live in, three some, ನಮ್ಮ ದೇಶದಲ್ಲಿ?

ಅಹಮದಾಬಾದಿನಲ್ಲಿ ಬಾಳ ಗೆಳೆಯ /ತಿ ಯರನ್ನು ಕಂಡುಕೊಳ್ಳುವ ಒಂದು ಮೇಳವಂತೆ. ಬದುಕಿನ ಸಂಜೆಯಲ್ಲಿರುವವರು ಬದುಕಿನ ಒಂದಿಷ್ಟು ಪ್ರಕಾಶವನ್ನು ತಮ್ಮ ಬಾಳಿನೊಳಕ್ಕೆ ಬಿಟ್ಟು ಕೊಳ್ಳಲು ಸದವಕಾಶ. ಇದರಲ್ಲೇನು ವಿಶೇಷ? ವಿಶೇಷ ಇದೆ. ಇವರುಗಳು ಮದುವೆಯಾಗೋಲ್ಲವಂತೆ. “ಲಿವ್ ಇನ್” ಅಂತೆ. ಅಡುಗೆ ಚೆನ್ನಾಗಿದೆಯೋ ಇಲ್ಲವೋ ಎಂದು ನೋಡುವ tastiing ಥರ. ಅಮೇರಿಕನ್ ಅಥವಾ ಪಾಶ್ಚಾತ್ಯ ಸ್ಟೈಲ್ ಅಂತೆ. ಹೌದು. ಆಧುನಿಕ ಬದುಕಿಗೆ ಬರ್ಗರ್, ಬಾಸ್ಕಿನ್ ರಾಬಿನ್ಸ್, ಜೀನ್ಸ್ ಅನಿವಾರ್ಯ ಆಗೋದಾದರೆ ಹೆಣ್ಣು ಗಂಡಿನ ನಡುವಿನ ಬಂಧವೂ, ಬದುಕುವ ರೀತಿಯೂ ಅವರ ಹಾಗೇ ಯಾಕಾಗಕೂಡದು? ಎಲ್ಲಿಯವರೆಗೆ ನಾವು ಪಾಶ್ಚಾತ್ಯರನ್ನು ಅನುಕರಿಸ ಬಹುದು ಎನ್ನುವದು ಕಠಿಣ ಪ್ರಶ್ನೆ.  

ಅಸ್ಸಾಂ, ಕರ್ನಾಟಕ, ಗುಜರಾತ ರಾಜ್ಯಗಳಿಂದ ಬಂದಿದ್ದರಂತೆ ಜನ ಈ ಮೇಳದಲ್ಲಿ ಪಾಲುಗೊಳ್ಳಲು. ಒಂದು ರೀತಿಯ ಸಾಮೂಹಿಕ ಸ್ವಯಂವರ. ಈ ಅನಿಷ್ಠಕರ ಬೆಳವಣಿಗೆಯನ್ನು ಧಾರ್ಮಿಕ ನಾಯಕರುಗಳು ವಿರೋಧಿಸುವುದು ದೇಶದ, ಸಂಸ್ಕೃತಿಯ ಹಿತದೃಷ್ಟಿಯಿಂದ ಒಳ್ಳೆಯದು. ಇಂದು ಲಿವ್ ಇನ್, ನಾಳೆ three some ಮಟ್ಟಕೆ ಇಳಿಯಬಾರದು ಸಂಬಂಧಗಳು.     

ಮೇಲಿನ ಹೊಸ ಸಂಪ್ರದಾಯವನ್ನು ವಿರೋಧಿಸಿದ ವ್ಯಕ್ತಿಯೊಬ್ಬ ಹೇಳಿದ. ಹಿರಿಯರು ಈ ರೀತಿಯ ಸಂಬಂಧಗಳನ್ನು ಇಷ್ಟ ಪದುವುದಾದರೆ ನಾಳೆ ದಿನ ಕಿರಿಯರೂ ಅದನ್ನೇ ಬಯಸಬಹುದು. ಅವರೇಕೆ ತಾನೇ ಬಯಸಬಾರದು?  ತಮ್ಮ ಅಜ್ಜ  ಅಥವಾ ಅಜ್ಜಿ ಬಯಸಿದ್ದು ತನಗೂ ಇರಲಿ ಎಂದರೆ ತಡೆಯಲು ಸಾಧ್ಯವೇ ಅಥವಾ ತಡೆಯುವುದು ತರವೇ?

ನಾವು “ಅಕಶೇರುಕ” ರಾಗಿದ್ದು ಎಂದಿನಿಂದ?

