ಹೊಗೆಯಾಗಿ ಹೋಗಲಿರುವ ಮತ್ತೊಂದು ದಿನ…

…”ವಿಶ್ವ ತಂಬಾಕು ರಹಿತ” ದಿನ.

ಶಾಸನ ವಿಧಿಸಿದ ಎಚ್ಚರಿಕೆ: ಧೂಮಪಾನ ಆರೋಗ್ಯಕ್ಕೆ ಹಾನಿಕರ. ಈ ಮಾತುಗಳು ಶಾಸನಗಳಷ್ಟೇ ವ್ಯರ್ಥ, ಕೆಲಸಕ್ಕೆ ಬಾರದಂಥವು. ಜೀವಗಳನ್ನು ರಕ್ಷಿಸಲೆಂದು ಸೃಷ್ಟಿಸಿದ ನಿರ್ಜೀವ ಸಂದೇಶ. ಈ ಸಂದೇಶ ನೋಡಿ ಯಾವನೂ ಸಿಗರೇಟ್, ಬೀಡಿ ಸಹವಾಸ ಬೇಡ ಎಂದು ಹೇಳಿದ್ದನ್ನು ನಾನಂತೂ ಕೇಳಿಲ್ಲ. ಧೂಮಪಾನ ಮಾಡಬಾರದು ಎಂದು ಬಾಲ್ಯದಲ್ಲಿ ಪಾಲಕರೂ, ಯೌವನದಲ್ಲಿ ಅರ್ಧಾಂಗಿನಿಯರೂ ಹೇಳುವುದನ್ನು ಕವಡೆ ಕಾಸಿಗೆ ಬೆಲೆ ಕಲ್ಪಿಸದೆ ಸೇದುವವರ ಸಂಖ್ಯೆಯೇ ಅಧಿಕ. ಇನ್ನು ಈ ನಡವಳಿಕೆಯಲ್ಲಿ ಏನಾದರೂ ಪರಿವರ್ತನೆ ಬರಬೇಕೆಂದರೆ ಡಿಸೆಂಬರ್ ೩೧ ಅಥವಾ ಜನವರಿ ೧, ಹೊಸವರ್ಷದ ನಿರ್ಣಯವಾಗಿ ಆಶ್ವಾಸನೆ, ನಾನಿನ್ನು ಸಿಗರೇಟ್ ಸೇದೊದಿಲ್ಲ ಎಂದು. ಈ ನಿರ್ಣಯದ ಆಯುಷ್ಯ ಹೆಚ್ಚು ಎಂದರೆ ೭೨ ಘಂಟೆಗಳು. ಮೂರು ದಿನ.     

Smokers are beggars ಅಂತಾರೆ. ಒಂದು ‘ಕಡ್ಡಿ’ ಇದ್ಯೇನಣ್ಣ? lighter please.. ಪರಿಚಯದ ಅವಶ್ಯಕತೆಯಿಲ್ಲ, instant beggars. ಅವರುಗಳ ನಡುವಿನ camaraderi ಅಂಥದ್ದು. ಸ್ಮೋಕರ್ ಗಳು humble ಅಂತೆ, ಏಕೆಂದರೆ ಅವರು ಸ್ಮೋಕಿಸಲೆಂದು ಬೀಡಿ ಸಿಗರೇಟಿಗೆ ಕಿಡಿ ಹೊತ್ತಿಸುವಾಗ ಸ್ವಲ್ಪ ನಾಜೂಕಾಗಿ ಬಗ್ಗಿ ತಾನೇ ಹಚ್ಚೋದು? ಹಾಗೆಯೇ ಒಂದು “ಕಡ್ಡಿ” ಕೊಡಣ್ಣ ಎಂದು ಗಿಂಜುತ್ತಾ ಕೇಳುವುದರಲ್ಲೂ ತುಂಬಿದೆ “ಹಂಬಲ್” ನೆಸ್, ಅಲ್ವೇ?

 ಧೂಮಪಾನಿಗಳು ಯಾವುದೇ ವಿಷಯದಲ್ಲೂ ಕಂಜೂಸ್ ಗಳಾದರೂ ತಮ್ಮ ಪ್ರೀತಿಯ ಧೂಮಪಾನದ ಖರ್ಜಿಗೆ ಮಾತ್ರ ಹಿಂದೆ ಮುಂದೆ ನೋಡರು. ಚಟವೇ ಹಾಗೆ ನೋಡಿ. ಮೊದಲು ತಮಾಷೆಗೆ, ಮೋಜಿಗೆ ಎಂದು ಆರಂಭವಾದ ಚಟ ನಮ್ಮನ್ನು ಗುಲಾಮರನ್ನಾಗಿಸುತ್ತದೆ. ಕೆಲವೊಮ್ಮೆ ಈ ಚಟ ಬಹುಬೇಗನೆ ಚಟ್ಟ ಏರಲೂ ನೆರವಾಗುತ್ತದೆ. ಅನೇಕ ರೀತಿಯ ಕ್ಯಾನ್ಸರ್ ಗಳಿಗೆ ಕಾರಣ ಧೂಮಪಾನ. ಧೂಮಪಾನ ಯಾವಾಗ ಬಿಡ್ತೀಯ ಎಂದು ಅವಿವಾಹಿತನನ್ನು ಕೇಳಿದರೆ ತನ್ನ ತುಟಿಗಳಿಗೆ ಪರ್ಯಾಯವಾದದ್ದು ಸಿಕ್ಕ ನಂತರ ಎನ್ನುತ್ತಾನೆ. ಅಂದ್ರೆ ಅವನಿಗೊಂದು ಚೆಂದುಳ್ಳಿ ಹೆಣ್ಣನ್ನು ಹೊಂದಿಸಿ ಕೊಟ್ಟ ಕೂಡಲೇ ತನ್ನ ಚಟವನ್ನು ಬಿಡುತ್ತಾನೆ ಎನ್ನುವ ಖಾತರಿಯಿಲ್ಲ. “ಪರ್ಯಾಯ” ವಾಗಿ ಸಿಕ್ಕಿದ್ದು boredom ಆಗಿ ಕಾಣುತ್ತಿದ್ದಂತೆಯೇ ವಾಪಸ್ ಹಳೇ ಧಂಧೆಗೆ.  

