ನೋಡಿ, ಈ ಪವಾಡಸ’ದೃಶ್ಯ’

ತನ್ನನ್ನು ಬಡಿದು, ಘಾಸಿಯಾದರೂ ನೇತಾಡುತ್ತಿರುವ ಟ್ರಕ್ ಅನ್ನು ನೀರಿನ ಪಾಲಾಗಲು ಬಿಡದೆ ಪವಾಡ ಸದೃಶ ರೀತಿಯಲ್ಲಿ ಹಿಡಿದಿಟ್ಟ ಸೇತುವೆ ವಂದನಾರ್ಹ. ಟ್ರಕ್ ಸವಾರ ಪಾನಮತ್ತನಾಗಿ ಚಲಾಯಿಸುತ್ತಿದ್ದನೋ, ಅಥವಾ ನಿಯಂತ್ರಣ ತಪ್ಪಿತೋ ಗೊತ್ತಿಲ್ಲ, ತಾನಂತೂ ಪಾರಾದ. ಈ ಘಟನೆ ಬ್ರೆಜಿಲ್ ನಲ್ಲಿ ಸಂಭವಿಸಿದ್ದು.

ಚಿತ್ರ ಎಗರಿಸಿದ್ದು:

www.independent.co.uk     

ಮನುಷ್ಯರು ಮತ್ತು ಪ್ರಾಣಿಗಳ ಮೇಳ

ಈ ಚಿತ್ರ ಗಾರ್ಡಿಯನ್ ಪತ್ರಿಕೆಯಿಂದ ಸಿಕ್ಕಿತು. ಈ ಚ್ತ್ರದಲ್ಲಿನ ಡ್ರಾಮಾ ನನಗೆ ಇಷ್ಟವಾದ್ದರಿಂದ ನಿಮ್ಮೊಂದಿಗೆ ಹಂಚಿ ಕೊಳ್ಳುವ ಆಸೆ. ಎಷ್ಟಿದ್ದರೂ, ಇಷ್ಟವಿದ್ದೋ, ಇಲ್ಲದೆಯೋ, ನನ್ನ ಹಳೇ ಸೇತುವೆ  ಮೇಲೆ ನಡೆದಾಡಿ ಚಪ್ಪಲಿ ಸವೆಸೋರು ನೀವು ಅಲ್ಲವೇ?

ಸ್ಕಾಟ್ ಲ್ಯಾಂಡ್ ದೇಶದ ರಾಜ ‘ಅಲೆಕ್ಸಾಂಡರ್ ತೃತೀಯ’ ಬೇಟೆಗೆ ಹೋದ ಸಮಯ ಒಂದು ‘ಕಡವೆ’ಯ (ಗಂಡು ಜಿಂಕೆ,

stag) ಆಕ್ರಮಣಕ್ಕೆ ತುತ್ತಾದಾಗ ಅವನನ್ನು ರಕ್ಷಿಸುವ ಸನ್ನಿವೇಶ ವನ್ನ ಅತ್ಯಂತ ಸುಂದರವಾಗಿ ಬಿಡಿಸಿದ್ದಾನೆ ಕಲಾಕಾರ. ಬೇಟೆಯ ಸಮಯ ಹುಲಿ, ಸಿಂಹ ದ ಧಾಳಿಗೆ ಒಳಗಾಗೋದನ್ನು ಕೇಳಿದ್ದೇನೆ. ಆದರೆ….ಜಿಂಕೆ?

ಚಿತ್ರ ಕೃಪೆ: ದಿ ಗಾರ್ಡಿಯನ್

   

 

ಯೇಸು ಕ್ರಿಸ್ತ ವಿವಾಹಿತರೇ?

papyrus ಎನ್ನುವ ಪ್ರಾಚೀನ ಕಾಲದಲ್ಲಿ ಪಯೋಗಿಸಲ್ಪಡುತ್ತಿದ್ದ ಕಾಗದ ಮೇಲೆ ಯೇಸು ಕ್ರಿಸ್ತ ಮದುವೆಯಾದ ಉಲ್ಲೇಖವಿದೆ ಎನ್ನುತ್ತಾರೆ ಇತಿಹಾಸಕಾರರೊಬ್ಬರು. ನಾಲ್ಕನೇ ಶತಮಾನದ ಈ ಕಾಗದದಲ್ಲಿ ಕಾಪ್ಟಿಕ್ ಭಾಷೆಯಲ್ಲಿ “ನನ್ನ ಪತ್ನಿ ನನ್ನ ಅನುಯಾಯಿಯಾಗಲು ಸಮರ್ಥಳು” ಎಂದು ಬರೆದಿರುವ ಬಗ್ಗೆ ಗಮನ ಸೆಳೆಯುತ್ತಾರೆ ಸಂಶೋಧಕರು.

ಯೇಸು ಕ್ರಿಸ್ತರು ವಿವಾಹಿತರೋ ಅಲ್ಲವೋ ಎನ್ನುವುದು ಕ್ರೈಸ್ತ ವಲಯದಲ್ಲಿ ಆಗಾಗ ಏಳುವ ಚರ್ಚೆ. ಹಾಗೆಯೆ ಕ್ರೈಸ್ತ ಧರ್ಮದಲ್ಲಿ ಮಹಿಳೆ ಮತ್ತು ವಿವಾಹಿತ ಗಂಡು ಪುರೋಹಿತರಾಗಳು ಸಾಧ್ಯವಿಲ್ಲ ಎನ್ನುವುದಕ್ಕೂ ಯೇಸು ಕ್ರಿಸ್ತರು ಅವಿವಾಹಿತರು ಎನ್ನುವುದಕ್ಕೆ ಸಂಬಂಧವಿದೆ.

ಆದರೆ ಯೇಸು ಕ್ರಿಸ್ತರನ್ನು ದೇವ ಪ್ರವಾದಿ ಎಂದು ಕೊಂಡಾಡುವ ಇಸ್ಲಾಂ ಧರ್ಮದಲ್ಲಿ ಇದರ ಬಗ್ಗೆ ಉಲ್ಲೇಖವಿಲ್ಲ, ಹಾಗೆಯೇ ಅದರ ಬಗೆಗಿನ ವಿವಾದ ಕೂಡ ಗೌಣ.

 

ಈ ಮರದ ಒಳಗೆ ಮನೆಯ ಮಾಡಿ..

