ ತಮ್ಮ ನಾಯಕನನ್ನು ಗದ್ದುಗೆಗೆ. ಕೊನೆಗೆ ಎಲ್ಲರೂ ತಮ್ಮ ತಮ್ಮ ರಕ್ತ ಶೇಖರಿಸಿಕೊಂಡು ಬಕೇಟು ಗಳಲ್ಲಿ ತುಂಬಿ ಅಭಿಸಿತ್ ನಿವಾಸದ ಮುಂದೆ ಸುರಿದರು. ಅಭಿಸಿತ್ ಅವರ ಜಗುಲಿ ನೆತ್ತರುಮಯವಾಯಿತು, ಕ್ಷಣಗಳಲ್ಲಿ ರಕ್ತ ಹೆಪ್ಪುಗಟ್ಟಿತು. ಅದರೊಂದಿಗೆ ಅಭಿಸಿತ್ ನ ಅಧಿಕಾರದ ಮೋಹವೂ ಇನ್ನಷ್ಟು ಹೆಪ್ಪುಗಟ್ಟಿತು.         

ಹೀಗೆ ಪ್ರತಿಭಟನೆಗಳು ಒಂದಲ್ಲ ಒಂದು ತಮ್ಮದೇ ಆದ ರೀತಿಯಲ್ಲಿ ಪ್ರತ್ಯಕ್ಷಗೊಂಡು, ಸೋತ, ನೀರಸ ವಿಶ್ವಕ್ಕೆ ಗೆಲುವನ್ನೂ, ಲವಲವಿಕೆಯನ್ನು ತಂದು ಕೊಡುತ್ತವೆ. ನಿಮ್ಮದೂ ಏನಾದರೂ ವಿಶಿಷ್ಟ ವಿಧಾನಗಳಿದ್ದರೆ ಹೇಳಿ. ನಿಮಗಾಗದ ಸಹೋದ್ಯೋಗಿ ಸಮೀಪ ಇಲ್ಲದಾಗ ಅವನ ಹೆಸರಿನಲ್ಲಿ (ಆತ ತೆರೆದಿಟ್ಟು ಹೋದ office outlook ಮೂಲಕ) ಬೇಡದ ಮೇಲ್ ಕಳಿಸಿ ಆತನ ಬಾಳನ್ನು ಬಂಗಾರ ಮಾಡಿದ ನಿದರ್ಶನಗಳಿದ್ದರೆ ಹಂಚಿಕೊಳ್ಳಿ.

