ನಮ್ಮ ರಾಷ್ಟ್ರಗೀತೆ ಚಿಕ್ಕದಾಯಿತು

ನಮ್ಮ ರಾಷ್ಟ್ರ ಗೀತೆ ಚಿಕ್ಕದಾಯಿತು, ಸ್ವಲ್ಪ ದೊಡ್ಡದು ಮಾಡಬಾರದೇ? ಡಿಮಾಂಡಪ್ಪೋ ಡಿಮಾಂಡು, ತರಾವರಿ ಡಿಮಾಂಡುಗಳು ಜನರದು. ತಿನ್ನೋಕ್ಕೆ ಒಪ್ಪೊತ್ತಿನ ಅನ್ನ ಇಲ್ಲ, ಅನ್ನ ಹಾಕಿ ಎಂದು ಎಂದು ಕೆಲವರ ಡಿಮಾಂಡ್ ಆದರೆ ಇನ್ನೂ ಕೆಲವರದು ತಮ್ಮ ತಲೆ ಮೇಲೆ ಸೂರಿಲ್ಲ, ಸಹಾಯ ಮಾಡಿ ಎನ್ನುವ ಡಿಮಾಂಡು. ಬದುಕಿನ ಅತ್ಯವಶ್ಯಕತೆ ಗಳ ಡಿಮಾಂಡು ಗಳನ್ನು ಈಡೇರಿಸಲು ಪ್ರಪಂಚ ಹೆಣಗಾಡುತ್ತಿದ್ದರೆ ನಮ್ಮ ರಾಷ್ಟ್ರ ಗೀತೆ ಯಾಕೋ ತುಂಬಾ ಚಿಕ್ಕದಾಯಿತು, ಅದನ್ನು ಸ್ವಲ್ಪ ಸ್ಟ್ರೆಚ್ ಮಾಡಿ ದೊಡ್ಡದು ಮಾಡಬಾರದೇ ಎನ್ನುವ ತುಂಟನದ ಡಿಮಾಂಡು. ಬೇಸ್ತು ಬೀಳಬೇಡಿ, ಈ ಡಿಮಾಂಡನ್ನು ನಮ್ಮ ದೇಶ ವಾಸಿಗಳಲ್ಲಿ ಯಾರೂ ಮಾಡಲಿಲ್ಲ, ಈ ಸವಿನಯ, ದೇಶಭಕ್ತಿ ತುಂಬಿ ತುಳುಕುವ ಮನವಿ ಬಂದಿದ್ದು ಫಾರ್ಮುಲಾ ಒನ್ ಕಾರ್ ರೇಸಿನ ಇಂಗ್ಲೆಂಡ್ ಮೂಲದ ಡ್ರೈವರ್ ಒಬ್ಬನಿಂದ. ಚಾಲಕ ಲೀವೈಸ್ ಹ್ಯಾಮಿಲ್ಟನ್ ನ ಅಳಲಿನ ಮರ್ಮ ಸ್ವಲ್ಪ ನೋಡೋಣ.

ಯಾವುದೇ ಕ್ರೀಡಾಪಟುವೂ ಸ್ಪರ್ದೆಯಲ್ಲಿ ವಿಜೇತನಾದಾಗ podium ಮೇಲೆ ನಿಂತು ತನ್ನ ರಾಷ್ಟ್ರ ಗೀತೆಯನ್ನು ನುಡಿಸುವುದನ್ನು ಹೆಮ್ಮೆಯಿಂದ ಕೇಳುವುದು ರೋಮಾಂಚನವೇ ಸರಿ. ಆದರೆ ನಾನು ಈ ಕಾರ್ ರೇಸಿನ ಈ ಪಂದ್ಯದಲ್ಲಿ ಗೆದ್ದು podium ಮೇಲೆ ನಿಂತ ಅರ್ಧ ನಿಮಿಷದಲ್ಲೇ ಮುಗಿದು ಹೋಯಿತು ನನ್ನ ರಾಷ್ಟ್ರ ಗೀತೆ. ಕೆಲವರು ೧೦ ನಿಮಿಷಗಳಿಗೂ ಹೆಚ್ಚು ಹೊತ್ತು ನಿಂತು ತಮ್ಮ ಗೀತೆಯನ್ನು ಆಲಿಸುತ್ತಾರೆ. ಇದು ಅವನ ಅಳಲು. ಅವನಿಗೆ podium ಮೇಲೆ ಹೆಚ್ಚು ಹೊತ್ತು ನಿಂತು ಸಂಭ್ರಮಿಸುವ ಆಸೆ, ಈ ಆಸೆ ಪೂರಸಲು ಅವನ ದೇಶದ god save the queen ಎನ್ನುವ ರಾಷ್ಟ್ರಗೀತೆಯನ್ನು ಇನ್ನಷ್ಟು ಉದ್ದ ಮಾಡಬೇಕು. ಹೇಗಿದೆ ಬೇಡಿಕೆ?