ಪಾಕಿಸ್ತಾನ ಅಮೆರಿಕೆಯ ಒಂದು ಪಪ್ಪೆಟ್. ಇದು ಪಾಕಿಸ್ತಾನದ ಸರಕಾರಕ್ಕಿಂತ ಅಲ್ಲಿನ ಜನಕ್ಕೆ ಚೆನ್ನಾಗಿ ಗೊತ್ತು. ತಮ್ಮ ಸರಕಾರಗಳು ಪ್ರತೀ ನಿರ್ಧಾರಕ್ಕೂ ವಾಷಿಂಗ್ಟನ್ ಮೇಲೆ ಪರಾವಲಂಬಿ ರೀತಿ ಅವಲಂಬಿತ ಎಂದು.  ಪಾಕಿಸ್ತಾನ ಒಂದು miserably failed state, ಪಾಕಿಸ್ತಾನದ ಈ degenaration ನೋಡಿ ಕನಿಕರ ಪಡುತ್ತಿದ್ದ ನಮಗೆ ಒಂದು ವಿಚಿತ್ರ ಆದರೆ  ಆಘಾತಕಾರಿಯಾದ ಬೆಳವಣಿಗೆ ಕಾಣಲು ಸಿಕ್ಕಿದೆ. ಒಂದು ಬೆಳಿಗ್ಗೆ ಅಮೆರಿಕೆಯ ದೂತಾವಾಸದ ಸಿಬ್ಬಂದಿಯೊಬ್ಬ ರಸ್ತೆ ಬದಿಯಲ್ಲಿ ನಿಂತಿದ್ದಾಗ ಬೈಕ್ ಬಂದು ನಿಲ್ಲುತ್ತದೆ, ಗುಂಡಿನ ಚಕಮಕಿ ನಡೆಯುತ್ತದೆ, ಬೈಕ್ ಸವಾರರಲ್ಲಿ ಇಬ್ಬರು ಸಾಯುತ್ತಾರೆ ಅಮೆರಿಕೆಯವನನ್ನು ಪೊಲೀಸರು ಬಂಧಿಸುತ್ತಾರೆ. ಪಾಕ್ ಬೀದಿಗಳಲ್ಲಿ  ಬೈಕ್ ನಲ್ಲಿ ಬರುವುದೂ, ಬಂದ ಕೂಡಲೇ ಗುಂಡಿನ ಕಾಳಗ ನಡೆಯುವುದೂ ಸಾಮಾನ್ಯವೇ. ನಾವು ನಮ್ಮ ಚಿತ್ರಗಳಲ್ಲಿ ಕಾಣುವುದನ್ನು ಅಲ್ಲಿ ನಿಜ ಜೀವನದಲ್ಲಿ ಆಡಿ ತೋರಿಸುತ್ತಾರೆ. ಆದರೆ ವಿಷಯದ ಗಾಂಭೀರ್ಯ ಇರುವುದು ಅಮೆರಿಕೆಯವ ಈ ವಿವಾದದಲ್ಲಿ ಸಿಕ್ಕಿ ಬಿದ್ದಿದ್ದು. ಅದೂ ಸಾಧಾರಣ ಅಮೆರಿಕೆಯ ನಾಗರೀಕನಲ್ಲ. ದೂತಾವಾಸದ ಸಿಬ್ಬಂದಿ. ಅವನಿಗೆ ಇದ್ದೇ ಇರುತ್ತದೆ diplomatic immunity. ತನ್ನ ದೇಶದವರು ಸಿಕ್ಕಿಬಿದ್ದಾಗ ಸಹಜವಾಗಿಯೇ ಅಮೆರಿಕನ್ನರು ಕಿಡಿ ಕಿಡಿ ಯಾಗುತ್ತಾರೆ. ಈ ವಿಷಯದಲ್ಲೂ ಸಹ ಅಸಮಾಧಾನ ಗೊಂಡರು. ಮಾಮೂಲಿ ಪ್ರತಿಭಟನೆ ಕೆಲಸ ಮಾಡದಾದಾಗ ಅಮೆರಿಕೆಯಲ್ಲಿನ ಪಾಕ ರಾಜತಾಂತ್ರಿಕ ನನ್ನು ಕರೆಸಿ ನಮ್ಮ ಪ್ರಜೆಯನ್ನು ವಿಮುಕ್ತಿಗೊಳಿಸದಿದ್ದರೆ ನಿನ್ನನ್ನು ಒದ್ದೋಡಿಸುತ್ತೇವೆ ಎಂದು ಧಮಕಿ ಹಾಕಿದರು. ಧಮಕಿ ಕೇಳಿ ಮರಳಿದ ಆತ ನನಗೆ ಅಂಥ ಎಚ್ಹರಿಕೆಯನ್ನೇನೂ ಅಮೇರಿಕಾ ನೀಡಿಲ್ಲ ಎಂದು ಟ್ವೀಟಿಸಿ ಸುಮ್ಮನಾದ. ಆದರೆ ಅಮೇರಿಕ ನೇರವಾಗಿ ಅಲ್ಲಿನ ಸರಕಾರದ ಮೇಲೆ ಪ್ರಭಾವ ತೋರಿಸಲು ತೊಡಗಿತು. ಅಲ್ಲಿನ ಪೊಲೀಸರು ಮಾತ್ರ ಜಪ್ಪಯ್ಯ ಎನ್ನಲಿಲ್ಲ. ಇವನು ದೂತಾವಾಸದ ಅಧಿಕಾರಿ ಅಲ್ಲ, ಬದಲಿಗೆ ಒಬ್ಬ ಗೂಢಚಾರ ಎಂದು ಕರೆದು ಅವನ ಬಳಿಯಿದ್ದ ಆಧುನಿಕ ಉಪಕರಣಗಳ ಹೆಸರುಗಳನ್ನೂ ಪಟ್ಟಿ ಮಾಡಿ ಬಹಿರಂಗಗೊಳಿಸಿದರು, charge sheet ಹಾಕಿ ಅತ್ತೆ ಮನೆಗೂ ಸಹ ಅಟ್ಟಿದರು. ಈ ಘಟನೆ ನಮ್ಮ ದೇಶದಲ್ಲಿ ನಡೆದಿದ್ದರೆ? ಪಾಕಿಸ್ತಾನದ ಗಾಯಕ ಕೋಟ್ಯಂತರ ರೂಪಾಯಿ ಅನಧಿಕೃತವಾಗಿ  ತಂದ ಎಂದು ಬಂಧಿಸಿದ ಕೂಡಲೇ ಅವನನ್ನು ಬಿಡುಗಡೆ ಗೊಳಿಸಲು ಆದೇಶ.   

