* intellectual terrorists

A book must be the ax for the frozen sea within us.
  —
Franz Kafka
 “ನಮ್ಮ ಅಂತರಾಳದಲ್ಲಿ ಹೆಪ್ಪುಗಟ್ಟಿದ ಸಮುದ್ರವನ್ನು ಒಡೆಯಲು ಕೊಡಲಿಯಾಗಬೇಕು ಗ್ರಂಥಗಳು”.  

ಎಷ್ಟು ಅರ್ಥಗರ್ಭಿತ ಈ ಮಾತುಗಳು. ಆದರೆ ನಾವು ಇಂದು ಕಾಣುತ್ತಿರುವ ಸಾಹಿತ್ಯ ನೋಡಿದರೆ ಅಂತರಾಳವನ್ನು ನರಕವಾಗಿಸುವುದರಲ್ಲಿ ಪುಸ್ತಕಗಳು ನಾಮುಂದು ತಾಮುಂದು ಎಂದು ಬರುತ್ತಿವೆ. ಧ್ವೇಷ ಕಾರುವ, ಜನರಲ್ಲಿ ವೈಮನಸ್ಸನ್ನು ಹುಟ್ಟಿಸುವ ಕೃತಿಗಳನ್ನು ರಚಿಸಿ ಭೇಷ್ ಎಂದು ಪ್ರಶಂಸೆ ಗಳಿಸುತ್ತಿರುವ,  ನಾಡಿನ ಶ್ರೇಷ್ಠ ಬರಹಗಾರರೆಂದು ಬೀಗಿ ನಡೆಯುತ್ತಿರುವ ಸಾಹಿತಿಗಳು ತಾವು ರಚಿಸುತ್ತಿರುವ ಕೃತಿಗಳು, ಬರಹಗಳು ಭಯೋತ್ಪಾದಕನ ಗುಂಡುಗಳಿಗಿಂತ ಅಪಾಯಕಾರಿ ಎಂದು ಕಾಣಲು ವಿಫಲರಾಗುತ್ತಿರುವುದು ನಮ್ಮ ದೌರ್ಭಾಗ್ಯ ಎಂದೇ ಹೇಳಬೇಕು. ಈ ರೀತಿ ಮನುಷ್ಯರ ಮಧ್ಯೆ, ಸಮುದಾಯಗಳ ನಡುವೆ ಒಡಕನ್ನು ತಂದು ನಿಲ್ಲಿಸುವವರು “ಬೌದ್ಧಿಕ ಭಯೋತ್ಪಾದಕರು” (intellectual terrorists) ಮತ್ತು ಈ ಸಾಹಿತಿಗಳ ಭಯೋತ್ಪಾದನೆ ದೇಶಕ್ಕೆ ಗಂಡಾಂತರಕಾರಿ ಎಂದು ನಾವು ಅರಿತುಕೊಳ್ಳುವುದು ಸಮಯ ಮೀರಿದಾಗಲೋ? ಏಕೆಂದರೆ ಓರ್ವ ಭಯೋತ್ಪಾದಕ ತನ್ನ ಕೋವಿಯಿಂದ ಒಂದಿಷ್ಟು ಗುಂಡುಗಳನ್ನು ಹರಿ ಬಿಟ್ಟು ಒಬ್ಬಿಬ್ಬರದೋ, ನಾಲ್ಕಾರು ಜನರದೋ ಜೀವಗಳನ್ನು ಆಹುತಿ ತೆಗೆದುಕೊಳ್ಳಬಹುದು, ಆದರೆ ಬುದ್ಧಿಜೀವಿಯೆಂದು ಸಮಾಜದ ಮುಂದೆ ನಿಂತು ತಮ್ಮ ಕೊಳಕು, ಅಸಹ್ಯ ಹುಟ್ಟಿಸುವ ವಿಚಾರಗಳನ್ನು ಪ್ರಸ್ತುತಪಡಿಸಿ ಅವನ್ನು ಪುಸ್ತಕ ರೂಪಕ್ಕೂ ಇಳಿಸುವ ಗೋಮುಖ ವ್ಯಾಘ್ರರು ಸಮಾಜವನ್ನು ಒಡೆಯುವಲ್ಲಿ ಯಶಸ್ಸನ್ನು ಕಾಣುತ್ತಿದ್ದಾರೆ. 