ನಮ್ಮ ರಾಷ್ಟ್ರಗೀತೆಯಲ್ಲಿ ಸ್ವಲ್ಪ alteration ಮಾಡಿ ಎಂದು ನಮ್ಮ ದೇಶದಲ್ಲಿ ಒಬ್ಬರು ಕೋರ್ಟು ಹತ್ತಿದರಂತೆ. “ಪಂಜಾಬ್, ಸಿಂಧು, ಗುಜರಾತ, ಮರಾಠ…” ಗೀತೆಯ ಈ ಸಾಲಿನಲ್ಲಿನ ಸಿಂಧ್ ಈಗ ನಮ್ಮ ದೇಶದಲ್ಲಿಲ್ಲದ್ದರಿಂದಲೂ, ಕಾಶ್ಮೀರ ನಮ್ಮ ದೇಶದಲ್ಲಿದ್ದರೂ ಅದರ ಪ್ರಸ್ತಾಪ ಗೀತೆಯಲ್ಲಿಲ್ಲದ್ದರಿಂದಲೂ ಸ್ವಲ್ಪ ಬದಲಾವಣೆ ಮಾಡಬಾರದೇ ಎನ್ನುವ ಮನವಿ. ಸಿಂಧ್ ಎಂದರೆ ಬರೀ ಪ್ರಾಂತ್ಯ ಮಾತ್ರವಲ್ಲ ಅದೊಂದು ನಾಗರೀಕತೆ, ನದಿಯ ಹೆಸರೂ ಹೌದು, ಹಾಗಾಗಿ ಯಾವ ಬದಲಾವಣೆ ಕೂಡದು ಎಂದು ವಿರೋಧಿಸಿದವರ ಪಾಟೀ ಸವಾಲು. ನ್ಯಾಯಾಲಯ alteration ಮನವಿಯನ್ನು ತಿಪ್ಪೆಗೆ ಬಿಸುಟಿತು.

ಆಫ್ಘಾನಿಸ್ತಾನದಲ್ಲಿ ೧೯೯೯- ೨೦೦೨ ರವರೆಗೆ ರಾಷ್ಟ್ರ ಗೀತೆಯೇ ಇರಲಿಲ್ಲ. ಬದಲಿಗೆ ಇದ್ದಿದ್ದು “ಕಲಾಶ್ನಿಕೋವ್” ಕೋವಿಗಳ ಸಂಗೀತ ಮಾತ್ರ.

ರಾಷ್ಟ್ರ ಗೀತೆಗಳ ಅಧ್ಯಯನಕ್ಕೆ anthematology ಎಂದು ಹೆಸರು. ಅಧ್ಯಯನ ಮಾಡುವ ವ್ಯಕ್ತಿ anthematologist.

Advertisements

ವಾಕರಿಕೆ ತರಿಸುವಂತೆ ಕಾಣುತ್ತೀರಿ…

ನೀವು, ಗಂಡೋ, ಹೆಣ್ಣೋ, ತುಂಬಾ ಮುತುವರ್ಜಿಯಿಂದ ಸುಂದರ ಸೊಗಸಾದ ಉಡುಗೆ, ಒಪ್ಪುವ ಮೇಕಪ್ ತೊಟ್ಟುಕೊಂಡುದುದನ್ನು ನೋಡಿ ಯಾರಾದರೂ ಆಹ್, ತುಂಬಾ ವಾಕರಿಕೆ (sick) ಬರುವಂತೆ ಕಾಣುತ್ತಿದ್ದೀರಿ ಎಂದರೆ ಏನು ಮಾಡುತ್ತೀರಿ? ಎಲ್ಲೋ ಹುಚ್ಚಾಸ್ಪತ್ರೆ ಕಡೆ ತಿಳಿಯದೆ ಬಂದು ಬಿಟ್ಟೆ ಎಂದು ಕಾಲು ಕೀಳುತ್ತೀರೋ ಅಥವಾ ಅವನ/ಳ ನ್ನು ಕೊಲ್ಲುವಂತೆ ನೋಡುತ್ತೀರೋ? ನಿಮ್ಮ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಏನು ಬೇಕಾದರೂ ಮಾಡಿಕೊಳ್ಳಿ ಆದರೆ ಆತ ಅಥವಾ ಆಕೆ you look sick ಅಂತ ಹೇಳಿದ್ದು ಮಾತ್ರ ಕಟು ಮಾತಲ್ಲ. ಹೀಗಂತ ನಾನಲ್ಲ ಆಂಗ್ಲ ಭಾಷೆ ಹೇಳುತ್ತದೆ.

sick ಅನ್ನೋ ಪದವನ್ನು ಗುಣವಾಚಕ ಅಥವಾ ವಿಶೇಷಣವಾಗಿ cool ಎನ್ನೋ ಪದಕ್ಕೆ ಸರಿ ಸಮಾನವಾಗಿ ಉಪಯೋಗಿಸುತ್ತಾರೆ. you look cool, or ‘cool’ ಎಂದು ಉಲಿಯುವುದನ್ನು ಕೇಳಿಯೇ ಇರುತ್ತೀರಿ ಅಲ್ಲವೇ? ಹದಿನೆಂಟನೆ ಶತಮಾನದಲ್ಲೇ ಅಮೆರಿಕೆಯಲ್ಲಿ ಬಳಕೆ ಯಲ್ಲಿದ್ದ ಈ ಉಪಯೋಗ ಬ್ರಿಟಿಶ್ ತೀರಕ್ಕೆ ಅಪ್ಪಳಿಸಿದ್ದು ತೀರಾ ಇತ್ತೀಚೆಗೆ.

