ಇಶಾಂತ್ ಶರ್ಮ – ಚೇತನ್ ಶರ್ಮಾ

ನಿನ್ನೆ ನಡೆದ ಭಾರತ ಆಸ್ಟ್ರೇಲಿಯಾದ ಮೂರನೇ ಒಂದು ದಿನದ ಪಂದ್ಯ ಯಾರೂ ಊಹಿಸದ ಫಲಿತಾಂಶ ನೀಡಿತು. ಯಾವ ಆಟ ಅಥವಾ ಸ್ಪರ್ದೆಯೇ ಆದರೂ ನಿರೀಕ್ಷಿಸಿದ ಫಲಿತಾಂಶ ಕೊಡಲ್ಲ. ಅದರಲ್ಲೇ ಅಲ್ಲವೇ ಆಟದ ಮಜಾ ಇರೋದು? ಆದರೆ ಕ್ರಿಕೆಟ್ ನ ಸೊಗಸೇ ಬೇರೆ. ಬೌಲ್ ಮಾಡಿದ ಪ್ರತೀ ಚೆಂಡು, ಬೀಸಿದ ಪ್ರತೀ ಹೊಡೆತ ಫಲಿತಾಂಶವನ್ನು ಏರು ಪೇರು ಮಾಡುತ್ತದೆ. ಕಮೆಂಟೇಟರ್ ನನ್ನು ಪ್ರೇಕ್ಷಕನನ್ನು ಇಂಗು ತಿಂದ ಮಂಗವನ್ನಾಗಿಸುತ್ತದೆ. ನಿನ್ನೆಯ ಕತೆಯೂ ಅದೇ. ೪೭ ನೆ ಓವರ ವರೆಗೂ ಗೆಲುವು ಭಾರತದ ಕೈಯಲ್ಲಿತ್ತು. ೪೮ನೆ ಓವರ ಎಸೆಯಲು ಬಂದ ಇಶಾಂತ್ ಶರ್ಮ ಎಲ್ಲಾ ಲೆಕ್ಕಾಚಾರವೂ ತಲೆ ಕೆಳಗಾಗುವಂತೆ ಬೌಲ್ ಮಾಡಿ ಆರು ಚೆಂಡು ಗಳಲ್ಲಿ ಭಾರ್ತಿ ೩೦ ರನ್ ಕೊಟ್ಟು ಆಸ್ಟ್ರೇಲಿಯಾ ಕುಣಿಯುವಂತೆ ಮಾಡಿದ. ಆಟದ ಪ್ರತೀ ಸನ್ನಿವೇಶದ ಬಗ್ಗೆ ಇಲ್ಲಿ ಹೇಳುವ ಅಗತ್ಯ ಇಲ್ಲ. ೩೦ ರನ್ ಕೊಟ್ಟ ಇಶಾಂತ್ ಶರ್ಮನನ್ನು ಮಾತ್ರ ಜನ ಮನೆಯ ಟೀವೀ ರೂಂ ನಿಂದ ಹಿಡಿದು ಅಂತರ್ಜಾಲದ ವಿವಿಧ ಸಾಮಾಜಿಕ ತಾಣಗಳ ತನಕ ಹಿಗ್ಗಾ ಮುಗ್ಗಾ ಮೂದಲಿಸಿದರು. ಧೋನಿಯನ್ನೂ ಬಿಡಲಿಲ್ಲ. ಧೋನಿ ಮತ್ತು ಇಶಾಂತ್ ಸಲಿಂಗ ಕಾಮಿಗಳಂತೆ, ಅದಕ್ಕೆ ಧೋನಿ ಇಶಾಂತ್ ನನ್ನೇ ಆಡಿಸುವ ಬಗ್ಗೆ ಹಠ ತೊಡುತ್ತಾನಂತೆ….ಅಂತೆ ಕಂತೆ. ತಂಡಗಳ ಮೇಲಿನ ವ್ಯಾಮೋಹ, ನಿಷ್ಠೆ ಆಟದ ನಿಜವಾದ ಆಕರ್ಷಣೆ, ಮತ್ತು ಸೊಗಸನ್ನು ಆಸ್ವಾದಿಸದಂತೆ ಮಾಡಿ ಬಿಡುತ್ತದೆ. ನಮ್ಮ ದೇಶದ ತಂಡವನ್ನ ಖಂಡಿತ ಬೆಂಬಲಿಸಬೇಕು , ಆದರೆ ಆಟ ಒಂದು ಘಟ್ಟ ತಲುಪಿದ ಕೂಡಲೇ, ನಮ್ಮವರು ಪ್ರಯತ್ನಿಸಿಯೂ ಸೋತಾಗ, ಎದುರಾಳಿಯ ಆಟದ ವೈಖರಿಯನ್ನು, ಕೆಚ್ಚನ್ನು ಮೆಚ್ಚಲೇ ಬೇಕು. ಪ್ರತೀ ಸಲವೂ ನಾವು ಗೆಲ್ಲಲಾಗುವುದಿಲ್ಲ.