ಈ ವಿಷ ಜಂತುಗಳ ಬಗ್ಗೆ ಜನಸಾಮಾನ್ಯರು ಮತ್ತು ಸುಶಿಕ್ಷಿತ ವ್ಯಕ್ತಿಗಳು ಜಾಗೃತರಾಗಿ ಅವರನ್ನು ಮೂಲೆಗುಂಪು ಮಾಡಬೇಕಾದ ಅವಶ್ಯಕತೆ ದೇಶದ ಹಿತದೃಷ್ಟಿಯಿಂದ ತುಂಬಾ ಒಳ್ಳೆಯದು.     

ಮೇಲಿನ Franz Kafka ಆಂಗ್ಲ ನುಡಿಗಳ ಕನ್ನಡ ಭಾಷಾಂತರ ಎಷ್ಟು ಹತ್ತಿರ ಎಂದು ನನಗೆ ಖಾತರಿಯಿಲ್ಲ ಆದರೂ ಪ್ರಯತ್ನವನ್ನಂತೂ ಮಾಡಿದ್ದೇನೆ.

ಮುಟ್ಟಿದ್ದೆಲ್ಲಾ ಚೈನಾ…

ಮುಟ್ಟಿದ್ದೆಲ್ಲಾ ಚಿನ್ನ ನಮಗೆ ತಿಳಿದ ಗಾದೆ.  ಆದ್ರೆ ಇದು ಚಿನ್ನದ ಕತೆಯಲ್ಲ, ಚೀನಾ ದೇಶದ್ದು.

ಮಾರುಕಟ್ಟೆಯಲ್ಲಿ ಕೇಳಿಬರುವ ಒಂದು ಉದ್ಗಾರ ಇದೂ ಚೈನಾನಾ? ಏನೇನನ್ನೆಲ್ಲಾ ತಯಾರು ಮಾಡ್ತಾರಪ್ಪಾ ಈ ಚೈನಾದವರು ಎಂದು ಅರ್ಧ ಮೆಚ್ಚುಗೆಯಿಂದಲೂ ಇನ್ನರ್ಧ ಮತ್ಸರದಿಂದಲೂ ಕೇಳಿಬರುವ ಉದ್ಗಾರ.  ಅಷ್ಟೊಂದು ಪ್ರಬಲವಾದ ubiquitous ಹಿಡಿತ ಚೀನೀಯರದು. ಒಂದು ಕಾಲವಿತ್ತು. ಚೈನಾ ಎಂದರೆ ಬರೀ ಕಳಪೆ ಮತ್ತು ಅಗ್ಗದ ವಸ್ತು ತಯಾರಿಸುವ ದೇಶ ಎಂದು. ಆದರೆ ಪರಿಸ್ಥಿತಿ ಬದಲಾಗಿ ಇಂದು ವಿಶ್ವದ ಬಹುತೇಕ ಕಂಪೆನಿಗಳು ಚೈನಾವನ್ನು ತಮ್ಮ ಸರಕುಗಳನ್ನು ಉತ್ಪಾದಿಸುವ ಕೇಂದ್ರವಾಗಿ ಪರಿವರ್ತಿಸಿದ್ದಾರೆ. ೧೮ ವರ್ಷಗಳ ಹಿಂದೆ ನಾನು ಸೌದಿಗೆ ಬಂದ ಹೊಸತು. ಮಾರುಕಟ್ಟೆಯಲ್ಲಿ ಚೈನಾದ ಸ್ವರ ಕ್ಷೀಣ. ಎಲೆಕ್ಟ್ರೋನಿಕ್ ವಸ್ತುಗಳು ನೇರವಾಗಿ ಜಪಾನ್, ಜರ್ಮನಿ ಮುಂತಾದ ರಾಷ್ಟ್ರಗಳಿಂದಲೇ ಬರುತ್ತಿದ್ದವು. ನನ್ನ ಮೊಟ್ಟ ಮೊದಲ ಸಂಬಳದಿಂದ ಕೊಂಡ ಅಲಾರ್ಮ್ ಗಡಿಯಾರ ಜರ್ಮನಿಯದು. ಆಗ ಬಟ್ಟೆ ಬರೆಗಳಲ್ಲಿ ಥೈಲ್ಯಾಂಡ್ ಮುಂದು. ಅಪ್ಪಿ ತಪ್ಪಿ ಯಾವುದಾದರೂ ಚೈನಾ ನಿರ್ಮಿತ ವಸ್ತು ಕಂಡರೂ ಕೊಳ್ಳುವವರು ತುಂಬಾ ಕಡಿಮೆ. ಅಂದಿನ ಪರಿಸ್ಥಿತಿಗೂ ಇಂದಿನ ಬೆಳವಣಿಗೆಗೂ ಎಷ್ಟೊಂದು ವ್ಯತ್ಯಾಸ? ಸೌದಿ – ಥಾಯಿಲೆಂಡ್ ಸಂಬಂಧ ಒಂದು ದರೋಡೆಗೆ ಸಂಬಂಧಿಸಿದ ಘಟನೆಯೊಂದಿಗೆ ಹಳಸಾಗಿ ಅಲ್ಲಿಂದ ಬರುವ ಸಾಮಗ್ರಿಗಳು ಸೌದಿಗೆ ಬರುವುದು ನಿಂತಿತು. ಈ ಸಂದರ್ಭದಲ್ಲಿ ಚೀನಾ ದೇಶದ ಆಗಮನ.

