ನಾರ್ವೆ ದೇಶದಲ್ಲಿ ನಡೆದ ಸಾಮೂಹಿಕ ನರಸಂಹಾರಕ್ಕೆ ಒಂದು ವರ್ಷ

ನಾರ್ವೆ ದೇಶದಲ್ಲಿ ನಡೆದ ಸಾಮೂಹಿಕ ನರಸಂಹಾರಕ್ಕೆ ಒಂದು ವರ್ಷ ತುಂಬಿತು. ನಾರ್ವೆಯ ರಾಜಧಾನಿ ಮತ್ತು ಪಕ್ಕದ ದ್ವೀಪದ ಮೇಲೆ Anders Behring Breivik  ನಡೆಸಿದ ಭೀಕರ ಬಾಂಬ್ ಸ್ಫೋಟ ಮತ್ತು ಗುಂಡಿನ ಧಾಳಿಯಲ್ಲಿ ಸತ್ತವರು ೬೯ ಅಮಾಯಕ ಜನ. ಅದರಲ್ಲಿ ಬಹುತೇಕ ಹದಿಹರೆಯದ ಯುವಕ ಯುವತಿಯರು. ವಿಶ್ವವೇ ಬೆಚ್ಚಿ ಬೆರಗಾದ ಈ ನರಹತ್ಯೆ ನರಹನ್ತಕನಲ್ಲಿ ಯಾವುದೇ ಭಾವನೆಯನ್ನೂ ಹುಟ್ಟಿಸಲಿಲ್ಲ. ಮಂದಸ್ಮಿತನಾಗಿ, ಪೊಲೀಸರಿಗೆ ಶರಣಾದ, ಸಮಯ ಸಿಕ್ಕಿದ್ದಿದ್ದರೆ ಇನ್ನಷ್ಟು ಜನರನ್ನು ಕೊಲ್ಲುತ್ತಿದ್ದೆ ಎಂದೂ ಹೇಳಿದ ಈ ಕಟುಕ. ಇವನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗಳೂ ಈತನದು ಭಂಡ defiant  ನಿಲುವು. ಈತ white  supremacist . ಈ ಖಾಯಿಲೆಯೇ ೬೦ ರಿಂದ ೮೦ ಲಕ್ಷ ಯಹೂದ್ಯರನ್ನು ಮಾರಣ ಹೋಮ ಮಾಡಲು ಹಿಟ್ಲರ್ ನನ್ನು ಪ್ರಚೋದಿಸಿದ್ದು. anders ನ ಕ್ರೌರ್ಯಕ್ಕೆ ಬಲಿಯಾದ ಯುವಜನರ ಅಪರಾಧ ಏನೆಂದರೆ ಅವರು palestine ದೇಶದ ಸ್ವಾತಂತ್ರ್ಯಕ್ಕಾಗಿ ಹಂಬಲಿಸಿದ್ದು ಮತ್ತು ನಾರ್ವೆ ದೇಶಕ್ಕೆ ಬರುವ ವಲಸಿಗರನ್ನು ಬೆಂಬಲಿಸಿದ್ದು.

ಈ ತೆರನಾದ ನರಸಂಹಾರಕ್ಕೆ ಕಾರಣನಾದವನನ್ನು ಗಲ್ಲಿಗೆ ಏರಿಸೋಲ್ಲವಂತೆ ನಾರ್ವೆ ದೇಶ. ಗಲ್ಲು ಶಿಕ್ಷೆ ಈ ದೇಶದಲ್ಲಿ ಇಲ್ಲ. ಇವನಿಗೆ ಹೆಚ್ಚೆಂದರೆ ೨೧ ವರ್ಷ ಜೈಲು ಶಿಕ್ಷೆ. ಬಿಡುಗಡೆಯಾಗುವಾಗ ಅವನಿಗೆ ಇನ್ನೂ ಮಧ್ಯ ವಯಸ್ಸು ಆರಂಭ ವಾಗಿರುತ್ತದೆ ಅಷ್ಟೇ. ಈ ಹಿಂಸೆಯಲ್ಲಿ ಜೀವ ಕಳಕೊಂಡವರ ಹೆತ್ತವರು, ಸಂಬಂಧಿಕರು ಅಸಾಧಾರಣ ತಾಳ್ಮೆ ಪ್ರದರ್ಶಿಸಿದರು ಈ ಕಟುಕನನ್ನು ವಿಚಾರಣೆಗೆ ತಂದಾಗ. ಇವನ ಕಡೆ ಕಣ್ಣೆತ್ತಿ ಸಹ ನೋಡಲಿಲ್ಲ, ನೀನು ನಮ್ಮ ಪಾಲಿಗೆ ಅಸ್ತಿತ್ವದಲ್ಲಿಲ್ಲದ ಜೀವಿ ಅಷ್ಟೇ ಎಂದು ಪರೋಕ್ಷವಾಗಿ ಹೇಳಿದರು ಜನ. ಧ್ವೇಷಗ್ರಸ್ಥ, ಹಗೆ ವರ್ತಕ ಸಮೂಹಕ್ಕೆ ನಾಗರೀಕ ಸಮಾಜ ನಡೆಸಿಕೊಳ್ಳ ಬೇಕಾದ ತಕ್ಕುದಾದ ನಡವಳಿಕೆ. ಇನ್ನು ಈತ ತನ್ನ ದಿನಗಳನ್ನು ಕಳೆಯಬೇಕಾದ ಜೈಲಿನ ಕತೆ ಹೀಗೆ. ನಾರ್ವೆ ದೇಶದ ಜೈಲುಗಳು ಪ್ರಪಂಚದ ಲ್ಲೇ ಅತ್ಯಂತ ಸುಖಕರ ಜೈಲುಗಳಂತೆ. ಕೈದಿಗಳಿಗೆ ಬೇಸರವಾದಾಗ ಅಧಿಕಾರಿಗಳು ಹೊರಗಿನಿಂದ ಅವನಿಗೆ ಮಿತ್ರರನ್ನು ಹೊಂದಿಸುತ್ತಾರಂತೆ. ಎಂದಿಗೂ ಅಪರಾಧಿ ಏಕಾಂತದಲ್ಲಿ ಇದ್ದು ಬಳಲಬಾರದಂತೆ. ಏಕಾಂಗಿತನ ಕ್ರೌರ್ಯವಂತೆ.  ವಾಹ್, ಎಂಥಾ ವ್ಯವಸ್ಥೆ.  ಇಷ್ಟೆಲ್ಲಾ ಅನುಕೂಲ ನಮಗೆ ನಮ್ಮ ಮನೆಯೊಳಗೂ ಸಿಗಲಿಕ್ಕಿಲ್ಲ.