ಈಗ ಇದನ್ನು ಓದಿ ಜ್ಞಾನ ಪ್ರದರ್ಶನಕ್ಕೆಂದು ಮದುವೆ ಮನೆಯಲ್ಲಿ ಭಾರೀ ಜರತಾರಿ ಸೀರೆ, ಅದಕ್ಕಿಂತ ಭಾರೀ ಮೇಕಪ್ ಮಾಡಿಕೊಂಡು ಬಂದ ಸುರಾಂಗನೆಯ ಮೇಲೆ ಈ ಪದ ಪ್ರಯೋಗ ಮಾಡಿ ರಾದ್ಧಾಂತ ಕ್ಕೆ ಎಡೆ ಮಾಡಿಕೊಡಬೇಡಿ. ಏಕೆಂದರೆ ನಮ್ಮ ಸಮಾಜ ಇನ್ನೂ “ಶೈ “ಶವಾ” ವಸ್ಥೆಯಲ್ಲೇ ಇದೆ ತುಂಬಾ ವಿಷಯಗಳಲ್ಲಿ. ಮೇಲಿನ ರೀತಿಯ ಮತ್ತು ಇನ್ನೂ ತರಾವರಿ ರೀತಿಯ ವಿಷಯ ಮತ್ತು ಕೀಟಲೆಗಳಿಗೆ ನನ್ನ ‘ಗುಬ್ಬಚ್ಚಿ’ ಗೂಡಿಗೆ ಭೇಟಿ ಕೊಡಿ.

http://www.twitter.com/bhadravathi

ನಾವಾಡುವ ನುಡಿ …

ನಾವಾಡುವ ನುಡಿ … ಕನ್ನಡ ನುಡಿಗೆ, ಭಾಷೆಗೆ ‘ಇಗೋ’ (ಅಹಂ) ಇಲ್ಲ ಎಂದು ‘ಇಗೋ ಕನ್ನಡ’ ದಂಥ ಪುಸ್ತಕ ಓದಿದ ಯಾರಿಗೂ ಅರಿವಾಗದೇ ಇರದು. ಏಕೆಂದರೆ ಅರಬ್ಬೀ, ಪಾರ್ಸಿ, ಮರಾಠಿ ಬಾಷೆಗಳ ಪದಗಳನ್ನು ಸರಾಗವಾಗಿ ತನ್ನೊಡಲಲ್ಲಿ ಇಟ್ಟುಕೊಂಡು, ಶ್ರೀಮಂತಗೊಂಡ ಭಾಷೆ ಕನ್ನಡ. ಅದರಲ್ಲೂ ಸಂಸ್ಕೃತದ ಪ್ರಭಾವ ಸ್ವಲ್ಪ ಅಪಾರವೇ ಎನ್ನಬೇಕು; ಶೇಕಡ ೬೦ ಕ್ಕೂ ಹೆಚ್ಚು ಪದಗಳು ಸಂಸ್ಕೃತದಿಂದ ಬಂದವಂತೆ.  ಇಗೋ ಕನ್ನಡ ಪುಸ್ತಕವನ್ನು ತಿರುವಿ ಹಾಕುವಾಗ ಸಿಕ್ಕಿದ ಕೆಲವು ಸ್ವಾರಸ್ಯಕರ ಅಂಶಗಳನ್ನ ನಿಮ್ಮ ಮುಂದೆ ಇಡುವ ಬಯಕೆ.  

ಹಿರಿಯ ಮಗನನ್ನು ಜ್ಯೇಷ್ಠ ಪುತ್ರ ಎಂದು ಕರೆಯುವರು. ಸರಿ, ಮೊದಲ ಮಗನೇನೋ ಜ್ಯೇಷ್ಠ ಆಗುತ್ತಾನೆ.  ಆದರೆ ಹಿರಿಯ ಮಗಳನ್ನು “ಜ್ಯೇಷ್ಠೆ” ಎಂದು ಕರೆಯರು, ಯಾಕೆ? ಲಕ್ಷ್ಮಿಯ ಹಿರಿಯ ಅಕ್ಕನಾದ  ಜ್ಯೇಷ್ಠೆಗೆ ದುರದೃಷ್ಟದ ದೇವತೆ ಎನ್ನುತ್ತಾರಂತೆ. ಆದ್ದರಿಂದ ಹೆಣ್ಣು ಮಕ್ಕಳನ್ನು ಈ ಹೆಸರಿನಿಂದ ಕರೆಯುವುದಿಲ್ಲ, ದುರದೃಷ್ಟ ವಕ್ಕರಿಸೀತೆಂದು ಹೆದರಿ. ‘ಜ್ಯೇಷ್ಠಾ’ ಎಂದರೆ ಹಿರಿಯ ಹೆಂಡತಿ, ಪ್ರಿಯೆಯಾದ ಹೆಂಡತಿ ಎನ್ನುವ ಅರ್ಥಗಳೂ ಇವೆ. ನನಗೆ ತಿಳಿದಂತೆ,  ಸಾಮಾನ್ಯವಾಗಿ ಕಿರಿಯ ಹೆಂಡತಿ ಪ್ರಿಯಳಾದವಳು, ಹಿರಿಯ ಹೆಂಡತಿಯಲ್ಲ. ವಯಸ್ಸಿನಲ್ಲಿ ಮತ್ತು ಅನುಭವದಲ್ಲಿ ಚಿಕ್ಕವಳು ಅಂತ ಕಿರಿಯ ಹೆಂಡತಿ  ಮೇಲೆ ಪ್ರೀತಿ ಸ್ವಲ್ಪ ಹೆಚ್ಚೇ ಇರುತ್ತದೆ.  

