ಯಾರ ಸೋಲು, ಯಾರ ಗೆಲುವು

ಬೆಂಗಳೂರು ನಗರ ಕಾತುರದಿಂದ ಕಾಯುತ್ತಿದ್ದ ಕ್ರಿಕೆಟ್ ವಿಶ್ವ ಕಪ್ ಪಂದ್ಯಾವಳಿಯ ಭಾರತ ಇಂಗ್ಲೆಂಡ್ ನಡುವಿನ ಹಣಾಹಣಿ ರೋಮಾಂಚಕಾರಿಯಾಗಿ ಕೊನೆಗೊಂಡಿತು. ಗೆಲ್ಲಲು ೩೩೮ ರ ಗುರಿಯನ್ನು ಕೆಚ್ಚೆಯಿಂದ ಸ್ವೀಕರಿಸಿದ ಅಂಡ್ರೂ ಸ್ಟ್ರಾಸ್ ನ ಬಂಟರು ಗೆಲುವಿನ ಹೊಸ್ತಿಲಿನವರೆಗೂ ಬಂದು ಬರಿಗೈಲಿ ಹೋದರು. ಬರಿಗೈಲಿ ಹೋದರು ಆದ್ರೆ  ಹೋಗಿದ್ದು ಮಾತ್ರ ಹಿಗ್ಗುತ್ತಾ, ಮುಗುಳ್ನಗುತ್ತಾ. ಭಾರತೀಯರ ಹೃದಯಗಳು ಅವರ ಬಾಯಿಗಳಿಗೆ ಬರುವಂತೆ ಮಾಡಿದ ನಮ್ಮ ಮಾಜಿ ಯಜಮಾನರುಗಳು ತಾವೆಂಥಾ ಆಟಗಾರರೆಂದು ವಿಸ್ಮಯಕಾರಕವಾಗಿ ತೋರಿಸಿದರು. ವಿಪರೀತ ಕೇಕೆ ಹಾಕುವ ಬೆಂಗಳೂರಿನ ಜನರ  ಸದ್ದಡಗಿಸುತ್ತೇವೆ ಎನ್ನುವಂಥ ಸ್ಪಿನ್ನೆರ್ “ಸ್ವಾನ್” ನ ಹೇಳಿಕೆಗೆ ನ್ಯಾಯ ಒದಗಿಸುವಂತೆ ಆಡಿದ ಇಂಗ್ಲೆಂಡ್ ನಾಯಕ ತನ್ನ ಜೀವನದ ಅತ್ಯುತ್ತಮ ಇನ್ನಿಂಗ್ಸ್ ಅನ್ನು ಬೆಂಗಳೂರಿಗರಿಗೆ ಉಣಬಡಿಸಿದ.

ಆದರೆ ೩೩೯ ಮಾಡಿದ್ದು ನಮ್ಮ ಸಾಹಸವಲ್ಲವೇ? ಅಷ್ಟೇ ಅಲ್ಲ ಆ ಗುರಿ ಮುಟ್ಟದಂತೆ ತಡೆಯುವಲ್ಲಿ ನಾವು ಯಶಸ್ವಿಯಾಗಲಿಲ್ಲವೇ? no. a resounding NO. ೩೩೯ ಮಾಡಿ ಮುನ್ನೂರರ ಒಳಗೆ ಅವರ ಇನ್ನಿಂಗ್ಸ್ ಅನ್ನು ಕವುಚಿ ಬಿಟ್ಟಿದ್ದರೆ ನಾವು ಹೆಮ್ಮೆ ಪಡಬಹುದಿತ್ತು. ಆ ರೀತಿ ಮಾಡದೆ ಶತ್ರು ನಮ್ಮ ಅಡುಗೆ ಮನೆ ತನಕ ನುಸುಳಲು ಬಿಟ್ಟಿದ್ದು ನಮ್ಮ ಸೋಲು. ಇಲ್ಲಿ ನಮ್ಮ ಬೌಲಿಂಗ್ ನ ಬಂಡವಾಳ ಬಟಾ ಬಯಲಾಯಿತು. mediocre bowling ಎನ್ನುವ ಹಣೆ ಪಟ್ಟಿ ಸಿಗುವಂತೆ ಮಾಡಿತು. ಹೌದು ಜಹೀರ್ ಖಾನ್ ಆಟದ ಗತಿಯನ್ನೇ ಬದಲಿಸಿದ ಆ ಅದ್ಭುತ ಓವರ್ ಅನ್ನು unleash ಮಾಡದೆ ಇದ್ದಿದ್ದರೆ ಇಂಗ್ಲೆಂಡ್ ಆಟಗಾರರು ಚಿನ್ನಸ್ವಾಮಿ ಮೈದಾನದ ಪ್ರದಕ್ಷಿಣೆ ಹಾಕುತ್ತಿದ್ದರು ಕೇಕೆ ಹಾಕುತ್ತಾ.  ತನ್ನ ವಯಸ್ಸು ನಾಚುವಂತೆ ಶತಕಗಳ ಮೇಲೆ ಶತಕ ಸಿಡಿಸುತ್ತಿರುವ ತೆಂಡೂಲ್ಕರ್ ಅವರ ಈ ಶತಕವೂ ಮತ್ತೊಂದು ಅಂಕಿ ಅಂಶವಾಗಿ ಉಳಿಯಿತೇ ವಿನಃ “ಅಂತಿಮ ನಗು” ವಿನ ರೋಮಾಂಚನವನ್ನು ನೀಡಲಿಲ್ಲ.

Advertisements

ನಾಸ್ತಿಕನ ಬಾಯಲ್ಲಿ ದೇವರು

 

೮೦ ನೆ ಜನ್ಮ ದಿನವನ್ನು ಆಚರಿಸುತ್ತಿರುವ ಮಿಖಾಯಿಲ್ ಗೋರ್ಬಚೋಫ್ ಸೋವಿಎಟ್ ಒಕ್ಕೊಟವನ್ನು ಛಿದ್ರಗೊಳಿಸಿದ ಕೀರ್ತಿಗೆ ಭಾಜನರು. ಒಕ್ಕೂಟ ಮುರಿದು ಬೀಳುವವರೆಗೆ ಅಮೆರಿಕೆಗೆ ಕಮ್ಯುನಿಸ್ಟ್ ರಷ್ಯಾ ಎಂದರೆ ಒಂದು ರೀತಿಯ ನಡುಕ, ಭಯ. ೮೦ ರ ದಶಕದಲ್ಲಿ ಬಿರುಸಾಗಿ ನಡೆದ ಅಂತಾ ರಾಷ್ಟ್ರೀಯ ವಿದ್ಯಮಾನದಲ್ಲಿ ಅಮೇರಿಕಾ ಬರ್ಲಿನ್ ಗೋಡೆಗೂ ಒಂದು ಗತಿ ಕಾಣಿಸಿ ಸೋವಿಎಟ್ ಮೂರಾಬಟ್ಟೆ ಆಗಿಸುವಲ್ಲಿ ಯಶಸ್ಸನ್ನು ಕಂಡಿತು. ಈ ಯಶಸ್ಸಿಗೆ ಅಮೆರಿಕೆಯ ಕಪಟತನ ಕ್ಕಿಂತ ಒಂಚೂರು ಗೋರ್ಬಚೋಫ್ ಮತ್ತೊಂಚೂರು ಸಾಕ್ಷಾತ್ ಪರಮಾತ್ಮನೇ ಕಾರಣೀಕರ್ತರಾದರು. ದೇವರು ಯಾಕೆ ಬಂದ ಇಲ್ಲಿ ಎನ್ನುತ್ತೀರೋ? ಅಲ್ಲ, ಈ ವಿಶ್ವವನ್ನು, ಅಗಾಧ ಆಗಸವನ್ನು, ಗ್ರಹ, ಧೂಮಕೇತಾದಿಗಳನ್ನು, ನಂತರ ಇವುಗಳೆಲ್ಲವಕ್ಕೆ viceroy ಆಗಿ ಮನುಷ್ಯನನ್ನು ಸೃಷ್ಟಿಸಿ ಭೂಲೋಕಕ್ಕೆ ಕಳಿಸಿದ ತಪ್ಪಿಗೆ ರಷ್ಯಾದವರು ದೇವ ಸ್ಮರಣೆಯೇ ಬೇಡ ಎಂದರೆ  ಅವನಾದರೂ ಏಕೆ ಸುಮ್ಮನಿರಬೇಕು? ಗೋರ್ಬಚೋಫ್ ನನ್ನು ದಾಳವಾಗಿ ಉಪಯೋಗಿಸಿ ವಿಶ್ವದ ಮಹಾ ಶಕ್ತಿ ರಶ್ಯಾವನ್ನು ಬೀದಿಗೆ ತಂದು ನಿಲ್ಲಿಸಿಬಿಟ್ಟ ದೇವರು ಈಗಲಾದರೂ ನನ್ನ ಜಪ ಮಾಡುತ್ತಾ ಬಿದ್ದಿರಿ ಎಂದು.

