ನಾಣ್ಯಕ್ಕೆ ಮತ್ತೊಂದು ಮುಖ

ಅಮೆರಿಕೆಯ ವಿರುದ್ಧ ನಡೆದ ವೈಮಾನಿಕ ಧಾಳಿಯ ವಾರ್ಷಿ ಕ ದಂದು ಪ್ರವಾದಿ ಮುಹಮ್ಮದರ ಮೇಲೆ ಅವಹೇಳನಕಾರೀ ವೀಡಿಯೊ ‘ಯೂ ಟ್ಯೂಬ್’ ಗಳಲ್ಲಿ ರಾರಾಜಿಸಿ ದೊಡ್ಡ ಅಂತಾರಾಷ್ಟ್ರೀಯ ವಿವಾದ ಸೃಷ್ಟಿಯಾಯಿತು. ಪ್ರತಿಭಟನಾರ್ಥವಾಗಿ  ಲಿಬ್ಯಾದ ಬೆಂಗಾಜಿ ಯಲ್ಲಿ ಅಮೇರಿಕನ್ ದೂತಾವಾಸದ ಮೇಲೆ ನಡೆದ ಆಕ್ರಮಣದಲ್ಲಿ ಅಮೆರಿಕೆಯ ರಾಯಭಾರಿಯನ್ನು ಮತ್ತು ಇತರೆ ಮೂರು ಅಮೆರಿಕನ್ನರನ್ನು ರಾಕೆಟ್ ಧಾಳಿ ನಡೆಸಿ ಕೊಲ್ಲಲಾಯಿತು. ಅಮೇರಿಕನ್ ರಾಯಭಾರಿ ಮುಅಮ್ಮರ್ ಗದ್ದಾಫಿ ವಿರುದ್ಧದ ಹೋರಾಟದಲ್ಲಿ ಲಿಬ್ಯನ್ನರ ಬೆಂಬಲಕ್ಕೆ ನಿಂತಿದ್ದವರು. ವೀಡಿಯೊಗೂ ಅವರಿಗೂ ಯಾವ ಸಂಬಂಧವೂ ಇರಲಿಲ್ಲ. ಅವರ ಹತ್ಯೆಯಿಂದ ಅಮೆರಿಕೆಗೂ ಲಿಬ್ಯಾಕ್ಕೂ ತೀವ್ರ ಆಘಾತವಾಗಿ ಲಿಬ್ಯಾದ ಸರಕಾರ ಅಮೆರಿಕೆಯ ಕ್ಷಮೆ ಕೇಳಿ ಕೊಲೆಗಡುಕರನ್ನು ಶೀಘ್ರದಲ್ಲೇ ಹಿಡಿಯುವುದಾಗಿ ಭರವಸೆ ನೀಡಿತು. ಈ ಭೀಕರ ಘಟನೆ ಮತ್ತು ವೀಡಿಯೊ ವಿವಾದದ ಬಗ್ಗೆ ಅಮೆರಿಕೆಯ

