ಆ ಉದ್ಯಾವನದಲ್ಲಿ ಈಗಲೇ ಹೂಗಳನ್ನು ನೆಡು…

ಚಾಟ್ ಫ್ರೆಂಡ್ ಶೀಲಾ ಇಂದು ಸಿಕ್ಕು ಒಂದಿಷ್ಟು ಹರಟಿಸಿದೆವು. ಏನ್ ಸಮಾಚಾರ ಎಂದಾಗ ಎಂದಿನ ಲವಲವಿಕೆ ಇಲ್ಲದೆ ” ಬದುಕಿನಲ್ಲಿ ಮಜಾ ಇಲ್ಲ” ಎಂದಳು. no spice in life. ಕಾರಣ ಕೇಳಿದಾಗ ನಿಖರವಾದ ಉತ್ತರ ಕೊಡದೆ ಹೀಗೇ ಸುಮ್ಮನೆ ಎಂದು matter of fact ಶೈಲಿಯಲ್ಲಿ ಕೈ ಚೆಲ್ಲಿದಳು. ಆಕೆಗೆ ಅದೇ ಉದ್ಯೋಗ, ಸಂಸಾರ, ತಾಪತ್ರಯ ಇವು ಏಕತಾನತೆಯಿಂದ ಕೂಡಿದ್ದು ಯಾವ ಗಮನಾರ್ಹ ಬದಲಾವಣೆಗಳೂ ಜೀವನದಲ್ಲಿ ಕಾಣುತ್ತಿರಲಿಲ್ಲ. ನಾನಂದೆ ಅಲ್ಲಾ ಶೀಲಾ, ನಿನಗಿನ್ನೂ ವಯಸ್ಸು ನಲವತ್ತು, you are still young ಬದುಕಿನಲ್ಲಿ ಸಾಧಿಸಲಿಕ್ಕೆ ಬೇಕಷ್ಟು ಇದೆ ಎಂದು ಅವಳಲ್ಲಿ ಹುರುಪು ತುಂಬಲು ಪ್ರಯತ್ನಿಸಿದೆ.

ಆಕೆಗೆ ಇರುವುದು ಒಬ್ಬಳೇ ಮಗಳು. ಗಂಡ ಗಂಡ ಹೆಂಡಿರಿಬ್ಬರೂ ದುಡಿಯುತ್ತಾರೆ. ಮನೆಯಿದೆ. ಕಾರಿದೆ. ಇಷ್ಟೆಲ್ಲಾ ಇದ್ದೂ ಏನೂ ಇಲ್ಲ, ಖಾಲಿ ಖಾಲಿ ಭಾವನೆ ಆಕೆಗೆ. ಚಾಟ್ ಮಾಡುತ್ತಾ ನಾನು ಕೆಲವೂಂದು ಬ್ಲಾಗ್ ಗಳನ್ನೂ ನೋಡುತ್ತಿದ್ದಾಗ ಮಧ್ಯ ವಯಸ್ಸಿನ ಪಾಶ್ಚಾತ್ಯ ಪತಿ ಪತ್ನಿಯರ ಬ್ಲಾಗ್ ಕಣ್ಣಿಗೆ ಬಿತ್ತು. ಅವರಿಬ್ಬರೂ ಪ್ರವಾಸ ಮತ್ತು ವಿಶ್ವ ನೋಡುವ ಹವ್ಯಾಸದವರು ಎಂದು ಕಾಣುತ್ತಿತ್ತು. ಸೈಟ್  ನಲ್ಲಿ ಬಹಳಷ್ಟು ಚಿತ್ರಗಳನ್ನೂ ಹಾಕಿದ್ದರು. ಇಬ್ಬರೂ ಚೆನ್ನಾಗಿ ಸುಂದರವಾಗಿ ಸಂತೋಷದಿಂದ ಬದುಕುತ್ತಿದ್ದಾರೆ ಎಂದು ನನಗನ್ನಿಸಿತು. ಚಾಟ್ ಮಾಡುತ್ತಲೇ ಶೀಲಳಿಗೆ ಅವರ ಸೈಟ್ ನ URL ಕೊಟ್ಟು ಹೇಗನ್ನಿಸಿತು ಹೇಳು ಎಂದೆ. ಸ್ವಲ್ಪ ಸಮಯ ದ ನಂತರ ಆಕೆ ಹೇಳಿದಳು, ತುಂಬಾ ಚೆನ್ನಾಗಿದೆ ಅಬ್ದುಲ್.   ತಸ್ವೀರ್ ದೇಖ್ ಕರ್ ದಿಲ್ ಗಾರ್ಡನ್, ಗಾರ್ಡನ್ ಬನ್ ಗಯಿ (ಚಿತ್ರಗಳನ್ನು ನೋಡಿ ಮನಸ್ಸು ಉದ್ಯಾವನವಾಯಿತು) ಎಂದು ವರ್ಣಿಸಿದಳು. ಹಾಗಾದರೆ ಆ ಉದ್ಯಾವನದಲ್ಲಿ ಈಗಲೇ ಹೂಗಳನ್ನು ನೆಡು ಎಂದು ಉಪದೇಶಿಸಿದಾಗ ನಕ್ಕಳು.  

