ಈ ಭಾವನೆ ಎಲ್ಲರಲ್ಲೂ ಇದ್ದಿದ್ದರೆ?

ಮಹಾಕಾವ್ಯ ಮಹಾಭಾರತವನ್ನು ವಿಮರ್ಶಿಸಿ ಒಬ್ಬರು ಲೇಖನದ ಬರೆದರು. ಅದರಲ್ಲಿ ಮಹಾಭಾರತ ವನ್ನು ಸ್ವಲ್ಪ ಕಟುವಾಗಿ ಟೀಕಿಸಲಾಗಿತ್ತು. ಓದಿದ ಒಬ್ಬರು ಈ ಲೇಖನಕ್ಕೆ ಪ್ರತಿಕ್ರಯಿಸಿದ್ದು ಹೀಗೆ.

“ಯಾವುದೋ ಕಾಲದ ಪುರಾಣದ ಕತೆಗಳನ್ನು ತೆಗೆದುಕೊಂಡು, ನಮ್ಮ ಮನಸಿಗೆ ಕಾಣುವುದೆ ಸತ್ಯವೆಂದು ನಿರ್ದರಿಸಿ, (ನಾವು ಯಾರು ಆಗಿನ ಕಾಲಕ್ಕೆ ಹೋಗಿ ಸತ್ಯವೇನೆಂದು ಅರಿಯಲಾರೆವು, ಏನು ನಡೆಯಿತೆಂದು ತಿಳಿಯಲಾರೆವು), ಈಗಿನ ವಾತವರಣ ಕಲುಶಿತಗೊಳಿಸುತ್ತ ಹೋಗುವ ಅರ್ಥವಾದರು ಏನು . ನಿಮಗೆ ಕೃಷ್ಣ ರಾಮರು ಬೇಡ ಬಿಡಿ. ಆದರೆ ಯಾವುದು ಸತ್ಯ ತಿಳಿಸಿ, ಅದನ್ನೆ ಎಲ್ಲರಿಗು ಹೇಳಿ, ನಿಮ್ಮ ದಾರಿಗೆ ಕರೆದೊಯ್ಯಿರಿ, ಆದರೆ ಯಾವುದನ್ನೊ ನಿಂದಿಸುತ್ತ, ಅವರ ನಂಭಿಕೆಯನ್ನು ದ್ವೇಶಿಸುತ್ತ ಇದ್ದಲ್ಲಿ, ಅವರು ನಿಮ್ಮ ಭಾವನೆಗಳನ್ನು ಹೇಗೆ ಗೌರವಿಸುತ್ತಾರೆ. ದ್ವೇಶದಿಂದ ದ್ವೇಶವೆ ಹುಟ್ಟುತ್ತದೆ, ನಿಂದನೆಯಿಂದ ನಿಂದನೆಯಿ ಹುಟ್ಟುತ್ತದೆ, ಮತ್ತೆ ಕಡೆಯದಾಗಿ ಪ್ರೀತಿಯಿಂದ ಪ್ರೀತಿಯೆ ಹುಟ್ಟುತ್ತದೆ.”

ಸತ್ಯವಾದ ಮಾತುಗಳು. ಹಳೆಕಾಲದ ರಾಜರ ಪ್ರಮಾದಗಳನ್ನು ಇತಿಹಾಸ ಎಂದು ವಿಷ ಸೇರಿಸಿ ವಿಕೃತ ಇದೇ ಇತಿಹಾಸ ಎಂದು ಸುಖ ಕಾಣುವ ‘ಇತಿಹಾಸ್ಯ’ ಕಾರರು, ಆ ಇತಿಹಾಸ್ಯ ಓದಿ ಇಂದಿನ ಪೀಳಿಗೆಯವರನ್ನು ಗೋಳು ಹೊಯ್ದು ಕೊಳ್ಳುವ ತರಲೆಗಳು, ಪತ್ರಿಕಾ ಧರ್ಮದ ಗಂಧ ಗಾಳಿಯಿಲ್ಲದೆ ಧ್ವೇಷ ತುಂಬಿದ ಲೇಖನಗಳನ್ನು ರಚಿಸುವ ‘ಪೋಸ್ಟರ್ ಬಾಯ್’ ಗಳು ತಮ್ಮ ಮನಸ್ಸು ಮತಿಯ ಮೇಲೆ ಅಚ್ಚೊತ್ತ ಬೇಕಾದ ಮಾತುಗಳು ಮೇಲಿನವು.

…….ಇದ್ದಿದ್ದ ‘ರೆ’? ಈ ತಲೆಬರಹದ ‘ರೆ’ ಬರೀ ಆಶಯವಾಗಿರದೆ ‘ಖರೆ’ಯಾದರೆ ನಮ್ಮ ದೇಶ ಇನ್ನೂ ಚೆಂದ.

Advertisements

ಆಸ್ಪತ್ರೆಯ ಹೆರಿಗೆ ಕೊಠಡಿಯಲ್ಲಿ ನಾಯಿ

dog
ಗರ್ಭಿಣಿ ಮಹಿಳೆಯೊಬ್ಬಾಕೆ ಪ್ರಸವಕ್ಕೆಂದು ಹೆರಿಗೆ ಕೊಠಡಿ ಗೆ ಹೋಗುವಾಗ ತನ್ನ ಸಾಕು ನಾಯಿ ‘ಲ್ಯಾಬ್ರ ಡರ್’ ಜೊತೆಗೊಯ್ಯಲು ಆಸ್ಪತ್ರೆಗೆ ಮನವಿ ಸಲ್ಲಿಸಿದಾಗ ಆಸ್ಪತ್ರೆ ಒಪ್ಪಿತು. ಎರಡು ಘಂಟೆಗಳ ಕಾಲದ ಹೆರಿಗೆ ನೋವಿನ ಸಮಯ ನಾಯಿಯ ಉಪಸ್ಥಿತಿ ಆಕೆಗೆ ಮಾನಸಿಕವಾಗಿ ಸಹಾಯ ಮಾಡಬಲ್ಲುದು ಎಂದು ಆಸ್ಪತ್ರೆಯ ಅಭಿಪ್ರಾಯ.

ಗರ್ಭಿಣಿ ಮಹಿಳೆಯ ಜೊತೆ ಆಕೆಯ ಪತಿ ಅಥವಾ ಸಂಗಾತಿಯನ್ನು ಹೆರಿಗೆ ಸಮಯ ಲೇಬರ್ ರೂಮಿನಲ್ಲಿ ಬಿಡುವುದಿದೆ, ಆಕೆಯಲ್ಲಿ ಸ್ಥೈರ್ಯ ತುಂಬಲು ಮತ್ತು ಆಕೆ ಪಡುವ ಕಷ್ಟ ಮತ್ತು ನೋವಿನ ಅರಿವು ಗಂಡಿಗಾಗಲು. ಆದರೆ ನಾಯಿಯನ್ನು ಈ ಕೆಲಸಕ್ಕೆ ಒಳಗೆ ಬಿಟ್ಟಿದ್ದು ಮಾತ್ರ ಆಸ್ಪತ್ರೆಯ ನೌಕರರು ಹುಬ್ಬೇರಿಸುವಂತೆ ಮಾಡಿತು.

ಇದು ನಡೆದಿದ್ದು ಇಂಗ್ಲೆಂಡ್ನಲ್ಲಿ.