ಶ್ರೀಮತಿ ಎಂದ ಕೂಡಲೇ ಮದುವೆಯಾದಾಕೆ ಎನ್ನುವ ಭಾವನೆ ನಮ್ಮಲ್ಲಿದೆ. ‘ಶ್ರೀಮಾನ್, ಶ್ರೀಮತಿ’ ಗಳನ್ನು ಆಂಗ್ಲ ಭಾಷೆಯ mr and mrs ನ ಸಮಾನ ರೂಪವಾಗಿ ಉಪಯೋಗಿಸುತ್ತಾರೆ.  ಶ್ರೀಮತಿ ವಿವಾಹಿತ ಮಹಿಳೆಗೆ ಅನ್ವಯ ಎನ್ನುವ ನಿಯಮವೇನೂ ಇಲ್ಲ. ಶ್ರೀಮತಿ ಎಂದರೆ, ಸಂಪತ್ತುಳ್ಳವಳು, ಬುದ್ಧಿ, ಶೋಭೆ, ಕಾಂತಿಯುಳ್ಳವಳು ಎಂದರ್ಥ. ಶ್ರೀಮತಿ ಅವಿವಾಹಿತೆ ಸಹ ಆಗಬಹುದು. ಗೌರವಾರ್ಹರಾದ ಎಲ್ಲಾ ಮಹಿಳೆಯರಿಗೂ ಇದು ಅನ್ವಯಿಸುವುದು.  ಹಾಗಾದರೆ ಆಂಗ್ಲ ಭಾಷೆಯ ‘ಮಿಸಸ್’ ಪದಕ್ಕೆ ಕನ್ನಡದ ರೂಪ ಏನು? 

ಊರು ತಲಪಿದ ಕೂಡಲೇ ಫೋನ್ ಮಾಡಿ ತಿಳಿಸು. ತಲಪು? ಅಥವಾ ‘ತಲು’ಪು? ಎರಡೂ ಸರಿಯಂತೆ, ಹಾಗಂತ ‘ಇಗೋ ಕನ್ನಡ’ ದ ಫರ್ಮಾನು. ಫರ್ಮಾನ್ ಎಂದರೆ ಆಜ್ಞೆ. ರಾಜನೊಬ್ಬ ಫರ್ಮಾನ್ ನೀಡಿದಾಗ ಅದು ರಾಜಾಜ್ಞೆ.   

‘ತಾಬಡತೋಬ’ – ಈ ಪದಕ್ಕೆ ಕನ್ನಡದ ಸಮಾನ ಪದ ತುರ್ತು. ಹೋಗೋ ಅವನಿಗೆ ತಾಬಡತೋಬ್ (ತುರ್ತಾಗಿ) ಬರೋಕ್ಕೆ ಹೇಳು ಎಂದು ಹೇಳುವುದನ್ನು ನಾನು ಕೇಳಿದ್ದೇನೆ. ಉರ್ದು ಭಾಷಿಕರೂ, ಹುಬ್ಬಳ್ಳಿ ಧಾರವಾಡದ ಮಂದಿಯೂ ಹೀಗೆ ಹೇಳ್ತಾರಂತೆ. ನಾಲಗೆಯ ಮೇಲೆ ಅಂಕು ಡೊಂಕಾಗಿ ನಿಲ್ಲಲು ಪ್ರಯತ್ನಿಸುವ ಈ ಪದದ ಮೂಲ ‘ಮರಾಠಿ’.  

‘ತಾದಾತ್ಮ್ಯ’ ನನಗಿಷ್ಟವಾದ ಪದ. ಇದರ ಅರ್ಥ ತಲ್ಲೀನತೆ, ಮಗ್ನ. ಓದು, ಬರಹ ತಾದಾತ್ಮ್ಯ ತೆಯಿಂದ ಮಾಡಬಹುದೋ ಅಥವಾ ಈ ಪದವನ್ನು ಅರಾಧನೆಯಂಥ ಗಂಭೀರ ಕಾರ್ಯಗಳಿಗೆ ಮಾತ್ರ ಬಳಸಬೇಕೋ?

ಈ ಕ್ಷಣಕ್ಕೆ ಇಷ್ಟು ಸಾಕು….ಸಿರಿಗನ್ನಡಂ ಗೆಲ್ಗೆ.

ಅಡಗಿ ಕೂತಿದ್ದ ಭಾಷೆ

Ethnologue ಎನ್ನುವ ಭಾಷೆಗಳ ಅಧ್ಯಯನಕ್ಕಾಗೇ ಇರುವ ಪತ್ರಿಕೆ ಪ್ರಕಾರ ಇದುವರೆಗೂ ನಮಗೆ ಗೊತ್ತಿರುವ ವಿಶ್ವದ ಭಾಷೆಗಳು ೬೯೦೯. ಈಗ ಭಾರತದಿಂದಲೇ ಮತ್ತೊಂದು ಭಾಷೆಯ ಪ್ರವೇಶವಾಗಿದೆ ಅರುಣಾಚಲ ಪ್ರದೇಶದಿಂದ. National Geographic’s Enduring Voices ನವರು ನಡೆಸಿದ ಅಧ್ಯಯನದಿಂದ ಈ ರೋಚಕ ಸಂಗತಿ ತಿಳಿದು ಬಂತು. “ಕೋರೋ” ಎಂದು ಕರೆಯಲ್ಪಡುವ ಈ ಭಾಷೆಯನ್ನು ಕೇವಲ ೮೦೦ ರಿಂದ ೧೨೦೦ ಜನ ಮಾತನ್ನಾಡುತ್ತಾರಂತೆ. ಇಂಥದ್ದೇ ಮತ್ತೊಂದು ಅಪರೂಪದ “ಬೊ” ಎನ್ನುವ ಅಂಡಮಾನ್ ದ್ವೀಪದ ಭಾಷೆ ಆ ಭಾಷೆಯನ್ನಾಡುವ  ಕೊನೆಯ ವ್ಯಕ್ತಿ ಕಳೆದ ವರ್ಷ ಸಾಯುವುದರೊಂದಿಗೆ ಅವನೊಂದಿಗೇ ಸ್ವರ್ಗ ಸೇರಿಕೊಂಡಿತು. ಧಾರ್ಮಿಕವಾಗಿ ಮಾತ್ರ ಉಪಯೋಗಿಸಲ್ಪಡುತ್ತಿದ್ದ ಸಂಸ್ಕೃತವೂ ಅದೇ ದಾರಿ ಹಿಡಿಯಬಹುದು ಎನ್ನುವ ಆತಂಕವಿತ್ತು ಮೊದಲು. 