ಸಿಗರೇಟ್ ಸೇದುವವರ ಮಧ್ಯೆ ಸಿಕ್ಕಿ ಕೊಂಡ ನಮ್ಮ ಪಾಡು ಸ್ವಲ್ಪ ನೋಡಿ. ಸೇದುವವನೇನೋ ಸುಖವಾಗಿ, ತನ್ನ ಚಟದ ಮಜಾ ತೆಗೆದು ಕೊಳ್ಳುತ್ತಾ, ಸುರುಳಿಯಾಗಿಯೂ, ಕೊಳವೆಯಾಗಿಯೂ, ತರಾವರಿ ರೀತಿಯ ಹೊಗೆಯನ್ನು ಬಿಡುತ್ತಾ, ಹೊಗೆ ಬಿಡುವ ತನ್ನ creativity ಗೆ ತನಗೆ ತಾನೇ ತಲೆದೂಗುತ್ತಾ ಮತ್ತಿನಲ್ಲಿರುತ್ತಾನೆ. ಆದರೆ ನಾವು? ನಮಗೇನು ಸಿಗುತ್ತದೆ ಅದರಿಂದ ಆನಂದ? ಅವನ ಸಿಗರೇಟ್ ನ ತುದಿಯಿಂದ ಹೊರ ಬರುವ ಹೊಗೆ, ಅವನ ಬಾಯಿಂದ ಬರುವ ಹೊಗೆ, ಅವನ ಮೂಗಿನಿಂದ ಬರುವ ಹೊಗೆ, ಅವನ ಕವಿ ಕಣ್ಣುಗಳಿಂದ ಬರುವ ಹೊಗೆ, ಹೀಗೆ ನಾನಾ ರೀತಿಯಲ್ಲಿ, ಅವನ ಶರೀರದ ಎಲ್ಲಾ ರಂಧ್ರಗಳಿಂದಲೂ ‘ಫಿಲ್ಟರ್’ ಆಗಿ ಬರುವ ಹೊಗೆಯನ್ನು ನಾವು ಸೇವಿಸಬೇಕು. ಪ್ರತಿಭಟಿಸಿದಿರೋ, ಮೇಲೆ ಹೇಳಿದ ಹಂಬಲ್ ನೆಸ್ ಎಲ್ಲಾ ಮಾಯಾ. ನಿಮ್ಮ ಕಡೆ ಕೆಕ್ಕರಿಸಿ ಒಂದು ನೋಟ, ದಮ್ಮು ಸೇರಿಸಿ ಜೋರಾಗಿ ಮತ್ತೊಂದು ದಮ್ಮು. ಹೀಗೆ ಸಿಗರೆಟ್ ಸೇದದೆಯೂ ಅದರ ಎಲ್ಲಾ ಬ್ಯಾನೆಗಳನ್ನು ಅಂಟಿಸಿ ಕೊಳ್ಳುವ ಸೆಕೆಂಡರಿ ಸ್ಮೋಕರ್ ಗಳಾದ ನಮಗೆ ಯಾವ ರಕ್ಷಣೆಯೂ ಇಲ್ಲ. secondary smoking, ವೈದ್ಯಕೀಯ ಅಧ್ಯಯನದ ಪ್ರಕಾರ, active smoking ಗಿಂತ ಅಪಾಯಕಾರಿ ಅಂತೆ. ಕೆಲವು ವರ್ಷಗಳ ಹಿಂದೆ ಹೀಗೆ ಸೆಕೆಂಡರಿ ಸ್ಮೋಕಿಂಗ್ ಕಾರಣ ಕ್ಯಾನ್ಸರ್ ತಗುಲಿಸಿಕೊಂಡ ಕೊಂಡ ಓರ್ವ ಪಾಶ್ಚಾತ್ಯ ಮಹಿಳೆ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಳು ಪರಿಹಾರ ಕೇಳಿ ಎಂದು ಓದಿದ ನೆನಪು. ಪರಿಹಾರ ಸಿಕ್ಕಿತೋ ಇಲ್ವೋ ಗೊತ್ತಿಲ್ಲ. ‘ಫಿಲಿಪ್ ಮೋರಿಸ್’ ನಂಥ ಕಂಪೆನಿಗಳಿಂದ ಹಣ ಕೇಳೋದು ಒಂದೇ, ಹೋದ ಪ್ರಾಣ ವಾಪಸ್ಸು ಕೊಡು ಎಂದು ಯಮನ ಹಿಂದೆ ಬೀಳೋದು ಒಂದೇ.

ಮುಂದುವರಿದ ದೇಶಗಳಲ್ಲಿ ಧೂಮಪಾನಿಗಳಿಗೆ ಎಲ್ಲೂ ಧೂಮಪಾನ ಮಾಡಲು ಸ್ಥಳವಿಲ್ಲದಂತೆ ಮಾಡಿದ್ದಾರೆ, ಅಷ್ಟು ಮಾತ್ರವಲ್ಲ ಅದರ ಮೇಲೆ ಜನ ಜಾಗೃತಿ, ಅಭಿಯಾನ ಬೇರೆ. ಹಾಗಾದರೆ ಮುಂದುವರಿದ ದೇಶಗಳಲ್ಲೇ ಹುಟ್ಟಿದ, ಅವರೇ ನಡೆಸುವ ಸಿಗರೆಟ್ ಕಂಪೆನಿಗಳ ಕಥೆ ? ಅಲ್ಲಿನ ಜನರು ಧೂಮಪಾನ ಕಂಪೆನಿಗಳನ್ನು “ಮುಂದಕ್ಕೆ ಹೋಗಪ್ಪಾ” ಎಂದು ಅಟ್ಟಿದರೆ, ಇವರುಗಳು ಮುಂದು ಮುಂದಕ್ಕೆ ಬಂದು ಇನ್ನೂ ಅಭಿವೃದ್ಧಿ ಹೊಂದುತ್ತಿರುವ, ಹೊಂದದ ದೇಶಗಳಿಗೆ ತಮ್ಮ ಸರಕುಗಳನ್ನು ಇಳಿಸಿದರು. ಸುಲಭ ಬೆಲೆಗೆ ಮಾರಲು ಶುರು ಮಾಡಿದರು. ಇಲ್ಲಿ ಸೌದಿ ಅರೇಬಿಯಾದಲ್ಲಿ ಯುವಜನರ ಫೇವರಿಟ್ ಆದ marlboro ಸಿಗರೇಟ್  ಒಂದು ಪ್ಯಾಕ್ ಗೆ ೫.೫೦ ರಿಯಾಲ್  ( ೭೦.೦೦ ರೂ) ಆದರೆ marlboro ಕಂಪೆನಿಯ ತವರೂರು ಅಮೆರಿಕೆಯಲ್ಲಿ ಈ ಸಿಗರೆಟ್ ಗೆ ಬೆಲೆ ನಾಲ್ಕು ಪಟ್ಟು ಹೆಚ್ಚು. ಸೇದಬಾರದು ಎಂದು ಎಟುಕದ ಬೆಲೆ. ನೋಡಿ, ಸ್ವದೇಶೀಯರನ್ನು ಎಷ್ಟು ಚೊಕ್ಕವಾಗಿ ಇಟ್ಟುಕೊಳ್ಳುತ್ತಾರೆ ಅಮೆರಿಕನ್ನರು.