ವಿಶ್ವರೂಪಂ, ನಿಜ ರೂಪಂ

ವಿಶ್ವ ರೂಪವೋ, ನಿಜ ರೂಪವೋ? ವಿಶ್ವರೂಪಂ ಚಿತ್ರ ಈಗ ವಿವಾದದಲ್ಲಿ. ಕಮಲ್ ಹಾಸನ್ ನಿರ್ಮಿತ ಈ ಚಿತ್ರ ಮುಸ್ಲಿಂ ಸಮುದಾಯವನ್ನು ಕೀಳಾಗಿ ಬಿಂಬಿಸಿದೆ ಎಂದು ಅದರ ವಿರುದ್ಧ ಮುಸ್ಲಿಂ ಸಾಂಸ್ಕೃತಿಕ ಸಂಘಟನೆಗಳು ತಮಿಳು ನಾಡಿನಲ್ಲಿ ಪ್ರದರ್ಶನ ನಡೆಸುತ್ತಿವೆ.
ಕಮಲ ಹಾಸನ್ ಓರ್ವ ಪ್ರತಿಭಾವಂತ ನಟ, ಆತನ ಪ್ರತಿಭೆಯ ಮಟ್ಟವನ್ನು ಗಣನೆಗೆ ತೆಗೆದುಕೊಂಡರೆ ಆತ ಬಾಲಿವುಡ್ ನಲ್ಲಿ ಮಹಾ ತಾರೆಯಾಗ ಬಹುದಿತ್ತು ಎಂದು ಸಿನಿ ಪ್ರಿಯರ ಅಭಿಪ್ರಾಯ. ದಕ್ಷಿಣ ಭಾರತೀಯನಾದ ಒಂದೇ ಕಾರಣಕ್ಕೆ ಆತ ಬಾಲಿ ವುಡ್ ನಲಿ ಮಿಂಚಲು ಆಗಲಿಲ್ಲ ಎಂದು ಆತನ ಅಭಿಮಾನಿಗಳ ಅಂಬೋಣ. ಆದರೆ ಬಾಲಿವುಡ್ ಗೆ ದಕ್ಷಿಣದ ಷೋಡಶಿಯರ ಬಗ್ಗೆ ತಕರಾರಿಲ್ಲ, ಪ್ರಾಬ್ಲಂ ಇರೋದು ‘ನಟ’ರ ಬಗ್ಗೆ ಮಾತ್ರ ಇರಬೇಕು.
ಕಮಲ ಹಾಸನ್ ಓರ್ವ ಟ್ಯಾಲೆಂಟೆಡ್ ನಟ ಎಂದು ನಾನೂ ಒಪ್ಪುತ್ತೇನೆ. ನಾನು ಅವನ ಚಿತ್ರ ನೋಡಿದ್ದು ಒಂದೇ ಒಂದು; ‘ಮರೋ ಚರಿತ್ರ’. ಈ ತೆಲುಗು ಚಿತ್ರ ದೊಡ್ಡ ದಾಖಲೆಯನ್ನೇ ಸೃಷ್ಟಿಸಿತ್ತು ೧೯೭೯ ರ ಸುಮಾರಿನಲ್ಲಿ. ಭಾವುಕತೆಗೆ, ಭಾವನೆಗೆ, ಭಾಷೆಯ ತೊಡಕು ಇಲ್ಲ ಎಂದು ಈ ಚಿತ್ರ ಅಮೋಘವಾಗಿ ಸಾರಿತ್ತು. ಚಿತ್ರದ ಕೊನೆಯಲ್ಲಿ ಹೀರೋ ಮತ್ತು ಹೀರೋಯಿನ್ ಸಾವನ್ನಪ್ಪುವ ದೃಶ್ಯ ಮನ ಕಲಕುವಂತಿತ್ತು.
‘ಮರೋ ಚರಿತ್ರ’ ಚಿತ್ರದ ನಂತರ ಕಮಲ ಹಾಸನ್ ದಕ್ಷಿಣದಲ್ಲಿ ದೊಡ್ಡ ಹೆಸರನ್ನೇ ಮಾಡಿದ. ಈಗ ವಿವಾದದ ಸುಳಿಯಲ್ಲಿ ಸಿಲುಕಿದ್ದಾನೆ, ವಿಶ್ವರೂಪಂ ಚಿತ್ರದ ಮೂಲಕ. ಸುಲಭ ಹಣ ಗಳಿಸಲು ಈತ ಒಂದು ಸಮುದಾಯದವರ ಭಾವನೆಗಳನ್ನು ಘಾಸಿ ಗೊಳಿಸಲು ಏ ಚಿತ್ರ ಮಾಡಿರ ಬಹುದೇ ಎನ್ನುವ ಸಂಶಯ ಜನರಲ್ಲಿ. ಪತ್ರಿಕೋದ್ಯಮದಲ್ಲೂ, ಸಾಹಿತ್ಯ ಕ್ಷೇತ್ರದಲ್ಲೂ ಹಗೆ, ಸಂಶಯ, ಧ್ವೇಷ, ಹರಡಲು ಟೊಂಕ ಕಟ್ಟಿ ನಿಂತ ಸಮೂಹದ ಜೊತೆ ಸಿನಿಮಾ ಮಂದಿಯೂ ಸೇರಿಕೊಂಡಾಗ ಆಗುವ ಪರಿಣಾಮ ನೆನೆದರೆ ಮೈ ನಡುಗುತ್ತದೆ.

ಕೋಣೆಯೊಳಗಿನ ಆನೆ

ಕೋಣೆಯೊಳಗೆ ಆನೆ. ಕಣ್ಣ ಮುಂದೆ ಧುತ್ತೆಂದು ಪ್ರತ್ಯಕ್ಷ ವಾಗಿದ್ದರೂ, ಅಥವಾ ಕಂಡೂ ಕಾಣದಂತೆ ಇದ್ದು ಅದರ ಉಪಸ್ಥಿತಿ ಕೋಣೆ ಯಲ್ಲಿ ಇಲ್ಲ ಎನ್ನುವ ಭ್ರಮೆಯನ್ನು ಪ್ರದರ್ಶಿಸುವುದಕ್ಕೆ, ಆಂಗ್ಲ ಭಾಷೆಯಲ್ಲಿ elephant in the room ಎನ್ನುತ್ತಾರೆ. ಏಕೆಂದರೆ ಕೋಣೆಯೊಳಗೆ ಅಕಸ್ಮಾತ್ ಆನೆಯೊಂದಿದ್ದರೆ ಅದನ್ನು ನಮ್ಮ ಕಣ್ಣಿಗೆ ಕಾಣದಂತೆ ವರ್ತಿಸುವುದು ಅಸಾಧ್ಯ. ಆನೆಯ ಗಾತ್ರ ಅಂಥದ್ದು ನೋಡಿ.
‘ವಿಕಿ’ ಯಲ್ಲಿ ಸಿಕ್ಕ ಮಾಹಿತಿಯಂತೆ ‘ಆಕ್ಸ್ ಫರ್ಡ್’ ಆಂಗ್ಲ ನಿಘಂಟಿನ ಪ್ರಕಾರ ‘ಕೋಣೆಯೊಳಗೆ ಆನೆ’ ಗಾದೆಯನ್ನು ಪ್ರಪ್ರಥಮವಾಗಿ ಉಪಯೋಗಿಸಿದ್ದು ೧೯೫೯ ರಲ್ಲಿ new york times ಅಂಕಣದಲ್ಲಿ. ಶಾಲೆಗಳಿಗೆ ಧನಸಹಾಯ ದ ಬಗೆಗಿನ ಚರ್ಚೆಯಲ್ಲಿ ‘ ಈ ಸಮಸ್ಯೆ ಕೋಣೆಯೊಳಗಿನ ಆನೆಯ ಥರ, ಇದು ಎಷ್ಟು ದೊಡ್ಡದು ಎಂದರೆ ನಿಮ್ಮಿಂದ ಇದನ್ನ ನಿರ್ಲಕ್ಷಿಸಲು ಸಾಧ್ಯವಿಲ್ಲ” ಎನ್ನುವ ಮಾತನ್ನು ಉಪಯೋಗಿಸಲಾಯಿತು.

ಇನ್ನು ನಮ್ಮ ಕನ್ನಡದಲ್ಲಿ ಇದಕ್ಕೆ ಪರ್ಯಾಯವಾಗಿ ಜಾಣ ಕುರುಡು ಎನ್ನುತ್ತಾರೆ. ಆದರೆ ಜಾಣ ಕುರುಡು ಎನ್ನುವ ಮಾತು ‘ಎಲಿಫಂಟ್ ಇನ್ ದ ರೂಂ’ ನಷ್ಟು ಪರಿಣಾಮಕಾರಿಯಲ್ಲ. ನಮಗೆ ಆನೆಯ ಉಪಮೆಯೇ ಮೇಲು. ಚಿಕ್ಕ ಪುಟ್ಟ, ದೊಡ್ಡ ವಿವಾದ ಎಬ್ಬಿಸದ ವಿಷಯದ ಬಗ್ಗೆ ಜಾಣ ಕುರುಡನ್ನು ಪ್ರದರ್ಶಿಸಿ, ಹೆ..ಹೆ ಎಂದು ಹಲ್ಲು ಕಿರಿದು ತಪ್ಪಿಸಿ ಕೊಳ್ಳಬಹುದು. ಸಾಕ್ಷಾತ್ ಆನೆಯೇ ಕೋಣೆಯೊಳಗೆ ವಕ್ಕರಿಸಿ ಕೊಂಡಾಗ ಚರ್ಮ ಉಳಿಸಿ ಕೊಳ್ಳುವುದು ಸ್ವಲ್ಪ ಕಷ್ಟದ ಪಾಡೇ ಸರಿ.
ಭಾಷೆ ಮತ್ತು ಅದು ಒಳಗೊಳ್ಳುವ ಗಾದೆ ಉಪಯೋಗ ಪ್ರಸಕ್ತ ಪರಿಸ್ಥಿಗೆ, ಬೆಳವಣಿಗೆಗೆ ಅಳವಡಿಸಿದಾಗ ಅದರ ಪರಿಣಾಮ ಮನ ಮುಟ್ಟುವಂತಿರುತ್ತದೆ. ವಿಚಾರವನ್ನು ಸಲೀಸಾಗಿ ಗ್ರಹಿಸಲೂ ಸಾಧ್ಯವಾಗುತ್ತದೆ. ಮಾತುಗಳಲ್ಲಿ ಗಾದೆಯನ್ನು ಒಳಪಡಿಸಿ ಕೊಂಡು ಮಾತನ್ನಾಡುವ ರಾಜಕಾರಣಿ, ಜನರನ್ನು ಮಂತ್ರ ಮುಗ್ಧ ಗೊಳಿಸಲು ಸಮರ್ಥನಾದಾಗ ಅವನು ‘ಒರೇಟರ್’ ಎನಿಸಿ ಕೊಳ್ಳುತ್ತಾನೆ, ತನ್ನ ರಾಜಕೀಯ ಅಥವಾ ವೈಚಾರಿಕ ಧಂಧೆಯಲ್ಲಿ ಯಶಸ್ಸು ಕಾಣುತ್ತಾನೆ.

