ಗಾಂಧೀ ಜಯಂತಿ, ಅಪರೂಪದ ಚಿತ್ರ

ಅಕ್ಟೋಬರ್ ೨, ಗಾಂಧೀ ಜಯಂತಿ. ಈ ದಿನ ಗಾಂಧಿಜೀಯವರ ತತ್ವಗಳನ್ನು, ತ್ಯಾಗಗಳನ್ನು ಮತ್ತು ಆದರ್ಶಗಳನ್ನು ಕೊನೆಗೆ, ಅವರ ಬಲಿದಾನದ ಬಗ್ಗೆ ಸ್ಮರಿಸುವ ದಿನ. ಗಾಂಧೀಜೀ ಯವರ ಬಗ್ಗೆ ಪ್ರತಿಯೊಬ್ಬರಿಗೂ ಒಂದೊಂದು ಅಭಿಪ್ರಾಯ. ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಅವರ ಗಣನೀಯ ಪಾತ್ರದ ಬಗ್ಗೆ ಹೆಮ್ಮೆ, ಕೃತಜ್ಞತಾ ಭಾವ ಕೆಲವರಲ್ಲಿದ್ದರೆ, ಮತ್ತೆ ಕೆಲವರು ಅವರ ವೈಯಕ್ತಿಕ ಜೀವನದ ಕಡೆ ನೋಟ ಹರಿಸಿ ಗಾಂಧೀ ಯನ್ನು ಹಳಿದು ತೃಪ್ತಿ ಪಡುತ್ತಾರೆ.

ಗಾಂಧೀ ಬಗ್ಗೆ ದೇಶೀಯರ ನಿಲುವು ಏನೇ ಇರಲಿ ವಿದೇಶೀಯರಿಗಂತೂ ಅವರ ವಿಚಾರಗಳು ಅನುಕರಣೀಯ ಎನ್ನುವ ಭಾವನೆ ತರಿಸಿವೆ. ಮಾರ್ಟಿನ್ ಲೂಥರ್ ಕಿಂಗ್, ಜಾನ್ ಕೆನಡಿ, ಆಲ್ಬರ್ಟ್ ಐನ್ಸ್ಟೀನ್ ಚಿತ್ರಗಳು ಹೇಗೆ ಜನರ ಮನಃ ಪಟಲದಲ್ಲಿ ಅಚ್ಚಳಿಯದೆ ನಿಂತಿವೆಯೋ ಹಾಗೆಯೂ ಗಾಂಧೀ ಸ್ಮೃತಿ ಸಹ ಎಂದು ವಿದೇಶೀಯರ ಅಭಿಪ್ರಾಯ. ವಿದೇಶೀ ಛಾಯಾಗ್ರಾಹಕಿ Margaret Bourke-White ಗಾಂಧೀಜಿಯವರನ್ನು ಹತ್ತಿರದಿಂದ ಬಲ್ಲ, ಅವರ ಚಟುವಟಿಕೆಗಳನ್ನು ವರದಿ ಮಾಡುತ್ತಿದ್ದ ಮಹಿಳೆ. ಇವರ ಚಿತ್ರಗಳು ಅಮೆರಿಕೆಯ time ಪತ್ರಿಕೆಯಲ್ಲಿ ಕಾಣಿಸಿ ಕೊಳ್ಳು ತ್ತಿದ್ದವು. ಗಾಂಧೀ ತಮ್ಮ ಚರಕ ದ ಹಿಂದೆ ಕೂತ ಮತ್ತು ಮಾರ್ಗರೆಟ್ ತಾನು ಚರಕ ದ ಹಿಂದೆ ಕೂತ ಎರಡು ಅಪರೂಪದ ಚಿತ್ರಗಳು ಕೆಳಗಿವೆ.