ಬದುಕಿನಲ್ಲಿ boredom ಬರುವುದು ಸಹಜವೇ. ನಾವು ಬದುಕುವ ರೀತಿಯೇ ಹಾಗಲ್ಲವೇ? ನಾವು ನಮಗಾಗಿ ಬದುಕುವುದಿಲ್ಲ, ಬದಲಿಗೆ ನೆರೆಯವರನ್ನು ನೋಡಿ ಆ ರೀತಿ ಬದುಕಲು ನೋಡುತ್ತೇವೆ. ಅವರಲ್ಲಿ, ಇದಿದೆ, ಅದಿದೆ ಎಂದು ಇಲ್ಲದವರ ಕಡೆ ಕಣ್ಣು ಹೊರಳಿಸಿ ನೋಡಿ ಸಂತಸ ಪಡದೆ ಹಾಸಿಗೆಗಿಂತ ಉದ್ದ ಕಾಲು ಚಾಚಲು ನೋಡುತ್ತೇವೆ. ಈ ಪ್ರವೃತ್ತಿಯನ್ನು ಹೊರಗೆಸೆದು ನಮ್ಮಲ್ಲಿರುವುದನ್ನು ನೋಡಿ ತೃಪ್ತಿ ಪಟ್ಟುಕೊಂಡು, ಸಾಧ್ಯವಾದರೆ ಇತರರಿಗೂ ಸಹಾಯ ಮಾಡಿ ಅವರ ಮುಖದಲ್ಲಿ ಮೂಡುವ ಮಂದಹಾಸವನ್ನು ಕಂಡು ಆನಂದ ಪಡಬಾರದೆ?            

