ಎವರೆಸ್ಟ್ ಅಲ್ಲ, ಅದರಾಚೆಯ ಶಿಖರದ ಬೆನ್ನು ಹತ್ತಿ…

SAUDI EVEREST GADLINGDOTCOM
ತಮ್ಮ ಎದುರಿಗೆ ಶಿಖರದಷ್ಟೇ ಎತ್ತರವಿದ್ದ ಅಡಚಣೆಗಳನ್ನು ಗೆದ್ದು ಜಗದ ತುತ್ತ ತುದಿಯನ್ನು ಮೆಟ್ಟಿ ನಿಂತರು ಇಬ್ಬರು ಪರ್ವತಾರೋಹಿಗಳು. ಒಬ್ಬಾಕೆ ಸೌದಿ ಅರೇಬಿಯಾ ಮೂಲದ ೨೭ ರ ತರುಣಿಯಾದರೆ, ಜಪಾನ್ ದೇಶದ ೮೦ ವಯಸ್ಸಿನ ಹಿರಿಯ ಮತ್ತೊಬ್ಬ.

“ರಾಹಾ ಮುಹರ್ರಕ್” ಸೌದಿ ಅರೇಬಿಯಾದ ವಾಣಿಜ್ಯ ನಗರ ಜೆಡ್ಡಾ ನಗರದವಳು. ಮನದಾಳದಲ್ಲಿ ಅಡಗಿ ಕೂತಿದ್ದ ಆಕಾಂಕ್ಷೆ ಎನ್ನುವ “ಪುಟ್ಟ ರಕ್ಕಸ ಸ್ಫೋಟ ಗೊಂಡಾಗ” ಶಿಖರ ಮಣಿಯಿತು ಈ ನಾರೀಮಣಿಗೆ. ಮಂಗಳವಾರ ಅವರೋಹಣ ಮಾಡಿದ ನಂತರ ಈಕೆಯ ಮೊಬೈಲ್ ರಿಂಗ್ ಗುಟ್ಟುತ್ತಲೇ ಇದೆಯಂತೆ.

ಸಂಪ್ರದಾಯವಾದಿಗಳ ತಮ್ಮದೇ ಆದ ವ್ಯಾಖ್ಯಾನಕ್ಕೆ ಎದುರು ಉತ್ತರ ನೀಡದ ಸಂಪ್ರದಾಯವಾದೀ ಸೌದಿ ಅರೇಬಿಯಾ, ತನ್ನ ಮಹಿಳೆಯರಿಗೆ ಡ್ರೈವಿಂಗ್ ಮಾಡಲು ಅನುಮತಿಸದ ವಿಶ್ವದ ಏಕೈಕ, ವಿಶ್ವದ ಏಕೈಕ ಮುಸ್ಲಿಂ ದೇಶ. ಯಾವುದೇ ದೇಶದಲ್ಲೂ ಮಹಿಳೆ ವಾಹನ ಚಲಾಯಿಸ ಬಹುದು. ಸೌದಿ ಅರೇಬಿಯಾ ಹೊರತು ಪಡಿಸಿದರೆ ಯಾವುದೇ ಮುಸ್ಲಿಂ ದೇಶದಲ್ಲೂ ಮಹಿಳೆ ವಾಹನ ಚಲಾಯಿಸಬಹುದು. ಆದರೆ ನಮ್ಮ ಸಮಾಜ ಇನ್ನೂ ಪರಿ ಪಕ್ವವಾಗಿಲ್ಲ, ಕಾಲ ಇನ್ನೂ ಪ್ರಶಸ್ತ ವಾಗಿಲ್ಲ ಎನ್ನುವ ನೆಪದ ಕಾರಣ ಮಹಿಳೆ ಕಾಲು ಕಾರಿನ accelerator ಮೇಲೆ ಊರಲು ಆಗಿಲ್ಲ. ಆದರೆ ಇದೇ ಕಾಲುಗಳು ಪರ್ವತವನ್ನು ಮೆಟ್ಟಿ ನಿಂತವು. ಸಾಮಾನ್ಯ ಪರ್ವತವಲ್ಲ. ಅದೇ ಎವರೆಸ್ಟ್ ಶಿಖರ. ಎತ್ತರ, ಭರ್ತಿ ಇಪ್ಪತ್ತೊಂಭತ್ತು ಸಾವಿರದ ಮೂವತ್ತೈದು ಅಡಿಗಳು.

ಪರ್ವತದಷ್ಟೇ ಸವಾಲಾಗಿತ್ತು ತನ್ನ ಕುಟುಂಬದವರನ್ನು ಒಪ್ಪಿಸುವ ಕೆಲಸ ಎನ್ನುವ ‘ರಾಹಾ’ ಕ್ರಮೇಣ ಮನೆಯವರ ಸಹಕಾರ ಮತ್ತು ಬೆಂಬಲವನ್ನ ಗಳಿಸಿಕೊಂಡಳು. ತನ್ನ ಗುರಿಯೆಡೆ ದೃಢ ಹೆಜ್ಜೆಗಳನ್ನು ಹಾಕಿದಳು. ಸಂಪ್ರದಾಯವಾದೀ ಹಿನ್ನೆಲೆಯಿಂದ ಬಂದ ಯಾವುದೇ ಮಹಿಳೆಯೂ ಸಾಧಿಸಲಾರದ್ದನ್ನು ಸಾಧಿಸಿದಾಗ ಆಗುವ ಅವರ್ಣನೀಯ ಆನಂದ ಈ ಯುವತಿಗೆ ಸಿಕ್ಕಿದ್ದು ಈಕೆಯ ಯಶಸ್ಸಿಗಾಗಿ ಹಾರೈಸುತ್ತಿದ್ದ ಜನರಿಗೆ ಸಂತಸ ತಂದಿತು. ಎವರೆಸ್ಟ್ ಏರುವ ಮೊದಲು ಒಂದೂವರೆ ವರ್ಷಗಳ ಕಾಲ ಎಂಟು ವಿವಿಧ ಪರ್ವತಗಳನ್ನು ಈಕೆ ಏರಿ ತಯಾರಿ ತೆಗೆದುಕೊಂಡಳು.ಸೂರ್ಯನ ಅತ್ಯಂತ ಆಪ್ತ, ಉರಿ ಬಿಸಿಲಿನ ದೇಶದಿಂದ ಬಂದ ಈಕೆಗೆ ಮೂಳೆ ಕೊರೆಯುವ ಚಳಿ ಇಟ್ಟುಕೊಂಡ ಹಿಮಚ್ಛಾದಿತ ಪರ್ವತ ಸಾಕಷ್ಟು ಸವಾಲುಗಳನ್ನೇ ಒಡ್ಡಿರಬಹುದು. ಸಾಧಿಸುವ ಛಲ ಸವಾಲನ್ನು ಸಲೀಸಾಗಿ ಓವರ್ಟೇಕ್ ಮಾಡುತ್ತದೆ.