Image

Image

Advertisements

ಬ್ರಾಯ್ಲರ್ ಚಿಕನ್

ಗಡಿ ಭದ್ರತಾ ಪಡೆಯ ಯೋಧರು ಬೇಟೆಗೆ ಬ್ರಾಯ್ಲರ್ ಚಿಕನ್ ಗಳಷ್ಟೇ ಸುಲಭ ಎಂದು ಹೇಳಿಕೆ ನೀಡಿ ಗಾಯದ ಮೇಲೆ ಇನ್ನಷ್ಟು ಉಪ್ಪು ಉಜ್ಜುವ ಮಾತನ್ನು ಆಡುತ್ತಿದ್ದಾರೆ ಮಾವೋ ವಾದಿಗಳು. ಮಾವೋ ಹಿಂಸೆ ಈಗೀಗ ಹೊಸ ರೂಪವನ್ನು ತಾಳುತ್ತಿದ್ದು ದಿನಗಳು ಉರುಳಿದಂತೆ ಅವರು ಇನ್ನಷ್ಟು ಹುಮ್ಮಸ್ಸಿನಿಂದ ಚೈತನ್ಯದಿಂದ ನಮ್ಮ ರಕ್ಷಣಾ ವ್ಯವಸ್ಥೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಮೊನ್ನೆ ನಡೆದ ಮತ್ತೊಂದು ಮಾರಣ ಹೋಮದಲ್ಲಿ ೨೫ ಕ್ಕೂ ಹೆಚ್ಚು ಯೋಧರನ್ನು ಕೊಂದದ್ದು ಮಾತ್ರವಲ್ಲದೆ ಕೆಲವರ ಮೃತ ದೇಹಗಳನ್ನು ವಿಕೃತ ಗೊಳಿಸಿ ಯೋಧರು ಬ್ರಾಯ್ಲರ್ ಕೋಳಿಗಳಂತೆ ಎಂದು ಹೇಳಿಕೆ ನೀಡಿ ವಿಕೃತ ಆನಂದ ಪಡೆಯುತ್ತಿದ್ದಾರೆ. ಯೋಧರನ್ನು ಇಷ್ಟು ಸಾರಾಸಗಟಾಗಿ ಕೊಲ್ಲುವ ಮಾವೋಗಳು ನಮ್ಮ ಪಡೆಗಳ ಮೇಲೆ ಮಾನಸಿಕ ಒತ್ತಡವನ್ನು ಹೇರುತ್ತಿದ್ದಾರೆ. ಈ ರೀತಿಯ ಮಾವೋಗಳ ಯಶಸ್ಸು ಇವರನ್ನು ನಿಗ್ರಹಿಸುವ ಸರಕಾರದ ಶ್ರಮಕ್ಕೆ ದೊಡ್ಡ ಪೆಟ್ಟನ್ನೇ ನೀಡುತ್ತದೆ. ಆದರೆ ಸರಕಾರ ಇಂಥ ಸಮಯದಲ್ಲಿ ಧೃತಿಗೆಡದೆ ಸಮಚಿತ್ತದಿಂದ ಪರಿಹಾರ ಕಂಡು ಕೊಳ್ಳುವ ಪ್ರಯತ್ನ ಮಾಡಬೇಕು. ಇದಕ್ಕೆಎಲ್ಲಾ ರಾಜಕೀಯ ಪಕ್ಷಗಳ ಸಕ್ರಿಯ ಸಹಕಾರ ಅತ್ಯಗತ್ಯ. ಈ ಮಟ್ಟದ ಯೋಧರ ಕಗ್ಗೊಲೆಗೆ ಬೇಕಾದ ಶಸ್ತ್ರಗಳು ಮತ್ತು ಇತರೆ ಸೌಲಭ್ಯಗಳು  ಮಾವೊಗಳಿಗೆ ಸಿಗುವುದಾದರೂ ಎಲ್ಲಿಂದ? ಈ ತೆರನಾದ ಕಾರ್ಯಾಚರಣೆಗೆ ಬೇಕಾಗುವ ಸಂಪನ್ಮೂಲ ಕಾಡಿನಲ್ಲಿ ಅವಿತುಕೊಂಡು ಹೊಂದಿಸಲಾಗದು. ಹಾಗಾದರೆ ವಿದೇಶಿ ಶಕ್ತಿಗಳ ಕೈವಾಡ ಇರಬಹುದೇ? ನಮ್ಮ ನೆರೆ ಹೊರೆ ಹೇಗೆ, ಅವರ ಉದ್ದೇಶ ಏನು ಎಂಬುದು ನಮಗೆ ತಿಳಿಯದ್ದಲ್ಲ. ಮಾವೊಗಳಿಗೆ ವಿದೇಶೀ ಸಂಪರ್ಕಗಳಿದ್ದರೆ ಅವನ್ನು ನಿಗ್ರಹಿಸಲು ಸರಕಾರ ಕ್ರಮ ತೆಗೆದುಕೊಳ್ಳಬೇಕು. ಹಾಗೆಯೇ ಮಾವೋಗಳು ಮತ್ತು ಇತರೆ ಬಂಡುಕೋರರನ್ನು ಬಗ್ಗು ಬಡಿಯಲು ಸರಕಾರ ದೊಡ್ಡ ರೀತಿಯಲ್ಲಿ ಪಡೆಗಳನ್ನು ಸುಸಜ್ಜಿತಗೊಳಿಸುವತ್ತ ಗಮನ ಹರಿಸಿ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಬೇಕು.

