ವಿಶ್ವದ ೭೦೦ ನೇ ಕೋಟಿ ಮಗುವಿಗೆ ನೀವು ಬರೆಯಲಿರುವ ಸಂದೇಶವೇನು?

ನಾಳೆ ಸೋಮವಾರ ಹುಟ್ಟಲಿರುವ ಮಗು ಪ್ರಪಂಚದ ೭೦೦ ನೇ ಕೋಟಿಯದಂತೆ. ೧೨ ವರ್ಷಗಳ ಹಿಂದೆ ೬೦೦ ಕೋಟಿಯಿದ್ದದ್ದು ಈಗ ೭೦೦ ಕೋಟಿಗೆ ಭಡ್ತಿ. ಈ ವರ್ಷ ಹುಟ್ಟಲಿದ್ದ ಏಳು ಕೋಟಿ ಎಂಭತ್ತು ಲಕ್ಷ ಮಕ್ಕಳಲ್ಲಿ ಸೋಮವಾರದಂದು ಹುಟ್ಟಲಿರುವ ಮಗು ೭೦೦ ಕೋಟಿಯದು. ಭರ್ತಿ ಏಳು ಬಿಲ್ಲಿಯನ್. ವಿರಾಮ ಖುರ್ಚಿ ಪಂಡಿತರಿಗೆ ಈ ಸುದ್ದಿ ಒಂದು ಸುಗ್ಗಿ. ತಮಟೆ ಬಾರಿಸಲು ಆರಂಭಿಸುತ್ತಾರೆ ಜನಸಂಖ್ಯೆಯ ವಿಪರೀತ ವೃದ್ಧಿ ಮತ್ತು ಅದು ತರಬಹುದಾದ ಆಪತ್ತುಗಳ, ಅನಾಹುತಗಳ ವರ್ಣನೆಯೊಂದಿಗೆ.     

ಜನಸಂಖ್ಯೆ ತಡೆಯಲು ಇರುವ ನೂರ ಒಂದು ಅಥವಾ ಸಾವಿರದ ಒಂದು ಉಪಾಯಗಳ ಜೊತೆ ಮತ್ತೊಂದು ಉಪಾಯ ಈಗ ಸೇರಿಕೊಂಡಿದೆ. ಮಹಿಳೆಯರಿಗೆ ಸಂತಾನೋತ್ಪತ್ತಿ ಫ್ಯಾಕ್ಟರಿಯ ಉಸ್ತುವಾರಿ ವಹಿಸಿದರೆ ಜನಸಂಖ್ಯೆ ತಗ್ಗ ಬಹುದಂತೆ. ದೇವರೇ ಬಲ್ಲ. ಕುಟುಂಬ ವ್ಯವಸ್ಥೆಯಲ್ಲಿ ಹೆಣ್ಣಿನ ಧ್ವನಿ ಜೋರಾದಾಗ ಸಂತಾನೋತ್ಪತ್ತಿ ತಂತಾನೇ ನಿಧಾನ ಆಗಬಹುದು ಅನ್ನೋ ಆಶಯ. ಜನಸಂಖ್ಯೆ ಏರಿಕೆ ಈಗ ಇರುವ ಸಂಪನ್ಮೂಲಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಪಂಡಿತರ ಒಂದು ಗುಂಪು ಹೇಳುತ್ತಿದ್ದರೆ ಮತ್ತೊಂದು ಗುಂಪಿಗೆ ಈ ಥಿಯರಿ ನಥಿಂಗ್ ಬಟ್ ಟ್ರಾಶ್. ಯಾರನ್ನು ನಂಬುವುದು?