ಕೋರೋ ಭಾಷೆ ಆಡುವ ಯುವಜನರು ಕ್ರಮೇಣ ಹಿಂದಿ ಮತ್ತು ಆಂಗ್ಲ ಭಾಷೆಗಳ ಕಡೆ ಒಲವನ್ನು ತೋರಿಸಲು ತೊಡಗಿದ್ದು ಇನ್ನು ಕೆಲವೇ ವರ್ಷಗಳಲ್ಲಿ ಅದೂ ಸಹ  “ಬೊ” ಭಾಷೆಯ ದಾರಿ ಹಿಡಿದರೆ ಅಚ್ಚರಿ ಪಡಬೇಕಿಲ್ಲ. ಮೇಲೆ ಹೇಳಿದ ಭಾಷೆ ಯೊಂದಿಗೆ ಅರುಣಾಚಲ ಪ್ರದೇಶದಲ್ಲಿ ಸುಮಾರು ೧೨೦ ಭಾಷೆಗಳಿವೆಯಂತೆ. “ಕೋರೋ” ಭಾಷೆ “ಅಕಾ” ಎನ್ನುವ ಮತ್ತೊಂದು ಅರುಣಾಚಲದ ಭಾಷೆಯ ರೂಪವೆಂದೇ ಮೊದಲಿಗೆ ಊಹಿಸಲಾಗಿತ್ತು. ಏಕೆಂದರೆ ಕೋರೋ ಮತ್ತು  ಭಾಷೆಯನ್ನಾಡುವ ಜನ ವೇಷ ಭೂಷಣ ಮತ್ತು ಅಡುಗೆ ಮುಂತಾದುವುಗಳಲ್ಲಿ ಒಂದೇ ರೀತಿಯ ಆಚರಣೆಗಳನ್ನು ಹೊಂದಿದ್ದರು ಮತ್ತು ಭಾಷೆಗಳು ಬೇರೆ ಬೇರೆಯದಾದರೂ ಅವರೊಳಗೆ (ಭಾಷಾಂತರ) ವಿವಾಹಗಳು ಏರ್ಪಡುವುದೂ ಉಂಟು. ಪ್ರೇಮಿಸಲು ಭಾಷೆಯ ಅವಶ್ಯಕತೆ ಅಲ್ಲ ಇರೋದು ಎನ್ನುವುದಕ್ಕೆ “ಕೋರೋ” ಮತ್ತು “ಬೊ” ಭಾಷಿಕರೇ ಸಾಕ್ಷಿ ನಿಲ್ಲುವರು, ಅಲ್ಲವೇ?  ಭಾಷೆಗಳು ಎಷ್ಟೊಂದು ಸ್ವಾರಸ್ಯವೆಂದರೆ ದ್ರಾವಿಡ ಭಾಷೆಗಳು ಭಾರತದಲ್ಲಿ ಮಾತ್ರ ಎಂದು ಅರಿತಿದ್ದ ನಮಗೆ ಆಫ್ಘಾನಿಸ್ತಾನದ ಪ್ರಾಂತ್ಯವೊಂದರಲ್ಲಿ ಬ್ರಾಹೂಯಿ ಎನ್ನುವ ಭಾಷೆ ದ್ರಾವಿಡ ಕುಟುಂಬಕ್ಕೆ ಸೇರಿದ್ದು ಎಂದು ತಿಳಿದಾಗ ವಿಶ್ವ ಭಾವನಾತ್ಮಕವಾಗಿ ನಿಜಕ್ಕೂ ಕುಬ್ಜ ಎಂದು ತೋರಿತು.

೬೯೦೯ ಭಾಷೆಗಳಲ್ಲಿ ಸುಮಾರು ಅರ್ಧದಷ್ಟು ಸಂಖ್ಯೆಯ ಭಾಷೆಗಳು ಕೊನೆ ಯುಸಿರೆಳೆಯುತ್ತಿವೆ ಎನ್ನುವ ಆಘಾತಕಾರಿ ಸತ್ಯವನ್ನೂ National Geographic’s Enduring Voices ಸಂಸ್ಥೆ ಹೊರಗೆಡಹಿದೆ. ಕೋರೋ ಭಾಷೆ ಲಿಪಿಯಿಲ್ಲದ ಭಾಷೆ, ಕೊಂಕಣಿ ಮತ್ತು ತುಳು ರೀತಿ.   