ಆಧುನಿಕ ರಾಷ್ಟ್ರಗಳ ಆಧುನಿಕ ಜೀವನ ಶೈಲಿಯನ್ನು ನಾವು ಅಳವಡಿಕೊಳ್ಳಲು ಕಾತುರರಾಗಿರುವಾಗ, ಅದಕ್ಕೆ ಬೇಕಾದ ತಂತ್ರಜ್ಞಾನವನ್ನು ಅತ್ಯುತ್ಸಾಹದಿಂದ ಅಳವಡಿಸಿ ಕೊಳ್ಳಲು ನಮಗೆ ಸಾಧ್ಯವಾದರೆ ನಮ್ಮ ಪಡೆಗಳು ಓಬೀರಾಯನ ಕಾಲದ ಶಸ್ತ್ರಗಳನ್ನು ಇಟ್ಟುಕೊಂಡು ಹೋರಾಡಲು ಏಕೆ ಬಲವಂತ ಪಡಿಸಬೇಕು? ಆಫ್ಘನ್, ಇರಾಕ್ ನಲ್ಲಿರುವ ಅಮೇರಿಕನ್, ಬ್ರಿಟಿಶ್ ಯೋಧರ ಉಡುಗೆ, ಶಸ್ತ್ರ ನೋಡಿ ಮತ್ತು ನಮ್ಮ ಅಮಾಯಕ ಯೋಧರ ವೇಷ ಭೂಷಣ ನೋಡಿ, ವ್ಯತ್ಯಾಸ ತಿಳಿಯುತ್ತದೆ. ಕಾರ್ಗಿಲ್ ಯುದ್ಧದ ವೇಳೆ ಶತ್ರು ಸುಸಜ್ಜಿತನಾಗಿ ಬಂದಿದ್ದರೆ ನಮ್ಮ   ಯೋಧರ ಬಳಿ ಮಂಜಿನ ಬೂಟುಗಳೂ ಇರಲಿಲ್ಲವಂತೆ. ಭಾರತೀಯ ಸೇನೆಯ ಪಾಡು ಹೀಗಾದರೆ ಭದ್ರತಾ ಪಡೆಯವರ ಪಾಡು ಹೇಗಿರಬಹುದು?

ಮಾವೋಗಳ ಹಿಂಸಾತ್ಮಕ ಯಶಸ್ಸು ನಮಗೆ ಒಳ್ಳೆಯದಲ್ಲ. ಇವರ ಯಶಸ್ಸಿನಿಂದ ಸ್ಫೂರ್ತಿ ಪಡೆದು ಈಶಾನ್ಯ ರಾಜ್ಯಗಳ ಇತರೆ ವಿಧ್ವಮ್ಸಕ ಗುಂಪುಗಳು ದೊಡ್ಡ ರೀತಿಯಲ್ಲಿ ಧಾಳಿ ಮಾಡಲು ಉತ್ಸಾಹ ತೋರಬಹುದು.