ಆಫ್ಘಾನಿಸ್ತಾನದ ಯುದ್ಧದಲ್ಲಿ ತಲ್ಲೀನವಾದ ಅಮೆರಿಕೆಗೆ ಚಾರಿತ್ರಿಕ ಮತ್ತು ರಾಜತಾಂತ್ರಿಕ ತಿರುಗೇಟಾಗಿ ಪರಿಣಮಿಸಿದೆ ಆಫ್ಘನ್ ಯುದ್ಧ ಎಂದು ಗೋರ್ಬಚೋಫ್ ವಾದ. ಆಫ್ಘಾನಿಸ್ತಾನದಲ್ಲಿ ರಷ್ಯಾ ಬೆಂಬಲಿತ ಸರಕಾರವನ್ನು ಉರುಳಿಸಲು ಮುಜಾಹಿದೀನ್ಗಳನ್ನು ಹರಿಬಿಟ್ಟ ಅಮೆರಿಕೆಗೆ ಈಗ ಅದೇ ಮುಜಾಹಿದೀನ್ ಗಳೇ ಸವಾಲಾಗಿ ಪರಿಣಮಿಸಿರುವುದು ಒಂದು ರೀತಿಯ ಕಾಕತಾಳೀಯ ಬೆಳವಣಿಗೆ.” ನನ್ನ ಪ್ರಕಾರ ದೇವರು ತಪ್ಪು ಮಾಡುವವರನ್ನು ಶಿಕ್ಷಿಸಲು ತನ್ನದೇ ಆದ mechanism ಅನ್ನು ಬಳಸುತ್ತಾನೆ ಎಂದು ಗೋರ್ಬಚೋಫ್ ನುಡಿಯುತ್ತಾರೆ. ಕಮ್ಯುನಿಸ್ಟರೆಂದರೆ ನಮ್ಮ ಪ್ರಕಾರ ನಿರೀಶ್ವರವಾದಿಗಳು, ಗೋರ್ಬಚೋಫ್ ಒಬ್ಬ ಕಮ್ಯುನಿಸ್ಟ್. ಇವರ ಬಾಯಲ್ಲಿ ದೇವರ ಪ್ರಸ್ತಾಪವೇ? ಅಥವಾ ನಿರೀಶ್ವರವಾದಿಯಾಗಿದ್ದ ಗೋರ್ಬಚೋಫ್ ರ ಕೊರಳಿಗೆ ಅವರ ಮಿತ್ರ ಅಮೆರಿಕೆಯ ಅಧ್ಯಕ್ಷ ರೊನಾಲ್ಡ್ ರೇಗನ್ ಶಿಲುಬೆ ಕಟ್ಟಿಬಿಟ್ಟರೆ? ಏನೇ ಆದರೂ ಆಫ್ಘಾನಿಸ್ತಾನ ಮಾತ್ರ ಅಮೆರಿಕೆ ಮಟ್ಟಿಗೆ ನೀನೆ ಸಾಕಿದಾ ಗಿಳಿ, ನಿನ್ನಾ ಮುದ್ದಿನ ಗಿಳೀ, ಹದ್ದಾಗಿ ಕುಕ್ಕಿತಲ್ಲೋ….. ಆಗಿದ್ದಂತೂ ಗುನುಗಿಸಲೇಬೇಕಾದ ಬೇಕಾದ ಸತ್ಯವೇ.

ಚಿತ್ರ ಸೌಜನ್ಯ: independent ಪತ್ರಿಕೆ (UK)

ಇಂಥ ಮಾತುಗಳನ್ನು ಎಂದಾದರೂ ಕೇಳಿದ್ದೀರಾ?

ಆರು ವರ್ಷ ಪ್ರಾಯದ ಮುಬೀನ ನನ್ನ ಸೋದರಿಯ ಮಗಳು. ಅವಳು ಮಾತನಾಡಲು ಶುರು ಮಾಡಿದಂದಿನಿಂದ ನಮ್ಮನ್ನು ದಂಗು ಬಡಿಸುವ ಮಾತುಗಳನ್ನೇ ಆಡುತ್ತಿದ್ದುದು. ಅರಳು ಹುರಿದಂತೆ ಮಾತನ್ನಾಡುತ್ತಿದ್ದ ಮುಬೀನಾ ಳನ್ನು ನನ್ನ ತಂದೆ ತಾಯಿ ತುಂಬಾ ಪ್ರೀತಿಸುತ್ತಿದ್ದರು. ಒಂದೆರಡು ದಿನಗಳ ರಜೆ ಸಿಕ್ಕರೂ ಅಪ್ಪ ಅವಳಿರುವಲ್ಲಿಗೆ ತಾವೇ ಹೋಗಿ ಕರೆದು ಕೊಂಡು ಬರುತ್ತಿದ್ದರು. ಒಂದೆರಡು ದಿನ ಇದ್ದು ಅವಳ ಮನೆಗೆ ಅವಳು ಮರಳಿದರೆ ಮಣೆ ಬಿಕೋ ಎನ್ನುತ್ತಿರುತ್ತದೆ. ಕೆಲವೊಮ್ಮೆ ತನ್ನ ಅಮ್ಮನನ್ನು ಬಿಟ್ಟು ಅವಳ ಅಜ್ಜಿಯ ಮನೆಯಲ್ಲಿ ಇರುತ್ತಿದ್ದ ಸಮಯದಲ್ಲಿ ನಿನ್ನ ಅಜ್ಜಿ ಚೆನ್ನಾಗಿ ನೋಡಿ ಕೊಳ್ಳುತ್ತಾರಾ ಎಂದು ಮನೆಯಲ್ಲಿ ಕೇಳುತ್ತಿದ್ದರು. ಯಾವಾಗಲೂ ಏನಾದರೊಂದು ಕಂಪ್ಲೇಂಟ್ ಇದ್ದೇ ಇರುತ್ತಿತ್ತು ಅವಳ ಹತ್ತಿರ. ಅಜ್ಜಿ ಹಾರ್ಲಿಕ್ಸ್ ಕೊಡೋಲ್ಲ, ಐಸ್ ಕ್ರೀಂ ಕೊಡೋಲ್ಲ ಎನ್ನುವಂಥವು .

ಮೊನ್ನೆ ನಮ್ಮ ಮನೆಯಲ್ಲಿ ಅವಳನ್ನು ಕೇಳಿದರು ನಿನ್ನ ಅಜ್ಜಿ (ಅವಳ ತಂದೆಯ ತಾಯಿ) ನಿನ್ನನ್ನು ಹೇಗೆ ನೋಡಿಕೊಳ್ಳುತ್ತಾರೆ ಅಂತ. ಆಗ ಅವಳು ಹೇಳಿದ್ದು, ನಾವು ಹೋಂ ವರ್ಕ್ ಮಾಡುವಾಗ ಮೊದಮೊದಲು ಚೆನ್ನಾಗಿ ತಪ್ಪಿಲ್ಲದೆ ಗುಂಡು ಗುಂಡಾಗಿ ಬರೆಯುತ್ತೇವೆ, ಸ್ವಲ್ಪ ಬರೆದಾದ ಮೇಲೆ ಬೇಕಾಬಿಟ್ಟಿ ಬರೆಯುತ್ತೆವಲ್ಲಾ ಹಾಗೆ ಅಜ್ಜಿಯೂ ಕೂಡಾ. ಮೊದ ಮೊದಲು ಚೆನ್ನಾಗಿ ನೋಡಿ ಕೊಳ್ಳುತ್ತಾರೆ, ಆಮೇಲೆ ಏನೂ ಕೊಡೋಲ್ಲಾ, ಎಂದು ಹೇಳಿ ಎಲ್ಲರನ್ನೂ ಬೇಸ್ತು ಬೀಳಿಸಿದಳು. ಅವಳ camparison ನೋಡಿ.

