ತಾಲಿಬಾನಿಗಳ ಅಟ್ಟಹಾಸಕ್ಕೆ ಕೊನೆ ಎಂದು?

ಮಲಾಲಾ. ನಾನು, ನೀವು ದಿನವೂ ನೋಡುವ, ಪುಸ್ತಕಗಳ ಹೊರೆಯೊಂದಿಗೆ ಕಣ್ಣುಗಳಲ್ಲಿ  ಕನಸನ್ನು ಹೊತ್ತು ಶಾಲೆಯ ಕಡೆ ದೃಢ ಹೆಜ್ಜೆ ಇಡುವ ಬಾಲಕಿಯರ ಹಾಗೆ ೧೫ ವರ್ಷದ ಓರ್ವ ಹೆಣ್ಣು ಮಗಳು.

ಪಾಕಿಸ್ತಾನದ ರಮಣೀಯ ನಿಸರ್ಗ ಪ್ರಾಂತ್ಯ ‘ಸ್ವಾತ್’ ಕಣಿವೆ ಪ್ರದೇಶವನ್ನು ವಶಪಡಿಸಿ ಕೊಂಡಿದ್ದ ತಾಲಿಬಾನ್ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಿಂದ ಕೇವಲ ನಾಲ್ಕು ನೂರು ಮೈಲು ಗಳ ವರೆಗೆ ತಲುಪಿದ್ದರು. ಭಾರೀ ಹೋರಾಟದ ನಂತರ ಪಾಕಿ ಸೈನ್ಯ ತಾಲಿಬಾನಿಗಳನ್ನು ಹಿಮ್ಮೆಟ್ಟಿ ಕಣಿವೆಯನ್ನು ವಶ ಪಡಿಸಿಕೊಂಡಿದ್ದರು. ಆದರೂ ತಾಲಿಬಾನಿಗಳ ಪ್ರಭಾವ ಕಡಿಮೆಯಾಗಲಿಲ್ಲ. ಕಾದಾಟ ತಾಲಿಬಾನಿಗಳ ಕಸುಬು, ಅಸ್ತ್ರ ಶಸ್ತ್ರಗಳು ಇವರ ಆಹಾರ, ಮಾನವ ಸಂಸ್ಕಾರಕ್ಕೆ ವಿರುದ್ಧವಾದ ನಡವಳಿಕೆ ಇವರ ಉಸಿರು. ಇವೆಲ್ಲವೂ ಮಿಳಿತವಾದಾಗ ವಿಶ್ವಕ್ಕೆ ಲಭ್ಯ ಅರಾಜಕತೆ, ಕ್ರೌರ್ಯ, ಅಟ್ಟಹಾಸ. ಇವರನ್ನು ಬಲಿ ಹಾಕಲು ಪಾಕಿಸ್ತಾನದಿಂದ ಹಿಡಿದು ಅಂತಾರಾಷ್ಟ್ರೀಯ ಸಮುದಾಯದರೆಗೆ ಯಾರಿಗೂ ಇಚ್ಛೆಯಿಲ್ಲ. ಇದೂ ಒಂದು ರೀತಿಯ ರಾಜಕಾರಣ. ತಾನೇ ಪೋಷಿಸಿದ ಶಿಶು ರಾಕ್ಷಸನಾಗಿ ವರ್ತಿಸಲು ತೊಡಗಿದಾಗ ಅಮೇರಿಕಾ ಎಚ್ಚೆತ್ತು ಅವರನ್ನು ಹದ್ದು ಬಸ್ತಿಗೆ ತರಲು ಯತ್ನಿಸಿತು. ಇದರ ನಡುವೆ ತಾಲಿಬಾನಿಗಳೊಂದಿಗೆ ಚರ್ಚೆ ಕೂಡಾ. ಏಕೆಂದರೆ ಇವರನ್ನು ಸಂಪೂರ್ಣ ನಿರ್ನಾಮ ಮಾಡಲು ಸಾಧ್ಯವಿಲ್ಲ ಎಂದು ಅಮೆರಿಕೆಗೆ ಇತಿಹಾಸದ ಪಾಠಗಳು ನೆನಪು ಮಾಡುತ್ತವೆ. ಈ ದ್ವಂದ್ವಗಳ ನಡುವೆ ತಾಲಿಬಾನ್ ತನಗೆ ತೋಚಿದ ರೀತಿಯಲ್ಲಿ ವರ್ತಿಸುತ್ತದೆ. ಇವರಿಗೆ ಹೆಣ್ಣುಮಗಳು ಎಂದರೆ ಮನೆಯ ನಾಲ್ಕು ಗೋಡೆಗಳ ಮಧ್ಯೆ, ಶಿಕ್ಷಣ ಪಡೆಯದೇ ಬದುಕಬೇಕಾದ ಹೆರುವ ಯಂತ್ರಗಳು. ಯಾರಾದರೂ ಧೈರ್ಯ  ಮಾಡಿ ಶಾಲೆಗೆ ಹೋಗುತ್ತೇವೆ ಎಂದರೆ ಮೊದಲು ಬೆದರಿಕೆ, ನಂತರ ಬಂದೂಕು. ಮಲಾಲಾ ಎನ್ನುವ ಪೋರಿಗೆ ಸಿಕ್ಕಿದ್ದು ಇವೆರಡು. ಬೆದರಿಕೆಗೆ ಸೊಪ್ಪು ಹಾಕದೆ ಶಾಲೆಯ ಕಡೆ ನಡೆಯುತ್ತಿದ್ದ ಈಕೆ ತಾಲಿಬಾನಿಗಳಿಗೆ ಕಣ್ಣುರಿ ತರುತ್ತಿದ್ದಳು. ಇಷ್ಟೊಂದು ಚಿಕ್ಕ ಹುಡುಗಿ ತಮ್ಮಂಥ ರಾಕ್ಷಸರನ್ನು ಎದುರಿಸುತ್ತಿದ್ದಾಳಲ್ಲ ಎಂದು. ಬೆದರಿಕೆ ಫಲಿಸದಾದಾಗ ಬಂದೂಕು ಚಲಾಯಿಸಿದರು. ತಲೆಯನ್ನ  ಹೊಕ್ಕು ಹೊರಬಂದ ಗುಂಡು ಸಹ ಮಲಾಲಾ ಳನ್ನು ಕೊಲ್ಲಲು ನಿರಾಕರಿಸಿತು. ಅದ್ಭುತವಾಗಿ ಸಾವಿನಿಂದ ಪಾರಾದ ಮಲಾಲಾ ಹೆಚ್ಚುವರಿ ಚಿಕಿತ್ಸೆಗಾಗಿ ಲಂಡನ್ ಗೆ ಹೋಗಲು ಅರಬ್ ಸಂಯುಕ್ತ ಸಂಸ್ಥಾನಗಳ ಆಳುವ ಕುಟುಂಬದ ಕಡೆಯಿಂದ ‘ಏರ್ ಅಂಬುಲೆನ್ಸ್’ ನ ನೆರವು ಸಿಕ್ಕಿತು. ಈಕೆಯ ಚಿಕತ್ಸೆ ಫಲಕಾರಿಯಾಗಲು ಇಡೀ ವಿಶ್ವ ದೇವರನ್ನು ಬೇಡುತ್ತಿದೆ.

ಮಲಾಲಳ ಮೇಲಿನ ಹಲ್ಲೆಯನ್ನು ಖಂಡಿಸುತ್ತಾ ಪಾಕಿಸ್ತಾನದ ರಾಜಕಾರಣಿ ಹೇಳಿದ್ದು, ತಾಲಿಬಾನ್ ಕರಾಳ ಶಕ್ತಿಗಳ ಗುಂಪಾಗಿದ್ದು, ಧರ್ಮ ಸಂಸ್ಕಾರ ವಿಹೀನರು ಎಂದು ಕಟುವಾಗಿ ಟೀಕಿಸಿದರು. ಮಲಾಲಾಳ ಮೇಲಿನ ಹಲ್ಲೆಕೋರರನ್ನು ಹಿಡಿದು ಕೊಟ್ಟವರಿಗೆ ಒಂದು ಕೋಟಿ ರೂಪಾಯಿಯ ಬಹುಮನವನ್ನು ಪಾಕ್ ಘೋಷಿಸಿದೆ.

ಮಹಿಳೆಯರಿಗೆ ಶಿಕ್ಷಣ ಕೂಡದು ಎನ್ನುವ ಐಡಿಯಾ ತಾಲಿಬಾನ್ ಗೆ ಕೊಟ್ಟವರಾರು ಎನ್ನುವುದು ತಿಳಿಯುತ್ತಿಲ್ಲ. ವೇಷದ ಸಹಾಯದಿಂದ ಮುಸ್ಲಿಮರ ಥರ ಕಾಣುತ್ತಾ ಹೆಣ್ಣುಮಕ್ಕಳಿಗೆ ಶಿಕ್ಷಣ ನಿಷೇಧಿಸುವ ದುಷ್ಟ ಶಕ್ತಿಗಳ ಸಂಗಮ ‘ತಾಲಿಬಾನ್’ ವರ್ತನೆಗೂ ಇಸ್ಲಾಂ ನ ಜನ್ಮ ಸ್ಥಳ ಸೌದಿ ಅರೇಬಿಯಾದ ನೀತಿಗೂ ಇರುವ ವ್ಯತ್ಯಾಸ ನೋಡಿ. ಇಸ್ಲಾಂ ನ  ತವರೂರು ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ನಗರದ  ರಾಜಕುಮಾರಿ ‘ನೂರಾ ಬಿಂತ್ ಅಬ್ದುಲ್ ರಹಮಾನ್’ ಮಹಿಳಾ ವಿಶ್ವವಿದ್ಯಾಲಯ ವಿಶ್ವದಲ್ಲೇ ಅತಿ ದೊಡ್ಡದು. 30 ಲಕ್ಷ ಚದರ ಮೀಟರುಗಳ ವಿಸ್ತೀರ್ಣದ ಈ ವಿಶ್ವ ವಿದ್ಯಾಲಯದಲ್ಲಿ ೨೬,೦೦೦ ವಿದ್ಯಾರ್ಥಿನಿಯರು ಕಲಿಯಬಹುದು. ವಿಶ್ವದ ಪ್ರತಿಭಾವಂತ ಪ್ರೊಫೆಸರ್ ಗಳನ್ನ ಆಕರ್ಷಿಸಲು ಸೌದಿ ಸರ್ಕಾರ ಎಲ್ಲಾ ವ್ಯವಸ್ಥೆ ಮಾಡುತ್ತಿದೆ. ಈಗಿನ ರಾಜ ಅಬ್ದುಲ್ಲಾ ರ ಕನಸಿನ ಪ್ರಾಜೆಕ್ಟ್ ಈ ವಿಶ್ವವಿದ್ಯಾಲಯ.

