ಇಶಾಂತ್ ಶರ್ಮ – ಚೇತನ್ ಶರ್ಮಾ

ನಿನ್ನೆ ನಡೆದ ಭಾರತ ಆಸ್ಟ್ರೇಲಿಯಾದ ಮೂರನೇ ಒಂದು ದಿನದ ಪಂದ್ಯ ಯಾರೂ ಊಹಿಸದ ಫಲಿತಾಂಶ ನೀಡಿತು. ಯಾವ ಆಟ ಅಥವಾ ಸ್ಪರ್ದೆಯೇ ಆದರೂ ನಿರೀಕ್ಷಿಸಿದ ಫಲಿತಾಂಶ ಕೊಡಲ್ಲ. ಅದರಲ್ಲೇ ಅಲ್ಲವೇ ಆಟದ ಮಜಾ ಇರೋದು? ಆದರೆ ಕ್ರಿಕೆಟ್ ನ ಸೊಗಸೇ ಬೇರೆ. ಬೌಲ್ ಮಾಡಿದ ಪ್ರತೀ ಚೆಂಡು, ಬೀಸಿದ ಪ್ರತೀ ಹೊಡೆತ ಫಲಿತಾಂಶವನ್ನು ಏರು ಪೇರು ಮಾಡುತ್ತದೆ. ಕಮೆಂಟೇಟರ್ ನನ್ನು ಪ್ರೇಕ್ಷಕನನ್ನು ಇಂಗು ತಿಂದ ಮಂಗವನ್ನಾಗಿಸುತ್ತದೆ. ನಿನ್ನೆಯ ಕತೆಯೂ ಅದೇ. ೪೭ ನೆ ಓವರ ವರೆಗೂ ಗೆಲುವು ಭಾರತದ ಕೈಯಲ್ಲಿತ್ತು. ೪೮ನೆ ಓವರ ಎಸೆಯಲು ಬಂದ ಇಶಾಂತ್ ಶರ್ಮ ಎಲ್ಲಾ ಲೆಕ್ಕಾಚಾರವೂ ತಲೆ ಕೆಳಗಾಗುವಂತೆ ಬೌಲ್ ಮಾಡಿ ಆರು ಚೆಂಡು ಗಳಲ್ಲಿ ಭಾರ್ತಿ ೩೦ ರನ್ ಕೊಟ್ಟು ಆಸ್ಟ್ರೇಲಿಯಾ ಕುಣಿಯುವಂತೆ ಮಾಡಿದ. ಆಟದ ಪ್ರತೀ ಸನ್ನಿವೇಶದ ಬಗ್ಗೆ ಇಲ್ಲಿ ಹೇಳುವ ಅಗತ್ಯ ಇಲ್ಲ. ೩೦ ರನ್ ಕೊಟ್ಟ ಇಶಾಂತ್ ಶರ್ಮನನ್ನು ಮಾತ್ರ ಜನ ಮನೆಯ ಟೀವೀ ರೂಂ ನಿಂದ ಹಿಡಿದು ಅಂತರ್ಜಾಲದ ವಿವಿಧ ಸಾಮಾಜಿಕ ತಾಣಗಳ ತನಕ ಹಿಗ್ಗಾ ಮುಗ್ಗಾ ಮೂದಲಿಸಿದರು. ಧೋನಿಯನ್ನೂ ಬಿಡಲಿಲ್ಲ. ಧೋನಿ ಮತ್ತು ಇಶಾಂತ್ ಸಲಿಂಗ ಕಾಮಿಗಳಂತೆ, ಅದಕ್ಕೆ ಧೋನಿ ಇಶಾಂತ್ ನನ್ನೇ ಆಡಿಸುವ ಬಗ್ಗೆ ಹಠ ತೊಡುತ್ತಾನಂತೆ….ಅಂತೆ ಕಂತೆ. ತಂಡಗಳ ಮೇಲಿನ ವ್ಯಾಮೋಹ, ನಿಷ್ಠೆ ಆಟದ ನಿಜವಾದ ಆಕರ್ಷಣೆ, ಮತ್ತು ಸೊಗಸನ್ನು ಆಸ್ವಾದಿಸದಂತೆ ಮಾಡಿ ಬಿಡುತ್ತದೆ. ನಮ್ಮ ದೇಶದ ತಂಡವನ್ನ ಖಂಡಿತ ಬೆಂಬಲಿಸಬೇಕು , ಆದರೆ ಆಟ ಒಂದು ಘಟ್ಟ ತಲುಪಿದ ಕೂಡಲೇ, ನಮ್ಮವರು ಪ್ರಯತ್ನಿಸಿಯೂ ಸೋತಾಗ, ಎದುರಾಳಿಯ ಆಟದ ವೈಖರಿಯನ್ನು, ಕೆಚ್ಚನ್ನು ಮೆಚ್ಚಲೇ ಬೇಕು. ಪ್ರತೀ ಸಲವೂ ನಾವು ಗೆಲ್ಲಲಾಗುವುದಿಲ್ಲ.

೩೦ ರನ್ ಕೊಟ್ಟು ಭಾರತ ಸೋಲುವಂತೆ ಮಾಡಿದ ಇಶಾಂತ್ ಶರ್ಮನ ರೀತಿಯ ಕಥೆಯ ಮತ್ತೊಬ್ಬ ಶರ್ಮ ನದು. ಅವನೇ ನಮ್ಮಾ ಚೇತನ್ ಶರ್ಮಾ. ಇಸವಿ ೧೯೮೬. ಶಾರ್ಜಾ ನಗರ. ಗೆಲ್ಲಲು ಪಾಕಿಸ್ತಾನಕ್ಕೆ ಬೇಕು, ನಾಲ್ಕು ರನ್ನುಗಳು. ೫೦ ನೆ ಓವರಿನ ಕೊನೆಯ ಚೆಂಡಿನಲ್ಲಿ ಈ ನಾಲ್ಕು ರನ್ ಗಳು ಬೇಕು. ಚೇತನ್ ಹಾಕುತ್ತಾನೆ ಫುಲ್ ಟಾಸ್, ಬ್ಯಾಟ್ ಮಾಡುತ್ತಿದ್ದ ಜಾವೇದ್ ಮಿಯಂದಾದ್ ಚೆಂಡನ್ನು ಬೌಂಡರಿಯ ಆಚೆಗೆ ಅಟ್ಟುತ್ತಾನೆ, ಸಿಕ್ಸರ್ ಗಾಗಿ. ಇಡೀ ದೇಶ ದುಃಖದ ಮಡುವಿನಲ್ಲಿ ಮುಳುಗುತ್ತದೆ, ಚೇತನ್ ಶರ್ಮನಿಗೆ ಹಿಡಿ ಹಿಡಿ ಶಾಪ ಹಾಕುತ್ತಾ.

ನಿನ್ನೆ ರಾತ್ರಿಯೂ ಎಲ್ಲರೂ ಮಲಗಲು ಹೋಗಿದ್ದು ಇಶಾಂತ್ ಶರ್ಮ ನಿಗೆ ಶಾಪ ಹಾಕಿಯೇ. ಆದರೆ ಇಶಾಂತ್ ಧೃತಿಗೆಡಬಾರದು. ನಾಯಕ ಇಟ್ಟ ವಿಶ್ವಾಸಕ್ಕೆ, ೩೦ ರನ್ ಬಾರಿಸಿದ “ಜೇಮ್ಸ್ ಫಾಕ್ನರ್” ನ ಹುರುಪಿನ ಮಾತಿಗೆ ತಕ್ಕಂತೆ ಆಡಿ ಕ್ರಿಕೆಟ್ ಆಟಕ್ಕೆ ಕೀರ್ತಿ ತರಬೇಕು.

Advertisements

ನಾವೀಗಲೂ ವಿಶ್ವ ವಿಜಯೀ

we are still world champs. ಭಾರತ ತಂಡದ ನಾಯಕ ಆಸ್ಟ್ರೇಲಿಯಾದವರಿಂದ ಮತ್ತೊಮ್ಮೆ ಇಕ್ಕಿಸಿಕೊಂಡ ನಂತರ ಹೇಳಿದ ಮಾತು. ಅದರ ಅರ್ಥ ಇನ್ನೂ ಮೂರು ನಾಲ್ಕು ವರ್ಷಗಳ ಕಾಲ ಸೋಲಿನ ಮೇಲೆ ಸೋಲನ್ನು ನಾವು ಅನುಭವಿಸಿದರೂ ಪರವಾಗಿಲ್ಲ, ಈಗಲೂ ನಾವು ವಿಶ್ವ ಚಾಂಪಿಯನ್ನರು.

ಗತ ಕಾಲದ ವೈಭವವನ್ನು ಮೆಲುಕು ಹಾಕುತ್ತಾ ವಾಸ್ತವದ ಬಗ್ಗೆ ಅಸಡ್ಡೆ ತೋರಿಸುತ್ತಾ ಸಾಗುವ ಸಮಾಜ ನಮ್ಮನ್ನು ಬಿಟ್ಟರೆ ಬೇರೆಯೂ ಇರಬಹುದೇ, ಅಥವಾ are we unique in this?

ಈಗ ತಾನೇ ಮುಕ್ತಾಯ ಗೊಂಡ ಆಸೀ-ಭಾರತ ನಾಲ್ಕು ಟೆಸ್ಟ್ ಗಳ ಟೆಸ್ಟ್ ಪಂದ್ಯಾವಳಿ ಕ್ರಿಕೆಟ್ ಇತಿಹಾಸದ ಕಡಿಮೆ ಸಮಯದಲ್ಲಿ ಮುಕ್ತಾಯವಾದ ಸರಣಿ ಆಗಿರಬಹುದೇ? ಏಕೆಂದರೆ ಎರಡು ಟೆಸ್ಟ್ ಗಳು ಮೂರೇ ಮೂರು ದಿನಗಳಲ್ಲಿ ಮುಕ್ತಾಯವಾದವು. ಮತ್ತೆರಡು ಟೆಸ್ಟ್ ಗಳು ನಿಗದಿತ ಸಮಯಕ್ಕಿಂತ ಬೇಗ ಮುಕ್ತಾಯವಾಯಿತು.