ಪ್ರಥಮ ಕೊಲ್ಲಿ ಯುದ್ಧದ ವೇಳೆ ಅಮೆರಿಕೆಯ ಯುದ್ಧ ವಿಮಾನಗಳಿಗೆ ಇಂಧನ ಹಾಕಬಾರದು ಎಂದು ನಿರ್ಣಯಿಸಿದ್ದ ನಮ್ಮ  ಸರಕಾರ ಕೊನೆಗೆ ಸದ್ದಿಲ್ಲದೇ ಇಂಧನ ತುಂಬಿಸಿ ಕೊಟ್ಟಿತು. ಬಿಳಿ ನಗು ನಮ್ಮ ಮೇಲೆ ಚೆನ್ನಾಗಿ ಪ್ರಭಾವ ಬೀರುತ್ತದೆ. ಈ ಪಾಠವನ್ನು ಅಮೆರಿಕನ್ನರಿಗೆ ನೀಡಿದ್ದು ನಮ್ಮನ್ನು ೨೦೦ ವರ್ಷ ಗಳ ಕಾಲ ಆಳಿದ ಬ್ರಿಟಿಷರು. ಇರಾನ್ ನಮ್ಮ ದೇಶದ ಆಪ್ತ ಮಿತ್ರ. ಆದರೆ ಇರಾನ ವಿರುದ್ಧದ ಭದ್ರತಾ ಮಂಡಳಿಯ ನಿರ್ಣಯಕ್ಕೆ ಪರವಾಗಿ ನಾವು ಮತ ಚಲಾಯಿಸಿ ಮಧ್ಯ ಪ್ರಾಚ್ಯದಲ್ಲಿನ ಒಂದು ದೇಶದ ಬೆಂಬಲವನ್ನು ಕಳೆದು ಕೊಂಡೆವು.

