ಈ ಭಾವನೆ ಎಲ್ಲರಲ್ಲೂ ಇದ್ದಿದ್ದರೆ?

ಮಹಾಕಾವ್ಯ ಮಹಾಭಾರತವನ್ನು ವಿಮರ್ಶಿಸಿ ಒಬ್ಬರು ಲೇಖನದ ಬರೆದರು. ಅದರಲ್ಲಿ ಮಹಾಭಾರತ ವನ್ನು ಸ್ವಲ್ಪ ಕಟುವಾಗಿ ಟೀಕಿಸಲಾಗಿತ್ತು. ಓದಿದ ಒಬ್ಬರು ಈ ಲೇಖನಕ್ಕೆ ಪ್ರತಿಕ್ರಯಿಸಿದ್ದು ಹೀಗೆ.

“ಯಾವುದೋ ಕಾಲದ ಪುರಾಣದ ಕತೆಗಳನ್ನು ತೆಗೆದುಕೊಂಡು, ನಮ್ಮ ಮನಸಿಗೆ ಕಾಣುವುದೆ ಸತ್ಯವೆಂದು ನಿರ್ದರಿಸಿ, (ನಾವು ಯಾರು ಆಗಿನ ಕಾಲಕ್ಕೆ ಹೋಗಿ ಸತ್ಯವೇನೆಂದು ಅರಿಯಲಾರೆವು, ಏನು ನಡೆಯಿತೆಂದು ತಿಳಿಯಲಾರೆವು), ಈಗಿನ ವಾತವರಣ ಕಲುಶಿತಗೊಳಿಸುತ್ತ ಹೋಗುವ ಅರ್ಥವಾದರು ಏನು . ನಿಮಗೆ ಕೃಷ್ಣ ರಾಮರು ಬೇಡ ಬಿಡಿ. ಆದರೆ ಯಾವುದು ಸತ್ಯ ತಿಳಿಸಿ, ಅದನ್ನೆ ಎಲ್ಲರಿಗು ಹೇಳಿ, ನಿಮ್ಮ ದಾರಿಗೆ ಕರೆದೊಯ್ಯಿರಿ, ಆದರೆ ಯಾವುದನ್ನೊ ನಿಂದಿಸುತ್ತ, ಅವರ ನಂಭಿಕೆಯನ್ನು ದ್ವೇಶಿಸುತ್ತ ಇದ್ದಲ್ಲಿ, ಅವರು ನಿಮ್ಮ ಭಾವನೆಗಳನ್ನು ಹೇಗೆ ಗೌರವಿಸುತ್ತಾರೆ. ದ್ವೇಶದಿಂದ ದ್ವೇಶವೆ ಹುಟ್ಟುತ್ತದೆ, ನಿಂದನೆಯಿಂದ ನಿಂದನೆಯಿ ಹುಟ್ಟುತ್ತದೆ, ಮತ್ತೆ ಕಡೆಯದಾಗಿ ಪ್ರೀತಿಯಿಂದ ಪ್ರೀತಿಯೆ ಹುಟ್ಟುತ್ತದೆ.”

ಸತ್ಯವಾದ ಮಾತುಗಳು. ಹಳೆಕಾಲದ ರಾಜರ ಪ್ರಮಾದಗಳನ್ನು ಇತಿಹಾಸ ಎಂದು ವಿಷ ಸೇರಿಸಿ ವಿಕೃತ ಇದೇ ಇತಿಹಾಸ ಎಂದು ಸುಖ ಕಾಣುವ ‘ಇತಿಹಾಸ್ಯ’ ಕಾರರು, ಆ ಇತಿಹಾಸ್ಯ ಓದಿ ಇಂದಿನ ಪೀಳಿಗೆಯವರನ್ನು ಗೋಳು ಹೊಯ್ದು ಕೊಳ್ಳುವ ತರಲೆಗಳು, ಪತ್ರಿಕಾ ಧರ್ಮದ ಗಂಧ ಗಾಳಿಯಿಲ್ಲದೆ ಧ್ವೇಷ ತುಂಬಿದ ಲೇಖನಗಳನ್ನು ರಚಿಸುವ ‘ಪೋಸ್ಟರ್ ಬಾಯ್’ ಗಳು ತಮ್ಮ ಮನಸ್ಸು ಮತಿಯ ಮೇಲೆ ಅಚ್ಚೊತ್ತ ಬೇಕಾದ ಮಾತುಗಳು ಮೇಲಿನವು.

