TBA ಅಂದ್ರೆ ಏನು?

ಹೀಗೇ ಬ್ರೌಸ್ ಮಾಡ್ತಾ ಇದ್ದಾಗ ಒಂದು ವೆಬ್ ತಾಣದಲ್ಲಿ release date TBA ಅಂತ ಕಣ್ಣಿಗೆ ಬಿತ್ತು. ಹಾಗೇ ಗೆಸ್ ಮಾಡ್ದೆ. ಏರ್ಲೈನ್ಸ್ ನ parlance ನಲ್ಲಿ ETA ಅಂದ್ರೆ EXPECTED TIME OF ARRIVAL. ಇದೇನಿರಬಹುದು TBA? ಸರಿ TBA ಅಂದ್ರೆ ಬಹುಶಃ TO BE ANNONCED ಅಂತ ಇರಬೇಕು ಎಂದು ಆ ವೆಬ್ ತಾಣದಲ್ಲಿ ಇದ್ದ ವಿಷಯವನ್ನ ಗ್ರಹಿಸಿ contextual ಆಗಿ ಊಹಿಸಿದೆ. ಊಹೆಗೆ ಒಂದು ಸಮರ್ಥನೆ ಬೇಕಲ್ಲ, ಅದಕ್ಕೆ ತಾನೇ ಗೂಗ್ಲ್  ಇರೋದು. ಬಾಕುಲ್ ತೆಗಿ ಸೇಸಮ್ಮ ಎಂದ ಕೂಡಲೇ ಗುಹೆಯ ಬಾಗಿಲು ತೆರೆದುಕೊಂಡ ಹಾಗೆ ಗೂಗ್ಲ್ ಮೊರೆ ಹೋದೆ. ಅರರೆ, ಸರಿಯಾಯಿತಲ್ಲ ನನ್ನ ಊಹೆ. ಹೌದ್ರೀ, TBA ಅಂದ್ರೆ to be announced. ಯಾವುದಾದರೂ ಚಿತ್ರ ಬಿಡುಗಡೆ ಯಾಗುವಾಗ, CD ಬಿಡುಗಡೆ ಆಗುವಾಗ TBA ಅಂತ ಕಣ್ಣಿಗೆ ಬಿದ್ರೆ ಅದರರ್ಥ ಬಿಡುಗಡೆ ದಿನಾಂಕ TO BE ANNOUNCED ಅಂತ. IAS ಪರೀಕ್ಷೆಯಲ್ಲಿ ಈ ಪ್ರಶ್ನೆ ಬಂದರೆ ಉತ್ತರಿಸುವಿರಿ ತಾನೇ?

ವಯಸ್ಸೇ, ರಿಲಾಕ್ಸ್ ಪ್ಲೀಸ್

ಕಲಿಕೆಗೆ ವಯಸ್ಸೆನ್ನುವ ಕಾಲಮಾಪನ ಬೇಡ. ನಮಗೆ ಬೇಕಿರುವುದು ಕಲಿಯಲು ಬೇಕಾದ ಉತ್ಕರ್ಷೆ ಮಾತ್ರ. ಕೆಲವರಿಗೆ ಅದೇನೋ ಒಂದು ರೀತಿಯ ಸಂಶಯ, ನಾನಗೆ ಮೂವತ್ತಯ್ದಾಯ್ತು, ಐವತ್ತಾಯ್ತು, ನನ್ನಿಂದ ಇದು ಮಾಡಲು ಸಾಧ್ಯವೇ, ಜನ ಏನೆಂದು ಕೊಂಡಾರು…ಹೀಗೆ ಹತ್ತು ಹಲವು ನಮ್ಮನ್ನು ಹಿಂದಕ್ಕಟ್ಟುವ ವಿಚಾರಗಳು ಹಿಂಬಾಲಿಸುತ್ತವೆ ನಮ್ಮ ಮನಸ್ಸಿನ ಆಸೆಗಳಿಗೆ ತಣ್ಣೀರೆರೆಚಲು. ಜನ ಏನನ್ನಾದರೂ ಅಂದು ಕೊಳ್ಳಲಿ, ನೀವು ಮಾಡೋದು ನಿಮ್ಮ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ತಾನೇ? ಮತ್ತೇಕೆ ಜಗದ ಹಂಗು? ಕೆಳಗಿನ ಕೊಂಡಿಗಳನ್ನು ನೋಡಿ ಮತ್ತು ಸಿದ್ಧರಾಗಿ ಕಲಿಯಬೇಕಾದ್ದನ್ನು ಕಲಿಯಲೂ, ಹಿಮಾಲಯವನ್ನು ಮಣಿಸಲೂ.

http://www.dailymail.co.uk/news/article-1036526/91-year-old-war-veteran-oldest-person-collect-PhD-Cambridge-University.html

http://ibnlive.in.com/news/100yearold-indian-freedom-fighter-pursues-phd/133246-3.html

Holding a grudge….

ಎಷ್ಟು ಸತ್ಯ ನೋಡಿ, ಮೇಲಿನ ಮಾತುಗಳು. ದೇವರು ಮನುಷ್ಯರನ್ನು ಕ್ಷಮಿಸುತ್ತಾನಂತೆ, ಆದರೆ ಮನುಷ್ಯ ಮಾತ್ರ ಕ್ಷಮಿಸಲಾರ. ಹಳೆಯಕಾಲದ, ಓಬೀರಾಯನ ಕಾಲದಲ್ಲಿ ನಡೆದ, ನಡೆಯದ ಘಟನೆಗಳ ಬಗ್ಗೆ ಸೇಡಿನ ಮನೋಭಾವದಿಂದ ತಿರುಗುವ ಮನುಷ್ಯನಿಗೆ ಧ್ವೇಷ, ಹಗೆ, ಸೇಡು ಇವು ತನ್ನ ವ್ಯಕ್ತಿತ್ವವನ್ನೇ ಸುಟ್ಟು ಹಾಕುವ ಬೆಂಕಿ ಎಂದು ತಿಳಿಯುವ ದಿನ ಯಾವಾಗ ಬರಬಹುದು?

ಮೊಬೈಲ್ ಕಂಪೆನಿಗಳ ಮೋಸದ ವ್ಯಾಪಾರ

ನಮ್ಮ ದೇಶ ಮೊಸಗಾರಿಕೆಗೆ ಹೆಸರುವಾಸಿ. ಇದನ್ನು ಹೇಳುವುದಕ್ಕೋ, ಒಪ್ಪಿಕೊಳ್ಳುವುದಕ್ಕೋ ಯಾವ ಡೋಂಗಿ  ಅಭಿಮಾನವೂ ಅಡ್ಡ ಬರಬೇಕಿಲ್ಲ. ಭಾರತದಿಂದ ಹೊರಗಿರುವ, ವಿದೇಶದಲ್ಲಿ ದುಡಿಯುವ ಜನಕ್ಕೆ ಇಲ್ಲಿನ ಮೋಸ ಬಹಳ ಬೇಗನೆ ತಿಳಿಯುತ್ತದೆ. mobile ಬಗ್ಗೆ ಹೇಳಿದರೆ roaming, std, incoming charge, outgoing, charge, pulse rate, minute rate ತರಾವರಿ ಟೋಪಿಗಳು. ಕೆಲವೊಮ್ಮೆ ನಿಮಗೆ ತಿಳಿಯದಂತೆ ನಿಮ್ಮ ಖಾತೆಯಿಂದ ಹಣ ಮಾಯ. ನಮ್ಮ ಭೂ ಸಂಪತ್ತು, ಖನಿಜ ಸಂಪತ್ತು, ವನ ಸಂಪತ್ತು ಹೀಗೇ ಕಣ್ಣಿಗೆ ಕಂಡ ಸಂಪತ್ತೆನ್ನೆಲ್ಲಾ ರಾಜಕಾರಣಿಗಳ ಜೊತೆ ಸೇರಿ ಹಗಲು ದರೋಡೆ ಮಾಡಿದ ಮಹನೀಯರುಗಳು ನಮ್ಮ ಜೇಬಿನಲ್ಲೋ, ಮೊಬೈಲ್ ನಲ್ಲೋ ಅಳಿದುಳಿದ ಚಿಕಾಸುಗಳಿಗೂ ಕೈ ಹಾಕುತ್ತಿದ್ದಾರೆ ಎಂದರೆ ನಾಚಿಕೆ ಆಗುತ್ತದೆ.

ಯೋಚಿಸಿ, ಸುಮಾರು ೬೦ -೭೦ ಕೋಟಿ ಮೊಬೈಲ್ ಕನೆಕ್ಷನ್ ಗಳಿಂದ ದಿನಕ್ಕೆ ಐದೋ ಹತ್ತು ಪೈಸೆಯೂ ಕದ್ದರೂ ಸಾಕಲ್ಲವೇ? ರಿಂಗ್ ಟೋನ್ ವ್ಯಾಪಾರದ ಜೊತೆಗೇ ಹಾದರ ಬೇರೆ. ಹುಡಗಿಯರ ಮಾತನ್ನಾಡಿಸುವ ಸೌಕರ್ಯ ಕೂಡಾ.

ಈಗ ದೇಶವನ್ನು ೨೨ ವೃತ್ತಗಳನ್ನಾಗಿ ವಿಂಗಡಿಸಿ ರೋಮಿಂಗ್ ಅನ್ವಯ ಮಾಡಿದ್ದರು. ಅದನ್ನು ತೆಗೆದು ಹಾಕಿ ಇಡೀ ದೇಶವೇ ಒಂದು ವಲಯವನ್ನಾಗಿ ಘೋಷಿಸುತ್ತಾರಂತೆ. ಅಥವಾ ಧನಪಿಶಾಚಿ ಕಂಪೆನಿಗಳ ಧನ ದಾಹ ತಣಿಸಲು ಕನಿಷ್ಠ ದೇಶವನ್ನು ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸುತ್ತಾರಂತೆ.  ಇನ್ನು ಇದರ ವಿರುದ್ಧ ಮೊಬೈಲ್ ಕಂಪೆನಿಗಳು, ಅವರ ಚೇಲಾಗಳು ನ್ಯಾಯಾಲಯದ ಕಟ್ಟೆ ಹತ್ತಿ ಈ ನಿಯಮ ನೆನೆಗುದಿಗೆ ಬೀಳುವಂತೆ  ಮಾಡುತ್ತಾರೋ ಏನೋ.