ಈಗ ತಾನೇ ಮುಗಿದ ೨೦೦೯ ರಲ್ಲಿ ರಫ್ತು ಮಾಡುವ ರಾಷ್ಟ್ರಗಳ ಪೈಕಿ ಅಗ್ರಗಣ್ಯ ರಾಷ್ಟ್ರ ಜರ್ಮನಿಯನ್ನು ಚೀನಾ ಹಿಂದಿಕ್ಕಿತು. ಚೀನಾ ರಫ್ತು ಮಾಡಿದ ಮೌಲ್ಯ ಒಂದು ಟ್ರಿಲ್ಲಿಯನ್ ಡಾಲರ್. ಒಂದು (೧) ಬರೆದ ನಂತರ ಹನ್ನೆರಡು ಸೊನ್ನೆ ಹಾಕಿದರೆ ಟ್ರಿಲ್ಲಿಯನ್. ಒಂದು ಡಾಲರ್ಗೆ ೪೫ ರುಪಾಯಿಯಂತೆ ಲೆಕ್ಕ ಹಾಕಿದರೆ ನಾಲ್ಕು ಲಕ್ಷದ ಐವತ್ತು ಸಾವಿರ ಕೋಟಿ ರೂಪಾಯಿ, ಒಂದು ಟ್ರಿಲ್ಲಿಯನ್ ಗೆ.

ಅಮೇರಿಕಾ ವಿಶ್ವದ ಅತಿ ದೊಡ್ಡ ವಾಣಿಜ್ಯೋದ್ಯಮ ರಾಷ್ಟ್ರ. ನಂತರದ ಸ್ಥಾನ ಜಪಾನಿಗೆ. ಆದರೆ ಪಂಡಿತರ ಪ್ರಕಾರ ಶೀಘ್ರದಲ್ಲೇ ಜಪಾನಿನ ಸ್ಥಾನವನ್ನು ಚೀನಾ ಆಕ್ರಮಿಸಲಿದೆ. ಯಾವ ಕಾರಣಕ್ಕೂ ಅಮೇರಿಕ ತನ್ನ ಪಾರುಪತ್ಯ ಬಿಟ್ಟು ಕೊಡುವುದಿಲ್ಲ, ಹಾಗೇನಾದರೂ ಯಾರಾದರೂ ಹತ್ತಿರ ಬರುವ ಸೂಚನೆ ತೋರಿದರೂ ಯಾವುದಾರೂ ರಾಜಕೀಯ ಸಮಸ್ಯೆ ಹುಟ್ಟು ಹಾಕಿ ಆ ದೇಶವನ್ನು ಕಡಿಮೆ ಎಂದರೂ ಹತ್ತು ವರ್ಷ ಹಿಂದಿಕ್ಕಲೂ ತಯಾರು ನಮ್ಮ ಅಂಕಲ್.