ಮುಬೀನಾ ಶಾಲೆಗೆ ಹೋಗುತ್ತಿದ್ದ ಆರಂಭದ ದಿನಗಳು. ವ್ಯಾನ್ ಡ್ರೈವರ್ ಮಕ್ಕಳನ್ನು ಉಸಿರುಗಟ್ಟುವ ರೀತಿಯಲ್ಲಿ ತುಂಬುತ್ತಿದ್ದ. ಇದನ್ನು ಕಂಡು ರೋಸಿದ ಅವಳು ಡ್ರೈವರ್ನನ್ನು ಕೇಳಿದಳು, ಏಯ್, ನಾವೇನು ಕೋಳಿ ಮರಿಗಳಾ ಈ ಥರಾ ತುಂಬಲು ಎಂದು. ಮಕ್ಕಳಿಗೆ ಮಾತುಗಳ ಟ್ರೈನಿಂಗ್ ಸಾಮಾನ್ಯವಾಗಿ ದೊಡ್ಡವರಿಂದ ಬಂದರೂ ಕೆಲವೊಮ್ಮೆ ನಾವು ಹೇಳಿರದಂಥ ಮಾತುಗಳನ್ನು ಹೇಳಿ ಬೆಚ್ಚಿ ಬೀಳಿಸುತ್ತಾರೆ ನಮ್ಮನ್ನು.

ಮಗಳ ಹೆಸರು “ಫೇಸ್ ಬುಕ್”

ಉತ್ತರ ಆಫ್ರಿಕಾ ಮತ್ತು ಮಧ್ಯಪ್ರಾಚ್ಯದ ಕ್ರಾಂತಿಗಳನ್ನು ಗಮನಿಸಿದವರಿಗೆ ಆ ಕ್ರಾಂತಿಗಳ ಹಿಂದೆ ಸಾಮಾಜಿಕ ವೆಬ್ ತಾಣಗಳು ಹೇಗೆ ಕೆಲಸ ಮಾಡಿದವು ಎಂದು ತಿಳಿದೇ ಇದೆ. ಈಜಿಪ್ಟ್ ದೇಶದ ಕ್ರಾಂತಿಯಲ್ಲಿ ಫೇಸ್ ಬುಕ್ ಮತ್ತು ಟ್ವಿಟ್ಟರ್ ಗಳ ಪಾತ್ರ ಹಿರಿದು.  ಮೊದಲ ಸಲ ತಂದೆಯಾದ ಜಮಾಲ್ ಇಬ್ರಾಹೀಂ ಹುಟ್ಟಿದ ಮಗುವಿಗೆ ಫೇಸ್ ಬುಕ್ ಎಂದು ಹೆಸರಿಟ್ಟು ಒಬ್ಬ ಸರ್ವಾಧಿಕಾರಿಯನ್ನು ಪದಚ್ಯುತಿಗೊಳಿಸುವಲ್ಲಿ ಸಕ್ರಿಯ ಪಾತ್ರ ವಹಿಸಿದ ಫೇಸ್ ಬುಕ್ ಗೆ ತನ್ನದೇ ಆದ ವಿಚಿತ್ರ ಆದರೂ ವಿಶಿಷ್ಟ ರೀತಿಯಲ್ಲಿ ಕೃತಜ್ಞತೆ ಸಲ್ಲಿಸಿದ. ಹಾಗೆಯೇ ಫೇಸ್ ಬುಕ್ ನ ಸ್ಥಾಪಕ Mark Zuckerberg  ಈ gesture ನಿಂದ ಇಂಪ್ರೆಸ್ ಆಗಿ ತನ್ನ ಮಗಳಿಗೆ ಏನಾದರೂ ಉಡುಗೊರೆ ಕಳಿಸಬಹುದು ಎನ್ನುವ ಆಸೆ ಕೂಡಾ ಇರಬಹುದೇ ಇಬ್ರಾಹೀಮನ ಮನದಾಳದಲ್ಲಿ?  

ಸುಮಾರು ಎಂಟು ಕೋಟಿ ಜನಸಂಖ್ಯೆಯ ಈಜಿಪ್ಟ್ ನಲ್ಲಿ ಫೇಸ್ ಬುಕ್ ಉಪಯೋಗಿಸುವವರು ಸುಮಾರು ೫೦ ಲಕ್ಷವಂತೆ.

ಈಗ ಲಿಬ್ಯಾದ ಸರತಿ

೭೦ ರ ದಶಕದ ಭಯಾನಕ ವೆಸ್ಟ್ ಇಂಡೀಸ್ ಬೌಲರುಗಳ ಮಾರಕ ಬೌಲಿಂಗ್ ಗೆ ತರಗೆಲೆಗಳಂತೆ ಉದುರುತ್ತಿದ್ದ ಅತಿರಥ ಮಹಾರಥ ದಾಂಡಿಗರಂತೆ ಜನಕ್ರಾಂತಿಯ ಬಿರುಗಾಳಿಗೆ ತತ್ತರಿಸುತ್ತಿದ್ದಾರೆ ಮಧ್ಯಪ್ರಾಚ್ಯದ ನಿರಂಕುಶಾಧಿಕಾರಿಗಳು. ಕ್ರಾಂತಿ ಆರಂಭವಾದ ಪುಟ್ಟ ಅರಬ್ ರಾಷ್ಟ್ರ ಟುನೀಸಿಯಾದ ಅಧ್ಯಕ್ಷ ೨೧ ವರ್ಷಗಳ ಅಧಿಕಾರದ ನಂತರ ತನ್ನ ವಿಕೆಟ್ ಒಪ್ಪಿಸಿದರೆ ಅಲ್ಲೇ ಹತ್ತಿರದ ಈಜಿಪ್ಟ್ ನ ಅಧ್ಯಕ್ಷ ೨೯ ವರ್ಷಗಳ ದೀರ್ಘ ಬ್ಯಾಟಿಂಗ್ ನಂತರ ತನ್ನ ಇನ್ನಿಂಗ್ಸ್ ಬಲವಂತವಾಗಿ ಡಿಕ್ಲೇರ್ ಮಾಡಿಸಿಕೊಂಡ. ಈಗ ಲಿಬ್ಯಾದ ಸರತಿ. ಕ್ಯೂಬಾದ ಕ್ಯಾಸ್ಟ್ರೋ ನಂತರದ ಬಹುಶಃ ವಿಶ್ವದ ದೀರ್ಘಾವಧಿಯ ಅಧ್ಯಕ್ಷನಿರಬೇಕು ಮುಅಮ್ಮರ್  ಗದ್ದಾಫಿ. ಟುನೀಸಿಯಾ, ಈಜಿಪ್ಟ್ ನ ಕ್ರಾಂತಿಗಳನ್ನು ಕಂಡ ಲಿಬ್ಯನ್ನರಿಗೆ ತಮ್ಮ ದೇಶದ ಆಗುಹೋಗುಗಳ ಬಗ್ಗೆ ಹೇಸಿಗೆ ಹುಟ್ಟಲು ಶುರುವಾಯಿತು. ಎಷ್ಟಿದ್ದರೂ ಲಿಬ್ಯಾದ ಸ್ವಾತಂತ್ರ್ಯ ಹೋರಾಟಗಾರ, ಮರಳುಗಾಡಿನ ಸಿಂಹ “ಒಮರ್ ಮುಖ್ತಾರ್” ನ ನಾಡಿನ ಜನರಲ್ಲವೇ? ಆ ಕೆಚ್ಚು ಶರೀರದ ಯಾವುದೋ ಮೂಲೆಯಲ್ಲಾದರೂ ಅಡಗಿ ಕೂತಿರಲೇಬೇಕು. ಜನ ಬೀದಿಗೆ ಇಳಿದರು. ಸಾವು ನೋವುಗಳಾದವು. ಸಾವಿರಾರು ಜನ ಸತ್ತರು ಎನ್ನುವ ಪುಕಾರೂ ಹಬ್ಬಿತು.      