ಯೇಗ್ದಾಗೆಲ್ಲಾ ಐತೆ..ಓದಲೇಬೇಕಾದ ಪುಸ್ತಕ

ಯೇಗ್ದಾಗೆಲ್ಲಾ ಐತೆ, ಪುಸ್ತಕವನ್ನು ಮಂಗಳೂರಿನ ಕನ್ನಡ ಪುಸ್ತಕ ಪ್ರದರ್ಶನದಲ್ಲಿದ್ದ ಮಳಿಗೆಯೊಂದರಿಂದ ಖರೀದಿಸಿದೆ. ಮಾರಿದ ವ್ಯಕ್ತಿ ಪುಸ್ತಕದ ಬಗ್ಗೆ ಪ್ರಶಂಸೆಯ ಮಾತುಗಳನ್ನು ಹೇಳಿದ್ದರಿಂದಲೂ, ಪುಸ್ತಕ ನಿರೀಕ್ಷೆಗೆ ನಿಲುಕದೆ ಇದ್ದರೆ ಹೋಗುವುದು ಐವತ್ತು ರೂಪಾಯಿ ತಾನೇ ಎನ್ನವ nonchalant ಧೋರಣೆಯಿಂದ ಪುಸ್ತಕವನ್ನ ಖರೀದಿಸಿದೆ. ಹಳ್ಳಿಯ ಮಾಸ್ತರರೊಬ್ಬರ ಅನುಭವ ಕಥನ ಈ ಪುಟ್ಟ ಪುಸ್ತಕ. ಗ್ರಾಮವೊಂದರಲ್ಲಿ ಯೋಗಿಯೊಬ್ಬನೊಂದಿಗಿನ ತಮ್ಮ ಸ್ನೇಹದ ಬಗ್ಗೆ, ತಮಗಾದ ಅನುಭವದ ಬಗ್ಗೆ ಸರಳವಾಗಿ ಬರೆದಿದ್ದಾರೆ.  

ಮುಕುಂದನ ಹಳ್ಳಿಯ ಈ ಸ್ವಾಮೀ ಒಬ್ಬ ಸರಳ ಸನ್ಯಾಸಿ. ಕಳ್ಳ ಸನ್ಯಾಸಿ, ಭಂಗಿ, ಗಾಂಜಾ ಸೇದುವವನು, “ಭಕ್ತರ ಮನೆಯ ಮುದ್ದೆ, ಬಸವಿ ಮನೆಯ ನಿದ್ದೆ”….   ಹೀಗೇ ವಿನಾಕಾರಣ ಪುರಾವೆಗಳಿಲ್ಲದೆ ಅವರನ್ನು ಜನ ತೆಗಳಿದರೂ (ಯಾರೋ ಹೇಳಿದ್ದನ್ನು, ಹೇಳಿ ಕೊಟ್ಟಿದ್ದನ್ನು ನಂಬಿ prejudiced ಆಗೋ ವಿದ್ಯಾ?ವಂತ ಸಮೂಹ ನಮ್ಮ ನಡುವೆ ಇರುವಾಗ ಗ್ರಾಮಸ್ಥರ ವರ್ತನೆ ಬಗ್ಗೆ ಅಚ್ಚರಿ ಪಡಬೇಕಿಲ್ಲ ) ಅದ್ಯಾವುದನ್ನೂ ಕಿವಿಗೆ ಹಾಕಿ ಕೊಳ್ಳದೆ ಮೇಷ್ಟ್ರು ತಮ್ಮ ಸ್ನೇಹವನ್ನು ಅವರೊಂದಿಗೆ ಮುಂದುವರೆಸುತ್ತಾ ಬದುಕು ಒಂದು ಒಂದು ಭ್ರಮೆ ಎಂದು ಕಂಡು ಕೊಳ್ಳುತ್ತಾರೆ. 

ಮುಕುಂದನ ಹಳ್ಳಿಯ ಸ್ವಾಮಿಗಳಿಗೆ ಬದುಕಿನ ಬಗ್ಗೆ ಸರಳವಾಗಿ, ಜನರ ದೈನಂದಿನ ಬದುಕಿನೊಂದಿಗೆ ತಳುಕು ಹಾಕಿ ವಿನೋದವಾಗಿ, ಮನದಟ್ಟಾಗುವಂತೆ ಹೇಳುವ ಸಾಮರ್ಥ್ಯ ತಮ್ಮ ಅಲೆದಾಟದಷ್ಟೇ ಸುಲಭ. ಒಮ್ಮೆ  ವ್ಯಕ್ತಿಯೊಬ್ಬ ಬಂದು ಯಾರೋ ಸತ್ತು ಹೋದರು ಎನ್ನುವ ಸುದ್ದಿಯನ್ನ ಇವರಿಗೆ ತಲುಪಿಸುತ್ತಾನೆ. ಸತ್ತು ಹೋದ ಎನ್ನುವ ಪದ ಕೇಳಿದ ಕೂಡಲೇ ಹೌಹಾರಿದಂತೆ ನಟಿಸಿದ ಸ್ವಾಮಿಗಳು, ಅದ್ಹೇಗಯ್ಯಾ, ಅವನೆಲ್ಲಾದರೂ ಸತ್ತು ಹೋಗಲು ಸಾಧ್ಯವೇ ಎಂದು ಕೇಳುತ್ತಾರೆ. ಸ್ವಾಮಿಗಳ ಈ ಪ್ರಶ್ನೆಯ ಮರ್ಮ ಅರಿಯದ ಹಳ್ಳಿಗ ಮತ್ತಷ್ಟು ವಿವರಿಸುತ್ತಾನೆ. ಆದರೂ ಸ್ವಾಮಿ ಜಪ್ಪಯ್ಯ ಅನ್ನುವುದಿಲ್ಲ. ಎಲ್ಲಾದರೂ, ಯಾರಾದರೂ ಸತ್ತು ಹೋಗೋದಿದೆಯೇ? ಇಷ್ಟೆಲ್ಲಾ ವರ್ಷ ಬಾಳಿ  ಬದುಕಿದವನು ಅಷ್ಟು ಸಲೀಸಾಗಿ “ಸತ್ತು ಹೋಗು” ವನೆ? ಎಂದು ಕೇಳಿ ಅವನನ್ನು ಮತ್ತಷ್ಟು ಗಲಿಬಿಲಿಗೊಳಿಸುತ್ತಾರೆ.  “ಸತ್ತು ಹೋಗು’ ಎನ್ನುವ ಪದದ ಹಿಂದಿನ ಗೂಢಾರ್ಥವನ್ನು ಸ್ವಾಮಿಗಳಂಥ ವರಿಗೆ ಅರಿಯುವುದು ಸುಲಭ. ಉಸಿರಾಟ ನಿಂತು ಬಿಟ್ಟರೆ ಅವನು ಸತ್ತ ಎಂದು ಬಗೆಯುವ ಹಳ್ಳಿಯ ನಿರಕ್ಷರ ಕುಕ್ಷಿಗೆ ಹೇಗೆ ತಾನೇ ತಿಳಿಯಬೇಕು ಸಾವು ಮತ್ತೊಂದು ಬದುಕಿನೆಡೆಗಿನ ಪಯಣ ಎಂದು ? ಹೌದಲ್ಲವೇ? ದೀರ್ಘಾವಧಿ ಬಾಳಿ ಬದುಕಿದ  ಮಾಡಬೇಕಾದ್ದನ್ನೂ, ಮಾಡಬಾರದ್ದನ್ನೂ ಎಲ್ಲಾ ಮಾಡಿದ ಮನುಷ್ಯ ಸದ್ದಿಲ್ಲದೇ “ಸತ್ತು ಹೋಗಲು” ಹೇಗೆ  ಸಾಧ್ಯ? ಬದುಕಿನ ಮತ್ತು ಸಾವಿನ ನಿಜರೂಪವನ್ನು ಸ್ವಾಮಿಗಳು ಲೀಲಾಜಾಲವಾಗಿ ನಗುತ್ತಾ ಹಾಸ್ಯದಿಂದ ವಿವರಿಸುತ್ತಾರೆ ಸಾವಿನ ಸುದ್ದಿ ತಂದಾತನಿಗೆ.

ನದಿಯಲ್ಲಿ ನೀರಿನ ಹರಿವನ್ನು ನೋಡುತ್ತಾ, ಅದರೊಂದಿಗೆ ಹೊರಡುವ ನೀರ ಗುಳ್ಳೆಗಳೂ ಸ್ವಾಮಿಗಳ ಆಸಕ್ತಿ,  ಕಲ್ಪನೆಯನ್ನು ಹಿಡಿದಿಡುತ್ತವೆ. ಕ್ಷಣ ಮಾತ್ರ ಬದುಕುವ ಆ ಗುಳ್ಳೆಗಳ ಹಿಂದಿನ ಮರ್ಮವನ್ನೂ, ನಮ್ಮ ಬದುಕಿನ ಟೊಳ್ಳುತನ ದೊಂದಿಗೆ ಹೋಲಿಸಿ ಗಾಂಭೀರ್ಯ ಮಿಳಿತ ನಗುವಿನೊಂದಿಗೆ ಬಿಡಿಸಿ ಹೇಳುತ್ತಾರೆ. ಒಟ್ಟಿನಲ್ಲಿ ಒಂದು ಚೆಂದದ ಪುಟ್ಟ ಪುಸ್ತಕ.  ಒಂದು ರೀತಿಯಲ್ಲಿ reader’s digest ಓದಿದ ಹಾಗುತ್ತದೆ ಸ್ವಾಮಿಗಳ ಮಾತು, ಅನುಭವ ನೋಡಿದಾಗ. ಇಂಥ ನಿಸ್ವಾರ್ಥಿ ಸಾಧಕರಿಂದಲೇ ಇರಬೇಕು ನಮ್ಮ ಸಮಾಜ ಒಳ್ಳೆಯತನವನ್ನು ತನ್ನಲ್ಲಿ ಇನ್ನೂ ಉಳಿಸಿಕೊಂಡು ಬರುತ್ತಿದೆ. ಆದರೆ ಇವರುಗಳ ಸಂಖ್ಯೆ ಕ್ಷೀಣಿಸುತ್ತಿರುವುದೂ ಸಹ ತುಂಬು ಬದುಕು ಸಾಗಿಸಿದ ಸ್ವಾಮಿಗಳ ಮಾತುಗಳಷ್ಟೇ ಸತ್ಯ.