ಹಲವು ಮುಸ್ಲಿಂ ದೇಶಗಳ ಪ್ರಧಾನಿಗಳಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಮುಸ್ಲಿಂ ಮಹಿಳೆಯರಿಗೆ ತಮ್ಮ ದೇಶಗಳಲ್ಲಿ ಧಾರ್ಮಿಕ ಪಂಡಿತರಿಂದ ಯಾವುದೇ ತೊಡಕಾಗಲೀ, ಫತ್ವಾ ಗಳಾಗಲೀ ಎದುರಾಗಲಿಲ್ಲ. ಸುಮಾರು ಎಂಟು ನೂರು ವರ್ಷಗಳ ಹಿಂದೆಯೇ ಈಜಿಪ್ಟ್ ದೇಶದ ಆಡಳಿತಗಾರ್ತಿಯಾಗಿ  ರಾಣಿ ‘ಶಜರ್ ಅಲ್-ದುರ್’ ಯಶಸ್ವಿಯಾಗಿದ್ದಳು. ವಿಧವೆಯಾಗಿದ್ದ ಈಕೆ ಕ್ರೈಸ್ತರ ಏಳನೆ ಧರ್ಮಯುದ್ಧ (ಕ್ರುಸೇಡ್) ದ ಮೇಲೆ ವಿಜಯ ಸಾಧಿಸಿದ್ದಳು.

ಪ್ರವಾದಿ ಮುಹಮ್ಮದರ ಪತ್ನಿ ‘ಆಯಿಷಾ’ ರಿಂದ ಪ್ರವಾದಿ ಅನುಚರರು ಅತೀ ಹೆಚ್ಚಿನ ಪ್ರವಾದಿ ವಚನಗಳನ್ನು ಸಂಗ್ರಹಿಸಿದ್ದರು. ಧರ್ಮದ ಅಥವಾ ರಾಜಕಾರಣದ ಯಾವುದೇ ವಿಷಯದಲ್ಲೂ ಅನುಮಾನ ಗಳು ತಲೆದೋರಿದಾಗ ಪ್ರವಾದೀ ಅನುವರ್ತಿಗಳು ಆಯಿಷಾ ರ ಗುಡಿಸಿಲಿನ ಕಡೆ ಧಾವಿಸುತ್ತಿದ್ದರು. ತನ್ನ ಮನೆಯ ಅಂಗಳದಲ್ಲಿ ಧರ್ಮ ಬೋಧನೆ ನಡೆಸುತ್ತಿದ್ದ ಆಯಿಷಾ ರಿಗೆ ವಿಶ್ವದ ಮೊಟ್ಟ ಮೊದಲ ‘ಮದ್ರಸಾ’ ದ ಸ್ಥಾಪಕರು ಎನ್ನುವ ಖ್ಯಾತಿ.

ಪ್ರವಾದಿಗಳ ನಿಧನಾ ನಂತರ ‘ಖಲೀಫಾ ಉಸ್ಮಾನ್’ ಪವಿತ್ರ ಕುರ್’ಆನ್ ಗ್ರಂಥವನ್ನು ಬರಹದ ರೂಪದಲ್ಲಿ ತರಲು ತೀರ್ಮಾನಿಸಿ ಪ್ರಥಮ ಆವೃತ್ತಿಯನ್ನು ದಿವಂಗತ ಖಲೀಫಾ ಉಮರ್ ರವರ ಪುತ್ರಿಗೆ ಗ್ರಂಥವನ್ನು ಸುರಕ್ಷಿತವಾಗಿ ಇಡುವ ಜವಾಬ್ದಾರೀ ನೀಡಿದ್ದರು. ಮಹಿಳೆಯರಿಗೆ ಈ ಜವಾಬ್ದಾರೀ ನೀಡಬಾರದು ಎನ್ನುವ ಪರಿಕಲ್ಪನೆ ಅವರಲ್ಲಿರಲಿಲ್ಲ. ಮಹಿಳೆಯ ‘ವಧುದಕ್ಷಿಣೆ’ ವಿಷಯದಲ್ಲಿ ಖಲೀಫಾ ಉಮರ್ ತಪ್ಪಾದ ನಿರ್ಣಯ ನೀಡುವುದನ್ನು ಗಮನಿಸಿದ ಮಹಿಳೆಯೊಬ್ಬಾಕೆ ಕುರ್’ಆನ್ ಗ್ರಂಥದ ಆಧಾರದಲ್ಲಿ ಆ ತಪ್ಪನ್ನು ತಿದ್ದಿದಾಗ ಒಪ್ಪಿಕೊಂಡ ಖಲೀಫಾ ಉಮರ್ ಹೇಳಿದ್ದು, ಈ ಮಹಿಳೆ ಖಲೀಫಾನ ಮೇಲೆ ಗೆಲುವು ಸಾಧಿಸಿದಳು ಎಂದು.

ಈ ಮೇಲಿನ ಉದಾಹರಣೆಗಳೊಂದಿಗೆ ಇಸ್ಲಾಂ ಮಹಿಳೆಗೆ ಕೊಡಮಾಡಿದ ಹಕ್ಕುಗಳನ್ನು ನೋಡಿದಾಗ ತಾಲಿಬಾನ್ ಯಾವುದೇ ರೀತಿಯಲ್ಲಿ ಇಸ್ಲಾಂ ನ ಆದರ್ಶಗಳಿಗೆ ಪ್ರತಿ ಸ್ಪಂದಿಸದೆ ಕೇವಲ ಸ್ತ್ರೀ ಧ್ವೇಷಿ ಮತ್ತು ನರಸಂಹಾರಕ ಸ್ಯಾಡಿಸ್ಟ್ ಗಳ ಒಂದು ರಾಕ್ಷಸೀ ಸಂಘಟನೆ ಎಂದು ಹೇಳಬಹುದು. ಆಫ್ಘಾನಿಸ್ಥಾನ ದ ರಷ್ಯನ್ ಸೈನ್ಯವನ್ನು, ಕಮ್ಯುನಿಸ್ಟ್ ಪ್ರಭಾವವನ್ನು ಮಟ್ಟ ಹಾಕಲು, ತಾಲಿಬಾನ್ ನ ಸಹಾಯ ಪಡೆದ ಅಮೇರಿಕಾ ತಾಲಿಬಾನ್ ನ ಶಕ್ತಿಗೆ ಬೆನ್ನೆಲುಬಾಗಿ ನಿಂತಿದ್ದೆ ಒಂದು ಅನಾಹುತಕ್ಕೆ ಎಡೆ ಮಾಡಿಕೊಟ್ಟಿತು. ಕಮ್ಯುನಿಷ್ಟ್ ನ ನಿರ್ನಾಮದೊಂದಿಗೆ ‘ಇಸ್ಲಾಮಿಸ್ಟ್’ ಎನ್ನುವ ಭಸ್ಮಾಸುರ ನ ಸೃಷ್ಟಿಗೂ ಅಮೇರಿಕಾ ಕಾರಣಕರ್ತವಾಯಿತು. ತಾಲಿಬಾನ್ ಶಕ್ತಿಗಳ ನಿಗ್ರಹ ಮತ್ತು ಸಂಪೂರ್ಣ ನಿರ್ಮೂಲನೆ ನಾಗರೀಕ ಸಮಾಜದ ಆದ್ಯ ಕರ್ತವ್ಯ ವಾಗಬೇಕು. ಮಲಾಲಾ ಳ ಮೇಲೆ ನಡೆದ ವಿವೇಚನಾ ರಹಿತ ಕ್ರೂರ ಹಲ್ಲೆ ವಿಶ್ವದಾದ್ಯಂತ ನಾಗರೀಕ ಸಮಾಜವನ್ನು ಭೀತ ಗೊಳಿಸಿದರೂ ಸ್ವಾತ್ ಕಣಿವೆಯ ಹೆಣ್ಣು ಮಕ್ಕಳು ಮಾತ್ರ ತಾವು ತಾಲಿಬಾನ್ ಸೈತಾನಕ್ಕೆ ಬೆದರುವ ಹೆಣ್ಣುಮಕ್ಕಳಲ್ಲ ಎಂದು ಈ ಹೇಳಿಕೆಯೊಂದಿಗೆ ಸಾರಿದರು – “ಸ್ವಾತ್” ಕಣಿವೆಯ ಪ್ರತಿಯೊಬ್ಬ ಹೆಣ್ಣು ಮಗಳೂ ಓರ್ವ ಮಲಾಲಾ, ನಾವು ವಿದ್ಯೆ ಪಡೆದೇ ಸಿದ್ಧ, ಅವರು ನಮ್ಮನ್ನು ಸೋಲಿಸಲಾರರು” – ದಿಟ್ಟ ಮಾತುಗಳು ಮಲಾಲಾ ಳ ಗೆಳತಿಯರಿಂದ.