ಆಘಾತಕಾರೀ ಸುದ್ದಿ: ಪಾಕಿಸ್ತಾನಕ್ಕೆ ಆಘಾತಕಾರೀ ಗೆಲುವು. ಎರಡನೇ ಟೆಸ್ಟ್ ನಲ್ಲಿ ಗೆಲ್ಲಲು ಕೇವಲ ೧೪೫ ರನ್ನುಗಳ ಗುರಿ ಇಟ್ಟುಕೊಂಡಿದ್ದ ಬಲಿಷ್ಠ ಇಂಗ್ಲೆಂಡ್ ತಂಡ ಕೇವಲ ೭೨ ರನ್ನುಗಳನ್ನು ಮಾಡಿ ತನ್ನೆಲ್ಲಾ ವಿಕೆಟು ಗಳನ್ನು ತರಗೆಲೆ ಗಳಂತೆ ಉದುರಿಸಿ ಕೊಂಡಿತು. ಪಾಕಿಸ್ತಾನದ ಹಲವು ಆಟಗಾರರು ಜೈಲಿನಲ್ಲಿದ್ದರೂ, ತಂಡ ಒಗ್ಗಟ್ಟಿನಿಂದ ಆಡುವ ಅನುಮಾನವಿದ್ದರೂ, ಪಾಕ್ ಅಮೋಘ ಯಶಸ್ಸನ್ನು ಸಾಧಿಸಿತು ತನ್ನ ಮಾಜಿ ಒಡೆಯನ ವಿರುದ್ಧ. ಭಯೋತ್ಪಾದಕರ ಬೆದರಿಕೆಗೆ ತನ್ನ ನೆಲದಲ್ಲೇ ಆಡಲು ಯೋಗ್ಯತೆ ಇಲ್ಲದ ತಂಡ ಮೂರನೇ ದೇಶವೊಂದರಲ್ಲಿ, ( ನ್ಯೂಟ್ರಲ್ ಅವೆನ್ಯೂ ) ಆಡಿ ಸಾಧಿಸಿದ್ದನ್ನು ನೋಡಿದರೆ ನಾವೂ ಸಹ ಅದೇ ದಾರಿ ಏಕೆ ತುಳಿಯಬಾರದು. ನಮ್ಮ ನೆಲದಲ್ಲಿ ಆಡಿದರೂ ನಮಗೆ ಸೋಲು, ಅತಿಥೇಯ ದೇಶದಲ್ಲಿ ಆಡಿದರೂ ಸೋಲು. ನಾವೂ ಹುಡುಕೋಣ ನ್ಯೂಟ್ರಲ್ ಅವೆನ್ಯೂ ಒಂದನ್ನು, ಬಾರಿಸೋಣ ಜಯಭೇರಿಯನ್ನು.

೨೦೧೧… ಹೀಗಿತ್ತು !

ವರ್ಷಗಳು ಉರುಳುವುದೇ ಅರಿವಾಗುವುದಿಲ್ಲ. ಅಷ್ಟು ಸಲೀಸಾಗಿ ಮಾಯವಾಗಿ ಬಿಡುತ್ತವೆ.ಮತ್ತೊಂದು ವರ್ಷ ಚರಿತ್ರೆ ಸೇರಿಕೊಂಡಿತು. ಹೊಸ ವರ್ಷವನ್ನು ಸ್ವಾಗತಿಸುವ ಮತ್ತು ಸಿಗರೇಟ್ ಬಿಡುತ್ತೇನೆ, ವಾಕ್ ಮಾಡುತ್ತೇನೆ ಎನ್ನುವ ನಿರ್ಣಯಗಳ ಮಧ್ಯೆ ಸ್ವಲ್ಪ ಬಿಡುವು ಮಾಡಿಕೊಂಡು ಸಂದು ಹೋದ ವರ್ಷ ನಮಗೆ ನೀಡಿದ ಹರ್ಷ, ಭರವಸೆ ಮತ್ತು ದುಃಖ ದುಮ್ಮಾನಗಳ ಕುರಿತು ಸ್ವಲ್ಪ ಓದಿ.

ಈ ವರ್ಷ ಸರ್ವಾಧಿಕಾರದ ಉಸಿರು ಗಟ್ಟಿಸುವ ವಾತಾವರಣದಿಂದ ಕೆಲವು ದೇಶಗಳ ಜನರಿಗೆ ಮುಕ್ತಿ ಸಿಕ್ಕಿದರೆ ತಮ್ಮ ಬದುಕಿನಲ್ಲಿ ಅಮೋಘವಾದದ್ದನ್ನು ಸಾಧಿಸಿ ಸಾರ್ಥಕ ಬದುಕು ಸಾಗಿಸಿ ಕಣ್ಮರೆಯಾದ ಚೇತನಗಳು ಹಲವು.

ಉತ್ತರ ಆಫ್ರಿಕಾದ ಪುಟ್ಟ ದೇಶ ಟುನೀಸಿಯಾದಲ್ಲಿ ಅರಬ್ ಕ್ರಾಂತಿ. “ಅರಬ್ ವಸಂತ” ಎಂದು ಬಣ್ಣಿಸಲ್ಪಟ್ಟ ಈ ಕ್ರಾಂತಿ ೨೩ ವರ್ಷಗಳ ಕಾಲ ಸುದೀರ್ಘ ಆಡಳಿತ ನಡೆಸಿದ ಜೈನುಲ್ ಆಬಿದೀನ್ ರ ಕುರ್ಚಿ ಪಲ್ಲಟ ಮಾಡಿತು. ಸರ್ಕಾರದ ಭ್ರಷ್ಟಾಚಾರ ಮುಗಿಲು ಮುಟ್ಟಿ ಜನಸಾಮಾನ್ಯರನ್ನು ಬಾಧಿಸಿತು. ಲಂಚಗುಳಿತನದಿಂದ ಬೇಸತ್ತ ನಿರೋದ್ಯೋಗಿ ಯುವಕ “ಮುಹಮ್ಮದ್ ಬೂ ಅಜೀಜಿ” ಆತ್ಮಹತ್ಯೆ ಮಾಡಿಕೊಂಡಾಗ ಬಂತು ಸರಕಾರಕ್ಕೆ ಸಂಚಕಾರ. ಜನ ಸಿಡಿದೆದ್ದರು, ಪ್ರದರ್ಶನಗಳು ನಡೆದವು. ಅಲ್ಲಿನ ಅಧ್ಯಕ್ಷನ ಯಾವ ಸಾಂತ್ವನದ ಮಾತುಗಳೂ ಜನರ ಆಕ್ರೋಶ ತಣಿಸಲು ವಿಫಲವಾದವು. ದಾರಿಗಾಣದೆ ಆಬಿದೀನ್ ದೇಶ ಬಿಟ್ಟು ಓಡಿದ. ಟುನೀಸಿಯಾ ಸರಕಾರ ಪತನವಾಗುತ್ತಿದಂತೆಯೇ ಈಜಿಪ್ಟ್, ಲಿಬಿಯಾ, ಸಿರಿಯಾ, ಯೆಮೆನ್, ಬಹರೇನ್, ದೇಶಗಳಿಗೂ ಕಾಲಿಟ್ಟಿತು ಅರಬ್ ವಸಂತ. ಮೂರು ದಶಕಗಳ ಕಾಲ ಈಜಿಪ್ಟ್ ದೇಶವನ್ನು ಆಳಿದ ಮುಬಾರಕ್ ಕೊನೆಗೂ ಅಧಿಕಾರ ತ್ಯಜಿಸಿದ. ರಕ್ತದ ಕೊನೇ ತೊಟ್ಟಿನ ವರೆಗೂ ಹೋರಾಡುವೆ ಎಂದ ಬಲಿಷ್ಠ ಮುಅಮ್ಮರ್  ಗದ್ದಾಫಿ ಕ್ರಾಂತಿಕಾರಿಗಳ ಕೈಗೆ ಸಿಕ್ಕಿ ಬಿದ್ದು ಹತನಾದ. ಲಿಬ್ಯಾ ವಸಂತದ ಸಂಭ್ರಮದ ಕುಣಿತ ಕಂಡಿತು. ಅರಬರಿಗೆ ಸ್ವಾತಂತ್ರ್ಯ ಎಂದರೇನು ಎಂದು ಗೊತ್ತಿಲ್ಲ ಎಂದು ಮೂಗು ಮುರಿಯುತ್ತಿದ್ದ ವಿಶ್ವ ಅರಬರ ಸ್ವಾತಂತ್ರ್ಯಕ್ಕಾಗಿನ ತುಡಿತ ನೋಡಿ ಮೂಗಿನ ಮೇಲೆ ಬೆರಳಿಟ್ಟು ಕೊಂಡಿತು.

ಅರಬ್ ದೇಶಗಳ ಈ ರಾಜಕೀಯ ವಿದ್ಯಮಾನಗಳಿಗೆ ಒತ್ತು ಕೊಟ್ಟ, ಕುಮ್ಮಕ್ಕು ನೀಡಿದ ಸಾಮಾಜಿಕ ತಾಣಗಳಾದ ಫೇಸ್ ಬುಕ್, ಟ್ವಿಟ್ಟರ್, ಯೂ ಟ್ಯೂಬ್ ಗಳು ರಾರಾಜಿಸಿದವು. ಸಾಮಾನ್ಯವಾಗಿ ತಂತ್ರಜ್ಞಾನ ಉಳ್ಳವರ ಸೊತ್ತು. ಆದರೆ ಸಾಮಾಜಿಕ ತಾಣಗಳು ಈ ಅಸಮಾನತೆಯನ್ನು ಅಮೋಘವಾಗಿ ಹೋಗಲಾಡಿಸಿದವು.  ಕಂಪ್ಯೂಟರ್ ತಂತ್ರಜ್ಞಾನ ಜನರನ್ನು ದಾಸ್ಯದ ಸಂಕೋಲೆಯಿಂದ ಹೊರಬರಲು ದೊಡ್ಡ ರೀತಿಯಲ್ಲಿ ಸಹಾಯ ಮಾಡಿತು.  