ಗುರಿಯ ಗಾತ್ರದಷ್ಟೇ ಯಶಸ್ಸಿನ ಗಾತ್ರವೂ ಆಗಿರುತ್ತದೆ ಎನ್ನುವ ರಾಹಾ ತಾನು ಎವೆರೆಸ್ಟ್ ಏರಿದ ಪ್ರಪ್ರಥಮ ಸೌದಿ ಎನ್ನುವ ಹೆಗ್ಗಳಿಕೆಗಿಂತ ತನ್ನ ಯಶಸ್ಸು ಇತರೆ ಮಹಿಳೆಯರಿಗೂ ಸ್ಫೂರ್ತಿಯಾದರೆ ತನಗೆ ಹೆಚ್ಚು ತೃಪ್ತಿ ಎನ್ನುತ್ತಾಳೆ. ಕೇವಲ ಒಂದೂವರೆ ವರ್ಷಗಳ ಹಿಂದೆ ಒಂದೂ ಪರ್ವತವನ್ನು ಏರದೇ ಇದ್ದ ತನಗೆ ಎವರೆಸ್ಟ್ ಒಲಿದಿದ್ದು ಹೊಸ ಚೇತನವನ್ನು ಆಕೆಗೆ ಕೊಟ್ಟಿದೆ. ಅಮೆರಿಕೆಯ ಆಲಾಸ್ಕಾ ರಾಜ್ಯದ ದೆನಾಲಿ ಮತ್ತು ಆಸ್ಟ್ರೇಲಿಯಾದ Kosciuszko (ಉಚ್ಛಾರ ಗೊತ್ತಿಲ್ಲ) ಪರ್ವತಗಳನ್ನು ಏರುವ ಆಸೆ ಇಟ್ಟುಕೊಂಡಿರುವ ಈಕೆ ಹೇಳುವುದು…

“ಯಾವುದನ್ನೂ ನೀವು ಪ್ರಯತ್ನಿಸದೆ ಇದ್ದರೆ ಹೇಗೆ ತಾನೇ ಗೊತ್ತಾಗುವುದು ನಿಮಗೆ ಸಾಧಿಸುವುದಕ್ಕೆ ಆಗೋಲ್ಲ ಎಂದು?”
ಏಕೆಂದರೆ ಹೆಜ್ಜೆ ಕೀಳುವ, ಹೆಜ್ಜೆ ಮುಂದಕ್ಕೆ ಊರುವ, ಅದಮ್ಯ ಆಸೆ, ಹುರುಪು, ಛಲ ಇದ್ದರೆ ಪರ್ವತವೂ, ಕಣಿವೆಯೂ ನಮ್ಮ ಅಧೀನಕ್ಕೆ, ಏನಂತೀರಿ?

ವಯಸ್ಸು ಅಂಕಿ ಅಂಶಗಳ ಕೆಲಸಕ್ಕೆ ಮಾತ್ರ ಸೀಮಿತ ಎಂದು ದೃಢವಾಗಿ ನಂಬಿದ, ನಂಬಿದ್ದನ್ನು ಸಾಧಿಸಿಯೂ ತೋರಿಸಿದ ಜಪಾನ್ ದೇಶದ ಹಿರಿಯ, ವಯಸ್ಸಿನ ನೆಪ ಒಡ್ಡಿ ಮೂಲೆ ಗುಂಪಾಗಲು ಬಯಸುವ ಎಲ್ಲರಿಗೂ ಒಂದು ಸ್ಫೂರ್ತಿ.
‘ಯುಚಿರೋ ಮೂರಾ’ ಎವರೆಸ್ಟ್ ಶಿಖರವನ್ನು ಕೆಣಕಿದ್ದು ಮೂರು ಸಲ. ಎಲ್ಲಾ ಯಶಸ್ಸೂ ಕೈ ಸೇರಿದ್ದು ಸಾಮಾನ್ಯ ಜನರ ಕೈಗಳು ನಡುಗುವ ವಯಸ್ಸಿನಲ್ಲಿ. ೭೦ ಮತ್ತು ೭೫ ನೇ ವಯಸ್ಸಿನಲ್ಲಿ ಮತ್ತು ಈಗ ೮೦ ರ ತುಂಬು ಪ್ರಾಯದಲ್ಲಿ ಎವರೆಸ್ಟ್ ಏರಿದ ಈ ತ್ರಿವಿಕ್ರಮ ಬಹುಶಃ ವಿಶ್ವದಾಖಲೆ ಸರದಾರ.