ಈ ಆಧುನಿಕ “ಇ” ಯುಗದ ಕ್ರಾಂತಿಗಳ ವಿಶೇಷ ಏನೆಂದರೆ  ವೆಬ್ ತಾಣಗಳ ಸಾರಾಸಗಟು ಬಳಕೆ. ದೀರ್ಘಾವಧಿ ತಮ್ಮ ಕುರ್ಚಿಗಳಲ್ಲಿ ಕೂತು ಕುಂಭಕರ್ಣ ನ ನಿದ್ದೆಗೆ ಪರವಶರಾದವರ ಪತನಕ್ಕೆ ನಾಂದಿ ಹಾಡಿದ್ದು ಟ್ವಿಟ್ಟರ್, ಫೇಸ್ ಬುಕ್. ಇವು ತಮ್ಮ ಹೆಸರುಗಳನ್ನು ಚರಿತ್ರೆಯ ಪುಟಗಳಿಗೆ ಅಮೋಘವಾಗಿ ಸೇರಿಸಿ ಕೊಂಡವು. ಬರೀ ಕ್ರಾಂತಿ ಗೊಳಗಾದ ದೇಶಗಳ ಜನ ಮಾತ್ರವಲ್ಲ ವಿಶ್ವ ಸಮುದಾಯವೇ ಈ ಜನರ ತುಡಿತಕ್ಕೆ ಸಹಾನುಭೂತಿ ತೋರಿಸಿ ತಮ್ಮ ಟ್ವೀಟು ಗಳನ್ನು ದೇಣಿಗೆಯಾಗಿ ನೀಡಿದರು. ಮುಬಾರಕ್ ದೇಶಕ್ಕೆ ಮಾತ್ರ ಕೆಟ್ಟವನು, ಆದರೆ ಗದ್ದಾಫಿ ಮನುಕುಲಕ್ಕೆ ಕೆಟ್ಟವನು ಎಂದು ಒಬ್ಬ ಟ್ವೀಟಿಸಿದ. ಮುಬಾರಕ್ ತುಂಬಾ ಜನರನ್ನೇನೂ ಕೊಲ್ಲಲಿಲ್ಲ ಆದರೆ ಗದ್ದಾಫಿಗೆ ಮಾತ್ರ ಕೊಳ್ಳುವ ಕೆಲಸ ಸ್ವಲ್ಪ ಸಲೀಸಾಗೇ ಕಂಡಿತು. ಇದ್ದಕ್ಕಿದ್ದ ಹಾಗೆ ಲಿಬ್ಯಾದ ಮಹಿಳೆಯ ಬ್ಲಾಗೊಂದನ್ನು ಓದಿದ ನೆನಪು ಬಂತು. ಬ್ಲಾಗ್ ನ ಹೆಸರು ಸರಿಯಾಗಿ ನೆನಪಿರಲಿಲ್ಲ ಎಂದಿನಂತೆ ಗೂಗ್ಲ್ ಸಹಾಯಕ್ಕೆ ಬಂದ. “ಖದೀಜಾ ತೆರಿ” ಯ ಬ್ಲಾಗ್ ತೆರೆದು ಕೊಂಡಿತು. ಆಕೆ ಸುರಕ್ಷಿತ ಎಂದು ಓದಿ ಮನಸ್ಸು ನಿರಾಳವಾಯಿತು. “ ನಾನಿರುವ ಸ್ಥಳದಿಂದ ನಮಗೇನೂ ತಿಳಿಯುತ್ತಿಲ್ಲ, ನಿಮ್ಮಂತೆಯೇ ನಾನೂ ಕೂಡಾ ನೆಟ್ ಅವಲಂಬಿಸಿದ್ದೇನೆ ಸುದ್ದಿಗಾಗಿ” ಎಂದು ಬರೆದಿದ್ದಳು.

I made a small terrarium. And then I thought how similar Libya is to a terrarium… everything happening inside with no intervention from outside… the whole world is looking in.

ಒಂದು ವೃತ್ತಾಕಾರದ ಗಾಜಿನ ಬುರುಡೆ (terrarium) ಯಲ್ಲಿ ಒಂದಿಷ್ಟು ಮಣ್ಣು, ಎಲೆಗಳನ್ನು ಹಾಕಿ, ಅದರ ಚಿತ್ರ ತನ್ನ ಬ್ಲಾಗ್ ನಲ್ಲಿ ಹಾಕಿ ಮೇಲಿನ ಮಾತುಗಳನ್ನು ಬರೆದಿದ್ದಳು ಖದೀಜಾ. ಆಕೆಯ ಅರ್ಥಗರ್ಭಿತ ಮಾತುಗಳು ತುಂಬಾ ಇಷ್ಟವಾದವು. ತಮಗೂ ಆಗಿರಬಹುದು ಅಲ್ಲವೇ? ಪ್ರಪಂಚದ ಯಾವುದೇ ಮೂಲೆಯಲ್ಲಿಯೂ ನಾವು ನೆಲೆಸಿರ ಬಹುದು ಆದರೆ ಮಾನವ ಭಾವನೆಗಳು ಎಷ್ಟೊಂದು identical ನೋಡಿ. ಲಿಬ್ಯಾ ದೇಶವನ್ನು ನಾನು ಕಂಡಿಲ್ಲ, ಆ ಮಹಿಳೆಯನ್ನು ನಾನು ನೋಡಿಲ್ಲ, ಆದರೂ ಜೇಡ ತನ್ನ ಬಲೆಯನ್ನು ಹೆಣೆದ ಎಲ್ಲರ ಸುತ್ತ ಯಾವುದೇ ಬೇಧ ಭಾವವಿಲ್ಲದೆ. ನಿಜ ಹೇಳಬೇಕೆಂದರೆ ಈ ಸರೀ ರಾತ್ರಿಯಲ್ಲಿ (ಮೂರೂವರೆ ಘಂಟೆ) ಬ್ಲಾಗ್ ಪುಟ ಬರೆಯುವ ಯೋಚನೆ ಇರಲಿಲ್ಲ. ಲಿಬ್ಯಾದ ಬಗ್ಗೆ ಒಂದು ವಾಕ್ಯದ ಅಥವಾ ೧೪೦ ಅಕ್ಷರಗಳ ವಟವಟಗುಟ್ಟೋಣ ಎಂದು ಕೂತಾಗ ಹೊರ ಹೊಮ್ಮಿತು ಈ ಲೇಖನ.      

ಲಿಬ್ಯಾದ ಜನರ ಬಗ್ಗೆ, ಅಲ್ಲಿನ ಜನಜೀವನದ ಬಗ್ಗೆ ಅರಿಯಬೇಕಿದ್ದರೆ ಖದೀಜ ತೆರಿ ಯ ಬ್ಲಾಗ್ ಸಂದರ್ಶಿಸಿ. http://khadijateri.blogspot.com/

“ತಾಯ್ ಚೀ” ಇರಲಿ…“ಎರ್ ನಾಯ್” ಬೇಡ

“ತಾಯ್ ಚೀ” ಬಗ್ಗೆ ಹೇಳುವುದೇನೂ ಬೇಡವಲ್ಲ? ಚೀನಾದ ಅಥವಾ ಇಂಪೋರ್ಟೆಡ್ ವ್ಯಾಮೋಹಕ್ಕೆ ಬಿದ್ದ ಭಾರತೀಯರು ನಮ್ಮದೇ ಆದ ಯೋಗಾಸನವನ್ನು ನಿರ್ಲಕ್ಷಿಸಿ ತಾಯ್ ಚೀ ಕಲಿಯುತ್ತಿದ್ದಾರಂತೆ. ಚೀನಾದ ಅಲಾರಂ ಗಡಿಯಾರ, ಮಕ್ಕಳ ಆಟಿಕೆ ಮಾತ್ರ ಏಕೆ ಅವರ ಸಾಮಾಜಿಕ ಅಭ್ಯಾಸಗಳೂ ಇರಲಿ ಎನ್ನುವ ಧೋರಣೆ ಇರಬಹುದು ಚೀನಾದ ಈ ವ್ಯಾಯಮದ ಕುರಿತ ಆಸಕ್ತಿಯ ಹಿಂದೆ. ಇರಲಿ ಬಿಡಿ, ‘ತಾಯ್ ಚಿ’ ಶರೀರದ ಆರೋಗ್ಯಕ್ಕೆ ಒಳ್ಳೆಯದೇ, ಆದರೆ, ಎರ್ ನಾಯ್ ಮಾತ್ರ ಶರೀರಕ್ಕೆ ಒಳ್ಳೆಯದಾದರೂ, ಮಾನಸಿಕ ಸ್ವಾಸ್ಥ್ಯಕ್ಕೆ ಒಳ್ಳೆಯದಲ್ಲ ಎನ್ನುವುದಂತೂ ನಿಜವೇ.

ಅಲ್ರೀ, ಏನೀ ‘ಎರ್ ನಾಯ್’?