ಮಲಾಲಾ ಹೆಸರಿನ ಆರ್ಥ ಶೌರ್ಯ, ಧೈರ್ಯ, ‘ಪುಷ್ತು’ ಭಾಷೆಯಲ್ಲಿ. ರಾಕ್ಷಸರಿಗೆ ಹೆದರದೆ ಹೆಸರಿಗೆ ತಕ್ಕಂತೆ ನಡೆದುಕೊಂಡ ಮಾಲಾಲಾಳಿಗೆ ಅವಳ ದಿಟ್ಟ ಹೋರಾಟಕ್ಕೆ ಶುಭ ಹಾರೈಸೋಣ.

 

 

Advertisements

ಎಲ್ಲಿ ಓದಬೇಕು, ಎಲ್ಲಿ ಓದಬಾರದು

ಪತ್ರಿಕೆ, ಪುಸ್ತಕ ಓದದವರ, ಓದಿದರೂ ಖರೀದಿ ಮಾಡದೆ ಉದ್ರಿ ಓದುವವರ ಬಗ್ಗೆ ಬಹಳಷ್ಟು ಓದಿದ್ದೇವೆ, ಕೇಳಿದ್ದೇವೆ. ಆದರೆ ಓದುವವರ ಚಟ ಎಂಥದ್ದು ಎಂದು ಸ್ವಲ್ಪ ನೋಡೋಣ. ನಿಂತಲ್ಲಿ, ಕೂತಲ್ಲಿ, ಸರತಿಯಲ್ಲಿ, ಊಟಕ್ಕೆ ಕೂತಲ್ಲಿ ಎಲ್ಲೆಂದರಲ್ಲಿ ಅಕ್ಷರ ಪುಂಜಗಳು ಕಣ್ಣಿಗೆ ಬಿದ್ದರೆ ಸಾಕು ಅದನ್ನು ಓದಲೇ ಬೇಕು. ಪ್ರಯಾಣದಲ್ಲಿ ಯಾರಾದರೂ ಓದುತ್ತಿದ್ದರೆ ಅವರೊಂದಿಗೆ ತಾವೂ ಕತ್ತು, ಉದ್ದ ಗಿಡ್ಡ ಮಾಡಿ ಹೆಣಗಿ ಓದುವುದನ್ನೂ ನೋಡಿದ್ದೇವೆ. ಎಲ್ಲಾದರೂ ಒಂದು ಸಮಾರಂಭದಲ್ಲಿ ಜನರೊಂದಿಗೆ ಬೇರೆಯದೇ ತಮ್ಮ ಪಾಡಿಗೆ ಪುಸ್ತಕ ಲೋಕದಲ್ಲಿ ಕಳೆದು ಹೋಗುವ ಜನರೂ ಇದ್ದಾರೆ. ಮೊನ್ನೆ ನನ್ನ ಮಗನ ಜನ್ಮ ದಿನಕ್ಕೆ ಮನೆಗೆ ಬಂದ ನನ್ನ ತಂಗಿಯ ೧೦ ವರ್ಷದ ಮತ್ತು ೧೩ ವರ್ಷದ ಪೋರರು ಪುಸ್ತಕ ಹಿಡಿದು ಕೊಂಡು ಕೂತಿದ್ದು ನೋಡಿ ill manners ಎಂದು ಗದರಿಸಿದ್ದೆ. ನನ್ನ ಅಳಿಯಂದಿರು voracious readers . ಹಾಗಂತ ಓದುವುದಕ್ಕೆ ಸಂಪೂರ್ಣ ಸ್ವೇಚ್ಛೆ ಇರಬಾರದು ಎಂದು ನಂಬುವವನು ನಾನು. ನಾನು ಬ್ಯಾಂಕಿನ ಕೆಲಸದ ನಿಮಿತ್ತ ಹೋದಾಗ ಸರತಿಯಲ್ಲಿ ಕಾಯುವ ಸಮಯ ಅಂತರ್ಜಾಲದಿಂದ ಡೌನ್ ಲೋಡ್ ಮಾಡಿಕೊಂಡ ಲೇಖನಗಳನ್ನು ಓದಿ ಕೊಳ್ಳುತ್ತೇನೆ. ಕಳೆದ ವಾರ ಇಲ್ಲಿನ ಜರೀರ್ ಪುಸ್ತಕ ಮಳಿಗೆಗೆ ಹೋದಾಗ ನನ್ನ ನಾಲ್ಕು ವರ್ಷದ ಮಗಳನ್ನೂ ಕರೆದು ಕೊಂಡು ಹೋಗಿದ್ದೆ. ಅಲ್ಲಿ ತನ್ನ ಕಣ್ಣಿಗೆ ಕಂಡ ಪುಸ್ತಕ ವೊಂದನ್ನು ಶೆಲ್ಫ್ ನಿಂದ ತೆಗೆದು ಅಲ್ಲೇ ನೆಲದ ಮೇಲೆ ಕೂತು ಪುಸ್ತಕ ನೋಡುವುದರಲ್ಲಿ ಮಗ್ನಳಾದಳು ನನ್ನ ಮಗಳು. ಓದಲಿಕ್ಕೆ ಬರುವುದಿಲ್ಲ ಆದರೂ ಪುಸ್ತಕದ ಮೇಲೆ ಅತೀವಾಸಕ್ತಿ ಅವಳಿಗೆ. ಅಂತರ್ಜಾಲದಲ್ಲಿ ಒಂದು ಚಿತ್ರ ಕಣ್ಣಿಗೆ ಬಿತ್ತು. ಸೈಕಲ್ ಸವಾರಿ ವ್ಯಕ್ತಿಯೊಬ್ಬ ಸವಾರಿ ನಿರತನಾಗಿರುವಾಗಲೇ ಪುಸ್ತಕವನ್ನು ಓದುತ್ತಿದ್ದಾನೆ. ಇವನ ಓದುವ ಚಟ ಎಲ್ಲರಿಗಿಂತ one step ahead , ಏನಂತೀರಾ?

ಪುಸ್ತಕದ ಮಳಿಗೆಯಲ್ಲಿ ಪುಸ್ತಕದಲ್ಲಿ ಮಗ್ನಳಾದ ಮಗಳ ಚಿತ್ರವನ್ನೂ, ಸೈಕಲ್ ಸವಾರನ ಚಿತ್ರವನ್ನೂ ಹಾಕಿದ್ದೇನೆ, ಓದಲು ಸ್ಫೂರ್ತಿ ಸಿಗಬಹುದೇ ಎಂದು ನೋಡಿ.

ಜೈಪುರ ಸಾಹಿತ್ಯ ಮೇಳ

• ಜೈಪುರ ಸಾಹಿತ್ಯ ಮೇಳ ಪ್ರಸಿದ್ಧಿ ಪಡೆದ ಸಾಹಿತ್ಯಾಸಕ್ತರ ಕೂಟ. ಇಲ್ಲಿ ವಿಶ್ವಾದಾದ್ಯಂತ ಪ್ರಕಾಶಿತವಾದ ಪುಸ್ತಕಗಳ ಅಮೋಘ ಸುಗ್ಗಿ ಮತ್ತು ಹೆಸರಾಂತ ಲೇಖಕರ ಸಮ್ಮಿಲನ. ಪುಸ್ತಕಗಳ Cannes ಎಂದು ಹೇಳಬಹುದು. ಸಾಮಾನ್ಯವಾಗಿ ಇಂಥ ಪುಸ್ತಕ ಮೇಳಗಳು ನೀರಸವಾಗಿ ಶುರುವಾಗಿ ಅಷ್ಟೇ ನೀರಸವಾಗಿ ಮುಗಿದು ಬಿಡುತ್ತವೆ ಕೂಡಾ. ಯಾರೋ ಸಾಹಿತ್ಯ ಪ್ರೇಮಿಗಳು, ಡಿಸ್ಕೌಂಟ್ ಪುಸ್ತಕಕ್ಕಾಗಿ ಆಸೆಯಿಂದ ಬರುವ ಒಂದಿಷ್ಟು ಜನರನ್ನು ಬಿಟ್ಟರೆ ಈ ಉತ್ಸವದ ಮೇಲಿನ ಆಸಕ್ತಿ ಗೌಣ. ಆದರೆ ಈ ಬಾರಿಯ ಮೇಳ ಸ್ವಲ್ಪ ವಿಭಿನ್ನವಾಗಿ ಆರಂಭವಾಗಿ ವಿವಾದದ ಸುಳಿಯಲ್ಲಿ ಸಿಕ್ಕಿ ಕೊಂಡಿತು. ಕಾರಣ ವಿಶ್ವ ಪ್ರಸಿದ್ಧ ಲೇಖಕ, ಕಾದಂಬರಿಕಾರ ಸಲ್ಮಾನ್ ರುಷ್ಡಿ ಈ ಮೇಳಕ್ಕೆ ಆಗಮಿಸುವ ಕಾರ್ಯಕ್ರಮ. ಕಾರ್ಯಕ್ರಮಕ್ಕೆ ರುಶ್ಡಿ ಬರಕೂಡದು ಎಂದು ಕೆಲವು ಮುಸ್ಲಿಂ ಸಂಘಟನೆಗಳು ಹೇಳಿದ್ದೆ ತಡ ರಾಜ್ಯ ಸರಕಾರಗಳು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಭೂಗತ ಲೋಕದ ಬಾಡಿಗೆ ಹಂತಕರಿಂದ ರುಶ್ಡಿ ಜೀವಕ್ಕೆ ಅಪಾಯವಿದೆ ಎಂದು ರುಶ್ಡಿ ತನ್ನ ಭಾರತ ಪ್ರಯಾಣದ ಟಿಕೆಟ್ ಗಳನ್ನು ಹರಿದು ಹಾಕುವಂತೆ ಮಾಡಿದವು. ಮಾರನೆ ದಿನ ಮತ್ತೊಂದು ಸುದ್ದಿ, ಈ ವಿಷಯ ಮುಂಬೈ ಪೊಲೀಸರಿಗೆ ತಿಳಿದೇ ಇಲ್ಲ. ಎರ್ಡೆಡ್ಲೆ ನಾಕು, ಸಲ್ಮಾನ್ ರುಶ್ಡಿ ಗೆ ಮನವರಿಕೆ ಆಯಿತು ಈ ಸುದ್ದಿ ಸುಳ್ಳೆಂದು, ತನ್ನನ್ನು ಉತ್ಸವದ ಹೊರಗಿಡಲು ಸರಕಾರ ಮಾಡಿದ ಹುನ್ನಾರ ಎಂದು.

