ನಾಯಿಯ ಹಾಲಿನ ಮೇವು.

ಇದು ಚೀನಾದಲ್ಲಿ ನಡೆದಿದ್ದು. ‘ಸಿಂಹುಲಿ’ ಮರಿಗಳಿಗೆ ನಾಯಿಯೊಂದು ಹಾಲೂಡಿಸಲು ಒಪ್ಪಿತು. ಹೌದಾ? ಮೊದಲು ಈ ಸಿಂಹುಲಿ ಏನು ಎನ್ನುವುದನ್ನು ಹೇಳು, ಎಂದಿರೋ? ಗಂಡು ಸಿಂಹ ವಾಗಿ, ಹುಲಿ ಹೆಣ್ಣಾಗಿ ಇವರೀರ್ವರ ಮಿಲನದ ಫಲವಾಗಿ ಹುಟ್ಟುವ ಮರಿಗೆ ಸಿಂಹುಲಿ ಎನ್ನುತ್ತಾರೆ. ಎನ್ನುತ್ತಾರೆ ಅಂತ ನನ್ನ ಊಹೆ. ಏಕೆಂದರೆ ಈ ಮರಿಗಳಿಗೆ ಆಂಗ್ಲ ಭಾಷೆಯಲ್ಲಿ liger ಎನ್ನುತ್ತಾರೆ. lion + tiger = liger. ಕನ್ನಡದಲ್ಲಿ ಸಿಂಹ + ಹುಲಿ = ಸಿಂಹುಲಿ, ಹೇಗಿದೆ? ಅಥವಾ ಇದಕ್ಕೆ ಬೇರೇನಾದರೂ ಪರ್ಯಾಯ ಪದವಿದ್ದರೆ ವಾಚಕ ಪ್ರಭು ತಿಳಿಸೋಣವಾಗಲಿ.

ಮರಳಿ ಕಥೆಗೆ. zoo ಒಂದರಲ್ಲಿ ಸಿಂಹ ಮತ್ತು ಹುಲಿ ಮಿಲನರಾಗಿ ಹುಟ್ಟಿದ ನಾಲ್ಕು ಮರಿಗಳು ಒಂದೆರಡು ದಿನಗಳ ಕಾಲ ತಾಯಿಯ ಮೊಲೆ ಹಾಲನ್ನು ಕುಡಿದು ನಂತರ ತಮ್ಮ ತಾಯಿ ತಮ್ಮನ್ನು ತ್ಯಜಿಸಿದ ಕಾರಣ ಎರಡ ಮಕ್ಕಳು ಸತ್ತವು. ಉಳಿದ ಎರಡು ಮಕ್ಕಳ ಪಾಡು ನೋಡಿ ಮರುಗಿದ zoo ಸಿಬ್ಬಂದಿ ಅಲ್ಲೇ ಆಗ ತಾನೇ ಮರಿಗಳಿಗೆ ಜನ್ಮ ನೀಡಿದ್ದ ನಾಯಿಯೊಂದರ ಹತ್ತಿರ ಅವುಗಳನ್ನ ಬಿಟ್ಟರು. ಸ್ವಲ್ಪ ಸಮಯ ಹಾಲಿನ ರುಚಿ ಹಿಡಿಸದೆ ಇದ್ದರೂ ಕ್ರಮೇಣ ಅವು ಒಗ್ಗಿ ಕೊಂಡವು ನಾಯಿಯ ಹಾಲಿಗೆ. ಸ್ವಲ್ಪ ದೊಡ್ಡದಾದ ನಂತರ worst scenario ದಲ್ಲಿ ಈ ಮರಿ ‘ಸಿಂಹುಲಿ’ ಗಳು ನಾಯಿಯನ್ನೇ ತಿಂದು ಹಾಕಬಹುದೋ ಅಥವಾ best outcome ಆಗಿ “ಮಲತಾಯಿ”ಯ ಒಡನಾಟದಿಂದ  ಸುಶ್ರಾವ್ಯವಾಗಿ ಬೊಗಳಲು ಆರಂಭಿಸುತ್ತೋ ಕಾದು ನೋಡಬೇಕಾದ ಬೆಳವಣಿಗೆ.    ಚ

  ಚಿತ್ರ ಕೃಪೆ: http://www.thedogfiles.com/2011/05/26/dog-helps-feed-abandoned-liger-cubs-in-china/

