ತರಕಾರೀ ಅಂಗಡಿಯಲ್ಲಿ ವಯಾಗ್ರಾ

ಔಷಧ ತಯಾರಿಕಾ ಕಂಪೆನಿಗಳು ಕೋಟಿಗಟ್ಟಲೆ ಡಾಲರ್ ಖರ್ಚಿನಲ್ಲಿ ಹೊಸ ಹೊಸ ಮದ್ದುಗಳ ಅವಿಷ್ಕಾರಕ್ಕೆ ಅವಿರತ ಶ್ರಮ ವಹಿಸುತ್ತಾರೆ. ಮಾಡರ್ನ್ ಲೈಫ್ ಗೆಂದೇ ಹೇಳಿಮಾಡಿಸಿದ ಮಾಡರ್ನ್ ಖಾಯಿಲೆ, ಬ್ಯಾನೆಗಳು ಈ ಕಂಪೆನಿಗಳಿಗೆ ಒಂದು ರೀತಿಯ ಸುಗ್ಗಿಯನ್ನೇ ದಯಪಾಲಿಸುತ್ತವೆ. ಆದರೂ ಯಾರೂ ಹೊಸತಾಗಿ ಮಾರುಕಟ್ಟೆಗೆ ಬಂದ ಔಷಧಿಗಳ ಕಡೆ ಗಮನ ಕೊಡೋಲ್ಲ, ಮಾತ್ರವಲ್ಲ ಈ ಔಷಧಿಗಳಿಗೆ ಪತ್ರಿಕೆಯಲ್ಲಿ ಪ್ರಚಾರ ಕೂಡಾ ಕಡಿಮೆಯೇ. ಆದರೆ ಒಂದು ಔಷಧವಂತೂ ಇಡೀ ಪ್ರಪಂಚದ ಗಮನವನ್ನು ತನ್ನ ಕಡೆ ನಿರಾಯಾಸವಾಗಿ ಎಳೆದುಕೊಂಡಿತು. Pfizer ಎನ್ನುವ ಕಂಪೆನಿ ದಶಕಗಳ ತನ್ನ ಸಂಶೋಧನೆಗೆ ಒಂದು ತಕ್ಕುದಾದ, ಖಜಾನೆ ತುಂಬಿ ತುಳುಕುವ ಮದ್ದನ್ನು ವಿಶ್ವಕ್ಕೆ ನೀಡಿತು. ವಿಶ್ವ ಅಂದ್ರೆ ಗಂಡಿನ ವಿಶ್ವಕ್ಕೆ ಅನ್ನಿ. ಏಕೆಂದರೆ ಈ ಮದ್ದು ಗಂಡಿಗಾಗಿ.. ಅವನ ರಾಸಲೀಲೆ, ಮತ್ತು ನೀರವ ರಾತ್ರಿಯ ಪಫಾರ್ಮನ್ಸ್ ವೃದ್ಧಿಸಲು, ತಾತ್ಕಾಲಿಕ ನಪುಂಸಕತೆ ಯನ್ನು ಹೋಗಲಾಡಿಸಲು ಇಳಿವಯಸ್ಸಿನವರಿಗೂ ಉಪಯೋಗವಾಗುವ ಮದ್ದನ್ನು ಮಾರುಕಟ್ಟೆಗೆ ಭಾರೀ ಸುದ್ದಿಯೊಂದಿಗೆ ತಂದಿತು. ಫೈಜರ್ ಕಂಪೆನಿ ಎಂದ ಕೂಡಲೇ ನೀವು ಊಹಿಸಿ ಬಿಟ್ಟಿರಿ. ಅದು…..ಅದು….ವಯಾಗ್ರ ಎಂದು, ಅಲ್ಲವೇ? ಫೈಜರ್ ಮತ್ತು ವಯಾಗ್ರ, ಕೋಲ್ಗೆಟ್ ಮತ್ತು ಹಲ್ಲುಜ್ಜುವ ಪೇಸ್ಟ್ ಗೆ ಇರೋ ಸಂಬಂಧ. ಯಾವುದೇ ಪೇಸ್ಟ್ ಖರೀದಿಸಿದರೂ ಅದು ಕೋಲ್ಗೆಟ್ ಎನ್ನುವಷ್ಟು ಆ ಕಂಪೆನಿಯ ಖ್ಯಾತಿ.

ವಯಾಗ್ರಾ. ಈ ವಜ್ರಕಾರದ, ನೀಲಿ ಬಣ್ಣದ ಮಾತ್ರೆ ಒಂದು ದೊಡ್ಡ ಕ್ರಾಂತಿಯನ್ನೇ ಮಾಡುತ್ತಿರಬೇಕು ಶಯನ ಗೃಹದಲ್ಲಿ. ಅನುಮಾನ ಏಕೆಂದರೆ ನಾನು ಅದನ್ನು ಉಪಯೋಗಿಸಿಲ್ಲ. ಅದರ ಅವಶ್ಯಕತೆ ಇನ್ನೂ ಬಂದಿಲ್ಲ ಎನ್ನಿ, ಹಿ..ಹೀ. ಜನ ಮುಗಿ ಬಿದ್ದು ಕೊಳ್ಳ ತೊಡಗಿದರು. ಉತ್ತರ ಧ್ರುವದಿಂ..ದಕ್ಷಿಣ ಧ್ರುವಕೂ…ಮಿಲನದ ಗಾಳಿ ಬೀಸ ತೊಡಗಿತು. ಬೆಲೆ ದುಬಾರಿಯಾದರೂ, ಅಯ್ಯೋ ಸತ್ಮೇಲ್ ಏನು ಗಂಟು ತಗೊಂಡ್ ಹೋಗ್ತೀವಾ ಎಂದು ಜನ ಗಂಟನ್ನು ಬಿಚ್ಚಿದರು. ವಯಾಗ್ರ ಔಷಧ ತಯಾರಿಕಾ ವಲಯದಲ್ಲಿ ಒಂದು ಬಿರುಗಾಳಿಯನ್ನೇ ಎಬ್ಬಿಸಿತು.

