ನಾವೀಗಲೂ ವಿಶ್ವ ವಿಜಯೀ

we are still world champs. ಭಾರತ ತಂಡದ ನಾಯಕ ಆಸ್ಟ್ರೇಲಿಯಾದವರಿಂದ ಮತ್ತೊಮ್ಮೆ ಇಕ್ಕಿಸಿಕೊಂಡ ನಂತರ ಹೇಳಿದ ಮಾತು. ಅದರ ಅರ್ಥ ಇನ್ನೂ ಮೂರು ನಾಲ್ಕು ವರ್ಷಗಳ ಕಾಲ ಸೋಲಿನ ಮೇಲೆ ಸೋಲನ್ನು ನಾವು ಅನುಭವಿಸಿದರೂ ಪರವಾಗಿಲ್ಲ, ಈಗಲೂ ನಾವು ವಿಶ್ವ ಚಾಂಪಿಯನ್ನರು.

ಗತ ಕಾಲದ ವೈಭವವನ್ನು ಮೆಲುಕು ಹಾಕುತ್ತಾ ವಾಸ್ತವದ ಬಗ್ಗೆ ಅಸಡ್ಡೆ ತೋರಿಸುತ್ತಾ ಸಾಗುವ ಸಮಾಜ ನಮ್ಮನ್ನು ಬಿಟ್ಟರೆ ಬೇರೆಯೂ ಇರಬಹುದೇ, ಅಥವಾ are we unique in this?

ಈಗ ತಾನೇ ಮುಕ್ತಾಯ ಗೊಂಡ ಆಸೀ-ಭಾರತ ನಾಲ್ಕು ಟೆಸ್ಟ್ ಗಳ ಟೆಸ್ಟ್ ಪಂದ್ಯಾವಳಿ ಕ್ರಿಕೆಟ್ ಇತಿಹಾಸದ ಕಡಿಮೆ ಸಮಯದಲ್ಲಿ ಮುಕ್ತಾಯವಾದ ಸರಣಿ ಆಗಿರಬಹುದೇ? ಏಕೆಂದರೆ ಎರಡು ಟೆಸ್ಟ್ ಗಳು ಮೂರೇ ಮೂರು ದಿನಗಳಲ್ಲಿ ಮುಕ್ತಾಯವಾದವು. ಮತ್ತೆರಡು ಟೆಸ್ಟ್ ಗಳು ನಿಗದಿತ ಸಮಯಕ್ಕಿಂತ ಬೇಗ ಮುಕ್ತಾಯವಾಯಿತು.

ಆಘಾತಕಾರೀ ಸುದ್ದಿ: ಪಾಕಿಸ್ತಾನಕ್ಕೆ ಆಘಾತಕಾರೀ ಗೆಲುವು. ಎರಡನೇ ಟೆಸ್ಟ್ ನಲ್ಲಿ ಗೆಲ್ಲಲು ಕೇವಲ ೧೪೫ ರನ್ನುಗಳ ಗುರಿ ಇಟ್ಟುಕೊಂಡಿದ್ದ ಬಲಿಷ್ಠ ಇಂಗ್ಲೆಂಡ್ ತಂಡ ಕೇವಲ ೭೨ ರನ್ನುಗಳನ್ನು ಮಾಡಿ ತನ್ನೆಲ್ಲಾ ವಿಕೆಟು ಗಳನ್ನು ತರಗೆಲೆ ಗಳಂತೆ ಉದುರಿಸಿ ಕೊಂಡಿತು. ಪಾಕಿಸ್ತಾನದ ಹಲವು ಆಟಗಾರರು ಜೈಲಿನಲ್ಲಿದ್ದರೂ, ತಂಡ ಒಗ್ಗಟ್ಟಿನಿಂದ ಆಡುವ ಅನುಮಾನವಿದ್ದರೂ, ಪಾಕ್ ಅಮೋಘ ಯಶಸ್ಸನ್ನು ಸಾಧಿಸಿತು ತನ್ನ ಮಾಜಿ ಒಡೆಯನ ವಿರುದ್ಧ. ಭಯೋತ್ಪಾದಕರ ಬೆದರಿಕೆಗೆ ತನ್ನ ನೆಲದಲ್ಲೇ ಆಡಲು ಯೋಗ್ಯತೆ ಇಲ್ಲದ ತಂಡ ಮೂರನೇ ದೇಶವೊಂದರಲ್ಲಿ, ( ನ್ಯೂಟ್ರಲ್ ಅವೆನ್ಯೂ ) ಆಡಿ ಸಾಧಿಸಿದ್ದನ್ನು ನೋಡಿದರೆ ನಾವೂ ಸಹ ಅದೇ ದಾರಿ ಏಕೆ ತುಳಿಯಬಾರದು. ನಮ್ಮ ನೆಲದಲ್ಲಿ ಆಡಿದರೂ ನಮಗೆ ಸೋಲು, ಅತಿಥೇಯ ದೇಶದಲ್ಲಿ ಆಡಿದರೂ ಸೋಲು. ನಾವೂ ಹುಡುಕೋಣ ನ್ಯೂಟ್ರಲ್ ಅವೆನ್ಯೂ ಒಂದನ್ನು, ಬಾರಿಸೋಣ ಜಯಭೇರಿಯನ್ನು.