ಭಾವನೆಗಳನ್ನ ಘಾಸಿಗೊಳಿಸುವ ಅಧಿಕಾರ ಯಾವ ಲೇಖಕನಿಗೂ ಇರಕೂಡದು. ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ವೈಚಾರಿಕ ಸ್ವೇಚ್ಚಾಚಾರಕ್ಕಿರುವ ಮುಕ್ತ ಪರವಾನಗಿ ಅಲ್ಲ. ಕ್ರಿಯಾಶೀಲತೆಯ ಹೆಸರಿನಲ್ಲಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಸೋಗಿನಲ್ಲಿ ಜನರನ್ನು ಕೆರಳಿಸುವ ಪರಿಪಾಠಕ್ಕೆ ನಾಗರೀಕ ಸಮಾಜ ಮಣೆ ಹಾಕಬಾರದು. ಸ್ವೇಚ್ಚಾಚಾರ ಅರಗಿಸಿಕೊಳ್ಳುವ ಗುಣ ನಮ್ಮ ಉಪಖಂಡದ ಜನತೆಗೆ ಇನ್ನೂ ಬಂದಿಲ್ಲ. ಕಾಲ ಬದಲಾದಾಗ ರುಶ್ಡಿ ಯಂಥವರಿಗೆ ಮನ್ನಣೆ ನೀಡೋಣ, ಅಲ್ಲಿಯತನಕ ಸಂಯಮದಿಂದ ಕಾಲದೊಂದಿಗೆ ಹೆಜ್ಜೆ ಹಾಕೋಣ.

ಹಾಗೆಯೇ ಸಲ್ಮಾನ್ ರುಶ್ಡಿ ಪ್ರಕರಣ ಪ್ರಪಂಚದ ಮೊದಲನೆಯದೂ ಅಲ್ಲ, ಕೊನೆಯದೂ ಅಲ್ಲ.

ಕೆಳಗಿನ ಲಿಂಕ್ ಕ್ಲಿಕ್ಕಿಸಿದರೆ ಪ್ರಪಂಚದಲ್ಲಿ ಇದುವರೆಗೆ ಬಹಿಷ್ಕರಿಸಲ್ಪಟ್ಟ ಕೆಲವು ಪುಸ್ತಕಗಳ ಮಾಹಿತಿ ಇದೆ. • http://www.ala.org/advocacy/banned/frequentlychallenged/challengedclassics/reasonsbanned

ಅರ್ಧ ಘಂಟೆ, ಅರೆ ಬೆತ್ತಲೆ

ಗ್ರಂಥಾಲಯ ಎಂದ ಕೂಡಲೇ ನಮ್ಮ ಕಣ್ಣ ಮುಂದೆ ಬರುವುದು ಶತಮಾನಗಳಿಂದ ಸುಣ್ಣ ಬಣ್ಣ ಕಾಣದೆ ಶಿಥಿಲ ಗೊಂಡ, ಒಳ ಹೋದ ಕೂಡಲೇ ಗ್ರಂಥಪಾಲಕ ಎನ್ನುವ ನಿಸ್ತೇಜ, ಸುಸ್ತಾದ, ಹಗಲುಗನಸು ಕಾಣುತ್ತಾ ಕೂತ ವ್ಯಕ್ತಿಯ ದರ್ಶನ ಮತ್ತು ಪುಸ್ತಕಗಳ ಕವಟು ವಾಸನೆ. musty smell. ಯಾವುದೇ ರೀತಿಯಿಂದಲೂ inviting ಅಲ್ಲದ ಒಂದು ತಾಣ, ಗ್ರಂಥಾಲಯ. ಆದರೆ ಎಲ್ಲಾ ಗ್ರಂಥಾಲಯಗಳೂ ಹಾಗೆ ಆಗ ಬೇಕಿಂದಿಲ್ಲವಲ್ಲ?  ಮನುಷ್ಯ ಕ್ರಿಯೇಟಿವ್ ಜೀವಿ. ಕಸದಲ್ಲೂ ರಸ ತೆಗೆಯುವ ಸೃಜನಶೀಲ. ಹೀಗಿರುವಾಗ ಗ್ರಂಥಾಲಯ ಏಕೆ ತನ್ನ creativity ಪರಿಧಿಯಿಂದ ಹೊರಗುಳಿಯಬೇಕು ? ಕಸಿವಿಸಿಯಾಗುವ creativity ಆದರೇನಂತೆ, ಒಂದರ್ಧ ಘಂಟೆಯಾದರೂ ಕಸಿವಿಸಿ ಯನ್ನು ತಡೆಹಿಡಿಯೋಕೆ ಆಗೋಲ್ವೆ? ಅದೂ ವಾರದ ಒಂದೇ ದಿನ ರೀ, ಬುಧವಾರ, ಅದೂ ಅರ್ಧ ಘಂಟೆ ಮಾತ್ರ, ಅದೂ ಜನಜಂಗುಳಿ ತೂಕಡಿಸಲು ಇಷ್ಟಪಡುವ ಮಧ್ಯಾಹ್ನದ ಸಮಯ.  

ಇಂಗ್ಲೆಂಡಿನ ವರ್ಸೆಸ್ಟರ್ ಕಾಲೇಜಿನ ವಿದ್ಯಾರ್ಥಿಗಳು ಒಂದು “ಬ್ರೇಕ್ ಫಾಸ್ಟ್ ಕ್ಲಬ್” ಅನ್ನೋ ಒಂದು ಗುಂಪನ್ನು ಕಟ್ಟಿ ಕೊಂಡಿದ್ದು ಇದಕ್ಕೆ ಸೇರಿದವರು ಬುಧವಾರದ ಮಧ್ಯಾಹ್ನದ ನಂತರ ಅರ್ಧ ಘಂಟೆಗಳ ಕಾಲ ಸಲ್ಮಾನ್ ಖಾನ್ ರಾಗಲು ಉತ್ಸುಕರಾಗುತ್ತಾರೆ. ಅರೆ ನಗ್ನ ಎಂದ ಕೂಡಲೇ ಈ ನಟನ ಹೆಸರೇ ಅಲ್ಲವೇ ಎಲ್ಲರಿಗೂ ಹೊಳೆಯೋದು; (ನನ್ನ ತಂಗಿಯ ಎರಡೂವರೆ ವರ್ಷದ ಪೋರ ‘ಅಹ್ಮದ್’ ತನ್ನ ಅಂಗಿ ಬಿಚ್ಚಿ ಸಲ್ಮಾನ್ ಖಾನ್ ಎಂದು ಬೀಗಿದ).

ವರ್ಸೆಸ್ಟರ್ ಕಾಲೇಜಿನ ವಿದ್ಯಾರ್ಥಿಗಳ ಈ ತಿಕ್ಕಲುತನ ಸ್ವಲ್ಪ ಅತಿಯಾಗಿ ತೋರಿತು ಆಡಳಿತ ಮಂಡಳಿಗೆ. ಬೀದಿಯಲ್ಲಿ, ಬಸ್ಸುಗಳಲ್ಲಿ, ಕೆಫೆ ಗಳಲ್ಲಿ ಎಲ್ಲೆಂದರಲ್ಲಿ ನಗ್ನತೆ ನೋಡಿ, ನೋಡಿ ಬೇಸತ್ತಿದ್ದ ಅವರುಗಳಿಗೆ ಗ್ರಂಥಾಲಯವೂ ಪೆಡಂಭೂತವಾಗಿ ಕಾಡಿತು. ವಿದ್ಯಾರ್ಥಿಗಳಿಗೆ (ನಗ್ನಾರ್ಥಿ?) ಒಂದು ಸಂದೇಶ ಕಳಿಸಿದರು. ‘ಈ ಮೇಲ್’ ಸಂದೇಶ. ಕೂಡಲೇ ಮಾನವಾಗಿ ಬಟ್ಟೆ ತೊಟ್ಟುಕೊಂಡು ಬರುವುದು ಕ್ಷೇಮ, ನಿಮ್ಮ ಈ ನಗ್ನತೆ a piece of harmless fun ಆಗಿ ಕಂಡರೂ ಗ್ರಂಥಾಲಯಕ್ಕೆ ಬರುವ ಪುಸ್ತಕ ಪ್ರಿಯರಿಗೆ ನಿಮ್ಮೀ ನಡತೆ distraction ಆಗಿ ತೋರುತ್ತಿರೋದರಿಂದ ಕೂಡಲೇ ಈ ನಡವಳಿಕೆಗೆ ಪೂರ್ಣ ವಿರಾಮ ಹಾಕಬೇಕು ಎಂದು. ಈ ಧಮಕಿಗೆ ಕೆರಳಿ ವಿದ್ಯಾರ್ಥಿಗಳು ಪುಣ್ಯಕ್ಕೆ ಅರೆ ನಗ್ನರಲ್ಲ, ಗ್ರಹಚಾರಕ್ಕೆ ಪೂರ್ಣ ನಗ್ನಾರದಾರೋ ಎನ್ನುವುದು ಕಾದು ನೋಡಬೇಕಾದ ಬೆಳವಣಿಗೆ.

