ತರಕಾರೀ ಅಂಗಡಿಯಲ್ಲಿ ವಯಾಗ್ರಾ

ಔಷಧ ತಯಾರಿಕಾ ಕಂಪೆನಿಗಳು ಕೋಟಿಗಟ್ಟಲೆ ಡಾಲರ್ ಖರ್ಚಿನಲ್ಲಿ ಹೊಸ ಹೊಸ ಮದ್ದುಗಳ ಅವಿಷ್ಕಾರಕ್ಕೆ ಅವಿರತ ಶ್ರಮ ವಹಿಸುತ್ತಾರೆ. ಮಾಡರ್ನ್ ಲೈಫ್ ಗೆಂದೇ ಹೇಳಿಮಾಡಿಸಿದ ಮಾಡರ್ನ್ ಖಾಯಿಲೆ, ಬ್ಯಾನೆಗಳು ಈ ಕಂಪೆನಿಗಳಿಗೆ ಒಂದು ರೀತಿಯ ಸುಗ್ಗಿಯನ್ನೇ ದಯಪಾಲಿಸುತ್ತವೆ. ಆದರೂ ಯಾರೂ ಹೊಸತಾಗಿ ಮಾರುಕಟ್ಟೆಗೆ ಬಂದ ಔಷಧಿಗಳ ಕಡೆ ಗಮನ ಕೊಡೋಲ್ಲ, ಮಾತ್ರವಲ್ಲ ಈ ಔಷಧಿಗಳಿಗೆ ಪತ್ರಿಕೆಯಲ್ಲಿ ಪ್ರಚಾರ ಕೂಡಾ ಕಡಿಮೆಯೇ. ಆದರೆ ಒಂದು ಔಷಧವಂತೂ ಇಡೀ ಪ್ರಪಂಚದ ಗಮನವನ್ನು ತನ್ನ ಕಡೆ ನಿರಾಯಾಸವಾಗಿ ಎಳೆದುಕೊಂಡಿತು. Pfizer ಎನ್ನುವ ಕಂಪೆನಿ ದಶಕಗಳ ತನ್ನ ಸಂಶೋಧನೆಗೆ ಒಂದು ತಕ್ಕುದಾದ, ಖಜಾನೆ ತುಂಬಿ ತುಳುಕುವ ಮದ್ದನ್ನು ವಿಶ್ವಕ್ಕೆ ನೀಡಿತು. ವಿಶ್ವ ಅಂದ್ರೆ ಗಂಡಿನ ವಿಶ್ವಕ್ಕೆ ಅನ್ನಿ. ಏಕೆಂದರೆ ಈ ಮದ್ದು ಗಂಡಿಗಾಗಿ.. ಅವನ ರಾಸಲೀಲೆ, ಮತ್ತು ನೀರವ ರಾತ್ರಿಯ ಪಫಾರ್ಮನ್ಸ್ ವೃದ್ಧಿಸಲು, ತಾತ್ಕಾಲಿಕ ನಪುಂಸಕತೆ ಯನ್ನು ಹೋಗಲಾಡಿಸಲು ಇಳಿವಯಸ್ಸಿನವರಿಗೂ ಉಪಯೋಗವಾಗುವ ಮದ್ದನ್ನು ಮಾರುಕಟ್ಟೆಗೆ ಭಾರೀ ಸುದ್ದಿಯೊಂದಿಗೆ ತಂದಿತು. ಫೈಜರ್ ಕಂಪೆನಿ ಎಂದ ಕೂಡಲೇ ನೀವು ಊಹಿಸಿ ಬಿಟ್ಟಿರಿ. ಅದು…..ಅದು….ವಯಾಗ್ರ ಎಂದು, ಅಲ್ಲವೇ? ಫೈಜರ್ ಮತ್ತು ವಯಾಗ್ರ, ಕೋಲ್ಗೆಟ್ ಮತ್ತು ಹಲ್ಲುಜ್ಜುವ ಪೇಸ್ಟ್ ಗೆ ಇರೋ ಸಂಬಂಧ. ಯಾವುದೇ ಪೇಸ್ಟ್ ಖರೀದಿಸಿದರೂ ಅದು ಕೋಲ್ಗೆಟ್ ಎನ್ನುವಷ್ಟು ಆ ಕಂಪೆನಿಯ ಖ್ಯಾತಿ.

ವಯಾಗ್ರಾ. ಈ ವಜ್ರಕಾರದ, ನೀಲಿ ಬಣ್ಣದ ಮಾತ್ರೆ ಒಂದು ದೊಡ್ಡ ಕ್ರಾಂತಿಯನ್ನೇ ಮಾಡುತ್ತಿರಬೇಕು ಶಯನ ಗೃಹದಲ್ಲಿ. ಅನುಮಾನ ಏಕೆಂದರೆ ನಾನು ಅದನ್ನು ಉಪಯೋಗಿಸಿಲ್ಲ. ಅದರ ಅವಶ್ಯಕತೆ ಇನ್ನೂ ಬಂದಿಲ್ಲ ಎನ್ನಿ, ಹಿ..ಹೀ. ಜನ ಮುಗಿ ಬಿದ್ದು ಕೊಳ್ಳ ತೊಡಗಿದರು. ಉತ್ತರ ಧ್ರುವದಿಂ..ದಕ್ಷಿಣ ಧ್ರುವಕೂ…ಮಿಲನದ ಗಾಳಿ ಬೀಸ ತೊಡಗಿತು. ಬೆಲೆ ದುಬಾರಿಯಾದರೂ, ಅಯ್ಯೋ ಸತ್ಮೇಲ್ ಏನು ಗಂಟು ತಗೊಂಡ್ ಹೋಗ್ತೀವಾ ಎಂದು ಜನ ಗಂಟನ್ನು ಬಿಚ್ಚಿದರು. ವಯಾಗ್ರ ಔಷಧ ತಯಾರಿಕಾ ವಲಯದಲ್ಲಿ ಒಂದು ಬಿರುಗಾಳಿಯನ್ನೇ ಎಬ್ಬಿಸಿತು.