Advertisements

ಕುರಿಗಳು ಸಾರ್, ಕುರಿಗಳಲ್ಲಾ ಸಾರ್

ಪ್ರಾಣಿಗಳಿಗೆ ಹಿಂಸೆ ಆದಾಗ ಪ್ರಾಣಿ ದಯಾ ಸಂಘಕ್ಕೆ ಕರೆ ಕೊಡೋದು ವಾಡಿಕೆ. ಬಂದ್ ಗಾಗಿ ಕರೆ ಅಲ್ಲ, ಬಂದು ಪ್ರಾಣಿಯನ್ನು ಉಳಿಸಿ ಅಂತ ಹೇಳೋಕೆ ಕರೆ. ಜಟಕಾ ಗಾಡಿಯ ಮಾಲೀಕ ಬಳಲಿದ, ಹಸಿದ, ನಿತ್ರಾಣವಿಲ್ಲದೆ ಒಲ್ಲೆ ಎಂದರೂ ಬಿಡದೆ ಬಾರು ಕೋಲಿನಿಂದ ಬಾರಿಸಿ ತನ್ನ ಗಾಡಿಯಲ್ಲಿರುವ ಪೋಸ್ಟ್ ಮಾರ್ಟಂ ದಾರಿ ಹಿಡಿದ ಹೆಣ ವನ್ನು ಅದು ಸೇರಬೇಕಾದ ಸ್ಥಳ ತಲುಪಿಸಲು ಕುದುರೆಗೆ ಕೊಡುವ ಹಿಂಸೆ ನೋಡಿ, ನೋಡಲಾರದೆ ಪ್ರಾಣಿ ದಯಾ ಸಂಘಕ್ಕೆ ಬುಲಾವ್ ಕೊಡೋದು.  ಹೌದು ಪ್ರಾಣಿಗಳಿಗೆ ದಯೆ ತೋರಿಸಬೇಕಾದ್ದೆ. ಆದರೆ ಈ ಬುಲಾವ್ ಬರೀ ಕುದುರೆ ಕತ್ತೆ ನಾಯಿಗಳಿಗೆ ಮಾತ್ರ ಏಕೆ, ಕೋಳಿ ಕುರಿಗಳಿಗೂ ಏಕಿಲ್ಲ ಅವೂ ಪ್ರಾಣಿಗಳೇ ಅಲ್ಲವೇ ಎಂದು ಕೆಲವರ ಸಂಶಯ. ಒಬ್ಬರ ಸಂಶಯಕ್ಕೆ ಪಾರ್ಶ್ವ ಉತ್ತರವಾಗಿ ಮತೊಬ್ಬರು ಹೇಳಿದರು, ಕುರಿ ಏನೋ ಪ್ರಾಣಿಯೇ, ಆದರೆ ಕೋಳಿ ಪ್ರಾಣಿಯಲ್ಲ, ಅದು ಪಕ್ಷಿ ಎಂದು. ಪ್ರಾಣಿಯೋ , ಪಕ್ಷಿಯೋ ಪ್ರಾಣವಂತೂ ಇದೆಯಲ್ರೀ ಅಂತೀರಾ? ಸೊಳ್ಳೆಗೂ ಇದೆ ಪ್ರಾಣ, ಹಾಗೆಯೇ ತಿಗಣೆಗೂ ಸಹ, ಅಲ್ವರ? ಸೊಳ್ಳೆಯನ್ನು ಕೊಲ್ಲಲು ಈಗ ಚೀನೀ ತಂತ್ರಜ್ಞಾನ ಉಪಯೋಗಿಸುತ್ತಿಲ್ಲವೇ ನಾವು. ಟೆನ್ನಿಸ್ ಬೆಡಗಿ ಸಾನಿಯಾ ಥರ ಎಲೆಕ್ಟ್ರೋನಿಕ್ ಬ್ಯಾಟ್ ಹಿಡಿದು ಚಟ ಚಟ, ಚಟ, ಚಟಾ ಅಂತ ಅಟ್ಟಾಡಿಸಿಕೊಂಡು ಸುಡುತ್ತಿಲ್ಲವೇ ಸೊಳ್ಳೆ ಗಳನ್ನು?  ನಮ್ಮ ಕಿವಿಗಳ ಸುತ್ತಾ ಹಾರುತ್ತಾ, ತಪ್ಪಿಸಿಕೊಳ್ಳುತ್ತಾ, ಒಂದು ರೀತಿಯ ಅಣಕದ ಶಬ್ದ ಮಾಡಿ ನಂತರ ನಮ್ಮ ರಕ್ತ ಹೀರುವ  ಸೊಳ್ಳೆಗಳನ್ನು ಹಾಗೆ ಬಿಡಿ ಅಂತೀರಾ ಎಂದು ಕೇಳಬೇಡಿ. back hand, fore hand, ಹೀಗೆ ನಾನಾ ರೀತಿ ರಾಕೆಟ್ ತಿರುಗಿಸಿ ಫ್ರೈ ಮಾಡಿ ಸೊಳ್ಳೆಗಳನ್ನು.   ಹಾಗಾದರೆ ಈ ಮೇಲಿನ ಪುರಾಣ ಯಾಕೆ? ಕುರಿ, ಕೋಳಿ, ಪ್ರಾಣಿ ದಯೆ, ಬ್ಲಾ, ಬ್ಲಾ, ಬ್ಲಾ ಎಂದಿರಾ?

ಈಗ ಪ್ರಾಣಿ ಹಿಂಸೆ ವಿಷಯ ಬಂದಾಗ ಕೆಲವರು by choice ಅಥವಾ by taste ಕಾರಣ ಆರಿಸಿಕೊಂಡ ಆಹಾರ ಪದ್ಧತಿಗೆ ಕೊನೆ ಹಾಡಿ ಕುರಿ ಕೋಳಿ ಭಕ್ಷ್ಯ ಮಾಡುವ ಪರಿಪಾಠಕ್ಕೆ ನಾಂದಿ ಹಾಡಬೇಕು. ನಮ್ಮ ದೇಶದಲ್ಲಿ ಕುರಿ ಕೋಳಿ ಹಂದಿ ಮುಂತಾದುವುಗಳ ಹಿಂಸೆಗೆ ನಾಂದಿ ಹಾಡಿದರೆ ವಿಎಟ್ನಾಮ್, ಚೈನಾ, ಮುಂತಾದ ದೇಶಗಳಲ್ಲಿ ನಾಯಿ, ಜಿರಲೆ ಇವುಗಳ ಹತ್ಯೆಗೂ ಹಾಡಬೇಕು ಇತಿಶ್ರೀ. ಅಯ್ಯೋ ನಾಯ್ ತಿಂತಾರಾ ಚೈನಾದಲ್ಲಿ ಎಂದು ಮೂಗೆಳೆಯಬೇಡಿ. ಆರ್ಥಿಕ ಸಂಕಷ್ಟ ಜನರನ್ನು ಬಡಿದು ಕುರಿ ಕೋಳಿ, ಹಂದಿ ದುಬಾರಿ ಯಾದಾಗ ನಾಯಿಗಳು “ಮೆನ್ಯು ಪಟ್ಟಿ”- menu-  ಗೆ ಬಡ್ತಿ ಪಡೆದು ಕೊಳ್ಳುತ್ತವೆ ಕೆಲವು ದೇಶಗಳಲ್ಲಿ. ಕುರಿ ಕೋಳಿ ಹತ್ಯೆ ಕುರಿತ ಚರ್ಚೆಯಲ್ಲಿ ಓದುಗರೊಬ್ಬರು ಕೇಳಿದರು, “ಪ್ರಾಣ ಇರುವುದೆಲ್ಲ ಪ್ರಾಣಿಗಳೇ ….. ಜಗದೀಶ್ ಚಂದ್ರಬೋಸರು ತೋರಿಸಿದ್ದಾರೆ ಸಸ್ಯಗಳೀಗೂ ಪ್ರಾಣವಿದೆ ಹಾಗೂ ಅವೂ ಉಸಿರಾಡುತ್ತವೆ ಎಂದು. ಹಾಗಾಗಿ ಪ್ರಾಣಿ ದಯಾಸಂಘದವರು ಪ್ರಾಣವಿರುವ ಎಲ್ಲವನ್ನೂ ರಕ್ಷಿಸಲು ಮುಂದಾಗಬೇಕು ಎನ್ನುವುದು ನನ್ನ ಕೋರಿಕೆ!!!!!” ಓಹ್, ಇದೆಂಥಾ ಬಾಂಬ್ ಅಪ್ಪಾ! ಹಾಗಾದರೆ ನಾವು ತಿನ್ನೋದೇನನ್ನು? ನನಗೆ ಗೊತ್ತಿಲ್ಲ. ಆದರೆ ಅದುನ್ ತಿನ್ನೋದ್ ಬ್ಯಾನ್ ಮಾಡಿ, ಇದುನ್ ತಿನ್ನೋದನ್ ಬ್ಯಾನ್ ಮಾಡಿ ಎನ್ನುವವರಿಗೆ ಮತ್ತೊಂದು ಉತ್ತರ ಹೀಗೆ..