‘ಎರ್ ನಾಯ್’ ಎಂದರೆ ಚೀನೀ ಭಾಷೆಯಲ್ಲಿ “ಎರಡನೇ ಹೆಂಡತಿ” ಅಂತ. ಚೀನೀ ಸಮಾಜ ಇದನ್ನು ಒಪ್ಪದಿದ್ದರೂ ಬಹುತೇಕ, ಮೊದಲ ಪತ್ನಿಯರೂ ಸೇರಿ, ಚೀನೀಯರು ಇದರ ವಿರುದ್ಧ ದೊಡ್ಡ ಸ್ವರ ಎತ್ತದೆ ಕಂಡೂ ಕಾಣದಂತೆ ತಮ್ಮ ದೃಷ್ಟಿಯನ್ನು ಬೇರೆಡೆ ನೆಡುತ್ತಾರೆ. “ಎರ್ ನಾಯ್” ಯನ್ನು ಸಾಕುವುದು ಒಂದು ರೀತಿಯ ಪ್ರತಿಷ್ಠೆ ಚೀನಾದಲ್ಲಿ. ಮೇಲ್ಮಧ್ಯಮ ವರ್ಗದ ಗಂಡಸರು ಕಾಸು ಹೆಚ್ಚಿದ್ದರೆ ಈ ಸೌಲಭ್ಯ ಹೊಂದಿರುತ್ತಾರೆ. “ಎರ್ ನಾಯ್” ಗಳು ಅವಸರದಿಂದ ಹೆಕ್ಕಲ್ಪಟ್ಟ ಅಂತಿಂಥ ಸ್ತ್ರೀಯರಲ್ಲ. ಇವರು ಸುಶಿಕ್ಷಿತರೂ, ಆಧುನಿಕ ಮನೋಭಾವದವರೂ ಆದ ಚೆಂದುಳ್ಳಿ ಹೆಣ್ಣುಗಳು. ಇವರ ಉಪಯೋಗ ಬರೀ “ವೀಕೆಂಡ್” ಗಾಗಿಯೋ ಅಥವಾ boredom ಕಳೆಯಲಿಕ್ಕೋ ಅಲ್ಲ. ಇವರು ತಮ್ಮ ಪುರುಷರೊಂದಿಗೆ business meeting ಗಳಲ್ಲಿ ಪಾಲುಗೊಳ್ಳುತ್ತಾರೆ. ಇವರನ್ನು ನೋಡಿ business partner ಗಳು ಪ್ರಭಾವಿತರಾಗುತ್ತಾರೆ. ಗಟ್ಟಿ ಕುಳ ಎಂದುಕೊಳ್ಳುತ್ತಾರೆ. ಒಂದು ರೀತಿಯ ಷೋ ಪೀಸು. ಕೆಲವರು louis vuitton ಬ್ರೀಫ್ ಕೇಸು, “ಗುಚ್ಚಿ” ಪರ್ಫ್ಯೂಮು, “ಫ್ಲೋರ್ ಶೈಮ್” ಶೂ ಹಾಕಿಕೊಂಡು ಕ್ಲಯಂಟ್ ಗಳನ್ನು ಇಂಪ್ರೆಸ್ಸ್ ಮಾಡಲು ಹೊರಟರೆ ಇವರದು ಬೇರೆಯದೇ ಆದ ವಿಧಾನ. ತಮ್ಮ ಮಡದಿಯರ ಉದರಕ್ಕೆ ಬೆಂಕಿ ಹಾಕಿ ಇಂಪ್ರೆಸ್ ಮಾಡೋ ವಿಧಾನ.

ವಿವಾಹದ ಬಗ್ಗೆ ಚೀನಿಯರದು ಟೇಕ್ ಇಟ್ ಈಜಿ attitude. ರೋಷದಿಂದ ಸಂಪತ್ತಿನ ಹಿಂದೆ ಬಿದ್ದ ಪರಿಣಾಮವಿರಬೇಕು. ಒಬ್ಬ ಪಾಶ್ಯಾತ್ಯ ವ್ಯಕ್ತಿಯ ಪ್ರಕಾರ ಇಲ್ಲಿ ಚೀನಾದಲ್ಲಿ ವಿವಾಹ ಎನ್ನುವುದು ಎರಡು ಹೃದಯಗಳ ಬೆಸುಗೆ ಅಲ್ಲ. ಒಂದು ರೀತಿಯ ಎರಡು ಕುಟುಂಬಗಳ ಮಧ್ಯೆಯ ಒಪ್ಪಂದ. ಅದರ ಮೇಲೆ ಬೇರೆ ದೇಶಗಳ ರೀತಿ ಚೀನಾದಲ್ಲಿ ಮಾನವೀಯ ಕ್ರಾಂತಿ (humanist revolution) ಆಗಿಲ್ಲವಂತೆ. ಹಾಗಾಗಿ ವಿವಾಹ ತಲೆ ಕೆಡಿಸಿ ಕೊಳ್ಳುವಂಥ ವ್ಯವಸ್ಥೆಯಲ್ಲ. ವ್ಯವಸ್ಥೆ ಹೀಗಿರುವಾಗ ಜಾಣ, ಚೆಂದುಳ್ಳಿ ಹೆಣ್ಣುಗಳು “ಎರ್ ನಾಯ್” ಪಟ್ಟಕ್ಕೆ ಮೋಹಿತರಾಗುತ್ತಾರೆ. ಇರುವವನು ತಾನೇ ಈ ರೀತಿಯ ಎರಡನೇ ಹೆಣ್ಣನ್ನು ಇಟ್ಟು ಕೊಳ್ಳಲು ಸಾಧ್ಯ? ಮುಂದುವರಿದ ನಗರ ಗಳಲ್ಲಂತೂ ಶೇಕಡ ೮೦ ಶ್ರೀಮಂತ ಪುರುಷರಿಗೆ ಈ ತೆರನಾದ ಸಂಗಾತಿಗಳಿರುತ್ತಾರಂತೆ. ಮಹಿಳೆಯರೂ ಸಹ ಧನದ ಹಿಂದೆ ಓಡುವುದರಿಂದ ಯಾವುದೇ arrangement (ವಿವಾಹ ಅಥವಾ ಎರ್ ನಾಯ್) ನಲ್ಲಿ ಧನವಂತನನ್ನೇ ಇಷ್ಟ ಪಡುತ್ತಾಳೆ. ಈ ಧೋರಣೆಯ ಹಿಂದೆ economic interest ಸಹ ಇದೆ. ಒಬ್ಬ ಮಹಿಳೆಯ ಈ ಮಾತನ್ನು ಕೇಳಿ; “ ನಾನು ನನ್ನವನಿಂದ ತ್ಯಜಿಸಲ್ಪಟ್ಟಾಗ ಸೈಕಲ್ಲಿನ ಮೇಲೆ ಕೂತು ಕಣ್ಣೀರು ಹಾಕುವುದಕ್ಕಿಂತ BMW ಕಾರಿನಲ್ಲಿ ಕೂತು ಕಣ್ಣೀರು ಹಾಕಲು ಇಷ್ಟಪಡುತ್ತೇನೆ”. ಅಂದರೆ ಅವನು ನನ್ನನ್ನು ಬಿಟ್ಟರೂ BMW ನನ್ನ ಪಾಲಾದರೆ ಸಾಕು ಎಂದು. ‘crass materialism’ ತರುವ ಧೋರಣೆ ಇದು.

ಚೀನಾದ ಮಾಜಿ ಅಧ್ಯಕ್ಷ Jiang Zemin ಗೂ ಒಬ್ಬ ‘ಎರ್ ನಾಯ್’ ಇತ್ತಂತೆ. ಆಕೆ ಹಾಡುಗಾರ್ತಿ ಕೂಡಾ.

ನಮ್ಮ ದೇಶದ ಧೋರಣೆ ಏನು?

