ಜಪಾನ್ ದುರಂತ ಮತ್ತು ಹಾಸ್ಯ

ಜಪಾನ್ ದುರಂತದಿಂದ ದಿಗ್ಭ್ರಾಂತವಾದ ವಿಶ್ವ ಜಪಾನೀಯರಿಗೆ ತಮ್ಮ ಅನುಭೂತಿ, ಸಂತಾಪ, ಪ್ರಾರ್ಥನೆಗಳನ್ನು ಒಂದು ಕಡೆ ಅರ್ಪಿಸುತ್ತಿದ್ದರೆ  ಮತ್ತೊಂದು ಕಡೆ ಅಲ್ಲಿನ ಸಾವು ನೋವಿನ ಬಗ್ಗೆ ಯಾವ ನೋವೂ ಇಲ್ಲದೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಕೀಳು ಅಭಿರುಚಿಯ ಜೋಕುಗಳನ್ನು ಸಿಡಿಸುತ್ತಿದ್ದಾರೆ ಕೆಲವರು.

ಅಮೆರಿಕೆಯ ಚಿತ್ರ ಸಾಹಿತ್ಯ ಲೇಖಕನೊಬ್ಬ ಜಪಾನ್ ದುರಂತದ ಬಗ್ಗೆ ಟ್ವೀಟಿಸಿದ್ದು ಹೀಗೆ; “ಜಪಾನಿನ ಭೂಕಂಪನದ ಬಗ್ಗೆ ಒಳ್ಳೆಯ ಭಾವನೆ ಬರಬೇಕಾದರೆ ಪರ್ಲ್ ಹಾರ್ಬರ್ ಸಾವಿನ ಸಂಖ್ಯೆ ಬಗ್ಗೆ ಗೂಗ್ಲಿಸಿ ನೋಡಿ”

೧೯೪೧ ರಲ್ಲಿ ಜಪಾನೀ ನಾವಿಕ ಪಡೆ ಅಮೆರಿಕೆಯ ಹವಾಯಿ ದ್ವೀಪದ ಪರ್ಲ್ ಹಾರ್ಬರ್ ಮೇಲೆ ನಡೆಸಿದ ಅಚ್ಚರಿದಾಯಕ ಆಕ್ರಮಣದಲ್ಲಿ ೨೦೦೦ ಸಾವಿರಕ್ಕೂ ಹೆಚ್ಚು ಜನ ಸತಿದ್ದರು. ಅದಕ್ಕೂ ಹೆಚ್ಚಾಗಿ ಈ ಆಕ್ರಮಣ ಅಮೆರಿಕೆಯ ಸೇನಾ ಪ್ರತಿಷ್ಠೆಗೆ ಭಾರೀ ಪೆಟ್ಟನ್ನೂ ನೀಡಿತ್ತು. ಈ ಆಕ್ರಮಣವನ್ನು ಗಮನದಲ್ಲಿಟ್ಟು ಕೊಂಡು ಪ್ರಸಕ್ತ ನೈಸರ್ಗಿಕ ವಿಕೋಪ ಕಾರಣ ಜಪಾನಿನಲ್ಲಿ ಸಂಭವಿಸಿದ ಅಗಾಧ ಸಾವು ನೋವಿಗೆ ಈತನ ಮನಸ್ಸು ಪ್ರತಿಸ್ಪಂದಿಸಲು ವಿಫಲವಾಯಿತು. ರಾಜಕೀಯ ಕಾರಣಗಳಿಗಾಗಿ ನಡೆದ ಆಕ್ರಮಣಕ್ಕೆ ಸೇಡು ಎನ್ನುವಂತೆ ಟ್ವೀಟಿಸುವ ಈತನಿಗೆ ಸಂದು ಹೋದ ಚರಿತ್ರೆ ಬಗ್ಗೆ ಮರುಗುವುದು ಹುಂಬತನ ಎನ್ನುವುದು ತಿಳಿಯದೆ ಹೋಯಿತು. ಇಂದು ಜಪಾನಿನ ಮೇಲೆ ಎರಗಿದ ನಿಸರ್ಗ ನಾಳೆ ತನ್ನ ದೇಶದ ಮೇಲೂ ಎರಗಬಾರದು ಎನ್ನುವ ಖಾತರಿ ಇಲ್ಲ ಎನ್ನ್ವುಉದು ಈ ಸಾಹಿತಿಗೆ ಅರಿಯದೆ ಹೋಯಿತು.   