http://touristblobs.wordpress.com/2009/12/09/way-out-west-in-oz/

ಕಪ್ಪು ಹುಲಿಯ ಮೇವು

ವಿಶ್ವದ ಆಗ್ರ ಶ್ರೇಯಾಂಕದ ಗಾಲ್ಫ್  ಆಟಗಾರ ಟೈಗರ್ ವುಡ್ಸ್ ಈಗ ಸುದ್ದಿಯಲ್ಲಿ. ಗಾಲ್ಫ್ ಮೈದಾನದಲ್ಲಿ ತನ್ನ ಅಪೂರ್ವ ಪ್ರತಿಭೆ ಪ್ರದರ್ಶಿಸುವ ಮೂಲಕ ಅಲ್ಲ, ಬದಲಿಗೆ ಲಲನಾಮಣಿಗಳ ಹಿಂದೆ ಹೋಗಿದ್ದಕ್ಕೆ. ವುಡ್ಸ್ ವಿವಾಹಿತ, ೨ ಪುಟಾಣಿಗಳ ತಂದೆ. ಆದರೆ ಇದರಲ್ಲೇನು ವಿಶೇಷ, ಬಿಳಿಯರಿಗೆ ಇದು ಮಾಮೂಲು ಎಂದಿರಾ? ನನ್ನ ಧರ್ಮ ಪತ್ನಿಯೂ ಇದನ್ನೇ ಹೇಳಿದ್ದು, ಅವರಿಗೆ ಇದು ಮಾಮೂಲಿ ಅಂತ. ಇದಕ್ಕೇ stereotype ಅನ್ನೋದು. ಈ  stereotype ಗಳಿಂದಲೇ ಪ್ರಪಂಚದಲ್ಲಿ ಇಷ್ಟೊಂದು ಅನಾಹುತ, ಕೋಲಾಹಲ. ಪರಸ್ಪರರಲ್ಲಿ ಶಂಕೆ, ಸಂಶಯ. ಬಿಳಿಯರಲ್ಲೂ ಸತಿ ಸಾವಿತ್ರಿಯರೂ, ಏಕ ಪತ್ನೀ ವೃತಸ್ಥರೂ ಇದ್ದಾರೆ. ಆದರೆ ನಾವು ಕಾದಂಬರಿಗಳನ್ನೂ, ಆಂಗ್ಲ ಮೂವಿಗಳನ್ನೂ, ಮಾಧ್ಯಮಗಳು ಬಡಿಸುವುದನ್ನೂ ಕೇಳಿಯೇ ಅಲ್ಲವೇ ನಿರ್ಣಯಕ್ಕೆ ಬರೋದು. ಅದಿರಲಿ ಈಗ, ಪ್ರಶ್ನೆ ಇರೋದು ಅದಲ್ಲ. ಟೈಗರ್ ಎಬ್ಬಿಸಿದ ರಾದ್ಧಾಂತದ ಬಗ್ಗೆ. ಈ ಹುಲಿಗಳೇ ಹೀಗೆ ಏನೋ? “ಧರಣಿ ಮಂಡಲ…” ದ ಹುಲಿ ಗೋವಿನ ಹಿಂದೆ ಹೋಗಿ ಕೊನೆಗೆ ತನ್ನ ಪ್ರಾಣ ತೆಗೆದುಕೊಳ್ಳುವಂತಾಗಿದ್ದು,  ಕಳೆದ ವರ್ಷ ಅರವಿಂದ ಅಡಿಗ ಬರೆದ  “ಬಿಳಿ ಹುಲಿ” ಕಾದಂಬರಿ ನಮ್ಮ ದೇಶದ ಮಾನ ಹರಾಜಿಗೆ ಹಾಕಿದ್ದು, ಈಗ ನೋಡಿದರೆ ಗಾಲ್ಫ್ ಹುಲಿಯ ಪ್ರಣಯ. ಮತ್ತೆ ಈ ಹುಲಿಯ ಆಟ ಎಲ್ಲರಿಗೂ ಆಸಕ್ತವಾಗಲೂ ಒಂದು ಕಾರಣ ಇದೆ. ಅದೆಂದರೆ ಈ ಹುಲಿ ಬಣ್ಣದಲ್ಲಿ ಕಪ್ಪು. black american. ನಮ್ಮ ಅಮೆರಿಕೆಯ ಅಧ್ಯಕ್ಷ ಮಹೋದಯರ ಪೈಕಿಯವನು. ಈ ಪೈಕಿಯವರು ಏನು ಮಾಡಿದರೂ ಸುದ್ದಿ, ಅದರಲ್ಲೂ ಎಡವಟ್ಟು ಮಾಡಿಕೊಂಡರಂತೂ ಕೇಳಬೇಡಿ, ಮಾಧ್ಯಮದವರಿಗೆ ಸುಗ್ಗಿಯೋ ಸುಗ್ಗಿ. ಇವರು ಹುಟ್ಟಿರೋದೇ ತಪ್ಪು ಮಾಡಲು ಎಂದು ಬಿಂಬಿಸಿ ಬಿಡುತ್ತಾರೆ. ಕ್ಷಮಿಸಿ, ವಿಷಯಕ್ಕಿಂತ ಹೆಚ್ಚು ವಿಷಯಾಂತರ ಆಗ್ತಾ ಇದೆ. ಟೈಗರ್ ವುಡ್ಸ್  PGA TOUR ( ಗಾಲ್ಫ್ ಆಟಗಾರರು ಹೋಗುವ ಟೂರ್, ನಮ್ಮ ಕ್ರಿಕೆಟಿಗರು “ಸೀರೀಸ್” ಅಂತ ಹೋಗ್ತಾರಲ್ಲ ಹಾಗೆ ) ಮೇಲೆ ಹೋದಾಗ ಕಣ್ಣಿಗೆ ಬಿದ್ದಿರಬೇಕು ಲಲನೆಯರು. ಪಾಪ ಆತನೂ ಉಪ್ಪು ಹುಳಿ ತಿಂದು ಬೆಳೆದವನಲ್ಲವೇ? ಒಂಚೂರು distraction ಆಗಿರಬೇಕು. distracted driving ಅಂತಾರಲ್ಲ ಹಾಗೆ.