ಕೋಪ ಬಂದಾಗ ಒಂದು ಮೊಳೆ

ಒಬ್ಬ ಹುಡುಗ ಮಹಾ ಕೋಪಿಷ್ಟ. ಸುಲಭವಾಗಿ ಕೆರಳುತ್ತಿದ್ದ. ಇದನ್ನು ಕಂಡು ರೋಸಿದ ತಂದೆ ತನ್ನ ಮಗನಿಗೆ ಒಂದು ಚೀಲ ತುಂಬಾ ಮೊಳೆಗಳನ್ನು ಕೊಟ್ಟು ಪ್ರತೀ ಸಲ ಕೋಪ ಬಂದಾಗ ಮನೆಯ ಹಿಂದಿನ ಗೋಡೆಗೆ ಒಂದು ಮೊಳೆ ಹೊಡೆಯಲು ಹೇಳುತ್ತಾನೆ. ಉತ್ಸಾಹದಿಂದ ಹೋಗುವ ಹುಡುಗ ಮೊದಲ ದಿನವೇ ೩೭ ಮೊಳೆಗಳನ್ನು ಹೊಡೆದು ಹಾಕುತ್ತಾನೆ ಗೋಡೆಗೆ.  ಒಂದೆರಡು ವಾರಗಳಲ್ಲಿ ತನ್ನ ಕೋಪ ತಾಪ ಎಲ್ಲಾ ತಹಬಂದಿಗೆ ಬಂದು ಗೋಡೆಗೆ ಹೊಡೆಯಬೇಕಾದ ಮೊಳೆಗಳು ಸಂಖ್ಯೆಯಲ್ಲಿ ಕಡಿಮೆಯಾಗುತ್ತವೆ. ತನ್ನ ಅಪ್ಪ ಹೇಳಿದ ಹಾಗೆ ಮೊಳೆ ಹೊಡೆಯುವುದಕ್ಕಿಂತ ಸುಲಭ ತನ್ನ ಕೋಪವನ್ನು ನಿಯಂತ್ರಿಸುವುದು ಎಂದು ಈ ಹೊತ್ತಿಗಾಗಲೇ ಹುಡುಗ ಅರಿತು ಕೊಳ್ಳುತ್ತಾನೆ. ಕೊನೆಗೊಂದು ದಿನ ಹುಡುಗ ಮೊದಲಿನ ಥರ ಕೋಪಿಷ್ಠನಾಗದೇ ಮಂದಸ್ಮಿತನಾಗುತ್ತಾನೆ, ಸಂಯಮಿಯಾಗುತ್ತಾನೆ, ಮೊಳೆಯ ಚೀಲ ಬರಿದಾಗುತ್ತದೆ. ಈ ವಿಷಯವನ್ನು ತನ್ನ ತಂದೆಗೆ ಬಂದು ಹೇಳಿದಾಗ ತಂದೆ ಹೇಳುತ್ತಾನೆ, ಮಗನೇ, ಈಗ ಹೋಗಿ ನೀನು ಹೊಡೆದ ಮೊಳೆಗಳನ್ನೆಲ್ಲಾ ದಿನಕ್ಕೊಂದರಂತೆ ಕೀಳು ಎಂದು. ಮತ್ತೊಮ್ಮೆ ಗೋಡೆ ಕಡೆ ಮರಳಿದ ಹುಡುಗ ಸಾವಧಾನದಿಂದ ದಿನಕ್ಕೊಂದರಂತೆ  ಒಂದೊಂದೇ ಮೊಳೆ ಗಳನ್ನು ಕೀಳುತ್ತಾನೆ. ಒಂದೆರಡು ವಾರಗಳ ತರುವಾಯ ಹುಡುಗ ಬಂದು ತಾನು ಎಲ್ಲಾ ಮೊಳೆಗಳನ್ನು ಕಿತ್ತ ವಿಷಯ ಹಿಗ್ಗುತ್ತಾ ತಂದೆಗೆ ತಿಳಿಸುತ್ತಾನೆ. ಮಗನನ್ನು ನೋಡಿ ಮುಗುಳ್ನಗುತ್ತಾ ಅವನ ಕೈ ಹಿಡಿದು ಕೊಂಡು ಹಿತ್ತಲಿನ ಗೋಡೆಗೆ ಬಂದ ತಂದೆ ಮಗನ ತಲೆ ತಡವುತ್ತಾ ಹೇಳುತ್ತಾನೆ, ಮಗೂ, ಎಷ್ಟು ಸುಂದರ ಕೆಲಸ ನೀನು ಮಾಡಿದೆ, ಆದರೆ ನೋಡು ಒಮ್ಮೆ ಗೋಡೆಯನ್ನು. ಮೊದಲಿನ ಹಾಗಿದೆಯೇ ಗೋಡೆ? ಎಷ್ಟೊಂದು ತೂತುಗಳು ಬಿದ್ದಿವೆ ನೋಡು ಗೋಡೆಯ ಮೇಲೆ. ಈ ಗೋಡೆ ಮೊದಲಿನ ಹಾಗೆ ಆಗಲು ಸಾಧ್ಯವೆ?  ಎಂದಿಗೂ ಇಲ್ಲ. ನೀನು ಕೋಪದಲ್ಲಿ ಆಡಿದ ಮಾತುಗಳೂ ಸಹ ಹಾಗೆಯೇ. ನಿನ್ನ ಕೋಪದ ಮಾತುಗಳು, ಜನರಿಗೆ ಮಾಡಿದ ನೋವು ನೀನು ಮೊಳೆಗಳಿಂದ ಗೋಡೆಗೆ ಮಾಡಿದ ತೂತುಗಳಂತೆ.  ಅವೆಂದೂ ಮಾಸಲಾರವು. ಒಬ್ಬನಿಗೆ ಚೂರಿ ಇರಿದು ಆ ಚೂರಿಯನ್ನು ಹಿಂದಕ್ಕೆ ಎಳೆಯಬಹುದು, ಆದರೆ ಆ ಚೂರಿ ಮಾಡಿದ ಗಾಯ? ಆ ಗಾಯ ಮಾಸುವುದೇ? ನೀನೆಷ್ಟೇ ಕ್ಷಮೆ ಕೋರಿದರೂ ಆ ಗಾಯ ಅಲ್ಲೇ ಇರುತ್ತದೆ.