 ಕ್ಷಿಪ್ರ ಗತಿಯಲ್ಲಿ ಮುಪ್ಪಾಗುತ್ತಿರುವ ಜಪಾನ್

ಒಂದು ಕಡೆ ಏರುತ್ತಿರುವ ಜನಸಂಖ್ಯೆ ವಿಶೇಷಜ್ಞರ ಆತಂಕವನ್ನು ಹೆಚ್ಚಿಸುತ್ತಿದ್ದರೆ ಮತ್ತೊಂದು ಕಡೆ ತಮ್ಮ ದೇಶದ ಜನಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲು ಡಿಸ್ಕೌಂಟು, ಅದರ ಜೊತೆ ಟೈಮ್ ಆಫು ಮುಂತಾದುವುಗಳನ್ನು ಯುವಜನರ ಮುಂದೆ ಇಡುತ್ತಿರುವ ಬೆಳವಣಿಗೆ. ಈ ಬೆಳವಣಿಗೆ ಎರಡನೇ ವಿಶ್ವ ಮಹಾಯುದ್ಧದಲ್ಲಿ ಹೇಳಹೆಸರಿಲ್ಲದಂತೆ ನಿರ್ನಾಮವಾದರೂ ಪವಾಡಸದೃಶವಾಗಿ ಶ್ರೀಮಂತಿಕೆಯಿಂದ ಕಂಗೊಳಿಸಿದ ಜಪಾನ್ ದೇಶದ್ದು. time off ಏಕೆಂದರೆ ಮಕ್ಕಳನ್ನು ಹುಟ್ಟಿಸಲು, ದೊಡ್ಡ ಪರಿವಾರಕ್ಕಾಗಿ ಅಂಗಡಿ ಮುಂಗಟ್ಟು ಗಳು ರಿಯಾಯಿತಿಯನ್ನು ಘೋಷಿಸುತ್ತಿವೆ ಜಪಾನ್ ದೇಶದಲ್ಲಿ. ಹುಟ್ಟುವ ಪ್ರತೀ ಮಗುವಿನ ಮೇಲೂ ಹಣಕಾಸಿನ ಸಹಾಯ ಕೊಡ ಮಾಡುತ್ತಿದೆ ಅಲ್ಲಿನ ಸರಕಾರ. ಈ ಕ್ರಮಗಳ ಮೂಲಕ ಏನಾದರೂ ಮಾಡಿ, ಹೇಗಾದರೂ ಮಾಡಿ, ಜನಸಂಖ್ಯೆ ಹೆಚ್ಚಿಸಿರಯ್ಯ ಎಂದು ಅಲ್ಲಿನ ಸರಕಾರದ ವಿಜ್ಞಾಪನೆ. ನಮ್ಮ ದೇಶ one is fun ಎಂದು ಊಳಿಡುತ್ತಿದ್ದರೆ, ಜಪನೀಯರ ಆಕ್ರಂದನ more please ಎಂದು.  ಪ್ರಪಂಚ ವೈರುಧ್ಯಗಳ ಸಂತೆ, ಅಲ್ಲವೇ?

ಬಹುಪಾಲು ಜಪನೀಯರಿಗೆ ಸಂತಾನ ವೃದ್ಧಿ ಅನ್ನೋದು ‘to do list’ ನ ಕಟ್ಟಕಡೆಯ ಎಂಟ್ರಿ. ಇದನ್ನು ಟಾಪ್ ಪ್ರಯಾರಿಟಿ ಮಾಡಲು ಸರಕಾರದ ಸರ್ಕಸ್ಸು. ಯುವಜನರ ಒತ್ತು ಪ್ರೋಗ್ರೆಸ್ ಕಡೆ, ಪ್ರೊಕ್ರಿಯೇಶನ್ ಕಡೆ ಅಲ್ಲ. ಏಕೆಂದರೆ ಅಲ್ಲಿ ವಿವಾಹ ದುಬಾರಿ. ಪ್ರತೀ ವಿವಾಹಕ್ಕೆ ಸುಮಾರು ೨೦ ಲಕ್ಷ ರೂಪಾಯಿ ಖರ್ಚು. ಮದುವೆಯಾದ ಮೇಲೆ ಮಗು ಹುಟ್ಟಿದರೆ ಮಗುವಿನ ತಾಯಿಗೆ ಒಳ್ಳೆಯ ವರಮಾನ ಕೊಡುವ ಕೆಲಸ ಸಿಗೋದು ಕಷ್ಟ. ಅಮೇರಿಕಾ ಅಥವಾ ಅಇರೋಪ್ಯ ದೇಶಗಳ ಹಾಗೆ  ಮದುವೆಯಾಗದೆ ಸಂತಾನೋತ್ಪತ್ತಿ ಜಪಾನಿನಲ್ಲಿ ವಿರಳ.  ಅಷ್ಟು ಮಾತ್ರವಲ್ಲ ಜಪಾನಿನಲ್ಲಿ ದೀರ್ಘಾಯುಷಿಗಳು ಹೆಚ್ಚು. ಮೇಲಿನ ಕಾರಣಗಳನ್ನು ಕೂಡಿಸಿ ನೋಡಿದಾಗ ಜಪಾನಿನಲ್ಲಿ ಹುಟ್ಟುವ ಮಕ್ಕಳ ಸಂಖ್ಯೆ ಅತಿ ಕಡಿಮೆ.     