ವಯಸ್ಸು ಎಂಭತ್ತಾದರೆ ವಯೋವೃದ್ಧ ಎನ್ನುತ್ತಾರೆ, ಆದರೆ ಯುಚಿರೋ ರನ್ನು ಕರೆಯಬೇಕಿರೋದು ಹಿರಿಯ ಅಂತ. ನಮ್ಮಲ್ಲಿ ಈ ವಯಸ್ಸಿನವರ್ಯಾರಾದರೂ ತಮ್ಮ ಮನದಾಳದಲ್ಲಿ ಹುದುಗಿ ಕೂತ ಆಸೆಗಳನ್ನು ಸಾಕಾರಗೊಳಿಸುವ ಇಚ್ಛೆ ವ್ಯಕ್ತ ಪಡಿಸಿದರೆ ಮನೆಯವರ, ನೆರೆಹೊರೆಯವರ ಮತ್ತು ಸಮಾಜದ ಪ್ರತಿಕ್ರಿಯೆ ಹೇಗಿರುತ್ತದೆ? ಸ್ವಲ್ಪ ವಯಸ್ಸಾದರೆ ಮುದಿ ಗೂಬೆ ಎಂದು ಮೂದಲಿಸುವ ಸಮಾಜ ಹಿರಿಯರ ಆಸೆಗೆ ಒತ್ತಾಸೆಯಾಗಿ ನಿಂತೀತೆ?

ಎರಡು ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ಕಾಲಿನ ಮೇಲ್ಭಾಗದ (hip) ಶಸ್ತ್ರ ಚಿಕಿತ್ಸೆ ಮಾಡಿಸಿ ಕೊಂಡ, ಕಳೆದ ಜನವರಿ ತಿಂಗಳಿನಲ್ಲಿ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಯುಚಿರೋ, ೩೦ ಕೇಜೀ ತೂಕವನ್ನು ಬೆನ್ನ ಮೇಲೆ ಹೊತ್ತು ವಾರದಲ್ಲಿ ಮೂರು ದಿನ ನಡೆಯುತ್ತಾರೆ ತನ್ನ ಕನಸಿನ ಬೆನ್ನ್ಹತ್ತಿ. “I have a dream to climb Everest at this age,” he said. “If you have a dream, never give up. Dreams come true.” ಯಾರದೋ ಕನಸುಗಳು ನಮಗೆ ಬೀಳುವುದಿಲ್ಲ, ನಮ್ಮ ಕನಸುಗಳು ನಮ್ಮನ್ನು ನಂಬುತ್ತವೆ. ನಮ್ಮ ಕನಸು ಪರೋಕ್ಷವಾಗಿ ನಮಗೆ ಹೇಳೋದು, ಏಳು, ಗುರಿಯೆಡೆ ಸಾಗು ಎಂದು. ಆದರೆ ನೆಪ ಹುಡುಕುವವರಿಗೆ ಇದರ ಅರಿವಿರುವುದಿಲ್ಲ. ಮೈ ಕೊಡವಿ ಎದ್ದಾಗ ದೈತ್ಯದಂಥ ಗುರಿ ಮುದುಡಿ ಕೊಳ್ಳುತ್ತದೆ, ನಮ್ಮ ಕೈ ಸೇರುತ್ತದೆ.
ಎವರೆಸ್ಟ್ ಪರ್ವತ ಹತ್ತಿದ ಅತ್ಯಂತ ಹಿರಿಯ ಪುರುಷ ಯುಚಿರೋ ಆದರೆ, ಅತ್ಯಂತ ಹಿರಿಯ ಮಹಿಳೆ ಸಹ ಜಪಾನ್ ದೇಶದವರು. ಎರಡನೇ ವಿಶ್ವ ಯುದ್ಧದಲ್ಲಿ ಸೋತು ಸುಣ್ಣವಾಗಿ ಅಮೆರಿಕೆಯ ನಿರ್ದಯ ಧಾಳಿಗೆ ತುತ್ತಾಗಿ, ನುಚ್ಚು ನೂರಾಗಿ, ನಲುಗಿ ಹೋದ ದೇಶದ ಪ್ರಜೆಗಳಿಗೆ, ಅದೂ ಇಳಿ ವಯಸ್ಸಿನಲ್ಲಿ ಇರುವ ಛಲ ನೋಡಿ.

ಮೊದಲ ಚಿತ್ರ ಕೃಪೆ: http://www.gadling.com

Advertisements

ನಗ್ನ ‘ಪ್ರದರ್ಶನ’, ಎಷ್ಟು ಸರಿ, ಏಕೆ ತಪ್ಪು?

nude protest
ಉಕ್ರೇನ್ ಒಂದು ದೇಶ, ಅಲ್ಲೊಂದು ಸಂಘಟನೆ. ಸ್ತ್ರೀ ಸ್ವಾತಂತ್ರ್ಯವಾದೀ ಸಂಘಟನೆ ಎಂದುಕೊಳ್ಳಿ. ಇವರು ಪ್ರದರ್ಶನ ಮಾಡೋದು ಅರೆ ನಗ್ನರಾಗಿ. ಅಂದರೆ ತಮ್ಮ ಸ್ತನಗಳ ಪ್ರದರ್ಶನದ ಮೂಲಕ. ‘ಫೆಮೆನ್’ ಹೆಸರಿನ ಈ ಸಂಘಟನೆ ಚಿಕ್ಕದಾದರೂ ಮೊಲೆಗಳಷ್ಟೇ ಪರಿಣಾಮಕಾರೀ ಇವರ ಚೇಷ್ಟೆ. (‘ಮೊಲೆ’ ಎನ್ನುವ ಪದ ಕೆಲವರಿಗೆ ಇಷ್ಟವಲ್ಲ. ಆದರೆ ಪಿ. ಲಂಕೇಶ್ ರವರ ಒಂದು ಪುಸ್ತಕದಲ್ಲಿ ಹೆಣ್ಣಿನ ಈ ಅವಯವಗಳನ್ನು ಆಡು ಭಾಷೆಯಲ್ಲಿ ಕರೆದಿದ್ದು ನನ್ನ ಧೈರ್ಯಕ್ಕೆ ಕಾರಣ).

