ಕನ್ನಡ ಪುಸ್ತಕಗಳ ಪ್ರದರ್ಶನ

ಮಂಗಳೂರಿನಲ್ಲಿ ಇತ್ತೀಚೆಗೆ ಕನ್ನಡ ಪುಸ್ತಕಗಳ ಭಾರೀ ಪ್ರದರ್ಶನ ಏರ್ಪಟ್ಟಿತ್ತು. ಕನ್ಫ್ಯೂಸ್ ಮಾಡ್ಕೋಬೇಡಿ, ಭಾರೀ ಎಂದರೆ ಭಾರೀ ತಯಾರಿ ಮತ್ತು ಉತ್ಸಾಹ ಎಂದು. ಭಾರೀ ಯಶಸ್ಸಲ್ಲ. ಓದಿನ ಕಡೆ ಜನರ ಧೋರಣೆ ಏನು ಎಂದು ಖಾಲಿಯಾಗಿ ಭಣಗುಟ್ಟುತ್ತಿದ್ದ ಗಲ್ಲಾ ಪೆಟ್ಟಿಗೆಗಳೇ ಸಾಕ್ಷಿಯಾದವು. ನೆಹರೂ ಮೈದಾನದ ಮೂಲಕ ಹಾದು ಹೋಗುತ್ತಿದ್ದಾಗ ನನ್ನ ಭಾವನವರ ಕಣ್ಣಿಗೆ ಬಿತ್ತು ಪುಸ್ತಕ ಪ್ರದರ್ಶನ. ಕೂಡಲೇ ಅಲ್ಲಿಂದಲೇ ನನಗೆ ಫೋನಾಯಿಸಿ ಬನ್ನಿ, ನಿಮಗಿಷ್ಟವಾದ ಒಂದು ಪ್ರದರ್ಶನ ಏರ್ಪಟ್ಟಿದೆ ಎಂದು ಆಮಂತ್ರಿಸಿದ್ದೆ ತಡ ಅಲ್ಲಿಗೆ ದೌಡಾಯಿಸಿದೆ. ಸೊಗಸಾದ ವಿಶಾಲವಾದ ಸಾಲಕೃತ ಮಂಟಪದಲ್ಲಿ ಡಜನು ಗಟ್ಟಲೆ ಪ್ರಕಾಶಕರು ವಿದ್ಯಾ ದೇವತೆಯನ್ನು ಅಲಂಕರಿಸಿ ಕರೆದು ಕೊಂಡು ಬಂದಿದ್ದರು ನಾಡಿನ ಮೂಲೆ ಮೂಲೆಯಿಂದ. ತಮಿಳು ಚಿತ್ರ ರಜನಿ ನಟಿಸಿದ ಎನ್ಧಿರನ್ ನೋಡಲೆಂದು ಸೇರಿದ್ದ ಜನ ಜಮಾವಣೆ ಇರಬಹುದೆಂದು ಊಹಿಸಿ ಬಂದಿದ್ದ ನನಗೆ ನಿರಾಶೆ. ಸಾರ್ವಜನಿಕರಿಗಿಂತ ಹೆಚ್ಚಾಗಿ ಅಲ್ಲಿನ ಸಿಬ್ಬಂದಿಗಳೇ ತುಂಬಿದ್ದರು. ಒಂದೇ ಸೂರಿನಡಿ ಅಷ್ಟೊಂದು ಪುಸ್ತಕಗಳನ್ನು ಖುಷಿ ಯಿಂದ ನೋಡುತ್ತಾ ಒಂದೊಂದೇ ಮಳಿಗೆ ಕಡೆ ಕಣ್ಣು ಹಾಯಿಸುತ್ತಾ ಬೆಳಗೆರೆ ಕೃಷ್ಣ ಶಾಸ್ತ್ರಿಗಳ “ಮರೆಯಲಾದೀತೇ”, “ಸಾಹಿತಿಗಳ ಸ್ಮೃತಿ”, ಫಾಕೀರ್ ಮುಹಮ್ಮದ್ ಕಟ್ಪಾಡಿ ಯವರ “ಸೂಫಿ ಸಂತರು”, S.M. ಮುಶ್ರಿಫ್ ರವರ ಕನ್ನಡ ಅನುವಾದಿತ “ಕರ್ಕರೆಯನ್ನು ಕೊಂದವರು ಯಾರು”, ವೆಂಕಟ ಸುಬ್ಬಯ್ಯ ಅವರ “ಇಗೋ ಕನ್ನಡ”… ಮತ್ತು ಇನ್ನೂ ಕೆಲವು ಪುಸ್ತಕಗಳನ್ನೂ ಖರೀದಿಸಿ ಮರಳಿದೆ. ಹಿಂದೊಮ್ಮೆ ಸಂಪದದಲ್ಲೇ ಕರಾವಳಿಯಲ್ಲಿ ಕನ್ನಡಕ್ಕಿರುವ ಪ್ರಾಶಸ್ತ್ಯದ ಬಗ್ಗೆ ಬರೆದದ್ದಕ್ಕೆ ಅರಬ್ಬೀ ಸಮುದ್ರದ ಅಲೆಗಳಂತೆ ನನ್ನ ಮೇಲೆ ಕೆಲವರು ಹಾಯ್ದಿದ್ದರು. ಆ ಪ್ರದೇಶದಲ್ಲಿ ಕನ್ನಡ ಬಳಕೆ, ಅಷ್ಟಕ್ಕಷ್ಟೇ ಎಂದರೆ ಅದು ಒಂದು ದೂಷಣೆ ಯಾಗಿ ಮಾರ್ಪಡಬಾರದು. ಅಲ್ಲಿನ ಜನರಿಗೆ ಕೊಂಕಣಿ, ತುಳು ಭಾಷೆಗಳೊಂದಿಗೆ ನಂಟು ಹೆಚ್ಚು. ಹಾಗೆಂದು ಕನ್ನಡ ಬಗ್ಗೆ ಅಸಡ್ಡೆ ಇದೆಯೆಂದಲ್ಲ. ಆದರೆ ಈ ಪ್ರದರ್ಶನಕ್ಕೆ ಜನರ ಪ್ರತಿಕ್ರಿಯೆ ಮತ್ತು ಪ್ರಕಾಶಕರ ಅಳಲು ನೋಡಿದರೆ ಓದುಗರ ಸಂಖ್ಯೆ ದಿನೇ ದಿನೇ ಇಳಿ ಮುಖವಾಗುತ್ತಿದೆ ಎಂದೆನ್ನಿಸದಿರಲಾರದು. ಓದುಗ ಸಮೂಹ ಪುಸ್ತಕಗಳನ್ನ ಖರೀದಿ ಮಾಡಿ, ಹಲ್ಲು ಗಿಂಜುತ್ತಾ ಇನ್ನಷ್ಟು ಡಿಸ್ಕೌಂಟ್ ಕೊಡು ಎಂದು ಕೇಳೋದು, ಸಿನೆಮಾ ಟಿಕೆಟ್ಗಾದರೆ ಎಷ್ಟನ್ನಾದರೂ ಕೊಟ್ಟು ಬ್ಲಾಕ್ ಮಾರ್ಕೆಟ್ ನಲ್ಲಿ ಟಿಕೆಟ್ ಕೊಳ್ಳಲು ತಯಾರಾಗೋದು ನೋಡಿದಾಗ ಕನಿಕರ ತೋರದಿರದು. ಕನ್ನಡ ಪುಸ್ತಕಗಳ ಮಾರಾಟದ ಕಾರ್ಮೋಡದ ಪರಿಸ್ಥಿತಿಯಲ್ಲೂ ಒಂದು ಹೊಂಗಿರಣ ಏನೆಂದರೆ ಕನ್ನಡ ಪ್ರಕಾಶನ ಈಗ ಮೊದಲಿನಂತಲ್ಲ ಎನ್ನುವ ಸೂಚನೆ ಸಿಕ್ಕಿದ್ದು. ಮುದ್ರಣ, ಮುಖಪುಟದ ವಿನ್ಯಾಸ ಹೀಗೆ ಹಲವು ಪ್ರಾಕಾರಗಳಲ್ಲಿ ಸ್ವಾಗಾತಾರ್ಹ ಮತ್ತು ಪ್ರಶಂಸಾರ್ಹ ಸುಧಾರಣೆ ಕಂಡಿದೆ ಕನ್ನಡ ಪ್ರಕಾಶನ. ಆದರೆ ದುರದೃಷ್ಟವಶಾತ್ ಈ ಮಾತನ್ನು ಮೈಸೂರು ವಿಶ್ವ ವಿದ್ಯಾಲಯದ ಪ್ರಕಾಶನದ ಬಗ್ಗೆ ಹೇಳಲು ಬರುವುದಿಲ್ಲ. ಸರಕಾರೀ ಕೆಲಸದ ಹಾಗೆಯೇ ಒಂದು ನೀರಸ, ನಿಸ್ತೇಜ, ದಯನೀಯ ಪುಸ್ತಕಗಳು. ದಿನೇ ದಿನೇ ಅತ್ಯಾಧುನಿಕ ಮಾಲುಗಳ ಸಂಖ್ಯೆ, ಹೊಸ ಹೊಸ ಅಂತಾರಾಷ್ಟ್ರೀಯ ಬ್ರಾಂಡುಗಳ ಆಗಮನ ಮಂಗಳೂರಿನ ಜನರ ಕೊಳ್ಳುವ ಸಾಮಾರ್ಥ್ಯದ ಕಡೆ ಬೆಟ್ಟು ಮಾಡಿದರೆ ಮತ್ತೊಂದೆಡೆ ವೈಚಾರಿಕ ದಾರಿದ್ರ್ಯ ತನ್ನ ಕುತ್ತಿಗೆಯನ್ನು ನೀಳವಾಗಿಸುತ್ತಿರುವ ದೃಶ್ಯ ಮಂಗಳೂರಿಗೆ ಮಾತ್ರ ಸೀಮಿತ ಅಲ್ಲ ಎನ್ನುವುದನ್ನು ಸಾಕಷ್ಟು ಸುತ್ತಾಡಿದ ಜನರಿಗೆ ಮನವರಿಕೆ ಆಗಿರಲಿಕ್ಕೂ ಸಾಕು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s