ಮೇಲೆ ಹೇಳಿದ ಚಿತ್ರಸಾಹಿತಿಯ ಟ್ವೀಟ್ ಬಗ್ಗೆ ಗುಲ್ಲೆದ್ದು, ಪ್ರತಿಭಟನೆ ಬಂದಾಗ ಅವನು ಹೇಳಿದ್ದು, ನಾನು ಟ್ವೀಟಿ ಸುವಾಗ ೨೦೦ ಜನ ಮಾತ್ರ ಸತ್ತಿದ್ದರು, ಈಗ ೧೦ ಸಾವಿರಕ್ಕೆ ಮುಟ್ಟಿದೆ ಸಾವಿನ ಸಂಖ್ಯೆ, ನನ್ನ ಸಂವೇದನಾ ರಹಿತ ಕಾಮೆಂಟ್ ಗಳಿಗೆ ಕ್ಷಮೆಯಿರಲಿ”. ೨೦೦ ಜನ ಸತ್ತರೆ ಈತನಿಗೆ ದೊಡ್ಡ ವಿಷಯವಲ್ಲ. ಅದು ಗಂಭೀರವೂ ಅಲ್ಲ. ಅಮೆರಿಕೆಯ ದಿವಂಗತ ಸೆನಟರ್ ಟೆಡ್ ಕೆನಡಿಯ ಸಾಕು ನಾಯಿ “ಸ್ಪ್ಲಾಶ್” ಇತ್ತೀಚೆಗೆ ಸತ್ತಾಗ ಅದು ದೊಡ್ಡ ಸುದ್ದಿ. ಭೂಕಂಪದಲ್ಲಿ ಸತ್ತ ಜನರಿಗೆ ತಮಾಷೆಯ ಟ್ವೀಟ್. ಇದು ಸಂಸ್ಕಾರ.

ಈಗ ಮತ್ತೊಬ್ಬ ಹಾಸ್ಯನಟನ ಹಾಸ್ಯದ ಟ್ವೀಟ್ ನೋಡಿ; “ಜಪಾನೀಯರು ತುಂಬಾ ಮುಂದುವರಿದವರು, ಅವರು ಸಮುದ್ರ ತೀರಕ್ಕೆ ಹೋಗುವುದಿಲ್ಲ, ಬದಲಿಗೆ ತೀರವೇ ಅವರಿದ್ದಲ್ಲಿಗೆ ಬರುತ್ತದೆ”. ದೈತ್ಯಾಕಾರದ ಸುನಾಮಿ ಅಲೆಗಳು ೨೦೦ ರಿಂದ ೫೦೦ ಕಿಲೋ ಮೀಟರ್ ವೇಗದಲ್ಲಿ ಸೆನ್ಡಾಯ್ ನಗರದ ಮೇಲೆ ಅಪ್ಪಳಿಸಿ ಹತ್ತಾರು ಸಾವಿರ ಜನ ಸತ್ತಾಗ ಬಂದ ಶೋಕತಪ್ತ ಟ್ವೀಟ್ ಇದು. ಇದು ಬಿಳಿಯರಿಗೆ ಹಾಸ್ಯ. ಅಭಿವ್ಯಕ್ತಿ ಸ್ವಾಂತ್ರ್ಯ. ಬಿಳಿಯರಲ್ಲದ ಜನರ ಮೇಲೆ ಅವರಿಗಿರುವ ಅನುತಾಪ ಅಷ್ಟಕ್ಕಷ್ಟೇ. ಜಪಾನೀಯರನ್ನೂ, ಚೀನೀಯರನ್ನೂ ಹಳದಿ ಚರ್ಮದವರು ಎಂದು ತಮಾಷೆ ಮಾಡುತ್ತಾರಂತೆ ಪಾಶ್ಚಾತ್ಯರು.

ಆಧುನಿಕ ಬದುಕಿನ blackberry ಸಂಸ್ಕೃತಿ ಕಾರಣ ಮನುಷ್ಯ ಮತ್ತೊಬ್ಬರ ಕಷ್ಟಗಳಿಗೆ ಸ್ಪಂದಿಸಲು, ಅನುಕಂಪ ತೋರಲು ಸೋಲುತ್ತಿದ್ದಾನೆ ಎಂದರೆ ಉತ್ಪ್ರೇಕ್ಷೆ ಆಗಬಹುದೇ?       

