ಇವನ ಚೆಂದ ಸ್ವಲ್ಪ ನೋಡಿ…

ಜೀರುಂಡೆ ಯನ್ನು ಹಿಡಿದು ಕೊಂಡು ಗೂಡು ಸೇರಿದ ಈ ಬೆಟ್ಟದ ನೀಲಿ ಹಕ್ಕಿ (mountain bluebird), ಮನಸ್ಸು ಬದಲಾಯಿಸಿ ಜೀರುಂಡೆ ಯನ್ನು ಹೆಕ್ಕಿ ಹೊರ ಹಾರಲು ತಯಾರಾಗಿ ನಿಂತಿದ್ದಾನಂತೆ. ಎಷ್ಟು ಛಾನ್ದ್ ಅದಾನ್ ನೋಡಿ ಇವ. ಅಲ್ವರ?  ಇವ ‘ಇವನೋ’ ‘ಇವಳೋ’ ಅಂತ ನಿಂಗೆನ್ಗೊತ್ತು ಅಂತಾ ಮಾತ್ರ ಕೇಳ್ಬ್ಯಾಡಿ, ಹೀಗೇ ಜೇಡನ ಗುಡಿಸಲು ಗುಡಿಸುವಾಗ ಎಡವಿದ ತಾಣದಲ್ಲಿ ಇದರ ಉಲ್ಲೇಖ ಇತ್ತು, ವಿಧೇಯತೆಯಿಂದ ಭಟ್ಟಿ ಇಳಿಸಿದ್ದೇನೆ. Lee Rentz ರವರ “ನಿಸ (ಸ್ವ)ರ್ಗ’ ಸೀಮಿತ ಬ್ಲಾಗಿನಲ್ಲಿ  ಕಂಡದ್ದನ್ನು ದಾಖಲಿಸಿದ್ದೇನೆ. ಈ ಬ್ಲಾಗ್ ನಲ್ಲಿ ಅದ್ಭುತವಾದ ಚಿತ್ರಗಳಿವೆ, ನಿಸರ್ಗದ ಬಗೆಗಿನ ಪ್ರೀತಿ, ಆದರ ಉಕ್ಕಿ ಹರಿಯುತ್ತಿದೆ. ನಾವು ದೂರ ಹೋಗೋ ಮಾತಿರಲಿ, ಹಿತ್ತಲಿನ ಸೌಂದರ್ಯವನ್ನು ಆಸ್ಥೆಯಿಂದ ಗಮನಿಸಿದ್ದೇವೆಯೇ? ದಾಖಲಿಸಿದ್ದೇವೆಯೇ?

pic courtesy: http://leerentz.wordpress.com/2011/06/09/wenas-audubon-campout-chasing-birds-and-grasshoppers/

ಒಂದು ವಿಷ ವೃಕ್ಷ

ಒಂದು ವಿಷ ವೃಕ್ಷ

ನನ್ನ ಮಿತ್ರನೊಂದಿಗೆ ಮುನಿಸಿಕೊಂಡಿದ್ದೆ

ನನ್ನ ಮುನಿಸಿನ ಕಾರಣ ಅವನಿಗೆ ತಿಳಿಸಿದೆ

ನನ್ನ ಕೋಪ ತಣಿಯಿತು ಕೂಡಲೇ.

ನನ್ನ ಶತ್ರುವಿನೊಂದಿಗೆ ಕೋಪಗೊಂಡೆ

ಆದರೆ ಕೋಪದ ಕಾರಣ ನಾನವನಿಗೆ ಹೇಳಲಿಲ್ಲ,

ನನ್ನ ಕೋಪ ಹೆಚ್ಚುತ್ತಾ ಹೋಯಿತು.

ನಾನದನ್ನು ಭಯದೊಂದಿಗೆ ಪೋಷಿಸಿದೆ

ಹಗಲೂ ರಾತ್ರಿ

ನನ್ನ ಕಣ್ಣೀರೂಡಿಸಿ  

ಸೂರ್ಯನ ರಷ್ಮಿಯಂಥ ಮುಗುಳ್ನಗುವಿನೊಂದಿಗೆ  soft decetful vile

ಸೌಮ್ಯವಾದ ಕಪಟ ತಂತ್ರದೊಂದಿಗೆ.