…….ಇದ್ದಿದ್ದ ‘ರೆ’? ಈ ತಲೆಬರಹದ ‘ರೆ’ ಬರೀ ಆಶಯವಾಗಿರದೆ ‘ಖರೆ’ಯಾದರೆ ನಮ್ಮ ದೇಶ ಇನ್ನೂ ಚೆಂದ.

ಜನರಿಗೆ ಭಯಪಡುವ ಮುಖ್ಯ ಮಂತ್ರಿ

ಇಂದು ಬೆಳಿಗ್ಗೆ ಮಲಯಾಳಿ ಒಬ್ಬಾತ ನಡೆಸುವ ಬುಫಿಯಾ ಎಂದು ಕರೆಯಲ್ಪಡುವ ಚಾದಂಗಡಿಯ ಟೀವಿಯಲ್ಲಿ ಕೇರಳದ ನೂತನ ಮಖ್ಯ ಮಂತ್ರಿಗಳ ಸಂದರ್ಶನವನ್ನು ಕೈರಳಿ ಚಾನಲ್ ನ ಬಾತ್ಮೀದಾರ ನಡೆಸುತ್ತಿದ್ದನ್ನು ವೀಕ್ಷಿಸಿದೆ. ಎರಡನೇ ಬಾರಿಗೆ ಮು. ಮಂತ್ರಿಯಾದ ಊಮ್ಮನ್ ಚಾಂಡಿ ಅನುಭವೀ ರಾಜಕಾರಣಿ.

ಬಾತ್ಮೀದಾರ ಕೇಳಿದ ಪ್ರಶ್ನೆಗಳಿಗೆ ವಿಚಲಿತನಾಗದೆ ನೇರವಾಗಿ ಉತ್ತರ ನೀಡುತ್ತಿದ್ದ ಮು. ಮಂತ್ರಿಗಳು ಕೆಲವೊಂದು ಕ್ಲಿಷ್ಟಕರ ಪ್ರಶ್ನೆಗಳನ್ನು ಎದುರಿಸಿದರು. ಕೇವಲ ಎರಡು ಶಾಸಕರ ಹೆಚ್ಚಳದ ಬಹುಮತ ಹೊಂದಿರುವ ಕಾಂಗ್ರೆಸ್ ಸಮ್ಮಿಶ್ರ ಸರಕಾರ ಎಡರು ತೊಡರು ಗಳನ್ನು ಕಾಣದು ಎನ್ನುವುದು ಇವರ ವಿಶ್ವಾಸ. ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಯಾರಿಗೂ ಭಯ ಪಡುವ ಅವಶ್ಯಕತೆ ಎನಗಿಲ್ಲ ಎಂದಾಗ ಮು. ಮಂತ್ರಿಗಳನ್ನು ಬಾತ್ಮೀದಾರ ಕೇಳಿದ, ಭಯವಿಲ್ಲ ಎಂದಿರಲ್ಲ ಯಾರ ಭಯವೂ ಇಲ್ಲವೇ? ಆಗ ಮು. ಮಂತ್ರಿಗಳು ಹೇಳಿದ್ದು “ನನಗೆ ದೇವರ ಮೇಲೆ ಭಯ ಮತ್ತು ಜನರ ಭಯ ಇದೆ, ಅಷ್ಟೇ”.  

