ರಾಜಕಾರಣದಲ್ಲಿ ಧರ್ಮ ಎಷ್ಟಿರಲಿ?

“ನಾವು ಒಂದು ಕ್ರೈಸ್ತ ರಾಷ್ಟ್ರ, ಇದನ್ನು ಹೇಳಲು ನಾವು ಭಯ ಪಡಬೇಕಿಲ್ಲ ” – ಈ ಮಾತನ್ನು ಕ್ರೈಸ್ತ ಮೂಲಭೂತವಾದಿ ಇವಾನ್ಜೆಲಿಸ್ಟ್ (ಧರ್ಮಪ್ರಚಾರಕ) ಜೆರ್ರಿ ಫಾಲ್ವೆಲ್, ಅಥವಾ ಟೆರ್ರಿ ಜೋನ್ಸ್ ರಂಥವರು ಹೇಳಿದ್ದರೆ ಚಿಂತೆ ಇರಲಿಲ್ಲ, ಏಕೆಂದರೆ ಇವರುಗಳು ಹೀಗೆ ಮಾತನಾಡಿದಾಗಲೇ ಚೆನ್ನ. ಅಸಹನೆಯೇ ಅವರ ಉಸಿರು, ಹಾಗಾಗಿ ಅವರ ಬಾಯಲ್ಲಿ ನೀಟ್ ಆಗಿ ಫಿಟ್ ಅಗೋ ಮಾತುಗಳು ಅವು. ಆದರೆ ಈ ಮಾತನ್ನು ಸೆಕ್ಯುಲರ್ ದೇಶ ಎಂದು ಹೆಮ್ಮೆ ಪಡುವ ಬ್ರಿಟನ್ ದೇಶದ ಪ್ರಧಾನಿ ಹೇಳಿದ್ದು ಎಂದಾದ ಮೇಲೆ ಈ ಮಾತಿನ ಕಡೆ ಸ್ವಲ್ಪ ಗಮನ ಅತ್ಯಗತ್ಯ.