ಮನುಷ್ಯರೆಲ್ಲರೂ ಸಮಾನರು ಎಂದು ಸ್ವಾಮಿಗಳು ಹೇಳುವ ರೀತಿ ಇಲ್ಲಿದೆ ನೋಡಿ;

“ಊರು ಕೇರಿ, ಕುಲ ಗೋತ್ರ ಹೆಣ್ಣು ಗಂಡು ಎಲ್ಲಾ ಇಂಗಡಿಸ್ತಾರೆ. ನಾವು ಶಿವಾಚಾರ್ದೋರು, ನಾವು ದೇವಾಂಗ ದೋರು, ನಾವ್ ಬ್ರಾಮಣರು, ಅದರಾಗ್ ಮತ್ತೆ ನಾಮ್ದೋರು, ಅಡ್ಡ ಗಂಧದೋರು, ಮುದ್ರೆರು, ಅವ್ರು ಇವ್ರು ಒಬ್ಬರನ್ನ ಕಂಡ್ರೆ ಒಬ್ರು ಮಾರು ದೂರ ಹೋಗ್ತಾರೆ. ಮಾಡಿ ಮೈಲಿಗೆ ಅಂತಾರೆ, ನಗು ಬರ್ತೈತೆ……..ಈ ಮುದ್ರೆ, ವಿಭೂತಿ ಎಲ್ಲಾ ಅಷ್ಟೇ. ಬಾರೆ ಹೊರಗಳ ಯಾಪಾರ ಹಿಡಿದು ಬಡಿದಾಡ್ತಾರೆ” ಈ ಮಾತನ್ನು ಆಧುನಿಕ ಸ್ವಾಮಿಗಳಿಗೆ ಕೇಳಿಸಿದರೆ ಯಾವ ಉತ್ತರ ಸಿಗಬಹುದೋ?    

ಸ್ವಾಮಿಗಳ  ಕೆಲವೊಂದು ಸಂಗತಿಗಳು ಉತ್ಪ್ರೇಕ್ಷೆ ಎಂದು ತೋರಿದರೂ ಈ ಭಾವನೆ ಮತ್ತು ದಂತ ಕಥೆಗಳು ದೇವ ಮಾನವರಿಗೆ ಜನ ಅಂಟಿಸಿಯೇ ತೀರುತ್ತಾರೆ. ಅವನು ಕುಡುಕ, ಭಂಗಿ, ಗಾಂಜಾ ಹಾಕುವವನು ಎಂದೆಲ್ಲಾ ಜರೆಯುವ ಅದೇ ಬಾಯಿ ಅವರ ಪವಾಡಗಳ ಬಗ್ಗೆಯೂ ಭಯ ಭಕ್ತಿಯಿಂದ ಮಾತನಾಡುತ್ತಾರೆ, ಅದೇ ಸೋಜಿಗ.

ಹಳ್ಳಿಗಳಲ್ಲಿ ಈಗ ಅಪರೂಪವಾಗುತ್ತಿರುವ ಸಾಮರಸ್ಯದ ಜೀವನ ಸಹ ಈ ಮೇಷ್ಟರ ನೆನಪಿನಂಗಳದಿಂದ ಮರೆಯಾಗುವುದಿಲ್ಲ. ಮುಸ್ಲಿಮರಾದರೂ ಹಯಾತ್ ಸಾಹೇಬರು ಹಳ್ಳಿಯಲ್ಲಿನ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕೊಡುತ್ತಿದ್ದ ಸಹಾಯ, ಗ್ರಾಮಸ್ಥರ ಮೂಢ ನಂಬಿಕೆಗಳು ಹೀಗೇ ಹತ್ತು ಹಲವು ವಿಚಾರಗಳನ್ನು ಜೋಪಾನದಿಂದ ಓದುಗರಿಗಾಗಿ ಕಾಯ್ದುಕೊಂಡು ನಮ್ಮ ಕೈಗಳಿಗರ್ಪಿಸಿದ ಕೃಷ್ಣ ಶಾಸ್ತ್ರಿಗಳು ಮಹದುಪಕಾರವನ್ನೇ ಮಾಡಿದ್ದಾರೆ ಈ ಪುಸ್ತಕ ಬರೆಯುವ ಮೂಲಕ. ಈ ಪುಸ್ತಕ ಆಂಗ್ಲ ಭಾಷೆಗೆ ತರ್ಜುಮೆಗೊಂಡಿದೆಯೋ ಗೊತ್ತಿಲ್ಲ. ತರ್ಜುಮೆ ಆಗದ ಪಕ್ಷದಲ್ಲಿ ಯಾರಾದರೂ ಈ ಮಹತ್ಕಾರ್ಯಕ್ಕೆ ಕೈ ಹಾಕಿದರೆ ಈ ಪುಸ್ತಕ ಹಿಟ್ ಆಗುವುದರಲ್ಲಿ ಸಂಶಯವಿಲ್ಲ.   

ಒಬ್ಬ ನಿರಕ್ಷರಕುಕ್ಷಿ ಆದರೆ ಬದುಕಿನ ನಿಜವಾದ ಪಾಠದಲ್ಲಿ ಅದ್ವಿತೀಯ professor ಆದ ಸ್ವಾಮಿಯೊಬ್ಬರ ಪರಿಚಯ ನನ್ನಲ್ಲಿ ಒಂದು ಅವರ್ಣನೀಯವಾದ ಭಾವವನ್ನೇ ಸೃಷ್ಟಿಸಿತು. ರಾಜಕಾರಣಿಗಳ ಒಡನಾಟದಿಂದ ನಾಡಿನ ಸಂಪನ್ಮೂಲ ಲೂಟಿ ಮಾಡುವ ಕೆಲವು ಸ್ವಾಮಿಗಳಿಗೂ ಈ ಮುಕುಂದೂರಿನ ಸ್ವಾಮಿಗೂ ಎತ್ತಣ ಸಂಬಂಧ ಎಂದು ತೋರಿದರೂ ಆಶ್ಚರ್ಯವಿಲ್ಲ. ಒಬ್ಬ ಅಹಂಕಾರಿ, ಸ್ವಾಮಿಯೊಬ್ಬ ತನ್ನ ಮಠಕ್ಕೆ ಬಂದು ಪೊಗರು ತೋರಿಸಿದರೂ ತನ್ನ ಸಂಸ್ಕೃತಿ ಕಲಿಸಿದ ವಿನಯ ವಿಧೇಯತೆ ಯನ್ನ ಮೋಹಕವಾಗಿ ಪ್ರದರ್ಶಿಸಿ ಮನಃಪೂರ್ವಕ ಆ ಸ್ವಾಮಿಯ ಸೇವೆ ಮಾಡುವ ಇವರ ಉದಾತ್ತ ಸಂಸ್ಕಾರ ನಮ್ಮನ್ನು ನಿಬ್ಬೆರಗಾಗಿಸುತ್ತದೆ. ಅಹಂಕಾರಿಗೆ ಅಹಂಕಾರವೇ ಉತ್ತರ ಎನ್ನುವ ನಮಗೂ ಆ ಸ್ವಾಮಿಗೂ ಇರುವ ವ್ಯತ್ಯಾಸ ನೋಡಿ.

ನನ್ನ ಆಸಕ್ತಿಯನ್ನು ಈ ಪುಟ್ಟ ಪುಸ್ತಿಕೆ ಈ ರೀತಿ ಹಿಡಿದಿಡುತ್ತದೆ ಎಂದು ಪುಸ್ತಕ ಕೊಂಡಾಗ ನನಗನ್ನಿಸಿರಲಿಲ್ಲ. ಸಾಧು ಸಂತರ ಬಗ್ಗೆ ದೊಡ್ಡ ಒಲವು ಆಸಕ್ತಿ ಇಲ್ಲದ ನನಗೆ ಒಬ್ಬ ಸಾಧಾರಣ, ಪ್ರಚಾರ ಫಲಾಪೇಕ್ಷೆ ಬೇಡದ ಸ್ವಾಮಿಯೊಬ್ಬರ ಪರಿಚಯ ಆದದ್ದು ಒಂದು ಅಪರೂಪದ ಅನುಭವವೇ ಸರಿ. ಕೊನೆಯದಾಗಿ ಇಲ್ಲಿದೆ ಮತ್ತೊಂದು ಬದುಕನ್ನು ಸಕರಾತ್ಮಕವಾಗಿ ಕಾಣಬೇಕೆಂದು ಹೇಳುವ ಮಾತು.