ಅದು ದಿನ-ರಾತ್ರಿ ಬೆಳೆಯುತ್ತಾ ಹೋಯಿತು

ಬೆಳಗುವ ಸೇಬಿನ ಹಣ್ಣಾಗಿ ಫಲಿಸುವ ತನಕ  

ನನ್ನ ಶತ್ರು ಅದರ ಕಾಂತಿಗೆ ಮರುಳಾದ

ಹಣ್ಣು ನನ್ನದೆಂದು ಅವನಿಗೆ ತಿಳಿದಿತ್ತು.

ನನ್ನ ತೋಟದೊಳಕ್ಕೆ ಬಂದು

ಕದ್ದನು ಹಣ್ಣನ್ನು ಕಗ್ಗತ್ತಲ ಮರೆಯಲ್ಲಿ,  

ಉಲ್ಲಾಸದ ಮುಂಜಾನೆಯಲ್ಲಿ ನಾನು ನೋಡಿದಾಗ

ಅಂಗಾತ ಬಿದ್ದಿದ್ದ ಅವನು ಮರದ ಕೆಳಗೆ.

ಕವಿ ವಿಲ್ಲಿಯಂ ಬ್ಲೇಕ್ ಅವರ “a poison tree” ಕವನದ ಭಾವಾನುವಾದ

ನಗ್ನ ಪ್ರದರ್ಶನ

ಓರ್ವ ಮಹಿಳೆಯನ್ನು ನಗ್ನಳನ್ನಾಗಿಸಿ ಮರಕ್ಕೆ ಕಟ್ಟಿ ಹಾಕಿದ ದೃಶ್ಯ ನೋಡಿ ದಂಗಾದ ವ್ಯಕ್ತಿಯೊಬ್ಬ ಕೂಡಲೇ 911 ಕ್ಕೆ ಫೋನಾಯಿಸಿ ಪೊಲೀಸರನ್ನು ಕರೆಸುತ್ತಾನೆ. ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಅಲ್ಲೇ ಅಡ್ಡಾಡುತ್ತಿದ್ದ ಒಬ್ಬ ವ್ಯಕ್ತಿ ಕಾಣಲು ಸಿಗುತ್ತಾನೆ. ಅವನನ್ನೂ, ಮರಕ್ಕೆ ಕಟ್ಟಿ ಹಾಕಲ್ಪಟ್ಟ ನಿಸ್ಸಹಾಯಕ ನೀರೆಯನ್ನೂ ಪ್ರಶ್ನಿಸಿದಾಗ ಕೃತ್ಯ ಬಯಲಿಗೆ ಬರುತ್ತದೆ. ಇಬ್ಬರೂ ಹೇಳಿದ್ದು ಪರಸ್ಪರರ ಅನುಮತಿಯೊಂದಿಗೆ (consensual rendezvous) ನಗ್ನತೆಯ ಸರ್ಕಸ್ ಏರ್ಪಟ್ಟಿದ್ದು ಎಂದು. ಯಾರನ್ನೂ ಬಂಧಿಸದೆ ಪೊಲೀಸರು ಮರಳಿದರು ನಗ್ನ ಮಹಿಳೆಯ ಅಂಗಸೌಷ್ಟವನ್ನು ಕಣ್ಣಿನಲ್ಲಿ ತುಂಬಿಸಿಕೊಂಡು. ಇದು ನಡೆದಿದ್ದು ಅಮೆರಿಕೆಯ ವಾಷಿಂಗ್ಟನ್ ರಾಜ್ಯದ ಟಕೋಮ ನಗರದ ಒವೆನ್ ಬೀಚ್ ಏರಿಯಾದಲ್ಲಿ. ಅಮೇರಿಕಾ land of opportunities ಮಾತ್ರವಲ್ಲ land of whimsical ideas ಕೂಡಾ ಎಂದು ಮೇಲಿನ ಘಟನೆ ನಮಗೆ ತಿಳಿಸುತ್ತದೆ. ನಮ್ಮಲ್ಲಿ ಈ ತೆರನಾದ ಘಟನೆ ನಡೆದಿದ್ದರೆ ? ಈ ದೃಶ್ಯವನ್ನು ಕಂಡವ ಪೊಲೀಸರಿಗೆ ಫೋನಾಯಿಸುವ ಬದಲು ಅಲ್ಲೇ ಅಡ್ಡಾಡುತ್ತಿದ್ದ ಆಕೆಯ ಪ್ರಿಯಕರನನ್ನು ಮತ್ತೊಂದು ಕಂಬಕ್ಕೆ ಕಟ್ಟಿ ಹಾಕಿ “ಕನ್ಸೆನ್ಸುವಲ್ ರಾನ್ಡೇವೂ” ಸಾಹಸದ ನೈಜ ಪಾಠ ಹೇಳುತ್ತಿದ್ದನೋ ಏನೋ?

