ನಾವಾಡುವ ನುಡಿ …

ನಾವಾಡುವ ನುಡಿ … ಕನ್ನಡ ನುಡಿಗೆ, ಭಾಷೆಗೆ ‘ಇಗೋ’ (ಅಹಂ) ಇಲ್ಲ ಎಂದು ‘ಇಗೋ ಕನ್ನಡ’ ದಂಥ ಪುಸ್ತಕ ಓದಿದ ಯಾರಿಗೂ ಅರಿವಾಗದೇ ಇರದು. ಏಕೆಂದರೆ ಅರಬ್ಬೀ, ಪಾರ್ಸಿ, ಮರಾಠಿ ಬಾಷೆಗಳ ಪದಗಳನ್ನು ಸರಾಗವಾಗಿ ತನ್ನೊಡಲಲ್ಲಿ ಇಟ್ಟುಕೊಂಡು, ಶ್ರೀಮಂತಗೊಂಡ ಭಾಷೆ ಕನ್ನಡ. ಅದರಲ್ಲೂ ಸಂಸ್ಕೃತದ ಪ್ರಭಾವ ಸ್ವಲ್ಪ ಅಪಾರವೇ ಎನ್ನಬೇಕು; ಶೇಕಡ ೬೦ ಕ್ಕೂ ಹೆಚ್ಚು ಪದಗಳು ಸಂಸ್ಕೃತದಿಂದ ಬಂದವಂತೆ.  ಇಗೋ ಕನ್ನಡ ಪುಸ್ತಕವನ್ನು ತಿರುವಿ ಹಾಕುವಾಗ ಸಿಕ್ಕಿದ ಕೆಲವು ಸ್ವಾರಸ್ಯಕರ ಅಂಶಗಳನ್ನ ನಿಮ್ಮ ಮುಂದೆ ಇಡುವ ಬಯಕೆ.  

ಹಿರಿಯ ಮಗನನ್ನು ಜ್ಯೇಷ್ಠ ಪುತ್ರ ಎಂದು ಕರೆಯುವರು. ಸರಿ, ಮೊದಲ ಮಗನೇನೋ ಜ್ಯೇಷ್ಠ ಆಗುತ್ತಾನೆ.  ಆದರೆ ಹಿರಿಯ ಮಗಳನ್ನು “ಜ್ಯೇಷ್ಠೆ” ಎಂದು ಕರೆಯರು, ಯಾಕೆ? ಲಕ್ಷ್ಮಿಯ ಹಿರಿಯ ಅಕ್ಕನಾದ  ಜ್ಯೇಷ್ಠೆಗೆ ದುರದೃಷ್ಟದ ದೇವತೆ ಎನ್ನುತ್ತಾರಂತೆ. ಆದ್ದರಿಂದ ಹೆಣ್ಣು ಮಕ್ಕಳನ್ನು ಈ ಹೆಸರಿನಿಂದ ಕರೆಯುವುದಿಲ್ಲ, ದುರದೃಷ್ಟ ವಕ್ಕರಿಸೀತೆಂದು ಹೆದರಿ. ‘ಜ್ಯೇಷ್ಠಾ’ ಎಂದರೆ ಹಿರಿಯ ಹೆಂಡತಿ, ಪ್ರಿಯೆಯಾದ ಹೆಂಡತಿ ಎನ್ನುವ ಅರ್ಥಗಳೂ ಇವೆ. ನನಗೆ ತಿಳಿದಂತೆ,  ಸಾಮಾನ್ಯವಾಗಿ ಕಿರಿಯ ಹೆಂಡತಿ ಪ್ರಿಯಳಾದವಳು, ಹಿರಿಯ ಹೆಂಡತಿಯಲ್ಲ. ವಯಸ್ಸಿನಲ್ಲಿ ಮತ್ತು ಅನುಭವದಲ್ಲಿ ಚಿಕ್ಕವಳು ಅಂತ ಕಿರಿಯ ಹೆಂಡತಿ  ಮೇಲೆ ಪ್ರೀತಿ ಸ್ವಲ್ಪ ಹೆಚ್ಚೇ ಇರುತ್ತದೆ.  

ಶ್ರೀಮತಿ ಎಂದ ಕೂಡಲೇ ಮದುವೆಯಾದಾಕೆ ಎನ್ನುವ ಭಾವನೆ ನಮ್ಮಲ್ಲಿದೆ. ‘ಶ್ರೀಮಾನ್, ಶ್ರೀಮತಿ’ ಗಳನ್ನು ಆಂಗ್ಲ ಭಾಷೆಯ mr and mrs ನ ಸಮಾನ ರೂಪವಾಗಿ ಉಪಯೋಗಿಸುತ್ತಾರೆ.  ಶ್ರೀಮತಿ ವಿವಾಹಿತ ಮಹಿಳೆಗೆ ಅನ್ವಯ ಎನ್ನುವ ನಿಯಮವೇನೂ ಇಲ್ಲ. ಶ್ರೀಮತಿ ಎಂದರೆ, ಸಂಪತ್ತುಳ್ಳವಳು, ಬುದ್ಧಿ, ಶೋಭೆ, ಕಾಂತಿಯುಳ್ಳವಳು ಎಂದರ್ಥ. ಶ್ರೀಮತಿ ಅವಿವಾಹಿತೆ ಸಹ ಆಗಬಹುದು. ಗೌರವಾರ್ಹರಾದ ಎಲ್ಲಾ ಮಹಿಳೆಯರಿಗೂ ಇದು ಅನ್ವಯಿಸುವುದು.  ಹಾಗಾದರೆ ಆಂಗ್ಲ ಭಾಷೆಯ ‘ಮಿಸಸ್’ ಪದಕ್ಕೆ ಕನ್ನಡದ ರೂಪ ಏನು? 

ಊರು ತಲಪಿದ ಕೂಡಲೇ ಫೋನ್ ಮಾಡಿ ತಿಳಿಸು. ತಲಪು? ಅಥವಾ ‘ತಲು’ಪು? ಎರಡೂ ಸರಿಯಂತೆ, ಹಾಗಂತ ‘ಇಗೋ ಕನ್ನಡ’ ದ ಫರ್ಮಾನು. ಫರ್ಮಾನ್ ಎಂದರೆ ಆಜ್ಞೆ. ರಾಜನೊಬ್ಬ ಫರ್ಮಾನ್ ನೀಡಿದಾಗ ಅದು ರಾಜಾಜ್ಞೆ.   