ಈ ತಿಂಗಳು ನಿನಗೆ ಸಿಗುತ್ತೆ ಕೋಟಿ

ಜೂನ್, ಜುಲೈ ತಿಂಗಳಿನಲ್ಲಿ ಭಾರತದಲ್ಲಿದ್ದಾಗಿನ ಅನುಭವ. ಪ್ರತೀ ಸಲ ಬಂದಾಗ ವಿಶೇಷ ಇದ್ದೇ ಇರುತ್ತೆ.  ನನಗೆ ಕಾಣುವ ವಿಶೇಷ ಅಲ್ಲಿನ ಜನರಿಗೆ (ಭಾರತೀಯರಿಗೆ) ವಿಶೇಷವೇನೂ ಅಲ್ಲ. ಆದರೆ ನನ್ನಂಥ, ಬದುಕಿನ ಬಹುಪಾಲು ಹೊರದೇಶದಲ್ಲಿ ಕಳೆಯುವ ಅನಿವಾಸಿಗಳಿಗೆ ಇಲ್ಲಿಯ ಪ್ರತೀ ಕ್ಷಣವೂ ರೋಚಕ, ಕುತೂಹಲಭರಿತ. ಭಾರತದಲ್ಲಿ ಇರುವಷ್ಟು ದಿನ ಪ್ರತೀ ಕ್ಷಣವನ್ನು ಆಸ್ವಾದಿಸಿ ಮನಸು ಹಗುರಾಗುವ ಸವಿ ನೆನಪುಗಳೊಂದಿಗೆ, ವಿದಾಯ ನೀಡುವ ಭಾರವಾದ ಹೃದಯದೊಂದಿಗೆ ಮರಳುತ್ತಾನೆ ಅನಿವಾಸಿ ಪೆವಿಲಿಯನ್ ಗೆ. ಹಾಗಂತ ನಮಗೆ ಕಾಣ ಸಿಗುವುದೆಲ್ಲಾ ರೋಚಕವೋ, ಅವಿಸ್ಮರಣೀಯವೋ ಆಗಬೇಕೆಂದಿಲ್ಲ. ಆದರೆ ಕೆಲವೊಂದು ಮೋಸ ಹೋಗುವ ಕಹಿ ಘಟನೆಗಳ ಹಿಂದೆಯೇ ಹೇ, ನಿಲ್ಲು ಅನಿವಾಸಿ, ಭಾರತ ಇಷ್ಟೇ ಅಲ್ಲ, ಇನ್ನೂ ಬೇಕಷ್ಟಿದೆ ಅವಳ ಮಡಿಲಲ್ಲಿ ಎಂದು ಕೈ ಬೀಸಿ ಕರೆದು ಮನಸ್ಸನ್ನು ಮುದ ಗೊಳಿಸುವ ಅನುಭವಗಳೇ ಹೆಚ್ಚು ಎಂದು ಸುಲಭವಾಗಿ ಹೇಳಬಹುದು.