 

ಈ ಗೊಂದಲ, ಸ್ಕ್ಯಾಂಡಲ್ ಬಗ್ಗೆ ಟೈಗರ್ ಅವರ ಪತ್ನಿ ಯಾವ ಹೇಳಿಕೆಯನ್ನು ಕೊಡದೆ ಇದ್ದರೂ ಏಳಂಕಿಯ ಮೊತ್ತ ಪೀಕಿದರೆ ಮಾತ್ರ ಬಿಡುಗಡೆ ಇಲ್ಲದಿದ್ದರೆ ಸೋಡಾ ಚೀಟಿ ಎಂದು ಬೆದರಿಕೆ ಒಡ್ಡಿದ್ದಾರೆ ಎಂದು ನ್ಯೂಸು. ತನ್ನ ಪ್ರತಿಷ್ಠೆ ಕಾಪಾಡಿಕೊಂಡು ಹೋಗಲು ಯಾವ ಅಂಕಿಯಾದರೂ ಕೊಡಲು ಟೈಗರ್ ತಯಾರಂತೆ.

 

ಒಂದುಕಡೆ ಅಮೆರಿಕೆಯ ಗೋತಾ ಹೊಡೆಯುತ್ತಿದ್ದ ಕಂಪೆನಿಗಳನ್ನು ಮೇಲಕ್ಕೆತ್ತಲು ಅಮೆರಿಕೆಯ ಅಧ್ಯಕ್ಷ ಚೆಕ್ ಬರೆದೂ ಬರೆದೂ ಸುಸ್ತಾಗಿರುವಾಗ ತನ್ನ ರಾಸಲೀಲೆ ಕಾರಣ ತನ್ನ ಪತ್ನಿ ಹೆಸರಿನಲ್ಲಿ ಚೆಕ್ ಬರೆಯಲು ಟೈಗರ್ ತಯಾರಾಗುತ್ತಿದ್ದಾನೆ.  
tiger ಚೆಕ್ ಬರೆದ tigress ಗೆ. ಎಷ್ಟು ಎಂದಿರಾ?  just seven million dollar. million ಎಂದರೆ ೧೦ ಲಕ್ಷ. (ಡಾಲರ್ ಗೆ ೪೫ ರೂಪಾಯಿ ಹಿಡಿದು ಗಣಿತ ಅಭ್ಯಾಸ ಮಾಡಿ)