Advertisements

ಸುಂದರ ಟಾಸ್ಮೆನಿಯಾ

ಸ್ಫೂರ್ತಿದಾಯಕ ದ್ವೀಪ ಎಂದು ಕರೆಯುತ್ತಾರೆ ಆಸ್ಟ್ರೇಲಿಯಾದ ಟಾಸ್ಮೆನಿಯಾವನ್ನು. ವಿಸ್ತೀರ್ಣದಲ್ಲಿ ಪ್ರಪಂಚದ ಆರನೇ ಅತಿ ದೊಡ್ಡ ರಾಷ್ಟ್ರವಾದ ಆಸ್ಟ್ರೇಲಿಯಾದ ಒಂದು ರಾಜ್ಯವೂ ಹೌದು ಟಾಸ್ಮೆನಿಯಾ. ನಾನು ಸೌದಿ ಅರೇಬಿಯಾದ ಅಲ್-ಖೋಬರ್ ನಗರದಲ್ಲಿದ್ದಾಗ ಬಹಳಷ್ಟು ಬಿಳಿಯರು ನನ್ನ ಗೆಳೆಯರಾಗಿದ್ದರು. ಆಸ್ಟ್ರೇಲಿಯಾ, ಅಮೇರಿಕಾ, ಕೆನಡಾ, ಬ್ರಿಟನ್, ಐರ್ಲೆಂಡ್ ಮೂಲದವರಾದ ಇವರೊಂದಿಗೆ ಹರಟುವುದೇ ಒಂದು ಅನುಭವ. ಆಸ್ಟ್ರೇಲಿಯಾದ ಪ್ರಮುಖ ಭೂ ಭಾಗ (mainland) ದವರು ಟಾಸ್ಮೆನಿಯಾದವರನ್ನು ಅವರ ಭೂಪಟದ ಆಕಾರದ ಬಗ್ಗೆ ಅಶ್ಲೀಲ ವಾಗಿ ಜೋಕ್ ಮಾಡಿ ನಗುತ್ತಾರೆ. ಟಾಸ್ಮೆನಿಯಾದ ಭೂಪಟ ಯೋನಿಯಾಕೃತಿ ಯಾಗಿದ್ದು ನಾವು ಅವರನ್ನು tassie ಗಳು ಎಂದು ತಮಾಷೆ ಮಾಡುತ್ತೇವೆ ಎಂದು ಒಬ್ಬ ಹೇಳಿ ನಕ್ಕಿದ್ದ.

ನನ್ನ ಹಳೇ ಸೇತುವೆ ಬ್ಲಾಗ್ ನ ಬ್ಯಾನರ್ ಚಿತ್ರವನ್ನು ಬದಲಿಸಲು ಎಂದು ನನ್ನ picture folder ತೆರೆದಾಗ ಟಾಸ್ಮೆ ನಿಯಾದ ಸುಂದರವಾದ ಸಮುದ್ರ ತೀರದ ಚಿತ್ರವನ್ನು ಸೇವ್ ಮಾಡಿ ಇಟ್ಟುಕೊಂಡಿದ್ದೆ. ಈ ತೀರವನ್ನು wineglass bay ಎಂದು ಕರೆಯುತ್ತಾರೆ. ಈ ಚಿತ್ರವನ್ನೂ ಹಾಕಿದ್ದೇನೆ ನೋಡಿ.