ಎರಡನೇ ವಿಶ್ವ ಯುದ್ಧದಲ್ಲಿ ಅಮೆರಿಕೆಯ ಕೆಂಗಣ್ಣಿಗೆ ಸಿಕ್ಕು ನುಚ್ಚು ನೂರಾದ ಜಪಾನ್ ಪ್ರಕೃತಿಯ ವಿಕೋಪಕ್ಕೆ ತುತ್ತಾಯಿತು ಮಾರ್ಚ್ ೨೦೧೧ ರಲ್ಲಿ. ತ್ಸುನಾಮಿ ಅಲೆಗಳು ಜಪಾನ್ ದ್ವೀಪವನ್ನು ನಿರ್ದಯವಾಗಿ ಗುಡಿಸಿ ಹಾಕಿತು. ೧೬,೦೦೦ ಕ್ಕೂ ಮಿಕ್ಕು ಜನ ಸತ್ತರು. ನಿಸರ್ಗ ತಮ್ಮ ಮೇಲೆ ಈ ರೀತಿ ಎರಗಿ ಬಂದರೂ ಧೃತಿಗೆಡದೆ, ದುರಾದೃಷ್ಟವನ್ನು ಶಪಿಸದೆ, ಜಪಾನೀಯರು ತಾಳ್ಮೆಯಿಂದ ಅಳಿದುಳಿದುದನ್ನು ಹೆಕ್ಕಿ ತಮ್ಮ ಬದುಕಿನ ಮರುನಿರ್ಮಾಣದ ಕಡೆ ಗಮನ ನೆಟ್ಟರು.   

ಮುಪ್ಪಿನೊಂದಿಗೆ ಶೃಂಗಾರ ಚಟುವಟಿಗಳು ಸಾಮಾನ್ಯವಾಗಿ ಕೊನೆಯಾಗುತ್ತವೆ ಅಥವಾ ಹಂಪ್ ಗಳನ್ನು ದಾಟುವ ವಾಹನಗಳಂತೆ ನಿಧಾನವಾಗುತ್ತವೆ. ಆದರೆ ಚಿರ ರಸಿಕ ಇಟಲಿಯ ಪ್ರಧಾನಿ ಸಿಲ್ವಿಯೋ ಬೆರ್ಲಸ್ಕೊನಿ ಯ ಹಾರ್ಮೋನುಗಳು ಯುವಜನರನ್ನು ನಾಚಿಸುತ್ತವೆ. ಉರುಳುವ ವರ್ಷಗಳು ಪಂಚಾಂಗಕ್ಕೆ ಮಾತ್ರ ಸೀಮಿತ, ತನ್ನ ಲೈಂಗಿಕ ಚಪಲಕ್ಕಲ್ಲ ಎಂದು ಹದಿ ಹರೆಯದ ಪೋರಿಯರೊಂದಿಗೆ ಸಲ್ಲಾಪ ಆಡಿ ಕಷ್ಟಕ್ಕೆ ಸಿಕ್ಕಿಕೊಂಡ ಪ್ರಧಾನಿ. ಲೈಂಗಿಕ ಹಗರಣಕ್ಕೆ ಬಲಿಯಾಗದೆ ಅಚ್ಚರಿದಾಯಕವಾಗಿ ಬದುಕುಳಿದ ಬೆರ್ಲೋ ಅಧಿಕಾರ ತ್ಯಜಿಸಿದ್ದು ಆರ್ಥಿಕ ಸಮಸ್ಯೆ ಕಾರಣ.

ಏಪ್ರಿಲ್ ತಿಂಗಳ ಮೊದಲ ದಿನ ಮೂರ್ಖರ ದಿನ. ಕೇಂದ್ರ ಸರಕಾರ ಭ್ರಷ್ಟಾಚಾರದ ಮೂಲಕ ಲಂಗು ಲಗಾಮಿಲ್ಲದೆ ದೇಶವನ್ನು ಒಂದು ಮೂರ್ಖರ ಸಂತೆ ರೀತಿ ನಡೆಸಿ ಕೊಳ್ಳಲು ತೊಡಗಿದಾಗ ಸಿಡಿದೆದ್ದರು “ಇಳಿ ಚೇತನ” ಅಣ್ಣಾ ಹಜಾರೆ. ತನ್ನ ಸ್ವ ಪ್ರಯತ್ನದಿಂದ ಮಹಾರಾಷ್ಟ್ರದ ಹಳ್ಳಿಯೊಂದನ್ನು ಅಭಿವೃದ್ಧಿ ಗೊಳಿಸಿದ ಈ ಸ್ವಾತಂತ್ರ್ಯ ಹೋರಾಟಗಾರ ದಿಲ್ಲಿಯಿಂದ ಹಿಡಿದು ಹಳ್ಳಿಯವರೆಗೂ ಆವರಿಸಿಕೊಂಡ ಲಂಚಗುಳಿತನವನ್ನು ಇಲ್ಲವಾಗಿಸಲು ಉಪವಾಸ ಸತ್ಯಾಗ್ರಹ ಶುರು ಮಾಡಿದರು. ಐದು ಸಾವಿರ ಮೈಲು ದೂರದಿಂದ ವ್ಯಾಪಾರಕ್ಕೆ ಎಂದು ಬಂದು ನಮ್ಮನ್ನು ಒದ್ದು, ದಬ್ಬಾಳಿಕೆಯಿಂದ ಆಡಳಿತ ನಡೆಸಿದ ಪರದೇಸೀ ಬ್ರಿಟಿಷರೂ ಉಪವಾಸ ಸತ್ಯಾಗ್ರಹಕ್ಕೆ ಮಣಿದರು. ಆದರೆ ನಮ್ಮ ದೇಸೀ ನಾಯಕರು ಜಪ್ಪಯ್ಯ ಎನ್ನಲಿಲ್ಲ. ಬ್ರಿಟಿಷರಿಗಿದ್ದ ನಾಚಿಕೆ, ಔದಾರ್ಯ ಇವ್ಯಾವುವೂ ನಮ್ಮ ನಾಯಕರಲ್ಲಿ ಕಾಣದಾಯಿತು. ಅಣ್ಣಾರವರ ಆಂದೋಲನವನ್ನು  ಮೊದ ಮೊದಲು ಅವಗಣನೆ ಮಾಡಿ ನಂತರ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು ಎಂದು ಭಯ ಬಿದ್ದು ಲೋಕಪಾಲ್ ಮಸೂದೆಗೆ ಒಪ್ಪುವ ನಾಟಕ ಆಡಿ ಅಣ್ಣಾ ರಿಗೆ ಸೊಗಸಾಗಿ ನಾಮ ಬಳಿದರು. ಅದೂ ಸಾಲದು ಎಂಬಂತೆ ಅಣ್ಣಾ ಜೊತೆ ವೇದಿಕೆಯಲ್ಲಿರುವವರ ಪೂರ್ವಾಪರ ಚರಿತ್ರೆ ತೆಗೆದು ಅಣ್ಣಾ ದೇಶ ಎಣಿಸಿದ ಮುಗ್ಧ ಅಣ್ಣಾ ಅಲ್ಲ, ಆರೆಸ್ಸೆಸ್ ಏಜೆಂಟ್ ಎಂದು ಪ್ರಚಾರ ಮಾಡಿ ಲಂಚದ ವಿರುದ್ಧದ ಅಂದೋಲನದ ದಿಕ್ಕನ್ನೇ ದಿಕ್ಕಾ ಪಾಲು ಮಾಡಿತು ಕೇಂದ್ರ ಸರಕಾರ. ತುನೀಸಿಯಾದ ಬೂ ಅಜೀಜಿ ಯ ಆತ್ಮ ಹತ್ಯೆ ಮತ್ತು ಜನರ ಪ್ರತಿಭಟನೆಗೆ ಅಲ್ಲಿನ ಅಧ್ಯಕ್ಷ ಲಂಚಗುಳಿಯಾದರೂ, ಮರ್ಯಾದಸ್ಥನಂತೆ ತಲೆ ಬಾಗಿ ಹೊರನಡೆದ.  ನಮ್ಮಲ್ಲಿ ಹಾಗಾಗಲಿಲ್ಲ. ನಮ್ಮ ಕೇಂದ್ರ ಸರಕಾರಕ್ಕೆ ತಲೆ ಇದ್ದರಲ್ಲವೇ ಬಾಗುವ ಪ್ರಶ್ನೆ ಏಳೋದು.          