‘ತಾಬಡತೋಬ’ – ಈ ಪದಕ್ಕೆ ಕನ್ನಡದ ಸಮಾನ ಪದ ತುರ್ತು. ಹೋಗೋ ಅವನಿಗೆ ತಾಬಡತೋಬ್ (ತುರ್ತಾಗಿ) ಬರೋಕ್ಕೆ ಹೇಳು ಎಂದು ಹೇಳುವುದನ್ನು ನಾನು ಕೇಳಿದ್ದೇನೆ. ಉರ್ದು ಭಾಷಿಕರೂ, ಹುಬ್ಬಳ್ಳಿ ಧಾರವಾಡದ ಮಂದಿಯೂ ಹೀಗೆ ಹೇಳ್ತಾರಂತೆ. ನಾಲಗೆಯ ಮೇಲೆ ಅಂಕು ಡೊಂಕಾಗಿ ನಿಲ್ಲಲು ಪ್ರಯತ್ನಿಸುವ ಈ ಪದದ ಮೂಲ ‘ಮರಾಠಿ’.  

‘ತಾದಾತ್ಮ್ಯ’ ನನಗಿಷ್ಟವಾದ ಪದ. ಇದರ ಅರ್ಥ ತಲ್ಲೀನತೆ, ಮಗ್ನ. ಓದು, ಬರಹ ತಾದಾತ್ಮ್ಯ ತೆಯಿಂದ ಮಾಡಬಹುದೋ ಅಥವಾ ಈ ಪದವನ್ನು ಅರಾಧನೆಯಂಥ ಗಂಭೀರ ಕಾರ್ಯಗಳಿಗೆ ಮಾತ್ರ ಬಳಸಬೇಕೋ?

ಈ ಕ್ಷಣಕ್ಕೆ ಇಷ್ಟು ಸಾಕು….ಸಿರಿಗನ್ನಡಂ ಗೆಲ್ಗೆ.

ಅಜ್ಜಿಯ ನೆನಪು

ಗೋರ್ಬಚೋಫ್ ೮೦ ನೆ ಜನ್ಮದಿನಾಚರಣೆಯ ಹುಮ್ಮಸ್ಸಿನಲ್ಲಿದ್ದಾರೆ. ವಿಶ್ವದ ಅತ್ಯಂತ VISIBLE LEADER ಗಳಲ್ಲಿ ಒಬ್ಬರಾಗಿದ್ದರು ಗೋರ್ಬಚೋಫ್. ೮೦ ರ ದಶಕದಲ್ಲಿ ಅಮೆರಿಕೆಯ ರೊನಾಲ್ಡ್ ರೇಗನ್, ರಷ್ಯದ ಗೋರ್ಬಚೋಫ್ ಸುದ್ದಿ ಮಾಡಿದ್ದೆ ಮಾಡಿದ್ದು. ರೊನಾಲ್ಡ್ ರೇಗನ್ ಒಬ್ಬ ಹಾಲಿವುಡ್ ನಟ. ಕೋಟಿಗಟ್ಟಲೆ ಜನರನ್ನು ತನ್ನ ಚಿತ್ರಗಳ ಮೂಲಕ ರಂಜಿಸಿದ ರೇಗನ್ ರಾಜಕಾರಣದಲ್ಲೂ ತಮ್ಮದೇ ಆದ ಛಾಪನ್ನು ಒತ್ತಿದ್ದರು. ರೇಗನ್ ಮತ್ತು ಗೋರ್ಬಚೋಫ್ ಮಧ್ಯೆ ಇದ್ದುದು ಒಂದು ಕಾಲದ ಧರ್ಮೇಂದ್ರ – ಹೇಮಾ ಮಾಲಿನಿ, ಸಲ್ಮಾನ್ – ಐಶ್ವರ್ಯ ನಡುವಿನ “ಕೆಮಿಸ್ಟ್ರಿ”. ಇವರುಗಳು ನಾಯಕರಾಗಿದ್ದ ಎರಡೂ ದೇಶಗಳೂ ಅಪನಂಬಿಕೆಯಿಂದ ತೊಳಲುತ್ತಿದ್ದರೆ ಇವರೀರ್ವರು ಮಾತ್ರ ಒಬ್ಬರನ್ನೊಬ್ಬರ ಕಾರ್ಯಶೈಲಿಯನ್ನು ಮೆಚ್ಚುತ್ತಾ ಒಂದು ಅಪೂರ್ವವಾದ ಸ್ನೇಹವನ್ನು ಹೆಣೆದಿದ್ದರು. ರೇಗನ್ ರವರು ಗೋರ್ಬಚೋಫ್ ರನ್ನು ಉದ್ದೇಶಿಸಿ Mr. Gorbachev, tear down this wall. ಬರ್ಲಿನ್ ಗೋಡೆ ಬಗ್ಗೆ ಅಮೆರಿಕೆಯ ಅಧ್ಯಕ್ಷ ನೊಬ್ಬ ಸೋವಿಯೆಟ್ ನಾಯಕನಿಗೆ ಈ ರೀತಿ ಸಂಬೋಧಿಸಿ ಹೇಳಬೇಕೆಂದರೆ ಮಾಮೂಲಿ ಕೆಲಸವಲ್ಲ. ಸಿನಿಮಾದ ಡಯಲಾಗ್ ಥರ ಹೊಡೆದೇ ಬಿಟ್ಟರು ರೇಗನ್ ವಿಶ್ವ ದಂಗಾಗುವಂತೆ.

ಗೋರ್ಬಚೋಫ್ ಮಾತು ಬಂತೆಂದರೆ ಗತಿಸಿಹೋದ ನನ್ನ ಪ್ರೀತಿಯ ಅಜ್ಜಿಯ ನೆನಪು ಬರುತ್ತದೆ. ಕನ್ನಡ ಭಾಷೆಯನ್ನ ಬಹು ಚೆನ್ನಾಗಿ ಮಾತನಾಡುತ್ತಿದ್ದ ಅವರು ತುಷಾರ, ಕಸ್ತೂರಿ, ಮಲ್ಲಿಗೆ, ಮಯೂರ, ಸುಧಾ ಮುಂತಾದ ಪತ್ರಿಕೆಗಳನ್ನು ತಪ್ಪದೆ ಓದುತ್ತಿದ್ದರು. ನನ್ನ ಅಜ್ಜಿಗೂ ನನ್ನ ಹಾಗೆಯೇ ವಿಶ್ವದ ಆಗುಹೋಗುಗಳ ಮೇಲೆ ಆಸಕ್ತಿ ಹೆಚ್ಚು. ಟೀವೀ ಪರದೆ ಮೇಲೆ ಗೋರ್ಬಚೋಫ್ ಕಾಣಿಸಿದ್ದೇ ತಡ ಕೇಳುತ್ತಿದ್ದರು, ಏನೋ ಅದು, ಅವನ ತಲೆ ಮೇಲೆ ಅದ್ಯಾವಾಗ ಕಾಗೆ ಕಕ್ಕ ಮಾಡಿತು ಎಂದು. ಗೋರ್ಬಚೋಫ್ ಅವರ ಕೂದಲಿಲ್ಲದ ನುಣ್ಣಗಿನ ತಲೆ ಮೇಲೆ ದೊಡ್ಡದಾದ ಮಚ್ಚೆ ಇತ್ತು. ಈ ಮಚ್ಚೆ world famous. ನೋಡಿದವರಿಗೆ ನನ್ನ ಅಜ್ಜಿಗೆ ತೋಚಿದಂತೆಯೇ ಕಾಗೆ ಕಕ್ಕ ಉದುರಿಸಿದ ಹಾಗೆ ಕಾಣುತ್ತಿತ್ತು. ಗೋರ್ಬಚೋಫ್ ರ ನೆನಪಾದಾಗ ಎರಡು ವರ್ಷಗಳ ಹಿಂದೆ ನಮ್ಮನ್ನು ಬಿಟ್ಟು ಹೋದ ಅಜ್ಜಿಯ ನೆನಪೂ ಸಹ ಬರುತ್ತದೆ.

