ಬೆಡಗಿ ಬಾಲಿವುಡ್ ಗೆ ೧೦೦

isha-chawla 2

ಮೊನ್ನೆ ಶುಕ್ರವಾರ ಬಾಲಿವುಡ್ ಗೆ ೧೦೦ ವರ್ಷಗಳು ತುಂಬಿದವಂತೆ. ೧೮೯೫ ರಲ್ಲಿ ಪ್ಯಾರಿಸ್ ನಗರದಲ್ಲಿ ಆರಂಭವಾದ ಸಿನೆಮಾ ಆರೇ ತಿಂಗಳಿನಲ್ಲಿ ಮುಂಬೈ ತೀರವನ್ನು ತಲುಪಿ ಜನರನ್ನು ಮಂತ್ರ ಮುಗ್ಧ ರನ್ನಾಗಿಸಿತು. ಕೂಡಲೇ ಈ ತಂತ್ರ ಜ್ಞಾನವನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡ ಭಾರತೀಯ ಒಂದು, ಎರಡು ರೀಲ್ ಗಳ ಪುಟ್ಟ ಸಿನೆಮಾದೊಂದಿಗೆ ಚಲನ ಚಿತ್ರದೊಂದಿಗಿನ ತನ್ನ ಸಂಬಂಧಕ್ಕೆ ನಾಂದಿ ಹಾಡಿದ. ಬಡ ದೇಶವಾದರೂ, ಒಪ್ಪತ್ತಿಗೂ ಗತಿಯಿಲ್ಲದೆ, ಆಗಸವನ್ನು ಸೂರಾಗಿಸಿಕೊಂಡರೂ ಬಾಲಿವುಡ್ ಮಾತ್ರ ರೀಲ್ ಮೇಲೆ ರೀಲುಗಳಂತೆ ಚಿತ್ರಗಳನ್ನ ತಯಾರಿಸಿ ಜನ ಹಸಿವನ್ನು ಮರೆಯಲು ಸಹಾಯ ಮಾಡಿತು. ಭಾರತೀಯರಿಗೆ ಕಥೆ ಕೇಳೋದು, ಕೇಳಿದ ಕಥೆಯನ್ನೇ ಮತ್ತೊಮ್ಮೆ ಕೇಳೋದು ಮೋಜಿನ ಸಂಗತಿಯಂತೆ. ಸಿನಿಮಾ ಬಂದಾಗಲೂ ಆಗಿದ್ದಷ್ಟೇ. ಒಂದೇ ಸಿನಿಮಾವನ್ನು ಹಲವು ಸಲ ನೋಡುವ ಜನರಿದ್ದಾಗ ಬಾಲಿವುಡ್ ವ್ಯಾಪಾರ ಸರಾಗ ವಾಯಿತು. ಅದರ ಮೇಲೆ ನಿಜ ಜೀವನಕ್ಕೆ ಯಾವುದೇ ರೀತಿಯಿಂದಲೂ ಹೊಂದದ ಬದುಕಿನ ರೀತಿಯನ್ನು ತೆರೆಯ ಮೇಲೆ ತೋರಿಸಿದಾಗ ಬಂದ ಶಿಳ್ಳೆ ನೋಡಿ ಬಾಲಿವುಡ್ ಗೆ ಯಶಸ್ಸಿನ ಮಂತ್ರ ಏನು ಎಂದು ಹೇಳಲು ಪಂಡಿತರ ಅವಶ್ಯಕತೆ ಬರಲಿಲ್ಲ.

ಸಿನಿಮಾ ಒಂದು ಅತ್ಯಂತ ಶಕ್ತಿಶಾಲೀ ಮತ್ತು ಪ್ರಭಾವಶಾಲೀ ಮಾಧ್ಯಮ. ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿದಾಗ ಸಮಾಜದ ಪರಿವರ್ತನೆ ಬಹು ಸುಲಭ. ಆದರೆ ಸಮಾಜ ಪರಿವರ್ತಿಸುವ ಚಿತ್ರಗಳು ಬಂದಾಗ ಅವುಗಳಿಗೆ ಸಿಗುವ ಪ್ರತಿಕ್ರಿಯೆ, ಪ್ರೋತ್ಸಾಹ ಕಂಡ ಬಾಲಿವುಡ್ ಸಿಕ್ಕಾಪಟ್ಟೆ ಹಣ ಹಾಕಿ ಕೈ ಸುಟ್ಟುಕೊಳ್ಳಬಾರದು ಎಂದು ಅಂಗ ಸೌಷ್ಟವಗಳ ಪ್ರದರ್ಶನಕ್ಕೆ ಕೈ ಹಾಕಿತು. ಪ್ರತೀ ಚಿತ್ರದಲ್ಲೂ ಒಂದು ಕ್ಯಾಬರೆ ನೃತ್ಯ ಇರಲೇಬೇಕು. ಜನರನ್ನು ಉದ್ರೇಕಿ ಸುತ್ತಿದ್ದ ಈ ನೃತ್ಯಗಳು ಕಾಲಕ್ರಮೇಣ ಪ್ರತೀ ಹಾಡಿನಲ್ಲೂ ಕಾಣಲು ಸಿಕ್ಕಿತು. ಈಗಂತೂ ವಾತ್ಸ್ಯಾಯನನ ಎಲ್ಲಾ ಭಂಗಿಗಳೂ ಲಭ್ಯ ಹಾಡುಗಳಲ್ಲಿ. ಈ ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ಹಣ ಚೆಲ್ಲಾಡಲು ಸಹಾಯಕಾರಿಯಾದವು.

