ಇವನ ಚೆಂದ ಸ್ವಲ್ಪ ನೋಡಿ…

ಜೀರುಂಡೆ ಯನ್ನು ಹಿಡಿದು ಕೊಂಡು ಗೂಡು ಸೇರಿದ ಈ ಬೆಟ್ಟದ ನೀಲಿ ಹಕ್ಕಿ (mountain bluebird), ಮನಸ್ಸು ಬದಲಾಯಿಸಿ ಜೀರುಂಡೆ ಯನ್ನು ಹೆಕ್ಕಿ ಹೊರ ಹಾರಲು ತಯಾರಾಗಿ ನಿಂತಿದ್ದಾನಂತೆ. ಎಷ್ಟು ಛಾನ್ದ್ ಅದಾನ್ ನೋಡಿ ಇವ. ಅಲ್ವರ?  ಇವ ‘ಇವನೋ’ ‘ಇವಳೋ’ ಅಂತ ನಿಂಗೆನ್ಗೊತ್ತು ಅಂತಾ ಮಾತ್ರ ಕೇಳ್ಬ್ಯಾಡಿ, ಹೀಗೇ ಜೇಡನ ಗುಡಿಸಲು ಗುಡಿಸುವಾಗ ಎಡವಿದ ತಾಣದಲ್ಲಿ ಇದರ ಉಲ್ಲೇಖ ಇತ್ತು, ವಿಧೇಯತೆಯಿಂದ ಭಟ್ಟಿ ಇಳಿಸಿದ್ದೇನೆ. Lee Rentz ರವರ “ನಿಸ (ಸ್ವ)ರ್ಗ’ ಸೀಮಿತ ಬ್ಲಾಗಿನಲ್ಲಿ  ಕಂಡದ್ದನ್ನು ದಾಖಲಿಸಿದ್ದೇನೆ. ಈ ಬ್ಲಾಗ್ ನಲ್ಲಿ ಅದ್ಭುತವಾದ ಚಿತ್ರಗಳಿವೆ, ನಿಸರ್ಗದ ಬಗೆಗಿನ ಪ್ರೀತಿ, ಆದರ ಉಕ್ಕಿ ಹರಿಯುತ್ತಿದೆ. ನಾವು ದೂರ ಹೋಗೋ ಮಾತಿರಲಿ, ಹಿತ್ತಲಿನ ಸೌಂದರ್ಯವನ್ನು ಆಸ್ಥೆಯಿಂದ ಗಮನಿಸಿದ್ದೇವೆಯೇ? ದಾಖಲಿಸಿದ್ದೇವೆಯೇ?

pic courtesy: http://leerentz.wordpress.com/2011/06/09/wenas-audubon-campout-chasing-birds-and-grasshoppers/

Advertisements

(ಯಶಸ್ವಿಯಾಗಿ) ಬರೆಯಲು ಮೂರು ಸೂತ್ರಗಳು

ಬರಹದಲ್ಲಿ ಯಶಸ್ವಿಯಾಗಲು ಮೂರು ಸೂತ್ರಗಳಿವೆ.ಅವುಗಳ ಬಗ್ಗೆ ತಿಳಿಯುವ ಮೊದಲು ಒಂದು ನೋಟ ಬೀರೋಣ ನಮ್ಮ ಆಕಾಂಕ್ಷೆಯ ಬಗ್ಗೆ.

ಬರೆಯಬೇಕು ಎನ್ನುವ ಹಂಬಲ, ಚಪಲ ಸಾಮಾನ್ಯವಾಗಿ ಎಲ್ಲರಲ್ಲೂ ಇದ್ದಿದ್ದೇ. ಆದರೆ ಕೆಲವರು ಬರವಣಿಗೆಯನ್ನು ಎಲ್ಲಿಂದ ಆರಂಭಿಸಬೇಕು ಎಂದು ತಿಳಿಯದೆ ಭಾವನೆಗಳನ್ನು ತಮ್ಮಲ್ಲೇ ಇಟ್ಟು ಕೊಂಡಿರುತ್ತಾರೆ. ತಾವು ಬರೆದದ್ದನ್ನೆಲ್ಲಾ ಪತ್ರಿಕೆಗಳು ಪ್ರಕಟಿಸಬೇಕೆಂದೇನೂ ಇಲ್ಲವಲ್ಲ. ಆದರೆ ಅಂತರ್ಜಾಲದ ಉಗಮದೊಂದಿಗೆ ಬರೆಯುವವರಿಗೆ ಒಂದು ವೇದಿಕೆಯಾಗಿ, ವರವಾಗಿ ಬಂದವು ಬ್ಲಾಗ್ ಗಳು. ಚಿಕ್ಕಾಸಿನ ಖರ್ಚಿಲ್ಲದೆ ತಮಗೆ ಇಷ್ಟವಾದ ಹೆಸರಿನಲ್ಲಿ ಬ್ಲಾಗೊಂದನ್ನು ಆರಂಭಿಸಿಕೊಂಡು ನಮಗೆ ತೋಚಿದ್ದನ್ನು ಬರೆಯಬಹುದು. ಅಥವಾ ತಾವು ಬರೆದದ್ದು ಸಾರ್ವಜನಿಕರಿಗೆ ಕಾಣಿಸಬಾರದು ಎಂದೇನಾದರೂ ಆಸೆಯಿದ್ದರೆ ಅದಕ್ಕೂ ಹಾಕಬಹುದು ಕಡಿವಾಣವ ಸೆಟ್ಟಿಂಗ್ಸ್ ಮೂಲಕ.