“ಕಿಂಗ್ ಜೇಮ್ಸ್” ಬೈಬಲ್ ನ ೪೦೦ ವಾರ್ಷಿಕೋತ್ಸವದ ವೇಳೆ ‘ಚರ್ಚ್ ಆಫ್ ಇಂಗ್ಲೆಂಡ್’ ಗೆ ಸೇರಿದ ಪಾದ್ರಿಗಳನ್ನು ಉದ್ದೇಶಿಸಿ ಈ ಮಾತನ್ನು ಹೇಳಿದರು ಡೇವಿಡ್ ಕೆಮರೂನ್. ಇದೇ ಮಾತನ್ನು ನಮ್ಮ ದೇಶದ ಪ್ರಧಾನಿ ಹೇಳಿದ್ದಿದ್ದರೆ ಆಗುತ್ತಿದ್ದ ವೈಚಾರಿಕ ಅನಾಹುತ ಏನು ಎಂದು ಊಹಿಸಲು ಅಸಾಧ್ಯ. ಆದರೆ ಇಷ್ಟು ಮಾತ್ರ ಹೇಳಿ ಸುಮ್ಮನಾಗಲಿಲ್ಲ ಪ್ರಧಾನಿ. “ನಾವು ಒಂದು ಕ್ರೈಸ್ತ ರಾಷ್ಟ್ರ, ಇದನ್ನು ಹೇಳಲು ನಾವು ಭಯ ಬೀಳಬೇಕಿಲ್ಲ… ನನ್ನನ್ನು ಅರ್ಥ ಮಾಡಿಕೊಳ್ಳಿ… ಮತ್ತೊಂದು ಧರ್ಮ ಅಥವಾ ಧರ್ಮವಿಲ್ಲದಿರುವಿಕೆಯ ವ್ಯವಸ್ಥೆ ಇರುವುದು ತಪ್ಪು ಎಂದು ನಾನು ಖಂಡಿತಾ ಹೇಳುತ್ತಿಲ್ಲ” ಇದು ಪ್ರಧಾನಿಗಳ ಪೂರ್ತಿ ಮಾತುಗಳು. ಈಗ ಸ್ವಲ್ಪ ಸಮಾಧಾನ. ಏಕೆಂದರೆ ಬ್ರಿಟನ್ ಬರೀ ಕ್ರೈಸ್ತರ ದೇಶವಲ್ಲ, ಅಲ್ಲಿ, ಹಿಂದೂಗಳೂ, ಮುಸ್ಲಿಮರೂ, ಯಹೂದಿಗಳೂ ಇನ್ನಿತರ ಹಲವು ಧರ್ಮೀಯರೂ, ಧರ್ಮವಿಲ್ಲದವರೂ ಸಾಮರಸ್ಯದಿಂದ ಬದುಕುವ ದೇಶ. ಹಾಗಾಗಿ ಎಲ್ಲರೂ, ಧರ್ಮವಿಲ್ಲದವರೂ, ತಾರತಮ್ಯವಿಲ್ಲದೆ ಸಮಾನಾವಕಾಶಗಳೊಂದಿಗೆ ಬದುಕಬಹುದು ಎನ್ನುವ ಆಶಯ ಪ್ರಧಾನಿಯದು. ಅದೇ ಅವರ ನಿರೀಕ್ಷೆಯೂ ಕೂಡಾ. ಆದರೆ ರಾಜಕಾರಣದಲ್ಲಿ ಧರ್ಮದ ಪಾತ್ರ ಎಷ್ಟಿರಬೇಕು ಎನ್ನುವುದು ಮುಗಿಯದ ಚರ್ಚೆ. “ರಾಜಕಾರಣ ಧರ್ಮವಲ್ಲ, ಅಥವಾ ಹಾಗೇನಾದರೂ ಆಗುವುದಾದರೆ ಅದು inquisition ಅಲ್ಲದೇ ಮತ್ತೇನೂ ಅಲ್ಲ” ಎಂದು ನೊಬೆಲ್ ಪ್ರಶಸ್ತಿ ವಿಜೇತ ಸಾಹಿತಿ, ದಾರ್ಶನಿಕ ಅಲ್ಬರ್ಟ್ ಕ್ಯಾಮು ಹೇಳುತ್ತಾರೆ ( Politics is not religion, or if it is, then it is nothing but the Inquisition – albert camus, french philosopher).

Inquisition ಎಂದ ಕೂಡಲೇ ಕಣ್ಣ ಮುಂದೆ ಬರೋದು ವ್ಯಾಟಿಕನ್ ಬೆಂಬಲಿತ ಸಾಮೂಹಿಕ ಹಿಂಸೆ, ಬರ್ಬರ ಶಿಕ್ಷೆ. ಕ್ರೈಸ್ತರಲ್ಲದವರೂ, ಕ್ಯಾಥೊಲಿಕ್ ಧರ್ಮದ ಚೌಕಟ್ಟಿಗೆ ಬರದ ಕ್ರೈಸ್ತರೂ inquisition ನ ಬರ್ಬರತೆ ಅನುಭವಿಸಿದರು. ಹಾಗಾಗಿ ರಾಜಕಾರಣದಲ್ಲಿ ಧರ್ಮ ಕೂಡದು ಎಂದು ಪಾಶ್ಚಾತ್ಯ ರಾಷ್ಟ್ರಗಳ ನಿಲುವು. ಇದು ಬರೀ ನಿಲುವು ಮಾತ್ರ, ಯಥಾಸ್ಥಿತಿ ಬೇರೆಯೇ ಎಂದು ದಿನನಿತ್ಯದ ವಿದ್ಯಮಾನಗಳು ನಮಗೆ ಹೇಳುತ್ತವೆ. ಪಾಶ್ಚಾತ್ಯ ದೇಶಗಳಲ್ಲಿ ಬಲ ಪಂಥೀಯ ಇವಾನ್ಜೆಲಿಸ್ಟ್ ಗಳು ದೊಡ್ಡ ಪಾತ್ರ ವಹಿಸುತ್ತಿದ್ದಾರೆ. ಈಗ ಅಧ್ಯಕ್ಷೀಯ ಚುನಾವಣೆಯ ಪ್ರಾಥಮಿಕ ಹಂತದಲ್ಲಿರುವ ಅಮೆರಿಕೆಯಲ್ಲಿ ಇವರ ಅಬ್ಬರ ತುಸು ಹೆಚ್ಚು. ರಾಜಕಾರಣಿಗಳ ಕೈಗೆ ಧರ್ಮ ಸಿಕ್ಕಾಗ ಅದು ಚಿನ್ನದ ಸೌಂದರ್ಯ ಕಳೆದು ಕೊಂಡು ಕಳಪೆ ಉಕ್ಕಿನ ರೂಪ ಪಡೆದು ಕೊಳ್ಳುತ್ತದೆ ಎನ್ನುತ್ತಾರೆ ಲೇಖಕಿ ಯಾಸ್ಮೀನ್ ಅಲಿ ಭಾಯಿ. ಈಕೆ ಬ್ರಿಟನ್ ದೇಶದ ಪ್ರಸಿದ್ಧ ಲೇಖಕಿ. ಆಕರ್ಷಕ ಹೆಸರುಗಳೊಂದಿಗೆ ರಾಜಕಾರಣದಲ್ಲಿ ಧರ್ಮವನ್ನು ನುಸುಳಿಸಲು ಹವಣಿಸುವವರಿಗೆ ಈ ಮಾತುಗಳು ಬಹುಶಃ ಪಥ್ಯವಾಗಲಾರದು.