ಅನರ್ಘ್ಯ ರತ್ನಗಳಂಥ ಮಾತುಗಳನ್ನು ತನ್ನ ಪ್ರೀತಿಯ ತಂದೆಯ ಬಾಯಿಂದ ಆಲಿಸಿದ ಹುಡುಗ ದಂಗುಬಡಿದವನಂತೆ, ತಟಸ್ಥನಾಗಿ ನಿಂತು ತನ್ನ ತಂದೆಯನ್ನೇ ನೋಡುತ್ತಾ ನಿಂತ ಕಣ್ಣೀರು ಹರಿಸುತ್ತಾ.

ನಮಗೂ ಇರಲಿ ಕೊಂಚ, ಭಾಷಾಭಿಮಾನ

ಅಲ್-ನಂಸ” ಎಂದರೇನು ಅಥವಾ ಯಾವ ದೇಶ ಇದು ಎನ್ನುತ್ತಾ ಬಂದರು ನಮ್ಮ ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ಸ್ ವಿಭಾಗದ ಮುಖ್ಯಸ್ಥರು. ಅವರಿಗೆ ತಿಳಿದಿತ್ತು ಹೆಂಡತಿ, ಪುಟಾಣಿ ಮಕ್ಕಳ ಸಮಯ ಕದ್ದು, ಆಫೀಸ್ನಲ್ಲಿ ಕೆಲಸ ಇದೆ ಎಂದು ನೆಟ್ ಮೇಲೆ ನೇತಾಡುವ ನನ್ನ ಅಭ್ಯಾಸ. ಸರಿ, ಬೇಕಾದ್ದನ್ನೆಲ್ಲ ಕೇಳಲು ಅಲ್ಲಾವುದ್ದೀನನ ದೀಪ ದ ಮೊರೆಗೆ ಹೋದ ಹಾಗೆ ಯಾಹೂ ಸರ್ಚ್ ಬಾರ್ ಗೆ ನನ್ನ ಪಯಣ. ಕೂಡಲೇ ಸಿಕ್ಕಿತು ಉತ್ತರ. “ಅಲ್-ನಂಸ” ಎಂದರೆ ಆಸ್ಟ್ರಿಯಾ ದೇಶ ಅಂತ. ಆಸ್ತ್ರಿಯಾಕ್ಕೆ “ಅಲ್-ನಂಸ” ಎಂದು ಕರೆಯುತ್ತಾರೆ. ಅರಬ್ ಭಾಷೆ ರೋಚಕ. ಪ್ರತಿ ಆಂಗ್ಲ ಪದಕ್ಕೂ ಪರ್ಯಾಯವಾಗಿ ಒಂದು ಪದ ಇದ್ದೆ ಇರುತ್ತದೆ. ನಾವು ಫೋನ್ ಗೆ ಕನ್ನಡದಲ್ಲಿ ದೂರವಾಣಿ ಎನ್ನದೇ ಫೋನ್ ಎಂದೇ ಕರೆಯುತ್ತೇವೆ, ಅದೇ ರೀತಿ ಮೊಬೈಲ್ ಸಹ. ಮೊಬೈಲ್ ಗೆ ಕನ್ನಡದಲ್ಲಿ ಏನನ್ನುತ್ತಾರೋ ನನಗೆ ಗೊತ್ತಿಲ್ಲ ಆದರೆ ಅರಬ್ಬೀ ಭಾಷೆಯಲ್ಲಿ ಇದಕ್ಕೆ “ಜವ್ವಾಲ್” ಎನ್ನುತ್ತಾರೆ. ಅಪ್ಪಿತಪ್ಪಿಯೂ ಯಾವ ಅರಬನೂ ತಾನು ಮಾತನಾಡುವಾಗ ಮೊಬೈಲ್ ಎನ್ನುವುದಿಲ್ಲ. ಫೋನ್ ಗೆ “ಹಾತಿಫ್” ಎನ್ನುತ್ತಾರೆ. ಕಾರಿಗೆ “ಸಿಯಾರ”. ವಿಮಾನಕ್ಕೆ “ತಯಾರ”. ಇವುಗಳಿಂದಲೇ ತಿಳಿಯುತ್ತದೆ ಅರಬರಿಗೆ ತಮ್ಮ ಭಾಷೆಯ ಮೇಲೆ ವ್ಯಾಮೋಹ ಹೆಚ್ಚು