ಧೂಮಪಾನವನ್ನು ದೊಡ್ಡ ಹವ್ಯಾಸವಾಗಿ ತೆಗೆದು ಕೊಳ್ಳುತ್ತಿರುವ ಮತ್ತೊಂದು ದೇಶ ಎಂದರೆ ಇಂಡೋನೇಶಿಯ. ಈ ದೇಶದಲ್ಲಿ ಎರಡು ಕೋಟಿ ಗೂ ಹೆಚ್ಚು “ಬಾಲ ಧೂಮಪಾನಿ” ಗಳಿದ್ದಾರಂತೆ. ನಮ್ಮಲ್ಲಿನ ಬಾಲ ಕಾರ್ಮಿಕರ ಸಮಸ್ಯೆ ಥರ. ನೈಜೀರಿಯ, ಯುಕ್ರೇನ್, ಬ್ರೆಜಿಲ್ ಮುಂತಾದ ದೇಶಗಳಲ್ಲಿ ಸಿಗರೆಟ್ ಕಂಪೆನಿಗಳು ಬರೀ ಕ್ರೀಡೆಗಳನ್ನು ಮಾತ್ರವಲ್ಲ ರಾತ್ರಿ ಕ್ಲಬ್ಬುಗಳನ್ನೂ ಪ್ರಾಯೋಜಿಸುತ್ತಿದ್ದಾರಂತೆ. ಕುಡಿದು, ಸೇದಿ, ಮಸ್ತ್ ಮಜಾ ಮಾಡಿ ಎಂದು. Life is short, you see?  ರಷ್ಯಾದಲ್ಲಿ ಮಹಿಳೆಯರನ್ನು ಸ್ಮೋಕಿಂಗ್ ಚಟಕ್ಕೆ ಎಳೆಯಲು ಸಿಗರೆಟ್ ಪ್ಯಾಕೆಟ್ ಗಳನ್ನು ವಜ್ರ ಲೇಪನದ ಸುಗಂಧ್ಯ ದ್ರವ್ಯದ ಬಾಟಲಿನಂತೆ ರೂಪಿಸಿದ್ದಾರಂತೆ. ನೋಡಿದಿರಾ, ಜನರನ್ನು ಕೊಲ್ಲಲು ಅನುಸರಿಸುವ ವಿಧಿ ವಿಧಾನಗಳನ್ನು? ಆದರೂ ಇವರು ಪಾಶ್ಚಾತ್ಯರು, ಸುಸಂಸ್ಕೃತರು. ಇವರು ಮಾಡುವಕ್ಕೆದೆಲ್ಲಾ free trade ಎನ್ನುವ ಹಣೆಪಟ್ಟಿ.      

ಕ್ಯಾನ್ಸರ್ ತಜ್ಞ ನೂ (oncologist) ಆದ ಉರುಗ್ವೆ ದೇಶದ ಅಧ್ಯಕ್ಷ ಧೂಮಪಾನದ ಮೇಲೆ ನಿಗ್ರಹ ಹೇರಿದ್ದಕ್ಕೆ ವಿಶ್ವ ವಿಖ್ಯಾತ ಸಿಗರೆಟ್ ಕಂಪೆನಿ ‘ಫಿಲಿಪ್ ಮೋರಿಸ್’ ಅಲ್ಲಿನ ಸರಕಾರವನ್ನು ನ್ಯಾಯಾಲಯಕ್ಕೆ ಎಳೆದಿದೆ. ಈ ವ್ಯಾಜ್ಯದಲ್ಲಿ ಒಂದು ವೇಳೆ ಗ್ರಹಚಾರಕ್ಕೇನಾದರೂ ಉರುಗ್ವೆ ಸೋತರೆ ಸುಮಾರು ೯,೦೦೦ ಸಾವಿರ ಕೋಟಿ ರೂಪಾಯಿ ಈ ಕಂಪೆನಿಗೆ ಪಾವತಿಸಬೇಕಂತೆ. ಪಾಪ ಟೋಬಾಕೋ ಕಂಪೆನಿಗಳ ಈ ನಿಲುವಿಗೆ ಹೆದರಿ ಮಧ್ಯ ಅಮೆರಿಕೆಯ ಇತರ ಬಡ ರಾಷ್ಟ್ರಗಳು ಸೊಕ್ಕಿದ ಫಿಲಿಪ್ ಮೋರಿಸ್ ನಂಥ ಕಂಪೆನಿಗಳ ಸಹವಾಸಕ್ಕೆ ಹೋಗುತ್ತಿಲ್ಲವಂತೆ. ಉರುಗ್ವೆ ವಿರುದ್ಧದ ಈ ವ್ಯಾಜ್ಯದಲ್ಲಿ ಫಿಲಿಪ್ ಮೋರಿಸ್ ಗೆದ್ದರೆ ಗೊತ್ತೇ ಇದೆಯಲ್ಲಾ, ಇನ್ನಷ್ಟು ರಂಗು ರಂಜಿತ ಪ್ಯಾಕೆಟ್ ಗಳು ಮಾರಾಟಕ್ಕೆ ಬರುತ್ತವೆ. ಧೂಮ ಪಾನ ಪ್ರೊಮೋಟ್ ಮಾಡಲು ಮತ್ತಷ್ಟು ಬೆಡಗಿಯರನ್ನು hire ಮಾಡುತ್ತಾರೆ. ಒಂದು ಕಡೆ ಇವರುಗಳು ಉತ್ಪಾದಿಸುವ ಸಿಗರೆಟ್ ಸೇದೀ ಸೇದೀ ಯುವಜನರು ರೋಗಗಳನ್ನು ಅಂಟಿಸಿ ಕೊಂಡು ಸಾಯುತ್ತಿದ್ದರೆ, ಮತ್ತೊಂದು ಕಡೆ ಸಾವಿನ ಅಂಗಡಿ ತೆರೆದು ಕೂತಿರುವ ಸಿಗರೆಟ್ ಕಂಪೆನಿಗಳ CEO ಗಳು, ಉನ್ನತ ಅಧಿಕಾರಿಗಳು ಕೋಟಿಗಟ್ಟಲೆ ಹಣವನ್ನು ಬೋನಸ್ ಆಗಿ ಪಡೆದು “SMOKE FREE” ವಲಯಗಳಲ್ಲಿ, ರೆಸಾರ್ಟ್ ಗಳಲ್ಲಿ ಮಜಾ ಉಡಾಯಿಸುತ್ತಿದ್ದಾರೆ. ಶ್ ಶ್ ಶ್, the world is still a fair place.

ಎಲ್ಲ ದಿನಗಳ ರೀತಿ ಸೂರ್ಯ ಮುಳುಗುವುದರೊಂದಿಗೆ ತಂಬಾಕು ರಹಿತ ದಿನವೂ ಮಾಯಾವಾಗುತ್ತದೆ. ಅದರೊಂದಿಗೆ ಸಾವಿರಾರು ಬಡ ಜೀವಗಳೂ ಸಹ.

 

Advertisements

ನಾಯಿಯ ಹಾಲಿನ ಮೇವು.

ಇದು ಚೀನಾದಲ್ಲಿ ನಡೆದಿದ್ದು. ‘ಸಿಂಹುಲಿ’ ಮರಿಗಳಿಗೆ ನಾಯಿಯೊಂದು ಹಾಲೂಡಿಸಲು ಒಪ್ಪಿತು. ಹೌದಾ? ಮೊದಲು ಈ ಸಿಂಹುಲಿ ಏನು ಎನ್ನುವುದನ್ನು ಹೇಳು, ಎಂದಿರೋ? ಗಂಡು ಸಿಂಹ ವಾಗಿ, ಹುಲಿ ಹೆಣ್ಣಾಗಿ ಇವರೀರ್ವರ ಮಿಲನದ ಫಲವಾಗಿ ಹುಟ್ಟುವ ಮರಿಗೆ ಸಿಂಹುಲಿ ಎನ್ನುತ್ತಾರೆ. ಎನ್ನುತ್ತಾರೆ ಅಂತ ನನ್ನ ಊಹೆ. ಏಕೆಂದರೆ ಈ ಮರಿಗಳಿಗೆ ಆಂಗ್ಲ ಭಾಷೆಯಲ್ಲಿ liger ಎನ್ನುತ್ತಾರೆ. lion + tiger = liger. ಕನ್ನಡದಲ್ಲಿ ಸಿಂಹ + ಹುಲಿ = ಸಿಂಹುಲಿ, ಹೇಗಿದೆ? ಅಥವಾ ಇದಕ್ಕೆ ಬೇರೇನಾದರೂ ಪರ್ಯಾಯ ಪದವಿದ್ದರೆ ವಾಚಕ ಪ್ರಭು ತಿಳಿಸೋಣವಾಗಲಿ.