೩೦ ರನ್ ಕೊಟ್ಟು ಭಾರತ ಸೋಲುವಂತೆ ಮಾಡಿದ ಇಶಾಂತ್ ಶರ್ಮನ ರೀತಿಯ ಕಥೆಯ ಮತ್ತೊಬ್ಬ ಶರ್ಮ ನದು. ಅವನೇ ನಮ್ಮಾ ಚೇತನ್ ಶರ್ಮಾ. ಇಸವಿ ೧೯೮೬. ಶಾರ್ಜಾ ನಗರ. ಗೆಲ್ಲಲು ಪಾಕಿಸ್ತಾನಕ್ಕೆ ಬೇಕು, ನಾಲ್ಕು ರನ್ನುಗಳು. ೫೦ ನೆ ಓವರಿನ ಕೊನೆಯ ಚೆಂಡಿನಲ್ಲಿ ಈ ನಾಲ್ಕು ರನ್ ಗಳು ಬೇಕು. ಚೇತನ್ ಹಾಕುತ್ತಾನೆ ಫುಲ್ ಟಾಸ್, ಬ್ಯಾಟ್ ಮಾಡುತ್ತಿದ್ದ ಜಾವೇದ್ ಮಿಯಂದಾದ್ ಚೆಂಡನ್ನು ಬೌಂಡರಿಯ ಆಚೆಗೆ ಅಟ್ಟುತ್ತಾನೆ, ಸಿಕ್ಸರ್ ಗಾಗಿ. ಇಡೀ ದೇಶ ದುಃಖದ ಮಡುವಿನಲ್ಲಿ ಮುಳುಗುತ್ತದೆ, ಚೇತನ್ ಶರ್ಮನಿಗೆ ಹಿಡಿ ಹಿಡಿ ಶಾಪ ಹಾಕುತ್ತಾ.

ನಿನ್ನೆ ರಾತ್ರಿಯೂ ಎಲ್ಲರೂ ಮಲಗಲು ಹೋಗಿದ್ದು ಇಶಾಂತ್ ಶರ್ಮ ನಿಗೆ ಶಾಪ ಹಾಕಿಯೇ. ಆದರೆ ಇಶಾಂತ್ ಧೃತಿಗೆಡಬಾರದು. ನಾಯಕ ಇಟ್ಟ ವಿಶ್ವಾಸಕ್ಕೆ, ೩೦ ರನ್ ಬಾರಿಸಿದ “ಜೇಮ್ಸ್ ಫಾಕ್ನರ್” ನ ಹುರುಪಿನ ಮಾತಿಗೆ ತಕ್ಕಂತೆ ಆಡಿ ಕ್ರಿಕೆಟ್ ಆಟಕ್ಕೆ ಕೀರ್ತಿ ತರಬೇಕು.

ಈ ಸರೀ ರಾತ್ರೀಲಿ ಅವಳಿಗೆ ಹೊರಗೇನು ಕೆಲಸ?

ಈ ಸರೀ ರಾತ್ರೀಲಿ ಅವಳಿಗೇನು ಕೆಲಸ ಹೊರಗೆ?…. ಈ ಥರ ಡ್ರೆಸ್ ಮಾಡಿಕೊಂಡರೆ ಇನ್ನೇನು?…ಆ ಜಾಗದಲ್ಲಿ ಅವಳೇನು ಮಾಡುತ್ತಿದ್ದಳು?
ಪ್ರಶ್ನೆಗಳು, ಪ್ರಶ್ನೆಗಳು, ಪ್ರಶ್ನೆಗಳು. ತುಂಟ ನಗೆ ತುಂಬಿದ ಪ್ರಶ್ನೆಗಳು, ಗಂಡು ಮತ್ತು ಹೆಣ್ಣು, ಇಬ್ಬರಿಂದಲೂ.