ಒಮ್ಮೆ ತನ್ನ ಮೂರು ವರ್ಷದ ಮಗು ಗುಲಾಬಿ ಕೀಳಲು ಗಿಡದ ಕಡೆ ಹೋಗುತ್ತಿದ್ದನ್ನು ಕಂಡ ಮಗುವಿನ ತಾಯಿ “ಅಯ್ಯೋ, ಅಯ್ಯೋ, ಮುಳ್ಳು, ಮುಳ್ಳು, ಮುಟ್ಟಬೇಡ ಎಂದು ಮಗುವನ್ನು ತಡೆದುದನ್ನು ಕಂಡ ಸ್ವಾಮಿಗಳು ಹೇಳಿದ್ದು, ಅಮ್ಮಯ್ಯಾ, ಆ ಮಗುವಿಗೆ ಹೂವಿನ ಗಿಡದಾಗೆ ಮುಳ್ಳು ಐತೆ ಅಂತ ಹೇಳ್ಕೊಡಬ್ಯಾಡ, ಮುಳ್ಳಿನ ಗಿಡ್ಯಾಗೆ ಹೂ ಐತೆ ಅಂತ ಹೇಳ್ಕೊಡಬೇಕು ಎಂದು ನಗುತ್ತಾ ಹೇಳುತ್ತಾರೆ. ಈ ಮಾತು ನಾವು ಕಲಿತ “half glass full” ಗಿಂತ ಮನೋಹರವಾಗಿಲ್ಲವೇ?

ದಿವಾಳಿ ಮತ್ತು ದಿವಾಲಿ

ಕನ್ನಡಿಗರು ಕರೆಯುವ ದೀಪಾವಳಿ ಗೆ ಹಿಂದಿ ಹೆಸರು ದಿವಾಲಿ. ಈ ಹಬ್ಬ ದಲ್ಲಿ ಧನ ದೇವತೆ ಲಕ್ಷ್ಮಿ ಯನ್ನ ಒಲಿಸಿಕೊಂಡು ತಮ್ಮ ತಮ್ಮ ಧಂಧೆ ಗಳಲ್ಲಿ ಲಾಭ ಬಯಸುತ್ತಾರೆ. ಅದೇ ಸಮಯ ಹಿಂದಿಯಲ್ಲಿ ಅರಿಯಲ್ಪಡುವ ದಿವಾಲಿ ಪದದ “ಲ” ಕಾರ ಮತ್ತು “ಳ” ಕಾರದಲ್ಲಿ ಸ್ವಲ್ಪ ಏರುಪೇರಾಗಿ ದಿವಾಳಿ ಆಗಿಬಿಟ್ಟರೆ, ಹಬ್ಬದ ಒಟ್ಟು ಉದ್ದೇಶವೇ “ದಿವಾಳಿ” ಎದ್ದಂತೆ ಅಲ್ಲವೇ? ತಿಳಿದೂ ತಿಳಿದೂ ದಾರಿದ್ರ್ಯವನ್ನು ಮನೆಯೋಲಕ್ಕೂ, ಧಂಧೆ ಯೊಳಕ್ಕೂ ಬಿಟ್ಟುಕೊಂಡಂತೆ. ದೀಪಾವಳಿ ಹಬ್ಬವನ್ನು ನಾಡಿನ ಎಲ್ಲ ಸಮುದಾಯದವರೂ ಉತ್ಸಾಹದಿಂದ ಆಚರಿಸಿದರು. ಬೆಳಕಿನ ಹಬ್ಬ ಸಾಮರಸ್ಯದ ಹಬ್ಬವಾಗಲಿ ಎಂದು ಹಾರೈಸುತ್ತಾ….

extra:  ಹಿಂದೂ ದೇವ ದೇವತೆಗಳಿಗೆ ವಾಹನಗಳು ಇರುತ್ತವೆ. ಗಣೇಶನಿಗೆ “ಮೂಷಕ” ವಾಹನ, ಇಂದ್ರನಿಗೆ, ಐರಾವತ, ಇಂದ್ರನಿಗೆ ಸಪ್ತ ಹಂಸಗಳು, ಶಿವನಿಗೆ ನಂದಿ, ಹೀಗೆ….ಈಗ ಧನ ದೇವತೆ ಲಕ್ಷ್ಮಿಯ ವಾಹನ ಊಹಿಸಿ? ಕಮಲ ಮತ್ತು ಗೂಬೆ.

ಬಹುಪತ್ನಿತ್ವ ಮತ್ತು popular perception

ಬಹುಪತ್ನಿತ್ವ ಎಂದ ಕೂಡಲೇ popular perception ಮುಸ್ಲಿಮರು ಒಂದಕ್ಕಿಂತ ಹೆಚ್ಚು ಮದುವೆ ಯಾಗುವವರು ಎಂದು. ಈ ತಪ್ಪು ತಿಳಿವಳಿಕೆಗೆ ಜನರ ತಿಳಿಗೇಡಿತನಕ್ಕಿಂತ ಮಾಧ್ಯಮಗಳ ಮತ್ತು ಹಗೆ ವರ್ತಕ ರಾಜಕಾರಣಿಗಳ ಕುಚೋದ್ಯದ ಅಪಪ್ರಚಾರ ಕಾರಣ ಎನ್ನಬಹುದು. ಹೌದು ಇಸ್ಲಾಂ ಬಹುಪತ್ನಿತ್ವ ವನ್ನು ಅನುಮತಿಸುತ್ತದೆ ಷರತ್ತುಗಳೊಂದಿಗೆ. ಈ ಶರತ್ತುಗಳೇ ನನ್ನಂಥ ಮತ್ತು ಶೇಕಡಾ 90 ಕ್ಕಿಂತ ಹೆಚ್ಚು ಮುಸ್ಲಿಂ ಪುರುಷರು ಒಂದಕ್ಕಿಂತ ಹೆಚ್ಚು ಹೆಂಡಿರನ್ನು ಹೊಂದಲು ಇಷ್ಟ ಪಡದೆ ಇರುವುದು. ದೇವ ವಾಣಿ “ಪವಿತ್ರ ಕುರ್’ ಆನ್” ನಲ್ಲಿ ವಿಶ್ವಾಸ ಇಡುವ ಮುಸ್ಲಿಮನೊಬ್ಬ ದೇವರು ವಿಧಿಸಿದ ಶರತ್ತುಗಳನ್ನು ಅವಗಣಿಸಿ ತನ್ನ ಶಾರೀರಿಕ ತೃಷೆಗಾಗಿ ಪಾಪವನ್ನು ತನ್ನ ಮೇಲೆ ಹೇರಿಕೊಳ್ಳಲಾರ. ಹಾಗೆಯೇ ಬಹುಪತ್ನಿತ್ವ ಇಸ್ಲಾಮಿನ prerogative ಮಾತ್ರ ಅಲ್ಲ ಎಂದು ಈ ಕುರಿತು ನಡೆದ ಅಧ್ಯಯನಗಳು ಸ್ಥಿರೀಕರಿಸುತ್ತವೆ.

ಹಿಂದೂ ಧರ್ಮೀಯರ ಬೌಧಾಯನ ಧರ್ಮಶಾಸ್ತ್ರದಲ್ಲಿ ಬ್ರಾಹ್ಮಣರು ನಾಲ್ಕು ಹೆಂಡಿರನ್ನೂ, ಕ್ಷತ್ರಿಯ ಮೂರು, ವೈಶ್ಯ ಎರಡು ಮತ್ತು ಶೂದ್ರ ಒಂದು ಹೆಣ್ಣನ್ನು ಮದುವೆಯಾಗಬಹುದು. ಭಗವಾನ್ ಶ್ರೀ ಕೃಷ್ಣನೂ, ಮತ್ತು ಪಾಂಡವರೂ ಬಹುಪತ್ನಿತ್ವವನ್ನು ಆಚರಿಸಿದವರು.      

ಕನ್ನಡದ ಸುಪ್ರಸಿದ್ಧ ವೆಬ್ ತಾಣವೊಂದರಲ್ಲಿ ಒಬ್ಬರು “ಮೈಸೂರು ರಾಜರುಗಳಿಗೆ ಮಕ್ಕಳಿಗಿಂತ ಹೆಂಡತಿಯರೇ ಜಾಸ್ತಿ!” ಶೀರ್ಷಿಕೆಯಡಿ ಮೈಸೂರಿನ ರಾಜ ಮನೆತನ ಬಹುಪತ್ನಿತ್ವವನ್ನು ಆಚರಿಸುತ್ತಿತ್ತು ಎಂದು ಬರೆದಿದ್ದರು. . ಅದರ ತುಣುಕೊಂದನ್ನು ಕೆಳಗೆ ನೀಡಿದ್ದೇನೆ.

ಮೈಸೂರು ಅರಮನೆಯಲ್ಲಿ ಕಂಚಿನ ಚೂರ್ಣಿಕೆಯೊಂದಿದೆ. ಅದರ ೨೨ ಎಲೆಗಳ (ಪಟಗಳ) ಮೇಲೆ ಆರಂಭದ ಆದಿ ಯದುರಾಜನಿಂದ ಹಿಡಿದು ಮುಮ್ಮಡಿ ಕೃಷ್ಣರಾಜನವರೆಗೆ ಇಪ್ಪತ್ತೆರಡು ರಾಜರುಗಳ ಹೆಸರು, ಹುಟ್ಟಿದ ದಿನಾಂಕ, ಪಟ್ಟಕ್ಕೆ ಬಂದ ದಿನಾಂಕ, ಆಡಳಿತಾವಧಿ ಎಲ್ಲವನ್ನೂ ಹೇಳಲಾಗಿದೆ. ಜೊತೆಗೆ ಅವರಿಗಿದ್ದ ಹೆಂಡತಿಯರ ಸಂಖ್ಯೆ ಹಾಗೂ ಮಕ್ಕಳ ಸಂಖ್ಯೆಯನ್ನೂ ದಾಖಲಿಸಲಾಗಿದೆ. ಇಡೀ ಚೂರ್ಣಿಕೆಯ ಬರಹ “ಎಫಿಗ್ರಾಫಿಯಾ ಕರ್ನಾಟಿಕ” ಸಂಪುಟ ೫ ರಲ್ಲಿ ಪ್ರಕಟವಾಗಿದೆ. ಅದರ ಇಂಗ್ಲೀಷ್ ಅನುವಾದವೂ ಅಲ್ಲೇ ಪ್ರಕಟವಾಗಿದೆ.

