ನಿಮ್ ವೋಟ್ ಯಾರ್ಗೆ?

ಕರ್ನಾಟಕದಲ್ಲಿ ಚುನಾವಣೆಯ ಜ್ವರ ಇಳಿದು, ಮತಗಣನೆಯ ಚಳಿ ಶುರುವಾಗಲಿದೆ. ಆಪ್ತ ಮಿತ್ರನೊಬ್ಬನಿಗೆ ಕುಶಲ ವಿಚಾರಿಸಲು ಫೋನಾಯಿಸಿದಾಗ ಊಟ ಈಗತಾನೆ ಆಯ್ತಪಾ, ವೋಟ್ ಹಾಕೋಕೆ ಹೋಗ್ಬೇಕು ಎಂದು ಚುನಾವಣೆಯ ಮೂಡ್ ಗೆ ತಂದ ಸಂಭಾಷಣೆಯನ್ನು. ಚಿಕ್ಕಂದಿನಿಂದಲೂ ನನಗೆ ರಾಜಕೀಯದ ಹುಚ್ಚು. ಅಪ್ಪ ಪಕ್ಕಾ ಕಾಂಗ್ರೆಸ್ಸಿಗರಾದರೆ ನಾನು ಜನತಾ ಪಕ್ಷ. ಆಗ ಇದ್ದಿದ್ದು ಒಂದೇ ಜನತಾ ಪಕ್ಷ. ಈಗ ಭಾರತೀಯ ಜನತಾ ಪಕ್ಷ, ಕರ್ನಾಟಕ ಜನತಾ ಪಕ್ಷ, ‘ಸೆಕ್ಯೂಲರ್’ ಜನತಾ ಪಕ್ಷ, ಬೈನಾಕ್ಯುಲರ್ ಜನತಾ ಪಕ್ಷ…ಹೀಗೆ ತರಾವರಿ ಪಕ್ಷಗಳು. ಜನರ ಸೇವೆ ಗಾಗಿಯೇ ತಮ್ಮ ಬಾಳನ್ನು ಮುಡಿಪಾಗಿಸಿಕೊಂಡ ಪಕ್ಷಗಳು.

ಚುನಾವಣೆಯ ಬಗ್ಗೆ ಮಾತನ್ನು ಮುಂದುವರೆಸಿದಾಗ ತಿಳಿಯಿತು ಇದು ನನ್ನ ಕಾಲದ ಚುನಾವಣೆಯಲ್ಲ, ಈಗಿನ ಚುನಾವಣೆ ಹೈ ಟೆಕ್ ಚುನಾವಣೆ, ಧ್ವನಿ ವರ್ಧಕ ಉಪಯೋಗಿಸುವಂತಿಲ್ಲವಂತೆ, ಭಿತ್ತಿ ಪತ್ರ ಅಂಟಿಸ ಬಾರದಂತೆ, ಮನಸ್ಸಿಗೆ ತೋಚಿದಂತೆ ಪಾಂಪ್ಲೆಟ್ ಮುದ್ರಿಸಬಾರದಂತೆ, ಮೆರವಣಿಗೆ ಕೂಡದಂತೆ, ಘೋಷಣೆ ಬೇಡವಂತೆ……ಥತ್ತೇರಿ, ಇದೆಂಥಾ ಚುನಾವಣೆ ಎಂದು ಅನ್ನಿಸಿತು. ನನ್ನ ಜಮಾನದ ಚುನಾವಣೆಯೇ ಚೆಂದ. ರಂಗು ರಂಗಿನ ಬ್ಯಾಡ್ಜು, ಅಭ್ಯರ್ಥಿಗಳಿಂದ ಊಟ, ತಿಂಡಿ ವ್ಯವಸ್ಥೆ, ಬೀರು ಬ್ರಾಂದಿ, ಪ್ರಾಸಬದ್ದ ಘೋಷಣೆಗಳು, ಜನತಾ ಪಕ್ಷ ಎತ್ತು ಭಿಕ್ಷ, ಕಾಂಗ್ರೆಸ್ ಪಕ್ಷ ಎತ್ತು ಭಿಕ್ಷ, ಭಾರತ್ ಮಾತಾ ಕೀ ಜೈ, ಎಂದು ಗಂಟಲು ಹರಿದು ಕೊಳ್ಳುವಂತೆ ಕೂಗುತ್ತಿದ್ದದ್ದು, ಅಯ್ಯೋ ಇದೆಲ್ಲಾ ಇಲ್ವೆ ಇಲ್ವಲ್ಲೋ ಎಂದಾಗ ಅವನು, ಅದೇನೂ ಇಲ್ಲ ಕಣೋ ಈಗ, ಹೆಣ ನೋಡಲು ಹೋಗೋ ಥರಾ ಮೌನವಾಗಿ ವೋಟಿಂಗ್ ಮೆಶೀನ್ ಹತ್ರ ನಿಂತು, ಯಾವುದಾದರೂ ಒಂದು ಬಟನ್ ಚುಚ್ಚಿ ಹೊರಬರೋದು ಅಷ್ಟೇ ಎಂದ. ಮೊದಲು ಮತಗಟ್ಟೆ ಬಳಿಯೂ ಕಾರ್ಯಕರ್ತರು. ದೂರದಿಂದ ಹಲ್ಲು ಗಿಂಜುತ್ತಾ, ಕೈಸನ್ನೆಯಿಂದ ತಮ್ಮ ಪಕ್ಷದ ಗುರುತನ್ನು ಜನರಿಗೆ ತೋರಿಸಿ ಎದುರು ಪಕ್ಷದವರ ಕೈಯಲ್ಲಿ ಉಗಿಸಿ ಕೊಂಡು ಹೆ ಹೇ ಎಂದು ಪೆಚ್ಚು ನಗು ನಗೋದು…

ಹೋಯ್ತಾ ಆ ಕಾಲ? ಮಾತಿನ ಮಧ್ಯೆ, ರಾಮನಗರದ ಹತ್ತಿರ ಮಚ್ಚು ತೋರಿಸಿ ವೋಟ್ ಮಾಡಲು ಒಂದು ಪಕ್ಷದವರು ಬೆದರಿಕೆ ಹಾಕುತ್ತಿರುವುದನ್ನು ಟೀವೀ ಲಿ ತೋರಿಸ್ತಾ ಇದ್ದಾರೆ ನೋಡು ಎಂದಾಗ, ಒಹ್, ಸಧ್ಯ ಈ ಸಂಸ್ಕಾರವನ್ನು ನಮ್ಮ ಜನ ಇನ್ನೂ ಜೋಪಾನವಾಗಿ ಇಟ್ಟುಕೊಂಡಿದ್ದಾರೆ ಎಂದು ಸಮಾಧಾನ ಪಡುತ್ತಾ ಮಿತ್ರನಿಗೆ ವಿದಾಯ ಹೇಳಿದೆ.

Advertisements

ಅ-ಣ್ಣಾ-ರಣ್ಯ ರೋದನ

ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿ ೧೯೪೨ ರಲ್ಲಿ ಆರಂಭವಾಯಿತು.  ಸ್ವಾತಂತ್ರ್ಯಕ್ಕಾಗಿನ ತುಡಿತ, ದಾಸ್ಯದಿಂದ ಬಿಡಿಸಿ ಕೊಂಡು ನಮ್ಮನ್ನು ನಾವೇ ಆಳಿಕೊಳ್ಳುವ ಮಹದಾಸೆ ಈ ಚಳುವಳಿಗೆ ಪ್ರೇರಣೆ. ಆರು ವರ್ಷಗಳ ಹೋರಾಟದ ನಂತರ ಬ್ರಿಟಿಷರು ನಮ್ಮನ್ನು ದಾಸ್ಯ ಮುಕ್ತ ಗೊಳಿಸಿದರು ೧೯೪೭ ರಲ್ಲಿ. ಸ್ವಾತಂತ್ರ್ಯ ತರುವ ಹರ್ಷ, ಪುಳಕವನ್ನು ಭಾರತೀಯರು ಅನುಭವಿಸಿದರು.  ಆದರೆ ಅರವತ್ತೈದು ವರ್ಷಗಳ ನಂತರ ನಾವು ನಮಗರಿವಿಲ್ಲದೆಯೇ ಬಾಣಲೆಯಿಂದ ಬೆಂಕಿಗೆ ಜಾರಿದ ವಾಸ್ತವದ ಅರಿವು ನಿಧಾನವಾಗಿ ಆಗ ತೊಡಗಿತು.  

೧೯೪೭ ರಲ್ಲಿ ನಮ್ಮ ಹಾಗೇ ಕಡುಬಡತನ ದಿಂದ ಬಳಲುತ್ತಿದ್ದ ದೇಶ ದಕ್ಷಿಣ ಕೊರಿಯಾ ಇಂದು ಶ್ರೀಮಂತಿಕೆಯಲ್ಲಿ ವಿಶ್ವದ ಅಗ್ರಮಾನ್ಯ ದೇಶಗಳ ಸಾಲಿನಲ್ಲಿ ನಿಂತಿದೆ. ನಮ್ಮ ನೆರೆಯ ಚೀನಾ ಪ್ರಜಾಪ್ರಭುತ್ವ, ಅದೂ, ಇದೂ ಎಂದು ಯಾವುದೇ ಸದ್ದು ಗದ್ದಲ ಮಾಡದೆ ತನ್ನಷ್ಟಕ್ಕೆ ತಾನೇ ಅಭಿವೃದ್ಧಿ ಪಥದಲ್ಲಿ ದಾಪುಗಾಲು ಹಾಕಿದೆ. ಆದರೆ ನಾವು ಮಾತ್ರ ರಾಜಕಾರಣಿ – ಅಧಿಕಾರಶಾಹಿ ಚಕ್ರವ್ಯೂಹದಲ್ಲಿ ಸಿಕ್ಕು ನರಳುತ್ತಿದ್ದೇವೆ. ಭ್ರಷ್ಟಾಚಾರ ದೇಶವನ್ನು ಅಗ್ನಿ ಪರೀಕ್ಷೆಗೆ ಒಡ್ಡಿದೆ.   

