ಯೋನಿ ಆಕಾರದ ಸ್ಟೇಡಿಯಂ

Image

ತುಂಬಾ ದಿನಗಳ ನಂತರ ಬರೆಯುತ್ತಿರುವುದರಿಂದ ಆ belated ಬರಹ ಸ್ವಲ್ಪ orgasmic ಆಗಿರಲಿ ಎನ್ನುವ ತುಂಟತನ ನನ್ನಲ್ಲಿ ಮೂಡಿತು. ಅಷ್ಟಕ್ಕೂ ಬ್ಲಾಗ್ ಲೋಕಕ್ಕೆ ಸಾಮಾನ್ಯವಾಗಿ ಎಳೆಯರು ಬರೋಲ್ಲ, ಅದರಲ್ಲೂ ಕನ್ನಡ ಬ್ಲಾಗ್ ಕಡೆಯಂತೂ ತಲೆಯೇ ಹಾಕೋಲ್ಲ ಎಂದು ನನ್ನ ಲೆಕ್ಕಾಚಾರ. ಹಾಗೇನಾದರೂ ಅಪ್ಪಿ ತಪ್ಪಿ ‘ಪಡ್ಡೆ’ ಗಳು ತಲೆ ಹಾಕಿದರೆ…keep off !

2022 ರಲ್ಲಿ ಕೊಲ್ಲಿ ಪ್ರದೇಶದ ಕತಾರ್ ದೇಶದಲ್ಲಿ ವಿಶ್ವ ಫುಟ್ಬಾಲ್ ಪಂದ್ಯಾವಳಿ. ಕೊಲ್ಲಿ ಪ್ರದೇಶದಲ್ಲಿ ಫುಟ್ ಬಾಲ್ ಎಂದರೆ ಹುಚ್ಚು. ನಮ್ಮ ಕ್ರಿಕೆಟ್ ಥರ. ಇಲ್ಲಿನ ಶ್ರೀಮಂತ ಶೇಖ್ ಗಳು ಯೂರೋಪ್ ದೇಶದ ಪ್ರತಿಷ್ಠಿತ ಫುಟ್ ಬಾಲ್ ಕ್ಲಬ್ ಗಳ ಮಾಲೀಕರು. ಕತಾರ್ ಗೆ ವಿಶ್ವ ಕಪ್ ಪಂದ್ಯಾವಳಿಯ ಅವಕಾಶ ಸಿಕ್ಕಾಗ ಇಡೀ ಪ್ರಾಂತ್ಯ ದಲ್ಲೇ ಒಂದು ಬಗೆಯ ರೋಮಾಂಚನ. ಕತಾರ್ ನ ಪ್ರಯತ್ನಕ್ಕೆ, ಆಸೆಗೆ ತಣ್ಣೀರೆರೆಚಲು ಸಾಕಷ್ಟು ಪ್ರಯತ್ನಗಳು ನಡೆದರೂ ಅವು ಸಫಲವಾಗಲಿಲ್ಲ. ಕತಾರ್ natural gas ಸಂಪನ್ನ ದೇಶ. ಪುಟ್ಟ ದೇಶ, ಅಗಾಧ ಸಂಪತ್ತು. ದೇಶದ ದೊರೆ modern ಚಿಂತನೆಯ ವ್ಯಕ್ತಿ. ಆತನ ಪತ್ನಿ ಇನ್ನಷ್ಟು ಮಾಡರ್ನ್, ಮಾತ್ರವಲ್ಲ ತನ್ನ ಪತಿಯ ಸಲಹೆಗಾರ್ತಿ ಕೂಡಾ.

ಈ ಫುಟ್ ಬಾಲ್ ಪಂದ್ಯಾವಳಿಯ ಯಶಸ್ಸಿಗೆ ಕತಾರ್ ಏನೆಲ್ಲಾ ಸಾಧ್ಯವೋ ಅವನ್ನೆಲ್ಲಾ ಮಾಡುತ್ತಿದೆ. ಹಣದ ಹೊಳೆಯೇ ಹರಿಯುತ್ತಿದೆ. (ಕಾಮನ್ ವೆಲ್ತ್ ಕ್ರೀಡೆಯಲ್ಲಿ ತನ್ನ ವೈಯಕ್ತಿಕ ‘ವೆಲ್ತ್’ ಹೆಚ್ಚಿಸಿಕೊಂಡ ಸುರೇಶ್ ಕಲ್ಮಾಡಿ ಜೊಲ್ಲು ಸುರಿಸುತ್ತಿರಬಹುದು). ಅನೇಕ ಸ್ಟೇಡಿಯಂ ಗಳು ತಲೆಯುತ್ತುತ್ತಿವೆ. ಅತ್ಯಾಧುನಿಕ ಸ್ಟೇಡಿಯಂ ಗಳು, ಪ್ರತಿಭಾವಂತ architect ಗಳ ಸಂಗಮ ಕತಾರ್.

‘ಅಲ್- ವಕ್ರಾ’ ಹೆಸರಿನ ಸ್ಟೇಡಿಯಂ ಈಗ ಹೆಸರು ಮಾಡುತ್ತಿದೆ. for all wrong reasons. ಸ್ಟೇಡಿಯಂ ನ ನಕ್ಷೆ ನೋಡಿದ ಜನ ಗುಸು ಗುಸು ಅನ್ನ ತೊಡಗಿದರು. ಇದೇನು, ಈ ಸ್ಟೇಡಿಯಂ ಯೋನಿಯ ಥರ ಕಾಣ್ತಾ ಇದೆಯಲ್ಲಾ? ooops. ‘ಯೋನಿ’ ನಾ? ಶಿವ ಶಿವಾ ಎನ್ನಬೇಡಿ. architecture ಅನ್ನು anatomy ಗೆ ಹೋಲಿಸುವ ವಕ್ರ ಬುದ್ಧಿ ಬಿಡಬೇಕು. ಬೆಪ್ಪೆ, ಹವಳ ವನ್ನು ಹೆಕ್ಕಲು ಸಮುದ್ರಕ್ಕೆ ಹೋಗುವ dhow ಎಂದು ಕರೆಯಲ್ಪಡುವ ದೋಣಿಯ ಆಕಾರದಲ್ಲಿದೆ ಈ ಸ್ಟೇಡಿಯಂ ಎಂದು architect ನ ಉದ್ಗಾರ.

ಈಗ ಈ ಚಿತ್ರ ನೋಡಿ, ನಿಮ್ಮ ತೀರ್ಮಾನ ಹೇಳಿ. ಇಲ್ಲಾ ರೀ, ನೀವ್ ಏನೇ ಹೇಳಿ, ಇದು ದೋಣಿಯಲ್ಲ, ಯೋನಿ, ಎಂದಿರಾ?…ಏನೀಗ? ಹೌದು, ಅದು ಯೋನಿಯೇ, put up or shut up.

ಅಷ್ಟಕ್ಕೂ ದೋಣಿ ಮತ್ತು ಯೋನಿ ಕಾಯಕದಲ್ಲಿ, ಮಾಡುವ ಕೆಲಸ ಒಂದೇ….
ಹ ಹಾ.

 

ಈ ಭಾವನೆ ಎಲ್ಲರಲ್ಲೂ ಇದ್ದಿದ್ದರೆ?