NPR ರೇಡಿಯೋದಲ್ಲಿ ಒಂದು ಕಾರ್ಯಕ್ರಮ ಪ್ರಸಾರ ವಾಯಿತು. “ನೀಲ್ ಕೋನನ್” ನಡೆಸಿಕೊಡುವ ‘ಟಾಕ್ ಆಫ್  ದಿ ನೇಶನ್’ ಒಂದು ಜನಪ್ರಿಯ ಕಾರ್ಯಕ್ರಮ. ಪಂಡಿತರು, ಶ್ರೋತೃಗಳೂ ಪಾಲುಗೊಳ್ಳುವ ಈ ಚರ್ಚಾ ಕಾರ್ಯಕ್ರಮ ಸ್ವಾರಸ್ಯಕರ ವಾಗಿರುತ್ತದೆ. ವೀಡಿಯೊ  ಮತ್ತು ರಾಯಭಾರಿಯ ಹತ್ಯೆ ಯ ಮೇಲೆ ನಡೆದ ಕಾರ್ಯಕ್ರಮವನ್ನ ಆಲಿಸುತ್ತಿದ್ದ ಮಹಿಳಾ ಶ್ರೋತೃವೊಬ್ಬರು ಕೇಳಿದ ಪ್ರಶ್ನೆ ಹೀಗಿತ್ತು. “ಲಿಬ್ಯಾದ ಬೆನ್ಗಾಜಿಯಲ್ಲಿ ನಡೆದ ಭೀಭತ್ಸ ಘಟನೆ ಬಗ್ಗೆ ಓದುತ್ತಿದ್ದೇವೆ, ಕೇಳುತ್ತಿದ್ದೇವೆ. ಅತ್ಯಂತ ದಾರುಣ ಈ ಘಟನೆ. ಈ ಘಟನೆಯ ಸಮಯ ರಾಯಭಾರಿಯ ಮೇಲೆ ಧಾಳಿ ನಡೆದಾಗ ಲಿಬ್ಯಾದವರು ರಾಯಭಾರಿಯನ್ನು ರಕ್ಷಿಸಲು ಹೋರಾಡಿದರು, ಸಾವು ನೋವುಗಳೂ ಆದವು, ಆದರೆ ಇದರ ಬಗ್ಗೆ ನಾವು ಮಾತನಾಡುತ್ತಿಲ್ಲ, ಇದು ಸರಿಯಲ್ಲ, ಲಿಬ್ಯನ್ನರ ಸಹಾಯವನ್ನೂ ನಾವು ಸ್ಮರಿಸಬೇಕು” ಎಂದು ಹೇಳಿದಾಗ ನನಗೆ ಅಚ್ಚರಿಯಾಯಿತು. ತನ್ನ ದೇಶದವರ ವಿರುದ್ಧ ನಡೆದ ಧಾಳಿಯ ಸಮಯದಲ್ಲೂ ಬೇರೊಬ್ಬರ ತ್ಯಾಗ, ಧೈರ್ಯ ದ ಬಗ್ಗೆ ಮೆಚ್ಚುಗೆ ಸೂಸಲು ಕ್ಯಾಲಿಫೋರ್ನಿಯಾ ಮೂಲದ ಈ ಅಮೇರಿಕನ್ ಮಹಿಳೆ ಒತ್ತಾಯ ಮಾಡುತ್ತಿದ್ದಾಳಲ್ಲ ಎಂದು. ಈ ಮಹಿಳೆಯ ಮಾತು ಕೇಳಿದ ಬೆಂಗಾಜಿಯಿಂದ ‘ಆನ್ ಲೈನ್’ ಇದ್ದ ಬಾತ್ಮೀದಾರ ಹೇಳಿದ್ದು, ‘ಹೌದು, ಲಿಬ್ಯನ್ನರು ಬಹು ಧೈರ್ಯದಿಂದ ಹೋರಾಡಿದರು. ರಾಯಭಾರಿಯನ್ನು ಉಳಿಸುವ ಪ್ರಯತ್ನ ಮಾಡಿದರು, ಅಷ್ಟೇ ಅಲ್ಲ ಈ ಧಾಳಿಯ ವಿರುದ್ಧ ಇಂದು ಸಂಜೆ ಒಂದೆರಡು ಪ್ರತಿಭಟನಾ ಪ್ರದರ್ಶನಗಳೂ ನಡೆದವು’ ಎಂದು ವರದಿ ಮಾಡಿದ.

ಯಾವುದೇ ಘಟನೆಯ ಬಗ್ಗೆ ಓದುವಾಗ ನಾಣ್ಯಕ್ಕೆ ಮತ್ತೊಂದು ಮುಖ ಇದ್ದೇ ಇರುತ್ತದೆ ಎನ್ನುವ ಭಾವನೆ ನಮ್ಮೊಂದಿಗೆ ಇದ್ದರೆ ಆ  ಅಮೇರಿಕನ್ ಮಹಿಳೆಯ ಮನಸ್ಸಿನಲ್ಲಿ ಮೂಡಿದ ವಿಚಾರಗಳು ನಮ್ಮ ಮನಸ್ಸಿನಲ್ಲೂ ಮೂಡದೆ ಇರದು. ಎಲ್ಲದಕ್ಕೂ ಸಂಯಮ, ತಾಳ್ಮೆ, ವಿಚಾರ ಮಾಡುವ ಮನಸ್ಸು ಇದ್ದಾಗ ವಿಷಯ ಮತ್ತಷ್ಟು ತಿಳಿಯಾಗುವುದು.