ಮಾವೋ ಹಿಂಸೆಗೆ ಪ್ರತಿ ಹಿಂಸೆ ಪರಿಹಾರವಲ್ಲ. ಆದರೆ ಮಾತುಕತೆಗೆ ಮಾವೋಗಳು ಅಷ್ಟು ಸುಲಭವಾಗಿ ಒಪ್ಪುವವರಲ್ಲ. ಅವರು ಬಯಸುವ ಸಾಮಾಜಿಕ ಸುಧಾರಣೆಗಳು ಯಾವುದೇ ಪಕ್ಷದಿಂದಲೂ  ಸಾಧಿಸಲು ಸುಲಭ ಸಾಧ್ಯವಲ್ಲ. ಮಾವೋ ವಿಚಾರಧಾರೆ ಒಂದು ಕ್ರಾಂತಿಯಂತೆ. ನಾವು ಆರಿಸಿಕೊಂಡ ಬಂಡವಾಳಶಾಹಿ ವ್ಯವಸ್ಥೆ ಮಾವೋಗಳ ಆಶಯಗಳನ್ನು ಈಡೇರಿಸಲಾರದು. ಒಂದು ರೀತಿಯ ತ್ರಿಶಂಕು ಪರಿಸ್ಥಿತಿ ನಮ್ಮದು.

* ಅಭಿವ್ಯಕ್ತಿ ಸ್ವಾತಂತ್ರ್ಯ

View Imageಹಿಂದೂ ದೇವರುಗಳನ್ನು ವಿಲಕ್ಷಣವಾಗಿ ಚಿತ್ರಿಸಿ ಹುಸೇನ್ ತನ್ನ ದೇಶ ವನ್ನು ಕಳೆದುಕೊಂಡರು. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಾವು ಪೂಜಿಸುವ, ಆದರಿಸುವ, ನಮ್ಮ ಬದುಕಿನಲ್ಲಿ ಆದರ್ಶ ವ್ಯಕ್ತಿಗಳನ್ನಾಗಿ ಮಾಡಿ ಕೊಂಡವರನ್ನು ವಿವಸ್ತ್ರ ಗೊಳಿಸಿ ನಮ್ಮ ನಂಬಿಕೆಗೆ, ಭಕ್ತಿಗೆ ಕುಂದುಂಟು ಮಾಡುವುದು ಅಕ್ಷಮ್ಯ ಅಪರಾಧ. ಚಿತ್ರಗಳ ಮೂಲಕ ಮಾತ್ರವಲ್ಲ, ಬರಹಗಳ ಅವತಾರಗಳಲ್ಲೂ ನಮ್ಮ ಭಾವನೆಗಳನ್ನು ಕೆರಳಿಸುವ ಇಂಥ ಚಟುವಟಿಕೆ ಗಳನ್ನು ನಾವು ಪ್ರತಿಭಟಿಸಬೇಕು. ಧರ್ಮ ಮತ್ತು ಧಾರ್ಮಿಕ ಹೆಗ್ಗುರುತುಗಳು, ಪವಾಡ ಪುರುಷರು ಸಾರ್ವಜನಿಕ ಸ್ವತ್ತಾಗಿರಬಹುದು. ನೆರಳನ್ನು ನೀಡುವ ರಸ್ತೆ ಬದಿಯ ಮರ ಸಾರ್ವಜನಿಕರಿಗಾಗಿ ಎಂದು ಅಲ್ಲೇ ಶೌಚಕ್ಕೆ ಕುಳಿತರೆ?