ಓರ್ವ ಹೆಣ್ಣು ಬಲಾತ್ಕಾರಕ್ಕೆ ತುತ್ತಾದಾಗ ಮೇಲಿನ ಪ್ರಶ್ನೆಗಳ ಧಾಳಿ. ಡಿಫೆನ್ಸ್ ಲಾಯರ್ ಕಡೆಯಿಂದಲ್ಲ, ಜನಸಾಮಾನ್ಯ ನ ಕಡೆಯಿಂದ . ಈ ಪ್ರಶ್ನೆ ಬರೀ ನಮ್ಮಂಥ ಹಿಂದುಳಿದ ದೇಶಗಳ ಜನರಿಂದ ಮಾತ್ರವಲ್ಲ, ಮಂಗಳ ಗ್ರಹಕ್ಕೆ ಜನರನ್ನು ಕಲಿಸಲು ಸಿದ್ಧತೆ ನಡೆಸುವ ಅಮೇರಿಕಾ ದಂಥ ದೇಶದವರದೂ ಇದೇ ನಿಲುವು. (ಭೂಮಿಯ ಪಾಡನ್ನು ನಾಯಿ ಪಾಡು ಮಾಡಿಯಾಯಿತು, ಈಗ ಮಂಗಳದ ಕಡೆ ಪಯಣ, ಅದನ್ನೂ ಹಾಳುಗೆಡವಲು).

ಅಮೆರಿಕೆಯ ‘ಮೇರಿ ವಿಲ್’ ಪಟ್ಟಣದಲ್ಲಿ ೧೪ ರ ವರ್ಷದ ಬಾಲಕಿಯೊಬ್ಬಳ ಮೇಲೆ ಫುಟ್ ಬಾಲ್ ಆಟಗಾರನೊಬ್ಬ ಅತ್ಯಾಚಾರ ಎಸಗಿ ಆಕೆಯ ಮನೆಯ ಹತ್ತಿರವೇ ಆಕೆಯನ್ನು ಬಿಸಾಡಿ ಹೋದ. ಅವನ ಮಿತ್ರ ಈ ನಡತೆಗೆಟ್ಟ ಕೃತ್ಯದ ಮೊಬೈಲ್ ಶೂಟಿಂಗ್ ಸಹ ನಡೆಸಿದ. ಕೊರೆಯುವ ಚಳಿಯಲ್ಲಿ ಆ ಬಾಲೆ ರಾತ್ರಿ ಕಳೆದಳು. ಸರಿಯಾದ ತನಿಖೆಯ ಕೊರತೆ ಮತ್ತು ಹುಡಗಿಯ ಅಸಹಕಾರದ ಕಾರಣ ತಪ್ಪಿತಸ್ಥ ರನ್ನು ಕೋರ್ಟ್ ಬಿಡುಗಡೆ ಮಾಡಿತು. ಹುಡುಗನ ಪರ ವಾದ ಮಾಡಿದ ಡಿಫೆನ್ಸ್ ಲಾಯರ್ ಫಾಕ್ಸ್ ನ್ಯೂಸ್ ಚಾನಲ್ಗೆ ನೀಡಿದ ಸಂದರ್ಶನದಲ್ಲಿ ” ಆಕೆಗೆ ಸಂಭವಿಸಿದ್ದು ಸರಿ ಎಂದು ನಾನು ಹೇಳ್ತಾ ಇಲ್ಲ, ಆದರೆ ಆ ಸರೀ ರಾತ್ರೀಲಿ ಆಕೆ ಹೊರಕ್ಕೆ ಹೋಗಿದ್ದಾದರೂ ಏಕೆ?” ಎಂದು ಪ್ರಶ್ನೆ ಮಾಡಿದ. ಮಾಡದೆ ಏನು ಮಾಡಿಯಾನು? ಅತ್ಯಾಚಾರಕ್ಕೆ ಒಳಗಾಗಿದ್ದು ಯಾರದೋ ಹೆಣ್ಣು ಮಗಳು. ತನ್ನ ಮಗಳೋ, ತಂಗಿಯೋ ಆ ಸ್ಥಾನದಲ್ಲಿದ್ದರೆ ಗಲ್ಲು ಶಿಕ್ಷೆ ಕೊಡ ಮಾಡಲು ತನ್ನೆಲ್ಲಾ ಶ್ರಮ ವ್ಯಯಿಸುತ್ತಿದ್ದ. ಕೋರ್ಟಿನ ಛಾವಣಿ ಹರಿಯುವಂತೆ ಅಬ್ಬರಿಸುತ್ತಿದ್ದ.