ದೇವರು ಈ ಪ್ರಪಂಚವನ್ನು ಸೃಷ್ಟಿಸುವಾಗ ಸಾಕಷ್ಟು ತಯಾರಿ ಮಾಡಿ ಕೊಂಡೆ ಸೃಷ್ಟಿಸಿರುತ್ತಾನೆ. ಮನುಷ್ಯನಿಗೆ ಬೇಕಾದ ಎಲ್ಲಾ ಸವಲತ್ತುಗಳೂ ಈ ಸೃಷ್ಟಿಯಲ್ಲಿವೆ. ನೋಡುವ, ಕಂಡು ಕೊಳ್ಳುವ ಕಣ್ಣು ಬುದ್ಧಿ ಶಕ್ತಿ ಬೇಕಷ್ಟೇ. ಆಹಾರದಲ್ಲೇ ವಿವಿಧ ಪೋಷಕಾಂಶಗಳ ಜೊತೆ ಲೈಂಗಿಕ ಚಟುವಟಿಕೆಗೆ ಬೇಕಾದ ಪೋಷಕಾಂಶಗಳೂ ಇವೆ. ಕೆಲವು ಅಗ್ಗದ ಬೆಲೆಯಲ್ಲಿ ಸಿಕ್ಕರೆ, ಕೆಲವು ದುಬಾರಿ. ತರಕಾರಿ ಅಂಗಡಿಯಲ್ಲೇ ಮಗುಮ್ಮಾಗಿ ಕೂರುವ ತರಕಾರಿಯೊಂದು ರಾತ್ರಿಯ ಬದುಕಿಗೆ ಬಣ್ಣ ತರುತ್ತದಂತೆ. ಅದೇ ನಮ್ಮ ಕೆಂಬಣ್ಣದ ಬೀಟ್ರೂಟು.

ಬೀಟ್ರೂಟಾ??????????????????????

ಹೌದು ಬೀಟ್ರೂಟ್. ಈ ತರಕಾರಿಯಲ್ಲಿ ಬೋರಾನ್ (boron), ಎನ್ನುವ ಪೋಷಕಾಂಶ ಸಂತಾನ ವೃದ್ಧಿಗೆ ಬೇಕಾದ ಲೈಂಗಿಕ ಹಾರ್ಮೋನ್ ಗಳ ಉತ್ಪಾದನೆಗೆ ಉತ್ತೇಜನ ಕೊಡುತ್ತದಂತೆ. ವಯಾಗ್ರ ಮಾಡುವ ಕೆಲಸವನ್ನೇ ಈ ಪಾಪದ ಬೀಟ್ರೂಟ್ ಮಾಡೋದು. ನಮಗೆ ಅದು ಹೊಳಯಲೇ ಇಲ್ವಲ್ಲಾ? ನಿಲ್ಲಿ, ನಿಲ್ಲಿ…

….ಚೆನ್ನಾಗೇ ತಿನ್ನಿ ಬೀಟ್ರೂಟ್ ನ.ಆದರೆ ಮೂತ್ರ ವಿಸರ್ಜನೆಗೆ ಹೋದಾಗ ಮೂತ್ರ ತಿಳಿ ರಕ್ತ ವರ್ಣದ್ದು ಎಂದು ಕಂಡ ಕೂಡಲೇ ಅಯ್ಯಪ್ಪೋ, ತಗುಲಿತಾ ನನಗೂ ಕಿಡ್ನಿ ಕಾಯಿಲೆ ಎಂದು ಡಾಕ್ಟರ್ ಕಡೆ ಧಾವಿಸಬೇಡಿ. ಬೀಟ್ರೂಟ್ ತಿಂದ ನಂತರ ಮೂತ್ರ ವಿಸರ್ಜನೆ ಬೀಟ್ರೂಟ್ ಬಣ್ಣ ಪಡೆದು ಕೊಳ್ಳೋದು ಪ್ರಕೃತಿ ನಿಯಮ.

ಸೋ, ಗುಡ್ ಲಕ್ ವಿದ್ ಬೀಟ್ರೂಟ್.