ಸರಿ ಬ್ಲಾಗ್ ಏನೋ ತೆರೆದಾಯಿತು. ಬರೆಯಲು ಈಗ ಲಾಂಚಿಂಗ್ ಪ್ಯಾಡ್ ಆಗಿ ಬ್ಲಾಗ್ ಒಂದನ್ನು ತೆರೆದಾಯಿತು. ಜಿಗಿಯೋದು ಹೇಗೆ?

ಈಜಲು ಕಲಿಯಬೇಕೆಂದರೆ ಧುಮುಕಬೇಕು ನೀರಿಗೆ. ಬರೆಯಬೇಕು ಎಂದೆನ್ನಿಸಿದರೆ ಕೂಡಲೇ ಒಂದು ಪ್ರಶಸ್ತವಾದ ಸ್ಥಳವನ್ನ ಆರಿಸಿಕೊಂಡು ತೊಡಗಬೇಕು ಪೋಣಿಸಲು ಅಕ್ಷರಗಳನ್ನು. ಆದರೆ ಈ ಕೆಲಸ ಹೇಳಿದಷ್ಟು ಸುಲಭವಲ್ಲದಿದ್ದರೂ ಬರೆಯುವ ಹಂಬಲವಿದ್ದರೆ ಬರೆಯಲೇಬೇಕು. we do not write because we want to; we write because we have to ಸುಪ್ರಸಿದ್ಧ ಸಾಹಿತಿ “ಸಾಮರ್ಸೆಟ್ ಮಾಹಂ” (somerset maugham) ಅವರ ಮಾತುಗಳಿವು.  

ಇನ್ನು ಬರೆಯಲು ನಮ್ಮನ್ನು ನಾವು ತೊಡಗಿಸಿಕೊಂಡರೆ ಬೇಕಾಗುವ ಅವಶ್ಯಕತೆಗಳಲ್ಲಿ “ಓದು” ಮೊಟ್ಟ ಮೊದಲನೆಯದು. ನಮಗಿಷ್ಟವಾದ ಲೇಖಕರ ಲೇಖನ, ಬರಹಗಳನ್ನ ಓದಿ ಅವರು ಬರೆಯುವ ಶೈಲಿ, ಪದ ಪ್ರಯೋಗ ಮುಂತಾದುವುಗಳನ್ನು ಗಮನಿಸಿ ನಮ್ಮ ಬರಹಗಳಲ್ಲಿ ಅವನ್ನು ಅಳವಡಿಸಿಕೊಂಡರೆ ನಮ್ಮ ಬರಹದ ಕಡೆಗಿನ ಪ್ರಯಾಣ ಸುಖಕರ. ಆಂಗ್ಲ ಸಾಹಿತ್ಯದಲ್ಲಿ ಆಸಕ್ತಿಯುಳ್ಳವರು ಮೇಲೆ ಹೇಳಿದ Somerset  Maugham ಅವರ ಕಥೆಗಳನ್ನ ಓದಿದರೆ ಬಹಳಷ್ಟನ್ನು ಕಲಿಯಬಹುದು. ಮಾಹಂ ಅವರ of human bondage ನನ್ನನ್ನು ಕಾಡಿದ, ಮನ ಕರಗಿಸಿದ ಪುಸ್ತಕಗಳಲ್ಲೊಂದು. ಮತ್ತೊಂದು Wilkie Collins ಅವರ woman in white.  

ಮೊನ್ನೆ ದುಬೈ ನಗರದ ಕಂಪೆನಿಯೊಂದು ಜೆಡ್ಡಾದಲ್ಲಿ ಪುಸ್ತಕ ಪ್ರದರ್ಶನ ಏರ್ಪಡಿಸಿತ್ತು. ಅಲ್ಲಿ ಪುಸ್ತಕವೊಂದನ್ನು ಕೊಂಡೆ. “chicken soup for writer’s soul”. ಈ ಪುಸ್ತಕ ನೂರಾರು ಉದಾಹರಣೆಗಳ ಸಮೇತ ಹಲವು ಬರಹಗಾರರ ಅನುಭವಗಳನ್ನ ಕೊಟ್ಟು ಎಂಥ ನಕಾರಾತ್ಮಕ ಪ್ರತಿಕ್ರಿಯೆಗಳಿಗೂ ಸೊಪ್ಪು ಹಾಕದೆ ಮುನ್ನಡೆಯಲು ಪ್ರೋತ್ಸಾಹಿಸುತ್ತದೆ. ನನ್ನ ಪ್ರಕಾರ ನವ ಬರಹಗಾರರಿಗೆ ಇದಕ್ಕಿಂತ ಉತ್ತಮ ಪುಸ್ತಕ ಬೇರೊಂದಿಲ್ಲ. ಆ ಪುಸ್ತಕದಲ್ಲಿ ನ ಸ್ವಾರಸ್ಯಕರವಾದ ತುಣುಕುಗಳನ್ನು ವೈಯಕ್ತಿಕ ಬ್ಲಾಗ್ ನಲ್ಲಿ ಬರೆಯುತ್ತೇನೆ.   