ಮಹಾಕಾವ್ಯ ಮಹಾಭಾರತವನ್ನು ವಿಮರ್ಶಿಸಿ ಒಬ್ಬರು ಲೇಖನದ ಬರೆದರು. ಅದರಲ್ಲಿ ಮಹಾಭಾರತ ವನ್ನು ಸ್ವಲ್ಪ ಕಟುವಾಗಿ ಟೀಕಿಸಲಾಗಿತ್ತು. ಓದಿದ ಒಬ್ಬರು ಈ ಲೇಖನಕ್ಕೆ ಪ್ರತಿಕ್ರಯಿಸಿದ್ದು ಹೀಗೆ.

“ಯಾವುದೋ ಕಾಲದ ಪುರಾಣದ ಕತೆಗಳನ್ನು ತೆಗೆದುಕೊಂಡು, ನಮ್ಮ ಮನಸಿಗೆ ಕಾಣುವುದೆ ಸತ್ಯವೆಂದು ನಿರ್ದರಿಸಿ, (ನಾವು ಯಾರು ಆಗಿನ ಕಾಲಕ್ಕೆ ಹೋಗಿ ಸತ್ಯವೇನೆಂದು ಅರಿಯಲಾರೆವು, ಏನು ನಡೆಯಿತೆಂದು ತಿಳಿಯಲಾರೆವು), ಈಗಿನ ವಾತವರಣ ಕಲುಶಿತಗೊಳಿಸುತ್ತ ಹೋಗುವ ಅರ್ಥವಾದರು ಏನು . ನಿಮಗೆ ಕೃಷ್ಣ ರಾಮರು ಬೇಡ ಬಿಡಿ. ಆದರೆ ಯಾವುದು ಸತ್ಯ ತಿಳಿಸಿ, ಅದನ್ನೆ ಎಲ್ಲರಿಗು ಹೇಳಿ, ನಿಮ್ಮ ದಾರಿಗೆ ಕರೆದೊಯ್ಯಿರಿ, ಆದರೆ ಯಾವುದನ್ನೊ ನಿಂದಿಸುತ್ತ, ಅವರ ನಂಭಿಕೆಯನ್ನು ದ್ವೇಶಿಸುತ್ತ ಇದ್ದಲ್ಲಿ, ಅವರು ನಿಮ್ಮ ಭಾವನೆಗಳನ್ನು ಹೇಗೆ ಗೌರವಿಸುತ್ತಾರೆ. ದ್ವೇಶದಿಂದ ದ್ವೇಶವೆ ಹುಟ್ಟುತ್ತದೆ, ನಿಂದನೆಯಿಂದ ನಿಂದನೆಯಿ ಹುಟ್ಟುತ್ತದೆ, ಮತ್ತೆ ಕಡೆಯದಾಗಿ ಪ್ರೀತಿಯಿಂದ ಪ್ರೀತಿಯೆ ಹುಟ್ಟುತ್ತದೆ.”

ಸತ್ಯವಾದ ಮಾತುಗಳು. ಹಳೆಕಾಲದ ರಾಜರ ಪ್ರಮಾದಗಳನ್ನು ಇತಿಹಾಸ ಎಂದು ವಿಷ ಸೇರಿಸಿ ವಿಕೃತ ಇದೇ ಇತಿಹಾಸ ಎಂದು ಸುಖ ಕಾಣುವ ‘ಇತಿಹಾಸ್ಯ’ ಕಾರರು, ಆ ಇತಿಹಾಸ್ಯ ಓದಿ ಇಂದಿನ ಪೀಳಿಗೆಯವರನ್ನು ಗೋಳು ಹೊಯ್ದು ಕೊಳ್ಳುವ ತರಲೆಗಳು, ಪತ್ರಿಕಾ ಧರ್ಮದ ಗಂಧ ಗಾಳಿಯಿಲ್ಲದೆ ಧ್ವೇಷ ತುಂಬಿದ ಲೇಖನಗಳನ್ನು ರಚಿಸುವ ‘ಪೋಸ್ಟರ್ ಬಾಯ್’ ಗಳು ತಮ್ಮ ಮನಸ್ಸು ಮತಿಯ ಮೇಲೆ ಅಚ್ಚೊತ್ತ ಬೇಕಾದ ಮಾತುಗಳು ಮೇಲಿನವು.

…….ಇದ್ದಿದ್ದ ‘ರೆ’? ಈ ತಲೆಬರಹದ ‘ರೆ’ ಬರೀ ಆಶಯವಾಗಿರದೆ ‘ಖರೆ’ಯಾದರೆ ನಮ್ಮ ದೇಶ ಇನ್ನೂ ಚೆಂದ.

ಒಂದು “ಲಾ” ಪ್ರಹಸನ

ಏನ್ ಲಾ…. ಏನಿಲ್ಲ ಕಣ್ಲಾ ; ಇದು ಮೊನ್ನೆ ಮೊನ್ನೆ ನಮ್ಮ ರಾಜ್ಯದಲ್ಲಿ ನಡೆದ ಗದ್ದಲದ ವಿಶ್ಲೇಷಣೆ ಮತ್ತು ಫಲಿತಾಂಶ. ಪತ್ರಕರ್ತರ, ವಕೀಲರ, ಪೊಲೀಸರ ಮಧ್ಯೆ ಜಗಳ ಕಂಡ ನಮ್ಮ ರಾಜ್ಯ ತನ್ನ ಅಪಕೀರ್ತಿಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿತು. ರಂ. ಶ್ರೀ. ಮುಗಳಿಯವರ “ಎಂಥ ನಾಡಿದು, ಎಂಥ ಕಾಡಾಯಿತೋ” ಪರಿತಾಪಕ್ಕೆ ತಕ್ಕಂತೆ ನಡೆದು ಕೊಂಡಿತು ನಮ್ಮ ಪ್ರೀತಿಯ ರಾಜ್ಯ. ಆದರೆ ಈ ಲೇಖನ ಆ ಜಗಳದ ಬಗ್ಗೆ ಅಲ್ಲ. ಇದು ಸ್ವಲ್ಪ ಬೇರೆ ತೆರನಾದುದು. ಮರುಭೂಮಿಯ ಈ “ಲಾ” ನಮ್ಮ ಮೈ ಪರಚಿಕೊಳ್ಳುವಂತೆ ಮಾಡುತ್ತದೆ. ಅಸಹಾಯಕೆಯಿಂದ ಬಸವಳಿಯುವಂತೆ ಮಾಡುತ್ತದೆ. ಯಾವುದೋ ಒಂದು ಹಿಂದಿ ಚಿತ್ರದಲ್ಲಿ ಯಕಃಶ್ಚಿತ್ ಸೊಳ್ಳೆ ನಟ ನಾನಾ ಪಾಟೇಕರ್ ನನ್ನು ನಪುಂಸಕನನ್ನಾಗಿಸಿದಂತೆ; ಸಾಲಾ, ಏಕ್ ಮಚ್ಛರ್, ಆದ್ಮಿ ಕೋ ಹಿಜಡಾ ಬನಾ ದೇತಾ ಹೈ.    