ಬೆಂಗಳೂರಿನಲ್ಲಿ ಮಿತ್ರರು ಇರುವುದರಿಂದ ಭೇಟಿ ಅನಿವಾರ್ಯ. ನನ್ನ ಕಾರಿನಲ್ಲಿ ಬಂದಿದ್ದರೂ ಬೆಂಗಳೂರ ತುಂಬಾ ಗುಂಡಿ ತೋಡಿ ಅಲ್ಲಿ ಇಲ್ಲಿ ಎಂದು ಸಿಕ್ಕ ಸಿಕ್ಕಲ್ಲಿ deviation ಗಳಿದ್ದರಿಂದ ಕಾರನ್ನು ಮಿತ್ರನ ದ್ಮನೆಯ ಹತ್ತಿರ ಪಾರ್ಕ್ ಮಾಡಿ ಯಾರನ್ನೋ ಕಾಣಲೆಂದು ರಿಕ್ಷಾ ಹಿಡಿದೆ. ಈಗ ರಿಕ್ಷಾಗಳ ಬಣ್ಣ ಬೇರೆಯಾಗಿ ಬಿಟ್ಟಿದೆ. ವನಸಿರಿಯ ಹಸಿರು ಬಣ್ಣ ಬಳಿದು ಕೊಂದು ಸ್ವಲ್ಪ ಆಹ್ಳದಕರವಾಗಿ ಕಾಣುತ್ತಿವೆ ರಿಕ್ಷಾಗಳು. ಆದರೆ ಅದರೊಂದಿಗೆ ಅವುಗ್ಲಾ ಚಾಲಕರೂ ತಮ್ಮ ಸುಲಿಯುವ ಅಭ್ಯಾಸದಲ್ಲಿ ಸ್ವಲ್ಪವೂ ಸುಧಾರಣೆ ಮಾಡಿ ಕೊಂಡಿದ್ದು ನನ್ನ ಅನುಭವಕ್ಕೆ ಬರಲಿಲ್ಲ. ಯಾವ ರಿಕ್ಷಾ ಚಾಲಕನನ್ನು ಸಂಪೂರ್ಣ ನಂಬಿ ಚೌಕಾಶಿ ಮಾಡದೆ, ಇವನು ಸುತ್ತಿಸುತ್ತಿದ್ದ ಜಾಗಗಳ ಬಗ್ಗೆ ತಂಟೆ ತಕರಾರು ಮಾಡದೆ ಕೂತರೂ ಸುಲಿಗೆ ಮಾತ್ರ ಬಿಡುತ್ತಿರಲಿಲ್ಲ. ಇರಲಿ ಪರವಾಗಿಲ್ಲ. ಏಕೆಂದರೆ ಅವನೆಷ್ಟೇ ಸುಲಿಗೆ ಮಾಡಿದರೂ ರೂಪಾಯಿ ಯನ್ನು ರಿಯಾಲ್ ನೊಂದಿಗೆ ಭಾಗಿಸಿದಾಗ ಯಾಗುವ ನಷ್ಟ ಜುಜುಬಿ. ಅಂಬೇಡ್ಕರ್ ಮೆಡಿಕಲ್ ಕಾಲೇಜಿನಿಂದ, ಪಿಳ್ಳಣ್ಣ ಗಾರ್ಡನ್ ಗೆ ಬರಬೇಕಿತ್ತು. ರಿಕ್ಷಾ ಹಿಡಿದೆ. ಸಭ್ಯ ಚಾಲಕ, ಇಂಗ್ಲೀಷ ಸಹ ಮಾತನಾಡುತ್ತಿದ್ದ. ಹೆಸರು ಥಾಮಸ್. ಇಂಥ ಕಡೆ ಹೋಗ್ಬೇಕು ಎಂದಾಗ ಕೂರಿಸಿ ಕೊಂಡು ಹೊರಟ. ಸ್ವಲ್ಪ ದೂರ ಹೋಗುತ್ತಲೇ ತಿಳಿಯಾಯಿತು ನಾನೀಗ  round  the  world  ಟ್ರಿಪ್ ಮೇಲೆ ಹೊರಟಿದ್ದೇನೆಂದು. ಆಟೋದವರ public  relations ಸ್ಕಿಲ್ ಗಳು ಜನಜನಿತ ವಾದ್ದರಿಂದ ಹೆಚ್ಚು ಮಾತನಾಡದೆ ಸುತ್ತಾ ಮುತ್ತಾ ನೋಡ ತೊಡಗಿದೆ. ಕೆಲವೊಮ್ಮೆ ನಾವು ಮೋಸ ಹೋಗುತ್ತಿದ್ದೇವೆ ಎನ್ನುವ ಅರಿವು ಇದ್ದರೂ ಪ್ರತಿಭಟಿಸಲು ನಾಲಗೆಯೇ ಏಳೋಲ್ಲ. ಒಂದು ತೆರನಾದ hypnotic ಅನುಭವ. ನನಗಂತೂ ಈ ಅನುಭವ ಆಗುತ್ತಲೇ ಇರುತ್ತೆ, ಆದರೂ ಏನೂ ಮಾತನಾಡೋಲ್ಲ. ಗುರಿ ಮುಟ್ಟಿದ ನಂತರ hypnotism ನ ನಶೆ ಇಳಿದ ನಂತರ ಛೇ, ನಾನೆಂಥ ಹೆಡ್ಡ ಎಂದು ತಲೆಯನ್ನು ಚಚ್ಚಿ ಕೊಂಡು ಸುಮ್ಮನಿರುತ್ತಿದ್ದೆ.  ಆಟೋ ಚಲಾಯಿಸುತ್ತಾ ಗಾಯಕ್ಕೆ ಉಪ್ಪು ಹಚ್ಚುವಂತೆ ಈತ ಹೇಳಿದ, just  sit and relax , i  am very honest  person you  know  ಎಂದು ನನ್ನನ್ನು ತಬ್ಬಿಬ್ಬು ಮಾಡಿದ. ಅವನ ಈ ಮಾತು ಸಹನೆಯ ಶವ ಪೆಟ್ಟಿಗೆ ಮೇಲಿನ ಕೊನೆಯ ಮೊಳೆಯಾದರೂ ಯಾರೋ, ಅವನ ತಾತನ ಬಗ್ಗೆ ಹೇಳುತ್ತಿರಬೇಕು ಪಾಪ ಎಂದು ತೆಪ್ಪಗೆ ಕೂತೆ. ಪಿಳ್ಳಣ್ಣ ಗಾರ್ಡನ್ ಬಂತು. ಮೀಟರ್ ೯೬ ರೂಪಾಯಿ ತೋರಿಸುತ್ತಿತ್ತು. ಅವಸರದಿಂದ ನೂರು ರೂಪಾಯಿ ಅವನ ಕೈಗೆ ತುರುಕಿ keep  the  rest  ಎಂದು ಚಿಲ್ಲರೆಯನ್ನು ಅವನಿಗೆ ಬಿಟ್ಟು ಸೌದಿಯ ಬರೀ ಏಳು ರಿಯಾಲ್ ತಾನೇ ಆಗಿದ್ದು ಎಂದು ಸಮಾಧಾನಿಕೊಳ್ಳುತ್ತಾ ಹೆಜ್ಜೆ ಹಾಕಿದೆ. ಇದು ನನಗಾದ krack jack ಅನುಭವ, ಸ್ವಲ್ಪ ಸಿಹಿ, ಸ್ವಲ್ಪ ಕಹಿ.

ಈ ಕತೆ ಕೇಳಿ.

