ನಾವೀಗಲೂ ವಿಶ್ವ ವಿಜಯೀ

we are still world champs. ಭಾರತ ತಂಡದ ನಾಯಕ ಆಸ್ಟ್ರೇಲಿಯಾದವರಿಂದ ಮತ್ತೊಮ್ಮೆ ಇಕ್ಕಿಸಿಕೊಂಡ ನಂತರ ಹೇಳಿದ ಮಾತು. ಅದರ ಅರ್ಥ ಇನ್ನೂ ಮೂರು ನಾಲ್ಕು ವರ್ಷಗಳ ಕಾಲ ಸೋಲಿನ ಮೇಲೆ ಸೋಲನ್ನು ನಾವು ಅನುಭವಿಸಿದರೂ ಪರವಾಗಿಲ್ಲ, ಈಗಲೂ ನಾವು ವಿಶ್ವ ಚಾಂಪಿಯನ್ನರು.

ಗತ ಕಾಲದ ವೈಭವವನ್ನು ಮೆಲುಕು ಹಾಕುತ್ತಾ ವಾಸ್ತವದ ಬಗ್ಗೆ ಅಸಡ್ಡೆ ತೋರಿಸುತ್ತಾ ಸಾಗುವ ಸಮಾಜ ನಮ್ಮನ್ನು ಬಿಟ್ಟರೆ ಬೇರೆಯೂ ಇರಬಹುದೇ, ಅಥವಾ are we unique in this?

ಈಗ ತಾನೇ ಮುಕ್ತಾಯ ಗೊಂಡ ಆಸೀ-ಭಾರತ ನಾಲ್ಕು ಟೆಸ್ಟ್ ಗಳ ಟೆಸ್ಟ್ ಪಂದ್ಯಾವಳಿ ಕ್ರಿಕೆಟ್ ಇತಿಹಾಸದ ಕಡಿಮೆ ಸಮಯದಲ್ಲಿ ಮುಕ್ತಾಯವಾದ ಸರಣಿ ಆಗಿರಬಹುದೇ? ಏಕೆಂದರೆ ಎರಡು ಟೆಸ್ಟ್ ಗಳು ಮೂರೇ ಮೂರು ದಿನಗಳಲ್ಲಿ ಮುಕ್ತಾಯವಾದವು. ಮತ್ತೆರಡು ಟೆಸ್ಟ್ ಗಳು ನಿಗದಿತ ಸಮಯಕ್ಕಿಂತ ಬೇಗ ಮುಕ್ತಾಯವಾಯಿತು.

ಆಘಾತಕಾರೀ ಸುದ್ದಿ: ಪಾಕಿಸ್ತಾನಕ್ಕೆ ಆಘಾತಕಾರೀ ಗೆಲುವು. ಎರಡನೇ ಟೆಸ್ಟ್ ನಲ್ಲಿ ಗೆಲ್ಲಲು ಕೇವಲ ೧೪೫ ರನ್ನುಗಳ ಗುರಿ ಇಟ್ಟುಕೊಂಡಿದ್ದ ಬಲಿಷ್ಠ ಇಂಗ್ಲೆಂಡ್ ತಂಡ ಕೇವಲ ೭೨ ರನ್ನುಗಳನ್ನು ಮಾಡಿ ತನ್ನೆಲ್ಲಾ ವಿಕೆಟು ಗಳನ್ನು ತರಗೆಲೆ ಗಳಂತೆ ಉದುರಿಸಿ ಕೊಂಡಿತು. ಪಾಕಿಸ್ತಾನದ ಹಲವು ಆಟಗಾರರು ಜೈಲಿನಲ್ಲಿದ್ದರೂ, ತಂಡ ಒಗ್ಗಟ್ಟಿನಿಂದ ಆಡುವ ಅನುಮಾನವಿದ್ದರೂ, ಪಾಕ್ ಅಮೋಘ ಯಶಸ್ಸನ್ನು ಸಾಧಿಸಿತು ತನ್ನ ಮಾಜಿ ಒಡೆಯನ ವಿರುದ್ಧ. ಭಯೋತ್ಪಾದಕರ ಬೆದರಿಕೆಗೆ ತನ್ನ ನೆಲದಲ್ಲೇ ಆಡಲು ಯೋಗ್ಯತೆ ಇಲ್ಲದ ತಂಡ ಮೂರನೇ ದೇಶವೊಂದರಲ್ಲಿ, ( ನ್ಯೂಟ್ರಲ್ ಅವೆನ್ಯೂ ) ಆಡಿ ಸಾಧಿಸಿದ್ದನ್ನು ನೋಡಿದರೆ ನಾವೂ ಸಹ ಅದೇ ದಾರಿ ಏಕೆ ತುಳಿಯಬಾರದು. ನಮ್ಮ ನೆಲದಲ್ಲಿ ಆಡಿದರೂ ನಮಗೆ ಸೋಲು, ಅತಿಥೇಯ ದೇಶದಲ್ಲಿ ಆಡಿದರೂ ಸೋಲು. ನಾವೂ ಹುಡುಕೋಣ ನ್ಯೂಟ್ರಲ್ ಅವೆನ್ಯೂ ಒಂದನ್ನು, ಬಾರಿಸೋಣ ಜಯಭೇರಿಯನ್ನು.

ಬನ್ನಿ ನೋಡಿ ವಿಯೆಟ್ನಾಮ

 

 

ವಿಯೆಟ್ ನಾಮ್ ಎಂದ ಕೂಡಲೇ ಮನಃ ಪಟಲದಲ್ಲಿ ಮೂಡೋದು ಅಮೇರಿಕ. ಈ ರೀತಿ ಒಂದು ದೇಶವನ್ನು ಕಲ್ಪಿಸಿ ಕೊಂಡಾಗ ಮತ್ತೊಂದು ದೇಶ “ಬಯ್ ವನ್ ಗೆಟ್ ವನ್” ಥರ ತೇಲಿ ಬರೋದು ಬಹುಶಃ ವಿಯೆಟ್ ನಾಮ್-ಅಮೇರಿಕಾ ಜೋಡಿ ಮಾತ್ರ ಇರಬೇಕು.

“ವಿಯೆಟ್ ಕಾಂಗೋ” ಬಂಡು ಕೋರರ ಸದ್ದಡಗಿಸುತ್ತೇವೆ ಎಂದು ಬಂದ ಅಮೆರಿಕೆಗೆ ಅಲ್ಲಿ ಸಿಕ್ಕಿದ್ದು ಸಾವು, ಸೋಲು. ದಶಕಗಳಿಗೂ ಹೆಚ್ಚು ಕಾಲ ನಡೆದ ಈ ಕದನದಲ್ಲಿ ಅಮೆರಿಕೆಯ ೫೬,೦೦೦ ಸೈನಿಕರು ಹತರಾದರು. ಈ ಯುದ್ಧದಿಂದ ಅಮೇರಿಕಾ ಅದ್ಯಾವ ಪಾಠ ಕಲಿಯಿತು ಅಥವಾ ಕಲಿತಿಲ್ಲ ಎಂದು ನೋಡುವ ಕೆಲಸ ಅಲ್ಲ ಈ ನನ್ನ ಬ್ಲಾಗ್ ಬರಹ ಮಾಡುತ್ತಿರುವುದು. ‘ವರ್ಡ್ ಪ್ರೆಸ್’ ತಾಣದಲ್ಲಿ ‘ಫ್ರೆಶ್ಲಿ ಪ್ರೆಸ್ಡ್’ ಪುಟದಲ್ಲಿ ವಿಯೆಟ್ ನಾಮ್ ನ ಚಿತ್ರ ರೂಪದ ಪ್ರವಾಸ ಕಥನ ಬಂದಿತ್ತು. ಅದರಲ್ಲಿದ್ದ ಹಲವು ಚಿತ್ರಗಳಲ್ಲಿ ಮೂರು ಚಿತ್ರಗಳು (ಗ)ಮನ ಸೆಳೆದವು. ಅವನ್ನು ನಿಮ್ಮೊಂದಿಗೆ ಹಂಚಿ ಕೊಳ್ಳೋಣ ಎಂದು ತಂದಿದ್ದೇನೆ, ನೋಡಿ ಆನಂದಿಸಿ.