ಜನಸಂಖ್ಯೆ ವೃದ್ಧಿಗೆ ಒತ್ತು ಕೊಡುತ್ತಿರುವ ಮತ್ತೊಂದು ದೇಶ ಸ್ಪೇನ್. ಸ್ಪೇನ್ ದೇಶದಲ್ಲಿ ಹುಟ್ಟುವ ಪ್ರತೀ ಮಗುವಿಗೆ ಸುಮಾರು ಒಂದೂವರೆ ಲಕ್ಷ ರೂಪಾಯಿಗಳನ್ನು ಸರಕಾರ ನೀಡುತ್ತದೆ.      

ಸ್ವರ್ಗವನ್ನು ಕಲ್ಪಿಸಿಕೊಳ್ಳದಿರು

ತಟ್ಟು ಚಪ್ಪಾಳೆ ಪುಟ್ಟ ಮಗು, ಇಕೋ ಕೈ, ತಕೋ ಕೈ, ತಟ್ಟು ಚಪ್ಪಾಳೆ ಪುಟ್ಟ ಮಗು… ಈ ಕವಿತೆಯನ್ನು ೭೦೦ ನೇ ಕೋಟಿ ಮಗುವಿಗೆ ಹಾಡಿ ಕೇಳಿಸಲು ಸಲ್ಮಾನ್ ರುಶ್ಡಿ ತಯಾರಲ್ಲ. ೭೦೦ ನೇ ಕೋಟಿ ಮಗುವಿಗೆ ನೀವು ಕೊಡುವ ಸಂದೇಶವೇನು ಎಂದು ಕೇಳಿದಾಗ ಬುಕರ್ ಪ್ರಶಸ್ತಿ ವಿಜೇತ, ವಿವಾದಾಸ್ಪದ ಲೇಖಕ ಹೇಳಿದ್ದು “(ಧರೆಯ ಮೇಲೆ) ಸ್ವರ್ಗವನ್ನು ಕಲ್ಪಿಸಿಕೊಳ್ಳದಿರು” ಎಂದು. imagine no heaven.

ಸಂಪನ್ಮೂಲಗಳನ್ನು ನುಂಗಲೆಂದೇ ಹುಟ್ಟುತ್ತವೆ ಮಕ್ಕಳು ಎಂದು ನಂಬುವವರು ಇದಕ್ಕಿಂತ ಒಳ್ಳೆಯ ಮಾತನ್ನು ಆಡಲಾರರು. ಸುಮಾರು ಐದು ದಶಕಗಳಿಂದಲೂ ನಾವು ಕೇಳುತ್ತಾ ಬಂದಿದ್ದು, ಜನಸಂಖ್ಯೆ ಏರುತ್ತಿದೆ, ವಾತಾವರಣ ಬದಲಾಗುತ್ತದೆ, ತಿನ್ನಲು ಏನೂ ಇರುವುದಿಲ್ಲ, ಹಸಿವಿನಿಂದ ಜನ ಸಾಯಲಿದ್ದಾರೆ, ಬರ ಬಂದೆರಗಲಿದೆ. ಏರುತ್ತಿರುವ ಜನಸಂಖ್ಯೆ ಕಾರಣ ನಮ್ಮ ಗ್ರಹ ಇಕ್ಕಟ್ಟಾಗುತ್ತಿದೆ, ಹಾಗೇ ಹೀಗೆ…ಆದರೆ ಅಂಥ ಎಚ್ಚರಿಕೆಗಳು, ‘caveat emptor’ ಗಳು  ಪ್ರಕಟವಾದ ಕಾಗದಗಳ ಜೊತೆ ರದ್ದಿ ಸೇರಿದವೆ ವಿನಃ ಯಾವುದೇ ಕೇಡುಗಾಲ ಬಂದೆರಗಲಿಲ್ಲ.   