ನಾರ್ವೆ ದೇಶದಲ್ಲಿ ನರಸಂಹಾರ: ನೈಸರ್ಗಿಕ ಸಂಪನ್ಮೂಲಗಳಿಂದ ಶ್ರೀಮಂತವಾದ ಅಇರೋಪ್ಯ ಖಂಡದ “ನಾರ್ವೆ” ಪುಟ್ಟ ದೇಶ. ಇಲ್ಲಿನ ಸಾಲ್ಮನ್ ಜಾತಿಯ ಮೀನು ಜಗತ್ಪ್ರಸಿದ್ಧ. ಸಾಲ್ಮನ್ ಮೀನು ಹೃದಯಕ್ಕೆ ತುಂಬಾ ಒಳ್ಳೆಯದಂತೆ. land of midnight sun ಎಂದೂ ಅರಿಯಲ್ಪಡುವ ಈ ದೇಶದಲ್ಲಿ ವರ್ಷದ ಕೆಲವೊಂದು ತಿಂಗಳು ಸೂರ್ಯ ಮಧ್ಯ ರಾತ್ರಿ ಉದಯಿಸುತ್ತಾನೆ. ೩೨ ವರ್ಷ ಪ್ರಾಯದ ಸುಂದರ ಯುವಕ ‘ಆಂಡರ್ಸ್ ಬೆಹ್ರಿಂಗ್ ಬ್ರೆವಿಕ್’ ಪ್ರಶಾಂತ ನಾರ್ವೆ ದೇಶವನ್ನು ಶೋಕ ಸಾಗರದಲ್ಲಿ ಮುಳುಗಿಸಿದ ತನ್ನ ನಿರ್ದಯೀ ಹಿಂಸೆಯ ಮೂಲಕ. ರಾಜಧಾನಿ ಓಸ್ಲೋ ನಗರದಲ್ಲಿ ಬಾಂಬಿಟ್ಟು ನಗರದ ಸಮೀಪದಲ್ಲೇ ಇದ್ದ ದ್ವೀಪಕ್ಕೆ ಹೋಗಿ ಅಲ್ಲಿ ನೆರೆದಿದ್ದ ನೂರಾರು ಜನರ ಮೇಲೆ ಎರ್ರಾಬಿರ್ರಿ ಗುಂಡು ಹಾರಿಸಿ ೮೦ ಕ್ಕೂ ಹೆಚ್ಚು ಜನರನ್ನು ಕೊಂದ. ಕ್ರೈಸ್ತ ಮೂಲಭೂತವಾದಿಯಾಗಿದ್ದ ಈತನ ಕ್ರೌರ್ಯಕ್ಕೆ ವಿಶ್ವ ಬೆಚ್ಚಿತು, ರಾತ್ರಿ ಉದಯಿಸುತ್ತಿದ್ದ ಸೂರ್ಯ ಹಾಡು ಹಗಲೇ ಅಸ್ತಮಿಸಿದ ಇವನ ಕ್ರೌರ್ಯಕ್ಕೆ ಬೆಚ್ಚಿ.  

ಯಾವುದೇ ಕಾರಣವಿಲ್ಲದೆ ಇರಾಕಿನ ಮೇಲೆ ಧಾಳಿ ಮಾಡಿ, ಆ ದೇಶವನ್ನು ಆಕ್ರಮಿಸಿಕೊಂಡು ಎರಡು ದಶಲಕ್ಷಕ್ಕೂ ಜನರನ್ನು ಕೊಂದ ಅಮೇರಿಕಾ ತನ್ನ ಸೈನ್ಯ ಹಿಂದಕ್ಕೆ ಕರೆಸಿಕೊಳ್ಳಲು ಕೊನೆಗೂ ತೀರ್ಮಾನಿಸಿತು. ಇರಾಕಿನ ಮೇಲಿನ ಯುದ್ಧ ಯಾವ ರೀತಿ ಅಮೇರಿಕಾ, ಇಂಗ್ಲೆಂಡ್ ನಂಥ ಬಲಿಷ್ಠ ದೇಶಗಳು ಜನರ ಕಣ್ಣಿಗೆ ಬೂದಿ ಎರಚಿ ತಮ್ಮ ಸ್ವಾರ್ಥ ಸಾಧಿಸಲು ತಯಾರು ಎನ್ನುವುದಕ್ಕೆ ಇರಾಕ್ ಜ್ವಲಂತ ನಿದರ್ಶನವಾಯಿತು.

ಆಫ್ರಿಕಾ ಖಂಡದ ಸುಡಾನ್ ದೇಶದಿಂದ ದಕ್ಷಿಣ ಸುಡಾನ್ ಎನ್ನುವ ದೇಶ ಪ್ರತ್ಯೇಕಗೊಂಡು ಸ್ವಾತಂತ್ರ್ಯವಾಯಿತು. 

೨೦೧೧ ರ ನೊಬೆಲ್ ಶಾಂತಿ ಪುರಸ್ಕಾರ ಈ ಸಲ ಮೂರು ಮಹಿಳೆಯರು ಹಂಚಿಕೊಂಡರು. ಸ್ವಾತಂತ್ರ್ಯ, ಸೌಹಾರ್ದ, ಮತ್ತು ಲಿಂಗ ಬೇಧ ನಿವಾರಣೆಗೆ ಶ್ರಮಿಸಿದ ಈ ಮಹಿಳೆಯರಲ್ಲಿ ಇಬ್ಬರು ಆಫ್ರಿಕಾ ಖಂಡದ ಲೈಬೀರಿಯ ದೇಶದವರು, ಮತ್ತೊಬ್ಬರು ಅರಬ್ ಪ್ರಾಂತ್ಯದ ಯೆಮೆನ್ ದೇಶದವರು. ಸಾಂಪ್ರದಾಯಿಕ ಅರಬ್ ಮುಸ್ಲಿಂ  ಸಮಾಜದಿಂದ ಬಂದ “ತವಕ್ಕುಲ್ ಕರ್ಮಾನ್” ಯಾವ ತೊಡಕುಗಳಿಗೂ ಅಂಜದೆ ತನ್ನ ದೇಶದ ಸರ್ವಾಧಿಕಾರಿಯನ್ನು ಧೈರ್ಯವಾಗಿ ಎದುರಿಸಿ ಯಶಸ್ವಿಯಾದರು. ಮಹಿಳೆ ಧೈರ್ಯವಾಗಿ ಮುನ್ನುಗ್ಗಿದರೆ ಯಾವ ಮೂಲಭೂತವಾದಿಗಳಾಗಲೀ, ಸಮಾಜದ ಯಾವ ನಿರ್ಬಂಧಗಳೇ ಆಗಲಿ ಲೆಕ್ಕಕ್ಕೆ ಬರದು ಎಂದು ವಿಶ್ವಕ್ಕೆ ಸಾರಿದ ೩೨ ರ ಹರೆಯದ ತವಕ್ಕುಲ್ ನೊಬೆಲ್ ಪ್ರಶಸ್ತಿ ಪಡೆದ ಎರಡನೇ ಮುಸ್ಲಿಂ ಮಹಿಳೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ಇರಾನಿನ ಶಿರೀನ ಇಬಾದಿ ನೊಬೆಲ್ (೨೦೦೩) ವಿಜೇತ ಮತ್ತೊಬ್ಬ ಮಹಿಳೆ.   

ಈ ಸಲದ ಪುರಸ್ಕಾರ ಅರಬ್ ವಿಶ್ವದಲ್ಲಿ ಸ್ವಾತಂತ್ರ್ಯದ ಕಹಳೆ ಮೊಳಗಿಸಿದ ಬ್ಲಾಗಿಗಳಿಗೆ ಸಿಗಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಸ್ವಾತಂತ್ರ್ಯದೊಂದಿಗೆ ಸಮಾನತೆಯ ಕಹಳೆ ಮೊಳಗಿಸಿದ ಧೀರ ಮಹಿಳೆಯರ ಪಾಲಾಯಿತು ನೊಬೆಲ್.  

ಕಾಲನ ಕರೆಗೆ ವಿಧೇಯರಾಗಿ ಓಗೊಟ್ಟು ಕಣ್ಮರೆಯಾದವರು

ವಿವಾದಾಸ್ಪದ ಕಲಾವಿದ ಮಕ್ಬೂಲ್ ಫಿದಾ ಹುಸೇನ್ ನಿಧನ. ಹುಸೇನರ ಕುಂಚಗಳು ತನ್ನ canvas ಗಡಿ ಮೀರಿ ಜನರ ನಂಬಿಕೆಗಳ ಮೇಲೆ ಹರಿದಾಡ ತೊಡಗಿಡಾಗ ಗಡೀ ಪಾರಾಗಬೇಕಾಯಿತು. ಕತಾರ್ ದೇಶದ ಪೌರತ್ವ ಪಡೆದರೂ ಮಾತೃ ಭೂಮಿಗಾಗಿ ಮಿಡಿಯಿತು ಹುಸೇನ್ ಮನ. ಹುಸೇನ್ ಅಂತ್ಯ ಲಂಡನ್ನಿನಲ್ಲಿ. ಹುಸೇನ್ ಮರಣಕ್ಕೆ ಪ್ರಧಾನಿ, ರಾಷ್ಟ್ರಪತಿ ಶೋಕ. ಹುಸೇನ್ ಸಾವು ರಾಷ್ಟ್ರೀಯ ನಷ್ಟ ಎಂದು ಪ್ರಧಾನಿ ಹೇಳಿದರೆ, ರಾಷ್ಟ್ರಪತಿ ಗಳು ಹೇಳಿದ್ದು ಹುಸೇನ್ ಇಲ್ಲದ ಕಲೆ ಶೂನ್ಯ ಎಂದು.