ನಮ್ಮ ದೇಶದಲ್ಲಿ ಈ ರೀತಿಯಾಗಿ ಪತ್ನಿಯಿದ್ದೂ ಮತ್ತೊಬ್ಬ ಸ್ತ್ರೀಯನ್ನು ಸಂಗಾತಿಯಾಗಿ ಇಟ್ಟುಕೊಳ್ಳುವುದಕ್ಕೆ ಇಟ್ಟು ಕೊಂಡವಳು, ಎಂದೂ ಸ್ವಲ್ಪ ತುಂಟ ತಮಾಷೆಯಾಗಿ “ಕೀಪ್” ಮತ್ತು “ಸ್ಟೆಪ್ನಿ” ಎಂದೂ ಕರೆಯುತ್ತಾರೆ. ಈ ರೀತಿಯಾಗಿ ವಿವಾಹದ ಹೊರಗೆ ಸಂಬಂಧ ಇಟ್ಟುಕೊಂಡ ಪುರುಷನನ್ನು ಸಮಾಜ ಅಸೂಯೆ ಮಿಶ್ರಿತ ಮೆಚ್ಚುಗೆಯಿಂದ ನೋಡಿದರೆ ಆ ಸೌಲಭ್ಯ ಮಹಿಳೆಗೆ ಇಲ್ಲ. ಇಟ್ಟು ಕೊಂಡವಳು, ಕೀಪ್ ಅಥವಾ ಸ್ಟೆಪ್ನಿ ಎಂದು ಕರೆಯುವುದರ ಬಗ್ಗೆಯೂ ಜನರಲ್ಲಿ ವಿಶೇಷವಾಗಿ ಫೆಮಿನಿಸ್ಟ್ ಪೈಕಿಯವರಿಗೆ ಭಾರೀ ವಿರೋಧವಿದೆ. ಈ ರೀತಿಯಾಗಿ ಕರೆಯುವುದು ಹೆಣ್ಣನ್ನು ನಿಕೃಷ್ಟವಾಗಿ ಕಂಡಂತೆ ಎನ್ನುವುದು ಇವರ ಅಭಿಪ್ರಾಯ. ದಾರಿ ಹೋಕರು ಸ್ಟೆಪ್ನಿ ಎಂತಲೋ, ಇಟ್ಟುಕೊಂಡವಳು ಎಂತಲೋ ಕರೆದುಕೊಳ್ಳಲಿ, ಆದರೆ ನಮ್ಮ ಸರ್ವೋಚ್ಚ ನ್ಯಾಯಾಲಯವೇ ಹಾಗೆ ಸಂಬೋಧಿಸಿದರೆ ಹೇಗಿರಬಹುದು?

ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಒಂದು ತಗಾದೆ ಸರ್ವೋಚ್ಚ ನ್ಯಾಯಾಲಯದ ಕಟ್ಟೆ ಹತ್ತಿತು. ಇಟ್ಟು ಕೊಂಡ ವಳು ಖರ್ಚು ವೆಚ್ಚಕ್ಕೆ ಅರ್ಹಳೋ ಎಂದು. ಆ ಸಂದರ್ಭದಲ್ಲಿ ನ್ಯಾಯಾಲಯ “ಕೀಪ್” ಜೀವನಾಂಶಕ್ಕೆ ಅರ್ಹಳಲ್ಲ ಎನ್ನುವ ತೀರ್ಪು ನೀಡಿತು. ಕೀಪ್ ಪದವನ್ನು ಸಾಕ್ಷಾತ್ ನ್ಯಾಯ ಮೂರ್ತಿಗಳ ಬಾಯಲ್ಲಿ ಕೇಳಿದ ‘ಸೋಲಿಸಿಟರ್ ಜನರಲ್’ ಇಂದಿರಾ ಜೈಸಿಂಗ್ ತಮ್ಮ ಕಿವಿಗಳನ್ನೇ ನಂಬಲಾಗಲಿಲ್ಲ. ಈ ೨೧ ನೆ ಶತಮಾನದಲ್ಲಿ ಸರ್ವೋಚ್ಚ ನ್ಯಾಯಾಲಯ ಹೇಗೆ ತಾನೇ ಓರ್ವ ಮಹಿಳೆಗೆ ಈ ಪದವನ್ನ ಉಪಯೋಗಿಸಬಲ್ಲುದು ಎಂದು ಗುಡುಗಿದರು. ಈ ಪದವನ್ನು ಕಡತದಿಂದ ತೆಗೆದು ಹಾಕಲು ನಾನು ಅರ್ಜಿ ಸಲ್ಲಿಸುತ್ತೇನೆ, ಅಲ್ಲಿಯವರೆಗೆ ಈ ನ್ಯಾಯಾಲಯದ ಕಲಾಪದಲ್ಲಿ ಭಾಗಿಯಾಗುವುದಿಲ್ಲ ಎಂದು ಪ್ರತಿಭಟಿಸಿದರು. ಕೊನೆಗೆ keep ಬದಲಿಗೆ concubine ಪದ ಆಗಬಹುದೋ ಎಂದು ಕೇಳಿ ಜೈಸಿಂಗ್ ರನ್ನು ಸಮಾಧಾನ ಪಡಿಸಿತು ನ್ಯಾಯಾಲಯ. ಸುಪ್ರೀಂ ಕೋರ್ಟೇ ಈ ರೀತಿ ಪದ ಪ್ರಯೋಗ ಮಾಡಿರುವಾಗ ನಾವು ಯಾವ ಲೆಕ್ಕ ಎನ್ನುತ್ತೀರೋ? ಸಂಬಂಧ ಇಟ್ಟು ಕೊಂಡ ಹೆಣ್ಣಿಗೆ ಜೀವನಾಂಶ ಇಲ್ಲ, ಅದರಲ್ಲೂ “ಒಂದು ರಾತ್ರಿಯ ನಿಲುಗಡೆ” (one night stand) ಯವರಿಗಂತೂ ಈ ಸೌಲಭ್ಯ ಇಲ್ಲವೇ ಇಲ್ಲ ಎಂದು ತೀರ್ಪ ಹೊರಬಿದ್ದಿತು ಸರ್ವೋಚ್ಚ ನ್ಯಾಯಾಲಯದಿಂದ.

ಜಿಜ್ಞಾಸೆ: ಎರಡನೆಯ, ಅನಧಿಕೃತ ಹೆಣ್ಣು “ಕೀಪ್” ಆಗುವುದಾದರೆ, ಮೊದಲನೆಯವಳು ಗಂಡಿನ ಮೇಲೆ “ಹೇರಲ್ಪಟವಳು” ಎಂದೋ?

ನಾವು “ಅಕಶೇರುಕ” ರಾಗಿದ್ದು ಎಂದಿನಿಂದ?