ಈ ಲೇಖನದ ಕರ್ತೃವಿನ ಸಂದೇಶ

ಕಂದಾ ಸುಸ್ವಾಗತ, ನಮ್ಮ ಭವ್ಯ ಧರೆಗೆ. ಶತಮಾನಗಳಿಂದ ಪೂರ್ವದಿಂದ ಹುಟ್ಟುತ್ತಿರುವ ಸೂರ್ಯ ಮತ್ತು ಪಶ್ಚಿಮದಲ್ಲಿ ಮುಳುಗುವ ಸೂರ್ಯನ ನಡಿಗೆಯ ನಿಯಮವನ್ನು ನಾವು ಬದಲಿಸಲಿಲ್ಲ. ಉಸಿರಾಡುವ ಗಾಳಿ ಎಂದಿನ ಹಾಗೇ ಈಗಲೂ ತೆರಿಗೆಯಿಂದ ಮುಕ್ತ. ಹೌದು ನಿನ್ನಿಂದ ಎರವಲು ಪಡೆದಿದ್ದ ಭೂಮಿಯ ಮೇಲೆ ನಮ್ಮ ಅಹಂ ಮತ್ತು ಸ್ವಾರ್ಥದ ಕಾರಣ ಸಾಕಷ್ಟು ಅನಾಚಾರ ಎಸಗಿದ್ದೇವೆ. ನಮ್ಮ ಮಣ್ಣನ್ನು ಮೊನ್ಸಾಂಟೊ ಕಂಪೆನಿಗೆ ಗುತ್ತಿಗೆ ಕೊಟ್ಟು ಉಸಿರುಗಟ್ಟಿಸಿದ್ದೇವೆ. ಕಾಯಿ ಹಣ್ಣಾಗಲು ನಿಸರ್ಗ ನಿಯಮ ತೆಗೆದುಕೂಳ್ಳುವ ಸಮಯಕ್ಕೆ ಕಾಯುವ ವ್ಯವಧಾನ ನಮ್ಮಲ್ಲಿಲ್ಲ, ಅದಕ್ಕೆ. ಆದರೂ, ಇವೆಲ್ಲದರ ನಡುವೆಯೂ, ಕೆಲವೊಂದು ಒಳ್ಳೆಯ ಅವಿಷ್ಕಾರಗಳನ್ನೂ ನಿನಗಾಗಿ ತಯಾರಿಸಿ ಇಟ್ಟಿದ್ದೇವೆ. ನೀನು ಜನರೊಂದಿಗೆ ಬೇರೆಯದೇ, ಯಾವುದೇ ಸಭೆ ಸಮಾರಂಭ ಗಳಿಗೂ ಹೋಗುವ ತಾಪತ್ರಯವಿಲ್ಲದೆ ಮನೆಯಲ್ಲೇ ಕೂತು ಜೇಡನ ಬಲೆಯೊಳಕ್ಕೆ ಅವಿತುಕೊಂಡು ಮೊಬೈಲ್, ಫೇಸ್ ಬುಕ್, ಟ್ವಿಟ್ಟರ್, ಎಸ್ಸೆಮ್ಮೆಸ್, ಐ-ಪ್ಯಾಡ್, ಐ-ಪಾಡ್, ಇ-ಮೇಲ್ ಮುಂತಾದ ಸಾಮಾಜಿಕ ತಾಣ, ಅನುಕೂಲಗಳ ಮೂಲಕ ಜನರೊಂದಿಗೆ ನೇರವಾಗಿ ಬೆರೆಯದೆ ವ್ಯವಹರಿಸಲು ಅನುಕೂಲ ಮಾಡಿದ್ದೇವೆ. ಜನರೊಂದಿಗೆ ಬೆರೆತಾಗ ತಾನೇ ತಾಪತ್ರಯ? ಇಂಥ ಸುಂದರ ಪ್ರಪಂಚಕ್ಕೆ ನಿನಗಿದೋ ನನ್ನ ಸ್ವಾಗತ. ನೆನಪಿರಲಿ, ವಿಶ್ವ ಸಮಾನ ಅವಕಾಶ ನೀಡುವ fair ground ಅಂತೂ ಅಲ್ಲ, ಇದು ದಗಲಬಾಜಿಗಳ, ಸುಳ್ಳರ, ಕಪಟ ಜನರ, ಪ್ರತೀ ಕಾರ್ಯಕ್ಕೂ ಕಮಿಷನ್ ವಾಸನೆಯ ಬೆನ್ನು ಹತ್ತಿ ಹೋಗುವ ಅತಿ ದೊಡ್ಡ fair (ಜಾತ್ರೆ). ಲಂಚಗುಳಿತನದ ಒಂದು ಸುಂದರ eco system ಅನ್ನು  ಹುಟ್ಟುಹಾಕಿದ್ದೇವೆ.  ಲಕ್ಷಾಂತರ ವರ್ಷಗಳ ಕಾಲ ನಿರಂತರ ಪ್ರಯಾಣ ಮಾಡಿದ ವೀರ್ಯದ ಫಲ ನೀನಾಗಿರೋದರಿಂದ ಈ ಪ್ರಪಂಚದಲ್ಲಿ ಬಾಳಿಬದುಕಲು ನಿನಗೆ ಕಷ್ಟವೇನೂ ಆಗಲಿಕ್ಕಿಲ್ಲ, you will effortlessly adapt.     