ಮೊದಲನೆಯ ಚಿತ್ರ, ಹಾನೋಯ್ ನಗರದಲ್ಲಿ ವ್ಯಾಯಾಮ ನಿರತ ಜನರದು. ವ್ಯಾಯಾಮ ಮುಗಿದ ನಂತರ ನಮ್ಮ ಬೆಂಗಳೂರಿನವರ ಥರ ಯಾವುದಾದರೂ ದರ್ಶಿನಿಗೆ ನುಗ್ಗಿ ಮತ್ತಷ್ಟು ಕೊಬ್ಬನ್ನು ದಯಪಾಲಿಸೋ ಉದ್ದಿನವಡೆ, ಮಸಾಲೆ ದೋಸೆ ಅಲ್ಲಿನ ಜನ ಮೆಲ್ಲುತ್ತಾರೋ ಗೊತ್ತಿಲ್ಲ.

ಎರಡನೇ ಚಿತ್ರ, ನಮ್ಮ ಬೆಂಗಳೂರಿನ ಬಡಾವಣೆ ಕಣ್ಣ ಮುಂದೆ ತರುವುದಿಲ್ಲವೇ? ಸ್ವಚ್ಛತೆ ಹೊರತು ಪಡಿಸಿ?

ಮೂರನೇ ಚಿತ್ರ, ಒಬ್ಬ ಪೋರಿಯದು. ತನ್ನ ದೇಶವನ್ನು ಆಕ್ರಮಿಸಿ, ತನ್ನ ತಾತ ಮುತ್ತಾತಂದಿರ ಬದುಕನ್ನು ನರಕವಾಗಿಸಿದರೇನು, ನನಗೆ ಅಮೆರಿಕೆಯ ಪ್ರಿನ್ಗ್ಲ್ಸ್ ಪೊಟೆಟೋ ಚಿಪ್ಸ್ ಇಷ್ಟ ಎನ್ನುವ ಫೋಸ್ ಕೊಡುತ್ತಿಲ್ಲವೇ ಈ ಪುಟ್ಟ ಹೆಣ್ಣು ಮಗು? ಈ ಚಿತ್ರವನ್ನು ನೋಡಿದ ಆಕೆಯ ತಾತ ಮುತ್ತಾತಂದಿರು ತಮ್ಮ ಸಮಾಧಿಗಳಲ್ಲಿ ನೋವಿನಿಂದ ಹೊರಳಾಡದೆ ಇರಲಾರರೇನೋ?

ಚಿತ್ರ ಕೃಪೆ: http://stoltzproject.com/

ಜೈಪುರ ಸಾಹಿತ್ಯ ಮೇಳ

• ಜೈಪುರ ಸಾಹಿತ್ಯ ಮೇಳ ಪ್ರಸಿದ್ಧಿ ಪಡೆದ ಸಾಹಿತ್ಯಾಸಕ್ತರ ಕೂಟ. ಇಲ್ಲಿ ವಿಶ್ವಾದಾದ್ಯಂತ ಪ್ರಕಾಶಿತವಾದ ಪುಸ್ತಕಗಳ ಅಮೋಘ ಸುಗ್ಗಿ ಮತ್ತು ಹೆಸರಾಂತ ಲೇಖಕರ ಸಮ್ಮಿಲನ. ಪುಸ್ತಕಗಳ Cannes ಎಂದು ಹೇಳಬಹುದು. ಸಾಮಾನ್ಯವಾಗಿ ಇಂಥ ಪುಸ್ತಕ ಮೇಳಗಳು ನೀರಸವಾಗಿ ಶುರುವಾಗಿ ಅಷ್ಟೇ ನೀರಸವಾಗಿ ಮುಗಿದು ಬಿಡುತ್ತವೆ ಕೂಡಾ. ಯಾರೋ ಸಾಹಿತ್ಯ ಪ್ರೇಮಿಗಳು, ಡಿಸ್ಕೌಂಟ್ ಪುಸ್ತಕಕ್ಕಾಗಿ ಆಸೆಯಿಂದ ಬರುವ ಒಂದಿಷ್ಟು ಜನರನ್ನು ಬಿಟ್ಟರೆ ಈ ಉತ್ಸವದ ಮೇಲಿನ ಆಸಕ್ತಿ ಗೌಣ. ಆದರೆ ಈ ಬಾರಿಯ ಮೇಳ ಸ್ವಲ್ಪ ವಿಭಿನ್ನವಾಗಿ ಆರಂಭವಾಗಿ ವಿವಾದದ ಸುಳಿಯಲ್ಲಿ ಸಿಕ್ಕಿ ಕೊಂಡಿತು. ಕಾರಣ ವಿಶ್ವ ಪ್ರಸಿದ್ಧ ಲೇಖಕ, ಕಾದಂಬರಿಕಾರ ಸಲ್ಮಾನ್ ರುಷ್ಡಿ ಈ ಮೇಳಕ್ಕೆ ಆಗಮಿಸುವ ಕಾರ್ಯಕ್ರಮ. ಕಾರ್ಯಕ್ರಮಕ್ಕೆ ರುಶ್ಡಿ ಬರಕೂಡದು ಎಂದು ಕೆಲವು ಮುಸ್ಲಿಂ ಸಂಘಟನೆಗಳು ಹೇಳಿದ್ದೆ ತಡ ರಾಜ್ಯ ಸರಕಾರಗಳು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಭೂಗತ ಲೋಕದ ಬಾಡಿಗೆ ಹಂತಕರಿಂದ ರುಶ್ಡಿ ಜೀವಕ್ಕೆ ಅಪಾಯವಿದೆ ಎಂದು ರುಶ್ಡಿ ತನ್ನ ಭಾರತ ಪ್ರಯಾಣದ ಟಿಕೆಟ್ ಗಳನ್ನು ಹರಿದು ಹಾಕುವಂತೆ ಮಾಡಿದವು. ಮಾರನೆ ದಿನ ಮತ್ತೊಂದು ಸುದ್ದಿ, ಈ ವಿಷಯ ಮುಂಬೈ ಪೊಲೀಸರಿಗೆ ತಿಳಿದೇ ಇಲ್ಲ. ಎರ್ಡೆಡ್ಲೆ ನಾಕು, ಸಲ್ಮಾನ್ ರುಶ್ಡಿ ಗೆ ಮನವರಿಕೆ ಆಯಿತು ಈ ಸುದ್ದಿ ಸುಳ್ಳೆಂದು, ತನ್ನನ್ನು ಉತ್ಸವದ ಹೊರಗಿಡಲು ಸರಕಾರ ಮಾಡಿದ ಹುನ್ನಾರ ಎಂದು.