ಒಹ್, ಈ ಪುರಾಣ ಎಲ್ಲಾ ಬಿಟ್ಟು ಆ ಮಾಂತ್ರಿಕ “ಸೂತ್ರ” ಗಳ ಬಗ್ಗೆ ಹೇಳಬಾರದೇ  ಎಂದು ಹಲ್ಲನ್ನು ಕಟ ಕಟಾಯಿಸಬೇಡಿ. ಬರುತ್ತೇನೆ, ಸೂತ್ರಕ್ಕೆ ಶೀಘ್ರದಲ್ಲೇ.     

ಹಾಂ, ನೋಡಿ. ಸೂತ್ರಗಳು ಎಂದಾಗ ಮತ್ತೊಂದು ಮಾತು ನೆನಪಾಯಿತು. ಸುಖ ಸಂಸಾರಕ್ಕೆ ಹತ್ತು ಸೂತ್ರಗಳು. ಅವುಗಳಲ್ಲಿ ಒಂದು, ಯಾವುದೇ ಕಾರಣಕ್ಕೂ ರಾತ್ರಿ ತರಗತಿಗಳಿಗೆ ಹೋಗಬಾರದು. (ಈ ರಾತ್ರಿ ತರಗತಿ ಬಗ್ಗೆ ಬ್ಲಾಗ್ ಬರೆದಿದ್ದೇನೆ ಸಂಪದದಲ್ಲಿ). ಮೂಗಿಗೆ ತುಪ್ಪ ಸವರೋದನ್ನು ನಿಲ್ಲಿಸಿ ಸೂತ್ರ ಅನಾವರಣ ಮಾಡ್ತೀಯೋ ಇಲ್ವೋ ಎಂದು ಧಮಕಿ ಕೊಡಬೇಡಿ. ತಾಳಿದವನು ಬಾಳಿಯಾನು. ಬರಹಕ್ಕೆ ಈ attitude ಅತ್ಯವಶ್ಯಕ. ಸುಖೀ ಸಂಸಾರಕ್ಕೂ ಅಷ್ಟೇ. ಸಂಯಮ ಬೆಳೆಸಿಕೊಳ್ಳಬೇಕು. ಲೇಖನ ವಾಪಸು ಮಾಡಿದ ಸಂಪಾದಕನ ಮೇಲೆ ಹರಿಹಾಯ್ದರೆ ಕೆಲಸ ನಡೆಯೋಲ್ಲ. chicken soup for soul ಎನ್ನುವ ಮತ್ತೊಂದು ಪುಸ್ತಕ ಡಜನ್ಗಟ್ಟಲೆ ಒಂದು ಪ್ರಕಾಶಕರಿಂದ ಮತ್ತೊಂದು ಪ್ರಕಾಶಕರವರೆಗೆ ಗಡಿಯಾರದ pendulum ನಂತೆ ಲಾಳಿ ಹೊಡೆದ ನಂತರವೇ ಕ್ಲಿಕ್ ಆಗಿದ್ದು. ಹಾಗಾಗಿ ತಾಳ್ಮೆ ಇರಲಿ. perseverance and patience. ಇವೆರಡು ಬರೀ ಬರಹಕ್ಕೆ ಮಾತ್ರವಲ್ಲ ಬದುಕಿನ ಎಲ್ಲಾ ಮಜಲುಗಳಿಗೂ  ಹರಡಲಿ ಈ ಕಂಪು. perseverance and patience ನ ಕಂಪು.

ಮತ್ತೊಂದು ವಿಷಯ. ಬರೆಯಿರಿ, ಆದರೆ ಯಾರನ್ನೂ ಇಂಪ್ರೆಸ್ ಮಾಡಲು ಬೇಡ. ಏನಿಲ್ಲವೆಂದರೂ ನಿಮ್ಮ  ತುಡಿತ, ತುರಿಕೆ ತೀರಿಸಿಕೊಳ್ಳಲಾದರೂ ಬರೆಯಿರಿ. ಅಬ್ದುಲ್, ಆ ಮೂರು ಸೂತ್ರ ಗಳು ಎಲ್ಲಯ್ಯ….. ಇಗೋ ಬಂದೆ ಮೂರು ಸೂತ್ರಗಳೊಂದಿಗೆ.

ಸಾಮರ್ಸೆಟ್ ಮಾಹಂ ಹೇಳುತ್ತಾರೆ, “ಬರೆಯಲು ಮೂರು ಸೂತ್ರಗಳು. ಆದರೆ ಅವು ಯಾವುವು ಎಂದು ದುರದೃಷ್ಟವಶಾತ್ ಯಾರಿಗೂ ಗೊತ್ತಿಲ್ಲ”.