ಯೇಗ್ದಾಗೆಲ್ಲಾ ಐತೆ..ಓದಲೇಬೇಕಾದ ಪುಸ್ತಕ

ಯೇಗ್ದಾಗೆಲ್ಲಾ ಐತೆ, ಪುಸ್ತಕವನ್ನು ಮಂಗಳೂರಿನ ಕನ್ನಡ ಪುಸ್ತಕ ಪ್ರದರ್ಶನದಲ್ಲಿದ್ದ ಮಳಿಗೆಯೊಂದರಿಂದ ಖರೀದಿಸಿದೆ. ಮಾರಿದ ವ್ಯಕ್ತಿ ಪುಸ್ತಕದ ಬಗ್ಗೆ ಪ್ರಶಂಸೆಯ ಮಾತುಗಳನ್ನು ಹೇಳಿದ್ದರಿಂದಲೂ, ಪುಸ್ತಕ ನಿರೀಕ್ಷೆಗೆ ನಿಲುಕದೆ ಇದ್ದರೆ ಹೋಗುವುದು ಐವತ್ತು ರೂಪಾಯಿ ತಾನೇ ಎನ್ನವ nonchalant ಧೋರಣೆಯಿಂದ ಪುಸ್ತಕವನ್ನ ಖರೀದಿಸಿದೆ. ಹಳ್ಳಿಯ ಮಾಸ್ತರರೊಬ್ಬರ ಅನುಭವ ಕಥನ ಈ ಪುಟ್ಟ ಪುಸ್ತಕ. ಗ್ರಾಮವೊಂದರಲ್ಲಿ ಯೋಗಿಯೊಬ್ಬನೊಂದಿಗಿನ ತಮ್ಮ ಸ್ನೇಹದ ಬಗ್ಗೆ, ತಮಗಾದ ಅನುಭವದ ಬಗ್ಗೆ ಸರಳವಾಗಿ ಬರೆದಿದ್ದಾರೆ.  

ಮುಕುಂದನ ಹಳ್ಳಿಯ ಈ ಸ್ವಾಮೀ ಒಬ್ಬ ಸರಳ ಸನ್ಯಾಸಿ. ಕಳ್ಳ ಸನ್ಯಾಸಿ, ಭಂಗಿ, ಗಾಂಜಾ ಸೇದುವವನು, “ಭಕ್ತರ ಮನೆಯ ಮುದ್ದೆ, ಬಸವಿ ಮನೆಯ ನಿದ್ದೆ”….   ಹೀಗೇ ವಿನಾಕಾರಣ ಪುರಾವೆಗಳಿಲ್ಲದೆ ಅವರನ್ನು ಜನ ತೆಗಳಿದರೂ (ಯಾರೋ ಹೇಳಿದ್ದನ್ನು, ಹೇಳಿ ಕೊಟ್ಟಿದ್ದನ್ನು ನಂಬಿ prejudiced ಆಗೋ ವಿದ್ಯಾ?ವಂತ ಸಮೂಹ ನಮ್ಮ ನಡುವೆ ಇರುವಾಗ ಗ್ರಾಮಸ್ಥರ ವರ್ತನೆ ಬಗ್ಗೆ ಅಚ್ಚರಿ ಪಡಬೇಕಿಲ್ಲ ) ಅದ್ಯಾವುದನ್ನೂ ಕಿವಿಗೆ ಹಾಕಿ ಕೊಳ್ಳದೆ ಮೇಷ್ಟ್ರು ತಮ್ಮ ಸ್ನೇಹವನ್ನು ಅವರೊಂದಿಗೆ ಮುಂದುವರೆಸುತ್ತಾ ಬದುಕು ಒಂದು ಒಂದು ಭ್ರಮೆ ಎಂದು ಕಂಡು ಕೊಳ್ಳುತ್ತಾರೆ. 