ಅರೇಬಿಕ್ ಭಾಷೆಯ “ಲಾ” ಪದದ ಅರ್ಥ “NO” ಎಂದು. ಈ ಮಾತು ಅರಬ್ ನ ಬಾಯಿಂದ ಬಿತ್ತು ಎಂದರೆ ಅದನ್ನು ಸರಿ ಪಡಿಸಲು ಯಾರಿಂದಲೂ ಸುಲಭ ಸಾಧ್ಯವಲ್ಲ. ನಮ್ಮ ಸಂವಿಧಾನಕ್ಕೆ ತಿದ್ದುಪಡಿ ಬೇಕಾದರೂ ತರಬಹುದು ಈ ಲಾ ಗೆ ತಿದ್ದುಪಡಿ ತರೋದು ಅಸಾಧ್ಯ. ಬ್ಯಾಂಕಿನಲ್ಲಿ, ಪೊಲೀಸ್ ಪೇದೆಯ ಕಯ್ಯಲ್ಲಿ, ಕಸ್ಟಮ್ಸ್ ನಲ್ಲಿ, ಕಚೇರಿಯಲ್ಲಿ, ಎಲ್ಲಿ ಹೋದರೂ ಈ ಪದದ ರುಚಿ ಆಗುತ್ತಲೇ ಇರುತ್ತದೆ. ಮೊನ್ನೆ ನನ್ನ ಮಿತ್ರರೊಬ್ಬರಿಗೆ ಆದ ಅನುಭವ ಇದು.

ದುಬೈ ನಿಂದ ರಿಯಾದ್ ವಿಮಾನ ನಿಲ್ದಾಣಕ್ಕೆ ಇಳಿದು ಕಸ್ಟಮ್ಸ್ ಚೆಕ್ ಗಾಗಿ ಸರತಿಯಲ್ಲಿ ನಿಂತರು ನನ್ನ ಮಿತ್ರರು. ಅವರ ಮುಂದೆ ಫ್ರಾನ್ಸ್ ದೇಶದ ಸೂಟು ಬೂಟು ಧರಿಸಿದ ಬಿಳಿಯ ನಿಂತಿದ್ದ. ದುಬೈ ನಿಂದ ರಿಯಾದ್ transit ಆಗಿ ಪ್ಯಾರಿಸ್ ಹೋಗುವವನಿದ್ದ ಈ ಫ್ರೆಂಚ್ ಪ್ರಜೆ. ಕಸ್ಟಮ್ಸ್ ನಲ್ಲಿ ಅವನ ಸೂಟ್ ಕೇಸನ್ನು ಪರಿಶೀಲಿಸಿದಾಗ ದೊಡ್ಡ ಬಾಟಲಿಯೊಂದು ಅಧಿಕಾರಿಯ ಕಣ್ಣಿಗೆ ಬಿತ್ತು. ಬೆಲೆಬಾಳುವ ಬ್ರಾಂಡಿ ಬಾಟಲಿ. ಬಾಟಲಿಯನ್ನು ಕೈಯ್ಯಲ್ಲಿ ಹಿಡಿದು ಹೊರಳಿಸುತ್ತಾ ಹುಬ್ಬೇರಿಸಿದ ಕಸ್ಟಮ್ಸ್ ಆಫೀಸರ್. ಬಿಳಿಯ ಕಣ್ಣುಗಳನ್ನು ರೋಲ್ ಮಾಡುತ್ತಾ nonchalant ಆಗಿ ಭುಜ ಹಾರಿಸಿದ. clash of culture. ಒಬ್ಬನಿಗೆ ಮದ್ಯ ನಿಷಿದ್ಧ, ಎದುರು ನಿಂತವನಿಗೆ way of life. ಮದ್ಯ ನಮ್ಮ ದೇಶದಲ್ಲಿ ನಿಷಿದ್ಧ ಎಂದು ಆಫೀಸರ್ ಹೇಳಿದಾಗ ಬಿಳಿಯ ಹೇಳಿದ, ನನಗೆ ಗೊತ್ತು, ಆದರೆ ನಾನು ದುಬೈ ನಿಂದ ಬರುತ್ತಿದ್ದೇನೆ, ನನ್ನ ದೇಶಕ್ಕೆ ಹೋಗುವ ದಾರಿಯಲ್ಲಿ ರಿಯಾದ್ ನಲ್ಲಿ ಇಳಿದಿದ್ದೇನೆ ನನ್ನ ವಿಮಾನ ಹೊರಡುವ ತನಕ ಎಂದ. ಆಫೀಸರ್ ಹೇಳಿದ “ಲಾ”. ಬಿಳಿಯ ಹೇಳಿದ ನಾನು ನಿನ್ನ ದೇಶದಲ್ಲಿ ವಾಸಿಸಲೋ, ನೌಕರಿ ಮಾಡಲೋ ಬಂದಿಲ್ಲ, ಟ್ರಾನ್ಸಿಟ್ ಮೇಲೆ ಬಂದಿದ್ದೇನೆ ಎಂದು ವಾದಿಸಿದ. ಆಫೀಸರ್ ಮತ್ತೊಮ್ಮೆ ಗಿಳಿಯಂತೆ ಉಲಿದ “ಲಾ”. ಸಹನೆಯ ಎಲ್ಲೆ ಪರೀಕ್ಷಿಸುತ್ತಿದ್ದ ಆಫೀಸರ್ ನನ್ನು ದುರುಗುಟ್ಟಿ ನೋಡಿದ ಬಿಳಿಯ ಸರಿ, ಅದನ್ನು ನೀನೇ ಇಟ್ಟು ಕೋ, ನನ್ನನ್ನು ಹೋಗಲು ಬಿಡು ಎಂದ. ಅದಕ್ಕೂ ಬಂತು ಉತ್ತರ ‘ಲಾ’. “ನನ್ನ ಧರ್ಮದಲ್ಲಿ ನಾನು ಕುಡಿಯುವಂತಿಲ್ಲ” ಎಂದ ಆಫೀಸರ್. ಅದಕ್ಕೆ ಬಿಳಿಯ ಹೇಳಿದ ನಿನಗೆ ಏನು ಬೇಕೋ ಅದು ಮಾಡು, ಗಾರ್ಬೇಜ್ ಗೆ ಬೇಕಾದರೂ ಎಸೆ, ನನ್ನನ್ನು ಹೋಗಲು ಕೊಡು ಎಂದ ಹತಾಶೆಯಿಂದ. ಆಫೀಸರ್ ಹೇಳಿದ ‘ಲಾ’…..ನಾನು ಈ ಬಾಟಲಿಯನ್ನು ನನ್ನ ಹತ್ತಿರ ಇಟ್ಟುಕೊಂಡು ನಿನ್ನನ್ನು ಕಳಿಸಿದರೆ ನಾನದನ್ನು ಕುಡಿಯುತ್ತೇನೆ ಎಂದು ನೀನು ತಿಳಿಯಬಹುದು. ಪರಚಿಕೊಳ್ಳುತ್ತಾ  ಬಿಳಿಯ ಕೇಳಿದ ನಾನೀಗ ಏನು ಮಾಡಬೇಕು…………? ಆಫೀಸರ್ ಹೇಳಿದ ನೀನು ನನ್ನ ಜೊತೆ ಬರಬೇಕು. ಎಲ್ಲಿಗೆ ಎಂದ ಬಿಳಿಯ. ಟಾಯ್ಲೆಟ್ಟಿಗೆ ಎಂದು ಹೇಳುತ್ತಾ ಟಾಯ್ಲೆಟ್ ಕಡೆ ನಡೆದ ಆಫೀಸರ್. ಬೇರೆ ದಾರಿ ಕಾಣದೇ ಬಿಳಿಯ ಅವನನ್ನು ಹಿಂಬಾಲಿಸಿದ. ಸಾರಾಯಿ ಬಾಟಲಿಯ ಕಾರ್ಕ್ ತೆಗೆದು ಗಟ ಗಟ, ಗಟ ಗಟ ಎಂದು ಆಫೀಸರ್ ಟಾಯ್ಲೆಟ್ ಗುಂಡಿಯ ಗಂಟಲಿಗೆ ಸುರಿದ ಮದ್ಯ. ಬರಿದಾದ ಬಾಟಲಿಯನ್ನು ನುಚ್ಚು ನೂರು ಮಾಡಿ ಅವನ ಕಡೆಗೆ ಒಂದು ಮಂದಹಾಸ ಬೀರಿ ನಡೆದ. ಕ್ಷಣ ಕಾಲ ದಂಗಾಗಿ ನಿಂತು, ಸಾವರಿಸಿಕೊಂಡು ತನ್ನ ಸಾಮಾನುಗಳನ್ನು ಸೂಟ್ ಕೇಸಿನಲ್ಲಿ ತುಂಬಿಸಿ ಕೊಂಡು ಜಾಗ ಖಾಲಿ ಮಾಡಿದ ನತದೃಷ್ಟ ಫ್ರೆಂಚ್ ಪ್ರಜೆ.