ಸ್ವಾರಸ್ಯ(?) ವೆಂದರೆ ಈಶಾನ್ಯ ಭಾರತದ ಅರುಣಾಚಲ ಪ್ರದೇಶಕ್ಕೆ  ಹೋಗಿ ಆ ಹೊಸ ಭಾಷೆಯ ಸೊಗಡನ್ನು ಕೇಳಿ ನೋಡಿ ಆನಂದಿಸೋಣ ಎಂದರೆ ಅಲ್ಲಿಗೆ ಹೋಗಲು “ವಿಶೇಷ ಅನುಮತಿ” permit ಬೇಕು. ನಾವೆಲ್ಲಾ ಟೀಕಿಸಲು, ದೇಶ ವಿರೋಧಿಗಳ ರಾಜ್ಯ ಎಂದು ಹಳಿಯುವ ಕಾಶ್ಮೀರಕ್ಕೆ ಹೋಗಲು ನಮಗೆ ಯಾವುದೇ ಪರವಾನಗಿ ಬೇಡ, ಕಾಶ್ಮೀರಿಗಳಂತೆಯೇ ಭಾರತೀಯರಾದರೆ ಸಾಕು. ಪರವಾನಗಿ ಪಡೆಯಬೇಕಾದ ಮತ್ತೆರಡು ರಾಜ್ಯಗಳೆಂದರೆ “ಮಿಜೋರಾಂ” ಮತ್ತು “ನಾಗಾಲ್ಯಾಂಡ್”.

* ಸೂರ್ಯ ಚಂದಿರರಿರೋ ತನಕ..

ದೀರ್ಘಾಯುಷಿಗಳಾಗಬೇಕೇ? ಇಲ್ಲಿದೆ ನೋಡಿ ರೆಸಿಪಿ. ದೀರ್ಘಾಯುಷಿಗಳನ್ನು, ಅವರು ವಾಸಿಸುವ ಸ್ಥಳಗಳು, ಅವರ ಜೀವನ ರೀತಿಯನ್ನು ನೋಡಿ ಕಲಿತರೆ ಸೂರ್ಯ ಚಂದಿರರಿರೋ ತನಕ ಬದುಕಬಹುದಂತೆ. ಇದೆಂಥ ರೆಸಿಪಿ, ಎಲ್ಲರಿಗೂ ಗೊತ್ತಿರೋ ವಿಷಯವೇ ಎಂದು ಮೂಗೆಳೆಯಬೇಡಿ. ಈ ಕುರಿತ ಲೇಖನ ಅಮೆರಿಕೆಯ ಹಫ್ಫಿಂಗ್ಟನ್ ಪೋಸ್ಟ್ ನಲ್ಲಿ ಪ್ರಕಟವಾಗಿ ಸ್ವಾರಸ್ಯಕರ ಉತ್ತರಗಳು ಬಂದವು ವಾಚಕ ಪ್ರಭುಗಳಿಂದ. ಒಬ್ಬ ಹೇಳಿದ ನನ್ನ ಸೋದರನಿಗೆ ಈಗ  ೬೦ ನೋಡಲಿಕ್ಕೆ ಇನಷ್ಟು ವಯಸ್ಸಾದವರ ಹಾಗೆ ಕಾಣುತ್ತಾನೆ, ವ್ಯಾಯಾಮ ಮಾಡುವುದಿಲ್ಲ, ಕಣ್ಣಿಗೆ ಬಿದ್ದಿದ್ದನ್ನೆಲ್ಲಾ ತಿನ್ನುತ್ತಾನೆ, ಕೇಳಿದಾಗ ಅವನು ಹೇಳೋದು, ನನಗೇನೂ ನೂರು ವರ್ಷ ಬದುಕಬೇಕಾಗಿಲ್ಲ, ಯಾವಾಗ ಬೇಕಾದರೂ ಜಾಗ ಖಾಲಿ ಮಾಡಲು ತಯಾರು ಎಂದು. ಹೋಗುವ ದಿನ ಬುಕ್ ಮಾಡೋ ಸೌಲಭ್ಯವೂ ಇದ್ದಿದ್ದರೆ ಅದನ್ನೂ ಸಹ ಮಾಡುತ್ತಿದ್ದನೇನೋ ಎಂದು ತಮಾಷೆಯಾಗಿ ಹೇಳಿದ. 
ಬೇರೆಯವರ ಜೀವನ ರೀತಿ ನೋಡಿ ಕಲಿಯಲು ಅಮೆರಿಕನ್ನರಿಗೆ ತಮ್ಮ ದೇಶದ ಹೊರಗೂ ಜನ ಬದುಕುತ್ತಿದ್ದಾರೆ ಎನ್ನುವ ಅರಿವಾದರೂ ಬೇಕಲ್ಲ ಎಂದು ಮತ್ತೊಬ್ಬನ ಅಮೆರಿಕೆಯವನೆ ಆದವನ ಕುಹಕ. ಒಟ್ಟಿನಲ್ಲಿ ಅಮೆರಿಕೆಯಲ್ಲಿ ಈಗ ಒಬಾಮ ಹೊಸ ಆರೋಗ್ಯ ನೀತಿಒಂದನ್ನು ತಂದಿದ್ದಾನೆ. ಅದರ ಬಗೆಗಿನ ಚರ್ಚೆಯಲ್ಲಿ ದೀರ್ಘಾಯುಷಿಗಳಾಗಿ, ಆರೋಗ್ಯವಂತರಾಗಿ  ಇರುವುದರ ಬಗ್ಗೆಯೂ ಚರ್ಚೆ. ಮಾಂಸ, ಕುಡಿತ ಬೇಡ ಎಂದರೆ ಅಮೇರಿಕನ್ನರಾದರೂ ಹೇಗೆ ಕೇಳಿಯಾರು? ಇವೆರಡೂ ತಮ್ಮ ಎರಡು ಕಣ್ಣುಗಳಿದ್ದಂತೆ ಅವರಿಗೆ. ಅಷ್ಟೊಂದು ಜೋಪಾನ. ಸೊಪ್ಪು ತಿನ್ನು ಎಂದರೆ ಹೇಗೆ ಹೇಳಿ ನೋಡೋಣ.
ಒಬ್ಬ ಜೀವನ ಪೂರ್ತಿ ಬಂದರಿನಲ್ಲಿ ದುಡಿದು, ಸಾಕಷ್ಟು ಕುಡಿದು, ಜೂಜಾಡಿ, ಹ್ಯಾಮ್ಬರ್ಗರ್ ತಿಂದು, ವೇಶ್ಯಾ ಸಹವಾಸ ಮಾಡಿ, ಸಿಗಾರ್ ಸೇದಿ, ಇಷೆಲ್ಲಾ ಅವಾಂತರ ಮಾಡಿಯೂ ದೀರ್ಘಾಯುಷಿಯಾಗಿದ್ದಾನೆ ಎಂದು ತಾವೂ ಅದೇ ರೀತಿ ಬದುಕುತ್ತೇವೆ ಎಂದು ಮೊಂಡು ಹಿಡಿದು ಕೂರುವ ಮಂದಿಯೂ ಇದ್ದಾರೆ.         