ಮೊನ್ನೆ ನಮ್ಮಲ್ಲಿನ ಪಂಡಿತ ರೊಬ್ಬರು ಭಾರತ ಚೀನಾ ಹಿಂದಿಕ್ಕಿ ಬೆಳೆಯುತ್ತದೆ ಎಂದು ಭವಿಷ್ಯ ನುಡಿದಿದ್ದರು. ಈ ಭವಿಷ್ಯ ವಾಣಿಯನ್ನು ಸುಮಾರು ಏಳೆಂಟು ವರ್ಷಗಳಿಂದ ಕೇಳುತ್ತಿದ್ದೆ. ಮನಸ್ಸಿನಲ್ಲೇ ಮಂಡಿಗೆ ತಿನ್ನುವ ಜಾಯಮಾನದ ಫಲವೋ ಏನೋ ಈ ಭವಿಷ್ಯವಾಣಿಗಳು. ಆದರೂ ಕಳೆದ ದಶಕಗಳಿಗೆ ಹೋಲಿಸಿದರೆ we have come a long way ಎಂದೇ ಹೇಳಬಹುದು. ಊಹಿಸಿ, ಒಂದೊಮ್ಮೆ ಲಾಲ್ ಬಹದ್ದೂರ್ ಶಾಸ್ತ್ರಿಗಳು ಪ್ರಧಾನಿಗಳಾಗಿದ್ದಾಗ ದೇಶದಲ್ಲಿ ತಿನ್ನಲು ಧವಸ ಧಾನ್ಯಗಲಿಲ್ಲದೆ miss-a-day meal (ಒಂದು ದಿನದ ಉಪವಾಸ) ಅನುಸರಿಸಲು ಸರಕಾರ ಜನರನ್ನು ಕೋರಿತ್ತು.ಇಂದಿರಾ ಗಾಂಧಿ ಯವರು ಪ್ರಧಾನಿ ಆದ ನಂತರ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಯುಂಟಾಗಿ ಹೆಚ್ಚುವರಿ ಆಹಾರ ಉತ್ಪಾದಿಸಲು ಸಾಧ್ಯವಾಯಿತು. ಈ ಹೆಚ್ಚುವರಿ ಆಹಾರ ಬಡಬಗ್ಗರಿಗೆ ತಲುಪದಿದ್ದರೇನಂತೆ FCI Godown ಗಳಲ್ಲಿ ಶೇಖರಿಸಲ್ಪಟ್ಟ ಧಾನ್ಯಗಳನ್ನು “ಮೂಷಕ”ಪಡೆ ಗಳು ತಿಂದು ಕೊಬ್ಬಿದ್ದಂತೂ ಸತ್ಯ.