ಭಾವನೆಗಳನ್ನ ಘಾಸಿಗೊಳಿಸುವ ಅಧಿಕಾರ ಯಾವ ಲೇಖಕನಿಗೂ ಇರಕೂಡದು. ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ವೈಚಾರಿಕ ಸ್ವೇಚ್ಚಾಚಾರಕ್ಕಿರುವ ಮುಕ್ತ ಪರವಾನಗಿ ಅಲ್ಲ. ಕ್ರಿಯಾಶೀಲತೆಯ ಹೆಸರಿನಲ್ಲಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಸೋಗಿನಲ್ಲಿ ಜನರನ್ನು ಕೆರಳಿಸುವ ಪರಿಪಾಠಕ್ಕೆ ನಾಗರೀಕ ಸಮಾಜ ಮಣೆ ಹಾಕಬಾರದು. ಸ್ವೇಚ್ಚಾಚಾರ ಅರಗಿಸಿಕೊಳ್ಳುವ ಗುಣ ನಮ್ಮ ಉಪಖಂಡದ ಜನತೆಗೆ ಇನ್ನೂ ಬಂದಿಲ್ಲ. ಕಾಲ ಬದಲಾದಾಗ ರುಶ್ಡಿ ಯಂಥವರಿಗೆ ಮನ್ನಣೆ ನೀಡೋಣ, ಅಲ್ಲಿಯತನಕ ಸಂಯಮದಿಂದ ಕಾಲದೊಂದಿಗೆ ಹೆಜ್ಜೆ ಹಾಕೋಣ.

ಹಾಗೆಯೇ ಸಲ್ಮಾನ್ ರುಶ್ಡಿ ಪ್ರಕರಣ ಪ್ರಪಂಚದ ಮೊದಲನೆಯದೂ ಅಲ್ಲ, ಕೊನೆಯದೂ ಅಲ್ಲ.

ಕೆಳಗಿನ ಲಿಂಕ್ ಕ್ಲಿಕ್ಕಿಸಿದರೆ ಪ್ರಪಂಚದಲ್ಲಿ ಇದುವರೆಗೆ ಬಹಿಷ್ಕರಿಸಲ್ಪಟ್ಟ ಕೆಲವು ಪುಸ್ತಕಗಳ ಮಾಹಿತಿ ಇದೆ. • http://www.ala.org/advocacy/banned/frequentlychallenged/challengedclassics/reasonsbanned

ಇಲ್ಲಯ್ತ್ ಒಂದ್ ತಮಾಷಿ

• ಒಬ್ಬ ತನ್ನ ಮಿತ್ರರಿಗೆ ರಾತ್ರಿಯಲ್ಲಿ ಔತಣ ನೀಡುವ ಕಾರ್ಯಕ್ರಮ ಇಟ್ಟು ಕೊಳ್ಳುತ್ತಾನೆ. ತನ್ನ ಮನೆಯಿಂದಲೇ ತನ್ನ ಹೆಂಡತಿಗೆ ಗೊತ್ತಾಗದಂತೆ ಕುರಿಯನ್ನು ಕದ್ದು ಕೊಂಡು ಹೋಗಿ ಸಖತ್ ಪಾರ್ಟಿ ಕೊಡುತ್ತಾನೆ ತನ್ನ ಮಿತ್ರರಿಗೆ.

ಪಾರ್ಟಿ ಮುಗಿಸಿ ಬೆಳಿಗ್ಗೆ ಮನೆಗೆ ಈತ ಬಂದಾಗ ಮನೆಯಲ್ಲಿ ಕುರಿ ಕಾಣುತ್ತದೆ. ಚಕಿತನಾದ ಈತ ತನ್ನ ಹೆಂಡತಿಯನ್ನ ಕೇಳುತ್ತಾನೆ, ಅಲ್ಲಾ, ಈ ಕುರಿ ಎಲ್ಲಿಂದ ಬಂತು? ಅದಕ್ಕೆ ಅವನ ಹೆಂಡತಿ ಹೇಳುತ್ತಾಳೆ……….,

ಕುರಿಗೆ ಹೊಡೆಯಿರಿ ಗೋಲಿ………., ಈಗ ಹೇಳಿ ರಾತ್ರಿ ಕಳ್ಳರ ರೀತಿ ಎಲ್ಲಿಗೆ ಕೊಂಡು ಹೋದಿರಿ ಮನೆ ನಾಯಿಯನ್ನು?

ಅ-ಣ್ಣಾ-ರಣ್ಯ ರೋದನ

ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿ ೧೯೪೨ ರಲ್ಲಿ ಆರಂಭವಾಯಿತು.  ಸ್ವಾತಂತ್ರ್ಯಕ್ಕಾಗಿನ ತುಡಿತ, ದಾಸ್ಯದಿಂದ ಬಿಡಿಸಿ ಕೊಂಡು ನಮ್ಮನ್ನು ನಾವೇ ಆಳಿಕೊಳ್ಳುವ ಮಹದಾಸೆ ಈ ಚಳುವಳಿಗೆ ಪ್ರೇರಣೆ. ಆರು ವರ್ಷಗಳ ಹೋರಾಟದ ನಂತರ ಬ್ರಿಟಿಷರು ನಮ್ಮನ್ನು ದಾಸ್ಯ ಮುಕ್ತ ಗೊಳಿಸಿದರು ೧೯೪೭ ರಲ್ಲಿ. ಸ್ವಾತಂತ್ರ್ಯ ತರುವ ಹರ್ಷ, ಪುಳಕವನ್ನು ಭಾರತೀಯರು ಅನುಭವಿಸಿದರು.  ಆದರೆ ಅರವತ್ತೈದು ವರ್ಷಗಳ ನಂತರ ನಾವು ನಮಗರಿವಿಲ್ಲದೆಯೇ ಬಾಣಲೆಯಿಂದ ಬೆಂಕಿಗೆ ಜಾರಿದ ವಾಸ್ತವದ ಅರಿವು ನಿಧಾನವಾಗಿ ಆಗ ತೊಡಗಿತು.  

೧೯೪೭ ರಲ್ಲಿ ನಮ್ಮ ಹಾಗೇ ಕಡುಬಡತನ ದಿಂದ ಬಳಲುತ್ತಿದ್ದ ದೇಶ ದಕ್ಷಿಣ ಕೊರಿಯಾ ಇಂದು ಶ್ರೀಮಂತಿಕೆಯಲ್ಲಿ ವಿಶ್ವದ ಅಗ್ರಮಾನ್ಯ ದೇಶಗಳ ಸಾಲಿನಲ್ಲಿ ನಿಂತಿದೆ. ನಮ್ಮ ನೆರೆಯ ಚೀನಾ ಪ್ರಜಾಪ್ರಭುತ್ವ, ಅದೂ, ಇದೂ ಎಂದು ಯಾವುದೇ ಸದ್ದು ಗದ್ದಲ ಮಾಡದೆ ತನ್ನಷ್ಟಕ್ಕೆ ತಾನೇ ಅಭಿವೃದ್ಧಿ ಪಥದಲ್ಲಿ ದಾಪುಗಾಲು ಹಾಕಿದೆ. ಆದರೆ ನಾವು ಮಾತ್ರ ರಾಜಕಾರಣಿ – ಅಧಿಕಾರಶಾಹಿ ಚಕ್ರವ್ಯೂಹದಲ್ಲಿ ಸಿಕ್ಕು ನರಳುತ್ತಿದ್ದೇವೆ. ಭ್ರಷ್ಟಾಚಾರ ದೇಶವನ್ನು ಅಗ್ನಿ ಪರೀಕ್ಷೆಗೆ ಒಡ್ಡಿದೆ.   