ಹೆಣ್ಣನ್ನು ಎಗ್ಗಿಲ್ಲದೆ ಲೈಂಗಿಕ ವಾಗಿ ಚಿತ್ರಿಸುವುದನ್ನು, ಆಕೆ ಒಂದು ಭೋಗದ ವಸ್ತು ಎಂದು ಮಾತ್ರ ಬಗೆಯುವ ಲಜ್ಜೆಗೆಟ್ಟ “ಸುಸಂಸ್ಕೃತ’ರ ವಿರುದ್ಧ ಇವರ ಯುದ್ದ. ಯುಕ್ರೇನ್ ದೇಶವನ್ನು ‘ಲೈಂಗಿಕ ಪ್ರವಾಸ’ ತಾಣವಾಗಿ ಬಿಂಬಿಸುವ ಪ್ರಯತ್ನದ ವಿರುದ್ಧವೂ, ನ್ಯೂ ಜೀಲೆಂಡ್ ನ ರೇಡಿಯೋ ಕಾರ್ಯಕ್ರಮದಲ್ಲಿ ನಡೆದ ಸ್ಪರ್ದೆಯೊಂದರಲ್ಲಿ ವಿಜೇತನಿಗೆ ಸಿಕ್ಕ ಬಹುಮಾನ ಯುಕ್ರೇನ್ ಗೆ ಹೋಗಿ ಹೆಂಡತಿಯೊಬ್ಬ ಳನ್ನು ಪಡೆದುಕೊಳ್ಳುವ ‘ಆಫರ್’ ಬಗ್ಗೆ ಕೇಳಿದ ಕೆಲವು ಯುವತಿಯರು ವ್ಯಗ್ರರಾಗಿ ಯುಕ್ರೇನ್ ಒಂದು ವೇಶ್ಯೆಯರ ಕೋಣೆಯಲ್ಲ ಎಂದು ಪ್ರತಿಭಟಿಸಿ ಅ ಪ್ರತಿಭಟನೆಗೆ ಮೂರ್ತರೂಪವಾಗಿ ಫೆಮೆನ್ ಸಂಘಟನೆ ಆರಂಭಿಸಿದರು. ಇದರ ಸಂಸ್ಥಾಪಕಿ ೨೮ ರ ಪ್ರಾಯದ ಅನ್ನಾ ಹಟ್ಸೋಲ್. ಆಕೆಯೊಂದಿಗೆ ಅಲೆಕ್ಸಾಂಡ್ರ ಶೇವ್ಚೆನ್ಕೋ ಎನ್ನುವ ೨೫ ರ ತರುಣಿ.

ಇವರ ಬತ್ತಳಿಕೆಯಲ್ಲಿನ ಪರಿಣಾಮಕಾರಿಯಾದ ಅಸ್ತ್ರ ಎಂದರೆ ಡೈನಾಮೈಟು. ಅಂದರೆ, ಮೊಲೆಗಳು. ಇವುಗಳ ಪ್ರದರ್ಶನದ ಮೂಲಕ ಜನರಲ್ಲಿ ಇರುಸು ಮುರುಸು (ಸ್ತನ ಕಂಡರೆ ಇರುಸು ಮೂರುಸಾ?) ಮತ್ತು ಅವರನ್ನು embarrass ಮಾಡೋದು.
ಫೆಮೆನ್ ಸಂಘಟನೆಯ ಪರಿಧಿ ಬರೀ ಮಹಿಳೆಯರ ಬಗ್ಗೆ ಮಾತ್ರವಲ್ಲ. ಧರ್ಮದ ವಿರುದ್ಧ, ಮತ್ತು ಭ್ರಷ್ಟಾಚಾರದ ವಿರುದ್ಧ ಕೂಡಾ. ಯುಕ್ರೇನ್ ರಾಜಧಾನಿಯ ಹೊರಗೆ ೧೩ ಅಡಿ ಎತ್ತರದ ಮರದ ಶಿಲುಬೆಯನ್ನು ಗರಗಸದಿಂದ ಕತ್ತರಿಸಿ ಹಾಕಿ ಧರ್ಮದ ವಿರುದ್ಧದ ಕಳಹೆ ಊದಿದಳು ಫೆಮೆನ್ ಸದಸ್ಯೆ ಯೊಬ್ಬಳು.

ಜರ್ಮನಿ ದೇಶದ ಪ್ರವಾಸದ ಮೇಲಿದ್ದ ರಷ್ಯಾದ ಅಧ್ಯಕ್ಷ ಪುತಿನ್ ರನ್ನು ಅನ್ನಾ ಹಟ್ಸೋಲ್ ಅರೆ ನಗ್ನಳಾಗಿ ಪುತಿನ್ ರನ್ನು ಎದುರು ಗೊಂಡ ಈಕೆಯ ಶರೀರದ ಮೇಲೆ fuck dictator, fuck off putin, ಸಂದೇಶ ರಾರಾಜಿಸುತ್ತಿತ್ತು. ಇಂಥ ಮತ್ತು ಇತರೆ daring antics ಈಗಾಗಲೇ ಎಪ್ಪತ್ತು ಬಾರಿ ಬಂಧನಕ್ಕೆ ಒಳಗಾಗಿದ್ದಾಳೆ ಈಕೆ.

ಯುಕ್ರೇನ್ ನಲ್ಲಿ ಹುಟ್ಟಿದ ‘ಫೆಮೆನ್’ ಸಂಘಟನೆ ಜರ್ಮನಿ ಫ್ರಾನ್ಸ್ ದೇಶಗಳಲ್ಲೂ ಜನಪ್ರಿಯ. ಬ್ರೆಜಿಲ್ ಮತ್ತು ಫಿಲಿಪ್ಪೀನ್ಸ್ ದೇಶಗಳ ವರೆಗೆ ಇವರ ಪ್ರಭಾವ ಹರಡಿದೆ.