ವಿಶ್ವದ ಕುಖ್ಯಾತ ಭಯೋತ್ಪಾದಕ ಬಿನ್ ಲಾದೆನ್. ಅಮೆರಿಕೆಯ to do list ನಲ್ಲಿ ಆಗ್ರ ಪಂಕ್ತಿಯಲ್ಲಿದ್ದ ಲಾದೆನ್ ನ ಅವಸಾನ ಕೊನೆಗೂ ಕೈಗೂಡಿತು. ಪಾಕ್ ರಾಜಧಾನಿಯ ಸಮೀಪದ ಅಬೋಟ್ಟಾ ಬಾದ್ ನಲ್ಲಿ ಅಡಗಿ ಕೂತಿದ್ದ ಬಿನ್ ಲಾದೆನ್ ನನ್ನು ಅಮೆರಿಕೆಯ ಅತಿ ಪ್ರತಿಷ್ಠಿತ ಕಮಾಂಡೋ ಪಡೆ “ಸೀಲ್” ಬೇಟೆಯಾಡಿ ಅಮೇರಿಕಾ ನಿರಾಳ ಭಾವ ಅನುಭವಿಸುವಂತೆ ಮಾಡಿತು. ಬಿನ್ ಲಾದೆನ್ ಸಾವಿನ ಸುದ್ದಿ ವಿಶ್ವ ಪುರಾವೆ ಬಯಸಿದಾಗ ಅಮೇರಿಕಾ ಹೇಳಿದ್ದು, ಪ್ರದರ್ಶಿಸಲು ಪಾರಿತೋಷಕ ಅಲ್ಲ ನಮಗೆ ಸಿಕ್ಕಿದ್ದು, ನಾವು ಹೇಳಿದ್ದನ್ನು ನಂಬಿ ಎಂದು. ಸಾವಿರಾರು ಜನರ ಭವಿಷ್ಯವನ್ನು ಭೂ ಸಮಾಧಿ ಮಾಡಿದ್ದ ಬಿನ್ ಲಾದೆನ್ ಗೆ ಸತ್ತಾಗ ಸಿಕ್ಕಿದ್ದು ಜಲಸಮಾಧಿ.  

ಕಂಪ್ಯೂಟರ್ ಎಂದರೆ ಆಕರ್ಷಣೆ ಇಲ್ಲದ ಒಂದು bland ಉಪಕರಣ ಅಲ್ಲ, ಅದು ಒಂದು ಮೋಜನ್ನು, ನೀಡುವ ಆಕರ್ಷಕ ಉಪಕರಣ ಎಂದು ಜಗತ್ತಿಗೆ ತೋರಿಸಿದ “ಆಪಲ್” ನ ಒಡೆಯ ಸ್ಟೀವ್ ಜಾಬ್ಸ್  ಯಕೃತ್ತಿನ ಕ್ಯಾನ್ಸರ್ ಗೆ ಬಲಿಯಾದ. ತಂತ್ರಜ್ಞಾನ ಬಡವಾಯಿತು ಎಂದು ಶೋಕಿಸಿದರು ಟೆಕ್ಕಿಗಳು.

ಭಾರತೀಯ ಕ್ರಿಕೆಟ್ ನ ಗತಕಾಲದ ಹೀರೋ ಮನ್ಸೂರ್ ಅಲಿ ಖಾನ್ ಪಟೌಡಿ ನಿಧನದಿಂದ ಕ್ರಿಕೆಟ್ ಆಟ ತನ್ನ ಹೊಳಪನ್ನು ಕಳೆದು ಕೊಂಡಿತು. ಟೈಗರ್ ಎಂದು ಕರೆಯಲ್ಪಡುತ್ತಿದ್ದ ಈ ಸ್ಫುರದ್ರೂಪಿ “ಪಟೌಡಿ” ಪ್ರಾಂತ್ಯದ “ನವಾಬ್’ ಭಾರತದ ಯಶಸ್ವೀ ನಾಯಕರಲ್ಲೊಬ್ಬರು. ಅಂದಿನ ಪ್ರಸಿದ್ಧ ನಟಿ ಶರ್ಮಿಳಾ ಟಾಗೋರ್ ರನ್ನು ವರಿಸಿದ ಪಟೌಡಿ ಕ್ರಿಕೆಟ್ ಆಟಕ್ಕೆ ಗ್ಲಾಮರ್ ತಂದು ಕೊಟ್ಟವರು. ಪಟೌಡಿ ನಿಧನರಾದಾಗ ವಯಸ್ಸು ೭೦.

ಭೀಂ ಸೇನ್ ಜೋಶಿ, ಭಜನ್ ಲಾಲ್, ಭೂಪೇನ್ ಹಜಾರಿಕಾ, ಅಂಬಿಕಾ ಚೌಧುರಿ, ಚಿತ್ರನಟ ದೇವ್ ಆನಂದ್, ಶಮ್ಮಿ ಕಪೂರ್, ಸತ್ಯಸಾಯಿ ಬಾಬ, ಅರ್ಜುನ್ ಸಿಂಗ್ ಇತರೆ ಗಣ್ಯರು ಅಗಲಿದವರು.  

ನಮ್ಮ ರಾಜ್ಯದ ವರ್ಣರಂಜಿತ ವ್ಯಕ್ತಿತ್ವ ಕಣ್ಮರೆ. ಎಸ್, ಬಂಗಾರಪ್ಪ ಮಂತ್ರಿಗಳಾಗಿ, ಮುಖ್ಯಮಂತ್ರಿಗಳಾಗಿ, ಸಂಸದರಾಗಿ ರಾಜಕೀಯ ಕ್ಷೇತ್ರದಲ್ಲಿ ದುಡಿದವರು. ಒಂದು ಕಾಲದಲ್ಲಿ ನಾನು ಅವರ ಅಭಿಮಾನಿ. ಪಕ್ಷದಿಂದ ಪಕ್ಷಕ್ಕೆ ಜಿಗಿದು ಅಭಿಮಾನಿಗಳಿಗೆ ಇರುಸು ಮುರುಸು ಕಸಿವಿಸಿ ತರುತ್ತಿದ್ದ ಬಂಗಾರಪ್ಪ ಟೆನ್ನಿಸ್ ಮತ್ತು ಯೋಗ ಪ್ರೇಮಿ. ತಂದೆಯ ಹೆಸರು ಎಷ್ಟಿ ಆಕರ್ಷಕ, ಜನಪ್ರಿಯ  ಎಂದರೆ ಅವರ ಮಗನಿಗೆ ಸ್ವಂತದ ಹೆಸರಿನ ಅವಶ್ಯಕತೆಯೇ ಬರಲಿಲ್ಲ. ಕುಮಾರ್ ಬಂಗಾರಪ್ಪ ಎಂದು ಪ್ರಸಿದ್ಧನಾದ. 

ಸಮಸ್ತ ಕನ್ನಡಿಗರಿಗೂ, ಭಾರತೀಯರಿಗೂ ಬರಲಿರುವ ಹೊಸ ವರುಷ ಉಲ್ಲಾಸ, ಹರ್ಷ, ಯಶಸ್ಸನ್ನು ತರಲಿ ಎಂದು ಹಾರೈಸುತ್ತಾ…….

ನಿಮ್ಮ ಅಬ್ದುಲ್

ಎಲ್ಲದಕ್ಕೂ ಧೋನಿಯೇ ಕಾರಣ

ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟಿನಲ್ಲಿ ಭಾರತ ಮತ್ತೊಮ್ಮೆ ಸೋತಿತು. ಮೊದಲ ಟೆಸ್ಟಿನ ಪಂಗ ನಾಮದ ನಂತರ ಒಂದು ಒಳ್ಳೆಯ ಪ್ರದರ್ಶನ ನೀಡಿ ತಿರುಗೇಟು ನೀಡಬಹುದು ಎಂದು ಕಾತುರದಿಂದ ನಿರೀಕ್ಷಿಸಿದ್ದ ನಮಗೆ ದಕ್ಕಿದ್ದು ಮತ್ತೊಂದು ಲಾತಾ. ಮೊದಲ ಇನ್ನಿಂಗ್ಸ್ ನಲ್ಲಿ ಮುನ್ನಡೆ ಸಾಧಿಸಿದ್ದು ಬಿಟ್ಟರೆ ಪಂದ್ಯದ ಉಳಿದೆಲ್ಲಾ ಸೆಷನ್ಸ್ ಗಳಲ್ಲೂ ಮಿಂಚಿದ್ದು ಬಿಳಿಯರೇ. ಇಂಗ್ಲೆಂಡ್ ತಂಡ ಒಂದು ಪರಿಪೂರ್ಣ ತಂಡವಾಗಿ, ಪರಿಪಕ್ವತೆ ಯಿಂದ ಕ್ರಿಕೆಟ್ ಆಡುತ್ತಿದೆ ಎಂದರೆ ಯಾರೂ ಅಲ್ಲಗಳೆಯಲಾರರು. ಸರಿ ಸೋತಿದ್ದು ಒಂದು ಒಳ್ಳೆಯ ತಂಡದೆದುರು. ಅದರಲ್ಲೇನು ಅವಮಾನ? ಮುಜುಗುರ? ಹಾಗಂತ ನಾನೂ, ನೀವೂ ಹೇಳಬಹುದು,TRP ಸಲುವಾಗೇ ಬದುಕುವ, TRP ಏರಲು ಯಾವ ಪಾತಾಳಕ್ಕೂ ಇಳಿಯಲು ಹೇಸದ ಮಾಧ್ಯಮಕ್ಕೆ ಆಟದ ಗಮ್ಮತ್ತು, ಅದರ ಕೌಶಲ್ಯ, ವೃತ್ತಿ ಪರಿಣತೆ ಎಲ್ಲಾ ಅರ್ಥವಾಗಲು ಸಾಧ್ಯವೇ? ಸೋತು ತಂಡ ಪೆವಿಲಿಯನ್ ಸೇರಿಕೊಳ್ಳುವ ಮುನ್ನವೇ ಶುರುವಾಯಿತು ಧೋನಿಯ ಮತ್ತು ತಂಡದ ಅಂತ್ಯ ಸಂಸ್ಕಾರ. ಸತ್ತ ಹೆಣದ ಮುಂದೆ ಲಬೋ ಲಬೋ ಎಂದು ಎದೆ ಬಡಿದು ಕೊಳ್ಳುವ ರೀತಿಯಲ್ಲಿ ಆಡಿದವು ಮಾಧ್ಯಮಗಳು. ಸ್ಟಾರ್ ಟೀವಿ ಕತೆ ಹೇಳಬೇಕಿಲ್ಲ. ‘ಧೋನಿ ಕಾರಣ ಈ ಸೋಲಿಗೆ’, ‘ಧೋನಿ ನಾಯಕತ್ವದಲ್ಲಿ ಸೋಲು’, ‘ಧೋನಿ ನಾಯಕತ್ವದಲ್ಲಿ ಮೊಟ್ಟ ಮೊದಲ, ಅತಿದೊಡ್ಡ ಸೋಲು’, ಧೋನಿ… ಧೋನಿ… ಧೋನಿ… ಎಂದು ಅರಚಲು ಶುರು ಮಾಡಿತು. ಯಾಕೆ ತಂಡದಲ್ಲಿ ಒಂದೇ ಧೋನಿಯೇ ಇರೋದು? ಇನ್ನೂ ದೊಡ್ಡ ದೊಡ್ಡ ‘ದೋಣಿ’ ಗಳಿದ್ದವಲ್ಲ? ಅವಕ್ಕೆಲ್ಲಾ ಏನಾಗಿ ಬಿಟ್ಟಿತು? ಹನ್ನೊಂದು ದೋಣಿ ಗಳಲ್ಲಿ ಒಂದು ಕೆಟ್ಟಿತು, ಬಾಕಿ ಹತ್ತು?

