ಭಾಷೆಗಳ ಸ್ವಾರಸ್ಯ

ಭಾಷೆಗಳ ಅಧ್ಯಯನ ಸ್ವಾರಸ್ಯಕರ. ನಮಗೆ ಕೇಳ ಸಿಗುವ ಸಾವಿರಾರು ಭಾಷೆಗಳಲ್ಲಿ ಪ್ರತಿಯೊಂದರಲ್ಲೂ ವಿಶೇಷಾಂಶಗಳು ಖಂಡಿತ ಇರುತ್ತವೆ. ಪ್ರೊ. ಜಿ. ವೆಂಕಟಸುಬ್ಬಯ್ಯನವರ “ಇಗೋ ಕನ್ನಡ” ಸಾಮಾಜಿಕ ನಿಘಂಟು ಸ್ವಾರಸ್ಯದ ಗಣಿಯನ್ನೇ ಒಳಗೊಂಡಿದೆ. ಆಫ್ರಿಕಾದ “ಮಸಾಯಿ ಮಾರಾ” ಬುಡಕಟ್ಟಿನವರು ಮಾತನಾಡುವ ಭಾಷೆಯಲ್ಲಿ, ದೊಡ್ಡ ವಸ್ತುವನ್ನು “ಪುಲ್ಲಿಂಗ” ಎಂತಲೂ, ಚಿಕ್ಕ ವಸ್ತುವನ್ನ “ಸ್ತ್ರೀ ಲಿಂಗ” ಎಂತಲೂ ಗುರುತಿಸುತ್ತಾರಂತೆ. ಹಾಗೆಯೇ ಆನೆಯ ಲದ್ದಿ ‘ಪುಲ್ಲಿಂಗ’ ವಾದರೆ, ಆಡಿನ ಹಿಕ್ಕೆ ‘ಸ್ತ್ರೀ ಲಿಂಗ’. ಚಿಕ್ಕ ಗಾತ್ರದ್ದಕ್ಕೆಲ್ಲಾ ಹೆಣ್ಣಿನೊಂದಿಗೆ ಸಂಬಂಧ ಜೋಡಿಸೋ ಈ ಭಾಷೆಗಳ ಜನರಲ್ಲೂ ಹೆಣ್ಣು ಅಬಲೆ ಎನ್ನೋ ಮನೋಭಾವ ಇರಲೇ ಬೇಕಲ್ಲವೇ? ಇರದೇ ಏನು? ಹೆಣ್ಣನ್ನು ತುಚ್ಚೀಕರಿಸುವುದರಲ್ಲಿ ಮಾತ್ರ ಎಲ್ಲಾ ಬಗೆಯ ಜನರಲ್ಲೂ ಸಮನತೆಯನ್ನು ನಾವು ಕಾಣಬಹುದು. ಈಗ ಚರ್ಚೆ ಶುರು ಹಚ್ಚಿಕೊಂಡಿರೋದು ಶಬ್ದಗಳಲ್ಲಿ, ಪದಗಳಲ್ಲಿ ಸ್ತ್ರೀ ಲಿಂಗ ಮತ್ತು ಪುಲ್ಲಿಂಗದ ಪಾರುಪತ್ಯದ ಬಗ್ಗೆ. ಹೆಣ್ಣು ಗಂಡಿನ ಮಧ್ಯೆ ಕಲಹ ತರೋದಲ್ಲ. ಹಾಗಾಗಿ ರಿಟರ್ನ್ ಟು ದ ಸಬ್ಜೆಕ್ಟ್…

ಸ್ಕ್ರೂ (screw) ನಿಮಗೆ ಗೊತ್ತೇ ಇದೆಯಲ್ಲ? ಆಂಗ್ಲ ಭಾಷೆಯಲ್ಲಿ ಈ ಸ್ಕ್ರೂಗೂ ಪುಲಿಂಗ ಸ್ತ್ರೀಲಿಂಗ ಅನ್ವಯ ಆಗುತ್ತೆ. ಹಾಂ…, ಹೇಗೆ…? ಹೀಗೆ… male screw, female screw. ನಟ್ಟು ಬೋಲ್ಟು ಟೈಟ್ ಮಾಡೋದನ್ನ ನೋಡಿದ್ದೀರಿ. ಒಳಗೆ ಹೋಗೋ ಸ್ಕ್ರೂ ವನ್ನು ಮೇಲ್ ಸ್ಕ್ರೂ ಎಂತಲೂ, ಒಳಕ್ಕೆ ಬಿಡಿಸಿ ಕೊಳ್ಳುವ ಸ್ಕ್ರೂ ವನ್ನು ಫೀಮೇಲ್ ಸ್ಕ್ರೂ ಎಂತಲೂ ಕರೆಯುತ್ತಾರೆ.