made in japan ಸರಕುಗಳದು ರಾಜ್ಯಭಾರ ಅಂದಿನ ದಿನಗಳಲ್ಲಿ. ಎಲ್ಲಾದರೂ ಅಪ್ಪಿತಪ್ಪಿ ತಾವು ಕೊಳ್ಳುವ ವಸ್ತುಗಳ ಮೇಲೆ made in japan ಶಬ್ದಗಳು ಕಾಣದಿದ್ದರೆ ಜನ ಕಂಗಾಲು. ಕೆಲವು ಜಪಾನಿ ಕಂಪೆನಿಗಳು ತಮ್ಮ ಕಾರ್ಖಾನೆಗಳನ್ನು ಸಿಂಗಪುರದಲ್ಲೂ, ಮಲೆಶ್ಯಾದಲ್ಲೂ ತೆರೆದು ಆಲಿಂದ ರಫ್ತು ಮಾಡುತ್ತಿದ್ದರು. ಅಂತ ಉತ್ಪನ್ನಗಳ ಮೇಲೆ made in japan ಮುದ್ರೆ ಇರುತ್ತಿರಲಿಲ್ಲ. matsushita electric co, japan ಅಂತ ಬರೆದು ಬೇರೆಲ್ಲಾದರೂ ಮೂಲೆಯಲ್ಲಿ made in malaysia ಎಂದು ಇರುತ್ತಿತ್ತು. ಇದನ್ನು ನೋಡಿದ ಜನ ಜಪಾನೀ ವಸ್ತುಗಳನ್ನು ಕೊಳ್ಳಲು ತಕರಾರು ಮಾಡಿದಾಗ ಜಪಾನೀ ಕಂಪೆನಿಗಳು ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಜಪಾನೀ ಕಾರ್ಖಾನೆಯ ವಸ್ತುಗಳು ಎಲ್ಲೇ ನಿರ್ಮಿತವಾದರೂ ಅವು ಉತ್ಕೃಷ್ಟ ಮಟ್ಟದಿಂದ ಕೂಡಿದ್ದು ಎಂದವು. ಹಾಗಾದರೆ ಜಪಾನೀ ವಸ್ತುಗಳಿಗಿಂತ ಇವೇಕೆ ಅಗ್ಗ ಎಂದಾಗ ಜಪಾನಿನಲ್ಲಿ ಕೂಲಿ ವೇತನ ಜಾಸ್ತಿ, ಮತ್ತು ಕಚ್ಚಾ ಪದಾರ್ಥಗಳೂ ದುಬಾರಿ, ಹಾಗಾಗಿ ಇವು ಕೈಗೆಟಕುವ ದರದಲ್ಲಿ ಲಭ್ಯ ಎಂದು ಸಮಜಾಯಿಷಿ ನೀಡಬೇಕಾಯಿತು. ಜಪಾನ್ ನಂತರ ದಕ್ಷಿಣ ಕೊರಿಯಾ ಮಾರುಕಟ್ಟೆಗೆ ಆಗಮಿಸಿ ಜಪಾನಿನ ಮೇಲಿನ ವ್ಯಾಮೋಹ ಕ್ರಮೇಣ ಜನರಲ್ಲಿ ಕಡಿಮೆಯಾಗುವಂತೆ ಮಾಡಿತು. ಕೊರಿಯಾದ ಕೈಗಾರಿಕಾ ಕ್ರಾಂತಿಯೂ ಸಹ ಭಾರತದಂಥ ರಾಷ್ಟ್ರಗಳಿಗೆ ಅನುಕರಣೀಯ. ೧೯೪೫ ರಲ್ಲಿ ವಿಶ್ವದ ಬಡ ರಾಷ್ಟ್ರಗಲ್ಲೊಂದಾಗಿದ್ದ ಕೊರಿಯಾ ತನ್ನ ಪರಿಶ್ರಮದ, ಛಲದ ಪರಿಣಾಮ ಇಂದು ಸಿರಿವಂತ ರಾಷ್ಟ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ. 

ಈಗ ಜಪಾನ್, ಕೊರಿಯಾ, ಇಂಡೋನೇಷ್ಯ  , ಮಲೇಷ್ಯಾ ಹೋಗಿ ಚೀನಾ ಗೋಡೆ ಮಾರುಕಟ್ಟೆಯಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿದೆ.       

ಪಕ್ಕದ ದೇಶದ ಸಂಪತ್ತನ್ನು ನೋಡಿ ಸಂತಸ ಪಡೋಣ ಎಂದರೆ ಆ ದೇಶಕ್ಕೆ ನಮ್ಮ ಮೇಲೆ ಅದೆಂಥದ್ದೋ ಹಗೆ, ಸಂಶಯ. ಧನದೊಂದಿಗೆ ದುರಹಂಕಾರವೂ ಬರಲೇ ಬೇಕೇನೋ. ಪ್ರಕೃತಿ ನಿಯಮದಂತೆ. ನಮ್ಮ ಪ್ರಧಾನಿ ಅರುಣಾಚಲಕ್ಕೆ ಹೋಗಬಾರದು, ನಾವು ಕಾಶ್ಮೀರದ ಪ್ರದೇಶದಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳಬಾರದು…. ಹೀಗೆ ಅವರ ಆಜ್ಞೆಗಳ ಪಟ್ಟಿ. ಅದಕ್ಕೆ ಕೋಲೆ ಬಸವನಂತೆ ಗೋಣು ಹಾಕಲು ಚಾಣಕ್ಯಪುರಿಯ ಸಾಹೇಬರುಗಳು. ಈ ರೀತಿ ಎಡ ಬಲ (ಪಾಕ್) ದಲ್ಲಿ ಶನಿಗಳು ವಕ್ಕರಿಸಿಕೊಂಡಿರುವಾಗ ಅಭಿವೃದ್ಧಿಯ ಮಾತು ದೂರವೇ  ಉಳಿಯುವುದೋ ಏನೋ?