“ಅನುಕೂಲ ಶಾಸ್ತ್ರ” ದ proponent ಗಳಿಗೆ ತಮ್ಮದೇ ಆದ ತರ್ಕಗಳಿರುತ್ತವೆ, ಆ ತರ್ಕಗಳಿಗೆ ವಿವೇಚನೆ ಅಥವಾ reasoning ಕೆಲಸಕ್ಕೆ ಬಾರದ ಸಂಗತಿಗಳು, ಹಾಗೆಯೇ “ಅನುಕೂಲ ಶಾಸ್ತ್ರ” thrive ಆಗೋದು ನಂಬರ್ ಗೇಂ ನಲ್ಲಿ. ಸಂಖ್ಯೆ ಹೆಚ್ಚಿದ್ದರೆ ಅವರು ಹೇಳಿದ್ದೇ ಸರಿ, ಈ ವಿಷಯದಲ್ಲಿ ಮಾತ್ರ ಇವರುಗಳು truly democratic.
ತುರೇ ಮಣೆ ಕಯ್ಯಿಂದ ನಿರ್ದಯವಾಗಿ ತುರಿಸಿಕೊಳ್ಳುವ ತೆಂಗಿನಕಾಯಿ ಮತ್ತು ಹರಿಯುವ ಚಾಕುವಿನ ಅಡಿ ದಯನೀಯವಾಗಿ ನಲುಗುವ ಈರುಳ್ಳಿ ಬಗ್ಗೆ ಇವರುಗಳಿಗೆ ಕನಿಕರ ಭಾವ ತೋರಿದಾಗ ಅವುಗಳನ್ನು ಒಳಗೊಂಡ ತಿನಿಸಿಗೂ ಬರುತ್ತದೆ ಸಂಚಕಾರ.

ಈಗ ಚರ್ಚೆ ಪರಿಸಮಾಪ್ತಿ. ನಡೀರಿ ಮಿಲ್ಟ್ರಿ ಹೋಟೆಲ್ ಕಡೆ.  ಚೀನಿಯರು ನಮ್ಮ menu ಮೇಲೆ ಇನ್ನೂ ಧಾಳಿ ಮಾಡಿಲ್ಲ ತಾನೇ? ಇಲ್ದಿದ್ರೆ, ನಾಯ್, ಜಿರಲೆ….ಅಯ್ಯೋ….

ಜಪಾನ್ ದುರಂತ ಮತ್ತು ಹಾಸ್ಯ

ಜಪಾನ್ ದುರಂತದಿಂದ ದಿಗ್ಭ್ರಾಂತವಾದ ವಿಶ್ವ ಜಪಾನೀಯರಿಗೆ ತಮ್ಮ ಅನುಭೂತಿ, ಸಂತಾಪ, ಪ್ರಾರ್ಥನೆಗಳನ್ನು ಒಂದು ಕಡೆ ಅರ್ಪಿಸುತ್ತಿದ್ದರೆ  ಮತ್ತೊಂದು ಕಡೆ ಅಲ್ಲಿನ ಸಾವು ನೋವಿನ ಬಗ್ಗೆ ಯಾವ ನೋವೂ ಇಲ್ಲದೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಕೀಳು ಅಭಿರುಚಿಯ ಜೋಕುಗಳನ್ನು ಸಿಡಿಸುತ್ತಿದ್ದಾರೆ ಕೆಲವರು.

ಅಮೆರಿಕೆಯ ಚಿತ್ರ ಸಾಹಿತ್ಯ ಲೇಖಕನೊಬ್ಬ ಜಪಾನ್ ದುರಂತದ ಬಗ್ಗೆ ಟ್ವೀಟಿಸಿದ್ದು ಹೀಗೆ; “ಜಪಾನಿನ ಭೂಕಂಪನದ ಬಗ್ಗೆ ಒಳ್ಳೆಯ ಭಾವನೆ ಬರಬೇಕಾದರೆ ಪರ್ಲ್ ಹಾರ್ಬರ್ ಸಾವಿನ ಸಂಖ್ಯೆ ಬಗ್ಗೆ ಗೂಗ್ಲಿಸಿ ನೋಡಿ”

೧೯೪೧ ರಲ್ಲಿ ಜಪಾನೀ ನಾವಿಕ ಪಡೆ ಅಮೆರಿಕೆಯ ಹವಾಯಿ ದ್ವೀಪದ ಪರ್ಲ್ ಹಾರ್ಬರ್ ಮೇಲೆ ನಡೆಸಿದ ಅಚ್ಚರಿದಾಯಕ ಆಕ್ರಮಣದಲ್ಲಿ ೨೦೦೦ ಸಾವಿರಕ್ಕೂ ಹೆಚ್ಚು ಜನ ಸತಿದ್ದರು. ಅದಕ್ಕೂ ಹೆಚ್ಚಾಗಿ ಈ ಆಕ್ರಮಣ ಅಮೆರಿಕೆಯ ಸೇನಾ ಪ್ರತಿಷ್ಠೆಗೆ ಭಾರೀ ಪೆಟ್ಟನ್ನೂ ನೀಡಿತ್ತು. ಈ ಆಕ್ರಮಣವನ್ನು ಗಮನದಲ್ಲಿಟ್ಟು ಕೊಂಡು ಪ್ರಸಕ್ತ ನೈಸರ್ಗಿಕ ವಿಕೋಪ ಕಾರಣ ಜಪಾನಿನಲ್ಲಿ ಸಂಭವಿಸಿದ ಅಗಾಧ ಸಾವು ನೋವಿಗೆ ಈತನ ಮನಸ್ಸು ಪ್ರತಿಸ್ಪಂದಿಸಲು ವಿಫಲವಾಯಿತು. ರಾಜಕೀಯ ಕಾರಣಗಳಿಗಾಗಿ ನಡೆದ ಆಕ್ರಮಣಕ್ಕೆ ಸೇಡು ಎನ್ನುವಂತೆ ಟ್ವೀಟಿಸುವ ಈತನಿಗೆ ಸಂದು ಹೋದ ಚರಿತ್ರೆ ಬಗ್ಗೆ ಮರುಗುವುದು ಹುಂಬತನ ಎನ್ನುವುದು ತಿಳಿಯದೆ ಹೋಯಿತು. ಇಂದು ಜಪಾನಿನ ಮೇಲೆ ಎರಗಿದ ನಿಸರ್ಗ ನಾಳೆ ತನ್ನ ದೇಶದ ಮೇಲೂ ಎರಗಬಾರದು ಎನ್ನುವ ಖಾತರಿ ಇಲ್ಲ ಎನ್ನ್ವುಉದು ಈ ಸಾಹಿತಿಗೆ ಅರಿಯದೆ ಹೋಯಿತು.   