ದೇವರು ಈ ಪ್ರಪಂಚವನ್ನು ಸೃಷ್ಟಿಸುವಾಗ ಸಾಕಷ್ಟು ತಯಾರಿ ಮಾಡಿ ಕೊಂಡೆ ಸೃಷ್ಟಿಸಿರುತ್ತಾನೆ. ಮನುಷ್ಯನಿಗೆ ಬೇಕಾದ ಎಲ್ಲಾ ಸವಲತ್ತುಗಳೂ ಈ ಸೃಷ್ಟಿಯಲ್ಲಿವೆ. ನೋಡುವ, ಕಂಡು ಕೊಳ್ಳುವ ಕಣ್ಣು ಬುದ್ಧಿ ಶಕ್ತಿ ಬೇಕಷ್ಟೇ. ಆಹಾರದಲ್ಲೇ ವಿವಿಧ ಪೋಷಕಾಂಶಗಳ ಜೊತೆ ಲೈಂಗಿಕ ಚಟುವಟಿಕೆಗೆ ಬೇಕಾದ ಪೋಷಕಾಂಶಗಳೂ ಇವೆ. ಕೆಲವು ಅಗ್ಗದ ಬೆಲೆಯಲ್ಲಿ ಸಿಕ್ಕರೆ, ಕೆಲವು ದುಬಾರಿ. ತರಕಾರಿ ಅಂಗಡಿಯಲ್ಲೇ ಮಗುಮ್ಮಾಗಿ ಕೂರುವ ತರಕಾರಿಯೊಂದು ರಾತ್ರಿಯ ಬದುಕಿಗೆ ಬಣ್ಣ ತರುತ್ತದಂತೆ. ಅದೇ ನಮ್ಮ ಕೆಂಬಣ್ಣದ ಬೀಟ್ರೂಟು.

ಬೀಟ್ರೂಟಾ??????????????????????

ಹೌದು ಬೀಟ್ರೂಟ್. ಈ ತರಕಾರಿಯಲ್ಲಿ ಬೋರಾನ್ (boron), ಎನ್ನುವ ಪೋಷಕಾಂಶ ಸಂತಾನ ವೃದ್ಧಿಗೆ ಬೇಕಾದ ಲೈಂಗಿಕ ಹಾರ್ಮೋನ್ ಗಳ ಉತ್ಪಾದನೆಗೆ ಉತ್ತೇಜನ ಕೊಡುತ್ತದಂತೆ. ವಯಾಗ್ರ ಮಾಡುವ ಕೆಲಸವನ್ನೇ ಈ ಪಾಪದ ಬೀಟ್ರೂಟ್ ಮಾಡೋದು. ನಮಗೆ ಅದು ಹೊಳಯಲೇ ಇಲ್ವಲ್ಲಾ? ನಿಲ್ಲಿ, ನಿಲ್ಲಿ…

….ಚೆನ್ನಾಗೇ ತಿನ್ನಿ ಬೀಟ್ರೂಟ್ ನ.ಆದರೆ ಮೂತ್ರ ವಿಸರ್ಜನೆಗೆ ಹೋದಾಗ ಮೂತ್ರ ತಿಳಿ ರಕ್ತ ವರ್ಣದ್ದು ಎಂದು ಕಂಡ ಕೂಡಲೇ ಅಯ್ಯಪ್ಪೋ, ತಗುಲಿತಾ ನನಗೂ ಕಿಡ್ನಿ ಕಾಯಿಲೆ ಎಂದು ಡಾಕ್ಟರ್ ಕಡೆ ಧಾವಿಸಬೇಡಿ. ಬೀಟ್ರೂಟ್ ತಿಂದ ನಂತರ ಮೂತ್ರ ವಿಸರ್ಜನೆ ಬೀಟ್ರೂಟ್ ಬಣ್ಣ ಪಡೆದು ಕೊಳ್ಳೋದು ಪ್ರಕೃತಿ ನಿಯಮ.

ಸೋ, ಗುಡ್ ಲಕ್ ವಿದ್ ಬೀಟ್ರೂಟ್.

Advertisements

ಭೂತ ಚೇಷ್ಟೆ ಮತ್ತು ಕಾಮ ಚೇಷ್ಟೆ

ಭೂತ ಚೇಷ್ಟೆ ಮತ್ತು ಕಾಮ ಚೇಷ್ಟೆ. ತನ್ನ ಮನೆಯಲ್ಲಿ ಭೂತ ಚೇಷ್ಟೆ ಎಂದು ಅನುಮಾನ ಪಟ್ಟ ಮನೆಯ ಯಜಮಾನ ಖಾತ್ರಿ ಪಡಿಸಲು ಕ್ಯಾಮರ ಅಳವಡಿಸಿದ ತನ್ನ ಮನೆಗೆ. ಭೂತ ಬಂತೋ, ಸಿಕ್ಕಿತೋ ಗೊತ್ತಿಲ್ಲ ಆದರೆ ಕಾಣಲು ಸಿಕ್ಕಿದ್ದು ಮಾತ್ರ ಎದೆ ಧಸಕ್ಕೆನ್ನುವ ಚಿತ್ರ. ತನ್ನ ಪ್ರೇಯಸಿ ಹದಿ ಹರೆಯದ ತನ್ನ ಮಗನೊಂದಿಗೆ ಚೆಲ್ಲಾಟವಾಡುವ steamy scene ಕಾಣಲು ಸಿಕ್ಕಿತು ಈ ಪಡಪೋಶಿಗೆ. ಮಲತಾಯಿ ಮತ್ತು ಮಲಮಗನ ಆಟ.