ದೈವ ಭಕ್ತಿ

ಒಂದು ಬ್ಲಾಗ್ ಪೋಸ್ಟ್ ನಲ್ಲಿ ಎರಡು ರೀತಿಯ ಧಾರ್ಮಿಕ ಪ್ರವಚನ ಅಥವಾ ಉಪದೇಶಕರ ಬಗ್ಗೆ ಚರ್ಚೆ ಇತ್ತು. ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಲ್ಲಿ ಕ್ರೈಸ್ತ ಉಪದೇಶಕನೊಬ್ಬ ” turn or burn ” ಎಂದು ಬರೆದಿದ್ದ ಭಿತ್ತಿ ಪತ್ರ ಹಿಡಿದು ಜನರನ್ನು ಪಾಪದಿಂದ ವಿಮೋಚಿತರಾಗಲು ಉತ್ತೇಜಿಸುತ್ತಿದ್ದ. ಆತನ ಗೆಳೆಯ ಬೈಬಲ್ ಗ್ರಂಥವನ್ನು ಹಿಡಿದುಕೊಂಡು ಒಬ್ಬರೊಂದಿಗೆ ವಾದ ಮಾಡುತ್ತಿದ್ದ. ನೆರೆದಿದ್ದ ಹಲವು ಜನ ಇವರಿಗೆ ಬೆಂಬಲ ಕೊಡುತ್ತಿದ್ದರು. ಮತ್ತೊಂದು ಕಡೆ ಮತ್ತೊಂದು ಗುಂಪು ಧರ್ಮ ಪ್ರಚಾರ ಮಾಡುತ್ತಿತ್ತು; ಭಕ್ತಿ ಗೀತೆಗಳನ್ನು ಹಾಡುವ ಮೂಲಕ. ಇಲ್ಲಿ ಪ್ರಶ್ನೆ ಏನೆಂದರೆ ಒಂದು ಕಡೆ “turn or burn” ಎಂದರೆ “ಭಕ್ತಿ ಇಡು ಅಥವಾ ನರಕದಲ್ಲಿ ಬೇಯಿ” ಎಂದು; ಈ ರೀತಿ ಜನರಲ್ಲಿ ಭಯ ಹುಟ್ಟಿಸುವ ಪ್ರವಚನ ಫಲಿತಾಂಶವನ್ನು ಕೊಡಬಲ್ಲುದೆ ಎಂದು. ಕೆಲವರ ಪ್ರಕಾರ ಇದು ಸರಿ ಏಕೆಂದರೆ ಜನರ ಗಮನ ಶಿಕ್ಷೆ ಕಡೆ ಹರಿಸದಿದ್ದರೆ ಅವರಿಗೆ ಭಕ್ತಿ ಮೂಡುವುದಿಲ್ಲ ಮತ್ತು ಪಾಪಗಳನ್ನು ಮಾಡಲು ಹೇಸುವುದಿಲ್ಲ ಎಂದು. ನನ್ನ ಪ್ರಕಾರ ದೇವರ ಶಿಕ್ಷೆ ಜೊತೆಗೆ ಅವನ ಕಾರುಣ್ಯವನ್ನೂ ಕೊಂಡಾಡಿ ಜನರನ್ನು ಧಾರ್ಮಿಕತೆ ಕಡೆ ಎಳೆಯಬೇಕು. ಮತ್ತು ಇಂಥ ಸಂದೇಶಗಳನ್ನು ಬೀದಿಯಲ್ಲಿ ಮಾಡುವುದು ಅಷ್ಟೇನೂ ಸಮಂಜಸ ಎನ್ನಿಸುವುದಿಲ್ಲ ಮತ್ತು ಅಂಥ ಪ್ರಯತ್ನಗಳಿಗೆ ಜನರ ಪ್ರೋತ್ಸಾಹವೂ ಸಿಗಲಿಕ್ಕಿಲ್ಲ. ಮೇಲೆ ಹೇಳಿದ ಘಟನೆ ಅಮೆರಿಕೆಯಲ್ಲಿ ನಡೆದದ್ದು.