ಫೆಮೆನ್ ಸಂಘಟನೆಯ ಈ ಪ್ರದರ್ಶನದ ವೈಖರಿಯ ಬಗ್ಗೆ ಅಪಸ್ವರ ಕೇಳಿಬರುತ್ತಿದೆ. ಮಹಿಳೆ ಯಾವುದರ ಪ್ರದರ್ಶನ ಮತ್ತು ದುರುಪಯೋಗದ ವಿರುದ್ದ ಧ್ವನಿ ಎತ್ತುತ್ತಿದ್ದಾ ಳೋ ಅವುಗಳದೇ ಪ್ರದರ್ಶನದ ಮೂಲಕ ಮತ್ತಷ್ಟು ಶೋಷಣೆಗೆ ಒಳಗಾಗಲು ಸಹಕರಿಸುತ್ತಿದ್ದಾಳೆ ಎಂದು ಕೆಲವರ ವಾದ. ಈ ಮಹಿಳೆಯರ ನಗ್ನ ಪ್ರದರ್ಶನದ ಬಗ್ಗೆ ತಕರಾರು ಎತ್ತುವ ಮಡಿವಂತರು ನಗ್ನವಾದ ‘ಡಬಲ್ ಸ್ಟಾಂಡರ್ಡ್’ ಪ್ರದರ್ಶನ ಮಾಡುತ್ತಿದ್ದಾರೆ. ಹೇಗೆಂದರೆ, ಮಹಿಳೆಯ ನಗ್ನ ಶರೀರವನ್ನು, ಅಥವಾ ಅರೆಬರೆ ಶರೀರವನ್ನು ವಾಚುಗಳನ್ನು ಮಾರಲೂ, ಕಾರಿನ ಟೈರುಗಳನ್ನು ಮಾರಲೂ, ಪುರುಷರ ಒಳ ಉಡುಪುಗಳನ್ನು ಬಿಕರಿ ಮಾಡಲೂ ಉಪಯೋಗಿಸಲು ಇಲ್ಲದ ಮಡಿವಂತಿಕೆ, ಆ ಚಿತ್ರಗಳನ್ನ ಜೊಲ್ಲು ಸುರಿಸುತ್ತಾ ನೋಡಿ ಆನಂದಿಸುವಾಗ ಎಲ್ಲಿ ಮೇಯಲು ಹೋಗಿರುತ್ತದೆ…?

ಸ್ತನಗಳು ಬಿಲ್ ಬೋರ್ಡ್ ಗಳ ಮೇಲೆ ಸಲ್ಲುವುದಾದರೆ ರಾಜ ಬೀದಿಗಳಲ್ಲೂ ಸಲ್ಲಲಿ ಅವುಗಳ ದರ್ಶನ.
‘ಫೆಮೆನ್’ ನ ಈ ಸಂದೇಶಕ್ಕೆ ಹೂಂ ಗುಟ್ಟ ಬಾರದೇ?

ಹಾಲಿವುಡ್ ಬೆಡಗಿ ಎಂಜಲಿನಾ ಜೋಲಿ

angelina jolie huff post
ಹಾಲಿವುಡ್ ನ ಯಶಸ್ವೀ ತಾರೆ, ಬೆಡಗಿ ಎಂಜಲಿನಾ ಜೋಲಿ ತನ್ನ ‘ಸ್ತನ ದ್ವಯ’ಗಳ ನಿರ್ಮೂಲನದ ಚಿಕಿತ್ಸೆಗೆ ಒಪ್ಪಿಗೆ ನೀಡಿದ್ದಾಳೆ. ಸ್ತನ ಕ್ಯಾನ್ಸರ್ ತನಗೆ ತಗಲುವ ಸಂಭವ ತೀರಾ ಹೆಚ್ಚಿರುವುದರಿಂದ ಅದರಿಂದ ಪಾರಾಗಲು ಆಕೆ double mastectomy ಮಾಡಿಸಿ ಕೊಳ್ಳಲು ತಯಾರಾದಳು. ಸಾಮಾನ್ಯವಾಗಿ ಇಂಥ ಗಂಭೀರ ಖಾಯಿಲೆ ಮತ್ತು ಚಿಕಿತ್ಸೆಗಳನ್ನು ಖ್ಯಾತ ವ್ಯಕ್ತಿಗಳು ಬಹಿರಂಗ ಗೊಳಿಸುವುದಿಲ್ಲ. ಆದರೆ ಎಂಜಲಿನಾ ಜೋಲಿ ಮಾತ್ರ ಸಾಮಾನ್ಯ ಜನರನ್ನು ಸ್ತನ ಕ್ಯಾನ್ಸರ್ ರೋಗದ ಬಗ್ಗೆ ಎಚ್ಚರಿಸಲು ಈ ಸುದ್ದಿಯನ್ನ ಬಹಿರಂಗ ಮಾಡಿದರು.

ಹೆಣ್ಣಿನ ಸೌಂದರ್ಯಕ್ಕೆ ಮಾದಕತೆ ಮತ್ತು ಮೆರುಗನ್ನು ನೀಡುವ ಸ್ತನಗಳನ್ನು ಯಾವ ಮಹಿಳೆಯೂ ಕಳೆದು ಕೊಳ್ಳಲು ಇಚ್ಚಿಸಲಾರಳು. ಸ್ತನಗಳನ್ನು ಕಳೆದುಕೊಳ್ಳುವ ಚಿಕಿತ್ಸೆಗೆ ಮಹಿಳೆ ಅತ್ಯಂತ ದುಃಖದಿಂದ ಒಪ್ಪಿಗೆ ನೀಡುತ್ತಾಳೆ, ಮತ್ತು ಚಿಕಿತ್ಸೆಯ ನಂತರ ತನ್ನ ಶರೀರದ ಬಗ್ಗೆ ಕೀಳರಿಮೆ ಸಹ ಬೆಳೆಸಿ ಕೊಳ್ಳುತ್ತಾಳೆ. ಹಾಗಾಗಿ ಈ ಚಿಕಿತ್ಸೆಗೆ ಒಪ್ಪಿಗೆ ನೀಡುವ ಮಹಿಳೆ ತನ್ನ ನಿರ್ಧಾರಕ್ಕೆ ಅತ್ಯಂತ ಧೈರ್ಯಶಾಲೀ ಮನೋಭಾವ ಪ್ರದರ್ಶಿಸ ಬೇಕಾಗುತ್ತದೆ. ಎಂಜಲಿನಾಳಿಗೆ ಇದರ ಸಂಪೂರ್ಣ ಅರಿವು ಇದ್ದ ಕಾರಣ ಹಾಗೂ, ನಟನೆಯೊಂದಿಗೆ ಸಮಾಜ ಮುಖಿ ಕೆಲಸಗಳಲ್ಲಿ ತನ್ನ ನ್ನು ತಾನು ತೊಡಗಿಸಿ ಕೊಳ್ಳುವ ಈ ತಾರೆಗೆ ತನ್ನನ್ನು ಉದಾಹರಣೆ ಯನ್ನಾಗಿಸಿಕೊಂಡು ಇಂಥ ಚಿಕಿತ್ಸೆಗೆ ಮಹಿಳೆಯರು ಹಿಂದೇಟು ಹಾಕದಿರಲಿ ಎನ್ನುವ ಸದುದ್ದೇಶ ಈ ಸುದ್ದಿ ಬಹಿರಂಗಗೊಳಿಸಲು ಕಾರಣ ಎಂದು ತೋರುತ್ತದೆ. ಎಂಜಲಿನಾಳ ಬದುಕಿನಲ್ಲಿ ತಲೆದೋರಿರುವ ಈ ಸಂಕಟಕರ ಪರಿಸ್ಥಿತಿ ನಿಭಾಯಿಸಲು ಆಕೆಗೂ, ಮತ್ತು ಸ್ತನ ಕ್ಯಾನ್ಸರ್ ಗಳಂಥ ರೋಗಗಳಿಂದ ಬಳಲುವ ಸಮಸ್ತ ಮಹಿಳೆಯರಿಗೆ ದೇವರು ಶಕ್ತಿ ದಯಪಾಲಿಸಲಿ ಎಂದು ಹಾರೈಕೆ.