ಗೂದೆ ಹಣ್ಣು ಮತ್ತು ನೆರಳಚ್ಚು

ಗೂದೆ ಹಣ್ಣು ಮತ್ತು ನೆರಳಚ್ಚು…ಇವೆರಡೂ ಪದಗಳಿಗೆ ಇರುವ ಸಂಬಂಧವೇನು ಎಂದು ತಲೆ ಕೆರೆದು ಕೊಳ್ಳಬೇಡಿ. ಪ್ರೊ. ಜಿ. ವೆಂಕಟಸುಬ್ಬಯ್ಯ ನವರ (ವೆಂಕಟ ಸುಬ್ಬಯ್ಯ ಒಂದು ಪದವೋ, ಎರಡು ಪದವೋ?) ಸಾಮಾಜಿಕ ನಿಘಂಟು “ಇಗೋ ಕನ್ನಡ” ತಿರುವಿ ಹಾಕುತ್ತಿದ್ದಾಗ ಇವೆರಡು ಪದಗಳು ಸಿಕ್ಕಿದವು. ನಗಲು ಮತ್ತು ಅರಿತು ಕೊಳ್ಳಲು ಸಹಾಯ ಮಾಡಿದ ಈ ಎರಡು ಪದಗಳ ಬಗ್ಗೆ ನಿಮಗೂ ಬರೆದು ತಿಳಿಸೋಣ ಎಂದು ಬರೆಯುತ್ತಿದ್ದೇನೆ.

ಹೇ, ಹೋಗಿ ಇದರ “ಜೆರಾಕ್ಸ್” ಕಾಪಿ ತಗೊಂಡ್ಬಾರೋ ಎಂದು ಹೇಳುವುದನ್ನು ನಾವು ಕೇಳಿದ್ದೇವೆ. ಜೆರಾಕ್ಸ್ ಎಂದರೆ ನೆರಳಚ್ಚು ಎಂದು ನಿಘಂಟಿನಲ್ಲಿ ಅರ್ಥ ನೀಡಲಾಗಿದೆ. ಜೆರಾಕ್ಸ್ ಪದಕ್ಕೆ ಪರ್ಯಾಯವಾಗಿ ನೆರಳಚ್ಚು ಎನ್ನೋದು ನನಗಂತೂ ಸರಿ ತೋರಲಿಲ್ಲ. ನೆರಳು + ಅಚ್ಚು = ನೆರಳಚ್ಚು ತಾನೇ? ನೆರಳಿಗೆ ಆಕಾರ ಮತ್ತು ರೂಪ ಸ್ಪಷ್ಟವಾಗಿ  ಇರುವುದಿಲ್ಲ. ಆದರೆ ಜೆರಾಕ್ಸ್ ಕಾಪಿಗೆ ಇದೆರಡೂ ಇದೆ. ಅಸಲಿ ಪ್ರತಿ (copy) ಯ ರೀತಿಯಲ್ಲೇ ಇರುತ್ತದೆ ಜೆರಾಕ್ಸ್ ಕಾಪಿ. ಹಾಗಾಗಿ ಅದು ನೆರಳಚ್ಚು ಆಗಬಾರದು. ಅದು ನನ್ನ ಮಟ್ಟಿಗೆ ಪಡಿಯಚ್ಚು ಆಗಬೇಕು. ನೋಡ್ರೀ…ನಿಮ್ಮ ಮಗ ನಿಮ್ಮ ಪಡಿಯಚ್ಚು, ಆಲ್ವಾ? ಎಂದು ಯಾರಾದರೂ ಅಂದಾಗ ತಂದೆ ಎದೆ ಉಬ್ಬಿಸುತ್ತಾನೆ, authenticity ಪ್ರೂವ್ ಆದ ಸಂಭ್ರಮದಲ್ಲಿ. ಇಲ್ಲಿ ಪಡಿಯಚ್ಚು ಎಂದರೆ ಥೇಟ್ ತಂದೆ ರೀತಿ ಎಂದು. ಹಾಗಾಗಿ ಜೆರಾಕ್ಸ್ ಕಾಪಿ ಗೆ ಪಡಿಯಚ್ಚು ಎಂದರೆ ತಪ್ಪಾಗಬಹುದೋ?

ಜೆರಾಕ್ಸ್ ಒಂದು ಕಂಪೆನಿ. ಅಮೇರಿಕಾ ಮೂಲದ್ದು. ಯಾವುದಾದರೂ ಒಂದು ಕಂಪೆನಿ ಪ್ರಪ್ರಥಮ ಬಾರಿಗೆ ಒಂದು ಉತ್ಪನ್ನ ತಂದಾಗಲೋ, ಅಥವಾ ಉತ್ಪನ್ನವೊಂದು ತುಂಬಾ ಜನಪ್ರಿಯ ಆದಾಗಲೋ ಉತ್ಪಾದಕ ರ ಹೆಸರು ಅದಕ್ಕೆ ತಗುಲಿ ಕೊಳ್ಳುತ್ತದೆ. ಯಾವುದೇ ಕಬ್ಬಿಣದ ಬೀರುವಿಗೆ ಗೋದ್ರೆಜ್ ಬೀರು ಎನ್ನುತ್ತಾರೆ. ಅದು ಗೋದ್ರೆಜ್ ನಿರ್ಮಿತವಲ್ಲದಿದ್ದರೂ. ಇದೇ ಗತಿ ಜೆರಾಕ್ಸ್ ಗೂ ಬಂದಿದ್ದು. 