ನವದೆಹಲಿಯ ನಿರ್ಭಯ ಅತ್ಯಾಚಾರದ ಗಲಾಟೆ ಗೊತ್ತೇ ಇದೆಯಲ್ಲ. ಸಂಸ್ಕಾರ ವಿಹೀನ, ನಿರ್ದಯೀ ಕಾಮ ಪಿಪಾಸುಗಳ ಪರ ವಕಾಲತ್ತು ವಹಿಸಿದ ವಕೀಲನೂ ಅತ್ಯಾಚಾರಿಗಳ ರೀತಿಯ ನಿರ್ದಯಿಯೇ. ಕಾಮ ಪಿಪಾಸುಗಳು ತಮ್ಮ ಮದನ ದಂಡದ ಪ್ರಯೋಗ ಮಾಡಿದರೆ ಇವನು ತಾನು ಕಲಿತ ವಕ್ರ ಬುದ್ಧಿಯ ವಕೀಲಿತನವನ್ನು ಬಳಸಿ ವಿವೇಚನೆಯ ಮೇಲೆ ತನ್ನದೇ ರೀತಿಯ ಅತ್ಯಾಚಾರವನ್ನು ಮಾಡುತ್ತಾನೆ. ಈ ವಕೀಲ, “ಲಿವಿಂಗ್ ಟುಗೆದರ್” ಅರೆಬರೆ ಬಟ್ಟೆ, ಬಾಯ್ ಫ್ರೆಂಡ್ ಜೊತೆ ಹೊರಗೆ ತಿರುಗೋದು ಮಾಡಿದಾಗ ಅತ್ಯಾಚರವನ್ನಲ್ಲದೆ ಬೇರೇನನ್ನೂ ನಿರೀಕ್ಷಿಸಬೇಡಿ” ಎಂದು ಕಿವಿ ಮಾತನ್ನು ಹೇಳುತ್ತಾನೆ.

ಮನೆಯಲ್ಲಿ ಸದಾಚಾರ ಹೇಳಿ ಕೊಡಬೇಕಾದ ತಂದೆ ತಾಯಿ ಧನದಾಸೆಗೆ ಬಿದ್ದು ಮಕ್ಕಳನ್ನು ಮತ್ತೊಬ್ಬರ ಸುಪರ್ದಿಗೆ ಬಿಟ್ಟು ದುಡಿಯಲು ಹೊರಟರೆ ಆಗುವ ಅನಾಹುತ ಇದು. ಹೆಣ್ಣನ್ನು ಗೌರವಿಸಲು, ಆದರಿಸಲು ಕಲಿಸದ ಸಮಾಜ ತನ್ನ ಹೆಣ್ಣು ಮಕ್ಕಳ ಅಸಹಾಯಕ ಪರಿಸ್ಥಿತಿಗೆ ತಾನೇ ಜವಾಬ್ದಾರೀ ಹೊರಬೇಕಾಗುತ್ತದೆ. ಅಷ್ಟೇ ಅಲ್ಲ, ಗಂಡು ಮಾಡಿದ್ದೆಲ್ಲಾ ಸರಿ, ಅವನು ಎಷ್ಟಿದ್ದರೂ ಗಂಡು ತಾನೇ ಎನ್ನುವ ಮಾತುಗಳ ಮುಕ್ತ ಲೈಸನ್ಸ್ ಚಾರಿತ್ರ್ಯವಿಹೀನ ಗಂಡುಗಳಿಗೆ ಹಿರಿಯರು ಕೊಡಮಾಡಿದಾಗ ಅವನು ತನ್ನ ಪಶು ಸಂಸ್ಕಾರ ವನ್ನಲ್ಲದೆ ಮತ್ತೇನನ್ನು ಮೆರೆಯಲು ಸಾಧ್ಯ?