ಹೌದು, ಮಾಹಂ ಹೇಳಿದ್ದು ಸರಿ. ಮಂತ್ರಕ್ಕೆ ಮಾವಿನ ಕಾಯಿ ಉದುರಿದ್ದನ್ನು ಕಂಡಿದ್ದೀರಾ?

ನನ್ನ ತಲೆ ಚಚ್ಚಲು ಇಟ್ಟಿಗೆ ಚೂರನ್ನು ಯಾಕೆ ಹುಡುಕುತ್ತಿದ್ದೀರಾ, ಅಲ್ಲೇ ಪಕ್ಕದಲ್ಲೇ ಇರುವ ಕೀ ಬೋರ್ಡಿನಿಂದ ಟ್ವೀಕಿಸಬಾರದೇ ನಿಮ್ಮ ಮನದೊಳಗಿನ ಮಾತುಗಳನ್ನು, ಮೌನಗಳನ್ನು?   

ಚಿತ್ರ: ನನ್ನ “ನಡೆಯುಲಿ”ಯಿಂದ

ಬ್ಲಾಗಿಗೊಂದು ಎಲ್ಲೆ ಎಲ್ಲಿದೇ…

ಬ್ಲಾಗಿಗೊಂದು ಎಲ್ಲೆ ಎಲ್ಲಿದೇ, ನಿರಾಸೆಗಿಲ್ಲಿ ಕೊನೆಯಿದೇ,

ಏನೇನು ಕನಸು ಕಾಣುವೇ,

ಬ್ಲಾಗಿಸು ನೀ ಬ್ಲಾಗಿಸೂ…

ನನ್ ಫ್ರೆಂಡ್ ಕೇಳ್ದ, ಏನಮ್ಮಾ ತುಂಬಾ ಬ್ಲಾಗ್ತಾ ಇದ್ದೀಯಾ, ಏನ್ಸಮಾಚಾರ ಅಂತ. ಏನಮ್ಮಾ ತುಂಬಾ ಬೊಗುಳ್ತಾ ಇದ್ದೀಯಾ ಅಂತ ಮಾತ್ರ ಕೇಳಿಲ್ಲ ಪುಣ್ಯಾತ್ಮ. ಈ ಬ್ಲಾಗ್ ಅಲೆ ಅಥವಾ ಶೋಕಿ ಬಂದ ಮೇಲಂತೂ ಎಲ್ಲರೂ ಬೊಗಳುವವರೇ, ಊಪ್ಸ್ ಬ್ಲಾಗುವವರೇ. ಒಂದಲ್ಲ ಒಂದು ವಿಷಯವಂತೂ ಇದ್ದೇ ಇರುತ್ತಲ್ಲ ಹೇಳೋದಕ್ಕೆ, ಬರೆಯೋದಕ್ಕೆ. ನಲ್ಲಿ ಜಗಳದಿಂದ ಹಿಡಿದು, ನಮ್ಮನ್ನು ಆಳುವವರ ಲೈಂಗಿಕ ಬದುಕಿನವರೆಗೂ ವಿಷಯಗಳೋ ವಿಷಯಗಳು. ಇವನ್ನೆಲ್ಲಾ ಬರೆದರೆ ಪ್ರಕಟಿಸಲು ಪತ್ರಿಕೆಗಳು ಬೇಕಲ್ಲ. ಮೊದಲೇ ಎರವಲು ಪಡೆದು ಓದುವ ಸಮಾಜ. ಇನ್ನು ಅಂಡೇ ಪಿರ್ಕಿಗಳು ಬರೆದದ್ದನ್ನೆಲ್ಲಾ ಕೊಂಡು ಓದುವುದೂ ಇಲ್ಲ, ಅದಕ್ಕೆ ಬಿಡುವೂ ಇಲ್ಲ. ಇಂಥ ಸನ್ನಿವೇಶದಲ್ಲಿ ಬ್ಲಾಗ್ ವಿಶ್ವ ತನ್ನ ಬಾಗಿಲು ತೆರೆದು ಎಲ್ಲರಿಗೂ ಒಂದು ವೇದಿಕೆ ಒದಗಿಸಿತು, ಒದರಲು. ಸಮಾನತೆಯ ಮೋಹಕ ಕಹಳೆ. blogging is a great liberator and equalizer. ಚಿರಪರಿಚಿತ ಲೇಖಕರಿಂದ ಹಿಡಿದು ಅಂಡೇ ಪಿರ್ಕಿ (ಈ ಪದ ಎರಡು ಸಲ ಬರೆದಿದ್ದು ಏಕೆಂದರೆ ಇದು ನನಗಿಷ್ಟವಾದ ಪದ, ಕನ್ನಡದವರಿಗೆ ಕ್ರಿಯಾ ಶೀಲತೆ ಇಲ್ಲ ಎನ್ನುವವರಿಗೆ ಈ ಪದ ಒಂದು ಉತ್ತರ) ಗಳವರೆಗೆ. ಬರೆಯಿರಪ್ಪಾ/ಮ್ಮಾ ಎಂದು ಮುಕ್ತ ಆಹ್ವಾನ.