ಟೊಮೆಟೋ ಹಣ್ಣಿಗೆ ಕನ್ನಡದಲ್ಲಿ ಪರ್ಯಾಯ ಪದವಿದೆಯೇ? ಇಲ್ಲದೆ ಏನು, ಅದೇ “ಗೂದೆ ಹಣ್ಣು” ಎಂದು ಹೇಳುತ್ತದೆ ಈ ಸಾಮಾಜಿಕ ನಿಘಂಟು. ಗೂದೆ? “ಆರ್ ಯೂ ಶುಅರ್” ಎಂದು ಬಾಯಗಲಿಸಬೇಡಿ. ಹೌದು ಗೂದೆ ಹಣ್ಣಿಗೆ ಆಂಗ್ಲ ಭಾಷೆಯಲ್ಲಿ ಟೊಮೇಟೋ ಎನ್ನುತ್ತಾರೆ. ಬಹುಶಃ “ಗೂದೆ” (ಓಯ್, ಗೂದೆ ಎಲ್ಲೋಗಿದ್ದೆ?) ಎನ್ನುವ ಪದ ಕಸಿವಿಸಿಗೆ ಎಡೆ ಮಾಡಿ ಕೊಡೋದ್ರಿಂದಲೂ, ಮತ್ತು ಅದರ ಮೂಲ ಪದ ಸಂಸ್ಕೃತದ “ಗುದ” ದ ಮೂಲಕ ಬಂದಿದ್ದರೊಂದಲೋ ಏನೋ, ಅದರ ಸಹವಾಸವೇ ಬೇಡ, ಪರಂಗಿ ಭಾಷೆಯೇ ಚೆಂದ ಎಂದು ಟೊಮೇಟೋ ಬಳಕೆಯನ್ನು ಆರಂಭಿಸಿರಬಹುದು ನಮ್ಮ ಹಿರಿಯರು, ಅಲ್ಲವೇ?

ಆಂಗ್ಲದ ಎಲ್ಲಾ ಪದಗಳಿಗೆ ಪರ್ಯಾಯ ಕನ್ನಡ ಪದ ಉಪಯೋಗಿಸೋದು ಕನ್ನಡಮ್ಮನ ಸೇವೆ ಎಂದು ಕೆಲವರು ತಿಳಿದರೆ ಇನ್ನೂ ಕೆಲವರು ‘fad’ ಗೆ ಕಟ್ಟು ಬಿದ್ದು “ಅಭಿಯಂತರರು” ಎಂದು ಹೇಳಲಾಗದೆ ಹೆಣಗಾಡುತ್ತಾರೆ.  ಮೊಬೈಲ್ ಉಪಕರಣಕ್ಕೆ “ನಡೆಯುಲಿ” ಎಂದೂ ಹೇಳುತ್ತಾರೆ.

ಕೊನೆಯದಾಗಿ ಪ್ರೊ. ಜಿ. ವೆಂ ಅವರು ಆಂಗ್ಲ ಭಾಷೆಯ fundamentalist ಪದಕ್ಕೆ ಕನ್ನಡದಲ್ಲಿ “ಮತಾಂಧ” ಎಂದು ಹೇಳಿದ್ದಾರೆ. ಇದು ತಪ್ಪು ಎಂದು ನನ್ನ ಅಭಿಪ್ರಾಯ. ನೀವೇನಂತೀರಾ?        

ಹಾಗೆಯೇ, ಪದ ಮತ್ತು ಶಬ್ದದ ವ್ಯತ್ಯಾಸವೇನು? ನನಗೆ ಗೊತ್ತಿಲ್ಲ. ಇಗೋ ಕನ್ನಡಲ್ಲೂ ಇದು ಸಿಕಿಲ್ಲ.

“ಇಗೋ ಕನ್ನಡ” ಪುಸ್ತಕದ ಬಗ್ಗೆ ಒಂದು ಮಾತು. ಇಗೋ ಕನ್ನಡ ಒಂದು ಸೊಗಸಾದ ಪುಸ್ತಕ. ಭಾಷೆಗಳ ಬೆಳವಣಿಗೆ ಬಗ್ಗೆ ಬಹಳ passionate ಆಗಿ ಬರೆದಿದ್ದಾರೆ ಪ್ರೊ. ಜಿ.ವೆಂ ಅವರು. ಕೊಳ್ಳಲೇ ಬೇಕಾದ ಪುಸ್ತಕ, ನವಕರ್ನಾಟಕ ದವರು ಸುಂದರವಾಗಿ ಪ್ರಕಾಶಿಸಿದ್ದಾರೆ. ಕೇವಲ ೨೭೫ ರೂಪಾಯಿ. fad ಗೆ ಕಟ್ಟು ಬಿದ್ದು ನಕಲಿ ಪೋಲೋ ಟೀ ಷರ್ಟ್ ಖರೀದಿಸಿ  ಸೋಲುವ ಬೆಲೆ.

