Rain, rain, go away..

ಮುಂಗಾರು ಮಳೆಯ ಆರ್ಭಟ ಜನರನ್ನು ಕಂಗೆಡಿಸಿದೆ. ಬೆಂಬಿಡದ ಭೂತದಂತೆ ಬೆನ್ನು ಬಿದ್ದಿರುವ ಮಳೆಯಿಂದ ಸಾವು ನೋವು ಮಾತ್ರವಲ್ಲ ಕೋಟ್ಯಾಂತರ ರೂಪಾಯಿಗಳ ನಷ್ಟ ಬೇರೆ. ಮಳೆರಾಯನನ್ನು ಒಲಿಸಲು ಕಪ್ಪೆಗಳಿಗೂ ಕತ್ತೆಗಳಿಗೂ ಮದುವೆ ಸೀಮಂತ ಮಾಡಿದ ನಾವು ಈಗ ಮಳೆ ನಿಲ್ಲಿಸುವಂತೆ ವರುಣನ ಕಾಲಿಗೆ ಬೀಳಲು ತಯಾರಾಗಿದ್ದೇವೆ. ಬತ್ತಿದ ನದಿಗಳೆಲ್ಲ ಮೈ ತುಂಬಿಕೊಂಡಿದ್ದನ್ನು ನೋಡಿ ನಲಿದ ನಮಗೆ ಈಗ ಮಳೆರಾಯನ ಕೃಪೆ ಅವಶ್ಯಕತೆಗಿಂತ ಹೆಚ್ಚಾದಾಗ ಆಜೀರ್ಣವಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ೩೯ ವರ್ಷಗಳಲ್ಲಿ ಆಗದ ಮಳೆ ಈಗ ಆಗುತ್ತಿದ್ದು ರೈತರ ಪೈರು ನೀರು ಪಾಲಾಗಿ ಹಲುಬುವಂತೆ ಮಾಡಿದೆ. ಮಳೆಯಿಂದ ನಿಸರ್ಗ ಕಂಗೊಳಿಸುತ್ತಿದ್ದರೂ ಜನ ಕಂಗಾಲಾಗುವಂತೆ ಮಾಡಿದೆ ಈ ಮಳೆ. ಹೀಗೆ ಪ್ರಕೃತಿಯ ವಿಕೋಪ ನಮ್ಮ ಮೇಲೆ ಎರಗಲು ನಾವು ಮಾಡಿದ ಪಾಪಗಳೇ ಕಾರಣ. ಈ ಮಾತು ಅತಿಶಯೋಕ್ತಿಯಲ್ಲ. ಅತಿಯಾಸೆಯಿಂದ ಪ್ರಕೃತಿಯ ಮೇಲೆ ಧಾಳಿ ಮಾಡಿದ ನಮಗೆ ಪ್ರಕೃತಿಯ ಕೃಪೆ ಸಿಗುವುದಾದರೂ ಹೇಗೆ? ಕಾಡನ್ನು ಬೋಳಿಸುವುದು, ಗುಡ್ಡಗಳನ್ನು ನೆಲಸಮ ಮಾಡುವುದು, ಭೂ ಸವೆತ, ಎರ್ರಾಬಿರ್ರಿ ಕಾರ್ಖಾನೆಗಳ ಸ್ಥಾಪನೆಯಿಂದ ವಿಷಾನಿಲವನ್ನು ಆಗಸಕ್ಕೂ, ಕಲ್ಮಶಗಳನ್ನು ನದೀ ಸಮುದ್ರಗಳಿಗೆ ಬಿಡುವುದೂ ಮಾಡಿದ್ದರಿಂದ ನಿಸರ್ಗದ ಲೆಕ್ಕಾಚಾರದಲ್ಲಿ ಏರುಪೆರುಂಟಾಗಿ ಈ ರೀತಿಯ ಸಮಸ್ಯೆಗಳು ತಲೆದೋರುತ್ತಿವೆ. ನಿಸರ್ಗವನ್ನು ಗೌರವಿಸದ, ಆದರಿಸದ ನಮಗೆ ನಿಸರ್ಗ ನಮ್ಮ ಮೇಲೆ ಕರುಣೆಯನ್ನು ಹೇಗೆ ತೋರಬಹುದು?