ಈ ಬಾಡಿ ಬಿಲ್ಡರ್ ಗೆ ಬರೀ ೯೩ ವರ್ಷ ಕಣ್ರೀ…

ಹೌದು ಲೆಕ್ಕ ತಪ್ಪಿಲ್ಲ, ೩೯ ಅಲ್ಲ, ಪೂರ್ತಿ ೯೩.  ನೈನ್ಟೀ ತ್ರೀ. ೯೩ ರ ಡಾಕ್ಟರ್ ಚಾರ್ಲ್ಸ್ ಯುಗ್ಸ್ಟರ್ ಇಳಿ   ವಯಸ್ಸಾದರೂ ಸ್ಫೂರ್ತಿ ಮತ್ತು ಆರೋಗ್ಯದ ಚಿಲುಮೆ. ‘ಜಿಮ್’ ಒಳಕ್ಕೆ ಹೊಕ್ಕರೆ ೨೧ ವರ್ಷದ ಪೋರರೂ ಸದ್ದಿಲ್ಲದೇ ಗಂಟು ಕಟ್ಟಬೇಕು ಇವರ ವರ್ಕ್ ಔಟ್ ನೋಡಿ. ಸಾಧಾರಣವಾಗಿ ೭೦ ದಾಟುತ್ತಿದ್ದಂತೆ ಜನ ಕೋಲು ಹಿಡಿಯುತ್ತಾರೆ, ಗೋಡೆ ಸವರುತ್ತಾ ನಡೆಯುತ್ತಾರೆ, ವೀಲ್ ಚೇರ್ ಗುಲಾಮ ರಾಗುತ್ತಾರೆ ಇಲ್ಲಾ ಹಾಸಿಗೆ ಹಿಡಿಯುತ್ತಾರೆ. ಅಪರೂಪಕ್ಕೆ ಎಂಭತ್ತು ತೊಂಭತ್ತು ದಾಟಿದವರು ಗಟ್ಟಿ ಮುಟ್ಟಾ ಗಿ ಇರೋದು ಕಾಣಲು ಸಿಗುತ್ತಾರೆ. ತೊಂಭತ್ತರ ಹತ್ತಿರ ಇರುವ ಕೇರಳದ ಮಾಜಿ ಮುಖ್ಯಮಂತ್ರಿ ವೀ. ಎಸ್. ಅಚ್ಯುತಾನಂದನ್, ಈಗ ವಿಪಕ್ಷ ನಾಯಕ. ಎಂ, ಎಫ್ ಹುಸೇನ್ ಸಹ ಇಳಿ ವಯಸ್ಸನ್ನು ಅಣಕಿಸಿದವರ ಸಾಲಿಗೆ ಸೇರಿದವರು. ರಾಜಕಾರಣಿಗಳು ದೀರ್ಘಾಯುಷಿಗಳು, ನನ್ನ ಪ್ರಕಾರ. ಕಣ್ಣಿಗೆ ಕಂಡವರದ್ದನ್ನೆಲ್ಲಾ ನುಂಗೀ, ನುಂಗೀ ಅದೂ ಒಂದು ರೀತಿಯ ವ್ಯಾಯಮವೇನೋ ಎಂದು ನಮಗೆ ತೋರ ಬೇಕು, ಆ ತೆರನಾದ ಆರೋಗ್ಯ. ಹಾಗಾದರೆ ನಾವೆಲ್ಲರೂ ಬಯಸುವ, ತಹ ತಹಿಸುವ ಚಿರ ಯೌವ್ವನ ಅನ್ನೋದು ಇದೆಯೇ? ಇಲ್ಲಾ ಎಂದೇ ವೈದಕೀಯ ವಲಯದ ತೀರ್ಪು. ಆದರೆ ಯಾವಾಗಲೂ ಚಟುವಟಿಕೆಯಿಂದ ಇರುತ್ತಾ, ಸಿಕ್ಕಿದ್ದನ್ನೆಲ್ಲಾ ಉದರಕ್ಕೆ ಇಳಿ ಬಿಡದೆ ಕೇರ್ಫುಲ್ ಆಗಿದ್ದರೆ ಊರ ಹೊರಗಿನ ಚಿರ ಯಾತ್ರೆ ಸ್ವಲ್ಪ ಮುಂದೂಡ ಬಹುದು ಅಷ್ಟೇ. ಈಗಿನ ಕಾಲದ ಈಟಿಂಗ್ ಹ್ಯಾಬಿಟ್ಸ್, sedantary lifestyle ಕಾರಣ ಹದಿಹರೆಯದ ಹುಡುಗರಿಂದ ಹಿಡಿದು, ೨೦, ಮೂವತ್ತು, ನಲವತ್ತರ ಯುವಕರು ದಿಢೀರ್ ಎಂದು ಕಾರ್ಡಿಯಾಕ್ ಖಾಯಿಲೆಗೆ ಬಲಿಯಾಗುತ್ತಿರುವುದು ದುರದೃಷ್ಟಕರ. ಹೃದ್ರೋಗಕ್ಕೆ ಬಲಿಯಾದ ನಮ್ಮ ಸ್ನೇಹಿತರ, ಪರಿಚಯಸ್ಥರ, ನೆಂಟರಿಷ್ಟರ ನ್ನು ನೋಡಿಯೂ ನಾವು ವ್ಯಾಯಾಮದ ಕಡೆ ಗಮನ ಹರಿಸುತ್ತಿಲ್ಲ.