ಮುಕುಂದನ ಹಳ್ಳಿಯ ಸ್ವಾಮಿಗಳಿಗೆ ಬದುಕಿನ ಬಗ್ಗೆ ಸರಳವಾಗಿ, ಜನರ ದೈನಂದಿನ ಬದುಕಿನೊಂದಿಗೆ ತಳುಕು ಹಾಕಿ ವಿನೋದವಾಗಿ, ಮನದಟ್ಟಾಗುವಂತೆ ಹೇಳುವ ಸಾಮರ್ಥ್ಯ ತಮ್ಮ ಅಲೆದಾಟದಷ್ಟೇ ಸುಲಭ. ಒಮ್ಮೆ  ವ್ಯಕ್ತಿಯೊಬ್ಬ ಬಂದು ಯಾರೋ ಸತ್ತು ಹೋದರು ಎನ್ನುವ ಸುದ್ದಿಯನ್ನ ಇವರಿಗೆ ತಲುಪಿಸುತ್ತಾನೆ. ಸತ್ತು ಹೋದ ಎನ್ನುವ ಪದ ಕೇಳಿದ ಕೂಡಲೇ ಹೌಹಾರಿದಂತೆ ನಟಿಸಿದ ಸ್ವಾಮಿಗಳು, ಅದ್ಹೇಗಯ್ಯಾ, ಅವನೆಲ್ಲಾದರೂ ಸತ್ತು ಹೋಗಲು ಸಾಧ್ಯವೇ ಎಂದು ಕೇಳುತ್ತಾರೆ. ಸ್ವಾಮಿಗಳ ಈ ಪ್ರಶ್ನೆಯ ಮರ್ಮ ಅರಿಯದ ಹಳ್ಳಿಗ ಮತ್ತಷ್ಟು ವಿವರಿಸುತ್ತಾನೆ. ಆದರೂ ಸ್ವಾಮಿ ಜಪ್ಪಯ್ಯ ಅನ್ನುವುದಿಲ್ಲ. ಎಲ್ಲಾದರೂ, ಯಾರಾದರೂ ಸತ್ತು ಹೋಗೋದಿದೆಯೇ? ಇಷ್ಟೆಲ್ಲಾ ವರ್ಷ ಬಾಳಿ  ಬದುಕಿದವನು ಅಷ್ಟು ಸಲೀಸಾಗಿ “ಸತ್ತು ಹೋಗು” ವನೆ? ಎಂದು ಕೇಳಿ ಅವನನ್ನು ಮತ್ತಷ್ಟು ಗಲಿಬಿಲಿಗೊಳಿಸುತ್ತಾರೆ.  “ಸತ್ತು ಹೋಗು’ ಎನ್ನುವ ಪದದ ಹಿಂದಿನ ಗೂಢಾರ್ಥವನ್ನು ಸ್ವಾಮಿಗಳಂಥ ವರಿಗೆ ಅರಿಯುವುದು ಸುಲಭ. ಉಸಿರಾಟ ನಿಂತು ಬಿಟ್ಟರೆ ಅವನು ಸತ್ತ ಎಂದು ಬಗೆಯುವ ಹಳ್ಳಿಯ ನಿರಕ್ಷರ ಕುಕ್ಷಿಗೆ ಹೇಗೆ ತಾನೇ ತಿಳಿಯಬೇಕು ಸಾವು ಮತ್ತೊಂದು ಬದುಕಿನೆಡೆಗಿನ ಪಯಣ ಎಂದು ? ಹೌದಲ್ಲವೇ? ದೀರ್ಘಾವಧಿ ಬಾಳಿ ಬದುಕಿದ  ಮಾಡಬೇಕಾದ್ದನ್ನೂ, ಮಾಡಬಾರದ್ದನ್ನೂ ಎಲ್ಲಾ ಮಾಡಿದ ಮನುಷ್ಯ ಸದ್ದಿಲ್ಲದೇ “ಸತ್ತು ಹೋಗಲು” ಹೇಗೆ  ಸಾಧ್ಯ? ಬದುಕಿನ ಮತ್ತು ಸಾವಿನ ನಿಜರೂಪವನ್ನು ಸ್ವಾಮಿಗಳು ಲೀಲಾಜಾಲವಾಗಿ ನಗುತ್ತಾ ಹಾಸ್ಯದಿಂದ ವಿವರಿಸುತ್ತಾರೆ ಸಾವಿನ ಸುದ್ದಿ ತಂದಾತನಿಗೆ.