ಈ ಮೇಲೆ ಹೇಳಿದ ಗ್ರಂಥಾಲಯಕ್ಕೆ ಹೊರ ದೇಶಗಳ ನಾಯಕರೂ ಭೆಟ್ಟಿ ಕೊಡುತ್ತಾರಂತೆ. ಬಹುಶಃ ಇಟಲಿ ದೇಶದ ಪ್ರಧಾನಿ ಬೆರ್ಲಸ್ಕೊನಿ ಯಂಥ ನಾಯಕರಿಗೆ ವಿದ್ಯಾರ್ಥಿಗಳ ಈ ನಡತೆ ಕಸಿವಿಸಿ ತರದೇ ಕಚಗುಳಿ ತರ ಬಹುದೇನೋ?  

ಸರಿ, ಈ creativity ಗೆ ಸಿಕ್ಕ ಸ್ಫೂರ್ತಿಯಾದರೂ ಎಲ್ಲಿಂದ ಎಂದು ತಲೆ ಕೆರೆದುಕೊಳ್ಳುತ್ತಿದ್ದೀರೋ? ಮೇಲಿನ ಚಿತ್ರದಲ್ಲಿ ಎಡ ಮೂಲೆಯಲ್ಲಿ ಪುಸ್ತಕದ ಶೆಲ್ಫ್ ಗಳನ್ನು ಕಾಯಲೆಂದು ನಿಲ್ಲಿಸಿರುವ ಪ್ರತಿಮೆ ಆಗಿರಲಿಕ್ಕಿಲ್ಲ ತಾನೇ ಸ್ಫೂರ್ತಿಯ ಉಗಮ?  

ಚಿತ್ರ ಕೃಪೆ: http://thequirkyglobe.blogspot.com/2011/06/wednesday-is-half-naked-day-at-library.html

ನೀವು ಪುಸ್ತಕದ ನರಿಗಳೋ?

ಪುಸ್ತಕದ ಹುಳುವಿನ ಬಗ್ಗೆ ಕೇಳಿರಲೇಬೇಕಲ್ಲವೇ ನೀವು? ಏನೇ ಅನ್ನಿ ಅತಿಯಾಗಿ ಓದುವವರನ್ನು, ಪುಸ್ತಕಗಳನ್ನು ಪ್ರೀತಿಸುವವರನ್ನು ಹುಳು ಎಂದು ಮಾತ್ರ ಜರೆಯಬಾರದಿತ್ತು ನಮ್ಮ ಹಿರಿಯರು. ‘ದೇಶ ಸುತ್ತು ಇಲ್ಲಾ ಕೋಶ ಓದು’ ಎಂದ ಸಮಾಜವೇ ಈ ಹುಳು ಎನ್ನುವ ಪದವನ್ನು ಓದುಗನಿಗೆ ದಯಪಾಲಿಸಿದ್ದು ಅಚ್ಚರಿಯೇ ಸರಿ. ಜ್ಞಾನಾರ್ಜನೆಯ ಮೊದಲ ಮೆಟ್ಟಿಲೇ ಓದು. ಪವಿತ್ರ ಕುರಾನ್ ಅವತೀರ್ಣವಾಗಿದ್ದು ಈ ಆರಂಭದ ಸಾಲಿನಿಂದ. “ಓದು, ನಿನ್ನನ್ನು ಸೃಷ್ಟಿಸಿದ ಭಗವಂತನ ನಾಮದಿಂದ”. ಓದಿನ ಬಗೆಗಿನ ವರ್ಣನೆ, ಕಲ್ಪನೆಗಳು ಹೀಗಿರುವಾಗ ಹುಳು ನುಸುಳಿದ್ದಾದರೂ ಎಲ್ಲಿಂದ? ಅಥವಾ ಪುಸ್ತಕದ ಹುಳು ಎಂದು ಕರೆಯುವಾಗ ಅದರಲ್ಲಿ ಗೂಢಾರ್ಥವೇನಾದರೂ ಅವಿತಿರಬಹುದೇ? ಏಕೆಂದರೆ ಹಳೇ ತಲೆಮಾರಿನ ತಲೆ ಯೋಚಿಸುವ ರೀತಿಯೇ ಬೇರೆ ನೋಡಿ.

ಎಲ್ಲರಿಗೂ ತಿಳಿದಂತೆ ಕಾಗದದ ಉತ್ಪಾದನೆ ಮರಗಳಿಂದ ತಾನೇ ? ಗೆದ್ದಲಿನಂಥ ಹುಳುವಿನ ಕೆಲಸವೂ ಅದೇ ಅಲ್ಲವೇ? ಒಂದು ಆರೋಗ್ಯವಂತ, ದಷ್ಟ ಪುಷ್ಟ ಮರವನ್ನ ನಿಧಾನವಾಗಿ, ಶ್ರದ್ಧೆಯಿಂದ ಕೊರೆಯುತ್ತಾ ದುರ್ಬಲಗೊಳಿಸಿ ಕೊನೆಗೆ ಅದರ ಅವಸಾನಕ್ಕೆ ಕಾರಣವಾಗುವುದು? ಒಂದು ಮರವನ್ನು ಬಲಿ ಹಾಕಿ ತಾನೇ ನಮ್ಮ ಮಹೋನ್ನತ ನಾಯಕರ ಬಲಿದಾನದ ಬಗ್ಗೆ ನಾವು ಓದೋದು? ಈ ಕಾರಣಕ್ಕಾಗಿರಬಹುದೇ ಪುಸ್ತಕ ಪ್ರೇಮಿಗಳನ್ನು ಪುಸ್ತಕದ ಹುಳು ಎಂದು ನಿಕೃಷ್ಟವಾಗಿ ಕರೆಯುವುದು?

ಪುಸ್ತಕದ ನರಿ. ಪುಸ್ತಕಗಳನ್ನು ನುಂಗುವ, ಅತಿಯಾದ ಕಲ್ಪನಾಮಯಿಯಾಗಿದ್ದು ಮತ್ತು ಅತಿ ಹೆಚ್ಚು ಪುಸ್ತಕದಂಗಡಿಯ ಖರ್ಚುಳ್ಳ ಒಂದು ಪುಟ್ಟ ಸಸ್ತನಿ. ಪುಸ್ತಕದ ನರಿಗಳು ನಾನಾ ತೆರನಾದ ವಾಸಸ್ಥಳಗಳಲ್ಲಿ ಬದುಕುತ್ತವೆ ಮತ್ತು ಓದಲೆಂದು ಅಸಹಜವಾದ ಸ್ಥಳವನ್ನ ಆಯ್ಕೆ ಮಾಡಿಕೊಳ್ಳುತ್ತವೆ. ಅವು ಒಂಟಿಯಾಗಿ ಬೇಟೆ ಯಾಡಲು ಇಷ್ಟಪಡುತ್ತವೆ ಮತ್ತು ತಮ್ಮ ಹಿಂಡಿನೊಂದಿಗೆ ತಮ್ಮ ಬೇಟೆಯ ಬಗ್ಗೆ ಚರ್ಚಿಸುತ್ತವೆ.

ಈ ಮೇಲಿನ ಮಾತುಗಳು ಪುಸ್ತಕಗಳನ್ನು ಪ್ರೀತಿಸುವ ವ್ಯಕ್ತಿಯೊಬ್ಬರ ಬ್ಲಾಗ್ನಿಂದ ಸಿಕ್ಕಿದ್ದು. ಓದುಗನನ್ನು ಹುಳು ವಿನೊಂದಿಗೆ ಹೋಲಿಸದೆ ನರಿಯೊಂದಿಗೆ ಹೋಲಿಸಿಕೊಂಡು ಬರೆದ ಸಾಲುಗಳು. ಪುಸ್ತಕದ ನರಿಗೂ, ನರನಿಗೂ ಎಷ್ಟೊಂದು ಸಾಮ್ಯ ನೋಡಿ.

ಈಗ ಹೇಳಿ ನೀವು ಪುಸ್ತಕದ ಹುಳುವೋ ಅಥವಾ ಪುಸ್ತಕದ ಗುಳ್ಳೆ ನರಿಯೋ ಎಂದು.

ನನ್ನ ಬಗ್ಗೆ ಕೇಳಿದಿರಾದರೆ ನನ್ನ ಪುಸ್ತಕ ಪ್ರೀತಿ ಹೀಗೆ. an ardent book enthusiast. ಪುಸ್ತಕದ ಮೇಲ್ಮೆಯನ್ನು ಅಪ್ಯಾಯಮಾನದಿಂದ ಓರ್ವ ಮಮತಾಮಯಿ ತಂದೆ ತನ್ನ ಮಗನ ತಲೆ ಸವರುವಂತೆ ಸವರಿ, ಪುಸ್ತಕದ ಪುಟಗಳನ್ನು ತಿರುವುತ್ತಾ ಅದರೊಳಗಿನಿಂದ ಬರುವ ನತದೃಷ್ಟ ಮರದ ತೊಗಟೆಯ ಘಮ ಘಮ ವಾಸನೆಯನ್ನು ಆಸ್ವಾದಿಸುತ್ತಾ, ಅಕ್ಷರಗಳ ಜೋಡಣೆ, ಅಲಂಕಾರದ ಚೆಂದಕ್ಕೆ ತಲೆದೂಗುತ್ತಾ, ಮುನ್ನುಡಿ, ಹಿನ್ನುಡಿ ಬರೆದವರ ಬಗ್ಗೆ ಕಲ್ಪಿಸಿಕೊಳ್ಳುತ್ತಾ, ಬರೆದವ ಎಷ್ಟು ಸಂಪಾದಿಸಿರಬಹುದೆಂದು ಲೆಕ್ಕ ಹಾಕುತ್ತಾ, ಕೊನೆಗೆ, ಓರೆಗಣ್ಣಿನಿಂದ ಈ ಪುಸ್ತಕಕ್ಕೆ ಎಷ್ಟಿರಬಹುದು ಎಂದು ಭಯ, ಆಸೆ ಮಿಶ್ರಿತ ಭಾವನೆಗಳಿಂದ ನೋಡುವುದೇ ನನ್ನ ಮಟ್ಟಿಗಿನ ಹುಮ್ಮಸ್ಸು, enthusiasm. ಹಾಗಾಗಿ ನಾನು ಅತ್ತ ಯಕಃಶ್ಚಿತ್ ಹುಳುವೂ ಅಲ್ಲ, ಇತ್ತ scheming ಗುಳ್ಳೆ ನರಿಯೂ ಅಲ್ಲ.