ನನ್ನ ಕತೆಯಂತೂ ಇನ್ನಷ್ಟು ಶೋಚನೀಯ. ವಾಕಿಂಗ್, ಜಾಗಿಂಗ್, ಸೈಕ್ಲಿಂಗ್ ಗೆ ಬೇಕಾದ ಎಲ್ಲಾ ‘ಗೇರ್’ ಗಳಿದ್ದಾಗ್ಯೂ ಒಂದು ದಿನ ಹೋದರೆ ಎರಡು ವಾರ ರೆಸ್ಟ್. ನನ್ನನು ಕಟ್ಟಿಕೊಂಡು ನಡೀ ಎಂದು ದುರುಗುಟ್ಟುವ  ನೈಕೀ ಶೂ ನೋಡಿದ ಕೂಡಲೇ ಕಟುಕನ ಕೈಯ ಕತ್ತಿ ನೆನಪಾಗುತ್ತದೆ ನನಗೆ.  ಮಡದಿ ಎಷ್ಟೇ ಗೋಗರೆದರೂ ಊಹೂಂ ಎನ್ನುವ ಮೊಂಡುತನ. ನಡಿಗೆ monotonous ಎಂದು ಹೇಳಿ ಸೈಕಲ್ ಕೊಂಡು ಕೊಂಡೆ. ಪರ್ಸ್ ನ ಭಾರ ಕಡಿಮೆಯಾಯಿತೇ ವಿನಃ ಬೊಜ್ಜಿನ ಪ್ರಮಾಣ ಇಳಿಯಲಿಲ್ಲ. ಸೈಕಲ್ ನ  ಗಾಳಿ ಹೋದಾಗ ಗಾಳಿ ತುಂಬಿಸೋದು ಮಗನ ರೂಮಿನ ಮೂಲೆಗೆ ಅದನ್ನು ವಾಲಿಸಿ ಇಡೋದು, ಈ ಕೆಲಸವನ್ನ ಆವರ್ತಿಸಿ, ಆವರ್ತಿಸಿ ಸಾಕಾಗಿ ಹೋದರೂ ಇದುವರೆಗೆ ಒಂದೈದು ಕಿ. ಮೀ ದೂರ ಕ್ರಮಿಸಿಲ್ಲ. ದಿನಕ್ಕೆ ಸುಮಾರು ನಾಲ್ಕರಿಂದ ಐದು ಕೀ. ಮೀ. ಸೈಕ್ಲಿಂಗ್ ಮಾಡಿದರೆ ಹೃದ್ರೋಗದಿಂದ ಗೊಟಕ್ ಆಗುವ ಚಾನ್ಸ್ ಸುಮಾರು ಶೇಕಡಾ ಐವತ್ತು ಕಡಿಮೆಯಂತೆ. ಜಾಗಿಂಗ್ ಮಾಡಲು ಆಗದಿದ್ದರೂ, ಬಿರುಸಾದ ನಡಿಗೆ ಜಾಗಿಂಗ್ ಗಿಂತ ಒಳ್ಳೆಯದಂತೆ. ಒಟ್ಟಿನಲ್ಲಿ ಸೋಫಾದ ಮೇಲೆ ಕುಕ್ಕರು ಬಡಿಯುವುದಕ್ಕಿಂತ ಸೊಂಟ ನೆಟ್ಟಗೆ ಮಾಡಿ ಕಾರು, ಬೈಕಿನ ಕೀಲಿ ಮನೆಯಲ್ಲಿ ಬಿಟ್ಟು  ಮನೆಯಿಂದ ಹೊರಹೋದರೆ ಅಷ್ಟೊಂದು ಲಾಭ ನಮ್ಮ ಶರೀರಕ್ಕೆ. ಮೇಲೆ ಹೇಳಿದ ೯೩ ವರ್ಷದ ಬ್ರಿಟಿಶ್ ಡಾಕ್ಟರ್ ಥರ ವಲ್ಲದಿದ್ದರೂ ನಮ್ಮ ಕೈಗೋ, ಕಾಲಿಗೋ ಆಗುವ ಅಷ್ಟಿಷ್ಟು ಸಾಹಸದಲ್ಲಿ ನಾವು ತೊಡಗಿಸಿ ಕೊಳ್ಳದಿದ್ದರೆ ನಷ್ಟ ಮಾತ್ರ  ತುಂಬಲಾರದ್ದು.

ನೈಕೀ ಶೂ ಗಳ ದುರುಗುಟ್ಟು ವಿಕೆಯಿಂದ ಮೆಲ್ಲಗೆ ಪಾರಾಗಿ  ಸೈಕಲ್ ಹತ್ತಿರ ಬಂದರೆ ಮತ್ತೊಮ್ಮೆ ಹೋಗಿದೆ ಅದರ ಗಾಳಿ. ಗಾಳಿ ತುಂಬಿಸಿ ಈ ಸಂಜೆಯಿಂದಲೇ ಶುರು ಮಾಡುತ್ತೇನೆ ನನ್ನ ಮನೆಯ ಹೊರಗಿನ ವರ್ಕ್ ಔಟ್ ಯಾತ್ರೆ. ನೀವೂ ರೆಡಿ ತಾನೇ?

ಚಿತ್ರ ಕೃಪೆ. yahoo.com

ಜ್ಞಾಪಕ ಶಕ್ತಿ ಹೆಚ್ಚಲು…..

ಜ್ಞಾಪಕ ಶಕ್ತಿ ಹೆಚ್ಚಲು  ದಿನಕ್ಕೊಂದು ಲೋಟ ಹಾಲು ಕುಡಿಯಬೇಕಂತೆ. ಅಮೆರಿಕೆಯ ಮೇಯ್ನ್ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆ, ಅಥವಾ some-ಶೋಧನೆ. ಯಾವುದಾರೂ ಕಂಪೆನಿ, ಹಾಲಿನ ಕಂಪೆನಿಯೋ, ಚಾಕಲೇಟ್ ಕಂಪೆನಿಯೋ some thing ಕೊಟ್ಟರೆ ಅವರಿಗೆ ಇಷ್ಟವಾದ , ಅವರ ಉತ್ಪಾದನೆಗಳು ಮಾರಾಟವಾಗಲು ಸಹಾಯಕವಾಗುವ some-ಶೋಧನೆಗಳು ಲಭ್ಯ. ಇಲ್ಲಿ ಯಾರಾದರೂ ಈ ವಿಶ್ವವಿದ್ಯಾಲಯಕ್ಕೆ ಕೊಟ್ಟಿದ್ದಾರೋ ಏನೋ ಗೊತ್ತಿಲ್ಲ. ಹಾಲು ಕುಡಿಯಿರಿ, ಕುಡಿದರೆ ಒಳ್ಳೆಯದು ಎನ್ನವುದು ನಮ್ಮ ಭೂಮಿಯಷ್ಟೇ ಹಳತಾದ ಸತ್ಯ. ಅದಕ್ಕೆ ಅಲ್ಲವೇ ಮನುಷ್ಯನಿಂದ ಹಿಡಿದು ಮೃಗಗಳವರೆಗೂ ಭೂಮಿಗೆ ಉದುರಿದ ಕೂಡಲೇ ಭಗವಂತ ಹಾಲಿನ ಸರಬರಾಜನ್ನು  ಅಡೆತಡೆಯಿಲ್ಲದೆ ಮುಂದುವರೆಸಿರುವುದು?