ಧರ್ಮದ ಸಾರವನ್ನು, ಸತ್ವವನ್ನು ಸಂಪೂರ್ಣವಾಗಿ ಅರಿತ ಹಿಂದೂ, ಮುಸ್ಲಿಂ, ಕ್ರೈಸ್ತ ಇನ್ನಿತರ ಧಮೀಯರಿಂದ ಯಾವುದೇ ತೊಂದರೆಯಿಲ್ಲ, ಆದರೆ ಅರೆಬರೆ ಕಲಿತು ‘ಪಾರ್ಟ್ ಟೈಂ’ ಧರ್ಮಾನುಯಾಯಿಗಳಿಂದ ಗಂಡಾಂತರ ಹೆಚ್ಚು ಎಂದು ಚಾರಿತ್ರಿಕ ಘಟನೆಗಳು ಸಾಕ್ಷಿಯಾಗಿವೆ. ಧರ್ಮವನ್ನು ‘ಆಫೀಮ್’ ಎಂದು ಕಡೆಗಣಿಸುವುದಾಗಲೀ, ತನ್ನ ಧರ್ಮವೇ ಶ್ರೇಷ್ಠ ಎಂದು ಇತರರ ಬದುಕನ್ನು ದುರ್ಭರಗೊಳಿಸುವುದಾಗಲೀ ಕೂಡದು ಎನ್ನುವ ವಿವೇಚನೆಯಿದ್ದರೆ ಸಾತ್ವಿಕ ಬದುಕು ಸರಾಗ, ವೈಯಕ್ತಿಕ ಬದುಕಿನಲ್ಲೂ, ರಾಜಕೀಯ ಕ್ಷೇತ್ರದಲ್ಲೂ.