ಬಾಲ್ಯದ ಸುತ್ತ…

ಹೈ ಸ್ಕೂಲಿನಲ್ಲಿದ್ದಾಗ ನಡೆದ ಘಟನೆ. JTS ಶಾಲೆ principal ನನ್ನ ತಂದೆಗೆ ಪರಿಚಯವಿದ್ದುದರಿಂದ ನನ್ನನ್ನು ಅಲ್ಲಿಗೆ ಸೇರಿಸಿದ್ದರು. ಬೇರೆ ಪ್ರೌಢ ಶಾಲೆಯ ಹಾಗಲ್ಲ ಈ ಶಾಲೆ. carpentry, fitting, electrical, mechanical ವಿಷಯಗಳನ್ನೂ ಕಲಿಸುತ್ತಾರೆ. ೮ ನೆ ಕ್ಲಾಸಿನವರಿಗೆ ತಿಂಗಳಿಗೆ ೧೦ ರೂಪಾಯಿ ಸ್ಟೈಪೆಂಡ್, ೯ ಮಾತು ೧೦ ತರಗತಿಗಳವರಿಗೆ ೧೫ ರೂಪಾಯಿ. ಆಗ ಈ ಹತ್ತೂ ಮತ್ತು ಹದಿನೈದಕ್ಕೆ ಬಹಳ ಕೀಮತ್ತು. ಈಗಿನ ಮಕ್ಕಳು ೧೦ ರೂಪಾಯನ್ನು ಎಡಗೈಯಿಂದಲೂ ಮುಟ್ಟುವುದಿಲ್ಲ. ಎರಡು ಮೂರು ತಿಂಗಳ ಹಣ ಕೂಡಿಸಿ ನನ್ನಮ್ಮನಿಗೆ ಮನೆಗೆ ಬೇಕಾದ ಏನಾದರೂ ಸಾಮಾನನ್ನು ಕೊಡಿಸುತ್ತಿದ್ದೆ.

ನಮ್ಮ ಶಾಲೆಯ ಕಂಪೌಂಡ್ ಗೋಡೆ ಕೆಲಸದ ಕಾಮಗಾರಿ ನನ್ನ ತಂದೆಯವರಿಗೆ ಸಿಕ್ಕಿ ನನಗೆ ದೊಡ್ಡ ತಾಪತ್ರಯವಾಯಿತು. ಗೋಡೆ ಕೆಲಸ ಮುಗಿದ ಕೂಡಲೇ ದರಿದ್ರದ ೧೧೦ ವರ್ಷಗಳಲ್ಲಿ ಆಗಿರದಂಥ ಮಳೆ ನನ್ನ ತಂದೆ ಕಟ್ಟಿಸಿದ ಗೋಡೆಯನ್ನು ತನಗೆ ಸಲ್ಲಬೇಕಾದ ಶುಲ್ಕ ಎನ್ನುವಂತೆ ತಿಂದು, ನೆಕ್ಕಿ ಹೋಯಿತು. ಮಾರನೆ ದಿನ ಶಾಲೆಗೆ ಬಂದಾಗ ಎಲ್ಲಿದೆ ಗೋಡೆ? ಶುರುವಾಯಿತು ಹಾಸ್ಯದ ಸುರಿಮಳೆ. ತಮಾಷೆ, ಕುಹಕ ಮಾಡುವುದೇ ತನ್ನ ಕಸುಬೆನ್ದುಕೊಂಡ ನಮ್ಮ ಕನ್ನಡ ಮಾಷ್ಟ್ರು ಇಡೀ ದಿನ ನನ್ನ ಮಾನ ತೆಗೆದರು. ಕೋಪದಿಂದ ಮನೆಗೆ ಹೋದ ನಾನು ತಂದೆಯನ್ನು ಎಂಥ ಗೋಡೆ ಕಟ್ಟಿಸಿದಿರಾ ಎಂದು ತರಾಟೆಗೆ ತೆಗೆದುಕೊಂಡೆ. ಆಗ ತಂದೆ ಶಾಂತವಾಗಿ ಹೇಳಿದ್ದು ಇದು; “ಲೇ, ಹೋಗಿ ನಿನ್ನ ಮೇಷ್ಟ್ರಿಗೆ ಹೇಳು ಆ ಗೋಡೆಯೇನಾದರೂ ಬಿದ್ದಿಲ್ಲದೆ ಹೋಗಿದ್ದರೆ ಶಾಲೆಯ ಕಟ್ಟಡವೇ ಬಿದ್ದು ಎಲ್ಲಾದರೂ ಮರದ ಕೆಳಗೆ ಕೂತು ಪಾಠ ಹೇಳಬೇಕಾಗಿತ್ತು ಅಂತ”. ಗೋಡೆಗೆ drain holes ಕೊಟ್ಟಿರಲಿಲ್ಲ. ಅದು ಇಂಜಿನಿಯರ್ನ ತಪ್ಪೋ, ನಮ್ಮಪ್ಪನದೋ ನನಗೆ ಗೊತ್ತಿಲ್ಲ. ಆ ನೀರು ಹೊರಹೋಗದೆ ಅಲ್ಲೇ ನಿಂತಿದ್ದರೆ ಶಾಲೆಯೇ ಬೀಳುತ್ತಿತ್ತಂತೆ. ಈ ಕತೆಯನ್ನು ನಾನೇನೂ ಶಾಲೆಗೆ ಹೋಗಿ ಹೇಳಲಿಲ್ಲ ಅನ್ನಿ. a very embarrassing story.