ಕೇಂದ್ರ ಸರಕಾರದಲ್ಲಿ ಕೆಲಸ ಮಾಡದ ಅಥವಾ ಮಾಡಲು ಬಾರದ ಒಂದು ಇಲಾಖೆ ಇದ್ದರೆ ಅದೇ ವಿದೇಶಾಂಗ ಇಲಾಖೆ. ವಿದೇಶಾಂಗ ಇಲಾಖೆಯಲ್ಲಿ ಕೆಲಸ ಎಂದರೆ ಗರಿ ಗರಿಯಾದ ಸೂಟು, ಅಥವಾ ರೇಶಿಮೆ ಸೀರೆ ಉಟ್ಟು ದೇಶ ಸುತ್ತುವುದು ಎನ್ನುವ ತಪ್ಪು ಕಲ್ಪನೆ ಮನೆ ಮಾಡಿದೆ. ನೆಹರೂ ಕಾಲಾದ outdated ರಾಜನೀತಿಯ ನಿಯಮಗಳು ಎಲ್ಲಾ ಕಾಲಕ್ಕೂ ಪ್ರಸ್ತುತ ಎನ್ನುವ ಭಾವನೆ ಬೇರೆ. ನಾವು ಯಾರ ಪರವೂ ಅಲ್ಲ, ಎಲ್ಲರ ಸವಾರಿ ನಮ್ಮ ಮೇಲೆ ನಡೆಯಲಿ ಎನ್ನುವ ನಿರ್ಲಿಪ್ತ ನೀತಿಯ ಮೇಲೆ ವಿಪರೀತ ಅವಲಂಬನೆ. ಆ ನೀತಿಗೆ ಒಂದೇ ಒಂದು ಬದಲಾವಣೆಯಂತೂ ಕಾಣಲು ಸಿಕ್ಕಿದೆ. ಅದೇ ಅಮೇರಿಕಾ ಪರ ನೀತಿ. ಹಿಂದೆ ರಷ್ಯಾ ಪರ, ಈಗ ಅಮೇರಿಕಾ ಪರ. ನಮಗೇಕೆ ಸ್ವಂತಿಕೆ ಇಲ್ಲ ಅಥವಾ ಇರಕೂಡದು? ವಿನಾಕಾರಣ ಕಾರ್ಗಿಲ್ ಅನ್ನು ಆಕ್ರಮಿಸಿ ನಮ್ಮ ಸಾವಿರಾರು ಸೈನಿಕರ ಸಾವಿಗೆ ಕಾರಣವಾದ ಪಾಕಿಸ್ತಾನವನ್ನು ಸದೆ ಬಡಿಯುವ ಸುಂದರ, ಬಹುಶಃ ಇನ್ನೆಂದೂ ಬರದ ಅವಕಾಶವನ್ನು ನಾವು ಕಳೆದು ಕೊಂಡೆವು. ಇದಕ್ಕೆ ಕಾರಣ ನಮಗೆ ಅಮೇರಿಕೆಯಿಂದ ಬಂದ ಮನವಿ. ಅವರಿಗೆ ಬೇಕಾದಾಗ ಮನವಿ, ಅಥವಾ ಬೆದರಿಕೆ. ಈ ಎರಡರಲ್ಲಿ ಒಂದನ್ನು ಕೊಟ್ಟು ಅಮೇರಿಕಾ ತನ್ನ ಕೆಲಸವನ್ನೂ ಸಾಧಿಸಿ ಕೊಳ್ಳುತ್ತದೆ.

೨೦೦೧ ಸೆಪ್ಟೆಂಬರ್ ತಿಂಗಳಿನಲ್ಲಿ ಅಮೆರಿಕೆಯ ಮೇಲೆ ನಡೆದ ಧಾಳಿಗೆ ತತ್ತರಿಸಿ ಪ್ರಪಂಚದ ಎಲ್ಲ ದೇಶಗಳಿಂದ ಮುಚ್ಚಳಿಕೆ ಬರೆಸಿ ಕೊಂಡಿತು ಅಮೇರಿಕಾ. ಭಯೋತ್ಪಾದಕರು, ಅದಕ್ಕೆ ಧನ ಸಹಾಯ ನೀಡುವವರು ಯಾರದೇ ನೆಲದ ಮೇಲೆ ಇದ್ದರೋ ಅಮೆರಿಕೆಯ ಸುಪರ್ದಿಗೆ ಒಪ್ಪಿಸತಕ್ಕದ್ದು ಎನ್ನುವುದು ಮುಚ್ಚಳಿಕೆ. ವಿಧೇಯರಾಗಿ ಎಲ್ಲಾ ದೇಶಗಳೂ ತಲೆ ಬಾಗಿದವು. ನಮ್ಮ ದೇಶದ ಗಡಿ ನುಗ್ಗಿ ಒಂದು ನಗರವನ್ನು ತನ್ನ ಹಿಂಸೆಯಿಂದ ತತ್ತರಿಸುವಂತೆ ಮಾಡಿದ ಪಾಕ ಬಗ್ಗೆ ಮಾತ್ರ ಬೇರೆಯೇ ತೆರನಾದ ನಿಲುವು. ಉಗ್ರವಾಗಿ ಪ್ರತಿಭಟಿಸಿದಾಗ ಅಲ್ಲಿಂದ ಧಾವಿಸಿ ಬಂದ ವಿದೇಶಾಂಗ ಕಾರ್ಯದರ್ಶಿ ಕ್ಲಿಂಟನ್ ಒಂದ್ರೆಅದು ಮೊಂಬತ್ತಿ ಗಳನ್ನು ಹಚ್ಚಿ, ಎರಡು ನಿಮಿಷ ಮೌನ ಆಚರಿಸಿ ಸಮಾಧಾನ ಮಾಡಿ ಹೋದರು. ಮುಂಬೈ ಮೇಲಿನ ಆಕ್ರಮಣದ ವೇಳೆಯೂ ಭಾರತಕ್ಕೆ ಒಂದು ಸುವರ್ಣಾವಕಾಶ ಇತ್ತು ಪಾಕಿಗೆ ಒಂದು “ಝಟ್ಕಾ” ನೀಡಲು. ಅಲ್ಲೂ ಬಿಳಿ ನಗೆ ನಮ್ಮ priority ಮರೆಯುವಂತೆ ಮಾಡಿತು. ಬಿಳಿ ನಗುವಿನ ಮಾಯೆ ಅಂಥದ್ದು.     