ಊಹಿಸಿ, ಈ ಮರದ ಒಳಗೊಂದು ಮನೆ? ಎಷ್ಟೊಂದು cozy ಆಲ್ವಾ? ಈ ‘ಓಕ್’ ಮರದ ಕೆಳಗೆ ಸೇಬಿನ ಹಣ್ಣು ತಿನ್ನುತ್ತಿರುವಾಗಲಂತೆ ರಾಜಕುಮಾರಿ ಎಲಿಜಬೆತ್ ಗೆ ಸಂದೇಶ ಬಂದಿದ್ದು, ‘ನಿನ್ನ ಅಕ್ಕ ಮೇರಿ ತೀರಿಕೊಂಡಳು, ಈಗ ನೀನು ಇಂಗ್ಲೆಂಡ್ ದೇಶದ ರಾಣಿ ಎಂದು.

ಎಲಿಜಬೆತ್ ಗೆ ಪಟ್ಟ ಕೊಡಿಸಿದ ಈ ಮರ ಇಂಗ್ಲೆಂಡ್ ದೇಶದ ಹರ್ಟ್ ಫರ್ಡ್ಸ್ ಶೈರ್ ನಲ್ಲಿನ  ಹ್ಯಾಟ್ ಫೀಲ್ಡ್ ಹೌಸ್ ನಲ್ಲಿದೆ.

ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು

ಸರ್ವರಿಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು.

ನಮ್ಮ ದೇಶ ಮತ್ತು ರಾಜ್ಯದಲ್ಲಿ ಏಲ್ಲಾ ತೆರನಾದ ವಿಘ್ನಗಳೂ ನಾಶವಾಗಿ ಶಾಂತಿ, ಪರಸ್ಪರ ಸಹಬಾಳ್ವೆ ನೆಲೆಸಲೆಂದು ಹಾರೈಸುತ್ತಾ,

picture courrtesy: http://www.hindustantimess.com

 

ಈ ಚಿತ್ರ ಮರೆತಿರಾ?

ಎಲೆಕ್ಟ್ರಿಕ್ ಸ್ಟೋವ್ವು, ಗ್ಯಾಸ್ ಸ್ಟವ್ವು, ಹಾಟ್ ಪ್ಲೇಟು, ಸೋಲಾರು, ಓವನ್ನು, ಕೂಕಿಂಗ್ ರೇಂಜ್,    ಇವೆಲ್ಲಾ ಕಾಣುತ್ತಾ ಬೆಳೆದ ಮಕ್ಕಳಿಗೆ ಈ ಚಿತ್ರವನ್ನ ತೋರಿಸಿದಾಗ ಏನನ್ನಿಸ ಬಹುದು? ಈಗ ಲಭ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಎರ್ರಾ ಬಿರ್ರಿ ಬಳಸಿದ ನಂತರ ಬಹುಶಃ ನಾವು ಬಂದು ಮುಟ್ಟುವುದು ಇಲ್ಲಿಗೋ ಏನೋ? ನಾಸ್ಟಾಲ್ಜಿಕ್ ಚಿತ್ರ, ನನಗಂತೂ ಇದನ್ನು ಕಂಡು, ಇಂಥ ಅಡುಗೆ ಮನೆಯಲ್ಲಿ ಉಂಡು ಪರಿಚಯವಿದೆ. ನಿಮಗೂ ಇದೆಯಾ………..?    

ಒಂದ್ನಿಮ್ಷ, ಒಂದ್ನಿಮ್ಷ. ಹೋಗ್ಬೇಡಿ. ಈ ಚಿತ್ರದಲ್ಲಿರುವ ಹೆಣ್ಣು ಮಗಳ ಮೊಗದ ಮೇಲಿನ ಮೊಗ್ಗಿನ ಮಂದಹಾಸ ಗಮನಿಸಿದಿರಾ? ಆ ಪ್ರಸನ್ನತೆ, ಸಂತೃಪ್ತ ಭಾವ contentment, ಮಣ್ಣಿನ ಒಲೆ, ಒಲೆಯ ಹತ್ತಿರ ಒಂದು ಡಬ್ಬ, ಬಹುಶಃ ಕೈ ಬೆರಳಿಗೆ ಸಿಗುವಷ್ಟು ಮಾತ್ರ ಇರಬಹುದು ಸಾಸುವೆ ಅಥವಾ ಕಾಫಿ ಪುಡಿ, ಇಷ್ಟೊಂದು ಬೇಸಿಕ್ಸ್ ಗಳ ನಡುವೆಯೂ ಆಕೆಯ ಮುಖದ ಮೇಲಿನ ತೃಪ್ತ ಭಾವ… ಹೊಳೆಯುವ ಡಿಸೈನರ್ ಅಡುಗೆ ಮನೆಯ ತುಂಬಾ ಅತ್ಯಾಧುನಿಕ ಫ್ರಿಜ್ಜು, ಮೈಕ್ರೋ ವೇವ್, ಸ್ಟೋವ್, ವಾಷಿಂಗ್ ಮೆಶೀನ್, ಮಿಕ್ಸರ್, ಕೌಂಟರ್ ಟಾಪ್ ಮೇಲೆ ಫೇಸ್ ಬುಕ್ನಲ್ಲಿ ಸ್ಟೇಟಸ್ ಅಪ್ಡೇಟ್ ಮಾಡಲು ಕಾತುರದಿಂದ ಕಾಯುವ ಲ್ಯಾಪ್ ಟಾಪ್, ಇವುಗಳ ಮಧ್ಯೆ, ಇಷ್ಟೆಲ್ಲಾ ಸೌಲಭ್ಯಗಳ ನಡುವೆ ವೇಳೆ ಕಳೆಯುವ ಆಧುನಿಕ ಮನೆಯೊಡತಿಯ ಮುಖದ ಮೇಲೆ  ಕಾಣಲು ಸಿಕ್ಕೀತೆ ಮಂದಹಾಸ? ಕಾಣಲು ಸಿಗುವುದೇ ‘ಕಂಟೆಂಟ್ ಮೆಂಟ್’?