ಚಿತ್ರ ಏನು?: ಚಿತ್ರದಲ್ಲಿರುವುದು “ಲಾ” ಕಾರದ ಕಲಿಗ್ರಫಿ (caligraphy) ರೂಪ. ಕಲಿಗ್ರಫಿ ಎಂದರೆ ಸುಂದರ ಬರಹ ಅಂತ. ಅರೇಬಿಕ್ ಭಾಷೆ cursive ಆಗಿರುವುದರ ಕಾರಣ ಕಲಾತ್ಮಕವಾಗಿ  ಹೇಗೆ ಬೇಕಾದರೂ, ಯಾವ ರೂಪದಲ್ಲೂ ಬರೆಯಬಹುದು. ಇದೊಂದು ಜನಪ್ರಿಯ ಕಲೆ. ಕಲಿಗ್ರಫಿ ಗಾಗಿ ವಿಶೇಷ ಪೆನ್ನುಗಳು ಬೇಕಾಗುತ್ತವೆ, ಅದರೊಂದಿಗೆ ಕಲಾವಂತಿಕೆ ಮತ್ತು ಸಂಯಮ ಕೂಡಾ. 

ಚಿತ್ರ ಕೃಪೆ: http://www.oweis.com

ಪ್ರತಿಕ್ರಿಯೆ ಬೇಡ

  • ಕನಿಷ್ಠ  ದಿನಕ್ಕೊಮ್ಮೆ ಪೋಸ್ಟು ಪೋಸ್ಟು ಎಂದು ಹೇಗ್ರೀ ಕೂಗೋದು? ಈಗ ಎಲ್ಲಿದೆ ಪೋಸ್ಟು ಗೀಸ್ಟು, ಈಗ ಎಲ್ಲಾ ಮೇಲು ಗೀಲು ಎಂದಿರಾ? ಪೋಸ್ಟ್ ಅಂದಿದ್ದು ವರ್ಡ್ ಪ್ರೆಸ್ ಬ್ಲಾಗ್ ತಾಣಕ್ಕೆ ನಾವು ಬರೆದು ಪ್ರಕಟಿಸುವ ಬರಹದ ಬಗ್ಗೆ. ವರ್ಡ್ ಪ್ರೆಸ್ ತಾಣವನ್ನು ಹೊಕ್ಕ ಕೂಡಲೇ freshly pressed ವಿಭಾಗದಲ್ಲಿ ಇರುವ ಲೇಖನದ ಮೇಲೆ ಕಣ್ಣಾಡಿಸಿ ಪ್ರಕಟವಾದ ಲೇಖನಗಳಿಗೆ ಬರುವ ಸ್ವಾರಸ್ಯಕರ ಪ್ರತಿಕ್ರಿಯೆ ಓದುವುದು ನನ್ನ ಅಭ್ಯಾಸ. ಕೇಕ್ ಹೇಗೇ ಮಾಡೋದು ಎನ್ನುವುದರಿಂದ ಹಿಡಿದು ವಾಕ್ ಹೇಗೇ ಮಾಡೋದು, ಪೇರೆಂಟಲ್ (ಪಾಲಕತ್ವ?) ಬಗ್ಗೆ, ಪ್ರವಾಸದ ಬಗ್ಗೆ, ಬರೆಯಲು ಏನೂ ಹೊಳೆಯದಾದಾಗ ವಿಷಯ ಕಂಡು ಕೊಳ್ಳುವುದು ಹೇಗೆ………ಹೀಗೆ ಬ್ಲಾಗ್ ಪೋಸ್ಟ್ ಗಳ ಸುಗ್ಗಿ ಕಾಣಲು ಸಿಗುತ್ತದೆ. ಒಂದೊಂದು ಪೋಸ್ಟ್ ಗೂ ನೂರಾರು ಪ್ರತಿಕ್ರಿಯೆಗಳು. ವಿಷಯ ಎಷ್ಟೇ trivial ಆಗಿರಲಿ ಆಸ್ಥೆಯಿಂದ ತಮ್ಮ ಅಭಿಪ್ರಾಯ ಪ್ರಕಟಿಸುತ್ತಾರೆ ಓದುಗರು. ಅದೇ ವೇಳೆ ನಮ್ಮ ಕನ್ನಡ ತಾಣಗಳಲ್ಲಿ ಬರುವ ಪ್ರತಿಕ್ರಿಯೆಗಳ ಕಡೆ ಸ್ವಲ್ಪ ನೋಡಿ. ಪ್ರತಿಕ್ರಿಯೆ ಗಳಿಲ್ಲದೆ ಆಹಾರ, ಪೋಷಕಾಂಶ ಇಲ್ಲದೆ, ಕೃಶರಾಗಿ  ನರಳುವ ಸೊಮಾಲಿಯಾ ದೇಶದ ಮಕ್ಕಳ ಥರ ಕಾಣುತ್ತದೆ ಬ್ಲಾಗ್ ಪೋಸ್ಟು. ಈ ಅಸಡ್ಡೆಗೆ, indifference ಗೆ ಕಾರಣವಾದರೂ ಏನಿರಬಹುದು? ಥಟ್ಟನೆ ಸೋಮಾರಿತನ ಕಾರಣ ಎಂದು ತೋರಿದರೂ ಕೆಲವೊಮ್ಮೆ ಮತ್ತೊಂದು ಕಾರಣ ತಲೆಗೆ ತೂರಿ ಕೊಳ್ಳುತ್ತದೆ. ಅದೇನೆಂದರೆ ಓದಿದ ಬರಹಕ್ಕೆ   ಪ್ರತಿಕ್ರಯಿಸಬೇಕೆಂದರೆ ಕೀಲಿ ಮಣೆ ಕುಟ್ಟಲೇ ಬೇಕಲ್ಲವೇ? ಹೀಗೆ ಪ್ರತೀ ಬರಹಕ್ಕೂ ಕೀಲಿಗಳನ್ನು ಕುಟ್ಟುತ್ತಾ ಕೂತರೆ ಕೀಲಿಗಳು ಕೀಲು ಬಿಟ್ಟುಕೊಂಡು ಉದುರಿದರೆ? ಕಂಪ್ಯೂಟರ್ ಹತ್ತಾರು ಸಾವಿರ ಬೆಲೆಬಾಳುವ ಉಪಕರಣ ತಾನೇ? ಸುಮ್ಮ ಸುಮ್ಮನೆ ಅದನ್ನು ಹಾಳುಗೆಡವಲು ಸಾಧ್ಯವೇ? ನಿಮಗೆ ಗೊತ್ತೇ ಇರಬಹುದು, ಟೀವೀ ಬಂದಾಗ ಅದರೊಂದಿಗೆ ಬರುವ ರಿಮೋಟ್ ಕಂಟ್ರೋಲ್ ಉಪಕರಣವನ್ನು ನಾವು ಜೋಪಾನ ಮಾಡೋ ರೀತಿ. ಕೆಲವರು ಪ್ಲಾಸ್ಟಿಕ್ ಕವರ್ ಹೊದಿಸಿದರೆ ಮತ್ತೆ ಕೆಲವರು ಪ್ಲಾಸ್ಟಿಕ್ ಕವಚ ಹಾಕುತ್ತಾರೆ, ಒತ್ತಿ ಒತ್ತಿ ಎಲ್ಲಿ ಬಟನ್ನುಗಳು ಕಿತ್ತು ಬರುತ್ತೋ ಎಂದು. ಈ ತೆರನಾದ ಕಾರಣವೇನಾದರೂ ಇರಬಹುದೇ ಪ್ರತಿಕ್ರಿಯೆಗಳ ಬರಗಾಲಕ್ಕೆ? ಕೆಲಸವಿಲ್ಲದವನು ಏನೋ ಬರೆದು ಹಾಕಿದ್ದಕ್ಕೆ ನಾವೇಕೆ ಪ್ರತಿಕ್ರಯಿಸಿ ನಮ್ಮ ಕೀ ಬೋರ್ಡ್ ಹಾಳುಗೆಡವ ಬೇಕು ಎನ್ನುವ ಧೋರಣೆಯೋ? ಹೊಸತಾಗಿ ಬರಹ ಕೈಗೆತ್ತಿ ಕೊಂಡು ಈ ರೀತಿಯ ಓದುಗ ಸಮೂಹದ ಅಸಡ್ಡೆಗೆ expose ಆದನೋ, ಅವನ ಗತಿ ದೇವರಿಗೇ ಪ್ರೀತಿ. ಬರಹ ನೂ ಬೇಡ ಏನೂ ಬೇಡ, ಇದು ನನ್ನ ಕೈಗೆ ಹೇಳಿಸಿದ ಕೆಲಸ ಅಲ್ಲ ಎಂದು ಮುದುಡಿ ಕೊಳ್ಳುತ್ತಾನೆ. ಆದರೆ ನನ್ನಂಥ ದಪ್ಪ ಚರ್ಮದ ಜನರಿಗೆ ಓದುಗರ “ಅಸಡ್ಡೆ” ಯೇ ಒಂದು ರೀತಿಯ ಮೂಕಿ (ಮೂಕಿ ಟಾಕಿ ಗೊತ್ತಲ್ಲ?) ಪ್ರತಿಕ್ರಿಯೆ.
  • ನನ್ನ “ಹಳೇ ಸೇತುವೆ” ಬ್ಲಾಗ್ ಗೆ ಇದುವರೆಗೆ ಭೇಟಿ ಕೊಟ್ಟವರ ಸಂಖ್ಯೆ ೨೦,೦೦೦ ದಾಟಿದ “ಅವಿಸ್ಮರಣೀಯ ಅನುಭವ” ಕ್ಕೆ ಅರ್ಪಣೆ ಈ ಲಘು ಬರಹ. ಎಲ್ಲರಿಗೂ ವಂದನೆಗಳು.
  • ಸೂಚನೆ: ಬೇಡ, ಬೇಡ, ಪ್ರತಿಕ್ರಿಯೆ ಬೇಡ, ನೀವು ಓದುವಾಗ ನಿಮ್ಮ ಕಣ್ಣುಗಳಲ್ಲೇ ನನಗೆ ಕಾಣುತ್ತಿದೆ ಶುಭಾಶಯಗಳು ಎನ್ನುವ ಹಾರೈಕೆ.                 