ದಿನೇ ದಿನೇ ಒಂದಲ್ಲ ಒಂದು ಹಗರಣದಿಂದ ಕಂಗೆಟ್ಟ ದೇಶಕ್ಕೆ ಆಶಾ ದೀಪವಾಗಿ ಬಂದರು ಅಣ್ಣಾ ಹಜಾರೆ. ‘ಎನಫ್ ಈಸ್ ಎನಫ್’ ಎಂದು ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದರು. ಜನರೂ ಆರಂಭದಲ್ಲಿ ಹುಮ್ಮಸ್ಸು ತೋರಿಸಿದರು. ಅಣ್ಣಾ ಜನಪ್ರಿಯತೆ ಪಡೆಯುತ್ತಿದ್ದಂತೆ ಸರಕಾರ ಎಚ್ಚೆತ್ತು ಕೊಳ್ಳಲು ಆರಂಭಿಸಿತು. ಅಣ್ಣಾ ಜೊತೆ ಮಾಜಿ ಪೊಲೀಸ್ ಅಧಿಕಾರಿ ಕಿರಣ್ ಬೇಡಿ ಸಹ ಸೇರಿಕೊಂಡರು. ಇವರು ತಮ್ಮ ಅಧಿಕಾರಾವಧಿಯಲ್ಲಿ ಎಂಥೆಂಥ ಲಂಚಗುಳಿ ಅಧಿಕಾರಿಗಳನ್ನು ಕಂಡಿರಲಿಕ್ಕಿಲ್ಲ. ಬೇಡಿ ಅವರು ಭ್ರಷ್ಟ ಅಧಿಕಾರಿಗಳ ವಿರುದ್ಧ ಸೊಲ್ಲೆತ್ತಿದ್ದು ನಾವೆಂದಾದರೂ ಕೇಳಿದ್ದೇವೆಯೇ? ಎಲ್ಲಿಂದ ಪುಟಿದೆದ್ದಿತು ಲಂಚದ ವಿರುದ್ಧ ಹೋರಾಡೋ ಹಂಬಲ? ಕಿರಣ್ ಬೇಡಿ ಮಧ್ಯೆ ಮತ್ತೊಂದು ವ್ಯಕ್ತಿ, ಅರವಿಂದ  ಕೇಜರಿವಾಲ ಅಂತೆ. ಸ್ವಾತಂತ್ರ್ಯ ಚಳುವಳಿಯಲ್ಲೋ, ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದಲ್ಲೋ, ಬೇರೆಲ್ಲೂ ಈ ವ್ಯಕ್ತಿಯ ಹೆಸರು ಕೇಳಿದ್ದಿಲ್ಲ. ಯಾರೀತ? who is this kejriwala? ‘ವೋ, ಕೇಸರಿ ವಾಲ ಹೈ’ ಎಂದು ಮೂದಲಿಸಿತು ಕಾಂಗ್ರೆಸ್.   ಇವೆಲ್ಲಾ ಆದ ನಂತರ ಜನ ರೊಚ್ಚಿಗೆದ್ದಿದ್ದನ್ನು ಗಮನಿಸಿದ ಕೇಂದ್ರದ ಆಳುವ ಪಕ್ಷಕ್ಕೆ ಈಗ ದುರ್ಬೀನಿಟ್ಟು ನೋಡ ತೊಡಗಿತು. ಅಣ್ಣಾ ಜೊತೆ ವೇದಿಕೆಯ ಮೇಲೆ ಯಾರ್ಯಾರಿದ್ದಾರೆ? ಅವರ ಹಿನ್ನೆಲೆ ಏನು? ಯಾವ ಸಂಘಟನೆಗಳ ಒಲವು ಇವರಿಗೆ? ಹಿಡ್ಡನ್ ಅಜೆಂಡಾ ಏನಾದರೂ ಇದೆಯೇ ಈ ಚಳುವಳಿ ಹಿಂದೆ? ಹೀಗೆ ನೂರೆಂಟು ಅನುಮಾನಗಳನ್ನು ಹರಿ ಬಿಟ್ಟು ಜನರನ್ನು ಕನ್ಫ್ಯೂಸ್ ಮಾಡಿ ಬಿಟ್ಟರು.  ಎಡಬಿಡದ ವಾಕ್ಪ್ರಹಾರ, ಆರೋಪ ಪ್ರತ್ಯಾರೋಪಗಳ ಗದ್ದಲದಲ್ಲಿ ಚಳುವಳಿ ತನ್ನ ಮಹತ್ವ ಕಳೆದು ಕೊಂಡಿತು. ಈ ಚಳುವಳಿಯಲ್ಲೂ ನುಸುಳಲೇ ಬೇಕಿತ್ತೆ ರಾಜಕಾರಣ?

ದಿನನಿತ್ಯ ಬದುಕಿನ ಜಂಜಾಟದಲ್ಲಿ ಸಿಕ್ಕಿ ಕೊಂಡ ಸಾಮಾನ್ಯ ಪ್ರಜೆ ಲಂಚದ ವಿರುದ್ಧ ತನ್ನದೇ ಆದ ರೀತಿಯಲ್ಲಿ ಪ್ರತಿಭಟಿಸಿದ. ಲಂಚಕ್ಕಾಗಿನ ಅಧಿಕಾರಿಗಳ  ತೀರದ  ದಾಹಕ್ಕೆ ಬೇರೆ ದಾರಿ, ಕಾಣದೇ ಮೂರು ಗೋಣಿಚೀಲ ತುಂಬಾ ಸುಮಾರು ನಲವತ್ತು ತರಾ ವರಿ, ನಮೂನೆ ನಮೂನೆ (ಥೇಟ್ ಲಂಚಗುಳಿಗಳ ಥರ) ಹಾವುಗಳನ್ನು ಸರಕಾರೀ ಕಛೇರಿಯೊಳಕ್ಕೆ ತಂದು ಗೋಣಿ ಚೀಲ ಬರಿದು ಮಾಡಿ ಬಿಟ್ಟರು ರೈತರಾದ ಹುಕ್ಕುಲ್ ಖಾನ್ ಮತ್ತು ರಾಮ್ ಕುಲ್ ರಾಮ್. ಭಯಭೀತರಾದ ಅಧಿಕಾರಿಗಳು ಓಟ ಕಿತ್ತರು. ಇದು ಹತಾಶ ಪ್ರಜೆಯ ಹತಾಶ ಪ್ರತಿಕ್ರಿಯೆ. ಇದರಿಂದ ಅಧಿಕಾರಿಗಳು ಏನಾದರೂ ಕಲಿತಾರೆಯೇ ಪಾಠವನ್ನು? no chance. ಹಾವುಗಳನ್ನು ಹರಿ ಬಿಟ್ಟ ರೈತರನ್ನೇ ಖಳ ನಾಯಕರನ್ನಾಗಿಸಿ ಬಿಡುತ್ತಾರೆ, ಈ ಹಾವುಗಳಿಗಿಂತ ಅಪಾಯಕಾರಿಯಾದ ಅಧಿಕಾರಿಶಾಹಿ ಹಾವು.        

ಲಂಚದ ಹಾವಳಿ ವಿರುದ್ಧ ನಮ್ಮಲ್ಲಿ ಬಹಳಷ್ಟು ಕಾನೂನುಗಳಿವೆ. ಕಾನೂನಿನ ಪ್ರಕಾರ ಲಂಚ ಕೊಡುವುದು ಲಂಚ ತೆಗೆದುಕೊಳ್ಳುವಷ್ಟೇ ಅಪರಾಧ. ಲಂಚಗುಳಿಗಳ ವಿರುದ್ಧ ಸಮರ ಸಾರಿದ ಅಣ್ಣಾ ಲಂಚ ಕೊಡುವವರ ವಿರುದ್ಧ ಸೊಲ್ಲನ್ನೇಕೆ ಎತ್ತುತ್ತಿಲ್ಲ, ಇದು ಕೆಲವರ ಜಿಜ್ಞಾಸೆ. ಕೊಡುವವನಿಲ್ಲದಿದ್ದರೆ ಭವತಿ ಭಿಕ್ಷಾಂದೇಹಿ ಎನ್ನುವವನ ಅಸ್ತಿತ್ವ ಇರುವುದಿಲ್ಲ, ಅಲ್ಲವೇ?  