ಭೂತ ಕಾಲದ ಬಗ್ಗೆ ತಲೆ ಕೆಡಿಸಿಕೊಳ್ಳುವವರಿಗೆ ಒಬ್ಬ ಮಹನೀಯ ಹೇಳಿದ್ದು;

the past is a foreign country; they do things differently there

ಬ್ರಾಯ್ಲರ್ ಚಿಕನ್

ಗಡಿ ಭದ್ರತಾ ಪಡೆಯ ಯೋಧರು ಬೇಟೆಗೆ ಬ್ರಾಯ್ಲರ್ ಚಿಕನ್ ಗಳಷ್ಟೇ ಸುಲಭ ಎಂದು ಹೇಳಿಕೆ ನೀಡಿ ಗಾಯದ ಮೇಲೆ ಇನ್ನಷ್ಟು ಉಪ್ಪು ಉಜ್ಜುವ ಮಾತನ್ನು ಆಡುತ್ತಿದ್ದಾರೆ ಮಾವೋ ವಾದಿಗಳು. ಮಾವೋ ಹಿಂಸೆ ಈಗೀಗ ಹೊಸ ರೂಪವನ್ನು ತಾಳುತ್ತಿದ್ದು ದಿನಗಳು ಉರುಳಿದಂತೆ ಅವರು ಇನ್ನಷ್ಟು ಹುಮ್ಮಸ್ಸಿನಿಂದ ಚೈತನ್ಯದಿಂದ ನಮ್ಮ ರಕ್ಷಣಾ ವ್ಯವಸ್ಥೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಮೊನ್ನೆ ನಡೆದ ಮತ್ತೊಂದು ಮಾರಣ ಹೋಮದಲ್ಲಿ ೨೫ ಕ್ಕೂ ಹೆಚ್ಚು ಯೋಧರನ್ನು ಕೊಂದದ್ದು ಮಾತ್ರವಲ್ಲದೆ ಕೆಲವರ ಮೃತ ದೇಹಗಳನ್ನು ವಿಕೃತ ಗೊಳಿಸಿ ಯೋಧರು ಬ್ರಾಯ್ಲರ್ ಕೋಳಿಗಳಂತೆ ಎಂದು ಹೇಳಿಕೆ ನೀಡಿ ವಿಕೃತ ಆನಂದ ಪಡೆಯುತ್ತಿದ್ದಾರೆ. ಯೋಧರನ್ನು ಇಷ್ಟು ಸಾರಾಸಗಟಾಗಿ ಕೊಲ್ಲುವ ಮಾವೋಗಳು ನಮ್ಮ ಪಡೆಗಳ ಮೇಲೆ ಮಾನಸಿಕ ಒತ್ತಡವನ್ನು ಹೇರುತ್ತಿದ್ದಾರೆ. ಈ ರೀತಿಯ ಮಾವೋಗಳ ಯಶಸ್ಸು ಇವರನ್ನು ನಿಗ್ರಹಿಸುವ ಸರಕಾರದ ಶ್ರಮಕ್ಕೆ ದೊಡ್ಡ ಪೆಟ್ಟನ್ನೇ ನೀಡುತ್ತದೆ. ಆದರೆ ಸರಕಾರ ಇಂಥ ಸಮಯದಲ್ಲಿ ಧೃತಿಗೆಡದೆ ಸಮಚಿತ್ತದಿಂದ ಪರಿಹಾರ ಕಂಡು ಕೊಳ್ಳುವ ಪ್ರಯತ್ನ ಮಾಡಬೇಕು. ಇದಕ್ಕೆಎಲ್ಲಾ ರಾಜಕೀಯ ಪಕ್ಷಗಳ ಸಕ್ರಿಯ ಸಹಕಾರ ಅತ್ಯಗತ್ಯ. ಈ ಮಟ್ಟದ ಯೋಧರ ಕಗ್ಗೊಲೆಗೆ ಬೇಕಾದ ಶಸ್ತ್ರಗಳು ಮತ್ತು ಇತರೆ ಸೌಲಭ್ಯಗಳು  ಮಾವೊಗಳಿಗೆ ಸಿಗುವುದಾದರೂ ಎಲ್ಲಿಂದ? ಈ ತೆರನಾದ ಕಾರ್ಯಾಚರಣೆಗೆ ಬೇಕಾಗುವ ಸಂಪನ್ಮೂಲ ಕಾಡಿನಲ್ಲಿ ಅವಿತುಕೊಂಡು ಹೊಂದಿಸಲಾಗದು. ಹಾಗಾದರೆ ವಿದೇಶಿ ಶಕ್ತಿಗಳ ಕೈವಾಡ ಇರಬಹುದೇ? ನಮ್ಮ ನೆರೆ ಹೊರೆ ಹೇಗೆ, ಅವರ ಉದ್ದೇಶ ಏನು ಎಂಬುದು ನಮಗೆ ತಿಳಿಯದ್ದಲ್ಲ. ಮಾವೊಗಳಿಗೆ ವಿದೇಶೀ ಸಂಪರ್ಕಗಳಿದ್ದರೆ ಅವನ್ನು ನಿಗ್ರಹಿಸಲು ಸರಕಾರ ಕ್ರಮ ತೆಗೆದುಕೊಳ್ಳಬೇಕು. ಹಾಗೆಯೇ ಮಾವೋಗಳು ಮತ್ತು ಇತರೆ ಬಂಡುಕೋರರನ್ನು ಬಗ್ಗು ಬಡಿಯಲು ಸರಕಾರ ದೊಡ್ಡ ರೀತಿಯಲ್ಲಿ ಪಡೆಗಳನ್ನು ಸುಸಜ್ಜಿತಗೊಳಿಸುವತ್ತ ಗಮನ ಹರಿಸಿ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಬೇಕು.