ವಿ.ಸೂ : ಅಂಡೇ ಪಿರ್ಕಿ ಎನ್ನುವ ಪದ ಸಭ್ಯವೋ, ಸಂಸದೀಯವೋ (parliamentary) ಎನ್ನುವುದರ ಬಗ್ಗೆ ಯಾರಾದರೂ ಬರೆದರೆ ಚೆನ್ನಿತ್ತು.

ಹಾಗೆಯೇ, ತಲೆ ಸರಿಯಿಲ್ಲದವನಿಗೆ, ಪೆಕರು ಪಕರು ಥರಾ ಆಡುವವನಿಗೆ “ಮಂಡೆ ಪಿರ್ಕಿ” (ಮಂಡೆ, ಅಂದ್ರೆ ತಲೆ) ಅಂತ ಕರೆದರೆ ಹೇಗೆ? ನಮ್ಮ ಕನ್ನಡ ಶಬ್ದ ಭಂಡಾರವನ್ನು ಇನ್ನಷ್ಟು ಶ್ರೀಮಂತಗೊಳಿಸಿದಂತಾಗದೇ?

* ಹಳೇ ಸೇತುವೆ.. ಹಳೇ ನೆನಪು, ಹೊಸ ಭರವಸೆ

 

ಹಳೇ ಸೇತುವೆಗೆ ತುಂಬಿತು ನೂರು. ನೂರು ಎಂದರೆ ಸೇತುವೆಗೆ ನೂರು ವರ್ಷ ತುಂಬಿತು ಎಂದಲ್ಲ. ನಾನು ಆರಂಭಿಸಿದ “ಹಳೇ ಸೇತುವೆ” ಹೆಸರಿನ ಬ್ಲಾಗ್ ಗೆ ೧೦೦ ಪೋಸ್ಟ್ಗಳು ತುಂಬಿ ಕೊಂಡವು.  

 ಈ ಬ್ಲಾಗ್ ಆರಂಭಿಸುವಾಗ ನನಗನ್ನಿಸಿರಲಿಲ್ಲ ಇಷ್ಟು ದೂರ ಬರುವೆ ಎಂದು ಏಕೆಂದರೆ ನಾನು ನುರಿತ ಬರಹಗಾರನೇನೂ ಅಲ್ಲ. ಪತ್ರಿಕೋದ್ಯಮದ ವಿದ್ಯಾರ್ಥಿಯೂ ಅಲ್ಲ, ಬರಹಗಾರರ ಗೆಳೆತನವೂ ಇಲ್ಲ. ಒಂದೆರಡು ಆನ್ ಲೈನ್ ಪತ್ರಿಕೆಗಳಲ್ಲಿ ಅಭಿಪ್ರಾಯ ಬರೆದು ಬರೆಯುವ ಧೈರ್ಯ ನನಗೆ ನಾನೇ ತಂದುಕೊಂಡೆ.   

ಬ್ಲಾಗ್ ಆರಂಭಿಸುವ ಬಗ್ಗೆ ಕೆಲವು ಲೇಖನಗಳನ್ನು ಓದಿದ ನಂತರ ನನಗೂ ನನ್ನದೇ ಆದ ಒಂದು ಬ್ಲಾಗ್ ಆರಂಭಿಸಿಕೊಳ್ಳುವ ಆಸಕ್ತಿ ಮೂಡಿತು. ಅದರಲ್ಲೂ ಪುಕ್ಕಟೆಯಾಗಿ ಬ್ಲಾಗ್ ರಚಿಸಿಕೊಳ್ಳಬಹುದು ಎಂದ ಮೇಲಂತೂ ಕೇಳಬೇಕೆ? ಪುಕ್ಕಟೆ ಸಿಕ್ಕರೆ ಯಾರಿಗೆ ಬೇಡ? ನಾನು ಹೈಸ್ಕೂಲಿನಲ್ಲಿದ್ದಾಗ ಕನ್ನಡ ಪಂಡಿತರೊಬ್ಬರು ಹೇಳಿದ್ದು ನೆನಪಿಗೆ ಬಂತು. ಪುಕ್ಕಟೆ ಯಾಗಿ ಹೆಣ್ಣು ಸಿಕ್ಕರೆ ನನಗೊಂದು,ನಮ್ಮಪ್ಪನಿಗೊಂದು, ನಮ್ಮಜ್ಜನಿಗೊಂದಂತೆ. ಅದೇ ಸಮಯ ಅದಕ್ಕೆ ಒಂದಿಷ್ಟು ಕಾಸು ತಗಲುತ್ತದೆ ಅಂದಾಕ್ಷಣ ನನಗಿನ್ನೂ ಎಳೇ ಪ್ರಾಯ, ನಮ್ಮಪ್ಪನಿಗೊಂದು ಹೆಣ್ಣೀಗಾಗಲೇ ಇದೆ, ನಮ್ಮಜ್ಜನಿಗೆ ವಯಸ್ಸಾಯಿತು ಎಂದು ಜಾರಿಕೊಳ್ಳುತ್ತಾರಂತೆ.     