ಮಂತ್ರಿಗಳಿಗೆ ಇರಬೇಕಾದ ಅರ್ಹತೆಗಳ ಕುರಿತು ಕೇಳಲಾಗಿ integrity, common sense ಇದ್ದರೆ ಕೆಲಸ ಸುಗಮ ಎಂದರು. ಒಳ್ಳೆಯ ಮಾತುಗಳೇ. ಆದರೆ ಅವರು ಹೇಳಿದ ಈ ಎರಡು ಗುಣದ್ವಯಗಳು ರಾಜಕಾರಣಿ ಅಥವಾ ಮಂತ್ರಿ ಮಹೊದಯರುಗಳಲ್ಲಿ ಇದ್ದಿದ್ದರೆ ನಮ್ಮ ದೇಶ ಹೀಗೆ ಇರುತ್ತಿತ್ತೇ?    

ಕೊನೆಗೆ ಮುಖ್ಯಮಂತ್ರಿಗಳು ಸಂದರ್ಶನದ ಅವಧಿಯಲ್ಲಿ ದೇವರ ಪ್ರಸ್ತಾವನೆ ಮಾಡಿದ್ದನ್ನು ಮತ್ತೊಮ್ಮೆ ಕೆದಕುತ್ತಾ ಆತ ಕೇಳಿದ ಇಂದು ಬೆಳಿಗ್ಗೆ ದೇವರಲ್ಲಿ ಏನನ್ನು ಬೇಡಿ ಕೊಂಡಿರಿ ಎಂದು. ಅದಕ್ಕೆ ಊಮ್ಮನ್ ಚಾಂಡಿ ನೀಡಿದ ಉತ್ತರ “ಯಾವುದೇ ನಿರ್ದಿಷ್ಟ ಬೇಡಿಕೆ ಇಟ್ಟುಕೊಂಡು ನಾನು ದೇವರಲ್ಲಿ ಕೇಳೋಲ್ಲ, ನಾನು ಮಾಡುವ ಕೆಲಸಗಳು ಸರಿಯಾದ ಮಾರ್ಗದಲ್ಲಿ ಇರಲು ಸಹಕರಿಸು ಎಂದು ಮಾತ್ರ ಕೇಳಿ ಕೊಳ್ಳುತ್ತೇನೆ”.  

ಅತ್ಯಂತ ಸರಳವಾಗಿ ಬದುಕುವ, ತಲೆ ಸಹ ಬಾಚದ, ಇಸ್ತ್ರಿ ಹಾಕಿದ ಬಟ್ಟೆ ಧರಿಸದ, ದೇವರನ್ನು ಭಯಪಡುವ ದೈವ ಭಕ್ತ, ಜನರಿಗೆ ಹೆದರುವ ಪ್ರಜಾಪತಿ ಕೇರಳ ರಾಜ್ಯವನ್ನ ಅಭಿವೃದ್ಧಿ ಪಥದತ್ತ ಮುನ್ನಡೆಸಲಿ ಎಂದು ಹಾರೈಸೋಣ.

ಬೇಡದ ಕಡೆ ತಲೆ ಹಾಕಿದ ಕರಡಿ

ನಮಗೆ ಅವಶ್ಯಕತೆ ಇರದ ಕಡೆ ತಲೆ ಹಾಕಬಾರದು ಎಂದು ಹಿರಿಯರ ಬುದ್ಧಿವಾದ. ಕಿತಾಪತಿ ಮಾಡುವವರನ್ನು ಕಂಡರೆ ಹೇಳುತ್ತಾರೆ ಬೇಡದೆ ಇರೋ ಜಾಗದಲ್ಲಿ ತಲೆ ಹಾಕೋದು ಅಂದ್ರೆ ಇವ್ನಿಗೆ ತುಂಬಾ ಇಷ್ಟ ಎಂದು ತೆಗಳೋದನ್ನೂ ನಾವು ಕೇಳಿದ್ದೇವೆ. ಆದರೆ ಇಲ್ಲಿ ಬೇಡ ಕಡೆ ತಲೆ ಹಾಕಿ ಮಂಗಳಾರತಿ ಮಾಡಿಸಿ ಕೊಂಡಿದ್ದು ಹುಲು ಮನುಜನಲ್ಲ. ಬದಲಿಗೆ ಮೈ ತುಂಬಾ ಕೇಶ ಇಟ್ಟುಕೊಂಡು ನಮ್ಮ ಮಕ್ಕಳಿಗೆ ಬೊಂಬೆ ರೂಪದಲ್ಲೂ, ನಿಜ ರೂದಲ್ಲೂ ಕಚಗುಳಿ ಇಡುವ ಜಾಂಬವ. ಕರಡಿ.