ಸಂಬಂಧದಲ್ಲಿ ಒಬ್ಬರಿಗೆ ಅಪಘಾತ ವಾಗಿದ್ದರಿಂದ ಅವರನ್ನು ನೋಡಲು ಹೊರಟೆ. ಭದ್ರಾವತಿಯಿಂದ ಹುಬ್ಬಳ್ಳಿಗೆ. ಜೂನ್ ತಿಂಗಳಾದರೂ ಉರಿಯುವ ಸೂರ್ಯ ಮಾತ್ರ ತನ್ನ ಖುರ್ಚಿ ಮಳೆರಾಯನಿಗೆ ಬಿಟ್ಟು ಕೊಡದೆ ಹಠ ಮಾಡುತ್ತಿದ್ದ. ಹುಬ್ಬಳ್ಳಿ ಯ ಬಿಸಿಲ ದರ್ಬಾರು ಸ್ವಲ್ಪ ಜೋರೆ ಎನ್ನಬಹುದು. ನನ್ನ ಕೆಲಸ ಮುಗಿಸಿ ಕೊಂಡು ತಂಗಿಯ ಅತ್ತೆ ಮಾವಂದಿರನ್ನು ಕಂಡು ಬರೋಣ ಎಂದು ಹಾನಗಲ್ ಕಡೆ ಹೊರಟೆ. ಹುಬ್ಬಳ್ಳಿಯ ಜನ-ವಾಹನ ನಿಬಿಡ ರಸ್ತೆಯಿಂದ ಹೇಗೋ ನುಣುಚಿಕೊಂಡು ಹೆದ್ದಾರಿ ತಲುಪಿ ನಿರಾಳವಾಗಿ accelarator ಮೇಲೆ ಜೋರಾಗಿ ಪಾದ ಊರಿದ್ದೆ ತಡ ಬಕ ಪಕ್ಷಿಗಳಂತೆ ರಸ್ತೆಗೆ ಅಡ್ಡವಾಗಿ ಮುಗಿ ಬಿದ್ದರು ಪೊಲೀಸರು. ಗಾಡಿ ನಿಲ್ಲಿಸಿ ಏನೆಂದು ಕೇಳಿದಾಗ, ತುಂಬಾ ಫಾಸ್ಟ್ ಆಗಿ ಹೋಗುತ್ತಿದ್ದೀರಾ ಬನ್ನಿ ಎಂದ. ಅಲ್ಲೇ ರಸ್ತೆಯ ಪಕ್ಕದಲ್ಲಿ ಮರದ ಕೆಳಗೆ ಕ್ಯಾಮರಾ ಹಿಡಿದು ಕೊಂಡು ಸ್ಪೀಡ್ ಆಗಿ ಹೋಗೋ ವಾಹನಗಳ ಶೂಟಿಂಗ್ ನಲ್ಲಿ ನಿರತರಾಗಿದ್ದರು ಪೇದೆಗಳು. ನನ್ನ ಸ್ಪೀಡು ೮೦ ಎಂದು ತೋರಿಸುತ್ತಿತ್ತು ಕ್ಯಾಮರಾ. ದಂಡ ೪೦೦ ರೂಪಾಯಿ ಪೀಕಿ, ಬೇರೆಲ್ಲೂ ಕ್ಯಾಮರಾ ಇಲ್ಲ ಎಂದು ಅವರಿಂದಲೇ ಖಾತ್ರಿ ಪಡಿಸಿಕೊಂಡು ಹೊರಟೆ ಹಾನಗಲ್ ಕಡೆ. ಒಂದು ಕಡೆ ರಸ್ತೆ ಸರಿಯಾಗಿ ತಿಳಿಯದ ಕಾರಣ ಹತ್ತಿರದಲ್ಲೇ ಇದ್ದ restaurant ಹತ್ತಿರ ಹೋಗುತ್ತಿದ್ದಂತೆ ಜಟೆ ಬಿಟ್ಟು ಕೊಂಡ  ಮಧ್ಯವಯಸ್ಸಿನ, ಆಕರ್ಷಕ ಮಹಿಳೆ ಕುಂಕುಮದ ಬಟ್ಟಲನ್ನು ಹಿಡಿದು ಎದುರು ಬಂದಳು. ಅವಸರದಲ್ಲಿ ಇದ್ದಿದ್ದರಿಂದ ಏನೇನೇನೂ ಹೇಳುತ್ತಿದ್ದ ಆಕೆಯ ಮಾತಿಗೆ ಕಿವಿಗೊಡದೆ ಹತ್ತು ರೂಪಾಯಿ ಆಕೆಗೆ ಕೊಟ್ಟು, ಹಾನಗಲ್ ದಾರಿ ಖಾತ್ರಿ ಮಾಡಿಕೊಂಡು ಕಾರ್ ಹತ್ತುವಾಗ ಮತ್ತೊಮ್ಮೆ ಆಕೆ ಬಂದು, ಸ್ವಲ್ಪ ನಿಲ್ಲಪ್ಪಾ ತಮ್ಮಾ ಎಂದು ನಿಲ್ಲಿಸಿಕೊಂಡಳು.  ನೋಡಪ್ಪಾ ತಮ್ಮ, ನಿನ್ನ ಮನಸ್ಸು ದೊಡ್ಡದು, ಎಷ್ಟು ಬೇಗ ನನಗೆ ಹತ್ತು ರೂಪಾಯಿ ಕೊಟ್ಟು ಬಿಟ್ಟೆ ನೋಡು, ಆದರೆ ನಿನಾನ್ ಕೈಲಿ ಕಾಸು ನಿಲ್ಲೋಲ್ಲ, ಈ ತಿಂಗಳು ಕಳೀಲಿ ನೋಡು ನಿನಗೆ ಕೋಟಿ  ಸಿಗತ್ತೆ ಎಂದು ಹೇಳುತ್ತಾ, ನೀನು ಮತ್ತೊಮ್ಮೆ ಈ ಕಡೆ ಬಂದಾಗ ನನಗೆ ರವಿಕೆಗೆ ಅಂತ ಐವತ್ತು ರೂಪಾಯಿ ಕೊಡಬೇಕು ಎಂದು ನನ್ನಿಂದ ಪ್ರಾಮಿಸ್ ಮಾಡಿಸಿ ಕೊಂಡಾಗ ನಾನು ಸರೀ ಸರೀ ಖಂಡಿತ ಕೊಡುತ್ತೇನೆ ಐವತ್ತು ರೂಪಾಯಿ ಎಂದು ಅಲ್ಲಿಂದ ಹೊರಟೆ. ನನ್ನ ಪ್ರವಾಸ ಮುಗಿಸಿ ಮನೆ ತಲುಪಿದ ನಂತರ ಈ ಘಟನೆಯನ್ನು ಮನೆಯಲ್ಲಿ ಎಲ್ಲರಿಗೂ ಹೇಳಿದಾಗ ಮಡದಿ, ನನ್ನ ತಾಯಿ, ತಂಗಿಯರು, ತಮ್ಮನ ಹೆಂಡತಿ ಎಲರೂ ಒಂದೇ ಸ್ವರದಲ್ಲಿ ಅಯ್ಯೋ, ಹಣ ಕೊಡದೆ ಎಂಥ ಕೆಲಸ ಮಾಡಿ ಬಿಟ್ಟೆ ನೀನು, ಆಕೆಗೆ ರವಿಕೆಗೆಂದು ನೂರು ರೂಪಾಯಿ ಕೊಡಬಾರದಿತ್ತಾ ಎಂದು ದೂರಿದಾಗ ಹೌದಲ್ವಾ, ನನ್ನ ಮಂದ ಬುದ್ಧಿಗೆ ಇದು ಹೊಳೆಯಲೇ ಇಲ್ವಲ್ಲ ಎಂದು ಕೊಂಡೆ. ಆಕೆ ಹೇಳಿದ ಹಾಗೆ ನನಗೆ ಕೋಟಿ ಸಿಗಬೇಕಿರುವುದು ಈ ತಿಂಗಳಿನಲ್ಲಿ. ಇದುವರೆಗೂ ಸಿಕ್ಕಿಲ್ಲ. ಸಿಗಬೇಕೆನ್ನುವ ಆಸೆಯೂ ಇಲ್ಲ. ಆದರೂ ಮುಂದಿನ ನನ್ನ ಭೇಟಿಯಲ್ಲಿ ಆಕೆ ಸಿಕ್ಕರೆ ಆಕೆಗೆ ರವಿಕೆಯಂತೂ ಖಂಡಿತಾ ಹೊಂದಿಸಬೇಕು.