ಚಂದ್ರ ಮತ್ತಷ್ಟು ಹತ್ತಿರ, ಆಪ್ತ

ಚಂದ್ರ ಮತ್ತಷ್ಟು ಹತ್ತಿರ, ಆಪ್ತ. ೧೯ ವರ್ಷಗಳ ನಂತರ ಇಂದು ಚಂದ್ರ ನಮಗೆ ಹತ್ತಿರ ಬಂದಿದ್ದಾನಂತೆ. ಭೂವಾಸಿಗಳಲ್ಲಿ ಅದ್ಯಾವ ಹೆಗ್ಗಳಿಕೆ ನೋಡಿ ಬಂದನೋ ಇನ್ನಷ್ಟು ಸಮೀಪ ನನಗೆ ತಿಳೀದು, ಆದರೆ ಸೂಪರ್ ಮೂನ್, ಮೆಗಾ ಮೂನ್, ಡಬ್ಬಲ್ ಮೂನ್ ಹಾಗೆ ಹೀಗೆ ಎಂದು ಕೆಲದಿನಗಳಿಂದ ಕೇಳುತ್ತಾ ಇದ್ದುದರಿಂದ ಸಂಜೆಯ ದೂರದ ನೆಂಟನಿಗಾಗಿ ಕಾದು ಕೂತೆ. ಮಧ್ಯಾಹ್ನದ ಉರಿ ಸೂರ್ಯ, ಸಂಜೆಯಾಗುತ್ತಾ ಬೆಳ್ಳಿ ಬಣ್ಣ ಪಡೆದುಕೊಂಡು, ಸ್ವಲ್ಪ ನಂತರ ತನ್ನ ಮೈಯ್ಯನ್ನು ಕಿತ್ತಳೆ ಬಣ್ಣಕ್ಕೆ ಬದಲಿಸಿಕೊಂಡು ತನ್ನ ವಧು ಕೆಂಪು ಸಮುದ್ರದ ತೆಕ್ಕೆಗೆ ಜಾರಿದ ಕೆಲ ಹೊತ್ತಿನಲ್ಲೇ ಕಳ್ಳ ನಗೆ ಬೀರುತ್ತಾ ಬಂದ ನಮ್ಮ ಮಾಮ. ಚಂದಾಮಾಮ. ಅರೆ, ಇದೇನಿದು,  ೧೯ ವರ್ಷಗಳ ನಂತರ ಹತ್ತಿರ ಬಂದ ಈ ಮಾಮ ಥೇಟ್ ಹಿಂದಿನ ಮಾಮನ ಥರವೇ ಇದ್ದ. ಮುಖದಲ್ಲಿ ಸ್ವಲ್ಪ ಹೆಚ್ಚು ಮಾಂಸ ತುಂಬಿಕೊಂಡು ನಳನಳಿಸುತ್ತಾ ಬರಬಹುದು ಎಂದೆಣಿಸಿದ್ದ ನನಗೆ ಕಾಣಲು ಸಿಕ್ಕಿದ್ದು ಅದೇ age old ಮಾಮ. (ಅಂಕಲ್ ಅಂತ ಅವನನ್ನು ಕರೆಯಲು ನನಗೆ ಇಷ್ಟವಿಲ್ಲ. ಬಸ್ ಸ್ಟಾಂಡ್ ನಲ್ಲಿ ಕೈ ಚಾಚಿ ಬೇಡುವವನೂ, ಬಸ್ಸಿನ ಸೀಟಿಗಾಗಿ ಜಗಳ ಕಾಯುವವರೆಲ್ಲಾ ಅಂಕಲ್ ಗಳೇ ಆದ್ದರಿಂದ ನಮ್ಮ ಚಂದಾ ಮಾಮನಿಗೆ ಆಂಗ್ಲ ಪ್ರಯೋಗ ಬೇಡ.). ನನ್ನ ಬರಿಗಣ್ಣಿಗೆ ಇವನು ಅದೇ ಗಾತ್ರದ ಮಾಮ. ಮುಖದ ತುಂಬಾ freckles ಇದ್ದರೂ ತನ್ನ ಕಾಂತಿಯನ್ನು ತನ್ನನ್ನು ಸುತ್ತುವರೆದ ಮೋಡಗಳಿಗೂ ನೀಡುತ್ತಾ aloof ಆಗಿ ಆಗಸಕ್ಕೆ ಅಂಟಿ ಕೊಂಡ ಮಾಮ. ಬಹುಶಃ ಇವನ ನಿಖರವಾದ ಅಳತೆಗೆ ಸ್ಟೆತಾಸ್ಕೋಪು, ಪೆರಿಸ್ಕೋಪು, ಟೆಲಿಸ್ಕೋಪು ಇವ್ಯಾವುದೂ ನನ್ನಲ್ಲಿಲ್ಲದೆ ಇರೋದ್ರಿಂದ ನನಗೆ ಹಳೇ ಮಾಮನ ದರ್ಶನದ ಭಾಗ್ಯ ಮಾತ್ರಾ.  ಸೂಪರ್ ಮೂನ್ ವಿದ್ಯಮಾನದಲ್ಲಿ ಸೂರ್ಯ , ಭೂಮಿ ಮತ್ತು ಚಂದಿರರು ಒಂದೇ ರೇಖೆಯಲ್ಲಿ ಇದ್ದು ಚಂದ್ರ ಮತ್ತು ಭೂಮಿಗಳು ಸ್ವಲ್ಪ ಸಮೀಪಕ್ಕೆ ಬರುತ್ತವಂತೆ. ಸೂಪರ್ ಮೂನ್ ಕಾರಣ, ಪ್ರವಾಹ, ಭೂಕಂಪ, ಜ್ವಾಲಾ ಮುಖಿ, ಬಿರುಗಾಳಿಗಳೂ ಸಂಭವಿಸಬಹುದಂತೆ. ಬ್ರೇಕಿಂಗ್ ನ್ಯೂಸ್ ನಲ್ಲಿ ಇದುವರೆಗೂ ಯಾವುದೇ ಅಹಿತಕರ ನೈಸರ್ಗಿಕ ಅವಘಡ ಸಂಭವಿಸಿಲ್ಲ.