ನಾನು ಬ್ಯಾಂಕಿನ ಕೆಲಸದ ನಿಮಿತ್ತ ಹೊರಹೋದಾಗ ಜ್ಯೂಸ್ ಕೊಳ್ಳಲು ಹೋಗುವ ಪುಟ್ಟ ಬಕಾಲಾ ಎಂದು ಕರೆಯಲ್ಪಡುವ ಮಿನಿ ಮಾರ್ಕೆಟ್ ಇದೆ. ಅಲ್ಲಿ ಸಾಮಾನ್ಯವಾಗಿ ಇರುತ್ತಿದ್ದ ವ್ಯಕ್ತಿಯೊಬ್ಬ ಕಾಣದೇ ಇದ್ದುದರಿಂದ ವಿಚಾರಿಸಿದೆ. ಆಗ ಅಲ್ಲಿ ಕೆಲಸ ಮಾಡುವ ವ್ಯಕ್ತಿ ಹೇಳಿದ, ಅವರನ್ನು ಜೈಲಿಗೆ ಹಾಕಿದಾರೆ ಎಂದು. ಅರೆ, ಜೈಲಾ, ಅಂಥ ಮನುಷ್ಯ ಅಲ್ಲವಲ್ಲಾ ಈತ ಎಂದು ನನ್ನ ಅನುಮಾನವನ್ನು ವ್ಯಕ್ತ ಪಡಿಸಿದಾಗ ಆತ ಹೇಳಿದ ಪುರಸಭೆಯಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬನಿಗೆ ೨೦೦ ರಿಯಾಲ್ ( ಸುಮಾರು ೨,೭೦೦ ರೂ. ) ಲಂಚ ಕೊಟ್ಟಿದ್ದು ಕಾರಣ ಎಂದು.

ನಮ್ಮ ಕಂಪೆನಿಯ ಮಾಲೀಕರ ಮಿತ್ರರಿಗೆ ಸಂಭವಿಸಿದ್ದು ಇದು. ಸುಮಾರು ಹತ್ತುವರ್ಷಗಳ ಹಿಂದೆ ಸೌದಿ ಅರೇಬಿಯಾದ ಮತ್ತೊಂದು ನಗರವಾದ ದಮ್ಮಾಮಿನ ಬಂದರಿನಲ್ಲಿ ವಿದೇಶದಿಂದ ಆಮದಾಗಿ ಬಂದ ಸರಕನ್ನು ಸ್ವಲ್ಪ ಬೇಗನೆ ಬಿಡಿಸಿ ಕೊಳ್ಳಲು ಅಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಗೆ ಲಂಚ ಕೊಟ್ಟರು. ಹತ್ತು ವರ್ಷಗಳ ನಂತರ ಈ ವಿಷಯ ಬೆಳಕಿಗೆ ಬಂದು ಅವರನ್ನು ಕೂಡಲೇ ದೇಶದಿಂದ ಗಡೀ ಪಾರು ಮಾಡಿದರು. ಪಾಕಿಸ್ತಾನ ಮೂಲದ ಈ ವ್ಯಕ್ತಿ ಚಿಕ್ಕ ಆಸಾಮಿ ಅಲ್ಲ. ದಮ್ಮಾಮಿನ ಬಂದರಿನಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದರು. ನಂತರ ತನಂದೆ ಆದ ಕಂಪೆನಿ ಸಹ ಆರಂಭಿಸಿದ್ದರು. ಏಕಾಯೇಕಿ ಅವರನ್ನು  ಗಡೀಪಾರು ಮಾಡಿತು ಸೌದಿ ಸರಕಾರ. ದಮ್ಮಾಮಿನ ಪಕ್ಕದ ಲ್ಲೇ ಇರುವ ಪುಟ್ಟ ಬಹರೇನ್ ದೇಶದಲ್ಲಿ ಕೂತು ತಮ್ಮ ವಹಿವಾಟನ್ನು ನಿಯಂತ್ರಿಸುತ್ತಿದ್ದಾರೆ. ಹೇಗಿದೆ, ನಮ್ಮ ಕಾನೂನು, ಅರೇಬಿಯಾದ ಸರ್ವಾಧಿಕಾರಿ ಕಾನೂನು? ಇಲ್ಲಿ ಹೊಟ್ಟೆಗೆ ಬಟ್ಟೆಗೆ ಸರಿಯಾಗಿ ಸಿಗುವುದರಿಂದ ಜನರಿಗೆ ಫ್ರೀಡಂ, ಡೆಮಾಕ್ರಸಿ ಇವುಗಳ ಚಿಂತೆ ಇಲ್ಲ. ನಮಗೆ ಫ್ರೀಡಂ ಇದ್ದರೂ ಒಂದು ನಿಸ್ಶಹಾಯಕತೆ, ಕಟ್ಟಿ ಹಾಕಲ್ಪಟ್ಟ ಭಾವ.