ಈ ಘಟನೆ ನಡೆದಿದ್ದು ಆಸ್ಟ್ರೇಲಿಯಾದಲ್ಲಿ. ವಯಸ್ಸು ಇನ್ನೂ ಪೂರ್ತಿಯಾಗದ ಹುಡುಗನೊಂದಿಗೆ ಲೈಂಗಿಕ ಚೇಷ್ಟೆಯಲ್ಲಿ ತೊಡಗಿದ್ದ ಮಹಿಳೆ ಗೆ ಒಂದು ವರ್ಷದ ಸಜೆ.

ಕದ್ದು ಮುಚ್ಚಿ ಮಾಡೋ ಯಾವುದೇ ಚಟುವಟಿಕೆಗಳು, ಮಂಚದ್ದೇ ಆಗಲೀ, ಲಂಚದ್ದೇ, ಆಗಲೀ ಯಾವ ರೀತಿ ಬಯಲಾಗುತ್ತವೆ ಎನ್ನೋದೇ ಒಂದು ವಿಸ್ಮಯ. ಆದರೂ ಮನುಷ್ಯ ಕಲಿಯೋಲ್ಲ. ಉಪ್ಪು ಹುಳಿ ತಿಂದ ಶರೀರವಲ್ಲವೇ?

ನಗ್ನ ‘ಪ್ರದರ್ಶನ’, ಎಷ್ಟು ಸರಿ, ಏಕೆ ತಪ್ಪು?

nude protest
ಉಕ್ರೇನ್ ಒಂದು ದೇಶ, ಅಲ್ಲೊಂದು ಸಂಘಟನೆ. ಸ್ತ್ರೀ ಸ್ವಾತಂತ್ರ್ಯವಾದೀ ಸಂಘಟನೆ ಎಂದುಕೊಳ್ಳಿ. ಇವರು ಪ್ರದರ್ಶನ ಮಾಡೋದು ಅರೆ ನಗ್ನರಾಗಿ. ಅಂದರೆ ತಮ್ಮ ಸ್ತನಗಳ ಪ್ರದರ್ಶನದ ಮೂಲಕ. ‘ಫೆಮೆನ್’ ಹೆಸರಿನ ಈ ಸಂಘಟನೆ ಚಿಕ್ಕದಾದರೂ ಮೊಲೆಗಳಷ್ಟೇ ಪರಿಣಾಮಕಾರೀ ಇವರ ಚೇಷ್ಟೆ. (‘ಮೊಲೆ’ ಎನ್ನುವ ಪದ ಕೆಲವರಿಗೆ ಇಷ್ಟವಲ್ಲ. ಆದರೆ ಪಿ. ಲಂಕೇಶ್ ರವರ ಒಂದು ಪುಸ್ತಕದಲ್ಲಿ ಹೆಣ್ಣಿನ ಈ ಅವಯವಗಳನ್ನು ಆಡು ಭಾಷೆಯಲ್ಲಿ ಕರೆದಿದ್ದು ನನ್ನ ಧೈರ್ಯಕ್ಕೆ ಕಾರಣ).

ಹೆಣ್ಣನ್ನು ಎಗ್ಗಿಲ್ಲದೆ ಲೈಂಗಿಕ ವಾಗಿ ಚಿತ್ರಿಸುವುದನ್ನು, ಆಕೆ ಒಂದು ಭೋಗದ ವಸ್ತು ಎಂದು ಮಾತ್ರ ಬಗೆಯುವ ಲಜ್ಜೆಗೆಟ್ಟ “ಸುಸಂಸ್ಕೃತ’ರ ವಿರುದ್ಧ ಇವರ ಯುದ್ದ. ಯುಕ್ರೇನ್ ದೇಶವನ್ನು ‘ಲೈಂಗಿಕ ಪ್ರವಾಸ’ ತಾಣವಾಗಿ ಬಿಂಬಿಸುವ ಪ್ರಯತ್ನದ ವಿರುದ್ಧವೂ, ನ್ಯೂ ಜೀಲೆಂಡ್ ನ ರೇಡಿಯೋ ಕಾರ್ಯಕ್ರಮದಲ್ಲಿ ನಡೆದ ಸ್ಪರ್ದೆಯೊಂದರಲ್ಲಿ ವಿಜೇತನಿಗೆ ಸಿಕ್ಕ ಬಹುಮಾನ ಯುಕ್ರೇನ್ ಗೆ ಹೋಗಿ ಹೆಂಡತಿಯೊಬ್ಬ ಳನ್ನು ಪಡೆದುಕೊಳ್ಳುವ ‘ಆಫರ್’ ಬಗ್ಗೆ ಕೇಳಿದ ಕೆಲವು ಯುವತಿಯರು ವ್ಯಗ್ರರಾಗಿ ಯುಕ್ರೇನ್ ಒಂದು ವೇಶ್ಯೆಯರ ಕೋಣೆಯಲ್ಲ ಎಂದು ಪ್ರತಿಭಟಿಸಿ ಅ ಪ್ರತಿಭಟನೆಗೆ ಮೂರ್ತರೂಪವಾಗಿ ಫೆಮೆನ್ ಸಂಘಟನೆ ಆರಂಭಿಸಿದರು. ಇದರ ಸಂಸ್ಥಾಪಕಿ ೨೮ ರ ಪ್ರಾಯದ ಅನ್ನಾ ಹಟ್ಸೋಲ್. ಆಕೆಯೊಂದಿಗೆ ಅಲೆಕ್ಸಾಂಡ್ರ ಶೇವ್ಚೆನ್ಕೋ ಎನ್ನುವ ೨೫ ರ ತರುಣಿ.