ಒಂದೇ ಒಂದು ಅವಘಡ ಏನೆಂದರೆ ಕಳೆದ ಹಲವು “ವಿಶ್ವಕಪ್ ಪಂದ್ಯಾವಳಿ” ಯ ೩೫ ಪಂದ್ಯಗಳಲ್ಲಿ ಮೊಟ್ಟ ಮೊದಲ ಬಾರಿಗೆ ಆಸ್ಟ್ರೇಲಿಯಾ ಸೋಲನ್ನು ಕಂಡಿದ್ದು ಅದೂ ದುರ್ಬಲ, ಪಾಕ್ ತಂಡದ ಕೈಯ್ಯಲ್ಲಿ.     

ಹೀಗೇ ಸುಮ್ಮನೆ: ಸೂಪರ್ ಮೂನ್ ಎನ್ನುವ ಪದವನ್ನು ಶುರು ಮಾಡಿದ್ದು HOROSCOPE ಪತ್ರಿಕೆಯ ಜ್ಯೋತಿಷ್ಯಕಾರ Richard Nolle.

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ

 

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ದಯಮಾಡಿ ಈ ವ್ಯಕ್ತಿಯನ್ನು ಭೆಟ್ಟಿಯಾಗಿ

ಬದುಕಿನಲ್ಲಿ ಸೋಲು, ಜೀವನದಲ್ಲಿ ಜಿಗುಪ್ಸೆ, ನಿರಾಸೆ, ಮೂಡಿದಾಗ ಬಹಳಷ್ಟು ಜನ ಸಾವಿನ ಮೊರೆ ಹೋಗುತ್ತಾರೆ. ಯಾವ ಧರ್ಮವೂ ಆತ್ಮಹತ್ಯಗೆ ಬೆಂಬಲ ನೀಡದೆ ಇದ್ದರೂ ಬದುಕು ದುಸ್ತರ, ದುರ್ಭರವಾದಾಗ ಯಾವ ಉಪದೇಶವೂ ಕೆಲಸಕ್ಕೆ ಬಾರದು. ಕೆಲವರು ವಿಷ ಸೇವಿಸಿ ಬದುಕಿಗೆ ಬೈ ಹೇಳಿದರೆ ಇನ್ನೂ ಕೆಲವರು ರೈಲು, ಹಗ್ಗ ಹೀಗೆ ವಿವಿಧ ವಿಧಾನಗಳನ್ನು ಅನುಸರಿಸುತ್ತಾರೆ. ಕೆಲವರು ಎತ್ತರದ ಬಂಡೆ ಅಥವಾ ಕಣಿವೆಯ ತುದಿಯ ಮೇಲಿನಿಂದ ಜಿಗಿದು ಪ್ರಾಣ ಕಳೆದು ಕೊಳ್ಳುತ್ತಾರೆ. ಇಂಥ “ಸಾವಿನ  ತಾಣ” ಗಳಲ್ಲಿ ಪ್ರಾಣ ಕಳೆದುಕೊಳ್ಳುವವರ ನಿರೀಕ್ಷೆಯಲ್ಲಿ ಒಬ್ಬ ವ್ಯಕ್ತಿ ಹತ್ತಾರು ವರ್ಷಗಳಿಂದ ದಿನ ಕಳೆಯುತ್ತಾನೆ. ಜನ ಕೆಳಕ್ಕೆ ಜಿಗಿದು ತಲೆ ಒಡೆದುಕೊಂಡು ಚೀರಿಡುತ್ತಾ ಸಾಯುವುದನ್ನು ನೋಡಿ ಆಸ್ವಾದಿಸಲು ಅಲ್ಲ. ಆತನ ಉದ್ದೇಶ ಬೇರೆಯೇ.

