ಈಗ ಮಹಿಳೆ ಗಾಲ್ಫ್ ಆಡಬಹುದು

ಮಹಿಳೆ ಇಂದು ಎಲ್ಲಾ ಕ್ಷೇತ್ರಗಳಲ್ಲೂ ಬಹು ಸುಂದರವಾಗಿ, ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾಳೆ. ಕೆಲವೊಮ್ಮೆ ಎಡರು ತೊಡರುಗಳು ಬಂದರೂ ಅವುಗಳನ್ನ ಸಾಮರ್ಥ್ಯದಿಂದ ಎದುರಿಸಿ ಆ ಎಡರು ತೊಡರುಗಳನ್ನ ‘ಲಾಂಚ್ ಪ್ಯಾಡ್’ ಆಗಿ ಪರಿವರ್ತಿಸಿಕೊಂಡು ತನ್ನ ಗುರಿ ಸಾಧಿಸುತ್ತಿದ್ದಾಳೆ. ಆದರೂ ಅಲ್ಲಿ ಇಲ್ಲಿ ಎಂದು ತಾರತಮ್ಯ ಇಲ್ಲದಿಲ್ಲ. ಉದಾಹರಣೆಗೆ ಸೌದಿ ಅರೇಬಿಯಾದಲ್ಲಿ ಮಹಿಳೆ ವಾಹನ ಚಲಾಯಿಸುವಂತಿಲ್ಲ. ಈ ನಿರ್ಬಂಧ ಸೌದಿ ಗೆ ಮಾತ್ರ ಸೀಮಿತ. ಇತರೆ ಅರಬ್ ಮತ್ತು ಮುಸ್ಲಿಂ ರಾಷ್ಟ್ರಗಳಲ್ಲಿ ಈ ನಿರ್ಬಂಧನೆ ಇಲ್ಲ. ಸೌದಿಗಳ ಪ್ರಕಾರ ಅವರ ಸಮಾಜ ಇನ್ನೂ ಆ ಮಟ್ಟಕ್ಕೆ ಇವಾಲ್ವ್ ಆಗಿಲ್ಲವಂತೆ. ಅಲ್ಲಿನ ದೊರೆ ಅಬ್ದುಲ್ಲಾ ಈ ವಿಷಯದಲ್ಲಿ ಸಕಾರಾತ್ಮಕ ಮನೋಭಾವ ತೋರಿದರೂ ಸಮಾಜ ತೋರಿಸುತ್ತಿಲ್ಲ ರಿಯಾಯಿತಿಯನ್ನು. ಕಳೆದರಡು ವರ್ಷಗಳಲ್ಲಿ ಸೌದಿ ಮಹಿಳೆ ಕಾರನ್ನು ಚಲಾಯಿಸಿ ವ್ಯವಸ್ಥೆಗೆ ಸೆಡ್ಡು ಹೊಡೆದರೂ ಅದು ಸೆಡ್ಡಿನ ಸದ್ದಿಗೆ ಮಾತ್ರ ಸೀಮಿತಗೊಂಡಿತು. ಇರಲಿ ಕಾಲ ಶೀಘ್ರವೇ ಬರಲಿದೆ. ಇದು ಕಟ್ಟಾ ಸಂಪ್ರದಾಯವಾದಿ ಸೌದಿ ಸಮಾಜದ ಕಥೆಯಾದರೆ ವಿಶ್ವದ ಅತಿ ಮುಂದುವರೆದ, ಮಹಿಳಾ ಸ್ವಾತಂತ್ಯ್ರ್ಯದ ಕಹಳೆ ಮೊಳಗಿಸಿದ ಅಮೇರಿಕಾ ಕಥೆ ಕೇಳಿ.