ಮರಳಿ ಕಥೆಗೆ. zoo ಒಂದರಲ್ಲಿ ಸಿಂಹ ಮತ್ತು ಹುಲಿ ಮಿಲನರಾಗಿ ಹುಟ್ಟಿದ ನಾಲ್ಕು ಮರಿಗಳು ಒಂದೆರಡು ದಿನಗಳ ಕಾಲ ತಾಯಿಯ ಮೊಲೆ ಹಾಲನ್ನು ಕುಡಿದು ನಂತರ ತಮ್ಮ ತಾಯಿ ತಮ್ಮನ್ನು ತ್ಯಜಿಸಿದ ಕಾರಣ ಎರಡ ಮಕ್ಕಳು ಸತ್ತವು. ಉಳಿದ ಎರಡು ಮಕ್ಕಳ ಪಾಡು ನೋಡಿ ಮರುಗಿದ zoo ಸಿಬ್ಬಂದಿ ಅಲ್ಲೇ ಆಗ ತಾನೇ ಮರಿಗಳಿಗೆ ಜನ್ಮ ನೀಡಿದ್ದ ನಾಯಿಯೊಂದರ ಹತ್ತಿರ ಅವುಗಳನ್ನ ಬಿಟ್ಟರು. ಸ್ವಲ್ಪ ಸಮಯ ಹಾಲಿನ ರುಚಿ ಹಿಡಿಸದೆ ಇದ್ದರೂ ಕ್ರಮೇಣ ಅವು ಒಗ್ಗಿ ಕೊಂಡವು ನಾಯಿಯ ಹಾಲಿಗೆ. ಸ್ವಲ್ಪ ದೊಡ್ಡದಾದ ನಂತರ worst scenario ದಲ್ಲಿ ಈ ಮರಿ ‘ಸಿಂಹುಲಿ’ ಗಳು ನಾಯಿಯನ್ನೇ ತಿಂದು ಹಾಕಬಹುದೋ ಅಥವಾ best outcome ಆಗಿ “ಮಲತಾಯಿ”ಯ ಒಡನಾಟದಿಂದ  ಸುಶ್ರಾವ್ಯವಾಗಿ ಬೊಗಳಲು ಆರಂಭಿಸುತ್ತೋ ಕಾದು ನೋಡಬೇಕಾದ ಬೆಳವಣಿಗೆ.    ಚ

  ಚಿತ್ರ ಕೃಪೆ: http://www.thedogfiles.com/2011/05/26/dog-helps-feed-abandoned-liger-cubs-in-china/

ಒಂದು ಸಂಭಾವ್ಯ ಡಿವೋರ್ಸ್ ಪ್ರಸಂಗ

ಪಾಕಿಸ್ತಾನದ ಅರಿವಿಗೆ, ಸುಳಿವಿಗೆ ಸಿಗದೆ ರಾಜಾರೋಷವಾಗಿ ಎತ್ತರದ ಗೋಡೆ ಸುತ್ತುವರಿದ ಕಟ್ಟಡ ವೊಂದರಲ್ಲಿ ವಾಸಿಸುತ್ತಿದ್ದ ಬಿನ್ ಲಾದೆನ್ ನನ್ನು ಅಮೇರಿಕಾ ತನ್ನದೇ ಆದ ಶೈಲಿಯಲ್ಲಿ ಪಾಕಿಸ್ತಾನದ ಅರಿವಿಗೆ ಸುಳಿವಿಗೆ ಸಿಗದೇ ತನ್ನ ಸೀಲ್-೬ ಕಮಾಂಡೋಗಳನ್ನು ಕಳಿಸಿ ಬಲಿ ಹಾಕಿತು. ತನಗೆ ತಿಳಿಸದೆ ತನ್ನ ದೇಶದೊಳಕ್ಕೆ ನುಗ್ಗಿ ಲಾದೆನ್ ಹತ್ಯೆಗೈದ ಅಮೇರಿಕೆಯ ಬಗ್ಗೆ ಪಾಕ್ ಕ್ರೋಧ ವ್ಯಕ್ತಪಡಿಸಿತು. ಪಾಕಿಸ್ತಾನದ ಅರಿವಿಗೆ ಬರದೆ ಬಿನ್ ಲಾದೆನ್ ಬದುಕುತ್ತಿದ್ದ ಅದೂ ಪಾಕ್ ರಾಜಧಾನಿಯ ಹತ್ತಿರ, ಅದೂ ಮಿಲಿಟರಿ ಅಕಾಡೆಮಿ ಯೊಂದರ ಸಮೀಪ ಎಂದರೆ ದೊಡ್ಡ ಆಶ್ಚರ್ಯವೇ. ಕೆಲವರ ಪ್ರಕಾರ ಪಾಕ್ ನೀಡಿದ ಸುಳಿವಿನ ಆಧಾರದ ಮೇಲೆಯೇ ಅಮೇರಿಕಾ ಬಿನ್ ಲಾದೆನ್ ನನ್ನು ಕೊಂದಿದ್ದು ಮತ್ತು ಪಾಕಿಸ್ತಾನದಲ್ಲಿರುವ ತಾಲಿಬಾನಿಗಳ ಆಕ್ರೋಶ ಎದುರಿಸಲು ಆಗದ ಪಾಕ್ ತನಗೆ ಈ ಕಾರ್ಯಾಚರಣೆ ಗೊತ್ತೇ ಇಲ್ಲ ಎಂದು ನಾಟಕ ಮಾಡಿ ಕೈ ತೊಳೆದು ಕೊಂಡಿತು ಎನ್ನುವ ಅಭಿಪ್ರಾಯದೊಂದಿಗೆ ಈ ಮಿಲಿಟರಿ ಕಾರ್ಯಾಚರಣೆ ಒಂದು ನಿಗೂಢ ರಹಸ್ಯವಾಗಿ ಜನರ ಊಹಾ, ಕಲ್ಪನೆಗಳಿಗೆ ಇನ್ನಷ್ಟು ಕಾಲ ಮೇವನ್ನು ಒದಗಿಸಲು ಕಾರಣವಾಯಿತು.