ಇಂಗ್ಲೆಂಡ್ ನ ಬೌಲಿಂಗ್ ಪ್ರಾವೀಣ್ಯತೆ ನೋಡಿದವರಿಗೆ ಅರ್ಥವಾಗುತ್ತೆ. ಬಾಕಿ ಉಳಿದ ಎರಡು ಟೆಸ್ಟ್ ಗಳಲ್ಲಿ ಸೋಲದೆ ಡ್ರಾ ಮಾಡಿ ಕೊಂಡು ಬಂದರೂ ಅದು ದೊಡ್ಡ ಸಾಹಸವೇ ನಮ್ಮ ಪಾಲಿಗೆ. ಅಷ್ಟು ಚೊಕ್ಕ ಬೌಲಿಂಗ್ ಪ್ರದರ್ಶನ. ಇಂಗ್ಲೆಂಡ್ ಎಸೆದ ಶಾರ್ಟ್ ಪಿಚ್ ಬಾಲ್ ಗಳನ್ನು ನಾವು ಆಡಿದ ರೀತಿ ನೋಡಿದವರಿಗೆ ತಿಳಿಯುತ್ತೆ ನಮ್ಮ ತಯಾರಿ ಬಗ್ಗೆ, ನಮ್ಮ ಟೆಕ್ನಿಕ್ ಬಗ್ಗೆ. ಎರಡನೇ ಇನ್ನಿಂಗ್ಸ್ ನಲ್ಲಿ ಶಾರ್ಟ್ ಪಿಚ್ ಬಾಲ್ ಒಂದನ್ನು ಆಡಲು ಹೋಗಿ ಎಲ್ಲಿಗೋ ಬ್ಯಾಟ್ ಬೀಸಿದ ಯುವರಾಜ್ ಸಿಂಗ್, ತಾನು ಹೊಡೆದ ಬಾಲ್ ಎಲ್ಲಿಗೋ ಹೋಗಿ ಫೀಲ್ಡರ್ ಕೈ ಸೇರಿದ್ದು ಬೆಪ್ಪನಂತೆ ನೋಡಿದ ದೃಶ್ಯ ಅವಿಸ್ಮರಣೀಯ. ಔಟ್ ಆಗಿ ಆತ ಕ್ರೀಸ್ ಬಿಟ್ಟು ಹೋಗುವಾಗ ಮಾಡಿದ ಮುಸುಡಿಯ ದೃಶ್ಯ (ತರಡು ಬೀಜ ಕಳಕೊಂಡಾಗ ಆಗುವ ರೀತಿ) ಬಹಳ ಕಾಲ ನಮ್ಮ ಮನದಲ್ಲಿ ನಿಲ್ಲುತ್ತದೆ.           

ವೆಸ್ಟ್ ಇಂಡೀಸ್ ಪದ್ಯವೊಂದರಲ್ಲಿ ಗೆದ್ದ ನಂತರ ಅಂಪೈರಿಂಗ್ ಚೆನ್ನಾಗಿದ್ದಿದ್ದರೆ ಇನ್ನೂ ಬೇಗೆ ಗೆದ್ದು ಪೆವಿಲಿಯನ್ ಗೆ ತೆರಳಿ ವಿಶ್ರಮಿಸಬಹುದಿತ್ತು ಎಂದು ಕೊರಗಿದ್ದ ಧೋನಿಗೆ ಎರಡನೇ ಟೆಸ್ಟನ್ನು ಕೇವಲ ಮೂರೂವರೆ ದಿನಗಳಲ್ಲಿ ಮುಗಿಸಿ ಸುದೀರ್ಘ ವಿಶ್ರಮ ಇಂಗ್ಲೆಂಡ್ ಕೊಟ್ಟಿದ್ದು ಈ ಪಂದ್ಯದ ವೈಶಿಷ್ಟ್ಯ. ಈ ವಿಶ್ರಮ ಧೋನಿ ಪಾಲಿಗೆ ಸ್ವಯಂ ನಿವೃತ್ತಿ ತೆರನಾದ ವಿಶ್ರಾಮವಾಗದಿರಲಿ ಎಂದು ಹಾರೈಸುತ್ತಾ..

ಸೊಕ್ಕಿದ ಪ್ರವಾಸಿ

ಭಾರತ ಇಂಗ್ಲೆಂಡ್ ಪ್ರವಾಸದಲ್ಲಿದೆ. ನಾಲ್ಕು ಟೆಸ್ಟ್ ಮತ್ತು ಇತರೆ ಪಂದ್ಯಗಳಲ್ಲಿ ಭಾಗವಹಿಸಲು ಬಂದ ಭಾರತ ಬರುತ್ತಲೇ ವಿವಾದದ ಕಂಬಳಿಯ ಮೇಲೆ ಕಾಲಿಟ್ಟಿತು. ಹೊಸ ತಂತ್ರಜ್ಞಾನವನ್ನು ಅಳವಡಿಸಿ ಕೊಳ್ಳಲು ಒಲ್ಲದ ಸೊಕ್ಕಿದ ಪ್ರವಾಸಿಗರು ಎಂದು ಇಂಗ್ಲೆಂಡ್ ನ ಪತ್ರಿಕೆಯೊಂದು ನಮ್ಮನ್ನು ಜರೆಯಿತು. ಅತಿಥಿಗಳನ್ನು ಆದರಿಸುವ ಪರಿ ಇದು. ಹೊಸ ತಂತ್ರ ಜ್ಞಾನ ( lbw verdicts under the Decision Review System ) ವನ್ನು ನಾವು ತಿರಸ್ಕರಿಸಿದ್ದಿದ್ದರೆ ಅದಕ್ಕೆ ಉತ್ತರಿಸ ಬೇಕಾದ ರೀತಿ ಇದಲ್ಲ.

ಹೌದು ಕ್ರಿಕೆಟ್ ಇಂಗ್ಲೆಂಡಿನ ಹುಲ್ಲುಗಾವಲಿನಲ್ಲಿ ಕುರಿ ಮೇಯಿಸುತ್ತಿದ್ದ ಕುರುಬರಿಂದ ಬಂದಿರಬಹುದು. ಆದರೆ ಆ ಕ್ರೀಡೆಗೆ ಮಾನ್ಯತೆ, ಜನಪ್ರಿಯತೆ, ರಂಗು, ಸ್ಪರ್ದೆ ಎಲ್ಲವನ್ನೂ ಒದಗಿಸಿದ್ದು ಏಷ್ಯಾದ ತಂಡಗಳು. ಕ್ರಿಕೆಟ್ ಇಂದು ವಿಶ್ವ ಮಾನ್ಯ ಕ್ರೀಡೆಯಾಗಿ ಕಂಗೊಳಿಸಿದರೆ ಅದರ ಕೀರ್ತಿಗೆ ಭಾರತ, ಶ್ರೀಲಂಕಾ, ಪಾಕಿಸ್ತಾನ ಭಾಜನರು. ಅದರಲ್ಲೂ ಭಾರತೀಯರ ಅಭೂತಪೂರ್ವ ಬೆಂಬಲ ಇಂದು ಕ್ರಿಕೆಟ್ ಶ್ರೀಮಂತ ಕ್ರೀಡೆಯಾಗಿ ಹೊರ ಹೊಮ್ಮಲು ಕಾರಣ. ಭಾರತ ವಿಶ್ವದ ನಂಬರ್ ವನ್ ಕ್ರಿಕೆಟ್ ರಾಷ್ಟ್ರವಾಗದೆ ಬರೀ ಒಂದು “ಆಮ್ಲೆಟ್” ಆಗಿದ್ದಿದ್ದರೆ ಸರಿಯಾಗಿ ಬೆಂದಿಲ್ಲ ಎಂದು ಅಡುಗೆ ಕೋಣೆಗೆ ಕಳಿಸಬಹುದಿತ್ತು. ಈ ಮಾತಿನ ಧಾಟಿ ನೋಡಿ. ನಮ್ಮ ನಡತೆ ಸರಿಯಿಲ್ಲ ಎಂದು ಅವರ ಭಾವನೆ. ಭಾರತದ ನಿರ್ಧಾರದ ವಿರುದ್ಧ ICC ಮೊರೆ ಹೋಗೋ ಬದಲು ಮಾಧ್ಯಮದ ಮೊರೆ ಏಕೆ ಹೋದರೋ ಅವರಿಗೇ ಗೊತ್ತು. ಈ ಸರಣಿಯಲ್ಲಿ ಯಾರ ಕಾನೂನಿಗೆ ಮಾನ್ಯತೆ ಎಂದು ಎಂಬುದನ್ನು ಭಾರತ ತೋರಿಸಿ ಕೊಟ್ಟಿತು ತನ್ನ ರೂಪಾಯಿಯ ಶಕ್ತಿ (“rupee-pile of influence” ) ಮೂಲಕ ಎಂದು ದೂರಿತು ಪತ್ರಿಕೆ.