ನಮ್ಮ ರಕ್ಷಣಾ ಸಚಿವ (ಜಾರ್ಜ್ ಫೆರ್ನಾಂಡಿಸ್) ರನ್ನು ಬೆತ್ತಲೆ ಮಾಡಿ ಅಮೆರಿಕೆಯ ವಿಮಾನ ನಿಲ್ದಾಣದಲ್ಲಿ ಪರೀಕ್ಷಿಸಿದಾಗ ಅದು ದೊಡ್ಡ ವಿಷಯವಲ್ಲ ನಂಗೆ. ಮೆಚ್ಚುಗೆ, ಅಬ್ಬಾ, ಎಂಥ ಭದ್ರತಾ ವ್ಯವಸ್ಥೆ ಅವರದು. ನಮ್ಮ ರಾಷ್ಟ್ರಪತಿ ಕಲಾಂ ರನ್ನು ವಿಮಾನ ನಿಲ್ದಾಣ ದಲ್ಲಿ ಅನುಚಿತವಾಗಿ ವರ್ತಿಸಿದಾಗಲೂ ನಿರ್ಲಿಪ್ತತೆ. ನಮ್ಮ ವಿದ್ಯಾರ್ಥಿಗಳನ್ನು ಅಲ್ಲಿನ ವಿದ್ಯಾಲಯವೊಂದು ಮೋಸ ಮಾಡಿ ನಂತರ ವಿದ್ಯಾರ್ಥಿಗಳು ಓಡಿ ಹೋಗದಂತೆ electronic tag ಅವರ ಕಾಲಿಗೆ ಕಟ್ಟಿ ಅವರ ಮೇಲೆ ನಿರಂತರ ನಿಗಾ ಇಟ್ಟಾಗಲೂ ನಮಗೆ ಅಮೆರಿಕೆಯ ನಡವಳಿಕೆ ಅಸಹನೀಯವಾಗಿ ತೋರುವುದಿಲ್ಲ. ಇನ್ನು ನಮಗೆ ತಿಳಿಯದ ಇನ್ಯಾವ್ಯಾವ ರೀತಿಯಲ್ಲಿ ನಮ್ಮ ಮೇಲೆ ಸವಾರಿ ಮಾಡುತ್ತಿದೆಯೋ ದೇವರೇ ಬಲ್ಲ. ನಮ್ಮ ಸರಕಾರ ಗಳನ್ನು ನಡೆಸಲು ಮಂತ್ರಿಗಳು, ಕಾರ್ಯದರ್ಶಿಗಳು ಎಲ್ಲಾ ಅರವತ್ತು, ಎಪ್ಪತ್ತು ವಯಸ್ಸು ದಾಟಲೇ ಬೇಕು. ಒಂದೆರಡು ಅಪವಾದಗಳನ್ನು ಬಿಟ್ಟರೆ ವಯೋವೃದ್ಧರ ಕಾರುಬಾರು. ಅವರಿಗೆ ರೋಷ ಎಲ್ಲಿಂದ ತಾನೇ ಬರಬೇಕು.   

ಈಗಿನ ವಿಶ್ವ bi-polar ಆಗಬೇಕಿಲ್ಲ. ಪ್ರಪಂಚದ ತುಂಬಾ ದೊಡ್ಡದು. ಹಳೇ ಕಾಲದ ರೀತಿಯ ರಾಜಕಾರಣವನ್ನು ಅಲ್ಲ ನಾವು ಕಾಣುತ್ತಿರುವುದು. ಪಕ್ಕದ ಚೀನಾ ಅತ್ಯಾಧುನಿಕ ಆಯುಧಗಳನ್ನು ಶೇಖರಿಸುತ್ತಿದೆ ಎಂದು ನಮ್ಮ ಗೃಹ ಮಂತ್ರಿ ಕಳವಳ ವ್ಯಕ್ತ ಪಡಿಸಿದರು. ಅವರ ಮನೆಯೊಳಗೇ ಕೂತು ಅವರೇನಾದರೂ ಮಾಡಿಕೊಳ್ಳಲಿ. ನಮಗೇಕೆ ಅವರ ಉಸಾಬರಿ? 3G ಸ್ಕ್ಯಾಮು ಮತ್ತು ಸ್ವಿಸ್ ಮತ್ತು ಇತರೆ ಬ್ಯಾಂಕುಗಳಲ್ಲಿ ನಮ್ಮ ಜನ ಹುಗಿದಿಟ್ಟಿರುವ ಸಂಪತ್ತನ್ನು ಉಪಯೋಗಿಸಿ ನಮ್ಮ ಸೈನ್ಯವನ್ನೂ ಬಲ ಗೊಳಿಸಲಿ. ಭಾರತದ ನೇತೃತ್ವದಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ಧ್ರುವೀಕರಣ ನಡೆಯಲಿ. ನಮ್ಮೊಂದಿಗೆ ಹೆಜ್ಜೆ ಹಾಕಲು ಲ್ಯಾಟಿನ್ ಅಮೆರಿಕೆಯಲ್ಲೂ, ಮಧ್ಯ ಪ್ರಾಚ್ಯದೇಶ ಗಳಲ್ಲೂ, ಆಫ್ಫ್ರಿಕಾ ಖಂಡದಲ್ಲೂ ದೇಶಗಳಿವೆ.