ಮನೋರಂಜನೆ ಮತ್ತು ಮಕ್ಕಳು

” ವಿದ್ಯುಚ್ಛಕ್ತಿ ತಡೆಯಿಲ್ಲದೆ ಸರಬರಾಜಿದ್ದರೆ ಜನ ತಡ ರಾತ್ರಿವರೆಗೂ ಟೀ ವೀ ನೋಡಿ ಮಲಗಿಬಿಡುವುದರಿಂದ ಮಕ್ಕಳನ್ನು ಉತ್ಪಾದಿಸಲು ಅವಕಾಶ ಸಿಗದು ಎಂದು ನಮ್ಮ ಸನ್ಮಾನ್ಯ ಕೇಂದ್ರ ಆರೋಗ್ಯ ಮಂತ್ರಿ ಗುಲಾಂ ನಬಿ ಆಜಾದ್ ಭಾರತದ ಜನ ಸಂಖ್ಯೆ ತಡೆಯಲು ತಮ್ಮದೇ ಆದ ಸುವರ್ಣ ಸೂತ್ರ ಬೋಧಿಸಿದರು. ಇದು ಎಷ್ಟು ಯಶಸ್ವಿ ಸೂತ್ರವೋ ಏನೋ ಕಾಲವೇ ಹೇಳಬೇಕು.

ನನ್ನ  ಪ್ರಕಾರ ಜನಸಂಖ್ಯೆ ವೃಧ್ಧಿಗೂ ಮನೋರಂಜನೆಗೂ ಯಾವುದೇ ಸಂಬಂಧವಿಲ್ಲ. ಲೈಂಗಿಕ ಕ್ರಿಯೆ ನಡೆಸುವವನಿಗೆ ಕರೆಂಟ್ ಇದ್ದರೂ ಬಿಟ್ಟರೂ ಕಾಮ ಕೇಳಿಗೆ ಯಾವ ಅಡಚಣೆಯೂ ಬರದು. ಉದಾಹರಣೆಗೆ ಒಬ್ಬ ಶ್ರಮಜೀವಿ ತನ್ನ ಕೆಲಸ ಮುಗಿಸಿ ದಣಿದು ಮನೆಗೆ  ಬಂದಾಗ ಅವನಿಗೆ ಬೇಕಿದ್ದರೆ ಲೈಂಗಿಕ ಕ್ರಿಯೆ ನಡೆಸಿಯೇ ತೀರುತ್ತಾನೆ. ಇನ್ನು ಅವನಿಗೆ ಪೂರಕ ಮನೋರಂಜನೆಯನ್ನು ಕೊಟ್ಟು ನೋಡಿ. ಕೆಲಸ ಮುಗಿಸಿ ದಣಿದು ಬಂದು ಒಂದಿಷ್ಟು ವಿಶ್ರಮಿಸಿ ಟೀವೀ ನೋಡುತ್ತಾನೆ. ಟೀವೀಯಲ್ಲಿ ತೋರಿಸುವುದಾದರೂ ಏನನ್ನು? ಬಿಪಾಶಾಳ ಮೈಮಾಟವನ್ನೂ, ನಿಹಾ ಧುಪಿಯಾಳ ಅಂಗಸೌಷ್ಟವವನ್ನೂ ಅಲ್ಲವೇ? ಇದನ್ನು ನೋಡಿದ ನಮ್ಮ ಉಪ್ಪು ಹುಳಿ ತಿಂದ ಶ್ರಮ ಜೀವಿ ಇನ್ನ್ನಷ್ಟು ಉದ್ರೇಕಗೊಂಡು ರತಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳದೆ ಇರುತ್ತಾನೆಯೇ? ಎಲ್ಲಾ ರೀತಿಯ ಮನೋರಂಜನೆಯನ್ನು ನೀಡಿದ ಮತ್ತು ಪಡೆದ ಮಾಜಿ ಮಂತ್ರಿ ಮಹೋದಯರಾದ ಲಾಲೂ ಪ್ರಸಾದ್ ಅವರಿಗೆ ಎಷ್ಟು ಮಕ್ಕಳೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವಷ್ಟೇ? 