ಇವರ ಬತ್ತಳಿಕೆಯಲ್ಲಿನ ಪರಿಣಾಮಕಾರಿಯಾದ ಅಸ್ತ್ರ ಎಂದರೆ ಡೈನಾಮೈಟು. ಅಂದರೆ, ಮೊಲೆಗಳು. ಇವುಗಳ ಪ್ರದರ್ಶನದ ಮೂಲಕ ಜನರಲ್ಲಿ ಇರುಸು ಮುರುಸು (ಸ್ತನ ಕಂಡರೆ ಇರುಸು ಮೂರುಸಾ?) ಮತ್ತು ಅವರನ್ನು embarrass ಮಾಡೋದು.
ಫೆಮೆನ್ ಸಂಘಟನೆಯ ಪರಿಧಿ ಬರೀ ಮಹಿಳೆಯರ ಬಗ್ಗೆ ಮಾತ್ರವಲ್ಲ. ಧರ್ಮದ ವಿರುದ್ಧ, ಮತ್ತು ಭ್ರಷ್ಟಾಚಾರದ ವಿರುದ್ಧ ಕೂಡಾ. ಯುಕ್ರೇನ್ ರಾಜಧಾನಿಯ ಹೊರಗೆ ೧೩ ಅಡಿ ಎತ್ತರದ ಮರದ ಶಿಲುಬೆಯನ್ನು ಗರಗಸದಿಂದ ಕತ್ತರಿಸಿ ಹಾಕಿ ಧರ್ಮದ ವಿರುದ್ಧದ ಕಳಹೆ ಊದಿದಳು ಫೆಮೆನ್ ಸದಸ್ಯೆ ಯೊಬ್ಬಳು.

ಜರ್ಮನಿ ದೇಶದ ಪ್ರವಾಸದ ಮೇಲಿದ್ದ ರಷ್ಯಾದ ಅಧ್ಯಕ್ಷ ಪುತಿನ್ ರನ್ನು ಅನ್ನಾ ಹಟ್ಸೋಲ್ ಅರೆ ನಗ್ನಳಾಗಿ ಪುತಿನ್ ರನ್ನು ಎದುರು ಗೊಂಡ ಈಕೆಯ ಶರೀರದ ಮೇಲೆ fuck dictator, fuck off putin, ಸಂದೇಶ ರಾರಾಜಿಸುತ್ತಿತ್ತು. ಇಂಥ ಮತ್ತು ಇತರೆ daring antics ಈಗಾಗಲೇ ಎಪ್ಪತ್ತು ಬಾರಿ ಬಂಧನಕ್ಕೆ ಒಳಗಾಗಿದ್ದಾಳೆ ಈಕೆ.

ಯುಕ್ರೇನ್ ನಲ್ಲಿ ಹುಟ್ಟಿದ ‘ಫೆಮೆನ್’ ಸಂಘಟನೆ ಜರ್ಮನಿ ಫ್ರಾನ್ಸ್ ದೇಶಗಳಲ್ಲೂ ಜನಪ್ರಿಯ. ಬ್ರೆಜಿಲ್ ಮತ್ತು ಫಿಲಿಪ್ಪೀನ್ಸ್ ದೇಶಗಳ ವರೆಗೆ ಇವರ ಪ್ರಭಾವ ಹರಡಿದೆ.

ಫೆಮೆನ್ ಸಂಘಟನೆಯ ಈ ಪ್ರದರ್ಶನದ ವೈಖರಿಯ ಬಗ್ಗೆ ಅಪಸ್ವರ ಕೇಳಿಬರುತ್ತಿದೆ. ಮಹಿಳೆ ಯಾವುದರ ಪ್ರದರ್ಶನ ಮತ್ತು ದುರುಪಯೋಗದ ವಿರುದ್ದ ಧ್ವನಿ ಎತ್ತುತ್ತಿದ್ದಾ ಳೋ ಅವುಗಳದೇ ಪ್ರದರ್ಶನದ ಮೂಲಕ ಮತ್ತಷ್ಟು ಶೋಷಣೆಗೆ ಒಳಗಾಗಲು ಸಹಕರಿಸುತ್ತಿದ್ದಾಳೆ ಎಂದು ಕೆಲವರ ವಾದ. ಈ ಮಹಿಳೆಯರ ನಗ್ನ ಪ್ರದರ್ಶನದ ಬಗ್ಗೆ ತಕರಾರು ಎತ್ತುವ ಮಡಿವಂತರು ನಗ್ನವಾದ ‘ಡಬಲ್ ಸ್ಟಾಂಡರ್ಡ್’ ಪ್ರದರ್ಶನ ಮಾಡುತ್ತಿದ್ದಾರೆ. ಹೇಗೆಂದರೆ, ಮಹಿಳೆಯ ನಗ್ನ ಶರೀರವನ್ನು, ಅಥವಾ ಅರೆಬರೆ ಶರೀರವನ್ನು ವಾಚುಗಳನ್ನು ಮಾರಲೂ, ಕಾರಿನ ಟೈರುಗಳನ್ನು ಮಾರಲೂ, ಪುರುಷರ ಒಳ ಉಡುಪುಗಳನ್ನು ಬಿಕರಿ ಮಾಡಲೂ ಉಪಯೋಗಿಸಲು ಇಲ್ಲದ ಮಡಿವಂತಿಕೆ, ಆ ಚಿತ್ರಗಳನ್ನ ಜೊಲ್ಲು ಸುರಿಸುತ್ತಾ ನೋಡಿ ಆನಂದಿಸುವಾಗ ಎಲ್ಲಿ ಮೇಯಲು ಹೋಗಿರುತ್ತದೆ…?