ದಿನೇ ದಿನೇ ಒಂದಲ್ಲ ಒಂದು ಹಗರಣದಿಂದ ಕಂಗೆಟ್ಟ ದೇಶಕ್ಕೆ ಆಶಾ ದೀಪವಾಗಿ ಬಂದರು ಅಣ್ಣಾ ಹಜಾರೆ. ‘ಎನಫ್ ಈಸ್ ಎನಫ್’ ಎಂದು ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದರು. ಜನರೂ ಆರಂಭದಲ್ಲಿ ಹುಮ್ಮಸ್ಸು ತೋರಿಸಿದರು. ಅಣ್ಣಾ ಜನಪ್ರಿಯತೆ ಪಡೆಯುತ್ತಿದ್ದಂತೆ ಸರಕಾರ ಎಚ್ಚೆತ್ತು ಕೊಳ್ಳಲು ಆರಂಭಿಸಿತು. ಅಣ್ಣಾ ಜೊತೆ ಮಾಜಿ ಪೊಲೀಸ್ ಅಧಿಕಾರಿ ಕಿರಣ್ ಬೇಡಿ ಸಹ ಸೇರಿಕೊಂಡರು. ಇವರು ತಮ್ಮ ಅಧಿಕಾರಾವಧಿಯಲ್ಲಿ ಎಂಥೆಂಥ ಲಂಚಗುಳಿ ಅಧಿಕಾರಿಗಳನ್ನು ಕಂಡಿರಲಿಕ್ಕಿಲ್ಲ. ಬೇಡಿ ಅವರು ಭ್ರಷ್ಟ ಅಧಿಕಾರಿಗಳ ವಿರುದ್ಧ ಸೊಲ್ಲೆತ್ತಿದ್ದು ನಾವೆಂದಾದರೂ ಕೇಳಿದ್ದೇವೆಯೇ? ಎಲ್ಲಿಂದ ಪುಟಿದೆದ್ದಿತು ಲಂಚದ ವಿರುದ್ಧ ಹೋರಾಡೋ ಹಂಬಲ? ಕಿರಣ್ ಬೇಡಿ ಮಧ್ಯೆ ಮತ್ತೊಂದು ವ್ಯಕ್ತಿ, ಅರವಿಂದ  ಕೇಜರಿವಾಲ ಅಂತೆ. ಸ್ವಾತಂತ್ರ್ಯ ಚಳುವಳಿಯಲ್ಲೋ, ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದಲ್ಲೋ, ಬೇರೆಲ್ಲೂ ಈ ವ್ಯಕ್ತಿಯ ಹೆಸರು ಕೇಳಿದ್ದಿಲ್ಲ. ಯಾರೀತ? who is this kejriwala? ‘ವೋ, ಕೇಸರಿ ವಾಲ ಹೈ’ ಎಂದು ಮೂದಲಿಸಿತು ಕಾಂಗ್ರೆಸ್.   ಇವೆಲ್ಲಾ ಆದ ನಂತರ ಜನ ರೊಚ್ಚಿಗೆದ್ದಿದ್ದನ್ನು ಗಮನಿಸಿದ ಕೇಂದ್ರದ ಆಳುವ ಪಕ್ಷಕ್ಕೆ ಈಗ ದುರ್ಬೀನಿಟ್ಟು ನೋಡ ತೊಡಗಿತು. ಅಣ್ಣಾ ಜೊತೆ ವೇದಿಕೆಯ ಮೇಲೆ ಯಾರ್ಯಾರಿದ್ದಾರೆ? ಅವರ ಹಿನ್ನೆಲೆ ಏನು? ಯಾವ ಸಂಘಟನೆಗಳ ಒಲವು ಇವರಿಗೆ? ಹಿಡ್ಡನ್ ಅಜೆಂಡಾ ಏನಾದರೂ ಇದೆಯೇ ಈ ಚಳುವಳಿ ಹಿಂದೆ? ಹೀಗೆ ನೂರೆಂಟು ಅನುಮಾನಗಳನ್ನು ಹರಿ ಬಿಟ್ಟು ಜನರನ್ನು ಕನ್ಫ್ಯೂಸ್ ಮಾಡಿ ಬಿಟ್ಟರು.  ಎಡಬಿಡದ ವಾಕ್ಪ್ರಹಾರ, ಆರೋಪ ಪ್ರತ್ಯಾರೋಪಗಳ ಗದ್ದಲದಲ್ಲಿ ಚಳುವಳಿ ತನ್ನ ಮಹತ್ವ ಕಳೆದು ಕೊಂಡಿತು. ಈ ಚಳುವಳಿಯಲ್ಲೂ ನುಸುಳಲೇ ಬೇಕಿತ್ತೆ ರಾಜಕಾರಣ?

ದಿನನಿತ್ಯ ಬದುಕಿನ ಜಂಜಾಟದಲ್ಲಿ ಸಿಕ್ಕಿ ಕೊಂಡ ಸಾಮಾನ್ಯ ಪ್ರಜೆ ಲಂಚದ ವಿರುದ್ಧ ತನ್ನದೇ ಆದ ರೀತಿಯಲ್ಲಿ ಪ್ರತಿಭಟಿಸಿದ. ಲಂಚಕ್ಕಾಗಿನ ಅಧಿಕಾರಿಗಳ  ತೀರದ  ದಾಹಕ್ಕೆ ಬೇರೆ ದಾರಿ, ಕಾಣದೇ ಮೂರು ಗೋಣಿಚೀಲ ತುಂಬಾ ಸುಮಾರು ನಲವತ್ತು ತರಾ ವರಿ, ನಮೂನೆ ನಮೂನೆ (ಥೇಟ್ ಲಂಚಗುಳಿಗಳ ಥರ) ಹಾವುಗಳನ್ನು ಸರಕಾರೀ ಕಛೇರಿಯೊಳಕ್ಕೆ ತಂದು ಗೋಣಿ ಚೀಲ ಬರಿದು ಮಾಡಿ ಬಿಟ್ಟರು ರೈತರಾದ ಹುಕ್ಕುಲ್ ಖಾನ್ ಮತ್ತು ರಾಮ್ ಕುಲ್ ರಾಮ್. ಭಯಭೀತರಾದ ಅಧಿಕಾರಿಗಳು ಓಟ ಕಿತ್ತರು. ಇದು ಹತಾಶ ಪ್ರಜೆಯ ಹತಾಶ ಪ್ರತಿಕ್ರಿಯೆ. ಇದರಿಂದ ಅಧಿಕಾರಿಗಳು ಏನಾದರೂ ಕಲಿತಾರೆಯೇ ಪಾಠವನ್ನು? no chance. ಹಾವುಗಳನ್ನು ಹರಿ ಬಿಟ್ಟ ರೈತರನ್ನೇ ಖಳ ನಾಯಕರನ್ನಾಗಿಸಿ ಬಿಡುತ್ತಾರೆ, ಈ ಹಾವುಗಳಿಗಿಂತ ಅಪಾಯಕಾರಿಯಾದ ಅಧಿಕಾರಿಶಾಹಿ ಹಾವು.        

ಲಂಚದ ಹಾವಳಿ ವಿರುದ್ಧ ನಮ್ಮಲ್ಲಿ ಬಹಳಷ್ಟು ಕಾನೂನುಗಳಿವೆ. ಕಾನೂನಿನ ಪ್ರಕಾರ ಲಂಚ ಕೊಡುವುದು ಲಂಚ ತೆಗೆದುಕೊಳ್ಳುವಷ್ಟೇ ಅಪರಾಧ. ಲಂಚಗುಳಿಗಳ ವಿರುದ್ಧ ಸಮರ ಸಾರಿದ ಅಣ್ಣಾ ಲಂಚ ಕೊಡುವವರ ವಿರುದ್ಧ ಸೊಲ್ಲನ್ನೇಕೆ ಎತ್ತುತ್ತಿಲ್ಲ, ಇದು ಕೆಲವರ ಜಿಜ್ಞಾಸೆ. ಕೊಡುವವನಿಲ್ಲದಿದ್ದರೆ ಭವತಿ ಭಿಕ್ಷಾಂದೇಹಿ ಎನ್ನುವವನ ಅಸ್ತಿತ್ವ ಇರುವುದಿಲ್ಲ, ಅಲ್ಲವೇ?  

ನಾನು ಬ್ಯಾಂಕಿನ ಕೆಲಸದ ನಿಮಿತ್ತ ಹೊರಹೋದಾಗ ಜ್ಯೂಸ್ ಕೊಳ್ಳಲು ಹೋಗುವ ಪುಟ್ಟ ಬಕಾಲಾ ಎಂದು ಕರೆಯಲ್ಪಡುವ ಮಿನಿ ಮಾರ್ಕೆಟ್ ಇದೆ. ಅಲ್ಲಿ ಸಾಮಾನ್ಯವಾಗಿ ಇರುತ್ತಿದ್ದ ವ್ಯಕ್ತಿಯೊಬ್ಬ ಕಾಣದೇ ಇದ್ದುದರಿಂದ ವಿಚಾರಿಸಿದೆ. ಆಗ ಅಲ್ಲಿ ಕೆಲಸ ಮಾಡುವ ವ್ಯಕ್ತಿ ಹೇಳಿದ, ಅವರನ್ನು ಜೈಲಿಗೆ ಹಾಕಿದಾರೆ ಎಂದು. ಅರೆ, ಜೈಲಾ, ಅಂಥ ಮನುಷ್ಯ ಅಲ್ಲವಲ್ಲಾ ಈತ ಎಂದು ನನ್ನ ಅನುಮಾನವನ್ನು ವ್ಯಕ್ತ ಪಡಿಸಿದಾಗ ಆತ ಹೇಳಿದ ಪುರಸಭೆಯಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬನಿಗೆ ೨೦೦ ರಿಯಾಲ್ ( ಸುಮಾರು ೨,೭೦೦ ರೂ. ) ಲಂಚ ಕೊಟ್ಟಿದ್ದು ಕಾರಣ ಎಂದು.