pic courtesy: www.cnn.com

ಒಂದೇ ಟವೆಲ್ ನಲ್ಲಿ ಇಬ್ಬರು ಒರೆಸಿಕೊಂಡಾಗ…

ಮೂಢ ನಂಬಿಕೆಗಳು ಪ್ರತೀ ಸಮಾಜದಲ್ಲೂ ಬೇರೂರಿವೆ. ಅದು ಪಾಶ್ಚಾತ್ಯವಿರಬಹುದು, ಅಥವಾ ದೇಸೀ ಇರಬಹದು. ಈ ನಂಬಿಕೆಗಳು ತಮ್ಮದೇ ಆದ ವೈವಿಧ್ಯ, ವೈಶಿಷ್ಟ್ಯವನ್ನ ಹೊಂದಿರುತ್ತವೆ. ಕಳೆದ ಜೂನ್ ತಿಂಗಳಿನಲ್ಲಿ ಭಾರತದಲ್ಲಿದ್ದಾಗ ನಮ್ಮ ಹಿತ್ತಲಿನ ಮರವೊಂದು ಇದೇ ನಂಬಿಕೆಯೊಂದಿಗೆ ತನ್ನ ಪಾಡಿಗೆ ತಾನು ಬೆಳೆಯುತ್ತಿತ್ತು. ನಮ್ಮ ಮನೆಯ ಹಿತ್ತಲಿನಲ್ಲಿ ಸುಮಾರು ೫,೦೦೦ ಚದರ ಅಡಿ ಖಾಲಿ ಸ್ಥಳವಿದೆ. ಅದರಲ್ಲಿ ಅಪ್ಪ ತೆಂಗು, ಮಾವು, ಗೋಡಂಬಿ, ಚಿಕ್ಕು, ಪೇರಳೆ, ಕಿತ್ತಳೆ, ಬಾಳೆ, ನೆಲ್ಲಿಕಾಯಿ, ಹಲಸು, ತೇಗ, ಮುಂತಾದ ಮರಗಳನ್ನ ನೆಟ್ಟಿದ್ದಾರೆ. ಒಂದು ಪುಟ್ಟ ಕಾಡು. ಈ ಸ್ಥಳ ನನ್ನ ನೆಚ್ಚಿನ ಅಡಗು ತಾಣ. ಉಯ್ಯಾಲೆಯಲ್ಲಿ ಕೂತು ಚಹಾ ಸೇವಿಸುತ್ತಾ, ಅಪ್ಪ ಅಮ್ಮ ಮರಗಳ ಪೋಷಣೆ ಮಾಡುವುದನ್ನು ನೋಡುತ್ತಾ   ಪತ್ರಿಕೆ ಓದುವುದು ವಾಡಿಕೆ. ಒಂದು ದಿನ ಹೀಗೇ ಕಣ್ಣಾಡಿಸುತ್ತಾ ಇದ್ದಾಗ ನಾನು ಗಮನಿಸದೆ ಇದ್ದ ಮರ ಕಣ್ಣಿಗೆ ಬಿತ್ತು. ಅಲ್ಲೇ ಇದ್ದ ಅಮ್ಮನನ್ನು ಇದೆಂಥ ಮರ ಎಂದು ಕೇಳಿದಾಗ ಅಮ್ಮ ಅದನ್ನು ‘ದೀಗುಜ್ಜೆ’ ಎಂದು ಕರೆಯುತ್ತಾರೆ ಎಂದರು. “ದ್ವೀಪದ ಹಲಸು” ಎಂದೂ ಹೇಳುತ್ತಾರಂತೆ. ಪಕ್ಕದಲ್ಲೇ ಇದ್ದ ಲ್ಯಾಪ್ ಟಾಪ್ ತೆರೆದು ಆಂಗ್ಲ ಭಾಷೆಯಲ್ಲಿ ಇದಕ್ಕೆ ಏನನ್ನುತ್ತಾರೆ ಎಂದು  ಗೂಗ್ಲಿಸಿದಾಗ ಸಿಕ್ಕಿತು ಉತ್ತರ, ‘bread fruit’. ಈ ‘ಬ್ರೆಡ್ ಫ್ರೂಟ್’ ಪದ ಸಹ ನನ್ನ ಕುತೂಹಲ ಕೆರಳಿಸಿತು, ಅದರ ಬಗ್ಗೆ ನಂತರ ರಿಸರ್ಚ್ ಮಾಡೋಣ ಎಂದು ಯಾವಾಗ ಈ ದೀಗುಜ್ಜೆ ಯನ್ನು ನೆಟ್ಟಿದ್ದು ಎಂದು ಅಮ್ಮನನ್ನು ಕೇಳಿದಾಗ ನಾಲ್ಕೈದು ವರ್ಷ ಆಯಿತು, ಕಳೆದ ಸಲ ಬಂದಾಗಲೂ ನೀನು ಕೇಳಿದ್ದೆ ಎಂದು ನನ್ನ ಮರೆವಿಗೆ ನಯವಾಗಿ ಗದರಿದರು. ಮುಂದುವರೆದು, ಈ ಮರ ನೆಟ್ಟವರು ಬೇಗನೆ ಸಾಯುತ್ತಾರಂತೆ, ಹಾಗಂತ ಜನ ಹೇಳುತ್ತಾರೆ ಎಂದು ಅಮ್ಮ ಹೇಳಿದಾಗ ಹೌಹಾರಿದ ನಾನು ಅಪ್ಪನೋ, ಅಮ್ಮನೋ ನೆಟ್ಟಿರಲಿಕ್ಕಿಲ್ಲವಲ್ಲ ಎಂದು   ಕೂಡಲೇ ಕೇಳಿದೆ ಸರಿ, ಈ ಮರವನ್ನ ನೆಟ್ಟವರಾರು ಎನ್ನುವ  ನನ್ನ ಪ್ರಶ್ನೆಗೆ ನಮ್ಮಲ್ಲಿಗೆ ಕೆಲಸಕ್ಕೆ ಬರುವ ರಮೇಶ್ ನೆಟ್ಟಿದ್ದು ಎಂದು ಉತ್ತರ ಬಂತು. ಮರ ನೆಟ್ಟು ನಾಲ್ಕೈದು ವರ್ಷ ಆಯಿತು, ಮರ ಚೆನ್ನಾಗಿ ಬೆಳೆಯುತ್ತಿದೆ, ನಾಲ್ಕಾರು ದೀಗುಜ್ಜೆ ಕಾಯಿಗಳನ್ನೂ ಬಿಟ್ಟಿದೆ. ರಮೇಶನೂ ಯಾವುದೇ ತೊಂದರೆಯಿಲ್ಲದೆ ತನ್ನ ಪಾಡಿಗೆ ತಾನು ದುಡಿದು, ಕುಡಿದು ಬದುಕುತ್ತಿದ್ದಾನೆ, ಸಾಕಷ್ಟು ಗಟ್ಟಿಮುಟ್ಟಾಗಿಯೂ ಇದ್ದಾನೆ, ಚೇಷ್ಟೆಗೋ, ಬೇರಾವುದೋ ಕಾರಣಕ್ಕೋ ಹೇಳಿರಬಹುದಾದ ಮಾತಿಗೆ ವಿನಾಕಾರಣ ಗಾಭರಿ ಪಟ್ಟೆನಲ್ಲಾ ಎಂದು ಮನದಲ್ಲೇ ಬೈದುಕೊಂಡೆ.