ಫ್ಲೋರಿಡಾ ರಾಜ್ಯದಲ್ಲಿರುವ “ಒಕಾಲಾ” ನಗರದಲ್ಲಿ ವಾಸಿಸುವ ಕರಡಿಯೊಂದು ತನ್ನ ತಲೆಯನ್ನು ಪ್ಲಾಸ್ಟಿಕ್ ಬಾಟಲಿ ಯೊಂದರಲ್ಲಿ ಸಿಕ್ಕಿಸಿಕೊಂಡು ಪರದಾಡಿತು. ಪೂರ್ತಿ ಹತ್ತು ದಿನ. ಓಹ್, ಹತ್ತು ದಿನಗಳ ಮನುಷ್ಯನ ನಿರ್ಲಕ್ಷ್ಯೆ ಕಾರಣ  ಕಾಲ ತಿನ್ನಲು, ಕುಡಿಯಲು ಆಗದೆ ಒದ್ದಾಡಿದ ಕರಡಿಗೆ ಕೊನೆಗೆ ಮುಕ್ತಿ ಸಿಕ್ಕಿದ್ದೂ ಭಾಗ್ಯಕ್ಕೆ ಮನುಷ್ಯನಿಂದಲೇ. ಪ್ರವಾಸದ ವೇಳೆ ಹೋದ ಹೋದೆಡೆ ನಮ್ಮ ಗಾರ್ಬೇಜ್ ಎಳೆ ದು ಕೊಂಡು ಹೋಗುವ ನಮಗೆ ನಿಸರ್ಗದ ಕಡೆ ನಮಗಿರುವ ಬೇಜವಾಬ್ದಾರಿತನಕ್ಕೆ ಪ್ರವಾಸ ಅಥವಾ ಪರ್ಯಟನ ಕಳೆದು ಬರುವಾಗ ನಮ್ಮ ಹಿಂದೆ ಬಿಟ್ಟು ಹೋಗುವ ತಿಪ್ಪೆಗಳೇ ಸಾಕ್ಷಿ.

ಜೆಡ್ಡಾ ದಿಂದ ಸುಮಾರು ೨೦೦ ಕಿ.ಮೀ ಇರುವ ನಮ್ಮ ಕೆಮ್ಮಣ್ಣು ಗುಂಡಿಯನ್ನು ಹೋಲುವ “ತಾಯಿಫ್” ಭೇಟಿಯ ವೇಳೆ ಬೆಟ್ಟದ ಕೆಳಗಿನ ದಾರಿಯಲ್ಲಿ ಒಂದು ಮರವನ್ನು ಕಂಡೆ. ಸಾಮಾನ್ಯವಾಗಿ ಮರ ಎಂದ ಮೇಲೆ ಎಲೆಗಳು ಇದ್ದೇ ಇರುತ್ತವೆ, ಅಲ್ಲವೇ? ಸಖೇದಾಶ್ಚರ್ಯ, ಇದೊಂದು ವಿಚಿತ್ರ ಮರವಾಗಿ ಕಂಡಿತು ನನಗೆ. ಮರದ ಟೊಂಗೆಯ ತುಂಬಾ ಬಣ್ಣ ಬಣ್ಣದ, ವಿವಿಧ ಆಕಾರದ, ಗಾತ್ರದ ಚೀಲಗಳು. ಪ್ಲಾಸ್ಟಿಕ್ ಚೀಲಗಳು. ಸಂಪೂರ್ಣ ಮರವನ್ನು ಆವರಿಸಿ ಬಿಟ್ಟಿತ್ತು. ಗಾಡಿಯಲ್ಲಿ ಹೋಗುವಾಗ ಮೇಯೋದು, ತದನಂತರ ಬಿಡೋದು ಗಾಳಿ ಪಟವ. ಅಲ್ಲಲ್ಲ, ಪ್ಲಾಸ್ಟಿಕ್ ಪಟವ. ಸ್ವಲ್ಪ ದೂರ ಹೋದ ನಂತರವೇ ನನ್ನ ಮಂದ ಮಾತಿಗೆ ತೋಚಿದ್ದು ಒಹ್, ಈ ಮರದ ಚಿತ್ರವೊಂದನ್ನು ಕ್ಲಿಕ್ಕಿಸಬೇಕಿತ್ತು ಎಂದು.       