Advertisements

ಪಾಳು ಬಿದ್ದ ‘ಸುದ್ದಿ’ ಮನೆ

ಬೆಳಗಿನ ಪತ್ರಿಕೆ ಓದುವ ಅಭ್ಯಾಸವಿರುವರು ತಾವೇಕಾದರೂ ಈ ಪತ್ರಿಕೆ ಓದುವ ಹಾಳು ಚಟ ಅಂಟಿಸಿಕೊಂಡೆವೋ ಎಂದು ಮರುಗಿದರೆ ಅದರಲ್ಲಿ ಅವರ ತಪ್ಪಿಲ್ಲ. ಪತ್ರಿಕೆ ತೆರೆದಾಕ್ಷಣ ಧುತ್ತೆಂದು ಎದುರಾಗುವುದು ಹಿಂಸೆ, ಕ್ರೌರ್ಯದ ತಾಂಡವ. ಕೆಲಸವಿಲ್ಲದ ಬಡಗಿ ಮಗನ ಕುಂಡೆ ಕೆತ್ತಿದ್ನಂತೆ. ಆದರೆ ಇತ್ತೀಚೆಗೆ ದಿಲ್ಲಿಯ ೩೩ ವರ್ಷ ಪ್ರಾಯದ ನಿರುದ್ಯೋಗಿ ಯುವಕ ತನ್ನ ತಂದೆಯನ್ನೇ ಕೊಂದು ಬಿಟ್ಟ. ತಡೆಯಲು ಬಂದ ತಾಯಿಯನ್ನು ತದುಕಿದ. ಇದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ವರದಿಯಾದ ಸುದ್ದಿ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಒಂದು ರೀತಿಯ “ಕ್ರೈಮ್ಸ್” ಆಫ್ ಇಂಡಿಯಾ ಪತ್ರಿಕೆಯಾಗಿ ಹೊರಹೊಮ್ಮುತ್ತಿರುವುದು ವಿಷಾದಕರ. ತನ್ನ ತಂದೆಯ ಕೊಲೆ ಮಾಡಿದ ಈ ವ್ಯಕ್ತಿ ಕೆಲ ತಿಂಗಳ ಹಿಂದೆಯೂ ತನ್ನ ಪಾಲಕರ ಮೇಲೆ ಹಲ್ಲೆ ಮಾಡಿದ್ದ, ಆದರೆ ಹೆತ್ತ ಕರುಳು ಈ ದುರುಳನನ್ನು ಕ್ಷಮಿಸಿ ಪೊಲೀಸರಿಂದ ಬಿಡಿಸಿ ಕೊಂಡು ಬಂದಿತ್ತು. ಬಂಧ ಮುಕ್ತನಾಗಿ ಹೊರಬಂದ ಈ ಯುವಕ ತನ್ನ ತಂದೆ ಪಾಲಿಗೆ ಯಮನಾಗಿ ಎರಗಿದ.

ಗುಜರಾತಿನಲ್ಲಿ ೮೫ ರ ಪ್ರಾಯದ ವೃದ್ಧ ಅರ್ಚಕರನ್ನು ಬಡಿದು ಕೊಂಡರು ಆಗಂತುಕರು. ಪ್ರಾಯಕ್ಕೆ ಬಂದ ಹುಡುಗ ಹುಡುಗಿ ಪರಸ್ಪರ ಪ್ರೀತಿಸಿ ಓಡಿದ್ದಕ್ಕೆ ಹುಡಗಿಯ ತಂದೆ ಮತ್ತು ನೆಂಟರಿಷ್ಟರು ಕ್ರುದ್ಧರಾಗಿ ಹುಡುಗನ ತಾಯಿ ಮತ್ತು ಚಿಕ್ಕಮ್ಮನ ಮೇಲೆ ಅತ್ಯಾಚಾರ ವೆಸಗಿದರು. ಎಸಗಿದ ಕ್ರೌರ್ಯ ಸಾಲದೆಂಬಂತೆ ಈ ಅತ್ಯಾಚಾರಕ್ಕೆ ಹುಡುಗಿಯ ಕಡೆಯ ಮಹಿಳೆಯರ ಬೆಂಬಲವೂ ಇತ್ತು. ಕೆಲ ತಿಂಗಳುಗಳ ಹಿಂದೆ ಪರಾಟಾ ಗಾಗಿ ಹೊಡೆದಾಡಿ ಒಬ್ಬ ಸತ್ತ.