ಮೇಲೆ ಹೇಳಿದ ಚಿತ್ರಸಾಹಿತಿಯ ಟ್ವೀಟ್ ಬಗ್ಗೆ ಗುಲ್ಲೆದ್ದು, ಪ್ರತಿಭಟನೆ ಬಂದಾಗ ಅವನು ಹೇಳಿದ್ದು, ನಾನು ಟ್ವೀಟಿ ಸುವಾಗ ೨೦೦ ಜನ ಮಾತ್ರ ಸತ್ತಿದ್ದರು, ಈಗ ೧೦ ಸಾವಿರಕ್ಕೆ ಮುಟ್ಟಿದೆ ಸಾವಿನ ಸಂಖ್ಯೆ, ನನ್ನ ಸಂವೇದನಾ ರಹಿತ ಕಾಮೆಂಟ್ ಗಳಿಗೆ ಕ್ಷಮೆಯಿರಲಿ”. ೨೦೦ ಜನ ಸತ್ತರೆ ಈತನಿಗೆ ದೊಡ್ಡ ವಿಷಯವಲ್ಲ. ಅದು ಗಂಭೀರವೂ ಅಲ್ಲ. ಅಮೆರಿಕೆಯ ದಿವಂಗತ ಸೆನಟರ್ ಟೆಡ್ ಕೆನಡಿಯ ಸಾಕು ನಾಯಿ “ಸ್ಪ್ಲಾಶ್” ಇತ್ತೀಚೆಗೆ ಸತ್ತಾಗ ಅದು ದೊಡ್ಡ ಸುದ್ದಿ. ಭೂಕಂಪದಲ್ಲಿ ಸತ್ತ ಜನರಿಗೆ ತಮಾಷೆಯ ಟ್ವೀಟ್. ಇದು ಸಂಸ್ಕಾರ.

ಈಗ ಮತ್ತೊಬ್ಬ ಹಾಸ್ಯನಟನ ಹಾಸ್ಯದ ಟ್ವೀಟ್ ನೋಡಿ; “ಜಪಾನೀಯರು ತುಂಬಾ ಮುಂದುವರಿದವರು, ಅವರು ಸಮುದ್ರ ತೀರಕ್ಕೆ ಹೋಗುವುದಿಲ್ಲ, ಬದಲಿಗೆ ತೀರವೇ ಅವರಿದ್ದಲ್ಲಿಗೆ ಬರುತ್ತದೆ”. ದೈತ್ಯಾಕಾರದ ಸುನಾಮಿ ಅಲೆಗಳು ೨೦೦ ರಿಂದ ೫೦೦ ಕಿಲೋ ಮೀಟರ್ ವೇಗದಲ್ಲಿ ಸೆನ್ಡಾಯ್ ನಗರದ ಮೇಲೆ ಅಪ್ಪಳಿಸಿ ಹತ್ತಾರು ಸಾವಿರ ಜನ ಸತ್ತಾಗ ಬಂದ ಶೋಕತಪ್ತ ಟ್ವೀಟ್ ಇದು. ಇದು ಬಿಳಿಯರಿಗೆ ಹಾಸ್ಯ. ಅಭಿವ್ಯಕ್ತಿ ಸ್ವಾಂತ್ರ್ಯ. ಬಿಳಿಯರಲ್ಲದ ಜನರ ಮೇಲೆ ಅವರಿಗಿರುವ ಅನುತಾಪ ಅಷ್ಟಕ್ಕಷ್ಟೇ. ಜಪಾನೀಯರನ್ನೂ, ಚೀನೀಯರನ್ನೂ ಹಳದಿ ಚರ್ಮದವರು ಎಂದು ತಮಾಷೆ ಮಾಡುತ್ತಾರಂತೆ ಪಾಶ್ಚಾತ್ಯರು.

ಆಧುನಿಕ ಬದುಕಿನ blackberry ಸಂಸ್ಕೃತಿ ಕಾರಣ ಮನುಷ್ಯ ಮತ್ತೊಬ್ಬರ ಕಷ್ಟಗಳಿಗೆ ಸ್ಪಂದಿಸಲು, ಅನುಕಂಪ ತೋರಲು ಸೋಲುತ್ತಿದ್ದಾನೆ ಎಂದರೆ ಉತ್ಪ್ರೇಕ್ಷೆ ಆಗಬಹುದೇ?       

ಭೂತ ಕಾಲದ ಬಗ್ಗೆ ತಲೆ ಕೆಡಿಸಿಕೊಳ್ಳುವವರಿಗೆ ಒಬ್ಬ ಮಹನೀಯ ಹೇಳಿದ್ದು;

the past is a foreign country; they do things differently there

“ತಾಯ್ ಚೀ” ಇರಲಿ…“ಎರ್ ನಾಯ್” ಬೇಡ

“ತಾಯ್ ಚೀ” ಬಗ್ಗೆ ಹೇಳುವುದೇನೂ ಬೇಡವಲ್ಲ? ಚೀನಾದ ಅಥವಾ ಇಂಪೋರ್ಟೆಡ್ ವ್ಯಾಮೋಹಕ್ಕೆ ಬಿದ್ದ ಭಾರತೀಯರು ನಮ್ಮದೇ ಆದ ಯೋಗಾಸನವನ್ನು ನಿರ್ಲಕ್ಷಿಸಿ ತಾಯ್ ಚೀ ಕಲಿಯುತ್ತಿದ್ದಾರಂತೆ. ಚೀನಾದ ಅಲಾರಂ ಗಡಿಯಾರ, ಮಕ್ಕಳ ಆಟಿಕೆ ಮಾತ್ರ ಏಕೆ ಅವರ ಸಾಮಾಜಿಕ ಅಭ್ಯಾಸಗಳೂ ಇರಲಿ ಎನ್ನುವ ಧೋರಣೆ ಇರಬಹುದು ಚೀನಾದ ಈ ವ್ಯಾಯಮದ ಕುರಿತ ಆಸಕ್ತಿಯ ಹಿಂದೆ. ಇರಲಿ ಬಿಡಿ, ‘ತಾಯ್ ಚಿ’ ಶರೀರದ ಆರೋಗ್ಯಕ್ಕೆ ಒಳ್ಳೆಯದೇ, ಆದರೆ, ಎರ್ ನಾಯ್ ಮಾತ್ರ ಶರೀರಕ್ಕೆ ಒಳ್ಳೆಯದಾದರೂ, ಮಾನಸಿಕ ಸ್ವಾಸ್ಥ್ಯಕ್ಕೆ ಒಳ್ಳೆಯದಲ್ಲ ಎನ್ನುವುದಂತೂ ನಿಜವೇ.