ಕನ್ನಡ ಪುಸ್ತಕಗಳ ಪ್ರದರ್ಶನ

ಮಂಗಳೂರಿನಲ್ಲಿ ಇತ್ತೀಚೆಗೆ ಕನ್ನಡ ಪುಸ್ತಕಗಳ ಭಾರೀ ಪ್ರದರ್ಶನ ಏರ್ಪಟ್ಟಿತ್ತು. ಕನ್ಫ್ಯೂಸ್ ಮಾಡ್ಕೋಬೇಡಿ, ಭಾರೀ ಎಂದರೆ ಭಾರೀ ತಯಾರಿ ಮತ್ತು ಉತ್ಸಾಹ ಎಂದು. ಭಾರೀ ಯಶಸ್ಸಲ್ಲ. ಓದಿನ ಕಡೆ ಜನರ ಧೋರಣೆ ಏನು ಎಂದು ಖಾಲಿಯಾಗಿ ಭಣಗುಟ್ಟುತ್ತಿದ್ದ ಗಲ್ಲಾ ಪೆಟ್ಟಿಗೆಗಳೇ ಸಾಕ್ಷಿಯಾದವು. ನೆಹರೂ ಮೈದಾನದ ಮೂಲಕ ಹಾದು ಹೋಗುತ್ತಿದ್ದಾಗ ನನ್ನ ಭಾವನವರ ಕಣ್ಣಿಗೆ ಬಿತ್ತು ಪುಸ್ತಕ ಪ್ರದರ್ಶನ. ಕೂಡಲೇ ಅಲ್ಲಿಂದಲೇ ನನಗೆ ಫೋನಾಯಿಸಿ ಬನ್ನಿ, ನಿಮಗಿಷ್ಟವಾದ ಒಂದು ಪ್ರದರ್ಶನ ಏರ್ಪಟ್ಟಿದೆ ಎಂದು ಆಮಂತ್ರಿಸಿದ್ದೆ ತಡ ಅಲ್ಲಿಗೆ ದೌಡಾಯಿಸಿದೆ. ಸೊಗಸಾದ ವಿಶಾಲವಾದ ಸಾಲಕೃತ ಮಂಟಪದಲ್ಲಿ ಡಜನು ಗಟ್ಟಲೆ ಪ್ರಕಾಶಕರು ವಿದ್ಯಾ ದೇವತೆಯನ್ನು ಅಲಂಕರಿಸಿ ಕರೆದು ಕೊಂಡು ಬಂದಿದ್ದರು ನಾಡಿನ ಮೂಲೆ ಮೂಲೆಯಿಂದ. ತಮಿಳು ಚಿತ್ರ ರಜನಿ ನಟಿಸಿದ ಎನ್ಧಿರನ್ ನೋಡಲೆಂದು ಸೇರಿದ್ದ ಜನ ಜಮಾವಣೆ ಇರಬಹುದೆಂದು ಊಹಿಸಿ ಬಂದಿದ್ದ ನನಗೆ ನಿರಾಶೆ. ಸಾರ್ವಜನಿಕರಿಗಿಂತ ಹೆಚ್ಚಾಗಿ ಅಲ್ಲಿನ ಸಿಬ್ಬಂದಿಗಳೇ ತುಂಬಿದ್ದರು. ಒಂದೇ ಸೂರಿನಡಿ ಅಷ್ಟೊಂದು ಪುಸ್ತಕಗಳನ್ನು ಖುಷಿ ಯಿಂದ ನೋಡುತ್ತಾ ಒಂದೊಂದೇ ಮಳಿಗೆ ಕಡೆ ಕಣ್ಣು ಹಾಯಿಸುತ್ತಾ ಬೆಳಗೆರೆ ಕೃಷ್ಣ ಶಾಸ್ತ್ರಿಗಳ “ಮರೆಯಲಾದೀತೇ”, “ಸಾಹಿತಿಗಳ ಸ್ಮೃತಿ”, ಫಾಕೀರ್ ಮುಹಮ್ಮದ್ ಕಟ್ಪಾಡಿ ಯವರ “ಸೂಫಿ ಸಂತರು”, S.M. ಮುಶ್ರಿಫ್ ರವರ ಕನ್ನಡ ಅನುವಾದಿತ “ಕರ್ಕರೆಯನ್ನು ಕೊಂದವರು ಯಾರು”, ವೆಂಕಟ ಸುಬ್ಬಯ್ಯ ಅವರ “ಇಗೋ ಕನ್ನಡ”… ಮತ್ತು ಇನ್ನೂ ಕೆಲವು ಪುಸ್ತಕಗಳನ್ನೂ ಖರೀದಿಸಿ ಮರಳಿದೆ. ಹಿಂದೊಮ್ಮೆ ಸಂಪದದಲ್ಲೇ ಕರಾವಳಿಯಲ್ಲಿ ಕನ್ನಡಕ್ಕಿರುವ ಪ್ರಾಶಸ್ತ್ಯದ ಬಗ್ಗೆ ಬರೆದದ್ದಕ್ಕೆ ಅರಬ್ಬೀ ಸಮುದ್ರದ ಅಲೆಗಳಂತೆ ನನ್ನ ಮೇಲೆ ಕೆಲವರು ಹಾಯ್ದಿದ್ದರು. ಆ ಪ್ರದೇಶದಲ್ಲಿ ಕನ್ನಡ ಬಳಕೆ, ಅಷ್ಟಕ್ಕಷ್ಟೇ ಎಂದರೆ ಅದು ಒಂದು ದೂಷಣೆ ಯಾಗಿ ಮಾರ್ಪಡಬಾರದು. ಅಲ್ಲಿನ ಜನರಿಗೆ ಕೊಂಕಣಿ, ತುಳು ಭಾಷೆಗಳೊಂದಿಗೆ ನಂಟು ಹೆಚ್ಚು. ಹಾಗೆಂದು ಕನ್ನಡ ಬಗ್ಗೆ ಅಸಡ್ಡೆ ಇದೆಯೆಂದಲ್ಲ. ಆದರೆ ಈ ಪ್ರದರ್ಶನಕ್ಕೆ ಜನರ ಪ್ರತಿಕ್ರಿಯೆ ಮತ್ತು ಪ್ರಕಾಶಕರ ಅಳಲು ನೋಡಿದರೆ ಓದುಗರ ಸಂಖ್ಯೆ ದಿನೇ ದಿನೇ ಇಳಿ ಮುಖವಾಗುತ್ತಿದೆ ಎಂದೆನ್ನಿಸದಿರಲಾರದು. ಓದುಗ ಸಮೂಹ ಪುಸ್ತಕಗಳನ್ನ ಖರೀದಿ ಮಾಡಿ, ಹಲ್ಲು ಗಿಂಜುತ್ತಾ ಇನ್ನಷ್ಟು ಡಿಸ್ಕೌಂಟ್ ಕೊಡು ಎಂದು ಕೇಳೋದು, ಸಿನೆಮಾ ಟಿಕೆಟ್ಗಾದರೆ ಎಷ್ಟನ್ನಾದರೂ ಕೊಟ್ಟು ಬ್ಲಾಕ್ ಮಾರ್ಕೆಟ್ ನಲ್ಲಿ ಟಿಕೆಟ್ ಕೊಳ್ಳಲು ತಯಾರಾಗೋದು ನೋಡಿದಾಗ ಕನಿಕರ ತೋರದಿರದು. ಕನ್ನಡ ಪುಸ್ತಕಗಳ ಮಾರಾಟದ ಕಾರ್ಮೋಡದ ಪರಿಸ್ಥಿತಿಯಲ್ಲೂ ಒಂದು ಹೊಂಗಿರಣ ಏನೆಂದರೆ ಕನ್ನಡ ಪ್ರಕಾಶನ ಈಗ ಮೊದಲಿನಂತಲ್ಲ ಎನ್ನುವ ಸೂಚನೆ ಸಿಕ್ಕಿದ್ದು. ಮುದ್ರಣ, ಮುಖಪುಟದ ವಿನ್ಯಾಸ ಹೀಗೆ ಹಲವು ಪ್ರಾಕಾರಗಳಲ್ಲಿ ಸ್ವಾಗಾತಾರ್ಹ ಮತ್ತು ಪ್ರಶಂಸಾರ್ಹ ಸುಧಾರಣೆ ಕಂಡಿದೆ ಕನ್ನಡ ಪ್ರಕಾಶನ. ಆದರೆ ದುರದೃಷ್ಟವಶಾತ್ ಈ ಮಾತನ್ನು ಮೈಸೂರು ವಿಶ್ವ ವಿದ್ಯಾಲಯದ ಪ್ರಕಾಶನದ ಬಗ್ಗೆ ಹೇಳಲು ಬರುವುದಿಲ್ಲ. ಸರಕಾರೀ ಕೆಲಸದ ಹಾಗೆಯೇ ಒಂದು ನೀರಸ, ನಿಸ್ತೇಜ, ದಯನೀಯ ಪುಸ್ತಕಗಳು. ದಿನೇ ದಿನೇ ಅತ್ಯಾಧುನಿಕ ಮಾಲುಗಳ ಸಂಖ್ಯೆ, ಹೊಸ ಹೊಸ ಅಂತಾರಾಷ್ಟ್ರೀಯ ಬ್ರಾಂಡುಗಳ ಆಗಮನ ಮಂಗಳೂರಿನ ಜನರ ಕೊಳ್ಳುವ ಸಾಮಾರ್ಥ್ಯದ ಕಡೆ ಬೆಟ್ಟು ಮಾಡಿದರೆ ಮತ್ತೊಂದೆಡೆ ವೈಚಾರಿಕ ದಾರಿದ್ರ್ಯ ತನ್ನ ಕುತ್ತಿಗೆಯನ್ನು ನೀಳವಾಗಿಸುತ್ತಿರುವ ದೃಶ್ಯ ಮಂಗಳೂರಿಗೆ ಮಾತ್ರ ಸೀಮಿತ ಅಲ್ಲ ಎನ್ನುವುದನ್ನು ಸಾಕಷ್ಟು ಸುತ್ತಾಡಿದ ಜನರಿಗೆ ಮನವರಿಕೆ ಆಗಿರಲಿಕ್ಕೂ ಸಾಕು.