ಸ್ತನಗಳು ಬಿಲ್ ಬೋರ್ಡ್ ಗಳ ಮೇಲೆ ಸಲ್ಲುವುದಾದರೆ ರಾಜ ಬೀದಿಗಳಲ್ಲೂ ಸಲ್ಲಲಿ ಅವುಗಳ ದರ್ಶನ.
‘ಫೆಮೆನ್’ ನ ಈ ಸಂದೇಶಕ್ಕೆ ಹೂಂ ಗುಟ್ಟ ಬಾರದೇ?

ಬೆಡಗಿ ಬಾಲಿವುಡ್ ಗೆ ೧೦೦

isha-chawla 2

ಮೊನ್ನೆ ಶುಕ್ರವಾರ ಬಾಲಿವುಡ್ ಗೆ ೧೦೦ ವರ್ಷಗಳು ತುಂಬಿದವಂತೆ. ೧೮೯೫ ರಲ್ಲಿ ಪ್ಯಾರಿಸ್ ನಗರದಲ್ಲಿ ಆರಂಭವಾದ ಸಿನೆಮಾ ಆರೇ ತಿಂಗಳಿನಲ್ಲಿ ಮುಂಬೈ ತೀರವನ್ನು ತಲುಪಿ ಜನರನ್ನು ಮಂತ್ರ ಮುಗ್ಧ ರನ್ನಾಗಿಸಿತು. ಕೂಡಲೇ ಈ ತಂತ್ರ ಜ್ಞಾನವನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡ ಭಾರತೀಯ ಒಂದು, ಎರಡು ರೀಲ್ ಗಳ ಪುಟ್ಟ ಸಿನೆಮಾದೊಂದಿಗೆ ಚಲನ ಚಿತ್ರದೊಂದಿಗಿನ ತನ್ನ ಸಂಬಂಧಕ್ಕೆ ನಾಂದಿ ಹಾಡಿದ. ಬಡ ದೇಶವಾದರೂ, ಒಪ್ಪತ್ತಿಗೂ ಗತಿಯಿಲ್ಲದೆ, ಆಗಸವನ್ನು ಸೂರಾಗಿಸಿಕೊಂಡರೂ ಬಾಲಿವುಡ್ ಮಾತ್ರ ರೀಲ್ ಮೇಲೆ ರೀಲುಗಳಂತೆ ಚಿತ್ರಗಳನ್ನ ತಯಾರಿಸಿ ಜನ ಹಸಿವನ್ನು ಮರೆಯಲು ಸಹಾಯ ಮಾಡಿತು. ಭಾರತೀಯರಿಗೆ ಕಥೆ ಕೇಳೋದು, ಕೇಳಿದ ಕಥೆಯನ್ನೇ ಮತ್ತೊಮ್ಮೆ ಕೇಳೋದು ಮೋಜಿನ ಸಂಗತಿಯಂತೆ. ಸಿನಿಮಾ ಬಂದಾಗಲೂ ಆಗಿದ್ದಷ್ಟೇ. ಒಂದೇ ಸಿನಿಮಾವನ್ನು ಹಲವು ಸಲ ನೋಡುವ ಜನರಿದ್ದಾಗ ಬಾಲಿವುಡ್ ವ್ಯಾಪಾರ ಸರಾಗ ವಾಯಿತು. ಅದರ ಮೇಲೆ ನಿಜ ಜೀವನಕ್ಕೆ ಯಾವುದೇ ರೀತಿಯಿಂದಲೂ ಹೊಂದದ ಬದುಕಿನ ರೀತಿಯನ್ನು ತೆರೆಯ ಮೇಲೆ ತೋರಿಸಿದಾಗ ಬಂದ ಶಿಳ್ಳೆ ನೋಡಿ ಬಾಲಿವುಡ್ ಗೆ ಯಶಸ್ಸಿನ ಮಂತ್ರ ಏನು ಎಂದು ಹೇಳಲು ಪಂಡಿತರ ಅವಶ್ಯಕತೆ ಬರಲಿಲ್ಲ.

ಸಿನಿಮಾ ಒಂದು ಅತ್ಯಂತ ಶಕ್ತಿಶಾಲೀ ಮತ್ತು ಪ್ರಭಾವಶಾಲೀ ಮಾಧ್ಯಮ. ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿದಾಗ ಸಮಾಜದ ಪರಿವರ್ತನೆ ಬಹು ಸುಲಭ. ಆದರೆ ಸಮಾಜ ಪರಿವರ್ತಿಸುವ ಚಿತ್ರಗಳು ಬಂದಾಗ ಅವುಗಳಿಗೆ ಸಿಗುವ ಪ್ರತಿಕ್ರಿಯೆ, ಪ್ರೋತ್ಸಾಹ ಕಂಡ ಬಾಲಿವುಡ್ ಸಿಕ್ಕಾಪಟ್ಟೆ ಹಣ ಹಾಕಿ ಕೈ ಸುಟ್ಟುಕೊಳ್ಳಬಾರದು ಎಂದು ಅಂಗ ಸೌಷ್ಟವಗಳ ಪ್ರದರ್ಶನಕ್ಕೆ ಕೈ ಹಾಕಿತು. ಪ್ರತೀ ಚಿತ್ರದಲ್ಲೂ ಒಂದು ಕ್ಯಾಬರೆ ನೃತ್ಯ ಇರಲೇಬೇಕು. ಜನರನ್ನು ಉದ್ರೇಕಿ ಸುತ್ತಿದ್ದ ಈ ನೃತ್ಯಗಳು ಕಾಲಕ್ರಮೇಣ ಪ್ರತೀ ಹಾಡಿನಲ್ಲೂ ಕಾಣಲು ಸಿಕ್ಕಿತು. ಈಗಂತೂ ವಾತ್ಸ್ಯಾಯನನ ಎಲ್ಲಾ ಭಂಗಿಗಳೂ ಲಭ್ಯ ಹಾಡುಗಳಲ್ಲಿ. ಈ ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ಹಣ ಚೆಲ್ಲಾಡಲು ಸಹಾಯಕಾರಿಯಾದವು.