ಪಾಕಿಸ್ತಾನ ಅಮೆರಿಕೆಯ ಒಂದು ಪಪ್ಪೆಟ್. ಇದು ಪಾಕಿಸ್ತಾನದ ಸರಕಾರಕ್ಕಿಂತ ಅಲ್ಲಿನ ಜನಕ್ಕೆ ಚೆನ್ನಾಗಿ ಗೊತ್ತು. ತಮ್ಮ ಸರಕಾರಗಳು ಪ್ರತೀ ನಿರ್ಧಾರಕ್ಕೂ ವಾಷಿಂಗ್ಟನ್ ಮೇಲೆ ಪರಾವಲಂಬಿ ರೀತಿ ಅವಲಂಬಿತ ಎಂದು.  ಪಾಕಿಸ್ತಾನ ಒಂದು miserably failed state, ಪಾಕಿಸ್ತಾನದ ಈ degenaration ನೋಡಿ ಕನಿಕರ ಪಡುತ್ತಿದ್ದ ನಮಗೆ ಒಂದು ವಿಚಿತ್ರ ಆದರೆ  ಆಘಾತಕಾರಿಯಾದ ಬೆಳವಣಿಗೆ ಕಾಣಲು ಸಿಕ್ಕಿದೆ. ಒಂದು ಬೆಳಿಗ್ಗೆ ಅಮೆರಿಕೆಯ ದೂತಾವಾಸದ ಸಿಬ್ಬಂದಿಯೊಬ್ಬ ರಸ್ತೆ ಬದಿಯಲ್ಲಿ ನಿಂತಿದ್ದಾಗ ಬೈಕ್ ಬಂದು ನಿಲ್ಲುತ್ತದೆ, ಗುಂಡಿನ ಚಕಮಕಿ ನಡೆಯುತ್ತದೆ, ಬೈಕ್ ಸವಾರರಲ್ಲಿ ಇಬ್ಬರು ಸಾಯುತ್ತಾರೆ ಅಮೆರಿಕೆಯವನನ್ನು ಪೊಲೀಸರು ಬಂಧಿಸುತ್ತಾರೆ. ಪಾಕ್ ಬೀದಿಗಳಲ್ಲಿ  ಬೈಕ್ ನಲ್ಲಿ ಬರುವುದೂ, ಬಂದ ಕೂಡಲೇ ಗುಂಡಿನ ಕಾಳಗ ನಡೆಯುವುದೂ ಸಾಮಾನ್ಯವೇ. ನಾವು ನಮ್ಮ ಚಿತ್ರಗಳಲ್ಲಿ ಕಾಣುವುದನ್ನು ಅಲ್ಲಿ ನಿಜ ಜೀವನದಲ್ಲಿ ಆಡಿ ತೋರಿಸುತ್ತಾರೆ. ಆದರೆ ವಿಷಯದ ಗಾಂಭೀರ್ಯ ಇರುವುದು ಅಮೆರಿಕೆಯವ ಈ ವಿವಾದದಲ್ಲಿ ಸಿಕ್ಕಿ ಬಿದ್ದಿದ್ದು. ಅದೂ ಸಾಧಾರಣ ಅಮೆರಿಕೆಯ ನಾಗರೀಕನಲ್ಲ. ದೂತಾವಾಸದ ಸಿಬ್ಬಂದಿ. ಅವನಿಗೆ ಇದ್ದೇ ಇರುತ್ತದೆ diplomatic immunity. ತನ್ನ ದೇಶದವರು ಸಿಕ್ಕಿಬಿದ್ದಾಗ ಸಹಜವಾಗಿಯೇ ಅಮೆರಿಕನ್ನರು ಕಿಡಿ ಕಿಡಿ ಯಾಗುತ್ತಾರೆ. ಈ ವಿಷಯದಲ್ಲೂ ಸಹ ಅಸಮಾಧಾನ ಗೊಂಡರು. ಮಾಮೂಲಿ ಪ್ರತಿಭಟನೆ ಕೆಲಸ ಮಾಡದಾದಾಗ ಅಮೆರಿಕೆಯಲ್ಲಿನ ಪಾಕ ರಾಜತಾಂತ್ರಿಕ ನನ್ನು ಕರೆಸಿ ನಮ್ಮ ಪ್ರಜೆಯನ್ನು ವಿಮುಕ್ತಿಗೊಳಿಸದಿದ್ದರೆ ನಿನ್ನನ್ನು ಒದ್ದೋಡಿಸುತ್ತೇವೆ ಎಂದು ಧಮಕಿ ಹಾಕಿದರು. ಧಮಕಿ ಕೇಳಿ ಮರಳಿದ ಆತ ನನಗೆ ಅಂಥ ಎಚ್ಹರಿಕೆಯನ್ನೇನೂ ಅಮೇರಿಕಾ ನೀಡಿಲ್ಲ ಎಂದು ಟ್ವೀಟಿಸಿ ಸುಮ್ಮನಾದ. ಆದರೆ ಅಮೇರಿಕ ನೇರವಾಗಿ ಅಲ್ಲಿನ ಸರಕಾರದ ಮೇಲೆ ಪ್ರಭಾವ ತೋರಿಸಲು ತೊಡಗಿತು. ಅಲ್ಲಿನ ಪೊಲೀಸರು ಮಾತ್ರ ಜಪ್ಪಯ್ಯ ಎನ್ನಲಿಲ್ಲ. ಇವನು ದೂತಾವಾಸದ ಅಧಿಕಾರಿ ಅಲ್ಲ, ಬದಲಿಗೆ ಒಬ್ಬ ಗೂಢಚಾರ ಎಂದು ಕರೆದು ಅವನ ಬಳಿಯಿದ್ದ ಆಧುನಿಕ ಉಪಕರಣಗಳ ಹೆಸರುಗಳನ್ನೂ ಪಟ್ಟಿ ಮಾಡಿ ಬಹಿರಂಗಗೊಳಿಸಿದರು, charge sheet ಹಾಕಿ ಅತ್ತೆ ಮನೆಗೂ ಸಹ ಅಟ್ಟಿದರು. ಈ ಘಟನೆ ನಮ್ಮ ದೇಶದಲ್ಲಿ ನಡೆದಿದ್ದರೆ? ಪಾಕಿಸ್ತಾನದ ಗಾಯಕ ಕೋಟ್ಯಂತರ ರೂಪಾಯಿ ಅನಧಿಕೃತವಾಗಿ  ತಂದ ಎಂದು ಬಂಧಿಸಿದ ಕೂಡಲೇ ಅವನನ್ನು ಬಿಡುಗಡೆ ಗೊಳಿಸಲು ಆದೇಶ.   

ಪ್ರಥಮ ಕೊಲ್ಲಿ ಯುದ್ಧದ ವೇಳೆ ಅಮೆರಿಕೆಯ ಯುದ್ಧ ವಿಮಾನಗಳಿಗೆ ಇಂಧನ ಹಾಕಬಾರದು ಎಂದು ನಿರ್ಣಯಿಸಿದ್ದ ನಮ್ಮ  ಸರಕಾರ ಕೊನೆಗೆ ಸದ್ದಿಲ್ಲದೇ ಇಂಧನ ತುಂಬಿಸಿ ಕೊಟ್ಟಿತು. ಬಿಳಿ ನಗು ನಮ್ಮ ಮೇಲೆ ಚೆನ್ನಾಗಿ ಪ್ರಭಾವ ಬೀರುತ್ತದೆ. ಈ ಪಾಠವನ್ನು ಅಮೆರಿಕನ್ನರಿಗೆ ನೀಡಿದ್ದು ನಮ್ಮನ್ನು ೨೦೦ ವರ್ಷ ಗಳ ಕಾಲ ಆಳಿದ ಬ್ರಿಟಿಷರು. ಇರಾನ್ ನಮ್ಮ ದೇಶದ ಆಪ್ತ ಮಿತ್ರ. ಆದರೆ ಇರಾನ ವಿರುದ್ಧದ ಭದ್ರತಾ ಮಂಡಳಿಯ ನಿರ್ಣಯಕ್ಕೆ ಪರವಾಗಿ ನಾವು ಮತ ಚಲಾಯಿಸಿ ಮಧ್ಯ ಪ್ರಾಚ್ಯದಲ್ಲಿನ ಒಂದು ದೇಶದ ಬೆಂಬಲವನ್ನು ಕಳೆದು ಕೊಂಡೆವು.

ಕೇಂದ್ರ ಸರಕಾರದಲ್ಲಿ ಕೆಲಸ ಮಾಡದ ಅಥವಾ ಮಾಡಲು ಬಾರದ ಒಂದು ಇಲಾಖೆ ಇದ್ದರೆ ಅದೇ ವಿದೇಶಾಂಗ ಇಲಾಖೆ. ವಿದೇಶಾಂಗ ಇಲಾಖೆಯಲ್ಲಿ ಕೆಲಸ ಎಂದರೆ ಗರಿ ಗರಿಯಾದ ಸೂಟು, ಅಥವಾ ರೇಶಿಮೆ ಸೀರೆ ಉಟ್ಟು ದೇಶ ಸುತ್ತುವುದು ಎನ್ನುವ ತಪ್ಪು ಕಲ್ಪನೆ ಮನೆ ಮಾಡಿದೆ. ನೆಹರೂ ಕಾಲಾದ outdated ರಾಜನೀತಿಯ ನಿಯಮಗಳು ಎಲ್ಲಾ ಕಾಲಕ್ಕೂ ಪ್ರಸ್ತುತ ಎನ್ನುವ ಭಾವನೆ ಬೇರೆ. ನಾವು ಯಾರ ಪರವೂ ಅಲ್ಲ, ಎಲ್ಲರ ಸವಾರಿ ನಮ್ಮ ಮೇಲೆ ನಡೆಯಲಿ ಎನ್ನುವ ನಿರ್ಲಿಪ್ತ ನೀತಿಯ ಮೇಲೆ ವಿಪರೀತ ಅವಲಂಬನೆ. ಆ ನೀತಿಗೆ ಒಂದೇ ಒಂದು ಬದಲಾವಣೆಯಂತೂ ಕಾಣಲು ಸಿಕ್ಕಿದೆ. ಅದೇ ಅಮೇರಿಕಾ ಪರ ನೀತಿ. ಹಿಂದೆ ರಷ್ಯಾ ಪರ, ಈಗ ಅಮೇರಿಕಾ ಪರ. ನಮಗೇಕೆ ಸ್ವಂತಿಕೆ ಇಲ್ಲ ಅಥವಾ ಇರಕೂಡದು? ವಿನಾಕಾರಣ ಕಾರ್ಗಿಲ್ ಅನ್ನು ಆಕ್ರಮಿಸಿ ನಮ್ಮ ಸಾವಿರಾರು ಸೈನಿಕರ ಸಾವಿಗೆ ಕಾರಣವಾದ ಪಾಕಿಸ್ತಾನವನ್ನು ಸದೆ ಬಡಿಯುವ ಸುಂದರ, ಬಹುಶಃ ಇನ್ನೆಂದೂ ಬರದ ಅವಕಾಶವನ್ನು ನಾವು ಕಳೆದು ಕೊಂಡೆವು. ಇದಕ್ಕೆ ಕಾರಣ ನಮಗೆ ಅಮೇರಿಕೆಯಿಂದ ಬಂದ ಮನವಿ. ಅವರಿಗೆ ಬೇಕಾದಾಗ ಮನವಿ, ಅಥವಾ ಬೆದರಿಕೆ. ಈ ಎರಡರಲ್ಲಿ ಒಂದನ್ನು ಕೊಟ್ಟು ಅಮೇರಿಕಾ ತನ್ನ ಕೆಲಸವನ್ನೂ ಸಾಧಿಸಿ ಕೊಳ್ಳುತ್ತದೆ.