ಈ ಚೂರ್ಣಿಕೆಯನ್ನು ಸಿದ್ಧ ಪಡಿಸಿದ ಕಲಾವಿದ ತಿಪ್ಪಣ್ಣ ಎನ್ನುವ ವ್ಯಕ್ತಿ.

ಮೈಸೂರು ರಾಜರುಗಳು ಮತ್ತು ಅವರ ಸಂಸಾರ:

ದೊಡ್ಡ ದೇವರಾಜ ವೊಡೆಯರ್ – 53 ಹೆಂಡಿರು 11 ಮಕ್ಕಳು

ಚಿಕ್ಕ ದೇವರಾಜ ವೊಡೆಯರ್ – 22 ಹೆಂಡಿರು, 2 ಮಕ್ಕಳು

ಕಂತೀರವ ಮಹಾರಾಜ ವೊಡೆಯರ್ – 3 ಹೆಂಡಿರು, 5 ಮಕ್ಕಳು

ವಮ್ಮಡಿ ದೊಡ್ಡ ಕೃಷ್ಣ ರಾಜ ವೊಡೆಯರ್ – 45 ಹೆಂಡಿರು, 2 ಮಕ್ಕಳು

ವಮ್ಮಡಿ ಚಾಮರಾಜ ವೊಡೆಯರ್ – 3 ಹೆಂಡಿರು, ಮಕ್ಕಳಿಲ್ಲ

ಇಮ್ಮಡಿ ಕೃಷ್ಣರಾಜ ವೊಡೆಯರ್ – 8 ಹೆಂಡಿರು, 9 ಮಕ್ಕಳು

ಮುಮ್ಮಡಿ ಖಾಸಾ ಚಾಮರಾಜ ವೊಡೆಯರ್ – 10 ಹೆಂಡಿರು ಮತ್ತು 4 ಮಕ್ಕಳು

ಮುಮ್ಮಡಿ ಶ್ರೀ ಕೃಷ್ಣ ರಾಜ ವೊಡೆಯರ್ ಬಹಾದುರ್ – 20 ಹೆಂಡಿರು

ಚಾಮರಾಜ ವೊಡೆಯರ್ – 65 ಹೆಂಡಿರು

ಬೆಟ್ಟ ಚಾಮರಾಜ ವೊಡೆಯರ್ – 13 ಹೆಂಡಿರು, 6 ಮಕ್ಕಳು

ರಾಜ ವೊಡೆಯರ್  – 8 ಹೆಂಡಿರು, 6 ಮಕ್ಕಳು

ಇಮ್ಮಡಿ ರಾಜ ವೊಡೆಯರ್ – 19 ಹೆಂಡಿರು.

ಮೇಲೆ ಹೇಳಿದ ಅರಸರು ವಿವಿಧ ಕಾರಣಗಳಿಗಾಗಿ ಒಂದಕ್ಕಿಂತ ಹೆಚ್ಚು ಪತ್ನಿಯರನ್ನು ಇಟ್ಟು ಕೊಂಡಿರಬಹುದು ಮತ್ತು ಅವರುಗಳು ಬದುಕಿದ ಕಾಲದಲ್ಲಿ ಹಾಗೆ ಬಹುಪತ್ನೀ ವೃತಸ್ಥರಾಗುವುದು ರೂಢಿಯೂ ಇದ್ದಿರಬೇಕು. ಅರಸರು ಈ ರೀತಿ ಮಾಡಿದಾಗ ಸಮಾಜದ ಪ್ರತಿಷ್ಟಿತ ಗಣ್ಯರೂ ಸಹ 20, 30 ಅಲ್ಲದಿದ್ದರೂ 2, 3 ಪತ್ನಿಯರನ್ನಾದರೂ ಹೊಂದಿರುವ ಸಾಧ್ಯತೆ ಹೆಚ್ಚು ಎಂದೇ ಹೇಳಬಹುದು. ಹಾಗಾಗಿ ಬಹುಪತ್ನಿತ್ವ ಆಗಿನ ಕಾಲದಲ್ಲಿ ubiquitous ಎನ್ನಬಹುದು.  

ಆಫ್ರಿಕಾದ swaziland ದೇಶದ ರಾಜ ಪ್ರತೀ ವರ್ಷವೂ ಸುರ ಸುಂದರ ಕನ್ಯೆಯರ ಮೇಳ ಏರ್ಪಡಿಸಿ ತನಗೆ ಚೆಂದುಳ್ಳಿಯಾಗಿ ಕಂಡ ಚಕೋರಿ ಯನ್ನು ಮದುವೆಯಾಗಿ ತನ್ನ ಚಂದ್ರಮಂಚದ ಸಂಗಾತಿಯರ ಸಾಲಿಗೆ ಸೇರಿ ಕೊಳ್ಳುತ್ತಾನಂತೆ. ಅವನ ಅದೃಷ್ಟಕ್ಕೆ ನಾವು ಹಲುಬಿ ಕರುಬಿ ಫಲವಿಲ್ಲ ಎನ್ನಿ, ಏಕೆಂದರೆ ಇರುವ ಒಬ್ಬ ಹೆಂಡತಿಯ ಆಸೆ, ಅಭಿಲಾಷೆ, ಬೇಕು ಬೇಡಗಳನ್ನು ಪೂರೈಸುವತ್ತ ನಾವು ನಡೆಸುವ ಕುಸ್ತಿ ಕಸರತ್ತೇ ಸಾಕು ಬೇಕಾಗಿರುವಾಗ  ಮತ್ತೊಂದು, ಮಗುದೊಂದು, ಇನ್ನೊಂದು ….ಹೀಗೆ ಹೆಂಡತಿಯರನ್ನು ನಮ್ಮ ಗೋಣಿನ ಸುತ್ತಾ ಪೋಣಿಸುತ್ತಾ ಹೋದರೆ  ಒಂದು ದಿನ ಅದೇ ನಮಗೆ ಉರುಳಾಗಿ ನಮ್ಮ ಅವಸಾನಕ್ಕೆ ಕಾರಣವಾಗಬಹುದು ಎನ್ನುವುದರಲ್ಲಿ ಸಂಶಯ ಬೇಡ, ಏನಂತೀರ?

ಮಾತು ಆಡಿದರೆ ಹೋಯಿತು, ಮುತ್ತು ಉದುರಿದರೆ ಹೋಯಿತು

ಕೆಲವೊಂದು ಮಾತುಗಳು ಎಂದಿಗೂ ಕಿವಿಗಳಲ್ಲಿ ರಿಣ ಗುಟ್ಟು ತ್ತಿರುತ್ತವೆ. ಅವು ಕುಹಕವಾಗಿರಬಹುದು, ಪ್ರಶಂಸೆ ಆಗಿರಬಹುದು, ತಮಾಷೆ ಅಥವಾ ಗೇಲಿಗಾಗಿ ಇರಬಹುದು. ಕೆಳಗಿದೆ ಒಂದಿಷ್ಟು ಮಾತುಗಳು ನನ್ನ ನೆನಪಿನ ಮೂಸೆಯಿಂದ ಹೊರಬಂದವು.

ಸೋಮನಾಥ್ ಚಟರ್ಜೀ ದೊಡ್ಡ ಮಾತುಗಾರ, ವಾಗ್ಮಿ. ಭಾಜಪ ಸೋತ ಬಳಿಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಸರಕಾರ ಸೋಮನಾಥರನ್ನು ಲೋಕಸಭೆಯ ಸಭಾಪತಿ ಆಗಿ ನೇಮಿಸಿತು. ಚಟರ್ಜಿ ಯವರನ್ನು ಅಭಿನಂದಿಸುತ್ತಾ, ಸೋಮನಾಥ ಚಟರ್ಜಿ ಮಟ್ಟದ ವಾಗ್ಮಿಯಲ್ಲದಿದ್ದರೂ ಒಳ್ಳೆಯ ಭಾಷಣಕಾರರಾದ ವಾಜಪೇಯಿ “ಇಷ್ಟು ಕಾಲ ತಾವು ಹೇಳಿದ್ದನ್ನು ನಾವು ಕೇಳುತ್ತಿದ್ದೆವು, ಈಗ ನಾವು ಹೇಳಿದ್ದನ್ನು ಕೇಳುತ್ತಾ ಕೂರುವ ಸರದಿ ತಮ್ಮದು ಎಂದು ಹಾಸ್ಯದ ಚಟಾಕಿ ಹಾರಿಸಿದ್ದರು. ಸಭಾಪತಿಯ ಕೆಲಸ ಸದಸ್ಯರು ಮಾತನಾಡುವುದನ್ನು ಕೇಳುತ್ತಾ ಕೂರುವುದು ತಾನೇ?