ಅಲ್ರೀ, ಏನೀ ‘ಎರ್ ನಾಯ್’?

‘ಎರ್ ನಾಯ್’ ಎಂದರೆ ಚೀನೀ ಭಾಷೆಯಲ್ಲಿ “ಎರಡನೇ ಹೆಂಡತಿ” ಅಂತ. ಚೀನೀ ಸಮಾಜ ಇದನ್ನು ಒಪ್ಪದಿದ್ದರೂ ಬಹುತೇಕ, ಮೊದಲ ಪತ್ನಿಯರೂ ಸೇರಿ, ಚೀನೀಯರು ಇದರ ವಿರುದ್ಧ ದೊಡ್ಡ ಸ್ವರ ಎತ್ತದೆ ಕಂಡೂ ಕಾಣದಂತೆ ತಮ್ಮ ದೃಷ್ಟಿಯನ್ನು ಬೇರೆಡೆ ನೆಡುತ್ತಾರೆ. “ಎರ್ ನಾಯ್” ಯನ್ನು ಸಾಕುವುದು ಒಂದು ರೀತಿಯ ಪ್ರತಿಷ್ಠೆ ಚೀನಾದಲ್ಲಿ. ಮೇಲ್ಮಧ್ಯಮ ವರ್ಗದ ಗಂಡಸರು ಕಾಸು ಹೆಚ್ಚಿದ್ದರೆ ಈ ಸೌಲಭ್ಯ ಹೊಂದಿರುತ್ತಾರೆ. “ಎರ್ ನಾಯ್” ಗಳು ಅವಸರದಿಂದ ಹೆಕ್ಕಲ್ಪಟ್ಟ ಅಂತಿಂಥ ಸ್ತ್ರೀಯರಲ್ಲ. ಇವರು ಸುಶಿಕ್ಷಿತರೂ, ಆಧುನಿಕ ಮನೋಭಾವದವರೂ ಆದ ಚೆಂದುಳ್ಳಿ ಹೆಣ್ಣುಗಳು. ಇವರ ಉಪಯೋಗ ಬರೀ “ವೀಕೆಂಡ್” ಗಾಗಿಯೋ ಅಥವಾ boredom ಕಳೆಯಲಿಕ್ಕೋ ಅಲ್ಲ. ಇವರು ತಮ್ಮ ಪುರುಷರೊಂದಿಗೆ business meeting ಗಳಲ್ಲಿ ಪಾಲುಗೊಳ್ಳುತ್ತಾರೆ. ಇವರನ್ನು ನೋಡಿ business partner ಗಳು ಪ್ರಭಾವಿತರಾಗುತ್ತಾರೆ. ಗಟ್ಟಿ ಕುಳ ಎಂದುಕೊಳ್ಳುತ್ತಾರೆ. ಒಂದು ರೀತಿಯ ಷೋ ಪೀಸು. ಕೆಲವರು louis vuitton ಬ್ರೀಫ್ ಕೇಸು, “ಗುಚ್ಚಿ” ಪರ್ಫ್ಯೂಮು, “ಫ್ಲೋರ್ ಶೈಮ್” ಶೂ ಹಾಕಿಕೊಂಡು ಕ್ಲಯಂಟ್ ಗಳನ್ನು ಇಂಪ್ರೆಸ್ಸ್ ಮಾಡಲು ಹೊರಟರೆ ಇವರದು ಬೇರೆಯದೇ ಆದ ವಿಧಾನ. ತಮ್ಮ ಮಡದಿಯರ ಉದರಕ್ಕೆ ಬೆಂಕಿ ಹಾಕಿ ಇಂಪ್ರೆಸ್ ಮಾಡೋ ವಿಧಾನ.

ವಿವಾಹದ ಬಗ್ಗೆ ಚೀನಿಯರದು ಟೇಕ್ ಇಟ್ ಈಜಿ attitude. ರೋಷದಿಂದ ಸಂಪತ್ತಿನ ಹಿಂದೆ ಬಿದ್ದ ಪರಿಣಾಮವಿರಬೇಕು. ಒಬ್ಬ ಪಾಶ್ಯಾತ್ಯ ವ್ಯಕ್ತಿಯ ಪ್ರಕಾರ ಇಲ್ಲಿ ಚೀನಾದಲ್ಲಿ ವಿವಾಹ ಎನ್ನುವುದು ಎರಡು ಹೃದಯಗಳ ಬೆಸುಗೆ ಅಲ್ಲ. ಒಂದು ರೀತಿಯ ಎರಡು ಕುಟುಂಬಗಳ ಮಧ್ಯೆಯ ಒಪ್ಪಂದ. ಅದರ ಮೇಲೆ ಬೇರೆ ದೇಶಗಳ ರೀತಿ ಚೀನಾದಲ್ಲಿ ಮಾನವೀಯ ಕ್ರಾಂತಿ (humanist revolution) ಆಗಿಲ್ಲವಂತೆ. ಹಾಗಾಗಿ ವಿವಾಹ ತಲೆ ಕೆಡಿಸಿ ಕೊಳ್ಳುವಂಥ ವ್ಯವಸ್ಥೆಯಲ್ಲ. ವ್ಯವಸ್ಥೆ ಹೀಗಿರುವಾಗ ಜಾಣ, ಚೆಂದುಳ್ಳಿ ಹೆಣ್ಣುಗಳು “ಎರ್ ನಾಯ್” ಪಟ್ಟಕ್ಕೆ ಮೋಹಿತರಾಗುತ್ತಾರೆ. ಇರುವವನು ತಾನೇ ಈ ರೀತಿಯ ಎರಡನೇ ಹೆಣ್ಣನ್ನು ಇಟ್ಟು ಕೊಳ್ಳಲು ಸಾಧ್ಯ? ಮುಂದುವರಿದ ನಗರ ಗಳಲ್ಲಂತೂ ಶೇಕಡ ೮೦ ಶ್ರೀಮಂತ ಪುರುಷರಿಗೆ ಈ ತೆರನಾದ ಸಂಗಾತಿಗಳಿರುತ್ತಾರಂತೆ. ಮಹಿಳೆಯರೂ ಸಹ ಧನದ ಹಿಂದೆ ಓಡುವುದರಿಂದ ಯಾವುದೇ arrangement (ವಿವಾಹ ಅಥವಾ ಎರ್ ನಾಯ್) ನಲ್ಲಿ ಧನವಂತನನ್ನೇ ಇಷ್ಟ ಪಡುತ್ತಾಳೆ. ಈ ಧೋರಣೆಯ ಹಿಂದೆ economic interest ಸಹ ಇದೆ. ಒಬ್ಬ ಮಹಿಳೆಯ ಈ ಮಾತನ್ನು ಕೇಳಿ; “ ನಾನು ನನ್ನವನಿಂದ ತ್ಯಜಿಸಲ್ಪಟ್ಟಾಗ ಸೈಕಲ್ಲಿನ ಮೇಲೆ ಕೂತು ಕಣ್ಣೀರು ಹಾಕುವುದಕ್ಕಿಂತ BMW ಕಾರಿನಲ್ಲಿ ಕೂತು ಕಣ್ಣೀರು ಹಾಕಲು ಇಷ್ಟಪಡುತ್ತೇನೆ”. ಅಂದರೆ ಅವನು ನನ್ನನ್ನು ಬಿಟ್ಟರೂ BMW ನನ್ನ ಪಾಲಾದರೆ ಸಾಕು ಎಂದು. ‘crass materialism’ ತರುವ ಧೋರಣೆ ಇದು.