೨೦೦೧ ಸೆಪ್ಟೆಂಬರ್ ತಿಂಗಳಿನಲ್ಲಿ ಅಮೆರಿಕೆಯ ಮೇಲೆ ನಡೆದ ಧಾಳಿಗೆ ತತ್ತರಿಸಿ ಪ್ರಪಂಚದ ಎಲ್ಲ ದೇಶಗಳಿಂದ ಮುಚ್ಚಳಿಕೆ ಬರೆಸಿ ಕೊಂಡಿತು ಅಮೇರಿಕಾ. ಭಯೋತ್ಪಾದಕರು, ಅದಕ್ಕೆ ಧನ ಸಹಾಯ ನೀಡುವವರು ಯಾರದೇ ನೆಲದ ಮೇಲೆ ಇದ್ದರೋ ಅಮೆರಿಕೆಯ ಸುಪರ್ದಿಗೆ ಒಪ್ಪಿಸತಕ್ಕದ್ದು ಎನ್ನುವುದು ಮುಚ್ಚಳಿಕೆ. ವಿಧೇಯರಾಗಿ ಎಲ್ಲಾ ದೇಶಗಳೂ ತಲೆ ಬಾಗಿದವು. ನಮ್ಮ ದೇಶದ ಗಡಿ ನುಗ್ಗಿ ಒಂದು ನಗರವನ್ನು ತನ್ನ ಹಿಂಸೆಯಿಂದ ತತ್ತರಿಸುವಂತೆ ಮಾಡಿದ ಪಾಕ ಬಗ್ಗೆ ಮಾತ್ರ ಬೇರೆಯೇ ತೆರನಾದ ನಿಲುವು. ಉಗ್ರವಾಗಿ ಪ್ರತಿಭಟಿಸಿದಾಗ ಅಲ್ಲಿಂದ ಧಾವಿಸಿ ಬಂದ ವಿದೇಶಾಂಗ ಕಾರ್ಯದರ್ಶಿ ಕ್ಲಿಂಟನ್ ಒಂದ್ರೆಅದು ಮೊಂಬತ್ತಿ ಗಳನ್ನು ಹಚ್ಚಿ, ಎರಡು ನಿಮಿಷ ಮೌನ ಆಚರಿಸಿ ಸಮಾಧಾನ ಮಾಡಿ ಹೋದರು. ಮುಂಬೈ ಮೇಲಿನ ಆಕ್ರಮಣದ ವೇಳೆಯೂ ಭಾರತಕ್ಕೆ ಒಂದು ಸುವರ್ಣಾವಕಾಶ ಇತ್ತು ಪಾಕಿಗೆ ಒಂದು “ಝಟ್ಕಾ” ನೀಡಲು. ಅಲ್ಲೂ ಬಿಳಿ ನಗೆ ನಮ್ಮ priority ಮರೆಯುವಂತೆ ಮಾಡಿತು. ಬಿಳಿ ನಗುವಿನ ಮಾಯೆ ಅಂಥದ್ದು.     

ನಮ್ಮ ರಕ್ಷಣಾ ಸಚಿವ (ಜಾರ್ಜ್ ಫೆರ್ನಾಂಡಿಸ್) ರನ್ನು ಬೆತ್ತಲೆ ಮಾಡಿ ಅಮೆರಿಕೆಯ ವಿಮಾನ ನಿಲ್ದಾಣದಲ್ಲಿ ಪರೀಕ್ಷಿಸಿದಾಗ ಅದು ದೊಡ್ಡ ವಿಷಯವಲ್ಲ ನಂಗೆ. ಮೆಚ್ಚುಗೆ, ಅಬ್ಬಾ, ಎಂಥ ಭದ್ರತಾ ವ್ಯವಸ್ಥೆ ಅವರದು. ನಮ್ಮ ರಾಷ್ಟ್ರಪತಿ ಕಲಾಂ ರನ್ನು ವಿಮಾನ ನಿಲ್ದಾಣ ದಲ್ಲಿ ಅನುಚಿತವಾಗಿ ವರ್ತಿಸಿದಾಗಲೂ ನಿರ್ಲಿಪ್ತತೆ. ನಮ್ಮ ವಿದ್ಯಾರ್ಥಿಗಳನ್ನು ಅಲ್ಲಿನ ವಿದ್ಯಾಲಯವೊಂದು ಮೋಸ ಮಾಡಿ ನಂತರ ವಿದ್ಯಾರ್ಥಿಗಳು ಓಡಿ ಹೋಗದಂತೆ electronic tag ಅವರ ಕಾಲಿಗೆ ಕಟ್ಟಿ ಅವರ ಮೇಲೆ ನಿರಂತರ ನಿಗಾ ಇಟ್ಟಾಗಲೂ ನಮಗೆ ಅಮೆರಿಕೆಯ ನಡವಳಿಕೆ ಅಸಹನೀಯವಾಗಿ ತೋರುವುದಿಲ್ಲ. ಇನ್ನು ನಮಗೆ ತಿಳಿಯದ ಇನ್ಯಾವ್ಯಾವ ರೀತಿಯಲ್ಲಿ ನಮ್ಮ ಮೇಲೆ ಸವಾರಿ ಮಾಡುತ್ತಿದೆಯೋ ದೇವರೇ ಬಲ್ಲ. ನಮ್ಮ ಸರಕಾರ ಗಳನ್ನು ನಡೆಸಲು ಮಂತ್ರಿಗಳು, ಕಾರ್ಯದರ್ಶಿಗಳು ಎಲ್ಲಾ ಅರವತ್ತು, ಎಪ್ಪತ್ತು ವಯಸ್ಸು ದಾಟಲೇ ಬೇಕು. ಒಂದೆರಡು ಅಪವಾದಗಳನ್ನು ಬಿಟ್ಟರೆ ವಯೋವೃದ್ಧರ ಕಾರುಬಾರು. ಅವರಿಗೆ ರೋಷ ಎಲ್ಲಿಂದ ತಾನೇ ಬರಬೇಕು.   

ಈಗಿನ ವಿಶ್ವ bi-polar ಆಗಬೇಕಿಲ್ಲ. ಪ್ರಪಂಚದ ತುಂಬಾ ದೊಡ್ಡದು. ಹಳೇ ಕಾಲದ ರೀತಿಯ ರಾಜಕಾರಣವನ್ನು ಅಲ್ಲ ನಾವು ಕಾಣುತ್ತಿರುವುದು. ಪಕ್ಕದ ಚೀನಾ ಅತ್ಯಾಧುನಿಕ ಆಯುಧಗಳನ್ನು ಶೇಖರಿಸುತ್ತಿದೆ ಎಂದು ನಮ್ಮ ಗೃಹ ಮಂತ್ರಿ ಕಳವಳ ವ್ಯಕ್ತ ಪಡಿಸಿದರು. ಅವರ ಮನೆಯೊಳಗೇ ಕೂತು ಅವರೇನಾದರೂ ಮಾಡಿಕೊಳ್ಳಲಿ. ನಮಗೇಕೆ ಅವರ ಉಸಾಬರಿ? 3G ಸ್ಕ್ಯಾಮು ಮತ್ತು ಸ್ವಿಸ್ ಮತ್ತು ಇತರೆ ಬ್ಯಾಂಕುಗಳಲ್ಲಿ ನಮ್ಮ ಜನ ಹುಗಿದಿಟ್ಟಿರುವ ಸಂಪತ್ತನ್ನು ಉಪಯೋಗಿಸಿ ನಮ್ಮ ಸೈನ್ಯವನ್ನೂ ಬಲ ಗೊಳಿಸಲಿ. ಭಾರತದ ನೇತೃತ್ವದಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ಧ್ರುವೀಕರಣ ನಡೆಯಲಿ. ನಮ್ಮೊಂದಿಗೆ ಹೆಜ್ಜೆ ಹಾಕಲು ಲ್ಯಾಟಿನ್ ಅಮೆರಿಕೆಯಲ್ಲೂ, ಮಧ್ಯ ಪ್ರಾಚ್ಯದೇಶ ಗಳಲ್ಲೂ, ಆಫ್ಫ್ರಿಕಾ ಖಂಡದಲ್ಲೂ ದೇಶಗಳಿವೆ.