ತಮಿಳು ನಾಡಿನ ವಿದ್ಯಾಮಂತ್ರಿಯೊಬ್ಬ ೧೦ ನೆ ತರಗತಿ ಪರೀಕ್ಷೆಗೆ ಕೂತು  ಪರೀಕ್ಷೆ ಬರೆಯಲು ಬೇರೊಬ್ಬ ವ್ಯಕ್ತಿಯನ್ನು ಹೈರ್ ಮಾಡಿದ. ಶೌಚಾಲಯದಲ್ಲಿ ಶೌಚಕ್ಕೆ ಕೂತ ಒಬ್ಬ ಹೊರಬರಲು ಹೆಚ್ಚು ಸಮಯ ತೆಗೆದು ಕೊಂಡ ಎಂದು ತನ್ನ ಸರತಿಗಾಗಿ ಕಾಯುತ್ತಿದ್ದ ಮತೊಬ್ಬ ಅವನ ಮೇಲೆ ಹಲ್ಲೆ ನಡೆಸಿ ಕೊಂದು ಬಿಟ್ಟ.

ಚೆನ್ನೈ ನಗರದಲ್ಲಿ ಶಾಲಾ ಬಾಲಕನೊಬ್ಬ ತನ್ನ ಅದ್ಯಾಪಿಕೆಯ ಮೇಲೆ ಚೂರಿಯಿಂದ ಆಕ್ರಮಿಸಿ ಕೊಲೆ ಮಾಡಿದ. ಅದ್ಯಾಪಿಕೆ ತನ್ನನ್ನು ಟೀಕಿಸಿದಳು ಎನ್ನುವ ಕಾರಣಕ್ಕೆ ನಾನಾಕೆಯನ್ನು ಕೊಂದೆ ಎಂದ ಬಾಲಕ. ಪ್ರೇಮಿಗಳ ದಿನಾಚರಣೆಯಂದು ಇಬ್ಬರು ಬಾಲಕರು ಸೇರಿ ತಮ್ಮ ಗೆಳೆಯನ ಹತ್ಯೆ ಮಾಡಿದರು. ಹುಡುಗಿಯ ವಿಷಯದಲ್ಲಿ ಈ ಕೊಲೆ. ಹದಿಹರೆಯದ ಪ್ರೇಮ ಹುಚ್ಚು ಹೊಳೆ ಎನ್ನುವುದಕ್ಕೆ ಜ್ವಲಂತ ನಿದರ್ಶನ ಈ ಘಟನೆ.

ನೈತಿಕ ಮೌಲ್ಯಗಳಿಗೆ ಅತೀವ ಪ್ರಾಮುಖ್ಯತೆ ಕೊಡುವ ನಮ್ಮ ದೇಶದಲ್ಲಿ ಈ ತೆರನಾದ ಘಟನೆಗಳು ಜರುಗುತ್ತಿರುವುದಕ್ಕೆ ಕಾರಣವಾದರೂ ಏನಿರಬಹುದು? ನೈತಿಕ ಮೌಲ್ಯಗಳ ಬಗ್ಗೆ ಅಷ್ಟೇನೂ ಹೆಚ್ಚಾಗಿ ತಲೆ ಕೆಡಿಸಿ ಕೊಳ್ಳದ, ಮಾರ್ಗದರ್ಶನಕ್ಕಾಗಿ ನಮ್ಮ ಕಡೆ ನೋಡುತ್ತಿದ್ದ ಪಾಶ್ಚಾತ್ಯ ವಿಶ್ವಕ್ಕಿಂತ ನಾವು ಕಡೆಯಾಗುತ್ತಿದ್ದೆವೆಯೇ? ಹಿಂಸೆ, ಅತ್ಯಾಚಾರ ಎಸಗುವ ತಪ್ಪಿತಸ್ಥರಿಗೆ ತಡಮಾಡದೆ ತಕ್ಕ ಶಿಕ್ಷೆ ಪ್ರದಾನ ಮಾಡುತ್ತಿದ್ದೇವೆಯೇ? ದಿನ ನಿತ್ಯ ಈ ರೀತಿಯ ಸುದ್ದಿಗಳನ್ನು ಓದುವ, ತಪ್ಪಿತಸ್ಥರು ರಾಜಾರೋಷವಾಗಿ ಜಾಮೀನಿನ ಮೇಲೆ ಓಡಾಡುವುದನ್ನು ನೋಡುವ ನಮ್ಮ ಎಳೆಯರು ಹಿಂಸೆಯ, ದಾರಿ ತುಳಿದರೆ ಭವಿಷ್ಯದಲ್ಲಿ ಭಾರತದ ಕತೆ ಏನಾದೀತು?