ಚಾರಿತ್ರ್ಯ, ಶೀಲ, ಒಳ್ಳೆಯ ನಡತೆ, ಹೆಣ್ಣಿಗೆ ಮಾತ್ರ ಸೀಮಿತವಾಗಬಾರದು, ಅವು ಗಂಡಿಗೂ ಅನ್ವಯಿಸಬೇಕು. ಆಗ ಮಾತ್ರ ಬೀದಿನಾಯಿ ಬುದ್ಧಿಯ ಗಂಡುಗಳಿಂದಲೂ, ಕಂತ್ರಿ ಬುದ್ಧಿಯ ವಕೀಲರಿಂದಲೂ ನಾವು ನಮ್ಮ ಹೆಣ್ಣು ಮಕ್ಕಳು ಬಚಾವಾಗಬಹುದು.

 

“ಮೇಕೆ” ಗೆ ಕೇವಲ ೫ ಲಕ್ಷ ರೂಪಾಯಿ

ಊರು ಇಂದೂರು. ಮಧ್ಯಪ್ರದೇಶದ ಈ ಪಟ್ಟಣ ಹೆಸರು ಮಾಡಿತು ಮೇಕೆ ವ್ಯಾಪಾರದಲ್ಲಿ. ಮುಸ್ಲಿಂ ಧರ್ಮೀಯರ ಪವಿತ್ರ ಹಬ್ಬ ‘ಬಕ್ರೀದ್’ ದಿನ ಬಲಿಕೊಡಲೆಂದು ಮೇಕೆ ಅರಸುತ್ತಾ ಒಬ್ಬ ಸಿರಿವಂತ ಮುಸ್ಲಿಂ ಬಾಂಧವ ಮಾರುಕಟ್ಟೆಗೆ ತನ್ನ ಕಿರಿ ಮಗನೊಂದಿಗೆ ಬಂದ. ಮಗ ಆಯ್ಕೆ ಮಾಡಿದ ಮೇಕೆ ಗೆ ಐದು ಲಕ್ಷದ ಹನ್ನೊಂದು ಸಾವಿರ ಎಂದು ವ್ಯಾಪಾರಿ ಹೇಳಿದಾಗ without blinking ಅಷ್ಟು ಹಣ ಕೊಟ್ಟು ಮೇಕೆ ಕೊಂಡು ಕೊಂಡ. ಹಣದುಬ್ಬರದ ಕಾರಣ ನಮ್ಮ ರೂಪಾಯಿ ನೆಲಕಚ್ಚಿದ ಪರಿಣಾಮ ಅಲ್ಲ ಈ ದುಬಾರೀ ಮೇಕೆ ವ್ಯಾಪಾರ. ಹಣದುಬ್ಬರ ವಿಪರೀತವಾದಾಗ ಒಂದು ಪ್ಯಾಕೆಟ್ ಹಾಲನ್ನು ಕೊಳ್ಳಲು ಗೋಣೀ ಚೀಲ ತುಂಬಾ ಹಣ ಬೇಕಾಗುತ್ತದೆ. ಮೇಕೆ ಕೊಳ್ಳಲು ಒಂದು ಟ್ರಾಕ್ಟರ್ ತುಂಬಾ ಹಣ ಬೇಕು. ಆ ಪರಿಸ್ಥಿತಿಗೆ ನಮ್ಮ ಸರಕಾರ ನಮ್ಮನ್ನು ತಂದು ನಿಲ್ಲಿಸದಿದ್ದರೆ ಸಾಕು.