ಇಂದಿರಾ ಗಾಂಧಿ ಪ್ರಧಾನಿ ಆಗಿದ್ದಾಗ ಯಾವುದೇ ಗಲಭೆಗಳು ದೇಶದಲ್ಲಿ ನಡೆದರೂ ಮೂರಕ್ಷರದ ಸಂಘಟನೆ ಯೊಂದನ್ನು ಯಾವಾಗಲೂ ದೂರುತ್ತಿದ್ದರು. ಹಾಗೆಯೇ ವಿದೇಶೀ ಕೈವಾಡದ ಮಾತು ಬಂದಾಗ ನೆರೆಯ ಪಾಕಿಸ್ತಾನದ ಕೈವಾಡ ಇದೆ ಎಂದು ಆರೋಪಿಸುತ್ತಿದ್ದರು. ಪದೇ ಪದೇ ಈ ಮಾತನ್ನು ಕೇಳಿ ಬೇಸತ್ತಿದ್ದ ವಿರೋಧಪಕ್ಷದ ನಾಯಕರಲ್ಲಿ ಒಬ್ಬರಾದ ಸುಬ್ರಮಣ್ಯಮ್ ಸ್ವಾಮೀ ಭಾಷಣ ವೊಂದರಲ್ಲಿ ಹೇಳಿದ್ದು. “ ನಾನು ಲೋಕಸಭೆಯ ಕಲಾಪಗಳಲ್ಲಿ ಪಾಲುಗೊಂಡಾಗ ವಿದೇಶೀ ಸಮಸ್ಯೆಗಳಿಗೆ ಇಂದಿರಾ ಪಾಕಿನ ಕೈವಾಡ ಇದೆ ಎಂದು ಹೇಳುವುದನ್ನು ಹಲವು ಬಾರಿ ಕೇಳಿದ್ದೇನೆ. ಭಾರತದಲ್ಲಿ ಜನಸಂಖ್ಯೆ ವಿಪರೀತ ಏರುತ್ತಿದೆ, ಇದರಲ್ಲೂ ಪಾಕಿಸ್ತಾನದ ಕೈವಾಡ ಇರಬಹುದೇ ಎಂದು ನನ್ನ ಸಂಶಯ ಎಂದು ತಮಾಷೆ ಮಾಡಿದರು.

ಬಾಟ್ಲಿಂಗ್ ಹಗರಣದ ಸಮಯ ಅಂದಿನ ಮುಖ್ಯ ಮಂತ್ರಿ ರಾಮಕೃಷ್ಣ ಹೆಗ್ಡೆ ವಿಚಾರಣೆಗೆ ಆದೇಶ ನೀಡಿದರು. ಕುಂಬ್ಳೆ ಕಾಯಿ ಕಳ್ಳ ಅಂದ್ರೆ ಹೆಗಲನ್ನು ಯಾಕೆ ಮುಟ್ಟಿ ನೋಡ್ ಕೊಳ್ತೀರಾ ಎಂದು ವಿರೋಧ ಪಕ್ಷ ಕೆಣಕಿದಾಗ ಹೆಗ್ಡೆ ಹೇಳಿದ್ದು, “… ಹೆಗಲು ಮುಟ್ಟಿ ನೋಡಿಕೊಂಡಾಗ ಬೂದಿ ಮೆತ್ತಿ ಕೊಂಡಿತ್ತು” ಸಂಶಯ ನಿವಾರಣೆಯಾಗಲಿ ಎಂದು ತನಿಖೆಗೆ ಆದೇಶ ನೀಡಿದೆ ಎಂದರು.

ಬಹಳ ವರ್ಷಗಳ ಹಿಂದಿನ ಮಾತು. ಲೋಕಸಭೆಯಲ್ಲಿ ಒಮ್ಮೆ ಸದಸ್ಯರೊಬ್ಬರು ಕೇರಳದ ಬಗ್ಗೆ ಚರ್ಚೆ ನಡೆದಾಗ “ಕೇರಳದ ಹೆಣ್ಣು ಮಕ್ಕಳು ಬೆಳದಿಂಗಳಿನಲ್ಲಿ ನೋಡಲು ಬಲು ಚೆಂದ” ಎಂದು ಪ್ರಶಂಸಾತ್ಮಕವಾಗಿ ಹೇಳಿದ್ದೆ ತಡ ಕೇರಳದ ಸದಸ್ಯರೆಲ್ಲ ತೀವ್ರವಾಗಿ ಪ್ರತಿಭಟಿಸಿ ಆ ಬಡಪಾಯಿ ಸದಸ್ಯ ಕ್ಷಮೆ ಕೇಳುವಂತೆ ಮಾಡಿದರು.

ನಮ್ಮ ಕರ್ನಾಟಕದ ವಿಧಾನ ಪರಿಷತ್ ಸದಸ್ಯ A.K. ಸುಬ್ಬಯ್ಯ ಒಂದು ರೀತಿಯ AK 47 ತುಪಾಕಿಯಂತೆ. ಅವರ ಯಾವುದೇ ಮಾತುಗಳು ನೆನಪಿಗೆ ಬರದಿದ್ದರೂ ಇಬ್ರಾಹೀಮರ ROLEX WATCH ನ ಹಿಂದೆ ಬಿದ್ದು ಸಾಕಷ್ಟು ಸತಾಯಿಸಿದ್ದು ಮಾತ್ರ ಇನ್ನೂ ನೆನಪಿದೆ.

ತನ್ನ rabble rousing ಭಾಷಣದಿಂದ ದೇಶದ ವಿವಿದೆಡೆ ದೊಡ್ಡ ತಲೆನೋವು ತರುತ್ತಿದ್ದ ತೊಗಾಡಿಯಾ ಬಿಹಾರ ಪ್ರವಾಸದ ಮೇಲೆ ಪಾಟ್ನಾ ನಗರದಲ್ಲಿ ಬಂದಿಳಿದಾಗ ವಿಮಾನ ನಿಲ್ದಾಣ ದಿಂದಲೇ ಆತನನ್ನು ಆತ ಬಂದ ಊರಿಗೆ ರವಾನಿಸಿ ಆದೇಶ ಹೊರಡಿಸಿದ ಲಾಲೂ ಪ್ರಸಾದ ಯಾದವ್ ಪತ್ರಕರ್ತರಿಗೆ ಹೇಳಿದ್ದು “ ತೊಗಾಡಿಯಾ ನಿಗೆ ಎಂಥ ಲಾತ (kick) ಕೊಟ್ಟಿದ್ದೇವೆ ಎಂದರೆ ಆತ land ಆಗೋದು ದೆಹಲಿಯಲ್ಲೇ (we have kicked him like a football and he will land only in delhi) ಎಂದು ತಮ್ಮ ಎಂದಿನ ಚಮತ್ಕಾರದ ನಗುವಿನೊಂದಿಗೆ ಹೇಳಿದರು. ರಾಜಕಾರಣಿಗಳು ಬರೀ ರಾಜಕೀಯ ಮಾತ್ರವಲ್ಲ ತಮ್ಮನ್ನು ಆರಿಸಿದ ಜನರಿಗೆ ಆಗಾಗ ಪುಕ್ಕಟೆ ಮನರಂಜನೆಯನ್ನೂ ಕೊಡುತ್ತಾರೆ.

ಭಾಜಪದ ಅಧಿಕಾರಾವಧಿಯಲ್ಲಿ ವಾಜಪೇಯೀ ಪ್ರಧಾನಿಯಾದರೂ ತೆರೆಮರೆಯ ಚುಕ್ಕಾಣಿ ಅದ್ವಾನಿ ಕೈಯ್ಯಲ್ಲಿ ಎಂದು ಕೆಲವರ ಅಭಿಮತವಾಗಿತ್ತು. ಹಾಗೆಂದ ಮೇಲೆ ಯಾರದಾದರೂ ಬಾಯಲ್ಲಿ ಉದುರಲೇ ಬೇಕಲ್ಲವೇ ಅಣಿ ಮುತ್ತುಗಳು? ಉದುರಿದವು ನೋಡಿ ಆವರದೇ ಪಕ್ಷದ ಮುಖಂಡ ಶೇಷಾದ್ರಿ ಬಾಯಿಂದ. ವಾಜಪೇಯೀ ಭಾಜಪ ಸರಕಾರದ ಮುಖವಾಡ ಮಾತ್ರ ಎಂದು ಹಾಕಿದರು ಬಾಂಬನ್ನು. ಹಿಂದಿಯಲ್ಲಿ “ಮುಖೋಟ” ಕನ್ನಡದಲ್ಲಿ ಮುಖವಾಡ. ರಾಜಧಾನಿ ಸೇರಿ ದೇಶವೇ ನಲುಗಿತು ಈ ಬಾಂಬಿಗೆ. ಈ ಮಾತಿನ ಕಾರಣ ದೊಡ್ಡ ಗಲಾಟೆ ಎದ್ದ ಕೂಡಲೇ ತಡಬಡಿಸಿ ಅವರು ಹೇಳಿದ್ದು “ನಾನು ಹೇಳಿದ್ದು ಮುಖೋಟಾ ಅಲ್ಲ, “ಮುಕುಟ್” (ಕಿರೀಟ) ಹೇ ಹೇ ಹೇ ಎಂದು ಸೋತ ನಗುವಿನೊಂದಿಗೆ ತಮ್ಮ ಮತ್ತು ಸರಕಾರದ ಮಾನ ಉಳಿಸಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡಿದರು. ಕೆಲವೊಮ್ಮೆ ರಾಜಕಾರಣಿಗಳು ತಾವು ಮೊದಲು ರಾಜಕಾರಣಿ ನಂತರ ಎಲ್ಲರಂತೆಯೇ “ಮನುಷ್ಯ” ಎಂದು ಸಾಬೀತು ಪಡಿಸುತ್ತಾರೆ ತಮ್ಮ ಮಾತುಗಳಿಂದ.

೧೯೯೦ ರಲ್ಲಿ ಇರಾಕ್ ನ ಅಧ್ಯಕ್ಷರಾದ ಸದ್ದಾಮ್ ಹುಸೇನರು ಕುವೈತ್ ದೇಶವನ್ನು ವಶಪಡಿಸಿಕೊಂಡದ್ದಕ್ಕೆ ಅಮೆರಿಕಾದ ಅಧ್ಯಕ್ಷ ಬುಶ್ ಸೀನಿಯರ್ ಇರಾಕಿನ ಮೇಲೆ ಆಕ್ರಮಣ ಎಸಗಲು ಮೀನಾ ಮೇಷ ಎಣಿಸುತ್ತಿದ್ದಾಗ ಅಂದಿನ ಬ್ರಿಟಿಶ್ ಪ್ರಧಾನಿ ಮಾರ್ಗರೆಟ್ ಥ್ಯಾಚರ್ ಹೇಳಿದ್ದು “dont wobble, george” ಅಂತ. ಅಂದರೆ ಹೆದರಬೇಡ ಜಾರ್ಜ್, ನಾನಿದ್ದೇನೆ ನಿನ್ನ ಸಾಮೂಹಿಕ ನರಹತ್ಯೆಗೆ ಸಾಕ್ಷಿಯಾಗಿ ಮತ್ತು ಬೆಂಬಲವಾಗಿ, ಸಾಂಗವಾಗಿ ಸಾಗಲಿ ನಿನ್ನ ಅಮಾಯಕರ ಮೇಲಿನ ಆಕ್ರಮಣ ಎಂದು. ಒಳ್ಳೆಯ ಕೆಲಸಕ್ಕೆ ಮಿತ್ರರು ಸಿಗುವುದು ಸ್ವಲ್ಪ ವಿರಳವೇ, ಆದರೆ ಮನೆ ಹಾಳು ಕೆಲಸಕ್ಕೆ ಸದಾ ಜನರ ಬೆಂಬಲ ಇರುತ್ತದೆ ಎನ್ನುವುದಕ್ಕೆ ಬ್ರಿಟನ್ನಿನ “ಉಕ್ಕಿನ ಮಹಿಳೆ” ಸಾಕ್ಷಿಯಾದರು.