(ಯಶಸ್ವಿಯಾಗಿ) ಬರೆಯಲು ಮೂರು ಸೂತ್ರಗಳು

ಬರಹದಲ್ಲಿ ಯಶಸ್ವಿಯಾಗಲು ಮೂರು ಸೂತ್ರಗಳಿವೆ.ಅವುಗಳ ಬಗ್ಗೆ ತಿಳಿಯುವ ಮೊದಲು ಒಂದು ನೋಟ ಬೀರೋಣ ನಮ್ಮ ಆಕಾಂಕ್ಷೆಯ ಬಗ್ಗೆ.

ಬರೆಯಬೇಕು ಎನ್ನುವ ಹಂಬಲ, ಚಪಲ ಸಾಮಾನ್ಯವಾಗಿ ಎಲ್ಲರಲ್ಲೂ ಇದ್ದಿದ್ದೇ. ಆದರೆ ಕೆಲವರು ಬರವಣಿಗೆಯನ್ನು ಎಲ್ಲಿಂದ ಆರಂಭಿಸಬೇಕು ಎಂದು ತಿಳಿಯದೆ ಭಾವನೆಗಳನ್ನು ತಮ್ಮಲ್ಲೇ ಇಟ್ಟು ಕೊಂಡಿರುತ್ತಾರೆ. ತಾವು ಬರೆದದ್ದನ್ನೆಲ್ಲಾ ಪತ್ರಿಕೆಗಳು ಪ್ರಕಟಿಸಬೇಕೆಂದೇನೂ ಇಲ್ಲವಲ್ಲ. ಆದರೆ ಅಂತರ್ಜಾಲದ ಉಗಮದೊಂದಿಗೆ ಬರೆಯುವವರಿಗೆ ಒಂದು ವೇದಿಕೆಯಾಗಿ, ವರವಾಗಿ ಬಂದವು ಬ್ಲಾಗ್ ಗಳು. ಚಿಕ್ಕಾಸಿನ ಖರ್ಚಿಲ್ಲದೆ ತಮಗೆ ಇಷ್ಟವಾದ ಹೆಸರಿನಲ್ಲಿ ಬ್ಲಾಗೊಂದನ್ನು ಆರಂಭಿಸಿಕೊಂಡು ನಮಗೆ ತೋಚಿದ್ದನ್ನು ಬರೆಯಬಹುದು. ಅಥವಾ ತಾವು ಬರೆದದ್ದು ಸಾರ್ವಜನಿಕರಿಗೆ ಕಾಣಿಸಬಾರದು ಎಂದೇನಾದರೂ ಆಸೆಯಿದ್ದರೆ ಅದಕ್ಕೂ ಹಾಕಬಹುದು ಕಡಿವಾಣವ ಸೆಟ್ಟಿಂಗ್ಸ್ ಮೂಲಕ.

ಸರಿ ಬ್ಲಾಗ್ ಏನೋ ತೆರೆದಾಯಿತು. ಬರೆಯಲು ಈಗ ಲಾಂಚಿಂಗ್ ಪ್ಯಾಡ್ ಆಗಿ ಬ್ಲಾಗ್ ಒಂದನ್ನು ತೆರೆದಾಯಿತು. ಜಿಗಿಯೋದು ಹೇಗೆ?

ಈಜಲು ಕಲಿಯಬೇಕೆಂದರೆ ಧುಮುಕಬೇಕು ನೀರಿಗೆ. ಬರೆಯಬೇಕು ಎಂದೆನ್ನಿಸಿದರೆ ಕೂಡಲೇ ಒಂದು ಪ್ರಶಸ್ತವಾದ ಸ್ಥಳವನ್ನ ಆರಿಸಿಕೊಂಡು ತೊಡಗಬೇಕು ಪೋಣಿಸಲು ಅಕ್ಷರಗಳನ್ನು. ಆದರೆ ಈ ಕೆಲಸ ಹೇಳಿದಷ್ಟು ಸುಲಭವಲ್ಲದಿದ್ದರೂ ಬರೆಯುವ ಹಂಬಲವಿದ್ದರೆ ಬರೆಯಲೇಬೇಕು. we do not write because we want to; we write because we have to ಸುಪ್ರಸಿದ್ಧ ಸಾಹಿತಿ “ಸಾಮರ್ಸೆಟ್ ಮಾಹಂ” (somerset maugham) ಅವರ ಮಾತುಗಳಿವು.  