೮೪ ವರ್ಷ ಪ್ರಾಯದ ರಿಚೀ ಯಮನಿಗೆ ಪ್ರಿಯವಾದ ತಾಣಗಳಲ್ಲಿ ಕಾಲ ಕಳೆಯುತ್ತಾ ಯಮನ ಗಿರಾಕಿಗಳನ್ನು ತನ್ನೆಡೆ ಎಳೆದುಕೊಂಡು ಜೀವ ಉಳಿಸಿದ್ದು ಇದುವರೆಗೂ ಹೆಚ್ಚೂ ಕಡಿಮೆ ೧೬೦ ಜನರನ್ನು. ಯಮಧರ್ಮ ರಾಯನ ವ್ಯಾಪಾರ ಸಾವಾದರೆ ಈತನ ವ್ಯಾಪಾರ ಬದುಕಿನತ್ತ ಮತ್ತೊಂದು ನೋಟ ಹರಿಸಿ ಎರಡನೇ ಇನ್ನಿಂಗ್ಸ್ ಗೆ ಅವಕಾಶ ಮಾಡಿ ಕೊಡುವುದು. ಆಸ್ಟ್ರೇಲಿಯಾದ ಈ ಮಹಾತ್ಮ ತನ್ನ ೫೦ ವರ್ಷಗಳ ಈ “ಆತ್ಮ” ಸೇವೆಗೆ ತನ್ನನ್ನು ಮುಡಿಪಾಗಿರಿಸಿಕೊಂಡು ಸಮಾಜದ ಪ್ರಶಂಸೆಗೆ ಕಾರಣವಾಗಿರುವುದು ಅಚ್ಚರಿಯೇನಲ್ಲ ಅಲ್ಲವೇ? “the gap” ಎಂದು ಕರೆಯಲ್ಪಡುವ ಈ ಆತ್ಮಹತ್ಯೆಯ ಸ್ಪಾಟ್ ಇರುವುದು ಸಿಡ್ನಿ ಬಂದರು ಪ್ರದೇಶದಲ್ಲಿ. ಈ ಇಳಿ ಪ್ರಾಯದವನಿಗಾಗಿ ಯಮ ಅವನ ಮನೆ ತಡಕಾಡುತ್ತಿ ದ್ದರೆ ಈತ ಈ ದುರ್ಗಮ ಸ್ಥಳಕ್ಕೆ ಬಂದು ಜೀವನ ಶೂನ್ಯ ಎನ್ನುವವರಿಗೆ ಊರುಗೋಲಾಗಿ ನಿಲ್ಲುತ್ತಾನೆ. ಮೇಲೆ ಹೇಳಿದ ಕಣಿವೆಯ ತುದಿಗೆ ಬಂದು ಇನ್ನೇನು ಕೆಳಕ್ಕೆ ಹಾರಿ  ಪ್ರಾಣ ಕಳೆದುಕೊಳ್ಳ ಬೇಕು ಎನ್ನುವವರಿಗೆ ಇದ್ದಕ್ಕಿದ್ದಂತೆ ಅಶರೀರ ವಾಣಿಯಂತೆ ಸೌಮ್ಯವಾದ, ಸ್ನೇಹಮಯವಾದ ಸ್ವರ ಕೇಳಿಬರುತ್ತದೆ; “ಒಂದು ಲೋಟ ಚಹಾ ಗಾಗಿ ನನ್ನಲ್ಲಿಗೆ ಬರಬಾರದೇ?” ಇದೇ ಆ ವಾಣಿ. ಪಕ್ಕದ ಸಾಗರದ ಸೌಮ್ಯ ಅಲೆಗಳು ರಿಚಿ ಯ ಸೌಮ್ಯವಾದ ಮಾತುಗಳನ್ನ ಸಾಯ ಬೇಕೆನ್ನುವವರ ಕಿವಿಗಳನ್ನು ತಲುಪಿಸಿ ಒಂದು ಕ್ಷಣ ತಬ್ಬಿಬ್ಬಾಗಿಸುತ್ತದೆ.  