ದಿನಕ್ಕೆ ಒಂದು ಲೋಟ ಹಾಲು ಕುಡಿದರೆ ಜ್ಞಾಪಕ ಶಕ್ತಿ ಹೆಚ್ಚುತ್ತಂತೆ. ಎಲ್ಲರೂ ಕಿವಿ ನಿಮಿರಿಸಿ ಕೇಳುವ, ಕಣ್ಣರಳಿಸಿ ನೋಡುವ ವಿಷ್ಯ ಇದು. ವಾವ್, ನನ್ನ ಮಟ್ಟಿಗೆ ಲೈಂಗಿಕ ಸಾಮರ್ಥ್ಯ ಹೆಚ್ಚಿಸಿ ಕೊಳ್ಳುವುದಕ್ಕಿಂತ ಇಂಪಾರ್ಟೆಂಟ್ ಈ ಜ್ಞಾಪಕ ಶಕ್ತಿ ವರ್ಧನೆ. ಏಕೆಂದರೆ ಜ್ಞಾಪಕ ಶಕ್ತಿ ಇಲ್ಲ ಎಂದರೆ ಲೈಂಗಿಕ ಚಟುವಟಿಕೆ ನಡೆಸುವುದನ್ನು ಮರೆತು ಬಿಡುತ್ತೇವೆ. ಕೆಲವೊಮ್ಮೆ ಹಸಿವಿನಂತೆ ಲೈಂಗಿಕ ಬಯಕೆಗಳು spontaneous ಆಗಿ ಬಂದರೂ ಬದುಕಿನಲ್ಲಿ ಒಂದು ಸ್ಟೇಜ್ ಬರುತ್ತೆ ಜ್ಞಾಪಕ ಬಂದಾಗ ದೈಹಿಕ ಸುಖ ಪಡೆಯಬೇಕು ಎನ್ನುವ ಆಸೆ. ದಿನಕ್ಕೆ ಒಂದು ಲೋಟ ಹಾಲು ಕುಡಿದರೆ ಜ್ಞಾಪಕ ಶಕ್ತಿ ಹೆಚ್ಚು, ೨೩ ರಿಂದ ೯೮ ವರ್ಷ ವಯಸ್ಸಿನ ಸುಮಾರು ೯೦೦ ‘ಎಳೆ’ಯರ ಮೇಲೆ ನಡೆಸಿದ ಸಂಶೋಧನೆಯಿಂದ ಕಂಡು ಕೊಂಡ ಅಂಶ ಇದು. ಆದರೆ ಈಗ ನಾವು ಸೇವಿಸುತ್ತಿರುವುದು – ಹಾಲಾಗಲೀ, ಸೊಪ್ಪಾಗಲೀ, ಮೊಟ್ಟೆಯಾಗಲೀ, ಮಾಂಸವಾಗಲೀ – ಆಹಾರಕ್ಕಿಂತ ಹೆಚ್ಚು ರಾಸಾಯನಿಕಗಳನ್ನು. ಗೊಬ್ಬರದಿಂದ ಶುರುವಾದ ಈ ರಾಸಾಯನಿಕಗಳ ಹಸ್ತಕ್ಷೇಪ ಸೇಬಿನ ಹಣ್ಣಿಗೆ ಮೆರುಗನ್ನು ನೀಡುವವರೆಗೆ ಬಂದು ತಲುಪಿದೆ. ತರಕಾರೀ, ಹಣ್ಣುಗಳು, ಮಾಂಸ ಇವುಗಳಿಗೆ ರಾಸಾಯನಿಕ ಸಿಂಪಡಿಸೀ, ಸಿಂಪಡಿಸೀ ಈಗ ಆಹಾರಕ್ಕೆ ಅಂಟಿಕೊಂಡ ರಸಾಯನಿಕಗಳನ್ನು ತೊಳೆದು ತೆಗೆಯಲು ಮತ್ತೊಂದು ರೀತಿಯ washing detergent ಬಂದಿದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು, ಅಲ್ಲವೇ?

ಈಗ ಮತ್ತೊಮ್ಮೆ ಹಾಲಿನ ವಿಷಯಕ್ಕೆ ಬರೋಣ. ಹಾಲು ಕುಡಿಯೋಣ, ಅದು ಹಾಲಿನ ಲಕ್ಷಣ ಹೊಂದಿದ್ದರೆ. ಅರ್ಥ? ನಮ್ಮ ದೇಶದಲ್ಲಿ ಸಿಗುವ ಹಾಲು ಹಾಲಲ್ವಂತೆ. ಅಂದ್ರೆ? ಅಂದ್ರೆ, ನಾವು ಕುಡಿಯೋ ಹಾಲಿಗೆ ಯೂರಿಯಾ, ಹಾಳೂ ಮೂಳೂ ಸೇರಿಸಿ ಕೊಡ್ತಾರಂತೆ. ಒಹ್, ಹಾಗಾದ್ರೆ ಹಾಲು ಕುಡಿದು ನಮ್ಮ ಜ್ಞಾಪಕ ಶಕ್ತಿ ವರ್ಧಿಸುವುದೂ ಬೇಡ, ಈಗ ಇರೋ ಶಕ್ತಿಯೇ ಸಾಕು ಎಂದು ಹಾಲಿಗೆ ಬೆನ್ನು ತಿರುಗಿಸಿದರೆ ಒಳ್ಳೆಯದು ಎಂದು ನನ್ನ ಒಪೀನಿಯನ್ನು.