ಒಬಾಮಾ ಬಂದ್ರು, ಹೋದ್ರು , period .

ಅಮೆರಿಕೆಯ ಅಧ್ಯಕ್ಷ ಮಹೋದಯರು ಭಾರತದಲ್ಲಿ. ಅವರು ನಿಜವಾಗಿಯೂ ಬಂದಿದ್ದು ಶಸ್ತ್ರೋಪಕರಣಗಳನ್ನು ಮಾರಲು. ಕೊಲ್ಲುವ ಯಂತ್ರಗಳನ್ನು ಮಾರಿ ತಮ್ಮ ಹೊಟ್ಟೆ ಹೊರೆದು ಕೊಳ್ಳಲು. ಆದರೆ ನಮ್ಮ ಮಂದ ಮತಿಗೆ ತೋರಿದ್ದು ಅವರು ಬಂದಿದ್ದು ನಮ್ಮ fly over ಗಳು, ಗಗನಚುಂಬಿ ಕಟ್ಟಡಗಳು ಮತ್ತು ಸಾಫ್ಟ್ವೇರ್ ಕ್ಷೇತ್ರದಲ್ಲಿ ನಾವು ಸಾಧಿಸಿದ ಅಭಿವೃದ್ಧಿಯನ್ನ ನೋಡಿ ಪ್ರಶಂಸಿಸಲು ಮತ್ತು ಮುಂಬೈಗೆ ಬಂದಿಳಿದ ಒಬಾಮ ಮುಂಬೈ ನರಹತ್ಯೆಯ ರೂವಾರಿ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ನಾಮಕರಣ ಮಾಡಬಹುದು ಎಂದು. ಆದರೆ ಒಬಾಮರಿಗೆ ಅಥವಾ ಅಮೆರಿಕನ್ನರಿಗೆ ಮುಂಬೈ ನರಹತ್ಯೆ ದೊಡ್ಡ ವಿಷಯವಲ್ಲ. ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಮತ್ತು ರಾಷ್ಟ್ರರಾಷ್ಟ್ರ ಗಳ ನಡುವಿನ ಸಂಬಂಧದಲ್ಲಿ ಅನುಭವವಾಗುವ collateral damage ಅಷ್ಟೇ ಮುಂಬೈಯಲ್ಲಿ ನಡೆದ ನಗ್ನ ಹಿಂಸೆ. ಪಾಕಿಗಳನ್ನು ವಿಚಾರಿಸಿ ಕೊಳ್ಳಲು ನಾವು ಅಮೆರಿಕೆಯನ್ನಾಗಲೀ ಇನ್ಯಾವುದೇ ರಾಷ್ಟ್ರವನ್ನಾಗಲಿ ಅವಲಂಬಿಸಕೂಡದು ಎಂದು ಚಾಣಕ್ಯಪುರಿಗೆ ಯಾವಾಗ ಹೊಳೆಯುತ್ತದೋ ನೋಡೋಣ. ಹಾಗೇನಾದರೂ ಸುದೈವವಶಾತ್ ಹೊಳೆದಲ್ಲಿ ಅಷ್ಟು ಹೊತ್ತಿಗೆ ನಾವೆಲ್ಲಾ ಪಾಕಿ ಭಯೋತ್ಪಾದಕರಿಗೆ  ಬಲಿಯಾಗದೆ ಜೀವಂತವಾಗಿದ್ದರೆ ನಮ್ಮ ಪುಣ್ಯ ಸಹ ಹೌದು.