ಚೀನಾದ ಮಾಜಿ ಅಧ್ಯಕ್ಷ Jiang Zemin ಗೂ ಒಬ್ಬ ‘ಎರ್ ನಾಯ್’ ಇತ್ತಂತೆ. ಆಕೆ ಹಾಡುಗಾರ್ತಿ ಕೂಡಾ.

ನಮ್ಮ ದೇಶದ ಧೋರಣೆ ಏನು?

ನಮ್ಮ ದೇಶದಲ್ಲಿ ಈ ರೀತಿಯಾಗಿ ಪತ್ನಿಯಿದ್ದೂ ಮತ್ತೊಬ್ಬ ಸ್ತ್ರೀಯನ್ನು ಸಂಗಾತಿಯಾಗಿ ಇಟ್ಟುಕೊಳ್ಳುವುದಕ್ಕೆ ಇಟ್ಟು ಕೊಂಡವಳು, ಎಂದೂ ಸ್ವಲ್ಪ ತುಂಟ ತಮಾಷೆಯಾಗಿ “ಕೀಪ್” ಮತ್ತು “ಸ್ಟೆಪ್ನಿ” ಎಂದೂ ಕರೆಯುತ್ತಾರೆ. ಈ ರೀತಿಯಾಗಿ ವಿವಾಹದ ಹೊರಗೆ ಸಂಬಂಧ ಇಟ್ಟುಕೊಂಡ ಪುರುಷನನ್ನು ಸಮಾಜ ಅಸೂಯೆ ಮಿಶ್ರಿತ ಮೆಚ್ಚುಗೆಯಿಂದ ನೋಡಿದರೆ ಆ ಸೌಲಭ್ಯ ಮಹಿಳೆಗೆ ಇಲ್ಲ. ಇಟ್ಟು ಕೊಂಡವಳು, ಕೀಪ್ ಅಥವಾ ಸ್ಟೆಪ್ನಿ ಎಂದು ಕರೆಯುವುದರ ಬಗ್ಗೆಯೂ ಜನರಲ್ಲಿ ವಿಶೇಷವಾಗಿ ಫೆಮಿನಿಸ್ಟ್ ಪೈಕಿಯವರಿಗೆ ಭಾರೀ ವಿರೋಧವಿದೆ. ಈ ರೀತಿಯಾಗಿ ಕರೆಯುವುದು ಹೆಣ್ಣನ್ನು ನಿಕೃಷ್ಟವಾಗಿ ಕಂಡಂತೆ ಎನ್ನುವುದು ಇವರ ಅಭಿಪ್ರಾಯ. ದಾರಿ ಹೋಕರು ಸ್ಟೆಪ್ನಿ ಎಂತಲೋ, ಇಟ್ಟುಕೊಂಡವಳು ಎಂತಲೋ ಕರೆದುಕೊಳ್ಳಲಿ, ಆದರೆ ನಮ್ಮ ಸರ್ವೋಚ್ಚ ನ್ಯಾಯಾಲಯವೇ ಹಾಗೆ ಸಂಬೋಧಿಸಿದರೆ ಹೇಗಿರಬಹುದು?

ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಒಂದು ತಗಾದೆ ಸರ್ವೋಚ್ಚ ನ್ಯಾಯಾಲಯದ ಕಟ್ಟೆ ಹತ್ತಿತು. ಇಟ್ಟು ಕೊಂಡ ವಳು ಖರ್ಚು ವೆಚ್ಚಕ್ಕೆ ಅರ್ಹಳೋ ಎಂದು. ಆ ಸಂದರ್ಭದಲ್ಲಿ ನ್ಯಾಯಾಲಯ “ಕೀಪ್” ಜೀವನಾಂಶಕ್ಕೆ ಅರ್ಹಳಲ್ಲ ಎನ್ನುವ ತೀರ್ಪು ನೀಡಿತು. ಕೀಪ್ ಪದವನ್ನು ಸಾಕ್ಷಾತ್ ನ್ಯಾಯ ಮೂರ್ತಿಗಳ ಬಾಯಲ್ಲಿ ಕೇಳಿದ ‘ಸೋಲಿಸಿಟರ್ ಜನರಲ್’ ಇಂದಿರಾ ಜೈಸಿಂಗ್ ತಮ್ಮ ಕಿವಿಗಳನ್ನೇ ನಂಬಲಾಗಲಿಲ್ಲ. ಈ ೨೧ ನೆ ಶತಮಾನದಲ್ಲಿ ಸರ್ವೋಚ್ಚ ನ್ಯಾಯಾಲಯ ಹೇಗೆ ತಾನೇ ಓರ್ವ ಮಹಿಳೆಗೆ ಈ ಪದವನ್ನ ಉಪಯೋಗಿಸಬಲ್ಲುದು ಎಂದು ಗುಡುಗಿದರು. ಈ ಪದವನ್ನು ಕಡತದಿಂದ ತೆಗೆದು ಹಾಕಲು ನಾನು ಅರ್ಜಿ ಸಲ್ಲಿಸುತ್ತೇನೆ, ಅಲ್ಲಿಯವರೆಗೆ ಈ ನ್ಯಾಯಾಲಯದ ಕಲಾಪದಲ್ಲಿ ಭಾಗಿಯಾಗುವುದಿಲ್ಲ ಎಂದು ಪ್ರತಿಭಟಿಸಿದರು. ಕೊನೆಗೆ keep ಬದಲಿಗೆ concubine ಪದ ಆಗಬಹುದೋ ಎಂದು ಕೇಳಿ ಜೈಸಿಂಗ್ ರನ್ನು ಸಮಾಧಾನ ಪಡಿಸಿತು ನ್ಯಾಯಾಲಯ. ಸುಪ್ರೀಂ ಕೋರ್ಟೇ ಈ ರೀತಿ ಪದ ಪ್ರಯೋಗ ಮಾಡಿರುವಾಗ ನಾವು ಯಾವ ಲೆಕ್ಕ ಎನ್ನುತ್ತೀರೋ? ಸಂಬಂಧ ಇಟ್ಟು ಕೊಂಡ ಹೆಣ್ಣಿಗೆ ಜೀವನಾಂಶ ಇಲ್ಲ, ಅದರಲ್ಲೂ “ಒಂದು ರಾತ್ರಿಯ ನಿಲುಗಡೆ” (one night stand) ಯವರಿಗಂತೂ ಈ ಸೌಲಭ್ಯ ಇಲ್ಲವೇ ಇಲ್ಲ ಎಂದು ತೀರ್ಪ ಹೊರಬಿದ್ದಿತು ಸರ್ವೋಚ್ಚ ನ್ಯಾಯಾಲಯದಿಂದ.