ನಮ್ಮ ಕಂಪೆನಿಯ ಮಾಲೀಕರ ಮಿತ್ರರಿಗೆ ಸಂಭವಿಸಿದ್ದು ಇದು. ಸುಮಾರು ಹತ್ತುವರ್ಷಗಳ ಹಿಂದೆ ಸೌದಿ ಅರೇಬಿಯಾದ ಮತ್ತೊಂದು ನಗರವಾದ ದಮ್ಮಾಮಿನ ಬಂದರಿನಲ್ಲಿ ವಿದೇಶದಿಂದ ಆಮದಾಗಿ ಬಂದ ಸರಕನ್ನು ಸ್ವಲ್ಪ ಬೇಗನೆ ಬಿಡಿಸಿ ಕೊಳ್ಳಲು ಅಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಗೆ ಲಂಚ ಕೊಟ್ಟರು. ಹತ್ತು ವರ್ಷಗಳ ನಂತರ ಈ ವಿಷಯ ಬೆಳಕಿಗೆ ಬಂದು ಅವರನ್ನು ಕೂಡಲೇ ದೇಶದಿಂದ ಗಡೀ ಪಾರು ಮಾಡಿದರು. ಪಾಕಿಸ್ತಾನ ಮೂಲದ ಈ ವ್ಯಕ್ತಿ ಚಿಕ್ಕ ಆಸಾಮಿ ಅಲ್ಲ. ದಮ್ಮಾಮಿನ ಬಂದರಿನಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದರು. ನಂತರ ತನಂದೆ ಆದ ಕಂಪೆನಿ ಸಹ ಆರಂಭಿಸಿದ್ದರು. ಏಕಾಯೇಕಿ ಅವರನ್ನು  ಗಡೀಪಾರು ಮಾಡಿತು ಸೌದಿ ಸರಕಾರ. ದಮ್ಮಾಮಿನ ಪಕ್ಕದ ಲ್ಲೇ ಇರುವ ಪುಟ್ಟ ಬಹರೇನ್ ದೇಶದಲ್ಲಿ ಕೂತು ತಮ್ಮ ವಹಿವಾಟನ್ನು ನಿಯಂತ್ರಿಸುತ್ತಿದ್ದಾರೆ. ಹೇಗಿದೆ, ನಮ್ಮ ಕಾನೂನು, ಅರೇಬಿಯಾದ ಸರ್ವಾಧಿಕಾರಿ ಕಾನೂನು? ಇಲ್ಲಿ ಹೊಟ್ಟೆಗೆ ಬಟ್ಟೆಗೆ ಸರಿಯಾಗಿ ಸಿಗುವುದರಿಂದ ಜನರಿಗೆ ಫ್ರೀಡಂ, ಡೆಮಾಕ್ರಸಿ ಇವುಗಳ ಚಿಂತೆ ಇಲ್ಲ. ನಮಗೆ ಫ್ರೀಡಂ ಇದ್ದರೂ ಒಂದು ನಿಸ್ಶಹಾಯಕತೆ, ಕಟ್ಟಿ ಹಾಕಲ್ಪಟ್ಟ ಭಾವ.

ಸರಿ, ಸಮಾಜದ ಎಲ್ಲ ವರ್ಗದವರನ್ನೂ ಯಾವುದೆ ಬೇಧ ಭಾವ ಇಲ್ಲದೆ ಬಾಧಿಸುವ ಈ ಲಂಚಕೋರತನ ದ ವಿರುದ್ಧದ ಹೋರಾಟ ಏಕೆ ಬಿರುಸಾಗಿಲ್ಲ? ಜನ ಏಕೆ ದೊಡ್ಡ ರೀತಿಯಲ್ಲಿ ಭಾಗವಹಿಸುತ್ತಿಲ್ಲ? ಎಲ್ಲೋ ಒಂದೆರಡು ನಗರ ಪ್ರದೇಶಗಳಲ್ಲಿ ಒಂದು ರೀತಿಯ boredom ಕಳೆಯಲೆಂಬಂತೆ ಬಂದ ಒಂದಿಷ್ಟು ಯುವಜನರು. ಅಣ್ಣಾ ಮನವಿಗೆ ಜನ ಕಿವಿಗೊಡದಿರಲು ಕಾರಣ ಭ್ರ್ಹಷ್ಟಾಚಾರದ ಬಗ್ಗೆ ಜನರಿಗೆ ಇರುವ ಪರೋಕ್ಷ ಒಲವು ಕಾರಣ ಇರಬಹುದು. ಯಾವುದೇ ಕೆಲಸ ಕೈಗೆತ್ತಿಕೊಳ್ಳಬೇಕಾದರೂ ಆ ಕೆಲಸದಲ್ಲಿ ನಮಗೆ passion ಎನ್ನುವುದು ಇರಬೇಕು. ardent passion. ಅದು ನಮ್ಮಲ್ಲಿ ಕಾಣಲು ಸಿಗಲಿಲ್ಲ ಈ ಚಳುವಳಿಯಲ್ಲಿ. ಅದೇ ಸಮಯ ನಮಗಿಷ್ಟವಾದ, ಊಟ ನಿದ್ದೆಯನ್ನೂ ತ್ಯಜಿಸಿ ಆಸಕ್ತಿ ತೋರಿಸುವ ಕ್ರಿಕೆಟ್ ಆಟದ ಕಡೆ ನಮ್ಮ ಆಸಕ್ತಿ ಸ್ವಲ್ಪ ನೋಡಿ. ಯಾವುದಾದರೂ ಪಂದ್ಯದಲ್ಲಿ ಭಾರತ ಸೋತರೆ ಪ್ರತೀ ತಿಮ್ಮ, ಬೋರ, ವೆಂಕ ಎಕ್ಸ್ಪರ್ಟ್ ಆಗಿ ಬಿಡುತ್ತಾರೆ. ಥತ್, ನಾಯಕ  ಟಾಸ್ ಗೆದ್ದು ಬ್ಯಾಟಿಂಗ್ ತಗೋ ಬೇಕಿತ್ತು, ನಾವು ಚೇಸ್ ಮಾಡಲು ನಾಲಾಯಕ್ಕು ಅಂತ ಅವ್ನಿಗ್ ಗೊತ್ತಿಲ್ವಾ….ಪಿಚ್ ತುಂಬಾ ಸ್ಲೋ ಆಗೋಯ್ತು…. ಇಬ್ಬರು ಸ್ಪಿನ್ನರ್ ಗಳನ್ನು ಆಡಿಸಬೇಕಿತ್ತು ನೋಡು….. ಅಂಪೈರ್ ಕೈ ಕೊಟ್ಟ……..ಎಲ್ಲಿಂದ ಸಿಕ್ಕುದ್ನೋ ಈ ಕೋಚು?……. D/L ಮೆಥಡ್ ಸರಿಯಿಲ್ಲ, ನಮಗೆ ಅನುಕೂಲ ಆಗ್ಲಿಲ್ಲ ಡಕ್ವರ್ಥ್ ಲೀವೈಸ್ (D/L)……. ವಾವ್, ನೋಡಿದಿರಾ ಜ್ಞಾನವನ್ನು? ಇವರ ಅನಾಲಿಸಿಸ್ ಗಳಿಗೆ ಜೆಫ್ ಬಾಯ್ಕಾಟ್, ಹರ್ಷ ಭೋಗ್ಲೆ ಯಂಥವರು ಹಿಮ್ಮೆಟ್ಟುತ್ತಾರೆ. ಆ ಪಾಟಿ ಜ್ಞಾನ. ಜೀವಮಾನದಲ್ಲಿ ಬ್ಯಾಟ್ ಹಿಡಿದಿರದ, ಪಿಚ್ ಮೇಲೆ ಹೆಜ್ಜೆಯೂರಿಲ್ಲದವರ ಅನಾಲಿಸಿಸ್ಸು ಇದು. ಅದೇ ಸಮಯ ಅಣ್ಣಾ ಹಜಾರೆ ಹೆಸರು ಕೇಳಿದ ಕೂಡಲೇ ಯಾರಪ್ಪಾ ಈ ತಾತ ಎಂದು ಗೂಗ್ಲಿಸಿ ನೋಡುತ್ತಾರೆ. ಕ್ರಿಕೆಟ್ ನ ಗೂಗ್ಲೀ ಬಗ್ಗೆ ಸರಾಗವಾಗಿ ಮಾತನಾಡುವವರು ಅಣ್ಣಾ ಬಗ್ಗೆ ತಿಳಿಯಲು ಗೂಗ್ಲ್ ಮೊರೆ ಹೋಗುತ್ತಾರೆ. ಈಗ ತಿಳಿಯಾಯಿತೆ ಮರ್ಮ? ಲಂಚದ ವಿರುದ್ಧದ ಜನರ ಆಸಕ್ತಿ ನಿರಾಸಕ್ತಿ, ಅನಾದಾರದ ಮರ್ಮ? ಇದೇ passion ತರುವ ಫಲಿತಾಂಶ. ದೇಶವನ್ನು ಕಿತ್ತು ತಿನ್ನುತ್ತಿರುವ ಭ್ರಷ್ಟಾಚಾರದ ಬಗ್ಗೆ ಕ್ರಿಕೆಟ್ ಕಡೆ ತೋರಿಸುವ ಕಿಂಚಿತ್ ಆಸಕ್ತಿಯನ್ನಾದರೂ ಜನ ತೋರಿಸಿದ್ದಿದ್ದರೆ ಬೀದಿಗಳು ಪ್ರತಿಭಟಿಸುವ ಜನರಿಂದ ತುಂಬಿ ಹೋಗುತ್ತಿದ್ದವು.  ಒಂದು ದಿನದ ಕಡ್ಡಾಯ ಓವರ್ಗಳ ಪಂದ್ಯಕ್ಕಾಗಿ ಮೈದಾನ ತುಂಬುವಂತೆ.