ಈಗ ಬನ್ನಿ, ಭಾಷೆಯ ‘ಬಾಳೆಲೆ’ ಯಿಂದ ರಾಜಕೀಯದ ಬಾಣಲೆಗೆ. ಪ್ರವಾಸಿಗರ ಅಚ್ಚುಮೆಚ್ಚಿನ ನಗರ ರಾಜಸ್ಥಾನದ ಜೈಪುರದಲ್ಲಿ ನಮ್ಮನ್ನಾಳು ತ್ತಿರುವ ಕಾಂಗ್ರೆಸ್ ಪಕ್ಷದ “ಚಿಂತನ್ ಶಿವಿರ್” ( ಚಿಂತನ ಶಿಬಿರ) ಸಮಾವೇಶ. ಇಲ್ಲಿ ಕಾಂಗ್ರೆಸ್ ನ ಯುವರಾಜ ಎಂದು ಗುರುತಿಸಲ್ಪಡುತ್ತಿರುವ ರಾಹುಲ್ ಗಾಂಧಿ ಪಕ್ಷದ ಉಪಾಧ್ಯಕ್ಷ ಸ್ಥಾನಕ್ಕೆ ಚುನಾಯಿತರಾದರು. ನೆಹರೂ ಕುಟುಂಬದವರ ಕೈಯ್ಯಲ್ಲೇ ತಾನೇ ಕಾಂಗ್ರೆ ಇರೋದು. ಇದು ಬಹಿರಂಗ ಗುಟ್ಟು. ಪ್ರಶ್ನಿಸಿದರೆ, ಜನರೇ ಇದಕ್ಕೆ ಕ್ಯಾತೆ ತೆಗೆಯದೆ ತೆಪ್ಪಗಿರುವಾಗ ನೀವ್ಯಾರು ಪ್ರಶ್ನಿಸಲು ಎಂದು ಕಾಂಗ್ರೆಸ್ಸಿಗರ ಎದಿರೇಟು. ಸರಿ ರಾಹುಲ್ ಚುನಾಯಿತ ರಾದರು, ಮುಂದಿನ ಮಹಾ ಚುನಾವಣೆಯಲ್ಲಿ ಪಕ್ಷವನ್ನ ಮುನ್ನಡೆಸಲು. ಆದರೆ ಪ್ರಜಾಪ್ರಭುತ್ವದಲ್ಲಿ ವಂಶ ಪರಂಪರೆ ಬಗ್ಗೆ ದೇಶದ ಅತಿ ದೊಡ್ಡ ವಿರೋಧ ಪಕ್ಷ ಭಾಜಪ ತಕರಾರು ತೆಗೆಯುತ್ತಾ ನೇತಾರ ಅರುಣ್ ಜೆತ್ಲೀ ದೇಶವನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆಗಳಿಗೆ ಕಾಂಗ್ರೆಸ್ ಪಕ್ಷದಲ್ಲ್ಲಿ ಇರುವ ಉತ್ತರ ಎಂದರೆ ವಂಶಪರಂಪರೆಯನ್ನು ಪ್ರಜಾಪ್ರಭುತ್ವದ ಮೇಲೆ ಹೇರುವುದು ಮಾತ್ರ ಎಂದು ಟೀಕೆ ಮಾಡಿದರು. ‘ಚಿಂತನ ಶಿಬಿರ’ ನಮ್ಮ ದೇಶಕ್ಕೆ ‘ಚಿಂತಾಜನಕ’ ರಾಜಕಾರಣದ ಮುಂದುವರಿಕೆಗೆ ಎಡೆ ಮಾಡೀತೆಂದು ಪಂಡಿತರ ಅಳಲು. ಭಾಜಪ ದಿಂದ ಈ ಕಟು ಟೀಕೆ ಯನ್ನು ಕಾಂಗ್ರೆಸ್ಸಿಗರು ಖಂಡಿತ ನಿರೀಕ್ಷಿಸಿಯೇ ಇರುತ್ತಾರೆ. ಸ್ವತಂತ್ರ ಭಾರತದ ಬಹುಪಾಲು ಅವಧಿ ಇವರ ಆಳ್ವಿಕೆಯನ್ನೇ ತಾನೇ ದೇಶ ಕಂಡಿರೋದು. ಎಲ್ಲಾ ತಂತ್ರ ಕುತಂತ್ರಗಳ ವರಸೆಯೇ ಇವರಲ್ಲಿ ಇರುತ್ತದೆ. ರಾಹುಲ್ ರನ್ನು ಪಟ್ಟಾಭಿಷೇಕ ಮಾಡಿ ಭಾಜಪದ ತಕರಾರಿಗೆ ತನ್ನದೇ ಆದ ಮದ್ದನ್ನು ಅರೆಯಿತು ಕಾಂಗ್ರೆಸ್. ಅದೆಂದರೆ ನಮ್ಮ ದೇಶದಲ್ಲಿ ಭಾಜಪ-ಆರೆಸ್ಸೆಸ್ ನೇತೃತ್ವದಲ್ಲಿ ದೇಶವನ್ನು ಅಸ್ಥಿರಗೊಳಿಸಲು ಹಿಂದೂ ಭಯೋತ್ಪಾದನಾ ಕ್ಯಾಂಪ್ ಗಳು ಕೆಲಸ ಮಾಡುತ್ತಿವೆ ಎಂದು. ದೇಶದ ಭದ್ರತೆಯ ಜವಾಬ್ದಾರಿ ಹೊತ್ತ ಗೃಹ ಮಂತ್ರಿಗಳ ಬಾಯಿಂದ ಬಿತ್ತು ಸಿಡಿಲಿನಂಥ ಮಾತು. ಆದರೆ ಇಂಥ ಮಾತುಗಳು ಆಗಾಗ ಕೇಳಿ ಬರುತ್ತಾ ಇರುವುದು ನಾವು ಓದಿದ್ದೇವೆ. ಕಾಂಗ್ರೆಸ್ ನ ದಿಗ್ವಿಜಯ ಸಿಂಗ್ ರಿಂದ ಹಿಡಿದು ಮಾಜಿ ಗೃಹ ಮಂತ್ರಿ ಚಿದಂಬರಂವರೆಗೆ ಎಲ್ಲರೂ ಈ ಕುರಿತು ಹೇಳಿಕೆ ನೀಡಿದ್ದಾರೆ. ದೇಶದ ಹಲವೆಡೆ ಬಾಂಬ್ ಸ್ಫೋಟಗಳು ನಡೆದು ಅದರ ಹಿಂದಿನ ಕೈವಾಡವನ್ನು ಬಹಿರಂಗಗೊಳಿಸಿದ ಪೊಲೀಸ್ ಅಧಿಕಾರಿ ಹುತಾತ್ಮ ಹೇಮಂತ್ ಕರ್ಕರೆ ದೇಶವಾಸಿಗಳ ಹುಬ್ಬೇರುವಂತೆ ಮಾಡಿದ್ದರು. ಹೇಮಂತ್ ಕರ್ಕರೆ ನೇತೃತ್ವದಲ್ಲಿ ನಡೆದ ವಿಚಾರಣೆ ಹಲವು ಜನರ ಬಂಧನಕ್ಕೂ ಕಾರಣವಾಯಿತು. ವಿಚಾರಣೆಯಲ್ಲಿ ಕಹಿ ಸತ್ಯ ಸಹ ಹೊರ ಬಂದಿತು. ಆದರೆ ಭಾಜಪದ ಲಾಲ್ ಕೃಷ್ಣಾ ಅಡ್ವಾಣಿ ಯಾಗಲೀ ಪಕ್ಷದ ಬೇರಾವುದೇ ನಾಯಕರಾಗಲೀ ಈ ವಿಚಾರಣೆಯನ್ನು ಕಾಂಗ್ರೆಸ್ ಪ್ರೇರಿತ ಎಂದು ಟೀಕಿಸಿದ ರೇ ಹೊರತು ಆತ್ಮಾವಲೋಕನ ಮಾಡಿಕೊಳ್ಳುವ ಗೊಡವೆಗೆ ಹೋಗಲಿಲ್ಲ. ದೇಶದ ಅತೀ ಜವಾಬ್ದಾರೀ ಹುದ್ದೆಗಳಲ್ಲಿ ಇರುವ ಗೃಹ ಮಂತ್ರಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು, ಇವರು ನಡೆಸಿದ ವಿಚಾರಣೆಗಳುಮ ಬಂಧಿತರು ನೀಡಿದ ಹೇಳಿಕೆಗಳು, ಇವೆಲ್ಲವೂ ಸುಳ್ಳಿನ ಸರಮಾಲೆ ಯಾಗಲು ಸಾಧ್ಯವೇ? ಎಂದು ಪ್ರಶ್ನಿಸಿ ಕೊಳ್ಳಲಿಲ್ಲ. ಭಯೋತ್ಪಾದನೆಗೆ ಧರ್ಮದ ಲೇಪ ಬೇಡ ಎಂದು ಎಲ್ಲಾ ಪ್ರಜ್ಞಾವಂತರ ಅಭಿಪ್ರಾಯ. ಇಸ್ಲಾಮಿ ಭಯೋತ್ಪಾದನೆ, ಹಿಂದೂ ಭಯೋತ್ಪಾದನೆ ಎಂದು ಕೃತ್ಯ ಎಸಗಿದವರ ಧರ್ಮ ವನ್ನು ಸೇರಿಸಿ ವರ್ಣಿಸುವ ಅಗತ್ಯ ಇಲ್ಲ. ಯಾವ ಧರ್ಮವೂ ಹೊಡೀ, ಬಡೀ, ಕಡೀ ಎಂದು ಹೇಳಿ ಕೊಡುವುದಿಲ್ಲ. ಮುಸ್ಲಿಮರು ನಡೆಸಿದ ಹಿಂಸೆಯ ವಿರುದ್ಧ ಮುಸ್ಲಿಂ ವಿಧ್ವಾಂಸರು ಬಹಿರಂಗ ಹೇಳಿಕೆ ಕೊಟ್ಟಿದ್ದಾರೆ. ಸಮುದಾಯವನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಭಯೋತ್ಪಾದನೆ ಪರಿಹಾರವಲ್ಲ ಎನ್ನುವ ಕಿವಿ ಮಾತನ್ನೂ ಹೇಳಿದ್ದಾರೆ. ಈ ನಿಲುವು ಸ್ವಾಗತಾರ್ಹ. ಆದರೆ ಭಾಜಪ ಮತ್ತು ಅದನ್ನು ಬೆಂಬಲಿಸುವ ಸಂಘಟನೆಗಳು ಕೋಣೆಯೊಳಗಿರುವ ಆನೆಯ ರೀತಿ ಕುರುಡು ಭಾವವನ್ನು ತಳೆಯುವುದು ತರವಲ್ಲ. ಆನೆಯ ಇರುವು ಬಹಿರಂಗವಾಗಿದೆ. ಅದರ ಬಗ್ಗೆ ಮಾಡಬೇಕಾದ, ತಳೆಯಬೇಕಾದ ನಿಲುವಿನ ಬಗ್ಗೆ ಪಕ್ಷ ಗಂಭೀರವಾಗಿ ಯೋಚಿಸಿ ಕ್ರಮ ತೆಗೆದುಕೊಳ್ಳಬೇಕು. ನಿರಾಕಾರಣಾ ಮನೋಭಾವದಿಂದ ಯಾರಿಗೂ ಲಾಭವಾಗದು.

ಬದಲಾಗುತ್ತಿರುವ ವಿಶ್ವ ರಾಜಕಾರಣದಲ್ಲಿ ಭಾರತದ ಪಾತ್ರ ಹಿರಿದು. ಪ್ರಜಾಪ್ರಭುತ್ವ, ಜಾತ್ಯಾತೀತ ಮೌಲ್ಯಗಳು ನಮ್ಮ ರಾಜಕಾರಣದಲ್ಲಿ ಪ್ರತಿಫಲಿಸಬೇಕು. ಅಸಹನೆ, ಮತಾಂಧತೆಯ ಸುಳಿಯಲ್ಲಿ ಸಿಕ್ಕ ದೇಶಗಳ ಅವಸ್ಥೆಯಲ್ಲಿ ನಮಗೂ ಪಾಠವೊಂದಿದೆ ಎನ್ನುವುದನ್ನು ಮನಗಾಣಬೇಕು.