ವೆಸ್ಟ್ ಇಂಡೀಸ್ ನಲ್ಲಿ ಭಾರತದ ನಾಯಕ ಹೇಳಿದ ಮಾತನ್ನೂ ಈ ಲೇಖನದಲ್ಲಿ ಉದ್ಧರಿಸಲಾಯಿತು; ಆತ್ಮ ಸಾಕ್ಷಿಯಿಲ್ಲದೆ ಬಿಳಿ ಕೋಟ್ (ಅಂಪೈರ್) ಧರಿಸಿದವರ ಮೇಲೆ ಒತ್ತಡ ಹೇರಲಾಯಿತಂತೆ.

“ಆಧುನಿಕ ತಂತ್ರಜ್ಞಾನ ಉಪಯೋಗಿಸಲು ಒಪ್ಪದಿರುವುದು ಪ್ರವಾಸಿಗಳು ಮಾಡಿದ ವಿಧ್ವಂಸಕ ಕೃತ್ಯ” ಎನ್ನುವ ಶೀರ್ಷಿಕೆಯಡಿ ಬಂದ ಉದ್ದನಾದ ಲೇಖನ ಟೀಕೆ ಮಾಡಬೇಕೆಂದೇ ಬರೆದಿದ್ದು. ಕ್ರೀಡೆಯಲ್ಲೇ ಆಗಲೀ, ಸಂಸ್ಕಾರದಲ್ಲೇ ಆಗಲೀ, ವಾಣಿಜ್ಯವಹಿವಾಹಿಟಿನಲ್ಲೇ ಆಗಲೀ ಭಾರತದ ಉನ್ನತಿ ವಿದೇಶೀಯರಿಗೆ ಜೀರ್ಣಿಸಿಕೊಳ್ಳಲಾಗದ ಬೆಳವಣಿಗೆ. ಹೀಗೆ ಅಜೀರ್ಣದಿಂದ ನರಳುವಾಗ ದೇಶವೊಂದು “ಮೊಟ್ಟೆ ದೋಸೆ” ( ಆಮ್ಲೆಟ್ ) ಆಗಿ ಕಾಣುತ್ತದೆ. ಪ್ರವಾಸಿಗಳು ಸೊಕ್ಕಿದವರಂತೆ ಕಾಣುತ್ತಾರೆ.

http://www.independent.co.uk/sport/cricket/james-lawton-arrogant-tourists-refusal-to-embrace-technology-was-nothing-short-of-sabotage-2318950.html

ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ

ಭಾರತ ವಿಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯ ಕೆಟ್ಟ ಅಂಪೈರಿಂಗ್ ಕಾರಣ ತಡವಾಗಿ ಮುಗಿಯಿತು. ಇಲ್ಲದಿದ್ದರೆ ಸ್ವಲ್ಪ ಬೇಗನೆ ಪಂದ್ಯ  ಗೆದ್ದು ವಿಶ್ರಾಂತಿ ಪಡೆಯ ಬಹುದಿತ್ತು ಎಂದು ವಿಜಯದ ನಂತರ  ನಮ್ಮ ತಂಡದ ನಾಯಕ ಧೋನಿ ದೂರಿದರು. ಕಾಲ ಹೇಗೆ ಬದಲಾಯಿತು ನೋಡಿ.  

೧೯೮೩ ರಲ್ಲಿ ವೆಸ್ಟ್ ವಿಂಡೀಸ ನ್ನು ಸೋಲಿಸಿ ವಿಶ್ವ ಕಪ್ ಗೆದ್ದ ಭಾರತ ವಿಶ್ವವನ್ನೇ ಬೆರಗು ಗೊಳಿಸಿತ್ತು. ಆಗಿನ ಕಾಲದ ಪಂಡಿತರ ಪ್ರಕಾರ ಬಲಿಷ್ಠ ವಿಂಡೀಸ್ ವಿರುದ್ಧದ ಭಾರತದ ಗೆಲುವು ಒಂದು fluke ಆಗಿತ್ತು. ಆದರೆ ಭಾರತ ಬರೀ ಫೈನಲ್ ನಲ್ಲಿ ಅಲ್ಲ, prelim ರೌಂಡ್ಸ್ ನಲ್ಲೂ ವಿಂಡೀಸನ್ನು ಮಣಿಸಿತ್ತು. ಆದರೂ ಟೀಕಾಕಾರರಿಗೆ ಭಾರತದ ಶಕ್ತಿಯ ಬಗ್ಗೆ ಅನುಮಾನವೇ ಇತ್ತು. ಈ ಅನುಮಾನ ನಿಜವಾಗಿಸಲೆಂಬಂತೆ ವೆಸ್ಟ್ ಇಂಡೀಸ್ ಭಾರತ ಪ್ರವಾಸ ಆರಂಭಿಸಿತು. ಆರು ಟೆಸ್ಟು, ಐದು ಏಕ ದಿನ ಪಂದ್ಯಗಳ ಸರಣಿಯಲ್ಲಿ  ಭಾರತವನ್ನು ಮೂರು ಟೆಸ್ಟು ಗಳಲ್ಲೂ, ಎಲ್ಲಾ ಏಕ ದಿನ ಪಂದ್ಯಗಳಲ್ಲೂ ಸೋಲಿಸಿ ವಿಶ್ವ ಕಪ್ ಸೋತಿದ್ದು ನಮ್ಮ ತಿಮಿರಿನಿಂದ ಅಲ್ಲದೆ ಭಾರತದ ಕ್ರೀಡಾ ಕೌಶಲ್ಯದಿಂದ ಅಲ್ಲ ಎನ್ನುವುದನ್ನು ವಿಂಡೀಸ್ ವಿಶ್ವಕ್ಕೆ ತೋರಿಸಿ ಕೊಟ್ಟಿತು.  

ಆಗ ಪ್ರವಾಸಗೈದಿದ್ದ ವಿಂಡೀಸ್ ತಂಡದಲ್ಲಿ ಘಟಾನುಘಟಿ ಗಳೇ ತುಂಬಿದ್ದರು. ವಿವಿಯನ್ ರಿಚರ್ಡ್ಸ್, ಕ್ಲೈವ್ ಲಾಯ್ಡ್, ಮಾಲ್ಕಂ ಮಾರ್ಷಲ್ ಹೀಗೆ ಅತಿರಥ ಮಹಾರಥರ ಧಾಳಿಗೆ ನಮ್ಮ ತಂಡ mediocre ತಂಡದಂತೆ ತೋರಿತು. ಮಾಲ್ಕಂ ಮಾರ್ಷಲ್ ಅಂತೂ ತನ್ನ ಮಾರಕ ಅತಿ ವೇಗದ ಬೌಲಿಂಗ್ ಧಾಳಿಯಿಂದ ನಮ್ಮ ಬ್ಯಾಟ್ಸ್ಮನ್ ಗಳಿಗೆ ಸಿಂಹ ಸ್ವಪ್ನವಾಗಿದ್ದ. ಈಗ ನೋಡಿ ಅವರ ಪಾಡನ್ನು. ಯಾವುದೇ ಮೊತ್ತದ ರನ್ನು ಚೇಸ್ ಮಾಡಲೂ ಪಡುವ ಪಾಡನ್ನು.    

ಯಥೇಚ್ಛ ಹಣ, ಮತ್ತು ಹಣದ ಅಭಾವ ಯಾವ ರೀತಿ ಒಂದು ಕ್ರೀಡೆಯನ್ನು ರೂಪಿಸಬಲ್ಲುದು ಮತ್ತು ನಿಸ್ತೇಜವಾಗಿಸಬಹುದು ಎನ್ನುವುದಕ್ಕೆ ಭಾರತ ವಿಂಡೀಸ್ ಕ್ರಿಕೆಟ್ ಕ್ರೀಡೆಯೇ ಸಾಕ್ಷಿ. ಕ್ರಿಕೆಟ್ ನಲ್ಲಿ ಹಣವಿದೆ ಮತ್ತು ಶ್ರೀಮಂತ ಪ್ರಾಯೋಜಕರ ಬೆಂಬಲ ಅದಕ್ಕಿದೆ ಎಂದರಿತ ಪೋಷಕರು ತಮ್ಮ ಮಕ್ಕಳು ಈ ಕ್ರೀಡೆಯನ್ನು ಪ್ರವೇಶಿಸಲು ಉತ್ತೇಜಿಸಿದರು. ಪರಿಣಾಮ ಹೊಸ ಪ್ರತಿಭೆಗಳು ದಂಡು ದಂಡಾಗಿ ಆಗಮಿಸಿದವು. ಈಗ ಭಾರತ ಕ್ರಿಕೆಟ್ ಸುದೃಢ. ಬಲಿಷ್ಠ. ಆದರೆ ಈ ಭಾಗ್ಯದ ಲಕ್ಷ್ಮಿ ವಿಂಡೀಸರಿಗೆ ಒಲಿಯದೆ ಹೋದಳು. ಪ್ರಾಯೋಜಕರ ಕೊರತೆ ಮಾತ್ರವಲ್ಲ ಅಲ್ಲಿನ ಕ್ರಿಕೆಟ್ ಮಂಡಳಿ ಕೊಡುವ ಹಣವೂ ಏನೇನೂ ಸಾಲದಾದಾಗ ಒಂದು ಕಾಲದಲ್ಲಿ fearsome  ಆಗಿದ್ದ ವಿಂಡೀಸ್ ಕ್ರಿಕೆಟ್ ನೆಲ ಕಚ್ಚಿತು.

ವಿಂಡೀಸ್ ತನ್ನ ಗತ ವೈಭವವನ್ನು ಯಾವಾಗ ಮರಳಿ ಪಡೆದೀತೋ ಕಾದು ನೋಡಬೇಕು.    