ಎರಡನೇ ವಿಶ್ವ ಮಹಾಯುದ್ಧದ ಹೀರೋ ವಿನ್ಸ್ಟನ್ ಚರ್ಚಿಲ್ ಅಂದಿನ ಬ್ರಿಟಿಶ್ ಪ್ರಧಾನಿ ಕ್ಲೆಮೆಂಟ್ ಅಟ್ಲೀ ಯನ್ನು  ಮನವಿ ಮಾಡಿಕೊಂಡ ಭಾರತಕ್ಕೆ ಸ್ವಾತಂತ್ರ್ಯ ಕೊಡಬೇಡ ಎಂದು. ಬಹುಶಃ ಆಳಿಕೊಳ್ಳುವ ಸಾಮರ್ಥ್ಯ ಭಾರತೀಯರಿಗೆ ಇನ್ನೂ ಬಂದಿಲ್ಲ ಎಂದು ಈ ಸಿಗಾರ್ ಪ್ರೇಮಿ ಮುತ್ಸದ್ದಿಗೆ ತೋರಿರಬೇಕು. ಹಳೇ ತಲೆಮಾರಿನ, ವಯಸ್ಸಾದ ಯಾರನ್ನೇ ಹೀಗೇ ಮಾತಿಗೆ ಕೇಳಿ, ಅಯ್ಯೋ ಬ್ರಿಟಿಷರ ಕಾರುಬಾರೆ ಚೆನ್ನಿತ್ತು ಎನ್ನದಿರಲಾರರು. ಈ ಮಾತನ್ನು ಹತಾಶ ಜನರ ಬಾಯಲ್ಲಿ ಹಾಕಿದವರು, ನಮ್ಮ ಖಾದಿಧಾರಿ ರಾಜಕಾರಣಿಗಳು. ಆದರೆ ಪ್ರಜಾ ಪ್ರಭುತ್ವಕ್ಕೆ ಅವರೇ ಜೀವಾಳ. ಶಪಿಸುತ್ತಾ, ರಮಿಸುತ್ತಾ ಅವರೊಂದಿಗೇ ಕಳೆಯಬೇಕು ಕಾಲವನ್ನು ನಾವು ಮತ್ತು ನಮ್ಮ ಪ್ರೀತಿಯ ದೇಶ.

ಈ ಜಾತಿ ನನಗೆ ತುಂಬಾ ಇಷ್ಟ

ಯೆಡಿಯೂರಪ್ಪ ನವರು ಹೊರಹೋಗಬೇಕು ಎಂದು ಕೊನೆಗೂ ‘ಭಾಜಪ’ದ ಹೈ ಕಮಾಂಡ್ ಜಪಿಸಿತು. ಈ ಜಪಕ್ಕಾಗಿ ಕುಮಾರಪ್ಪ ಅಂಡ್ ಕಂಪೆನಿ ಚಾತಕ ಪಕ್ಷಿಯಂತೆ ಕಾದು ಕುಳಿತಿತ್ತು. ಹೊರನಡಿಯಿರಿ ಎನ್ನುವ ಆಜ್ಞೆ ಹೊರಬಿದ್ದಾಗ ಕಾಂಗ್ರೆಸ್ ನದು ಅಪಸ್ವರ, ಈ ಆಜ್ಞೆ ತುಂಬಾ ತಡವಾಗಿ ಬಂತು ಅಂತ. ಏನೇ ಇರಲಿ, ರಾಜಕಾರಣದಲ್ಲಿ ಇವೆಲ್ಲಾ ಇದ್ದಿದ್ದೆ, ಯಾರು ಅಧಿಕಾರದ ಸ್ಥಾನದಲ್ಲಿ ಕೂತಿರ್ತಾರೋ ಅವರ ಕಾಲನ್ನು ಎಳೆದು ಹಾಕಲು ಮತ್ತೊಂದು ಮಾಜಿ ಅಧಿಕಾರಸ್ಥರ ಗುಂಪು ಕಾಯುತ್ತಾ ಇರುತ್ತದೆ. ಸರಿ, ಈಗ ನಮ್ಮ ರಾಜ್ಯದ ಮುಂದಿನ ಮುಖ್ಯ ಮಂತ್ರಿಗಳು ಯಾರು ಅಂತ ಕವಡೆ ಹಾಕಿ ನೋಡಲು ಕವಡೆ ಹುಡುಕುವಾಗ ಮತ್ತೊಂದು ಶಾಕ್ ತಗುಲಿತು. ಯಾವ ಜಾತಿಯ ಮುಖ್ಯಮಂತ್ರಿ ಬೇಕು ಅಂತ. ಈ ಪ್ರಶ್ನೆ ಒಂದು ಬ್ಲಾಗ್ ಕೇಳ್ತು. ಥತ್ತೇರಿ, ಮತ್ತೊಂದು ಸಮಸ್ಯೆ ಈಗ. ಈ ಸಮಸ್ಯೆ ನಮ್ಮ ಮಧ್ಯೆ ಇಲ್ಲ ಅಂತ ಭಾವಿಸಿಕೊಂಡಿರುವಾಗಲೇ ಪಾಟೀ ಸವಾಲಿನಂತೆ ಬಂದು ಎರಗಿತು, ಯಾವ ಜಾತಿಯ ಮುಖ್ಯ ಮಂತ್ರಿ ಬೇಕು ಅಂತ. ಅಷ್ಟೆಲ್ಲಾ ರಾಜಕಾರಣ ನನಗೆ ತಿಳೀ ಒಲ್ದು, ಇಷ್ಟು ಮಾತ್ರ ಗೊತ್ತು, ನಮ್ಮ ಅಲ್ಫೋನ್ಸೋ ಜಾತಿಯ ಮಾವಿನ ಹಣ್ಣಿನಂಥ ಹಣ್ಣು ಎಲ್ಲೂ ಹುಟ್ಟಿಲ್ಲ. ಹುಟ್ಟೋದೂ ಇಲ್ಲ.

ಯಾವ ಜಾತಿಯ ವ್ಯಕ್ತಿಯ ಕೈಗೇ ಹೋಗಲಿ ಅಧಿಕಾರ ಜಾತಿ, ಮತ, ಧರ್ಮ, ಪಂಥ ಭೇಧ ಮರೆತು ನಮ್ಮ ರಾಜ್ಯದ ಅಭ್ಯುದಯವನ್ನು ಮಾತ್ರ ಗಮನದಲ್ಲಿಟ್ಟು ಕೊಂಡು ಸರಕಾರ ನಡೆಸಲಿ ಎನ್ನುವ ಸಣ್ಣ ಆಸೆ ದೂರದ ಮರಳುಗಾಡಿನಿಂದ.

ಪರಿವೃತ್ತಪಾರ್ಶ್ವಕೋನಾಸನ

 

ನಮ್ಮ ದೇಶದಲ್ಲಿ ಈಗ ಭ್ರಷ್ಟಾಚಾರದ ಕೋಲಾಹಲ. ದೇಶವನ್ನು ಹಗಲು ದರೋಡೆ ಮಾಡುತ್ತಿರುವ ರಾಜಕಾರಣಿ-ಉದ್ಯಮಿ ‘ನೆಕ್ಸಸ್’ ಜನರ ಸಹನೆ ಕೆಡಿಸಿದೆ. ಒಮ್ಮೆ ಶ್ರೀಲಂಕಾ ಮೂಲದ ನನ್ನ ಸಹೋದ್ಯೋಗಿ ತನ್ನ ದೇಶದ ಅಧ್ಯಕ್ಷ ಮಹೇಂದ್ರ ರಾಜಪಕ್ಸ ಮತ್ತು ಆತನ ಪರಿವಾದವರ ಮುಗಿಲು ಮುಟ್ಟಿದ ಭ್ರಷ್ಟಾಚಾರ ಯಾವ ರೀತಿ ದೇಶ ಮುಂದವರಿಯಲು ಅನುವು ಮಾಡಿ ಕೊಡುತ್ತಿಲ್ಲ ಮತ್ತು ಅವರುಗಳ ಕಪಿ ಮುಷ್ಠಿಯಲ್ಲಿ ದೇಶ ಯಾವ ರೀತಿ ಸಿಲುಕಿದೆ ಎಂದು ಹೇಳುವಾಗ ನಾನು ಸಂಭ್ರಮದಿಂದ ನಮ್ಮ ದೇಶದಲ್ಲಿ ಈ ರೀತಿಯ ಲಂಚಗುಳಿತನ ಸಾಧ್ಯವಿಲ್ಲ. ಕೆಳಸ್ತರದಲ್ಲಿ ಮಾತ್ರ ಒಂದಿಷ್ಟು ಭ್ರಷ್ಟಾಚಾರ ಇದೆ, ವ್ಯವಸ್ಥೆಯ ಮೇಲ್ಪದರದಲ್ಲಿ ಅದರ ಹಾವಳಿ ಇಲ್ಲ, ನಮ್ಮ ಮಾಧ್ಯಮ, ನ್ಯಾಯಾಲಯಗಳು, ವ್ಯಕ್ತಿ ಎಷ್ಟೇ ದೊಡ್ಡವನಾದರೂ ಅವನನ್ನು ಬಿಡುವುದಿಲ್ಲ, ನಮ್ಮದು ಏಷ್ಯಾ ಉಪಖಂಡದ freest, transparent democracy ಎಂದೆಲ್ಲಾ ಬೀಗುತ್ತಾ ಹೇಳುವಾಗ ಆತನ ಕಣ್ಣುಗಳಲ್ಲಿ ಅಸೂಯೆ ಮಿಶ್ರಿತ ಮೆಚ್ಚುಗೆ ಕಾಣಬಹುದಿತ್ತು. ಆದರೆ ಇತ್ತೀಚೆಗೆ ಒಂದೇ ಸಮನೆ ಹಗರಣಗಳ ಮೇಲೆ ಹಗರಣಗಳು ನಮ್ಮ ಕೊರಳಿಗೆ ಮಾಲೆಯಾಗಿ ನಮ್ಮ ಉಸಿರುಗಟ್ಟಿಸಲು ಶುರುಮಾಡಿದಾಗ ನನಗನ್ನಿಸಿತು ನಾನೆಂಥಾ novice ಎಂದು.