ಸಮಾಜದ ಕಡೆ ಬಾಲಿವುಡ್ ತನ್ನ ದೃಷ್ಟಿ ಹರಿಸಲೇ ಇಲ್ಲ ಎಂದೂ ಹೇಳುವಂತಿಲ್ಲ. ಅಸ್ಪೃಶ್ಯತೆ ಬಗೆಗಿನ ೧೯೩೬ ರ “ಅಚ್ಚುತ್ ಕನ್ಯಾ”, ವಿಧವಾ ವಿವಾಹದ ಮೇಲಿನ ಏಕ್ ಹೀ ರಾಸ್ತಾ (೧೯೫೬), ವರದಕ್ಷಿಣೆ ಬಗೆಗಿನ ದಹೇಜ್ (೧೯೫೦) ಚಿತ್ರಗಳು ವ್ಯಾಪಾರೀ ಮನೋಭಾವ ಬಿಟ್ಟು ಸಮಾಜದ ಕಡೆ ಗಮನ ಹರಿಸಿದವು.

ಉತ್ತರ ಮತ್ತು ದಕ್ಷಿಣ ಭಾರತ ದಿಕ್ಕುಗಳಂತೆ ಯೇ ವಿರುದ್ಧ ಹಲವು ವಿಷಯಗಳಲ್ಲಿ. ಉತ್ತರ ಭಾರತೀಯ ಮತ್ತು ದಕ್ಷಿಣ ಭಾರತೀಯ ರ ನಡುವಿನ ಚಿತ್ರವನ್ನ ೧೯೫೬ ರಲ್ಲಿ ನಿರ್ದೇಶಕ ಮೋಹನ್ ಸೆಹಗಲ್ ನಿರ್ಮಿಸಿ ಸುದ್ದಿ ಮಾಡಿದರು. ಈ ಚಿತ್ರದಲ್ಲಿ ಉತ್ತರದ ಪಂಜಾಬಿ ಯುವಕ ತಮಿಳು ಮೂಲದ ಪ್ರೆಯಸಿಯಲ್ಲಿ ಹೇಳುತ್ತಾನೆ, ಅವನ ತಂದೆಯ ಪ್ರಕಾರ, ಒಂದು ನಾಗರ ಹಾವೂ, ದಕ್ಷಿಣ ಭಾರತೀಯನೂ ಎದುರಾದರೆ ಮೊದಲು ಮದ್ರಾಸಿ ಯನ್ನು ಕೊಲ್ಲಬೇಕಂತೆ. ಹೇಗಿದೆ ಸಂಬಂಧ, ಮತ್ತು ನಮ್ಮ ಬಗೆಗಿನ ಅವರ ಒಲವು. ಈ ಒಲವನ್ನು ಈಗಲೂ, ವಿಶೇಷವಾಗಿ ಬೆಂಗಳೂರಿಗರಿಗೆ ಕಾಣಲು ಸುಲಭ ಸಾಧ್ಯವಂತೆ.

ಬಾಲಿವುಡ್ ನಮ್ಮ ಸಮಾಜದ ಮೇಲೆ ಯಾವುದೇ ರೀತಿಯಿಂದಲೂ ಒಳ್ಳೆಯ ಪರಿಣಾಮ ಬೀರುತ್ತಿಲ್ಲ ಎನ್ನುವ ದೂರು ಜೋರಾಗಿ ಕೇಳಿಸುತ್ತಿದೆ. ಬೆಳಗಾದರೆ ನಾವು ಓದುವ ಹಸುಳೆ ಯಿಂದ ಹಿಡಿದು ಇಳಿವಯಸ್ಸಿನ ಮಹಿಳೆಯ ಮೇಲೆ ನಡೆಯುವ ಅತ್ಯಾಚಾರಕ್ಕೆ ಕಾರಣ ನಟಿಯರಿಗೆ ಉಡುಗೆಯ ಮೇಲಿನ ವೈರಾಗ್ಯ ಕಾರಣವಂತೆ. ಹಣಕ್ಕಾಗಿ ಬಿಚ್ಚಿದ್ದೇ ಬಿಚ್ಚಿದ್ದು. ನಿರ್ದೇಶಕ ಸ್ವಲ್ಪ ಬಿಚ್ಚಿದರೆ ಸಾಕು ಎಂದರೆ ಸ್ವಲ್ಪ ಉಟ್ಟರೆ ಸಾಕು ಎಂದು ತಪ್ಪಾಗಿ ಕೇಳಿಸಿಕೊಳ್ಳುವ ನಟಿಯರಿಗೆ ಬಿಚ್ಚುವುದರಲ್ಲಿ ಅದೇನೋ ಒಂದು ಸುಖ. ತಮ್ಮ ಅಂಗ ಸೌಷ್ಠವ ಪ್ರದರ್ಶನಕ್ಕಿಟ್ಟು ಜನರನ್ನು ಉದ್ದೀಪಿಸುವ ತಾರೆಯರು ತಾವು ಮಾತ್ರ ಬಾಡಿ ಗಾರ್ಡ್ ಗಳ ರಕ್ಷಣೆಯಲ್ಲಿ ಸುರಕ್ಷಿತ. ದಾರಿಹೋಕ, ಹೊಟ್ಟೆ ಪಾಡಿಗೆಂದು ಹೊರಹೋಗುವ ಬಡಪಾಯಿ ಮಹಿಳೆಯರು ಕಾಮ ಪಿಪಾಸುಗಳಿಗೆ ಬಲಿ.