ಈ ಮಧ್ಯೆ ಪತ್ರಿಕೆಗಳು ಮತ್ತು ಟೀವೀ ಮಾಧ್ಯಮಗಳು ಒಬಾಮಾ ಪಾಕ್ ಬಗ್ಗೆ ಏನೂ ಹೇಳಲೇ ಇಲ್ಲ ಎಂದು ಮುನಿಸಿಕೊಂಡವು. ನಾವೆಲ್ಲಾ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ, ಭಾರತಕ್ಕೆ ಭಯೋತ್ಪಾದನೆಯನ್ನು ರಫ್ತು ಮಾಡಬೇಡಿ ಎಂದು ಪಾಕಿಗಳಿಗೆ ತಾಕೀತು ಮಾಡಬಹುದು ಎಂದು ಬಗೆದಿದ್ದೆವು ಆದರೆ ಅಮೇರಿಕಾ ಎಂದಿಗೂ ಪಾಕಿನ ಮಿತ್ರ ಎಂದು ಸಾಬೀತು ಪಡಿಸಿತು ಎಂದು ಹಲುಬಿದವು ಮಾಧ್ಯಮಗಳು. ಒಂದು ರೀತಿಯ ದೈನಂದಿನ ಬದುಕಿನ ದೃಶ್ಯದ ಥರ ಕಾಣುತ್ತಿಲ್ಲವೇ ಇದು? ಕಮಲಮ್ಮನ ಮನೆಗೆ ಪಕ್ಕದ ಮನೆಯ ಜಾನಕಮ್ಮ ಬಂದು ಸರಸಮ್ಮನ ಬಗ್ಗೆ ಏನೂ ಚಾಡಿ ಹೇಳಿಲ್ಲ ಎಂದು ದೂರುವ ಹಾಗೆ ವರ್ತಿಸಿದವು ಮಾಧ್ಯಮಗಳು ಮತ್ತು ಒಬಾಮಾರ ಭೇಟಿಯ ಬಗ್ಗೆ ಮಾತನಾಡಲು ಬಂದ ಪಂಡಿತರು. ಅಮೇರಿಕಾ ಪಾಕಿನ ಬಗ್ಗೆ ಅಷ್ಟು ಸುಲಭವಾಗಿ ದೂರಲು ಹೋಗೋದಿಲ್ಲ. ಕೆಲವಾರಗಳ ಹಿಂದೆ ಬ್ರಿಟಿಶ್ ಪ್ರಧಾನಿ ಕಮೆರೂನ್ ಬಂದು ಪಾಕಿಸ್ತಾನವನ್ನು ತರಾಟೆಗೆ ತೆಗೆದು ಕೊಂಡಿದ್ದರು. ಭಯೋತ್ಪಾದಕತೆ ಶುರು ಆಗೋದೆ ಪಾಕಿನಿಂದ ಎನ್ನುವರ್ಥದ ಮಾತನ್ನು ಹೇಳಿದರು. ಹಾಗೆ ಹೇಳಿದ್ದಕ್ಕೆ ಪಾಕಿನಿಂದ ಉಗ್ರ ಪ್ರತಿಭಟನೆ ಬಂದರೂ ಕಮೆರೂನ್ ಜಗ್ಗಲಿಲ್ಲ. ಆದರೆ ಇದನ್ನು ವೀಕ್ಷಿಸಿದ್ದ ಅಮೆರಿಕೆಗೆ ಇದು ಎಚ್ಚರಿಕೆ ಗಂಟೆಯಾಯಿತು. ಕೆಮೆರೂನ್ ಏನೇ ಹೇಳಿದರೂ ಅವರಿಗೆ ನಷ್ಟವಿಲ್ಲ ಏಕೆಂದರೆ ಆಫ್ಘಾನಿಸ್ತಾನದಲ್ಲಿ ಅವರ ಪಾತ್ರ ದೊಡ್ಡದಲ್ಲ. ಆದರೆ ಅಮೆರಿಕೆಯ ವಿಷಯ ಹಾಗಲ್ಲ. ಕಂದಹಾರದ ಉಗ್ರರನ್ನು ಬಲಿ ಹಾಕಬೇಕೆಂದರೆ ಪಾಕಿನ ಸಹಕಾರ ಬೇಕೇ ಬೇಕು. ನಾವ್ಯಾಕೆ ಬೇಡದ ಉಸಾಬರಿಗೆ ಕೈ ಹಾಕಿ ಕಷ್ಟದಲ್ಲಿ ಸಿಕ್ಕಿ ಹಾಕಿ ಕೊಳ್ಳಬೇಕು. ನಾವು ಬಂದಿರೋದು ವ್ಯಾಪರಕ್ಕೊಸ್ಕರ. ವ್ಯಾಪಾರ ಕುದುರಿಸಿ ಒಂದಿಷ್ಟು ಡಾನ್ಸ್ ಮಾಡಿ ಭಾರತೀಯರನ್ನು ಮೋಡಿ ಮಾಡಿದರೆ ಸಾಕು ಎಂದು ಅಮೆರಿಕೆಯ ಎಣಿಕೆ. ಈ ಕಾರಣಕ್ಕಾಗಿಯೇ ಅಮೆರಿಕೆಯ ದಿವ್ಯ ಮೌನ ಪಾಕ್ ಭಯೋತ್ಪಾದಕತೆ ಬಗ್ಗೆ. ಒಬಾಮ ಬಂದ ಮೊದಲ ದಿನವೇ 10 billion ಡಾಲರ್ಗಳ ವ್ಯಾಪಾರ ಮಾಡಿತು ಅಮೇರಿಕ.