ಮರೆತು ಹೋದ ಮಾತೃ ಭಾಷೆ

ಸೋನಿಯಾ ಅಮೇರಿಕೆಯಿಂದ ವಾಪಸಾಗಿ ಲೋಕಸಭೆಯ ಕಲಾಪಗಳಲ್ಲಿ ಮತ್ತು ತಮ್ಮ ಪಕ್ಷದ ಬೈಠಕ್ ವೊಂದರಲ್ಲಿ ಭಾಗಿಯಾದರು ಎಂದು ವರದಿ. ತಮ್ಮ ತಾಯಿಯವರ ಅನಾರೋಗ್ಯದ ಕಾರಣ ಅವರ ಶುಶ್ರೂಷೆಗೆಂದು ಅಮೆರಿಕೆಗೆ ಹೋಗಿದ್ದರು ಸೋನಿಯಾ ಗಾಂಧೀ.   

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದಾಗ ಇಟಲಿ ದೇಶದ ಟೀವೀ ಚಾನಲ್ ನ ತಂಡ ಅವರ ಸಂದರ್ಶನಕ್ಕೆಂದು ದಿಲ್ಲಿಗೆ ಬಂದಿತ್ತು. ಸಂದರ್ಶಕ ಇಟಾಲಿಯನ್ ಭಾಷೆಯಲ್ಲಿ ಪ್ರಶ್ನೆ ಕೇಳಲು ಆರಂಭಿಸಿದಾಗ ಸೋನಿಯಾ ನನಗೆ ಇಟಾಲಿಯನ್ ಭಾಷೆ ಬರುವುದಿಲ್ಲ, ದಶಕಗಳ ಹಿಂದೆಯೇ ಬಳಸುವುದನ್ನು ನಿಲ್ಲಿಸಿದ್ದರಿಂದ ಇಟಾಲಿಯನ್ ಭಾಷೆಯಲ್ಲಿ ಮಾತನಾಡಲಾಗದು ಎಂದು ಹೇಳಿದ್ದರು. ಯಾರೇ ಆದರೂ, ಅದೆಷ್ಟೇ ದಶಕಗಳನ್ನು ತಮ್ಮ ಮಾತೃ ಭಾಷೆಯ ನಂಟಿನಿಂದ ದೂರ ಇದ್ದರೂ ತಮ್ಮ ಸ್ವಂತ ಭಾಷೆಯನ್ನೂ ಮರೆಯುವ ಪ್ರಶ್ನೆಯೇ ಇರುವುದಿಲ್ಲ. ಆದರೆ ತಮ್ಮನ್ನು ವಿದೇಶೀ ಮಹಿಳೆ ಎಂದು ಜರೆಯುತ್ತಿದ್ದ ವಿರೋಧ ಪಕ್ಷಗಳಿಗೆ ಹೆದರಿ ತಮ್ಮ ಮಾತೃ ಭಾಷೆಯನ್ನು ನಿರಾಕರಿಸುವಂತೆ ಅವರನ್ನು ಪ್ರೇರೇಪಿಸಿತು. ಹಾಗಾದರೆ ತಮ್ಮ ತಾಯಿಯ ಶುಶ್ರೂಷೆ ಗೆಂದು ಅಮೆರಿಕೆಗೆ ಹೋದ ಸೋನಿಯಾ ತಮ್ಮ ತಾಯಿಯೊಂದಿಗೆ ಯಾವ ಭಾಷೆಯಲ್ಲಿ ಮಾತನಾಡಿಸಿರಬೇಕು? ಏಕೆಂದರೆ ಬಹುತೇಕ ಇಟಾಲಿಯನ್ನರಿಗೆ ಆಂಗ್ಲ ಭಾಷೆ ಬರುವುದಿಲ್ಲ. ಆಂಗ್ಲ ಭಾಷೆಯೇ ಶ್ರೇಷ್ಠ ಎಂದು ತಮ್ಮ ತಮ್ಮ ಮಾತೃ ನುಡಿಗಳನ್ನು ಕಡೆಗಣಿಸಿ ತಮ್ಮ ಮಕ್ಕಳಿಗೆ ಆಂಗ್ಲ ಭಾಷೆಯಲ್ಲಿ ಮಾತನಾಡಲು ಪ್ರೋತ್ಸಾಹಿಸುವ ಪಾಲಕರಿಗೆ ಗೊತ್ತಿದೆಯೇ ಸಂಪೂರ್ಣ ಯೂರೋಪಿನಲ್ಲಿ ಆಂಗ್ಲ ಭಾಷೆಯಲ್ಲಿ ಮಾತನ್ನಾಡುವ, ವ್ಯವಹರಿಸುವ ದೇಶ ಒಂದೇ ಒಂದು ಎಂಬುದು?      