  ಒಟ್ಟಿನಲ್ಲಿ ಸಮಾಜ ತುಳಿಯುತ್ತಿರುವ ಹಾದಿ ನಮ್ಮ ಪೂರ್ವಜರ ದಾರಿಗಿಂತ ವಿಭಿನ್ನವಾಗಿದೆ ಎಂದು ದಿನೇ ದಿನೇ ಸ್ಪಷ್ಟವಾಗುತ್ತಿದೆ. ಮನುಷ್ಯ ಸಂಯಮ, ತಾಳ್ಮೆಯ ಕಲೆಯನ್ನು ರೂಢಿಸಿ ಕೊಳ್ಳಬೇಕಿದೆ. ತಾಳ್ಮೆ, ಸಂಯಮ, ಬದುಕಿನ ಎಂಥಾ ಪರೀಕ್ಷೆಗಳನ್ನೂ ನಿಭಾಯಿಸಬಲ್ಲುದು ಎನ್ನುವುದಕ್ಕೆ ಧರ್ಮ ಗ್ರಂಥದ ಸೂಕ್ತ ಇಲ್ಲಿದೆ…

“ಕಾಲದಾಣೆ. ನಿಸ್ಸಂಶಯವಾಗಿಯೂ ಮನುಷ್ಯ ಹಾದಿ ತಪ್ಪಿದ್ದಾನೆ. ಸತ್ಕರ್ಮಗಳನ್ನು ಮಾಡುವವರೂ, ಸತ್ಯಕ್ಕಾಗಿ ಶ್ರಮಿಸುವವರೂ, ಸಂಯಮವನ್ನು ಪಾಲಿಸುವವರನ್ನು ಹೊರತುಪಡಿಸಿ”.    

 

ಅಜ್ಜಿಯ ನೆನಪು

ಗೋರ್ಬಚೋಫ್ ೮೦ ನೆ ಜನ್ಮದಿನಾಚರಣೆಯ ಹುಮ್ಮಸ್ಸಿನಲ್ಲಿದ್ದಾರೆ. ವಿಶ್ವದ ಅತ್ಯಂತ VISIBLE LEADER ಗಳಲ್ಲಿ ಒಬ್ಬರಾಗಿದ್ದರು ಗೋರ್ಬಚೋಫ್. ೮೦ ರ ದಶಕದಲ್ಲಿ ಅಮೆರಿಕೆಯ ರೊನಾಲ್ಡ್ ರೇಗನ್, ರಷ್ಯದ ಗೋರ್ಬಚೋಫ್ ಸುದ್ದಿ ಮಾಡಿದ್ದೆ ಮಾಡಿದ್ದು. ರೊನಾಲ್ಡ್ ರೇಗನ್ ಒಬ್ಬ ಹಾಲಿವುಡ್ ನಟ. ಕೋಟಿಗಟ್ಟಲೆ ಜನರನ್ನು ತನ್ನ ಚಿತ್ರಗಳ ಮೂಲಕ ರಂಜಿಸಿದ ರೇಗನ್ ರಾಜಕಾರಣದಲ್ಲೂ ತಮ್ಮದೇ ಆದ ಛಾಪನ್ನು ಒತ್ತಿದ್ದರು. ರೇಗನ್ ಮತ್ತು ಗೋರ್ಬಚೋಫ್ ಮಧ್ಯೆ ಇದ್ದುದು ಒಂದು ಕಾಲದ ಧರ್ಮೇಂದ್ರ – ಹೇಮಾ ಮಾಲಿನಿ, ಸಲ್ಮಾನ್ – ಐಶ್ವರ್ಯ ನಡುವಿನ “ಕೆಮಿಸ್ಟ್ರಿ”. ಇವರುಗಳು ನಾಯಕರಾಗಿದ್ದ ಎರಡೂ ದೇಶಗಳೂ ಅಪನಂಬಿಕೆಯಿಂದ ತೊಳಲುತ್ತಿದ್ದರೆ ಇವರೀರ್ವರು ಮಾತ್ರ ಒಬ್ಬರನ್ನೊಬ್ಬರ ಕಾರ್ಯಶೈಲಿಯನ್ನು ಮೆಚ್ಚುತ್ತಾ ಒಂದು ಅಪೂರ್ವವಾದ ಸ್ನೇಹವನ್ನು ಹೆಣೆದಿದ್ದರು. ರೇಗನ್ ರವರು ಗೋರ್ಬಚೋಫ್ ರನ್ನು ಉದ್ದೇಶಿಸಿ Mr. Gorbachev, tear down this wall. ಬರ್ಲಿನ್ ಗೋಡೆ ಬಗ್ಗೆ ಅಮೆರಿಕೆಯ ಅಧ್ಯಕ್ಷ ನೊಬ್ಬ ಸೋವಿಯೆಟ್ ನಾಯಕನಿಗೆ ಈ ರೀತಿ ಸಂಬೋಧಿಸಿ ಹೇಳಬೇಕೆಂದರೆ ಮಾಮೂಲಿ ಕೆಲಸವಲ್ಲ. ಸಿನಿಮಾದ ಡಯಲಾಗ್ ಥರ ಹೊಡೆದೇ ಬಿಟ್ಟರು ರೇಗನ್ ವಿಶ್ವ ದಂಗಾಗುವಂತೆ.