ಸರಿ, ಸಮಾಜದ ಎಲ್ಲ ವರ್ಗದವರನ್ನೂ ಯಾವುದೆ ಬೇಧ ಭಾವ ಇಲ್ಲದೆ ಬಾಧಿಸುವ ಈ ಲಂಚಕೋರತನ ದ ವಿರುದ್ಧದ ಹೋರಾಟ ಏಕೆ ಬಿರುಸಾಗಿಲ್ಲ? ಜನ ಏಕೆ ದೊಡ್ಡ ರೀತಿಯಲ್ಲಿ ಭಾಗವಹಿಸುತ್ತಿಲ್ಲ? ಎಲ್ಲೋ ಒಂದೆರಡು ನಗರ ಪ್ರದೇಶಗಳಲ್ಲಿ ಒಂದು ರೀತಿಯ boredom ಕಳೆಯಲೆಂಬಂತೆ ಬಂದ ಒಂದಿಷ್ಟು ಯುವಜನರು. ಅಣ್ಣಾ ಮನವಿಗೆ ಜನ ಕಿವಿಗೊಡದಿರಲು ಕಾರಣ ಭ್ರ್ಹಷ್ಟಾಚಾರದ ಬಗ್ಗೆ ಜನರಿಗೆ ಇರುವ ಪರೋಕ್ಷ ಒಲವು ಕಾರಣ ಇರಬಹುದು. ಯಾವುದೇ ಕೆಲಸ ಕೈಗೆತ್ತಿಕೊಳ್ಳಬೇಕಾದರೂ ಆ ಕೆಲಸದಲ್ಲಿ ನಮಗೆ passion ಎನ್ನುವುದು ಇರಬೇಕು. ardent passion. ಅದು ನಮ್ಮಲ್ಲಿ ಕಾಣಲು ಸಿಗಲಿಲ್ಲ ಈ ಚಳುವಳಿಯಲ್ಲಿ. ಅದೇ ಸಮಯ ನಮಗಿಷ್ಟವಾದ, ಊಟ ನಿದ್ದೆಯನ್ನೂ ತ್ಯಜಿಸಿ ಆಸಕ್ತಿ ತೋರಿಸುವ ಕ್ರಿಕೆಟ್ ಆಟದ ಕಡೆ ನಮ್ಮ ಆಸಕ್ತಿ ಸ್ವಲ್ಪ ನೋಡಿ. ಯಾವುದಾದರೂ ಪಂದ್ಯದಲ್ಲಿ ಭಾರತ ಸೋತರೆ ಪ್ರತೀ ತಿಮ್ಮ, ಬೋರ, ವೆಂಕ ಎಕ್ಸ್ಪರ್ಟ್ ಆಗಿ ಬಿಡುತ್ತಾರೆ. ಥತ್, ನಾಯಕ  ಟಾಸ್ ಗೆದ್ದು ಬ್ಯಾಟಿಂಗ್ ತಗೋ ಬೇಕಿತ್ತು, ನಾವು ಚೇಸ್ ಮಾಡಲು ನಾಲಾಯಕ್ಕು ಅಂತ ಅವ್ನಿಗ್ ಗೊತ್ತಿಲ್ವಾ….ಪಿಚ್ ತುಂಬಾ ಸ್ಲೋ ಆಗೋಯ್ತು…. ಇಬ್ಬರು ಸ್ಪಿನ್ನರ್ ಗಳನ್ನು ಆಡಿಸಬೇಕಿತ್ತು ನೋಡು….. ಅಂಪೈರ್ ಕೈ ಕೊಟ್ಟ……..ಎಲ್ಲಿಂದ ಸಿಕ್ಕುದ್ನೋ ಈ ಕೋಚು?……. D/L ಮೆಥಡ್ ಸರಿಯಿಲ್ಲ, ನಮಗೆ ಅನುಕೂಲ ಆಗ್ಲಿಲ್ಲ ಡಕ್ವರ್ಥ್ ಲೀವೈಸ್ (D/L)……. ವಾವ್, ನೋಡಿದಿರಾ ಜ್ಞಾನವನ್ನು? ಇವರ ಅನಾಲಿಸಿಸ್ ಗಳಿಗೆ ಜೆಫ್ ಬಾಯ್ಕಾಟ್, ಹರ್ಷ ಭೋಗ್ಲೆ ಯಂಥವರು ಹಿಮ್ಮೆಟ್ಟುತ್ತಾರೆ. ಆ ಪಾಟಿ ಜ್ಞಾನ. ಜೀವಮಾನದಲ್ಲಿ ಬ್ಯಾಟ್ ಹಿಡಿದಿರದ, ಪಿಚ್ ಮೇಲೆ ಹೆಜ್ಜೆಯೂರಿಲ್ಲದವರ ಅನಾಲಿಸಿಸ್ಸು ಇದು. ಅದೇ ಸಮಯ ಅಣ್ಣಾ ಹಜಾರೆ ಹೆಸರು ಕೇಳಿದ ಕೂಡಲೇ ಯಾರಪ್ಪಾ ಈ ತಾತ ಎಂದು ಗೂಗ್ಲಿಸಿ ನೋಡುತ್ತಾರೆ. ಕ್ರಿಕೆಟ್ ನ ಗೂಗ್ಲೀ ಬಗ್ಗೆ ಸರಾಗವಾಗಿ ಮಾತನಾಡುವವರು ಅಣ್ಣಾ ಬಗ್ಗೆ ತಿಳಿಯಲು ಗೂಗ್ಲ್ ಮೊರೆ ಹೋಗುತ್ತಾರೆ. ಈಗ ತಿಳಿಯಾಯಿತೆ ಮರ್ಮ? ಲಂಚದ ವಿರುದ್ಧದ ಜನರ ಆಸಕ್ತಿ ನಿರಾಸಕ್ತಿ, ಅನಾದಾರದ ಮರ್ಮ? ಇದೇ passion ತರುವ ಫಲಿತಾಂಶ. ದೇಶವನ್ನು ಕಿತ್ತು ತಿನ್ನುತ್ತಿರುವ ಭ್ರಷ್ಟಾಚಾರದ ಬಗ್ಗೆ ಕ್ರಿಕೆಟ್ ಕಡೆ ತೋರಿಸುವ ಕಿಂಚಿತ್ ಆಸಕ್ತಿಯನ್ನಾದರೂ ಜನ ತೋರಿಸಿದ್ದಿದ್ದರೆ ಬೀದಿಗಳು ಪ್ರತಿಭಟಿಸುವ ಜನರಿಂದ ತುಂಬಿ ಹೋಗುತ್ತಿದ್ದವು.  ಒಂದು ದಿನದ ಕಡ್ಡಾಯ ಓವರ್ಗಳ ಪಂದ್ಯಕ್ಕಾಗಿ ಮೈದಾನ ತುಂಬುವಂತೆ.

ಎರಡನೇ ವಿಶ್ವ ಮಹಾಯುದ್ಧದ ಹೀರೋ ವಿನ್ಸ್ಟನ್ ಚರ್ಚಿಲ್ ಅಂದಿನ ಬ್ರಿಟಿಶ್ ಪ್ರಧಾನಿ ಕ್ಲೆಮೆಂಟ್ ಅಟ್ಲೀ ಯನ್ನು  ಮನವಿ ಮಾಡಿಕೊಂಡ ಭಾರತಕ್ಕೆ ಸ್ವಾತಂತ್ರ್ಯ ಕೊಡಬೇಡ ಎಂದು. ಬಹುಶಃ ಆಳಿಕೊಳ್ಳುವ ಸಾಮರ್ಥ್ಯ ಭಾರತೀಯರಿಗೆ ಇನ್ನೂ ಬಂದಿಲ್ಲ ಎಂದು ಈ ಸಿಗಾರ್ ಪ್ರೇಮಿ ಮುತ್ಸದ್ದಿಗೆ ತೋರಿರಬೇಕು. ಹಳೇ ತಲೆಮಾರಿನ, ವಯಸ್ಸಾದ ಯಾರನ್ನೇ ಹೀಗೇ ಮಾತಿಗೆ ಕೇಳಿ, ಅಯ್ಯೋ ಬ್ರಿಟಿಷರ ಕಾರುಬಾರೆ ಚೆನ್ನಿತ್ತು ಎನ್ನದಿರಲಾರರು. ಈ ಮಾತನ್ನು ಹತಾಶ ಜನರ ಬಾಯಲ್ಲಿ ಹಾಕಿದವರು, ನಮ್ಮ ಖಾದಿಧಾರಿ ರಾಜಕಾರಣಿಗಳು. ಆದರೆ ಪ್ರಜಾ ಪ್ರಭುತ್ವಕ್ಕೆ ಅವರೇ ಜೀವಾಳ. ಶಪಿಸುತ್ತಾ, ರಮಿಸುತ್ತಾ ಅವರೊಂದಿಗೇ ಕಳೆಯಬೇಕು ಕಾಲವನ್ನು ನಾವು ಮತ್ತು ನಮ್ಮ ಪ್ರೀತಿಯ ದೇಶ.

ಒಂದು ಎಸ್ಸೆಮ್ಮೆಸ್ ಜೋಕು…

ಪತಿ ಪತ್ನಿಯರು ಕಿಡ್ನಿ ಮತ್ತು ಲಿವರ್ ಇದ್ದ ಹಾಗೆ

ಪತಿ ಲಿವರ್ ಆದರೆ, ಹೆಂಡತಿ ಕಿಡ್ನಿ

ಲಿವರ್ ಫೇಲ್ ಆದರೆ ಕಿಡ್ನಿಯೂ ಫೇಲ್, 

ಕಿಡ್ನಿ ಫೇಲ್ ಆದರೆ,

ಲಿವರ್ ಬೇರೊಂದು ಕಿಡ್ನಿಯೊಂದಿಗೆ ಹೊಂದಿಕೊಳ್ಳುತ್ತದೆ.  