Pic courtesy: http://www.huffingtonpost.com

ನೋಡುದ್ರಾ ‘ಬೂಬ್ ವಿಂಡೋ’ ವಾ?

Eva Longoria attends the 'Global Gift Gala 2013' at the Hotel Four Season George V in Paris
ಹಾಲಿವುಡ್ ನ ಮತ್ತೊಬ್ಬ ಸೆಕ್ಸೀ ಬೆಡಗಿ ಏವಾ ಲೊಂಗೊರಿಯಾ (eva longoria).

ವಯಸ್ಸು ೩೮ ಆದರೂ ತಮ್ಮ ಸೌಂದರ್ಯ, ಸೆಕ್ಸ್ ಅಪ್ಪೀಲ್ (ನಮ್ಮ LBW appeal ಥರ) ಅನ್ನು ಜೋಪಾನವಾಗಿ ಕಾಯ್ದು ಕೊಂಡು ಬರುವುದರಲ್ಲಿ ಪಾಶ್ಚಾತ್ಯರು ನಿಪುಣರು.

ಮಹಿಳೆಯರು ಮತ್ತು ಮಕ್ಕಳಿಗಾಗಿ ಇರುವ ಒಂದು ಚಾರಿಟಿ ಸಮಾರಂಭದಲ್ಲಿ ಏವ ಕಾಣಿಸಿಕೊಂಡ ಉಡುಗೆ ಮಾಧ್ಯಮಗಳ ಕಣ್ಣು ಕುಕ್ಕಿತು. ಎದೆಯ ಭಾಗ ಮತ್ತು ತೊಡೆಯ ಭಾಗಗಳನ್ನು ಪ್ರದರ್ಶಿಸುವ ಪಾರದರ್ಶಕ ಉಡುಗೆ ತೊಟ್ಟ ಏವ ಎಲ್ಲರ ಕಣ್ಸೆಳೆದಳು. ‘ಬೂಬ್ ವಿಂಡೋ’ (ಮೈಕ್ರೋಸಾಫ್ಟ್ ವಿಂಡೋ ಅಲ್ಲ) ಎಂದು ನಾಮಕರಣ ಗೊಂಡ ಈ ಉಡುಗೆ ಸ್ತನಗಳನ್ನು ಪ್ರದರ್ಶಿಸಲೆಂದೇ ಸೃಷ್ಟಿಸಲ್ಪಟ್ಟಿ ರಬೇಕು.

ಜನರ ಗಮನ ಮತ್ತು ಜೊಳ್ಳನ್ನು ಸೆಳೆಯಲೆಂದೇ ಪ್ರದರ್ಶನಕ್ಕೆ ಬರುವ ‘ಬೂಬ್’ ಗಳು ಒಂದು ದಿನ ‘ಔಟ್ ಆಫ್ ವಿಂಡೋ’ ಆಗದಿದ್ದರೆ ಸಾಕು.

pic courtesy: http://www.ynaija.com

ಚೀನಾದ ಪಿಕ್ನಿಕ್

ಮೂರು ವಾರಗಳ ಕಾಲ ಬಿಡಾರ ಹೂಡಿ ಅದೇನನ್ನು ಮಾಡಬೇಕು ಎಂದು ಬಯಸಿದ್ದರೋ ಅದನ್ನು ಮಾಡಿಯೋ, ಅಥವಾ ಮಾಡದೆ ಬಿಟ್ಟೋ, ಅಂತೂ ಚೀನೀಯರು ನಮ್ಮ ನೆಲದಿಂದ ಕಾಲ್ಕಿತ್ತರು. ೧೯ ಕಿಲೋ ಮೀಟರು ಗಳಷ್ಟು ಒಳಬಂದು ಠಿಕಾಣಿ ಹಾಕಿದ್ದರು ಚೀನೀಯರು.
ಬದುಕಿನಲ್ಲಿ ಮಿತ್ರರನ್ನು ಬದಲಾಯಿಸಬಹುದು, ನೆರೆಹೊರೆಯವರನ್ನೂ ಬೇಕಾದರೆ ಬದಲಾಯಿಸಬಹುದು, ಆದರೆ ದೇಶದ ವಿಷಯದಲ್ಲಿ ಮಾತ್ರ ಮಿತ್ರರನ್ನು ಚೇಂಜ್ ಮಾಡಬಹುದು, ನಿನ್ನೆ ರಷ್ಯಾ, ಇವತ್ತು ಅಮೇರಿಕಾ, ನಾಳೆ ಇಥಿಯೋಪಿಯಾ. ಆದರೆ ನೆರೆಹೊರೆಯವರನ್ನು ಬದಲಾಯಿಸಲು ಬರುವುದಿಲ್ಲ. ಅದು ಪರ್ಮನೆಂಟ್ ಫಿಕ್ಸ್ಚರ್ರು. ಎಡದಲ್ಲಿ ಪಾಕಿಸ್ತಾನ, ಬಲದಲ್ಲಿ ಚೀನಾ, ಇವೆರಡು ಶನಿಗಳ ಮಧ್ಯೆ ನಾವು, ಫಲಿತಾಂಶ, ಆಗಾಗ ಶತ್ರು ನಮ್ಮ ಗಡಿಯೊಳಕ್ಕೆ ಬಂದು ನಮ್ಮ ಸಹನೆಯ ಮಟ್ಟ ಪರೀಕ್ಷಿಸೋದು.