ನಡೆದಾಡುವ ನೈದಿಲೆ…ಓಡಾಡುವ porn ಮಸಾಲ

cheergirl ಗಳು ನಡೆದಾಡುವ ನೈದಿಲೆ ಅಲ್ಲ, ಓಡಾಡುವ porn ಗಳು. ಈ ಮಾತನ್ನು ಯಾವುದೇ ಸಂಪ್ರದಾಯವಾದಿ ಹೇಳಿದ್ದಲ್ಲ. ಕ್ರಿಕೆಟ್ ಆಟದಲ್ಲಿ ಸಿಕ್ಸರ್ ಗಳು ಸಿಡಿದಾಗ, ವಿಕೆಟ್ ಪತನಗೊಂಡಾಗ ಮಾದಕ ನೃತ್ಯ ಮಾಡಿ ಜನರನ್ನು ಆಟಗಾರರನ್ನು ಹುರಿದುಂಬಿಸಲು ನೇಮಕಗೊಂಡ, ಚಿಯರ್ ಗರ್ಲ್ ವೃತ್ತಿಯನ್ನು ಆರಿಸಿಕೊಂಡ  ಹೆಣ್ಣು ಮಗಳ ಅಳಲು, ದುಮ್ಮಾನ ತುಂಬಿದ ಮಾತುಗಳು. ಕ್ರಿಕೆಟ್ ಮ್ಯಾಚ್ ಹೆಸರಿನಲ್ಲಿ ಜೊಳ್ಳು ಸುರಿಸುತ್ತಾ ಟೀವೀ ಪರದೆ ಮುಂದೆ ಕೂತು ಈ ಹುಡುಗಿಯರ ಹಾವಭಾವವನ್ನು ಆಸ್ವಾದಿಸುವ ನಾವು ಎಂದಾದರೂ ಈ ಹೆಣ್ಣುಮಕ್ಕಳ ಅರೆನಗ್ನ ಶೋಷಣೆಯ ಬಗ್ಗೆ ಆಲೋಚಿಸಿದ್ದೇವೆಯೇ? ಅವರುಗಳ ಹಾವ ಭಾವ, curve ಗಳನ್ನು ನೋಡುತ್ತಾ ಮೈಮರೆಯುವ ಉನ್ಮತ್ತ ಮನಸ್ಸು ಈ ಚಿಂತನೆಗೆ ತನ್ನ ಮೆದುಳನ್ನು ತಯಾರು ಮಾಡೀತೇ?  we are like walking porn ಎಂದು ಹೇಳುವ ಈ ಹುಡುಗಿಯ ಮಾತುಗಳು, ನಮ್ಮಲ್ಲಿ ಪ್ರತಿಭಟಿಸುವ ದನಿಯನ್ನು ಹುಟ್ಟು ಹಾಕೀತೇ?

೨೨ ವರ್ಷದ Gabriella Pasqualotto ಹೇಳುತ್ತಾಳೆ, it’s true. At parties, once people are drunk, they get really touchy-freely and misbehave, assuming that we’re easy girls,”- ಹೇಗಿದೆ ನೋಡಿ ಮೇಲಿನ ಆಕೆಯ ಮಾತುಗಳು. ಇಲ್ಲಿ ಒಂದು ಮಾತನ್ನು ನೆನಪಿಡಬೇಕು. ಯಾವಾಗ ಹೆಣ್ಣು ಕನಿಷ್ಠ ಉಡುಗೆ ತೊಡುತ್ತಾಳೋ, ಪ್ರಚೋದಕ ರೀತಿಯಲ್ಲಿ ಆಕೆಯ ಮೈ ಪ್ರದರ್ಶನ ನಡೆಯುವುದೋ, ಹಾವಭಾವ ಪ್ರದರ್ಶನ ಆಗುವುದೋ ಆದರೆ ತಪ್ಪು ಸನ್ನೆಗೆ ಎಡೆಮಾಡಿಕೊಟ್ಟು ಅವಳನ್ನು ಜನ ಸಾರ್ವಜನಿಕ ಉದ್ಯಾನ ಎಂದು ಭಾವಿಸಲು ಆರಂಭಿಸುತ್ತಾರೆ. easy girl ಎಂದು ಹಿಂಬಾಲಿಸುತ್ತಾರೆ. ಹಾಗಾದರೆ ಉಡುಗೆ ತೊಡುಗೆ ಯ ಶಿಷ್ಟಾಚಾರ ಹೆಣ್ಣಿಗೆ ಮಾತ್ರ ಸೀಮಿತವೋ? ಗಂಡು ಹೇಗೆ ಬೇಕಾದರೂ ಹಾಗೆ ವರ್ತಿಸಬಹುದೋ? ಅಲ್ಲ, ಗಂಡೂ ಸಹ ಮಾನವಾಗಿ ತೊಡಲು ಕಲಿಯಬೇಕು. ಆದರೆ ನಿಸರ್ಗದತ್ತವಾಗಿ ಗಂಡು ಹಚ್ಚು visual ಮತ್ತು ಹೆಣ್ಣು more practical ಆದ ಕಾರಣ ಹೆಣ್ಣು ಸ್ವಲ್ಪ ಜಾಗರೂಕಳಾಗಿರುವುದು ಕ್ಷೇಮ. 

ಹೆಣ್ಣು ಮಾನವಾಗಿ ಉಡಬೇಕು ಎಂದು ಹಿರಿಯರು ಹೇಳುತ್ತಿದ್ದರು. ಸಂಜೆಯ ಹೊತ್ತು ಮನೆಯ ಜಗುಲಿಯ ಮೇಲೋ, ಮೆಟ್ಟಿಲುಗಳ ಮೇಲೋ ಕೂತ ಹೆಣ್ಣು ಮಗಳಿಗೆ ತಾಯಿ ಗದರಿಸುವುದಿದೆ, ಕಾಲಿನ ಮೇಲೆ ಲಂಗ ಎಳೆದು ಕೋ ಎಂದು. ದಾರಿ ಹೋಕರಿಗೆ ತನ್ನ ಮಗಳ ಹಾವ ಭಾವ ಯಾವುದೇ ರೀತಿಯ ಕೆಟ್ಟ ನೋಟ ಕ್ಕೆ ಎಡೆ ಮಾಡಿ ಕೊಡಬಾರದು ಎಂದು ತಾಯಿಯಾದವಳ ಕಾಳಜಿ, ಮುತುವರ್ಜಿ. ಈ ಮುತವರ್ಜಿ ಆ ತಾಯಿಗೆ ತನ್ನ ಸಂಸ್ಕಾರ ಕಲಿಸಿರುತ್ತದೆ.    

ಮುಂದುವರೆಯುತ್ತಾ “ಗೇಬ್ರಿಯೆಲಾ” ಹೀಗೆ ಟ್ವೀಟಿಸುತ್ತಾಳೆ, people treat us like ‘pieces of meat’- ಇಲ್ಲದೆ ಏನಂತೆ, ಹೌದು ಚರ್ಮದ ಪ್ರದರ್ಶನ ಹೆಚ್ಚಾದಾಗ ಮೈ ಮನಸ್ಸು ಮಾಂಸ ದ ತುಂಡಿಗಾಗಿ ಹಾತೊರೆಯುವುದು ಸಹಜವೇ.

To the citizens, we are practically like walking porn!…. it is complete voyeurism… the men see your face, then your boobs, your butt, and then your boobs again..ಭಾಷೆಯ ಮರ್ಯಾದೆಯನ್ನು ಬದಿಗಿಟ್ಟು ಬರೆಯಬೇಕಾದೀತೆನ್ನುವ ಆತಂಕದಿಂದ  ಮೇಲಿನದನ್ನು ಭಾಷಾಂತರಿಸಿಲ್ಲ. ತಲೆಯ ಮೇಲೆ ಮೊಳೆ ಹೊಡೆವ ರೀತಿಯಲ್ಲಿಲ್ಲವೇ ಮೇಲಿನ ಮಾತುಗಳು?

ಚೀರ್ ಗರ್ಲ್ಸ್ ಇಲ್ಲದೆಯೂ ಕ್ರಿಕೆಟ್ ರಂಜಕ, ಮೋಹಕ. ಇವರಿಲ್ಲದೆಯೂ ಕ್ರಿಕೆಟ್ ಆಟವನ್ನು ಆಸ್ವಾದಿಸ ಬಹುದು. ಒಂದೊಮ್ಮೆ ಆಸ್ವಾದಿಸಿಯೂ ಇದ್ದೇವೆ. ಎಷ್ಟೋ ಜನ ಈ ಚಿಯರ್ ಗರ್ಲ್ ಗಳ ಕಾರಣ ಕ್ರಿಕೆಟ್ ಆಟದ ಬಗ್ಗೆ ಆಸಕ್ತಿ ಹುಟ್ಟಿಸಿ ಕೊಂಡಿದ್ದಾರೆಂದೂ ಕೇಳಿದ್ದೇನೆ.  

ಆದರೆ ದಿನಗಳೆದಂತೆ, ಕಾಲ ಚಕ್ರ ಓಡುತ್ತಿರುವಂತೆ ನಮ್ಮ ಅಭಿರುಚಿಗಳೂ ಬದಲಾಗುತ್ತಿವೆ ಒಳ್ಳೆಯದರಿಂದ ಕೆಡುಕಿನ ಕಡೆಗೆ. ಇಂದು ನಮ್ಮ ಹೆಣ್ಣು ಮಕ್ಕಳು ತಮ್ಮ ಫೇಸ್ ಬುಕ್ ಪ್ರೊಫೈಲ್ ನಲ್ಲಿ “ relationship: its complicated” ಎಂದು ಬರೆಯಲು ಹಿಂದೆ ಮುಂದೆ ನೋಡುತ್ತಿಲ್ಲ. ಈಗ ಎಲ್ಲವೂ ‘ಕೂಲ್’.