ಒಬಾಮಾ ಬಂದ್ರು, ಹೋದ್ರು , period .

ಅಮೆರಿಕೆಯ ಅಧ್ಯಕ್ಷ ಮಹೋದಯರು ಭಾರತದಲ್ಲಿ. ಅವರು ನಿಜವಾಗಿಯೂ ಬಂದಿದ್ದು ಶಸ್ತ್ರೋಪಕರಣಗಳನ್ನು ಮಾರಲು. ಕೊಲ್ಲುವ ಯಂತ್ರಗಳನ್ನು ಮಾರಿ ತಮ್ಮ ಹೊಟ್ಟೆ ಹೊರೆದು ಕೊಳ್ಳಲು. ಆದರೆ ನಮ್ಮ ಮಂದ ಮತಿಗೆ ತೋರಿದ್ದು ಅವರು ಬಂದಿದ್ದು ನಮ್ಮ fly over ಗಳು, ಗಗನಚುಂಬಿ ಕಟ್ಟಡಗಳು ಮತ್ತು ಸಾಫ್ಟ್ವೇರ್ ಕ್ಷೇತ್ರದಲ್ಲಿ ನಾವು ಸಾಧಿಸಿದ ಅಭಿವೃದ್ಧಿಯನ್ನ ನೋಡಿ ಪ್ರಶಂಸಿಸಲು ಮತ್ತು ಮುಂಬೈಗೆ ಬಂದಿಳಿದ ಒಬಾಮ ಮುಂಬೈ ನರಹತ್ಯೆಯ ರೂವಾರಿ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ನಾಮಕರಣ ಮಾಡಬಹುದು ಎಂದು. ಆದರೆ ಒಬಾಮರಿಗೆ ಅಥವಾ ಅಮೆರಿಕನ್ನರಿಗೆ ಮುಂಬೈ ನರಹತ್ಯೆ ದೊಡ್ಡ ವಿಷಯವಲ್ಲ. ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಮತ್ತು ರಾಷ್ಟ್ರರಾಷ್ಟ್ರ ಗಳ ನಡುವಿನ ಸಂಬಂಧದಲ್ಲಿ ಅನುಭವವಾಗುವ collateral damage ಅಷ್ಟೇ ಮುಂಬೈಯಲ್ಲಿ ನಡೆದ ನಗ್ನ ಹಿಂಸೆ. ಪಾಕಿಗಳನ್ನು ವಿಚಾರಿಸಿ ಕೊಳ್ಳಲು ನಾವು ಅಮೆರಿಕೆಯನ್ನಾಗಲೀ ಇನ್ಯಾವುದೇ ರಾಷ್ಟ್ರವನ್ನಾಗಲಿ ಅವಲಂಬಿಸಕೂಡದು ಎಂದು ಚಾಣಕ್ಯಪುರಿಗೆ ಯಾವಾಗ ಹೊಳೆಯುತ್ತದೋ ನೋಡೋಣ. ಹಾಗೇನಾದರೂ ಸುದೈವವಶಾತ್ ಹೊಳೆದಲ್ಲಿ ಅಷ್ಟು ಹೊತ್ತಿಗೆ ನಾವೆಲ್ಲಾ ಪಾಕಿ ಭಯೋತ್ಪಾದಕರಿಗೆ  ಬಲಿಯಾಗದೆ ಜೀವಂತವಾಗಿದ್ದರೆ ನಮ್ಮ ಪುಣ್ಯ ಸಹ ಹೌದು.

ಈ ಮಧ್ಯೆ ಪತ್ರಿಕೆಗಳು ಮತ್ತು ಟೀವೀ ಮಾಧ್ಯಮಗಳು ಒಬಾಮಾ ಪಾಕ್ ಬಗ್ಗೆ ಏನೂ ಹೇಳಲೇ ಇಲ್ಲ ಎಂದು ಮುನಿಸಿಕೊಂಡವು. ನಾವೆಲ್ಲಾ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ, ಭಾರತಕ್ಕೆ ಭಯೋತ್ಪಾದನೆಯನ್ನು ರಫ್ತು ಮಾಡಬೇಡಿ ಎಂದು ಪಾಕಿಗಳಿಗೆ ತಾಕೀತು ಮಾಡಬಹುದು ಎಂದು ಬಗೆದಿದ್ದೆವು ಆದರೆ ಅಮೇರಿಕಾ ಎಂದಿಗೂ ಪಾಕಿನ ಮಿತ್ರ ಎಂದು ಸಾಬೀತು ಪಡಿಸಿತು ಎಂದು ಹಲುಬಿದವು ಮಾಧ್ಯಮಗಳು. ಒಂದು ರೀತಿಯ ದೈನಂದಿನ ಬದುಕಿನ ದೃಶ್ಯದ ಥರ ಕಾಣುತ್ತಿಲ್ಲವೇ ಇದು? ಕಮಲಮ್ಮನ ಮನೆಗೆ ಪಕ್ಕದ ಮನೆಯ ಜಾನಕಮ್ಮ ಬಂದು ಸರಸಮ್ಮನ ಬಗ್ಗೆ ಏನೂ ಚಾಡಿ ಹೇಳಿಲ್ಲ ಎಂದು ದೂರುವ ಹಾಗೆ ವರ್ತಿಸಿದವು ಮಾಧ್ಯಮಗಳು ಮತ್ತು ಒಬಾಮಾರ ಭೇಟಿಯ ಬಗ್ಗೆ ಮಾತನಾಡಲು ಬಂದ ಪಂಡಿತರು. ಅಮೇರಿಕಾ ಪಾಕಿನ ಬಗ್ಗೆ ಅಷ್ಟು ಸುಲಭವಾಗಿ ದೂರಲು ಹೋಗೋದಿಲ್ಲ. ಕೆಲವಾರಗಳ ಹಿಂದೆ ಬ್ರಿಟಿಶ್ ಪ್ರಧಾನಿ ಕಮೆರೂನ್ ಬಂದು ಪಾಕಿಸ್ತಾನವನ್ನು ತರಾಟೆಗೆ ತೆಗೆದು ಕೊಂಡಿದ್ದರು. ಭಯೋತ್ಪಾದಕತೆ ಶುರು ಆಗೋದೆ ಪಾಕಿನಿಂದ ಎನ್ನುವರ್ಥದ ಮಾತನ್ನು ಹೇಳಿದರು. ಹಾಗೆ ಹೇಳಿದ್ದಕ್ಕೆ ಪಾಕಿನಿಂದ ಉಗ್ರ ಪ್ರತಿಭಟನೆ ಬಂದರೂ ಕಮೆರೂನ್ ಜಗ್ಗಲಿಲ್ಲ. ಆದರೆ ಇದನ್ನು ವೀಕ್ಷಿಸಿದ್ದ ಅಮೆರಿಕೆಗೆ ಇದು ಎಚ್ಚರಿಕೆ ಗಂಟೆಯಾಯಿತು. ಕೆಮೆರೂನ್ ಏನೇ ಹೇಳಿದರೂ ಅವರಿಗೆ ನಷ್ಟವಿಲ್ಲ ಏಕೆಂದರೆ ಆಫ್ಘಾನಿಸ್ತಾನದಲ್ಲಿ ಅವರ ಪಾತ್ರ ದೊಡ್ಡದಲ್ಲ. ಆದರೆ ಅಮೆರಿಕೆಯ ವಿಷಯ ಹಾಗಲ್ಲ. ಕಂದಹಾರದ ಉಗ್ರರನ್ನು ಬಲಿ ಹಾಕಬೇಕೆಂದರೆ ಪಾಕಿನ ಸಹಕಾರ ಬೇಕೇ ಬೇಕು. ನಾವ್ಯಾಕೆ ಬೇಡದ ಉಸಾಬರಿಗೆ ಕೈ ಹಾಕಿ ಕಷ್ಟದಲ್ಲಿ ಸಿಕ್ಕಿ ಹಾಕಿ ಕೊಳ್ಳಬೇಕು. ನಾವು ಬಂದಿರೋದು ವ್ಯಾಪರಕ್ಕೊಸ್ಕರ. ವ್ಯಾಪಾರ ಕುದುರಿಸಿ ಒಂದಿಷ್ಟು ಡಾನ್ಸ್ ಮಾಡಿ ಭಾರತೀಯರನ್ನು ಮೋಡಿ ಮಾಡಿದರೆ ಸಾಕು ಎಂದು ಅಮೆರಿಕೆಯ ಎಣಿಕೆ. ಈ ಕಾರಣಕ್ಕಾಗಿಯೇ ಅಮೆರಿಕೆಯ ದಿವ್ಯ ಮೌನ ಪಾಕ್ ಭಯೋತ್ಪಾದಕತೆ ಬಗ್ಗೆ. ಒಬಾಮ ಬಂದ ಮೊದಲ ದಿನವೇ 10 billion ಡಾಲರ್ಗಳ ವ್ಯಾಪಾರ ಮಾಡಿತು ಅಮೇರಿಕ.