೯೬ ರ ಲೈಂಗಿಕ ಶಕ್ತಿ

oldest dad with family
ಉತ್ತರ ಭಾರತದ ಹರಿಯಾಣ ಎಂದರೆ ಬರೀ ‘ಖಾಪ್’ ಪಂಚಾಯತಿ ಅಲ್ಲ. ಹರಿಯಾಣದ ರಾಮ್ ಜೀತ್ ರಾಘವ್ ವಿಶ್ವದ ಅತೀ ಹಿರಿಯ ತಂದೆ. ವಯಸ್ಸು ೯೬. ಎರಡು ಮಕ್ಕಳ ತಂದೆ. ಬಾಳ ಸಂಗಾತಿಯನ್ನು ಕಂಡು ಕೊಂಡಿದ್ದು ೮೬ ನೇ ವಯಸ್ಸಿನಲ್ಲಿ. ಅಲ್ಲಿಯರೆಗೆ ಅವಿವಾಹಿತ. ರೈತನೂ, ಪೈಲ್ವಾನನೂ ಆದ ಈತನಿಗೆ ಈಗಲೂ ತನ್ನ ಮಲಗುವ ಕೋಣೆ ‘ಅಖಾಡ’ ಮತ್ತು ತನ್ನ ಸಂಗಾತಿ ಒಂದು ಹೊಲದಂತೆ. ಪ್ರತೀ ರಾತ್ರಿ ಮೂರ್ನಾಲ್ಕು ಸಲ ಸಂಭೋಗಿಸುತ್ತೇನೆ ಎಂದು ಹೇಳುವ ಈತನ ಮೇಲೆ ನೆರೆಯ ಗಂಡುಗಳಿಗೆ ಉರಿ, ಮತ್ಸರ. ಪಿಕ್ ಪಾಕೆಟ್ ಮಾಡುವಂತೆ ಒದ್ದು ಕಸಿದು ಓಡಿ ಹೋಗುವಂಥದ್ದು ಅಲ್ಲವಲ್ಲ ಆತನಲ್ಲಿ ಇರುವ ಲೈಂಗಿಕ ಸಾಮರ್ಥ್ಯ. ಹೋಗಲಿ, ನೀನೇನನ್ನು ತಿನ್ನುತ್ತೀಯ ಅದನ್ನಾದರೂ ಹೇಳು ಎಂದರೆ ಆತ ಹೇಳೋದು, ಹಾಲು, ಬೆಣ್ಣೆ, ಮತ್ತು ಬಾದಾಮಿ.

ಈ ಬಾದಾಮಿ ಸ್ವಲ್ಪ ತಕರಾರಿನ ‘ಬೀಜ’ವೇ ಅನ್ನಿ. ಗಂಡನ್ನು ನಿಜಕ್ಕೂ nut ಆಗಿಸುತ್ತದೆ. ಆದರೆ ಈ ತೊಂಭತ್ತೈದರ ಮೇಲಿನ ಪ್ರಾಯದಲ್ಲೂ…ದಿನಕ್ಕೆ ಮೂರೂ, ನಾಕೂ ಸಲ….ಅದೇನೋ ನಾನರಿಯೆ.

ಎಷ್ಟು ತೋರಿಸಿದರೆ ಪ್ರಚೋದನಕಾರೀ?

skirt length

ಅತ್ಯಾಚಾರ ಮತ್ತು ಈ ನೀಚ ಕೃತ್ಯದ ಹಿಂದೆ ಇರುವ ಮನಸ್ಥಿತಿ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ನವ ದೆಹಲಿಯಲ್ಲಿ ನಡೆದ ಅತಿ ಕ್ರೂರ ಅತ್ಯಾಚಾರ ದೇಶದ ಮಾತ್ರವಲ್ಲ ಹೊರದೇಶದ ಜನರನ್ನೂ ಕ್ರುದ್ಧ ರನ್ನಾಗಿಸಿದೆ. ರಾತ್ರಿ ಹೊತ್ತು ಹೆಣ್ಣೊಬ್ಬಳು ಹೊರಹೋಗುವ ಔಚಿತ್ಯದಿಂದ ಹಿಡಿದು ಆಕೆ ತೊಡುವ ಉಡುಗೆ ವರೆಗೆ ಎಲ್ಲವೂ ‘ಸ್ಕ್ಯಾನ್’ ಆಗುತ್ತಿವೆ. ದೇವರು ಎರಡೂ ಲಿಂಗಗಳಿಗೆ ಸದ್ಬುದ್ಧಿ ದಯಪಾಲಿಸಲಿ.

ಈಗ ಒಂದು ಪ್ರಶ್ನೆ. ಯಾವ ತೆರನಾದ ಬಟ್ಟೆ ತೊಟ್ಟಾಗ ಗಂಡಿಗೆ ರೇಪ್ ಎಸಗುವ ಪೈಶಾಚಿಕ ಭಾವನೆ ಕೆರಳಿಸುತ್ತದೆ? ಒಬ್ಬೊಬ್ಬರದು ಒಂದೊಂದು ಟೇಸ್ಟು (taste). ಕೆಲವರಿಗೆ ಹೆಣ್ಣಿನ ಮೂಗುತಿಯೂ ಒಂದು ತೆರನಾದ ‘ಕಿಕ್’ ಕೊಡುತ್ತಂತೆ. ಕಾಲುಂಗುರ ಸಹ ಅದೇ ರೀತಿಯ ಕಿಕ್ ಕೊಡುತ್ತೋ ಇಲ್ಲವೋ ಗೊತ್ತಿಲ್ಲ. ಕೆನಡಾದ ಒಬ್ಬ ಹುಡುಗಿ ಮೇಲೆ ತೋರಿಸಿದ ಒಂದು ಚಿತ್ರ ಕೊಟ್ಟು ಅದರ ಮೇಲೆ ಗುರುತು ಹಾಕಿ ಯಾವ್ಯಾವ ಪಾಯಿಂಟ್ ಗಳಲ್ಲಿ ಮಹಿಳೆಯ ‘ಗರತಿ’ತ್ವ ಅಳೆಯಬಹುದು ಎಂದು ತೋರಿಸಿದ್ದಳು. ಗೋಡೆಗೆ ಆತು ನಿಂತ ಹದಿಹರೆಯದ ಹೆಣ್ಣು ತನ್ನ ಸ್ಕರ್ಟ್ ಎತ್ತಿ ತೋರಿಸುತ್ತಾ ಸ್ಕರ್ಟ್ ನ ವಿವಿಧ ಅಳತೆಗಳು ಮೂಡಿಸುವ ಭಾವನೆ ಕುರಿತು ಬರೆದು ಪ್ರಸಿದ್ಧಳಾದಳು ಅಂತರ್ಜಾಲದಲ್ಲಿ.

whore: ಎಂದರೆ ‘ಸಿಂಪ್ಲಿ’ ವೇಶ್ಯೆ.

slut: ಹೆಚ್ಚೂ ಕಡಿಮೆ ಇದೂ ಸಹ ವೇಶ್ಯೆಯೇ ಅನ್ನಿ.

asking for it:ಎಂದರೆ, ಏನ್ ಉಡ್ಗಿ, ಬೇಕಾ?

provocative: ಪ್ರಚೋದನಕಾರೀ.

cheeky: ಅಂದ್ರೆ ‘ತುಂಟಿ’

ನಾನು ಕೇಳೋದು ಇಷ್ಟೇ. ಅವಳೇನನ್ನೇ ತೊಡಲಿ, ತೊಡದೆಯೂ ಇರಲಿ, ಅಲೆಮಾರೀ ಕಣ್ಣುಗಳಿಗೆ ಕಡಿವಾಣ ಹಾಕಿ ಅವು ನೆಲ ನೋಡುವಂತೆ ಮಾಡಬಾರದೇ?

pic courtesy: huffingtonpost, usa

ರಾಜಧಾನಿಯಲ್ಲಿ ನಡೆದ ಅತ್ಯಾಚಾರಕ್ಕೆ ಕಾರಣ ಯಾರು?

rape womenundersiegeprojectdotorg

ನವದೆಹಲಿಯಲ್ಲಿ ನಡೆದ ಅಮಾನುಷ ಅತ್ಯಾಚಾರದ ವಿರುದ್ಧ ದೇಶದಲ್ಲಿ ದೊಡ್ಡ ರೀತಿಯಲ್ಲಿ ಪ್ರತಿಭಟನೆಗಳು ನಡೆದವು, ಮಹಿಳೆಯರು ಮಾನವಾಗಿ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ವಾದುದಕ್ಕೆ ನ್ಯಾಯಾಲಯಗಳನ್ನೂ, ರಾಜಕಾರಣಿ, ಪೊಲೀಸರನ್ನು ನೇರವಾಗಿ ದೂರಿದ ಜನ ಅತ್ಯಾಚಾರಿಗಳಿಗೆ ಗಲ್ಲಿನ ಶಿಕ್ಷೆ ಕೊಡಲು ಆಗ್ರಹಿಸಿದರು. ಕಾಮಪಿಪಾಸು ಪಶುಗಳ ಕೈಗೆ ಸಿಕ್ಕು ಜರ್ಜರಿತಳಾದ ಯುವತಿ ಸಾವಿನೊಂದಿಗೆ ವ್ಯರ್ಥವಾಗಿ ಸೆಣಸಿ ಕೊನೆಯುಸಿರೆಳೆದಳು.