ಒಂದು ಎರಡು ಬಾಳೆಲೆ ಹರಡು..

ನನ್ನ ಮಗಳು “ಇಸ್ರಾ” ಈಗ ಎರಡು ವರ್ಷದ ಪುಟಾಣಿ. ಪುಟು ಪುಟು ಮನೆತುಂಬಾ ಓಡಾಡುತ್ತಾ ತನ್ನ ಅಣ್ಣನನ್ನು ಕೆಣಕಿ ಸತಾಯಿಸುತ್ತಾ ಕಾಲ ಕಳೆಯುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಮನೆಯ ಹೊರಗೆ ಕಾರಿನ ಶಬ್ದ ಕೇಳುತ್ತಲೇ ತಾನೇ ಬಾಗಿಲು ತೆರೆದು ಜಿಗಿದುಬಂದು ಗೇಟಿನ ಹತ್ತಿರ ನಿಂತು ನನ್ನನ್ನು ಬರಮಾಡಿಕೊಂಡಾಗ ಎಲ್ಲಾ ಆಯಾಸವೂ ಮಾಯ. ಮಕ್ಕಳು ಮನೆಯಲ್ಲಿ ಸಡಗರವನ್ನೂ, ನಮ್ಮ ಮನದಲ್ಲಿ ಸಂತಸವನ್ನೂ ತುಂಬಿ ನಮ್ಮನ್ನು ನಮ್ಮ ಕೆಳೆದುಹೋದ ಬಾಲ್ಯದ ಕಡೆ ನೆನಪುಗಳು ಹರಿಯುವಂತೆ ಮಾಡುತ್ತಾರೆ. ಮಕ್ಕಳೊಂದಿಗೆ ಮಗುವಾಗಿ ಆಡದವರು ಯಾರು? ಒಮ್ಮೆ ಪ್ರವಾದಿಗಳು ಮಕ್ಕಳೊಂದಿಗೆ ನಗುತ್ತಾ ಮಾತನಾಡುತ್ತಾ ಅವರೊಂದಿಗೆ ಮಕ್ಕಳಂತೆ ಬೆರೆತಿದ್ದನ್ನು ನೋಡಿ ಒಬ್ಬರು ಹೇಳಿದರು, ಪ್ರವಾದಿಗಳೇ ನನಗಂತೂ ಮಕ್ಕಳೊಂದಿಗೆ ಹೀಗೆ ಇರುವುದು ಬಿಡಿ ಅವರೊಂದಿಗೆ ತಾಳ್ಮೆಯೊಂದಿಗೆ ಇರಲೂ ಸಾಧ್ಯವಿಲ್ಲ ಎಂದು. ಅದಕ್ಕೆ ಪ್ರವಾದಿಗಳು ಆ ಕರುಣಾಮಯನಾದ ಅಲ್ಲಾಹನೇ ನಿಮ್ಮ ಮನಸ್ಸಿನಲ್ಲಿ ಕರುಣೆಯನ್ನು ಹಾಕದಿದ್ದರೆ ನನ್ನಿಂದೇನು ಮಾಡಲು ಸಾಧ್ಯ ಎಂದುತ್ತರಿಸಿದರು. ನನ್ನ ಮಗಳು ಮಾತಿನಲ್ಲಿ ಸ್ವಲ್ಪ ಹಿಂದೆಯೇ ಎನ್ನಬಹುದು. ಅವಳಿಗಿಂತ ಕೇವಲ ಎರಡು ವಾರಗಳ ಹಿರಿಯನಾದ ನನ್ನ ತಂಗಿಯ ಮಗ “ಅಹ್ಮದ್” ಮಾತಿನ ಗಣಿ. ಮನೆಯಲ್ಲಿ ಕೆಲಸಕ್ಕಿರುವ ಇಂಡೊನೆಷ್ಯಾ ದೇಶದ ಮೇಡ್ ಒಂದಿಗೆ ಸೇರಿ ಅರಬ್ಬೀ ಭಾಷೆಯನ್ನೂ ಉಲಿಯುತ್ತಾನೆ. ನನ್ನ ತಂಗಿಗೆ ತನ್ನ ಮಕ್ಕಳಿಗೆ ಕನ್ನಡದ ಚಿಕ್ಕ ಪುಟ್ಟ ಕವನ ಹೇಳಿಕೊಡುವ ಚಪಲ. ತನ್ನ ಮೊದಲ ಮಗ ” ಅಯ್ಮನ್” ಒಂದು ಎರಡು ಬಾಳೆಲೆ ಹರಡು ಎಂದು ಹಾಡುವುದನ್ನು ನಮಗೆಲ್ಲಾ ಕೇಳಿಸಿ ಸಂತಸ ಪಡುತ್ತಿದ್ದಳು. ಹಾಗೆಯೇ ಅಹ್ಮದ್ ನಿಗೂ ಒಂದು ಪದ್ಯ ಹೇಳಿಕೊಟ್ಟಾಗ ಅದನ್ನು ಬಹಳ ಬೇಗ ತನ್ನ ಅಣ್ಣನಂತೆಯೇ ಕರಗತ ಮಾಡಿಕೊಂಡ. ಮೊನ್ನೆ ಅವನ ಮನೆಗೆ ಹೋದಾಗ ಅವನ ಕವನ ಗೋಷ್ಠಿ ಜೋರಾಗಿ ನಡೆಯುತ್ತಿತ್ತು… ಡಮ್ಮರೆ ಡಮ್ಮಮ್ಮ,