ಟಿಬೆಟ್ ನ ಮುಸ್ಲಿಮರು ಕಾಶ್ಮೀರದಲ್ಲಿ

ಟಿಬೆಟ್ ನ ಬುದ್ಧರ ಗುರು ದಲಾಯಿ ಲಾಮ ಕಾಶ್ಮೀರದಲ್ಲಿ ನೆಲೆಸುತ್ತಿರುವ ಟಿಬೆಟ್ ದೇಶದ ಮುಸ್ಲಿಮರನ್ನು ಭೇಟಿಯಾದರು. ಟಿಬೆಟನ್ ಸಾರ್ವಜನಿಕ ಶಾಲೆಯ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ದಲಾಯಿ ಲಾಮ ಉತ್ತಮ ಮಟ್ಟದ ಶಿಕ್ಷಣ ಯಾವ ರೀತಿ ಪರಿವಾರ, ಸಮಾಜ ಮತ್ತು ದೇಶಕ್ಕೆ ಉಪಯುಕ್ತ ವಾಗುತ್ತದೆ ಎಂದು ವಿವರಿಸಿದರು. ಇಂದಿನ ಶಿಕ್ಷಣ ವ್ಯಾಪಾರೀಕರಣ ಗೊಳ್ಳುತ್ತಿದ್ದು ಅಂತರಾತ್ಮದ ನೆಮ್ಮದಿಗೆ ಯಾವ ಸಹಾಯವನ್ನೂ ಮಾಡುತ್ತಿಲ್ಲ ಎಂದು ವಿಷಾದಿಸಿದರು. ಪ್ರಸಕ್ತವಾಗಿ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದಾಗ ದಲಾಯಿ ಲಾಮರ ಆಶಯದ ಅರ್ಥ ನಮಗರ್ಥವಾಗುತ್ತದೆ. ಶಿಕ್ಷಣ ವ್ಯಾಪಾರೀಕರಣ ಗೊಳ್ಳುತ್ತಿರುವುದು ಮಾತ್ರವಲ್ಲ “ಅಜೆನ್ಡೀಕರಣ” (agenda ) ವೂ ಆಗುತ್ತಿರುವ ಬಗ್ಗೆ ಲಾಮಾ ರಿಗೆ ಬಹುಶಃ ತಿಳಿದಿರಲಿಕ್ಕಿಲ್ಲ. ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಶಿಕ್ಷಣ ಮುಖ್ಯ. ಅಂಥ  ಶಿಕ್ಷಣ ಎನ್ನುವ ಪವಿತ್ರ ತೀರ್ಥಕ್ಕೆ ಕಲಬೆರಕೆ ನಡೆಸಿ ಗುಮಾನಿ ಪಡದ ಮುಗ್ಧ ಮಕ್ಕಳಿಗೆ ಕೊಟ್ಟಾಗ ಕಳ್ಳಭಟ್ಟಿ ಕುಡಿದಾಗ ಆಗುವ ಅನಾಹುತಕ್ಕೆ ಸರಿಸಮಾನವಾದ ಪರಿಣಾಮ ಉಂಟು ಮಾಡುತ್ತದೆ ಎನ್ನುವ ಅರಿವು ಬಹುಶಃ ಬಹಳ ಜನರಿಗೆ ತಿಳಿದಿಲ್ಲ ಎಂದು ತೋರುತ್ತದೆ.

ರಮದಾನ್ ಶುಭಾಶಯಗಳು

 

ನಾಳೆ ಪವಿತ್ರ ರಮದಾನ್ ನ ಪ್ರಥಮ ದಿನ ಎಂದು ಸೌದಿ ಅರೇಬಿಯಾ ಮತ್ತು ಇತರ ರಾಷ್ಟ್ರಗಳು ಘೋಷಿಸಿವೆ. ಸಾವಿರ ಮಾಸಗಳಿಗಿಂತಲೂ ಶ್ರೇಷ್ಠ ಎಂದೂ, ವ್ರತಾಚರಣೆಯ ಪವಿತ್ರ ಮಾಸ ಎಂದೂ ಅರಿಯಲ್ಪಡುವ ರಮದಾನ್ ಜಗದಾದ್ಯಂತ ಮುಸ್ಲಿಂ ಬಾಂಧವರಲ್ಲಿ ಧಾರ್ಮಿಕ ಸಂಚಲನೆ ಆರಂಭಿಸಲಿದೆ. ಜಗತ್ತಿನ ಮೂಲೆ ಮೂಲೆಯಲ್ಲಿರುವ ಇನ್ನೂರು ಕೋಟಿ ಮುಸ್ಲಿಂ ಬಾಂಧವರಲ್ಲಿ ಸುಮಾರು ನೂರು ಕೋಟಿಗೂ ಹೆಚ್ಚು ಜನ ದಿನ ಪೂರ್ತಿ ಉಪವಾಸ ಇದ್ದು ಪವಿತ್ರ  ಕುರಾನ್ ಪಠಣ, ನಮಾಜ್, ದಾನ, ಮುಂತಾದ ಸತ್ಕರ್ಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಅತ್ಯಪೂರ್ವವಾದ ಧಾರ್ಮಿಕತೆ ವಿಶ್ವವನ್ನು ಬೆರಗುಗೊಳಿಸಲಿದೆ.