ಕಳೆದ ವರ್ಷ ಅಮೆರಿಕೆಗೆ ಹೋಗುವ ಅವಕಾಶ ಸಿಕ್ಕಿತು. ಪ್ರತೀ ವರ್ಷ ಮಾರಾಟ ಇಲಾಖೆಯಿಂದ ಸಮ್ಮೇಳನಕ್ಕೆ ಎಂದು ಕಂಪೆನಿಯಿಂದ  ಇಬ್ಬರು ಹೋಗುತ್ತಿದ್ದರು. ಈ ಸಲ ಲೆಕ್ಕಪತ್ರ ಇಲಾಖೆಯಿಂದ ಒಬ್ಬರನ್ನು ಕಳಿಸೋಣ ಎಂದು ನನ್ನನ್ನು ಆಯ್ಕೆ ಮಾಡಿ ಕಳಿಸಿದ್ದರು. ಅಮೆರಿಕೆಗೆ ಹೋಗುವ ಮುನ್ನ ವಿಸಾ ಸಿಗುವ, ಸಾಹಸಿಕ ಆದರೂ ಸ್ವಾರಸ್ಯಕರ ಪ್ರಕ್ರಿಯೆ ಬಗ್ಗೆ, ಮತ್ತು ಪ್ರವಾಸದ ಬಗ್ಗೆ ಸಂಪದಕ್ಕೆ ಬರೆಯಲು ಆಗಲೇ ಇಲ್ಲ. ಸಮ್ಮೇಳನ ಇದ್ದಿದ್ದು ಅಮೆರಿಕೆಯ ‘ನಾರ್ತ್ ವೆಸ್ಟ್’ ಪ್ರಾಂತ್ಯದ ” ಓರಿಗನ್ ” ರಾಜ್ಯದಲ್ಲಿ. “ರೆಡ್ಮಂಡ್” ಒಂದು ಚಿಕ್ಕ ಪಟ್ಟಣ, ಅಲ್ಲಿಂದ ಅರ್ಧ ಘಂಟೆ ಪ್ರಯಾಣ ಮಾಡಿದರೆ “ಸನ್ ರಿವರ್ ರೆಸಾರ್ಟ್”. ೭,೦೦೦ ಎಕರೆ (ಹೌದು, ಏಳು ಸಾವಿರ ಎಕರೆ) ವಿಸ್ತೀರ್ಣದ ಈ ರೆಸಾರ್ಟ್ ನಲ್ಲಿ ನದಿಯೂ ಹರಿಯುತ್ತದೆ. ಒಂದು ದಿನ, ಸಮ್ಮೇಳನ ಮುಗಿದ ನಂತರ ಹೀಗೇ ಅಡ್ಡಾಡುತ್ತಾ ಇದ್ದಾಗ ಅಮೇರಿಕನ್ ಮಹಿಳೆಯೊಬ್ಬಳು ತನ್ನ ಕೈ ಮೇಲೆ ಒಂದ ದೊಡ್ಡ ಗಾತ್ರದ ಪಕ್ಷಿ ಕೂರಿಸಿ ಕೊಂಡು ಹೋಗುತ್ತಿದ್ದದ್ದು ನೋಡಿ ಮಾತನಾಡಿಸಿದೆ. ನೋಡಿದರೆ ಆ ಪಕ್ಷಿ ಬೇರೇನೂ ಅಲ್ಲ,  ಗೂಬೆ. ಅದರ ಕಾಲಿಗೆ ಬ್ಯಾಂಡೇಜ್ ಸಹ ಕಟ್ಟಿತ್ತು. ವಿಚಾರಿಸಿದಾಗ ಆಕೆ ಹೇಳಿದ್ದು, ನನ್ನ ಮನೆಯ ಹಿತ್ತಿಲಿನಲ್ಲಿ ಈ ಗೂಬೆ ಕಾಲಿಗೆ ಏಟು ಮಾಡಿಕೊಂಡು ಬಿದ್ದಿತ್ತು, ಅದನ್ನು ತಂದು ಶುಶ್ರೂಷೆ ಮಾಡಿ ಬ್ಯಾಂಡೇಜ್ ಕಟ್ಟಿದ್ದೇನೆ, ಆರಾಮವಾದ ಕೂಡಲೇ ಅದನ್ನು ಕಾಡಿಗೆ ಬಿಡುತ್ತೇನೆ ಎಂದು ಗೂಬೆಯನ್ನು ಅಕ್ಕರೆಯಿಂದ ನೋಡುತ್ತಾ ಹೇಳಿದಾಗ ನನಗೆ ಆಶ್ಚರ್ಯ. ನನಗೆ ತಿಳಿದಂತೆ ಯಾರದಾದರೂ ಮನೆಯ ಮೇಲೆ ಗೂಬೆ ಕೂತರೆ ಆ ಮನೆಯಲ್ಲಿ ಸಾವು ಸಂಭವಿಸುತ್ತದೆ, ಇಲ್ಲಿ ಇದಕ್ಕೆ ಅಮೇರಿಕನ್ ಮಹಿಳೆಯಿಂದ  ವರೋಪಚಾರ ಎಂದು ಮನದಲ್ಲೇ ನಗುತ್ತಾ ಇದರ ಹೆಸರೇನು ಎಂದು ಕೇಳಿದೆ. it is ‘great horned owl’ ಎಂದು ಹೇಳುತ್ತಾ ಅದರ ತಲೆಯ ಮೇಲೆ ಇದ್ದ ಎರಡು ಪುಟ್ಟ ಜುಟ್ಟನ್ನು ತೋರಿಸಿದಳು.  ಅಲ್ಲಲ್ಲ, ಅದಕ್ಕೆ ನೀನೇನೆಂದು ಕರೆಯುತ್ತೀಯಾ ಎಂದಾಗ ಆಕೆ ಹೇಳಿದ್ದು. “ನಾವು ಕಾಡಿನ ಪ್ರಾಣಿಗಳಿಗೆ ಹೆಸರಿಡುವುದಿಲ್ಲ, ಏಕೆಂದರೆ ಹೆಸರಿಟ್ಟ ಕೂಡಲೇ ಅದು ಸಾಕು ಪ್ರಾಣಿ (pet animal) ಯಾಗಿ ಬಿಡುತ್ತೆ” ಎಂದು ಹೇಳುತ್ತಾ, “ನನಗೆ ಈ ಗೂಬೆಯನ್ನ ಸಾಕು ಪ್ರಾಣಿಯನ್ನಾಗಿ ಇಟ್ಟು ಕೊಳ್ಳುವ ಇರಾದೆ ಇಲ್ಲ, he will be fine in the woods” ಎಂದು ಹೇಳಿ ತನ್ನ ದಾರಿ ಹಿಡಿದಳು. ಈ ಗೂಬೆ  ಅನುಭವ ಅಮೆರಿಕೆಯ ಬದುಕಿನ ತುಣುಕೊಂದನ್ನು ಸ್ಮೃತಿ ಪಟಲಕ್ಕೆ ಸಿಕ್ಕಿಸಿ ಕೊಳ್ಳುವ ಅವಕಾಶ ನನಗೆ ಕಲ್ಪಿಸಿತು.