ನದಿಯಲ್ಲಿ ನೀರಿನ ಹರಿವನ್ನು ನೋಡುತ್ತಾ, ಅದರೊಂದಿಗೆ ಹೊರಡುವ ನೀರ ಗುಳ್ಳೆಗಳೂ ಸ್ವಾಮಿಗಳ ಆಸಕ್ತಿ,  ಕಲ್ಪನೆಯನ್ನು ಹಿಡಿದಿಡುತ್ತವೆ. ಕ್ಷಣ ಮಾತ್ರ ಬದುಕುವ ಆ ಗುಳ್ಳೆಗಳ ಹಿಂದಿನ ಮರ್ಮವನ್ನೂ, ನಮ್ಮ ಬದುಕಿನ ಟೊಳ್ಳುತನ ದೊಂದಿಗೆ ಹೋಲಿಸಿ ಗಾಂಭೀರ್ಯ ಮಿಳಿತ ನಗುವಿನೊಂದಿಗೆ ಬಿಡಿಸಿ ಹೇಳುತ್ತಾರೆ. ಒಟ್ಟಿನಲ್ಲಿ ಒಂದು ಚೆಂದದ ಪುಟ್ಟ ಪುಸ್ತಕ.  ಒಂದು ರೀತಿಯಲ್ಲಿ reader’s digest ಓದಿದ ಹಾಗುತ್ತದೆ ಸ್ವಾಮಿಗಳ ಮಾತು, ಅನುಭವ ನೋಡಿದಾಗ. ಇಂಥ ನಿಸ್ವಾರ್ಥಿ ಸಾಧಕರಿಂದಲೇ ಇರಬೇಕು ನಮ್ಮ ಸಮಾಜ ಒಳ್ಳೆಯತನವನ್ನು ತನ್ನಲ್ಲಿ ಇನ್ನೂ ಉಳಿಸಿಕೊಂಡು ಬರುತ್ತಿದೆ. ಆದರೆ ಇವರುಗಳ ಸಂಖ್ಯೆ ಕ್ಷೀಣಿಸುತ್ತಿರುವುದೂ ಸಹ ತುಂಬು ಬದುಕು ಸಾಗಿಸಿದ ಸ್ವಾಮಿಗಳ ಮಾತುಗಳಷ್ಟೇ ಸತ್ಯ.

ಮನುಷ್ಯರೆಲ್ಲರೂ ಸಮಾನರು ಎಂದು ಸ್ವಾಮಿಗಳು ಹೇಳುವ ರೀತಿ ಇಲ್ಲಿದೆ ನೋಡಿ;

“ಊರು ಕೇರಿ, ಕುಲ ಗೋತ್ರ ಹೆಣ್ಣು ಗಂಡು ಎಲ್ಲಾ ಇಂಗಡಿಸ್ತಾರೆ. ನಾವು ಶಿವಾಚಾರ್ದೋರು, ನಾವು ದೇವಾಂಗ ದೋರು, ನಾವ್ ಬ್ರಾಮಣರು, ಅದರಾಗ್ ಮತ್ತೆ ನಾಮ್ದೋರು, ಅಡ್ಡ ಗಂಧದೋರು, ಮುದ್ರೆರು, ಅವ್ರು ಇವ್ರು ಒಬ್ಬರನ್ನ ಕಂಡ್ರೆ ಒಬ್ರು ಮಾರು ದೂರ ಹೋಗ್ತಾರೆ. ಮಾಡಿ ಮೈಲಿಗೆ ಅಂತಾರೆ, ನಗು ಬರ್ತೈತೆ……..ಈ ಮುದ್ರೆ, ವಿಭೂತಿ ಎಲ್ಲಾ ಅಷ್ಟೇ. ಬಾರೆ ಹೊರಗಳ ಯಾಪಾರ ಹಿಡಿದು ಬಡಿದಾಡ್ತಾರೆ” ಈ ಮಾತನ್ನು ಆಧುನಿಕ ಸ್ವಾಮಿಗಳಿಗೆ ಕೇಳಿಸಿದರೆ ಯಾವ ಉತ್ತರ ಸಿಗಬಹುದೋ?    