ವಯಸ್ಕರಿಗೆ ಮಾತ್ರ: ಸರ್ದಾರ್ಜಿ ಯ ತಿರುಗೇಟು

ಖುಷ್ವಂತ್ ಸಿಂಗ್ ರನ್ನು ಅರಿಯದವರು ವಿರಳ. ಅವರ ತಲೆಮಾರಿನ ತುಂಬಾ ಜನ ಉರುಳಿಕೊಂಡರೂ ಅವರು ಮಾತ್ರ ಇನ್ನೂ ನಾಟ್ ಔಟ್. the sunset club ಇವರ ಇತ್ತೀಚಿನ ಪುಸ್ತಕ. ಕಥೆಯ ಪಾತ್ರ ಬದುಕಿನ ಸಂಜೆಯಲ್ಲಿರುವ ಮೂವರು ಪುರುಷರ ಅನುಭವದ ಮೆಲುಕು. ಹಿಂದೂ ಮುಸ್ಲಿಂ, ಹಿಂದೂ ಸಿಖ್ ರಾಜಕೀಯ ಸೇರಿದಂತೆ ಎಲ್ಲವೂ ಇದೆ. ಎಲ್ಲವೂ ಇದೆ ಎಂದಾಗ ಸೆಕ್ಸ್ ಸಹ ಇದೆ ಎಂದು ಕೊಳ್ಳಿ. ಖುಷ್ವಂತ್ ಒಬ್ಬ ಪೋಲಿ ಲೇಖಕ. ಪೋಲಿ ಪದವನ್ನು abusive ಆಗಿ ಉಪಯೋಗಿಸಿಲ್ಲ. ಆ ಪುಸ್ತಕದ ಲ್ಲಿನ ಒಂದು ಜೋಕ್ ಬಗ್ಗೆ ಓದಿ, ಚೆನ್ನಾಗಿ ನಕ್ಕುಬಿಡಿ.

ಸರ್ದಾರ್ಜಿ ಬಗೆಗಿನ ಜೋಕುಗಳು ಭಾರತೀಯರ ಮೊಬೈಲುಗಳಲ್ಲಿ ರಾರಾಜಿತ. ಅವರ ಬಗ್ಗೆ ಇರುವುದನ್ನೂ, ಇಲ್ಲದ್ದನ್ನೂ ಹುಟ್ಟಿಸಿ ಸೃಷ್ಟಿಸಿದ ಜೋಕುಗಳು ಸರ್ದಾರ್ಜಿಗಳನ್ನು ತಿಕ್ಕಲು ಸ್ವಭಾದವರು ಎನ್ನುವ ರೀತಿ ಬಿಂಬಿಸುವುದನ್ನು ನಾವು ಕಂಡಿದ್ದೇವೆ. ಎಲ್ಲರ ಬಾಯಲ್ಲಿ ತನ್ನ ಬಗೆಗಿನ ಜೋಕುಗಳನ್ನು ಕೇಳಿ ಕೇಳಿ ಸರ್ದಾರ್ಜಿ ತಿರುಗೇಟು ನೀಡುತ್ತಾನೆ ಕೆಲಸಕ್ಕಾಗಿ ನಡೆದ ಸಂದರ್ಶನವೊಂದರಲ್ಲಿ.

ಸಂದರ್ಶನಕ್ಕೆಂದು ಕೋಣೆಯೊಳಗೆ ಹೋಗುವ ಸರ್ದಾರ್ಜಿ ಗೆ ಮೂವರು ಅಧಿಕಾರಿಗಳು ಕಾದಿರುತ್ತಾರೆ. ಅಧಿಕಾರಿಯೊಬ್ಬನ ಕೆಣಕುವ ಬುದ್ಧಿ ಜಾಗೃತವಾಗಿ ಅವನನ್ನು ಕೆಣಕಲು ನಿರ್ಧರಿಸಿ ಪ್ರಶ್ನೆ ಕೇಳಲು ಆರಂಭಿಸುತ್ತಾನೆ.

ಅಧಿಕಾರಿ: ಸರ್ದಾರ್, kooooooooo, ಛುಕ್ ಭುಕ್, ಛುಕ್, ಭುಕ್, kooooooooooo ಇದು ಯಾವುದರ ಶಬ್ದ? ಸರ್ದಾರ್ಜಿ: ಗೆಲುವಿನಿಂದ, ಅದು “ರೈಲು”, ರೈಲಿನ ಶಬ್ದ.

ಅಧಿಕಾರಿ: ಸರಿಯಾಗೇ ಹೇಳಿದಿರಿ, ಆದರೆ ಈ ರೈಲು ನಿಜಾಮುದ್ದೀನ್ ಎಕ್ಸ್ ಪ್ರೆಸ್ಸೋ, ರಾಜಧಾನಿ ಎಕ್ಸ್ ಪ್ರೆಸ್ಸೋ?

ಸರ್ದಾರ್ಜಿ: ರಾಜಧಾನಿ ಎಕ್ಸ್ ಪ್ರೆಸ್.

ಅಧಿಕಾರಿ: ನೋ, ತಪ್ಪು. ಇದು ನಿಜಾಮುದ್ದೀನ್ ಎಕ್ಸ್ ಪ್ರೆಸ್.

ಅಧಿಕಾರಿ: ಮತ್ತೊಂದು ಪ್ರಶ್ನೆ. ವೌ, ವೌ, ಬೌ, ಬೌ, ಬೌ, ಇದು ಯಾವುದರ ಶಬ್ದ?

ಸರ್ದಾರ್ಜೀ: ಆಹ್, ಇದು ನಾಯಿಯದು.

ಅಧಿಕಾರಿ: ವೆರಿ ಗುಡ್. ಇದು ಯಾವ ನಾಯಿಯ ಶಬ್ದ? doberman ಜಾತಿಯದೋ ಅಥವಾ spaniel ಜಾತಿಯದೋ?

 ಸರ್ದಾರ್ಜೀ: ತಲೆ ಕೆರೆದು ಕೊಳ್ಳುತ್ತಾ, ಇದು ಡಾಬರ್ಮನ್ ಜಾತಿಯದು.

ಅಧಿಕಾರಿ: ನೋ, ತಪ್ಪು. ಇದು spaniel.

ಈಗ ಸರ್ದಾರ್ಜೀಗೆ ಸ್ಪಷ್ಟವಾಗುತ್ತದೆ. ನನ್ನನ್ನು ಕೆಲಸಕ್ಕಾಗಿ ಸಂದರ್ಶಿಸಲು ಕರೆದಿದ್ದಲ್ಲ, ಬದಲಿಗೆ ಹೀಯಾಳಿಸಲು, ಹೇಗೂ ಬಂದಾಗಿದೆ, ಹೋಗುವ ಮೊದಲು ಇವರಿಗೂ ಒಂದು ಪಾಠ ಕಲಿಸೋಣ ಎಂದು, ನಾನೊಂದು ಪ್ರಶ್ನೆ ಕೇಳಲೇ ಎನ್ನುತ್ತಾನೆ. ಅಧಿಕಾರಿಗಳು ಓಹೋ, ಧಾರಾಳವಾಗಿ ಎಂದು ಸಮ್ಮತಿಸುತ್ತಾರೆ.

ಒಂದು ಕಾಗದದ ಹಾಳೆ ತೆಗೆದ ಸರ್ದಾರ್ ಹೆಣ್ಣಿನ ಯೋನಿಯ ಚಿತ್ರವನ್ನು ಬಿಡಿಸಿ, ಇದು ಏನು ಎಂದು ಹೇಳುವಿರಾ? ಎಂದು ಕೇಳುತ್ತಾನೆ. ಮೂರೂ ಅಧಿಕಾರಿಗಳು ಪುಳಕಿತರಾಗಿ ಒಕ್ಕೊರಲಿನಿಂದ “ಯೋನೀ” ಎನ್ನುತ್ತಾರೆ. ಸರ್ದಾರ್ಜೀ ಹೇಳುತ್ತಾನೆ, ಫೆಂಟಾಸ್ಟಿಕ್. ನೀವುಗಳು ಸರಿಯಾಗೇ ಹೇಳಿದಿರಿ. ಈಗ ಹೇಳಿ, ಈ ಯೋನಿ ನಿಮ್ಮ ತಾಯಿಯದೋ ಅಥವಾ ಸೋದರಿಯದೋ? ಅವಾಕ್ಕಾದ ಅಧಿಕಾರಿಗಳು ತಾವು ತೆರೆದ ಬಾಯಿಯನ್ನು ಮುಚ್ಚುವ ಮೊದಲೇ ಸರ್ದಾರ್ಜೀ ಗೆಲುವಿನ ನಗೆಯೊಂದಿಗೆ ಕಚೇರಿಯ ಮೆಟ್ಟಿಲು ಇಳಿದು ರಸ್ತೆ ಕಡೆ ಹೆಜ್ಜೆ ಹಾಕುತ್ತಾನೆ.