ಆಂಗ್ಲ ಸಾಹಿತ್ಯದಲ್ಲಿ ನನಗೆ ಆಸಕ್ತಿ ಹುಟ್ಟಿಸಿದ್ದು ನನ್ನ ಮೂರು ಜನ ಸ್ನೇಹಿತರು. ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಗಾಗಿ ಅವರು ಕಲಿಯುತ್ತಿದ್ದರು. Somerset Maugham, Daphne Du Maurier, Thomas Hardy, jane Austen ಮತ್ತು D.H. Lawrence ಮುಂತಾದವರು ನನಗೆ ಇಷ್ಟ. ‘ಥಾಮಸ್ ಹಾರ್ಡಿ’ ನಿಸರ್ಗವನ್ನು ಚೆನ್ನಾಗಿ ವರ್ಣಿಸಿ ಬರೆದರೆ ಡೀ.ಎಚ್. ಲಾರೆನ್ಸ್ ತನ್ನ Lady Chatterley’s Lover ಪುಸ್ತಕದಲ್ಲಿ  ಲೈಂಗಿಕತೆಯನ್ನು ಚೆನ್ನಾಗಿ ವರ್ಣಿಸಿ ಬರೆದು ಅಂದಿನ ಮಡಿವಂತ ಸಮಾಜದಿಂದ ತಿರಸ್ಕಾರಕ್ಕೆ ಒಳಗಾದ ಲೇಖಕ. ಮೇಲಂತಸ್ತಿನ ವಿವಾಹಿತ ಮಹಿಳೆ ಮತ್ತು ಕೆಳ ಅಂತಸ್ತಿನ ಸೇವಕನೊಂದಿಗಿನ  ಚಕ್ಕಂದ ಈ ಪುಸ್ತಕದ ಕಥಾ ವಸ್ತು. ಈ ತೆರನಾದ ಚಕ್ಕಂದ ಈಗಿನ ಕಾಲದಲ್ಲಿ ನಮಗೂ, ಪಾಶ್ಚಾತ್ಯರಿಗೂ ಹೊಸತಲ್ಲದಿದ್ದರೂ, ೨೦ ನೇ ಶತಮಾನದ ಆದಿ ಭಾಗದಲ್ಲಿ ಇದು ಅಪರೂಪ.  taboo. ಬಿಸಿಯೇರಿಸುವ  ಸನ್ನಿವೇಶವೊಂದರಲ್ಲಿ ಕಥಾ ನಾಯಕಿ ಮತ್ತು ನಾಯಕ ತಲೆ ಒರೆಸಿ ಕೊಳ್ಳಲು ಟವೆಲ್ ಇಲ್ಲದಿದ್ದರಿಂದ ಬೆಡ್ ಶೀಟ್ ಉಪಯೋಗಿಸುತ್ತಾರೆ. ಒಂದೇ ಟವೆಲ್ ನಲ್ಲಿ ಇಬ್ಬರೂ ಒರೆಸಿಕೊಂಡರೆ ಜಗಳ ಆಗು ತ್ತಂತೆ ಎಂದು ಆಕೆ ಹೇಳಿದಾಗ ನಾಯಕ ಹೇಳುತ್ತಾನೆ, ಇರಬಹುದು, ಗೊತ್ತಿಲ್ಲ, ಆದರೆ ಇದು ಟವೆಲ್ ಅಲ್ಲವಲ್ಲಾ, ಬೆಡ್ ಶೀಟ್ ತಾನೇ ಎಂದು ಸಮಾಧಾನ ಮಾಡುತ್ತಾನೆ. ನಾವು ಕೇಳಿದ್ದೇವೆಯೇ ಈ ವಿಷಯವನ್ನು? ಒಂದೇ ಟವೆಲ್ ನಲ್ಲಿ ಇಬ್ಬರು ಒರೆಸಿಕೊಂಡಾಗ ಆಗಬಹುದಾದ ಜಗಳದ ಬಗ್ಗೆ?