ಬ್ಲಾಗ್ ಗೆ ಹಳೇ ಸೇತುವೆ ಎಂದು ಹೆಸರಿಟ್ಟಾಗ ನನ್ನ ಸೋದರಿಯರು ಕೇಳಿದರು ಯಾಕೀ ಹೆಸರೆಂದು. ಈ ಸೇತುವೆ ತೋರಿಸಿ ಹೊಳೆಯಿಂದಾಚೆಯಿಂದ ಸೈತಾನ್ ಬರುತ್ತಾನೆ ಎಂದು ನನ್ನ ಚಿಕ್ಕಮ್ಮಂದಿರು ನಾನು ಚಿಕ್ಕವನಿದ್ದಾಗ ಹೆದರಿಸುತ್ತಿದ್ದರು. ಈ ಸೇತುವೆ ದಾಟಿ ಕೊಂಡೇ ನನ್ನ ಆಪ್ತ ಮಿತ್ರರನ್ನು ಭೆಟ್ಟಿಯಾಗಲು ನಾನು ಹೋಗುತ್ತಿದ್ದದ್ದು. ನನ್ನ ಪ್ರೀತಿಯ ತಮ್ಮ ಆಕಸ್ಮಿಕವಾಗಿ ನದಿಯಲ್ಲಿ ಜಾರಿ ಬಿದ್ದು ನಿಧನ ಹೊಡಿದ ನಂತರ ಅವನ ಅಂತಿಮ ಯಾತ್ರೆ ಸಹಾ ಇದೇ ಸೇತುವೆ ಮೇಲೇ ಹಾದು ಹೋಗಿದ್ದು. ಹಾಗಾಗಿ ಈ ಸೇತುವೆ ನನ್ನನ್ನು ಭಾವುಕನನ್ನಾಗಿ ಮಾಡುತ್ತದೆ. ಹಳೇ ನೆನಪುಗಳನ್ನು ನನಗೆ ತಲುಪಿಸುತ್ತದೆ. ಈ ಕಾರಣಗಳಿಗಾಗಿ ಹಳೇ ಸೇತುವೆ ಹಸರು ಆಪ್ತವಾಗಿ, ಪ್ರಸಕ್ತವಾಗಿ ಕಂಡಿತು.  

ಕನ್ನಡ ನಾಡಿನಿಂದ ಹೆಚ್ಚು ಕಡಿಮೆ ಇಪ್ಪತ್ತು ವರ್ಷ ಹೊರಗಿದ್ದುದರಿಂದ ನಾಡಿನೊಂದಿಗೆ ಮಾತ್ರವಲ್ಲ ನುಡಿಯೊಂದಿಗೂ ನಂಟು ಬಿಟ್ಟು ಹೋಗಿತ್ತು. ಆದರೆ ಮಾತೃ ಭಾಷೆ ನೀವೆಲ್ಲೇ ಇದ್ದರೂ ನಿಮ್ಮ ಬೆನ್ನು ಬಿಡದು. ಮಾತೃ ಭಾಷೆಯ ಮೋಡಿ ಇಲ್ಲಿದೆ ನೋಡಿ. ವ್ಯಕ್ತಿ ಏನೆಲ್ಲವನ್ನು ಕಳೆದುಕೊಂಡರೂ ಅವನ ಅಂತರಂಗದ ಭಾಷೆ ಅವನ ಉಸಿರಿನಂತೆ ಅವನೊಂದಿಗೆ ಇರುತ್ತದೆ. ಕೆಲವರು ಡ್ರಾಮ ಮಾಡಬಹುದು ದೇಶದ ಹೊರಗೆ ಇರುವುದರಿಂದ ಭಾಷೆ ಮರೆತು ಹೋಯಿತು ಎಂದು. ಅದು ಶುದ್ಧ, ಸೋಗಲಾಡಿತನ.  ನಾವು ಮನೆಯಲ್ಲಿ ಬೇರೆ ಭಾಷೆ ಮಾತನಾಡಿದರೂ ನನ್ನ ಮನದ, ಮೆಚ್ಚಿನ ನುಡಿ ಕನ್ನಡ. ಭೂಮಿ ತಾಯಿ ಇರುವಾ ತನಕ ನಗುತಾ ಇರಲಿ ಕನ್ನಡ ಎಂದಂತೆ ನನ್ನ ಮನದಲ್ಲಿ ಕನ್ನಡಕ್ಕೆ ವಿಶೇಷ ಸ್ಥಾನ ಎಂದಿಗೂ ಇರುತ್ತದೆ.  