ಸಾವಿನಂಗಡಿಯ ಹೊಸ್ತಿಲಿನಲ್ಲಿ ನಿಂತ ವ್ಯಕ್ತಿಗೆ ಮತ್ತೊಮ್ಮೆ ಇದೇ ವಾಣಿ ಕೇಳಿಬರುತ್ತದೆ. why dont you come and have a cup of tea? ಓಹ್, ಇದುವರೆಗೂ ಯಾರೂ ಕೇಳಿರಲಿಲ್ಲ ಹೀಗೆ. ರೈಲು ನಿಲ್ದಾಣಗಳಲ್ಲೂ, ಇತರೆ ಸಾರ್ವಜನಿಕ ಸ್ಥಳಗಳಲ್ಲೂ ತಲೆಯನ್ನು ಕೈಯ್ಯಲ್ಲಿ ಹೊತ್ತು ಗಳಗಳ ಅಳುತ್ತಾ ಕೂತರೂ, ವ್ಯವಹಾರದ ಮತ್ತು ಇನ್ನಿತರ ಕೆಲಸ ನಿಮಿತ್ತ ಗಡಿ ಬಿಡಿಯಲ್ಲಿ ಓಡಾಡುವ ಸಾವಿರಾರು ಜನರನ್ನು ತಾನು ದೀನ ನೋಟದಿಂದ ನೋಡಿದರೂ ಅಲಕ್ಷಿಸಿ ಮುನ್ನಡೆವ ಈ ಜಗತ್ತಿನಲ್ಲಿ ಈ ತೆರನಾದ ಕೋರಿಕೆ? why dont you come and have a cup of tea? ಒಂದು ಕಪ್ ಚಹಾಕ್ಕೆ ಯಾಕೆ ಬರಬಾರದು? ಈ ವಾಣಿ ಬಂದ ಕಡೆ ತಿರುಗಿ ನೋಡಿದಾಗ ಸ್ನೇಹಮಯಿ ನಿಂತಿದ್ದಾನೆ, ತನ್ನ ಸುಕ್ಕುಗಟ್ಟಿದ ಕೈಗಳ ತುಂಬಾ ಬದುಕಿನ ಭರವಸೆಗಳನ್ನು ಇಟ್ಟುಕೊಂಡು. ರಿಚಿಯ ನಿಷ್ಕಳಂಕ ಸುಕ್ಕಿಲ್ಲದ ನಗು ಅವರ ಕೈಗಳಿಂದ ಸಾವಿನ ಅಸ್ತ್ರ ಕಳೆದು ಕೊಳ್ಳುವಂತೆ ಮಾಡುತ್ತದೆ. ಹೌದು ಕೆಲವೊಮ್ಮೆ ಒಂದು ಸರಳ, ಸ್ವಚ್ಚ ನಗು ಮಾಂತ್ರಿಕ ಶಕ್ತಿಯನ್ನೂ ಹೊಂದಿರುತ್ತದೆ. ಎಮ್ಮೆಯ ಮೇಲೆ ಕೂತು ಮೀಸೆ ತಿರುವುತ್ತಾ ಆಸೆಗಣ್ಣುಗಳಿಂದ ಗಿರಾಕಿಯ ನಿರೀಕ್ಷೆಯಲ್ಲಿ ಜವರಾಯ ಕೂತಿದ್ದರೆ ತನ್ನ ಹಸಿರು ಬಣ್ಣದ ತೊಗಲು ಕುರ್ಚಿಯಲ್ಲಿ ರಿಚಿ ಕೂತಿರುತ್ತಾನೆ, ಗಾಳ ಹಿಡಿದು. ಬದುಕಿನ, ಭರವಸೆಯ, ನಿರೀಕ್ಷೆಗಳ, ಹೊಂಗನುಸುಗಳ ಗಾಳ ಹಿಡಿದು. ಆತ ಹೇಳುವುದು, “ಅವರನ್ನು ಉಳಿಸಲೇಬೇಕು, ಇದು ಸುಲಭ ಸಾಧ್ಯ” ಎಂದು.its pretty simple ಈತನ ಪಾಲಿಗೆ. ಅದು ನಿಜವೂ ಕೂಡಾ.