NPR ಅಮೆರಿಕೆಯ ಪ್ರಸಿದ್ಧ ರೇಡಿಯೋ ಮಾಧ್ಯಮ. ಒಬಾಮಾ ಜೊತೆಗೆ ಬಂದಿದ್ದ npr ವರದಿಗಾರ st. xaviers college ನಲ್ಲಿ ನಡೆದ ಅಧ್ಯಕ್ಷರ ಮತ್ತು ವಿದ್ಯಾರ್ಥಿಗಳ ನಡುವಿನ ಸಂವಾದ ದ ವೇಳೆ ೧೯ ರ ಓರ್ವ ತರುಣಿ ಪಾಕಿನ ಭಯೋತ್ಪಾದನೆ ಬಗ್ಗೆ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡಿದ್ದರ ಬಗ್ಗೆ ಹೇಳುತ್ತಾ “ಭಾರತಕ್ಕೆ ಪಾಕಿಸ್ತಾನ ಎಂದರೆ ಒಂದು ರೀತಿಯ jealous and rivalry ಎಂದು ಹೇಳಿದ. rivalry ಏನೋ ಸರಿಯೇ. ಆದರೆ jealous ಯಾವುದರ ಬಗ್ಗೆಯೋ ತಿಳಿಯುತ್ತಿಲ್ಲ. ಎಲ್ಲಾ ತೀರ್ಮಾನಗಳಿಗೂ, ನಿರ್ಧಾರಗಳಿಗೂ ಇಸ್ಲಾಮಾಬಾದ್ ಅಮೆರಿಕೆಯ ವಾಷಿಂಗ್ಟನ್ ನಿಂದ dictation ತೆಗೆದು ಕೊಳ್ಳುತ್ತದಲ್ಲಾ, ಪಾಕಿಗಳ ಈ ಬೆನ್ನುಲುಬಿಲ್ಲದ ನಡವಳಿಕೆ ಬಗ್ಗೆ ಇರಬೇಕು ನಮಗೆ ಮತ್ಸರ, jealousy.           

ನಮ್ಮ ಸಂಸತ್ತನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ರಾಜಕಾರಣಿಗಳಂತೆಯೇ ಭರವಸೆಯನ್ನ ನೀಡಲು ಮರೆಯಲಿಲ್ಲ ಒಬಾಮಾ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಖಾಯಂ ಸದಸ್ಯತ್ವಕ್ಕೆ ಬೆಂಬಲ ಸೂಚಿಸಿದ ಒಬಾಮ ಬದಲಾಗುತ್ತಿರುವ ವಿಶ್ವ ರಾಜಕಾರಣದಲ್ಲಿ ಭಾರತ ಜಗಾರೂಕತೆಯಿಂದ ವರ್ತಿಸುವಂತೆ ಸೂಕ್ಷ್ಮವಾಗಿ ಸೂಚಿಸಿದರು. ಆದರೆ ಈ ಆಶ್ವಾಸನೆಯ ಬೆನ್ನಲ್ಲೇ ಬಂದವು ಅಪಸ್ವರಗಳು, ಜರ್ಮನಿ ಮತ್ತು ಜಪಾನ್ ದೇಶಗಳಿಂದ. ಒಬಾಮಾ ನೀಡಿದ್ದು ಆಶ್ವಾಸನೆ ಮಾತ್ರ, ಈ ಆಶ್ವಾಸನೆ ವಿರುದ್ಧವೇ ತಕರಾರು ಬಂದರೆ ಇನ್ನು ವಿಶ್ವಸಂಸ್ಥೆಯಲ್ಲಿ ನಮಗೆ ಯಾವ ರೀತಿಯ ಬೆಂಬಲ ಸಿಕ್ಕೀತು ಎಂದು ಊಹಿಸಲು ನಮಗೆ ರಾಜನೀತಿಯಲ್ಲಿ ಡಾಕ್ಟರೇಟ್ ಪದವಿಯ ಅವಶ್ಯಕತೆಯಿಲ್ಲ.  

ಒಟ್ಟಿನಲ್ಲಿ ಒಬಾಮ ಬಂದರು, ಮಾಧ್ಯಮಗಳಿಗೆ ಸುಗ್ಗಿಯೋ ಸುಗ್ಗಿ. ಒಬಾಮ ಎಲ್ಲಿಗೆಹೋದರು, ಏನನ್ನು ತಿಂದರು,  ಹೇಗೆ ಕುಣಿದರು ಇತ್ಯಾದಿ ಇತ್ಯಾದಿ ಪುಂಖಾನುಪುಂಖವಾಗಿ ವರದಿ ಮಾಡಿದವು. ನಮಗೂ ಒಂದು ರೀತಿಯ ಪುಳಕ. ಬಿಳಿಯರ ನಾಡಿನಿಂದ ಒಂದು ಕಾಗೆ ಬಂದಿಳಿದರೂ ನಮ್ಮ ಬದುಕು ಸಾರ್ಥಕವಾಗಿ “ಅತಿಥಿ ದೇವೋ ಭವನನ್ನು ಸಂತುಷ್ಟ ನನ್ನಾಗಿಸಿದ ಭಾವನೆಯಲ್ಲಿ ಧನ್ಯರಾಗಿ ಬಿಡುತ್ತೇವೆ.

paracetamol ರಾಮ ಬಾಣ ಅಲ್ಲ

ಜ್ವರ ಅಥವಾ ನೋವು ಕಾಣಿಸಿ ಕೊಂಡ ಕೂಡಲೇ ನಾವು ಮೊರೆ ಹೋಗುವುದು paracetamol ಇರುವ ಔಷಧಿ ಕಡೆಗೆ. ವಿಶೇಷವಾಗಿ ಮಕ್ಕಳಿಗೆ ಕಾಣಿಸಿಕೊಳ್ಳುವ ಜ್ವರಕ್ಕೆ paracetamol ರಾಮ ಬಾಣ ಎಂದು ನಮ್ಮೆಲ್ಲರ ಗ್ರಹಿಕೆ. ಆದರೆ ಈ ಗ್ರಹಿಕೆಗೆ ಒಂದು ಕೊಡಲಿಯೇಟು ಬಿದ್ದಿದೆ; paracetamol ಒಳಗೊಂಡ ಔಷಧಿ ಮಕ್ಕಳಲ್ಲಿ ಅಸ್ತಮಾ ರೋಗವನ್ನು ಬರಿಸುತ್ತದೆ. ಗರ್ಭಿಣಿಯರು paracetamol ಹೆಚ್ಚು ತೆಗೆದು ಕೊಂಡಷ್ಟೂ ಹುಟ್ಟುವ ಮಕ್ಕಳಲ್ಲಿ ಅಸ್ತಮಾ ಕಾಣಿಸಿಕೊಳ್ಳಲು ಕಾರಣವಾಗುತ್ತದಂತೆ. ಈ ಔಷಧಿಯನ್ನು ಆಂಗ್ಲ ಭಾಷೆ ಮಾತನಾಡುವ ರಾಷ್ಟ್ರಗಳ ಜನ ಹೆಚ್ಚು ತೆಗೆದು ಕೊಳ್ಳುತ್ತಿದ್ದು ಅಲ್ಲಿನ ಮಕ್ಕಳ ಆರೋಗ್ಯದ ಅಧ್ಯಯನ ನಡೆಸಿದ ಮೇಲೆ ಈ ವಿದ್ಯಮಾನ ಬೆಳಕಿಗೆ ಬಂತು. ಆದರೆ ಕಂಪೆನಿಗಳು ಈ ಅಧ್ಯಯನವನ್ನು ಒಪ್ಪುತ್ತಿಲ್ಲ. ಅಸ್ತಮಾದ ಬಗೆಗಿನ ಅಧ್ಯಯನ ಗಮನಾರ್ಹವಲ್ಲದಿದ್ದರೆ medical journal “Lancet” ಪತ್ರಿಕೆಯಲ್ಲಿ ಇದು ಬೆಳಕನ್ನು ಕಾಣುತ್ತಿರಲಿಲ್ಲ.ಮಕ್ಕಳಲ್ಲಿ ಕಫ ತುಂಬಿ ಉಬ್ಬಸ ತೋರಿದಾಗ ಕೊಡುವ paracetamol ಕ್ರಮೇಣ ಮಕ್ಕಳಲ್ಲಿ ಅಸ್ತಮಾ ರೋಗಕ್ಕೆ ಕಾರಣವಾಗುತ್ತದೆ ಎಂದು ಅಭಿಪ್ರಾಯ. ಹಾಗಾದರೆ ಮಕ್ಕಳಿಗೆ ಜ್ವರ ಬಂದಾಗ ಕೊಡಬೇಕಾದದ್ದಾದರೂ ಏನು? ಕೆಲವು ವೈದ್ಯರ ಪ್ರಕಾರ ಜ್ವರ ಬಂದಾಗ ಯಾವ ಔಷಧಿಯನ್ನೂ ಕೊಡುವ ಅಗತ್ಯವಿಲ್ಲವಂತೆ. ಏಕೆಂದರೆ ಶರೀರಕ್ಕೆ ತಗಲುವ ಸೋಂಕಿಗೆ ನೈಸರ್ಗಿಕ ಪ್ರತಿರೋಧವಾಗಿ ಜ್ವರ ಬರುತ್ತದಂತೆ. ಆದರೆ ನಾವೀಗ ಕಾಣುತ್ತಿರುವ ಇಲಿ ಜ್ವರ, ಹಂದಿ ಜ್ವರ ಮುಂತಾದ “zoo” ಜ್ವರಗಳ ಬಗ್ಗೆ ಮಾತ್ರ ಎಚ್ಚರಿಕೆಯಿಂದಿರುವುದು ಅತ್ಯವಶ್ಯಕ.