ಮನುಷ್ಯ ಸಂಬಂಧಗಳ ಥರ ಶಿಥಿಲವಾಗುತ್ತಿರುವ, ಸುಣ್ಣದ ಕಲ್ಲಿನಿಂದ ಕಟ್ಟಿದ, ಭದ್ರೆಯ ಆಪ್ತ ಮಿತ್ರ ಹಳೇ ಸೇತುವೆ ಜಾಗದಲ್ಲಿ ಮತ್ತೊಂದು ಸೇತುವೆ ಬಂದರೂ ಅಂತರ್ಜಾಲದಲ್ಲಿ ಹಳೇ ಸೇತುವೆ ಹೆಸರು ಖಾಯಮ್ಮಾಗಿ ಉಳಿಯುವಂತೆ ನನ್ನ ಬ್ಲಾಗ್ ಸಹಾಯ ಮಾಡಬಲ್ಲುದು ಎಂದು ನನ್ನ ನಂಬಿಕೆ.

ನನ್ನ ಬರವಣಿಗೆಯ ನಿಟ್ಟಿನಲ್ಲಿ ಸಂಪದದಿಂದ ಸಿಕ್ಕ ಸಹಾಯಕ್ಕೆ ನಾನೆಂದೂ ಋಣಿ. ಅದೇ ರೀತಿ google transliteration ಬಳಸುವ ನನಗೆ ಗೂಗಲ್ ನ ಈ ಸೌಲಭ್ಯ ಬಹಳ ಸಹಾಯಕವಾಯಿತು.

ಚಿತ್ರ ಕೃಪೆ:

ಚಿಲಿಪಿಲಿಗುಟ್ಟುವಾ, ಬನ್ನಿ

twitter logo2twitter logo 1

ಹಕ್ಕಿಗಳು ನಿರಾಯಾಸವಾಗಿ, ನಿರಾತಂಕವಾಗಿ ಆಗಸದಲ್ಲಿ ಹಾರುವುದನ್ನು ಕಂಡ ದ್ವಿಚಕ್ರ ವಾಹನ ರೆಪೇರಿ ಮಾಡಿ ಬದುಕುತ್ತಿದ್ದ wright ಸೋದರರಿಗೆ ತಾವೂ ಅವುಗಳಂತೆ ಹಾರಬೇಕು ಸ್ವಚ್ಛಂದವಾಗಿ ಎಂದು ತೋರಿ ವಿಮಾನ ಕಂಡುಹಿಡಿದು ಇತಿಹಾಸ ನಿರ್ಮಿಸಿದರು. ವಿದ್ಯುತ್ ತಂತಿಗಳ ಮೇಲೂ, ಬೇಲಿಗಳ ಮೇಲೂ ಸಾಲಾಗಿ ಕೂತು, ಕಣ್ಣರಳಿಸಿ, ಪುಟ್ಟ ಕೊಕ್ಕು ತುಂಬಾ ಹರಟೆ ಕೊಚ್ಚುವ ಗುಬ್ಬಚ್ಚಿಗಳಿರಬೇಕು twitter ಎನ್ನುವ ಆಧುನಿಕ ಯುಗದ ಗೀಳಿಗೆ ನಾಂದಿ ಹಾಡಿದ್ದು. ಅತ್ಯಂತ ವೇಗವಾಗಿ ವಿಶ್ವವ್ಯಾಪಿಯಾಗಿ ಬೆಳೆಯುತ್ತಿರುವ ಈ twitter ಎನ್ನುವ ವಿದ್ಯಮಾನ ಹಿರಿಯರು ಕಿರಿಯರು, ಬಡವ ಬಲ್ಲಿದ, ರಾಜಕಾರಣಿ, ನಟ ನಟಿಯರು ಎನ್ನದೆ ಎಲ್ಲರನ್ನೂ ಮರುಳು ಮಾಡಿ ಒಂದು ಹೊಸ ಕ್ರಾಂತಿಯನ್ನೇ ಸೃಷ್ಟಿಸಿದೆ. ಸೊಲ್ಪವೇ ಸಮಯದಲ್ಲಿ ಈ ರೀತಿ ಅಗಾಧವಾಗಿ twitter ಬೆಳೆಯಲು ಕಾರಣವೇನಿರಬಹುದು?

ಕಾರಣ ಇಷ್ಟೇ… ease of use ಮತ್ತು ಮನುಷ್ಯನಲ್ಲಿಯ ಹರಟೆಯ ಚಾಳಿ. ಜೋಕೆ, ಹರಟೆಗೂ ಇದೆ ಕಡಿವಾಣ, twitter ನಲ್ಲಿ. ಅದೆಂದರೆ ಹೇಳಬೇಕಾದ್ದನ್ನು ಕೇವಲ ೧೪೦ ಅಕ್ಷರಗಳಲ್ಲಿ ಹೇಳಿ ಮುಗಿಸಬೇಕು. ಈ ಕಡಿವಾಣ ಪ್ರತಿ ಪೋಸ್ಟ್ ಗೆ ಅನ್ವಯ. ಎಷ್ಟು ಪೋಸ್ಟ್ ಗಳನ್ನಾದರೂ ಕಳುಹಿಸಬಹುದು.