೧೮ ನೇ ಶತಮಾನದಿಂದ ಇಲ್ಲಿಗೆ ಬರುತ್ತಿದ್ದಾರಂತೆ ಜನರು ಸಾವನ್ನು ಅರಸುತ್ತಾ. ವಾರಕ್ಕೊಂದರಂತೆ ಸಾವನ್ನು ಕಾಣುತ್ತಿರುವ ಈ ಸ್ಥಳವನ್ನು ಜನರಿಂದ ದೂರ ಇಡಲು ಸರಕಾರ ದೊಡ್ಡ ಮೊತ್ತದ ಹಣವನ್ನೂ ವ್ಯಯಿಸುತ್ತಿದೆಯಂತೆ.

ಯಾರಾದರೂ ಈ ಸಾವಿನ ಕಣಿವೆಯ ತುದಿಗೆ ಬಂದು ನಿಂತರೂ ಹತ್ತಿರದಲ್ಲೇ ಇರುವ ತನ್ನ ಮನೆಯಿಂದ ಧಾವಿಸುವ ಈತ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಾನೆ. ಕೆಲವೊಮ್ಮೆ ಈತನ ನಯವಾದ ಮಾತಿಗೆ ಮರುಳಾಗಿ ತಮ್ಮ ಬದುಕಿಗೆ ಮತ್ತೊಮ್ಮೆ “ಹಾಯ್” ಹೇಳಲು ಮರಳಿದವರೂ ಇದ್ದಾರೆ. ಒಮ್ಮೆ ಊರುಗೋಲಿನ (crutches) ಸಹಾಯದಿಂದ ಬಂದ ವ್ಯಕ್ತಿ ಯೊಬ್ಬ ತುದಿಯಲ್ಲಿ ನಿಂತಿದ್ದನ್ನು ಕಂಡ ರಿಚಿ ಅಲ್ಲಿಗೆ ಧಾವಿಸುತ್ತಾನೆ, ಆದರೆ ಅವನು ಅಲ್ಲಿಗೆ ತಲುಪುವಷ್ಟರಲ್ಲಿ ಆ ವ್ಯಕ್ತಿ ತನ್ನ ಊರುಗೋಲನ್ನು ತನ್ನ ಬದುಕನ್ನು ದುಸ್ತರವಾಗಿಸಿದ ಲೋಕಕ್ಕೆ ಕಾಣಿಕೆಯಾಗಿ ಬಿಟ್ಟು ಪ್ರಪಾತಕ್ಕೆ ಜಿಗಿದಿರುತ್ತಾನೆ.        