NPR ಅಮೆರಿಕೆಯ ಪ್ರಸಿದ್ಧ ರೇಡಿಯೋ ಮಾಧ್ಯಮ. ಒಬಾಮಾ ಜೊತೆಗೆ ಬಂದಿದ್ದ npr ವರದಿಗಾರ st. xaviers college ನಲ್ಲಿ ನಡೆದ ಅಧ್ಯಕ್ಷರ ಮತ್ತು ವಿದ್ಯಾರ್ಥಿಗಳ ನಡುವಿನ ಸಂವಾದ ದ ವೇಳೆ ೧೯ ರ ಓರ್ವ ತರುಣಿ ಪಾಕಿನ ಭಯೋತ್ಪಾದನೆ ಬಗ್ಗೆ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡಿದ್ದರ ಬಗ್ಗೆ ಹೇಳುತ್ತಾ “ಭಾರತಕ್ಕೆ ಪಾಕಿಸ್ತಾನ ಎಂದರೆ ಒಂದು ರೀತಿಯ jealous and rivalry ಎಂದು ಹೇಳಿದ. rivalry ಏನೋ ಸರಿಯೇ. ಆದರೆ jealous ಯಾವುದರ ಬಗ್ಗೆಯೋ ತಿಳಿಯುತ್ತಿಲ್ಲ. ಎಲ್ಲಾ ತೀರ್ಮಾನಗಳಿಗೂ, ನಿರ್ಧಾರಗಳಿಗೂ ಇಸ್ಲಾಮಾಬಾದ್ ಅಮೆರಿಕೆಯ ವಾಷಿಂಗ್ಟನ್ ನಿಂದ dictation ತೆಗೆದು ಕೊಳ್ಳುತ್ತದಲ್ಲಾ, ಪಾಕಿಗಳ ಈ ಬೆನ್ನುಲುಬಿಲ್ಲದ ನಡವಳಿಕೆ ಬಗ್ಗೆ ಇರಬೇಕು ನಮಗೆ ಮತ್ಸರ, jealousy.           

ನಮ್ಮ ಸಂಸತ್ತನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ರಾಜಕಾರಣಿಗಳಂತೆಯೇ ಭರವಸೆಯನ್ನ ನೀಡಲು ಮರೆಯಲಿಲ್ಲ ಒಬಾಮಾ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಖಾಯಂ ಸದಸ್ಯತ್ವಕ್ಕೆ ಬೆಂಬಲ ಸೂಚಿಸಿದ ಒಬಾಮ ಬದಲಾಗುತ್ತಿರುವ ವಿಶ್ವ ರಾಜಕಾರಣದಲ್ಲಿ ಭಾರತ ಜಗಾರೂಕತೆಯಿಂದ ವರ್ತಿಸುವಂತೆ ಸೂಕ್ಷ್ಮವಾಗಿ ಸೂಚಿಸಿದರು. ಆದರೆ ಈ ಆಶ್ವಾಸನೆಯ ಬೆನ್ನಲ್ಲೇ ಬಂದವು ಅಪಸ್ವರಗಳು, ಜರ್ಮನಿ ಮತ್ತು ಜಪಾನ್ ದೇಶಗಳಿಂದ. ಒಬಾಮಾ ನೀಡಿದ್ದು ಆಶ್ವಾಸನೆ ಮಾತ್ರ, ಈ ಆಶ್ವಾಸನೆ ವಿರುದ್ಧವೇ ತಕರಾರು ಬಂದರೆ ಇನ್ನು ವಿಶ್ವಸಂಸ್ಥೆಯಲ್ಲಿ ನಮಗೆ ಯಾವ ರೀತಿಯ ಬೆಂಬಲ ಸಿಕ್ಕೀತು ಎಂದು ಊಹಿಸಲು ನಮಗೆ ರಾಜನೀತಿಯಲ್ಲಿ ಡಾಕ್ಟರೇಟ್ ಪದವಿಯ ಅವಶ್ಯಕತೆಯಿಲ್ಲ.  

ಒಟ್ಟಿನಲ್ಲಿ ಒಬಾಮ ಬಂದರು, ಮಾಧ್ಯಮಗಳಿಗೆ ಸುಗ್ಗಿಯೋ ಸುಗ್ಗಿ. ಒಬಾಮ ಎಲ್ಲಿಗೆಹೋದರು, ಏನನ್ನು ತಿಂದರು,  ಹೇಗೆ ಕುಣಿದರು ಇತ್ಯಾದಿ ಇತ್ಯಾದಿ ಪುಂಖಾನುಪುಂಖವಾಗಿ ವರದಿ ಮಾಡಿದವು. ನಮಗೂ ಒಂದು ರೀತಿಯ ಪುಳಕ. ಬಿಳಿಯರ ನಾಡಿನಿಂದ ಒಂದು ಕಾಗೆ ಬಂದಿಳಿದರೂ ನಮ್ಮ ಬದುಕು ಸಾರ್ಥಕವಾಗಿ “ಅತಿಥಿ ದೇವೋ ಭವನನ್ನು ಸಂತುಷ್ಟ ನನ್ನಾಗಿಸಿದ ಭಾವನೆಯಲ್ಲಿ ಧನ್ಯರಾಗಿ ಬಿಡುತ್ತೇವೆ.