ಜನಸಂಖ್ಯೆ ಅ ನಿಯಂತ್ರಣಕ್ಕೆ ಬೇಕಿರುವುದು ಅತ್ಯಂತ  ಪ್ರಭಾವೀ ಮತ್ತು ಜ ಕ್ರಿಯಾತ್ಮಕ ಅಭಿಯಾನ. ಮಕ್ಕಳ ಸಂಖ್ಯೆ ನಿರ್ಧರಿಸುವುದು ಗಂಡಾದರೆ  ಆಗುವ  ಅಭಾಸ ಜನಸಂಖ್ಯೆಯ ಹೆಚ್ಚಳ.  ಉತ್ತರ ಭಾರತದ ಹಳ್ಳಿಯೊಂದರಲ್ಲಿ ಮಹಿಳೆಯೊಬ್ಬರು ಮಕ್ಕಳ ಸಂಖ್ಯೆ ನಿರ್ಧರಿಸುವುದು ಗಂಡಾದ್ದರಿಂದ ನಾವು ಅಸಹಾಯಕರೆಂದು ಆಂಗ್ಲ ಪತ್ರಿಕೆಯ ವರದಿಗಾರ್ತಿಗೆ ತಿಳಿಸಿದಳು.  ಆರೋಗ್ಯ ಮಂತ್ರಿಗಳ ಸೂತ್ರದ ಬಗ್ಗೆ ಕೇಳಿದಾಗ “ಓರ್ವ ಗಂಡು ಮತ್ತು ಚಂಡಮಾರುತ ಮೇಲೆರಗುವ ಮೊದಲು ಮುನ್ಸೂಚನೆಗಳನ್ನೇನೂ ಕೊಡುವುದಿಲ್ಲ” ಎಂದು ಹಾಸ್ಯ ಚಟಾಕಿ ಹಾರಿಸಿದಳು. ನಮ್ಮ ಕಾಲದಲ್ಲಿ ಪ್ರತಿಯೊಬ್ಬರಿಗೂ 13 ಮಕ್ಕಳಿದ್ದು ಈಗ ಕುಟಂಬ ಯೋಜನೆ ಪ್ರಭಾವದಿಂದ ನಾಲ್ಕರಿಂದ ಆರಕ್ಕೆ ಇಳಿದಿದೆ  ಎಂದು ವಯಸ್ಸಾದ ಮಹಿಳೆಯೊಬ್ಬರು ಹೇಳಿದರು. ಈ ವರದಿಗಳನ್ನು ನೋಡಿದಾಗ  ನಮಗನ್ನಿಸುವುದು ಮಕ್ಕಳ ಸಂಖ್ಯೆ ನಿರ್ಧರಿಸುವುದರಲ್ಲಿ ಗಂಡಿನ ಪಾತ್ರವೂ ಮತ್ತು ಹೆಣ್ಣುಮಕ್ಕಳಲ್ಲಿ ಶಿಕ್ಷಣದ ಕೊರತೆಯೂ ಇರುವುದು.

ಇನ್ನು ಕೆಲವೊಂದು ಸ್ವಾರಸ್ಯಕರವಾದ ಅಂಕಿ ಅಂಶಗಳತ್ತ ದೃಷ್ಟಿ ಹರಿಸೋಣ.
೧. ಭಾರತದಲ್ಲಿ ಜನಸಂಖ್ಯೆ ವಿಪರೀತ ಹೆಚ್ಚುತ್ತಿದೆ.
ತಪ್ಪು. ನಿಜವೆಂದರೆ ೧೯೮೧ ರಿಂದ ಜನಸಂಖ್ಯೆ ಇಳಿಯುತ್ತಿದೆ.

೨. ಜನಸಂಖ್ಯೆ ಅವಿದ್ಯಾವಂತರಲ್ಲೂ ಮತ್ತು ಗ್ರಾಮೀಣರಲ್ಲೂ ಹೆಚ್ಚಳ ಕಾಣುತ್ತಿದೆ.
ಇಲ್ಲ. ಗ್ರಾಮೀಣ ಜನರಲ್ಲೂ ಮತ್ತು ನಗರ ವಾಸಿಗಳಲ್ಲೂ ೭೦ ರ ದಶಕಕ್ಕೆ ಹೋಲಿಸಿದಾಗ ಜನಸಂಖ್ಯೆ  ಶೇಕಡಾ ೪೪ ರಷ್ಟು ಇಳಿತ ಕಂಡಿದೆ.

೩. ಜನಸಂಖ್ಯೆ ಆಹಾರ ಉತ್ಪಾದನೆಯನ್ನು ಹಿಂದಕ್ಕೆ ಹಾಕಿದೆ.
ಇಲ್ಲ. ಆಹಾರ ಉತ್ಪಾದನೆ ೧೯೪೭ ರ ನಂತರ ನಾಲ್ಕು ಪಟ್ಟು ಹೆಚ್ಚಿದ್ದು ಅದೇ ಸಮಯ ಜನಸಂಖ್ಯೆ ಮೂರು ಪಟ್ಟು ಹೆಚ್ಚಿದೆ.

೪. ದೊಡ್ಡ ಜನಸಂಖ್ಯೆ ಬಡತನಕ್ಕೆ ಕಾರಣ.
ತಪ್ಪು. ಬಾಂಗ್ಲಾದೇಶ ೧೯೭೫ ರಿಂದ ೧೯೯೮ ರವರೆಗೆ ಜನಸಂಖ್ಯೆಯನ್ನು ಯಶಸ್ವಿಯಾಗಿ ನಿಗ್ರಹಿಸಿದ್ದು ಇನ್ನೂ ಬಡ ರಾಷ್ಟ್ರವಾಗಿಯೇ ಉಳಿದಿದೆ.