 

ಮತ್ತೊಂದು:

ಮಡದಿ ವಯ್ಯಾರದಿಂದ ಗಂಡನ ಕೊರಳ ಸುತ್ತ ಬಾಹುಗಳನ್ನು ಹೆಣೆದು, ಏನೂಂದ್ರೆ, ನಾನ್ಹೇಗ್ ಕಾಣ್ತಿದ್ದೀನಿ ಎಂದು ಮತ್ತಷ್ಟು ವಯ್ಯಾರದಿಂದ ಕೇಳಿದಾಗ, ಗಂಡ ಹೇಳಿದ…

ಶಿವನ ಕೊರಳಿನ ಸುತ್ತ ಸುತ್ತಿ ಕೊಂಡ ನಾಗರದ ಥರ”

 

ನೀವು ಯಾರ ಪರ?

Bridgestone ಟೈರ್ ನವರ ಜಾಹೀರಾತು. we are by your side. ಮತ್ತೊಂದು ಕಂಪೆನಿಯೂ ಇದೇ ರೀತಿಯ ಅರ್ಥ ಬರುವ ಜಾಹೀರಾತನ್ನು ಮಾಡಿತ್ತು. ಅಮೆರಿಕೆಯ ವಿರುದ್ಧದ ೯/೧೧ ಧಾಳಿಯ ನಂತರ ಕಂಗೆಟ್ಟ ಅಮೆರಿಕೆಯ ಅಧ್ಯಕ್ಷ ಜಾರ್ಜ್ ಬುಶ್ ಕ್ರುದ್ಧರಾಗಿ ವಿಶ್ವವನ್ನು ಕೇಳಿದ್ದು ನೀವು ನಮ್ಮ ಪರವೋ, ಅಲ್ಲವೋ? ಈ ಮಾತುಗಳಿರಬೇಕು ಜಾಹೀರಾತಿಗೆ ಸ್ಫೂರ್ತಿ.

ಒಂದು ರೀತಿಯ ಬೀದಿ ಜಗಳಗಂಟರ ಟೋನ್ ಎನ್ನಬಹುದು ಜಾರ್ಜ್ ಬುಶ್ ರದು. ಆದರೆ ಅಮೆರಿಕೆಯ ಅಧ್ಯಕ್ಷ ಎಂದ ಮೇಲೆ ‘ಸಬ್ ಕುಚ್ ಚಲ್ತಾ ಹೈ’. ಅಮೆರಿಕೆಯನು ಸಾಂತ್ವನ ಗೊಳಿಸಲು ವಿಶ್ವದ ನಾಯಕರಿಗಳ ದಂಡು ಅಮೆರಿಕೆಯ ರಾಜಧಾನಿಗೆ ಬಂದಿತು. ಬಂದವರು ಶ್ವೇತಭವನದಲ್ಲಿ ಅಧ್ಯಕ್ಷರನ್ನು ಭೆಟ್ಟಿ ಮಾಡಿದ ನಂತರ ಅಲ್ಲಿ ಇರಿಸಲಾಗಿದ್ದ ದಾಖಲೆ ಪುಸ್ತಕದಲ್ಲಿ ತಮ್ಮ ಬೆಂಬಲ ಅಮೆರಿಕೆಗೆ ಸಾರಿದರು. ಈ ಘಟನೆಯ ನಂತರ, ಮತ್ತು ತನ್ನ ಅಧಿಕಾರಾವಧಿ ಉದ್ದಕೂ ಜಾರ್ಜ್ ಬುಶ್ ವಿಶ್ವಕ್ಕೆ gaffe ಗಳನ್ನು ಉಣಬಡಿಸುತ್ತಾ ಹೋದರು. ಅಂಥ gaffe ಗಳ ಬಗ್ಗೆ  ನೆನಪಾದಾಗಲೆಲ್ಲಾ ನಿಮ್ಮೊಂದಿಗೆ ಮೆಲುಕು ಹಾಕುತ್ತೇನೆ.

ಪಾಕಿಸ್ತಾನದಲ್ಲಿ ಆಂಜನೇಯ

ರಾಮಾಯಣದಲ್ಲಿ ನಮ್ಮೆಲ್ಲರ ಕಲ್ಪನೆಯನ್ನು ಹಿಡಿದಿಡುವ ಮಹತ್ತರ ಪಾತ್ರ ಎಂದರೆ ಹನುಮಂತನದು. ಸ್ವಾಮಿ ನಿಷ್ಠೆ ಮತ್ತು ಶೌರ್ಯಗಳ ಸಂಕೇತವಾದ ಹನುಮಾನ್ ಹಲವು ಹೆಸರುಗಳಿಂದ ನಮಗೆ ಪರಿಚಿತ. ಚಿಕ್ಕವನಿದ್ದಾಗ ನಮ್ಮ ನೆರೆಯವರೊಂದಿಗೆ ಭದ್ರಾವತಿ ಸಮೀಪದ ಸುಣ್ಣದ ಹಳ್ಳಿಯ ಆಂಜನೇಯನ ದೇವಸ್ಥಾನಕ್ಕೆ ಒಂದೆರಡು ಬಾರಿ ಭೇಟಿ ಕೊಟ್ಟು ದೇವಸ್ಥಾನದಲ್ಲಿ ನೇತು  ಹಾಕಿದ್ದ ಘಂಟೆ ಬಾರಿಸಿ ಪ್ರಸಾದ ಸವಿದಿದ್ದೆ. ಭಾರತದಲ್ಲಿ ಆಂಜನೇಯನ ದೇವಸ್ಥಾನಗಳಿಗೆ ಬರವಿಲ್ಲ. ಆದರೆ ಪಾಕಿಸ್ತಾನದಲ್ಲೂ ಆಂಜನೇಯನ ಇರುವಿಕೆ ಇಂದು ನನ್ನ ಕಣ್ಣಿಗೆ ಬಿತ್ತು. ಲಾಹೋರ್ ನಗರದ ಸಂಗ್ರಹಾಲಯದಲ್ಲಿ ವಿರಾಜಮಾನ ಹನುಮಂತನ ಚಿತ್ರ ಮೇಲಿನದು. 

ಚಿತ್ರ ಕೃಪೆ: ಪಾಕಿಸ್ತಾನಿ ವನಿತೆ ಮಾಹಮ್ ತಾರಿಕ್ ರವರ flikr ಖಾತೆಯಿಂದ

ಜೇಡನಿಗೂ ಇರಲೊಂದು ಸಂಕೋಲೆ

ಅಂತರ್ಜಾಲದ ಮೇಲೆ ಕಡಿವಾಣ ಹಾಕಲು ಸರಕಾರಗಳು ಯೋಚಿಸುವುದರ ವಿರುದ್ಧ ಅಂತರ್ಜಾಲದ ಮಾಹಿತಿ ಸಾಗರವಾದ ‘ವಿಕಿ ಪೀಡಿಯ’ ಸಮರವನ್ನು ಸಾರಿದ್ದು ತನ್ನ ಗೂಡಂಗಡಿಯನ್ನು ಒಂದು ದಿನದ ಕಾಲ ಬಂದ್ ಮಾಡಿ ಪ್ರತಿಭಟನೆ ವ್ಯಕ್ತಪಡಿಸಿದೆ. ಬಂದ್ ಮಾಡಿ ಪ್ರತಿಭಟನೆ ಮಾಡೋ ಕಲೆ ವಿಕಿ ಯಲ್ಲಿ ಕೆಲಸ ಮಾಡೋ ಯಾರಾದರೂ ಮಲಯಾಳೀ ಕಲಿಸಿರಬಹುದು. ಏಕೆಂದರೆ ಕೇರಳ “ಗಾಡ್ಸ್ ಓನ್ ಕಂಟ್ರಿ” ಮಾತ್ರ ಅಲ್ಲ, bandh’s own state ಸಹ ಹೌದು. ಇರಲಿ ಈಗ ಸರಕಾರಗಳ ಹಸ್ತ ಕ್ಷೇಪ ಅಥವಾ ಮೂಗು ತೂರಿಸುವಿಕೆಯ ಬಗ್ಗೆ ಮಾತನಾಡೋಣ.