ಗೋರ್ಬಚೋಫ್ ಮಾತು ಬಂತೆಂದರೆ ಗತಿಸಿಹೋದ ನನ್ನ ಪ್ರೀತಿಯ ಅಜ್ಜಿಯ ನೆನಪು ಬರುತ್ತದೆ. ಕನ್ನಡ ಭಾಷೆಯನ್ನ ಬಹು ಚೆನ್ನಾಗಿ ಮಾತನಾಡುತ್ತಿದ್ದ ಅವರು ತುಷಾರ, ಕಸ್ತೂರಿ, ಮಲ್ಲಿಗೆ, ಮಯೂರ, ಸುಧಾ ಮುಂತಾದ ಪತ್ರಿಕೆಗಳನ್ನು ತಪ್ಪದೆ ಓದುತ್ತಿದ್ದರು. ನನ್ನ ಅಜ್ಜಿಗೂ ನನ್ನ ಹಾಗೆಯೇ ವಿಶ್ವದ ಆಗುಹೋಗುಗಳ ಮೇಲೆ ಆಸಕ್ತಿ ಹೆಚ್ಚು. ಟೀವೀ ಪರದೆ ಮೇಲೆ ಗೋರ್ಬಚೋಫ್ ಕಾಣಿಸಿದ್ದೇ ತಡ ಕೇಳುತ್ತಿದ್ದರು, ಏನೋ ಅದು, ಅವನ ತಲೆ ಮೇಲೆ ಅದ್ಯಾವಾಗ ಕಾಗೆ ಕಕ್ಕ ಮಾಡಿತು ಎಂದು. ಗೋರ್ಬಚೋಫ್ ಅವರ ಕೂದಲಿಲ್ಲದ ನುಣ್ಣಗಿನ ತಲೆ ಮೇಲೆ ದೊಡ್ಡದಾದ ಮಚ್ಚೆ ಇತ್ತು. ಈ ಮಚ್ಚೆ world famous. ನೋಡಿದವರಿಗೆ ನನ್ನ ಅಜ್ಜಿಗೆ ತೋಚಿದಂತೆಯೇ ಕಾಗೆ ಕಕ್ಕ ಉದುರಿಸಿದ ಹಾಗೆ ಕಾಣುತ್ತಿತ್ತು. ಗೋರ್ಬಚೋಫ್ ರ ನೆನಪಾದಾಗ ಎರಡು ವರ್ಷಗಳ ಹಿಂದೆ ನಮ್ಮನ್ನು ಬಿಟ್ಟು ಹೋದ ಅಜ್ಜಿಯ ನೆನಪೂ ಸಹ ಬರುತ್ತದೆ.

