ನಾವಾಡುವ ನುಡಿ …

ನಾವಾಡುವ ನುಡಿ … ಕನ್ನಡ ನುಡಿಗೆ, ಭಾಷೆಗೆ ‘ಇಗೋ’ (ಅಹಂ) ಇಲ್ಲ ಎಂದು ‘ಇಗೋ ಕನ್ನಡ’ ದಂಥ ಪುಸ್ತಕ ಓದಿದ ಯಾರಿಗೂ ಅರಿವಾಗದೇ ಇರದು. ಏಕೆಂದರೆ ಅರಬ್ಬೀ, ಪಾರ್ಸಿ, ಮರಾಠಿ ಬಾಷೆಗಳ ಪದಗಳನ್ನು ಸರಾಗವಾಗಿ ತನ್ನೊಡಲಲ್ಲಿ ಇಟ್ಟುಕೊಂಡು, ಶ್ರೀಮಂತಗೊಂಡ ಭಾಷೆ ಕನ್ನಡ. ಅದರಲ್ಲೂ ಸಂಸ್ಕೃತದ ಪ್ರಭಾವ ಸ್ವಲ್ಪ ಅಪಾರವೇ ಎನ್ನಬೇಕು; ಶೇಕಡ ೬೦ ಕ್ಕೂ ಹೆಚ್ಚು ಪದಗಳು ಸಂಸ್ಕೃತದಿಂದ ಬಂದವಂತೆ.  ಇಗೋ ಕನ್ನಡ ಪುಸ್ತಕವನ್ನು ತಿರುವಿ ಹಾಕುವಾಗ ಸಿಕ್ಕಿದ ಕೆಲವು ಸ್ವಾರಸ್ಯಕರ ಅಂಶಗಳನ್ನ ನಿಮ್ಮ ಮುಂದೆ ಇಡುವ ಬಯಕೆ.  

ಹಿರಿಯ ಮಗನನ್ನು ಜ್ಯೇಷ್ಠ ಪುತ್ರ ಎಂದು ಕರೆಯುವರು. ಸರಿ, ಮೊದಲ ಮಗನೇನೋ ಜ್ಯೇಷ್ಠ ಆಗುತ್ತಾನೆ.  ಆದರೆ ಹಿರಿಯ ಮಗಳನ್ನು “ಜ್ಯೇಷ್ಠೆ” ಎಂದು ಕರೆಯರು, ಯಾಕೆ? ಲಕ್ಷ್ಮಿಯ ಹಿರಿಯ ಅಕ್ಕನಾದ  ಜ್ಯೇಷ್ಠೆಗೆ ದುರದೃಷ್ಟದ ದೇವತೆ ಎನ್ನುತ್ತಾರಂತೆ. ಆದ್ದರಿಂದ ಹೆಣ್ಣು ಮಕ್ಕಳನ್ನು ಈ ಹೆಸರಿನಿಂದ ಕರೆಯುವುದಿಲ್ಲ, ದುರದೃಷ್ಟ ವಕ್ಕರಿಸೀತೆಂದು ಹೆದರಿ. ‘ಜ್ಯೇಷ್ಠಾ’ ಎಂದರೆ ಹಿರಿಯ ಹೆಂಡತಿ, ಪ್ರಿಯೆಯಾದ ಹೆಂಡತಿ ಎನ್ನುವ ಅರ್ಥಗಳೂ ಇವೆ. ನನಗೆ ತಿಳಿದಂತೆ,  ಸಾಮಾನ್ಯವಾಗಿ ಕಿರಿಯ ಹೆಂಡತಿ ಪ್ರಿಯಳಾದವಳು, ಹಿರಿಯ ಹೆಂಡತಿಯಲ್ಲ. ವಯಸ್ಸಿನಲ್ಲಿ ಮತ್ತು ಅನುಭವದಲ್ಲಿ ಚಿಕ್ಕವಳು ಅಂತ ಕಿರಿಯ ಹೆಂಡತಿ  ಮೇಲೆ ಪ್ರೀತಿ ಸ್ವಲ್ಪ ಹೆಚ್ಚೇ ಇರುತ್ತದೆ.  