ಯೇಗ್ದಾಗೆಲ್ಲಾ ಐತೆ..ಓದಲೇಬೇಕಾದ ಪುಸ್ತಕ

ಯೇಗ್ದಾಗೆಲ್ಲಾ ಐತೆ, ಪುಸ್ತಕವನ್ನು ಮಂಗಳೂರಿನ ಕನ್ನಡ ಪುಸ್ತಕ ಪ್ರದರ್ಶನದಲ್ಲಿದ್ದ ಮಳಿಗೆಯೊಂದರಿಂದ ಖರೀದಿಸಿದೆ. ಮಾರಿದ ವ್ಯಕ್ತಿ ಪುಸ್ತಕದ ಬಗ್ಗೆ ಪ್ರಶಂಸೆಯ ಮಾತುಗಳನ್ನು ಹೇಳಿದ್ದರಿಂದಲೂ, ಪುಸ್ತಕ ನಿರೀಕ್ಷೆಗೆ ನಿಲುಕದೆ ಇದ್ದರೆ ಹೋಗುವುದು ಐವತ್ತು ರೂಪಾಯಿ ತಾನೇ ಎನ್ನವ nonchalant ಧೋರಣೆಯಿಂದ ಪುಸ್ತಕವನ್ನ ಖರೀದಿಸಿದೆ. ಹಳ್ಳಿಯ ಮಾಸ್ತರರೊಬ್ಬರ ಅನುಭವ ಕಥನ ಈ ಪುಟ್ಟ ಪುಸ್ತಕ. ಗ್ರಾಮವೊಂದರಲ್ಲಿ ಯೋಗಿಯೊಬ್ಬನೊಂದಿಗಿನ ತಮ್ಮ ಸ್ನೇಹದ ಬಗ್ಗೆ, ತಮಗಾದ ಅನುಭವದ ಬಗ್ಗೆ ಸರಳವಾಗಿ ಬರೆದಿದ್ದಾರೆ.  

ಮುಕುಂದನ ಹಳ್ಳಿಯ ಈ ಸ್ವಾಮೀ ಒಬ್ಬ ಸರಳ ಸನ್ಯಾಸಿ. ಕಳ್ಳ ಸನ್ಯಾಸಿ, ಭಂಗಿ, ಗಾಂಜಾ ಸೇದುವವನು, “ಭಕ್ತರ ಮನೆಯ ಮುದ್ದೆ, ಬಸವಿ ಮನೆಯ ನಿದ್ದೆ”….   ಹೀಗೇ ವಿನಾಕಾರಣ ಪುರಾವೆಗಳಿಲ್ಲದೆ ಅವರನ್ನು ಜನ ತೆಗಳಿದರೂ (ಯಾರೋ ಹೇಳಿದ್ದನ್ನು, ಹೇಳಿ ಕೊಟ್ಟಿದ್ದನ್ನು ನಂಬಿ prejudiced ಆಗೋ ವಿದ್ಯಾ?ವಂತ ಸಮೂಹ ನಮ್ಮ ನಡುವೆ ಇರುವಾಗ ಗ್ರಾಮಸ್ಥರ ವರ್ತನೆ ಬಗ್ಗೆ ಅಚ್ಚರಿ ಪಡಬೇಕಿಲ್ಲ ) ಅದ್ಯಾವುದನ್ನೂ ಕಿವಿಗೆ ಹಾಕಿ ಕೊಳ್ಳದೆ ಮೇಷ್ಟ್ರು ತಮ್ಮ ಸ್ನೇಹವನ್ನು ಅವರೊಂದಿಗೆ ಮುಂದುವರೆಸುತ್ತಾ ಬದುಕು ಒಂದು ಒಂದು ಭ್ರಮೆ ಎಂದು ಕಂಡು ಕೊಳ್ಳುತ್ತಾರೆ. 

ಮುಕುಂದನ ಹಳ್ಳಿಯ ಸ್ವಾಮಿಗಳಿಗೆ ಬದುಕಿನ ಬಗ್ಗೆ ಸರಳವಾಗಿ, ಜನರ ದೈನಂದಿನ ಬದುಕಿನೊಂದಿಗೆ ತಳುಕು ಹಾಕಿ ವಿನೋದವಾಗಿ, ಮನದಟ್ಟಾಗುವಂತೆ ಹೇಳುವ ಸಾಮರ್ಥ್ಯ ತಮ್ಮ ಅಲೆದಾಟದಷ್ಟೇ ಸುಲಭ. ಒಮ್ಮೆ  ವ್ಯಕ್ತಿಯೊಬ್ಬ ಬಂದು ಯಾರೋ ಸತ್ತು ಹೋದರು ಎನ್ನುವ ಸುದ್ದಿಯನ್ನ ಇವರಿಗೆ ತಲುಪಿಸುತ್ತಾನೆ. ಸತ್ತು ಹೋದ ಎನ್ನುವ ಪದ ಕೇಳಿದ ಕೂಡಲೇ ಹೌಹಾರಿದಂತೆ ನಟಿಸಿದ ಸ್ವಾಮಿಗಳು, ಅದ್ಹೇಗಯ್ಯಾ, ಅವನೆಲ್ಲಾದರೂ ಸತ್ತು ಹೋಗಲು ಸಾಧ್ಯವೇ ಎಂದು ಕೇಳುತ್ತಾರೆ. ಸ್ವಾಮಿಗಳ ಈ ಪ್ರಶ್ನೆಯ ಮರ್ಮ ಅರಿಯದ ಹಳ್ಳಿಗ ಮತ್ತಷ್ಟು ವಿವರಿಸುತ್ತಾನೆ. ಆದರೂ ಸ್ವಾಮಿ ಜಪ್ಪಯ್ಯ ಅನ್ನುವುದಿಲ್ಲ. ಎಲ್ಲಾದರೂ, ಯಾರಾದರೂ ಸತ್ತು ಹೋಗೋದಿದೆಯೇ? ಇಷ್ಟೆಲ್ಲಾ ವರ್ಷ ಬಾಳಿ  ಬದುಕಿದವನು ಅಷ್ಟು ಸಲೀಸಾಗಿ “ಸತ್ತು ಹೋಗು” ವನೆ? ಎಂದು ಕೇಳಿ ಅವನನ್ನು ಮತ್ತಷ್ಟು ಗಲಿಬಿಲಿಗೊಳಿಸುತ್ತಾರೆ.  “ಸತ್ತು ಹೋಗು’ ಎನ್ನುವ ಪದದ ಹಿಂದಿನ ಗೂಢಾರ್ಥವನ್ನು ಸ್ವಾಮಿಗಳಂಥ ವರಿಗೆ ಅರಿಯುವುದು ಸುಲಭ. ಉಸಿರಾಟ ನಿಂತು ಬಿಟ್ಟರೆ ಅವನು ಸತ್ತ ಎಂದು ಬಗೆಯುವ ಹಳ್ಳಿಯ ನಿರಕ್ಷರ ಕುಕ್ಷಿಗೆ ಹೇಗೆ ತಾನೇ ತಿಳಿಯಬೇಕು ಸಾವು ಮತ್ತೊಂದು ಬದುಕಿನೆಡೆಗಿನ ಪಯಣ ಎಂದು ? ಹೌದಲ್ಲವೇ? ದೀರ್ಘಾವಧಿ ಬಾಳಿ ಬದುಕಿದ  ಮಾಡಬೇಕಾದ್ದನ್ನೂ, ಮಾಡಬಾರದ್ದನ್ನೂ ಎಲ್ಲಾ ಮಾಡಿದ ಮನುಷ್ಯ ಸದ್ದಿಲ್ಲದೇ “ಸತ್ತು ಹೋಗಲು” ಹೇಗೆ  ಸಾಧ್ಯ? ಬದುಕಿನ ಮತ್ತು ಸಾವಿನ ನಿಜರೂಪವನ್ನು ಸ್ವಾಮಿಗಳು ಲೀಲಾಜಾಲವಾಗಿ ನಗುತ್ತಾ ಹಾಸ್ಯದಿಂದ ವಿವರಿಸುತ್ತಾರೆ ಸಾವಿನ ಸುದ್ದಿ ತಂದಾತನಿಗೆ.

ನದಿಯಲ್ಲಿ ನೀರಿನ ಹರಿವನ್ನು ನೋಡುತ್ತಾ, ಅದರೊಂದಿಗೆ ಹೊರಡುವ ನೀರ ಗುಳ್ಳೆಗಳೂ ಸ್ವಾಮಿಗಳ ಆಸಕ್ತಿ,  ಕಲ್ಪನೆಯನ್ನು ಹಿಡಿದಿಡುತ್ತವೆ. ಕ್ಷಣ ಮಾತ್ರ ಬದುಕುವ ಆ ಗುಳ್ಳೆಗಳ ಹಿಂದಿನ ಮರ್ಮವನ್ನೂ, ನಮ್ಮ ಬದುಕಿನ ಟೊಳ್ಳುತನ ದೊಂದಿಗೆ ಹೋಲಿಸಿ ಗಾಂಭೀರ್ಯ ಮಿಳಿತ ನಗುವಿನೊಂದಿಗೆ ಬಿಡಿಸಿ ಹೇಳುತ್ತಾರೆ. ಒಟ್ಟಿನಲ್ಲಿ ಒಂದು ಚೆಂದದ ಪುಟ್ಟ ಪುಸ್ತಕ.  ಒಂದು ರೀತಿಯಲ್ಲಿ reader’s digest ಓದಿದ ಹಾಗುತ್ತದೆ ಸ್ವಾಮಿಗಳ ಮಾತು, ಅನುಭವ ನೋಡಿದಾಗ. ಇಂಥ ನಿಸ್ವಾರ್ಥಿ ಸಾಧಕರಿಂದಲೇ ಇರಬೇಕು ನಮ್ಮ ಸಮಾಜ ಒಳ್ಳೆಯತನವನ್ನು ತನ್ನಲ್ಲಿ ಇನ್ನೂ ಉಳಿಸಿಕೊಂಡು ಬರುತ್ತಿದೆ. ಆದರೆ ಇವರುಗಳ ಸಂಖ್ಯೆ ಕ್ಷೀಣಿಸುತ್ತಿರುವುದೂ ಸಹ ತುಂಬು ಬದುಕು ಸಾಗಿಸಿದ ಸ್ವಾಮಿಗಳ ಮಾತುಗಳಷ್ಟೇ ಸತ್ಯ.