ಬೊಜ್ಜಿನ ಕಡೆಯೂ ಗಮನವಿರಲಿ

ಒಂದ್ ‘ಜಮಾನಾ’ ದಲ್ಲಿ ಡಾಕ್ಟ್ರು ಅಂದ್ರೆ ಬಿಳೀ ಕೋಟು, ಸ್ಟೆತಾ ಸ್ಕೋಪು ಮಡಗಿ ಕೊಂಡಿರೋ ವ್ಯಕ್ತಿ. ಈಗ ಈ ಅಲಂಕಾರಕ್ಕೆ ಮತ್ತೊಂದು ಭೂಷಣ ಸೇರ್ಕೊಂತು. ಅದೇ ನಮ್ ಪಾಂಡು ಟೈಲರ್ ನೇತು ಹಾಕ್ಕೊಳ್ಳೋ ಬೆವರು, ಧೂಳು, ಕೊಳಕು ತುಂಬಿದ ಟೇಪು. measurement tape. ಅದ್ಯಾಕೆ ಅಂತೀರಾ? ಕೆಳಗ್ ನೋಡ್ಕಳಿ ಉತ್ತರಕ್ಕೆ.

ಹೃದ್ರೋಗ ಬರೀ ಸ್ಥೂಲಕಾಯರಿಗೆ ಮಾತ್ರ ಅಲ್ಲ ಖಾತರಿ, ಹೊಟ್ಟೆ ಸುತ್ತಾ ಡನ್ಲಪ್ ಟೈರ್ ನಂತೆ ಸುತ್ತಿಕೊಂಡ ಬೊಜ್ಜಿನ ಒಡೆಯರಿಗೆ ಹೆಚ್ಚು ಖಾತರಿಯಂತೆ ವೈದ್ಯಕೀಯ ಸಂಶೋಧನೆ ಪ್ರಕಾರ. ನನ್ನ ತೂಕ accepted ಮತ್ತು desired limit ನಲ್ಲಿದೆ ಎಂದು ನಿರಾಳವಾಗಿ ಆಗೊಂದು ಈಗೊಂದು ಎಂದು ಬೆಣ್ಣೆ ಖಾಲಿಯನ್ನೋ, ಗುಲಾಬ್ ಜಾಮೂನನ್ನೋ ಗುಳುಂ ಮಾಡಬೇಡಿ. ತೂಕ ಕಡಿಮೆಯಿದ್ದರೆ ಮಾತ್ರ ಸಾಲದು ಬೇಡದ ಕಡೆ ಕೊಬ್ಬು ಸೇರಿ ಕೊಂಡಿದಿಯೇ ಎನ್ನುವ ಕಡೆಯೂ ಗಮನವಿರಲಿ ಎನ್ನುವುದು ವೈದ್ಯರ ಅಭಿಪ್ರಾಯ. “fat accumulated in the abdomen can be far more dangerous to your health”.

ವಿಖ್ಯಾತ New England Journal of Medicineನ ವರದಿ ಪ್ರಕಾರ ಹೊಟ್ಟೆ ಸುತ್ತಾ ಸಲೀಸಾಗಿ ಬೆಳೆಯುವ ಕೊಬ್ಬು ಕ್ಯಾನ್ಸರ್, ಪಾರ್ಶ್ವವಾಯು ಮತ್ತು ಹೃದ್ರೋಗಗಳಿಗೆ ದಾರಿ ಮಾಡಿಕೊಡುತ್ತದೆ.

ಕೆಲವರು ಬೆವರು ಸುರಿಸಿ ಜಾಗಿಂಗ್ ಮಾಡಿದ ನಂತರ ತಮ್ಮ ಕಾಲಿನ ಪಯಣವನ್ನು ಮಸಾಲೆ ದೋಸೆ, ಉದ್ದಿನವಡೆ, ವಾನಗಿ ಭಾತ್ ಮಾರುವ ಅಡ್ಡಾ ಕಡೆ ಬೆಳೆಸುತ್ತಾರೆ ಎಂದು ಕೇಳಿದ್ದೇನೆ. ಈಗಲಾದರೂ “ಬೀ ಕ್ಯಾರ್ಫುಲ್”. ಏಕೆಂದರೆ prevention is always better than cure.

ಬೇಡವಾದೆವಾ ನಾವು ನೊಣಗಳಿಗೂ?

ಕಾಲವೊಂದಿತ್ತು, ಮಾವಿನ ಹಣ್ಣು, ದ್ರಾಕ್ಷಿ ಹೀಗೆ ತರಾವರಿ ಹಣ್ಣು ಹಂಪಲುಗಳ ಮೇಲೆ ನೊಣಗಳು ಮುತ್ತಿಗೆ ಹಾಕುತ್ತಿದವು. ಪುಷ್ಪದ ಮೇಲೆ ಹಾರುವ ಭ್ರಮರಗಳ ಹಾಗೆ. ಆದರೆ ಈಗ ನೊಣಗಳು ಹಣ್ಣುಗಳ ಮೂಸಿ ನೋಡಲೂ ತಯಾರಿಲ್ಲ, ಅವು ಮಣ್ಣಿನ ಮೇಲಾದರೂ ಕೂತಾವು ಆದರೆ ಹಣ್ಣುಗಳ ಮೇಲಲ್ಲ. ಕಾರಣ?ಬಹುಶಃ ನೊಣಗಳಿಗೂ ಸುಳಿವು ಸಿಕ್ಕಿರಬೇಕು ಈ ಹಣ್ಣುಗಳು ಸತ್ವವಿಲ್ಲದವು, ರಾಸಾಯನಿಕಗಳ ಸಹವಾಸದಿಂದ ತನ್ನತನವನ್ನು ಕಳೆದುಕೊಂಡವು ಎಂದು. ಮನುಷ್ಯನ ಅತಿಯಾಸೆ, ದುರ್ಬುದ್ಧಿಯ ಸುಳಿವು ನೊಣ ಗಳಿಗೂ ಅರಿವಾಯಿತು. ಆದರೆ ಲಜ್ಜೆಯಿಲ್ಲದ ಮನುಷ್ಯನಿಗೆ ನೊಣಗಳ ಬಹಿಷ್ಕಾರದಿಂದ ಆಗುವ ನಷ್ಟವಾದರೂ ಏನು?