ಇನ್ನು ಬರೆಯಲು ನಮ್ಮನ್ನು ನಾವು ತೊಡಗಿಸಿಕೊಂಡರೆ ಬೇಕಾಗುವ ಅವಶ್ಯಕತೆಗಳಲ್ಲಿ “ಓದು” ಮೊಟ್ಟ ಮೊದಲನೆಯದು. ನಮಗಿಷ್ಟವಾದ ಲೇಖಕರ ಲೇಖನ, ಬರಹಗಳನ್ನ ಓದಿ ಅವರು ಬರೆಯುವ ಶೈಲಿ, ಪದ ಪ್ರಯೋಗ ಮುಂತಾದುವುಗಳನ್ನು ಗಮನಿಸಿ ನಮ್ಮ ಬರಹಗಳಲ್ಲಿ ಅವನ್ನು ಅಳವಡಿಸಿಕೊಂಡರೆ ನಮ್ಮ ಬರಹದ ಕಡೆಗಿನ ಪ್ರಯಾಣ ಸುಖಕರ. ಆಂಗ್ಲ ಸಾಹಿತ್ಯದಲ್ಲಿ ಆಸಕ್ತಿಯುಳ್ಳವರು ಮೇಲೆ ಹೇಳಿದ Somerset  Maugham ಅವರ ಕಥೆಗಳನ್ನ ಓದಿದರೆ ಬಹಳಷ್ಟನ್ನು ಕಲಿಯಬಹುದು. ಮಾಹಂ ಅವರ of human bondage ನನ್ನನ್ನು ಕಾಡಿದ, ಮನ ಕರಗಿಸಿದ ಪುಸ್ತಕಗಳಲ್ಲೊಂದು. ಮತ್ತೊಂದು Wilkie Collins ಅವರ woman in white.  

ಮೊನ್ನೆ ದುಬೈ ನಗರದ ಕಂಪೆನಿಯೊಂದು ಜೆಡ್ಡಾದಲ್ಲಿ ಪುಸ್ತಕ ಪ್ರದರ್ಶನ ಏರ್ಪಡಿಸಿತ್ತು. ಅಲ್ಲಿ ಪುಸ್ತಕವೊಂದನ್ನು ಕೊಂಡೆ. “chicken soup for writer’s soul”. ಈ ಪುಸ್ತಕ ನೂರಾರು ಉದಾಹರಣೆಗಳ ಸಮೇತ ಹಲವು ಬರಹಗಾರರ ಅನುಭವಗಳನ್ನ ಕೊಟ್ಟು ಎಂಥ ನಕಾರಾತ್ಮಕ ಪ್ರತಿಕ್ರಿಯೆಗಳಿಗೂ ಸೊಪ್ಪು ಹಾಕದೆ ಮುನ್ನಡೆಯಲು ಪ್ರೋತ್ಸಾಹಿಸುತ್ತದೆ. ನನ್ನ ಪ್ರಕಾರ ನವ ಬರಹಗಾರರಿಗೆ ಇದಕ್ಕಿಂತ ಉತ್ತಮ ಪುಸ್ತಕ ಬೇರೊಂದಿಲ್ಲ. ಆ ಪುಸ್ತಕದಲ್ಲಿ ನ ಸ್ವಾರಸ್ಯಕರವಾದ ತುಣುಕುಗಳನ್ನು ವೈಯಕ್ತಿಕ ಬ್ಲಾಗ್ ನಲ್ಲಿ ಬರೆಯುತ್ತೇನೆ.   

ಒಹ್, ಈ ಪುರಾಣ ಎಲ್ಲಾ ಬಿಟ್ಟು ಆ ಮಾಂತ್ರಿಕ “ಸೂತ್ರ” ಗಳ ಬಗ್ಗೆ ಹೇಳಬಾರದೇ  ಎಂದು ಹಲ್ಲನ್ನು ಕಟ ಕಟಾಯಿಸಬೇಡಿ. ಬರುತ್ತೇನೆ, ಸೂತ್ರಕ್ಕೆ ಶೀಘ್ರದಲ್ಲೇ.     

ಹಾಂ, ನೋಡಿ. ಸೂತ್ರಗಳು ಎಂದಾಗ ಮತ್ತೊಂದು ಮಾತು ನೆನಪಾಯಿತು. ಸುಖ ಸಂಸಾರಕ್ಕೆ ಹತ್ತು ಸೂತ್ರಗಳು. ಅವುಗಳಲ್ಲಿ ಒಂದು, ಯಾವುದೇ ಕಾರಣಕ್ಕೂ ರಾತ್ರಿ ತರಗತಿಗಳಿಗೆ ಹೋಗಬಾರದು. (ಈ ರಾತ್ರಿ ತರಗತಿ ಬಗ್ಗೆ ಬ್ಲಾಗ್ ಬರೆದಿದ್ದೇನೆ ಸಂಪದದಲ್ಲಿ). ಮೂಗಿಗೆ ತುಪ್ಪ ಸವರೋದನ್ನು ನಿಲ್ಲಿಸಿ ಸೂತ್ರ ಅನಾವರಣ ಮಾಡ್ತೀಯೋ ಇಲ್ವೋ ಎಂದು ಧಮಕಿ ಕೊಡಬೇಡಿ. ತಾಳಿದವನು ಬಾಳಿಯಾನು. ಬರಹಕ್ಕೆ ಈ attitude ಅತ್ಯವಶ್ಯಕ. ಸುಖೀ ಸಂಸಾರಕ್ಕೂ ಅಷ್ಟೇ. ಸಂಯಮ ಬೆಳೆಸಿಕೊಳ್ಳಬೇಕು. ಲೇಖನ ವಾಪಸು ಮಾಡಿದ ಸಂಪಾದಕನ ಮೇಲೆ ಹರಿಹಾಯ್ದರೆ ಕೆಲಸ ನಡೆಯೋಲ್ಲ. chicken soup for soul ಎನ್ನುವ ಮತ್ತೊಂದು ಪುಸ್ತಕ ಡಜನ್ಗಟ್ಟಲೆ ಒಂದು ಪ್ರಕಾಶಕರಿಂದ ಮತ್ತೊಂದು ಪ್ರಕಾಶಕರವರೆಗೆ ಗಡಿಯಾರದ pendulum ನಂತೆ ಲಾಳಿ ಹೊಡೆದ ನಂತರವೇ ಕ್ಲಿಕ್ ಆಗಿದ್ದು. ಹಾಗಾಗಿ ತಾಳ್ಮೆ ಇರಲಿ. perseverance and patience. ಇವೆರಡು ಬರೀ ಬರಹಕ್ಕೆ ಮಾತ್ರವಲ್ಲ ಬದುಕಿನ ಎಲ್ಲಾ ಮಜಲುಗಳಿಗೂ  ಹರಡಲಿ ಈ ಕಂಪು. perseverance and patience ನ ಕಂಪು.