ಬೀಳ್ಕೊಡುವ ಮೊದಲು ಒಂದು ಮಾತು ನೆನಪಿರಲಿ…..ಯಾರು ತಾವು ಕಾಣುವ ಸುಂದರ ಕನಸನ್ನು ನಂಬುವರೋ ಅವರಿಗೆ ಮಾತ್ರ ಭವಿಷ್ಯ ಸೇರಿದ್ದು; “ಸ್ವರ್ಗ ಕಲ್ಪಿಸಿಕೊಳ್ಳದಿರು” ಎಂದು ಹೇಳುವ ಮತಿಹೀನರಿಗಂತೂ ಖಂಡಿತಾ ಅಲ್ಲ. ಧುಮುಕು ಧರೆಗೆ ಧೈರ್ಯವಾಗಿ.   

 ಚಿತ್ರ ಸೌಜನ್ಯ: ಇಂಗ್ಲೆಂಡಿನ “ಗಾರ್ಡಿಯನ್” ದಿನಪತ್ರಿಕೆ.

Advertisements

‘ಆಪಲ್’ ನ ಸೇಬು ಕಳಾಹೀನ

ಆಪಲ್ ಖ್ಯಾತಿಯ ಸ್ಟೀವ್ ಜಾಬ್ಸ್ ಇನ್ನಿಲ್ಲ. ಆಪಲ್ ಮ್ಯಾಕಿಂತೋಷ್ ಕಂಪೆನಿಯ ಮೂವರು ಮಾಲಿಕರಲ್ಲಿ ಸ್ಟೀವ್ ಒಬ್ಬ. ಆದರೆ ಮೂವರಲ್ಲಿ ಈತನ ಹೆಸರು ಮಾತ್ರ ಹೆಚ್ಚು ಜನಜನಿತ. ಕಪ್ಪು ಬಣ್ಣದ ‘ಟರ್ಟಲ್ ನೆಕ್’ ಟೀ ಶರ್ಟ್, ತಿಳಿ ನೀಲಿ ಜೀನ್ಸ್ ಪ್ಯಾಂಟು ಧರಿಸಿ ಮಂದಹಾಸದೊಂದಿಗೆ ಆಗಾಗ ಹೊಸ ಹೊಸ ಯಂತ್ರಗಳನ್ನು ಖುದ್ದಾಗಿ ವಿಶ್ವಕ್ಕೆ ಪರಿಚಯಿಸುತ್ತಿದ್ದ ಈ ಕನ್ನಡಕಧಾರಿ ಮಾಂತ್ರಿಕ ಗಣಕಯಂತ್ರವನ್ನು “ಸ್ಟುಪಿಡ್ ಬಾಕ್ಸ್” ಎನ್ನುವ ಹಣೆಪಟ್ಟಿಯಿಂದ ಹೊರತಂದು ಹೊಸ ರೂಪ, ಕಾರ್ಯಕ್ಷಮತೆ ಕೊಡುವ ಮೂಲಕ ಜನ ಆತುರ ಕಾತುರದಿಂದ ಕೊಳ್ಳಲು ಪ್ರೇರೇಪಿಸುವಂತೆ ಮಾಡಿದ. ತಾನು ಉದ್ಯಮಿ, ಸಂಶೋಧಕ ಮಾತವಲ್ಲ, ಕಲಾಕಾರ ಕೂಡಾ ಎಂದು ಜನರಿಗೆ ತೋರಿಸಿದ ವೈಶಿಷ್ಟ್ಯ ತುಂಬಿದ ಮೆಶೀನುಗಳ ನ್ನು ತಯಾರಿಸುವುದರ ಮೂಲಕ.