ಶ್ರೀಮತಿ ಎಂದ ಕೂಡಲೇ ಮದುವೆಯಾದಾಕೆ ಎನ್ನುವ ಭಾವನೆ ನಮ್ಮಲ್ಲಿದೆ. ‘ಶ್ರೀಮಾನ್, ಶ್ರೀಮತಿ’ ಗಳನ್ನು ಆಂಗ್ಲ ಭಾಷೆಯ mr and mrs ನ ಸಮಾನ ರೂಪವಾಗಿ ಉಪಯೋಗಿಸುತ್ತಾರೆ.  ಶ್ರೀಮತಿ ವಿವಾಹಿತ ಮಹಿಳೆಗೆ ಅನ್ವಯ ಎನ್ನುವ ನಿಯಮವೇನೂ ಇಲ್ಲ. ಶ್ರೀಮತಿ ಎಂದರೆ, ಸಂಪತ್ತುಳ್ಳವಳು, ಬುದ್ಧಿ, ಶೋಭೆ, ಕಾಂತಿಯುಳ್ಳವಳು ಎಂದರ್ಥ. ಶ್ರೀಮತಿ ಅವಿವಾಹಿತೆ ಸಹ ಆಗಬಹುದು. ಗೌರವಾರ್ಹರಾದ ಎಲ್ಲಾ ಮಹಿಳೆಯರಿಗೂ ಇದು ಅನ್ವಯಿಸುವುದು.  ಹಾಗಾದರೆ ಆಂಗ್ಲ ಭಾಷೆಯ ‘ಮಿಸಸ್’ ಪದಕ್ಕೆ ಕನ್ನಡದ ರೂಪ ಏನು? 

ಊರು ತಲಪಿದ ಕೂಡಲೇ ಫೋನ್ ಮಾಡಿ ತಿಳಿಸು. ತಲಪು? ಅಥವಾ ‘ತಲು’ಪು? ಎರಡೂ ಸರಿಯಂತೆ, ಹಾಗಂತ ‘ಇಗೋ ಕನ್ನಡ’ ದ ಫರ್ಮಾನು. ಫರ್ಮಾನ್ ಎಂದರೆ ಆಜ್ಞೆ. ರಾಜನೊಬ್ಬ ಫರ್ಮಾನ್ ನೀಡಿದಾಗ ಅದು ರಾಜಾಜ್ಞೆ.   

‘ತಾಬಡತೋಬ’ – ಈ ಪದಕ್ಕೆ ಕನ್ನಡದ ಸಮಾನ ಪದ ತುರ್ತು. ಹೋಗೋ ಅವನಿಗೆ ತಾಬಡತೋಬ್ (ತುರ್ತಾಗಿ) ಬರೋಕ್ಕೆ ಹೇಳು ಎಂದು ಹೇಳುವುದನ್ನು ನಾನು ಕೇಳಿದ್ದೇನೆ. ಉರ್ದು ಭಾಷಿಕರೂ, ಹುಬ್ಬಳ್ಳಿ ಧಾರವಾಡದ ಮಂದಿಯೂ ಹೀಗೆ ಹೇಳ್ತಾರಂತೆ. ನಾಲಗೆಯ ಮೇಲೆ ಅಂಕು ಡೊಂಕಾಗಿ ನಿಲ್ಲಲು ಪ್ರಯತ್ನಿಸುವ ಈ ಪದದ ಮೂಲ ‘ಮರಾಠಿ’.  

‘ತಾದಾತ್ಮ್ಯ’ ನನಗಿಷ್ಟವಾದ ಪದ. ಇದರ ಅರ್ಥ ತಲ್ಲೀನತೆ, ಮಗ್ನ. ಓದು, ಬರಹ ತಾದಾತ್ಮ್ಯ ತೆಯಿಂದ ಮಾಡಬಹುದೋ ಅಥವಾ ಈ ಪದವನ್ನು ಅರಾಧನೆಯಂಥ ಗಂಭೀರ ಕಾರ್ಯಗಳಿಗೆ ಮಾತ್ರ ಬಳಸಬೇಕೋ?

ಈ ಕ್ಷಣಕ್ಕೆ ಇಷ್ಟು ಸಾಕು….ಸಿರಿಗನ್ನಡಂ ಗೆಲ್ಗೆ.