ಮತ್ತೊಂದು ವಿಷಯ. ಬರೆಯಿರಿ, ಆದರೆ ಯಾರನ್ನೂ ಇಂಪ್ರೆಸ್ ಮಾಡಲು ಬೇಡ. ಏನಿಲ್ಲವೆಂದರೂ ನಿಮ್ಮ  ತುಡಿತ, ತುರಿಕೆ ತೀರಿಸಿಕೊಳ್ಳಲಾದರೂ ಬರೆಯಿರಿ. ಅಬ್ದುಲ್, ಆ ಮೂರು ಸೂತ್ರ ಗಳು ಎಲ್ಲಯ್ಯ….. ಇಗೋ ಬಂದೆ ಮೂರು ಸೂತ್ರಗಳೊಂದಿಗೆ.

ಸಾಮರ್ಸೆಟ್ ಮಾಹಂ ಹೇಳುತ್ತಾರೆ, “ಬರೆಯಲು ಮೂರು ಸೂತ್ರಗಳು. ಆದರೆ ಅವು ಯಾವುವು ಎಂದು ದುರದೃಷ್ಟವಶಾತ್ ಯಾರಿಗೂ ಗೊತ್ತಿಲ್ಲ”.

ಹೌದು, ಮಾಹಂ ಹೇಳಿದ್ದು ಸರಿ. ಮಂತ್ರಕ್ಕೆ ಮಾವಿನ ಕಾಯಿ ಉದುರಿದ್ದನ್ನು ಕಂಡಿದ್ದೀರಾ?

ನನ್ನ ತಲೆ ಚಚ್ಚಲು ಇಟ್ಟಿಗೆ ಚೂರನ್ನು ಯಾಕೆ ಹುಡುಕುತ್ತಿದ್ದೀರಾ, ಅಲ್ಲೇ ಪಕ್ಕದಲ್ಲೇ ಇರುವ ಕೀ ಬೋರ್ಡಿನಿಂದ ಟ್ವೀಕಿಸಬಾರದೇ ನಿಮ್ಮ ಮನದೊಳಗಿನ ಮಾತುಗಳನ್ನು, ಮೌನಗಳನ್ನು?   

ಚಿತ್ರ: ನನ್ನ “ನಡೆಯುಲಿ”ಯಿಂದ

ಬರಹಾ, ನೂರು ನೂರು ತರಹಾ

ವಿರಹಾ, ನೂರು ನೂರು ತರಹಾ, ಹಾಗೆಯೇ ಬರಹಾ ನೂರು ನೂರು ತರಹಾ ಎನ್ನಬಹುದು. ಬರೆಯಲು ಪ್ರೇರಣೆ ಬೇಕಂತೆ. ಯಾವುದರ ಬಗ್ಗೆ ಬರೆಯುವುದು, ನಾನು ಬರೆದದ್ದು ಜನ ಓದುವರೋ, ನಗುವರೋ? ಈ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳಲು ಪ್ರಯತ್ನಿಸಿ ಇರುವ ಸಮಯ ಹಾಳು ಮಾಡಿಕೊಳ್ಳಬೇಡಿ. ನಗುವವರು ನಗಲಿ, ನೀವೇನೆ ಮಾಡಿದರೂ ನಗುವವರು ಇರುತ್ತಾರೆ, ಏಕೆಂದರೆ ತಾವು ಮಾಡಲಾಗದ ಅಥವಾ ಸೋಮಾರಿತನದಿಂದ ಮಾಡಲು ಇಷ್ಟವಿಲ್ಲದ ಜನ ಎಲ್ಲರೂ ತಮ್ಮಂತೆಯೇ ಇರಲಿ ಎಂದು ಆಶಿಸುತ್ತಾರೆ. ಅವರ ಈ ಬಯಕೆಗೆ ನೀವು ಬಲಿಯಾಗುವುದು ಬೇಡ. ಬರಹಕ್ಕೆ ಬೇಕಾದ ವಸ್ತು, ಪ್ರೇರಣೆ ಬಗ್ಗೆ ಬ್ಲಾಗೊಂದರಲ್ಲಿ ಬಂದದ್ದು ನೋಡಿ. ಇದನ್ನು ನಾವೂ ಅಳವಡಿಸಿಕೊಳ್ಳಬಹುದು.

ಯಾವುದಾದರೂ ಒಂದು ಚಿತ್ರವನ್ನು ಆರಿಸಿಕೊಳ್ಳುವುದು. ಅದರ ಬಗ್ಗೆ ಒಂದೆರಡು ವಾಕ್ಯಗಳ ವಿಶ್ಲೇಷಣೆ. ದಿನ ಪೂರ್ತಿ ಚಿತ್ರದ ಮುಂದೆ ಕೂತು ಆಲೋಚನೆ ಮಾಡುವುದಲ್ಲ. ೧೦ ಅಥವಾ ೧೫ ನಿಮಿಷಗಳಿಗೆ ಅಲಾರಂ ಇಟ್ಟು ಬರೆಯುವುದು, ಸಮಯ ಮುಗಿದು ಘಂಟೆ ಮೊಳಗಿದ ಕೂಡಲೇ ನಿಲ್ಲಿಸಬೇಕು ಬರವಣಿಗೆಯನ್ನು.

ಅಲಾರ್ಮ್ ನ ಉದ್ದೇಶ “writer’s block” (ಬರಹಗಾರನಿಗೆ ಎದುರಾಗುವ ತಡೆ) ಅನ್ನು ತಡೆಯುವುದು. ೧೦ ಅಥವಾ  ೧೫ ನಿಮಿಷಗಳ ಗಡುವನ್ನು ಇಟ್ಟುಕೊಂಡು ಬರೆದಾಗ ಏನನ್ನಾದರೂ ಗೀಚಲೇಬೇಕು, ಹೀಗೆ ಗೀಚಿ ದಾಗಲೇ ಮೂಡುವುದು ಬರಹ ಅಕ್ಷರಗಳ ರೂಪದಲ್ಲಿ.

ಚಹಾ ಅಥವಾ ಕಾಫಿಗೆ ಎಲ್ಲಾದರೂ ಹೋಗುತ್ತೀರಲ್ಲ. ಚಹಾ ಹೀರುತ್ತಾ ಅಲ್ಲಿ ಕುಳಿತ ಯಾರದರೊಬ್ಬರ ಬಗ್ಗೆ ಬರೆಯುವುದ. ಅವನ ರೂಪ, ಚಹಾ ಹೀರುವ ರೀತಿ (ನೂರೊಂದು ರೀತಿಯಲ್ಲಿ ಚಹಾ ಹೀರುವುದನ್ನು ಕಾಣಬಹುದು), ಅವನ ವೇಷ… ಹೀಗೆ.. ಅದೂ ಸಹ ಮೇಲೆ ಹೇಳಿದ ರೀತಿಯಲ್ಲಿ. ಅಲಾರ್ಮ್ ಘಂಟೆಯನ್ನು  ಹೊತ್ತು ಕೊಂಡು ಹೋಗುವ ಅವಶ್ಯಕತೆಯಿಲ್ಲ, ಎಲ್ಲಾ mobile ಗಳಲ್ಲೂ ಇರುವಂಥದ್ದೇ.

ರೈಲು ಅಥವಾ ಬಸ್ ನಿಲ್ದಾಣದಲ್ಲಿ ಕಾಣುವ ದೃಶ್ಯಗಳು, ಜಾಹೀರಾತುಗಳು ಇವನ್ನು ಬರೆದಿಟ್ಟು ಕೊಳ್ಳುವುದು. ಮನೆಗೆ ಬಂದು ನಿಮ್ಮದೇ ಶೈಲಿಯಲ್ಲಿ ಬರೆಯುವುದು.