ಇದನ್ನು ಬರೆಯಲು ಕಾರಣ ಹುಸೇನ್ ಬಗೆಗಿನ, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗೆಗಿನ ಚರ್ಚೆ ಬಿರುಸಿನಿಂದ ನಡೆಯುತ್ತಿದೆ. ಖಂಡನಾರ್ಹವಾದ ಹುಸೇನರ ಚಿತ್ರಗಳು ನಮ್ಮ ಸಹನೆಯನ್ನು ಪರೀಕ್ಷಿಸುತ್ತಿವೆ. ಬೆಣ್ಣೆ ಸುಣ್ಣದ ರಾಜಕೀಯ ಬಿಟ್ಟು, ದ್ವಂದ್ವಗಳ ದೊಂಬರಾಟ ಬಿಟ್ಟು ಯಾವುದೇ ಧರ್ಮದ ಬಗ್ಗೆಯೂ ಬರುವ ವಿಲಕ್ಷಣ “ಕೃತಿ” ಗಳನ್ನು ಖಂಡಿಸೋಣ. ಆದರೆ ಹೇಗೆ? ಹುಸೇನರ ಕುಂಚ ತನ್ನ ಪಾತ್ರಗಳನ್ನು ವಿವಸ್ತ್ರಗೊಳಿಸಿ ಆತ ತನ್ನ ಪ್ರೀತಿಯ ದೇಶವನ್ನು ಕಳೆದುಕೊಳ್ಳುವಂತೆ ಮಾಡಿದರೆ ಇದರ ಬಗ್ಗೆ ನಮ್ಮ ಲೇಖನಿಯನ್ನು (ಕೀಲಿಗಳನ್ನು) ಸಂಭ್ರಮದಿಂದ ಹರಿಬಿಟ್ಟು ನಾವೂ ವಿವಸ್ತ್ರರಾದೆವು. ನಮ್ಮ ಮಟ್ಟಿಗೆ ಹುಸೇನ್ ದೇಶ ಕಳೆದುಕೊಂಡರೂ ಆತನ ಮಟ್ಟಿಗೆ ದೇಶದ ಪರಿಕಲ್ಪನೆ ಅವನಿಗೆ ಇಲ್ಲವಂತೆ. ಆತನ ಅಥವಾ ಯಾವುದೇ ಕಲಾವಿದನ ರಾಜ್ಯ ಭೌಗೋಳಿಕ ಅಲ್ಲವಂತೆ. ಅವರದು ಕುಂಚದ ಸಾಮ್ರಾಜ್ಯ. ಅವರುಗಳು ಕುಂಚ ಮಾತೆಯ ಸುಪುತ್ರರು. ಅವರು ಗೀಚುವ ಗೆರೆಗಳೇ ಅವರ ಗಡಿ. ವ್ಯಾಪ್ತಿಯಿಲ್ಲದ ಸರಹದ್ದು. ಗಾಳಿ ಬಂದ ಕಡೆ ತೂರಿ ಕೊಳ್ಳುವ ಹಾಗೆ. ಕುಂಚ ತೋರಿದೆಡೆ ಪಯಣ. “ಕಾಯಾ, ವಾಚಾ, ಕುಂಚ” ಇವರ ಮಂತ್ರ.