ರಮಾದಾನ್ ಮಾಸದ ಚಂದ್ರ ದರ್ಶನ ಆಗುತ್ತಲೇ ಸಮಾಜ ಬಾಂಧವರು ಪರಸ್ಪರರನ್ನು ಅಭಿನಂದಿಸುತ್ತಾ ಸಂದೇಶಗಳನ್ನು ಕಳಿಸುತ್ತಿದ್ದಾರೆ. ಫೇಸ್ ಬುಕ್, ಯೂ ಟ್ಯೂಬ್ ತಾಣಗಳಲ್ಲಿ ರಮಾದಾನ್ ಸಂದೇಶಗಳು ಆಗಮಿಸುತ್ತಿವೆ.  twitter ತಾಣವಂತೂ ರಮಾದಾನ್ tweet  ಗಳ ಅಭೂತಪೂರ್ವ ಸುಗ್ಗಿಯನ್ನೇ ಕಾಣುತ್ತಿದೆ. twitter ನಲ್ಲಿ ಸಿಕ್ಕ tweet  ಹೀಗಿವೆ ನೋಡಿ….

Ramadan is the time when you reboot your soul…

I wish everyone on the planet a beautiful ramadan..

Ramadan is coming, Shaitan is leaving…

Let us reflect on the year that has passed…

ರಮದಾನ್ ಮಾಸ ಮುಸ್ಲಿಂ ಬಾಂಧವರಿಗೂ, ಹಿಂದೂ, ಕ್ರೈಸ್ತ, ಸಿಖ್, ಬುದ್ಧ, ಜೈನ, ಪಾರ್ಸಿ, ಯಹೂದ್ಯ ಮತ್ತಿತರ ಧಾರ್ಮಿಕ ಬಾಂಧವರಿಗೂ ಸಂತಸ, ಉಲ್ಲಾಸವನ್ನು ತರಲಿ, ದೇಶದಲ್ಲಿ ಸುಭಿಕ್ಷೆ ಹೆಚ್ಚಲಿ, ಕೈ ಕೊಟ್ಟು ಕೂತಿರುವ ಮಳೆರಾಯ ರಮಾದಾನ್ ತಿಂಗಳ ಪುಣ್ಯದಿಂದ ಮೋಡಗಳನ್ನು ಕರಗಿಸಿ ಭೂಮಿಗೆ ನವ ಚೇತನ ತರಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತಾ ,

 

ಸರ್ವರಿಗೂ ರಮಾದಾನ್ ತಿಂಗಳ ಶುಭಾಶಯಗಳು.

 

 

ಬ್ರಿಟಿಷರು ಮತ್ತು ನಾಯಿಗಳು

ಮನಮೋಹನ ಸಿಂಗರು ಸೋನಿಯಾ ಗಾಂಧಿಯವರ “ಪೂಡ್ಲ್”  ಆದರಾ?  poodle  ಎಂದರೆ ಮೈ ತುಂಬಾ ರೋಮ ಇರೋ ಬೇಟೆ ನಾಯಿ. ಮತ್ತೊಂದು ಅರ್ಥ ಎಂದರೆ ಹೇಳಿದಂತೆ ಕೇಳುತ್ತಾ, ಹೌದಪ್ಪಾ ಹೌದು ಎಂದು ಗೋಣು  ಹಾಕುವವ.  ಮನಮೋಹನ್ ಸಿಂಗ್ ಸೋನಿಯಾರ spineless   ಪೂಡ್ಲೋ, ಹರಿತವಾದ ಕುಡ್ಲೋ ಎಂದು ಸಮಯವೆ ಹೇಳಲಿದೆ. ಅಷ್ಟಕ್ಕೂ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ನಾಯಕರೊಬ್ಬರನ್ನು ಸಾಕು ನಾಯಿ ಎಂದು ಕರೆದು ಹೀಯಾಳಿಸುವ ಅವಶ್ಯಕತೆ ಅಥವಾ ಯೋಗ್ಯತೆ ಬ್ರಿಟನ್ ನಂಥ ದೇಶಕ್ಕಂತೂ ಇಲ್ಲ. ಗ್ರೇಟ್ ಬ್ರಿಟನ್ ಯಾವ ತೆರನಾದ ಪೂಡ್ಲ್ ಎಂದು ವಿಶ್ವಕ್ಕೆ ತಿಳಿದಿದೆ. ಅಮೇರಿಕಾ ಹೇಳಿದ್ದಕ್ಕೆಲ್ಲಾ ಹೂಂ ಎಂದು ಹೇಳುತ್ತಾ ವಿಶ್ವ ವನ್ನು ಒಂದು ಅಭದ್ರ ತಾಣ ವಾಗಿಸಿದ ಕೀರ್ತಿ ಇಂಗ್ಲೆಂಡ್ ದೇಶಕ್ಕಲ್ಲದೆ ಬೇರಾರಿಗೂ ಸಲ್ಲುವುದಿಲ್ಲ. ಅಮೆರಿಕೆಯ ಕುಂಡೆಗೆ ಭದ್ರವಾಗಿ weld ಮಾಡಿ ಕೊಂಡು ತನ್ನ ತನವನ್ನು ಕಳೆದುಕೊಂಡ ಬ್ರಿಟನ್ ತನ್ನ ತಟ್ಟೆಯಲ್ಲಿರುವುದತ್ತ ಕಣ್ಣು ಹಾಯಿಸುವುದು ಒಳ್ಳೆಯದು.