ಸೀಲ್ ಗಳು ನಡೆಸಿದ ಕಾರ್ಯಾಚರಣೆ ಪಾಕಿಗೆ ಗೊತ್ತೇ ಇರಲಿಲ್ಲ ಎನ್ನುವ ಮಾತಿಗೆ ಮನ್ನಣೆ ನೀಡುವುದಾದರೆ ರಹಸ್ಯ ಕಾರ್ಯಾಚರಣೆ ಪಾಕ್ ಮತ್ತು ಅಮೇರಿಕಾ ನಡುವಿನ ಆಪ್ತ ಬಾಂಧವ್ಯವನ್ನು ಡಿವೋರ್ಸ್ ಅಂಚಿಗೆ ತಂದು ನಿಲ್ಲಿಸಿದೆ ಎನ್ನಬಹುದು. ಡಿವೋರ್ಸ್ ಸಹ ಅಷ್ಟು ಸುಲಭದ್ದಲ್ಲ. ಅದು acrimonious ಆಗಿ ತೀರುತ್ತದೆ. ಏಕೆಂದರೆ ಅಮೇರಿಕಾ ಪಾಕ್ ಸುಮಧುರ ಸಂಬಂಧ ಮಕ್ಕಳು ಮರಿಗಳನ್ನು ಹುಟ್ಟಿಸಿದೆ ತಾನೇ? ತಾಲಿಬಾನ್, ಅಲ್ಕೈದಾ, ಆಫ್ಘಾನಿಸ್ತಾನ್, ಮುಲ್ಲಾ ಉಮರ್, ಭಯೋತ್ಪಾದನೆ ಇತ್ಯಾದಿ.. ಹೀಗೆ ಮುಂದುವರಿಯುವ ಸಂತಾನಗಳ ಲಾಲನೆ ಪಾಲನೆ ಹೇಗೆ? ಈ ಸಂತಾನಗಳು ಯಾರ ಜವಾಬ್ದಾರಿ? ಹೀಗೆ ಒಂದು ರೀತಿಯ ವಿಶ್ವದ ನೆಮ್ಮದಿ ಕೆಡಿಸುವ ‘ಡಿವೋರ್ಸ್ ಅಂಡ್ ಕಸ್ಟೋಡಿಯಲ್ ಪ್ರೊಸೀಡಿಂಗ್ಸ್’ ಯಾವ ಹಂತಕ್ಕೆ ಬಂದು ಮುಟ್ಟುತ್ತದೋ ಎಂದು ವಿಶ್ವ ಕೈ ಹೊಸಕಿಕೊಳ್ಳುತ್ತಾ ಆತಂಕಿತವಾಗಿದ್ದರೆ ಇದೋ ಬಂತು ಅಮೇರಿಕೆಯಿಂದ ವಿಶೇಷ ವಿಮಾನವೊಂದು ಅಲ್ಲಿನ ವಿದೇಶಾಂಗ ಕಾರ್ಯದರ್ಶಿಯನ್ನು ಹೊತ್ತು. ಹಿಲರಿ ಕ್ಲಿಂಟನ್ ಬಂದರು ಫಸ್ಟ್ ಏಡ್ ಕಿಟ್ ನೊಂದಿಗೆ. ನೊಂದ ಪ್ರಿಯತಮ/ಮೆ ಮನಕ್ಕೆ ಕೂಲಿಂಗ್, ಹೀಲಿಂಗ್ ಬಾಮ್ ನೊಂದಿಗೆ ಬಂದ ಹಿಲರಿ ಅದೇ characteristic smile ನೊಂದಿಗೆ ಪಾಕಿಸ್ತಾನ ಈಗಲೂ “ಒಳ್ಳೆಯ ಸಹಭಾಗಿ” – ಎ, ಗುಡ್ ಪಾರ್ಟ್ನರ್ ಎಂದು ಹೇಳಿ ಮಲಾಮಿನ ಲೇಪನ ಶುರು ಮಾಡಿದರು. ಈ ಮಾತಿನೊಂದಿಗೆ ಈ ಶನಿ ಸಂಬಂಧ ಇನ್ನೆಂಥ ಮಕ್ಕಳನ್ನು ಹುಟ್ಟಿಸುವ ತರಾತುರಿಯಲ್ಲಿದೆಯೋ ಎಂದು ನಮಗನ್ನಿಸಿದರೆ ಅದರಲ್ಲೇನೂ ತಪ್ಪಿಲ್ಲ.

ಯಾರೊಂದಿಗಿನ ಸ್ನೇಹದಲ್ಲೂ, ಶತ್ರುತ್ವದಲ್ಲೂ ಅಮೇರಿಕಾ ಎಂದಿಗೂ ಸಕಾರಾತ್ಮಕ beneficiary ಆಗಿಯೇ ಉಳಿಯುತ್ತದೆ. ಅದಕ್ಕೆ ಇತರರ ಇರುಸು ಮುರುಸು, ಕಷ್ಟ ಕಾರ್ಪಣ್ಯ ಇವೆಲ್ಲಾ ನಗಣ್ಯ. ಪಾಕಿಸ್ತಾನದೊಂದಿಗಿನ ನಮ್ಮ ಗಡಿ ಬದಲಿಸಿ ಕೊಳ್ಳಲು ಆಗದೆ ಬೆರಳುಗಳ ನಟಿಕೆ ಮುರಿಯುತ್ತಾ ಹಲ್ಲು ಮಸೆಯುವ ನಮಗೆ ಇವರೀರ್ವರ ಸಂಬಂಧ ತಲೆ ಬೇನೆಯೇ. ಇವರಿಬ್ಬರ ಸಂಬಂಧ ಚೆನ್ನಾಗಿದ್ದರೂ, ಹಳಸಿದರೂ ನಮಗೆ ಮಾತ್ರ ಗದ್ದಲ ಕಟ್ಟಿಟ್ಟ ಬುತ್ತಿ.

ತೆಗೆದು ಕೊಳ್ಳಿ “ಶಿಶ್ನ” ವನ್ನು ಅಧ್ಯಯನ ವಸ್ತುವಾಗಿ

ಇಂಗ್ಲೆಂಡಿನ ಕಾಲೇಜುಗಳಲ್ಲಿ ಅಧ್ಯಯನ ಕ್ಕಾಗಿ ಹತ್ತು ಹಲವು ರೋಚಕ, ವಿಚಿತ್ರ, ವಾಕರಿಕೆ ತರಿಸುವ ವಿಷಯಗಳನ್ನ ಸೇರಿಸಿದ್ದಾರಂತೆ. “ಸ್ಟಾರ್ ಟ್ರೆಕ್” ತತ್ತ್ವ ಶಾಸ್ತ್ರ ದಿಂದ ಹಿಡಿದಿ ಶಿಶ್ನ ಶಾಸ್ತ್ರದವರೆಗೂ ಕೋರ್ಸುಗಳು ಲಭ್ಯ. ಇಂಗ್ಲೆಂಡಿನ ಸುಪ್ರಸಿದ್ಧ ಫುಟ್ ಬಾಲ್ ಆಟಗಾರ  “ಡೇವಿಡ್ ಬೇಕ್ಹಂ” ನನ್ನು ಅಧ್ಯಯನ ಮಾಡುವುದೂ ಒಂದು ಕ್ರಾಸು. ಅಯ್ಯೋ, ಹಾಗಿದ್ದರೆ ನಾವೂ ಸಹ ತೆಂಡೂಲ್ಕರ್ ಅಥವಾ ಕಿರ್ಮಾನಿ ಅಥವಾ ವೀರಪ್ಪನ್ ಗಳನ್ನು ವಿಷಯವಾಗಿ ಆರಿಸಿ, ಅಧ್ಯಯನ ಮಾಡಿ ಒಂದು ಡಾಕ್ಟರೇಟ್ ತೆಗೆದು ಕೊಂಡರೆ ಹೇಗೆ?

ಮೇಲಿನ ಚಿತ್ರ “ಶಿಶ್ನ” ಅಧ್ಯಯನಕ್ಕೆ ಸಂಬಂಧಿಸಿದ್ದು. ವಾಕರಿಕೆ ಬಂದರೆ ನನ್ನ “ಹಳೇ ಸೇತುವೆ” ದಾಟಿದ ನಂತರ ಮಾಡಬೇಕಾದ್ದನ್ನು ಮಾಡಿ ಕೊಳ್ಳಿ.