ಈಗ ಮತ್ತೆ ಮೇಕೆ: ಕಿರಿ ಮಗ ಆಯ್ಕೆ ಮಾಡಿದ ಮೇಕೆ ಅದೆಷ್ಟೇ ಆದರೂ ಕೊಂಡು ಕೊಳ್ಳುವ ಸಂಪ್ರದಾಯ ಈ ಸಿರಿವಂತನ ಮನೆಯವರದಂತೆ. ಆದ ಕಾರಣ ಯಾವುದೇ ತಕರಾರಿಲ್ಲದೆ, ತಡ ಬಡಿಸದೆ ಮೇಕೆ ವ್ಯಾಪಾರ ಅರ್ಧ ಮಿಲಿಯನ್ ರೂಪಾಯಿಗೆ ತಂದು ನಿಲ್ಲಿಸಿ ದಾಖಲೆ ಮಾಡಿದ.

 

ಗಾಂಧೀ ಜಯಂತಿ, ಅಪರೂಪದ ಚಿತ್ರ

ಅಕ್ಟೋಬರ್ ೨, ಗಾಂಧೀ ಜಯಂತಿ. ಈ ದಿನ ಗಾಂಧಿಜೀಯವರ ತತ್ವಗಳನ್ನು, ತ್ಯಾಗಗಳನ್ನು ಮತ್ತು ಆದರ್ಶಗಳನ್ನು ಕೊನೆಗೆ, ಅವರ ಬಲಿದಾನದ ಬಗ್ಗೆ ಸ್ಮರಿಸುವ ದಿನ. ಗಾಂಧೀಜೀ ಯವರ ಬಗ್ಗೆ ಪ್ರತಿಯೊಬ್ಬರಿಗೂ ಒಂದೊಂದು ಅಭಿಪ್ರಾಯ. ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಅವರ ಗಣನೀಯ ಪಾತ್ರದ ಬಗ್ಗೆ ಹೆಮ್ಮೆ, ಕೃತಜ್ಞತಾ ಭಾವ ಕೆಲವರಲ್ಲಿದ್ದರೆ, ಮತ್ತೆ ಕೆಲವರು ಅವರ ವೈಯಕ್ತಿಕ ಜೀವನದ ಕಡೆ ನೋಟ ಹರಿಸಿ ಗಾಂಧೀ ಯನ್ನು ಹಳಿದು ತೃಪ್ತಿ ಪಡುತ್ತಾರೆ.

ಗಾಂಧೀ ಬಗ್ಗೆ ದೇಶೀಯರ ನಿಲುವು ಏನೇ ಇರಲಿ ವಿದೇಶೀಯರಿಗಂತೂ ಅವರ ವಿಚಾರಗಳು ಅನುಕರಣೀಯ ಎನ್ನುವ ಭಾವನೆ ತರಿಸಿವೆ. ಮಾರ್ಟಿನ್ ಲೂಥರ್ ಕಿಂಗ್, ಜಾನ್ ಕೆನಡಿ, ಆಲ್ಬರ್ಟ್ ಐನ್ಸ್ಟೀನ್ ಚಿತ್ರಗಳು ಹೇಗೆ ಜನರ ಮನಃ ಪಟಲದಲ್ಲಿ ಅಚ್ಚಳಿಯದೆ ನಿಂತಿವೆಯೋ ಹಾಗೆಯೂ ಗಾಂಧೀ ಸ್ಮೃತಿ ಸಹ ಎಂದು ವಿದೇಶೀಯರ ಅಭಿಪ್ರಾಯ. ವಿದೇಶೀ ಛಾಯಾಗ್ರಾಹಕಿ Margaret Bourke-White ಗಾಂಧೀಜಿಯವರನ್ನು ಹತ್ತಿರದಿಂದ ಬಲ್ಲ, ಅವರ ಚಟುವಟಿಕೆಗಳನ್ನು ವರದಿ ಮಾಡುತ್ತಿದ್ದ ಮಹಿಳೆ. ಇವರ ಚಿತ್ರಗಳು ಅಮೆರಿಕೆಯ time ಪತ್ರಿಕೆಯಲ್ಲಿ ಕಾಣಿಸಿ ಕೊಳ್ಳು ತ್ತಿದ್ದವು. ಗಾಂಧೀ ತಮ್ಮ ಚರಕ ದ ಹಿಂದೆ ಕೂತ ಮತ್ತು ಮಾರ್ಗರೆಟ್ ತಾನು ಚರಕ ದ ಹಿಂದೆ ಕೂತ ಎರಡು ಅಪರೂಪದ ಚಿತ್ರಗಳು ಕೆಳಗಿವೆ.

Image

Image