ಮನೆ ಸುಟ್ಟೋಯ್ತು

ಯಾರ ಮಾನೆ

ಪೂಜಾರಿ ಮಾನೆ

ಯಾವ ಪೂಜಾರಿ

ಜುಟ್ಟು ಪೂಜಾರಿ

ಯಾವ ಜುಟ್ಟು

ಕೋಳಿ ಜುಟ್ಟು

ಯಾವ ಕೋಳಿ

ಬಾತು ಕೋಳಿ

ಯಾವ ಬಾತು

ಕೇಸರಿ ಬಾತು

ಯಾವ ಕೇಸರಿ

ತಿನ್ನೋ ಕೇಸರಿ

ಯಾವ ತಿನ್ನೋದು

ಹೊಡ್ತ ತಿನ್ನೋದು…. ಹಹಹಾ ಎಂದು ಚಪ್ಪಾಳೆ ತಟ್ಟಿಕೊಂಡು ತನಗೆ ತಾನೇ ಅಭಿನಂದಿಸಿಕೊಂಡ. ನನ್ನ ಮಗಳೋ, ಇನ್ನೂ johnny johnny yes pappa ಹೇಳಲು ಒದ್ದಾಡುತ್ತಿದ್ದಾಳೆ.

ಇತ್ತೀಚೆಗೆ ಭಾರತಕ್ಕೆ ಬಂದಿದ್ದಾಗ ಒಂದು ಲಾರಿಯ ಮೇಲೆ ತೆಲುಗುವಿನಲ್ಲಿ ಇದನ್ನು ಬರೆದಿದ್ದನ್ನು ಕಂಡೆ, ” ನಿಧಾನಮು ಪ್ರಧಾನಮು” ಎಂದು. ಅವಳ ವೇಗದ ಮಿತಿಯಲ್ಲೇ ಹೋಗಲಿ ಅಲ್ಲವೇ? ತಾಳಿದವನು ಬಾಳಿಯಾನು. ನನಗಂತೂ ತಾಳ್ಮೆ ಮಂಕರಿ ತುಂಬಾ ಇದೆ… ಕೃಪೆ ನನ್ನ ಮುದ್ದಿನ ಮಗಳು.