ಇದು ಬಾಲಿವುಡ್ ನ ನೂರು ವರ್ಷ ಗಳ ವೀರಗಾಥೆ.

Pic Courtesy: http://bollywoodkickass.blogspot.com/2011/11/isha-chawla-photos-in-wet-red-blue.html

೯೬ ರ ಲೈಂಗಿಕ ಶಕ್ತಿ

oldest dad with family
ಉತ್ತರ ಭಾರತದ ಹರಿಯಾಣ ಎಂದರೆ ಬರೀ ‘ಖಾಪ್’ ಪಂಚಾಯತಿ ಅಲ್ಲ. ಹರಿಯಾಣದ ರಾಮ್ ಜೀತ್ ರಾಘವ್ ವಿಶ್ವದ ಅತೀ ಹಿರಿಯ ತಂದೆ. ವಯಸ್ಸು ೯೬. ಎರಡು ಮಕ್ಕಳ ತಂದೆ. ಬಾಳ ಸಂಗಾತಿಯನ್ನು ಕಂಡು ಕೊಂಡಿದ್ದು ೮೬ ನೇ ವಯಸ್ಸಿನಲ್ಲಿ. ಅಲ್ಲಿಯರೆಗೆ ಅವಿವಾಹಿತ. ರೈತನೂ, ಪೈಲ್ವಾನನೂ ಆದ ಈತನಿಗೆ ಈಗಲೂ ತನ್ನ ಮಲಗುವ ಕೋಣೆ ‘ಅಖಾಡ’ ಮತ್ತು ತನ್ನ ಸಂಗಾತಿ ಒಂದು ಹೊಲದಂತೆ. ಪ್ರತೀ ರಾತ್ರಿ ಮೂರ್ನಾಲ್ಕು ಸಲ ಸಂಭೋಗಿಸುತ್ತೇನೆ ಎಂದು ಹೇಳುವ ಈತನ ಮೇಲೆ ನೆರೆಯ ಗಂಡುಗಳಿಗೆ ಉರಿ, ಮತ್ಸರ. ಪಿಕ್ ಪಾಕೆಟ್ ಮಾಡುವಂತೆ ಒದ್ದು ಕಸಿದು ಓಡಿ ಹೋಗುವಂಥದ್ದು ಅಲ್ಲವಲ್ಲ ಆತನಲ್ಲಿ ಇರುವ ಲೈಂಗಿಕ ಸಾಮರ್ಥ್ಯ. ಹೋಗಲಿ, ನೀನೇನನ್ನು ತಿನ್ನುತ್ತೀಯ ಅದನ್ನಾದರೂ ಹೇಳು ಎಂದರೆ ಆತ ಹೇಳೋದು, ಹಾಲು, ಬೆಣ್ಣೆ, ಮತ್ತು ಬಾದಾಮಿ.

ಈ ಬಾದಾಮಿ ಸ್ವಲ್ಪ ತಕರಾರಿನ ‘ಬೀಜ’ವೇ ಅನ್ನಿ. ಗಂಡನ್ನು ನಿಜಕ್ಕೂ nut ಆಗಿಸುತ್ತದೆ. ಆದರೆ ಈ ತೊಂಭತ್ತೈದರ ಮೇಲಿನ ಪ್ರಾಯದಲ್ಲೂ…ದಿನಕ್ಕೆ ಮೂರೂ, ನಾಕೂ ಸಲ….ಅದೇನೋ ನಾನರಿಯೆ.

live in, three some, ನಮ್ಮ ದೇಶದಲ್ಲಿ?

ಅಹಮದಾಬಾದಿನಲ್ಲಿ ಬಾಳ ಗೆಳೆಯ /ತಿ ಯರನ್ನು ಕಂಡುಕೊಳ್ಳುವ ಒಂದು ಮೇಳವಂತೆ. ಬದುಕಿನ ಸಂಜೆಯಲ್ಲಿರುವವರು ಬದುಕಿನ ಒಂದಿಷ್ಟು ಪ್ರಕಾಶವನ್ನು ತಮ್ಮ ಬಾಳಿನೊಳಕ್ಕೆ ಬಿಟ್ಟು ಕೊಳ್ಳಲು ಸದವಕಾಶ. ಇದರಲ್ಲೇನು ವಿಶೇಷ? ವಿಶೇಷ ಇದೆ. ಇವರುಗಳು ಮದುವೆಯಾಗೋಲ್ಲವಂತೆ. “ಲಿವ್ ಇನ್” ಅಂತೆ. ಅಡುಗೆ ಚೆನ್ನಾಗಿದೆಯೋ ಇಲ್ಲವೋ ಎಂದು ನೋಡುವ tastiing ಥರ. ಅಮೇರಿಕನ್ ಅಥವಾ ಪಾಶ್ಚಾತ್ಯ ಸ್ಟೈಲ್ ಅಂತೆ. ಹೌದು. ಆಧುನಿಕ ಬದುಕಿಗೆ ಬರ್ಗರ್, ಬಾಸ್ಕಿನ್ ರಾಬಿನ್ಸ್, ಜೀನ್ಸ್ ಅನಿವಾರ್ಯ ಆಗೋದಾದರೆ ಹೆಣ್ಣು ಗಂಡಿನ ನಡುವಿನ ಬಂಧವೂ, ಬದುಕುವ ರೀತಿಯೂ ಅವರ ಹಾಗೇ ಯಾಕಾಗಕೂಡದು? ಎಲ್ಲಿಯವರೆಗೆ ನಾವು ಪಾಶ್ಚಾತ್ಯರನ್ನು ಅನುಕರಿಸ ಬಹುದು ಎನ್ನುವದು ಕಠಿಣ ಪ್ರಶ್ನೆ.  