ಮೂರು ವಾರಗಳ ಕಾಲ ನಮ್ಮ ಸಹನೆ ಪರೀಕ್ಷಿಸಿ, ನಮ್ಮ ಮಾತುಕತೆಯ ಧಾಟಿ ನೋಡಿ, ಚೀನೀಯರು ಜಾಗ ಖಾಲಿ ಮಾಡಿದರು. ಚೀನೀಯರು ಈ ರೀತಿ ಮಾಡಲು, ತಮಗೆ ಬೇಕಾದಾಗ ನಮ್ಮ ದೇಶದೊಳಕ್ಕೆ ನುಗ್ಗಲು, ಅರುಣಾ ಛಲ ಪ್ರದೇಶ ನನ್ನದು ಎನ್ನಲು, ನಮ್ಮ ಪ್ರಧಾನಿ ತನ್ನ ದೇಶದೊಳಕ್ಕೆ ಪ್ರವಾಸ ಮಾಡ ಹೊರಟಾಗ ತಗಾದೆ ತೆಗೆಯಲು ಕಾರಣ ನಾವೇ. ನಮ್ಮ ಸೈನ್ಯ ಅವರಷ್ಟು ಬಲಿಷ್ಠವಾಗಿ ಹೊರಹೊಮ್ಮಲು ನಮಗಿಲ್ಲದ ಇರಾದೆ. ನಮ್ಮ ಗಮನ, ಆಸಕ್ತಿ ಎಲ್ಲಾ ವೈಯಕ್ತಿಕ ಆಕಾಂಕ್ಷೆ ಕಡೆ ನೆಟ್ಟಿರುವ ಕಾರಣ ನಾವು ಪದೇ ಪ ದೇ ಇಂಥ ಸನ್ನಿವೇಶಗಳನ್ನು, ಮುಜುಗುರಗಳನ್ನು ಎದುರಿಸುವ ದೌರ್ಭಾಗ್ಯ ಬರುತ್ತದೆ. ಮಾತ್ರವಲ್ಲ ಓರ್ವ ದೂರ ದೃಷ್ಟಿ ಯುಳ್ಳ ನಾಯಕನ ಕೊರತೆ ಸಹ ಎದ್ದು ಕಾಣುತ್ತದೆ.

ಈ ಕ್ಲಿಷ್ಟಕರ ಸನ್ನಿವೇಶ ವನ್ನು ನಾವು ಎದುರಿಸಿದ್ದು “ಮಾರ್ಷಲ್ ಆರ್ಟ್ಸ್” ವೀರರ ಥರ. ಮಾರ್ಷಲ್ ಆರ್ಟ್ಸ್ ನಲ್ಲಿ ವಿರೋಧಿಯ ಮೇಲೆ ಒಮ್ಮೆಗೆ ಎರಗೋಲ್ಲ. non-resistance ತಂತ್ರ ಉಪಯೋಗಿಸಿ ಶತ್ರುವಿನ ಶಕ್ತಿಯನ್ನ ನಮ್ಮ ಉಪಯೋಗಕ್ಕೆ ತಂದು ಸೋಲಿಸೋದು. ಚೀನೀಯರು ಒಳಬಂದಾಗ ನಾವು ಪ್ರತಿರೋಧ ಒಡ್ಡಲಿಲ್ಲ. ನೋಡೋಣ ಏನು ಮಾಡುತ್ತಾರೆ ಎಂದು ಕಾದು ನೋಡಿದೆವು. ಶತ್ರು ತನ್ನ ಶಕ್ತಿಯನ್ನ ವೃಥಾ ವಿನಿಯೋಗಿಸಿ ನಿತ್ರಾಣಗೊಂಡ. ಲಡಾಖ್ ಯಾವುದೇ ಲಡಾಯಿ ಇಲ್ಲದೆ ಶಾಂತವಾಗಿ ನಿದ್ರಾದೇವಿಯ ತೋಳ್ತೆಕ್ಕೆಗೆ ಜಾರಿತು.