ಟೈಮ್ಸ್ ಆಫ್ ಇಂಡಿಯಾದಲ್ಲಿ ಒಂದು ಲೇಖನ (why Indian men rape – Anand Soondas) ಓದಲು ಸಿಕ್ಕಿತು. ‘ಭಾರತೀಯ ಗಂಡು ಅತ್ಯಾಚಾರವನ್ನೇಕೆ ಎಸಗುತ್ತಾನೆ?’ ರೈಲಿನಲ್ಲಿ ಕಳೆದ ಜುಲೈ ತಿಂಗಳಿನಲ್ಲಿ ಅಸ್ಸಾಮಿನಲ್ಲಿ ನಡೆದ ಹೆಣ್ಣು ಮಗಳೊಬ್ಬಳ ಮೇಲೆ ನಡೆದ ದೌರ್ಜನ್ಯದ ಕುರಿತ ನಡೆದ ವಿದ್ಯಾವಂತರ ಚರ್ಚೆಯಲ್ಲಿ ಒಬ್ಬ ಹೆಣ್ಣಿನ ಕುರಿತು ಹಗುರವಾಗಿ ಮಾತನಾಡಿದ ಬಗ್ಗೆ ಬರೆದಿದ್ದರು ಲೇಖಕರು. ಹಲ್ಲೆಯ ಬಗ್ಗೆ ಮಾತನಾಡುತ್ತಾ ವಾಯು ಸೇನೆಯ ಅಧಿಕಾರಿ ಕೇಳಿದ್ದು ಆಕೆಗೆ ರಾತ್ರಿಯಲ್ಲಿ ಹೊರಗೇನು ಕೆಲಸ ಎಂದು. ಆ ಯುವತಿ ಮದ್ಯ ಸೇವಿಸುತ್ತಿದಳು ಮತ್ತು ಕೆಲವು ಪುರುಷರೊಂದಿಗೆ ಆಕೆ ಚೆಲ್ಲಾಟ ವಾಡುತ್ತಿದ್ದಳು, ಅದಕೆ ತಕ್ಕ ಶಾಸ್ತಿ ಯಾಯಿತು ಎಂದು ಆತ ಹೇಳಿದಾಗ ಕ್ರುದ್ಧನಾದ ಸಹ ಪ್ರಯಾಣಿಕ ಅಧಿಕಾರಿಯನ್ನು ಉದ್ದೇಶಿಸಿ. ಮುಂದಿನ ಸಲ ನಿನ್ನ ಸೋದರಿಯ ಪೃಷ್ಠಗಳನ್ನು ಯಾರಾದರೂ ಹಿಂಡಿದಾಗ ನಿನ್ನ ಸೋದರಿ ಎಷ್ಟು ಮರ್ಯಾದಸ್ಥಳು ಎನ್ನುವುದರ ಬಗ್ಗೆ ಮೊದಲು ಪೊಲೀಸರು ತನಿಖೆ ನಡೆಸಲಿ ಎಂದು ಹೇಳಿದನಂತೆ. ದೌರ್ಜನ್ಯಕ್ಕೊಳಗಾದ ಹೆಣ್ಣುಮಗಳ ಬಗೆಗಿನ ಆ ಅಧಿಕಾರಿಯ ಅಭಿಪ್ರಾಯ ನೋಡಿದಿರಲ್ಲ, ಇದು ವಿದ್ಯಾವಂತರ ಕಥೆ.

ಸಮಾಜವನ್ನು, ದೇಶವನ್ನು ಕಂಗೆಡಿಸುವ ಅತ್ಯಾಚಾರದಂಥ ಘಟನೆಗಳನ್ನು ತಡೆಯಲು ಸಮಾಜ ತನ್ನ ಯುವಜನರ ನೈತಿಕ ಮೌಲ್ಯಗಳು ಪತನಗೊಳ್ಳುತ್ತಿರುವ ಕಡೆ ಗಮನ ನೀಡಬೇಕು. ಗತಿಸಿಹೋದ ವೈಭವದ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸುವುದರಿಂದಲೋ, ಉತ್ಸವಗಳನ್ನು ಆಚರಸುವುದರಿಂದಲೋ ಸಮಾಜದ ಏಳಿಗೆ ಅಥವಾ ಸುರಕ್ಷತೆ ಅಸಾಧ್ಯ. ನವ ದೆಹಲಿಯ ಸಾಮೂಹಿಕ ಅತ್ಯಾಚಾರ ಮತ್ತು ಕಗ್ಗೊಲೆ ನಮ್ಮ ದೇಶದಲ್ಲಿ ಅತ್ಯಚಾರದ ಕುರಿತು ಬಹು ದೊಡ್ಡ ಚರ್ಚೆಯನ್ನೇ ಆರಂಭಿಸಿದೆ. “ನಿರ್ಭಯ” ಎನ್ನುವ ಯುವತಿಯ ದಾರುಣ ಅಂತ್ಯದ ನಂತರ ಸಮಾಜ ಎಚ್ಚೆತ್ತು ಕೊಳ್ಳಲು ಆರಂಭಿಸುತ್ತಿದೆ. ಅದರ ನಡುವೆಯೇ ಮಹಿಳೆ ಲಕ್ಷ್ಮಣ ರೇಖೆಯನ್ನು ದಾಟಬಾರದ, ದಾಟಿದರೆ ಆಗುವ ದುಷ್ಪರಿಣಾಮಗಳ ಕುರಿತ ಬೋಧನೆಗಳು (ಮಧ್ಯ ಪ್ರದೇಶದ ಮಂತ್ರಿ ಮಹೋದಯ ಹೇಳಿದ್ದು) ಕೇಳಿ ಬರುತ್ತಿವೆ. ಮಹಿಳೆಯ ಮೇಲಿನ ಅತ್ಯಾಚಾರಕ್ಕೆ ಮಹಿಳೆಯನ್ನು ಹೊಣೆಗಾರಳನ್ನಾಗಿಸುವ ಮಾತುಗಳೂ ಕೇಳಿ ಬರುತ್ತಿವೆ.