ಮಾರುಕಟ್ಟೆಯಲ್ಲಿ ಕಾಣಸಿಗುವ ನಾನಾ, ತರಾವರಿ ಹಣ್ಣು ಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಹಣ್ಣುಗಳಿಗೆ ಸಿಂಪಡಿಸುವ “ಕೀಟನಾಶಕ” ಗಳಿವೆ ಎಂದು ವರದಿ. ೨೮ ನಮೂನೆಯ ಅಪಾಯಕಾರೀ ಕೀಟ ನಾಶಕಗಳಿದ್ದು ಒಂದೊಂದು ಹಣ್ಣಿನ ಮೇಲೂ ಕನಿಷ್ಠ ಐದು ನಮೂನೆಯ ಕೀಟ ನಾಶಕಗಳ ಬಳಕೆಯಾಗುತ್ತದಂತೆ. ಐರೋಪ್ಯ ಸಂಸತ್ತು ಈ ವಿಷಯವನ್ನೂ ಬಯಲುಮಾಡಿತು. ಈ ೨೮ ನಮೂನೆಯ ಕೀಟನಾಶಕಗಳಲ್ಲಿ ೧೦ ಕ್ಯಾನ್ಸರ್ ರೋಗಕ್ಕೂ, ೩ ನರ ದೌರ್ಬಲ್ಯಗಳಂಥ ಕಾಯಿಲೆಗೂ ಕಾರಣವಂತೆ.   

ಈ ರೀತಿ “ಕೀಟನಾಶಕ” ಗ್ರಸ್ಥ ಹಣ್ಣು ಗಳನ್ನೂ, ತರಕಾರಿಗಳನ್ನೂ ಚೆನ್ನಾಗಿ ತೊಳೆದರೂ ಸಹ ಅವಕ್ಕೆ ಅಂಟಿದ ವಿಷ ರಾಸಾಯನಿಕಗಳು ಸಂಪೂರ್ಣವಾಗಿ ಹೋಗುವುದಿಲ್ಲವಂತೆ. ಅಂಥ ಆಹಾರ ಪದಾರ್ಥಗಳು ಕೆಳಗಿನವು:

Celery, Cherries, Peaches, Strawberries, Apples, Domestic blueberries, Nectarines, Sweet bell peppers, Spinach, Kale and collard greens,Potatoes, Imported grapes, Lettuce

ರಸಾಯನಿಕಗಳು ಕೆಳಗೆ ತೋರಿಸಿದ ಕೆಲವು ಹಣ್ಣುಗಳ ಮೇಲೆ ಮತ್ತು ತರಕಾರಿಗಳ ಮೇಲೆ ಇದ್ದರೂ ತೊಳೆದರೆ ಮಾಯವಾಗುವಂಥವು. ಅವುಗಳು ಕೆಳಗಿನಂತಿವೆ,

Onions, Avocados, Sweet corn, Pineapples, Mango,Sweet peas, Asparagus, Kiwi fruit, Cabbage, Eggplant (ಬದನೆ), Cantaloupe, Watermelon, Grapefruit, Sweet potatoes,Sweet onions 

ಹೀಗೆ ನಾವು, ನಮ್ಮ ಪುಟ್ಟ ಮಕ್ಕಳು ಸೇವಿಸುವ ಆಹಾರಕ್ಕೆ ರಾಸಾಯನಿಕಗಳು ಹಾಕಿದ ಲಗ್ಗೆ ಸಾಲದೆಂಬಂತೆ ಈ ವಿಷ ಪದಾರ್ಥಗಳನ್ನು ನಿರ್ಮೂಲನ ಮಾಡಲು ಮತ್ತೊಂದು ರಾಸಾಯನಿಕ. ಅದೇ ಲಿಕ್ವಿಡ್ ಸೋಪು. ಈ ಸೋಪಿನಿಂದ ಆಹಾರವನ್ನೂ ತೊಳೆದರೆ ರಾಸಾಯನಿಕ ಮುಕ್ತವಾಗುತ್ತದಂತೆ ನಮ್ಮ ಆಹಾರ. ಈ ಸೋಪಿನ ಮೇಲೆ ಎಷ್ಟು ಪದರಗಳ ರಾಸಾಯನಿಕಗಳು, ಕೀಟ ನಾಶಕಗಳು ಕುಳಿತಿವೆ ಎಂದು ಮಾತ್ರ ಕೇಳಬೇಡಿ.

ತರಕಾರಿ ಮತ್ತು ಹಣ್ಣು ಗಳನ್ನು ಹೇಗೆ ತೊಳೆಯ ಬೇಕೆಂಬುದರ ಬಗ್ಗೆ ತಿಳಿಯಲು ಕೆಳಗಿನ ಕೊಂಡಿ ಕ್ಲಿಕ್ಕಿಸಿ.

http://www.associatedcontent.com/article/1183252/the_safe_way_to_clean_fresh_fruits.html?cat=6