ಮನುಷ್ಯರೆಲ್ಲರೂ ಸಮಾನರು ಎಂದು ಸ್ವಾಮಿಗಳು ಹೇಳುವ ರೀತಿ ಇಲ್ಲಿದೆ ನೋಡಿ;

“ಊರು ಕೇರಿ, ಕುಲ ಗೋತ್ರ ಹೆಣ್ಣು ಗಂಡು ಎಲ್ಲಾ ಇಂಗಡಿಸ್ತಾರೆ. ನಾವು ಶಿವಾಚಾರ್ದೋರು, ನಾವು ದೇವಾಂಗ ದೋರು, ನಾವ್ ಬ್ರಾಮಣರು, ಅದರಾಗ್ ಮತ್ತೆ ನಾಮ್ದೋರು, ಅಡ್ಡ ಗಂಧದೋರು, ಮುದ್ರೆರು, ಅವ್ರು ಇವ್ರು ಒಬ್ಬರನ್ನ ಕಂಡ್ರೆ ಒಬ್ರು ಮಾರು ದೂರ ಹೋಗ್ತಾರೆ. ಮಾಡಿ ಮೈಲಿಗೆ ಅಂತಾರೆ, ನಗು ಬರ್ತೈತೆ……..ಈ ಮುದ್ರೆ, ವಿಭೂತಿ ಎಲ್ಲಾ ಅಷ್ಟೇ. ಬಾರೆ ಹೊರಗಳ ಯಾಪಾರ ಹಿಡಿದು ಬಡಿದಾಡ್ತಾರೆ” ಈ ಮಾತನ್ನು ಆಧುನಿಕ ಸ್ವಾಮಿಗಳಿಗೆ ಕೇಳಿಸಿದರೆ ಯಾವ ಉತ್ತರ ಸಿಗಬಹುದೋ?    

ಸ್ವಾಮಿಗಳ  ಕೆಲವೊಂದು ಸಂಗತಿಗಳು ಉತ್ಪ್ರೇಕ್ಷೆ ಎಂದು ತೋರಿದರೂ ಈ ಭಾವನೆ ಮತ್ತು ದಂತ ಕಥೆಗಳು ದೇವ ಮಾನವರಿಗೆ ಜನ ಅಂಟಿಸಿಯೇ ತೀರುತ್ತಾರೆ. ಅವನು ಕುಡುಕ, ಭಂಗಿ, ಗಾಂಜಾ ಹಾಕುವವನು ಎಂದೆಲ್ಲಾ ಜರೆಯುವ ಅದೇ ಬಾಯಿ ಅವರ ಪವಾಡಗಳ ಬಗ್ಗೆಯೂ ಭಯ ಭಕ್ತಿಯಿಂದ ಮಾತನಾಡುತ್ತಾರೆ, ಅದೇ ಸೋಜಿಗ.

ಹಳ್ಳಿಗಳಲ್ಲಿ ಈಗ ಅಪರೂಪವಾಗುತ್ತಿರುವ ಸಾಮರಸ್ಯದ ಜೀವನ ಸಹ ಈ ಮೇಷ್ಟರ ನೆನಪಿನಂಗಳದಿಂದ ಮರೆಯಾಗುವುದಿಲ್ಲ. ಮುಸ್ಲಿಮರಾದರೂ ಹಯಾತ್ ಸಾಹೇಬರು ಹಳ್ಳಿಯಲ್ಲಿನ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕೊಡುತ್ತಿದ್ದ ಸಹಾಯ, ಗ್ರಾಮಸ್ಥರ ಮೂಢ ನಂಬಿಕೆಗಳು ಹೀಗೇ ಹತ್ತು ಹಲವು ವಿಚಾರಗಳನ್ನು ಜೋಪಾನದಿಂದ ಓದುಗರಿಗಾಗಿ ಕಾಯ್ದುಕೊಂಡು ನಮ್ಮ ಕೈಗಳಿಗರ್ಪಿಸಿದ ಕೃಷ್ಣ ಶಾಸ್ತ್ರಿಗಳು ಮಹದುಪಕಾರವನ್ನೇ ಮಾಡಿದ್ದಾರೆ ಈ ಪುಸ್ತಕ ಬರೆಯುವ ಮೂಲಕ. ಈ ಪುಸ್ತಕ ಆಂಗ್ಲ ಭಾಷೆಗೆ ತರ್ಜುಮೆಗೊಂಡಿದೆಯೋ ಗೊತ್ತಿಲ್ಲ. ತರ್ಜುಮೆ ಆಗದ ಪಕ್ಷದಲ್ಲಿ ಯಾರಾದರೂ ಈ ಮಹತ್ಕಾರ್ಯಕ್ಕೆ ಕೈ ಹಾಕಿದರೆ ಈ ಪುಸ್ತಕ ಹಿಟ್ ಆಗುವುದರಲ್ಲಿ ಸಂಶಯವಿಲ್ಲ.   

ಒಬ್ಬ ನಿರಕ್ಷರಕುಕ್ಷಿ ಆದರೆ ಬದುಕಿನ ನಿಜವಾದ ಪಾಠದಲ್ಲಿ ಅದ್ವಿತೀಯ professor ಆದ ಸ್ವಾಮಿಯೊಬ್ಬರ ಪರಿಚಯ ನನ್ನಲ್ಲಿ ಒಂದು ಅವರ್ಣನೀಯವಾದ ಭಾವವನ್ನೇ ಸೃಷ್ಟಿಸಿತು. ರಾಜಕಾರಣಿಗಳ ಒಡನಾಟದಿಂದ ನಾಡಿನ ಸಂಪನ್ಮೂಲ ಲೂಟಿ ಮಾಡುವ ಕೆಲವು ಸ್ವಾಮಿಗಳಿಗೂ ಈ ಮುಕುಂದೂರಿನ ಸ್ವಾಮಿಗೂ ಎತ್ತಣ ಸಂಬಂಧ ಎಂದು ತೋರಿದರೂ ಆಶ್ಚರ್ಯವಿಲ್ಲ. ಒಬ್ಬ ಅಹಂಕಾರಿ, ಸ್ವಾಮಿಯೊಬ್ಬ ತನ್ನ ಮಠಕ್ಕೆ ಬಂದು ಪೊಗರು ತೋರಿಸಿದರೂ ತನ್ನ ಸಂಸ್ಕೃತಿ ಕಲಿಸಿದ ವಿನಯ ವಿಧೇಯತೆ ಯನ್ನ ಮೋಹಕವಾಗಿ ಪ್ರದರ್ಶಿಸಿ ಮನಃಪೂರ್ವಕ ಆ ಸ್ವಾಮಿಯ ಸೇವೆ ಮಾಡುವ ಇವರ ಉದಾತ್ತ ಸಂಸ್ಕಾರ ನಮ್ಮನ್ನು ನಿಬ್ಬೆರಗಾಗಿಸುತ್ತದೆ. ಅಹಂಕಾರಿಗೆ ಅಹಂಕಾರವೇ ಉತ್ತರ ಎನ್ನುವ ನಮಗೂ ಆ ಸ್ವಾಮಿಗೂ ಇರುವ ವ್ಯತ್ಯಾಸ ನೋಡಿ.

ನನ್ನ ಆಸಕ್ತಿಯನ್ನು ಈ ಪುಟ್ಟ ಪುಸ್ತಿಕೆ ಈ ರೀತಿ ಹಿಡಿದಿಡುತ್ತದೆ ಎಂದು ಪುಸ್ತಕ ಕೊಂಡಾಗ ನನಗನ್ನಿಸಿರಲಿಲ್ಲ. ಸಾಧು ಸಂತರ ಬಗ್ಗೆ ದೊಡ್ಡ ಒಲವು ಆಸಕ್ತಿ ಇಲ್ಲದ ನನಗೆ ಒಬ್ಬ ಸಾಧಾರಣ, ಪ್ರಚಾರ ಫಲಾಪೇಕ್ಷೆ ಬೇಡದ ಸ್ವಾಮಿಯೊಬ್ಬರ ಪರಿಚಯ ಆದದ್ದು ಒಂದು ಅಪರೂಪದ ಅನುಭವವೇ ಸರಿ. ಕೊನೆಯದಾಗಿ ಇಲ್ಲಿದೆ ಮತ್ತೊಂದು ಬದುಕನ್ನು ಸಕರಾತ್ಮಕವಾಗಿ ಕಾಣಬೇಕೆಂದು ಹೇಳುವ ಮಾತು.

ಒಮ್ಮೆ ತನ್ನ ಮೂರು ವರ್ಷದ ಮಗು ಗುಲಾಬಿ ಕೀಳಲು ಗಿಡದ ಕಡೆ ಹೋಗುತ್ತಿದ್ದನ್ನು ಕಂಡ ಮಗುವಿನ ತಾಯಿ “ಅಯ್ಯೋ, ಅಯ್ಯೋ, ಮುಳ್ಳು, ಮುಳ್ಳು, ಮುಟ್ಟಬೇಡ ಎಂದು ಮಗುವನ್ನು ತಡೆದುದನ್ನು ಕಂಡ ಸ್ವಾಮಿಗಳು ಹೇಳಿದ್ದು, ಅಮ್ಮಯ್ಯಾ, ಆ ಮಗುವಿಗೆ ಹೂವಿನ ಗಿಡದಾಗೆ ಮುಳ್ಳು ಐತೆ ಅಂತ ಹೇಳ್ಕೊಡಬ್ಯಾಡ, ಮುಳ್ಳಿನ ಗಿಡ್ಯಾಗೆ ಹೂ ಐತೆ ಅಂತ ಹೇಳ್ಕೊಡಬೇಕು ಎಂದು ನಗುತ್ತಾ ಹೇಳುತ್ತಾರೆ. ಈ ಮಾತು ನಾವು ಕಲಿತ “half glass full” ಗಿಂತ ಮನೋಹರವಾಗಿಲ್ಲವೇ?