ಹುಸೇನರ ಬಗ್ಗೆ ಟೀಕಿಸಿ ಬಂದ ವಾಕ್ಯ ರತ್ನಗಳನ್ನೂ, ವ್ಯಂಗ್ಯವನ್ನೂ ನೋಡಿದಾಗ ಸುಶಿಕ್ಷಿತ ಸಮಾಜಕ್ಕೆ ಇನ್ನಷ್ಟು ಶಿಕ್ಷಣದ ಅವಶ್ಯಕತೆ ಎದ್ದು ಕಾಣುತ್ತದೆ. ಇಲ್ಲಿ ನಮಗೆ ತೋಚಿದ ರೀತಿಯಲ್ಲಿ ಬರೆದು ನಾವು ಸಾಧಿಸಿದ್ದು ನಮ್ಮ ತಿಳುವಳಿಕೆಯ ಕೊರತೆಯ ಪ್ರದರ್ಶನ. ಈ ಮಾತನ್ನು ನಾನು ಹೇಳುತ್ತಿರುವ ಉದ್ದೇಶ ದಯಮಾಡಿ ಅರ್ಥ ಮಾಡಿಕೊಳ್ಳಿ. ನಾನು ಸೇರಿದ ಸಮಾಜ ಇಂಥ ವಿಷಯಗಳು ಬಂದಾಗ ಹದ್ದು ಮೀರಿ ಅಸಹನೆ ಮೆರೆದು, ಕಲ್ಲು ಹೊಡೆದು, ಅರಚಾಡಿ ತಮಗೆ ತೋಚಿದ ರೀತಿಯಲ್ಲಿ ಅಸಮಾಧಾನವನ್ನೂ ಕೋಪವನ್ನೂ ಪ್ರದರ್ಶಿಸಿತು. ಪರಿಣಾಮ? ದೊಡ್ಡ ನಾಮ. ಡೆನ್ಮಾರ್ಕಿನಿಂದ ಹಿಡಿದು ಶಿವಮೊಗ್ಗದವರೆಗೂ ನಮ್ಮ ಕಾಲು ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡಿದೆ. ಇಂಗ್ಲೆಂಡಿನಿಂದ, ಇರಾನಿನವರೆಗೂ ನಾವು ನಗೆಪಾಟಲಿಗೀಡು. ಪವಿತ್ರ ಕುರಾನ್ “ಸಹನೆ, ಸಂಯಮ” ವನ್ನು ಜೀವನ ರೀತಿಯಾಗಿಸುವಂತೆ ಪದೇ, ಪದೇ ಹಲವು ಕಡೆಗಳಲ್ಲಿ ಸಾರಿದರೂ ಕಣ್ಣಿದ್ದೂ ಕುರುಡರು, ಕಿವಿಯಿದ್ದೂ ಕಿವುಡರಂತೆ ವರ್ತಿಸುತ್ತಿರುವ ಸಮಾಜದ ಒಂದು negligible ಭಾಗ ಅಸಹನೆಯ ವಿಷವನ್ನು ಪಸರಿಸುತ್ತಾ ಸಾಗುತ್ತಿದೆ. (and verily whoso is patient and forgiveth, that verily is the steadfast heart of things 42-43) ಸಹನಾಮಯಿಗಳೂ, ಕ್ಷಮಾಶೀಲರೂ ಆದವರು ಸಮರ್ಪಕ ಕಾರ್ಯಗಳನ್ನೇ ಮಾಡುವರು. ಪವಿತ್ರ ಕುರಾನಿನ ಈ ಸೂಕ್ತಕ್ಕೂ ಧರ್ಮದ ಭಾರವನ್ನು ತಮ್ಮ ಮೆದುಳಿಲ್ಲದ, ಚಿಂತಿಸದ ತಲೆಯ ಮೇಲೆ ಹೊತ್ತು ಹೇಸಿಗೆಯ ವಾತಾವರಣವನ್ನು ಸೃಷ್ಟಿಸಿಕೊಂಡಿರುವ ಬೆರಳೆಣಿಕೆಯ ಜನರ ನಡವಳಿಕೆಗೂ ಇರುವ ವ್ಯತ್ಯಾಸ ನೋಡಿ. ಹುಸೇನರ ಕುರಿತ ಲೇಖನಕ್ಕೆ ಪ್ರತಿಕ್ರಿಯಾ ರೂಪದಲ್ಲಿ ಬಂದ ಮಹಾ ವಾಕ್ಯಗಳನ್ನು ಆಫ್ಘಾನಿಸ್ತಾನದ “ಪಷ್ತು” ಭಾಷೆಗೋ ಅಥವಾ ಕಂದಹಾರದ ಯಾವುದಾದರೂ ಭಾಷೆಗೋ ಅನುವಾದಿಸಿ ನೋಡಿ. ಕಣ್ಣಿನೆದುರು ಬಂದು ನಿಲ್ಲುವುದಿಲ್ಲವೇ ಮುಲ್ಲಾ ಉಮರನ, ಅವನಂಥವರ ಹೇಳಿಕೆಗಳು, ಹಾವ ಭಾವಗಳು? ಸರಿಯೋ ತಪ್ಪೋ? ಆವೇಶದಿಂದ ಬರೆದಾಗ ನಮ್ಮ ನಿಜ ವೇಷ ಸರ್ವವೇದ್ಯವಾಗಿ ಬಿಡುತ್ತೆ. ಹಾಗಾಗುವುದು ಬೇಡ. ನಮ್ಮ ನಂಬಿಕೆಗಳನ್ನು, ಆದರ್ಶಗಳನ್ನು ರಕ್ಷಿಸಲು ವೈಚಾರಿಕ ಮಾರ್ಗಗಳಿವೆ. ವಿಚಾರವಂತರು ಎಂದು ಬಿರುದು ಇಟ್ಟುಕೊಂಡು ನಮ್ಮ ಭಾವನೆಗಳೊಂದಿಗೆ ಚೆಲ್ಲುತನ ತೋರುವ ವಿಚಾರವಾದಿಗಳಿಗೆ ಒಳ್ಳೆಯ ಮಾತಿನಲ್ಲಿ ತಿಳಿ ಹೇಳೋಣ. ಅವರ ಸೃಷ್ಟಿ (ಅದೆಂಥದ್ದೇ ಮಹಾಕಾವ್ಯವಾಗಿರಲಿ, ಇತಿ”ಹಾಸ್ಯ”ವಾಗಿರಲಿ, ಚಿತ್ರವಾಗಿರಲಿ) ಕೀಳು ಅಭಿರುಚಿಯಿಂದ ಕೂಡಿದ್ದು ಎಂದು ಜನರಲ್ಲಿ ಅರಿವು ಮೂಡಿಸಿ ಅಂಥ ಕಲಾವಿದರಿಗೆ ಮಣೆ ಹಾಕುವುದರಿಂದ ಜನರನ್ನು ತಡೆಯೋಣ. ಆದರೆ ಎಲ್ಲವೂ ನಾಗರೀಕ ಶೈಲಿಯಲ್ಲಿ. ನಮ್ಮ ಮನೆ (charity begins at home), ಮತ್ತು ಶಿಕ್ಷಣ ಹೇಳಿಕೊಟ್ಟ ಮಾದರಿಯಲ್ಲಿ. ಕಾಲದ ಪರೀಕ್ಷೆ ಗೆದ್ದು ನಾವು ಉಳಿಸಿಕೊಂಡು ಬಂದ ಸಂಸ್ಕೃತಿಯ ರೀತಿಯಲ್ಲಿ. ಅಪನಂಬಿಕೆ, ಅಸಹನೆಯಿಂದ ರೋಸಿದ, ಬಳಲಿದ ವಿಶ್ವ ನಮ್ಮೆಡೆ ದೃಷ್ಟಿ ಬೀರುತ್ತಿದೆ…