ಒಬ್ಬ ಮಹಿಳೆ ಭಾರತೀಯ ಸಂಜಾತನನ್ನು ಪ್ರೀತಿಸಿ ಮದುವೆಯಾಗುತ್ತಾಳೆ, ಭಾರತೀಯ ಪೌರತ್ವ ಪಡೆದು ಇಲ್ಲಿನ ಸಂಸ್ಕೃತಿಗೆ ತಲೆಬಾಗಿ ಬದುಕನ್ನು ಸಾಗಿಸುತಾಳೆ. ಜನರ ಅಭೂತ ಪೂರ್ವ ಬೆಂಬಲದಿಂದ ಲಕ್ಷಾಂತರ ಮತಗಳಿಂದ ತನ್ನ ಪ್ರತಿಸ್ಪರ್ದಿಯನ್ನು  ಪರಾಭವ ಗೊಳಿಸಿದ್ದು ಮಾತ್ರವಲ್ಲದೆ ತನ್ನ ನಾಯಕತ್ವದಲ್ಲಿ ಪಕ್ಷವೊಂದನ್ನು ಅಧಿಕಾರದ ಗದ್ದುಗೆಗೂ ಏರಿಸುತ್ತಾಳೆ. ಈ ರೀತಿಯ ಜನಮನ್ನಣೆ ಇದ್ದರೂ ಆಕೆ ದೇಶದ ಅತ್ಯುನ್ನತ ಹುದ್ದೆಗೆ ಅನರ್ಹಳಾಗುತ್ತಾಳೆ. ತನ್ನನ್ನು ಅತ್ಯುನ್ನತ ಸ್ಥಾನಕ್ಕೆ ಕೂರಲು ಬಿಡದ ಜನರಿಗೆ ಬೆದರಿ ತನ್ನ ಮಾತೃ ಭಾಷೆಯಲ್ಲಿ ತನಗೆ ಮಾತನಾಡಲು ಬರುವುದಿಲ್ಲ ಎಂದು ಹೇಳಿಕೆಯನ್ನು ಕೊಡುತ್ತಾಳೆ. ಒಬ್ಬ ವ್ಯಕ್ತಿಗೆ ತನ್ನ ಮಾತೃ ಭಾಷೆಯಲ್ಲಿ ಮಾತನಾಡಲು ಹೆದರುವಂಥ ಪರಿಸ್ಥಿತಿ ಸೃಷ್ಟಿಸುವ ವ್ಯವಸ್ಥೆ ಮತ್ತು ಅಸಹನೆಯಿಂದ ನಾವು ವಿಶ್ವಕ್ಕೆ ನೀಡುತ್ತಿರುವ ಸಂದೇಶವಾದರೂ ಏನು?

ನಮಗೂ ಇರಲಿ ಕೊಂಚ, ಭಾಷಾಭಿಮಾನ

ಅಲ್-ನಂಸ” ಎಂದರೇನು ಅಥವಾ ಯಾವ ದೇಶ ಇದು ಎನ್ನುತ್ತಾ ಬಂದರು ನಮ್ಮ ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ಸ್ ವಿಭಾಗದ ಮುಖ್ಯಸ್ಥರು. ಅವರಿಗೆ ತಿಳಿದಿತ್ತು ಹೆಂಡತಿ, ಪುಟಾಣಿ ಮಕ್ಕಳ ಸಮಯ ಕದ್ದು, ಆಫೀಸ್ನಲ್ಲಿ ಕೆಲಸ ಇದೆ ಎಂದು ನೆಟ್ ಮೇಲೆ ನೇತಾಡುವ ನನ್ನ ಅಭ್ಯಾಸ. ಸರಿ, ಬೇಕಾದ್ದನ್ನೆಲ್ಲ ಕೇಳಲು ಅಲ್ಲಾವುದ್ದೀನನ ದೀಪ ದ ಮೊರೆಗೆ ಹೋದ ಹಾಗೆ ಯಾಹೂ ಸರ್ಚ್ ಬಾರ್ ಗೆ ನನ್ನ ಪಯಣ. ಕೂಡಲೇ ಸಿಕ್ಕಿತು ಉತ್ತರ. “ಅಲ್-ನಂಸ” ಎಂದರೆ ಆಸ್ಟ್ರಿಯಾ ದೇಶ ಅಂತ. ಆಸ್ತ್ರಿಯಾಕ್ಕೆ “ಅಲ್-ನಂಸ” ಎಂದು ಕರೆಯುತ್ತಾರೆ. ಅರಬ್ ಭಾಷೆ ರೋಚಕ. ಪ್ರತಿ ಆಂಗ್ಲ ಪದಕ್ಕೂ ಪರ್ಯಾಯವಾಗಿ ಒಂದು ಪದ ಇದ್ದೆ ಇರುತ್ತದೆ. ನಾವು ಫೋನ್ ಗೆ ಕನ್ನಡದಲ್ಲಿ ದೂರವಾಣಿ ಎನ್ನದೇ ಫೋನ್ ಎಂದೇ ಕರೆಯುತ್ತೇವೆ, ಅದೇ ರೀತಿ ಮೊಬೈಲ್ ಸಹ. ಮೊಬೈಲ್ ಗೆ ಕನ್ನಡದಲ್ಲಿ ಏನನ್ನುತ್ತಾರೋ ನನಗೆ ಗೊತ್ತಿಲ್ಲ ಆದರೆ ಅರಬ್ಬೀ ಭಾಷೆಯಲ್ಲಿ ಇದಕ್ಕೆ “ಜವ್ವಾಲ್” ಎನ್ನುತ್ತಾರೆ. ಅಪ್ಪಿತಪ್ಪಿಯೂ ಯಾವ ಅರಬನೂ ತಾನು ಮಾತನಾಡುವಾಗ ಮೊಬೈಲ್ ಎನ್ನುವುದಿಲ್ಲ. ಫೋನ್ ಗೆ “ಹಾತಿಫ್” ಎನ್ನುತ್ತಾರೆ. ಕಾರಿಗೆ “ಸಿಯಾರ”. ವಿಮಾನಕ್ಕೆ “ತಯಾರ”. ಇವುಗಳಿಂದಲೇ ತಿಳಿಯುತ್ತದೆ ಅರಬರಿಗೆ ತಮ್ಮ ಭಾಷೆಯ ಮೇಲೆ ವ್ಯಾಮೋಹ ಹೆಚ್ಚು ಎಂದು, ಅದರಲ್ಲೇನು ತಪ್ಪಿದೆ ಹೇಳಿ? ನಾವೂ ಸಹ ಅವರನ್ನು ಅನುಕರಿಸಬೇಕು ಈ ವಿಷಯದಲ್ಲಿ ಅಲ್ಲವೇ. ಇಲ್ಲದಿದ್ದರೆ ಬೆಳಿಗ್ಗೆ ಎದ್ದು ತಿಂಡಿಗೆ ಎಂದು ಉಪಾಹಾರ ಮಂದಿರಕ್ಕೆ ಹೋಗಿ ಅಲ್ಲಿ ಉದ್ದಿನ ವಡೆಗೆ “ಮೆದು ವಡ” ಎಂದು ಬರೆದ ಎಂದು ತಕರಾರು ಮಾಡಿ ನಂತರ ಸ್ವಲ್ಪ ದೂರ ಬಂದು ಬಾಯಾರಿತು ಎಂದು ಎಳನೀರು ಕುಡಿಯಲು ಹೋದರೆ ಅಲ್ಲಿ ಎಳೆ ನೀರಿಗೆ “ನಾರಿಯಲ್” ಎಂದ ಎಂದು ಅರಚಾಡಿ ಗಂಟಲನ್ನು ಮತ್ತಷ್ಟು ಒಣಗಿಸುವುದಕ್ಕಿಂತ ನಮ್ಮ ಭಾಷೆ ಬಗ್ಗೆ ನಮ್ಮಲ್ಲೂ, ನಮ್ಮ ಮಕ್ಕಳಲ್ಲೂ ಅಭಿಮಾನ ಹುಟ್ಟಿಸಬೇಕು. ಉಪಕರಣಗಳ ಹಾಗೂ ಇತರೆ ಹೆಸರುಗಳನ್ನು ಬಿಡಿ ದೇಶಗಳ ಹೆಸರೂ ಅರಬ್ಬೀಕರಣ. ಭಾರತಕ್ಕೆ “ಹಿಂದ್” ಎನ್ನುತ್ತಾರೆ. ಜರ್ಮನಿಗೆ ” ಅಲ್-ಮಾನಿಯಾ”, ಗ್ರೀಸ್ ದೇಶಕ್ಕೆ “ಯುನಾನಿ”. ಹಂಗೇರಿ ಗೆ “ಅಲ್-ಮಜಾರ್”, ಹೀಗೆ ಸಾಗುತ್ತದೆ ಪಟ್ಟಿ. ಋತು “ಶರತ್ಕಾಲ” ಕ್ಕೆ ಅರಬ್ಬೀ ಭಾಷೆಯಲ್ಲಿ “ಖಾರಿಫ್” ಎನ್ನುತ್ತಾರೆ. ಖಾರಿಫ್ ಎಂದು ನಮ್ಮಲ್ಲೂ ಕೇಳಿದ ನೆನಪು, ಅದೇನೆಂದು ಸರಿಯಾಗಿ ಗೊತ್ತಿಲ್ಲ. ಚಳಿಗಾಲಕ್ಕೆ ” ಶಿತ “. ಇದನ್ನು ಕೇಳಿ ಚಳಿ ಹಿಡಿಯಿತಾ? ಇದೇನಪ್ಪಾ ನಮ್ಮ ಮೇಜು, ಕುರ್ಚಿ ಹಾಗೆ ಶೀತಾ ಸಹ ಅರಬ್ಬೀ ಮೂಲದ್ದೇ ಎಂದು? ಅದರ ಬಗ್ಗೆ ನನಗರಿವಿಲ್ಲ. ವಾರದ ದಿನಗಳಿಗೆ ಅರಬರ ಹೆಸರುಗಳು ಸ್ವಲ್ಪ ನೀರಸವೇ ಎನ್ನಬಹುದು. ಭಾನುವಾರ ಕ್ಕೆ “ಅಹದ್” ಅಂದರೆ ಮೊದಲು ಎಂದು. ವಾರದ ಮೊದಲ ದಿನ ಭಾನುವಾರ ಅಲ್ಲವ, ಅದಕ್ಕಿರಬೇಕು. ಸೋಮವಾರಕ್ಕೆ ” ಇತ್ನೇನ್” ಅಂದರೆ ಎರಡು. ಮಂಗಳವಾರ ಮೂರನೇ ದಿನ…..ಶುಕ್ರವಾರಕ್ಕೆ “ಜುಮಾ” ಮತ್ತು ಶನಿವಾರಕ್ಕೆ “ಸಬ್ತ್”.