ಜಿಜ್ಞಾಸೆ: ಎರಡನೆಯ, ಅನಧಿಕೃತ ಹೆಣ್ಣು “ಕೀಪ್” ಆಗುವುದಾದರೆ, ಮೊದಲನೆಯವಳು ಗಂಡಿನ ಮೇಲೆ “ಹೇರಲ್ಪಟವಳು” ಎಂದೋ?

ಈ ವೆಬ್ ತಾಣ ನಿಷಿದ್ಧ

عزيزي المستخدم، 

Dear User,

عفواً، الموقع المطلوب غير متاح.

Sorry, the requested page is unavailable.إن كنت ترى أن هذه الصفحة ينبغي أن لا تُحجب تفضل بالضغط هنا. 

If you believe the requested page should not be blocked please click here.

ಬೇಡದ ವೆಬ್ ತಾಣಕ್ಕೆ ಭೆಟ್ಟಿ ನೀಡುವ ದಾರ್ಷ್ಟ್ಯತನ ತೋರಿದರೆ ಸೌದಿ ಯಲ್ಲಿರುವ ಇಂಟರ್ನೆಟ್ ಇಲಾಖೆ ಈ ಸಂದೇಶವನ್ನು ರವಾನಿಸುತ್ತದೆ. ಧರ್ಮಬಾಹಿರ, ಲೈಂಗಿಕ, ಹಿಂಸಾತ್ಮಕ contents ಇರುವ ತಾಣಗಳನ್ನು ತಡೆ ಹಿಡಿಯುತ್ತಾರೆ. ಹಾಗೇನಾದರೂ ನಿಮಗೆ ಅವರ ತೀರ್ಪಿನ ಬಗ್ಗೆ ತಕರಾರಿದ್ದರೆ ಈ ಮೇಲ್ ಮೂಲಕ  ಸಂಪರ್ಕಿಸ ಬಹುದು. world sex ತಾನವನ್ನು ನನಗಾಗಿ ಬಿಚ್ಚಿ ಕೊಡಪ್ಪ ಎಂದು ಯಾರಾದರೂ “ಮೇಲ್” ಮನವಿ ಸಲ್ಲಿಸಿಯಾರೆ? 
ಒಮ್ಮೆ times of india ತಾಣವನ್ನು ಒಂದು ದಿನದ ಮಟ್ಟಿಗೆ ನಿಷೇಧಿಸಿದ್ದರು. ಆದರೆ ಅಚ್ಚರಿದಾಯಕವಾಗಿ ಸೌದಿಯ ಇಂಟರ್ನೆಟ್ ನಿರ್ಬಂಧ  ನಮ್ಮ ನೆರೆಯ ಚೀನಾದಷ್ಟು ಇಲ್ಲ. ಹಾಗೆಯೇ ಈಗ ನಡೆಯುತ್ತಿರುವ ಈಜಿಪ್ಟ್ ಸರ್ವಾಧಿಕಾರದ ವಿರುದ್ಧದ ಸಮಯ ಅಲ್ಲಿನ ಸರಕಾರ ಅಂತರ್ಜಾಲವನ್ನು ನಿಷೆಧಿಸಿದರೂ ಸೌದಿ ಆ ನಿಲುವನ್ನು ತಾಳಲಿಲ್ಲ. ಅಷ್ಟೊಂದು supremely confident ಇಲ್ಲಿನ ರೂಲರ್ ಗಳು.    

ಚುಂಬನ ಸ್ಪರ್ದೆ

ಚುಂಬನ ಸ್ಪರ್ದೆ ಚೀನಾದಲ್ಲಿ. ಹಾಂ? ಚುಂಬನ?ಚೀನಾದಲ್ಲಿ? ಅದೂ ಸಾರ್ವಜನಿಕವಾಗಿ? ನಾವೆಲ್ಲಾ ತಿಳಿದಂತೆ ಚೀನೀಯರ ಕೆಲಸ ನಮ್ಮ ಅರುಣಾಚಲ ಪ್ರದೇಶವನ್ನು, ಮತ್ತು ಇತರೆ ಈಶಾನ್ಯ ರಾಜ್ಯಗಳತ್ತ ಆಸೆ ಗಣ್ಣು ಬೀರುವುದು ಎಂದು. ಊಹೂಂ, ಈ ಚಪ್ಪಟೆ ಮೂಗಿನವರಿಗೆ ಒಂದಿಷ್ಟು ಚುಂಬನದ ಕಲೆಯೂ ಗೊತ್ತು, ಯಾರಿಗೆ ಗೊತ್ತು ನಮ್ಮ ವಾತ್ಸ್ಯಾಯನ ಅಡ್ಡಾಡುತ್ತಾ ಚೀನದ ಕಡೆಗೂ ತಲೆ ಹಾಕಿರಬಹುದು. valentine ದಿನದಂದು ಚೀನಾ ದ ಸೂಪರ್ ಮಾರ್ಕೆಟ್ ಒಂದು ವಿವಿಧ ಭಂಗಿಯಲ್ಲಿ ದೀರ್ಘವಾಗಿ ಚುಂಬಿಸುವುದಕ್ಕೆ ಯುವ ಹೃದಯಿಗಳಿಗೆ ಮುಕ್ತ ಆಹ್ವಾನ ನೀಡಿದಾಗ ಸಿಕ್ಕ ಚಿತ್ರಗಳಿವು. ನೋಡಿ ಆನಂದಿಸಿ, ಪೂರ್ಣ ವಿರಾಮ. ಪ್ರಿಯ/ತಮೆ ಯರ ಮೇಲೆ ಪ್ರಯೋಗಿಸದಿರಿ.

ಇನ್ನಾದರೂ ಜೀವನದಲ್ಲಿ ಹಿಂದೆ ಬನ್ನಿ..