ಶ್ರೀಲಂಕಾ ರಾಜಪಕ್ಸ ಪರಿವಾರದ ಕಪಿ ಮುಷ್ಠಿಯಲ್ಲಿ ಮಾತ್ರ ಇರೋದು, ಅದೇ ನಮ್ಮ ದೇಶ ಯಾರ್ಯಾರಿಗೆ ಬಲವಾದ, ಬಿಗಿಯಾದ, ಮುಷ್ಠಿಯಿದೆಯೋ ಅವರುಗಳೆಲ್ಲರ ಕೈಯ್ಯಲ್ಲಿ ಸಿಕ್ಕು ನರಳುತ್ತಿದೆ. ಚಾರ್ಲ್ಸ್ ಡಾರ್ವಿನ್ ನ survival of fittest ಸಿದ್ಧಾಂತ ಕ್ಕೆ ಜ್ವಲಂತ ನಿದರ್ಶನ ನಮ್ಮ ಲಂಚಗುಳಿ ರಾಜಕಾರಣಿಗಳು ಮತ್ತು ಅವರ ಆಶ್ರಯದಲ್ಲಿ ಮೆರೆಯುತ್ತಿರುವ ಉದ್ಯಮಿಗಳು. ತಾಕತ್ತಿರುವವರೆಲ್ಲಾ ಲೂಟಿಗೆ ಅರ್ಹರು.

ರಾಜಕಾರಣಿಗಳು ನಮ್ಮ ಕನಸುಗಳನ್ನು, ಆಶಯಗಳನ್ನು ಅಮೇರಿಕನ್ ಡಾಲರ್ ಗಳ ರೂಪಕ್ಕೆ ಪರಿವರ್ತಿಸಿ ಸ್ವಿಸ್ ಬ್ಯಾಂಕುಗಳಲ್ಲೂ, ಕಪ್ಪು ಹಣದ ರೂಪದಲ್ಲೂ ಜಮಾವಣೆ ಮಾಡಲು ಆರಂಬಿಸಿದ್ದರಿಂದ ಈ ಬೇಡಿಕೆಗೆ ಒತ್ತಾಸೆ ಜನರಿಂದ. ಶುಭ್ರ ಖಾದಿಗಳು ತಮ್ಮ ಕೊಳಕು antics ಗಳಿಂದ ನಮ್ಮನ್ನು ನಿರಾಶೆ ಗೊಳಿಸಿದಾಗ ಸಹಜವಾಗಿಯೇ ಜನ unconventional ಪರಿಹಾರದ ಕಡೆ ನೋಟ ಹರಿಸಲು ಆರಂಭಿಸಿದರು. ದೇಹವನ್ನ ದಂಡಿಸಿ ಸರಕಾರದ ಮನವೊಲಿಸಲು ಯತ್ನಿಸಿದರು. ಯೋಗ ಖ್ಯಾತಿಯ ಬಾಬಾ ರಾಮ್ ದೇವ್ ಸರಕಾರದ ಲಂಚ ಕುರಿತ ಸರಕಾರದ ನಿರ್ಲಿಪ್ತ ನೀತಿಗೆ ಸೆಡ್ಡು ಹೊಡೆದರು. ಅದರಲ್ಲೇನು ತಪ್ಪು? ಯೋಗ ಗುರು ರಾಮ್ ದೇವ್ ಜನರ ನಾಡಿ ಮಿಡಿತಕ್ಕೆ ಪ್ರತಿಸ್ಪಂದಿಸಿ ಸಮಾನಾಸಕ್ತರನ್ನು ಕಲೆ ಹಾಕಿ ರಾಮ ಲೀಲಾ ಮೈದಾನಕ್ಕೆ ಕರೆತಂದರು. ರಾಮಲೀಲಾ ಮೈದಾನ ಬದಲಾವಣೆಯ ‘ತಹ್ರೀರ್’ ಚೌಕ (ಈಜಿಪ್ಟ್) ಆಗಬಹುದು ಎಂದು ನಿರೀಕ್ಷಿಸಿದ್ದ ಜನರಿಗೆ ಕಾಣಲು ಸಿಕ್ಕಿದ್ದು miniature ತಿಯಾನನ್ಮೆನ್ ಚೌಕ. ಬೀಜಿಂಗ್ ನ ಚೌಕದಲ್ಲಿ ಟ್ಯಾಂಕುಗಳು ರಾರಾಜಿಸಿದರೆ ದಿಲ್ಲಿಯ ಮೈದಾನದಲ್ಲಿ lathi ಗಳು ರಾರಾಜಿಸಿದವು.

ಭ್ರಷ್ಟಾಚಾರದ ಬಗ್ಗೆ ಸರಕಾರದ ಅಸಡ್ಡೆ, ಉದಾಸೀನ ನೀತಿಗೆ ಬೇಸತ್ತ ಸಮಾಜ ಸೇವಕ ಅಣ್ಣಾ ಹಜಾರೆ ಅಮರಣಾಂತ ಉಪವಾಸಕ್ಕೆ ಹೊರಟಾಗ ಸರಕಾರ ಗಾಭರಿಯಾಗಿ ಲೋಕ ಪಾಲ್ ಮಸೂದೆ ಮಂಡಿಸಿ ಲಂಚ ರಿಶ್ವತ್ತನ್ನು ಪರಲೋಕ ಪಾಲ್ ಮಾಡ್ತೀವಿ ಎಂದು ನಂಬಿಸಿ ನಾಮ ಎಳೆದ ಸರಕಾರಕ್ಕೆ ಬಿಸಿ ಮುಟ್ಟಿಸಲು ರಾಮ್ ದೇವ್ ತಯಾರಾದಾಗ ಸರಕಾರ ಬೆದರಿತು. ಯೋಗ ಗುರುವಿನ ನೇತೃತ್ವದಲ್ಲಿ ಜಮಾಯಿಸಿದ್ದ ಹತ್ತಾರು ಸಾವಿರ ಜನ ಬಯಸಿದ್ದು ಸರಕಾರದಿಂದ ಒಂದು ಸಿಂಪಲ್ ಆಸನವನ್ನು. ಅದೇ ‘ಬದಲಾವಣೆ’ ಯ ಆಸನ. change. “Change we can believe in” ಇಷ್ಟೇ ಆಗಿತ್ತು ಜನರ ಬೇಡಿಕೆ. ಲೂಟಿ ಮಾಡಿ ದೇಶಾಂತರ ಹೋದ ಗಂಟು ಮರಳಿ ದೇಶಕ್ಕೆ ಬರಲಿ, ಇನ್ನು ಮುಂದೆ ಹೀಗಾಗದಂತೆ ಬೇಲಿ ಕಟ್ಟಿ ಎನ್ನುವ ಸಿಂಪಲ್ ಬೇಡಿಕೆ. ಲಂಚ ಮುಗಿಲು ಮುಟ್ಟಿದೆ, ನೈತಿಕತೆ ಪಾತಾಳ ಅಪ್ಪಿದೆ ಸ್ವಲ್ಪ ಬದಲಾಗಿ ಎಂದಷ್ಟೇ ಆಗಿತ್ತು ಜನರ ಬಯಕೆ. ಸರಕಾರ ಜಪ್ಪಯ್ಯ ಅನ್ನದಿದ್ದಾಗ ಬೇಸತ್ತ ಜನ ತಮಗೆ ತಿಳಿದ ಶಾಂತಿಯುತ ಪ್ರತಿಭಟನೆಯ ಮಾರ್ಗ ಅನುಸರಿಸಿದರು. ಬದಲಾವಣೆ ಎನ್ನುವ ಅತಿ ಸುಲಭದ ಆಸನಕ್ಕೆ ಒಪ್ಪದ ಸರಕಾರ ಜನರ ಮೇಲೆ ಪ್ರಯೋಗಿಸಿದ್ದು ಸ್ವಲ್ಪ ಕ್ಲಿಷ್ಟಕರವಾದ “ಪರಿವೃತ್ತ ಪಾರ್ಶ್ವಕೋನಾಸನ”. ಮೊದಲು cajoling, ನಂತರ ಬೆದರಿಕೆ, ಸ್ವಲ್ಪ ನಂತರ ಅಪವಾದ, ಕೊನೆಗೆ ಬಲಪ್ರಯೋಗ. revolving lateral angle position ಎಂದು ಆಂಗ್ಲ ಭಾಷೆಯಲ್ಲಿ ಕರೆಯಲ್ಪಡುವ ಈ ಆಸನ ಬಹು ಸಲೀಸಾಗಿ ಕೆಲಸಕ್ಕೆ ಬಂತು. ತುರ್ತು ಪರಿಸ್ಥಿತಿಯಲ್ಲೂ ಈ ಆಸನ ಉಪಯೋಗಕ್ಕೆ ಬಂದಿತ್ತು. ಅದರ ನಂತರ ಹಲವು ರಾಜ್ಯಗಳಲ್ಲಿ ಹಲವು ಉದ್ದೇಶಗಳಿಗಾಗಿಯೂ ಈ ಆಸನ handy ಆಗಿ ಬಂತು ಸರಕಾರಗಳಿಗೆ.

ಯಾರಿಗೇ ಆದರೂ ಈ “ಬದಲಾಗು” ಎನ್ನುವ ಆಸನ ಬಹು ಕಷ್ಟಕರ. ಹೊಸ ವರ್ಷದ ಆರಂಭದಲ್ಲೂ, ಹಿರಿಯರಿಂದ ತಿವಿಸಿ ಕೊಂಡಾಗಲೂ ಪಾಲಕರಿಂದ ಉಗಿಸಿ ಕೊಂಡಾಗಲೂ ಈ ಆಸನದ ಮೇಲೆ ಆಸಕ್ತಿ ತೋರಿದರೂ ಅದು ತಾತ್ಕಾಲಿಕ. ಸುಲಭವಾಗಿ ಬಲೆಗೆ ಬೀಳಲೊಲ್ಲದು.

ಇನ್ನೊಂದು ಬೆಳವಣಿಗೆ ಗಮನಿಸಿದಿರಾ? ಭ್ರಷ್ಟ ರಾಜಕಾರಣಿಗಳ ಪಾಪ ತೊಳೆಯಲು ಯೋಗಿಗಳು, ಸಮಾಜ ಸೇವಕರು ಮುಂದೆ ಬರಬೇಕು. ಏಕೆ, ಭ್ರಷ್ಟಾಚಾರಿಗಳಲ್ಲದ ರಾಜಕಾರಣಿಗಳು extinct ಆಗಿ ಹೋದರೆ ‘ಡೋಡೋ’ ಪಕ್ಷಿ ಥರ? ಈ ಬಾಬಾ ಮತ್ತು ಸಮಾಜ ಸೇವಕರನ್ನು ಬೆಂಬಲಿಸುತ್ತಿರುವ, ಅವರ ಪರವಾಗಿ ಅರಚುತ್ತಿರುವ ರಾಜಕಾರಣಿಗಳೇಕೆ ಈ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸರು?