 

ನಾಣ್ಯಕ್ಕೆ ಮತ್ತೊಂದು ಮುಖ

ಅಮೆರಿಕೆಯ ವಿರುದ್ಧ ನಡೆದ ವೈಮಾನಿಕ ಧಾಳಿಯ ವಾರ್ಷಿ ಕ ದಂದು ಪ್ರವಾದಿ ಮುಹಮ್ಮದರ ಮೇಲೆ ಅವಹೇಳನಕಾರೀ ವೀಡಿಯೊ ‘ಯೂ ಟ್ಯೂಬ್’ ಗಳಲ್ಲಿ ರಾರಾಜಿಸಿ ದೊಡ್ಡ ಅಂತಾರಾಷ್ಟ್ರೀಯ ವಿವಾದ ಸೃಷ್ಟಿಯಾಯಿತು. ಪ್ರತಿಭಟನಾರ್ಥವಾಗಿ  ಲಿಬ್ಯಾದ ಬೆಂಗಾಜಿ ಯಲ್ಲಿ ಅಮೇರಿಕನ್ ದೂತಾವಾಸದ ಮೇಲೆ ನಡೆದ ಆಕ್ರಮಣದಲ್ಲಿ ಅಮೆರಿಕೆಯ ರಾಯಭಾರಿಯನ್ನು ಮತ್ತು ಇತರೆ ಮೂರು ಅಮೆರಿಕನ್ನರನ್ನು ರಾಕೆಟ್ ಧಾಳಿ ನಡೆಸಿ ಕೊಲ್ಲಲಾಯಿತು. ಅಮೇರಿಕನ್ ರಾಯಭಾರಿ ಮುಅಮ್ಮರ್ ಗದ್ದಾಫಿ ವಿರುದ್ಧದ ಹೋರಾಟದಲ್ಲಿ ಲಿಬ್ಯನ್ನರ ಬೆಂಬಲಕ್ಕೆ ನಿಂತಿದ್ದವರು. ವೀಡಿಯೊಗೂ ಅವರಿಗೂ ಯಾವ ಸಂಬಂಧವೂ ಇರಲಿಲ್ಲ. ಅವರ ಹತ್ಯೆಯಿಂದ ಅಮೆರಿಕೆಗೂ ಲಿಬ್ಯಾಕ್ಕೂ ತೀವ್ರ ಆಘಾತವಾಗಿ ಲಿಬ್ಯಾದ ಸರಕಾರ ಅಮೆರಿಕೆಯ ಕ್ಷಮೆ ಕೇಳಿ ಕೊಲೆಗಡುಕರನ್ನು ಶೀಘ್ರದಲ್ಲೇ ಹಿಡಿಯುವುದಾಗಿ ಭರವಸೆ ನೀಡಿತು. ಈ ಭೀಕರ ಘಟನೆ ಮತ್ತು ವೀಡಿಯೊ ವಿವಾದದ ಬಗ್ಗೆ ಅಮೆರಿಕೆಯ

NPR ರೇಡಿಯೋದಲ್ಲಿ ಒಂದು ಕಾರ್ಯಕ್ರಮ ಪ್ರಸಾರ ವಾಯಿತು. “ನೀಲ್ ಕೋನನ್” ನಡೆಸಿಕೊಡುವ ‘ಟಾಕ್ ಆಫ್  ದಿ ನೇಶನ್’ ಒಂದು ಜನಪ್ರಿಯ ಕಾರ್ಯಕ್ರಮ. ಪಂಡಿತರು, ಶ್ರೋತೃಗಳೂ ಪಾಲುಗೊಳ್ಳುವ ಈ ಚರ್ಚಾ ಕಾರ್ಯಕ್ರಮ ಸ್ವಾರಸ್ಯಕರ ವಾಗಿರುತ್ತದೆ. ವೀಡಿಯೊ  ಮತ್ತು ರಾಯಭಾರಿಯ ಹತ್ಯೆ ಯ ಮೇಲೆ ನಡೆದ ಕಾರ್ಯಕ್ರಮವನ್ನ ಆಲಿಸುತ್ತಿದ್ದ ಮಹಿಳಾ ಶ್ರೋತೃವೊಬ್ಬರು ಕೇಳಿದ ಪ್ರಶ್ನೆ ಹೀಗಿತ್ತು. “ಲಿಬ್ಯಾದ ಬೆನ್ಗಾಜಿಯಲ್ಲಿ ನಡೆದ ಭೀಭತ್ಸ ಘಟನೆ ಬಗ್ಗೆ ಓದುತ್ತಿದ್ದೇವೆ, ಕೇಳುತ್ತಿದ್ದೇವೆ. ಅತ್ಯಂತ ದಾರುಣ ಈ ಘಟನೆ. ಈ ಘಟನೆಯ ಸಮಯ ರಾಯಭಾರಿಯ ಮೇಲೆ ಧಾಳಿ ನಡೆದಾಗ ಲಿಬ್ಯಾದವರು ರಾಯಭಾರಿಯನ್ನು ರಕ್ಷಿಸಲು ಹೋರಾಡಿದರು, ಸಾವು ನೋವುಗಳೂ ಆದವು, ಆದರೆ ಇದರ ಬಗ್ಗೆ ನಾವು ಮಾತನಾಡುತ್ತಿಲ್ಲ, ಇದು ಸರಿಯಲ್ಲ, ಲಿಬ್ಯನ್ನರ ಸಹಾಯವನ್ನೂ ನಾವು ಸ್ಮರಿಸಬೇಕು” ಎಂದು ಹೇಳಿದಾಗ ನನಗೆ ಅಚ್ಚರಿಯಾಯಿತು. ತನ್ನ ದೇಶದವರ ವಿರುದ್ಧ ನಡೆದ ಧಾಳಿಯ ಸಮಯದಲ್ಲೂ ಬೇರೊಬ್ಬರ ತ್ಯಾಗ, ಧೈರ್ಯ ದ ಬಗ್ಗೆ ಮೆಚ್ಚುಗೆ ಸೂಸಲು ಕ್ಯಾಲಿಫೋರ್ನಿಯಾ ಮೂಲದ ಈ ಅಮೇರಿಕನ್ ಮಹಿಳೆ ಒತ್ತಾಯ ಮಾಡುತ್ತಿದ್ದಾಳಲ್ಲ ಎಂದು. ಈ ಮಹಿಳೆಯ ಮಾತು ಕೇಳಿದ ಬೆಂಗಾಜಿಯಿಂದ ‘ಆನ್ ಲೈನ್’ ಇದ್ದ ಬಾತ್ಮೀದಾರ ಹೇಳಿದ್ದು, ‘ಹೌದು, ಲಿಬ್ಯನ್ನರು ಬಹು ಧೈರ್ಯದಿಂದ ಹೋರಾಡಿದರು. ರಾಯಭಾರಿಯನ್ನು ಉಳಿಸುವ ಪ್ರಯತ್ನ ಮಾಡಿದರು, ಅಷ್ಟೇ ಅಲ್ಲ ಈ ಧಾಳಿಯ ವಿರುದ್ಧ ಇಂದು ಸಂಜೆ ಒಂದೆರಡು ಪ್ರತಿಭಟನಾ ಪ್ರದರ್ಶನಗಳೂ ನಡೆದವು’ ಎಂದು ವರದಿ ಮಾಡಿದ.