ರಾಜಧಾನಿಯಲ್ಲಿ ಅಮಾಯಕ ಯುವತಿಯ ಮೇಲಿನ ಅತ್ಯಾಚಾರ ನಡೆದ ನಂತರ ಅತ್ಯಾಚಾರಕ್ಕೆ ಕಾರಣವಾಗುವ ಅಂಶಗಳನ್ನು ಚರ್ಚಿಸ ತೊಡಗಿದ ದೇಶಕ್ಕೆ ಮತ್ತೊಂದು ರೀತಿಯ ಆಘಾತ ರಾಜಕಾರಣಿಗಳ ಮಾತಿನಿಂದ. ಹಿಂದುತ್ವ ರಾಷ್ಟ್ರವಾದೀ ಸಂಘಟನೆ ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್ ಈ ಚರ್ಚೆಗೆ ಮತ್ತಷ್ಟು ಬಿಸಿ ಹೆಚ್ಚಿಸಿದರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ. ಪತಿ ಮತ್ತು ಪತ್ನಿ ಸಾಮಾಜಿಕ ಕರಾರಿನ ಕಟ್ಟುಪಾಡಿನ ಒಳಗೆ ತಮ್ಮ ಜವಾಬ್ದಾರಿ ನಿರ್ವಹಿಸಬೇಕು, ಪತಿ ಹೊರಗೆ ದುಡಿದರೆ ಮಹಿಳೆ ಮನೆಯೊಳಗಿದ್ದು ತನ್ನ ಜವಾಬ್ದಾರಿ ಪೂರೈಸಬೇಕು. ಈ ಜವಾಬ್ದಾರಿಗಳು ಅದಲು ಬದಲಾದಾಗ ಅಥವಾ ಮಹಿಳೆ ತನ್ನ ಜವಾದ್ಬಾರಿ ಮರೆತು ಮನೆಯ ಹೊರಗಿನ ಚಟುವಟಿಕೆಗಳಲ್ಲಿ ನಿರತಳಾದಾಗ ಆಗುವ ಪರಿಣಾಮಗಳನ್ನು ವಿಶ್ಲೇಷಿಸಿ ವಿವಾದದ ಸೃಷ್ಟಿಗೆ ಕಾರಣರಾದರು. ಅತ್ಯಾಚಾರ ನಡೆಯುತ್ತಿರುವುದು ವಿದೇಶೀ ಸಂಸ್ಕಾರ ಪ್ರೇರಿತ ‘ಇಂಡಿಯಾ’ ದಲ್ಲಿ, ಸಂಪ್ರದಾಯಸ್ಥ ‘ಭಾರತ’ದಲ್ಲಿ ಅಲ್ಲ ಎನ್ನುವ ಮಾತಿನೊಂದಿಗೆ ದೇಶದೊಳಗೇ ಮತ್ತೊಂದು ದೇಶವನ್ನು ಕಾಣುವ ವ್ಯರ್ಥ ಪ್ರಯತ್ನ ಸಹ ಮಾಡಿದರು ಭಾಗವತ್. ಮಾಧ್ಯಗಳು, ಸಾಮಾಜಿಕ ವೆಬ್ ತಾಣಗಳ ಮೂಲಕ ನಗರಗಳಲ್ಲಿ ನಡೆಯುತ್ತಿರುವ ಅತ್ಯಾಚಾರದ ವರದಿಯಾದರೂ ಓದಲಿಕ್ಕೆ ಸಿಗುತ್ತಿದೆ. ವರದಿಯಾಗದ, ಬೆಳಕಿಗೆ ಬಾರದ ಕಾರಣಕ್ಕಾಗಿ ಗ್ರಾಮಾಂತರ ಪ್ರದೇಶಗಳು ಸುರಕ್ಷಿತ ಎನ್ನುವ ಭಾವನೆ ಒಂದು ಭ್ರಮೆ ಅಷ್ಟೇ.

ಸಾಹಿತ್ಯ, ಕವಿತೆಗಳಲ್ಲಿ, ಸಿನಿಮಾಗಳಲ್ಲಿ ಮುಕ್ತತೆಯನ್ನು ಬಯಸುವ ನಾವು ನಮ್ಮ ಯುವಜನರ ನಡತೆಗೆ ಏಕೆ ಕಡಿವಾಣ ತೊಡಿಸಬೇಕು? ಕಥೆ ಕಾದಂಬರಿ, ಜಾಹೀರಾತು, ಸಿನೆಮಾಗಳಲ್ಲಿ ಎಗ್ಗಿಲ್ಲದೆ ಲೈಂಗಿಕತೆ ತುರುಕಿ ಮಜಾ ಕಾಣುವ ಜನ ಅತ್ಯಾಚಾರದಂತಹ ಘಟನೆಗಳು ಸಂಭವಿಸಿದಾಗ ಹೈರಾಣಾಗುವುದಾದರೂ ಏಕೆ ಎನ್ನುವುದೇ ಅರ್ಥವಾಗುವುದಿಲ್ಲ. ಎಲ್ಲೇ ಕಣ್ಣಾಡಿಸಿದರೂ ಲೈಗಿಕತೆ, ನಗ್ನತೆಯ ದರ್ಶನ ವಾದಾಗ ಆಗುವ ಅನಾಹುತಕ್ಕೆ ಸಮಾಜ ಹೊಣೆ ಹೊರಬೇಕು. ಅಥವಾ ಮುಕ್ತತೆ, ಕ್ರಿಯಾಶೀಲತೆ ಹೆಸರಿನಲ್ಲಿ ನಗ್ನತೆ, ಅಶ್ಲೀಲತೆ ಸೆಕ್ಸ್ ಅನ್ನು ವೈಭವೀಕರಿಸುವುದಾದರೆ ಅಂಥ ಚಿತ್ರ ಗಳನ್ನು ನೋಡಿದ ನಂತರ ಉಂಟಾಗುವ ಉದ್ದೀಪನಕ್ಕೂ ಒಂದು ಔಟ್ ಲೆಟ್ ಸಮಾಜ ನಿರ್ಮಿಸಬೇಕು. ನಮ್ಮ ಚಿತ್ರಗಳಲ್ಲಿ ಕಾಣ ಸಿಗುವ ನರ್ತನ ವನ್ನಾದರೂ ನೋಡಿ, ವಾತ್ಸಾಯನನ ಎಲ್ಲಾ ಭಂಗಿಗಳೂ ಒಂದೆರಡು ಹಾಡುಗಳಲ್ಲಿ ಕಾಣಲು ಲಭ್ಯ. ಗಂಡಿನ ಒಳ ಉಡುಪಿನಿಂದ ಹಿಡಿದು ಕಾರಿನ ಟೈರ್ ಗಳ ಜಾಹೀರಾತಿಗೂ ಬೇಕು ಹೆಣ್ಣು. ಒಂದು ಕಡೆ ನಗ್ನತೆಯ ನಗ್ನ ಪ್ರದರ್ಶನ ಮತ್ತೊಂದು ಕಡೆ ಹುಡಗರು ಹುಡುಗಿಯರು ದಾರಿ ತಪ್ಪ ಬಾರದು ಎನ್ನುವ ಕಡಿವಾಣ, ಹೆಣ್ಣಿನ ಕನ್ಯತ್ವ ಕಾಪಾಡಿಕೊಳ್ಳಬೇಕಾದ ಕುರಿತು ವಿಪರೀತ ಕಾಳಜಿ. ಹೆಣ್ಣನ್ನು ಭೋಗದ ವಸ್ತುವನ್ನಾಗಿ ಮಾತ್ರ ಕಾಣಲು ಸಮಾಜ ಉತ್ಸುಕತೆ ತೋರಿಸಿದರೆ ನವ ದೆಹಲಿಯಲ್ಲಿ ನಡೆದಂಥ ಅಮಾನುಷ, ದುರದೃಷ್ಟಕರ ಘಟನೆಗಳಿಗೂ ಸಾಕ್ಷಿ ನಿಲ್ಲಬೇಕಾಗುತ್ತದೆ.