ಎಂದು, ಅದರಲ್ಲೇನು ತಪ್ಪಿದೆ ಹೇಳಿ? ನಾವೂ ಸಹ ಅವರನ್ನು ಅನುಕರಿಸಬೇಕು ಈ ವಿಷಯದಲ್ಲಿ ಅಲ್ಲವೇ. ಇಲ್ಲದಿದ್ದರೆ ಬೆಳಿಗ್ಗೆ ಎದ್ದು ತಿಂಡಿಗೆ ಎಂದು ಉಪಾಹಾರ ಮಂದಿರಕ್ಕೆ ಹೋಗಿ ಅಲ್ಲಿ ಉದ್ದಿನ ವಡೆಗೆ “ಮೆದು ವಡ” ಎಂದು ಬರೆದ ಎಂದು ತಕರಾರು ಮಾಡಿ ನಂತರ ಸ್ವಲ್ಪ ದೂರ ಬಂದು ಬಾಯಾರಿತು ಎಂದು ಎಳನೀರು ಕುಡಿಯಲು ಹೋದರೆ ಅಲ್ಲಿ ಎಳೆ ನೀರಿಗೆ “ನಾರಿಯಲ್” ಎಂದ ಎಂದು ಅರಚಾಡಿ ಗಂಟಲನ್ನು ಮತ್ತಷ್ಟು ಒಣಗಿಸುವುದಕ್ಕಿಂತ ನಮ್ಮ ಭಾಷೆ ಬಗ್ಗೆ ನಮ್ಮಲ್ಲೂ, ನಮ್ಮ ಮಕ್ಕಳಲ್ಲೂ ಅಭಿಮಾನ ಹುಟ್ಟಿಸಬೇಕು. ಉಪಕರಣಗಳ ಹಾಗೂ ಇತರೆ ಹೆಸರುಗಳನ್ನು ಬಿಡಿ ದೇಶಗಳ ಹೆಸರೂ ಅರಬ್ಬೀಕರಣ. ಭಾರತಕ್ಕೆ “ಹಿಂದ್” ಎನ್ನುತ್ತಾರೆ. ಜರ್ಮನಿಗೆ ” ಅಲ್-ಮಾನಿಯಾ”, ಗ್ರೀಸ್ ದೇಶಕ್ಕೆ “ಯುನಾನಿ”. ಹಂಗೇರಿ ಗೆ “ಅಲ್-ಮಜಾರ್”, ಹೀಗೆ ಸಾಗುತ್ತದೆ ಪಟ್ಟಿ. ಋತು “ಶರತ್ಕಾಲ” ಕ್ಕೆ ಅರಬ್ಬೀ ಭಾಷೆಯಲ್ಲಿ “ಖಾರಿಫ್” ಎನ್ನುತ್ತಾರೆ. ಖಾರಿಫ್ ಎಂದು ನಮ್ಮಲ್ಲೂ ಕೇಳಿದ ನೆನಪು, ಅದೇನೆಂದು ಸರಿಯಾಗಿ ಗೊತ್ತಿಲ್ಲ. ಚಳಿಗಾಲಕ್ಕೆ ” ಶಿತ “. ಇದನ್ನು ಕೇಳಿ ಚಳಿ ಹಿಡಿಯಿತಾ? ಇದೇನಪ್ಪಾ ನಮ್ಮ ಮೇಜು, ಕುರ್ಚಿ ಹಾಗೆ ಶೀತಾ ಸಹ ಅರಬ್ಬೀ ಮೂಲದ್ದೇ ಎಂದು? ಅದರ ಬಗ್ಗೆ ನನಗರಿವಿಲ್ಲ. ವಾರದ ದಿನಗಳಿಗೆ ಅರಬರ ಹೆಸರುಗಳು ಸ್ವಲ್ಪ ನೀರಸವೇ ಎನ್ನಬಹುದು. ಭಾನುವಾರ ಕ್ಕೆ “ಅಹದ್” ಅಂದರೆ ಮೊದಲು ಎಂದು. ವಾರದ ಮೊದಲ ದಿನ ಭಾನುವಾರ ಅಲ್ಲವ, ಅದಕ್ಕಿರಬೇಕು. ಸೋಮವಾರಕ್ಕೆ ” ಇತ್ನೇನ್” ಅಂದರೆ ಎರಡು. ಮಂಗಳವಾರ ಮೂರನೇ ದಿನ…..ಶುಕ್ರವಾರಕ್ಕೆ “ಜುಮಾ” ಮತ್ತು ಶನಿವಾರಕ್ಕೆ “ಸಬ್ತ್”.