ಅರಬ್ಬೀ ಭಾಷೆಯಲ್ಲಿ ಒಬ್ಬ ಗಂಡು “ಶುಕ್ರನ್” (ವಂದನೆಗಳು) ಎಂದು ಮಹಿಳೆಗೆ ಹೇಳುವಾಗ “ಅಷ್ಕುರುಕೀ” ಎನ್ನುತ್ತಾನೆ. ಮಹಿಳೆ, ಗಂಡಿಗೆ “ಅಷ್ಕುರಕ್” ಎನ್ನುತ್ತಾಳೆ.

ಇದೇ ನಿಘಂಟಿನಲ್ಲಿ ನಾವು ಬಹು ಮಹಡಿ ಕಟ್ಟಡ, ಮಾಲುಗಳಲ್ಲಿ ಉಪಯೋಗಿಸೋ ಎಲಿವೇಟರ್ ಅಥವಾ ಲಿಫ್ಟ್ ಗೆ “ಏರಿಳಿ” ಎಂದು ಪ್ರಚಾರಕ್ಕೆ ತರಬೇಕು ಎಂದು ಲೇಖಕ ಬಯಸುತ್ತಾರೆ. ಹತ್ತುವುದಕ್ಕೆ ಇಳಿಯುದಕ್ಕೆ ಇರೋ ಯಾಂತ್ರಿಕ ಸಾಧನ ಅಥವಾ ವ್ಯವಸ್ಥೆಗೆ “ಏರಿಳಿ’ ಎಂದು ಉದ್ದದ ಪದ ಉಪಯೋಗಿಸೋ ಬದಲು ನಮ್ಮ ಅದೇ ಹಳೆಯ, ಕಾಲ ಬದಲಾದರೂ ನಾನು ಬದಲಾಗೋಲ್ಲ ಎಂದು ಹಠ ಹಿಡಿದು “ನಿಂತಿರುವ” ಏಣಿ ಎನ್ನುವ ಪದವನ್ನ ಉಪಯೋಗಿಸಬಾರದೆ? ‘ಏರಿಳಿ’ ಗೆ ಬದಲಾಗಿ ಏಣಿ ಎಂದು ಬಿಟ್ಟರೆ ಹೇಗೆ? ಏಣಿ ಎಲಿವೇಟರ್ ಮಾಡೋ ಕೆಲದವನ್ನ ತಾನೆ ಮಾಡೋದು?

ಎಲಿವೇಟರ್ ಗೋ ವಿದ್ಯುಚ್ಛಕ್ತಿ ಬೇಕು, ನಮ್ಮ ಏಣಿಗೆ ಏನೂ ಬೇಡ. ಸ್ವಲ್ಪ ತಾಕಿಸಿ ಕೊಂಡು ನಿಲ್ಲಲು ಗೋಡೆಯದೋ ಮತ್ಯಾವುದಾದರದೋ ಆಸರೆ ಸಾಕು….

…ಪರಸ್ಪರ ಆಸರೆ ಇದ್ದರೆ ಮನುಷ್ಯ ಮೇಲಕ್ಕೆ ಇರಬಹುದು, ಹೇ ಹೇ. ನೋಡಿ ಉದಾತ್ತ ಆಶಯ ಕೂಡಾ ಹೊಕ್ಕಿಕೊಂಡಿತು ಭಾಷೆಯ ಚರ್ಚೆಯಲ್ಲಿ.
ಮೇಲೆ ಹೇಳಿದ ಎಲ್ಲಾ ವಿಷಯಗಳೂ ಆ ನಿಘಂಟಿನಲ್ಲಿ ಕಾಣಲು ಸಿಗೊಲ್ಲ. ಕೆಲವು ನನ್ನ ಅನುಭವದ ಮೂಸೆಯಿಂದ ಬಂದಿದ್ದು.

Advertisements

ಬರಹವನ್ನು ನಿಲ್ಲಿಸಲು ಸಾಧ್ಯವೇ….?