ಸಮಾಜ ಗಂಡಿನ ಪ್ರಾಮುಖ್ಯತೆ ಬಗ್ಗೆ ಅತೀವ ಗಮನ ನೀಡುತ್ತಿರುವುದೂ ಸಹ ಮಹಿಳೆಯ ದಾರುಣ ಅವಸ್ಥೆಗೆ ಮತ್ತೊಂದು ಕಾರಣ. ಹುಟ್ಟುವ ಮಗು ಹೆಣ್ಣು ಎಂದು ಖಾತ್ರಿಯಾದ ಕೂಡಲೇ ಭ್ರೂಣ ಹತ್ಯೆ ಮೂಲಕ ಹೆಣ್ಣು ಮಗಳನ್ನು ಕೊಲೆಗೈಯ್ಯಲು ಹೇಸದ ಸಮಾಜದಿಂದ ಒಳ್ಳೆಯತನವನ್ನು ನಿರೀಕ್ಷಿಸುವುದು ಕಷ್ಟಕರವಾದ ಕೆಲಸವೇ. ಇನ್ನು ಭ್ರೂಣಾವಸ್ಥೆಯಿಂದ ಭಡ್ತಿ ಪಡೆದು ಧರಿತ್ರಿ ಮುಟ್ಟಿದ ಕೂಡಲೇ ತನ್ನ ಹುಟ್ಟನ್ನು ಪ್ರಪಂಚಕ್ಕೆ ತಿಳಿಸಲು ತಂದೆ ತಾಯಿಗಳಿಗೂ, ಆ ಶುಭ ವಾರ್ತೆಯನ್ನು ಕೇಳುವ ಜನರಿಗೂ ಒಂದು ತೆರನಾದ ಸಂಕಟ… ಅಯ್ಯೋ, ಹೆಣ್ಣಾ? ಹೆಣ್ಣು ಅಬಲೆ, ಹೆಣ್ಣಿನ ಬುದ್ಧಿ ಮೊಣಕಾಲ ಕೆಳಗೆ, ಮುಂತಾದ ಮಾತುಗಳನ್ನು ಕೇಳುತ್ತಾ ಬೆಳೆಯುವ ಗಂಡು ಮಕ್ಕಳಿಗೆ ಹೆಣ್ಣಿನ ಮೇಲೆ ಗೌರವ ತೋರುವುದಾದರೂ ಹೇಗೆ? ಹೆಣ್ಣಿನ ಬುದ್ಧಿ ಮೊಳ ಕಾಲ ಕೆಳಗೆ, ಮುಂತಾದ ಮಾತುಗಳ ಮೂಲಕ ಹೆಣ್ಣಿನ ಅಸ್ತಿತ್ವದ ಕುರಿತು ಕೀಳರಿಮೆ ಬರುವಂಥ ನಡತೆಗಳೂ ಸಹ ಕಾರಣ ಮಹಿಳೆಯ ವಿರುದ್ಧ ನಡೆಯುತ್ತಿರುವ ಹಿಂಸೆ, ಅತ್ಯಾಚಾರ. ಹೆಣ್ಣನ್ನು ದೇವಿ, ‘ಮಾತಾ ಶ್ರೀ’ ಎಂದು ಪೂಜಿಸುವ, ಆದರಿಸುವ ಸಮಾಜವೇ ಸಂದರ್ಭ ಬಂದಾಗ ಮಹಿಳೆ ವಿರುದ್ಧ ಹೇಸಿಗೆ ಹುಟ್ಟಿಸುವ ಕೆಲಸಕ್ಕೂ ಮುಂದಾಗುವುದು ಅರ್ಥವಾಗದ ಒಗಟು. ಮಹಿಳೆಯರ ಮೇಲಿನ ದೌರ್ಜನ್ಯ ಕಂಡು ಬೇಸತ್ತ ಒಬ್ಬ ಮಹಿಳೆ ಹೇಳುವುದು, “ಹೆಣ್ಣು ಮಕ್ಕಳನ್ನು, ಸಂಗೀತ ಕಲಿಯಲಿಕ್ಕೋ, ನೃತ್ಯ ಕಲಿಯಲಿಕ್ಕೋ ಕಳಿಸಬೇಡಿ, ಬದಲಿಗೆ ಕರಾಟೆ, ಜೂಡೋ ಕಲಿಯಲು ಪ್ರೋತ್ಸಾಹಿಸಿ” ಇಂಥ ಮಾತು ಓರ್ವ ಹೆಣ್ಣು ಮಗಳ ಬಾಯಿಂದ ಬರಬೇಕಾದರೆ ಗಂಡಿನ ಕುರಿತ ಆಕೆಯ ಅಪನಂಬಿಕೆ ನಮಗೆ ವೇದ್ಯವಾಗುತ್ತದೆ.

ಬಹುಶಃ ವಿಶ್ವದಲ್ಲೇ ಅತೀ ಹೆಚ್ಚು ಪ್ರಭಾವೀ ಮಹಿಳಾ ರಾಜಕಾರಣಿಗಳು ಇರುವ ದೇಶ ನಮ್ಮದು. ಸರಕಾರವನ್ನು ಮುನ್ನಡೆಸುತ್ತಿರುವ ಮಹಿಳೆಯಿಂದ ಹಿಡಿದು, ವಿರೋಧ ಪಕ್ಷದ ನಾಯಕಿ. ಮುಖ್ಯ ಮಂತ್ರಿ, ಉನ್ನತ ಮಂತ್ರಿ ಪದವಿಗಳನ್ನು ಅಲಂಕರಿಸಿ ಕೂತ ಮಹಿಳೆಯರಿಗೆ ಅವರದೇ ಸಮಸ್ಯೆಗಳ ಅರಿವು ಇಲ್ಲದಿರುವುದು ಆಶ್ಚರ್ಯಕರ. ಇಷ್ಟೊಂದು ಮಹಿಳಾ ರಾಜಕಾರಣಿಗಳು ವಿಜ್ರಂಭಿಸುವ ದೇಶದಲ್ಲೇ ಹೆಣ್ಣಿನ ಪರಿಸ್ಥಿತಿ ಹೀಗಾದರೆ?

ಮಹಿಳೆಯರ ವಿರುದ್ಧ ನಡೆಯುವ ಯಾವುದೇ ಹಿಂಸೆ ಅತ್ಯಚಾರ ಗಳನ್ನು ವ್ಯವಸ್ಥೆ ಅತ್ಯಂತ ಗಂಭೀರವಾಗಿ ಪರಿಗಣಿಸಿ ತಕ್ಕ ಶಿಕ್ಷೆ ಯನ್ನು ಫಾಸ್ಟ್ ಟ್ರಾಕ್ ಕೋರ್ಟ್ ಗಳ ಮೂಲಕ ಕೊಡ ಮಾಡಿಸಬೇಕು. ಅತ್ಯಾಚಾರವೆಸಗುವ ಗಂಡಿನ ವಯಸ್ಸಿನ ಮಿತಿಯನ್ನು ಹದಿನೆಂಟರಿಂದ ಹದಿನೈದಕ್ಕೆ ಇಳಿಸಬೇಕು. ನವ ದೆಹಲಿಯಲ್ಲಿ ಅತ್ಯಾಚಾರವೆಸಗಿದ ಪುರುಷರ ಪೈಕಿ ಹದಿನೇಳು ವಯಸ್ಸಿನ ಹುಡುಗನ ಪಾತ್ರ ಅತ್ಯಂತ ಕ್ರೂರವಂತೆ. ಚಿಕ್ಕ ವಯಸ್ಸಿನಲ್ಲೇ ಹಡಬೆ ಕೆಲಸಕ್ಕೆ ಕೈ ಹಚ್ಚುತ್ತಿರುವ ಸಮೂಹಕ್ಕೆ ಶಿಕ್ಷೆಗೆ ಅವಶ್ಯವಾದ ಪರಿಮಿತಿಯನ್ನು ಕೆಳಕ್ಕಿಳಿಸಿದಾಗಲೇ ಇತರರಿಗೆ ಎಚ್ಚರಿಕೆಯ ಘಂಟೆ. ಅತ್ಯಾಚಾರಿಗೆ ನೇಣಿನ ಶಿಕ್ಷೆಯನ್ನಲ್ಲದೆ ಬೇರಾವುದೇ ಶಿಕ್ಷೆಗೂ ಒಳಪಡಿಸಬಾರದು. ಏಕೆಂದರೆ, ಮಹಿಳೆಯ ವಿರುದ್ಧ ನಡೆಯುವ ಅತ್ಯಾಚಾರ ಒಂದು ರೀತಿಯ crime against humanity.

pic courtesy: http://www.womenundersiege.org