ಸಮಾಜದ ಕಡೆ ಬಾಲಿವುಡ್ ತನ್ನ ದೃಷ್ಟಿ ಹರಿಸಲೇ ಇಲ್ಲ ಎಂದೂ ಹೇಳುವಂತಿಲ್ಲ. ಅಸ್ಪೃಶ್ಯತೆ ಬಗೆಗಿನ ೧೯೩೬ ರ “ಅಚ್ಚುತ್ ಕನ್ಯಾ”, ವಿಧವಾ ವಿವಾಹದ ಮೇಲಿನ ಏಕ್ ಹೀ ರಾಸ್ತಾ (೧೯೫೬), ವರದಕ್ಷಿಣೆ ಬಗೆಗಿನ ದಹೇಜ್ (೧೯೫೦) ಚಿತ್ರಗಳು ವ್ಯಾಪಾರೀ ಮನೋಭಾವ ಬಿಟ್ಟು ಸಮಾಜದ ಕಡೆ ಗಮನ ಹರಿಸಿದವು.

ಉತ್ತರ ಮತ್ತು ದಕ್ಷಿಣ ಭಾರತ ದಿಕ್ಕುಗಳಂತೆ ಯೇ ವಿರುದ್ಧ ಹಲವು ವಿಷಯಗಳಲ್ಲಿ. ಉತ್ತರ ಭಾರತೀಯ ಮತ್ತು ದಕ್ಷಿಣ ಭಾರತೀಯ ರ ನಡುವಿನ ಚಿತ್ರವನ್ನ ೧೯೫೬ ರಲ್ಲಿ ನಿರ್ದೇಶಕ ಮೋಹನ್ ಸೆಹಗಲ್ ನಿರ್ಮಿಸಿ ಸುದ್ದಿ ಮಾಡಿದರು. ಈ ಚಿತ್ರದಲ್ಲಿ ಉತ್ತರದ ಪಂಜಾಬಿ ಯುವಕ ತಮಿಳು ಮೂಲದ ಪ್ರೆಯಸಿಯಲ್ಲಿ ಹೇಳುತ್ತಾನೆ, ಅವನ ತಂದೆಯ ಪ್ರಕಾರ, ಒಂದು ನಾಗರ ಹಾವೂ, ದಕ್ಷಿಣ ಭಾರತೀಯನೂ ಎದುರಾದರೆ ಮೊದಲು ಮದ್ರಾಸಿ ಯನ್ನು ಕೊಲ್ಲಬೇಕಂತೆ. ಹೇಗಿದೆ ಸಂಬಂಧ, ಮತ್ತು ನಮ್ಮ ಬಗೆಗಿನ ಅವರ ಒಲವು. ಈ ಒಲವನ್ನು ಈಗಲೂ, ವಿಶೇಷವಾಗಿ ಬೆಂಗಳೂರಿಗರಿಗೆ ಕಾಣಲು ಸುಲಭ ಸಾಧ್ಯವಂತೆ.

ಬಾಲಿವುಡ್ ನಮ್ಮ ಸಮಾಜದ ಮೇಲೆ ಯಾವುದೇ ರೀತಿಯಿಂದಲೂ ಒಳ್ಳೆಯ ಪರಿಣಾಮ ಬೀರುತ್ತಿಲ್ಲ ಎನ್ನುವ ದೂರು ಜೋರಾಗಿ ಕೇಳಿಸುತ್ತಿದೆ. ಬೆಳಗಾದರೆ ನಾವು ಓದುವ ಹಸುಳೆ ಯಿಂದ ಹಿಡಿದು ಇಳಿವಯಸ್ಸಿನ ಮಹಿಳೆಯ ಮೇಲೆ ನಡೆಯುವ ಅತ್ಯಾಚಾರಕ್ಕೆ ಕಾರಣ ನಟಿಯರಿಗೆ ಉಡುಗೆಯ ಮೇಲಿನ ವೈರಾಗ್ಯ ಕಾರಣವಂತೆ. ಹಣಕ್ಕಾಗಿ ಬಿಚ್ಚಿದ್ದೇ ಬಿಚ್ಚಿದ್ದು. ನಿರ್ದೇಶಕ ಸ್ವಲ್ಪ ಬಿಚ್ಚಿದರೆ ಸಾಕು ಎಂದರೆ ಸ್ವಲ್ಪ ಉಟ್ಟರೆ ಸಾಕು ಎಂದು ತಪ್ಪಾಗಿ ಕೇಳಿಸಿಕೊಳ್ಳುವ ನಟಿಯರಿಗೆ ಬಿಚ್ಚುವುದರಲ್ಲಿ ಅದೇನೋ ಒಂದು ಸುಖ. ತಮ್ಮ ಅಂಗ ಸೌಷ್ಠವ ಪ್ರದರ್ಶನಕ್ಕಿಟ್ಟು ಜನರನ್ನು ಉದ್ದೀಪಿಸುವ ತಾರೆಯರು ತಾವು ಮಾತ್ರ ಬಾಡಿ ಗಾರ್ಡ್ ಗಳ ರಕ್ಷಣೆಯಲ್ಲಿ ಸುರಕ್ಷಿತ. ದಾರಿಹೋಕ, ಹೊಟ್ಟೆ ಪಾಡಿಗೆಂದು ಹೊರಹೋಗುವ ಬಡಪಾಯಿ ಮಹಿಳೆಯರು ಕಾಮ ಪಿಪಾಸುಗಳಿಗೆ ಬಲಿ.

ಇದು ಬಾಲಿವುಡ್ ನ ನೂರು ವರ್ಷ ಗಳ ವೀರಗಾಥೆ.

Pic Courtesy: http://bollywoodkickass.blogspot.com/2011/11/isha-chawla-photos-in-wet-red-blue.html