ಬರೆಯದೇ ಬಹಳ ದಿನಗಳಾದವು. ತೀರಾ ಬರೆದೇ ಇಲ್ಲ ಎಂದಲ್ಲ, twitter ನಲ್ಲಿ ದಿನವೂ ಕುಟ್ಟುತ್ತಲೇ ಇರುತ್ತೇನೆ ಮರಕುಟುಕನ ಥರ. ಹೆಚ್ಚೂ ಕಡಿಮೆ ೧೪,೦೦೦ ಟ್ವೀಟುಗಳು ಮೊಳಗಿವೆ ಈವರೆಗೆ. ಸಾಕಲ್ವಾ? …. ಹೆ..ಹೇ ಎಲ್ಲಾದರೂ ಉಂಟೇ? man is a political animal ಎನ್ನೋ ಮಾತನ್ನ ಕೇಳಿಯೇ ಇರುತ್ತೀರಿ, ಅಲ್ವಾ? ನಾನಂತೂ ರಾಜಕಾರಣಕ್ಕೆ ತುಂಬಾ ಹಳಬ. ಪ್ರಾಚೀನ ಎನ್ನುವಷ್ಟು. ಕದ್ದು ಮುಚ್ಚಿ ಎಲ್ರೂ ಸಿನಿಮಾದ ಕಡೆ ದೌಡಾಯಿಸಿದರೆ, ನನ್ನ ದೌಡು ಕನಕ ಮಂಟಪದ ಕಡೆಗೆ.

ನನ್ನೂರು ಭದ್ರಾವತಿಯಲ್ಲಿ ಇರೋ ಈ ಕನಕ ಮಂಟಪಕ್ಕೆ ರಾಜಕೀಯ ನೇತಾರರು ಚುನಾವಣೆ ಸಮಯ ಭಾಷಣ ಮಾಡಲು ಬರುತ್ತಿದ್ದರು. ಅಲ್ಲಿಗೆ ಓಡುತ್ತಿದ್ದೆ ನಾನು. ಹೋಂ ವರ್ಕ್ ಮಾಡೋ ಬದಲು ಖಾದಿ ಸಂಭ್ರಮ ನೋಡೋ ಕೌತುಕ ನನಗೆ. ರಾಜಕಾರಣ ಬಿಟ್ಟರೆ, ಕ್ರಿಕೆಟ್ಟು, ಅದು ಬಿಟ್ಟರೆ ಸುರತಿ, ರತಿ ವಿಜ್ಞಾನ ದಂಥ ಪುಸ್ತಕಗಳ ಗೀಳು, ಇನ್ನೂ ಮುಂದುವರೆದು ಆಂಗ್ಲ ಭಾಷೆ , ಆ ಭಾಷೆಯ ಸೊಗಡು,ಅದರಲ್ಲಿನ ಕವಿತೆ, ಬರಹಗಳ ಮೋಡಿಗೆ ಮಾರು… ಹೀಗೆ ಸಾಗುವ ನನ್ನ ವಿದ್ವತ್ತು ಬರಹದಲ್ಲಿ ಬಂಧಿತವಾಗಲು ತವಕಿಸಿದಾಗ ಹಳೇ ಸೇತುವೆ (ನನ್ನ ಬ್ಲಾಗ್) ಯ ನಿರ್ಮಾಣ; ಸಿಮೆಂಟು ಕಬ್ಬಿಣ ಮರಳಿನ ಸಹವಾಸ ಇಲ್ಲದೆ. ಹೀಗಿರುವಾಗ, ಬರಹವನ್ನು ನಿಲ್ಲಿಸಲು ಸಾಧ್ಯವೇ? ಅದರಲ್ಲೂ ಅಷ್ಟೋ ಇಷ್ಟೋ ಬರೆದಿದ್ದನ್ನು ಓದಿ, ಮೆಚ್ಚಿ, ನನ್ನ ಯೋಗ್ಯತೆಗೂ ಮಿಕ್ಕು ಮುಕ್ತ ಕಂಠದಿಂದ ಕೊಂಡಾಡುವ ‘Kumar’ ರಂಥ ಸಹೃದಯಿಗಳು ಇರುವಾಗ ಬರೆಯೋಕೆ ಸ್ಫೂರ್ತಿ.

ನಾಳೆಯಿಂದ ಬರೀತೀನಿ…. ‘ನಾಳೆ ಬಾ’ ಎಂದು ಭೂತ ಪಿಶಾಚಿಗಳನ್ನು ಏಮಾರಿಸಲು ಮನೆ ಬಾಗಿಲ ಮೇಲೆ ಗೀಚಿದಂತಲ್ಲ…

ನಿಜ್ವಾಗ್ಲೂ !