ಒಂದು digression: ಈ ಉಪವಾಸದ ಗಲಾಟೆ ಮಧ್ಯೆ ಯಾವುದೇ ತಂಟೆಗೂ ಹೋಗದೆ ತನ್ನ ಪಾಡಿಗೆ ತಾನಿರುವ ಕಂಪ್ಯೂಟರ್ ತಂತ್ರಾಂಶವೊಂದು ವಿವಾದಕ್ಕೆ ಎಳೆಯಲ್ಪಟ್ಟಿದ್ದು RSS ಹಿನ್ನೆಲೆ ಬಾಬಾರಿಗೆ ಇದೆ ಎನ್ನುವ ಅಪವಾದ ನನ್ನಂಥವರನ್ನು ತಬ್ಬಿಬ್ಬುಗೊಳಿಸಿದೆ. ಹೌದು rss ಗೂ ಬಾಬಾ ಗೂ ಇರೋ ಸಂಬಂಧ ಒಂದು ರೀತಿಯ ಶ್ರೀ ಕೃಷ್ಣ ಜನ್ಮಾಷ್ಟಮಿ ಗೂ ಇಮಾಂ ಸಾಹೇಬರಿಗೂ ಇರುವ ವ್ಯಾತ್ಯಾಸದ ರೀತಿ ಅಲ್ಲವೇ? RSS ಎಂದರೆ Really Simple Syndication ಎನ್ನುವ ಒಂದು ಚೊಕ್ಕ ಉಪಯೋಗಿ ತಂತ್ರಾಂಶ. ನಮಗೆ ಇಷ್ಟವಾದ ತಾಣಗಳ LIVE FEED ಗಳನ್ನು ಸುಲಭವಾಗಿ ನೀಡುವ ಈ ತಂತ್ರಾಂಶಕ್ಕೂ ಬಾಬಾ ರಿಗೂ ಇರಬಹುದಾದ ಸಂಬಂಧದ ಬಗ್ಗೆ ಯೋಚಿಸುತ್ತಾ ನನ್ನೀ ಲೇಖನ ಮುಕ್ತಾಯ.

ಚಿತ್ರ ಕೃಪೆ: http://janetyogahut.blogspot.com

ನಮ್ಮ ರಾಜ್ಯದ ರಾಜಕಾರಣ

ಕರ್ನಾಟಕದ ಕಿಣ್ಣರು ಗಣಿತ ಮತ್ತು ಜಾಗ್ರಫಿ ವಿಷಯಗಳಲ್ಲಿ ಬೇರೆಲ್ಲಾ ರಾಜ್ಯಗಳ ಕಿಣ್ಣ ರಿಗಿಂತ ಮುಂದೆ ಅಂತೆ – “ಅಧ್ಯಯನ” (ದಿನವೂ ನಾವು ಓದಿದ ದಿನಪತ್ರಿಕೆಯ ಅಧ್ಯಯನ).

ಗಡಗಡ ನಡುಗಿಸುವ ಗಣಿತ, ಜೋಂಪು ಹತ್ತಿಸುವ ಜಾಗ್ರಫಿ ವಿಷಯಗಳಲ್ಲಿ ನಮ್ಮ ಮಕ್ಕಳು ಮುಂದು ಎಂದರೆ ನಮ್ಮ “ಗುರು ದೇವೋಭವಃ” ಸಮುದಾಯ ಹಗಲು ರಾತ್ರಿ ಸಂಶೋಧನೆ ಮಾಡಿ ಹೊಸತನ್ನೇನಾದರೂ ಕಂಡು ಹಿಡಿದಿರಬೇಕು ಗಣಿತ ವನ್ನು amusing ಮಾಡಲು ಮತ್ತು ಜಾಗ್ರಫಿ ಯನ್ನು interesting ಆಗಿಸಲು. ಬಿಡ್ತು ಅನ್ನಿ, ಹಾಗೇನಿಲ್ಲ. ಸರಕಾರ ವಿದ್ಯೆ ಕೊಡುವ ಸಮುದಾಯಕ್ಕೆ ಕೊಡುವ ಸಂಬಳದ ಚೆಂದ ನೋಡಿದರೆ ಅಂಥ ಕಾಲ ಇನ್ನೂ ಬಹು ದೂರ. ಕಲಿಕೆಯಲ್ಲಿ innovation ತರುವ ಮಾತಿರಲಿ, ಬಾರುಕೋಲಿನ ಪ್ರಯೋಗ ಇಲ್ಲದೆ ಪಾಠ ಹೇಳಿದ್ದರೆ ಸಾಕಿತ್ತು ಶಿಕ್ಷಕರು. ಗಣಿತದಲ್ಲೂ, ಭೂಗೋಳದಲ್ಲೂ ನಮ್ಮ ಮಕ್ಕಳು ಮುಂದೆ ಎಂದ ಮಾತಿನಲ್ಲಿ ರಾಜಕಾರಣ ಅಡಗಿದೆ. ಪ್ರತಿಯೊಂದರಲ್ಲೂ ರಾಜಕಾರಣ ಕಾಣುವ ಸಮಾಜ ತಾನೆ ನಮ್ಮದು?

ಕರ್ನಾಟಕದ ರಾಜಕೀಯ ದಿನದಿಂದ ದಿನಕ್ಕೆ ಬಗೆಯ ಬಗೆಯ ಮನೋರಂಜನೆಯನ್ನು ಒದಗಿಸುತ್ತಿದ್ದು ಬಿಡುವಿನ ಸಮಯವನ್ನು ವ್ಯರ್ಥ ಮಾಡಲು ಟೀವೀಯ ಮೊರೆಯೋ, ಅಂತರ್ಜಾಲದ ಜಾಲದಲ್ಲೋ ಬೀಳಬೇಕಿಲ್ಲ ಕನ್ನಡಿಗ. ನಮ್ಮ ರಾಜಕಾರಣ ಎನ್ನುವುದು ನಂಬರ್ ಗೇಂ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭಾಜಪ ನಿಚ್ಚಳ ಬಹುಮತ ಸಾಧಿಸಿದರೂ ಅದನ್ನು ನೆಮ್ಮದಿಯಾಗಿ ಆಳಲು ಬಿಡಲು ಒಲ್ಲೆ ಎನ್ನುವ ಗುಂಪು ಆಗಾಗ ದೊಡ್ಡ ದೊಡ್ಡ ಸದ್ದನ್ನು ಮಾತ್ರವಲ್ಲ, ಎಲ್ಲಾ ಬಗೆಯ ಟ್ರಿಕ್ಕುಗಳನ್ನು ತನ್ನ ಬಗಲಿನಿಂದ ಎಸೆಯುತ್ತಲೇ ಇರುತ್ತದೆ. ಒಂದೆಂಟು ಅತೃಪ್ತ ಶಾಸಕರನ್ನು ನಂದಿ ಬೆಟ್ಟಕ್ಕೋ, ಅದರಲ್ಲೂ ಅತೃಪ್ತರಾದರೆ ಇನ್ನೂ ಹೆಚ್ಚಿನ excitement ಗಾಗಿ ಗೋವಾ ಪರ್ಯಟನೆ ಗೋ ಕಳಿಸಿ ನಮ್ಮ ಸನ್ಮಾನ್ಯ ಮು. ಮಂತ್ರಿಗಳು ಕಣ್ಣೇರು ಹಾಕುವಂತೆ ಮಾಡಿ sadist ಮಜಾ ತೆಗೆದು ಕೊಳ್ಳೋದು. ದಿನ ಬೆಳಗಾದರೆ ಸಾಕು ಅಂಕಿ ಸಂಖ್ಯೆಗಳು ಏರು ಪೇರಾಗುತ್ತವೆ, ಥೇಟ್ ನಮ್ಮ BSE Index ಥರ. ಸ್ಟಾಕ್ ಎಕ್ಸ್ಚೇಂಜ್ ರೀತಿ. ಬೆಳಿಗ್ಗೆ ಸಂಖ್ಯೆಯಲ್ಲಿ ವೃದ್ಧಿ ಕಂಡರೆ ಸಂಜೆಯಾಗುತ್ತಲೇ ಇಳಿತ. ಅಥವಾ “ವೈಸೀ ವರ್ಸಾ”. ಹೀಗೆ ದಿನವೂ ಕೂಡುತ್ತಾ, ಕಳೆಯುತ್ತಾ ಏರುಪೇರಾಗುವ, ಸಂಖ್ಯೆಗಳನ್ನು ನೆನಪಿನಲ್ಲಿ ಇಡಬೇಕು, ಇಲ್ಲದಿದ್ದರೆ ಎರಡು ತಿಂಗಳಿಗೊಮ್ಮೆ ಬರುವ ಟೆಸ್ಟು ಗಳಲ್ಲಿ ನಮ್ಮ ಮು. ಮಂತ್ರಿ ಯಾರು ಎಂದರೆ ತಿಳಿದಿರಲೇಬೇಕಲ್ಲ. ಇಲ್ಲದಿದ್ದರೆ ಸಿಗುವ ಒಂದೇ ಒಂದು ಅಂಕಕ್ಕೂ ಚ್ಯುತಿ. ಹೀಗೆ ಸಂಖ್ಯೆಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಹೆಣಗಾಡುತ್ತಾ ಗಣಿತವನ್ನು ಕರಗತವಾಗಿಸಿ ಕೊಂಡರು ನಮ್ಮ ಮಕ್ಕಳು. ಅದರೊಂದಿಗೆ ಸಂಭವನೀಯತೆ ಎನ್ನುವ ವಿಷ್ಯ ಕೂಡಾ.