ತಲೆ ಕಡಿಯುವ ಶಿಕ್ಷೆ

ಒಂದು ಸುಂದರ ಚಳಿಗಾಲದ ಮುಂಜಾವನ್ನು ಆಸ್ವಾದಿಸುತ್ತಾ ಕಂಪೆನಿಯ ಕೆಲಸದ ಮೇರೆಗೆ ಬ್ಯಾಂಕ್ ಗೆ ಹೊರಟೆ. ಕಛೇರಿಯಿಂದ ಅರ್ಧ ಘಂಟೆಯ ಡ್ರೈವ್. ನಗರದ ಮಧ್ಯ ಭಾಗದಿಂದ ಜೆಡ್ಡಾ ನಗರವನ್ನು ಇಬ್ಭಾಗವಾಗಿ ಭೇಧಿಸುವ ಮದೀನ ರಸ್ತೆಗೆ ಸಿಗ್ನಲ್ ನ ಹಾವಳಿಯಿಲ್ಲ. ಸುಮಾರು ೨೫ ಕಿಲೋಮೀಟರು ವರೆಗೆ ಏಕ ರಸ್ತೆ. ರಸ್ತೆಯ ಮಧ್ಯ ಭಾಗದಲ್ಲಿ ಖರ್ಜೂರದ ಮರಗಳು, ಭರ್ರೋ ಎಂದು ಘಂಟೆಗೆ ೧೨೦ ಕ್ಕೂ ಹೆಚ್ಚು ಕಿಲೋಮೀಟರ್ ವೇಗದಲ್ಲಿ ಕ್ಷಿಪಣಿಗಳಂತೆ ತೂರಿಕೊಂಡು ಹೋಗುವ ಕಾರುಗಳು. ಬ್ಯಾಂಕ್ ಸಮೀಪಿಸುತ್ತಿದ್ದಂತೆ ಹತ್ತಿರದ ಜುಫ್ಫಾಲಿ ಮಸೀದಿಯ ವಿಶಾಲವಾದ ಆವರಣದ ಬಳಿ ಒಂದಿಷ್ಟು ಚಟುವಟಿಕೆಗಳು ಕಂಡುಬಂದವು. ಕೃತಕ ಸರೋವರದ ದಡದಲ್ಲಿ ಕಟ್ಟಿದ ಜುಫ್ಫಾಲಿ ಮಸೀದಿ ತುಂಬಾ ಸುಂದರ. ಪುಟ್ಟ, ಪುಟ್ಟ ಹತ್ತಾರು ಗುಮ್ಮಟಗಳ ನಡುವೆ ಆಗಸಕ್ಕೆ ಏಕದೇವೋಪಾಸನೆಯನ್ನು ಮುಗಿಲಿಗೆ ಮುಟ್ಟಿಸುವ ಕಾತುರದಲ್ಲಿ ತುದಿಗಾಲಿನಲ್ಲಿ ನಿಂತ ಮಿನಾರ್ (ಮಸೀದಿಯ ಸ್ತಂಭ ಗೋಪುರ). ಮಸೀದಿಯ ಆವರಣದಲ್ಲಿ ನೂರಾರು ಜನ ಜಮಾಯಿಸಿದ್ದರು, ಒಂದು ಕಂಬಕ್ಕೆ ಧ್ವನಿ ವರ್ಧಕಗಳನ್ನು ಕಟ್ಟಿದ್ದರು, ಶಸ್ತ್ರಧಾರಿ ಪೋಲೀಸರ ಗಸ್ತು, ನೀರಿನ ಟ್ಯಾಂಕರ್ ಹೀಗೆ ಒಂದು “eerie” ಚಟುವಟಿಕೆ, ಏರ್ಪಾಡು ಕಾಣಲು ಸಿಕ್ಕಿತು. ಕೌತುಕದಿಂದ ಕಾರನ್ನು ನಿಲ್ಲಿಸಿ ಏನೆಂದು ವಿಚಾರಿಸಿದಾಗ ತಲೆ ಕಡಿಯುವ ಪ್ರೋಗ್ರಾಮ್ ಇದೆ ಎಂದು ಒಬ್ಬ ಹೇಳಿದ. ಇದನ್ನು