ತನ್ನ ಸುಂದರ ಮೂತಿಯನ್ನು ಈ ಪ್ಲಾಸ್ಟಿಕ್ ಬಾಟಲಿಗೆ ಸಿಕ್ಕಿಸಿಕೊಂಡ ಕೇವಲ ಆರು ತಿಂಗಳ ಹಸುಳೆ ಕರಡಿಗೆ ವನ್ಯ ಜೀವಿ ಸಂರಕ್ಷಕರು ಬಂದು ಮೊದಲು ಪಕ್ಕದಲ್ಲೇ ಇದ್ದ ಅದರ ತಾಯಿಗೆ ಶಾಂತ ಗೊಳಿಸುವ ಚಚ್ಚು ಮದ್ದನ್ನು ನೀಡಿ ಪ್ಲಾಸ್ಟಿಕ್ ಮುಕ್ತ ಗೊಳಿಸಿದರು. ಅವರ ಪ್ರಕಾರ ಆ ಕರಡಿ ಒಂದೆರಡು ದಿನಗಳಲ್ಲಿ ಸಾಯುತ್ತಿತ್ತಂತೆ ಬಾಟಲಿ ಕಾರಣ  ತಿನ್ನಲು ಕುಡಿಯಲು ಆಗದೆ.     

ಚಿತ್ರ ಕೃಪೆ: http://www.newstimes.com/news/article/Plastic-jar-removed-from-Fla-bear-cub-s-head-615774.php#photo-3

ತಲೆ ಕೂದಲು ನೆರೆತರೆ…

ತಲೆ ಕೂದಲು ನೆರೆತರೆ ಫಾರ್ಮಸಿಗೆ ಓಡ ಬೇಡಿ hair dye ಕೊಳ್ಳಲು. ನೆರೆ, ಕ್ಯಾನ್ಸರ್ ವಿರುದ್ಧ ಕವಚವಂತೆ. ಜಪಾನೀ ಸಂಶೋಧಕರ ಶೋಧನೆ. ಇಲಿಗಳ ಮೇಲೆ ನಡೆಸಿದ ಪ್ರಯೋಗದಿಂದ ಈ ಸುಳಿವು ಸಿಕ್ಕಿದ್ದು.

ಮುಂದಿನ ಗುರಿ ಚರ್ಮ ಸುಕ್ಕುಗಟ್ಟಿದರೆ ಅದ್ಯಾವ ರೋಗಕ್ಕೆ ಕವಚ ಎಂಬುದು. ಹೊಸ ಹೊಸ ಪ್ರಯೋಗಗಳು, ನವನವೀನ ಶೋಧನೆಗಳು. ರೋಗಗಳಿಗಂತೂ ಬರವಿಲ್ಲ. swine flu, H1N1, mad cow disease, rift valley fever ಇತ್ಯಾದಿ ಇತ್ಯಾದಿ.