ಒಂದು ಡೇರೆಯಿಂದ ಮತ್ತೊಂದು ಡೇರೆ ಗೆ ಕೆಲವು ಶಾಸಕರು ಜಿಗಿದರೆ ಯಾರು ಮು. ಮಂತ್ರಿ ಆಗಬಹುದು ಎನ್ನುವ ಸಂಭವನೀಯತೆ. ಸಂಭವನೀಯತೆಯಲ್ಲಿ ನಾಣ್ಯ ಚಿಮ್ಮುವ ಉದಾಹರಣೆ ಕೊಟ್ಟರೆ ರಾಜಕಾರಣದ ಸಂಭವನೀಯತೆಯಲ್ಲಿ ಡೇರೆ ಜಿಗಿಯುವ ಉದಾಹರಣೆ. ಅತೃಪ್ತ ಸದಸ್ಯರನ್ನು round the world, ಕ್ಷಮಿಸಿ, round the state ಟೂರಿಗೋ, ಅಥವಾ across the sate sojourn ಗೋ ಕಳಿಸಿದಾಗ ಜಾಗ್ರಫಿ ಸಹ ಮೂಡಿ ಬಂತು ತೆರೆಯ ಮೇಲೆ. ಯಾವ ಯಾವ ರೆಸಾರ್ಟ್ ಎಲ್ಲಿದೆ, ಅಡಗುತಾಣಗಳ ವಿಳಾಸ ಇವೆಲ್ಲವನ್ನೂ ತಿಳಿದಾಗ ಜಾಗ್ರಫಿ ಸಹ ಕರಗತವಾಗದೆ ಇದ್ದೀತೆ? ಅಷ್ಟೇ ಅಲ್ಲ, ಟೂರ್ ಹೊಡೆಸಿ, ಆಳಲು ಬೇಕಾದ ಮಾಂತ್ರಿಕ ಸಂಖ್ಯೆಯನ್ನು ಹೊಂದಿಸಿ, ನಂತರ ನಮ್ಮ ದೇಶದ ಅಧ್ಯಕ್ಷೆ ಯವರ ಹತ್ತಿರ ಪರೇಡ್ ಸಹ ಮಾಡಿಸಬೇಕು. ಅದಕ್ಕೆ ದಿಲ್ಲಿಗೆ ಹೋಗಬೇಕು. ಜಾಗ್ರಫಿ ಜ್ಞಾನ ವಿಸ್ತಾರ ಆಯಿತು ನೋಡಿ. ಆ ಪರೇಡ್ ಸಮಯ ಬರೀ ಮು. ಮಂತ್ರಿಗಳೂ, ಶಾಸಕ ಮಹೋದಯರೂ ಇದ್ದರೆ ಸಾಲದು, ಅವರನ್ನು ಕಾಯಲು ಪಕ್ಷದ ವತಿಯಿಂದ ವರಿಷ್ಠ ರೂ ಬರಬೇಕು, ವಿರೋಧೀ ಪಾಳಯ ದೂರದಲ್ಲಿ ನಿಂತು ಗೋವಾದ ಗೋಲ್ದನ್ ಬೀಚ್ ನ ಚಿತ್ರವನ್ನೋ, ನಾನ್ ಸ್ಟಾಪ್ ಅಂಕೆಗಳಿರುವ ಚೆಕ್ ನ ಫೋಟೋ ಕಾಪಿಯನ್ನೋ ತೋರಿಸಿ ಈಚೆ ಕಡೆ ಎಳೆದುಕೊಂಡು ಬಿಟ್ಟರೆ? ಪರೇಡ್ ಒಂದು ರೀತಿಯ ಮುಜುಗರ ತರುವ ಕಪ್ಪೆ ತೂಕವಾಗಿ ಪರಿವರ್ತನೆ ಆಗಬಾರದು ನೋಡಿ.

ನಮ್ಮ ಈ ರಾಜಕೀಯ ಅವ್ಯವಸ್ಥೆಗೆ ಪ್ರಜಾಪ್ರಭುತ್ವ ಎನ್ನುವ ಹೆಸರೇ ಒಂದು ‘misnomer’. ಅಪಪ್ರಯೋಗ. ಈ ವ್ಯವಸ್ಥೆಯಲ್ಲಿ ಪ್ರಜೆ ಪ್ರಭುವಾಗೋದು ಮತದಾನ ಕೇಂದ್ರದ ಕಡೆಗಿನ ನಡಿಗೆ ವೇಳೆ ಮಾತ್ರ. ಅವನನ್ನು ಕಳ್ಳ ನಗೆಯಿಂದ, ಓಲೈಸಲು ಡಜನ್ ಗಟ್ಟಲೆ ಜನ. ಮತದಾನವಾಯಿತೋ, ಆ ಕೂಡಲೇ ಅವನು ಹತಾಶ ಏಕಾಂಗಿ, ಮುಂದೆ ಅನಾವರಣಗೊಳ್ಳಲಿರುವ ನಾಟಕದ ಪರದೆ ಮುಂದೆ.

“ನೀವು ಕರೆಮಾಡಿದ ಚಂದಾದಾರರು…”

“ನೀವು ಕರೆಮಾಡಿದ ಚಂದಾದಾರರು ನಿಮ್ಮ ಯಾವುದೇ ಕರೆಗಳಿಗೂ ಪ್ರತಿಕ್ರಯಿಸುತ್ತಿಲ್ಲ. ದಯವಿಟ್ಟು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ”. – ಮೊಬೈಲ್ ಇಟ್ಟುಕೊಂಡ ಯಾವನಿಗೂ ಈ ಸಂದೇಶ ಬಾಯಿ ಪಾಠವೇ. ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಹೆಚ್ಚೂ ಕಡಿಮೆ ಎಲ್ಲಾ ಸ್ಥಾನಗಳಿಗೂ ಸ್ಪರ್ದಿಸಿ ಒಂದರಲ್ಲಾದರೂ ಗೆದ್ದು ಖಾತೆ ತೆರೆಯುವ ಭಾರತದ ಪ್ರತಿಪಕ್ಷದ ಆಸೆಗೆ ಕೇರಳದ ಜನ ಓಗೊಡದೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರದ ಚುಕ್ಕಾಣಿ ನೀಡಿದ್ದಾರೆ.   ಹೀಗೆ, ಕೇರಳದಲ್ಲಿ ಈ ಸಲವೂ ಭಾಜಪಕ್ಕೆ ಸಿಕ್ಕ ಸಂದೇಶ ನಾವು ಕೇಳುವ ಮೊಬೈಲ್ ಸಂದೇಶದ ರೀತಿಯೇ ಆಯಿತು. ಈ unmistakable ಸಂದೇಶ ಕೊಟ್ಟವ ಮತದಾರ ಮಹೋದಯ. ನಿರಾಶೆಯ ಸಂಗತಿ ಏನೆಂದರೆ ಈ “ಸ್ವಲ್ಪ ಸಮಯ” ಕಾಯುವಿಕೆ ಐದು ವರ್ಷಗಳಷ್ಟು ಸುದೀರ್ಘ.

 ಅತ್ತ ತಮಿಳು ನಾಡಿನಲ್ಲೂ incumbent ಪಕ್ಷ ಸೋತು ಸುಣ್ಣವಾಯಿತು. 3G ಉಷ್ಣತೆ ಸ್ವಲ್ಪ ಜೋರಾಗಿಯೇ ತಗುಲಿಸಿಕೊಂಡ ದ್ರಾವಿಡ ಮುನ್ನೇಟ್ರಂ ಕಳಗಂ ತರಗೆಲೆಯಂತೆ ಉದುರಿತು ಜಯಲಲಿತಾ ಬಿರುಗಾಳಿಗೆ.  ಇಲ್ಲೂ ಭಾರತದ ಅತಿ ದೊಡ್ಡ ಪ್ರತಿಪಕ್ಷಕ್ಕೆ ಅತಿ ದೊಡ್ಡ ನಿರಾಶೆಯೇ ಕಾದಿತ್ತು. ಹೀಗೆ ಕರ್ನಾಟಕವನ್ನು ಬಿಟ್ಟರೆ ದಕ್ಷಿಣದ ಯಾವುದೇ ರಾಜ್ಯದ ಮತದಾರ ಈ ಪಕ್ಷಕ್ಕೆ ಮಣೆ ಹಾಕದಿರಲು ಕಾರಣವೇನು? ಹಾಗೆಯೆ ಕರ್ನಾಟಕದಲ್ಲಿ ಒಂದು ಕಾಲದಲ್ಲಿ ಶಿಕಾರಿಪುರದ ಕೇವಲ ಒಂದು ಸ್ಥಾನದಿಂದ ಹಿಡಿದು ಈಗಿನ ಅಧಿಕಾರದ ಗದ್ದುಗೆ ಏರುವ ಭಾಜಪದ ಪಯಣದ ಯಶಸ್ಸಿಗೆ ಕಾರಣವೇನು? ಇತರೆ ಪಕ್ಷಗಳ ಅಸಡ್ಡೆ, ಅಧಿಕಾರ ದಾಹದ ಕಾರಣ ಬೇಸತ್ತ ಕರುನಾಡಿನ ಮತದಾರ last straw ಆಗಿ ಭಾಜಪವನ್ನು ಅಧಿಕಾರಕ್ಕೆ ಏರಿಸಿರಬಹುದೇ?