ಈ ರೀತಿಯ ಸೇವೆ ರಿಚಿಗೆ ಇಳಿ ವಯಸ್ಸಿನಲ್ಲಿ ಸಿಕ್ಕಿದ್ದಲ್ಲ. ಯೌವ್ವನದಿಂದಲೇ ಈತ ಜನರನ್ನು ಸಾವಿನಂಚಿನಿಂದ ದೂರ ಇಡಲು ಪ್ರಯತ್ನಿಸುತ್ತಿದ್ದ. ಕೆಲವೊಮ್ಮೆ ಜನರನ್ನು ಅವರ ಅಂತ್ಯದಿಂದ ರಕ್ಷಿಸಲು ಹೋಗಿ ತನ್ನ ಜೀವವನ್ನೂ ಕಳೆದುಕೊಳ್ಳುವ ಅಪಾಯಕ್ಕೆ ಸಿಲುಕಿದ್ದಾನೆ ಸಹ ಈ ಮಹಾತ್ಮ. ನೋವು, ಹಿಂಸೆ, ಅಸಮಾನತೆ ಕಂಡು ರೋಸಿದ ವಿಶ್ವಕ್ಕೆ ರಿಚಿ ಯಂಥ ವ್ಯಕ್ತಿಗಳು ಹೊಂಗಿರಣದಂತೆ ಕಂಗೊಳಿಸುತ್ತಾರೆ.

* ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ಎಂದ ಕೂಡಲೇ ಒಂದೊಮ್ಮೆ ನೆನಪಿಗೆ ಬರುತ್ತಿದ್ದುದು ಕುರಿಗಳು, ಜಾನುವಾರುಗಳು, ಮತ್ತು ಕ್ರಿಕೆಟ್. ಇತ್ತೀಚೆಗೆ ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಅವ್ಯಾಹತ ಹಲ್ಲೆ ಮತ್ತು ಕೊಲೆ ಆಸ್ಟ್ರೇಲಿಯನ್ನರ ಮತ್ತೊಂದು ರೂಪದ ಪರಿಚಯ ಮಾಡಿಕೊಡುತ್ತಿದೆ. ಭಾರತೀಯರ ವಿರುದ್ಧದ ಪ್ರತಿ ಆಕ್ರಮಣಕ್ಕೂ “ಜನಾಂಗ ಬೇಧ “ನೀತಿಯ ಅರ್ಥ ಕಲ್ಪಿಸಬೇಡಿ ಎಂದು ಅಲ್ಲಿನ ಮಂತ್ರಿ ಮಹೋದಯರ ಹೇಳಿಕೆ ಓದುತ್ತಿದ್ದಾಗಲೇ ಆಸ್ಟ್ರೇಲಿಯಾ ದೇಶದ ಮನಮೋಹಕ, ರಮಣೀಯ ಚಿತ್ರಗಳ ಬ್ಲಾಗ್ ಒಂದು ಕಣ್ಣಿಗೆ ಬಿತ್ತು. ತನ್ನದೇ ಸೃಷ್ಟಿಗಳಾದ ಮನುಷ್ಯನಲ್ಲಿ ಅಸಹನೆಯನ್ನೂ, ಕ್ರೌರ್ಯವನ್ನೂ, ಮತ್ತು ನಿಸರ್ಗದಲ್ಲಿ ಬೆರಗನ್ನೂ, ಬೆಡಗನ್ನೂ ಇಟ್ಟ ಆ ಭಗವಂತನ ಮರ್ಮವಾದರೂ ಏನಿರಬಹುದು?      

ಕೆಳಗಿನ ಕೊಂಡಿ ಕ್ಲಿಕ್ಕಿಸಿ, ನೋಡಿ ಕಾಂಗರೂ ನಾಡಿನ ಬೆಡಗನ್ನು.