ತುಂಡು ಲಂಗ ಕೂಡದು

ಸುತ್ತೀ ಬಳಸೀ ನಾವು ಹೇಳುತ್ತಿದ್ದ ಸ್ಥಳಕ್ಕೇ ಬರುತ್ತಿದೆ ವಿಶ್ವ. ಹುಡುಗಿಯರು ತುಂಡು ಲಂಗ ತೊಡಬಾರದಂತೆ. ಓಹೋ, ತಾಲಿಬಾನಿಗಳಿಗೆ ಏನು ಕೆಲಸ, ಇಂಥ ಕೆಲಸಕ್ಕೆ ಬಾರದ ವಿಷಯಗಳ ಕಡೆಗೇ ಅವರ ಗಮನ ಅಂದಿರಾ? ತಾಲಿಬಾನ್ ಗವಿ ಸೇರ್ಕೊಂತು, ಮುಲ್ಲಾ ಉಮರ ಸತ್ನಂತೆ, ಅಂಗಂತ ನ್ಯೂಸು.

ಮೇಲಿನ ಈ ತುಂಡು ಲಂಗದ ಕಟ್ಟಳೆ ಬಂದಿದ್ದು ತಾಲಿಬಾನ್ ನಿಂದ ಅಲ್ಲ. ಇಂಗ್ಲೆಂಡಿನ ಶಾಲೆಯೊಂದು ತುಂಡು ಲಂಗ ತೊಡಕೂಡದು ಎಂದು ತಾಕೀತು ಮಾಡಿದೆ ತನ್ನ ವಿದ್ಯಾರ್ಥಿನಿಯರಿಗೆ.

ತುಂಡು ಲಂಗ ಮೊಣಕಾಲಿನಿಂದ ಸ್ವಲ್ಪ, ಒಂಚೂರು ಮೇಲಿದ್ದರೆ ಸಾಕು  ಎಂದರೆ ಹುಡುಗಿಯರು ಈ ನಿಯಮವನ್ನು ಉಲ್ಟಾ ಮಾಡಿ ಕೊಂಡು ಮೇಲಿನಿಂದ ಒಂಚೂರು ಕೆಳಗೆ ಉಡಲು ಆರಂಭಿಸಿದಾಗ ಶಾಲೆಗೆ ತೊಡಕಾಗಿ ಕಂಡಿತು. ಶಾಲೆಯ ಅಧಿಕಾರಿಣಿ ಹೇಳಿದ ಮಾತು “the pupils cycled to school and short skirts looked “dreadful” on girls who cycled. “We have a very active curriculum and trousers are much more practical and comfortable.” ತುಂಡು ಲಂಗ ತೊಟ್ಟು ಸೈಕಲ್ ಹೊಡೀವಾಗ “dreadful” ಆಗಿ ಕಾಣುತ್ತಂತೆ. “ಡ್ರೆಡ್ ಫುಲ್ಲೋ”, “ಡಿಲೈಟ್ ಫುಲ್ಲೋ” ನೋಡುಗನ ಕಣ್ಣಿನ ಮೇಲೆ ಡಿಪೆಂಡ್ಸ್.

“ಬಾ, ಇಲ್ಬಂದು ನೋಡು” ಎಂದು ಕರೆ ನೀಡುವ ಉಡುಗೆ ನಮ್ಮ ಹುಡುಗಿಯರು ತೊಡೋದು ಬೇಡ ಎನ್ನುವ ಕಾರಣಕ್ಕಾಗಿ ಪೋರಿಯರು ಪ್ಯಾಂಟ್ ಧರಿಸಲು ನಾವು ಆದೇಶಿಸಿದ್ದು ಎಂದು ಶಾಲೆಯ ಅಂಬೋಣ. ಈಗ ಮೇಲಿನ ಶಾಲೆ ಸೆಕ್ಯುಲರ್ ಆಗಿರದೆ ಬೇರೆ ಯಾವುದಾದರೂ ಆಗಿದ್ದಿದ್ದರೆ? ಮುಸ್ಲಿಮರು ನಡೆಸುವುದಾಗಿದ್ದಿದ್ದರೆ? ಓಹೋ, ಬಂದರು ತಾಲಿಬಾನಿಗಳು, ಪ್ರಪಂಚವನ್ನ ಆರನೇ ಶತಮಾನಕ್ಕೋ, ಶಿಲಾಯುಗಕ್ಕೋ ಕರೆದು ಕೊಂಡು ಹೋಗಲು ನೋಡುವ ಮೂಲಭೂತ ವಾದಿಗಳು ಎಂದು ಜರೆದು ತಮ್ಮ ನಾಲಗೆಯ, ಕೀಲಿಮಣೆಯ, ಲೇಖನಿಯ ಚಪಲ ತೀರಿಸಿ ಕೊಳ್ಳುತ್ತಿದ್ದರು.

ನಡೆದಾಡುವ ನೈದಿಲೆ…ಓಡಾಡುವ porn ಮಸಾಲ

cheergirl ಗಳು ನಡೆದಾಡುವ ನೈದಿಲೆ ಅಲ್ಲ, ಓಡಾಡುವ porn ಗಳು. ಈ ಮಾತನ್ನು ಯಾವುದೇ ಸಂಪ್ರದಾಯವಾದಿ ಹೇಳಿದ್ದಲ್ಲ. ಕ್ರಿಕೆಟ್ ಆಟದಲ್ಲಿ ಸಿಕ್ಸರ್ ಗಳು ಸಿಡಿದಾಗ, ವಿಕೆಟ್ ಪತನಗೊಂಡಾಗ ಮಾದಕ ನೃತ್ಯ ಮಾಡಿ ಜನರನ್ನು ಆಟಗಾರರನ್ನು ಹುರಿದುಂಬಿಸಲು ನೇಮಕಗೊಂಡ, ಚಿಯರ್ ಗರ್ಲ್ ವೃತ್ತಿಯನ್ನು ಆರಿಸಿಕೊಂಡ  ಹೆಣ್ಣು ಮಗಳ ಅಳಲು, ದುಮ್ಮಾನ ತುಂಬಿದ ಮಾತುಗಳು. ಕ್ರಿಕೆಟ್ ಮ್ಯಾಚ್ ಹೆಸರಿನಲ್ಲಿ ಜೊಳ್ಳು ಸುರಿಸುತ್ತಾ ಟೀವೀ ಪರದೆ ಮುಂದೆ ಕೂತು ಈ ಹುಡುಗಿಯರ ಹಾವಭಾವವನ್ನು ಆಸ್ವಾದಿಸುವ ನಾವು ಎಂದಾದರೂ ಈ ಹೆಣ್ಣುಮಕ್ಕಳ ಅರೆನಗ್ನ ಶೋಷಣೆಯ ಬಗ್ಗೆ ಆಲೋಚಿಸಿದ್ದೇವೆಯೇ? ಅವರುಗಳ ಹಾವ ಭಾವ, curve ಗಳನ್ನು ನೋಡುತ್ತಾ ಮೈಮರೆಯುವ ಉನ್ಮತ್ತ ಮನಸ್ಸು ಈ ಚಿಂತನೆಗೆ ತನ್ನ ಮೆದುಳನ್ನು ತಯಾರು ಮಾಡೀತೇ?  we are like walking porn ಎಂದು ಹೇಳುವ ಈ ಹುಡುಗಿಯ ಮಾತುಗಳು, ನಮ್ಮಲ್ಲಿ ಪ್ರತಿಭಟಿಸುವ ದನಿಯನ್ನು ಹುಟ್ಟು ಹಾಕೀತೇ?