ನಾವೇಕೆ ಹೀಗೆ?

ಭಾರತ twenty20 ಯಲ್ಲಿ ಸೋಲುಂಡ ನಂತರ ನಮ್ಮ ಪತ್ರಿಕೆಗಳು ಧೋನಿ ಮತ್ತು ತಂಡದವರನ್ನು ಹಿಗ್ಗಾ ಮುಗ್ಗಾ ಹೀಗಳೆದು ಬರೆದವು. ವಿದ್ಯುನ್ಮಾನ ಮಾಧ್ಯಮಗಳು ತಾವು ಯಾರಿಗೂ ದ್ವಿತೀಯರಲ್ಲ ಎಂದು ತೋರಿಸುವ ಹುಮ್ಮಸ್ಸಿನಲ್ಲಿ ಭಾರತ ತಂಡವನ್ನು ಟೀಕಿಸಿ ಅವರ ಅಳಿದುಳಿದ ಮನೋಸ್ಥೈರ್ಯವನ್ನು ಉಡುಗಿಸುವ ಕೆಲಸ ಸೊಗಸಾಗಿ ಮಾಡಿದವು. ಯಾವುದೇ ಆಟದಲ್ಲೂ ಒಬ್ಬರು ಗೆದ್ದರೆ ಮತ್ತೊಬ್ಬ ಸೋಲಲೇ ಬೇಕು. ಇದು ನಿಯಮ. ಇದನ್ನು ಅರಿಯಲಾರದ ಮಾಧ್ಯಮಗಳಿಗೆ ಬೇಕಿರುವುದು ವಿಷಯಗಳನ್ನು ಸಂಕೀರ್ಣಗೊಳಿಸಿ ತಮಗೆ ತೋಚಿದಂತೆ ಬರೆದು ಪತ್ರಿಕಾ ದ್ಧರ್ಮವನ್ನು ಮೆರೆದ ಪುಣ್ಯಭಾವದ ಸೋಗು ಹಾಕುವುದು. ವಿಶ್ವದ ಬೇರಾವುದೇ ರಾಷ್ಟ್ರಗಳಲ್ಲೂ ಕಾಣದ ಈ ವರ್ತನೆ ನಮ್ಮ ದೇಶಕ್ಕೆ ಬಂದದ್ದಾದರೂ ಹೇಗೆ? ಬಹುಶಃ ಕ್ರೀಡೆಯಲ್ಲಿ ಕ್ರಿಕೆಟ್ ಮಾತ್ರ ಇರಬೇಕು ನಮಗೆ ಒಂದಿಷ್ಟು ಸಾಧಿಸಿದ್ದೇವೆ ಎನ್ನೋ ಭಾವ ತಂದ ಆಟ. ಇದನ್ನೂ ಸೋಲುತ್ತಾ ಕೂತರೆ ಮತ್ಯಾವುದರಲ್ಲಿ ನಾವು ಶ್ರೇಷ್ಠರು? ಕ್ರಿಕೆಟ್ ಗೆ ಕೊಟ್ಟ ಮರ್ಯಾದೆ ಮಾನ್ಯತೆಯಲ್ಲಿ ಕಾಲು ಭಾಗವಾದರೂ ಇತರೆ ಕ್ರೀಡೆಗಳಿಗೆ ಕೊಟ್ಟಿದ್ದರೆ ನಮಗೆ ಹೀಗೆ ನಮ್ಮನ್ನು ನಾವೇ ಹಳಿದುಕೊಳ್ಳುವ ಗತಿ ಬರುತ್ತಿರಲಿಲ್ಲವೋ ಏನೋ?