ಹೀಗೆ ಸ್ವಾರಸ್ಯಕರವಾಗಿ ಮೋಜಿನ ರೀತಿಯಲ್ಲಿ ಬರೆದು ಬರಹದ ಬೆಗ್ಗೆ ಹೆಚ್ಚು ಆಸಕ್ತಿ ವಹಿಸಿಕೊಳ್ಳಬಹುದು.

* intellectual terrorists

A book must be the ax for the frozen sea within us.
  —
Franz Kafka
 “ನಮ್ಮ ಅಂತರಾಳದಲ್ಲಿ ಹೆಪ್ಪುಗಟ್ಟಿದ ಸಮುದ್ರವನ್ನು ಒಡೆಯಲು ಕೊಡಲಿಯಾಗಬೇಕು ಗ್ರಂಥಗಳು”.  

ಎಷ್ಟು ಅರ್ಥಗರ್ಭಿತ ಈ ಮಾತುಗಳು. ಆದರೆ ನಾವು ಇಂದು ಕಾಣುತ್ತಿರುವ ಸಾಹಿತ್ಯ ನೋಡಿದರೆ ಅಂತರಾಳವನ್ನು ನರಕವಾಗಿಸುವುದರಲ್ಲಿ ಪುಸ್ತಕಗಳು ನಾಮುಂದು ತಾಮುಂದು ಎಂದು ಬರುತ್ತಿವೆ. ಧ್ವೇಷ ಕಾರುವ, ಜನರಲ್ಲಿ ವೈಮನಸ್ಸನ್ನು ಹುಟ್ಟಿಸುವ ಕೃತಿಗಳನ್ನು ರಚಿಸಿ ಭೇಷ್ ಎಂದು ಪ್ರಶಂಸೆ ಗಳಿಸುತ್ತಿರುವ,  ನಾಡಿನ ಶ್ರೇಷ್ಠ ಬರಹಗಾರರೆಂದು ಬೀಗಿ ನಡೆಯುತ್ತಿರುವ ಸಾಹಿತಿಗಳು ತಾವು ರಚಿಸುತ್ತಿರುವ ಕೃತಿಗಳು, ಬರಹಗಳು ಭಯೋತ್ಪಾದಕನ ಗುಂಡುಗಳಿಗಿಂತ ಅಪಾಯಕಾರಿ ಎಂದು ಕಾಣಲು ವಿಫಲರಾಗುತ್ತಿರುವುದು ನಮ್ಮ ದೌರ್ಭಾಗ್ಯ ಎಂದೇ ಹೇಳಬೇಕು. ಈ ರೀತಿ ಮನುಷ್ಯರ ಮಧ್ಯೆ, ಸಮುದಾಯಗಳ ನಡುವೆ ಒಡಕನ್ನು ತಂದು ನಿಲ್ಲಿಸುವವರು “ಬೌದ್ಧಿಕ ಭಯೋತ್ಪಾದಕರು” (intellectual terrorists) ಮತ್ತು ಈ ಸಾಹಿತಿಗಳ ಭಯೋತ್ಪಾದನೆ ದೇಶಕ್ಕೆ ಗಂಡಾಂತರಕಾರಿ ಎಂದು ನಾವು ಅರಿತುಕೊಳ್ಳುವುದು ಸಮಯ ಮೀರಿದಾಗಲೋ? ಏಕೆಂದರೆ ಓರ್ವ ಭಯೋತ್ಪಾದಕ ತನ್ನ ಕೋವಿಯಿಂದ ಒಂದಿಷ್ಟು ಗುಂಡುಗಳನ್ನು ಹರಿ ಬಿಟ್ಟು ಒಬ್ಬಿಬ್ಬರದೋ, ನಾಲ್ಕಾರು ಜನರದೋ ಜೀವಗಳನ್ನು ಆಹುತಿ ತೆಗೆದುಕೊಳ್ಳಬಹುದು, ಆದರೆ ಬುದ್ಧಿಜೀವಿಯೆಂದು ಸಮಾಜದ ಮುಂದೆ ನಿಂತು ತಮ್ಮ ಕೊಳಕು, ಅಸಹ್ಯ ಹುಟ್ಟಿಸುವ ವಿಚಾರಗಳನ್ನು ಪ್ರಸ್ತುತಪಡಿಸಿ ಅವನ್ನು ಪುಸ್ತಕ ರೂಪಕ್ಕೂ ಇಳಿಸುವ ಗೋಮುಖ ವ್ಯಾಘ್ರರು ಸಮಾಜವನ್ನು ಒಡೆಯುವಲ್ಲಿ ಯಶಸ್ಸನ್ನು ಕಾಣುತ್ತಿದ್ದಾರೆ. 

ಈ ವಿಷ ಜಂತುಗಳ ಬಗ್ಗೆ ಜನಸಾಮಾನ್ಯರು ಮತ್ತು ಸುಶಿಕ್ಷಿತ ವ್ಯಕ್ತಿಗಳು ಜಾಗೃತರಾಗಿ ಅವರನ್ನು ಮೂಲೆಗುಂಪು ಮಾಡಬೇಕಾದ ಅವಶ್ಯಕತೆ ದೇಶದ ಹಿತದೃಷ್ಟಿಯಿಂದ ತುಂಬಾ ಒಳ್ಳೆಯದು.     

ಮೇಲಿನ Franz Kafka ಆಂಗ್ಲ ನುಡಿಗಳ ಕನ್ನಡ ಭಾಷಾಂತರ ಎಷ್ಟು ಹತ್ತಿರ ಎಂದು ನನಗೆ ಖಾತರಿಯಿಲ್ಲ ಆದರೂ ಪ್ರಯತ್ನವನ್ನಂತೂ ಮಾಡಿದ್ದೇನೆ.

twitter

picture-for-twitter-article 

twitter ಅಂದ್ರೆ ಚಿಲಿಪಿಲಿ ಆಲ್ವಾ? social networking ಸುದ್ದಿ ಮಾಡುತ್ತಿರುವ twitter ಒಂದು ಆಕರ್ಷಕ application. ಒಮ್ಮೆಗೆ ೧೪೦ ಅಕ್ಷರಗಳಲ್ಲಿ ಮಾತ್ರ ಬರೆಯಬಹುದಾದ ಈ ವ್ಯವಸ್ಥೆಯನ್ನು ಪರಿವಾರದವರೊಂದಿಗೆ ಮತ್ತು ಸಹೋದ್ಯೋಗಿಗಳೊಂದಿಗೆ ಚಿಕ್ಕ ಹರಟೆ ಹೊಡಯಲು ಉಪಯೋಗಿಸಬಹುದು. facebook ಮತ್ತು twitter ಇಂದಿನ ಯುವಪೀಳಿಗೆ ಮಾರು ಹೋದ ಅಂತರ್ಜಾಲ ತಾಣದ ಹೊಸ ಅನ್ವೇಷಣೆ. ಲೇಖನದೊಂದಿಗಿರುವ ಈ ಪುಟ್ಟ ಗುಬ್ಬಿ “ಬಡಪಾಯಿ ನನ್ನನ್ನೂ ವ್ಯಾಪಾರದ ವಸ್ತುವಾಗಿಸಿಬಿಟ್ಟಿರಾ” ಎಂದು ನಿಟ್ಟುಸಿರು ಬಿಡುತ್ತಿರುವಂತೆ ಕಾಣುತ್ತಿಲ್ಲವೇ