ಅಮೆರಿಕೆಯ “ಎನ್ರಾನ್” ತೈಲ ಕಂಪೆನಿ ಬಿಟ್ಟರೆ ಜಾಬ್ಸ್ ಶುರು ಮಾಡಿದ mac ಅಮೆರಿಕೆಯಲ್ಲಿ most valued company ಯಾಗಿ ಮೂಡಿ ಬಂತು. ತನ್ನ ಮಲ ಪೋಷಕರ ಮನೆಯ garage ನಿಂದ ಆರಂಭ ಗೊಂಡ mac ಉದ್ದಿಮೆ ಶೇರು ಹೂಡಿಕೆದಾರರ ಕಣ್ಮಣಿಯಾಗಿ ಹೊಮ್ಮಿತು. ಸೇಬಿನ ಹಣ್ಣಿನ trade mark ಹೊಂದಿದ್ದ ಈ mac ಕಂಪೆನಿ ತಂತ್ರಜ್ಞಾನ ಕ್ಷೇತ್ರದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತು. ಸಾವಿರ ಹಾಡುಗಳನ್ನು ಜೇಬಿನಲ್ಲಿರಿಸ ಬಹುದಾದ i pod ಅನ್ನು ಜಗತ್ತಿಗೆ ಪರಿಚಯಿಸಿದ ಈ ಸಂಸ್ಥೆ ಸಂಗೀತ ಉದ್ದಿಮೆ ನೆಲಕಚ್ಚಲು ಕಾರಣವಾಯಿತು ಎನ್ನುವ ದೂರು ಕೂಡಾ ಇದೆ. ಮ್ಯಾಕ್ ಪ್ರೊ, ಮ್ಯಾಕ್ ಏರ್ ಗಳಂಥ ಕಂಪ್ಯೂಟರ್ಗಳ ಉತ್ಪಾದನೆ ಮೂಲಕ ಅಮೇರಿಕಾ ಮತ್ತು ಅಇರೋಪ್ಯ ದೇಶಗಳಲ್ಲಿ ಪ್ರಸಿದ್ದಿ ಗಳಿಸಿದ್ದ ಆಪಲ್ ಕಂಪೆನಿ ಏಷ್ಯಾದಲ್ಲಿ ಹೆಚ್ಚು ಗಮನಕ್ಕೆ ಬಂದಿದ್ದು i phone, i phone ಗಳ ಜನಪ್ರಿಯತೆಯಿಂದ.

ಅಮೆರಿಕೆಯವರಿಗೆ ಬಹು ಪ್ರಿಯವಾದ ಕಾರು ಉದ್ಯಮಿ ‘ಫೋರ್ಡ್’ ಮತ್ತು ‘ಕ್ರೈಸ್ಲರ್’ ನಂಥ ಬಹು ಕೋಟಿ ಡಾಲರ್ ನಿಗಮಗಳ ಸಾಲಿನಲ್ಲಿ mac ನಿಲ್ಲಲು ಹೆಚ್ಚು ಸಮಯ ತೆಗೆದು ಕೊಳಲಿಲ್ಲ. ಗಣಕ ಯಂತ್ರದ ಉದ್ಯಮದಲ್ಲಿ ಮೈಕ್ರೋಸಾಫ್ಟ್ ಕಂಪೆನಿಯ ಮುಂದೆ ಆಪಲ್ ನ ಪಾಲು ಕಡಿಮೆಯದಾದರೂ ಜನಪ್ರಿಯತೆ ಮತ್ತು ಪ್ರತಿಷ್ಠೆ ಯಲ್ಲಿ ಮಾತ್ರ ಬಹು ಮುಂದು. ಮ್ಯಾಕಿಂತೋಷ್ ಗಣಕಯಂತ್ರವನ್ನು ಕೊಳ್ಳುವುದೂ, ಉಪಯೋಗಿಸುವುದೂ ಒಂದು fashion statement. ಬೇರೆ ಕಂಪ್ಯೂಟರ್ ಗಳಿಗಿಂತ ಎರಡು ಅಥವಾ ಮೂರು ಪಟ್ಟು ಹೆಚ್ಚು ಬೆಲೆಯಿದ್ದರೂ ಜನ ಕೊಳ್ಳುವುದನ್ನು ಬಿಡಲಿಲ್ಲ, ಆಕರ್ಷಣೆಯೂ ತಗ್ಗಲಿಲ್ಲ. mac ಅನ್ನು ಕೊಂಡವರು ಅದರ ಖಾಯಂ ಗಿರಾಕಿಯಾಗುವುದು ಮಾತ್ರವಲ್ಲದೆ brand ambassador ಸಹ ಆಗುತ್ತಾರಂತೆ. mac ಮೇಲಿನ ಸೆಳೆತ ಮೋಹ ಅಂಥದ್ದು. ಜನರ ಈ ಸೆಳೆತ ಮತ್ತು ಮೋಹಕ್ಕೆ ಸರಿಯಾದ ನ್ಯಾಯವನ್ನೇ ಒದಗಿಸುತ್ತಿತ್ತು ಈ ಯಂತ್ರ ತನ್ನ ಕಾರ್ಯಕ್ಷಮತೆಯಲ್ಲಿ. ಅಮೆರಿಕೆಯ ಹೆಮ್ಮೆಯ ಅಚ್ಚುಮೆಚ್ಚಿನ ನಿಗಮವಾಗಿ mac ರಾರಾಜಿಸಿತು.    