೯೯೯೯

ಒಂಭತ್ತು ಸಾವಿರದ ಒಂಭೈನೂರ ತೊಂಭತ್ತೊಂಭತ್ತು, (೯೯೯ ); ಈ ಫಿಗರ್ ನೋಡಿ “ಬಾಟಾ” ದವರ ಎಕ್ಕಡ ಅಥವಾ ಬೂಟ್ ಗಳು ನೆನಪಿಗೆ ಬಂತೇ? ಹೌದು ಅವರೇ ತಾನೇ ಈ ರೀತಿಯ ಫುಲ್ ನಂಬರ್ ಗಳ ದಡದ ತುದಿಗೆ ಬಂದು ನಿಲ್ಲೋದು? ಸಾವಿರ ಎಂದು ಬಿಟ್ಟರೆ ಜನ ಹೌಹಾರುವರು ಎಂದು ೯೯.೯೯ ಅಂತ ಬೆಲೆ ಇಟ್ಟು ನೂರು ರೂಪಾಯಿ ಪೂರ್ತಿಯಾಗಿ ಪೀಕಿಸಿ ಕೊಂಡು ಒಂದು ಪೈಸೆಯ ಚೇಂಜ್ ಸಹ ಕೊಡದೆ ನೂರು ರೂಪಾಯಿ ಕೊಟ್ಟೆ ಈ ಚಪ್ಪಲಿಗೆ ಎಂದು ಹೇಳಲೂ ಭಯ ಆಗುವಂತೆ ಮಾಡಿದ್ದು ? ನೂರು ರೂಪಾಯಿಗೆ ಒಂದು ಪೈಸೆ ಕಡಿಮೆ ಕೊಟ್ಟು ನೂರು ಕೊಟ್ಟೆ ಎಂದು ಹೇಳೋದು ನಾಗರೀಕರ ಲಕ್ಷಣ ಅಲ್ಲ, ಅಲ್ಲವೇ? ಹಾಳು ಪುರಾಣ ಬಿಡಿ, ಈ ೯೯೯೯ ಬಾಟಾ ದ ಎಕ್ಕಡ ಬೆಲೆಯೂ ಅಲ್ಲ, ಯಾವುದೋ ಎಮೆರ್ಜೆನ್ಸಿ ನಂಬರ್ ಸಹ ಅಲ್ಲ. ಇದು ನನ್ನ ಪ್ರೀತಿಯ ಊರಿನ, ಪ್ರೀತಿಯ ಹಳೇ ಸೇತುವೆ ಮೇಲೆ ದೌಡಾಯಿಸಿದ ಜನರ ಸಂಖ್ಯೆ. ಅಂದರೆ ಹಳೇ ಸೇತುವೆ ಬ್ಲಾಗ್ ಅನ್ನು ಇದುವರೆಗೆ ೯೯೯೯ ಜನ ನೋಡಿದ್ದಾರೆ. ಒಂದು ರೀತಿಯ ಶುಭ ಸಂಖ್ಯೆ, ಈ ಶುಭ ಕಾಮನ ಹುಣ್ಣಿಮೆಯಂದು. ಸೂಪರ್ ಮೂನ್ ಹೇಳಿ ಕೊಳ್ಳುವಂಥ ಸೂಪರ್ ಆಗಿ ಕಂಗೊಳಿಸದಿದ್ದರೂ ಈ ಸಂಖ್ಯೆ ಮಾತ್ರ ನನ್ನಲ್ಲಿ ಒಂದು ತೆರನಾದ ಸಂಚಲನ ತಂದಿದ್ದಂತೂ ನಿಜವೇ.  

ನನ್ನ ಬರಹ ನೋಡಿದ ಜನರಿಗೆ ನಾನು ಬರಹಗಾರ ಅಲ್ಲ ಎಂದು ಅನ್ನಿಸಿದರೆ ನನ್ನ ಮೇಲೆ ಸೂಪರ್ ಮೂನ್ ಆಗಲಿ, ವಿಶಾಲವಾದ ಆಗಸವಾಗಲಿ ಕಳಚಿ ಬೀಳೋಲ್ಲ. ನನ್ನಲ್ಲಿ ಕೀಳರಿಮೆ ಸಹ ಮನೆ ಮಾಡೋಲ್ಲ. ಯಾರೋ ಒಬ್ಬರು ಹೇಳಿದಂತೆ ನಾನು ಗಟ್ಟಿ ಮನುಷ್ಯ. ಎಷ್ಟಿದ್ದರೂ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಇರುವ ನಗರಿಯವನಲ್ಲವೇ ನಾನು? 

ಪುಕ್ಕಟೆ ಸಿಗುವ ಆಸೆಗೆ ಬಲಿ ಬಿದ್ದು ಶುರು ಮಾಡಿದ್ದು ಈ ಧಂಧೆ. ಬರೆಯುವ ಧಂಧೆ.  ಅದೇನು ಪುಕ್ಕಟೆ ಅಂತ ಜೊಳ್ಳು ಸುರಿಸಿದಿರಾ? ನಾಚಿ ಕೊಳ್ಳಬೇಡಿ, ಮನುಷ್ಯನ ಜಾಯಮಾನವೇ ಅದು. ಪುಕ್ಕಟೆ ಸಿಕ್ಕಿದ್ದು ಬ್ಲಾಗ್ ಆರಂಭಿಸುವ ಸೌಲಭ್ಯ.  ಕರ್ನಾಟಕ ರಾಜ್ಯದ ೧೦ ಲಕ್ಷದ, ೧೦ ಲಕ್ಷ ಪೂರ್ತಿ ಕೈಗೆ ಬರದ  ಲಾಟರಿಯಂತೂ ಅಲ್ಲ. ವರ್ಡ್ಪ್ರೆಸ್, ಬ್ಲಾಗ್ಸ್ಪಾಟ್, “tumblr” ಮುಂತಾದವರು ಜನರಿಗೆ ತಮ್ಮ ಬರವಣಿಗೆಯ ತೀಟೆ ತೀರಿಸಿಕೊಳ್ಳುವುದಕ್ಕಾಗಿ ಬ್ಲಾಗ್ ಸೈಟ್ ಆರಂಭಿಸಿಕೊಳ್ಳುವ ಸವಲತ್ತು ನೀಡಿದಾಗ ಮುಗಿಬಿದ್ದು ಕೈ ಚಾಚಿದವರಲ್ಲಿ ನಾನೂ ಒಬ್ಬ.  ಬ್ಲಾಗಿಗೊಂದು ಹೆಸರು ಕೊಡಬೇಕು. ಚಿತ್ರ ವಿಚಿತ್ರ ಹೆಸರುಗಳು ಮನಃ ಪಟಲದ ಮೇಲೆ ಹಾದು ಹೋದರೂ ಸೊರಗಿದ ಭದ್ರಾ ನದಿಯ ಸಂಗಾತಿ ಹಳೇ ಸೇತುವೆ ಹೆಸರನ್ನು ಇಟ್ಟೆ. ಶಾಲೆಗೆ ಚಕ್ಕರ್ ಹೊಡೆದು ಇದೇ ಹಳೇ ಸೇತುವೆ ದಾಟಿ ಕನಕ ಮಂಟಪಕ್ಕೆ ಬಂದು ಪುಢಾರಿಗಳ ಭಾಷಣ ಕೇಳುತ್ತಿದ್ದೆ. ಎಲ್ರೂ ಚಕ್ಕರ್ ಹೊಡೆದು ಸಿನೆಮಾಕ್ಕೂ, ಕ್ರಿಕೆಟ್ ಆಡೋಕ್ಕೂ ಹೋದ್ರೆ ಈ ಅಬ್ಬೇಪಾರಿ ಏನು ಪುಡ್ಹಾರಿ, ಗಿಡ್ಹಾರಿ ಅಂತಿದ್ದಾನೆ ಎಂದು ಮೂಗಿನ ಮೇಲೆ ಬೆರಳಿಡ ಬೇಡಿ. ರಾಜಕಾರಣ ಎಂದರೆ ೧೯೭೭ ರಿಂದ ನನಗೆ ತುಂಬಾ ಇಷ್ಟ. ನನ್ನ ಪಕ್ಷ ಜನತಾ ಪಕ್ಷ. ಮೊರಾರ್ಜಿ ಭಕ್ತ. ಚರಣ್ ಸಿಂಗ್ ಮೊರಾರ್ಜಿಗೆ ಕೈ ಕೊಟ್ಟಾಗ ತಲೆ ಮೇಲೆ ಕೈಹೊತ್ತು ಕೂತ ಮಿಡ್ಲ್ ಸ್ಕೂಲ್ ಬಾಲಕ ನಾನು. ಮಾರ್ವಾಡಿ ಸ್ನೇಹಿತನೊಬ್ಬ ಇಂದಿರಾ ನಮ್ ತಾಯಿ ಎಂದಾಗ, ನಾನೇಕೆ ಇವನನ್ನು ಮೀರಿಸಬಾರದು ಎಂದು ಮೊರಾರ್ಜಿ ನಮ್ಮಪ್ಪ ಎಂದು ಹೇಳಿ embarrass ಆದವನು.  ನನ್ನ ಬ್ಲಾಗ್ ನ “ಹಳೇ ಸೇತುವೆ” ಹೆಸರು ಕೆಲವರಿಗೆ ಹಿಡಿಸಿತೂ ಕೂಡಾ, ಅದರೊಂದಿಗೆ ಸವಾರಿಯಾಗಿ ಬಂದ ಬ್ಲಾಗ್ ಪೋಸ್ಟ್ ಗಳೂ ಕೆಲವರಿಗೆ ಇಷ್ಟವಾದವು. ಇನ್ನೂ ಕೆಲವರಿಗೆ “ತುಂಬಾ” ಇಷ್ಟವಾಗಿ ಅಜೀರ್ಣಕ್ಕೂ ದಾರಿ ಮಾಡಿ ಕೊಟ್ಟಿತು. ಒಂದಂತೂ ಸತ್ಯ, ಮೆಚ್ಚಿದವರು, ಮೆಚ್ಚದವರು ನನ್ನಲ್ಲಿ ಹುರುಪನ್ನಂತೂ ತುಂಬಿದರು ನನ್ನ ಬರಹ ಮುಂದುವರೆಯಲಿ ಎಂದು. ಕನ್ನಡಿಗ ಉದಾರಿ, ಸಹೃದಯಿ ಎನ್ನುವ ಮಾತಿಗೆ ನನ್ನ ಬಡ, ಸುಣ್ಣದ ಕಲ್ಲಿನ ಸೇತುವೆಗೆ ಬಂದ ಪ್ರತಿಕ್ರಿಯೆಗಳೇ ಸಾಕ್ಷಿ.   

ಮೆಚ್ಚಿದವರಿಗೂ, ಮೆಚ್ಚದವರಿಗೂ ನನ್ನ ಸವಿನಯ, ಗೌರವಪೂರ್ವಕ  ಪ್ರಣಾಮಗಳು.