ಆಧುನಿಕ ರಾಷ್ಟ್ರಗಳ ಆಧುನಿಕ ಜೀವನ ಶೈಲಿಯನ್ನು ನಾವು ಅಳವಡಿಕೊಳ್ಳಲು ಕಾತುರರಾಗಿರುವಾಗ, ಅದಕ್ಕೆ ಬೇಕಾದ ತಂತ್ರಜ್ಞಾನವನ್ನು ಅತ್ಯುತ್ಸಾಹದಿಂದ ಅಳವಡಿಸಿ ಕೊಳ್ಳಲು ನಮಗೆ ಸಾಧ್ಯವಾದರೆ ನಮ್ಮ ಪಡೆಗಳು ಓಬೀರಾಯನ ಕಾಲದ ಶಸ್ತ್ರಗಳನ್ನು ಇಟ್ಟುಕೊಂಡು ಹೋರಾಡಲು ಏಕೆ ಬಲವಂತ ಪಡಿಸಬೇಕು? ಆಫ್ಘನ್, ಇರಾಕ್ ನಲ್ಲಿರುವ ಅಮೇರಿಕನ್, ಬ್ರಿಟಿಶ್ ಯೋಧರ ಉಡುಗೆ, ಶಸ್ತ್ರ ನೋಡಿ ಮತ್ತು ನಮ್ಮ ಅಮಾಯಕ ಯೋಧರ ವೇಷ ಭೂಷಣ ನೋಡಿ, ವ್ಯತ್ಯಾಸ ತಿಳಿಯುತ್ತದೆ. ಕಾರ್ಗಿಲ್ ಯುದ್ಧದ ವೇಳೆ ಶತ್ರು ಸುಸಜ್ಜಿತನಾಗಿ ಬಂದಿದ್ದರೆ ನಮ್ಮ   ಯೋಧರ ಬಳಿ ಮಂಜಿನ ಬೂಟುಗಳೂ ಇರಲಿಲ್ಲವಂತೆ. ಭಾರತೀಯ ಸೇನೆಯ ಪಾಡು ಹೀಗಾದರೆ ಭದ್ರತಾ ಪಡೆಯವರ ಪಾಡು ಹೇಗಿರಬಹುದು?

ಮಾವೋಗಳ ಹಿಂಸಾತ್ಮಕ ಯಶಸ್ಸು ನಮಗೆ ಒಳ್ಳೆಯದಲ್ಲ. ಇವರ ಯಶಸ್ಸಿನಿಂದ ಸ್ಫೂರ್ತಿ ಪಡೆದು ಈಶಾನ್ಯ ರಾಜ್ಯಗಳ ಇತರೆ ವಿಧ್ವಮ್ಸಕ ಗುಂಪುಗಳು ದೊಡ್ಡ ರೀತಿಯಲ್ಲಿ ಧಾಳಿ ಮಾಡಲು ಉತ್ಸಾಹ ತೋರಬಹುದು.

ಮಾವೋ ಹಿಂಸೆಗೆ ಪ್ರತಿ ಹಿಂಸೆ ಪರಿಹಾರವಲ್ಲ. ಆದರೆ ಮಾತುಕತೆಗೆ ಮಾವೋಗಳು ಅಷ್ಟು ಸುಲಭವಾಗಿ ಒಪ್ಪುವವರಲ್ಲ. ಅವರು ಬಯಸುವ ಸಾಮಾಜಿಕ ಸುಧಾರಣೆಗಳು ಯಾವುದೇ ಪಕ್ಷದಿಂದಲೂ  ಸಾಧಿಸಲು ಸುಲಭ ಸಾಧ್ಯವಲ್ಲ. ಮಾವೋ ವಿಚಾರಧಾರೆ ಒಂದು ಕ್ರಾಂತಿಯಂತೆ. ನಾವು ಆರಿಸಿಕೊಂಡ ಬಂಡವಾಳಶಾಹಿ ವ್ಯವಸ್ಥೆ ಮಾವೋಗಳ ಆಶಯಗಳನ್ನು ಈಡೇರಿಸಲಾರದು. ಒಂದು ರೀತಿಯ ತ್ರಿಶಂಕು ಪರಿಸ್ಥಿತಿ ನಮ್ಮದು.