ಸ್ವಾಮಿಗಳ  ಕೆಲವೊಂದು ಸಂಗತಿಗಳು ಉತ್ಪ್ರೇಕ್ಷೆ ಎಂದು ತೋರಿದರೂ ಈ ಭಾವನೆ ಮತ್ತು ದಂತ ಕಥೆಗಳು ದೇವ ಮಾನವರಿಗೆ ಜನ ಅಂಟಿಸಿಯೇ ತೀರುತ್ತಾರೆ. ಅವನು ಕುಡುಕ, ಭಂಗಿ, ಗಾಂಜಾ ಹಾಕುವವನು ಎಂದೆಲ್ಲಾ ಜರೆಯುವ ಅದೇ ಬಾಯಿ ಅವರ ಪವಾಡಗಳ ಬಗ್ಗೆಯೂ ಭಯ ಭಕ್ತಿಯಿಂದ ಮಾತನಾಡುತ್ತಾರೆ, ಅದೇ ಸೋಜಿಗ.

ಹಳ್ಳಿಗಳಲ್ಲಿ ಈಗ ಅಪರೂಪವಾಗುತ್ತಿರುವ ಸಾಮರಸ್ಯದ ಜೀವನ ಸಹ ಈ ಮೇಷ್ಟರ ನೆನಪಿನಂಗಳದಿಂದ ಮರೆಯಾಗುವುದಿಲ್ಲ. ಮುಸ್ಲಿಮರಾದರೂ ಹಯಾತ್ ಸಾಹೇಬರು ಹಳ್ಳಿಯಲ್ಲಿನ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕೊಡುತ್ತಿದ್ದ ಸಹಾಯ, ಗ್ರಾಮಸ್ಥರ ಮೂಢ ನಂಬಿಕೆಗಳು ಹೀಗೇ ಹತ್ತು ಹಲವು ವಿಚಾರಗಳನ್ನು ಜೋಪಾನದಿಂದ ಓದುಗರಿಗಾಗಿ ಕಾಯ್ದುಕೊಂಡು ನಮ್ಮ ಕೈಗಳಿಗರ್ಪಿಸಿದ ಕೃಷ್ಣ ಶಾಸ್ತ್ರಿಗಳು ಮಹದುಪಕಾರವನ್ನೇ ಮಾಡಿದ್ದಾರೆ ಈ ಪುಸ್ತಕ ಬರೆಯುವ ಮೂಲಕ. ಈ ಪುಸ್ತಕ ಆಂಗ್ಲ ಭಾಷೆಗೆ ತರ್ಜುಮೆಗೊಂಡಿದೆಯೋ ಗೊತ್ತಿಲ್ಲ. ತರ್ಜುಮೆ ಆಗದ ಪಕ್ಷದಲ್ಲಿ ಯಾರಾದರೂ ಈ ಮಹತ್ಕಾರ್ಯಕ್ಕೆ ಕೈ ಹಾಕಿದರೆ ಈ ಪುಸ್ತಕ ಹಿಟ್ ಆಗುವುದರಲ್ಲಿ ಸಂಶಯವಿಲ್ಲ.   