ಅಮೆರಿಕೆಯ biz stone, jack dorsey ಮತ್ತು evan ವಿಲಿಯಂಸ್ ಇವರುಗಳು ಸ್ಥಾಪಕರು. ಮಾರ್ಚ್ ೨೧, ೨೦೦೬ ರಲ್ಲಿ ಆರಂಭಗೊಂಡ twitter ನ ಚೊಚ್ಚಲ ಮೆಸೇಜ್ ” “just setting up my twttr”. ಇದನ್ನು ಕಳಿಸಿದ್ದು Jack Dorsey. ಓದಿದ ಹೊಸ ಪುಸ್ತಕ ಬಗ್ಗೆಯೋ, ನೋಡಿದ ಸಿನಿಮಾದ ಬಗ್ಗೆಯೋ, ತಿಂದ ತಿಂಡಿಯ ಬಗ್ಗೆಯೋ, ನಿಮ್ಮ ಚಿಣ್ಣರ ತುಂಟತನದ ಮಾತುಗಳ ಬಗ್ಗೆಯೋ ನೀವು ಬರೆಯಬಹುದು. ಅಷ್ಟೇ ಅಲ್ಲ ನಿಮ್ಮ ಸುತ್ತ ಮುತ್ತ ನಡೆದ ರಾಜಕೀಯ ವಿದ್ಯಮಾನಗಳು, ಅನಾಹುತಗಳು ಹೀಗೆ ವಿಶ್ವಕ್ಕೆ ಹೇಳಬೇಕಾದ್ದನ್ನು twiiter ಮೂಲಕ ಹೇಳಿ. ಕಳೆದ ವರ್ಷದ ಅಮೆರಿಕೆಯ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ದಿಗಳು twitter ಅನ್ನು ಯಥೇಚ್ಚವಾಗಿ (ಪುಕ್ಕಟೆ ಅಲ್ವೇ, ಅದಕ್ಕೆ) ಬಳಸಿದರು. ಕ್ಯಾಲಿಫೋರ್ನಿಯಾ ದಲ್ಲಿ ಕಾಡ್ಗಿಚ್ಚು ಹಬ್ಬಿದಾಗ ವಿಶ್ವಕ್ಕೆ ಗೊತ್ತಾಗಿದ್ದು twitter ಮೂಲಕ. ಅನಾಹುತ ಸ್ಥಳಕ್ಕೆ ambulance ಮತ್ತು fire fighters ಗಳಿಗಿಂತಲೂ ಮೊದಲು ಆಗಮಿಸುವುದು twitter. new york ನಗರದ ಹಡ್ಸನ್ ನದಿಯ ಮೇಲೆ ವಿಮಾನ ಎರಗಿದಾಗಲೂ, ಮುಂಬೈ ನಗರದಲ್ಲಿ ಭಯೋತ್ಪಾದಕರು ರಕ್ತಪಾತ ಹರಿಸಿದಾಗಲೂ twitter ಸೊಗಸಾಗಿ ವರದಿ ಮಾಡಿ ವಿಶ್ವದ ಗಮನ ಸೆಳೆಯಿತು.

ಇತ್ತೀಚಿಗೆ ಇರಾನಿನ ಚುನಾವಣೆಯಲ್ಲಿ ಮೋಸ ನಡೆಯಿತೆಂದು ಅಲ್ಲಿನ ಜನ ಪ್ರತಿಭಟಿಸಿ ಬೀದಿಗಿಳಿದಾಗ twitter ಈ ವಿದ್ಯಮಾನವನ್ನು ಜಗಜ್ಜಾಹೀರು ಮಾಡಿತು. twitter ಬರವಣಿಗೆಯಲ್ಲಿ ಆಸಕ್ತಿ ಇರುವವರಿಗೆ ಒಂದು ವರದಾನ ಎಂದೂ ಹೇಳಬಹುದು. ಕೆಲವರಿಗೆ ಬರವಣಿಗೆಯನ್ನು ಹೇಗೆ ಆರಂಭಿಸಬೇಕು ಎಂದು ತಿಳಿದಿರುವುದಿಲ್ಲ. ಅಂಥವರು ಆರಂಭದ ಹೆಜ್ಜೆಯಂತೆ twitter ನಲ್ಲಿ ಬರೆದು ಮುಂದೆ ತಮ್ಮದೇ ಆದ ಬ್ಲಾಗ್ ಆರಂಭಿಸಿಕೊಳ್ಳಬಹುದು.

ಇಷ್ಟೆಲ್ಲಾ ಹೇಳಿಯೂ convince ಆಗ್ಲಿಲ್ವಾ? ಒಮ್ಮೆ ಪ್ರಯತ್ನಿಸಿ ನೋಡಿ. ಮಿತ್ರರೊಂದಿಗೆ, ನೆಂಟರೊಂದಿಗೆ ಅನುಭವ ಹಂಚಿಕೊಳ್ಳಲು twitter ಎಷ್ಟು ಸಹಕಾರಿ ಮತ್ತು ಮೋಜು ಎಂದು ತಿಳಿಯುತ್ತದೆ.