೨೨ ವರ್ಷದ Gabriella Pasqualotto ಹೇಳುತ್ತಾಳೆ, it’s true. At parties, once people are drunk, they get really touchy-freely and misbehave, assuming that we’re easy girls,”- ಹೇಗಿದೆ ನೋಡಿ ಮೇಲಿನ ಆಕೆಯ ಮಾತುಗಳು. ಇಲ್ಲಿ ಒಂದು ಮಾತನ್ನು ನೆನಪಿಡಬೇಕು. ಯಾವಾಗ ಹೆಣ್ಣು ಕನಿಷ್ಠ ಉಡುಗೆ ತೊಡುತ್ತಾಳೋ, ಪ್ರಚೋದಕ ರೀತಿಯಲ್ಲಿ ಆಕೆಯ ಮೈ ಪ್ರದರ್ಶನ ನಡೆಯುವುದೋ, ಹಾವಭಾವ ಪ್ರದರ್ಶನ ಆಗುವುದೋ ಆದರೆ ತಪ್ಪು ಸನ್ನೆಗೆ ಎಡೆಮಾಡಿಕೊಟ್ಟು ಅವಳನ್ನು ಜನ ಸಾರ್ವಜನಿಕ ಉದ್ಯಾನ ಎಂದು ಭಾವಿಸಲು ಆರಂಭಿಸುತ್ತಾರೆ. easy girl ಎಂದು ಹಿಂಬಾಲಿಸುತ್ತಾರೆ. ಹಾಗಾದರೆ ಉಡುಗೆ ತೊಡುಗೆ ಯ ಶಿಷ್ಟಾಚಾರ ಹೆಣ್ಣಿಗೆ ಮಾತ್ರ ಸೀಮಿತವೋ? ಗಂಡು ಹೇಗೆ ಬೇಕಾದರೂ ಹಾಗೆ ವರ್ತಿಸಬಹುದೋ? ಅಲ್ಲ, ಗಂಡೂ ಸಹ ಮಾನವಾಗಿ ತೊಡಲು ಕಲಿಯಬೇಕು. ಆದರೆ ನಿಸರ್ಗದತ್ತವಾಗಿ ಗಂಡು ಹಚ್ಚು visual ಮತ್ತು ಹೆಣ್ಣು more practical ಆದ ಕಾರಣ ಹೆಣ್ಣು ಸ್ವಲ್ಪ ಜಾಗರೂಕಳಾಗಿರುವುದು ಕ್ಷೇಮ. 

ಹೆಣ್ಣು ಮಾನವಾಗಿ ಉಡಬೇಕು ಎಂದು ಹಿರಿಯರು ಹೇಳುತ್ತಿದ್ದರು. ಸಂಜೆಯ ಹೊತ್ತು ಮನೆಯ ಜಗುಲಿಯ ಮೇಲೋ, ಮೆಟ್ಟಿಲುಗಳ ಮೇಲೋ ಕೂತ ಹೆಣ್ಣು ಮಗಳಿಗೆ ತಾಯಿ ಗದರಿಸುವುದಿದೆ, ಕಾಲಿನ ಮೇಲೆ ಲಂಗ ಎಳೆದು ಕೋ ಎಂದು. ದಾರಿ ಹೋಕರಿಗೆ ತನ್ನ ಮಗಳ ಹಾವ ಭಾವ ಯಾವುದೇ ರೀತಿಯ ಕೆಟ್ಟ ನೋಟ ಕ್ಕೆ ಎಡೆ ಮಾಡಿ ಕೊಡಬಾರದು ಎಂದು ತಾಯಿಯಾದವಳ ಕಾಳಜಿ, ಮುತುವರ್ಜಿ. ಈ ಮುತವರ್ಜಿ ಆ ತಾಯಿಗೆ ತನ್ನ ಸಂಸ್ಕಾರ ಕಲಿಸಿರುತ್ತದೆ.    

ಮುಂದುವರೆಯುತ್ತಾ “ಗೇಬ್ರಿಯೆಲಾ” ಹೀಗೆ ಟ್ವೀಟಿಸುತ್ತಾಳೆ, people treat us like ‘pieces of meat’- ಇಲ್ಲದೆ ಏನಂತೆ, ಹೌದು ಚರ್ಮದ ಪ್ರದರ್ಶನ ಹೆಚ್ಚಾದಾಗ ಮೈ ಮನಸ್ಸು ಮಾಂಸ ದ ತುಂಡಿಗಾಗಿ ಹಾತೊರೆಯುವುದು ಸಹಜವೇ.

To the citizens, we are practically like walking porn!…. it is complete voyeurism… the men see your face, then your boobs, your butt, and then your boobs again..ಭಾಷೆಯ ಮರ್ಯಾದೆಯನ್ನು ಬದಿಗಿಟ್ಟು ಬರೆಯಬೇಕಾದೀತೆನ್ನುವ ಆತಂಕದಿಂದ  ಮೇಲಿನದನ್ನು ಭಾಷಾಂತರಿಸಿಲ್ಲ. ತಲೆಯ ಮೇಲೆ ಮೊಳೆ ಹೊಡೆವ ರೀತಿಯಲ್ಲಿಲ್ಲವೇ ಮೇಲಿನ ಮಾತುಗಳು?

ಚೀರ್ ಗರ್ಲ್ಸ್ ಇಲ್ಲದೆಯೂ ಕ್ರಿಕೆಟ್ ರಂಜಕ, ಮೋಹಕ. ಇವರಿಲ್ಲದೆಯೂ ಕ್ರಿಕೆಟ್ ಆಟವನ್ನು ಆಸ್ವಾದಿಸ ಬಹುದು. ಒಂದೊಮ್ಮೆ ಆಸ್ವಾದಿಸಿಯೂ ಇದ್ದೇವೆ. ಎಷ್ಟೋ ಜನ ಈ ಚಿಯರ್ ಗರ್ಲ್ ಗಳ ಕಾರಣ ಕ್ರಿಕೆಟ್ ಆಟದ ಬಗ್ಗೆ ಆಸಕ್ತಿ ಹುಟ್ಟಿಸಿ ಕೊಂಡಿದ್ದಾರೆಂದೂ ಕೇಳಿದ್ದೇನೆ.  

ಆದರೆ ದಿನಗಳೆದಂತೆ, ಕಾಲ ಚಕ್ರ ಓಡುತ್ತಿರುವಂತೆ ನಮ್ಮ ಅಭಿರುಚಿಗಳೂ ಬದಲಾಗುತ್ತಿವೆ ಒಳ್ಳೆಯದರಿಂದ ಕೆಡುಕಿನ ಕಡೆಗೆ. ಇಂದು ನಮ್ಮ ಹೆಣ್ಣು ಮಕ್ಕಳು ತಮ್ಮ ಫೇಸ್ ಬುಕ್ ಪ್ರೊಫೈಲ್ ನಲ್ಲಿ “ relationship: its complicated” ಎಂದು ಬರೆಯಲು ಹಿಂದೆ ಮುಂದೆ ನೋಡುತ್ತಿಲ್ಲ. ಈಗ ಎಲ್ಲವೂ ‘ಕೂಲ್’.