ಒಬ್ಬ ನಿರಕ್ಷರಕುಕ್ಷಿ ಆದರೆ ಬದುಕಿನ ನಿಜವಾದ ಪಾಠದಲ್ಲಿ ಅದ್ವಿತೀಯ professor ಆದ ಸ್ವಾಮಿಯೊಬ್ಬರ ಪರಿಚಯ ನನ್ನಲ್ಲಿ ಒಂದು ಅವರ್ಣನೀಯವಾದ ಭಾವವನ್ನೇ ಸೃಷ್ಟಿಸಿತು. ರಾಜಕಾರಣಿಗಳ ಒಡನಾಟದಿಂದ ನಾಡಿನ ಸಂಪನ್ಮೂಲ ಲೂಟಿ ಮಾಡುವ ಕೆಲವು ಸ್ವಾಮಿಗಳಿಗೂ ಈ ಮುಕುಂದೂರಿನ ಸ್ವಾಮಿಗೂ ಎತ್ತಣ ಸಂಬಂಧ ಎಂದು ತೋರಿದರೂ ಆಶ್ಚರ್ಯವಿಲ್ಲ. ಒಬ್ಬ ಅಹಂಕಾರಿ, ಸ್ವಾಮಿಯೊಬ್ಬ ತನ್ನ ಮಠಕ್ಕೆ ಬಂದು ಪೊಗರು ತೋರಿಸಿದರೂ ತನ್ನ ಸಂಸ್ಕೃತಿ ಕಲಿಸಿದ ವಿನಯ ವಿಧೇಯತೆ ಯನ್ನ ಮೋಹಕವಾಗಿ ಪ್ರದರ್ಶಿಸಿ ಮನಃಪೂರ್ವಕ ಆ ಸ್ವಾಮಿಯ ಸೇವೆ ಮಾಡುವ ಇವರ ಉದಾತ್ತ ಸಂಸ್ಕಾರ ನಮ್ಮನ್ನು ನಿಬ್ಬೆರಗಾಗಿಸುತ್ತದೆ. ಅಹಂಕಾರಿಗೆ ಅಹಂಕಾರವೇ ಉತ್ತರ ಎನ್ನುವ ನಮಗೂ ಆ ಸ್ವಾಮಿಗೂ ಇರುವ ವ್ಯತ್ಯಾಸ ನೋಡಿ.

ನನ್ನ ಆಸಕ್ತಿಯನ್ನು ಈ ಪುಟ್ಟ ಪುಸ್ತಿಕೆ ಈ ರೀತಿ ಹಿಡಿದಿಡುತ್ತದೆ ಎಂದು ಪುಸ್ತಕ ಕೊಂಡಾಗ ನನಗನ್ನಿಸಿರಲಿಲ್ಲ. ಸಾಧು ಸಂತರ ಬಗ್ಗೆ ದೊಡ್ಡ ಒಲವು ಆಸಕ್ತಿ ಇಲ್ಲದ ನನಗೆ ಒಬ್ಬ ಸಾಧಾರಣ, ಪ್ರಚಾರ ಫಲಾಪೇಕ್ಷೆ ಬೇಡದ ಸ್ವಾಮಿಯೊಬ್ಬರ ಪರಿಚಯ ಆದದ್ದು ಒಂದು ಅಪರೂಪದ ಅನುಭವವೇ ಸರಿ. ಕೊನೆಯದಾಗಿ ಇಲ್ಲಿದೆ ಮತ್ತೊಂದು ಬದುಕನ್ನು ಸಕರಾತ್ಮಕವಾಗಿ ಕಾಣಬೇಕೆಂದು ಹೇಳುವ ಮಾತು.

ಒಮ್ಮೆ ತನ್ನ ಮೂರು ವರ್ಷದ ಮಗು ಗುಲಾಬಿ ಕೀಳಲು ಗಿಡದ ಕಡೆ ಹೋಗುತ್ತಿದ್ದನ್ನು ಕಂಡ ಮಗುವಿನ ತಾಯಿ “ಅಯ್ಯೋ, ಅಯ್ಯೋ, ಮುಳ್ಳು, ಮುಳ್ಳು, ಮುಟ್ಟಬೇಡ ಎಂದು ಮಗುವನ್ನು ತಡೆದುದನ್ನು ಕಂಡ ಸ್ವಾಮಿಗಳು ಹೇಳಿದ್ದು, ಅಮ್ಮಯ್ಯಾ, ಆ ಮಗುವಿಗೆ ಹೂವಿನ ಗಿಡದಾಗೆ ಮುಳ್ಳು ಐತೆ ಅಂತ ಹೇಳ್ಕೊಡಬ್ಯಾಡ, ಮುಳ್ಳಿನ ಗಿಡ್ಯಾಗೆ ಹೂ ಐತೆ ಅಂತ ಹೇಳ್ಕೊಡಬೇಕು ಎಂದು ನಗುತ್ತಾ ಹೇಳುತ್ತಾರೆ. ಈ ಮಾತು ನಾವು ಕಲಿತ “half glass full” ಗಿಂತ ಮನೋಹರವಾಗಿಲ್ಲವೇ?