ಸ್ಟೀವ್ ಜಾಬ್ಸ್ ಎಂದರೆ ಆಪಲ್, ಆಪಲ್ ಎಂದರೆ ಸ್ಟೀವ್ ಜಾಬ್ಸ್. ಮನುಷ್ಯ ಮತ್ತು ಯಂತ್ರದ ನಡುವಿನ ಎಂಥ ಮಧುರ, ಮುರಿಯಲಾಗದ ಸಂಬಂಧ. ಬಹುಶಃ ಪ್ರಪಂಚದ ಯಾವುದೇ ಉತ್ಪನ್ನವೂ ತನ್ನ ಒಡೆಯನೊಂದಿಗೆ ಇಷ್ಟು ಸೊಗಸಾಗಿ ಗುರುತಿಸಿ ಕೊಂಡಿರಲಿಕ್ಕಿಲ್ಲ. ನಾನು ನೀವು ಎಷ್ಟೊಂದು ಉಪಕರಣ ಗಳನ್ನು ಬಳಸುತ್ತೇವೆ, ಆದರೆ ಅವುಗಳ ಒಡೆಯರ ಹೆಸರನ್ನು ಗಮನಿಸಿದ್ದೇವೆಯೇ, ನೆನಪಿಟ್ಟುಕೊಂಡಿದ್ದೇವೆಯೇ? ತನ್ನನ್ನು ಎದುರು ಗೊಳ್ಳುವ ಸಾವಿನ ಬಗ್ಗೆ ಐದು ವರ್ಷಗಳ ಹಿಂದೆಯೇ ತಿಳಿದಿದ್ದ ಸ್ಟೀವ್ ವೇದಾಂತಿಯಂತೆ ಹೇಳಿದ್ದು “Remembering that you are going to die is the best way I know to avoid the trap of thinking you have something to lose”. ಬದುಕಿನ ಸವಾಲನ್ನು ಸಾಹಸದಿಂದ ಎದುರಿಸಿದ ಸ್ಟೀವ್ ಸಾವಿನೊಂದಿಗೂ ಅದೇ ನಿಲುವನ್ನು ಪ್ರದರ್ಶಿಸಿದ. ತನ್ನ ಜೀವಿತದ ಕೊನೇ ವರ್ಷವನ್ನು ಕೊರಿಯಾದ ಎಲೆಕ್ಟ್ರಾನಿಕ್ ದೈತ್ಯ ಸ್ಯಾಮ್ಸಂಗ್ ಯೊಂದಿಗೆ ರಚನಾ patent ವಿಷಯದಲ್ಲಿ ತಗಾದೆಯಲ್ಲಿ ಕಳೆದ ಸ್ಟೀವ್ ಜಾಬ್ಸ್ ಜನರ ನೆನಪಿನಿಂದ ಮಾಸಲಾರದ ಹೆಸರು ಎಂದರೂ ತಪ್ಪಾಗಲಾರದು. ಯಕೃತ್ತಿನ ಕ್ಯಾನ್ಸರ್ ರೋಗಕ್ಕೆ ತುತ್ತಾದ ಸ್ಟೀವ್ ತಾನು ಕೊನೆಯುಸಿರೆಳೆಯುವಾಗ ವಯಸ್ಸು ಕೇವಲ ಐವತ್ತಾರು.   