ಮಾಧ್ಯಮದ ಮಟ್ಟ ಇದು

muslim stares at a Hindu man at polling station in deccan herald

ಮಾಧ್ಯಮ ಇಳಿಯುವ ಮಟ್ಟ ನೋಡಿ. ಜನ ಸಹಬಾಳ್ವೆ ಬಯಸಿದರೂ, ಮಾದ್ಯಮ ಬಿಡದು. ಮತ ಹಾಕಲು ಸರತಿಯಲ್ಲಿ ಜೊತೆಯಾಗಿ ನಿಂತ ಮುಸ್ಲಿಂ ವೃದ್ಧ ಮತ್ತ್ತು ಹಿಂದೂ ವ್ಯಕ್ತಿಯ ಚಿತ್ರ ತೆಗೆದು ” a muslim stares at a Hindu man at polling station” ಎಂದು ತನ್ನ ಮಹಾಕೃತಿಯನ್ನು ವರ್ಣಿಸುತ್ತಾನೆ. ವಿವಿಧ ಧರ್ಮಗ ಳಿಗೆ ಸೇರಿದ ಜನ ವೋಟ್ ಹಾಕುವಾಗ, ಪ್ರಯಾಣಿಸುವಾಗ, ಪಡಿತರ ಅಂಗಡಿಗಳ ಸಾಲಿನಲ್ಲಿ, ಶಾಲೆ ಕಾಲೇಜುಗಳಲ್ಲಿ ಒಟ್ಟಿಗೆ ಸೇರುವುದು ತೀರಾ ಸಹಜ, ಸಾಮಾನ್ಯ. ಈ ಸಾಮಾನ್ಯ ಜ್ಞಾನ ಕ್ಯಾಮೆರಾಧಾರೀ ಪಂಡಿತನಿಗೆ ಹೊಳೆಯದೆ ಹೋಯಿತು, ಅಥವಾ ಕುಚೇಷ್ಟೆ ತನ್ನ ಕುಬುದ್ಧಿಯನ್ನು ಪ್ರದರ್ಶಿಸಿತು.

ಮುಸ್ಲಿಂ ಜೊತೆಯಲ್ಲಿ ಕಾಣಸಿಗುವ ಪ್ರತೀ ಸನ್ನಿವೇಶಕ್ಕೂ ಏನಾದರೂ ಒಂದು ಬಣ್ಣ ಕಟ್ಟಲೇಬೇಕು. ಕನಿಷ್ಠ ಯೋಗ್ಯತೆ, ಕನಿಷ್ಠ ವಿದ್ಯೆ ಇಲ್ಲದ ನಾಲಾಯಕ್ ಗಳು ಮಾಧ್ಯಮ ದಲ್ಲಿ ತುಂಬಿಕೊಂಡಾಗ ಆಗುವ ಅನಾಹುತ, ಅಭಾಸಕ್ಕೆ ಈ ಚಿತ್ರ ಕೈಗನ್ನಡಿ.

ಮೈಸೂರು ಪ್ರಿಂಟರ್ಸ್ ಬಳಗದ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಬಂದ ಚಿತ್ರ ಇದು. ಮೈಸೂರು ಪ್ರಿಂಟರ್ಸ್ ನನಗೆ ತಿಳಿದ ಹಾಗೆ ಸಮುದಾಯಗಳ ನಡುವೆ ಈ ತೆರನಾದ ಗೋಡೆ ಎಬ್ಬಿಸುವ ಪರಿಪಾಠ ಇಟ್ಟುಕೊಂಡ ಸಂಸ್ಥೆಯಲ್ಲ. ಕಾಲ ಬದಲಾದ ಲಕ್ಷಣವೋ ಅಥವಾ ಬೇರಿನ್ನೇನೋ ಒಟ್ಟಿನಲ್ಲಿ ಪತ್ರಿಕೆಯ ಈ ನಡೆ ಮಾತ್ರ ಆ ಸಂಸ್ಥೆಗೆ ಶೋಭೆ ತರುವಂಥದ್ದಲ್ಲ. ಮೈಸೂರು ಪ್ರಿಂಟರ್ಸ್ ತಮ್ಮ ಸಂಸ್ಥೆಯಲ್ಲಿ ಹೊಕ್ಕಿರುವ ಸಮಾಜ ಕಂಟಕ ಹುಳುಗಳನ್ನು ಹೆಕ್ಕಿ ಹೊರಕ್ಕೆಸೆಯಲಿ.

ಇದನ್ನು ಓದಿ…

stepping
ಇದನ್ನು ಓದಿ. ನನಗೆ ಇಷ್ಟವಾಯಿತು. ನಿಮಗೂ ಇಷ್ಟ ವಾಗಬಹುದು. ಆಗದಿದ್ದರೆ ಆಗುವ ನಷ್ಟ ಒಂದೂವರೆ ನಿಮಿಷಗಳು ಮಾತ್ರ.
ಇದನ್ನು ಓದಿ ನಿಮಗೆ ತಿಳಿದ, ತೋಚಿದ, ಹೊಳೆಯುವ ರೀತಿಯಲ್ಲಿ ವಿಶ್ಲೇಷಿಸಿ. ದೊಡ್ಡ ವೇದಾಂತ ವಂತೂ ಅಲ್ಲ, ಆದರೂ ಒಂದು ಸುಂದರ, ಕಾಲ್ಪನಿಕವಾದರೂ ಬಹುಶಃ ಸಂಭವಿಸಬಹುದಾದ, ಸಂಭವನೀಯತೆ.

ನಿಮ್ಮ ಆಧ್ಯಾತ್ಮಿಕ ಯಾತ್ರೆಯಲ್ಲಿ ನೀವು ಒಂದು ಸ್ಥಳ ತಲುಪುವಿರಿ. ಕಡಿದಾದ, ಎತ್ತರದ ಸ್ಥಳದ ತುತ್ತ ತುದಿಗೆ ತಲುಪುವ ನೀವು ಅಂಚಿನಲ್ಲಿ ನಿಂತು ಮತ್ತೊಂದು ಹೆಜ್ಜೆ ಮುಂದೆ ಇಟ್ಟಾಗ ಆಗುವ ಅನುಭವ ಅಥವಾ ಅವಘಡ.
ಆ precarious ಹೆಜ್ಜೆ ನಿಮ್ಮನ್ನು ಒಂದೋ…
ಅಡಿಯಲ್ಲಿ ಕಾಣುವ ತಳ ಮೇಲಕ್ಕೆ ಬಂದು ನಿಮ್ಮ ಕಾಲುಗಳಿಗೆ ಆಸರೆಯಾಗಿ ನಿಲ್ಲುತ್ತದೆ…
ಅಥವಾ,
ನಿಮಗೆ ರೆಕ್ಕೆಗಳು ಹುಟ್ಟಿ ಹಾರಲು ಕಲಿಯುವಿರಿ.

ಚಿತ್ರ ಮತ್ತು ಬರಹ ಕೃಪೆ: http://vision5d2012.wordpress.com/2013/05/06/stepping-off-the-edge-and-flying/