ಅರಬ್ಬೀ ಮತ್ತು ಪೆರ್ಶಿಯನ್ ಪದಗಳು ಕನ್ನಡದಲ್ಲೀ ಹೇರಳವಾಗಿ ಕಾಣಲು ಸಿಗುತ್ತವೆ. ಅವುಗಳ ಬಗ್ಗೆ ಮುಂದೆಂದಾದರೂ ಬರೆಯುವೆ. ಅದೂ ಅಲ್ಲದೆ ಅರಬ್ಬೀ ಅಕ್ಷರ ಮಾಲೆಯಲ್ಲಿ “p” , “t” ಗಳು ಇಲ್ಲ. ಇವುಗಳ ಅನುಪಸ್ಥಿತಿಯಲ್ಲಿ ಬರುವ ಕೆಲವು ಪದಗಳು ತಮಾಷೆಯಾಗಿವೆ, ಇವುಗಳ ಬಗ್ಗೆಯೂ ಮುಂದೆಂದಾದರೂ ಬರೆಯುವೆ.

ಈ ಲೇಖನಕ್ಕೆ ಬಂದ ಕೆಲವು ಪ್ರತಿಕ್ರಿಯೆಗಳು:  

shreekant mishrikoti

ರಾಬಿ ಮತ್ತು ಖಾರಿಫ್ ಬೆಳೆ ಅಂದರೆ ಮುಂಗಾರು ಬೆಳೆ ಮತ್ತು ಹಿಂಗಾರು ಬೆಳೆ .
ವಿಕಿಪೀಡಿಯದಲ್ಲಿ ಹೀಗಿದೆ.
Rabi crop, spring harvest in India
The Kharif crop is the autumn harvest (also known as the summer or monsoon crop) in India and Pakistan.

ಮತ್ತೆ
ಲ್ಯಾಂಡ್-ಲೈನ್ ಗೆ ಸ್ಥಿರದೂರವಾಣಿ ಮತ್ತು ಮೊಬೈಲ್ ಗೆ ಸಂಚಾರಿ ದೂರವಾಣಿ ಅನ್ನೋ ಶಬ್ದಗಳು ಹೆಚ್ಚು ಚಾಲ್ತಿಯಲ್ಲಿವೆ . ಕೆಲವರು ನಿಲ್ಲುಲಿ , ನಡೆಯುಲಿ, ಜಂಗಮವಾಣಿ ಮುಂತಾದವನ್ನು ಬಳಸುವರು.

salimath wrote:

landline = ನಿಲ್ಲುಲಿ
mobile phone = ನಡೆಯುಲಿ (credits: ಬರತ್ ವೈ)

car= ನೆಲದೇರು (ನೆಲ+ತೇರು)
ವಿಮಾನ = ಬಾಂದೇರು (ಬಾನ್+ತೇರು)
ಗನನಸಖಿ= ಬಾಂಗೆಳತಿ (ಬಾನ್+ಗೆಳತಿ)
ಶೀತ = ಕುಳಿಱು