ಕೇಳಿ ನನ್ನ ಮೈ ನಡುಗಿತು. ಹೆಂಡತಿಗೆ ಫೋನ್ ಮಾಡಿ ಇದನ್ನು ಹೇಳಿದಾಗ ಅವಳು, ಮೊದಲು ಅಲ್ಲಿಂದ ಜಾಗ ಖಾಲಿ ಮಾಡಿ, ಮೊದಲೇ ಪುಕ್ಕರು ನೀವು, ಅದನ್ನು ನೋಡಿ ಹೆದರಿ ಬಂದರೆ ರಾತ್ರಿ ಪೂರ್ತಿ ನಿಮ್ಮನ್ನು ಕಾಯುತ್ತಾ ಕೂರಲು ನನ್ನಿಂದ ಸಾಧ್ಯ ಇಲ್ಲ ಎಂದು ಹೆದರಿಸಿದಾಗ ಈಕೆ ಹೇಳೋದೂ ಸರಿ ಅಮಾವಾಸ್ಯೆಗೋ ಹುಣ್ಣಿಮೆಗೋ ಒಮ್ಮೆ ಇಂಥ ಒಳ್ಳೆ ಮಾತನಾಡುತ್ತಾಳೆ ಎಂದು ಮನದಲ್ಲೇ ವಂದಿಸಿ ಇನ್ನು ಇಲ್ಲಿ ನಿಲ್ಲುವುದು ಬೇಡ ಎಂದು ಕೂಡಲೇ ಅಲ್ಲಿಂದ ಕಾಲನ್ನು ಕಿತ್ತೆ. ಇಷ್ಟು ವರ್ಷ ಸೌದಿ ಅರೇಬಿಯದಲ್ಲಿ ಇದ್ದರೂ ನಾನು ಎಂದೂ ಇಂಥ ಸನ್ನಿವೇಶವನ್ನು ಎದುರಿಸಿರಲಿಲ್ಲ. ಕೊಲೆಗಡುಕರಿಗೆ, ಅತ್ಯಾಚಾರಿಗಳಿಗೆ, ಮಾದಕ ವಸ್ತು ಮಾರುವವರಿಗೆ ತಲೆ ಕಡಿಯುವ ಶಿಕ್ಷೆ ಎಂದು ಗೊತ್ತಿತ್ತು. ಮತ್ತು ತಲೆಕಡಿಯುವುದನ್ನು ನೋಡಲು ಹೋಗಿ ಒಂದಿಷ್ಟು ದಿನ ನಿದ್ದೆ ಮಾಡಲಾಗದೆ ಒದ್ದಾಡಿದ ಜನರ ಕತೆ ಸಹ ಕೇಳಿದ್ದೆ. ಆದರೆ ಧುತ್ತನೆ ಇಂಥ ಸನ್ನಿವೇಶ ನನಗೆದುರಾಗುತ್ತದೆ ಎಂದು ನನಗೆ ತಿಳಿದಿರಲಿಲ್ಲ. ನನ್ನ ಕೆಲಸ ಮುಗಿಸಿ ಅದೇ ದಾರಿಯಲ್ಲಿ ಮರಳಿ ಮಸೀದಿ ದಾಟಿ ನೇರವಾಗಿ ನೋಡಲಾಗದೆ ಕದ್ದು ನೋಡಿದಾಗ ಇನ್ನೂ ಅಪರಾಧಿಯನ್ನು ತಂದಿರಲಿಲ್ಲ. ಒಂದಿಷ್ಟು ದೂರ ಸಾಗುತ್ತಿದ್ದಂತೆ ನಾಲ್ಕಾರು ಪೋಲಿಸ್ ಕಾರುಗಳು ಮತ್ತು ಅಪರಾಧಿಯನ್ನು ಹೊತ್ತ ಜೈಲಿನ ವ್ಯಾನ್ ಯಾತನಾಮಯವಾಗಿ ಸೈರನ್ ಬಾರಿಸುತ್ತಾ ವೇಗವಾಗಿ ಮಸೀದಿಯ ಕಡೆ ಹೋಗುತ್ತಿದ್ದವು.