ಸ್ಟೀವ್ ಜಾಬ್ಸ್ ನಿಧನದ ಸುದ್ದಿ ಕೇಳುತ್ತಲೇ ಕಂಪ್ಯೂಟರ್ ಬಳಕೆದಾರರು ದುಃಖಭರಿತರಾಗಿ ಶೋಕ ವ್ಯಕ್ತ ಪಡಿಸಲು ಸಾಮಾಜಿಕ ತಾಣಗಳನ್ನು ಬಳಸಿಕೊಂಡರು. ಟ್ವಿಟ್ಟರ್ ನಲ್ಲಿ ಸಂದೇಶಗಳ ಮಹಾಪೂರ. ಅಂಥ ಒಂದು ಸಂದೇಶದಲ್ಲಿ ಈ ಅನಿಸಿಕೆ ಕಾಣಲು ಸಿಕ್ಕಿತು.
ಪ್ರಪಂಚದಲ್ಲಿ ಮೂರು ಸೇಬಿನ ಹಣ್ಣುಗಳು ಚರಿತ್ರೆ ಬದಲಿಸಿದುವಂತೆ. ಈಡನ್ ಉದ್ಯಾವನದಲ್ಲಿ ಈ ಸೇಬಿನ ಹಣ್ಣನ್ನು ತಿನ್ನಬಾರದು ಎಂದು ತಾಕೀತು ಮಾಡಿದ ದೇವರ ಆಜ್ಞೆಯನ್ನು ಉಲ್ಲಂಘಿಸಿ ಪ್ರಥಮ ವನಿತೆ “ಈವ್” ತಾನು ತಿಂದಿದ್ದು ಮಾತ್ರವಲ್ಲದೆ ಪ್ರಥಮ ಮಾನವ “ಆಡಂ” ಸಹ ತಿನ್ನುವಂತೆ ಮಾಡಿ ಸ್ವರ್ಗ ಲೋಕದಿಂದ ಹೊರಗಟ್ಟಲ್ಪಟ್ಟರು…

ಮಧ್ಯಾಹ್ನದ ಊಟದ ನಂತರ ಹಾಯಾಗಿ ಸೇಬಿನ ಮರದ ಕೆಳಗೆ ಬಿದ್ದು ಕೊಂಡಿದ್ದ ವಿಜ್ಞಾನಿ ಸರ್ ಐಸಾಕ್ ನ್ಯೂಟನ್ ತಲೆಯ ಮೇಲೆ ಸೇಬಿನ ಹಣ್ಣೊಂದು  ಬಿದ್ದು ಗುರುತ್ವಾಕರ್ಷಣೆಯ ನಿಯಮವನ್ನು ಜಗತ್ತಿಗೆ ಪರಿಚಯಿಸುವಲ್ಲಿ ಸಹಕಾರಿಯಾಯಿತು…   

ಅಂತಿಮವಾಗಿ, ಆರೋಗ್ಯವರ್ಧಕ ಹಣ್ಣಾಗಿ ಮತ್ತು ಸುಂದರ ಹೆಣ್ಣಿನ ಗಲ್ಲದೊಂದಿಗೆ ಮಾತ್ರ ಗುರುತಿಸಿಕೊಂಡಿದ್ದ ಈ humble “ಸೇಬು” ಕ್ಯಾಲಿಫೋರ್ನಿಯಾದ “ಕ್ಯುಪರ್ಟೀನೋ” ನಗರದ ತಂತ್ರಜ್ಞಾನ ಕಂಪೆನಿಯೊಂದರ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿತು…

ಸ್ಟೀವ್ ಜಾಬ್ ನಿಧನದೊಂದಿಗೆ apple ನ ಸೇಬು ಕಳಾಹೀನವಾಯಿತು.                   

ಸ್ಟೀವ್ ಜಾಬ್ಸ್, ‘ಆಪಲ್’ ನಿಗಮದ ಒಡೆಯ. ಜನನ: ೧೨.೨.೧೯೫೫, ನಿಧನ: ೦೬.೯.೨೦೧೧ 

ಚಿತ್ರ ಕೃಪೆ: “ಸ್ಟೆಫನೀ” ಯವರ ಟ್ವಿಟರ್ ಖಾತೆಯಿಂದ.