ಅಸ್ಸಾಂ, ಕರ್ನಾಟಕ, ಗುಜರಾತ ರಾಜ್ಯಗಳಿಂದ ಬಂದಿದ್ದರಂತೆ ಜನ ಈ ಮೇಳದಲ್ಲಿ ಪಾಲುಗೊಳ್ಳಲು. ಒಂದು ರೀತಿಯ ಸಾಮೂಹಿಕ ಸ್ವಯಂವರ. ಈ ಅನಿಷ್ಠಕರ ಬೆಳವಣಿಗೆಯನ್ನು ಧಾರ್ಮಿಕ ನಾಯಕರುಗಳು ವಿರೋಧಿಸುವುದು ದೇಶದ, ಸಂಸ್ಕೃತಿಯ ಹಿತದೃಷ್ಟಿಯಿಂದ ಒಳ್ಳೆಯದು. ಇಂದು ಲಿವ್ ಇನ್, ನಾಳೆ three some ಮಟ್ಟಕೆ ಇಳಿಯಬಾರದು ಸಂಬಂಧಗಳು.     

ಮೇಲಿನ ಹೊಸ ಸಂಪ್ರದಾಯವನ್ನು ವಿರೋಧಿಸಿದ ವ್ಯಕ್ತಿಯೊಬ್ಬ ಹೇಳಿದ. ಹಿರಿಯರು ಈ ರೀತಿಯ ಸಂಬಂಧಗಳನ್ನು ಇಷ್ಟ ಪದುವುದಾದರೆ ನಾಳೆ ದಿನ ಕಿರಿಯರೂ ಅದನ್ನೇ ಬಯಸಬಹುದು. ಅವರೇಕೆ ತಾನೇ ಬಯಸಬಾರದು?  ತಮ್ಮ ಅಜ್ಜ  ಅಥವಾ ಅಜ್ಜಿ ಬಯಸಿದ್ದು ತನಗೂ ಇರಲಿ ಎಂದರೆ ತಡೆಯಲು ಸಾಧ್ಯವೇ ಅಥವಾ ತಡೆಯುವುದು ತರವೇ?

ಅಮ್ಮಾ, ನಾನ್ಹೇಗೆ ಹುಟ್ಟಿದೆ?

ಮಕ್ಕಳ ಹತ್ತು ಹಲವು ಕುತೂಹಲಗಳಲ್ಲಿ ಒಂದು ಮಕ್ಕಳು ಹೇಗೆ ಹುಟ್ಟುತ್ತವೆ ಎಂದು.  ನಾನ್ಹೇಗೆ ಬಂಡೆ ಎನ್ನುವ ಈ ಮಕ್ಕಳ ಪ್ರಶ್ನೆ ನಮ್ಮನ್ನು ತಬ್ಬಿಬ್ಬು ಮಾಡುವುದು ಸಹಜವೇ. ಐದನೇ ಕ್ಲಾಸಿನಲ್ಲಿದ್ದಾಗ ನನ್ನ ಪೋಲಿ ಗೆಳೆಯನೊಬ್ಬ ವಿವರವಾಗಿ ತಿಳಿಸಿ ಹೇಳಿದರೂ ತಂದೆ ತಾಯಿ ಬಗೆಗಿನ ಅಪಾರವಾದ ಗೌರವ ಅವನ ಕಥೆಯನ್ನೂ ನಂಬದಂತೆ ತಡೆದಿತ್ತು. ನಾನು ಅಂದು ಕೊಂಡಿದ್ದು ಮಕ್ಕಳು ಬೇಕೆಂದಾಗ ತಂದೆ ತಾಯಿಗಳು ದೇವರಲ್ಲಿ ಕೇಳಿ ಕೊಳ್ಳುತ್ತಾರೆ ಮತ್ತು ಆ ಕರುಣಾಮಯನಾದ ದೇವರು ಮಕ್ಕಳನ್ನು ಕರುಣಿಸುತ್ತಾನೆ ಎಂದು, ಆದರೆ ಮೇಲೆ ಹೇಳಿದಂಥ ಪೋಲಿ ಪೋಕರಿಗಳು ವಕ್ಕರಿಸಿ ಹಾಗಲ್ಲ ಕಣೋ ಬೆಪ್ಪೆ ಹೀಗೆ ಎಂದು ಸವಿವರವಾಗಿ ಹೇಳಿದಾಗ ಅಪ್ಪ ಅಮ್ಮನ ನನ್ನು ಸಂಶಯ ದಿಂದ ನೋಡುವಂತಾಗುತ್ತಿತ್ತು.

ಈ ಚಿತ್ರ ನೋಡಿ. ಜರ್ಮನಿ ದೇಶದಲ್ಲಿ ಮಕ್ಕಳು ಹೇಗೆ ಬರುತ್ತಾರೆ ಎಂದು ಮಕ್ಕಳಿಗೆ ತಿಳಿ ಹೇಳಲು ಪುಸ್ತಿಕೆಗಳು. ಅದರಲ್ಲಿನ ಒಂದು ದೃಶ್ಯ ನೀವೀಗ ನೋಡುತ್ತಿರುವುದು.