ಪರೋಪಕಾರಿ ವೃಕ್ಷ

ಪಡ್ಡೆ ಹುಡುಗ ಹುಡುಗಿಯರು ಸೀಬೆ, ಮಾವಿನ ಮರ ಹತ್ತಿ ಟೊಂಗೆಗಳನ್ನು ತಮ್ಮತ್ತ ಎಳೆದು ಮರದ ಕೈಕಾಲುಗಳ ನ್ನು ಘಾಸಿ ಮಾಡುವುದನ್ನು ಕಂಡ ಒಂದು ಮರ ತನ್ನದೇ ಆದ ವಿಶಿಷ್ಟ ವಿಧಾನದಲ್ಲಿ ಕಳ್ಳ ಕಳ್ಳಿಯರಿಗೆ ಅನುಕೂಲವಾಗುವಂತೆ ಹಣ್ಣುಗಳನ್ನು ತನ್ನ ಮೈಮೇಲೆ ಬೆಳೆಸಿಕೊಂಡು ಮುಕ್ತ ಆಹ್ವಾನವೀಯುತ್ತದೆ ಲೂಟಿ ಮಾಡಿ ಕೊಳ್ಳಿ ಎಂದು. ಎಂಥ samaritan ಮರ ನೋಡಿ. ಎಲ್ಲಿದೆ ಆ ಮರ, ಎಂದು ಆಸೆ ಬುರುಕತನದಿಂದ ಕೇಳಬೇಡಿ. ಈ ಮರದ ತವರು ಸಾಗರದಾಚೆ. ಹಾಂ, ಸಾಗರದಾಚೆಯೋ? ಹಾಗಾದರೆ ಸಂಜೀವಿನಿಗಾಗಿ ಸಾಗರೋಲ್ಲಂಘನ ಮಾಡಿದ ಹನುಮಂತನ ಒಂದು ಟ್ರಿಕ್ ಪ್ರಯೋಗಿಸಿದರೆ ಹೇಗೆ? ಯಾವ ಉಲ್ಲಂಘನ ಬೇಕಾದರೂ ಮಾಡಿಕೊಳ್ಳಿ, ನನ್ನ ಕೈ ಕಾಲಿಗಲ್ಲವಲ್ಲಾ ಆಗೋದು ಬ್ಯಾನೆ.

ಹುಲು ಮನುಜರಿಗೆ ಒಂದು ತವರಾದರೆ ಈ ಪರೋಪಕಾರಿ ಮರಕ್ಕೆ ಹಲವು ತವರುಗಳು. ಪೆರಗ್ವೆ, ಅರ್ಜೆಂಟೀನ, ಬ್ರೆಜಿಲ್ ದೇಶಗಳಲ್ಲಿ ಕಾಣಸಿಗುವ ಈ ಮರ ಬರೀ ಪೋಕರಿಯರಿಗೆ ಮಾತ್ರ ಉಪಕಾರಿಯಲ್ಲ, ಔಷಧೀ ಗುಣಗಳನ್ನೂ ಸಹ ಹೊಂದಿದೆ. ಅಸ್ತಮಾ, ಆಮಶಂಕೆ ಮುಂತಾದ ರೋಗಗಳಿಗೆ ಇವು ರಾಮಬಾಣವಂತೆ. ಕ್ಯಾನ್ಸರ್ ರೋಗಕ್ಕೂ ಇದರ ಟೊಂಗೆಯಲ್ಲಿ ಉತ್ತರ ಇರಬಹುದು ಎಂದು ಲೆಕ್ಕಾಚಾರ. ಪುಕ್ಕಟೆ ಏನಾದರೂ ಸಿಗುತ್ತೆ ಎಂದರೆ ಜೋರಾಗಿಯೇ ಸಾಗುತ್ತದೆ ಲೆಕ್ಕಾಚಾರ, ಅಲ್ಲವೇ?

ಇನ್ನಷ್ಟು ಚಿತ್ರಗಳಿಗೆ ಕೆಳಗೆ ತೋರಿಸಿದ ತಾಣಕ್ಕೆ ಯಾತ್ರೆ ಬೆಳೆಸಿ:

http://www.kuriositas.com/2010/04/jabuticaba-tree-that-fruits-on-its.html