Time tested value ಗಳಿಗಾಗಿ. let us not disappoint.

ಆದರ್ಶ ತಂದೆ

ಕುಖ್ಯಾತ ಕಾಡುಗಳ್ಳ ಮತ್ತು ಆನೆ ಹಂತಕ ವೀರಪ್ಪನ ಹತ್ಯೆಯೊಂದಿಗೆ ಕಾನನದೊಳಗಿನ ಮಾನವನ ಆಕ್ರಂದನಕ್ಕೆ ತೆರೆ ಬಿತ್ತು. ಆನೆಗಳಿಗೂ, ವೃಕ್ಷಗಳಿಗೂ, ಪೊಲೀಸರಿಗೂ, ಜನಸಾಮಾನ್ಯರಿಗೂ ಸಿಂಹ ಸ್ವಪ್ನವಾಗಿದ್ದು ವ್ಯವಸ್ಥೆ ನಪುಂಸಕವೇನೋ  ಎಂದು ಅನುಮಾನ ಹುಟ್ಟುವಷ್ಟು ಎತ್ತರ ಬೆಳೆದಿದ್ದ ಆಗಾಧ ಮೀಸೆಯ ಸಣ್ಣ ಮನುಷ್ಯ ಕೊನೆಗೂ ಬಲಿಯಾದ ಪೋಲೀಸರ ಗುಂಡಿಗೆ.  ಅವನ ಪುತ್ರಿಗೆ IAS ಮಾಡುವ ಬಯಕೆಯಂತೆ. IAS, IPS ಅದ್ಧಿಕಾರಿಗಳ ನಿದ್ದೆಗೆಡಿಸಿದ್ದ ಈ ಅಪ್ಪನ ಮಗಳಿಗೆ ಅಧಿಕಾರಿಯಾಗುವ ಆಸೆ. ಅಷ್ಟು ಮಾತ್ರ ಅಲ್ಲ ತನ್ನ ತಂದೆ ಇವಳಿಗೆ ಆದರ್ಶ ವ್ಯಕ್ತಿಯಂತೆ. ಈ ಆದರ್ಶ ವ್ಯಕ್ತಿಯನ್ನು ಈಕೆ ತನ್ನ ಬದುಕಿನಲ್ಲಿ ಕಂಡಿದ್ದು ಎರಡೇ ಎರಡು ಸಲ. ಅದೆಂಥ ಪ್ರಭಾವ ಬೀರಿರಬೇಕು ಅವಳ ತಂದೆ?

ಇವಳ ಆದರ್ಶದ ವ್ಯಕ್ತಿಯ ಮಾತ ಕೇಳಿ ಅಳಿದುಳಿದ ಆನೆಗಳು ಈಗ ಕಾಡು ಬಿಟ್ಟು ಓಡಿದರೆ ಅಚ್ಚರಿಯಂತೂ ಇಲ್ಲ ಅನ್ನಿ.