ನಮ್ಮ ಶಿಕ್ಷಣದ ಮಟ್ಟ

ಪೀಯೂಸೀ ಫಲಿತಾಂಶ ಬಂದು ನಮ್ಮ ಮಕ್ಕಳ ಕಳಪೆ ಪ್ರದರ್ಶನ ಮತ್ತು ಕಳಪೆ ಪ್ರದರ್ಶನದ ಕಾರಣ ಉಂಟಾದ ಆತ್ಮಹತ್ಯೆಗಳ ಕುರಿತು ಒಬ್ಬರು ಜನಪ್ರಿಯ ಸಾಹಿತ್ಯಕ ವೆಬ್ ತಾಣವೊಂದರಲ್ಲಿ ಪ್ರಸ್ತಾಪ ಮಾಡಿದ್ದರು. ನಮ್ಮ ಶಿಕ್ಷಣ ವ್ಯವಸ್ಥೆಯ ಅವ್ಯವಸ್ಥೆ ಬಗ್ಗೆ ಪ್ರತೀ ವರ್ಷ ಫಲಿತಾಂಶ ಗಳು ಬಂದಾಗ ಮಾತ್ರ ಮಾತನಾಡುವುದರಿಂದ ಯಾವುದೇ ಪ್ರಯೋಜನ ವಿಲ್ಲ. ನಮ್ಮ educator ಗಳು ಯಾವಾಗ ಶಿಕ್ಷಣದಲ್ಲಿ ನಾವೀನ್ಯತೆಯನ್ನು, ಕ್ರಾಂತಿಕಾರಿ ಮಾರ್ಪಾಡುಗಳನ್ನು ಮಾಡಲು ಆಸಕ್ತಿ, ಆಸ್ಥೆ ತೋರಿಸುವುದಿಲ್ಲವೋ ಅಲ್ಲಿಯವರೆಗೆ ಈ ವಿಷಯದ ಕುರಿತು ಬರೀ ಮಾತನಾಡುತ್ತಾ, ಚರ್ಚಿಸುತ್ತಾ ಕಾಲಹರಣ ಮಾಡಬೇಕಾಗುತ್ತದೆ. ಅವರುಗಳ ಉತ್ಸಾಹ ಎಲ್ಲಾ ಇರುವುದು ಸಂದು ಹೋದ ಚರಿತ್ರೆಯನ್ನು ಕೆದಕಿ ಯಾರೂ ನೋಡಿರದ ಕೇಳಿರದ ವಿಷಯಗಳ ಬಗ್ಗೆ “‘some’ಶೋಧನೆ” ನಡೆಸಿ ತೋಚಿದ ರೀತಿ ತಿರುಚಿ ಬರೆದು ತೃಪ್ತರಾಗೋದು. ಅಲ್ಲಿಗೆ ಸೀಮಿತ ಅವರುಗಳ ಕ್ರಿಯಾಶೀಲತೆ. ಇಂಥವರಿಂದ ಶಿಕ್ಷಣದ ಮಟ್ಟ ಸುಧಾರಿಸುವ ಕನಸು ಬೇರೆ ನಮಗೆ.

ಪರೀಕ್ಷೆಯಲ್ಲಿ ಕಳಪೆ ಪ್ರದರ್ಶನ ಕಾರಣ ಪ್ರೌಢರಲ್ಲದ ನಮ್ಮ ಎಳೆಯರು ಆತ್ಮಹತ್ಯೆ ಮಾಡಿ ಕೊಂಡಾಗ ನಮಗೆ ಅನುಕಂಪ ತೋರಲೇಬೇಕು. ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗುವ ವ್ಯವಸ್ಥೆಯನ್ನು ಸರಿಪಡಿಸುವತ್ತ ಸಮಾಜ ಆಸಕ್ತಿ ವಹಿಸಬೇಕು. ನಮ್ಮ ಶಿಕ್ಷಣದ ಮಟ್ಟ ಮತ್ತು ಅದು ತರುತ್ತಿರುವ ಫಲಿತಾಂಶದ ಮಟ್ಟ ಮಾತ್ರ ನೋಡಿದರೆ ಸಾಲದು, ಶಿಕ್ಷಕರ ಮಟ್ಟ ಸಹ ಸ್ವಲ್ಪ ನೋಡಿ. ಶಿಕ್ಷಕರಾಗಲು ಎಷ್ಟು ಜನ ಬಯಸುತ್ತಿದ್ದಾರೆ? ಎಲ್ಲರ ಓಟ, ಇಂಜಿನಿಯರಿಂಗ್, ಮೆಡಿಸಿನ್, ಇನ್ಫೋ ಟೆಕ್ ಕಡೆಯೇ. ಏಕೆಂದರೆ ಹಣ ಇರುವುದು ಅಲ್ಲಿಯೇ. ಶಿಕ್ಷಕ ವೃತ್ತಿ ನಮ್ಮ ವ್ಯವಸ್ಥೆಯಲ್ಲಿ ಮತ್ತು ನಮ್ಮ ಸಮಾಜದಲ್ಲಿ glamorous ಅಲ್ಲ. prestigious ಅಲ್ಲ. ಕೈತುಂಬಾ ಸಂಬಳ ಸಹ ತಂದು ಕೊಡೋಲ್ಲ. ಪರಿಸ್ಥಿತಿ ಹೀಗಿರುವಾಗ ಶಿಕ್ಷಣದ ಗುಣಮಟ್ಟ ಸುಧಾರಿಸುವುದು ಕಷ್ಟವೇ.

ಐರೋಪ್ಯ ದೇಶಗಳನ್ನು ತೆಗೆದುಕೊಂಡಾಗ ಶಿಕ್ಷಣ ಕ್ಷೇತ್ರದಲ್ಲಿ ‘ಫಿನ್ ಲೆಂಡ್’ ದೇಶದವರು ಕ್ರಾಂತಿಯನ್ನೇ ಮಾಡುತ್ತಿದ್ದಾರೆ. ಫಿನ್ ಲೆಂಡ್ ದೇಶದೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡುತ್ತಿರುವ ಇನ್ನೆರಡು ದೇಶಗಳೆಂದರೆ ಸಿಂಗಪೂರ್ ಮತ್ತು ದಕ್ಷಿಣ ಕೊರಿಯಾ. ಶಿಕ್ಷಕರ ನೇಮಕಾತಿಯಲ್ಲಿ ಅನುಸರಿಸುವ ನಿಯಮಗಳು, ಮತ್ತು ಭಾವೀ ಶಿಕ್ಷಕರಿಗೆ ಇರಬೇಕಾದ ಅರ್ಹತೆಗಳ ಪರೀಕ್ಷೆಯಲ್ಲಿ ಸಾಮಾನ್ಯ ಪದವೀಧರರು ತೇರ್ಗಡೆ ಯಾಗುವುದು ಈ ದೇಶಗಳಲ್ಲಿ ತುಂಬಾ ಕಷ್ಟ. ನೇಮಕಾತಿಯಲ್ಲಿ ವಶೀಲಿ ಬಾಜಿ ನಡೆಯದೆ ಪ್ರತಿಭೆಗೆ ಮಾತ್ರ ಪುರಸ್ಕಾರ ಸಿಕ್ಕಿ ಅದಕ್ಕೆ ಹೊಂದುವ ವೇತನ ಸಹ ಸಿಕ್ಕಾಗ ಸಹಜವಾಗಿಯೇ ಶಿಕ್ಷಣ ಕ್ಷೇತ್ರ ಆಕರ್ಷಕವಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ.

http://www.independent.co.uk/news/education/schools/are-finnish-schools-the-best-in-the-world-2289083.html