ನಮ್ಮ ಕೇಂದ್ರದ ಘನ ಸರಕಾರದ ಉಸ್ತುವಾರಿ ವಹಿಸಿ ಕೊಂಡಿರುವ ಪಕ್ಷದ ನಾಯಕಿಯ ಮೇಲೆ ಬೇಡದ ಸುದ್ದಿ ಮಾಹಿತಿಗಳು ಅಂತರ್ಜಾಲದಲ್ಲಿ ಹೇರಳವಾಗಿ ಇರುವುದರ ಬಗ್ಗೆ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬ್ಬಲ್ ಸಿಟ್ಟಾಗಿದ್ದರು. ಸರಕಾರಕ್ಕೆ ಸಿಟ್ಟು ಬಂದರೆ ಸಿಟ್ಟನ್ನು ಶಮನ ಮಾಡಲು ಸುಲಭ ಉಪಾಯ ಹುಡುಕುತ್ತಾರೆ. ಅಂತರ್ಜಾಲವನ್ನೇ ನಿಯಂತ್ರಿಸಿ ಬಿಡೋದು. ಅರಬ್ ದೇಶಗಳಲ್ಲಿ ಕೆಲ ತಿಂಗಳುಗಳಿಂದ ನಡೆಯುತ್ತಿರುವ ಕ್ರಾಂತಿಗೂ ಅಂತರ್ಜಾಲ ಕಾರಣ ಎಂದು ಎಲ್ಲರಿಗೂ ಗೊತ್ತು, ಆಳುವವರಿಗೂ, ಆಳಿಸಿ ಕೊಳ್ಳುವವರಿಗೂ, ಆದರೂ ಇಲ್ಲಿ ಯಾರೂ ಅಂತರ್ಜಾಲವನ್ನು ನಿರೋಧಿಸುವ ಸಾಹಸ ಮಾಡಲಿಲ್ಲ, ಸಾಕಷ್ಟು despotic ಅಧಿಕಾರಗಳಿದ್ದೂ ಸಹ. ನಮ್ಮದು ಪ್ರಜಾತಂತ್ರ, (ಹೆಸರಿಗೆ ಮಾತ್ರ ಪ್ರಜಾ ತಂತ್ರ, ಏಕೆಂದರೆ ಪ್ರಜೆಗೆ ತಂತ್ರ ಏನೂ ಗೊತ್ತಿಲ್ಲ, ಗೊತ್ತಿರೋದೆಲ್ಲಾ ಪ್ರಭುಗಳಿಗೆ) ಆದರೂ ರಂಗೋಲಿ ನುಸುಳಿ ನಿರ್ಬಂಧ ಹೇರಲೇ ಬೇಕು ಎಂದರೆ ಐಡಿಯಾ ಹೊಳೆಯದೆ ಇರುತ್ತದೆಯೇ? ಏನೂ ಸಿಗದಿದ್ದರೂ ಭಯೋತ್ಪಾದನೆ ಎನ್ನೋ ಬೆದರುಬೊಂಬೆ ಸಾಕು, ಜನ ತಮ್ಮ ಎಲ್ಲಾ ಸ್ವಾತಂತ್ರ್ಯಗಳನ್ನೂ ಸರಕಾರದ ಕೈಗಳಿಗೆ ಒತ್ತೆ ಇಡಲು.  

ತಮ್ಮ ಸಮಯಸಾಧಕತನ, ಮೋಸ, ದಗಲಬಾಜಿ ಇವುಗಳು ಸಾಂಗವಾಗಿ ನಡೆದು ಕೊಂಡು ಹೋಗಲು ಅಂತರ್ಜಾಲದ ಬಾಲ ಕತ್ತರಿಸಲು ಸರಕಾರಗಳು ಹವಣಿಸಿದರೆ ನನ್ನಂಥ  “ಆಮ್ ಆದ್ಮಿ” (ಮಾವಿನ ಮನುಷ್ಯ ಅಲ್ಲ ರೀ, ಸಾಮಾನ್ಯ ಮನುಷ್ಯ) ಏನೂ ಮಾಡಲಾರ, ಕೆಳಗೆ ಕಾಣಿಸಿದ ಒಂದು “ಕೊಂಡಿ” ಯ ಭಿನ್ನಹ ಸರಕಾರಗಳಿಗೆ ಕೊಡಮಾಡುವುದರ ಹೊರತು,

 www.en.wikipedia.org/wiki/middlefinger

ಇವುರ್ಗೇನ್ ಲಾಬ ಅಂತೀನಿ

“ವರ್ಡ್ ಪ್ರೆಸ್” ಉಚಿತವಾಗಿ ಬ್ಲಾಗ್ ಆರಂಭಿಸಲು ಅನುವು ಮಾಡಿ ಕೊಡುವ ಒಂದು ಸುಂದರ ವೆಬ್ ವ್ಯವಸ್ಥೆ. ಹೊಸ ಹೊಸ ಫೀಚರ್ ಗಳಿಂದ ಕಂಗೊಳಿಸುವ ಈ ತಾಣ ಈಗ ಬರಹಗಾರರನ್ನು ಹುರಿದುಂಬಿಸಲು ಡ್ಯಾಶ್ ಬೋರ್ಡ್ ನ ಎಡ ಭಾಗದ ಕಾಲಂ ನಲ್ಲಿ ನಾವು ಪೋಸ್ಟ್ ಮಾಡಿದ ಬ್ಲಾಗ್ ಬಗ್ಗೆ ವಿವರ ನೀಡುತ್ತಿದೆ. ನನ್ನ ಡ್ಯಾಶ್ ಬೋರ್ಡ್ ನಲ್ಲಿ ಹೀಗಿತ್ತು, ೩೧೨ ಪೋಸ್ಟ್ಗಳು ಬಂದಿವೆ, ಮುಂದಿನ ಗುರಿ ೩೧೫ ಪೋಸ್ಟ್ಗಳು ಎಂದು. ಇದೊಂದು ರೀತಿಯ ಸ್ಫೂರ್ತಿದಾಯಕ ವ್ಯವಸ್ಥೆ ಅಲ್ಲವೇ? ಆದರೆ ಹೀಗೆ ಮಾಡೋದ್ರಿಂದ ಅವರಿಗೆ ಸಿಗುವ ಲಾಭವಾದರೂ ಏನು? ನಮ್ಮ ಬರಹ ಯಾವುದರ ಬಗ್ಗೆ ಇರುತ್ತದೆ ಎಂದು ಗೂಢಚರ್ಯೆ ನಡೆಸಿ ನಮ್ಮ ತಿಕ್ಕಲುತನವನ್ನು ಕಂಪೆನಿಗಳಿಗೆ ಮಾರುತ್ತಾರೋ ಏನೋ, ಅಲ್ಲವೇ? “There ain’t no such thing as a free lunch” ಅಥವಾ there is no free lunch in this world ಅಂತಾರೆ. ಬಿಟ್ಟಿ ಕೂಳು ಸಿಗಾಕ್ಕಿಲ್ಲ ಈ ಪರ್ಪಂಚದಾಗೆ, ಅಲ್ವರ?