ಅರಬ್ಬೀ ಮತ್ತು ಪೆರ್ಶಿಯನ್ ಪದಗಳು ಕನ್ನಡದಲ್ಲೀ ಹೇರಳವಾಗಿ ಕಾಣಲು ಸಿಗುತ್ತವೆ. ಅವುಗಳ ಬಗ್ಗೆ ಮುಂದೆಂದಾದರೂ ಬರೆಯುವೆ. ಅದೂ ಅಲ್ಲದೆ ಅರಬ್ಬೀ ಅಕ್ಷರ ಮಾಲೆಯಲ್ಲಿ “p” , “t” ಗಳು ಇಲ್ಲ. ಇವುಗಳ ಅನುಪಸ್ಥಿತಿಯಲ್ಲಿ ಬರುವ ಕೆಲವು ಪದಗಳು ತಮಾಷೆಯಾಗಿವೆ, ಇವುಗಳ ಬಗ್ಗೆಯೂ ಮುಂದೆಂದಾದರೂ ಬರೆಯುವೆ.

ಈ ಲೇಖನಕ್ಕೆ ಬಂದ ಕೆಲವು ಪ್ರತಿಕ್ರಿಯೆಗಳು:  

shreekant mishrikoti

ರಾಬಿ ಮತ್ತು ಖಾರಿಫ್ ಬೆಳೆ ಅಂದರೆ ಮುಂಗಾರು ಬೆಳೆ ಮತ್ತು ಹಿಂಗಾರು ಬೆಳೆ .
ವಿಕಿಪೀಡಿಯದಲ್ಲಿ ಹೀಗಿದೆ.
Rabi crop, spring harvest in India
The Kharif crop is the autumn harvest (also known as the summer or monsoon crop) in India and Pakistan.

ಮತ್ತೆ
ಲ್ಯಾಂಡ್-ಲೈನ್ ಗೆ ಸ್ಥಿರದೂರವಾಣಿ ಮತ್ತು ಮೊಬೈಲ್ ಗೆ ಸಂಚಾರಿ ದೂರವಾಣಿ ಅನ್ನೋ ಶಬ್ದಗಳು ಹೆಚ್ಚು ಚಾಲ್ತಿಯಲ್ಲಿವೆ . ಕೆಲವರು ನಿಲ್ಲುಲಿ , ನಡೆಯುಲಿ, ಜಂಗಮವಾಣಿ ಮುಂತಾದವನ್ನು ಬಳಸುವರು.

salimath wrote:

landline = ನಿಲ್ಲುಲಿ
mobile phone = ನಡೆಯುಲಿ (credits: ಬರತ್ ವೈ)

car= ನೆಲದೇರು (ನೆಲ+ತೇರು)
ವಿಮಾನ = ಬಾಂದೇರು (ಬಾನ್+ತೇರು)
ಗನನಸಖಿ= ಬಾಂಗೆಳತಿ (ಬಾನ್+ಗೆಳತಿ)
ಶೀತ = ಕುಳಿಱು