ಯಾವುದೇ ಘಟನೆಯ ಬಗ್ಗೆ ಓದುವಾಗ ನಾಣ್ಯಕ್ಕೆ ಮತ್ತೊಂದು ಮುಖ ಇದ್ದೇ ಇರುತ್ತದೆ ಎನ್ನುವ ಭಾವನೆ ನಮ್ಮೊಂದಿಗೆ ಇದ್ದರೆ ಆ  ಅಮೇರಿಕನ್ ಮಹಿಳೆಯ ಮನಸ್ಸಿನಲ್ಲಿ ಮೂಡಿದ ವಿಚಾರಗಳು ನಮ್ಮ ಮನಸ್ಸಿನಲ್ಲೂ ಮೂಡದೆ ಇರದು. ಎಲ್ಲದಕ್ಕೂ ಸಂಯಮ, ತಾಳ್ಮೆ, ವಿಚಾರ ಮಾಡುವ ಮನಸ್ಸು ಇದ್ದಾಗ ವಿಷಯ ಮತ್ತಷ್ಟು ತಿಳಿಯಾಗುವುದು.

ಇಂಥ “ಮೇಲು” “ಕೀಳು” ಗಳ ಬಗ್ಗೆ ನಿಗಾ ಇರಲಿ

ನನ್ನ ಯಾಹೂ ಮೇಲ್ ಬಾಕ್ಸ್ ನಲ್ಲಿ ಕಾಣಿಸಿ ಕೊಂಡ ಮೇಲು. ಇಂಥ ರೈಲು ಬಿಡುವ ಮೇಲುಗಳ ಬಗ್ಗೆ ಎಚ್ಚರ ದಿಂದಿರಿ. ಈ ಮೇಲನ್ನು ಹೆಚ್ಚಾಗಿ ನೈಜೀರಿಯಾದ ಖದೀಮರು ಕಳಿಸುತ್ತಾರೆ.

ಡಿಯರ್, ಯಾಹೂ ಚಾಟ್ ಮೆಂಬರ್, ಯಾಹೂ ಚಾಟ್ ನ ನಿಗಾ ಕೇಂದ್ರ ಪ್ರತೀ ದಿನ ಚಾಟ್ ರೂಂ ಗಳಲ್ಲಿ ಭಾಗವಹಿಸುವವರ ಭಾಷೆ, ವರ್ತನೆಯನ್ನ ಗಮನಿಸುತ್ತಿದ್ದು, ನೀವು ಇದುವರೆಗೆ ಅತ್ಯಂತ ಸಭ್ಯವಾಗಿ ವರ್ತಿಸಿದ ಕಾರಣಕ್ಕಾಗಿ ತಮಗೆ ನಮ್ಮ ನಿಗಾ ಕೇಂದ್ರದ ವತಿಯಿಂದ “ನಾಲ್ಕು ಲಕ್ಷದ ಇಪ್ಪತ್ತೈದು ಸಾವಿರ” ಅಮೇರಿಕನ್ ಡಾಲರುಗಳ ಪುರಸ್ಕಾರ ಪ್ರದಾನ ಮಾಡಲಾಗಿದೆ. ತಮ್ಮ ಚೆಕ್ ಪಡೆಯಲು ಈ ಕೆಳ ಕಂಡ ವಿಳಾಸವನ್ನ ಸಂಪರ್ಕಿಸಿ. ತಮ್ಮ ಉತ್ತಮ ನಡತೆಗೆ ನಮ್ಮ ವಂದನೆಗಳು.

Contact Person: Mr. Austin Onye

Email: chataward@yahoo.com Telephone: +2348034161082

ಇಂಟರ್ನೆಟ್ ತಂತ್ರಜ್ಞಾನ “ಟೋನ್ ಚೆಕ್”

ಆಟೋ ಸೇವ್ ಆಯ್ತು, ಸ್ಪೆಲ್ ಚೆಕ್ ಆಯ್ತು, ಮತ್ತಿನ್ನೇನೋ ಬಂದವು.  ಈಗ ಬಂತು “ಟೋನ್ ಚೆಕ್”. ಗಣಕ ಯಂತ್ರವನ್ನು ಸ್ಟುಪಿಡ್ ಬಾಕ್ಸ್ ಎಂದು ಮೂದಲಿಸಿದ ವ್ಯಕ್ತಿ ಈಗ ಸ್ಟುಪಿಡ್. ನಮ್ಮ ಬದುಕನ್ನು ಸರಳವಾಗಿಸಿದ ಗಣಕ ಯಂತ್ರವನ್ನು ಹಾಗೆಂದು ಮೂದಲಿಸೋದು ಅಪರಾಧ. ಇರಲಿ ಈಗ “ಟೋನ್ ಚೆಕ್” ಗೆ ಬರೋಣ. ಟೋನ್ ಎಂದರೆ ಚರ್ಮದ tone ಅಲ್ಲ, ನಾವಾಡುವ ಸ್ವರ.  ಕೋಪಗ್ರಸ್ಥರಾದಾಗ ನಾವಾಡುವ ಮಾತುಗಳು ಕೇಳುಗರ ಅಥವಾ ಓದುಗರ ಮೇಲೆ ಬೀರುವ ಪರಿಣಾಮದ ಅರಿವು ಇದ್ದರೆ ತಾಪತ್ರಯಗಳು ಕಡಿಮೆ. ತಾಣವೊಂದರಲ್ಲಿ ಒಬ್ಬರೊಂದಿಗೆ ಚರ್ಚೆಗಿಳಿದಾಗ ಒಬ್ಬ ವ್ಯಕ್ತಿ ಹೇ, ಮಿಸ್ಟರ್, you are exposed ಎಂದು ನನ್ನನ್ನು ಮೂದಲಿಸಿತು. ತಮ್ಮ ideology ಗೆ ಧಕ್ಕೆ ತರುವ, ಟೀಕೆಗೆ ಒಳಪಡಿಸುವ ಯಾರನ್ನೇ ಆದರೂ ನಿರ್ದಯವಾಗಿ ಇಂಥ ಜನರು   ಬೇಟೆಯಾಡುತ್ತಾರೆ. ಇಂಥ ಜನರ ಬಗ್ಗೆ outlook ವಾರಪತ್ರಿಕೆಯಲ್ಲಿ CNN-IBN ನ ಸಾಗರಿಕ ಘೋಷ್ ಒಂದು ಲೇಖನ ಬರೆದಿದ್ದರು. ಒಬ್ಬ ಹೆಣ್ಣು ಮಗಳಿಗೆ ಈ ತೆರನಾಗಿ ಬರೆಯುವ, ಜರೆಯುವ ಜನ ಬೇರೆ ಯಾರನ್ನು ತಾನೇ ಬಿಟ್ಟಾರು?   ಅಂತರ್ಜಾಲ ಅನಾಮಿಕತನ (anonymity) ವನ್ನೂ ಕೊಡಮಾಡುವುದರಿಂದ ಎಗ್ಗಿಲ್ಲದೆ ಹರಿ ಹಾಯುತ್ತಾರೆ ಜನರ ಮೇಲೆ. ನಿಮಗೆ ನೋವಾಯಿತೋ ಇಲ್ಲವೋ, ಇದರ ಪರಿವೆ ಇಲ್ಲ. ಮನದೊಳಗೆ ಕೊಳೆತು ಕೂತಿದ್ದನ್ನು ಲೀಲಾಜಾಲವಾಗಿ ಯಾರದಾದರೂ ಮೇಲೆ ಡಂಪ್ ಮಾಡಿ ಮಗುಮ್ಮಾಗಿ ಇದ್ದು ಬಿಡುತ್ತಾರೆ.ಇವರುಗಳ ಈ ವರ್ತನೆಗೆ ರೋಸಿ ಹೋಗದ, ಇಂಟರ್ನೆಟ್ ಸಹವಾಸವೇ ಬೇಡ ಎಂದು ಕೈ ಚೆಲ್ಲದವರು ಸಂಖ್ಯೆಯಲ್ಲಿ  ಕಡಿಮೆ ಎಂದೇ ಹೇಳಬಹುದು.   