ಆಫೀಸ್ ತಲುಪಿ ಮಿತ್ರರಿಗೆ ಈ ವಿಷಯ ಹೇಳಿ ಅಲ್ಲಾ ನೀರಿನ ಟ್ಯಾಂಕರ್ಗೆ ಅಲ್ಲೇನು ಕೆಲಸ ಎಂದು ಕೇಳಿದಾಗ ಸಿಕ್ಕಿದ ಉತ್ತರ, ತಲೆಕಡಿದ ನಂತರ ಹರಿಯುವ ರಕ್ತ ತೊಳೆಯಳಂತೆ. ಅಯ್ಯೋ, ಇದನ್ನು ಕೇಳಿ ತಲೆ ಗಿರ್ರನೆ ಸುತ್ತಿ ಕೆಳಕ್ಕುರುಳುವುದೊಂದು ಬಾಕಿ. ಮಾನವ ಹಕ್ಕುಗಳ, ಇನ್ನಿತರ ಮುಂದುವರಿದ ರಾಷ್ಟ್ರಗಳ ಮನವಿಯನ್ನು ಕಿವಿಗೆ ಹಾಕಿ ಕೊಳ್ಳದೆ ಮೇಲೆ ಹೇಳಿದ ಅಪರಾಧ ಮಾಡಿದವರಿಗೆ ತಲೆ ಕಡಿದು ಶಿಕ್ಷೆ ನೀಡುವ ಸೌದಿ ಅರೇಬಿಯಾದ ವ್ಯವಸ್ಥೆ ಅಮಾನವೀಯವಾಗಿ ಕಂಡರೂ ತಮ್ಮ ನಿರ್ದಯೀ, ಅಮಾನುಷ ಕೆಲಸಗಳಿಂದ, ಕರುಣೆ ತೋರೆಂದು ಬೇಡುವ ಜನರ ರೋದನ ಲೆಕ್ಕಿಸದೆ ಕೊಲ್ಲುವ, ಅತ್ಯಾಚಾರ ಎಸಗುವ, ಯುವಕರನ್ನ ಮಧ್ಯ ವ್ಯಸನಿಗಳನ್ನಾಗಿ ಮಾಡುವ, ಸಮಾಜವನ್ನು ಕಂಗೆಡಿಸುವ ಕಿಡಿಗೇಡಿಗಳಿಗೆ ಈ ಶಿಕ್ಷೆ ಕೊಡಬೇಕಾದ್ದೆ. ಹಾಗೂ ಇತರರಿಗೂ ಪಾಠವಾಗಲಿ ಎಂದು ಇಂಥ ಶಿಕ್ಷೆಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಕೊಟ್ಟು ಭಾವಿ ಪುಂಡರಿಗೆ ಎಚ್ಚರಿಕೆಯನ್ನೂ ಸಹ ಕೊಟ್ಟು ಸಮಾಜದಲ್ಲಿ ಒಂದಿಷ್ಟು ನೆಮ್ಮದಿ ಇರುವಂತೆ ಮಾಡುತ್ತದೆ ಈ ಸಾರ್ವಜನಿಕ ಶಿಕ್ಷೆ. ಕಳೆದ ವರ್ಷ ಓರ್ವ ಅಪ್ರಾಪ್ತ ಬಾಲಕಿಯನ್ನು ನಾಲ್ವರು ಬಾಂಗ್ಲಾದೇಶದ ತರುಣರು ಅತ್ಯಾಚಾರ ಎಸಗಿ ಓಡಿದ್ದರು. ಅಷ್ಟು ಮಾತ್ರವಲ್ಲ ತಾವು ಮಾಡಿದ ಮಹತ್ಕಾರ್ಯವನ್ನು ಮೊಬೈಲ್ ಕಮೆರದಲ್ಲಿ ಸೆರೆ ಹಿಡಿದು ಸ್ನೇಹಿತರೊಂದಿಗೆ ಹಂಚಿಕೊಂಡು ಹಿಗ್ಗಿದರು. ಈ ಪಾತಕಿಗಳನ್ನು ಸೆರೆಹಿಡಿಯಲು ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಅವರನ್ನು ಬಂಧಿಸುವಲ್ಲಿ ಯಶಸ್ವಿ ಆದರು. ನ್ಯಾಯಾಲಯ ಅವರು ಮಾಡಿದ ಕೃತ್ಯವನ್ನು ಖಾತ್ರಿ ಪಡಿಸಿಕೊಂಡು ಅವರ ತಲೆ ಕಡಿಯದೇ ಅತ್ಯಧಿಕ ಜನಸಂದಣಿ ಇರುವ ರಾಜಧಾನಿ ರಿಯಾದ್ ನಗರದಲ್ಲಿ ಅವರನ್ನು ನೇಣು ಹಾಕಲು ನ್ಯಾಯಾಲಯ ತೀರ್ಪು ನೀಡಿತು. ನೇಣು ಹಾಕಿದ ನಂತರ ದಿನ ಪೂರ್ತಿ ಅವರ ಶರೀರಗಳನ್ನು ನೇತಾಡಲು ಪೊಲೀಸರು ಬಿಟ್ಟಿದ್ದರು. ಕೆಲ ವರ್ಷಗಳ ಹಿಂದೆ ಪೋಲೀಸರ ತಂಡವೊಂದು ಬ್ಯಾಂಕ್ ಲೂಟಿ ಮಾಡಿ ಸಿಕ್ಕಿಹಾಕಿ ಕೊಂಡಿತು. ದರೋಡೆ ಆದ್ದರಿಂದ ಕೈ ಕಡಿಯುವ ಶಿಕ್ಷೆ. ಅಪರಾಧಿಗಳು ಸರಕಾರೀ ಸೇವಕರೂ, ಪೊಲೀಸರೂ ಆಗಿದ್ದರಿಂದ ನ್ಯಾಯಾಲಯ ಸೌದಿ ದೊರೆಗೆ ತೀರ್ಮಾನ ಮಾಡಲು ಬಿಟ್ಟಿತು. ಸಮಾಜವನ್ನು, ಸಮಾಜದ ಆಸ್ತಿಪಾಸ್ತಿಗಳನ್ನು ಕಾಯಲು ನಿಯುಕ್ತ ಗೊಂಡವರೇ ಇಂಥ ಕೆಲಸಕ್ಕೆ ಇಳಿದರೆ ಜನರಿಗೆ ವ್ಯವಸ್ಥೆಯ ಮೇಲಿನ ನಂಬಿಕೆ ಹೋಗಿಬಿಡುತ್ತದೆ ಎಂದು ಹೇಳಿದ ದೊರೆ ಸೆರೆಬಿದ್ದವರ ತಲೆಗಳನ್ನು ಕಡಿಯಲು ತೀರ್ಪು ಕೊಟ್ಟರು. ಈ ರೀತಿಯ ಶಿಕ್ಷೆ ಇರುವುದರಿಂದ ಇಲ್ಲಿ ಅಪರಾಧಗಳು ಕಡಿಮೆ ಎಂದು ಹೇಳಬಹುದು.