ಮಾವಿನ ಹಣ್ಣು

ಈ ಚಿತ್ರವನ್ನು ನನ್ನ ಎರಡು ವರ್ಷದ ಮಗಳು ಇಸ್ರಾ ತೆಗೆದದ್ದು. ನನ್ನ ತಂಗಿ ಇತ್ತೀಚೆಗೆ ಭಾರತಕ್ಕೆ ಹೋದಾಗ ನಮ್ಮ ಮನೆಯ ಮುಂದಿನ ಮರದಲ್ಲಿ ಆದ ಮಾವಿನ ಹಣ್ಣುಗಳನ್ನು ತಂದಿದ್ದಳು. ಹಣ್ಣು ಬಹಳ ರುಚಿಯಾಗಿದ್ದವು.  ಅದೂ ಅಲ್ಲದೆ ನಮ್ಮ ಮನೆಯ ತೋಟದಲ್ಲಿ ಬೆಳೆದ ಹಣ್ಣು ಎಂದರೆ ವಿಶೇಷವಾದ ರುಚಿ ಅದಕ್ಕೆ ಇರುತ್ತದಲ್ಲವೇ? ಮನೆಯ ಮುಂದಿನ ಮಾವಿನ ಮರಕ್ಕೆ ಹಾದು ಹೋಗುವ ಪಡ್ಡೆ ಹುಡುಗರ ದುರ್ಗಣ್ಣು. ಯಾರೂ ಇಲ್ಲದಾಗ ಮರ ಬೋಳಿಸಿ ಹೋಗಿ ಬಿಡುತ್ತಾರೆ. ನನ್ನಮ್ಮನ ಶಾಪವೋ ಶಾಪ.

ಹಣ್ಣುಗಳ ರಾಜ ಮಾವಿನ ಹಣ್ಣನ್ನು ಇಷ್ಟ ಪಡದವರು ವಿರಳ. ಕೆಲವರಿಗೆ ಮಾವಿನ ಹಣ್ಣು ಶರೀರವನ್ನು ಸ್ಥೂಲ ವಾಗಿಸುತ್ತದೆ ಎಂದು ತಿನ್ನಲು ಭಯ. ಒಂದು ದೊಡ್ಡ ಬಾಳೆ ಹಣ್ಣಿನಲ್ಲೂ ಮತ್ತು ಸಾಮಾನ್ಯ ಗಾತ್ರದ ಮಾವಿನ ಹಣ್ಣಿನಲ್ಲೂ ಇರುವುದು ೧೦೦ ಕ್ಯಾಲೋರಿಗಳು. ಬಾಳೆಹಣ್ಣನ್ನು ತಿನ್ನಲು ತಕರಾರಿಲ್ಲದೆ ಇದ್ದರೆ ಮಾವಿನ ಹಣ್ಣಿಗೇಕೆ ತಕರಾರು?

ಮಾವಿನ ಹಣ್ಣನ್ನು ತಿನ್ನುವ ಕಲೆ ತಿಳಿದಿರುವುದು ಕೆಲವರಿಗೆ ಮಾತ್ರ. ಇಡಿಯಾದ ಹಣ್ಣನ್ನು ಕತ್ತರಿಸದೆ ತಿಂದರಂತೂ ಆಗುವ ಪಾಡು ಗೊತ್ತೇ ಇದೆಯಲ್ಲ. ಮಾವಿನ ಹಣ್ಣಿನ ಕಲೆಯೂ ಸಹ ಸುಲಭವಾಗಿ ಹೋಗುವನ್ಥದ್ದಲ್ಲ. ಚಿಕ್ಕವನಿದ್ದಾಗ ಹಣ್ಣನ್ನು ತಿನ್ನುವಾಗ  ಅದರ ರಸ ಅಂಗೈಯಿಂದ ಹಿಡಿದು ಮೊಣಕಯ್ಯವರೆಗೂ ಬಂದು ಅಲ್ಲಿಂದ ತನ್ನ ದಿಕ್ಕನ್ನು ಬದಲಿಸಿ ಅಂಗಿಯ ಮೇಲೂ ಬಿದ್ದು, ಮುಂದುವರೆದು ಚಡ್ಡಿ ಪ್ಯಾಂಟಿ ನ ಮೇಲೆ ಎರಗಿದಾಗ ಮನೆಯಲ್ಲಿ ಅಮ್ಮನ ಕೈಯ್ಯಲ್ಲಿ ಹೊಡೆತ ತಿಂದ ಉದಾಹರಣೆಗಳು ಬಹಳ. ಹೇಗೆ ತಿಂದರೂ ತನ್ನ ಒಸರುವ ಬುದ್ಧಿ ಬಿಡದ ತುಂಟ ರಸ ಮೈ, ಬಟ್ಟೆ ಮೇಲೆ ಹರಿಯುವುದರಿಂದ ತಡೆಯಲು ಒಂದು ಮಾರ್ಗವಿದೆ. ಅದೆಂದರೆ ನಮ್ಮ ಪ್ರೀತಿಯ ಹಣ್ಣನ್ನು ನಮ್ಮೊಂದಿಗೆ ತಿನ್ನಲು ಕೊಂಡೊಯ್ಯುವುದು ಸ್ನಾನ ಗೃಹಕ್ಕೆ. ಶವರ್ ಅಡಿಯಲ್ಲಿ ನಿಂತು ತಿನ್ನಬೇಕು ಹಣ್ಣನ್ನು. ರಸ ತನಗೆ ಬೇಕಾದ ರೀತಿಯಲ್ಲಿ, ಬೇಕಾದ ಕಡೆ ಒಸರಿ ಕೊಳ್ಳಲಿ, ಹಾಡುತ್ತಾ ತಿಂದು, ಗೊರಟೆಯ ಬುಡ ಕಾಣುವವರೆಗೂ ಸರಿಯಾಗೇ ಚೀಪಿ ಶವರ್ ಆನ್ ಮಾಡಿದರೆ ಸಂಪೂರ್ಣ ಮುಕ್ತಿ ರಸದಿಂದ. ಹೇಗಿದೆ ಪ್ಲಾನು?