ಕೆಲವರ ಮೇಲೆ ಹೇಳಿದ ಹಾಗೆ, ಅವರ ವರ್ತನೆ deliberate. ಇನ್ನೂ ಕೆಲವರು ತಮಗೆ ಅರಿವಿಲ್ಲದೆ ಸ್ವಲ್ಪ ಖಾರವಾದ ಭಾಷೆ ಉಪಯೋಗಿಸುತ್ತಾರೆ. deliberate ಮತ್ತು ನಾಟ್ ಸೋ ಡೆಲಿಬರೆಟ್ ಪೈಕಿಯವರಿಗೆಂದೇ ಬಂದೈತೆ ಟೋನ್ ಚೆಕ್. ಲೇ, ಬೋ**ಮಗನೆ, ತಲೆಯೊಳಗೆ ಹೇ** ತುಂಬಿಸಿ ಕೊಂಡಿದ್ದೀಯ…ಅದೂ ಇದೂ ಎಂದು ಬಾಯಿಗೆ ಬಂದಂತೆ ಮಾತನಾಡಿ ಪೋಸ್ಟ್ ಎಂದು ಕೀಲಿಮಣೆಯ ಮೇಲೆ ಬೆರಳನ್ನು ಕುಕ್ಕಿದ ಕೂಡಲೇ ಬರುತ್ತೆ ವಾರ್ನಿಂಗ್. ತಮ್ಮಾ, (ತಂಗೀ ?) ನೀನು ಮಾಡುತ್ತಿರೋ ಕೆಲಸ ನಿನಗೆ ಹೇಳಿಸಿದ್ದಲ್ಲ, ಮತ್ತೊಮ್ಮೆ ಓದಿ ನೋಡು, ಇದೇ ರೀತಿ ನಿನಗೂ ಯಾರಾದರೂ ಬರೆದಾಗ ನಿನಗಾಗುವ ಸಂಕಟದ ಬಗ್ಗೆ ಯೋಚಿಸು, ಪರರಿಗೆ ಬಯಸಿದ್ದನ್ನೆ ನಿನಗೂ ಬಯಸಿದಾಗ ಆಗುವ ಅನುಭವ, ಅನುಭಾವದ ಕಡೆ ಗಮನ ಕೊಡು ಎಂದು ಗೋಗರೆಯುತ್ತೆ ಈ ಹೊಸ “ಟೋನ್ ಚೆಕ್” ತಂತ್ರಜ್ಞಾನ. ಆದರೆ ಕೆಲವು ಕಂಪೆನಿಗಳು ಈ ತಂತ್ರ ಜ್ಞಾನ ವನ್ನೂ ಅಳವಡಿಸಿಕೊಳ್ಳಲು ತಯಾರಿಲ್ಲವಂತೆ. ಏಕೆಂದರೆ ತಮ್ಮ ಉದ್ದಿಮೆಗಳ ಇಮೇಲ್ ಗೌಪ್ಯತೆ ಬಹಿರಂಗ ವಾದೀತು ಎನ್ನುವ ಆತಂಕ. 

ನೋಡಿ, ಯಾವ ಯಾವ ರೀತಿಯಲ್ಲಿ ನಮ್ಮ ಬಗ್ಗೆ ಖಯಾಲಿ, ನಿಗಾ ಇಟ್ಟು ಕೊಂಡಿರುತ್ತಾರೆ ಈ ಇಂಟರ್ನೆಟ್ ಉದ್ಯಮಿಗಳು. ಅದೇ ಸಮಯ, ಅಲ್ಲಿ ಉಗುಳಬಾರದು, ಇಲ್ಲಿ ಉಗುಳಬಾರದು, ಇಲ್ಲಿ ಮೂತ್ರ ವಿಸರ್ಜನೆ ಮಾಡಬಾರದು, ಚೀಟಿ ಅಂಟಿಸಬಾರದು, ಗಲೀಜು ಮಾಡಬಾರದು, ಬಸ್ಸಿನಿಂದ ಹೊರಗೆ ಕೈ ಹಾಕಬಾರದು… ಅದನ್ನು ಮಾಡಬಾರದು…ಇದನ್ನು ಮಾಡಬಾರದು ಎಂದು ಪ್ರಬುದ್ಧರನ್ನು, ವಯಸ್ಕರನ್ನು ಗದರಿಸುವ ಪರಿಪಾಠ ಇಂಟರ್ನೆಟ್ ಗೆ ಬರಬಾರದಿತ್ತು “ಟೋನ್ ಚೆಕ್” ಆವಿಷ್ಕಾರದ ಮೂಲಕ.