ನಾಯಕರನ್ನು ನಾಯಿಗೆ ಸಮಾನವಾಗಿ ತೋರಿಸುವುದು, ನಾಯಕರ ನ್ನು ಸ್ವಾಗತಿಸುವ ಚಿತ್ರ ಬಿಟ್ಟು ನಾಯಿಯ ಚಿತ್ರ ಹಾಕುವುದು ಬ್ರಿಟಿಷರ ಹಳೆಯ ಜಾಯಮಾನ. ಪ್ರಧಾನಿ ರಾಜೀವ ಗಾಂಧಿಯವರ ಚೊಚ್ಚಲ ಬ್ರಿಟಿಶ್ ಪ್ರವಾಸದ ಸಮಯ ಅವರನ್ನು ಸ್ವಾಗತಿಸಲು ಅಂದಿನ ಬ್ರಿಟಿಶ್ ಪ್ರಧಾನಿ ಮಾರ್ಗರೆಟ್ ಥ್ಯಾಚರ್ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಮಾರನೆ ದಿನದ ಪತ್ರಿಕೆಯಲ್ಲಿ ಥ್ಯಾಚರ್ ರಾಜೀವ್ ಹಸ್ತ ಲಾಘವ ಮಾಡುತ್ತಿದ್ದ ಚಿತ್ರದ ಬದಲು ಬಂದಿದ್ದು ವಿಮಾನ ನಿಲ್ದಾಣದಲ್ಲಿ ಕಾಯುತ್ತಾ ಇರುವಾಗ ಅಲ್ಲೇ ಇದ್ದ ಪೋಲೀಸ್ ನಾಯಿಯ ತಲೆ ಸವರುವ ಥ್ಯಾಚರ್ ರ ಚಿತ್ರ. ಇದು ಈ ಮಾಜೀ ಯಜಮಾನರು ನಮಗೆ ತೋರಿಸೋ ಮರ್ಯಾದೆ.