ಇನ್ನಾದರೂ ಜೀವನದಲ್ಲಿ ಹಿಂದೆ ಬನ್ನಿ ಹಾಡಿನಲ್ಲಿ ಮುಂದೆ ಬರುವ ಹುರುಪು ಇರಬಹುದು ಆದರೆ ನಿಜ ಜೀವನದಲ್ಲಿ ಕೆಲವೊಮ್ಮೆ ಹಿಂದೆ ಹೋಗುವ ಅವಶ್ಯಕತೆ ಬರುತ್ತದೆ. ಆಂಗ್ಲ ಭಾಷೆಯಲ್ಲಿ back to basics ಎನ್ನುತ್ತಾರೆ. ನೈತಿಕವಾಗಿ ಅಧಃಪತನದ ಹಾದಿ ಹಿಡಿದಾಗ ಹೇಳುವುದಿದೆ ಕಾಲ ಕೆಟ್ಟು ಹೋಯಿತು, now is time to look back ಅಂತ. ಕಾಲ ಎಂದಿಗೂ ಕೆಡುವುದಿಲ್ಲ, ಕಾಲವನ್ನು ಕೆಡಿಸುವವರು ನಾವು. ಇಷ್ಟೆಲ್ಲಾ ಹೇಳಲು ಕಾರಣ ಆಧುನಿಕ ಬದುಕಿನ ನೂರಾರು ಆವಿಷ್ಕಾರಗಳಲ್ಲಿ ಒಂದಾದ ಪ್ಲಾಸ್ಟಿಕ್ ಹೇಗೆ ನಮ್ಮ ಭೂಮಿಯ ಮೇಲಿನ ಬದುಕನ್ನು ದುಸ್ತರಗೊಳಿಸುತ್ತದೆ ಮತ್ತು ಅದನ್ನು ನಿಗ್ರಹಿಸಲು ನಾವೆಷ್ಟು ಶ್ರಮ ಪಡುತ್ತಿದ್ದೇವೆ ಎನ್ನುವುದರತ್ತ ಒಂದು ನೋಟ ಹರಿಸೋಣ. ಮಾರುಕಟ್ಟೆಗೆ ಕರಿಬೇವು ತರಲು ಹೋದರೆ ಕೂಡಲೇ ಅದನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಕೊಡುತ್ತಾನೆ ಅಂಗಡಿಯವ. ಕಾಲವೊಂದಿತ್ತು ಬಟ್ಟೆ ಚೀಲವನ್ನು ಶಾಪಿಂಗ್ ವೇಳೆ ಕೊಂಡುಹೋಗುವುದು. ಈಗ ಅದು outdated ಮತ್ತು out of sync. ಕಾಲದೊಂದಿಗೆ ಹೆಜ್ಜೆ ಹಾಕಲು ಬರದವ ಎಂದು ಕನಿಕರದ ನೋಟ ಎದುರಾಗುತ್ತದೆ. ಪ್ಲಾಸ್ಟಿಕ್ ಅಥವಾ ಪಾಲಿಥಿನ್ ಚೀಲದ ಉಪಯೋಗದಿಂದ ಆಗುವ ಅನಾಹುತ ಕೇಳಿಯೇ ಇದ್ದೇವೆ. ಕೆಲ ವರ್ಷಗಳ ಹಿಂದೆ ಮುಂಬೈ ಮಹಾ ನಗರದ ಚರಂಡಿಗಳು ಪಾಲಿಥಿನ್ ಚೀಲಗಳಿಂದ ತುಂಬಿ ಮಳೆ ನೀರು ಹರಿದು ಹೋಗಲು ಸ್ಥಳ ಇಲ್ಲದೆ ಪ್ರವಾಹದ ಪರಿಸ್ಥಿತಿ ನಿರ್ಮಿತವಾಗಿತ್ತು. ಇಂಥ ಘಟನೆಗಳಿಂದ ಬುದ್ಧಿ ಕಲಿಯುವ ಇರಾದೆ ಮತ್ತು ಸಮಯ ನಮಗಿಲ್ಲದಿದ್ದರೂ ಪಕ್ಕದ ಚೀನಾ ದೇಶ ಮಾತ್ರ ದೊಡ್ಡ ಅನಾಹುತ ಎರಗುವ ಮೊದಲೇ ಎಚ್ಚತ್ತುಕೊಳ್ಳುವ ಸಿದ್ಧತೆ ಮಾಡಿದೆ. ಆರ್ಥಿಕವಾಗಿ ಅತಿ ವೇಗವಾಗಿ ಬೆಳೆಯುತ್ತಿರುವ ಚೀನಾ ನಿಸರ್ಗಕ್ಕೆ ಮಾಡಿದ ಅನ್ಯಾಯದ ಅರಿವು ತಡವಾಗಿಯಾದರೂ ಬಂದಿತು. ಪ್ರತಿ ದಿನ ೩ ಕೋಟಿ ಚೀಲಗಳನ್ನು ಬಳಸುವ ಚೀನಾ ಇಂಥ ಚೀಲಗಳ ಉತ್ಪಾದನೆಗೆ ಬಹಳಷ್ಟು ಸಂಪನ್ಮೂಲಗಳನ್ನು ಉಪಯೋಗಿಸಬೇಕಿತ್ತು. ಅಮೇರಿಕಾ ಈ ಪ್ರಮಾಣದ ( ೩ ಕೋಟಿ ) ಚೀಲ ಬಳಸಲು ಒಂದು ವರ್ಷ ತೆಗೆದುಕೊಳ್ಳುತ್ತದೆ. ಚೀನಾ ಈಗ ಪಾಲಿಥಿನ್ ಚೀಲದ ಮೇಲೆ ನಿರ್ಬಂಧ ಹೇರಿದ್ದು ಸಾರ್ವಜನಿಕ ಅಭಿಯಾನದ ಮೂಲಕ ಜನರಲ್ಲಿ ಅರಿವು ಮೂಡಿಸುತ್ತಿದೆ. ಈ ವಿಷಯದಲ್ಲಿ ನಾವೇಕೆ ಹಿಂದೆ ಬೀಳಬೇಕು? ಇನ್ನು ಮುಂದೆ ಸಾಮಾನು ಕೊಳ್ಳಲು ಹೋಗುವಾಗ ಬಟ್ಟೆ ಚೀಲವನ್ನು ಏಕೆ ಉಪಯೋಗಿಸಬಾರದು. ನಾವು ಮಾತ್ರವಲ್ಲ, ಮನೆಯವರಿಗೂ, ನೆಂಟರಿಷ್ಟರಿಗೂ ಸ್ನೇಹಿತರಿಗೂ ಇದರ ಬಗ್ಗೆ ತಿಳಿ ಹೇಳಿ ಒಂದು ಪುಟ್ಟ ಅಭಿಯಾನ ಆರಂಬಿಸಿದರೆ ಹೇಗೆ? every great journey starts with one small step, ಅಲ್ಲವೇ?