ಮಾಸ್ಟರ್ಸ್ ಗಾಲ್ಫ್ ಟೂರ್ನಮೆಂಟ್ ನ ತವರೂರಾದ   “ಆಗಸ್ಟ ನ್ಯಾಷನಲ್ ಗಾಲ್ಫ್ ಕ್ಲಬ್” ಗೆ ಮಹಿಳೆಯರಿಗೆ ಸದಸ್ಯತ್ವ ಇಲ್ಲ. ಏಕಿಲ್ಲ, ಅನ್ನೋದು ಗೊತ್ತಿಲ್ಲ. ಈ ವಿಷಯದಲ್ಲಿ ಅವರು ಸೌದಿಗಳ ಥರ ಇನ್ನೂ ಇವಾಲ್ವ್ ಆಗಿಲ್ಲ ಎಂದು ಕಾಣುತ್ತೆ. ಮೊನ್ನೆ ಮೊನ್ನೆಯವರೆಗೂ ಇರಲಿಲ್ಲ. ಎಲ್ಲದಕ್ಕೂ ಸಮಯ ಅನ್ನೋದು ಬರಬೇಕಲ್ಲ.  ಎಂಭತ್ತು ವರ್ಷಗಳ ಇತಿಹಾಸ ಇರೋ ಈ ಗಾಲ್ಫ್ ಕ್ಲಬ್ ಮಹಿಳೆಯರಿಗೆ ಸದಸ್ಯತ್ವ ಕೊಡಲು ನಿರ್ಧರಿಸಿ ಜಾರ್ಜ್ ಬುಶ್ ಸಂಪುಟದಲ್ಲಿದ್ದ ಮಾಜಿ ಕಾರ್ಯದರ್ಶಿ ‘ಕೊಂಡೊಲೀಜಾ ರೈಸ್’, ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ ‘ಡಾರ್ಲಾ ಮೂರ್’ ಇವರೀರ್ವರಿಗೆ ಸದಸ್ಯತ್ವ ನೀಡಲು ತೀರ್ಮಾನಿಸಿತು. ಈ ವಿಷಯದಲ್ಲಿ ಅಲ್ಲಿನ ಅಧ್ಯಕ್ಷ ಒಬಾಮಾ ಸಹ ಆಸಕ್ತಿ ತೋರಿಸಿದ್ದರು. ರಾಷ್ಟ್ರೀಯ ಮಹಿಳಾ ಸಂಘಟನೆಗಳಿಗೆ ಸೇರಿದ ಮಾರ್ಥ ಬರ್ಕ್ ಹಲವು ಸಲ ಪ್ರತಿಭಟನೆ ಸಲ್ಲಿಸಿದರೂ ಜಪ್ಪಯ್ಯ ಎಂದಿರಲಿಲ್ಲ ಈ ಸಂಸ್ಥೆ. ಪ್ರತಿಭಟನೆ ಜೋರಾದ ಸಮಯ ಅಂದಿನ ಅಧ್ಯಕ್ಷ ಜಾನ್ಸನ್ ಹೇಳಿದ್ದು, ಮಹಿಳೆಯರು ನಮ್ಮ ಸಂಸ್ಥೆಯ ಸದಸ್ಯರಾಗುವ ಸಮಯ ಭವಿಷ್ಯದಲ್ಲಿ ಬರಬಹುದು, ಅದರ ಆಗಮನದ ವೇಳಾ ಪಟ್ಟಿ ನಾವು ನಿರ್ಧರಿಸಿದಾಗ ಮಾತ್ರ, ಬಲವಂತದಿಂದಲೋ, ಬಂದೂಕಿನ ತುದಿಯಿಂದ ಅಲ್ಲ ಎಂದು ಗುಡುಗಿದ್ದರು. ಈಗ ಆ ಗುಡುಗು ಭರವಸೆಯ ‘ಮಳೆ’ ಯಾಗಿ ಮಾರ್ಪಟ್ಟಿದೆ ಮಹಿಳೆಯರಿಗೆ.

ಈ ಲೇಖನವನ್ನ ೩೫೦೦೨ ಅಡಿ ಎತ್ತರದಲ್ಲಿ ವಿಮಾನದಲ್ಲಿ ಕೂತು ಕಂಪೋಸ್ ಮಾಡಿದ್ದು. ಜೆಡ್ಡಾ ದಿಂದ ದುಬೈ ಗೆ ಹೋಗುವ ಹಾದಿಯಲ್ಲಿ. ಮೊದಲಿನ ಥರ ಲೇಖನಗಳನ್ನ ಹೆಣೆಯಲಿಕ್ಕೆ ಆಗ್ತಾ ಇಲ್ಲ. ಸಮಯದ ಕೊರತೆ ಮತ್ತು ಸೋಮಾರಿತನದ ಕಾರಣ; deadly duo. ಭೂಮಿಯ ಮೇಲಿದ್ದ lethargy ಕೆಳಕ್ಕೊಗೆದು ಮೋಡಗಳ ಮೇಲೆ ಸವಾರಿ ಮಾಡುತ್ತಾ ಬರೆದೆ ಈ ಲೇಖನವನ್ನು.

Advertisements