ನೂರು ದಿನಗಳ ನಂತರ…

ಇಂದಿಗೆ ಸರಿಯಾಗಿ ನೂರು ದಿನಗಳು. ನೂತನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಧಿಕಾರ ವಹಿಸಿ ಕೊಂಡಲ್ಲ. ಪಾಪ ಇನ್ನೂರು ಘಂಟೆಗಳೂ ಕಳೆದಿಲ್ಲ ಅವರಿಗೆ. ನಮ್ಮ ದೇಶದ hottest ಕುರ್ಚಿ ಮೇಲೆ ಕೂತು. ನೂರು ದಿನಗಳು ಕಳೆದಿದ್ದು ನನ್ನ ಹಳೆ ಸೇತುವೆ ಮೇಲೆ ಓಡಾಡಿ. ಮೇ ಐದಕ್ಕೆ ನನ್ನ ಕೊನೆಯ ಬ್ಲಾಗು. ನಾನು ಬ್ಲಾಗ್ ಅನ್ನ ಅಪ್ಡೇಟ್ ಮಾಡದೇ ಇದ್ದರೆ ಆಗಸವೇನೂ ಕಳಚಿ ಬೀಳೋಲ್ಲ ಅನ್ನಿ, ಆದರೂ ಅಲ್ಲಿ ಇಲ್ಲಿ ಅಂತ ಕೆಲವು “ರವಿ” ಯವರಂಥ ಸಹೃದಯಿಗಳು ನನ್ನ “ಭಾರತ ಬಂದ್” ಗೆ ಬಿಕೋ ಎನ್ನುವ ಬೀದಿಗಳ ಥರ ನನ್ನ ಸೇತುವೆಯೂ ಬರಿದಾದದ್ದರ ಕುರಿತು ಕಾಳಜಿಯಿಂದ ಬರೆದು ಕೇಳುತ್ತಾರೆ. ಏನ್, ಅಬ್ದುಲ್, ಸೇತುವೆ ಮೇಲೆ ಕಲರವ ಕೇಳಿಸ್ತಾ ಇಲ್ವಲ್ಲಾ ಎಂದು. ಈ ನೂರು ದಿನಗಳ ಅವಧಿಯಲ್ಲಿ ಸೇತುವೆ ಅಡಿ ಸಾಕಷ್ಟು ಕಬ್ಬಿಣ, ಉಕ್ಕು, ಸಕ್ಕರೆ, ಕಾರ್ಖಾನೆಗಳ ಹೊಲಸು ತುಂಬಿ ಕೊಂಡಿದೆ. ಸಾಲದೆಂಬಂತೆ ಸಾಕಷ್ಟು ಮೊಸಳೆಗಳೂ ಮರಿ ಹಾಕಿವೆ. ಹಾಂ, ಮೊಸಳೆ? ಭದ್ರಾ ನದಿಯಲ್ಲಿ? ಎಂದಿರಾ. ಹೌದಂತೆ. ಕಳೆದ ತಿಂಗಳ ಭಾರತ ಪ್ರವಾಸ ದ ವೇಳೆ ಸಿಕ್ಕ ಮಾಹಿತಿ ಇದು. ವೆರಿ ವೆರಿ ಥಾಟ್ ಪ್ರೊವೋಕಿಂಗ್. ಸಾರಿ, ಸಾರಿ ವೆರಿ ವೆರಿ ಫ್ರೈಟನಿಂಗ್. ಅಲ್ವಾ ಮತ್ತೆ. ಇದೇ ಭದ್ರಾ ನದಿಯಲ್ಲಿ ನಾನೆಷ್ಟು ಸಲ ಮನೆಯವರ ಕಣ್ತಪ್ಪಿಸಿ ನದೀ ಮಧ್ಯದ ಆಮೆ ಕಲ್ಲಿನ ಮೇಲೆ ಹಾಯಾಗಿ ಬಿದ್ದು ಕೊಂಡಿರಲಿಕ್ಕಿಲ್ಲ? ನಮ್ಮ ಹೆಂಗಳೆಯರೂ ಬಟ್ಟೆ, ಪಾತ್ರೆ ಪಗಡಿ ತೊಳೆಯಲು ಎಂದು ಹೋಗಿಲ್ಲ? ಈಗ ನೋಡಿದರೆ ಮೊಸಳೆಗಳ ಅಡ್ಡಾ ಆಗಿದೆಯಂತೆ ಭದ್ರಾ. ಒಂದು ಕಡೆ ನಮ್ಮ ದೇಶ ಲಂಚಗಡುಕ ಮೊಸಳೆಗಳ ಅಡ್ಡಾ ಆಗುತ್ತಿದ್ದರೆ ಮತ್ತೊಂದು ಕಡೆ ನನ್ನ ಪ್ರೀತಿಯ ಭದ್ರಾ ನದಿ ಮೊಸಳೆಗಳ ಅಡ್ಡಾ. ಅಬ್ಬಾ! ಆದರೂ ಈ ಸಲ ಹೋದಾಗ ಅಲ್ಲಿ ಇಲ್ಲಿ ಎಂದು ಹೆಣ್ಣು ಮಕ್ಕಳು ಈಗಲೂ ಬಟ್ಟೆ ಒಗೆಯುತ್ತಿದ್ದರು. ಇಲ್ಲದಿದ್ದರೂ ನಮ್ಮ ಜನರಿಗೆ ಭಂಡ ಧೈರ್ಯ ಸ್ವಲ್ಪ ಹೆಚ್ಚೆಂದೇ ಹೇಳಬೇಕು. ಈ ಸಲ ಭಾರತಕ್ಕೆ ಬರೋ ಮೊದಲು ನದಿಯ ಮೇಲೆ ತೆಪ್ಪದ ಮೇಲೆ ತೆವಳುವ ಆಸೆ ಉಟ್ಕಂತು. ತೆಪ್ಪ ಗೊತ್ತಲ್ಲ? ದುಂಡಗಿನ, ಯಾವುದೋ ಒಂದು ಗಡುಸಾದ ಪ್ರಾಣಿಯ ಚರ್ಮ ವನ್ನು ಮರದ ಫ್ರೇಮ್ ಗೆ ಅಂಟಿಸಿ ತಯಾರಿಸಿದ ವೆರಿ ಸಿಂಪಲ್ ದೋಣಿ. ಅದೇ ತೆಪ್ಪ. ಆಂಗ್ಲ ಭಾಷೆಯಲ್ಲಿ ತೆಪ್ಪಕ್ಕೆ coracle ಎನ್ನುತ್ತಾರೆ. ಸರಿ ನನ್ನ ತೆಪ್ಪದ ಮೇಲಿನ ತೆವಳುವಿಕೆಯ ಆಸೆ ಮೊಸಳೆ ಬಾಯಿ ಸೇರಿ ಕೊಂಡಿತು. ತೆಪ್ಪದ ಮೇಲೆ ಪಯಣಿಸುವ ಆಸೆ ನನ್ನ ಮಿತ್ರರಿಗೆ ಹೇಳಿದಾಗ ಯಾಕಪ್ಪಾ, ಸಾಯೋಕೆ ಸೌದಿ ಯಲ್ಲಿ ಜಾಗ ಸಿಗ್ಲಿಲ್ವಾ ಎಂದು ಹೇಳುತ್ತಾ ಮೊಸಳೆ ಕತೆ ಕೇಳಿಸಿದರು. ಅಲ್ಲಿಗೆ ಆ ಆಸೆ ಮುದುರಿಕೊಂಡಿತು. ಈ ನೂರು ದಿನಗಳ ಅವಧಿಯಲ್ಲಿ ನಮ್ಮ ರಾಜ್ಯದಲ್ಲಿ ನಿತ್ಯಾನಂದನ ರಾಸ ಲೀಲೆಯಿಂದ ಹಿಡಿದು ಯಡ್ಡಿ, ಸದಾನಂದರ ರಾಜಕೀಯ ದಾಳದಾಟ, ರಾಷ್ಟ್ರಪತಿ ಹುದ್ದೆಗೆ ಇದ್ದಕ್ಕಿದ್ದಂತೆ ಯೋಗ್ಯರ ಬರ ನಮ್ಮ ದೇಶದ ಮೇಲೆ ಮಗುಚಿ ಬಿದ್ದಿದ್ದು (ಭಾರತದ ಕ್ರಿಕೆಟ್ ಗೆ ಸಚಿನ್ ಬಿಟ್ಟರೆ ಬೇರೊಬ್ಬ ಹುಟ್ಟಿಲ್ಲ, ರಾಷ್ಟ್ರ ಪತಿ ಹುದ್ದೆಗೆ ಕಲಾಮ್ ಬೇರೆ ಯಾರನ್ನೂ ಭಾರತ ಮಾತೆ ಹೆತ್ತಿಲ್ಲ, ಎಂಥ ದಿವಾಳಿತನ ನೋಡಿ), ಸಿರಿಯಾ ದೇಶದ ಹಸನ್ಮುಖಿ ಸರ್ವಾಧಿಕಾರಿ ಎಗ್ಗಿಲ್ಲದೆ ತನ್ನ ಜನರನ್ನ ಕೊಲ್ಲುತ್ತಿರುವುದು.. ಹೀಗೆ ಹತ್ತು ಹಲವು ಸಂಗತಿಗಳು, ಬೆಳವಣಿಗೆಗಳು ನನ್ನನ್ನ ಕೀಲಿ ಮಣೆ ಕಡೆ ಮುಸುಡಿ ತಿರುಗಿಸಲು ವಿಫಲವಾಗಿದ್ದು god particle ನಷ್ಟೇ ರೋಚಕ.

ನನ್ನ ಭಾರತದ ಪ್ರವಾಸ ಸಮಯದ ಒಂದೆರಡು ಕತೆ ಒಂದೆರಡು ದಿನಗಳಲ್ಲಿ ಹೇಳುತ್ತೇನೆ. ಒಂದೆರಡು ಚಿತ್ರಾ ನೂ ಆಕ್ತೀನಿ. ವಸಿ ತಡ್ಕಳಿ.